ನಾನು ಮುಸ್ಲಿಮ್

ಬರಹಗಾರರು :

ಅನುವಾದ:

ಸಂಕ್ಷಿಪ್ತ ವಿವರಣೆ

ನಾನು ಮುಸ್ಲಿಮ್

Download
ವೆಬ್ ಮಾಸ್ಟರ್ ರಿಗೆ ಕಾಮೆಂಟ್ ಕಳುಹಿಸಿ

ವಿವರಣೆ

ನಾನು ಮುಸ್ಲಿಮ್.

ಲೇಖಕರು: ಡಾ. ಮುಹಮ್ಮದ್ ಬಿನ್ ಇಬ್ರಾಹೀಮ್ ಅಲ್-ಹಮದ್

ನಾನು ಮುಸ್ಲಿಂ. ಅಂದರೆ ನನ್ನ ಧರ್ಮ ಇಸ್ಲಾಂ.ಇಸ್ಲಾಂ ಎಂತಹ ಶ್ರೇಷ್ಠ ಮತ್ತು ಪವಿತ್ರ ಪದವೆಂದರೆ, ಮೊತ್ತಮೊದಲ ಪ್ರವಾದಿಯಿಂದ ತೊಡಗಿ ಕಟ್ಟಕಡೆಯ ಪ್ರವಾದಿಯ ತನಕ ಎಲ್ಲಾ ಪ್ರವಾದಿಗಳು (ಅವರೆಲ್ಲರ ಮೇಲೆ ಶಾಂತಿಯಿರಲಿ) ಈ ಪದವನ್ನು ಉತ್ತರಾಧಿಕಾರದಂತೆ ಬಳಸಿದ್ದಾರೆ.ಈ ಪದಕ್ಕೆ ಉನ್ನತ ಅರ್ಥಗಳು ಮತ್ತು ಶ್ರೇಷ್ಠ ಮೌಲ್ಯಗಳಿವೆ.ಇದಕ್ಕೆ ಸೃಷ್ಟಿಕರ್ತನಿಗೆ ಶರಣಾಗುವುದು, ವಿಧೇಯತೆ ತೋರುವುದು ಮತ್ತು ಆಜ್ಞಾಪಾಲನೆ ಮಾಡುವುದು ಎಂಬ ಅರ್ಥಗಳಿವೆ.ಇದು ವ್ಯಕ್ತಿ ಮತ್ತು ಸಮಾಜಕ್ಕೆ ಶಾಂತಿ, ಸಂತೋಷ, ಭದ್ರತೆ ಮತ್ತು ನೆಮ್ಮದಿಯಾಗಿದೆಯೆಂಬ ಅರ್ಥವನ್ನೂ ಹೊಂದಿದೆ.

ಈ ಕಾರಣದಿಂದಲೇ ಸಲಾಂ (ಶಾಂತಿ) ಮತ್ತು ಇಸ್ಲಾಂ ಎಂಬ ಪದಗಳನ್ನು ಇಸ್ಲಾಮೀ ಶರಿಯತ್ತಿನಲ್ಲಿ ಅತಿಹೆಚ್ಚಾಗಿ ಬಳಸಲಾಗಿದೆ.'ಸಲಾಮ್' ಸರ್ವಶಕ್ತನಾದ ಅಲ್ಲಾಹನ ಹೆಸರುಗಳಲ್ಲೊಂದು.ಮುಸ್ಲಿಮರು ಪರಸ್ಪರ ಭೇಟಿಯಾಗುವಾಗ ಸಲಾಂ ಹೇಳುತ್ತಾರೆ.ಸ್ವರ್ಗವಾಸಿಗಳು ಕೂಡ ಪರಸ್ಪರ ಭೇಟಿಯಾಗುವಾಗ ಸಲಾಂ ಹೇಳುತ್ತಾರೆ.ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ನಿಜವಾದ ಮುಸ್ಲಿಮ್.ಇಸ್ಲಾಂ ಎಲ್ಲಾ ಜನರಿಗೂ ಒಳಿತನ್ನು ಮಾಡುವ ಧರ್ಮವಾಗಿದೆ. ಅದು ಅವರಿಗೆ ಎಲ್ಲಾ ಅರ್ಥದಲ್ಲೂ ಪರ್ಯಾಪ್ತವಾಗಿದೆ. ಅದು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅವರ ಸಂತೋಷದ ಮಾರ್ಗವಾಗಿದೆ.ಆದ್ದರಿಂದ, ಇಸ್ಲಾಂ ಧರ್ಮವು ಎಲ್ಲಾ ಮನುಷ್ಯರಿಗೂ ತೆರೆದ ಬಾಗಿಲನ್ನು ಹೊಂದಿರುವ ಸಮಗ್ರ, ವಿಶಾಲ ಮತ್ತು ಸ್ಪಷ್ಟವಾದ ಅಂತಿಮ ಧರ್ಮವಾಗಿದೆ. ಅದು ಕುಲ, ಗೋತ್ರ ಮತ್ತು ವರ್ಣಗಳ ಆಧಾರದ ಮೇಲೆ ಬೇಧ ಮಾಡುವುದಿಲ್ಲ. ಬದಲಿಗೆ, ಅದು ಮನುಷ್ಯರೆಲ್ಲರನ್ನೂ ಸಮಾನವಾಗಿ ನೋಡುತ್ತದೆ.ಇಸ್ಲಾಂ ಧರ್ಮದಲ್ಲಿ ಒಬ್ಬ ವ್ಯಕ್ತಿ ಶ್ರೇಷ್ಠನಾಗುವುದು ಅವನು ಎಷ್ಟರ ಮಟ್ಟಿಗೆ ಅದರ ಬೋಧನೆಗಳನ್ನು ಅನುಸರಿಸುತ್ತಾನೆ ಎಂಬುದರ ಆಧಾರದಲ್ಲಾಗಿದೆ.

ಆದ್ದರಿಂದ ಸ್ವಸ್ಥ ಮನಸ್ಸಿನ ಜನರೆಲ್ಲರೂ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ. ಏಕೆಂದರೆ ಅದು ಅವರ ಸಹಜ ಮನೋಧರ್ಮಕ್ಕೆ ಹೊಂದಿಕೆಯಾಗುತ್ತದೆ.ಪ್ರತಿಯೊಬ್ಬ ಮನುಷ್ಯನೂ ಒಳಿತು, ನ್ಯಾಯ, ಸ್ವಾತಂತ್ರ್ಯ, ದೇವನಲ್ಲಿರುವ ಪ್ರೀತಿ, ದೇವನೇ ಆರಾಧನೆಗೆ ಅರ್ಹನು–ಅವನ ಹೊರತು ಯಾರೂ ಆರಾಧನೆಗೆ ಅರ್ಹರಲ್ಲ ಎಂದು ಒಪ್ಪಿಕೊಳ್ಳುವುದು ಮುಂತಾದ ಸಹಜ ಗುಣಗಳೊಂದಿಗೆ ಹುಟ್ಟುತ್ತಾನೆ.ಈ ಸಹಜ ಮನೋಧರ್ಮದಿಂದ ಯಾರಾದರೂ ತಪ್ಪಿಸಿಬಿಡುವ ತನಕ ಅವನು ಅದರಿಂದ ತಪ್ಪಿ ಹೋಗುವುದಿಲ್ಲ.ಇದು ಮಾನವರ ಸೃಷ್ಟಿಕರ್ತ, ಪರಿಪಾಲಕ ಮತ್ತು ಅವರ ಆರಾಧ್ಯನು ಮಾನವರಿಗೋಸ್ಕರ ಸಂತೃಪ್ತಿಯಿಂದ ನೀಡಿದ ಧರ್ಮವಾಗಿದೆ.

ನಾನು ಈ ಭೂಲೋಕದಲ್ಲಿ ಜೀವಿಸಬೇಕಾಗಿದೆ, ನಂತರ ನಾನು ಸತ್ತು ಇನ್ನೊಂದು ಲೋಕಕ್ಕೆ ಹೋಗಬೇಕಾಗಿದೆ, ಅದು ಶಾಶ್ವತವಾದ ಲೋಕವಾಗಿದ್ದು ಆ ಲೋಕದಲ್ಲಿ ಜನರು ಒಂದೋ ಸ್ವರ್ಗದಲ್ಲಿರುತ್ತಾರೆ ಅಥವಾ ನರಕದಲ್ಲಿರುತ್ತಾರೆ ಎಂದು ನನ್ನ ಇಸ್ಲಾಂ ಧರ್ಮವು ನನಗೆ ಕಲಿಸುತ್ತದೆ.

ನನ್ನ ಇಸ್ಲಾಂ ಧರ್ಮವು ನನಗೆ ಕೆಲವು ವಿಷಯಗಳನ್ನು ಆಜ್ಞಾಪಿಸುತ್ತದೆ ಮತ್ತು ಕೆಲವು ವಿಷಯಗಳನ್ನು ವಿರೋಧಿಸುತ್ತದೆ.ಇಸ್ಲಾಂ ಆಜ್ಞಾಪಿಸಿದ ವಿಷಯಗಳನ್ನು ನಾನು ನಿರ್ವಹಿಸಿದರೆ ಮತ್ತು ಇಸ್ಲಾಂ ವಿರೋಧಿಸಿದ ವಿಷಯಗಳಿಂದ ನಾನು ದೂರವಾದರೆ, ನಾನು ಇಹಲೋಕ ಮತ್ತು ಪರಲೋಕದಲ್ಲಿ ಯಶಸ್ವಿಯಾಗುತ್ತೇನೆ.ಆದರೆ, ನಾನು ಇದರಲ್ಲಿ ವಿಫಲನಾದರೆ ನಾನು ಎಷ್ಟರ ಮಟ್ಟಿಗೆ ವಿಫಲನಾಗುತ್ತೇನೋ ಅಷ್ಟರ ಮಟ್ಟಿಗೆ ನಾನು ಇಹಲೋಕ ಮತ್ತು ಪರಲೋಕದಲ್ಲಿ ದುರ್ಗತಿಯನ್ನು ಅನುಭವಿಸುತ್ತೇನೆ.

ಇಸ್ಲಾಂ ಧರ್ಮವು ನನಗೆ ಆಜ್ಞಾಪಿಸಿದ ಅತ್ಯಂತ ಪ್ರಮುಖ ವಿಷಯವು ಅಲ್ಲಾಹನನ್ನು ಮಾತ್ರ ಆರಾಧಿಸುವುದು (ತೌಹೀದ್).ಆದ್ದರಿಂದ, ಅಲ್ಲಾಹು ನನ್ನ ಸೃಷ್ಟಿಕರ್ತನು ಮತ್ತು ನನ್ನ ಆರಾಧ್ಯನೆಂದು ನಾನು ಸಾಕ್ಷಿ ವಹಿಸುತ್ತೇನೆ ಮತ್ತು ದೃಢವಾಗಿ ನಂಬುತ್ತೇನೆ.ನಾನು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ–ಅವನ ಮೇಲಿರುವ ಪ್ರೀತಿಯಿಂದ, ಅವನ ಶಿಕ್ಷೆಯ ಭಯದಿಂದ, ಅವನು ನೀಡುವ ಪ್ರತಿಫಲದ ನಿರೀಕ್ಷೆಯಿಂದ ಮತ್ತು ಅವನಲ್ಲಿರುವ ಭರವಸೆಯಿಂದ ಅವನನ್ನು ಮಾತ್ರ ಆರಾಧಿಸುತ್ತೇನೆ.ಇದನ್ನು ತೌಹೀದ್ (ಏಕದೇವತ್ವ) ಎಂದು ಕರೆಯಲಾಗುತ್ತದೆ. ತೌಹೀದ್ ಎಂದರೆ ಅಲ್ಲಾಹು ಏಕೈಕನು ಎಂದು ವಿಶ್ವಾಸವಿಡುವುದು ಮತ್ತು ಮುಹಮ್ಮದ್(ಸ) ಅವನ ಸಂದೇಶವಾಹಕರು ಎಂದು ವಿಶ್ವಾಸವಿಡುವುದು.ಮುಹಮ್ಮದ್(ಸ) ಅಂತಿಮ ಪ್ರವಾದಿಯಾಗಿದ್ದಾರೆ. ಅಲ್ಲಾಹು ಅವರನ್ನು ಸರ್ವಲೋಕಗಳಿಗೆ ದಯೆಯಾಗಿ ಕಳುಹಿಸಿದ್ದಾನೆ ಮತ್ತು ಅವರ ಮೂಲಕ ಪ್ರವಾದಿಗಳನ್ನು ಮತ್ತು ದೈವಿಕ ಸಂದೇಶಗಳನ್ನು ಸಮಾಪ್ತಿಗೊಳಿಸಿದ್ದಾನೆ. ಅವರ ನಂತರ ಯಾವುದೇ ಪ್ರವಾದಿ ಬರುವುದಿಲ್ಲ.ಅವರು ಎಲ್ಲಾ ಸ್ಥಳ-ಕಾಲಗಳಲ್ಲೂ ಮತ್ತು ಎಲ್ಲಾ ಜನರಿಗೂ ಸ್ವೀಕಾರಯೋಗ್ಯವಾದ ಧರ್ಮವನ್ನು ತಂದರು.

ದೇವದೂತರುಗಳಲ್ಲಿ ಮತ್ತು ನೂಹ್ (ನೋಹ), ಇಬ್ರಾಹೀಂ (ಅಬ್ರಹಾಂ), ಮೂಸಾ (ಮೋಸೆಸ್), ಈಸಾ (ಯೇಸು) ಮುಹಮ್ಮದ್ (ಅವರೆಲ್ಲರ ಮೇಲೆ ಶಾಂತಿಯಿರಲಿ) ಮುಂತಾದ ಪ್ರಮುಖ ಪ್ರವಾದಿಗಳು ಸೇರಿದಂತೆ ಎಲ್ಲಾ ಪ್ರವಾದಿಗಳಲ್ಲೂ ವಿಶ್ವಾಸವಿಡಲು ನನ್ನ ಧರ್ಮವು ನನಗೆ ಅತ್ಯಂತ ದೃಢವಾಗಿ ಆಜ್ಞಾಪಿಸುತ್ತದೆ.

ಅಲ್ಲಾಹನ ಸಂದೇಶವಾಹಕರುಗಳಿಗೆ ಅವತೀರ್ಣವಾದ ದೈವಿಕ ಗ್ರಂಥಗಳಲ್ಲಿ ವಿಶ್ವಾಸವಿಡಲು ಮತ್ತು ಅವುಗಳಲ್ಲಿ ಕೊನೆಯ ಹಾಗೂ ಅತ್ಯಂತ ಶ್ರೇಷ್ಠ ಗ್ರಂಥವಾದ ಪವಿತ್ರ ಕುರ್ಆನ್ ಅನ್ನು ಅನುಸರಿಸುವಂತೆ ಅದು ನನಗೆ ಆಜ್ಞಾಪಿಸುತ್ತದೆ.

ನನ್ನ ಧರ್ಮವು ಅಂತ್ಯದಿನದಲ್ಲಿ—ಅಂದರೆ ಜನರು ತಮ್ಮ ಕರ್ಮಗಳಿಗೆ ಪ್ರತಿಫಲವನ್ನು ಪಡೆಯುವ ದಿನದಲ್ಲಿ ವಿಶ್ವಾಸವಿಡುವಂತೆ ನನಗೆ ಆಜ್ಞಾಪಿಸುತ್ತದೆ.ಅದು ದೈವಿಕ ವಿಧಿಯಲ್ಲಿ ವಿಶ್ವಾಸವಿಡಲು, ಈ ಲೌಕಿಕ ಜೀವನದಲ್ಲಿ ಪೂರ್ವನಿರ್ಧರಿತವಾಗಿರುವ ಒಳಿತು ಮತ್ತು ಕೆಡುಕುಗಳನ್ನು ಒಪ್ಪಿಕೊಳ್ಳಲು ಮತ್ತು ಮೋಕ್ಷಕ್ಕೆ ಕಾರಣವಾಗುವ ಮಾರ್ಗಗಳನ್ನು ಅನುಸರಿಸಲು ನನಗೆ ಆಜ್ಞಾಪಿಸುತ್ತದೆ.

ದೈವಿಕ ವಿಧಿಯಲ್ಲಿ ವಿಶ್ವಾಸವಿಡುವುದರಿಂದ ನನಗೆ ಸಮಾಧಾನ, ನಿರ್ಭಯ ಮತ್ತು ತಾಳ್ಮೆ ಸಿಗುತ್ತದೆ. ಈಗಾಗಲೇ ಸಂಭವಿಸಿದ ವಿಷಯಗಳ ಬಗ್ಗೆ ಮರುಕಪಡದಂತೆ ಅದು ನನ್ನನ್ನು ತಡೆಯುತ್ತದೆ.ಏಕೆಂದರೆ ನನಗೆ ಏನು ಸಂಭವಿಸಿದೆಯೋ ಅದು ನನ್ನಿಂದ ದೂರವಾಗುತ್ತಿರಲಿಲ್ಲ ಮತ್ತು ಏನು ನನ್ನಿಂದ ದೂರವಾಯಿತೋ ಅದು ನನಗೆ ಸಂಭವಿಸುತ್ತಿರಲಿಲ್ಲ ಎಂದು ನಾನು ದೃಢವಾಗಿ ತಿಳಿದಿದ್ದೇನೆ.ಅಲ್ಲಾಹು ಎಲ್ಲವನ್ನೂ ನಿರ್ಣಯಿಸಿದ್ದಾನೆ ಮತ್ತು ದಾಖಲಿಸಿದ್ದಾನೆ. ನನ್ನ ಕರ್ತವ್ಯವು ಕಾರ್ಯ ಕಾರಣಗಳನ್ನು ಬಳಸಿ ಪರಿಶ್ರಮಿಸುವುದು ಮತ್ತು ಫಲಿತಾಂಶದ ಬಗ್ಗೆ ತೃಪ್ತನಾಗುವುದು ಮಾತ್ರ.

ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮೆಚ್ಚಿಸುವ, ನನ್ನ ಆತ್ಮವನ್ನು ಶುದ್ಧೀಕರಿಸುವ, ನನ್ನ ಹೃದಯವನ್ನು ಸಂತೋಷಗೊಳಿಸುವ, ನನ್ನ ಮನವನ್ನು ವಿಶಾಲಗೊಳಿಸುವ, ನನ್ನ ದಾರಿಯನ್ನು ಬೆಳಗಿಸುವ ಮತ್ತು ನನ್ನನ್ನು ಸಮಾಜದ ಉತ್ತಮ ಸದಸ್ಯನನ್ನಾಗಿ ಮಾಡುವ ಸತ್ಕರ್ಮಗಳನ್ನು ಮಾಡುವ ಮೂಲಕ ಮತ್ತು ಶ್ರೇಷ್ಠ ಗುಣಗಳನ್ನು ಹೊಂದಿರುವ ಮೂಲಕ ನನ್ನ ಆತ್ಮವನ್ನು ಸಂಸ್ಕರಿಸಲು ಇಸ್ಲಾಂ ನನಗೆ ಆಜ್ಞಾಪಿಸುತ್ತದೆ.

ಆ ಸತ್ಕರ್ಮಗಳಲ್ಲಿ ಅತಿಶ್ರೇಷ್ಠವಾದುದು ಅಲ್ಲಾಹನ ಏಕೈಕತೆಯಲ್ಲಿ ವಿಶ್ವಾಸವಿಡುವುದು, ಪ್ರತಿದಿನ-ರಾತ್ರಿ ಐದು ವೇಳೆಯ ಕಡ್ಡಾಯ ನಮಾಝ್ಗಳನ್ನು ನಿರ್ವಹಿಸುವುದು, ಪ್ರತಿವರ್ಷ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಮತ್ತು ಯಾರಿಗೆ ಹಜ್ಜ್ ನಿರ್ವಹಿಸುವ ಸಾಮರ್ಥ್ಯವಿದೆಯೋ ಅವರು ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು.

ಕುರ್ಆನ್ ಅನ್ನು ಪದೇ ಪದೇ ಪಠಿಸಲು ನನ್ನ ಧರ್ಮವು ನನಗೆ ಮಾರ್ಗದರ್ಶನ ನೀಡಿದ್ದು ನನ್ನ ಮನಸ್ಸಿಗೆ ನೆಮ್ಮದಿ ತರುವ ಅತ್ಯುತ್ತಮ ವಿಷಯವಾಗಿದೆ. ಕುರ್ಆನ್ ಅಲ್ಲಾಹನ ವಚನವಾಗಿದ್ದು, ಅದು ಅತ್ಯಂತ ಸತ್ಯ, ಸುಂದರ, ಭವ್ಯ ಮತ್ತು ಮಹತ್ವಪೂರ್ಣ ಮಾತುಗಳನ್ನು ಒಳಗೊಂಡಿದೆ. ಏಕೆಂದರೆ ಅದರಲ್ಲಿ ಹಿಂದಿನ ಮತ್ತು ನಂತರದ ಸಮುದಾಯಗಳ ಜ್ಞಾನಗಳಿವೆ.ಕುರ್ಆನ್ ಪಠಿಸುವುದರಿಂದ ಮತ್ತು ಅದರ ಪಠಣಕ್ಕೆ ಕಿವಿಗೊಡುವುದರಿಂದ ಹೃದಯಕ್ಕೆ ಶಾಂತಿ, ಸ್ಥಿರತೆ ಮತ್ತು ಸಂತೋಷವು ಸಿಗುತ್ತದೆ. ಪಠಿಸುವವನನಿಗೆ ಅಥವಾ ಕಿವಿಗೊಡುವವನಿಗೆ ಅರಬ್ಬಿ ಭಾಷೆ ತಿಳಿಯದಿದ್ದರೂ ಅಥವಾ ಅವನು ಮುಸ್ಲಿಮೇತರನಾಗಿದ್ದರೂ ಸಹ.

ಸರ್ವಶಕ್ತನಾದ ಅಲ್ಲಾಹನಲ್ಲಿ ಅತಿಹೆಚ್ಚು ಪ್ರಾರ್ಥಿಸುವುದು, ಅವನನ್ನು ಆಶ್ರಯಿಸುವುದು ಮತ್ತು ಚಿಕ್ಕದ್ದಾಗಲಿ ದೊಡ್ಡದ್ದಾಗಲಿ ತನ್ನ ಎಲ್ಲಾ ಅಗತ್ಯಗಳಿಗಾಗಿ ಅವನಲ್ಲಿ ಬೇಡುವುದು ಹೃದಯಕ್ಕೆ ಸಮಾಧಾನ ನೀಡುವ ಮುಖ್ಯ ಕಾರಣಗಳಾಗಿವೆ.ಅಲ್ಲಾಹನನ್ನು ಕರೆದು ಪ್ರಾರ್ಥಿಸುವವರಿಗೆ ಮತ್ತು ಅವನನ್ನು ನಿಷ್ಕಳಂಕವಾಗಿ ಆರಾಧಿಸುವವರಿಗೆ ಅವನು ಉತ್ತರ ನೀಡುತ್ತಾನೆ.

ಸರ್ವಶಕ್ತನಾದ ಅಲ್ಲಾಹನನ್ನು ಅತಿಯಾಗಿ ಸ್ಮರಿಸುವುದು ಹೃದಯಕ್ಕೆ ಶಾಂತಿ ಮತ್ತು ಸಮಾಧಾನ ನೀಡುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

ಅಲ್ಲಾಹನನ್ನು ಹೇಗೆ ಸ್ಮರಿಸಬೇಕೆಂದು ಪ್ರವಾದಿ(ಸ) ರವರು ನನಗೆ ಕಲಿಸಿಕೊಟ್ಟಿದ್ದಾರೆ. ಅಲ್ಲಾಹನನ್ನು ಸ್ಮರಿಸುವ ಅತ್ಯುತ್ತಮ ಸ್ಮರಣೆಗಳನ್ನು (ಝಿಕ್ರ್ಗಳನ್ನು) ಅವರು ನನಗೆ ಕಲಿಸಿದ್ದಾರೆ.ಅವುಗಳಲ್ಲೊಂದು ಈ ನಾಲ್ಕು ವಚನಗಳು: ಸುಬ್ಹಾನಲ್ಲಾಹ್, ಅಲ್-ಹಮ್ದುಲಿಲ್ಲಾಹ್, ಲಾ ಇಲಾಹ ಇಲ್ಲಲ್ಲಾಹ್ ಮತ್ತು ಅಲ್ಲಾಹು ಅಕ್ಬರ್. ಇವು ಪವಿತ್ರ ಕುರ್ಆನಿನ ನಂತರದ ಅತಿಶ್ರೇಷ್ಠ ವಚನಗಳಾಗಿವೆ.

ಅದೇ ರೀತಿ, ಅಸ್ತಗ್ಫಿರುಲ್ಲಾಹ್ ಮತ್ತು ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹ್ ಎಂಬ ಝಿಕ್ರ್ಗಳು.

ಹೃದಯಕ್ಕೆ ಶಾಂತಿ ಮತ್ತು ಸಮಾಧಾನ ದೊರೆಯಲು ಈ ವಚನಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ನಾನು ಅತ್ಯಂತ ಪರಿಷ್ಕೃತ ರೀತಿಯಲ್ಲಿ ಬದುಕಲು ಮತ್ತು ನನ್ನ ಮಾನವೀಯತೆ ಹಾಗೂ ಗೌರವವನ್ನು ಕಳಂಕಗೊಳಿಸುವ ಎಲ್ಲಾ ವಿಷಯಗಳಿಂದ ದೂರವಿರಲು ಇಸ್ಲಾಂ ನನಗೆ ಆಜ್ಞಾಪಿಸುತ್ತದೆ.ಅದೇ ರೀತಿ, ನನ್ನ ಧಾರ್ಮಿಕ ಹಾಗೂ ಲೌಕಿಕ ಜೀವನಕ್ಕೆ ಉಪಯೋಗವಾಗುವ ಕೆಲಸಗಳನ್ನು ಮಾಡುವುದಕ್ಕಾಗಿ ನನ್ನ ಬುದ್ಧಿ ಮತ್ತು ಅಂಗಾಂಗಗಳನ್ನು ಬಳಸಲು ಇಸ್ಲಾಂ ನನಗೆ ಆಜ್ಞಾಪಿಸುತ್ತದೆ. ವಾಸ್ತವಿಕವಾಗಿ ನನ್ನನ್ನು ಇದಕ್ಕಾಗಿಯೇ ಸೃಷ್ಟಿಸಲಾಗಿದೆ.

ಇಸ್ಲಾಂ ಧರ್ಮವು ನನಗೆ ದಯೆ ತೋರಲು, ಉತ್ತಮವಾಗಿ ವರ್ತಿಸಲು, ಉತ್ತಮವಾಗಿ ವ್ಯವಹರಿಸಲು ಮತ್ತು ನನಗೆ ಸಾಧ್ಯವಾದಷ್ಟು ಮಾತು ಮತ್ತು ಕ್ರಿಯೆಯ ಮೂಲಕ ಜನರಿಗೆ ಸಹಾಯ ಮಾಡಲು ಆಜ್ಞಾಪಿಸುತ್ತದೆ.

ನನಗೆ ನೆರವೇರಿಸಬೇಕೆಂದು ಆಜ್ಞಾಪಿಸಲಾದ ಹಕ್ಕುಗಳಲ್ಲಿ ಅತಿದೊಡ್ಡದು ಮಾತಾಪಿತರ ಹಕ್ಕುಗಳಾಗಿವೆ. ಅವರಿಗೆ ಒಳಿತು ಮಾಡಲು, ಅವರಿಗೆ ಒಳಿತಾಗಿರುವುದನ್ನು ಪ್ರೀತಿಸಲು, ಅವರನ್ನು ಸಂತೋಷಪಡಿಸಲು ಮತ್ತು ಅವರಿಗೆ ಪ್ರಯೋಜನವಾಗುವ ವಿಷಯಗಳಿಗೆ ಆದ್ಯತೆ ನೀಡಲು ನನ್ನ ಧರ್ಮವು ನನಗೆ ಆಜ್ಞಾಪಿಸುತ್ತದೆ; ವಿಶೇಷವಾಗಿ ಅವರು ವೃದ್ಧರಾಗಿರುವಾಗ.ಈ ಕಾರಣದಿಂದಲೇ ಇಸ್ಲಾಮೀ ಸಮಾಜಗಳಲ್ಲಿ ಮಕ್ಕಳು ತಂದೆ-ತಾಯಿಗಳಿಗೆ ಉನ್ನತ ಸ್ಥಾನಮಾನ ಕೊಟ್ಟು ಗೌರವಿಸುವುದನ್ನು ಮತ್ತು ಅವರ ಸೇವೆ ಮಾಡುವುದನ್ನು ನಿಮಗೆ ಕಾಣಬಹುದು.ತಂದೆ-ತಾಯಿಗಳಿಗೆ ವಯಸ್ಸಾದಂತೆ, ಅಥವಾ ಅವರು ರೋಗಪೀಡಿತರಾಗುವಾಗ, ಅಥವಾ ಅವರು ಬಲಹೀನರಾಗುವಾಗ ಮಕ್ಕಳು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.

ಮಹಿಳೆಯರಿಗೆ ಘನತೆ ಮತ್ತು ಶ್ರೇಷ್ಠತೆಗಳಿವೆ ಮತ್ತು ಅವರಿಗೆ ಕೆಲವು ಶ್ರೇಷ್ಠ ಹಕ್ಕುಗಳಿವೆಯೆಂದು ನನ್ನ ಧರ್ಮವು ನನಗೆ ಕಲಿಸುತ್ತದೆ.ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಪುರುಷರಿಗೆ ಸಹೋದರಿಯರು. ಮಡದಿ-ಮಕ್ಕಳೊಡನೆ ಅತ್ಯುತ್ತಮವಾಗಿ ವರ್ತಿಸುವವನೇ ಜನರಲ್ಲಿ ಅತಿಶ್ರೇಷ್ಠನು.ಮುಸ್ಲಿಮ್ ಮಹಿಳೆ ಶಿಶುವಾಗಿರುವಾಗ ಅವಳಿಗೆ ಮೊಲೆಹಾಲು ಕುಡಿಯುವ, ಆರೈಕೆ ಪಡೆಯುವ, ಉತ್ತಮ ಪಾಲನೆ ಪೋಷಣೆ ಪಡೆಯುವ ಹಕ್ಕುಗಳಿವೆ. ಆ ಸಮಯದಲ್ಲಿ ಅವಳು ತಂದೆ-ತಾಯಿಗಳ ಮತ್ತು ಸಹೋದರರ ಕಣ್ಮನಗಳನ್ನು ತಣಿಸುತ್ತಾಳೆ.

ಅವಳು ಬೆಳೆದು ದೊಡ್ಡವಳಾದಂತೆ ಅವಳು ಕುಟುಂಬದಲ್ಲಿ ಎಲ್ಲರ ಪ್ರೀತಿಗೆ ಪಾತ್ರಳಾಗುತ್ತಾಳೆ. ಅವಳ ರಕ್ಷಣೆಯ ವಿಷಯದಲ್ಲಿ ಅವಳ ಪೋಷಕರು ಸಂಪೂರ್ಣ ಕಾಳಜಿ ವಹಿಸುತ್ತಾರೆ.ಅವಳ ಕಡೆಗೆ ಯಾರಾದರೂ ಕೆಟ್ಟ ಉದ್ದೇಶದಿಂದ ಕೈಚಾಚುವುದನ್ನು, ನಾಲಗೆ ಹರಿಸುವುದನ್ನು ಅಥವಾ ಓರೆ ಕಣ್ಣಿನಿಂದ ನೋಡುವುದನ್ನು ಅವರು ಇಷ್ಟಪಡುವುದಿಲ್ಲ.

ಅವಳು ವಿವಾಹವಾಗುವುದು ಅಲ್ಲಾಹನ ವಚನ ಮತ್ತು ಪ್ರಬಲ ಕರಾರಿನ ಮೂಲಕವಾಗಿದೆ.ಅವಳು ತನ್ನ ಗಂಡನ ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಬಾಳುತ್ತಾಳೆ.ಅವಳನ್ನು ಗೌರವಿಸುವುದು, ಅವಳಿಗೆ ಸಹಾಯ ಮಾಡುವುದು ಮತ್ತು ಅವಳಿಂದ ತೊಂದರೆಯನ್ನು ನಿವಾರಿಸುವುದು ಗಂಡನ ಕರ್ತವ್ಯವಾಗಿದೆ.

ಅವಳು ತಾಯಿಯಾದ ಸಂದರ್ಭದಲ್ಲಿ ಅವಳಿಗೆ ಒಳಿತು ಮಾಡುವುದನ್ನು ಅಲ್ಲಾಹನ ಹಕ್ಕುಗಳೊಂದಿಗೆ ಸೇರಿಸಲಾಗಿದೆ. ಅವಳೊಡನೆ ಕೆಟ್ಟದಾಗಿ ವರ್ತಿಸುವುದನ್ನು ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುವುದರೊಡನೆ ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡುವುದರೊಡನೆ ಸೇರಿಸಲಾಗಿದೆ.

ಅವಳು ಸಹೋದರಿಯಾಗಿದ್ದರೆ ಆಕೆಯನ್ನು ಉತ್ತಮವಾಗಿ ನೋಡಿಕೊಳ್ಳಲು, ಗೌರವಿಸಲು ಮತ್ತು ಅವಳನ್ನು ಇತರರ ಕೆಟ್ಟ ದೃಷ್ಟಿಗಳಿಂದ ಕಾಪಾಡಿಕೊಳ್ಳಲು ಮುಸಲ್ಮಾನರಿಗೆ ಆಜ್ಞಾಪಿಸಲಾಗಿದೆ.ಅವಳು ತಾಯಿಯ ಸಹೋದರಿಯಾಗಿದ್ದರೆ (ಚಿಕ್ಕಮ್ಮ ಅಥವಾ ದೊಡ್ಡಮ್ಮ) ಸ್ವಂತ ತಾಯಿಗೆ ಒಳಿತು ಮಾಡುವ ರೀತಿಯಲ್ಲೇ ಅವಳಿಗೂ ಒಳಿತು ಮಾಡಬೇಕಾಗಿದೆ.

ಅವಳು ಅಜ್ಜಿ ಅಥವಾ ಹಿರಿಯ ನಾಗರಿಕಳಾಗಿದ್ದರೆ, ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬ ಸಂಬಂಧಿಕರು ಅವಳಿಗೆ ಹೆಚ್ಚು ಬೆಲೆ ನೀಡುತ್ತಾರೆ. ಅವಳ ಬೇಡಿಕೆಯನ್ನು ಅವರು ತಿರಸ್ಕರಿಸುವುದಿಲ್ಲ. ಅವಳ ಅಭಿಪ್ರಾಯವನ್ನು ಕಡೆಗಣಿಸುವುದಿಲ್ಲ.

ಅವಳು ಸಂಬಂಧಿಕಳೋ, ನೆರೆಯವಳೋ ಅಲ್ಲದಿದ್ದರೂ ಸಹ, ಅವಳಿಗೆ ತೊಂದರೆ ನೀಡಬಾರದು, ಅವಳ ಮುಂದೆ ದೃಷ್ಟಿಗಳನ್ನು ತಗ್ಗಿಸಬೇಕು ಮುಂತಾದ ಇಸ್ಲಾಂ ಧರ್ಮದ ಸಾರ್ವತ್ರಿಕ ಹಕ್ಕುಗಳು ಅವಳಿಗಿವೆ.

ಮುಸ್ಲಿಂ ಸಮಾಜಗಳು ಈಗಲೂ ಈ ಹಕ್ಕುಗಳನ್ನು ಗೌರವಿಸಬೇಕಾದ ರೀತಿಯಲ್ಲಿ ಗೌರವಿಸುತ್ತಿವೆ. ಮುಸ್ಲಿಮೇತರ ಸಮಾಜಗಳು ಮಹಿಳೆಗೆ ನೀಡದ ಮೌಲ್ಯ ಮತ್ತು ಪರಿಗಣನೆಯನ್ನು ಇಸ್ಲಾಂ ಧರ್ಮವು ಮಹಿಳೆಗೆ ನೀಡಿದೆ.

ಇದಲ್ಲದೆ, ಇಸ್ಲಾಂ ಧರ್ಮದಲ್ಲಿ ಮಹಿಳೆಯರು ಆಸ್ತಿಯನ್ನು ಹೊಂದುವ, ಬಾಡಿಗೆಗೆ ನೀಡುವ, ಮಾರಾಟ ಮಾಡುವ, ಖರೀದಿಸುವ ಮತ್ತು ಇತರ ಎಲ್ಲ ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಇಸ್ಲಾಂ ಧರ್ಮಕ್ಕೆ ವಿರುದ್ಧವಾಗದ ರೀತಿಯಲ್ಲಿ ಕಲಿಯುವ, ಕಲಿಸುವ ಮತ್ತು ಕೆಲಸ ಮಾಡುವ ಹಕ್ಕನ್ನು ಕೂಡ ಅವರು ಹೊಂದಿದ್ದಾರೆ.ಮಾತ್ರವಲ್ಲ, ಇಸ್ಲಾಂ ಧರ್ಮದಲ್ಲಿ ಪುರುಷರು ಮತ್ತು ಮಹಿಳೆಯರೆಲ್ಲರೂ ಕಡ್ಡಾಯವಾಗಿ ಕಲಿಯಬೇಕಾದ ಕೆಲವು ಜ್ಞಾನಗಳಿದ್ದು, ಅವುಗಳನ್ನು ಕಲಿಯದಿದ್ದರೆ ಅವರು ಪಾಪ ಮಾಡಿದವರಾಗುತ್ತಾರೆ.

ವಾಸ್ತವವಾಗಿ, ಪುರುಷರಿಗೆ ಇರುವ ಎಲ್ಲಾ ಹಕ್ಕುಗಳು ಮತ್ತು ನಿಯಮಗಳು ಮಹಿಳೆಯರಿಗೂ ಇವೆ. ಆದರೆ ಕೆಲವು ಹಕ್ಕುಗಳು ಮತ್ತು ನಿಯಮಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿವೆ. ಹಾಗೆಯೇ ಕೆಲವು ಹಕ್ಕುಗಳು ಮತ್ತು ನಿಯಮಗಳು ಪುರುಷರಿಗೆ ಮಾತ್ರ ಸೀಮಿತವಾಗಿವೆ. ಈ ಎಲ್ಲಾ ಹಕ್ಕುಗಳು ಮತ್ತು ನಿಯಮಗಳು ಆಯಾ ಸ್ಥಳಗಳಲ್ಲಿ ವಿವರಿಸಲಾದಂತೆ ಪ್ರತಿಯೊಬ್ಬರಿಗೂ ಹೊಂದಿಕೆಯಾಗುವ ರೀತಿಯಲ್ಲಿವೆ.

ನನ್ನ ಸಹೋದರರು, ಸಹೋದರಿಯರು, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ ಮತ್ತು ನನ್ನ ಎಲ್ಲಾ ಸಂಬಂಧಿಕರನ್ನು ಪ್ರೀತಿಸಬೇಕೆಂದು ನನ್ನ ಧರ್ಮವು ನನಗೆ ಆಜ್ಞಾಪಿಸುತ್ತದೆ. ನನ್ನ ಮಡದಿ, ಮಕ್ಕಳು ಮತ್ತು ನೆರೆಹೊರೆಯವರ ಹಕ್ಕುಗಳನ್ನು ಪೂರೈಸಲು ನನ್ನ ಧರ್ಮವು ನನಗೆ ಆಜ್ಞಾಪಿಸುತ್ತದೆ.

ನನ್ನ ಧರ್ಮವು ನನಗೆ ಶಿಕ್ಷಣ ಪಡೆಯಲು ಆಜ್ಞಾಪಿಸುತ್ತದೆ ಮತ್ತು ನನ್ನ ಬುದ್ಧಿ, ನಡವಳಿಕೆ ಹಾಗೂ ಆಲೋಚನೆಗಳನ್ನು ಪೋಷಿಸುವ ಎಲ್ಲವನ್ನೂ ಮಾಡಲು ಒತ್ತಾಯಿಸುತ್ತದೆ.

ನನ್ನ ಧರ್ಮವು ನನಗೆ ಸಂಕೋಚ, ಸಹಿಷ್ಣುತೆ, ಔದಾರ್ಯ, ಶೌರ್ಯ, ಬುದ್ಧಿವಂತಿಕೆ, ಗಾಂಭೀರ್ಯ, ತಾಳ್ಮೆ, ವಿಶ್ವಸ್ತತೆ, ನಮ್ರತೆ, ಚಾರಿತ್ರ್ಯ, ಪರಿಶುದ್ಧತೆ, ನಿಷ್ಠೆ, ಮುಂತಾದ ಗುಣಗಳನ್ನು ಮತ್ತು ನನಗೆ ಸಾಧ್ಯವಾದಷ್ಟು ಇತರರಿಗೆ ಒಳ್ಳೆಯದನ್ನು ಬಯಸುವುದು, ಜೀವನೋಪಾಯಕ್ಕಾಗಿ ಶ್ರಮಿಸುವುದು, ನಿರ್ಗತಿಕರಿಗೆ ಸಹಾನುಭೂತಿ ತೋರಿಸುವುದು, ರೋಗಿಗಳನ್ನು ಭೇಟಿ ಮಾಡುವುದು, ಆಶ್ವಾಸನೆಗಳನ್ನು ಈಡೇರಿಸುವುದು, ಒಳ್ಳೆಯ ಮಾತುಗಳನ್ನು ಆಡುವುದು, ಜನರನ್ನು ನಗುಮುಖದಿಂದ ಸ್ವೀಕರಿಸುವುದು ಮತ್ತು ಅವರನ್ನು ಸಂತೋಷಪಡಿಸಲು ಉತ್ಸಾಹ ತೋರುವುದು ಮುಂತಾದವುಗಳನ್ನು ಮಾಡಲು ಆಜ್ಞಾಪಿಸುತ್ತದೆ.

ಮತ್ತೊಂದೆಡೆ, ನನ್ನ ಧರ್ಮವು ನನಗೆ ಅಜ್ಞಾನದ ಬಗ್ಗೆ ಎಚ್ಚರಿಸುತ್ತದೆ, ಸತ್ಯನಿಷೇಧ, ನಾಸ್ತಿಕತೆ, ಅವಿಧೇಯತೆ, ಅಶ್ಲೀಲತೆ, ವ್ಯಭಿಚಾರ, ಲೈಂಗಿಕ ವಿಕೃತತೆ, ಅಹಂಕಾರ, ಅಸೂಯೆ, ದ್ವೇಷ, ಅಪನಂಬಿಕೆ, ನಿರಾಶಾವಾದ, ದುಃಖ, ಸುಳ್ಳು, ಹತಾಶೆ, ಜಿಪುಣತನ, ಸೋಮಾರಿತನ, ಹೇಡಿತನ, ಆಲಸ್ಯ, ಕೋಪ, ಉದ್ಧಟತನ, ಅವಿವೇಕ, ಜನರೊಡನೆ ಕೆಟ್ಟದಾಗಿ ವರ್ತಿಸುವುದು, ಅನಗತ್ಯವಾಗಿ ಹೆಚ್ಚು ಹೆಚ್ಚು ಮಾತನಾಡುವುದು, ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವುದು, ವಂಚನೆ ಮಾಡುವುದು, ಆಶ್ವಾಸನೆಗಳನ್ನು ಉಲ್ಲಂಘಿಸುವುದು, ತಂದೆ-ತಾಯಿಗಳಿಗೆ ತೊಂದರೆ ಕೊಡುವುದು, ಕುಟುಂಬ ಸಂಬಂಧಗಳನ್ನು ಕಡಿಯುವುದು, ಮಕ್ಕಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು, ನೆರೆಹೊರೆಯವರಿಗೆ ಮತ್ತು ಇತರ ಜನರಿಗೆ ತೊಂದರೆ ಕೊಡುವುದು ಮುಂತಾದವುಗಳನ್ನು ವಿರೋಧಿಸುತ್ತದೆ.

ಇಸ್ಲಾಂ ಧರ್ಮವು ನನಗೆ ಮದ್ಯಪಾನ, ಮಾದಕ ದ್ರವ್ಯ ಸೇವನೆ, ಜೂಜಾಟ, ಕಳ್ಳತನ, ಮೋಸ, ಇತರರನ್ನು ಹೆದರಿಸುವುದು, ಇತರರ ಮೇಲೆ ಕಣ್ಣಿಡುವುದು ಅಥವಾ ಇತರರ ತಪ್ಪುಗಳನ್ನು ಹುಡುಕುವುದನ್ನು ನಿಷೇಧಿಸುತ್ತದೆ.

ನನ್ನ ಇಸ್ಲಾಂ ಧರ್ಮವು ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ರೀತಿಯಲ್ಲಿ ಆಸ್ತಿಯ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ. ಈ ಕಾರಣದಿಂದಲೇ ಇಸ್ಲಾಂ ಧರ್ಮವು ಮುಸ್ಲಿಮರನ್ನು ಪ್ರಾಮಾಣಿಕವಾಗಿರಲು ಪ್ರೇರೇಪಿಸುತ್ತದೆ ಮತ್ತು ಪ್ರಾಮಾಣಿಕರಾಗಿರುವವರನ್ನು ಶ್ಲಾಘಿಸುತ್ತದೆ. ಅವರಿಗೆ ಪರಲೋಕದಲ್ಲಿ ಉತ್ತಮ ಜೀವನ ಮತ್ತು ಸ್ವರ್ಗದ ಭರವಸೆ ನೀಡುತ್ತದೆ. ಮತ್ತೊಂದೆಡೆ, ಇಸ್ಲಾಂ ಧರ್ಮವು ಕಳ್ಳತನವನ್ನು ನಿಷೇಧಿಸುತ್ತದೆ ಮತ್ತು ಕಳ್ಳರಿಗೆ ಇಹಲೋಕ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆಯೆಂದು ಹೆದರಿಸುತ್ತದೆ.

ಇಸ್ಲಾಂ ಧರ್ಮವು ಜೀವವನ್ನು ರಕ್ಷಿಸುತ್ತದೆ. ಈ ಕಾರಣದಿಂದಲೇ ಅನ್ಯಾಯವಾಗಿ ಮಾನವ ಜೀವವನ್ನು ಕೊಲ್ಲುವುದನ್ನು ಮತ್ತು ಮೌಖಿಕ ನಿಂದನೆ ಸೇರಿದಂತೆ ಇನ್ನೊಬ್ಬರ ಮೇಲೆ ಮಾಡುವ ಎಲ್ಲಾ ರೀತಿಯ ಆಕ್ರಮಣಗಳನ್ನು ನಿಷೇಧಿಸುತ್ತದೆ.

ಮಾತ್ರವಲ್ಲ, ಒಬ್ಬ ವ್ಯಕ್ತಿ ಸ್ವಯಂ ತನ್ನ ಮೇಲೆಯೇ ಆಕ್ರಮಣವೆಸಗುವುದನ್ನು ಸಹ ಇಸ್ಲಾಂ ಧರ್ಮವು ನಿಷೇಧಿಸುತ್ತದೆ. ಆದ್ದರಿಂದ ಬುದ್ಧಿಯನ್ನು ಭ್ರಂಶಗೊಳಿಸಲು, ಆರೋಗ್ಯವನ್ನು ಕೆಡಿಸಲು ಮತ್ತು ಆತ್ಮಹತ್ಯೆ ಮಾಡಲು ಇಸ್ಲಾಂ ಯಾರಿಗೂ ಅನುಮತಿ ನೀಡುವುದಿಲ್ಲ.

ನನ್ನ ಇಸ್ಲಾಂ ಧರ್ಮದಲ್ಲಿ ಸ್ವಾತಂತ್ರ್ಯವಿದೆ. ಆದರೆ ಅದಕ್ಕೆ ಕೆಲವು ನಿಬಂಧನೆಗಳಿವೆ.ಇಸ್ಲಾಂ ಧರ್ಮದಲ್ಲಿ, ಮನುಷ್ಯನಿಗೆ ಚಿಂತನೆ ಮಾಡುವ, ಮಾರಾಟ-ಖರೀದಿ ಮಾಡುವ, ವ್ಯಾಪಾರ ಮಾಡುವ ಮತ್ತು ಸುತ್ತಾಡುವ ಸ್ವಾತಂತ್ರ್ಯವಿದೆ. ಆಹಾರ, ಪಾನೀಯ, ಬಟ್ಟೆ-ಬರೆ ಮುಂತಾದ ಜೀವನದ ಉತ್ತಮ ವಸ್ತುಗಳನ್ನು ಆನಂದಿಸುವ ಸ್ವಾತಂತ್ರ್ಯವಿದೆ. ಆದರೆ ಇವೆಲ್ಲವೂ ಅವನಿಗೆ ಅಥವಾ ಇತರರಿಗೆ ಹಾನಿಯನ್ನುಂಟುಮಾಡುವ ನಿಷೇಧಿತ ಕೃತ್ಯಗಳಾಗಿರಬಾರದು.

ನನ್ನ ಧರ್ಮದಲ್ಲಿ ಸ್ವಾತಂತ್ರ್ಯಕ್ಕೆ ಕೆಲವು ಇತಿಮಿತಿಗಳಿವೆ. ಇತರರ ಮೇಲೆ ದಬ್ಬಾಳಿಕೆ ಮಾಡಲು, ಅಥವಾ ತನ್ನ ಆಸ್ತಿ, ನೆಮ್ಮದಿ ಮತ್ತು ಮಾನವೀಯತೆಗೆ ಹಾನಿಯಾಗುವ ರೀತಿಯಲ್ಲಿ ನಿಷೇಧಿತ ಮೋಜುಗಳಲ್ಲಿ ತೊಡಗಿಸಿಕೊಳ್ಳಲು ನನ್ನ ಧರ್ಮವು ಅನುಮತಿಸುವುದಿಲ್ಲ.

ಎಲ್ಲಾ ವಿಷಯಗಳಲ್ಲೂ ಸ್ವಾತಂತ್ರ್ಯವನ್ನು ಹೊಂದಿರುವವರು ಮತ್ತು ಧಾರ್ಮಿಕವಾದ ಅಥವಾ ಬೌದ್ಧಿಕವಾದ ಯಾವುದೇ ಇತಿಮಿತಿಯಿಲ್ಲದೆ ಮನಸ್ಸು ಬಯಸಿದ್ದನ್ನೆಲ್ಲಾ ಆಸ್ವಾದಿಸುವವರು ಅತ್ಯಂತ ನತದೃಷ್ಟ ಮತ್ತು ಇಕ್ಕಟ್ಟಿನ ಜೀವನವನ್ನು ಅನುಭವಿಸುವುದನ್ನು ನೀವು ನೋಡುವಿರಿ. ಈ ಜಂಜಾಟದಿಂದ ಪಾರಾಗಲು ಅವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದನ್ನೂ ನೀವು ನೋಡುವಿರಿ.

ನನ್ನ ಧರ್ಮವು ನನಗೆ ಅತ್ಯುತ್ತಮ ಶಿಷ್ಟಾಚಾರದೊಂದಿಗೆ ಆಹಾರ-ಪಾನೀಯ ಸೇವಿಸಲು, ನಿದ್ದೆ ಮಾಡಲು ಮತ್ತು ಜನರೊಂದಿಗೆ ಬೆರೆಯಲು ಕಲಿಸುತ್ತದೆ.

ನನ್ನ ಧರ್ಮವು ನನಗೆ ಅತ್ಯಂತ ಸೌಮ್ಯ ರೀತಿಯಲ್ಲಿ ಕ್ರಯ-ವಿಕ್ರಯ ಮಾಡಲು ಮತ್ತು ಜನರಿಂದ ಬರಬೇಕಾದ ಹಣವನ್ನು ಅತ್ಯಂತ ಮೃದುವಾಗಿ ವಸೂಲು ಮಾಡಲು ಕಲಿಸುತ್ತದೆ.ಮುಸ್ಲಿಮರಲ್ಲದವರೊಂದಿಗೆ ಸಹಿಷ್ಣುತೆಯಿಂದ ವರ್ತಿಸಲು ನನ್ನ ಧರ್ಮವು ನನಗೆ ಕಲಿಸುತ್ತದೆ. ಅವರಿಗೆ ಅನ್ಯಾಯ ಮಾಡಬಾರದು, ಅವರಿಗೆ ಕೆಡುಕು ಮಾಡಬಾರದು, ಬದಲಿಗೆ ಅವರೊಡನೆ ಉತ್ತಮವಾಗಿ ವರ್ತಿಸಬೇಕು, ಅವರಿಗೆ ಒಳ್ಳೆಯದನ್ನು ಬಯಸಬೇಕೆಂದು ನನ್ನ ಧರ್ಮವು ನನಗೆ ಕಲಿಸುತ್ತದೆ.

ಮುಸ್ಲಿಮರು ತಮ್ಮ ವಿರೋಧಿಗಳೊಂದಿಗೆ ಅವರಿಗಿಂತ ಮೊದಲಿನ ಯಾವುದೇ ಸಮುದಾಯವು ವರ್ತಿಸದ ರೀತಿಯಲ್ಲಿ ಅತ್ಯಂತ ಸಹಿಷ್ಣುತೆಯಿಂದ ವರ್ತಿಸಿದ್ದಾರೆಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ.ವಾಸ್ತವವಾಗಿ, ಮುಸ್ಲಿಮರು ಅವರ ಆಳ್ವಿಕೆಯಲ್ಲಿ ಒಳಪಟ್ಟ ವಿವಿಧ ಧರ್ಮಗಳ ಜನರೊಡನೆ ಮಾನವೇತಿಹಾಸದಲ್ಲಿ ಈವರೆಗೆ ಕಂಡುಬರದಂತಹ ಅತ್ಯುತ್ತಮ ಸಹಬಾಳ್ವೆಯಿಂದ ಜೀವನ ನಡೆಸಿದ್ದರು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಂ ಧರ್ಮವು ನನಗೆ ಸೂಕ್ಷ್ಮ ಶಿಷ್ಟಾಚಾರಗಳು, ಅತ್ಯಂತ ಆಕರ್ಷಕವಾದ ವ್ಯವಹಾರ ರೀತಿಗಳು ಮತ್ತು ಜೀವನದ ಶಾಂತಿ ಮತ್ತು ಸಂಪೂರ್ಣ ಸಂತೋಷವನ್ನು ಖಾತ್ರಿಪಡಿಸುವ ಉದಾತ್ತ ನಡವಳಿಕೆಗಳನ್ನು ಕಲಿಸಿಕೊಟ್ಟಿದೆ.ಮತ್ತೊಂದೆಡೆ, ಅದು ನನ್ನ ಜೀವನಕ್ಕೆ ಕಳಂಕ ತರುವ, ಸಮಾಜಕ್ಕೆ ಹಾನಿಯುಂಟು ಮಾಡುವ, ಆತ್ಮ, ಬುದ್ಧಿ, ಆಸ್ತಿ, ಗೌರವ ಮತ್ತು ಘನತೆಗಳಿಗೆ ಕುಂದು ತರುವ ಎಲ್ಲವನ್ನೂ ವಿರೋಧಿಸುತ್ತದೆ.

ನಾನು ಈ ಬೋಧನೆಗಳಿಗೆ ಎಷ್ಟರಮಟ್ಟಿಗೆ ನಿಷ್ಠನಾಗಿರುತ್ತೇನೋ ಅಷ್ಟರಮಟ್ಟಿಗೆ ನನ್ನ ಸಂತೋಷವು ಹೆಚ್ಚುತ್ತದೆ.ನಾನು ಎಷ್ಟರಮಟ್ಟಿಗೆ ಅವುಗಳಿಗೆ ನಿಷ್ಠನಾಗಿರಲು ವಿಫಲನಾಗುತ್ತೇನೋ ಮತ್ತು ಅವುಗಳನ್ನು ನಿರ್ಲಕ್ಷಿಸುತ್ತೇನೋ ಅಷ್ಟರಮಟ್ಟಿಗೆ ನನ್ನ ಸಂತೋಷವು ಕಡಿಮೆಯಾಗುತ್ತದೆ.

ಇದರ ಅರ್ಥ ನಾನು ತಪ್ಪು ಮಾಡುವುದಿಲ್ಲ ಎಂದಲ್ಲ. ನನ್ನ ಧರ್ಮವು ನನ್ನ ಸಹಜ ಪ್ರಕೃತಿಯನ್ನು ಮತ್ತು ನನ್ನ ಬಲಹೀನತೆಯನ್ನು ಅರ್ಥಮಾಡಿಕೊಳ್ಳುತ್ತದೆ. ಹಾಗಾಗಿ ಕೆಲವೊಮ್ಮೆ ನಾನು ತಪ್ಪು ಮಾಡುತ್ತೇನೆ. ಈ ಕಾರಣದಿಂದಲೇ ನನ್ನ ಧರ್ಮವು ನನಗೆ ಪಶ್ಚಾತ್ತಾಪ ಮತ್ತು ಕ್ಷಮೆಯಾಚನೆಯ ಮಾರ್ಗವನ್ನು ತೋರಿಸಿಕೊಟ್ಟಿದೆ. ಪಶ್ಚಾತ್ತಾಪವು ನನ್ನ ತಪ್ಪುಗಳನ್ನು ಅಳಿಸುತ್ತದೆ ಮತ್ತು ನನ್ನ ಪರಿಪಾಲಕನ ಬಳಿ ನನ್ನ ದರ್ಜೆಯನ್ನು ಏರಿಸುತ್ತದೆ.

ವಿಶ್ವಾಸ, ಗುಣನಡವಳಿಕೆ, ಶಿಷ್ಟಾಚಾರ ಮತ್ತು ವ್ಯವಹಾರಗಳು ಸೇರಿದಂತೆ ಇಸ್ಲಾಂ ಧರ್ಮದ ಎಲ್ಲಾ ಬೋಧನೆಗಳನ್ನು ಪವಿತ್ರ ಕುರ್ಆನ್ ಮತ್ತು ಸುನ್ನತ್ನಿಂದ ಪಡೆಯಲಾಗುತ್ತದೆ.

ಕೊನೆಯದಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮದ ನೈಜ ಬೋಧನೆಗಳನ್ನು ನಿಷ್ಪಕ್ಷವಾಗಿ ತಿಳಿದುಕೊಂಡರೆ ಅದನ್ನು ಸ್ವೀಕರಿಸಿದೆ ಇರಲು ಅವನಿಗೆ ಸಾಧ್ಯವೇ ಇಲ್ಲ. ಆದರೆ ದುರದೃಷ್ಟವಶಾತ್, ಅಪಪ್ರಚಾರಗಳಿಂದ ಮತ್ತು ಇಸ್ಲಾಂ ಧರ್ಮದ ಬೋಧನೆಗಳಿಗೆ ನಿಷ್ಠೆ ತೋರದ ಕೆಲವು ಮುಸ್ಲಿಂ ನಾಮಧಾರಿಗಳು ಮಾಡುವ ಕೆಲಸಗಳಿಂದ ಇಸ್ಲಾಂ ಧರ್ಮಕ್ಕೆ ಕಳಂಕವುಂಟಾಗಿದೆ.

ಇಸ್ಲಾಂ ಧರ್ಮದ ನಿಜರೂಪವನ್ನು ನೋಡಿದವರು, ಇಸ್ಲಾಂ ಧರ್ಮದಂತೆ ನಡೆಯುವವರ ವರ್ತನೆಯನ್ನು ನೋಡಿದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಸ್ವಲ್ಪವೂ ಹಿಂಜರಿಯಲಾರರು.ಇಸ್ಲಾಂ ಧರ್ಮವು ಮಾನವರ ಸಂತೋಷ, ಶಾಂತಿ ಮತ್ತು ಸುರಕ್ಷತೆಗಾಗಿ ಹಾಗೂ ಸಮಾಜದಲ್ಲಿ ನ್ಯಾಯ ನೀತಿಯನ್ನು ಹಬ್ಬಿಸುವುದಕ್ಕಾಗಿ ಪರಿಶ್ರಮಿಸುವ ಧರ್ಮವಾಗಿದೆಯೆಂದು ಅವರಿಗೆ ಸ್ಪಷ್ಟವಾಗುವುದು.

ಕೆಲವು ನಾಮಧಾರಿ ಮುಸ್ಲಿಮರ – ಅವರು ಚಿಕ್ಕ ಸಂಖ್ಯೆಯಲ್ಲಿದ್ದರೂ ದೊಡ್ಡ ಸಂಖ್ಯೆಯಲ್ಲಿದ್ದರೂ – ಪಾಷಂಡಿ ಕೃತ್ಯಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಇಸ್ಲಾಂ ಧರ್ಮದ್ದೆಂದು ಹೇಳಲಾಗದು. ಅದನ್ನು ಕಾರಣವಾಗಿ ಮಾಡಿ ಇಸ್ಲಾಂ ಧರ್ಮವನ್ನು ದೂಷಿಸಲಾಗದು. ವಾಸ್ತವವಾಗಿ ಅದಕ್ಕೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಅಂತಹ ಪಾಷಂಡಿ ಕೃತ್ಯಗಳ ಹೊಣೆಗಾರರು ಅವರೇ ಆಗಿದ್ದಾರೆ. ಏಕೆಂದರೆ ಇಸ್ಲಾಂ ಅದನ್ನು ಆದೇಶಿಸುವುದಿಲ್ಲ. ಬದಲಿಗೆ, ಇಸ್ಲಾಂ ಧರ್ಮದ ಬೋಧನೆಗಳನ್ನು ಬಿಟ್ಟು ವಕ್ರ ಮಾರ್ಗದಲ್ಲಿ ಚಲಿಸುವುದನ್ನು ಇಸ್ಲಾಂ ವಿರೋಧಿಸುತ್ತದೆ.

ಅಷ್ಟೇ ಅಲ್ಲ, ಇಸ್ಲಾಂ ಧರ್ಮದ ಬೋಧನೆಗಳ ಪ್ರಕಾರ ನಡೆಯುವವರ, ತಮ್ಮ ವಿಷಯದಲ್ಲೂ ಇತರರ ವಿಷಯದಲ್ಲೂ ಅದರ ನಿಯಮಗಳನ್ನು ಪಾಲಿಸುವವರ ವರ್ತನೆಗಳನ್ನು ನೋಡಿ ಇಸ್ಲಾಂ ಧರ್ಮವನ್ನು ತಿಳಿಯುವುದೇ ನ್ಯಾಯಸಮ್ಮತ ವಿಧಾನ.ಇಸ್ಲಾಂ ಧರ್ಮವು ಸನ್ಮಾರ್ಗ ಮತ್ತು ಶಿಸ್ತಿಗೆ ಸಂಬಂಧಿಸಿದ ಯಾವುದೇ ಸಣ್ಣ ಅಥವಾ ದೊಡ್ಡ ವಿಷಯವನ್ನು ಪ್ರೋತ್ಸಾಹಿಸದೆ ಬಿಟ್ಟಿಲ್ಲ. ಅದೇ ರೀತಿ ಯಾವುದೇ ಕೆಟ್ಟ ಅಥವಾ ಹಾನಿಕರ ಸಂಗತಿಯ ಬಗ್ಗೆ ಎಚ್ಚರಿಸದೇ ಮತ್ತು ವಿರೋಧಿಸದೇ ಬಿಟ್ಟಿಲ್ಲ.

ಆದ್ದರಿಂದ, ಅದರ ಸ್ಥಾನಮಾನವನ್ನು ಗೌರವಿಸುವವರು ಮತ್ತು ಅದರ ಆಚರಣೆಗಳನ್ನು ಅನುಸರಿಸುವವರು ಅತ್ಯಂತ ಸಂತೋಷದಾಯಕ ಜೀವನವನ್ನು ಸಾಗಿಸುತ್ತಾರೆ. ಅವರು ಆತ್ಮ ಸಂಸ್ಕರಣೆಯ ಉನ್ನತ ಮಟ್ಟದಲ್ಲಿದ್ದು, ಆತ್ಮವನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸುತ್ತಾರೆ. ಅವರ ಹತ್ತಿರದಲ್ಲಿರುವವರು, ದೂರದಲ್ಲಿರುವವರು, ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳುವವರು ಮತ್ತು ವಿರೋಧಿಸುವವರು ಎಲ್ಲರೂ ಇದಕ್ಕೆ ಸಾಕ್ಷಿಗಳಾಗಿದ್ದಾರೆ.

ಧರ್ಮದ ವಿಷಯದಲ್ಲಿ ಹದ್ದು ಮೀರಿ ವರ್ತಿಸುವ ಮತ್ತು ನೇರ ಮಾರ್ಗದಿಂದ ತಪ್ಪಿಹೋದ ಕೆಲವರು ಮಾಡುವ ಕೆಟ್ಟ ಕೆಲಸಗಳ ಆಧಾರದಲ್ಲಿ ಇಸ್ಲಾಂ ಧರ್ಮವನ್ನು ಮೌಲ್ಯೀಕರಿಸುವುದು ಯಾವುದೇ ರೀತಿಯಲ್ಲೂ ನ್ಯಾಯವಲ್ಲ. ಅದು ಅನ್ಯಾಯವಾಗಿದೆ.

ಕೊನೆಯದಾಗಿ, ಇದು ಇಸ್ಲಾಂ ಧರ್ಮದ ಬಗ್ಗೆ ತಿಳಿಯಲು ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸುವ ಎಲ್ಲಾ ಮುಸ್ಲಿಮೇತರರಿಗೂ ಒಂದು ಕರೆಯೋಲೆಯಾಗಿದೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಯಸುವವರು 'ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹು ವ ಅನ್ನ ಮುಹಮ್ಮದನ್ ರಸೂಲುಲ್ಲಾಹ್' (ಅಲ್ಲಾಹನ ಹೊರತು ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು) ಎಂಬ ಸಾಕ್ಷ್ಯವಚನವನ್ನು ಉಚ್ಛರಿಸಬೇಕು.ನಂತರ ಅಲ್ಲಾಹು ಅವನಿಗೆ ಕಡ್ಡಾಯಗೊಳಿಸಿದ ಕಾರ್ಯಗಳನ್ನು ಮಾಡಲು ಅಗತ್ಯ ಧಾರ್ಮಿಕ ಜ್ಞಾನವನ್ನು ಪಡೆಯಬೇಕು.ಅವನ ಜ್ಞಾನ ಮತ್ತು ಕರ್ಮ ಹೆಚ್ಚಾದಂತೆಯೇ ಅವನ ಸಂತೋಷವು ಹೆಚ್ಚಾಗುತ್ತದೆ ಮತ್ತು ಅಲ್ಲಾಹನ ಬಳಿ ಅವನ ಸ್ಥಾನಮಾನವೂ ಹೆಚ್ಚಾಗುತ್ತದೆ.