17 - Al-Israa ()

|

(1) ನಾವು ನಮ್ಮ ಕೆಲವು ದೃಷ್ಟಾಂತಗಳನ್ನು ತೋರಿಸಿ ಕೊಡಲೆಂದು ತನ್ನ ದಾಸನನ್ನು (ಮುಹಮ್ಮದ್) ರಾತ್ರೋ ರಾತ್ರಿ ಮಸ್ಜಿದುಲ್ ಹರಾಮ್‌ನಿಂದ ನಾವು ಅದರ ಪರಿಸರವನ್ನು ಸಮೃದ್ಧಗೊಳಿಸಿರುವಂತಹ ಮಸ್ಜಿದುಲ್ ಅಕ್ಸಾದೆಡೆಗೆ ಕರೆದುಕೊಂಡು ಹೋದವನು (ಅಲ್ಲಾಹ್), ಪರಮ ಪಾವನನು ನಿಶ್ಚಯವಾಗಿಯೂ ಅಲ್ಲಾಹನು ಚೆನ್ನಾಗಿ ಆಲಿಸುವವನು, ಚೆನ್ನಾಗಿ ಹೇಳುವವನು ಆಗಿದ್ದಾನೆ.

(2) ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು ಮತ್ತು ನನ್ನ ಹೊರತು ಯಾರನ್ನೂ ಕಾರ್ಯಸಾಧಕನನ್ನಾಗಿ ಮಾಡಬಾರದೆಂಬ ಆಜ್ಞೆಯೊಂದಿಗೆ ನಾವು ಅದನ್ನು ಇಸ್ರಾಯೀಲ್ ಸಂತತಿಗಳೆಡೆಗೆ ಮಾರ್ಗದರ್ಶನವನ್ನಾಗಿ ಮಾಡಿದೆವು.

(3) (ಓ ಜನರೇ) ನೀವು ನೂಹ್‌ರವರ ಜೊತೆ ಹಡಗಿನಲ್ಲಿ ನಾವು ಸವಾರಿಗೊಳಿಸಿದವರ ಸಂತತಿಗಳಾಗಿದ್ದೀರಿ. ನಿಜಕ್ಕೂ ಅವರು ಓರ್ವ ಕೃತಜ್ಞ ದಾಸರಾಗಿದ್ದರು.

(4) ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್)ಗ್ರಂಥದಲ್ಲಿ. ನೀವು ಭೂಮಿಯಲ್ಲಿ ಎರಡು ಬಾರಿ ಕ್ಷೆÆÃಭೆ ಹರಡಲಿದ್ದೀರಿ ಮತ್ತು ಮಹಾ ಅತಿಕ್ರಮಗಳನ್ನು ಎಸಗುವಿರಿ ಎಂದು ವಿಧಿಸಿದ್ದೇವು. (ಎಚ್ಚರಿಸಿದ್ದೆವು)

(5) ಅವೆರಡು ವಾಗ್ದಾನಗಳ ಪೈಕಿ ಮೊದಲನೆಯದು ಬರುತ್ತಲೇ ನಾವು ನಿಮ್ಮ ವಿರುದ್ಧ ಮಹಾ ರಣಶೂರರಾದ ನಮ್ಮ ದಾಸರನ್ನು ಕಳುಹಿಸಿದೆವು. ಅವರು ನಿಮ್ಮ ಮನೆಗಳೊಳಗೆ ನುಗ್ಗಿದರು ಮತ್ತು ಅಲ್ಲಾಹನ ಈ ವಾಗ್ದಾನವು ಪೂರ್ತಿಯಾಗಲೇ ಬೇಕಿತ್ತು.

(6) ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯದ ಸರದಿಯನ್ನು ಮರುಕಳಿಸಿಕೊಟ್ಟೆವು ಮತ್ತು ಸಂಪತ್ತು, ಸಂತಾನಗಳ ಮೂಲಕ ನಿಮಗೆ ಸಹಾಯವನ್ನು ನೀಡಿದೆವು ಹಾಗೂ ನಾವು ನಿಮ್ಮನ್ನು ಸಂಖ್ಯಾ ಬಲವುಳ್ಳವರನ್ನಾಗಿ ಮಾಡಿದೆವು.

(7) ನೀವು ಒಳಿತು ಮಾಡುವುದಾದರೆ ಸ್ವತಃ ನಿಮಗಾಗಿಯೇ ಒಳಿತು ಮಾಡುವಿರಿ ಮತ್ತು ನೀವು ಕೆಡುಕು ಮಾಡುವುದಾದರೆ ಸ್ವತಃ ಅದು ನಿಮಗಾಗಿಯೇ ಇರುವುದು. ಅನಂತರ ಮತ್ತೊಂದು ವಾಗ್ದಾನದ ಸಮಯ ಬಂದಾಗ ನಿಮ್ಮ ಮುಖಗಳನ್ನು ವಿರೂಪಗೊಳಿಸಲೆಂದೂ, ಮೊದಲ ಬಾರಿಯಂತೆಯೇ ಪುನಃ ಆ ಮಸೀದಿಗೆ ನುಗ್ಗಲೆಂದೂ ಹಾಗೂ ಅವರು ನಿಯಂತ್ರಣ ಸಾಧಿಸಿದೆಲ್ಲವನ್ನು, ಮೂಲೋತ್ಪಾಟನೆ ಮಾಡಲೆಂದೂ (ನಾವು ಬೇರೆ ದಾಸರನ್ನು) ಕಳುಹಿಸಿದೆವು.

(8) ನಿಮ್ಮ ಪ್ರಭುವು ನಿಮ್ಮ ಮೇಲೆ ಕೃಪೆ ತೋರಲೂಬಹುದು. ಅದರೆ ಇನ್ನು ಮುಂದೆಯೂ ನೀವು ಅದೇ ಕೃತ್ಯವನ್ನು ಮಾಡಿದರೆ ನಾವು ಸಹ ಪುನಃ ಹಾಗೆಯೇ ಮಾಡುವೆವು ಹಾಗೂ ನಾವು ನರಕವನ್ನು ಸತ್ಯನಿಷೇಧಿಗಳಿಗೆ ಸೆರೆಮನೆಯನ್ನಾಗಿ ಮಾಡಿರುವೆವು.

(9) ನಿಶ್ಚಯವಾಗಿಯು ಈ ಕುರ್‌ಆನ್ ಅತ್ಯಂತ ಋಜುವಾದ ಮಾರ್ಗಕ್ಕೆ ಮುನ್ನಡೆಸುತ್ತದೆ ಮತ್ತು ಸತ್ಕರ್ಮಗಳನ್ನೆಸಗುವ ಸತ್ಯವಿಶ್ವಾಸಿಗಳಿಗೆ ದೊಡ್ಡ ಪ್ರತಿಫಲವಿದೆ ಎಂಬ ಸುವಾರ್ತೆ ನೀಡುತ್ತದೆ.

(10) ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವನ್ನಿಡದವರಿಗೆ ನಾವು ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿದ್ದೇವೆ.

(11) ಮಾನವನು ತನ್ನ ಒಳಿತಿಗೆ ಪ್ರಾರ್ಥಿಸುವಂತೆಯೇ ಕೆಡುಕಿಗೂ ಪ್ರಾರ್ಥಿಸತೊಡಗುತ್ತಾನೆ ಮತ್ತು ಮಾನವನು ಮಹಾ ದುಡುಕು ಸ್ವಭಾವದವನಾಗಿದ್ದಾನೆ.

(12) ರಾತ್ರಿ ಮತ್ತು ಹಗಲನ್ನು ನಾವು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು. ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಿರೆಂದು ವರ್ಷಗಳ ಗಣನೆಯನ್ನು, ಲೆಕ್ಕಾಚಾರವನ್ನು ತಿಳಿದುಕೊಳ್ಳೆಂದೂ ನಾವು ರಾತ್ರಿಯ ದೃಷ್ಟಾಂತವನ್ನು ಪ್ರಕಾಶರಹಿತವನ್ನಾಗಿಯೂ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಯÀವನ್ನಾಗಿಯೂ ಮಾಡಿದೆವು ಮತ್ತು ಪ್ರತಿಯೊಂದನ್ನು ನಾವು ಬಹಳ ಸ್ಪಷ್ಟವಾಗಿ ವಿವರಿಸಿ ಕೊಟ್ಟಿದ್ದೇವೆ.

(13) ನಾವು ಪ್ರತಿಯೊಬ್ಬ ಮನುಷ್ಯನ ಕರ್ಮಗಳನ್ನು ಅವನ ಕೊರಳಿಗೆ ಕಟ್ಟಿಬಿಟ್ಟದ್ದೇವೆ ಮತ್ತು ಪ್ರಳಯ ದಿನದಂದು ನಾವು ಅವನಿಗಾಗಿ ಒಂದು ಗ್ರಂಥವನ್ನು ಹೊರ ತರುವೆವು. ಅವನು ಅದನ್ನು ತನ್ನ ಮುಂದೆ ತೆರೆದಿಟ್ಟಿರುವುದಾಗಿಯೇ ಕಾಣುವನು.

(14) ಸ್ವತಃ ನೀನೇ ನಿನ್ನ ಕರ್ಮಗ್ರಂಥವನ್ನು ಓದು. ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು.

(15) ಯಾರು ಸನ್ಮಾರ್ಗ ಸ್ವೀಕರಿಸುತ್ತಾನೋ ಅವನು ಸ್ವತಃ ತನ್ನ ಒಳಿತಿಗೆಂದೇ ಸನ್ಮಾರ್ಗ ಸ್ವೀಕರಿಸುತ್ತಾನೆ ಹಾಗೂ ಯಾರು ಪಥ ಭ್ರಷ್ಟನಾಗುತ್ತನೋ ಪಥ ಭ್ರಷ್ಟತೆಯ ಭಾರವು ಅವನ ಮೇಲೆಯೇ ಇರುವುದು ಮತ್ತು ಭಾರ ಹೊತ್ತ ಯಾವೊಬ್ಬನೂ ಬೇರೊಬ್ಬ ವ್ಯಕ್ತಿಯ ಭಾರವನ್ನು ಹೊರುವುದಿಲ್ಲ ಮತ್ತು ಒಬ್ಬ ಸಂದೇಶವಾಹಕನನ್ನು ಕಳುಹಿಸುವ ಮೊದಲೇ (ಯಾವುದೇ ಜನಾಂಗವನ್ನು) ನಾವು ಶಿಕ್ಷಿಸುವುದಿಲ್ಲ.

(16) ನಾವು ಯಾವುದಾದರೂ ನಾಡನ್ನು ನಾಶಗೊಳಿಸಲಿಚ್ಛಿಸಿದಾಗ ಅಲ್ಲಿನ ಸುಖ ಲೋಲುಪರಿಗೆ ಆದೇಶ ನೀಡುತ್ತೇವೆ ಮತ್ತು ಅವರು ಆ ನಾಡಲ್ಲಿ (ಆದೇಶಗಳನ್ನು) ಧಿಕ್ಕಾರವನ್ನೆಸಗತೊಡಗುತ್ತಾರೆ. ಆಗ ಅವರ ಮೇಲೆ (ಯಾತನೆಯ) ಮಾತು ನಿಜವಾಗಿ ಬಿಡುತ್ತದೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತೇವೆ.

(17) ನೂಹರ ನಂತರ ನಾವು ಅದೇಷ್ಟೋ ತಲೆಮಾರುಗಳನ್ನು ನಾಶಗೊಳಿಸಿರುವೆವು ಮತ್ತು ತನ್ನ ದಾಸರ ಪಾಪಗಳನ್ನು ಸೂಕ್ಷö್ಮವಾಗಿ ತಿಳಿಯಲಿಕ್ಕು, ವೀಕ್ಷಿಸಲಿಕ್ಕು ನಿನ್ನ ಪ್ರಭುವೇ ಸಾಕು.

(18) ಯಾರಾದರೂ ಶೀಘ್ರವಾಗಿ ದೊರಕುವುದನ್ನು ಅಪೇಕ್ಷಿಸಿದರೆ ನಾವಿಚ್ಛಿಸಿದವನಿಗೆ ಇಹಲೋಕದಲ್ಲೇ ನಾವಿಚ್ಛಿಸಿದ್ದನ್ನು ಶೀಘ್ರವಾಗಿ ನೀಡುತ್ತೇವೆ. ಅನಂತರ ನಾವು ಅವನಿಗೆ ನರಕವನ್ನು ನಿಶ್ಚಯಿಸುತ್ತೇವೆ. ಅಲ್ಲಿ ಅವನು ಅಪಮಾನಿತನೂ, ತಿರಸ್ಕರಿಸಲ್ಪಟ್ಟವನೂ ಆಗಿ ಪ್ರವೇಶಿಸುವನು.

(19) ಮತ್ತು ಯಾರಾದರು ಪರಲೋಕವನ್ನು ಅಪೇಕ್ಷಿಸಿ ಹಾಗೂ ಸತ್ಯ ವಿಶ್ವಾಸಿಯಾಗಿದ್ದುಕೊಂಡು ಅದಕ್ಕಾಗಿ ಶ್ರಮ ವಹಿಸಬೇಕಾದಂತೆ ಶ್ರಮ ವಹಿಸಿದರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು.

(20) (ಓ ಪೈಗಂಬರರೇ) ನಾವು ಪ್ರತಿಯೊಬ್ಬರಿಗೂ (ಲೌಕಿಕ ಕೊಡುಗೆಗಳಿಂದ) ನೀಡುವೆವು ಅವರಿಗೂ (ಪರಲೋಕ ಬಯಸುವವರಿಗೆ), ಇವರಿಗೂ (ಇಹಲೋಕ ಬಹಯಸುವವರಿಗೆ) ಮತ್ತು ನಿಮ್ಮ ಪ್ರಭುವಿನ ಕೊಡುಗೆಯೂ (ಯಾರಿಂದರಲೂ) ತಡೆದಿರಿಸಲಾಗದು.

(21) ನಾವು ಅವರ ಪೈಕಿ ಕೆಲವರನ್ನು ಇನ್ನು ಕೆಲವರ ಮೇಲೆ ಹೇಗೆ ಶ್ರೇಷ್ಠತೆ ನೀಡಿದ್ದೇವೆಂಬುದನ್ನು ನೋಡಿರಿ. ಪರಲೋಕವಂತು ಸ್ಥಾನಮಾನಗಳಲ್ಲಿ ಹೆಚ್ಚು ಹಿರಿದಾದುದ್ದು ಮತ್ತು ಶ್ರೇಷ್ಠತೆಯಲ್ಲೂ ಅತ್ಯಂತ ಹಿರಿದಾದ್ದುದಾಗಿದೆ.

(22) ನೀವು ಅಲ್ಲಾಹನೊಂದಿಗೆ ಬೇರಾವ ಆರಾಧ್ಯನನ್ನು ನಿಶ್ಚಯಿಸದಿರಿ. ಅನ್ಯಥಾ ನೀವು ನಿಂದ್ಯರಾಗಿಯೂ, ನಿಸ್ಸಹಾಯಕರಾಗಿಯೂ ಕುಳಿತು ಬಿಡುವಿರಿ.

(23) ನೀವು ಅವನ ಹೊರತು ಇನ್ನಾರನ್ನೂ ಆರಾಧಿಸಕೂಡದು ಮತ್ತು ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಿಮ್ಮ ಪ್ರಭೂ ತೀರ್ಮಾನಿಸಿದ್ದಾನೆ. ನಿಮ್ಮ ಜೀವನದಲ್ಲಿ ಅವರಿಬ್ಬರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧಾಪ್ಯವನ್ನು ತಲುಪಿದರೆ ನೀವು ಅವರಿಗೆ ಛೇ ಎಂದು ಹೇಳಬೇಡಿ ಮತ್ತು ಅವರಿಗೆ ಗದರಿಸಬೇಡಿರಿ, ಮಾತ್ರವಲ್ಲ ನೀವು ಅವರೊಂದಿಗೆ ಗೌರವಪೂರ್ವಕವಾಗಿ ಮಾತನ್ನಾಡಿರಿ.

(24) ಮತ್ತು ಕರುಣೆಯಿಂದ ಅವರ ಮುಂದೆ ನಯವಿನಯದ ಭುಜವನ್ನು ತಗ್ಗಿಸಿರಿ ಹಾಗೂ ಓ ನನ್ನ ಪ್ರಭುವೇ, ಅವರು ನನ್ನ ಬಾಲ್ಯದಲ್ಲಿ ಪಾಲನೆ-ಪೋಷಣೆ ಮಾಡಿದಂತೆಯೇ ಅವರ ಮೇಲೆ ಕರುಣೆ ತೋರು ಎಂದು ಪ್ರಾರ್ಥಿಸಿರಿ.

(25) ನಿಮ್ಮ ಪ್ರಭುವು ನಿಮ್ಮ ಅಂತರAಗದಲ್ಲಿರುವುದನ್ನು ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿದ್ದರೆ ಖಂಡಿತವಾಗಿಯೂ ಅವನು ಪಶ್ಚಾತ್ತಾಪ ಹೊಂದಿ ಮರಳಿ ಬರುವವರಿಗೆ ಕ್ಷಮಾಶೀಲನಾಗಿರುತ್ತಾನೆ.

(26) ನೀವು ಸಂಬAಧಿಕರಿಗೆ, ನಿರ್ಗತಿಕರಿಗೆ ಮತ್ತು ಯಾತ್ರಿಕರಿಗೆ ಅವರ ಹಕ್ಕನ್ನು ಕೊಡಿ ಮತ್ತು ದುಂದುವೆಚ್ಚ ಮಾಡಬೇಡಿರಿ.

(27) ದುಂದುವೆಚ್ಚ ಮಾಡುವವರು ಶೈತಾನನ ಸಹೋದರರಾಗಿದ್ದಾರೆ ಮತ್ತು ಶೈತಾನನು ತನ್ನ ಪ್ರಭುವಿನ ಕೃತಘ್ನನಾಗಿದ್ದಾನೆ.

(28) ನೀವು ನಿರೀಕ್ಷಿಸುತ್ತಿರುವಂತಹ ನಿಮ್ಮ ಪ್ರಭುವಿನ ಕಾರುಣ್ಯದ ಹಂಬಲದಿAದ ನಿಮಗೆ ಅವರಿಂದ (ನಿರ್ಗತಿಕ ಸಂಬAಧಿಕರಿAದ) ವಿಮುಖನಾಗಬೇಕಾಗಿ ಬಂದರೂ ನೀವು ಅವರೊಂದಿಗೆ ಮೃದುತ್ವದೊಂದಿಗೆ ಮಾತನಾಡಿರಿ.

(29) ನೀವು ನಿಮ್ಮ ಕೈಯನ್ನು (ಜಿಪುಣತನದಿಂದ) ನಿಮ್ಮ ಕೊರಳಿಗೆಸಟೆದುಕೊಳ್ಳಬೇಡಿ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಬೇಡಿ. ಅನ್ಯಥಾ ನೀವು ನಿಂದಿಸಲ್ಪಟ್ಟವರಾಗಿಯೂ, ನಿಸ್ಸಹಾಯಕರಗಿಯೂ ಕುಳಿತಿರಬೇಕಾದಿತು.

(30) ನಿಶ್ಚಯವಾಗಿಯು ನಿಮ್ಮ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತರಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ನಿಜವಾಗಿಯು ಅವನು ತನ್ನ ದಾಸರ ವಿಚಾರದಲ್ಲಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿದ್ದಾನೆ.

(31) ನೀವು ನಿಮ್ಮ ಮಕ್ಕಳನ್ನು ದಾರಿದ್ರö್ಯದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುತ್ತೇವೆ ಮತ್ತು ನಿಮಗೂ ಸಹ ನಿಸ್ಸಂಶಯವಾಗಿಯು ಅವರನ್ನು ಕೊಲ್ಲುವುದು ಮಹಾಅಪರಾಧವಾಗಿದೆ.

(32) ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.

(33) ನೀವು ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಎಂದಿಗೂ ಅನ್ಯಾಯವಾಗಿ ವಧಿಸಬೇಡಿರಿ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿ ವಧಿಸಲ್ಪಟ್ಟರೆ ನಾವು ಅವನ ವಾರೀಸುದಾರರಿಗೆ ಪ್ರತಿಕಾರದ ಅಧಿಕಾರ ಕೊಟ್ಟಿದ್ದೇವೆ. ಅದರೆ ಅವನು ಕೊಲ್ಲುವುದರಲ್ಲಿ ಅತಿಕ್ರಮವನ್ನು ತೋರದಿರಲಿ. ನಿಸ್ಸಂಶಯವಾಗಿಯೂ (ಪ್ರತೀಕಾರದ ಮೂಲಕ) ಅವನು ಸಹಾಯ ನೀಡಲ್ಪಟ್ಟಿದ್ದಾನೆ.

(34) ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.

(35) ನೀವು ಅಳೆದು ಕೊಡುವಾಗ ಪರಿಪೂರ್ಣವಾಗಿ ಅಳೆಯಿರಿ ಮತ್ತು ಸಮತೋಲನವುಳ್ಳ ತಕ್ಕಡಿಯಿಂದ ತೂಕ ಮಾಡಿರಿ ಇದುವೇ ಉತ್ತಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.

(36) ನಿಮಗೆ ಅರಿವಿಲ್ಲದಂತಹ ವಿಚಾರವನ್ನು ಹಿಂಬಾಲಿಸದಿರಿ. ಏಕೆಂದರೆ ಕಿವಿ, ಕಣ್ಣು ಹಾಗೂ ಹೃದಯ ಪ್ರತಿಯೊಂದರ ಬಗ್ಗೆ ಪ್ರಶ್ನಿಸಲಾಗುವುದು.

(37) ನೀವು ಭೂಮಿಯಲ್ಲಿ ದರ್ಪದಿಂದ ನಡೆಯದಿರಿ. ನೀವು ಭೂಮಿಯನ್ನು ಸೀಳಲಾರಿರಿ. ಮತ್ತು ಎತ್ತರದಲ್ಲಿ ಪರ್ವತಗಳನ್ನೂ ತಲುಪಲಾರಿರಿ.

(38) ಈ ಎಲ್ಲಾ ಕೆಡುಕುಗಳು ನಿಮ್ಮ ಪ್ರಭುವಿನ ಬಳಿ ಅತ್ಯಂತ ಅಪ್ರಿಯವಾಗಿವೆ.

(39) (ಓ ಪೈಗಂಬರರೇ) ಇದು ನಿಮ್ಮ ಪ್ರಭುವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸುಜ್ಞಾನದಲ್ಲೊಂದಾಗಿದೆ. ನೀವು ಅಲ್ಲಾಹನೊಂದಿಗೆ ಇತರ ಯಾರನ್ನು ಆರಾಧ್ಯರನ್ನಾಗಿ ನಿಶ್ಚಯಿಸದಿರಿ. ಅನ್ಯಥಾ ನೀವು ನರಕದೊಳಗೆ ನಿಂದಿಸಲ್ಪಟ್ಟವರಾಗಿ ಮತ್ತು ತಿರಸ್ಕರಿಸಲ್ಪಟ್ಟವರಾಗಿ ಎಸೆಯಲ್ಪಡುವಿರಿ.

(40) (ಓ ಸತ್ಯನಿಷೇಧಿಗಳೇ) ಏನು ನಿಮ್ಮ ಪ್ರಭು ನಿಮ್ಮನ್ನು ಪುತ್ರರಿಗೋಸ್ಕರ ಆರಿಸಿಕೊಂಡಿರುವನೇ ಮತ್ತು ಸ್ವತಃ ತನಗಾಗಿ ದೇವಚರರನ್ನು ಪುತ್ರಿಯರನ್ನಾಗಿ ಮಾಡಿಕೊಂಡಿರುವನೇ? ನಿಸ್ಸಂಶಯವಾಗಿಯೂ ನೀವು ಘೋರವಾದ ಮಾತನ್ನು ಆಡುತ್ತಿರುವಿರಿ!.

(41) ನಾವು (ಖಂಡಿತವಾಗಿಯೂ) ಈ ಕುರ್‌ಆನಿನಲ್ಲಿ ಅವರು ವಿವೇಚಿಸಿಕೊಳ್ಳಲೆಂದು ವಿವಿಧ ಶೈಲಿಯಲ್ಲಿ ವಿವರಿಸಿಕೊಟ್ಟಿದ್ದೇವೆ. ಆದರೆ ಇದು ಅವರ ಬೇಸರವನ್ನೆ ಹೆಚ್ಚಿಸುತ್ತದೆ.

(42) ಹೇಳಿರಿ: ಅವರು ಹೇಳುತ್ತಿರುವಂತೆ ಅಲ್ಲಾಹನೊಂದಿಗೆ ಇತರ ಆರಾಧ್ಯರಿರುತ್ತಿದ್ದರೆ ಖಂಡಿತ ಅವರು ಸಿಂಹಾಸನದ ಒಡೆಯನೆಡೆಗೆ ಮಾರ್ಗವನ್ನು ಹುಡುಕಿಕೊಳ್ಳುತ್ತಿದ್ದರು.

(43) ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ, ಮಹಾನನು ಆಗಿದ್ದಾನೆ.

(44) ಎಳು ಆಕಾಶಗಳು ಮತ್ತು ಭೂಮಿಯೂ ಹಾಗೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿವೆ. ಮತ್ತು ಅವನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡದ ಯಾವ ವಸ್ತುವೂ ಇಲ್ಲ. ಅದರೆ ಅವುಗಳ ಕೀರ್ತನೆಯನ್ನು ನೀವು ಗ್ರಹಿಸಿಕೊಳ್ಳಲಾರಿರಿ. ವಾಸ್ತವದಲ್ಲಿ ಅವನು ಸಹನಾಶೀಲನು ಕ್ಷಮಾಶೀಲನು ಆಗಿದ್ದಾನೆ.

(45) (ಓ ಪೈಗಂಬರರೇ) ನೀವು ಕುರ್‌ಆನನ್ನು ಪಠಿಸಿದಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಮಧ್ಯೆ ನಾವು ಅದೃಶ್ಯವಾಗಿರುವ ತೆರೆಯೊಂದನ್ನು ಹಾಕಿಬಿಡುತ್ತೇವೆ.

(46) ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್‌ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.

(47) ಅವರು ನಿಮ್ಮೆಡೆಗೆ ಕಿವಿಗೊಟ್ಟು ಆಲಿಸುತ್ತಿರುವಾಗ ಅವರು ಯಾವ ಉದ್ದೇಶದಿಂದ ಆಲಿಸುತ್ತಿದ್ದಾರೆಂಬುದನ್ನೂ, (ನಾವು ಚೆನ್ನಾಗಿ ತಿಳಿದಿದ್ದೇವೆ) ಅವರು ಪರಸ್ಪರ ರಹಸ್ಯವಾಗಿ ಮಾತುಕತೆಯಲ್ಲಿರುವುದೂ (ಅದೂ ನಮಗೆ ಚೆನ್ನಾಗಿ ಗೊತ್ತು, ಅವರು ತಮ್ಮ ಬುಡಕಟ್ಟಿನ ಮುಸ್ಲಿಮರಿಗೆ) ನೀವು ಅನುಸರಿಸುತ್ತಿರುವ ವ್ಯಕ್ತಿಯು ಮಾಟಬಾಧಿತನಾಗಿದ್ದಾನೆ ಎಂದು ಈ ಅಕ್ರಮಿಗಳು ಹೇಳುತ್ತಿರುವುದನ್ನು ನಾವು ಚೆನ್ನಾಗಿ ಅರಿತಿದ್ದೇವೆ.

(48) ಅವರು ನಿಮಗೆ ಹೇಗೆ ಉಪಮೆಗಳನ್ನು ಕೊಡುತ್ತಿದ್ದಾರೆಂಬುದನ್ನು ನೋಡಿರಿ. ಹೀಗೆ ಅವರು ಮಾರ್ಗ ಭ್ರಷ್ಟರಾದರು. ಇನ್ನು ಮಾರ್ಗ ಪಡೆಯುವುದು ಅವರ ಸಾಮರ್ಥ್ಯದಲ್ಲಿಲ್ಲ.

(49) ಅವರು ಹೇಳುತ್ತಾರೆ(ಸತ್ಯನಿಷೇಧಿಗಳು): ನಾವು ಎಲುಬುಗಳಾಗಿ ಚೂರು ಚೂರಾದ (ಮಣ್ಣಾದ) ಬಳಿಕವೂ ಹೊಸ ಸೃಷ್ಠಿಯಾಗಿ ಎಬ್ಬಿಸಲ್ಪಡುತ್ತೇವೆಯೇ?

(50) ಹೇಳಿರಿ: ನೀವು ಕಲ್ಲಾಗಿರಿ ಅಥವಾ ಕಬ್ಬಿಣವೇ ಆಗಿಬಿಡಿರಿ.

(51) ಅಥವಾ ನಿಮ್ಮ ಹೃದಯಗಳಲ್ಲಿ ಅತ್ಯಂತ ಕಠಿಣವೆಂದು ತೋರುವ ಯಾವುದೇ ಸೃಷ್ಟಿಯಾಗಿರಿ. ನಂತರ ಅವರು ತಕ್ಷಣ ಕೇಳುವರು: ನಮ್ಮನ್ನು ಮರಳಿಸುವವರಾರು? ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನೆಂದು ಉತ್ತರಿಸಿರಿ. ಆಗ ಅವರು ತಮ್ಮ ತಲೆಗಳನ್ನು ತೂಗುತ್ತಾ ಹೇಳುವರು. ಸರಿ ಅದು ಯಾವಾಗ ಸಂಭವಿಸುವುದು? ಆಗ ನೀವು ಹೇಳಿರಿ: ಅದು ಸಮೀಪವೇ ಇರಬಹುದು.

(52) ಅವನು ನಿಮ್ಮನ್ನು ಕರೆಯುವ ದಿನದಂದು ನೀವು ಅವನ ಸ್ತುತಿಯೊಂದಿಗೆ ಓ ಗೊಡುವಿರಿ ಮತ್ತು ಇಹದಲ್ಲಿ ಅಲ್ಪಕಾಲ ಮಾತ್ರ ವಾಸಿಸಿದ್ದೀರಿ ಎಂದು ನೀವು ಭಾವಿಸಿಕೊಳ್ಳುವಿರಿ.

(53) (ಓ ಪೈಗಂಬರರೇ) ನೀವು ನನ್ನ ದಾಸರಿಗೆ: ಅವರು ಅತ್ಯುತ್ತಮ ಮಾತನ್ನಾಡಲು ಹೇಳಿರಿ. ವಾಸ್ತವದಲ್ಲಿ ಶೈತಾನನು ಅವರ ನಡುವೆ ಒಡಕು ಹಾಕುತ್ತಾನೆ. ನಿಸ್ಸಂಶಯವಾಗಿಯೂ ಶೈತಾನನು ಮನುಷ್ಯನಿಗೆ ಸ್ಪಷ್ಟ ಶತ್ರುವಾಗಿದ್ದಾನೆ.

(54) . ನಿಮ್ಮ ಪ್ರಭುವು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಇಚ್ಛಿಸಿದರೆ ನಿಮ್ಮ ಮೇಲೆ ಕರುಣೆ ತೋರುವನು ಅಥವಾ ಅವನು ಇಚ್ಛಿಸಿದರೆ ನಿಮ್ಮನ್ನು ಶಿಕ್ಷಿಸುವನು. ನಾವು ನಿಮ್ಮನ್ನು ಅವರ ಮೇಲೆ ಮೇಲ್ನೋಟಗಾರರನ್ನಾಗಿ ಮಾಡಿ ಕಳುಹಿಸಿರುವುದಿಲ್ಲ.

(55) ಮತ್ತು ನಿಮ್ಮ ಪ್ರಭುವು ಆಕಾಶಗಳಲ್ಲೂ, ಭೂಮಿಯಲ್ಲೂ ಇರುವ ಸಕಲವನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. ನಿಶ್ಚಯವಾಗಿಯೂ ನಾವು ಕೆಲವು ಪೈಗಂಬರರನ್ನು ಇನ್ನು ಕೆಲವರ ಮೇಲೆ ಶ್ರೇಷ್ಟತೆಯನ್ನು ನೀಡಿದ್ದೇವೆ. ಮತ್ತು ನಾವು ದಾವೂದರವರಿಗೆ ಝಬೂರನ್ನು ದಯಪಾಲಿಸಿರುತ್ತೇವೆ.

(56) ಹೇಳಿರಿ: ನೀವು ಅಲ್ಲಾಹನ ಹೊರತು ಯಾರನ್ನು ಆರಾಧ್ಯರೆಂದು ಭಾವಿಸುತ್ತಿರುವಿರೋ ಅವರನ್ನು ಕರೆದುಬೇಡಿಕೊಳ್ಳಿರಿ. ಆದರೆ ಅವರು ನಿಮ್ಮಿಂದ ಯಾವುದೇ ಸಂಕಷ್ಟವನ್ನು ನೀಗಿಸುವ ಮತ್ತು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ.

(57) ಇವರು ಯಾರನ್ನು ಕರೆದು ಬೇಡುತ್ತಿದ್ದಾರೋ ಸ್ವತಃ ಅವರೇ ತಮ್ಮ ಪ್ರಭುವಿನ ಸಾಮಿಪ್ಯ ಪಡೆಯುವ ಸಾಧನವನ್ನು ಅರಸುತ್ತಾರೆ ತಮ್ಮಲ್ಲಿ ಯಾರು ಅತ್ಯಂತ ನಿಕಟನಾಗುವನೆಂದು. ಸ್ವತಃ ಅವರೇ ಅವನ ಕಾರುಣ್ಯವನ್ನು ಆಶಿಸುತ್ತಿದ್ದಾರೆ ಹಾಗೂ ಅವರು ಯಾತನೆಯನ್ನು ಭಯಪಡುತ್ತಿದ್ದಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಯಾತನೆಯು ಭಯಪಡಬೇಕಾದುದ್ದೆ ಆಗಿದೆ.

(58) ಪ್ರಳಯ ದಿನಕ್ಕಿಂತ ಮುಂಚೆ (ಸತ್ಯನಿಷೇಧ ಹಾಗೂ ದೇವಸಹಭಾಗಿತ್ವ ಮಾಡುವವರನ್ನು) ನಾವು ನಾಶಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ನಾಡಿರುವುದಿಲ್ಲ. ಇದು ಗ್ರಂಥದಲ್ಲಿ ದಾಖಲಿಸಲ್ಪಟ್ಟಿದೆ.

(59) ದೃಷ್ಟಾಂತಗಳನ್ನು ಕಳುಹಿಸುವುದರಿಂದ ನಮ್ಮನ್ನು ತಡೆದಿರುವುದು ಕೇವಲ ಅವುಗಳನ್ನು ಪೂರ್ವಜರು ಸುಳ್ಳಾಗಿಸಿಬಿಟ್ಟಿದ್ದರೆಂಬ ಸಂಗತಿಯಾಗಿದೆ ನಾವು ಸಮೂದ್ ಜನಾಂಗಕ್ಕೆ ಸ್ಪಷ್ಟ ದೃಷ್ಟಾಂತವಾಗಿ ಒಂಟೆಯನ್ನು ನೀಡಿದ್ದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು ಮತ್ತು ನಾವು ಭಯ ಹುಟ್ಟಿಸಲೆಂದೇ ದೃಷ್ಟಾಂತಗಳನ್ನು ಕಳುಹಿಸುತ್ತೇವೆ.

(60) (ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್‌ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್‌ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.

(61) ನಾವು ಮಲಕ್‌ಗಳಿಗೆ: ನೀವು ಆದಮನಿಗೆ ಸಾಷ್ಟಾಂಗವೆರಗಿರಿ ಎಂದು ಆದೇಶ ನೀಡಿದ ಸಂದರ್ಭ ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ಹೇಳಿದನು: ನೀನು ಮಣ್ಣಿನಿಂದ ಸೃಷ್ಟಿಸಿದವನಿಗೆ ನಾವು ಸಾಷ್ಟಾಂಗವೆರಗಬೇಕೇ?

(62) ಮತ್ತು ಹೇಳಿದನು ನೋಡು, ನೀನು ನನ್ನ ಮೇಲೆ ಶ್ರೇಷ್ಟತೆಯನ್ನು ನೀಡಿದ ವ್ಯಕ್ತಿ ಇವನಾಗಿದ್ದಾನೆ. ಆದರೆ ನೀನೇನಾದರೂ ನನಗೆ ಪ್ರಳಯ ದಿನದವರೆಗೆ ಕಾಲಾವಕಾಶ ನೀಡಿದರೆ ನಾನು ಕೆಲವರ ಹೊರತು ಇಡೀ ಅವನ ಸಂತತಿಯನ್ನು ಬೇರು ಸಹಿತ ಕಿತ್ತೆಸೆಯುವೆನು.

(63) ಅಲ್ಲಾಹನು ಹೇಳಿದನು: ತೊಲಗು ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾನೋ ನರಕವು ನಿಮ್ಮೆಲ್ಲರ ಪ್ರತಿಫಲವಾಗಿರುವುದು. ಅದು ಪರಿಪೂರ್ಣ ಪ್ರತಿಫಲವಾಗಿದೆ.

(64) ಅವರಲ್ಲಿ ನಿನಗೆ ಸಾಧ್ಯವಿರುವವರನ್ನೆಲ್ಲಾ ನಿನ್ನ ಸ್ವರದಿಂದ ದಾರಿಗೆಡಿಸು. ಅವರ ಮೇಲೆ ನಿನ್ನ ಸವಾರರನ್ನು ಹಾಗೂ ಕಾಲಾಳುಗಳನ್ನು ಎರಗಿಸು ಮತ್ತು ಅವರ ಸಂಪತ್ತು ಹಾಗೂ ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು ಮತ್ತು ಅವರಿಗೆ ವಾಗ್ದಾನಗಳನ್ನು ನೀಡು, ಶೈತಾನನು ಅವರಿಗೆ ವಂಚನೆಯ ಹೊರತು ಬೇರಾವ ವಾಗ್ದಾನವನ್ನು ಮಾಡಲಾರ.

(65) ನಿಶ್ಚಯವಾಗಿಯು ನನ್ನ ನಿಷ್ಠಾವಂತ ದಾಸರ ಮೇಲೆ ನಿನ್ನ ಯಾವುದೇ ಅಧಿಕಾರವಿರದು. ಕಾರ್ಯಸಾಧಕನಾಗಿ ನಿನ್ನ ಪ್ರಭುವೇ ಸಾಕು.

(66) ನೀವು ಅವನ ಅನುಗ್ರಹವನ್ನು ಅರಸಲಿಕ್ಕಾಗಿ ನಿಮಗಾಗಿ ಸಮುದ್ರದಲ್ಲಿ ನೌಕೆಗಳನ್ನು ನಡೆಸುವವನೇ ನಿಮ್ಮ ಪ್ರಭು ಖಂಡಿತವಾಗಿಯೂ ಅವನು ನಿಮ್ಮ ಮೇಲೆ ತುಂಬಾ ಕರುಣೆವುಳ್ಳವನಾಗಿದ್ದಾನೆ.

(67) ಮತ್ತು ಸಮುದ್ರದಲ್ಲಿ ಯಾವುದಾದರೂ ಸಂಕಷ್ಟವು ಬಾಧಿಸಿದ ಕೂಡಲೇ ನೀವು ಕರೆದು ಬೇಡುತ್ತಿರುವವರೆಲ್ಲ ಮಾಯವಾಗಿ ಬಿಡುತ್ತಾರೆ. ಕೇವಲ ಆ ಅಲ್ಲಾಹನ ಹೊರತು. ಅನಂತರ ಅವನು ನಿಮ್ಮನ್ನು ದಡ ತಲುಪಿಸಿದಾಗ ನೀವು ವಿಮುಖರಾಗಿ ಬಿಡುತ್ತೀರಿ ಮತ್ತು ಮನುಷ್ಯನು ಮಹಾ ಕೃತಘ್ನನಾಗಿದ್ದಾನೆ.

(68) ಅವನು ನಿಮ್ಮನ್ನು ದಡಕ್ಕೆ ಕೊಂಡಯ್ದು ಹೂತು ಬಿಡುವುದರಿಂದ, ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಚಂಡ ಮಾರುತವನ್ನು ಕಳುಹಿಸಿ ಬಿಡುವುದರಿಂದ ನಿರ್ಭಯರಾಗಿ ಬಿಟ್ಟಿರಾ? ಆಗ ನೀವು ಯಾರನ್ನೂ ಕಾರ್ಯ ಸಾಧಕನನ್ನಾಗಿ ಪಡೆಯಲಾರಿರಿ.

(69) ಅಥವಾ ಪುನಃ ನಿಮ್ಮನ್ನು ಸಮುದ್ರ ಯಾತ್ರೆಗೆ ಮರಳಿಸಿ ನಿಮ್ಮ ಮೇಲೆ ಭೀಕರವಾಗಿರುವ ಬಿರುಗಾಳಿಯೊಂದನ್ನು ಕಳುಹಿಸುವುದರಿಂದ ಮತ್ತು ನಿಮ್ಮ ಸತ್ಯನಿಷೇಧದ ನಿಮಿತ್ತ ನಿಮ್ಮನ್ನು ಮುಳುಗಿಸುವುದರಿಂದ ನಿರ್ಭಯರಾಗಿಬಿಟ್ಟಿರಾ? ಆಗ ನೀವು ನಿಮಗೋಸ್ಕರ ನಮ್ಮ ವಿರುದ್ಧ ವಾದಿಸುವ ಯಾವೊಬ್ಬ ಸಹಾಯಕನನ್ನೂ ಪಡೆಯಲಾರಿರಿ.

(70) ನಿಶ್ಚಯವಾಗಿಯೂ ನಾವು ಆದಮನ ಸಂತತಿಗೆ ಗೌರವವನ್ನು ನೀಡಿದ್ದೇವೆ ಮತ್ತು ಅವರಿಗೆ ನಾವು ನೆಲದಲ್ಲೂ, ಸಮುದ್ರದಲ್ಲೂ ಸಾರಿಗೆಗಳನ್ನು ನೀಡಿರುತ್ತೇವೆ ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ನೀಡಿರುವೆವು ಹಾಗೂ ನಾವು ನಮ್ಮ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ.

(71) ಅಂದು ನಾವು ಪ್ರತಿಯೊಂದು ಜನಕೂಟವನ್ನು ಅವರವರ ನಾಯಕರೊಂದಿಗೆ ಕರೆಯುವೆವು. ಅನಂತರ ಯಾರ ಕರ್ಮಪತ್ರವು ಬಲಗೈಯಲ್ಲಿ ನೀಡಲಾಗುತ್ತದೆಯೋ ಅವರು ತಮ್ಮ ಕರ್ಮಪತ್ರವನ್ನು ಆಸಕ್ತಿಯಿಂದ ಓದುವರು ಮತ್ತು ಅವರು ಕೂದಲೆಳೆಯಷ್ಟೂ ಅನ್ಯಾಯಕ್ಕೊಳಗಾಗಲಾರರು.

(72) ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.

(73) (ಏಕೆಂದರೆ) ನೀವು ನಮ್ಮ ಹೆಸರಲ್ಲಿ ಇದರ ಹೊರತು ಬೇರೊಂದನ್ನು ರಚಿಸಿ ತರಲೆಂದು. ನಾವು ನಿಮ್ಮೆಡೆಗೆ ಮಾಡಿರುವ ದಿವ್ಯವಾಣಿಯಿಂದ (ಈ ಸತ್ಯನಿಷೇಧಿಗಳು) ಅವರು ನಿಮ್ಮನ್ನು ಸರಿಸಿ ಬಿಡಲಿಚ್ಛಿಸುತ್ತಾರೆ. ಓ ಸಂದೇಶವಾಹಕರೇ ಆಗಂತು ಅವರು ನಿಮ್ಮನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.

(74) ನಾವೇನಾದರೂ ನಿಮ್ಮನ್ನು ಸ್ಥಿರಗೊಳಿಸದಿರುತ್ತಿದ್ದರೆ ನೀವು ಅವರೆಡೆಗೆ ಸ್ವಲ್ಪವಾದರೂ ವಾಲಿಬಿಡುವ ಸಾಧ್ಯತೆಯಿತ್ತು.

(75) ಹಾಗೇನದರೂ ನೀವು ಮಾಡಿರುತ್ತಿದ್ದರೆ ನಾವು ನಿಮಗೆ ಇಹಲೋಕ ಜೀವನದ ಇಮ್ಮಡಿ ಶಿಕ್ಷೆಯನ್ನು ಹಾಗೂ ಮರಣದ ಇಮ್ಮಡಿ ಶಿಕ್ಷೆಯನ್ನು ನೀಡುತ್ತಿದ್ದೆವು. ಅನಂತರ ನೀವು ನಿಮಗಾಗಿ ನಮ್ಮ ವಿರುದ್ಧ ಯಾರನ್ನು ಸಹಾಯಕನನ್ನಾಗಿ ಪಡೆಯುತ್ತಿರಲಿಲ್ಲ.

(76) ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು.

(77) ನಿಮಗಿಂತ ಮುಂಚೆ ನಾವು ಕಳುಹಿಸಿದ ಸಂದೇಶವಾಹಕರೊAದಿಗಿನ ಕ್ರಮವು ಇದೇ ಪ್ರಕಾರವಿತ್ತು ಮತ್ತು ನೀವು ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.

(78) ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್‌ಅನ್ ಪಾರಾಯಣವು ಪ್ರಮಾಣಿಕವಾಗಿದೆ.

(79) ಮತ್ತು ರಾತ್ರಿಯ ಒಂದAಶದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಐಚ್ಛಿಕ ಕಾರ್ಯವಾಗಿದೆ. ಸಧ್ಯವೇ ನಿಮ್ಮ ಪ್ರಭುವು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸಲೂಬಹುದು.

(80) ಮತ್ತು ಪಾರ್ಥಿಸುತ್ತಿರಿ: ನನ್ನ ಪ್ರಭುವೇ, ನೀನು ಎಲ್ಲೇ ನನ್ನನ್ನು ಕೊಂಡೊಯ್ದರೂ ಉತ್ತಮವಾದ ಸ್ಥಿತಿಯಲ್ಲಿ ಕೊಂಡೊಯ್ಯು ಮತ್ತು ನೀನು ಎಲ್ಲಿಂದ ಹೊರತಂದರೂ ಉತ್ತಮವಾಗಿರುವ ಸ್ಥಿತಿಯಲ್ಲಿ ಹೊರತೆಗೆ ಮತ್ತು ನನಗಾಗಿ ನಿನ್ನ ವತಿಯಿಂದ ಸಹಾಯದಾಯಕ ಅಧಿಕಾರ ಒದಗಿಸು.

(81) ಹೇಳಿರಿ: ಸತ್ಯ ಬಂದಿತು ಮತ್ತು ಮಿಥ್ಯವು ಅಳಿದು ಹೋಯಿತು. ನಿಶ್ಚಯವಾಗಿಯೂ ಮಿಥ್ಯವು ಅಳಿದು ಹೋಗುವಂತಹದ್ದಾಗಿದೆ.

(82) ನಾವು ಅವತೀರ್ಣಗೊಳಿಸುತ್ತಿರುವಂತಹ ಈ ಕುರ್‌ಆನಿನಲ್ಲಿ ಸತ್ಯವಿಶ್ವಾಸಿಗಳಿಗೆ ಉಪಶಮನ ಹಾಗೂ ಕಾರುಣ್ಯವಿದೆ. ಆದರೆ ಇದು ಅಕ್ರಮಿಗಳಿಗೆ ನಷ್ಟದ ಹೊರತು ಇನ್ನೇನೂ ಹೆಚ್ಚಿಸುವುದಿಲ್ಲ.

(83) ನಾವು ಮನುಷ್ಯನಿಗೆ ಅನುಗ್ರಹಿಸಿದಾಗ ಅವನು ಮುಖ ತಿರುಗಿಸಿ ದೂರ ಸರಿದು ಬಿಡುತ್ತಾನೆ ಮತ್ತು ಅವನಿಗೆ ಸಂಕಷ್ಟವೇನಾದರೂ ಬಾಧಿಸಿದರೆ ಅವನು ಹತಾಶನಾಗಿ ಬಿಡುತ್ತಾನೆ.

(84) ಹೇಳಿರಿ: ಪ್ರತಿಯೊಬ್ಬನು ತನ್ನ ಪದ್ಧತಿಗನುಗುಣವಾಗಿ ಕರ್ಮವೆಸಗುತ್ತಾನೆ. ಅತ್ಯಂತ ಸನ್ಮಾರ್ಗದಲ್ಲಿರುವವರನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.

(85) ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ.

(86) ನಾವು ಇಚ್ಛಿಸಿರುತ್ತಿದ್ದರೆ ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸಂದೇಶವನ್ನು ಕಸಿದುಕೊಳ್ಳುತ್ತಿದ್ದೆವು. ಅನಂತರ ಅದಕ್ಕಾಗಿ ನಮ್ಮ ವಿರುದ್ಧ ನೀವು ಯಾವ ಬೆಂಬಲಿಗನನ್ನು ಪಡೆಯಲಾರಿರಿ.

(87) ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.

(88) ಹೇಳಿರಿ: ಸಕಲ ಮನುಷ್ಯರು ಮತ್ತು ಯಕ್ಷಗಳು ಒಟ್ಟು ಸೇರಿ ಈ ಕುರ್‌ಆನ್‌ನಂತಹದ್ದನ್ನು ತರಲು ಬಯಸಿದರೂ ಅವರು ಅದರಂತಹದ್ದನ್ನು ತರಲಾರರು. ಅವರು ಪರಸ್ಪರ ಸಹಾಯಕರಾದರೂ ಸರಿಯೇ.

(89) ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ರೀತಿಯ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ. ಆದರೆ ಅಧಿಕ ಜನರು ನಿಷೇಧವನ್ನು ಕೈಗೊಂಡರು.

(90) ಅವರು ಹೇಳಿದರು: ನೀವು ನಮಗೆ ಭೂಮಿಯಿಂದ ಒಂದು ಚಿಲುಮೆಯನ್ನು ಹರಿಸುವ ತನಕ ನಾವೆಂದೂ ನಿಮ್ಮನ್ನು ನಂಬಲಾರೆವು.

(91) ಇಲ್ಲವೇ ನಿಮಗೇ ಖರ್ಜೂರ ಮತ್ತು ದ್ರಾಕ್ಷಿಯ ಯಾವುದಾದರೂ ತೊಟವಿದ್ದು ಅದರ ನಡುವೆ ನೀವು ತುಂಬಿದ ಕಾಲುವೆಗಳನ್ನು ಹರಿಸಿ ತೋರಿಸಬೇಕು.

(92) ಅಥವಾ ನೀವು ಭಾವಿಸಿದಂತೆಯೇ ನಮ್ಮ ಮೇಲೆ ಆಕಾಶವನ್ನು ತುಂಡು ತುಂಡಾಗಿಸಿ ಬೀಳಿಸಬೇಕು. ಇಲ್ಲವೇ ನೀವು ಅಲ್ಲಾಹನನ್ನು ಮತ್ತು ಮಲಕ್‌ಗಳÀನ್ನು ನಮ್ಮ ಮುಖಾಮುಖಿ ತರಬೇಕು.

(93) ಅಥವಾ ನಿಮಗಾಗಿ ಚಿನ್ನದ ಮನೆಯೊಂದು ಉಂಟಾಗಲಿ. ಇಲ್ಲವೇ ನೀವು ಆಕಾಶಕ್ಕೆ ಏರಿ ಹೋಗಬೇಕು ಮತ್ತು ನೀವು ನಮ್ಮ ಮೇಲೆ ನಾವು ಓದುವಂತಹ ಒಂದು ಗ್ರಂಥವನ್ನು ಇಳಿಸಿ ತರುವವರೆಗೂ ನಾವು ನಿಮ್ಮ ಏರುವಿಕೆಯನ್ನು ಖಂಡಿತ ನಂಬಲಾರೆವು. ನೀವು ಹೇಳಿರಿ: ನನ್ನ ಪ್ರಭು ಅದೆಷ್ಟು ಪರಮ ಪಾವನನು! ನಾನು ಸಂದೇಶವಾಹಕನಾದ ಕೇವಲ ಒಬ್ಬ ಮನುಷ್ಯ ಮಾತ್ರ ಆಗಿದ್ದಾನೆ.

(94) ಜನರ ಬಳಿ ಸನ್ಮಾರ್ಗವು ತಲುಪಿದಾಗ ಅದರ ಮೇಲೆ ವಿಶ್ವಾಸವಿರಿಸದಂತೆ ತಡೆಯುತ್ತಿದ್ದುದು “ಅಲ್ಲಾಹನು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿದ್ದಾನೆ? ಎಂಬ ಅವರ ಮಾತು ಮಾತ್ರವಾಗಿತ್ತು.

(95) ಹೇಳಿರಿ: ಭೂಮಿಯ ಮೇಲೆ ಮಲಕ್‌ಗಳು ನೆಮ್ಮದಿಯಿಂದ ನೆಡೆದಾಡುತ್ತಿರುತ್ತಿದ್ದರೆ ನಾವು ಖಂಡಿತವಾಗಿಯೂ ಆಕಾಶದಿಂದ ಒಬ್ಬ ಮಲಕ್‌ನನ್ನೇ ಅವರ ಬಳಿ ಸಂದೇಶವಾಹಕನನ್ನಾಗಿ ಕಳುಹಿಸುತ್ತಿದ್ದೆವು,

(96) ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಖಂಡಿವಾಗಿಯೂ ಅವನು ತನ್ನ ದಾಸರ ಬಗ್ಗೆ ಚೆನ್ನಾಗಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿರುವನು.

(97) ಯಾರಿಗೆ ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುತ್ತನೋ ಅವನೇ ಸನ್ಮಾರ್ಗ ಪಡೆಯುತ್ತಾನೆ. ಮತ್ತು ಅವನು ಯಾರನ್ನು ದಾರಿಗೆಡಿಸುತ್ತಾನೋ ಇಂತಹವರಿಗೆ ಖಂಡಿತವಾಗಿಯೂ ನೀವು ಅಲ್ಲಾಹನ ಹೊರತು ಅವನ ಸಹಾಯಕ ಮಿತ್ರನಾಗಿ ಇನ್ನಾರನ್ನು ಪಡೆಯಲಾರಿರಿ. ಅಂತಹವರನ್ನು ನಾವು ಪ್ರಳಯ ದಿನದಂದು ಕುರುಡರು, ಮೂಗರು, ಕಿವುಡರನ್ನಾಗಿ ಮಾಡಿ ಅಧೋಮುಕಿಗಳನ್ನಾಗಿ ಒಟ್ಟು ಸೇರಿಸುವೆವು. ಅವರ ನೆಲೆಯು ನರಕವಾಗಿರುವುದು. ಅದರ ಅಗ್ನಿಯು ಮಂದವಾದಾಗಲೆಲ್ಲಾ ನಾವು ಅವರ ಮೇಲೆ ಅದನ್ನು ಭುಗಿಲೆಬ್ಬಿಸುತ್ತಿರುವೆವು.

(98) ಇದು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದಕ್ಕಾಗಿ ಮತ್ತು ನಾವು ಎಲುಬುಗಳಾಗಿ, ಚೂರು ಚೂರಾದ ಬಳಿಕವೂ ಹೊಸ ಸೃಷ್ಟಿಯಲ್ಲಿ ಎಬ್ಬಿಸಲ್ಪಡುತ್ತೇವೆಯೇ? ಎಂದು ಅವರು ಹೇಳುತ್ತಿದ್ದುದರ ಪ್ರತಿಫಲವಾಗಿದೆ.

(99) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಅವರಂತಿರುವವರನ್ನು ಸೃಷ್ಟಿಸಲು ಶಕ್ತನಾಗಿದ್ದಾನೆಂದು ಅವರು ನೋಡುವುದಿಲ್ಲವೇ? ಮತ್ತು ಅವನು ಅವರಿಗೆ ಒಂದು ಕಾಲಾವಧಿಯನ್ನು ನಿಶ್ಚಯಿಸಿದನು: ಅದರಲ್ಲಿ ಸಂಶಯವಿಲ್ಲ. ಆದರೆ ಅಕ್ರಮಿಗಳು ನಿಷೇಧವನ್ನು ತಾಳದೇ ಇರುವುದಿಲ್ಲ.

(100) ಓ ಪೈಗಂಬರರೇ ಹೇಳಿರಿ: ನೀವು ನನ್ನ ಪ್ರಭುವಿನ ಕಾರುಣ್ಯದ ಭಂಡಾರಗಳ ಒಡೆಯರಾಗಿರುತ್ತಿದ್ದರೂ ಅದು ಖರ್ಚಾಗಿಬಿಡುವ ಭಯದಿಂದ ನೀವದನ್ನು ತಡೆದಿರಿಸಿಕೊಳ್ಳುತ್ತಿದ್ದಿರಿ ಮತ್ತು ಮನುಷ್ಯನು ಬಲು ಜಿಪುಣನೇ ಆಗಿದ್ದಾನೆ.

(101) (ಓ ಪೈಗಂಬರರೇ) ನಾವು ಮೂಸಾರವರಿಗೆ ಸುಸ್ಪಷ್ಟವಾದ ಒಂಬತ್ತು ದೃಷ್ಟಾಂತಗಳನ್ನು ದಯಪಾಲಿಸಿದೆವು. ಇನ್ನು ನೀವು ಇಸ್ರಾಯೀಲ್ ಸಂತತಿಗಳೊAದಿಗೆ ಕೇಳಿರಿ: ಅವರು (ಮೂಸಾರವರು) ಅವರೆಡೆಗೆ ಬಂದಾಗ ಫಿರ್‌ಔನ್ ಹೇಳಿದನು: ಓ ಮೂಸಾ, ಖಂಡಿತವಾಗಿಯು ನೀನೊಬ್ಬ ಮಾಟಬಾಧಿತನೆಂದು ನಾನು ಭಾವಿಸುತ್ತೇನೆ.

(102) ಮೂಸಾ ಉತ್ತರಿಸಿದರು: ಈ ದೃಷ್ಟಾಂತಗಳನ್ನು(ಸತ್ಯವನ್ನು) ನಿನಗೆ ಮನವರಿಕೆ ಮಾಡಿಕೊಡಲು ಆಕಾಶಗಳ ಮತ್ತು ಭೂಮಿಯ ಪ್ರಭುವೇ ಇಳಿಸಿಕೊಟ್ಟಿರುವನೆಂದು ನಿನಗೆ ಚೆನ್ನಾಗಿ ತಿಳಿದಿದೆ. ಓ ಫಿರ್‌ಔನ್ ನಿಶ್ಚಯವಾಗಿಯೂ ನೀನು ನಾಶಕ್ಕೊಳಗಾಗಿರುವೆ ಎಂದು ನಾನು ಭಾವಿಸುತ್ತೇನೆ.

(103) ಕೊನೆಗೆ ಫಿರ್‌ಔನ್ ಅವರನ್ನು ಭೂಮುಖದಿಂದಲೇ ಕಿತ್ತೆಸೆಯಲಿಕ್ಕಾಗಿ ನಿರ್ಧರಿಸಿದನು. ಆದರೆ ನಾವು ಅವನನ್ನು ಮತ್ತು ಅವನ ಜೊತೆಯಿದ್ದವರನ್ನು ಮುಳಿಗಿಸಿಬಿಟ್ಟೆವು.

(104) ಅವನ ನಾಶದ ನಂತರ ನಾವು ಇಸ್ರಾಯೀಲ್ ಸಂತತಿಗಳಿಗೆ ಹೇಳಿದೆವು: ನೀವು ಈ ಭೂಪ್ರದೇಶದಲ್ಲಿ (ಫಲಸ್ತೀನ್) ವಾಸಿಸಿರಿ. ಇನ್ನು ಪರಲೋಕದ ವಾಗ್ದಾನವು ಬಂದುಬಿಟ್ಟರೆ ನಾವು ನಿಮ್ಮನ್ನು ಒಟ್ಟುಗೂಡಿಸಿ ತರುವೆವು.

(105) ನಾವು ಈ ಕುರ್‌ಆನನ್ನು ಸತ್ಯದೊಂದಿಗೆ ಇಳಿಸಿರುತ್ತೇವೆ. ಮತ್ತು ಅದು ಸತ್ಯದೊಂದಿಗೇ ಇಳಿಯಿತು ಮತ್ತು (ಓ ಪೈಗಂಬರರೇ) ನಾವು ನಿಮ್ಮನ್ನು ಕೇವಲ ಸುವಾರ್ತೆ ನೀಡುವವನಾಗಿ, ಮುನ್ನೆಚ್ಚರಿಕೆ ಕೊಡುವವನಾಗಿ ಕಳುಹಿಸಿರುತ್ತೇವೆ.

(106) ನಾವು ಕುರ್‌ಆನನ್ನು ನೀವು ಜನರಿಗೆ ಸಂದರ್ಭಕ್ಕೆ ತಕ್ಕಂತೆ ಓದಿ ಕೊಡಲೆಂದು ಸ್ವಲ್ಪ ಸ್ವಲ್ಪವಾಗಿ ಅವತೀರ್ಣಗೊಳಿಸಿರುತ್ತೇವೆ. ಮತ್ತು ನಾವು ಸಹ ಅದನ್ನು ಹಂತ ಹಂತವಾಗಿ ಇಳಿಸಿರುತ್ತೇವೆ.

(107) ಹೇಳಿರಿ: (ಓ ಸತ್ಯನಿಷೇಧಿಗಳೇ) ನೀವು ಇದರಲ್ಲಿ ವಿಶ್ವಾಸವಿಡಿರಿ: ಇಲ್ಲವೇ ವಿಶ್ವಾಸವಿಡದಿರಿ. ಖಂಡಿತವಾಗಿಯು ಇದಕ್ಕೆ ಮೊದಲು ಜ್ಞಾನ ನೀಡಲಾದವರ ಬಳಿ ಇದನ್ನು ಓದಿ ಹೇಳಲಾದಾಗ ಅವರು ಅಡ್ಡಬಿದ್ದು ಸಾಷ್ಟಾಂಗವೆರಗಿ ಬಿಡುತ್ತಾರೆ.

(108) ಮತ್ತು ಅವರು ಹೇಳುತ್ತಾರೆ: ನಮ್ಮ ಪ್ರಭುವು ಅದೆಷ್ಟೋ ಪರಮ ಪಾವನನು ನಿಸ್ಸಂದೇಹವಾಗಿಯು ನಮ್ಮ ಪ್ರಭುವಿನ ವಾಗ್ದಾನವು ನಡೆದೇ ತೀರುವುದು.

(109) ಅವರು ರೋಧಿಸುತ್ತಾ ಮುಖವನ್ನು ನೆಲಕ್ಕಿಟ್ಟು ಅಡ್ಡಬೀಳುತ್ತಾರೆ. ಮತ್ತು ಈ ಕುರ್‌ಆನ್ ಅವರ ಭಯ, ಭಕ್ತಿಯನ್ನು ಹೆಚ್ಚಿಸುತ್ತದೆ.

(110) ಹೇಳಿರಿ: ನೀವು ಅಲ್ಲಾಹನನ್ನು ಅಲ್ಲಾಹನೆಂದು ಕರೆಯಿರಿ ಇಲ್ಲವೇ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ನಾಮದಿಂದ ಕರೆದರು ಅವನಿಗೇ ಅತ್ಯುತ್ತಮ ನಾಮಗಳಿವೆ. ಮತ್ತು ನೀವು ನಿಮ್ಮ ನಮಾಝನ್ನು ಉಚ್ಛಸ್ವರದಲ್ಲಾಗಲಿ ಅಥವಾ ಮೆಲು ಧ್ವನಿಯಲ್ಲಾಗಲಿ ನಿರ್ವಹಿಸದಿರಿ. ಬದಲಿಗೆ ಅವುಗಳ ಮಧ್ಯಮ ಮಾರ್ಗವನ್ನು ಅರಸಿರಿ.

(111) ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮಿಸಲು. ಅವನು ಯಾರನ್ನು ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅವನ ಅಧಿಪತ್ಯದಲ್ಲಿ ಯಾರೂ ಸಹಭಾಗಿ ಇಲ್ಲ ತನ್ನನ್ನು ದೌರ್ಬಲ್ಯದಿಂದ ರಕ್ಷಿಸುವ ಸಹಾಯಕರ ಅಗತ್ಯವೂ ಅವನಿಗಿಲ್ಲ. ಆದ್ದರಿಂದ ನೀವು ಸಂಪೂರ್ಣವಾಗಿ ಅವನ ಹಿರಿಮೆಯನ್ನು ಕೊಂಡಾಡಿರಿ.