(1) ಧೂಳೆಬ್ಬಿಸುವ ಮಾರುತಗಳ ಆಣೆ.
(2) ಜಲಭರಿತ ಮೇಘಗಳನ್ನು ಹೊತ್ತೊಯ್ಯುವ ಮಾರುತಗಳಾಣೆ.
(3) ಸುಗಮವಾಗಿ ಹಡಗುಗಳನ್ನು ಚಲಿಸುವ ಮಾರುತಗಳಾಣೆ.
(4) ಕಾರ್ಯಗಳನ್ನು ಹಂಚುವ ಮಲಕ್‌ಗಳಾಣೆ.
(5) ನಿಜವಾಗಿಯೂ ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು ಸತ್ಯವಾಗಿದೆ.
(6) ಕರ್ಮಗಳ ಪ್ರತಿಫಲವು ಖಂಡಿತವಾಗಿಯೂ ಬರಲಿದೆ.
(7) ಪಥಗಳುಳ್ಳ ಆಕಾಶದಾಣೆ.
(8) ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.
(9) ಸತ್ಯದಿಂದ ವಿಮುಖನಾದವನೇ ಇದರಿಂದ (ಕುರ್‌ಆನ್‌ನಿಂದ) ತಿರುಗಿಸಲ್ಪಡುತ್ತಾನೆ.
(10) ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.
(11) ಅವರು ಅಲಕ್ಷö್ಯತೆಯಲ್ಲಿ ಪರಲೋಕವನ್ನು ಮರೆತುಬಿಟ್ಟವರು.
(12) ಪ್ರತಿಫಲದ ದಿನ ಯಾವಾಗ ಬರಲಿದೆ ಎಂದು ಅವರು ಕೇಳುತ್ತಾರೆ.
(13) (ಹೇಳಿರಿ) ಅವರು ನರಕಾಗ್ನಿಯಲ್ಲಿ ಸುಡಲಾಗುವ ದಿನ.
(14) (ಹೇಳಲಾಗುವುದು) ನಿಮ್ಮ ವಿನಾಶ ಕೃತ್ಯದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕೊಸ್ಕರ ಆತುರ ಪಡುತ್ತಿದ್ದಿರೋ ಅದುವೇ ಇದು.
(15) ನಿಸ್ಸಂಶಯವಾಗಿಯು ಭಯ ಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ ಇರುವರು.
(16) ಅವರ ಪ್ರಭುವು ಅವರಿಗೆ ಕರುಣಿಸಿರುವುದನ್ನು ಸ್ವೀಕರಿಸುವರು, ಅವರು ಇದಕ್ಕೆ ಮೊದಲೇ ಸಜ್ಜನರಾಗಿದ್ದರು.
(17) ಅವರು ರಾತ್ರಿಯಲ್ಲಿ ಅತ್ಯಲ್ಪವೇ ಮಲಗುತ್ತಿದ್ದರು.
(18) ಅವರು ರಾತ್ರಿಯ ಕೊನೆಯ ಭಾಗಗಳಲ್ಲಿ ಪಾಪ ವಿಮೋಚನೆಯನ್ನು ಬೇಡುತ್ತಿದ್ದರು.
(19) ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.
(20) ದೃಢನಂಬಿಕೆಯುಳ್ಳವರಿಗೆ ಭೂಮಿಯಲ್ಲಿ ಹಲವಾರು ನಿದರ್ಶನಗಳಿವೆ.
(21) ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?
(22) ನಿಮ್ಮಜೀವನಾಧಾರವು ಹಾಗು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದೆಲ್ಲವೂ ಆಕಾಶದಲ್ಲಿದೆ.
(23) ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಖಂಡಿತವಾಗಿಯು ಪುನರುತ್ಥಾನವು ನೀವು ಮಾತನಾಡುತ್ತಿರುವ ಹಾಗೆಯೇ ಖಚಿತವಾಗಿದೆ.
(24) ಸಂದೇಶವಾಹಕರೇ ಇಬ್ರಾಹೀಮರ ಗೌರವಾನ್ವಿತ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ ?
(25) ಅವರು ಇಬ್ರಾಹೀಮರ ಬಳಿ ಬಂದಾಗ ಸಲಾಮ್ ಹೇಳಿದರು; ಇಬ್ರಾಹೀಮರು ಮರು ಸಲಾಮ್ ಹೇಳಿದರು ಅಪರಿಚಿತ ಜನರಾಗಿರುವಿರಿ.
(26) ತರುವಾಯ ಮೆಲ್ಲನೆ ತಮ್ಮ ಮನೆಯವರ ಬಳಿಗೆ ಹೋದರು. ನಂತರ ಒಂದು ಕೊಬ್ಬಿದ ಹುರಿದ ಕರುವನ್ನು ತಂದರು.
(27) ಮತ್ತು ಅದನ್ನು ಅವರ ಮುಂದಿಟ್ಟು ಹೇಳಿದರು; ನೀವು ತಿನ್ನುವುದಿಲ್ಲವೇಕೆ ?
(28) ಆಗ ಅವರು ತಮ್ಮ ಮನಸ್ಸಿನಲ್ಲಿ ಅವರ ಕುರಿತು ಭಯಪಡ ತೊಡಗಿದರು. ಅವರು ಹೇಳಿದರು; ನೀವು ಭಯಪಡಬೇಡಿರಿ. ಅವರು (ಇಬ್ರಾಹೀಮರಿಗೆ) ಒಬ್ಬಜ್ಞಾನಿಯಾದ ಪುತ್ರನ ಸುವಾರ್ತೆಯನ್ನು ನೀಡಿದರು.
(29) ಆಗ ಅವರ ಪತ್ನಿಯು ಮುಂದೆ ಬಂದು ದಿಗ್ಭçಮೆಯಿಂದ ತನ್ನ ಮುಖ ಬಡಿದು ಹೇಳಿದಳು; ನಾನಂತು ಓರ್ವ ವೃದ್ಧೆ ಹಾಗು ಬಂಜೆಯಾಗಿರುವೆ. (ನಾನು ಮಗುವನ್ನು ಹಡೆಯುವುದಾದರೂ ಹೇಗೆ ?)
(30) ಅವರು ಹೇಳಿದರು; ನಿನ್ನ ಪ್ರಭುವು ಇದೇಪ್ರಕಾರ ಹೇಳಿದ್ದಾನೆ. ನಿಸ್ಸಂಶಯವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿದ್ದಾನೆ.
(31) ಇಬ್ರಾಹೀಮರು ಕೇಳಿದರು; ಓ ದೇವದೂತರೇ, ನಿಮ್ಮ ಮುಂದಿನ ಕಾರ್ಯಾಚರಣೆ ಏನು?
(32) ಅವರು ಉತ್ತರಿಸಿದರು; ನಾವು ಒಂದು ಅಪರಾಧಿ (ಲೂತರ)ಜನಾಂಗದೆಡೆಗೆ ಕಳುಹಿಸಲಾಗಿದ್ದೇವೆ.
(33) ನಾವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಮಳೆಗರಿಸಲಿಕ್ಕಾಗಿ.
(34) ಅವು ಮಿತಿಮೀರಿದವರಿಗಾಗಿ ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲ್ಪಟ್ಟಿವೆ.
(35) ಆಗ ನಾವು ಸತ್ಯವಿಶ್ವಾಸಿಗಳನ್ನು ಅಲ್ಲಿಂದ ಹೊರತೆಗೆದೆವು,
(36) ಅಲ್ಲಿ ನಾವು ಮುಸ್ಲಿಮರ ಒಂದು ಮನೆಯ ಹೊರತು ಇನ್ನಾವ ಮನೆಯನ್ನು ಕಾಣಲಿಲ್ಲ.
(37) ಅನಂತರ ನಾವು ವೇದನಾಜನಕ ಯಾತನೆಯ ಈ ಘಟನೆಯನ್ನು ಭಯಪಡುವವರಿಗೆ ನಿದರ್ಶನವೊಂದನ್ನಾಗಿ ಉಳಿಸಿಬಿಟ್ಟೆವು
(38) ಮೂಸಾರವರ ವೃತ್ತಾಂತದಲ್ಲೂ ನಿದರ್ಶನವಿದೆ. ನಾವು ಅವರನ್ನು ಫಿರ್‌ಔನನೆಡೆಗೆ ಸುಸ್ಪಷ್ಟವಾದ ದೃಷ್ಟಾಂತದೊAದಿಗೆ ಕಳುಹಿಸಿದೆವು.
(39) ಆಗ ಅವನು ತನ್ನ ಶಕ್ತಿ ಸಾಮರ್ಥ್ಯದ ನಿಮಿತ್ತ ವಿಮುಖನಾಗಿ ಬಿಟ್ಟನು ಮತ್ತು ಇವನು (ಮೂಸಾ) ಜಾದೂಗಾರನು ಅಥವ ಹುಚ್ಚನೆಂದು ಹೇಳಿದನು.
(40) ಆದುದರಿಂದ ನಾವು ಅವನನ್ನೂ, ಅವನ ಸೈನ್ಯಗಳನ್ನು ಹಿಡಿದೆವು. ಅನಂತರ ಸಮುದ್ರಕ್ಕೆಸೆದು ಬಿಟ್ಟೆವು, ಅವನು ನಿಂದ್ಯಾರ್ಹನಾಗಿದ್ದನು.
(41) ಇದೇ ಪ್ರಕಾರ ಆದ್‌ಜನಾಂಗದಲ್ಲೂ ನಿದರ್ಶನವಿದೆ, ನಾವು ಅವರ ಮೇಲೆ ವಿನಾಶಕಾರಿ ಚಂಡಮಾರುತವನ್ನು ಕಳುಹಿಸಿದ ಸಂದರ್ಭವನ್ನು ಸ್ಮರಿಸಿರಿ.
(42) ಅದು ಹಾದು ಹೋದ ಯಾವುದೇ ವಸ್ತುವನ್ನು ಶಿಥಿಲವಾದ ಎಲುಬಿನಂತೆ (ನುಚ್ಚುನೂರು) ಮಾಡಿಬಿಡುತ್ತಿತ್ತು.
(43) ಸಮೂದ್ ಜನಾಂಗದಲ್ಲೂ ನಿದರ್ಶನವಿದೆ, ನೀವು ಕೆಲವು ದಿನಗಳವರೆಗೆ ಸುಖಭೋಗಗಳನ್ನು ಅನುಭವಿಸಿರಿ ಎಂದು ಅವರೊಂದಿಗೆ ಹೇಳಲಾದ ಸಂದರ್ಭ.
(44) ಆದರೆ ಅವರು ತಮ್ಮ ಪ್ರಭುವಿನ ಆದೇಶವನ್ನು ಉಲ್ಲಂಘಿಸಿದರು, ಆದುದರಿಂದ ಅವರು ನೋಡುತ್ತಿದ್ದಂತೆಯೇ ಆರ್ಭಟವೊಂದು ಅವರ ಮೇಲೆ ಎರಗಿತು.
(45) ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ, ಪ್ರತಿಕಾರ ಪಡೆಯುವ ಸಾಮರ್ಥ್ಯವಾಗಲಿ ಇರಲಿಲ್ಲ.
(46) ಇದಕ್ಕೂ ಮುಂಚೆ ನಾವು ನೂಹರಜನಾಂಗವನ್ನು ನಾಶಗೊಳಿಸಿದೆವು, ನಿಶ್ಚಯವಾಗಿಯೂ ಅವರೊಂದು ಕರ್ಮ ಭ್ರಷ್ಟ ಜನಾಂಗದವರಾಗಿದ್ದರು.
(47) ಆಕಾಶವನ್ನು ನಾವು (ನಮ್ಮ) ಕೈಗಳಿಂದ ನಿರ್ಮಿಸಿರುತ್ತೇವೆ ಮತ್ತು ನಿಶ್ಚಯವಾಗಿಯು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.
(48) ಭೂಮಿಯನ್ನು ನಾವು ಹಾಸನ್ನಾಗಿ ಮಾಡಿದೆವು, ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ.
(49) ಮತ್ತು ಪ್ರತಿಯೊಂದು ವಸ್ತುವಿಗೂ ನಾವು ಜೋಡಿಗಳನ್ನು ಸೃಷ್ಟಿಸಿರುತ್ತೇವೆ, ನೀವು ಉದ್ಭೋದೆ ಪಡೆಯಲೆಂದು.
(50) ಆದ್ದರಿಂದ ನೀವು ಅಲ್ಲಾಹನೆಡೆಗೆ ಧಾವಿಸಿರಿ, ನಿಶ್ಚಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಸುಷ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
(51) ನೀವು ಅಲ್ಲಾಹನೊಂದಿಗೆ ಬೇರೆ ಆರಾಧ್ಯನನ್ನು ಮಾಡಿಕೊಳ್ಳಬೇಡಿರಿ, ನಿಸ್ಸಂಶಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೆನೆ.
(52) ಇದೇ ಪ್ರಕಾರ ಇವರಿಗಿಂತ ಮುಂಚಿನ ಸಮುದಾಯಗಳ ಬಳಿ ಯಾವ ಸಂದೇಶವಾಹಕರು ಬಂದರೂ ಅವರು ಇವರನ್ನು ಜಾದುಗಾರ ಅಥವ ಹುಚ್ಚನೆಂದು ಹೇಳದೇ ಬಿಟ್ಟಿಲ್ಲ.
(53) ಅವರು ಈ ಬಗ್ಗೆ ಪರಸ್ಪರ ಉಯಿಲು ಮಾಡುತ್ತಾ ಬಂದಿರುವರೇ ? ಇಲ್ಲ ಅವರು ಅತಿಕ್ರಮಿ ಜನರಾಗಿದ್ದರು.
(54) ಆದ್ದರಿಂದ ನೀವು ಅವರಿಂದ ಮುಖ ತಿರುಗಿಸಿಕೊಳ್ಳಿರಿ, ನೀವು ಆಕ್ಷೇಪಾರ್ಹರಲ್ಲ.
(55) ನೀವು ಉಪದೇಶಿಸುತ್ತಿರಿ, ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನಕಾರಿಯಾಗಿರುತ್ತದೆ.
(56) ನಾನು ಯಕ್ಷಗಳನ್ನು, ಮನುಷ್ಯರನ್ನು, ನನ್ನ ಆರಾಧನೆಗಲ್ಲದೇ ಸೃಷ್ಟಿಸಿಲ್ಲ.
(57) ನಾನು ಅವರಿಂದ ಜೀವನಾಧಾರವನ್ನು ಬಯಸುವುದಿಲ್ಲ, ಮತ್ತು ಅವರು ನನಗೆ ಉಣಿಸಬೇಕೆಂದೂ ಬಯಸುವುದಿಲ್ಲ.
(58) ನಿಶ್ಚಯವಾಗಿಯು ಅಲ್ಲಾಹನು ಮಹಾ ಅನ್ನದಾತನೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದಾನೆ.
(59) ಆದ್ದರಿಂದ ಅಕ್ರಮವೆಸಗಿದವರಿಗೂ ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಶಿಕ್ಷೆಯಪಾಲಿದೆ, ಆದ್ದರಿಂದ ಅವರು ನನ್ನಲ್ಲಿ ಆತುರಪಡದಿರಲಿ.
(60) ಆದ್ದರಿಂದ ಎಚ್ಚರಿಕೆ ನೀಡಲಾಗುತ್ತಿರುವ ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.