(1) ಹಾ ಮೀಮ್
(2) ಸುವ್ಯಕ್ತ ಗ್ರಂಥದಾಣೆ.
(3) ನಿಶ್ಚಯವಾಗಿಯು ನಾವು ಇದನ್ನು ಒಂದು ಸಮೃದ್ಧಪೂರ್ಣರಾತ್ರಿಯಲ್ಲಿ ಅವತೀರ್ಣಗೊಳಿಸಿರುತ್ತೇವೆ. ನಿಸ್ಸಂಶಯ ವಾಗಿಯು ನಾವು ಜನರನ್ನು ಮುನ್ನೆಚ್ಚರಿಕೆ ನೀಡುವವರಾಗಿದ್ದೇವೆ.
(4) ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಯುಕ್ತಿಪೂರ್ಣವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುವುದು.
(5) ಅದು ನಮ್ಮ ತೀರ್ಮಾನವಾಗಿರುತ್ತದೆ ಖಂಡಿತವಾಗಿಯೂ ಸಂದೇಶವಾಹಕರನ್ನು ಕಳುಹಿಸುವವರು ನಾವೇ ಆಗಿರುತ್ತೇವೆ.
(6) ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಸ್ಸಂದೇಹವಾಗಿಯೂ ಅವನು ಸರ್ವವನ್ನು ಆಲಿಸುವವನು ಮತ್ತು ಎಲ್ಲವನ್ನು ಅರಿಯುವವನಾಗಿದ್ದಾನೆ.
(7) ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವೆಯಿರುವ ಸಕಲ ವಸ್ತುಗಳ ಪ್ರಭುವಾಗಿದ್ದಾನೆ. ನೀವು ನಂಬುವವರಾಗಿದ್ದರೆ.
(8) ಅವನ ಹೊರತು ಅನ್ಯಆರಾಧ್ಯರಿಲ್ಲ. ಅವನೇ ಜೀವಂತಗೊಳಿಸುತ್ತಾನೆ ಮತ್ತು ಮರಣ ನೀಡುತ್ತಾನೆ. ಅವನೇ ನಿಮ್ಮ ಮತ್ತು ನಿಮ್ಮ ಪೂರ್ವಿಕರಾದ ತಂದೆತಾತAದಿರ ಪ್ರಭುವು.
(9) ಆದರೆ, ಅವರು ಸಂದೇಹದಲ್ಲಿ ಬಿದ್ದು, ಆಟವಾಡುತ್ತಿದ್ದಾರೆ.
(10) ಆದ್ದರಿಂದ ಆಕಾಶವು ಸ್ಪಷ್ಟವಾದ ಧೂಮವನ್ನು ತರುವ ದಿನವನ್ನು ನೀವು ನಿರೀಕ್ಷಿಸಿರಿ.
(11) ಅದು ಜನರನ್ನು ಆವರಿಸಿ ಕೊಳ್ಳುವುದು. ಇದೊಂದು ವೇದನಾಜನಕ ಯಾತನೆಯಾಗಿದೆ.
(12) ಅವರು ಹೇಳುವರು: ನಮ್ಮ ಪ್ರಭು, ನಮ್ಮಿಂದ ಈ ಯಾತನೆಯನ್ನು ಸರಿಸಿಬಿಡು. ನಾವು ವಿಶ್ವಾಸಿಗಳಾಗುವೆವು.
(13) ಅವರಿಗೆ ಉದ್ಬೋಧೆಯು ಎಲ್ಲಿದೆ? ಅವರ ಬಳಿಗೆ ಸುಸ್ಪಷ್ಟವಾಗಿ ವಿವರಿಸುವಒಬ್ಬ ಸಂದೇಶವಾಹಕರು ಬಂದಿದ್ದರು.
(14) ಹಾಗಿದ್ದೂ ಅವರು ಆತನಿಂದ ವಿಮುಖರಾಗಿ ಬಿಟ್ಟರು ಮತ್ತು ಇವನೊಬ್ಬ ಕಲಿಸಲ್ಪಟ್ಟ ಹುಚ್ಚನಾಗಿದ್ದಾನೆ ಎಂದು ಹೇಳಿದರು.
(15) ಖಂಡಿತವಾಗಿಯು ನಾವು ಯಾತನೆಯನ್ನು ಸ್ವಲ್ಪ ಕಾಲ ಸರಿಸಿ ಬಿಡುವೆವು. ಆದರೆ ನೀವು ಅದೇ ಹಿಂದಿನ ಸ್ಥಿತಿಗೆ ಮರಳುವಿರಿ.
(16) ನಾವು ಅತ್ಯುಗ್ರವಾಗಿ ಹಿಡಿಯುವ ದಿನದಂದು ಖಂಡಿತವಾಗಿಯು ನಾವು ಪ್ರತಿಕಾರ ಪಡೆಯುವವರಿದ್ದೇವೆ.
(17) ನಿಶ್ಚಯವಾಗಿಯು ನಾವು ಇವರಿಗಿಂತ ಮುಂಚೆ ಫಿರ್‌ಔನನ ಜನರನ್ನು ಪರೀಕ್ಷಿಸಿದ್ದೆವು. ಮತ್ತು ಅವರ ಬಳಿ ಒಬ್ಬ ಸನ್ಮಾನ್ಯ ಸಂದೇಶವಾಹಕರು ಬಂದಿದ್ದರು.
(18) ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ. (ಎಂದು ಹೇಳಿದ್ದರು).
(19) ನೀವು ಅಲ್ಲಾಹನ ಮುಂದೆ ಧಿಕ್ಕಾರತೋರದಿರಿ. ನಾನು ನಿಮ್ಮ ಬಳಿ ಸುಸ್ಪಷ್ಟ ಪುರಾವೆಯೊಂದಿಗೆ ಬಂದಿರುವೆನು
(20) ನೀವು ನನ್ನನ್ನು ಕಲ್ಲೆಸೆದು ಕೊಲ್ಲುವುದರಿಂದ ನಾನು ನನ್ನ ಮತ್ತು ನಿಮ್ಮ ಪ್ರಭುವಿನಲ್ಲಿ ಅಭಯ ಪಡೆದಿದ್ದೇನೆ.
(21) ನೀವು ನನ್ನಲ್ಲಿ ವಿಶ್ವಾಶವಿಡುವುದಿಲ್ಲವೆಂದಾದರೆ ನನ್ನಿಂದ ನೀವು ದೂರ ಸರಿಯಿರಿ.
(22) ಕೊನೆಗೆ ಅವರು ತಮ್ಮ ಪ್ರಭುವಿನಲ್ಲಿ ಇವರು ಅಪರಾಧಿ ಜನಾಂಗವಾಗಿದ್ದಾರೆAದು ಪ್ರಾರ್ಥಿಸಿದರು.
(23) (ಆಗ ಅಲ್ಲಾಹನು ಆದೇಶಿಸಿದನು) ಹಾಗಿದ್ದರೆ ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರಿಯಲ್ಲಿ ಹೊರಡಿರಿ. ಖಂಡಿತವಾಗಿಯು ನಿಮ್ಮನ್ನು ಹಿಂಬಾಲಿಸಲಾಗುವುದು.
(24) ಮತ್ತು ನೀವು ಸಮುದ್ರವನ್ನು ಶಾಂತಿಯುತವಾಗಿರಲು ಬಿಟ್ಟು ಬಿಡಿರಿ. ನಿಸ್ಸಂದೇಹವಾಗಿಯು ಅವರ ಸೈನ್ಯವನ್ನು ಮುಳುಗಿಸಲಾಗುವುದು.
(25) ಅವರು ಅದೆಷ್ಟೋ ತೋಟಗಳನ್ನೂ, ಚಿಲುಮೆಗಳನ್ನೂ ಬಿಟ್ಟು ಹೋದರು.
(26) ಕೃಷಿಯನ್ನೂ, ಉನ್ನತ ಗೃಹಗಳನ್ನೂ.
(27) ಮತ್ತು ಅವರು ಆನಂದಿಸುತ್ತಿದ್ದ ಆ ಸುಖಭೋಗ ಸಾಧನಗಳನ್ನು ಬಿಟ್ಟು ಹೋದರು.
(28) ಇದೇ ಪ್ರಕಾರವಾಯಿತು ಮತ್ತು ನಂತರ ನಾವು ಇತರ ಜನರನ್ನು ಅದರ ವಾರೀಸುದಾರರನ್ನಾಗಿ ಮಾಡಿದೆವು.
(29) ಹಾಗೆಯೇ ಆಕಾಶವಾಗಲಿ, ಭೂಮಿಯಾಗಲಿ ಅವರಿಗಾಗಿ ರೋದಿಸಲಿಲ್ಲ ಮತ್ತು ಅವರಿಗೆ ಒಂದಿಷ್ಟೂ ಕಾಲಾವಕಾಶ ಲಭಿಸಲಿಲ್ಲ.
(30) ನಿಸ್ಸಂಶಯವಾಗಿಯೂ ನಾವು ಇಸ್ರಾಯೀಲ್ ಸಂತತಿಗಳನ್ನು ಅಪಮಾನಕರ ಶಿಕ್ಷೆಯಿಂದ ರಕ್ಷಿಸಿದೆವು.
(31) ಫಿರ್‌ಔನನಿಂದ ವಾಸ್ತವದಲ್ಲಿ ಅವನು ಅಹಂಕಾರಿಯು ಮತ್ತು ಹದ್ದುಮೀರಿ ದವರಲ್ಲಾಗಿದ್ದನು
(32) ನಾವು ಅವರನ್ನು (ಬನೀ ಇಸ್ರಾಯೀಲರನ್ನು) ಅರ್ಹರೆಂದು ಅರಿತು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದ್ದೆವು.
(33) ನಾವು ಅವರಿಗೆ ನೀಡಿದ ದೃಷ್ಟಾಂತಗಳಲ್ಲಿ ಸುಸ್ಪಷ್ಟವಾದ ಪರೀಕ್ಷೆಯಿತ್ತು.
(34) ನಿಶ್ಚಯವಾಗಿಯು ಇವರು ಹೇಳುತ್ತಾರೆ.
(35) ನಮ್ಮ ಮೊದಲ ಬಾರಿಯ ಮರಣದ ಹೊರತು ಬೇರೇನಿಲ್ಲ ಮತ್ತು ನಮ್ಮನ್ನು ಪುನಃ ಎಬ್ಬಿಸಲಾಗುವುದಿಲ್ಲ.
(36) ನೀವು ಸತ್ಯವಂತರಾಗಿದ್ದರೆ ನಮ್ಮ ತಂದೆ ತಾತಂದಿರನ್ನು ಕರೆತನ್ನಿರಿ.
(37) ಇವರು ಉತ್ತಮರೇ? ಅಥವಾ ತುಬ್ಬಾದ ಜನಾಂಗ ಮತ್ತು ಅವರಿಗಿಂತ ಮೊದಲಿದ್ದವರೇ? ನಾವು ಅವರೆಲ್ಲರನ್ನು ನಾಶಮಾಡಿದೆವು. ಖಂಡಿತವಾಗಿಯು ಅವರು ಅಪರಾಧಿಗಳಾಗಿದ್ದರು.
(38) ನಾವು ಆಕಾಶಗಳನ್ನೂ, ಭೂಮಿಯನ್ನೂ, ಅವುಗಳ ನಡುವೆಯಿರುವ ವಸ್ತುಗಳನ್ನೂ ಆಟವಿನೋದಕ್ಕಾಗಿ ಸೃಷ್ಟಿಸಿರುವುದಿಲ್ಲ.
(39) ವಸ್ತುತಃ ನಾವು ಅವುಗಳನ್ನು ಉದ್ದೇಶಪೂರ್ವಕವಾಗಿ ಸತ್ಯದೊಂದಿಗೆ ಸೃಷ್ಟಿಸಿದ್ದೇವೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
(40) ನಿಶ್ಚಯವಾಗಿಯೂ ಆ ನಿರ್ಣಾಯಕ ತೀರ್ಪಿನ ದಿನವು ಅವರೆಲ್ಲರ ನಿಶ್ಚಿತ ವೇಳೆಯಾಗಿದೆ.
(41) ಆ ದಿನ ಯಾವೊಬ್ಬ ಮಿತ್ರನು ತನ್ನ ಮಿತ್ರನಿಗೆ ಸ್ವಲ್ಪವೂ ಪ್ರಯೋಜನಕ್ಕೆ ಬಾರನು ಮತ್ತು ಅವರಿಗೆ ಯಾವ ಸಹಾಯವೂ ಲಭಿಸದು.
(42) ಆದರೆ ಅಲ್ಲಾಹನು ಕರುಣೆತೋರಿದವನ ಹೊರತು. ಅವನು ಪ್ರತಾಪಶಾಲಿಯು, ಕರುಣಾನಿಧಿಯು ಆಗಿದ್ದಾನೆ.
(43) ನಿಸ್ಸಂಶಯವಾಗಿಯು ಝಕ್ಕೂಮ್ ಗಿಡ
(44) (ನರಕದಲ್ಲಿ) ಪಾಪಿಗಳ ಆಹಾರ ವಾಗಿರುವುದು.
(45) ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.
(46) ಬಿಸಿನೀರು ಕುದಿಯುವಂತೆ.
(47) (ನಾವು ಆದೇಶಿಸುವೆವು) ಅವನನ್ನು ಹಿಡಿಯಿರಿ. ಅನಂತರ ಅವನನ್ನು ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
(48) ಬಳಿಕ ಅವನ ತಲೆಯ ಮೇಲೆ ಕುದಿಯುವ ನೀರಿನ ಯಾತನೆಯನ್ನು ಸುರಿಯಿರಿ.
(49) (ಮತ್ತು ಹೇಳಲಾಗುವುದು) ನೀನು ಈ ರುಚಿಯನ್ನು ಸವಿದುಕೋ, ನೀನು ಪ್ರತಾಪಶಾಲಿಯು, ಗೌರವಾನ್ವಿತನೂ ಆಗಿದ್ದೆ
(50) ನೀವು ಸಂದೇಹ ಪಡುತ್ತಿದ್ದಂತಹ ನರಕ ಇದೇ ಆಗಿದೆ.
(51) ನಿಸ್ಸಂದೇಹವಾಗಿಯು (ಅಲ್ಲಾಹನಲ್ಲಿ) ಭಯ ಭಕ್ತಿಯುಳ್ಳವರು ಶಾಂತಿಧಾಮದಲ್ಲಿರುವರು.
(52) ಸ್ವರ್ಗೋದ್ಯಾನಗಳಲ್ಲೂ, ಚಿಲುಮೆಗಳಲ್ಲೂ.
(53) ತೆಳುರೇಷ್ಮೆಯ ಹಾಗೂ ದಪ್ಪರೇಷ್ಮೆಯ ವಸ್ತçವನ್ನು ಧರಿಸಿ ಪರಸ್ಪರ ಎದುರುಬದುರಾಗಿ ಕುಳಿತಿರುವರು.
(54) ಇದೇರೀತಿ ನಾವು ಅವರನ್ನು ವಿಶಾಲ ನಯನಗಳುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
(55) ಅಲ್ಲಿ ಅವರು ನಿಶ್ಚಿಂತರಾಗಿ ಸಕಲ ವಿಧದ ಫಲಗಳನ್ನು ತರಿಸಿಕೊಳ್ಳುವರು.
(56) ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು ನರಕದ ಯಾತನೆಯಿಂದ ರಕ್ಷಿಸುವನು
(57) ಇದು ನಿಮ್ಮ ಪ್ರಭುವಿನ ಅನುಗ್ರಹವಾಗಿದೆ. ಇದುವೇ ಮಹಾಯಶಸ್ಸಾಗಿದೆ.
(58) ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.
(59) ಆದ್ದರಿಂದ ನೀವು ನಿರೀಕ್ಷಿಸಿರಿ. ಅವರೂ ನಿರೀಕ್ಷಿಸುತ್ತಿದ್ದಾರೆ.