(1) ತೂರ್ ಪರ್ವತದ ಆಣೆ.
(2) ಬರೆದಿಡಲ್ಪಟ್ಟ ಗ್ರಂಥದಾಣೆ.
(3) ಅದು ತೆಳುವಾದ ತೆರೆದಿಟ್ಟ ಹಾಳೆಯಲ್ಲಿದೆ.
(4) (ದೇವದೂತರಿಂದ) ಸದಾ ತುಂಬಿರುವ ಭವನದಾಣೆ.
(5) ಎತ್ತರಿಸಲಾದ (ಆಕಾಶ) ಮೇಲ್ಛಾವಣಿಯಾಣೆ.
(6) ಉಕ್ಕೇರುವ ಸಮುದ್ರದಾಣೆ.
(7) ನಿಸ್ಸಂದೇಹವಾಗಿಯು ನಿಮ್ಮ ಪ್ರಭುವಿನ ಯಾತನೆಯು ಸಂಭವಿಸಲಿದೆ.
(8) ಅದನ್ನು ತಡೆಯುವವರು ಯಾರೂ ಇಲ್ಲ.
(9) ಅಂದು ಆಕಾಶವು ತೀವ್ರವಾಗಿ ಕಂಪಿಸತೊಡಗುವುದು.
(10) ಪರ್ವತಗಳು ತೀವ್ರವಾಗಿ ಚಲಿಸತೊಡಗುವುದು.
(11) ಅಂದು ಸುಳ್ಳಾಗಿಸುವವರಿಗೆ ನಾಶವಿದೆ.
(12) ಅವರು ವ್ಯರ್ಥ ಮಾತುಗಳಲ್ಲಿ ಮಗ್ನರಾಗಿ ಆಟವಾಡುತ್ತಾರೆ.
(13) ಅಂದು ಅವರನ್ನು ತಳ್ಳುತ್ತಾ ನರಕಾಗ್ನಿಯೆಡೆಗೆ ತರಲಾಗುವುದು.
(14) ನೀವು ಸುಳ್ಳಾಗಿಸುತ್ತಿದ್ದ ಆ ನರಕ ಇದುವೇ ಆಗಿದೆ.
(15) ಏನು ಇದು ಮಾಟ ಆಗಿದೆಯೇ? ಅಥವ ನಿಮಗೆ ಕಾಣುವುದಿಲ್ಲವೇ?
(16) ಈ ನರಕದೊಳಗೆ ನೀವು ಪ್ರವೇಶಿಸಿರಿ. ಇನ್ನು ನೀವು ಸಹನೆ ವಹಿಸಿದರೂ, ಸಹನೆ ವಹಿಸದಿದ್ದರೂ ನಿಮ್ಮ ಪಾಲಿಗೆ ಸಮಾನವಾಗಿದೆ, ನಿಜವಾಗಿಯು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನೇ ನೀಡಲಾಗುವುದು.
(17) ಖಂಡಿತವಾಗಿಯು ಭಯಭಕ್ತಿಯುಳ್ಳವರು ಸ್ವರ್ಗೋದ್ಯಾನಗಳಲ್ಲೂ ಮತ್ತು ಸುಖಾನುಗ್ರಹಗಳಲ್ಲೂ ಇರುವರು.
(18) ಅವರ ಪ್ರಭುವು ಅವರಿಗೆ ದಯಪಾಲಿಸಿರುವು ದರಲ್ಲಿ ಸುಖಾನುಭವಿಸುವರು. ಅವರ ಪ್ರಭುವು ಅವರನ್ನು ನರಕದ ಯಾತನೆಯಿಂದ ರಕ್ಷಿಸುವನು.
(19) (ಹೇಳಲಾಗುವುದು) ನೀವು ಮಾಡುತ್ತಿದ್ದಂತಹ ಕರ್ಮಗಳ ಫಲವಾಗಿ ತಿನ್ನಿರಿ ಮತ್ತು ಕುಡಿಯಿರಿ.
(20) ಅವರು ಸಾಲು ಸಾಲಾಗಿ ಇರಿಸಲಾದ ಅಲಂಕೃತ ಮಂಚಗಳ ಮೇಲೆ ದಿಂಬುಗಳಿಗೆ ಒರಗಿರುವರು ಮತ್ತು ನಾವು ಅವರನ್ನು ವಿಶಾಲ ನಯನವುಳ್ಳ ಅಪ್ಸರೆಯರೊಂದಿಗೆ ವಿವಾಹ ಮಾಡಿಸುವೆವು.
(21) ಸತ್ಯವಿಶ್ವಾಸಿಗಳನ್ನು ಹಾಗು ಸತ್ಯವಿಶ್ವಾಸದಲ್ಲಿ ಅವರನ್ನು ಅನುಸರಿಸಿದ ಅವರ ಸಂತತಿಗಳನ್ನು ನಾವು ಅವರೊಂದಿಗೆ (ಸ್ವರ್ಗದಲ್ಲಿ) ಸೇರಿಸುವೆವು ಮತ್ತು ಅವರ ಕರ್ಮಗಳಿಂದ ಏನನ್ನು ಕಡಿತಗೊಳಿಸಲಾರೆವು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ಮಗಳಿಗೆ ಗಿರವಿಯಾಗಿದ್ದಾನೆ.
(22) ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
(23) ನಾವು ಅವರಿಗೆ ಹಣ್ಣು ಹಂಪಲುಗಳನ್ನು ಮತ್ತು ಅವರಿಚ್ಛಿಸುವ ಮಾಂಸವನ್ನೂ ಸಮೃದ್ಧವಾಗಿ ನೀಡುವೆವು.
(24) ಅವರ ಸೇವೆಗಾಗಿ ಹರೆಯದ ಬಾಲಕರು ಅವರ ಸುತ್ತ ಸುತ್ತುತ್ತಲಿರುವರು. ಅವರು ಬಚ್ಚಿಡಲಾದ ಮುತ್ತುಗಳಂತೆ ಸುಂದರವಾಗಿರುವರು.
(25) ಅವರು ಅಭಿಮುಖವಾಗಿ ಪರಸ್ಪರರೊಡನೆ ಪ್ರಶ್ನಿಸುವರು.
(26) ಅವರು ಹೇಳುವರು; ನಾವು ಈ ಮೊದಲು (ಭೂಲೋಕದಲ್ಲಿ) ನಮ್ಮ ಕುಟುಂಬದವರ ನಡುವೆ ಭಯಪಡುತ್ತಿದ್ದೆವು.
(27) ಆದರೆ ಅಲ್ಲಾಹನು ನಮ್ಮ ಮೇಲೆ ಮಹಾ ಉಪಕಾರವನ್ನು ಮಾಡಿದನು ಹಾಗು ಅತ್ಯುಷ್ಣ ಗಾಳಿಯ ಯಾತನೆಯಿಂದ ನಮ್ಮನ್ನು ರಕ್ಷಿಸಿದನು.
(28) ಖಂಡಿತವಾಗಿಯೂ ನಾವು ಇದಕ್ಕೆ ಮೊದಲು ಭೂಲೋಕದಲ್ಲಿ ಅವನ ಆರಾಧನೆಯನ್ನೇ ಮಾಡುತ್ತಿದ್ದೆವು. ನಿಸ್ಸಂಶಯವಾಗಿಯು ಅವನು ಮಹಾ ಉಪಕಾರಿಯು ಕರುಣಾನಿಧಿಯು ಆಗಿರುವನು.
(29) ಆದ್ದರಿಂದ ನೀವು ಉಪದೇಶಿಸುತ್ತಿರಿ. ನೀವು ತಮ್ಮ ಪ್ರಭುವಿನ ಅನುಗ್ರಹದಿಂದ ಜ್ಯೋತಿಷ್ಯರೂ, ಹುಚ್ಚರೂ ಅಲ್ಲ.
(30) ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
(31) ಹೇಳಿರಿ ನೀವು ಕಾಯುತ್ತಿರಿ, ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಕಾಯುತ್ತಿರುವೆನು.
(32) ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
(33) ಆ ಪೈಗಂಬರರು ಇದನ್ನು (ಕುರ್ಆನನ್ನು) ಸ್ವತಃ ರಚಿಸಿರುತ್ತಾನೆಂದು ಅವರು ಹೇಳುತ್ತಿದ್ದಾರೆಯೇ ? ವಾಸ್ತವವೇನೆಂದರೆ ಅವರು ವಿಶ್ವಾಸವಿರಿಸುತ್ತಿಲ್ಲ.
(34) ಸರಿ ಅವರು ಸತ್ಯವಂತರಾಗಿದ್ದರೆ ಇಂತಹದೇ ಒಂದು ವಚನವನ್ನು ತರಲಿ.
(35) ಅವರು ಒಬ್ಬ ಸೃಷ್ಟಿಕರ್ತನಿಲ್ಲದೇ ಸೃಷ್ಟಿಸಲಾಗಿರುವರೇ ? ಅಥವಾ ಅವರೇ ಸ್ವಯಂ ಸೃಷ್ಟಿಕರ್ತರೇ?
(36) ಅಥವಾ ಅವರೇ ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದಾರೆಯೇ ? ಅಲ್ಲ ಅವರು ನಂಬಿಕೆಯಿಡದ ಜನರಾಗಿದ್ದಾರೆ.
(37) ಅಥವ ನಿಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ ? ಅಥವಾ ಅವರು (ಆ ಭಂಡಾರಗಳ) ಸಂರಕ್ಷಕರೇ ?
(38) ಅಥವಾ ಏರಿ ಹೋಗಿ ಆಕಾಶದ ರಹಸ್ಯ ಮಾತುಗಳನ್ನು ಆಲಿಸಲು ಅವರ ಬಳಿ ಯಾವುದಾದರೂ ಏಣಿ ಇದೆಯೇ ? ಹಾಗಿದ್ದರೆ ಆಲಿಸಿದವನು ಸ್ಪಷ್ಟವಾದ ಪುರಾವೆಯನ್ನು ತರಲಿ.
(39) ಏನು ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇ ?
(40) ಅಥವಾ ಅವರು ಸಾಲದ ಭಾರವನ್ನು ಹೊರುವಂತಾಗಲು ನೀವು ಅವರಿಂದ ಪ್ರತಿಫಲವನ್ನೇನಾದರೂ ಕೇಳುತ್ತಿರುವಿರಾ ?
(41) ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರು ಅದನ್ನು ದಾಖಲಿಸುತ್ತಿದ್ದಾರೆಯೇ?
(42) ಅಥವಾ ಅವರು ಏನಾದರೂ ಕುತಂತ್ರ ಹೂಡಲು ಉದ್ದೇಶಿಸುತ್ತಾರೆಯೇ ? ಹಾಗಾದರೆ ಸತ್ಯನಿಷೇಧಿಗಳೇ ಕುತಂತ್ರಕ್ಕೆ ಬಲಿಯಾಗುವರು.
(43) ಅಥವಾ ಅವರಿಗೆ ಅಲ್ಲಾಹನ ಹೊರತು ಅನ್ಯಆರಾಧ್ಯನಿದ್ದಾನೆಯೇ ? ಅವರು ಮಾಡುತ್ತಿರುವ ದೇವಸಹಭಾಗಿತ್ವದಿಂದ ಅಲ್ಲಾಹನು ಪರಮಪಾವನನು.
(44) ಅವರು ಆಕಾಶದಿಂದ ಒಂದು ತುಂಡು ಬೀಳುತ್ತಿರುವುದಾಗಿ ಕಂಡರೂ ಅದು ದಟ್ಟವಾಗಿರುವ ಮೋಡವೆಂದು ಅವರು ಹೇಳುವರು.
(45) ಆದ್ದರಿಂದ ಮೂರ್ಛೆಗೊಳಗಾಗುವಂತಹ ಅವರ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
(46) ಅಂದು ಅವರಿಗೆ ಅವರ ಯಾವ ಕುತಂತ್ರವು ಪ್ರಯೋಜನಕಾರಿಯಾಗದು ಮತ್ತು ಅವರಿಗೆ ಸಹಾಯವೂ ಒದಗದು.
(47) ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಇದರ ಹೊರತು ಇಹಲೋಕದಲ್ಲೂ ಯಾತನೆ ಇದೆ, ಆದರೆ ಅವರಲ್ಲಿ ಅಧಿಕ ಮಂದಿ ತಿಳಿಯುವುದಿಲ್ಲ.
(48) ನೀವು ನಿಮ್ಮ ಪ್ರಭುವಿನ ತೀರ್ಪು ಬರುವವರೆಗೆ ಸಹನೆವಹಿಸಿರಿ, ನಿಸ್ಸಂಶಯವಾಗಿಯೂ ನೀವು ನಮ್ಮ ಕಣ್ಣುಗಳ ಮುಂದಿರುವಿರಿ, ನೀವು ಎದ್ದೇಳುವಾಗ ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
(49) ರಾತ್ರಿಯು ಸ್ವಲ್ಪ ಭಾಗ ಮತ್ತು ನಕ್ಷತ್ರಗಳು ಅಸ್ತಮಿಸುವ ವೇಳೆಯಲ್ಲೂ ಅವನ ಪಾವಿತ್ರö್ಯವನ್ನು ಸ್ತುತಿಸಿರಿ.