(1) ಪರಮ ದಯಾಮಯನು.
(2) ಕುರ್‌ಆನನ್ನು ಕಲಿಸಿದನು.
(3) ಅವನು ಮನುಷ್ಯನನ್ನು ಸೃಷ್ಟಿಸಿದನು.
(4) ಅವನಿಗೆ ಮಾತನಾಡಲು ಕಲಿಸಿದನು.
(5) ಸೂರ್ಯ ಹಾಗು ಚಂದ್ರ ಒಂದು ನಿಶ್ಚಿತ ಗಣನೆಯಂತೆ ಬಂಧಿತವಾಗಿದೆ.
(6) ಬಳ್ಳಿಗಳೂ ಹಾಗು ವೃಕ್ಷಗಳೂ ಅವನಿಗೆ ಸಾಷ್ಟಾಂಗವೆರಗುತ್ತವೆ.
(7) ಅವನೇ ಆಕಾಶವನ್ನು ಎತ್ತರಕ್ಕೇರಿಸಿದನು ಹಾಗು ಅವನೇ ತಕ್ಕಡಿಯನ್ನು ಸ್ಥಾಪಿಸಿದನು.
(8) ಇದೇಕೆಂದರೆ ನೀವು ತೂಕದಲ್ಲಿ ಅತಿಕ್ರಮಿಸಬಾರದೆಂದಾಗಿದೆ.
(9) ನ್ಯಾಯ ನೀತಿಯೊಂದಿಗೆ ನೀವು ತೂಕ ಮಾಡಿರಿ, ಹಾಗು ತೂಕದಲ್ಲಿ ಕಡಿತಗೊಳಿಸಬೇಡಿರಿ.
(10) ಅವನೇ ಭೂಮಿಯನ್ನು ಸೃಷ್ಟಿಗಳಿಗಾಗಿ ಉಂಟುಮಾಡಿದನು.
(11) ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗು ಕೋಶಗಳುಳ್ಳ ಖರ್ಜೂರ ಮರಗಳಿವೆ.
(12) ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.
(13) ಹಾಗಿದ್ದೂ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
(14) ಅವನು ಮಾನವನನ್ನು ಠಣಠಣಿಸುವ ಅವೆ ಮಣ್ಣಿನಿಂದ ಸೃಷ್ಟಿಸಿದನು.
(15) ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.
(16) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
(17) ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭುವಾಗಿರುವನು.
(18) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
(19) ಅವನು ಎರಡು ಸಮುದ್ರಗಳನ್ನು ಅವು ಪರಸ್ಪರ ಸ್ಪಂದಿಸುವAತೆ ಹರಿಸಿರುವನು.
(20) ಅವೆರಡರ ನಡುವೆ ಒಂದು ತೆರೆಯಿದೆ. ಅದ್ದರಿಂದ ಅವು ಅತಿಕ್ರಮಿಸುವುದಿಲ್ಲ.
(21) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
(22) ಅವೆರಡರಿಂದ ಮುತ್ತು ಹಾಗು ಹವಳಗಳು ಹೊರಬರುತ್ತವೆ.
(23) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
(24) ಸಮುದ್ರದಲ್ಲಿ ಪರ್ವತಗಳಂತೆ ಎತ್ತರವಾಗಿ (ಸಂಚರಿಸುತ್ತಿರುವ) ಹಡಗುಗಳು ಅಲ್ಲಾಹನ ಒಡೆತನದಲ್ಲಿವೆ.
(25) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ಸುಳ್ಳಾಗಿಸುವಿರಿ?
(26) ಭೂಮಿಯ ಮೇಲೆ ಇರುವುದೆಲ್ಲವೂ ನಾಶವಾಗಲಿದೆ.
(27) ಅಪಾರ ಮಹಿಮೆ ಹಾಗು ಉದಾರತೆಯುಳ್ಳ ನಿನ್ನ ಪ್ರಭುವಿನ ಅಸ್ತಿತ್ವ ಮಾತ್ರ ಉಳಿಯುವುದು.
(28) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
(29) ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲರೂ ಅವನೊಂದಿಗೆ ಬೇಡಿಕೊಳ್ಳುತ್ತಾರೆ, ಪ್ರತಿದಿನವೂ ಅವನು ಒಂದು ಕಾರ್ಯದಲ್ಲಿರುವನು.
(30) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಕೊಡಗೆಗಳನ್ನು ಅದ್ಭುತಗಳನ್ನು ಸುಳ್ಳಾಗಿಸುವಿರಿ?
(31) (ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ) ಸದ್ಯದಲ್ಲೇ ನಾವು ನಿಮ್ಮೆಡೆಗೆ ಸಂಪೂರ್ಣವಾಗಿ ಗಮನ ಹರಿಸಲಿದ್ದೇವೆ.
(32) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಉಪಕಾರಗಳನ್ನು ಸುಳ್ಳಾಗಿಸುವಿರಿ?
(33) ಓ ಜಿನ್ನ್ ಮತ್ತು ಮನುಷ್ಯರ ಸಮೂಹವೇ, ನಿಮಗೆ ಆಕಾಶಗಳ ಮತ್ತು ಭೂಮಿಯ ಸೀಮೆಗಳನ್ನು ದಾಟಿ ಹೊರಹೋಗುವ ಸಾಮರ್ಥ್ಯವಿದ್ದರೆ ಹೊರಹೋಗಿರಿ, ನೀವು ಪ್ರಚಂಡ ಶಕ್ತಿಯ ವಿನಾಃ ಹೊರಹೋಗಲಾರಿರಿ.
(34) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
(35) ನಿಮ್ಮ ಮೇಲೆ ಅಗ್ನಿಯ ಜ್ವಾಲೆಯನ್ನು ಮತ್ತು ಹೊಗೆಯನ್ನು ಬಿಡಲಾಗುವುದು. ಆಮೇಲೆ ನೀವು ಎದುರಿಸಲಾರಿರಿ.
(36) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ?
(37) ಆಕಾಶವು ಬಿರಿದು ಕೆಂಪು ಚರ್ಮದಂತೆ ಕೆಂಪಾದಾಗ.
(38) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
(39) ಆ ದಿನ ಯಾವ ಮನುಷ್ಯನಿಂದಾಗಲಿ, ಜಿನ್ನ್ನಿಂದಾಗಲಿ ಅವನ ಪಾಪದ ಕುರಿತು ವಿಚಾರಿಸಲಾಗುವುದಿಲ್ಲ.
(40) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಉಪಕಾರಗಳನ್ನು ನಿರಾಕರಿಸುತ್ತೀರಿ?
(41) ಅಪರಾಧಿಗಳು ತಮ್ಮ ಮುಖಲಕ್ಷಣಗಳಿಂದಲೇ ಗುರುತಿಸಲಾಗುವರು. ಅವರ ಮುಂದೆಲೆಯ ಕೂದಲು ಹಾಗು ಕಾಲುಗಳನ್ನು ಹಿಡಿಯಲಾಗುವುದು.
(42) ಆಗ ನೀವು ನಿಮ್ಮ ಪ್ರಭುವಿನ ಯಾವ ಯಾವ ಶಕ್ತಿ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
(43) ಅಪರಾಧಿಗಳು ಸುಳ್ಳಾಗಿಸುತ್ತಿದ್ದ ನರಕವು ಇದುವೇ ಆಗಿದೆ.
(44) ಅವರು ಆ ನರಕ ಹಾಗೂ ಕುದಿಯುತ್ತಿರುವ ನೀರಿನ ನಡುವೆ ಸುತ್ತುತ್ತಿರುವರು.
(45) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಸಾಮರ್ಥ್ಯಗಳನ್ನು ಸುಳ್ಳಾಗಿಸುವಿರಿ?
(46) ತನ್ನ ಪ್ರಭುವಿನ ಮುಂದೆ ನಿಲ್ಲುವುದನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.
(47) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಪುರಸ್ಕಾರಗಳನ್ನು ಸುಳ್ಳಾಗಿಸುವಿರಿ?
(48) ಆ ಎರಡೂ ಸ್ವರ್ಗೋದ್ಯಾನಗಳು ಅನೇಕ ರೆಂಬೆ ಕೊಂಬೆಗಳುಳ್ಳದ್ದಾಗಿರುವುವು.
(49) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(50) ಅವೆರಡರಲ್ಲಿ ಎರಡು ಚಿಲುಮೆಗಳು ಹರಿಯುತ್ತಿರುವುವು.
(51) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(52) ಅವೆರಡರಲ್ಲಿ ಪ್ರತಿಯೊಂದು ವಿಧದ ಹಣ್ಣುಹಂಪಲುಗಳ ಎರಡೆರಡು ವರ್ಗಗಳಿರುವವು.
(53) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(54) ಸ್ವರ್ಗವಾಸಿಗಳು ದಿಂಬಿಗೊರಗಿ ಕುಳಿತಿರುವ ಹಾಸಿಗೆಗಳ ಒಳಪದರಗಳು ದಪ್ಪ ರೇಶ್ಮೆಗಳಿಂದಾಗಿರುವವು, ಮತ್ತು ಆ ಎರಡೂ ಸ್ವರ್ಗೋದ್ಯಾನಗಳ ಹಣ್ಣುಹಂಪಲುಗಳು ಬಾಗಿರುವುವು.
(55) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(56) ಅದರಲ್ಲಿ ದೃಷ್ಟಿ ತಗ್ಗಿಸುವವರಾದ ಅಪ್ಸರೆಗಳಿರುವರು, ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
(57) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(58) ಆ ಅಪ್ಸರೆಗಳು ಮಾಣಿಕ್ಯ ಮತ್ತು ಹವಳಗಳಂತಿರುವರು.
(59) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(60) ಒಳಿತಿನ ಪ್ರತಿಫಲವು ಒಳಿತಿನ ಹೊರತು ಇನ್ನೇನಿದೆ?
(61) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತಗಳನ್ನು ಸುಳ್ಳಾಗಿಸುವಿರಿ?
(62) ಅವೆರಡರ ಹೊರತು ಇನ್ನೆರಡು ಸ್ವರ್ಗೋದ್ಯಾನಗಳಿವೆ.
(63) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(64) ಅವೆರಡೂ ಹಚ್ಚ ಹಸಿರು ವರ್ಣದ್ದಾಗಿವೆ.
(65) ಹಾಗಾದರೆ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
(66) ಅವುಗಳಲ್ಲಿ ಚಿಮ್ಮುವ ಎರಡು ಚಿಲುಮೆಗಳಿವೆ.
(67) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ ?
(68) ಅವೆರಡರಲ್ಲಿ ಹಣ್ಣು ಹಂಪಲುಗಳು ಮತ್ತು ಖರ್ಜೂರ ವೃಕ್ಷಗಳು ಹಾಗು ದಾಳಿಂಬೆಗಳು ಇರುವವು.
(69) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(70) ಇವುಗಳಲ್ಲಿ ಸುಶಿಲೆಯರಾದ ಸುಂದರ ತರುಣಿಯರಿರುವರು.
(71) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(72) ಆ ಅಪ್ಸರೆಯರು ಸ್ವರ್ಗದ ಗುಡಾರಗಳಲ್ಲಿರುವರು.
(73) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(74) ಇದಕ್ಕೆ ಮೊದಲು ಅವರನ್ನು ಯಾವ ಮಾನವನಾಗಲಿ, ಜಿನ್ನ್ ಆಗಲಿ ಸ್ಪರ್ಶಿಸಿರುವುದಿಲ್ಲ.
(75) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(76) ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳಲ್ಲಿ ಉನ್ನತವಾದ ಹಾಸಿಗೆಗಳ ಮೇಲೆ ದಿಂಬುಗಳಿಗೆ ಒರಗಿಕೊಂಡಿರುವರು.
(77) ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಕೊಡುಗೆಗಳನ್ನು ಸುಳ್ಳಾಗಿಸುವಿರಿ?
(78) ಅಪಾರ ಮಹಿಮೆ ಹಾಗು ಉದಾರತೆಯುಳ್ಳವನಾದ ನಿಮ್ಮ ಪ್ರಭುವಿನ ನಾಮವು ಮಹಾ ಮಂಗಳಮಯವಾಗಿರುವುದು.