56 - Al-Waaqia ()

|

(1) ಸಂಭವಿಸುವ (ಪ್ರಳಯವು) ಸಂಭವಿಸಿದಾಗ

(2) ಅದರ ಸಂಭವವನ್ನು ಸುಳ್ಳಾಗಿಸುವವನಾರಿಲ್ಲ.

(3) ಅದು (ಆ ಘಟನೆ) ಅಧಃಪತನಗೊಳಿಸುವಂತದ್ದು ಮತ್ತು ಔನ್ನತ್ಯ ನೀಡುವಂತಹದ್ದು ಆಗಿರುವುದು.

(4) ಭೂಮಿಯು ಬಲವಾಗಿ ಕಂಪಿಸಲಾಗುವಾಗ.

(5) ಪರ್ವತಗಳು ನುಚ್ಚುನೂರು ಮಾಡಲ್ಪಟ್ಟಾಗ,

(6) ಬಳಿಕ ಅವು ಚದುರಿ ಧೂಳಾಗುವುದು,

(7) ಮತ್ತು (ಆಗ) ನೀವು ಮೂರು ಗುಂಪುಗಳಾಗಿ ಬಿಡುವಿರಿ.

(8) ಒಂದು ಬಲಭಾಗದವರದ್ದು: ಅದೆಷ್ಟು ಉತ್ತಮರು ಬಲಭಾಗದವರು!

(9) ಮತ್ತೊಂದು ಎಡಭಾಗದವರದ್ದು, ಎಡಭಾಗದವರ ಎಷ್ಟು ಕೆಟ್ಟ ಸ್ಥಿತಿಯಾಗಿರುವುದು.

(10) ಸತ್ಕರ್ಮದಲ್ಲಿ ಮುಂಚೂಣಿಯಲ್ಲಿರುವವರು ಮುಂಚೂಣಿಯಲ್ಲೇ ಇರುವರು.

(11) ಇವರೇ (ಅಲ್ಲಾಹನ) ಸಾಮಿಪ್ಯ ಪಡೆದವರಾಗಿದ್ದಾರೆ.

(12) ಸುಖಾನುಗ್ರಹಗಳು ತುಂಬಿದ ಸ್ವರ್ಗೋದ್ಯಾನಗಳಲ್ಲಿರುವರು.

(13) (ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.

(14) ಮತ್ತು ಮುಂದಿನವರಲ್ಲಿ ಕೆಲವರಿರುವರು.

(15) ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.

(16) ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.

(17) ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.

(18) ಹರಿಯುತ್ತಿರುವ ಸುರದ ಚಿಲುಮೆಗಳಿಂದ ತುಂಬಲಾದ ಲೋಟಗಳು ಹೂಜಿಗಳು ಪಾನ ಪಾತ್ರೆಗಳೊಂದಿಗೆ.

(19) ಅದನ್ನು ಕುಡಿದಾಗ ಅವರಿಗೆ ತಲೆನೋವಾಗಲಿ ಬುದ್ಧಿ ಭ್ರಮಣೆಯಾಗಲಿ ಉಂಟಾಗದು.

(20) ಅವರು ಇಷ್ಟಪಡುವ ಹಣ್ಣುಹಂಪಲುಗಳಿ ರುವುದು.

(21) ಅವರಿಗೆ ಪ್ರಿಯವಾದ ಪಕ್ಷಿ ಮಾಂಸವಿರುವುದು.

(22) ಮತ್ತು ವಿಶಾಲ ನಯನಗಳುಳ್ಳ ಅಪ್ಸರೆಯರು ಇರುವರು.

(23) ಅವರು ಬಚ್ಚಿಡಲಾದ ಮುತ್ತುಗಳಂತಿರುವರು.

(24) ಇದು ಅವರ ಕರ್ಮಗಳಿಗಿರುವ ಪ್ರತಿಫಲವಾಗಿದೆ.

(25) ನಿರರ್ಥಕ ಮತ್ತು ಪಾಪದ ಮಾತುಗಳನ್ನು ಅವರು ಅಲ್ಲಿ ಆಲಿಸಲಾರರು.

(26) ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.

(27) ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !

(28) ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.

(29) ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.

(30) ಬಹುದೂರ ಹಬ್ಬಿರುವ ನೆರಳು ಇರುವುದು.

(31) ಸದಾ ಹರಿಯುತ್ತಿರುವ ನೀರು ಸಹ ಇರುವುದು.

(32) ಧಾರಾಳ ಹಣ್ಣು ಹಂಪಲುಗಳು.

(33) ಎಂದೂ ಮುಗಿಯದ ಮತ್ತು ತಡೆಹಿಡಿಯಲಾಗದ.

(34) ಮತ್ತು ಉನ್ನತವಾದ ಹಾಸಿಗೆಗಳಿರುವವು.

(35) ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.

(36) ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.

(37) ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.

(38) ಇವೆಲ್ಲ ಬಲಭಾಗದವರಿಗಾಗಿದೆ.

(39) ಅವರು ಪೂರ್ವಿಕರ ಪೈಕಿ ಅನೇಕರಿರುವರು.

(40) ಮತ್ತು ಕೊನೆಯ ಕಾಲದವರ ಪೈಕಿ ಅನೇಕರಿರುವರು.

(41) ಎಡಭಾಗದವರು ಎಡಭಾಗದವರ ಸ್ಥಿತಿಯನ್ನು ಹೇಳುವುದೇನು?

(42) ಅವರು ಅತ್ಯುಷ್ಣಗಾಳಿ ಕುದಿಯುತ್ತಿರುವ ನೀರಿನಲ್ಲಿರುವರು.

(43) ಕಪ್ಪು ಹೊಗೆಯ ನೆರಳಿನಲ್ಲಿ,

(44) ಅದುತಂಪಾಗಿರದು, ಸುಖಕರವಾಗಿಯೂ ಇರದು,

(45) ನಿಸ್ಸಂದೇಹವಾಗಿಯೂ ಇದಕ್ಕೆ ಮೊದಲು ಇವರು ಸುಖಲೋಲುಪತೆಯಲ್ಲಿ ಬೆಳೆದವರಾಗಿದ್ದರು.

(46) ಅವರು ಮಹಾ ಪಾಪಗಳಲ್ಲಿ ಹಠಸಾಧಿಸಿ ನಿಲ್ಲುತ್ತಿದ್ದರು.

(47) ಅವರು ಹೇಳುತ್ತಿದ್ದರು ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿದ್ದ ಬಳಿಕವು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವೆವೇ ?

(48) ಮತ್ತು ನಮ್ಮ ಪೂರ್ವಿಕರಾದಂತಹ ಮುತ್ತಾತಂದಿರು ಸಹ?

(49) ಹೇಳಿರಿ; ಖಂಡಿತವಾಗಿಯು ಪೂರ್ವಿಕರೂ ನಂತರದವರೂ ಸಹ;

(50) ಒಂದು ನಿರ್ದಿಷ್ಟ ದಿನದ ವೇಳೆಯಲ್ಲಿ ಸಕಲರೂ ಖಂಡಿತ ಒಟ್ಟುಗೂಡಿಸಲಾಗುವರು.

(51) ತರುವಾಯ ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ.

(52) ಖಂಡಿತ ನೀವು ಝಕ್ಕೂಮ್ (ವಿಷಕಳ್ಳಿಗಿಡ) ಮರವನ್ನು ತಿನ್ನಲಿರುವಿರಿ.

(53) ಮತ್ತು ಅದರಿಂದಲೇ ಹೊಟ್ಟೆ ತುಂಬಿಸುವಿರಿ.

(54) ಬಳಿಕ ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.

(55) ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.

(56) ಇದು ಪ್ರತಿಫಲದ ದಿನ ಅವರಿಗಿರುವ ಸತ್ಕಾರವಾಗಿದೆ,

(57) ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?

(58) ಸರಿ ನೀವು ಸ್ರವಿಸುವ ವೀರ್ಯದ ಕುರಿತು ಯೋಚಿಸಿದ್ದೀರಾ ?

(59) ಅದರಿಂದ ಮಾನವನನ್ನು ಸೃಷ್ಟಿಸುವವರು ನೀವೋ ? ಅಥವ ಸೃಷ್ಟಿಸುವವರು ನಾವೋ ?

(60) ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದ್ದೇವೆ. ಮತ್ತು ನಾವು ಖಂಡಿತಅಶಕ್ತರಲ್ಲ.

(61) ನಿಮ್ಮ ಬದಲಿಗೆ ನಿಮ್ಮಂತಿರುವ ಇತರರನ್ನು ತರಲು ಹಾಗು ನಿಮಗೆ (ಒಂದಿಷ್ಟೂ) ಅರಿವಿಲ್ಲದ ವಿಧದಲ್ಲಿ ನಿಮ್ಮನ್ನು ಸೃಷ್ಟಿಸಲು ನಾವು ಅಶಕ್ತರಲ್ಲ.

(62) ಖಂಡಿತವಾಗಿಯು ನಿಮಗೆ ಮೊದಲ ಬಾರಿಯ ಸೃಷ್ಟಿಯ ಅರಿವಿದೆ. ಹಾಗಿದ್ದೂ ನೀವೇಕೆ ಉಪದೇಶ ಸ್ವೀಕರಿಸುವುದಿಲ್ಲ.

(63) ನೀವು ಬಿತ್ತುತ್ತಿರುವುದರ ಬಗ್ಗೆ ಯೋಚಿಸಿದ್ದೀರಾ ?

(64) ಅದನ್ನು ಮೊಳೆಯಿಸುತ್ತಿರುವವರು ನೀವೋ ಅಥವ ಮೊಳೆಯಿಸುವವರು ನಾವೋ ?

(65) ನಾವು ಇಚ್ಛಿಸುತ್ತಿದ್ದರೆ ಅದನ್ನು ನುಚ್ಚುನೂರು ಮಾಡಿಬಿಡುತ್ತಿದ್ದೆವು ಆಗ ನೀವು ದಿಗ್ಭಾçಂತರಾಗಿ ಹೇಳುತ್ತಿದ್ದೀರಿ;

(66) ನಮ್ಮ ಮೇಲೆ ದಿವಾಳಿತನವೇ ಎರಗಿಬಿಟ್ಟಿತು.

(67) ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.

(68) ನೀವು ಕುಡಿಯುತ್ತಿರುವ ನೀರಿನ ಬಗ್ಗೆ ಯೋಚಿಸಿದ್ದೀರಾ ?

(69) ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?

(70) ನಾವು ಇಚ್ಛಿಸುತ್ತಿದ್ದರೆ ಅದನ್ನು ಕಡು ಉಪ್ಪನ್ನಾಗಿ ಮಾಡುತ್ತಿದ್ದೆವು, ಹಾಗಿದ್ದೂ ನೀವು ಕೃತಜ್ಞತೆ ಸಲ್ಲಿಸುವುದಿಲ್ಲವೇ?

(71) ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?

(72) ಅದರ ಮರವನ್ನು ಸೃಷ್ಟಿಸುವವರು ನೀವೋ ? ಅಥವ ಅದನ್ನು ಸೃಷ್ಟಿಸುವವರು ನಾವೋ ?

(73) ನಾವು ಆ ಮರವನ್ನು ಉಪದೇಶಕ್ಕಿರುವ ಮಾರ್ಗ ಹಾಗು ಯಾತ್ರಿಕರ ಅನುಕೂಲದ ವಸ್ತುವನ್ನಾಗಿ ಮಾಡಿದ್ದೇವೆ.

(74) (ಓ ಪೈಗಂಬರರೇ) ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.

(75) ನಾನು ನಕ್ಷತ್ರಗಳ ಪತನದ ಆಣೆ ಹಾಕುತ್ತೇನೆ.

(76) ನೀವು ಅರಿಯುವವರಾಗಿದ್ದರೆ ಇದೊಂದು ಮಹಾ ಆಣೆಯಾಗಿದೆ.

(77) ನಿಸ್ಸಂದೇಹವಾಗಿಯೂ ಇದು ಮಹಾ ಆದರಣಿಯ ಕುರ್‌ಆನ್ ಆಗಿದೆ.

(78) ಇದು ಸುರಕ್ಷಿತ ಗ್ರಂಥದಲ್ಲಿದೆ.

(79) ಪರಿಶುದ್ಧರಲ್ಲದೇ ಬೇರಾರು ಇದನ್ನು ಸ್ಪರ್ಶಿಸಲಾರರು.

(80) ಇದು ಸರ್ವ ಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.

(81) ಹೀಗಿದ್ದೂ ನೀವು ಈ ವಚನವನ್ನು ಕಡೆಗಣಿಸುತ್ತಿರುವಿರಾ ?

(82) ನೀವು ಸುಳ್ಳಾಗಿಸುವುದನ್ನೇ ನಿಮ್ಮ ಚಾಳಿಯನ್ನಾಗಿ ಮಾಡಿಕೊಳ್ಳುತ್ತಿರುವಿರಾ ?

(83) ಆತ್ಮವು ಗಂಟಲಿನವರೆಗೆ ತಲುಪಿದಾಗ (ಅದನ್ನು ತಡೆದು ಕೊಳ್ಳುವುದಿಲ್ಲವೇಕೆ ?)

(84) ನೀವು ಆಗ ನೋಡುತ್ತಲೇ ಇರುವಿರಿ.

(85) ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.

(86) ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.

(87) ಮತ್ತು ನೀವು ಈ ಮಾತಿನಲ್ಲಿ ಸತ್ಯವಂತರಾಗಿದ್ದರೆ ಈ ಆತ್ಮವನ್ನು ಮರಳಿ ತರುವುದಿಲ್ಲವೇಕೆ ?

(88) ಇನ್ನು ಮರಣ ಹೊಂದುವ ವ್ಯಕ್ತಿಯು ಅಲ್ಲಾಹನ ಸಾಮಿಪ್ಯವನ್ನು ಪಡೆದವನಾಗಿದ್ದರೆ.

(89) ಅವನಿಗೆ ನೆಮ್ಮದಿಯಿರುವುದು ಮತ್ತು ಆಹಾರಗಳಿರುವುವು ಹಾಗು ಅನುಗ್ರಹಪೂರ್ಣ ಸ್ವರ್ಗೋದ್ಯಾನವಿರುವುದು.

(90) ಅವನು ಬಲಭಾಗದವರಲ್ಲಾಗಿದ್ದರೆ.

(91) ನೀನು ಬಲಭಾಗದವರಲ್ಲಿ ಸೇರಿದುದರಿಂದ ನಿನ್ನ ಮೇಲೆ ಶಾಂತಿಯಿರಲಿ ಎಂದು ಹೇಳಲಾಗುವುದು.

(92) ಆದರೆ ಅವನು ಸುಳ್ಳಾಗಿಸುವ ಮಾರ್ಗಭ್ರಷ್ಟರಲ್ಲಿ ಸೇರಿದವನಾಗಿದ್ದರೆ.

(93) ಅವನಿಗೆ ಕುದಿಯುವ ನೀರಿನ ಸತ್ಕಾರವಿರುವುದು.

(94) ಮತ್ತು ಅವನಿಗೆ ನರಕಾಗ್ನಿಯಲ್ಲಿ ಪ್ರವೇಶವಿದೆ.

(95) ಖಂಡಿತ ಇವೆಲ್ಲಾ ಸತ್ಯ ಹಾಗು ಖಚಿತವಾಗಿವೆ.

(96) ಆದ್ದರಿಂದ ನೀವು ಮಹಾನನಾದ ನಿಮ್ಮ ಪ್ರಭುವಿನ ನಾಮದ ಪಾವಿತ್ರö್ಯವನ್ನು ಕೊಂಡಾಡಿರಿ.