(1) ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವ ಅಲ್ಲಾಹುವಿನ ನಾಮದಿಂದ.
(2) ಸರ್ವಲೋಕ ಪರಿಪಾಲಕನಾಗಿರುವ ಅಲ್ಲಾಹುವಿಗೆ ಸರ್ವಸ್ತುತಿ.
(3) ಪರಮ ದಯಾಮಯನೂ, ಕರುಣಾನಿಧಿಯೂ,
(4) ಪ್ರತಿಫಲ ದಿನದ ಮಾಲಿಕನೂ ಆಗಿರುವ (ಅಲ್ಲಾಹುವಿಗೆ).
(5) ನಾವು ನಿನ್ನನ್ನು ಮಾತ್ರ ಆರಾಧಿಸುವೆವು. ನಾವು ನಿನ್ನಿಂದ ಮಾತ್ರ ಸಹಾಯ ಯಾಚಿಸುವೆವು.(1)
1. ಆರಾಧನೆ ಮತ್ತು ಸಹಾಯಯಾಚನೆ ಅಬೇಧ್ಯ ಸಂಬಂಧವಿರುವ ವಿಷಯಗಳಾಗಿವೆ. ಜನರು ವಿವಿಧ ವ್ಯಕ್ತಿಗಳನ್ನು ಮತ್ತು ವಿವಿಧ ಶಕ್ತಿಗಳನ್ನು ಆರಾಧಿಸುತ್ತಿರುವುದು ಆ ಆರಾಧ್ಯರಿಂದ ಅಲೌಕಿಕವಾದ ರೀತಿಯಲ್ಲಿ ಏನಾದರೂ ಸಹಾಯ ದೊರೆಯಬಹುದೆಂಬ ನಿರೀಕ್ಷೆಯಿಂದಾಗಿದೆ. ಜಗದೊಡೆಯನ ಹೊರತು ಯಾರಿಂದಲೂ ಅಲೌಕಿಕವಾದ ಸಹಾಯ ನಿರೀಕ್ಷಿಸುವುದು ಮತ್ತು ಅದಕ್ಕಾಗಿ ಪ್ರಾರ್ಥಿಸುವುದು ಇಸ್ಲಾಮ್ ಕಲಿಸುವ ಏಕದೇವ ಸಿದ್ಧಾಂತಕ್ಕೆ ವಿರುದ್ಧವಾಗಿದೆ.
(6) ನಮ್ಮನ್ನು ನೇರವಾದ ಮಾರ್ಗದಲ್ಲಿ ಮುನ್ನಡೆಸು. (2)
2. ನಿಷ್ಕಳಂಕವಾದ ಏಕದೇವಾರಾಧನೆಯ ಮಾರ್ಗದಲ್ಲಿ, ಅಲ್ಲಾಹುವಿನೊಂದಿಗೆ ನೇರವಾಗಿ ಪ್ರಾರ್ಥಿಸುವ ಮಾರ್ಗದಲ್ಲಿ, ಪ್ರವಾದಿಗಳು ಮತ್ತು ಸಜ್ಜನರು ಅನುಸರಿಸಿದ ನೇರವಾದ ಮಾರ್ಗದಲ್ಲಿ ನಮ್ಮನ್ನು ಮುನ್ನಡೆಸು ಎಂದರ್ಥ.
(7) ಅಂದರೆ ನೀನು ಅನುಗ್ರಹಿಸಿದವರ ಮಾರ್ಗದಲ್ಲಿ; ಕ್ರೋಧಕ್ಕೀಡಾದವರ ಮಾರ್ಗದಲ್ಲಲ್ಲ.(3) ಪಥಭ್ರಷ್ಟರಾದವರ ಮಾರ್ಗದಲ್ಲೂ ಅಲ್ಲ.
3. ‘ಕ್ರೋಧಕ್ಕೀಡಾದವರು’ ಎಂಬ ಪದದ ವ್ಯಾಪ್ತಿಯಲ್ಲಿ ಅವಿಶ್ವಾಸ, ಸತ್ಯನಿಷೇಧ ಮತ್ತು ಹಟಮಾರಿತನವನ್ನು ಮೈಗೂಡಿಸಿಕೊಂಡವರೆಲ್ಲರೂ ಸೇರುತ್ತಾರಾದರೂ ಇಲ್ಲಿ ಪ್ರಮುಖವಾಗಿ ಉದ್ದೇಶಿಸಲಾಗಿರುವುದು, ದೈವಿಕ ಗ್ರಂಥದ ವಾಹಕರೆಂದು ಹೆಮ್ಮೆಪಡುವುದರೊಂದಿಗೆ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಅಲ್ಲಾಹುವಿನ ವಚನಗಳನ್ನು ದುವ್ರ್ಯಾಖ್ಯಾನ ಮಾಡಿದ ಕಾರಣದಿಂದ ಅವನ ಕೋಪಕ್ಕೀಡಾದ ಯಹೂದಿಗಳನ್ನಾಗಿದೆ. ಈ ನಿಲುವನ್ನು ಹೊಂದಿರುವ ಯಾವುದೇ ಸಮುದಾಯದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ‘ಪಥಭ್ರಷ್ಟರು’ ಎಂದರೆ ಇಲ್ಲಿ ಪ್ರಮುಖವಾಗಿ ಉದ್ದೇಶಿಸಲಾಗಿರುವುದು ಈಸಾ(ಅ) ರನ್ನು ದೇವಪುತ್ರರಾಗಿ ಮತ್ತು ಪುರೋಹಿತಶಾಹಿಯನ್ನು ಧರ್ಮದ ಬುನಾದಿಯಾಗಿ ಮಾಡಿಕೊಂಡ ಕ್ರೈಸ್ತರನ್ನಾಗಿದೆ. ದೈವಿಕ ಸಂದೇಶ ಲಭಿಸಿಯೂ ವ್ಯತಿಚಲಿಸಿದ ಯಾವುದೇ ಸಮುದಾಯವೂ ದಾರಿತಪ್ಪಿದ ಸಮುದಾಯವೇ ಆಗಿದೆ.