(1) ತನ್ನ ದಾಸನನ್ನು (ಪ್ರವಾದಿಯವರನ್ನು) ಒಂದು ರಾತ್ರಿಯಲ್ಲಿ ಮಸ್ಜಿದುಲ್ ಹರಾಮ್‍ನಿಂದ, ನಾವು ಪರಿಸರವನ್ನು ಅನುಗ್ರಹಪೂರ್ಣಗೊಳಿಸಿರುವಂತಹ ಮಸ್ಜಿದುಲ್ ಅಕ್ಸಾದೆಡೆಗೆ, ನಮ್ಮ ದೃಷ್ಟಾಂತಗಳಲ್ಲಿ ಕೆಲವನ್ನು ಅವರಿಗೆ ತೋರಿಸಿಕೊಡುವ ಸಲುವಾಗಿ ನಿಶಾಪ್ರಯಾಣ ಮಾಡಿಸಿದವನು ಪರಮ ಪಾವನನಾಗಿರುವನು!(539) ಖಂಡಿತವಾಗಿಯೂ ಅವನು (ಅಲ್ಲಾಹು) ಎಲ್ಲವನ್ನು ಆಲಿಸುವವನೂ, ವೀಕ್ಷಿಸುವವನೂ ಆಗಿರುವನು.
539. ಅಲ್ಲಾಹು ಮುಹಮ್ಮದ್(ಸ) ರವರನ್ನು ಒಂದೇ ರಾತ್ರಿಯಲ್ಲಿ ಮಕ್ಕಾದಿಂದ ಪ್ಯಾಲಸ್ತೀನ್‍ನಲ್ಲಿರುವ ಮಸ್ಜಿದುಲ್ ಅಕ್ಸಾ (ಬೈತುಲ್ ಮುಕದ್ದಿಸ್)ಗೆ, ತರುವಾಯ ಅಲ್ಲಿಂದ ಆಕಾಶಗಳಿಗೆ ಕೊಂಡೊಯ್ದು, ಬಳಿಕ ಮಕ್ಕಕ್ಕೆ ಮರಳಿಸಿದನು. ಇದೊಂದು ಮುಅ್‌ಜಿಝತ್ (ಅಸಾಮಾನ್ಯ ಘಟನೆ) ಆಗಿತ್ತು. ಇದು ಜರುಗಿದ್ದು ಹಿಜ್ರಾದ ಒಂದು ವರ್ಷ ಹಿಂದಿನ ರಬೀಉಲ್ ಅವ್ವಲ್ 17ನೇ ರಾತ್ರಿಯಲ್ಲಾಗಿತ್ತೆಂದು ಕೆಲವು ವ್ಯಾಖ್ಯಾನಕಾರರು ಹೇಳಿದ್ದಾರೆ. ಮಸ್ಜಿದುಲ್ ಅಕ್ಸಾದೆಡೆಗಿರುವ ನಿಶಾಯಾತ್ರೆಯನ್ನು ‘ಇಸ್ರಾಅ್’ ಎಂದು ಕರೆಯಲಾದರೆ ತರುವಾಯ ಜರುಗಿದ ಆಕಾಶಾರೋಹಣವನ್ನು ‘ಮಿಅ್‌ರಾಜ್’ ಎಂದು ಕರೆಯಲಾಗುತ್ತದೆ. ಮಸ್ಜಿದುಲ್ ಅಕ್ಸಾದ ಪರಿಸರವು ಕೃಷಿ ಮತ್ತು ತೋಟಗಳಿಂದ ಸಮೃದ್ಧವಾಗಿರುವ ಹಾಗೂ ಜನವಾಸಕ್ಕೆ ಯೋಗ್ಯವಾಗಿರುವ ಭೂಪ್ರದೇಶವಾಗಿದೆ.
(2) ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅದನ್ನು ನಾವು ಇಸ್ರಾಈಲ್ ಸಂತತಿಗಳಿಗೆ ಮಾರ್ಗದರ್ಶಿಯನ್ನಾಗಿ ಮಾಡಿದೆವು. “ನನ್ನ ಹೊರತು ಇನ್ನಾರನ್ನೂ ನೀವು ರಕ್ಷಕರನ್ನಾಗಿ ಮಾಡಿಕೊಳ್ಳದಿರಿ” ಎಂದು (ಆದೇಶ ನೀಡುವ ಗ್ರಂಥವಾಗಿತ್ತದು).
(3) ನಾವು ನೂಹ್‍ರೊಂದಿಗೆ ಹಡಗಿನಲ್ಲಿ ಹತ್ತಿಸಿದವರ ಸಂತತಿಗಳೇ! ಖಂಡಿತವಾಗಿಯೂ ಅವರು (ನೂಹ್) ಅತ್ಯಂತ ಕೃತಜ್ಞ ದಾಸರಾಗಿದ್ದರು.
(4) ಖಂಡಿತವಾಗಿಯೂ ನೀವು ಭೂಮಿಯಲ್ಲಿ ಎರಡು ಬಾರಿ ಕ್ಷೋಭೆಯನ್ನುಂಟುಮಾಡುವಿರಿ ಮತ್ತು ಮಹಾಗರ್ವವನ್ನು ತೋದ್ದೀರಿ ಎಂದು ನಾವು ಗ್ರಂಥದಲ್ಲಿ ಇಸ್ರಾಈಲ್ ಸಂತತಿಗಳಿಗೆ ವಿಧಿಯನ್ನು ನೀಡಿರುವೆವು.
(5) ಅವೆರಡರಲ್ಲಿ ಮೊದಲನೆಯದಕ್ಕೆ ನಿಶ್ಚಯಿಸಲಾದ (ಶಿಕ್ಷೆಯ) ಸಮಯವು ಬಂದರೆ ಮಹಾಶೂರರಾದ ನಮ್ಮ ಕೆಲವು ದಾಸರನ್ನು ನಾವು ನಿಮ್ಮ ವಿರುದ್ಧ ಕಳುಹಿಸುವೆವು. ಅವರು ಮನೆಮನೆಗಳ ಮಧ್ಯೆ (ನಿಮ್ಮನ್ನು) ಹುಡುಕುತ್ತಾ ಸಾಗುವರು.(540) ಖಂಡಿತವಾಗಿಯೂ ಅದು ಕಾರ್ಯರೂಪಕ್ಕೆ ತರಲಾದ ಒಂದು ವಾಗ್ದಾನವಾಗಿದೆ.(541)
540. ಅವರು ನಿಮ್ಮನ್ನು ಕೊಲ್ಲಲು ಮತ್ತು ಸೊತ್ತನ್ನು ಲೂಟಿ ಮಾಡಲು ಜನವಾಸವಿರುವ ಸ್ಥಳಗಳಲ್ಲೆಲ್ಲ ಹುಡುಕುವರು ಎಂದರ್ಥ. 541. ಕುರ್‌ಆನ್ ಹೇಳುವ ಈ ಘಟನೆಯು ಯಾವುದೆಂಬ ಬಗ್ಗೆ ವ್ಯಾಖ್ಯಾನಕಾರರಲ್ಲಿ ಭಿನ್ನಮತವಿದೆ. ಯಹೂದರ ಮೇಲೆ ದಾಳಿ ಮಾಡಿದ ಮೂವರು ಅರಸರ ಹೆಸರುಗಳನ್ನು ಇಲ್ಲಿ ಉದ್ಧರಿಸಲಾಗುತ್ತದೆ. ಒಂದು: ಜಾಲೂತ್ ಅಥವಾ ಗೋಲಿಯತ್. ಎರಡು: ಬಾಬಿಲೋನಿಯಾದ ಸಿನ್‍ಹಾರಿಬ್. ಮೂರು: ಬುಖ್‍ತುನಝರ್ ಅಥವಾ ನೆಬೂಕಡ್‍ನಝರ್ ಎಂಬ ಬಾಬಿಲೋನಿಯನ್ ಚಕ್ರವರ್ತಿ. ಯಹೂದಿಗಳು ಅಕ್ರಮ ಮತ್ತು ಅಹಂಕಾರದ ತುತ್ತತುದಿಯಲ್ಲಿ ವಿಹರಿಸುತ್ತಿದ್ದಾಗ ಉಗ್ರ ದಾಳಿಯ ಮೂಲಕ ಅವರನ್ನು ನಿರ್ನಾಮ ಮಾಡಿದ ಮಹಾಶೂರನಾದ ನೆಬೂಕಡ್‍ನಝರ್‌ನನ್ನಾಗಿರಬಹುದು ಇಲ್ಲಿ ಸೂಚಿಸಿರುವುದು.
(6) ತರುವಾಯ ನಾವು ಅವರಿಗೆದುರಾಗಿ ನಿಮಗೆ ಗೆಲುವನ್ನು ಮರಳಿ ನೀಡಿದೆವು.(542) ಸಂಪತ್ತು ಮತ್ತು ಸಂತತಿಗಳ ಮೂಲಕ ನಾವು ನಿಮ್ಮನ್ನು ಬಲಪಡಿಸಿದೆವು. ನಿಮ್ಮನ್ನು ಅಧಿಕ ಜನಬಲವುಳ್ಳವರನ್ನಾಗಿಯೂ ಮಾಡಿದೆವು.
542. ನಂತರ ಶತ್ರುಗಳ ವಿರುದ್ಧ ಯಹೂದಿಗಳು ಗೆಲುವು ಪಡೆದರು, ಸೆರೆಯಾಳುಗಳನ್ನು ಬಿಡಿಸಿದರು ಮತ್ತು ಲೂಟಿಯಾದ ಸಂಪತ್ತುಗಳನ್ನು ಮರಳಿ ವಶಪಡಿಸಿದರು.
(7) ನೀವು ಸತ್ಕರ್ಮವೆಸಗುವುದಾದರೆ ನೀವು ಸತ್ಕರ್ಮವೆಸಗುವುದು ನಿಮ್ಮ ಒಳಿತಿಗೇ ಆಗಿದೆ. ನೀವು ದುಷ್ಕರ್ಮವೆಸಗುವುದಾದರೆ (ಅದರ ದುಷ್ಪರಿಣಾಮವು) ನಿಮಗೇ ಆಗಿದೆ. ತರುವಾಯ (ಅವೆರಡರ ಪೈಕಿ) ಕೊನೆಯದಕ್ಕೆ ನಿಶ್ಚಯಿಸಲಾದ (ಶಿಕ್ಷೆಯ) ಸಮಯವು ಬಂದರೆ ನಿಮ್ಮ ಮುಖಗಳನ್ನು ಅಪಕೀರ್ತಿಗೊಳಿಸುವ ಸಲುವಾಗಿ ಮತ್ತು ಅವರು ಮೊದಲನೆ ಬಾರಿ ಆರಾಧನಾಲಯವನ್ನು ಪ್ರವೇಶಿಸಿದಂತೆ ಅದರ ಬಳಿಕವೂ ಪ್ರವೇಶಿಸುವ ಸಲುವಾಗಿ ಹಾಗೂ ಅವರು ವಶಪಡಿಸಿರುವುದೆಲ್ಲವನ್ನೂ ಅವರು ಧ್ವಂಸಗೊಳಿಸುವ ಸಲುವಾಗಿ (ನಾವು ಶತ್ರುಗಳನ್ನು ಕಳುಹಿಸುವೆವು).(543)
543. ಯಹೂದಿಗಳು ಅಕ್ರಮ ಮತ್ತು ಅಹಂಕಾರದ ಪರಾಕಾಷ್ಠೆಯಲ್ಲಿದ್ದಾಗ ಶತ್ರುಗಳ ಕೈಯಿಂದ ಅವರನ್ನು ಅಲ್ಲಾಹು ನಾಶ ಮಾಡುವ ಎರಡನೇ ಸಂದರ್ಭವು ಈಗಾಗಲೇ ಸಂಭವಿಸಿದೆಯೋ ಇಲ್ಲವೋ ಎಂಬುದನ್ನು ಖಚಿತವಾಗಿ ಹೇಳಲು ಯಾವುದೇ ಆಧಾರಗಳಿಲ್ಲ. ಅಸ್ಪಿಯಾನೋಸ್ ಎಂಬ ಹೆಸರಿನ ರೋಮನ್ ಚಕ್ರವರ್ತಿ ಯಹೂದರ ಮೇಲೆ ಮಾಡಿದ ಆಕ್ರಮಣವು ಈ ಎರಡನೇ ಸಂದರ್ಭವಾಗಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
(8) ನಿಮ್ಮ ರಬ್ ನಿಮಗೆ ದಯೆ ತೋರಲೂ ಬಹುದು. ನೀವು ಪುನರಾವರ್ತಿಸುವುದಾದರೆ ನಾವೂ ಪುನರಾವರ್ತಿಸುವೆವು.(544) ನಾವು ನರಕಾಗ್ನಿಯನ್ನು ಸತ್ಯನಿಷೇಧಿಗಳಿಗೆ ಒಂದು ಸೆರೆಮನೆಯನ್ನಾಗಿ ಮಾಡಿರುವೆವು.
544. ನೀವು ಅತಿಕ್ರಮಗಳನ್ನು ಪುನರಾವರ್ತಿಸುವುದಾದರೆ ಅಲ್ಲಾಹು ಶಿಕ್ಷಾಕ್ರಮಗಳನ್ನೂ ಪುನರಾವರ್ತಿಸುವನು ಎಂದರ್ಥ.
(9) ಖಂಡಿತವಾಗಿಯೂ ಈ ಕುರ್‌ಆನ್ ಅತ್ಯಂತ ನೇರವಾಗಿರುವ ಮಾರ್ಗದೆಡೆಗೆ ಮುನ್ನಡೆಸುತ್ತದೆ ಮತ್ತು ಸತ್ಕರ್ಮವೆಸಗುವ ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲವಿದೆಯೆಂಬ ಶುಭವಾರ್ತೆಯನ್ನು ತಿಳಿಸುತ್ತದೆ.
(10) ಪರಲೋಕದಲ್ಲಿ ವಿಶ್ವಾಸವಿಡದವರಾರೋ ಅವರಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು ಎಂಬ (ಶುಭವಾರ್ತೆಯನ್ನೂ ತಿಳಿಸುತ್ತದೆ).
(11) ಮನುಷ್ಯನು ಒಳಿತಿಗಾಗಿ ಪ್ರಾರ್ಥಿಸುವಂತೆಯೇ ಕೆಡುಕಿಗಾಗಿಯೂ ಪ್ರಾರ್ಥಿಸುವನು. ಮನುಷ್ಯನು ಬಹಳ ಆತುರಪಡುವವನಾಗಿರುವನು.(545)
545. ಇಲ್ಲಿ ಪ್ರಸ್ತಾಪಿಸಲಾಗಿರುವುದು ಅಲ್ಲಾಹುವಿನ ಶಿಕ್ಷೆಯ ಬಗ್ಗೆ ಪ್ರವಾದಿ(ಸ) ರವರು ಮುನ್ನೆಚ್ಚರಿಕೆ ನೀಡಿದಾಗ ಅದಕ್ಕಾಗಿ ಆತುರಪಟ್ಟವರ ಬಗ್ಗೆಯಾಗಿದೆ.
(12) ರಾತ್ರಿ ಮತ್ತು ಹಗಲನ್ನು ನಾವು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು. ರಾತ್ರಿಯೆಂಬ ದೃಷ್ಟಾಂತವನ್ನು ನಾವು ಮಬ್ಬಾಗಿ ಮಾಡಿರುವೆವು ಮತ್ತು ಹಗಲೆಂಬ ದೃಷ್ಟಾಂತವನ್ನು ಪ್ರಕಾಶಮಾನವಾಗಿ ಮಾಡಿರುವೆವು. ಇದು ನೀವು ನಿಮ್ಮ ರಬ್‌ನ ಕಡೆಯ ಅನುಗ್ರಹವನ್ನು ಅರಸುವ ಸಲುವಾಗಿ ಮತ್ತು ವರ್ಷಗಳ ಎಣಿಕೆ ಹಾಗೂ ಲೆಕ್ಕವನ್ನು ಅರಿತುಕೊಳ್ಳುವ ಸಲುವಾಗಿದೆ. ನಾವು ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ವಿವರಿಸಿರುವೆವು.
(13) ಪ್ರತಿಯೊಬ್ಬ ವ್ಯಕ್ತಿಗೂ ಅವನ ಶಕುನವನ್ನು ನಾವು ಅವನ ಕೊರಳಿನಲ್ಲಿಯೇ ಬಂಧಿಸಿರುವೆವು.(546) ಪುನರುತ್ಥಾನ ದಿನದಂದು ನಾವು ಅವನಿಗೋಸ್ಕರ ಒಂದು ಗ್ರಂಥವನ್ನು ಹೊರತರುವೆವು. ಅವನು ಅದನ್ನು ತೆರೆದಿಟ್ಟಿರುವುದಾಗಿ ಕಾಣುವನು.
546. ‘ತ್ವಾಇರ್’ ಎಂಬ ಪದದ ಭಾಷಿಕ ಅರ್ಥವು ಹಕ್ಕಿ ಎಂದಾಗಿದೆ. ಹಕ್ಕಿಯೊಂದನ್ನು ಹಾರಿಸಿ ಅದು ಹಾರುವುದು ಬಲಗಡೆಗೋ ಅಥವಾ ಎಡಗಡೆಗೋ ಎಂಬುದರ ಆಧಾರದಲ್ಲಿ ಶಕುನವನ್ನು ನಿರ್ಧರಿಸುವ ಪದ್ಧತಿಯು ಅರೇಬಿಯಾದಲ್ಲಿತ್ತು. ತನ್ನಿಮಿತ್ತ ‘ತ್ವಾಇರ್’ ಎಂಬ ಪದವನ್ನು ಶಕುನಕ್ಕೆ ಪರ್ಯಾಯವಾಗಿ ಬಳಸಲಾಯಿತು. ಪ್ರಸ್ತುತ ಸೂಕ್ತಿಯು ಶಕುನದಲ್ಲಿರುವ ವಿಶ್ವಾಸವನ್ನು ನಿರಾಕರಿಸುತ್ತದೆ ಮತ್ತು ಯಾವುದೇ ವ್ಯಕ್ತಿಯ ವಿಧಿನಿಯತಿಯನ್ನು ನಿರ್ಧರಿಸುವುದು ಅವನ ಕರ್ಮಗಳಾಗಿವೆ ಎಂಬುದನ್ನು ಸ್ಥಾಪಿಸುತ್ತದೆ.
(14) “ನಿನ್ನ ಗ್ರಂಥವನ್ನು ಓದು! ನಿನ್ನನ್ನು ವಿಚಾರಣೆ ಮಾಡಲು ಇಂದು ನೀನೇ ಸಾಕು!” (ಎಂದು ಅವನೊಂದಿಗೆ ಹೇಳಲಾಗುವುದು).
(15) ಯಾರಾದರೂ ಸನ್ಮಾರ್ಗವನ್ನು ಪಡೆಯುವುದಾದರೆ ಅವನದನ್ನು ಪಡೆಯುವುದು ಅವನದೇ ಒಳಿತಿಗಾಗಿದೆ. ಯಾರಾದರೂ ಪಥಭ್ರಷ್ಟನಾಗುವುದಾದರೆ ಅವನ ಕೆಡುಕಿಗಾಗಿಯೇ ಅವನು ಪಥಭ್ರಷ್ಟನಾಗುತ್ತಾನೆ. ಪಾಪಭಾರವನ್ನು ಹೊರುವ ಯಾರೂ ಬೇರೊಬ್ಬನ ಪಾಪಭಾರವನ್ನು ಹೊರಲಾರನು. ಒಬ್ಬ ಸಂದೇಶವಾಹಕರನ್ನು ಕಳುಹಿಸುವ ತನಕ ನಾವು (ಯಾರನ್ನೂ) ಶಿಕ್ಷಿಸಲಾರೆವು.(547)
547. ಪ್ರವಾದಿಯ ಬಗ್ಗೆ ಅಥವಾ ಗ್ರಂಥದ ಬಗ್ಗೆ ಅರಿತುಕೊಳ್ಳಲು ಒಮ್ಮೆಯೂ ಅವಕಾಶ ಸಿಗದ ವ್ಯಕ್ತಿ ಶಿಕ್ಷಾರ್ಹನಾಗಲಾರನೆಂದು ಇದರಿಂದ ಗ್ರಹಿಸಬಹುದು.
(16) ನಾವು ಯಾವುದೇ ಊರನ್ನು ನಾಶ ಮಾಡಲು ಬಯಸಿದರೆ ಅದರಲ್ಲಿರುವ ಸುಖಲೋಲುಪರಿಗೆ ಆದೇಶ ನೀಡುವೆವು. ಆದರೆ (ಅದನ್ನು ಕಡೆಗಣಿಸಿ) ಅವರು ಅಲ್ಲಿ ಸ್ವೇಚ್ಛಾಚಾರದೊಂದಿಗೆ ವರ್ತಿಸುವರು. ಆಗ (ಶಿಕ್ಷೆಯ) ಮಾತು ಅದರ (ಆ ಊರಿನವರ) ವಿಷಯದಲ್ಲಿ ಸ್ಥಿರಪಡುವುದು. ತರುವಾಯ ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡುವೆವು.
(17) ನೂಹ್‍ರ ನಂತರ ಎಷ್ಟೊಂದು ತಲೆಮಾರುಗಳನ್ನು ನಾವು ನಾಶ ಮಾಡಿರುವೆವು! ತನ್ನ ದಾಸರ ಪಾಪಗಳ ಬಗ್ಗೆ ಸೂಕ್ಷ್ಮ ಅರಿವುಳ್ಳವನಾಗಿ ಮತ್ತು ವೀಕ್ಷಿಸುವವನಾಗಿ ತಮ್ಮ ರಬ್ ಸಾಕು.
(18) ಯಾರಾದರೂ ಕ್ಷಣಿಕವಾಗಿರುವುದನ್ನು (ಇಹಲೋಕವನ್ನು) ಬಯಸುವುದಾದರೆ ಅವರಿಗೆ ಅಥವಾ (ಅವರ ಪೈಕಿ) ನಾವಿಚ್ಛಿಸುವವನಿಗೆ, ನಾವಿಚ್ಛಿಸುವುದನ್ನು ಇಲ್ಲಿಯೇ ತ್ವರಿತವಾಗಿ ನೀಡುವೆವು. ತರುವಾಯ ಅವನಿಗೆ ನಾವು ನರಕಾಗ್ನಿಯನ್ನು ನೀಡುವೆವು. ಅವನು ಅಪಮಾನಿತನಾಗಿ ಮತ್ತು ಬಹಿಷ್ಕೃತನಾಗಿ ಅದರಲ್ಲಿ ಉರಿಯುವನು.(548)
548. ಐಹಿಕ ಸುಖವನ್ನು ಬಯಸುವುದೋ ಆಸ್ವಾದಿಸುವುದೋ ಪಾಪವಲ್ಲ. ಇಲ್ಲಿ ಆಕ್ಷೇಪಿಸಲಾಗಿರುವುದು ಐಹಿಕ ಸುಖವನ್ನು ಬದುಕಿನ ಪರಮಗುರಿಯನ್ನಾಗಿ ಮಾಡಿಕೊಳ್ಳುವುದನ್ನಾಗಿದೆ.
(19) ಯಾರಾದರೂ ಪರಲೋಕವನ್ನು ಬಯಸುವುದಾದರೆ ಮತ್ತು ಸತ್ಯವಿಶ್ವಾಸಿಯಾಗಿರುತ್ತಾ ಅದಕ್ಕಾಗಿ ಅದರದ್ದೇ ಆದ ಪರಿಶ್ರಮಪಡುವುದಾದರೆ ಅಂತಹವರ ಪರಿಶ್ರಮವು ಪ್ರತಿಫಲಾರ್ಹವಾಗಿದೆ.
(20) ಇವರಲ್ಲಿ ಮತ್ತು ಅವರಲ್ಲಿ ಸೇರಿದ ಪ್ರತಿಯೊಬ್ಬರಿಗೂ ನಾವು (ಇಹಲೋಕದಲ್ಲಿ) ಸಹಾಯ ನೀಡುವೆವು. ಇದು ತಮ್ಮ ರಬ್‌ನ ಕೊಡುಗೆಯಲ್ಲಿ ಸೇರಿದ್ದಾಗಿದೆ. ತಮ್ಮ ರಬ್‌ನ ಕೊಡುಗೆಯು ತಡೆದಿರಿಸಲಾಗುವಂತದ್ದಲ್ಲ.(549)
549. ಇಹಲೋಕದಲ್ಲಿ ಅಲ್ಲಾಹುವಿನ ಅನುಗ್ರಹವು ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯನಿಷೇಧಿಗಳಿಗೆ ವ್ಯತ್ಯಾಸವಿಲ್ಲದೆಯೇ ಸಿಗುತ್ತದೆ. ಆದರೆ ಪರಲೋಕದ ಅನುಗ್ರಹವು ವಿಶ್ವಾಸಿಗಳಿಗೆ ಮಾತ್ರ ಸಿಗುವುದಾಗಿದೆ.
(21) ನಾವು ಅವರ ಪೈಕಿ ಕೆಲವರನ್ನು ಇತರ ಕೆಲವರಿಗಿಂತ ಮಿಗಿಲಾಗಿ ಮಾಡಿರುವುದು ಹೇಗೆಂದು ನೋಡಿರಿ. ಪರಲೋಕ ಜೀವನವು ಮಹಾ ಪದವಿಯುಳ್ಳದ್ದೂ ಮಹಾ ಶ್ರೇಷ್ಠತೆಯುಳ್ಳದ್ದೂ ಆಗಿದೆ.
(22) ತಾವು ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರನ್ನು ಮಾಡಿಕೊಳ್ಳದಿರಿ. ಹಾಗೇನಾದರೂ ಮಾಡಿದರೆ ತಾವು ಅಪಮಾನಿತರೂ, ಕೈಬಿಡಲಾದವರೂ ಆಗಿ ಕೂದ್ದೀರಿ.
(23) ನೀವು ಅವನ ಹೊರತು ಬೇರೆ ಯಾರನ್ನೂ ಆರಾಧಿಸದಿರಲು ಮತ್ತು ಮಾತಾಪಿತರಿಗೆ ಒಳಿತನ್ನು ಮಾಡಲು ತಮ್ಮ ರಬ್ ವಿಧಿಸಿರುವನು. ಅವರ (ಮಾತಾಪಿತರ) ಪೈಕಿ ಒಬ್ಬರು ಅಥವಾ ಇಬ್ಬರೂ ತಮ್ಮ ಬಳಿ ವೃದ್ಧಾಪ್ಯವನ್ನು ತಲುಪಿದರೆ ಅವರೊಂದಿಗೆ “ಛೆ” ಎಂದು ಹೇಳುವುದಾಗಲಿ, ಅವರನ್ನು ಗದರಿಸುವುದಾಗಲಿ ಮಾಡದಿರಿ. ಗೌರವದಿಂದ ಕೂಡಿದ ಮಾತುಗಳನ್ನಷ್ಟೇ ಅವರೊಂದಿಗೆ ಹೇಳಿರಿ.
(24) ಕರುಣೆಯಿಂದಿರುವ ವಿನಯತೆಯ ರೆಕ್ಕೆಯನ್ನು ಅವರಿಬ್ಬರಿಗೂ ತಗ್ಗಿಸಿಕೊಡಿರಿ(550) ಮತ್ತು “ನನ್ನ ಪ್ರಭೂ! ಚಿಕ್ಕಂದಿನಲ್ಲಿ ಇವರಿಬ್ಬರು ನನ್ನನ್ನು ಸಾಕಿಸಲಹಿದಂತೆ ಅವರಿಗೆ ದಯೆ ತೋರು” ಎಂದು ಪ್ರಾರ್ಥಿಸಿರಿ.
550. ಗರ್ವ ಮತ್ತು ಅಹಂಕಾರವನ್ನು ಬದಿಗಿಟ್ಟು ಮಾತಾಪಿತರೊಂದಿಗೆ ಅತ್ಯಂತ ವಿನಯದಿಂದ ವರ್ತಿಸಬೇಕಾಗಿದೆ.
(25) ನಿಮ್ಮ ಮನಸ್ಸುಗಳಲ್ಲಿರುವುದನ್ನು ನಿಮ್ಮ ರಬ್ ಚೆನ್ನಾಗಿ ಅರಿಯುವನು. ನೀವು ಸಜ್ಜನರಾಗಿದ್ದರೆ, ಪಶ್ಚಾತ್ತಾಪಪಟ್ಟು ಮರಳುವವರಿಗೆ ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನಾಗಿರುವನು.
(26) ಆಪ್ತಸಂಬಂಧಿಕರಿಗೆ ಅವರ ಹಕ್ಕನ್ನು ನೀಡಿರಿ. ನಿರ್ಗತಿಕರಿಗೂ, ದಾರಿಹೋಕರಿಗೂ (ಅವರ ಹಕ್ಕನ್ನು ನೀಡಿರಿ). ತಾವು ದುಂದುಗಾರಿಕೆ ಮಾಡದಿರಿ.
(27) ಖಂಡಿತವಾಗಿಯೂ ದುಂದುಗಾರಿಕೆ ಮಾಡುವವರು ಸೈತಾನನ ಸಹೋದರರಾಗಿರುವರು. ಸೈತಾನನು ತನ್ನ ರಬ್‌ನೊಂದಿಗೆ ಅತ್ಯಧಿಕ ಕೃತಘ್ನನಾಗಿರುವನು.
(28) ತಾವು ತಮ್ಮ ರಬ್‌ನಿಂದ ಆಶಿಸುತ್ತಿರುವ ಅನುಗ್ರಹವನ್ನು ಅರಸುತ್ತಾ ಅವರಿಂದ ವಿಮುಖನಾಗಬೇಕಾಗಿ ಬಂದರೆ ತಾವು ಅವರೊಂದಿಗೆ ಸೌಮ್ಯವಾದ ಮಾತುಗಳನ್ನಾಡಿರಿ.(551)
551. ಮೇಲೆ ಹೇಳಲಾದವರ ಅಗತ್ಯಗಳೆಲ್ಲವನ್ನು ಪೂರೈಸಿಕೊಡಲು ತಮಗೆ ಸಾಧ್ಯವಾಗದೆ ಹೋದರೆ ಅವರ ಅಪೇಕ್ಷೆಯನ್ನು ಕಡೆಗಣಿಸಬೇಕಾಗಿ ಬರಬಹುದು. ಆದರೆ ಅಂತಹ ಸಂದರ್ಭಗಳಲ್ಲಿಯೂ ಅಲ್ಲಾಹುವಿನ ಅನುಗ್ರಹವು ದೊರೆಯುವುದಾದರೆ ಅವರ ಅಗತ್ಯಗಳನ್ನು ಪೂರೈಸಿ ಕೊಡುವೆನೆಂಬ ಹಂಬಲವು ತಮ್ಮಲ್ಲಿರಲಿ ಮತ್ತು ಸೌಮ್ಯವಾದ ಭಾಷೆಯಲ್ಲಿ ಅವರಿಗೆ ಉತ್ತರ ನೀಡಿರಿ.
(29) ತಾವು ತಮ್ಮ ಕೈಯನ್ನು ತಮ್ಮ ಕೊರಳಿಗೆ ಬಂಧಿಸಲ್ಪಟ್ಟಿರುವಂತೆ ಮಾಡುವುದಾಗಲಿ ಅಥವಾ ಅದನ್ನು (ಕೈಯನ್ನು) ಸಂಪೂರ್ಣವಾಗಿ ಚಾಚುವುದಾಗಲಿ ಮಾಡದಿರಿ.(552) ಹಾಗೇನಾದರೂ ಮಾಡಿದರೆ ತಾವು ದೂಷಿಸಲ್ಪಟ್ಟವರೂ ಕಷ್ಟಪಡುವವರೂ ಆಗುವಿರಿ.
552. ನೀವು ಜಿಪುಣನಾಗಲಿ ಅಥವಾ ದುಂದುಗಾರನಾಗಲಿ ಆಗಬಾರದು.
(30) ಖಂಡಿತವಾಗಿಯೂ ತಮ್ಮ ರಬ್ ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು (ಅವನಿಚ್ಛಿಸುವವರಿಗೆ) ಸಂಕುಚಿತಗೊಳಿಸುವನು. ಖಂಡಿತವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ವೀಕ್ಷಿಸುವವನೂ ಆಗಿರುವನು.
(31) ಬಡತನವನ್ನು ಭಯಪಟ್ಟು ನೀವು ನಿಮ್ಮ ಮಕ್ಕಳನ್ನು ಹತ್ಯೆ ಮಾಡದಿರಿ. ಅವರಿಗೂ, ನಿಮಗೂ ಅನ್ನಾಧಾರವನ್ನು ಒದಗಿಸುವವರು ನಾವಾಗಿರುವೆವು. ಅವರನ್ನು ಹತ್ಯೆ ಮಾಡುವುದು ಖಂಡಿತವಾಗಿಯೂ ಮಹಾ ಅಪರಾಧವಾಗಿದೆ.
(32) ನೀವು ವ್ಯಭಿಚಾರದ ಹತ್ತಿರಕ್ಕೂ ಸುಳಿಯದಿರಿ. ಖಂಡಿತವಾಗಿಯೂ ಅದು ನೀಚಕೃತ್ಯವೂ, ಕೆಟ್ಟಮಾರ್ಗವೂ ಆಗಿದೆ.
(33) ಅಲ್ಲಾಹು ಪವಿತ್ರಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯೇ ವಿನಾ ಕೊಲ್ಲದಿರಿ. ಯಾರಾದರೂ ಅನ್ಯಾಯವಾಗಿ ಹತ್ಯೆಗೀಡಾದರೆ ಅವನ ಹಕ್ಕುದಾರನಿಗೆ ನಾವು (ಪ್ರತೀಕಾರದ) ಅಧಿಕಾರವನ್ನು ನೀಡಿರುವೆವು. ಆದರೆ ಅವನು ಕೊಲೆಯಲ್ಲಿ ಹದ್ದುಮೀರದಿರಲಿ.(553) ಖಂಡಿತವಾಗಿಯೂ ಅವನು ಸಹಾಯ ಮಾಡಲ್ಪಟ್ಟವನಾಗಿರುವನು.
553. ಅಪರಾಧಕ್ಕಿಂತಲೂ ಕಠೋರವಾದ ಶಿಕ್ಷೆ ನೀಡಬಾರದು. ನೈಜ ಅಪರಾಧಿಯಲ್ಲದೆ ಬೇರಾರೂ ಶಿಕ್ಷೆಗೊಳಗಾಗಬಾರದು.
(34) ಅನಾಥನು ತನ್ನ ಹರೆಯವನ್ನು ತಲುಪುವ ತನಕ ಅತ್ಯುತ್ತಮವಾಗಿರುವ ವಿಧದಲ್ಲೇ ಹೊರತು ಅವನ ಸಂಪತ್ತಿನ ಬಳಿಗೆ ಹೋಗದಿರಿ. ಕರಾರನ್ನು ಈಡೇರಿಸಿರಿ. ಖಂಡಿತವಾಗಿಯೂ ಕರಾರಿನ ಬಗ್ಗೆ ವಿಚಾರಣೆ ಮಾಡಲಾಗುವುದು.
(35) ನೀವು ಅಳೆದುಕೊಡುವಾಗ ಅಳತೆಯನ್ನು ಪೂರ್ಣವಾಗಿ ಕೊಡಿರಿ. ಸರಿಯಾದ ತಕ್ಕಡಿಯಿಂದಲೇ ತೂಕ ಮಾಡಿರಿ. ಅದು ಅತ್ಯುತ್ತಮವಾಗಿದೆ ಮತ್ತು ಅಂತ್ಯಫಲದ ವಿಷಯದಲ್ಲಿ ಅತಿ ಶ್ರೇಷ್ಠವಾಗಿದೆ.
(36) ತಮಗೆ ಅರಿವಿಲ್ಲದ ಯಾವುದನ್ನೂ ತಾವು ಹಿಂಬಾಲಿಸದಿರಿ.(554) ಖಂಡಿತವಾಗಿಯೂ ಶ್ರವಣ, ದೃಷ್ಟಿ ಮತ್ತು ಹೃದಯ, ಇವೆಲ್ಲವೂ ವಿಚಾರಣೆಗೆ ಒಳಗಾಗುವುದು.
554. ಯಾವುದೇ ವಿಷಯದಲ್ಲೂ ಖಚಿತವಾದ ಅರಿವು ಸಿಕ್ಕಿದ ಬಳಿಕವೇ ಕ್ರಮಕೈಗೊಳ್ಳಬೇಕಾಗಿದೆ. ಕೇವಲ ಊಹೆಯನ್ನು ಅವಲಂಬಿಸಿ ಏನೂ ಮಾಡಬಾರದು.
(37) ಭೂಮಿಯಲ್ಲಿ ದರ್ಪದಿಂದ ನಡೆಯದಿರಿ. ಖಂಡಿತವಾಗಿಯೂ ಭೂಮಿಯನ್ನು ಸೀಳುವುದಾಗಲಿ, ಎತ್ತರದಲ್ಲಿ ಪರ್ವತದ ಸಮಾನಕ್ಕೆ ತಲುಪುವುದಾಗಲಿ ತಮ್ಮಿಂದ ಸಾಧ್ಯವಾಗಲಾರದು.
(38) ಇವೆಲ್ಲವೂ (ಮೇಲೆ ಹೇಳಲಾದವುಗಳು) ಅದರ ಕೆಡುಕು ತಮ್ಮ ರಬ್‌ನ ಬಳಿ ಅಸಹ್ಯಕರವಾಗಿವೆ.
(39) ಇದು ತಮ್ಮ ರಬ್ ತಮಗೆ ದಿವ್ಯಸಂದೇಶವಾಗಿ ನೀಡಿರುವ ಜ್ಞಾನದಲ್ಲಿ ಸೇರಿದ್ದಾಗಿದೆ. ತಾವು ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯನನ್ನು ಮಾಡಿಕೊಳ್ಳದಿರಿ. ಹಾಗೇನಾದರೂ ಮಾಡಿದರೆ ತಾವು ಆಕ್ಷೇಪಾರ್ಹರೂ ಬಹಿಷ್ಕೃತರೂ ಆಗಿ ನರಕಾಗ್ನಿಯಲ್ಲಿ ಎಸೆಯಲಾಗುವಿರಿ.
(40) ನಿಮ್ಮ ರಬ್ ನಿಮಗೆ ಗಂಡುಮಕ್ಕಳನ್ನು ವಿಶೇಷವಾಗಿ ದಯಪಾಲಿಸಿ ತನಗೋಸ್ಕರ ಮಲಕ್‍ಗಳಿಂದ ಹೆಣ್ಣುಮಕ್ಕಳನ್ನು ಪಡೆದಿರುವನೇ? ಖಂಡಿತವಾಗಿಯೂ ನೀವು ಹೇಳುತ್ತಿರುವುದು ಬಹಳ ಗಂಭೀರ ಮಾತಾಗಿದೆ.
(41) ಅವರು ಚಿಂತಿಸಿ ಗ್ರಹಿಸುವ ಸಲುವಾಗಿ ನಾವು ಈ ಕುರ್‌ಆನ್‍ನಲ್ಲಿ (ವಿಷಯಗಳನ್ನು) ನಾನಾ ವಿಧಗಳಲ್ಲಿ ವಿವರಿಸಿರುವೆವು. ಆದರೆ ಅದು ಅವರಿಗೆ ವಿಕರ್ಷಣೆಯನ್ನೇ ವಿನಾ ಹೆಚ್ಚಿಸಿಕೊಡುತ್ತಿಲ್ಲ.
(42) (ಓ ಪ್ರವಾದಿಯವರೇ!) ಹೇಳಿರಿ: “ಅವರು ಹೇಳುವಂತೆ ಅವನ ಜೊತೆಗೆ ಬೇರೆ ಆರಾಧ್ಯರಿರುತ್ತಿದ್ದರೆ ಖಂಡಿತವಾಗಿಯೂ ಅವರು (ಆ ಆರಾಧ್ಯರು) ಸಿಂಹಾಸನಾಧಿಪತಿಯೆಡೆಗೆ ಯಾವುದಾದರೂ ಮಾರ್ಗವನ್ನು ಅರಸುತ್ತಿದ್ದರು”.(555)
555. ಈ ವಾಕ್ಯವನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಒಂದು: ಜಗದೊಡೆಯನ ಹೊರತು ಬೇರೆ ಆರಾಧ್ಯರಿರುತ್ತಿದ್ದರೆ ಅವರು ಅವನ ಬಳಿ ಸಾಗಿ ಅವನೊಂದಿಗೆ ಹೋರಾಡಿ ಅಧಿಕಾರವನ್ನು ವಶಪಡಿಸುತ್ತಿದ್ದರು. ಎರಡು: ದಿವ್ಯತ್ವವನ್ನು ಆರೋಪಿಸಲ್ಪಟ್ಟ ಮಲಕ್‍ಗಳು, ಮಹಾತ್ಮರು ಮುಂತಾದವರನ್ನು ನೀವು ಆರಾಧಿಸುವುದಾದರೆ ಅದು ನಿರರ್ಥಕವಾಗಿದೆ. ಯಾಕೆಂದರೆ ಅವರೆಲ್ಲರೂ ಸಿಂಹಾಸನಾಧಿಪತಿಯಾದ ಅಲ್ಲಾಹುವಿನ ಸಾಮೀಪ್ಯ ಪಡೆಯುವುದಕ್ಕಿರುವ ಮಾರ್ಗವನ್ನು ಹುಡುಕುತ್ತಿದ್ದಾರೆ. ಆದುದರಿಂದ ಅವರೊಂದಿಗೆ ಪ್ರಾರ್ಥಿಸಿ ಫಲವಿಲ್ಲ.
(43) ಅವನು ಪರಮಪಾವನನು! ಅವರು ಹೇಳುತ್ತಿರುವುದಕ್ಕೆ ಮಿಗಿಲಾಗಿ ಅವನು ಮಹಾ ಔನ್ನತ್ಯವನ್ನು ಹೊಂದಿದವನಾಗಿರುವನು.
(44) ಏಳು ಆಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವವರೆಲ್ಲರೂ ಅವನ ಪರಿಪಾವನತೆಯನ್ನು ಕೊಂಡಾಡುತ್ತಿರುವರು. ಅವನ ಸ್ತುತಿಯೊಂದಿಗೆ (ಅವನ) ಪರಿಪಾವನತೆಯನ್ನು ಕೊಂಡಾಡದಿರುವ ಯಾವುದೇ ವಸ್ತುವೂ ಇಲ್ಲ. ಆದರೆ ಅವರ ಸ್ತುತಿಕೀರ್ತನೆಗಳನ್ನು ನೀವು ಗ್ರಹಿಸಲಾರಿರಿ. ಖಂಡಿತವಾಗಿಯೂ ಅವನು ಸಹನಾಶೀಲನೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.
(45) ತಾವು ಕುರ್‌ಆನ್ ಪಾರಾಯಣ ಮಾಡುವಾಗ ತಮ್ಮ ಮತ್ತು ಪರಲೋಕದಲ್ಲಿ ವಿಶ್ವಾಸವಿಡದವರ ಮಧ್ಯೆ ನಾವು ಅಗೋಚರವಾದ ಪರದೆಯೊಂದನ್ನು ಅಡ್ಡವಾಗಿ ಇಡುವೆವು.
(46) ಅವರು ಅದನ್ನು ಗ್ರಹಿಸುವುದಕ್ಕೆ (ತಡೆಯಾಗಿ) ನಾವು ಅವರ ಹೃದಯಗಳ ಮೇಲೆ ಹೊದಿಕೆಗಳನ್ನಿಡುವೆವು ಮತ್ತು ಅವರ ಕಿವಿಗಳಲ್ಲಿ ಭಾರವನ್ನಿಡುವೆವು.(556) ತಾವು ಕುರ್‌ಆನ್‍ನಲ್ಲಿ ತಮ್ಮ ರಬ್ಬನ್ನು ಮಾತ್ರ ಪ್ರಸ್ತಾಪಿಸಿದರೆ ಅವರು ಜಿಗುಪ್ಸೆಯಿಂದ ಬೆನ್ನು ತಿರುಗಿಸಿ ಹೋಗುವರು.
556. ಏಕದೇವತ್ವದಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡಲು ಅವರು ಸಿದ್ಧರಿಲ್ಲದ ಕಾರಣ ಅಲ್ಲಾಹು ಅವರ ಹೃದಯಗಳನ್ನು ಮುಚ್ಚಿದ ಸ್ಥಿತಿಯಲ್ಲಿಡುವನು.
(47) ತಾವು ಹೇಳುವುದನ್ನು ಕಿವಿಗೊಟ್ಟು ಕೇಳುವ ಸಂದರ್ಭ ಅವರು ಏನನ್ನು ಕಿವಿಗೊಟ್ಟು ಕೇಳುತ್ತಿರುವರೆಂದು ನಾವು ಚೆನ್ನಾಗಿ ಅರಿತಿರುವೆವು.(557) ಅವರು ಏಕಾಂತವಾಗಿ ಮಾತನಾಡುವ ಸಂದರ್ಭ, ಅಥವಾ “ನೀವು ಅನುಸರಿಸುತ್ತಿರುವುದು ಒಬ್ಬ ಮಾಟ ಬಾಧಿತ ವ್ಯಕ್ತಿಯನ್ನು ಮಾತ್ರವಾಗಿದೆ” ಎಂದು ಅಕ್ರಮಿಗಳು (ತಮ್ಮನ್ನು ಲೇವಡಿ ಮಾಡುತ್ತಾ) ಹೇಳುವ ಸಂದರ್ಭ(ವನ್ನು ನಾವು ಚೆನ್ನಾಗಿ ಅರಿತಿರುವೆವು).
557. ಟೀಕೆ ಮಾಡಲು ಏನಾದರೂ ನೆಪ ಹುಡುಕಲು ಅವರು ಪ್ರವಾದಿ(ಸ) ರವರ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದರು.
(48) (ಓ ಪ್ರವಾದಿಯವರೇ!) ಅವರು ತಮಗೆ ಹೇಗೆ ಉಪಮೆಗಳನ್ನು ನೀಡುತ್ತಿರುವರು ಎಂಬುದನ್ನು ನೋಡಿರಿ. ಅದರಿಂದಾಗಿ ಅವರು ಪಥಭ್ರಷ್ಟರಾಗಿರುವರು. ಆದುದರಿಂದ ಅವರಿಗೆ ಯಾವುದೇ ದಾರಿಯನ್ನು ಕಾಣಲು ಸಾಧ್ಯವಾಗದು.
(49) ಅವರು ಹೇಳಿದರು: “ನಾವು ಮೂಳೆಗಳಾಗಿ ಮತ್ತು ಶಿಥಿಲ ಅವಶೇಷಗಳಾಗಿ ಮಾರ್ಪಟ್ಟ ಬಳಿಕ ಖಂಡಿತವಾಗಿಯೂ ನಮ್ಮನ್ನು ಹೊಸದೊಂದು ಸೃಷ್ಟಿಯಾಗಿ ಪುನರುತ್ಥಾನಗೊಳಿಸಲಾಗುವುದೇ?”
(50) (ಓ ಪ್ರವಾದಿಯವರೇ!) ಹೇಳಿರಿ: “ನೀವು ಕಲ್ಲುಗಳಾಗಿ ಅಥವಾ ಕಬ್ಬಿಣವಾಗಿ ಮಾರ್ಪಡಿರಿ.
(51) ಅಥವಾ ನಿಮ್ಮ ಹೃದಯಗಳಲ್ಲಿ ದೊಡ್ಡದಾಗಿ ಕಾಣುವ ಯಾವುದಾದರೂ ಸೃಷ್ಟಿಯಾಗಿ ಮಾರ್ಪಡಿರಿ. (ಆದರೂ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು)”. “ನಮ್ಮನ್ನು (ಜೀವ ನೀಡಿ) ಮರಳಿ ತರುವವನು ಯಾರು?” ಎಂದು ಅವರು ಕೇಳುವರು. “ನಿಮ್ಮನ್ನು ಮೊದಲ ಬಾರಿಗೆ ಸೃಷ್ಟಿಸಿದವನು” ಎನ್ನಿರಿ. ಆಗ ಅವರು ತಮ್ಮೆಡೆಗೆ (ದೃಷ್ಟಿ ಹಾಯಿಸಿ) ತಲೆಯಾಡಿಸುತ್ತಾ ಕೇಳುವರು: “ಅದು ಯಾವಾಗ?” ತಾವು ಹೇಳಿರಿ: “ಅದು ಸಮೀಪದಲ್ಲೇ ಆಗಿರಬಹುದು”.
(52) ಅವನು ನಿಮ್ಮನ್ನು ಕರೆಯುವ ಮತ್ತು ನೀವು ಅವನನ್ನು ಸ್ತುತಿಸುತ್ತಾ ಓಗೊಡುವ ದಿನ.(558) ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯ ಮಾತ್ರ ತಂಗಿದ್ದೀರಿ ಎಂದು ನೀವು ಭಾವಿಸುವಿರಿ.
558. ಅಲ್ಲಾಹುವಿನ ಕರೆಗೆ ಓಗೊಟ್ಟು ಎಲ್ಲರೂ ಪರಲೋಕದಲ್ಲಿ ಒಟ್ಟುಗೂಡುವ ದಿನ.
(53) ತಾವು ನನ್ನ ದಾಸರೊಂದಿಗೆ, ಅವರು ಅತ್ಯುತ್ತಮವಾಗಿರುವುದನ್ನೇ ಮಾತನಾಡಲಿ ಎಂದು ಹೇಳಿರಿ. ಖಂಡಿತವಾಗಿಯೂ ಸೈತಾನನು ಅವರ ನಡುವೆ (ಸಂಘರ್ಷವನ್ನು) ಹುರಿದುಂಬಿಸುವನು. ಖಂಡಿತವಾಗಿಯೂ ಸೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿರುವನು.
(54) ನಿಮ್ಮ ಬಗ್ಗೆ ನಿಮ್ಮ ರಬ್ ಚೆನ್ನಾಗಿ ಅರಿತಿರುವನು. ಅವನು ಇಚ್ಛಿಸುವುದಾದರೆ ಅವನು ನಿಮಗೆ ದಯೆ ತೋರುವನು ಅಥವಾ ಅವನು ಇಚ್ಛಿಸುವುದಾದರೆ ಅವನು ನಿಮ್ಮನ್ನು ಶಿಕ್ಷಿಸುತ್ತಾನೆ. ನಾವು ತಮ್ಮನ್ನು ಅವರ ಮೇಲ್ವಿಚಾರಕರನ್ನಾಗಿ ಮಾಡಿ ಕಳುಹಿಸಿಲ್ಲ.
(55) ಭೂಮ್ಯಾಕಾಶಗಳಲ್ಲಿರುವವರ ಬಗ್ಗೆ ತಮ್ಮ ರಬ್ ಚೆನ್ನಾಗಿ ಅರಿತಿರುವನು. ಖಂಡಿತವಾಗಿಯೂ ನಾವು ಪ್ರವಾದಿಗಳಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿರುವೆವು. ದಾವೂದ್‍ರಿಗೆ ನಾವು ಝಬೂರ್(559) ಎಂಬ ಗ್ರಂಥವನ್ನು ನೀಡಿರುವೆವು.
559. ಬೈಬಲ್ ಹಳೆಯ ಒಡಂಬಡಿಕೆಯ ‘ಕೀರ್ತನೆಗಳು’ ಎಂಬ ಪುಸ್ತಕ ದಾವೂದ್‍ರಿಗೆ ನೀಡಲಾದ ‘ಝಬೂರ್’ ಆಗಿದೆಯೆಂದು ಭಾವಿಸಲಾಗುತ್ತದೆ. ಬಹುಶಃ ಕೀರ್ತನೆಗಳು ಝಬೂರಿನ ಒಂದು ಭಾಗ ಮಾತ್ರವಾಗಿರುವ ಸಾಧ್ಯತೆಯೂ ಇದೆ.
(56) (ಓ ಪ್ರವಾದಿಯವರೇ!) ಹೇಳಿರಿ: “ನೀವು ಅಲ್ಲಾಹುವಿನ ಹೊರತು (ಆರಾಧ್ಯರೆಂದು) ವಾದಿಸುತ್ತಿರುವವರನ್ನು ಕರೆದು ನೋಡಿರಿ. ನಿಮ್ಮಿಂದ ಹಾನಿಯನ್ನು ನಿವಾರಿಸುವ ಅಥವಾ (ನಿಮ್ಮ ಸ್ಥಿತಿಯನ್ನು) ಬದಲಾಯಿಸುವ ಯಾವುದೇ ಸಾಮರ್ಥ್ಯವನ್ನೂ ಅವರು ಅಧೀನದಲ್ಲಿಟ್ಟುಕೊಂಡಿಲ್ಲ”.
(57) ಅವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಸ್ವತಃ ತಮ್ಮ ರಬ್‌ನೆಡೆಗೆ ಹತ್ತಿರವಾಗಲು ಮಾರ್ಗಗಳನ್ನು ಅರಸುತ್ತಿರುವರು.(560) ಅವರ ಪೈಕಿ ಅಲ್ಲಾಹುವಿನೊಂದಿಗೆ ಅತ್ಯಂತ ನಿಕಟವಾಗಿರುವವರು ಸಹ. ಅವರು ಅವನ ದಯೆಯನ್ನು ಆಶಿಸುತ್ತಿರುವರು ಮತ್ತು ಅವನ ಶಿಕ್ಷೆಯನ್ನು ಭಯಪಡುತ್ತಿರುವರು. ಖಂಡಿತವಾಗಿಯೂ ತಮ್ಮ ರಬ್‌ನ ಶಿಕ್ಷೆಯು ಭಯಪಡಬೇಕಾದುದೇ ಆಗಿದೆ.
560. ಮಲಕ್‍ಗಳು, ಪ್ರವಾದಿಗಳು, ಮಹಾತ್ಮರು ಮುಂತಾದವರೊಂದಿಗೆ ಪ್ರಾರ್ಥಿಸುವವರ ಮೂರ್ಖತನವನ್ನು ಇಲ್ಲಿ ಎತ್ತಿತೋರಿಸಲಾಗಿದೆ. ಸರ್ವ ಪ್ರವಾದಿಗಳು ಮತ್ತು ಮಲಕ್‍ಗಳು ಅಲ್ಲಾಹುವಿನೊಂದಿಗೆ ನೇರವಾಗಿ ಪ್ರಾರ್ಥಿಸುವವರಾಗಿದ್ದಾರೆ. ಅಲ್ಲಾಹುವಿನೆಡೆಗೆ ಸಾಮೀಪ್ಯವನ್ನು ಗಳಿಸಲು ಅವನು ನಿಶ್ಚಯಿಸಿದ ಮಾರ್ಗವನ್ನು ಅವಲಂಬಿಸುವವರಾಗಿದ್ದಾರೆ. ಹೀಗಿರುವಾಗ ಅವರನ್ನು ಪ್ರೀತಿಸುವವರು ಅಲ್ಲಾಹುವೇತರರೊಂದಿಗೆ ಪ್ರಾರ್ಥಿಸಲು ಯಾವ ಸಮರ್ಥನೆಯಿದೆ?
(58) ಪುನರುತ್ಥಾನದ ದಿನಕ್ಕಿಂತ ಮುಂಚೆ ನಾವು ನಾಶ ಮಾಡದ ಅಥವಾ ಕಠಿಣವಾಗಿ ಶಿಕ್ಷಿಸದ ಯಾವುದೇ ಊರೂ ಇರಲಾರದು. ಅದು ಗ್ರಂಥದಲ್ಲಿ ದಾಖಲಿಸಲ್ಪಟ್ಟ ವಿಷಯವಾಗಿದೆ.(561)
561. ಪುನರುತ್ಥಾನಕ್ಕೆ ಮುಂಚಿತವಾಗಿ -ಅಂತ್ಯದಿನದಂದು- ಜಗತ್ತೆಲ್ಲವೂ ನಾಶವಾಗುವುದು. ಕಡು ಅತಿಕ್ರಮಿಗಳ ಊರುಗಳನ್ನು ಅಲ್ಲಾಹು ಅದಕ್ಕಿಂತಲೂ ಮುಂಚೆಯೇ ನಾಶ ಮಾಡಬಹುದು. ಇದನ್ನು ಅಲ್ಲಾಹುವಿನ ದಾಖಲೆಯಲ್ಲಿ -ಲೌಹುಲ್ ಮಹ್ಫೂಝ್‍ನಲ್ಲಿ- ಬರೆದಿಡಲಾಗಿದೆ.
(59) ದೃಷ್ಟಾಂತಗಳನ್ನು ಕಳುಹಿಸಲು ನಮಗೆ ತಡೆಯಾಗಿ ಏನೂ ಇರಲಾರದು, ಪೂರ್ವಿಕರು ಅವುಗಳನ್ನು ನಿಷೇಧಿಸಿದರು ಎಂಬುದರ ಹೊರತು. ನಾವು ಸಮೂದ್ ಜನಾಂಗಕ್ಕೆ ಪ್ರತ್ಯಕ್ಷ ದೃಷ್ಟಾಂತವಾಗಿ ಒಂಟೆಯನ್ನು ನೀಡಿದೆವು. ಆದರೆ ಅವರು ಅದರೊಂದಿಗೆ ಅಕ್ರಮವೆಸಗಿದರು. ಭಯಭೀತಗೊಳಿಸುವ ಸಲುವಾಗಿಯೇ ವಿನಾ ನಾವು ದೃಷ್ಟಾಂತಗಳನ್ನು ಕಳುಹಿಸಲಾರೆವು.(562)
562. ಜನರ ಮನಸ್ಸಿನಲ್ಲಿ ಭಯ ಮತ್ತು ಭಕ್ತಿಯನ್ನು ಉದ್ಧೀಪನಗೊಳಿಸುವುದಕ್ಕಾಗಿ ದೃಷ್ಟಾಂತಗಳನ್ನು ಅವತೀರ್ಣಗೊಳಿಸಲಾಗುತ್ತದೆ.
(60) “ಖಂಡಿತವಾಗಿಯೂ ತಮ್ಮ ರಬ್ ಜನರನ್ನು ಆವರಿಸಿರುವನು”(563) ಎಂದು ತಮ್ಮೊಂದಿಗೆ ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ನಾವು ತಮಗೆ ತೋರಿಸಿರುವ ಆ ದೃಶ್ಯವನ್ನು ಮತ್ತು ಕುರ್‌ಆನ್‍ನಲ್ಲಿ ಶಪಿಸಲಾಗಿರುವ ವೃಕ್ಷವನ್ನು ನಾವು ಜನರಿಗೆ ಒಂದು ಪರೀಕ್ಷೆಯನ್ನಾಗಿಯೇ ವಿನಾ ಮಾಡಿರಲಿಲ್ಲ.(564) ನಾವು ಅವರನ್ನು ಭಯಪಡಿಸುತ್ತಿರುವೆವು. ಆದರೆ ಅದು ಅವರಿಗೆ ಪರಮ ಧಿಕ್ಕಾರದ ಹೊರತು ಇನ್ನೇನನ್ನೂ ಅಧಿಕಗೊಳಿಸಲಾರದು.
563. ಮನುಷ್ಯರು ಎಷ್ಟೇ ಅಹಂಕಾರಪಟ್ಟರೂ ಅವರು ಅಲ್ಲಾಹುವಿನ ನಿಯಂತ್ರಣದಲ್ಲೇ ಇರುವರು. ಅದರಿಂದ ಪಾರಾಗಲು ಅವರಿಗೆ ಸಾಧ್ಯವಾಗಲಾರದು. 564. ನಿಶಾಯಾತ್ರೆಯಲ್ಲಿ ಅಲ್ಲಾಹು ಪ್ರವಾದಿ(ಸ) ರಿಗೆ ತೋರಿಸಿಕೊಟ್ಟ ಕೆಲವು ದೃಶ್ಯಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವಾದಿ(ಸ) ರವರು ಅದನ್ನು ವಿವರಿಸಿಕೊಟ್ಟಾಗ ಸತ್ಯನಿಷೇಧಿಗಳು ತೀವ್ರವಾಗಿ ಲೇವಡಿ ಮಾಡಿದರು. ನರಕದಲ್ಲಿ ‘ಝಕ್ಕೂಮ್’ ಎಂಬ ಮರವಿದೆ ಮತ್ತು ದುರ್ಮಾರ್ಗಿಗಳು ಅದರಿಂದ ತಿನ್ನುವರು ಎಂದು ಕುರ್‌ಆನ್ ಪ್ರಸ್ತಾಪಿಸಿದಾಗಲೂ ಸತ್ಯನಿಷೇಧಿಗಳು ತೀವ್ರ ಸ್ವರೂಪದಲ್ಲಿ ಹಾಸ್ಯ ಮಾಡಿದರು. ಇವೆಲ್ಲವೂ ಅಗೋಚರ ವಿಷಯಗಳೊಂದಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆಯೆಂದು ಪರೀಕ್ಷಿಸುವ ಸಂದರ್ಭಗಳಾಗಿವೆ.
(61) “ನೀವು ಆದಮ್‍ರಿಗೆ ಸುಜೂದ್ ಮಾಡಿರಿ” ಎಂದು ನಾವು ಮಲಕ್‍ಗಳೊಂದಿಗೆ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ಆಗ ಅವರು ಸುಜೂದ್ ಮಾಡಿದರು, ಇಬ್ಲೀಸ್‍ನ ಹೊರತು. ಅವನು ಹೇಳಿದನು: “ನೀನು ಜೇಡಿಮಣ್ಣಿನಿಂದ ಸೃಷ್ಟಿಸಿರುವವನಿಗೆ ನಾನು ಸುಜೂದ್ ಮಾಡುವುದೇ?”
(62) ಅವನು ಹೇಳಿದನು: “ನೀನು ನನಗಿಂತಲೂ ಹೆಚ್ಚು ಗೌರವ ನೀಡಿರುವ ಈತ ಯಾರೆಂದು ನನಗೆ ತಿಳಿಸಿಕೊಡು. ಖಂಡಿತವಾಗಿಯೂ ಪುನರುತ್ಥಾನದ ದಿನದವರೆಗೆ ನೀನು ನನಗೆ ಕಾಲಾವಕಾಶವನ್ನು ನೀಡುವುದಾದರೆ ಈತನ ಸಂತತಿಗಳ ಪೈಕಿ ಕೆಲವರನ್ನು ಹೊರತುಪಡಿಸಿ ಎಲ್ಲರನ್ನೂ ನಾನು ಶರಣಾಗಿಸಿ ಬಿಡುವೆನು”.
(63) ಅಲ್ಲಾಹು ಹೇಳಿದನು: “ಹೊರಟುಹೋಗು! ಅವರ ಪೈಕಿ ಯಾರಾದರೂ ನಿನ್ನನ್ನು ಅನುಸರಿಸುವುದಾದರೆ ಖಂಡಿತವಾಗಿಯೂ ನಿಮ್ಮೆಲ್ಲರಿಗಿರುವ ಪ್ರತಿಫಲವು ನರಕಾಗ್ನಿಯಾಗಿರುವುದು. ಅದು ಪೂರ್ಣವಾದ ಪ್ರತಿಫಲ ವಾಗಿದೆ.
(64) ಅವರ ಪೈಕಿ ನಿನಗೆ ಸಾಧ್ಯವಾಗುವವರೆಲ್ಲರನ್ನು ನಿನ್ನ ಧ್ವನಿಯ ಮೂಲಕ ಹುರಿದುಂಬಿಸು. ನಿನ್ನ ಅಶ್ವಸೇನೆ ಮತ್ತು ಕಾಲಾಳುಸೇನೆಯ ಮೂಲಕ ಅವರ ಮೇಲೆ ಮುಗಿಬೀಳು. ಸಂಪತ್ತಿನಲ್ಲಿಯೂ ಸಂತತಿಗಳಲ್ಲಿಯೂ ಅವರೊಂದಿಗೆ ಭಾಗಿಯಾಗು.(565) ಅವರಿಗೆ ವಾಗ್ದಾನ ಮಾಡು. ಅವರಿಗೆ ಸೈತಾನನು ಮಾಡುವ ವಾಗ್ದಾನವು ವಂಚನೆಯಲ್ಲದೆ ಇನ್ನೇನೂ ಆಗಿರಲಾರದು.
565. ಕೌಟುಂಬಿಕ ಕ್ಷೇತ್ರಗಳಲ್ಲಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇಸ್ಲಾಮೀ ವಿರುದ್ಧ ಮಾರ್ಗಗಳನ್ನು ಅವಲಂಬಿಸುವವರು ತಮ್ಮ ಬದುಕಿನಲ್ಲಿ ಸೈತಾನನಿಗೆ ಒಂದು ಪಾಲನ್ನು ನೀಡುವವರಾಗಿದ್ದಾರೆ.
(65) ಖಂಡಿತವಾಗಿಯೂ ನನ್ನ ದಾಸರು ಯಾರೋ ಅವರ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ. ಕಾರ್ಯನಿರ್ವಾಹಕನಾಗಿ ನಿನ್ನ ರಬ್ ಸಾಕು”.
(66) ನಿಮಗೋಸ್ಕರ ಸಮುದ್ರದಲ್ಲಿ ಹಡಗನ್ನು ಚಲಾಯಿಸುತ್ತಿರುವವನು ನಿಮ್ಮ ರಬ್ ಆಗಿರುವನು. ನೀವು ಅವನ ಅನುಗ್ರಹದಿಂದ ಅರಸುವ ಸಲುವಾಗಿ. ಖಂಡಿತವಾಗಿಯೂ ಅವನು ನಿಮ್ಮೊಂದಿಗೆ ಅತ್ಯಧಿಕ ದಯೆಯುಳ್ಳವನಾಗಿರುವನು.
(67) ಸಮುದ್ರದಲ್ಲಿ ನಿಮಗೇನಾದರೂ ಹಾನಿ ತಟ್ಟಿದರೆ ನೀವು ಅಲ್ಲಾಹುವಿನ ಹೊರತು ಯಾರನ್ನೆಲ್ಲಾ ಕರೆದು ಪ್ರಾರ್ಥಿಸುತ್ತಿರುವಿರೋ ಅವರೆಲ್ಲರೂ ಅಪ್ರತ್ಯಕ್ಷರಾಗುವರು.(566) ಆದರೆ ಅವನು ನಿಮ್ಮನ್ನು ಪಾರು ಮಾಡಿ ದಡ ಸೇರಿಸಿದರೆ ನೀವು ವಿಮುಖರಾಗಿ ಬಿಡುವಿರಿ. ಮನುಷ್ಯನು ಅತ್ಯಂತ ಕೃತಘ್ನನಾಗಿರುವನು.
566. ಮಿಥ್ಯ ದೇವರುಗಳ ಆಲೋಚನೆಯು ಮನಸ್ಸಿನಿಂದ ಅಪ್ರತ್ಯಕ್ಷವಾಗಿ, ಪ್ರಾರ್ಥನೆಯನ್ನು ಅಲ್ಲಾಹುವಿಗೆ ಮಾತ್ರ ಸೀಮಿತಗೊಳಿಸುವರು ಎಂದರ್ಥ.
(68) ದಡದ ಒಂದು ಭಾಗದಲ್ಲಿ ಅವನು ನಿಮ್ಮನ್ನು ಆಳಕ್ಕೆ ಹುಗಿದು ಹೋಗುವಂತೆ ಮಾಡುವುದರ ಬಗ್ಗೆ ಅಥವಾ ಅವನು ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸುವುದರ ಬಗ್ಗೆ ನೀವು ನಿರ್ಭೀತರಾಗಿದ್ದೀರಾ? ತರುವಾಯ ನಿಮ್ಮ ಸಂರಕ್ಷಣೆ ವಹಿಸಿಕೊಳ್ಳುವವರಾಗಿ ನೀವು ಯಾರನ್ನೂ ಕಾಣಲಾರಿರಿ.
(69) ಅಥವಾ ಅವನು ನಿಮ್ಮನ್ನು ಮತ್ತೊಮ್ಮೆ ಅಲ್ಲಿಗೆ (ಸಮುದ್ರಕ್ಕೆ) ಮರಳಿ ಕೊಂಡೊಯ್ದು, ನಿಮ್ಮ ಮೇಲೆ ಬಿರುಗಾಳಿಯ ಒಂದು ಮಾರುತವನ್ನು ಕಳುಹಿಸಿ, ನೀವು ಅವಿಶ್ವಾಸವಿಟ್ಟ ಕಾರಣ ನಿಮ್ಮನ್ನು ಮುಳುಗಿಸಿ ಬಿಡುವ ಬಗ್ಗೆ ನೀವು ನಿರ್ಭೀತರಾಗಿದ್ದೀರಾ? ತರುವಾಯ ಅದರ ಬಗ್ಗೆ ನಮ್ಮ ಮೇಲೆ ಕ್ರಮ ಕೈಗೊಳ್ಳಲು ನೀವು ಯಾರನ್ನೂ ಕಾಣಲಾರಿರಿ.
(70) ಖಂಡಿತವಾಗಿಯೂ ನಾವು ಆದಮ್ ಸಂತತಿಗಳನ್ನು ಗೌರವಿಸಿರುವೆವು. ಅವರನ್ನು ನಾವು ಸಮುದ್ರದಲ್ಲೂ, ನೆಲದಲ್ಲೂ ವಾಹನದಲ್ಲಿ ವಹಿಸಿರುವೆವು.(567) ವಿಶಿಷ್ಠ ವಸ್ತುಗಳಿಂದ ಅವರಿಗೆ ನಾವು ಅನ್ನಾಧಾರವನ್ನು ಒದಗಿಸಿರುವೆವು. ನಾವು ಸೃಷ್ಟಿಸಿದವುಗಳ ಪೈಕಿ ಹೆಚ್ಚಿನವರಿಗಿಂತಲೂ ಅವರಿಗೆ ನಾವು ವಿಶೇಷ ಶ್ರೇಷ್ಠತೆಯನ್ನು ದಯಪಾಲಿಸಿರುವೆವು.
567. ವಾಹನವನ್ನು ಬಳಸುವ ಏಕೈಕ ಜೀವಿ ಮನುಷ್ಯನಾಗಿರುವನು. ಇತರ ಅನೇಕ ಘಟಕಗಳಂತೆ ಇದೂ ಸಹ ಅವನ ಮಹತ್ವವನ್ನು ಹೆಚ್ಚಿಸುತ್ತದೆ.
(71) ನಾವು ಸಕಲ ಮನುಷ್ಯರನ್ನೂ ಅವರ ನಾಯಕರೊಂದಿಗೆ ಕರೆದು ಒಟ್ಟುಗೂಡಿಸುವ ದಿನ. ಆಗ ಯಾರಿಗೆ ಅವನ (ಕರ್ಮ) ಗ್ರಂಥವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ ಅಂತಹವರು ತಮ್ಮ ಗ್ರಂಥವನ್ನು ಓದುವರು. ಅವರೊಂದಿಗೆ ಎಳೆಯಷ್ಟೂ ಅನ್ಯಾಯವೆಸಗಲಾಗದು.
(72) ಯಾರು ಈ ಲೋಕದಲ್ಲಿ ಅಂಧನಾಗಿರುವನೋ ಅವನು ಪರಲೋಕದಲ್ಲೂ ಅಂಧನಾಗಿರುವನು.(568) ಅತ್ಯಧಿಕ ಪಥಭ್ರಷ್ಟನೂ ಆಗಿರುವನು.
568. ಪುರಾವೆಗಳನ್ನು ಕಂಡೂ ಸತ್ಯವನ್ನು ಸ್ವೀಕರಿಸದೆ ಇರುಳಲ್ಲಿ ಕಳೆಯುವವನನ್ನು ಇಲ್ಲಿ ಅಂಧ ಎನ್ನಲಾಗಿದೆ. ಪರಲೋಕದಲ್ಲಿ ಯಾವುದೇ ರಕ್ಷಾಮಾರ್ಗವನ್ನು ಕಾಣದೆ ಅವರು ಅಂಧತೆಯಲ್ಲೇ ಕಳೆಯುವರು.
(73) ಖಂಡಿತವಾಗಿಯೂ ನಾವು ತಮಗೆ ನೀಡಿರುವ ದಿವ್ಯಸಂದೇಶದಿಂದ ತಮ್ಮನ್ನು ತಪ್ಪಿಸಿಬಿಡಲು ಅವರು ಸಿದ್ಧರಾಗಿರುವರು. ತಾವು ನಮ್ಮ ಮೇಲೆ ಅದಲ್ಲದ ಬೇರೇನನ್ನಾದರೂ ಹೆಣೆದು ರಚಿಸಬೇಕೆಂದು (ಅವರು ಬಯಸುತ್ತಿರುವರು). ಹಾಗಿರುತ್ತಿದ್ದರೆ ಅವರು ತಮ್ಮನ್ನು ಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.
(74) ನಾವು ತಮ್ಮನ್ನು ಅಚಲವಾಗಿ ನಿಲ್ಲಿಸದಿರುತ್ತಿದ್ದರೆ ತಾವು ಅವರೆಡೆಗೆ ಸ್ವಲ್ಪವಾದರೂ ವಾಲುವಂತಾಗುತ್ತಿದ್ದಿರಿ.
(75) ಹಾಗಿರುತ್ತಿದ್ದರೆ ಬದುಕಿನ ಇಮ್ಮಡಿ ಶಿಕ್ಷೆಯನ್ನು ಮತ್ತು ಮರಣದ ಇಮ್ಮಡಿ ಶಿಕ್ಷೆಯನ್ನು ತಾವು ಸವಿಯುವಂತೆ ನಾವು ಮಾಡುತ್ತಿದ್ದೆವು. ತರುವಾಯ ನಮ್ಮ ವಿರುದ್ಧ ತಮಗೆ ಸಹಾಯ ಮಾಡುವ ಯಾರನ್ನೂ ತಾವು ಕಾಣಲಾರಿರಿ.
(76) ಖಂಡಿತವಾಗಿಯೂ ತಮ್ಮನ್ನು ಊರಿನಿಂದ ತೊಲಗಿಸಲು ಅವರು ಸಿದ್ಧರಾಗಿರುವರು. ತಮ್ಮನ್ನು ಅಲ್ಲಿಂದ ಹೊರಗಟ್ಟುವುದೇ ಅವರ ಗುರಿಯಾಗಿದೆ. ಹಾಗಾದರೆ (ಅವರು ತಮ್ಮನ್ನು ಹೊರಗಟ್ಟಿದರೆ) ತಮ್ಮ ಬಳಿಕ ಅವರು ಅಲ್ಪ ಸಮಯದವರೆಗೆ ಹೊರತು (ಅಲ್ಲಿ) ವಾಸಿಸಲಾರರು.
(77) (ಇದು) ತಮಗಿಂತ ಮುಂಚೆ ಕಳುಹಿಸಲಾದ ನಮ್ಮ ಸಂದೇಶವಾಹಕರ ವಿಷಯದಲ್ಲಿ ಕೈಗೊಳ್ಳಲಾಗಿರುವ ಕ್ರಮವಾಗಿದೆ.(569) ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನೂ ತಾವು ಕಾಣಲಾರಿರಿ.
569. ಪ್ರವಾದಿಗಳನ್ನು ಹೊರಗಟ್ಟಿದವರಿಗೆ ಮತ್ತು ಅವರನ್ನು ಹತ್ಯೆ ಮಾಡಲು ಯತ್ನಿಸಿದವರಿಗೆ ಸತ್ಯದ ಸಂದೇಶವು ಒಮ್ಮೆಯೂ ಜನಪ್ರಿಯತೆ ಪಡೆಯಬಾರದು ಎಂಬ ಕೆಟ್ಟ ಹಟವು ಪ್ರೇರಣೆಯಾಗಿತ್ತು. ಆದರೆ ಸತ್ಯವನ್ನು ಸಮಾಧಿ ಮಾಡಿದೆವೆಂಬ ಸಂತೃಪ್ತಿಯೊಂದಿಗೆ ಹೆಚ್ಚು ಕಾಲ ನೆಮ್ಮದಿಯಾಗಿ ಕಳೆಯಲು ಅವರಿಗೆ ಅಲ್ಲಾಹು ಅವಕಾಶ ನೀಡಲಾರನು.
(78) ಸೂರ್ಯನು (ಆಕಾಶಮಧ್ಯದಿಂದ) ಸರಿದ ಬಳಿಕ ಕತ್ತಲಾಗುವ ತನಕ (ನಿಗದಿತ ಸಮಯಗಳಲ್ಲಿ) ತಾವು ನಮಾಝನ್ನು ಸಂಸ್ಥಾಪಿಸಿರಿ.(570) ಕುರ್‌ಆನ್ ಪಾರಾಯಣ ಮಾಡಲಾಗುವ ಪ್ರಭಾತ ನಮಾಝನ್ನೂ (ಸಂಸ್ಥಾಪಿಸಿರಿ). ಖಂಡಿತವಾಗಿಯೂ ಪ್ರಭಾತ ನಮಾಝ್‍ನ ಕುರ್‌ಆನ್ ಪಾರಾಯಣವು ಸಾಕ್ಷ್ಯವಹಿಸಲ್ಪಡುವಂತದ್ದಾಗಿದೆ.(571)
570. ಮಧ್ಯಾಹ್ನದ ನಂತರ ರಾತ್ರಿಯವರೆಗೆ ನಾಲ್ಕು ನಮಾಝ್‍ಗಳಿವೆ. ಝುಹ್ರ್, ಅಸ್ರ್, ಮಗ್ರಿಬ್ ಮತ್ತು ಇಶಾ. 571. ರಾತ್ರಿ ಮತ್ತು ಹಗಲು ಮನುಷ್ಯನ ಕರ್ಮಗಳನ್ನು ಪರಿವೀಕ್ಷಣೆ ಮಾಡುತ್ತಿರಲು ಹೊಣೆ ವಹಿಸಲ್ಪಟ್ಟ ಮಲಕ್‍ಗಳು ಪ್ರಭಾತ ನಮಾಝ್‍ಗೆ ಸಾಕ್ಷಿಗಳಾಗಿರುವರೆಂಬುದು ಇದರ ತಾತ್ಪರ್ಯವಾಗಿದೆಯೆಂದು ಹದೀಸ್‍ಗಳಿಂದ ತಿಳಿದುಬರುತ್ತದೆ.
(79) ರಾತ್ರಿಯಲ್ಲಿ ಸ್ವಲ್ಪ ಸಮಯ ನಿದ್ದೆಗೆಟ್ಟು ತಾವು ಅದರೊಂದಿಗೆ (ಕುರ್‌ಆನ್ ಪಾರಾಯಣದೊಂದಿಗೆ) ನಮಾಝ್ ಮಾಡಿರಿ. ಅದು ತಮಗೆ ಹೆಚ್ಚುವರಿಯಾಗಿರುವ ಒಂದು ಪುಣ್ಯಕರ್ಮವಾಗಿದೆ.(572) ತಮ್ಮ ರಬ್ ತಮ್ಮನ್ನು ಸ್ತುತ್ಯರ್ಹವಾದ ಒಂದು ಸ್ಥಾನಕ್ಕೆ ಕಳುಹಿಸಲೂಬಹುದು.
572. ರಾತ್ರಿ ನಿದ್ದೆಯಿಂದೆದ್ದು ನಿರ್ವಹಿಸುವ ತಹಜ್ಜುದ್ ನಮಾಝ್ ಪ್ರವಾದಿ(ಸ) ರವರಿಗೆ ಕಡ್ಡಾಯವಾಗಿದೆ ಮತ್ತು ಇತರ ಮುಸ್ಲಿಮರಿಗೆ ಐಚ್ಛಿಕವಾಗಿದೆಯೆಂದು ಹೆಚ್ಚಿನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
(80) ಹೇಳಿರಿ: “ನನ್ನ ಪ್ರಭೂ! ಸತ್ಯದ ಪ್ರವೇಶದ್ವಾರದ ಮೂಲಕ ನನ್ನನ್ನು ಒಳಸೇರಿಸು ಮತ್ತು ಸತ್ಯದ ನಿರ್ಗಮನದ್ವಾರದ ಮೂಲಕ ನನ್ನನ್ನು ಹೊರ ಕಳುಹಿಸು.(573) ನನಗೆ ನೆರವು ನೀಡುವ ಅಧಿಕೃತ ಶಕ್ತಿಯೊಂದನ್ನು(574) ನಿನ್ನ ಕಡೆಯಿಂದ ಮಾಡಿಕೊಡು”.
573. ನಾನು ಎತ್ತ ಪ್ರವೇಶಿಸುವುದಾದರೂ ಎಲ್ಲಿಂದ ನಿರ್ಗಮಿಸುವುದಾದರೂ ಅದನ್ನು ಸತ್ಯಸಂಧತೆಗೆ ಪೂರಕರಾಗಿರುವಂತೆ ಮಾಡು ಎಂದರ್ಥ. 574. ಸಂವಾದಗಳಲ್ಲೂ, ಯುದ್ಧಗಳಲ್ಲೂ, ಇತರ ಸಂದರ್ಭಗಳಲ್ಲೂ ಗೆಲುವು ಪಡೆಯಲು ಮಾನದಂಡವಾಗಿರುವ ಒಂದು ಅಧಿಕೃತ ಬೆಂಬಲ.
(81) ಹೇಳಿರಿ: “ಸತ್ಯವು ಬಂದಿದೆ ಮತ್ತು ಮಿಥ್ಯವು ಅಳಿದಿದೆ. ಮಿಥ್ಯವು ಖಂಡಿತವಾಗಿಯೂ ಅಳಿಯುವಂತದ್ದೇ ಆಗಿದೆ”.
(82) ಸತ್ಯವಿಶ್ವಾಸಿಗಳಿಗೆ ಉಪಶಮನ ಮತ್ತು ಕಾರುಣ್ಯವಾಗಿರುವುದನ್ನು ನಾವು ಕುರ್‌ಆನ್‍ನ ಮೂಲಕ ಅವತೀರ್ಣಗೊಳಿಸುತ್ತಿರುವೆವು. ಅದು ಅಕ್ರಮಿಗಳಿಗೆ ನಷ್ಟವನ್ನಲ್ಲದೆ (ಇನ್ನೇನನ್ನೂ) ಅಧಿಕಗೊಳಿಸಲಾರದು.
(83) ನಾವು ಮನುಷ್ಯನಿಗೆ ಅನುಗ್ರಹವನ್ನು ದಯಪಾಲಿಸಿದರೆ ಅವನು ವಿಮುಖನಾಗುವನು ಮತ್ತು ದೂರ ಸರಿಯುವನು. ಅವನಿಗೆ ಹಾನಿಯೇನಾದರೂ ತಟ್ಟಿದರೆ ಅವನು ಹತಾಶನಾಗುವನು.
(84) ಹೇಳಿರಿ: “ಎಲ್ಲರೂ ತಮ್ಮ ತಮ್ಮ ಸಂಪ್ರದಾಯ ದಂತೆ ಕಾರ್ಯವೆಸಗುವರು. ಅತ್ಯಂತ ಸರಿಯಾದ ಮಾರ್ಗದಲ್ಲಿರುವವರು ಯಾರೆಂದು ತಮ್ಮ ರಬ್ ಚೆನ್ನಾಗಿ ಅರಿತಿರುವನು.
(85) ಅವರು ತಮ್ಮೊಂದಿಗೆ ಆತ್ಮದ ಬಗ್ಗೆ ಪ್ರಶ್ನಿಸುವರು. ಹೇಳಿರಿ: “ಆತ್ಮವು ನನ್ನ ರಬ್‌ನ ವಿಷಯದಲ್ಲಿ ಸೇರಿದ್ದಾಗಿದೆ. ನಿಮಗೆ ಜ್ಞಾನದಿಂದ ಸ್ವಲ್ಪವೇ ಹೊರತು ನೀಡಲಾಗಿಲ್ಲ”.
(86) ನಾವು ಇಚ್ಛಿಸಿದ್ದರೆ ನಾವು ತಮಗೆ ನೀಡಿದ ದಿವ್ಯ ಸಂದೇಶವನ್ನು ಖಂಡಿತವಾಗಿಯೂ ನಾವು ಹಿಂದೆಗೆಯುತ್ತಿದ್ದೆವು. ತರುವಾಯ ಅದಕ್ಕಾಗಿ ನಮ್ಮ ವಿರುದ್ಧ ತಮಗೆ ಭರವಸೆಯಿಡಲು ಯೋಗ್ಯರಾದ ಯಾರನ್ನೂ ತಾವು ಕಾಣಲಾರಿರಿ.(575)
575. ದಿವ್ಯ ಸಂದೇಶವನ್ನು ಅಲ್ಲಾಹು ಹಿಂದೆಗೆಯುವುದಾದರೆ ಅದನ್ನು ಮುಂದುವರಿಸುವ ವಿಷಯದಲ್ಲಿ ಭರವಸೆಯಿಡಬಹುದಾದಂತವರಾರೂ ಇಲ್ಲ.
(87) ಅದು ತಮ್ಮ ರಬ್‌ನ ಕಡೆಯ ಕಾರುಣ್ಯವೇ ಹೊರತು ಇನ್ನೇನಲ್ಲ. ಖಂಡಿತವಾಗಿಯೂ ತಮ್ಮ ಮೇಲಿರುವ ಅವನ ಅನುಗ್ರಹವು ಮಹತ್ತರವಾಗಿದೆ.
(88) (ಓ ಪ್ರವಾದಿಯವರೇ!) ಹೇಳಿರಿ: “ಈ ಕುರ್‌ಆನ್‍ಗೆ ಸಮಾನವಾಗಿರುವ ಒಂದನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್‌ಗಳು ಒಟ್ಟುಗೂಡಿದರೂ ಸಹ ಖಂಡಿತವಾಗಿಯೂ ಇದಕ್ಕೆ ಸಮಾನವಾಗಿರುವುದನ್ನು ತರಲು ಅವರಿಂದಾಗದು. ಅವರಲ್ಲಿ ಕೆಲವರು ಇತರ ಕೆಲವರಿಗೆ ಬೆಂಬಲ ನೀಡಿದರೂ ಸರಿಯೇ”.
(89) ಖಂಡಿತವಾಗಿಯೂ ಈ ಕುರ್‌ಆನ್‍ನಲ್ಲಿ ನಾವು ಜನರಿಗೋಸ್ಕರ ಸರ್ವ ವಿಧದ ಉಪಮೆಗಳನ್ನೂ ವಿವರಿಸಿರುವೆವು. ಆದರೆ ಜನರಲ್ಲಿ ಹೆಚ್ಚಿನವರಿಗೂ ನಿಷೇಧಿಸುವುದಕ್ಕಾಗಿಯೇ ವಿನಾ ಮನಸ್ಸಾಗಲಿಲ್ಲ.
(90) ಅವರು ಹೇಳಿದರು: “ತಾವು ಭೂಮಿಯಿಂದ ನಮಗೆ ಒಂದು ಒರತೆಯನ್ನು ಹರಿಸುವ ತನಕ ನಾವೆಂದೂ ತಮ್ಮಲ್ಲಿ ವಿಶ್ವಾಸವಿಡಲಾರೆವು.
(91) ಅಥವಾ ತಮಗೆ ಖರ್ಜೂರ ಮತ್ತು ದ್ರಾಕ್ಷಿಯ ಒಂದು ತೋಟವಿದ್ದು, ತಾವು ಅದರ ನಡುವಿನಿಂದ ತುಂಬಿ ಹರಿಯುವ ಕಾಲುವೆಗಳನ್ನು ಹರಿಸುವ ತನಕ.”
(92) ಅಥವಾ ತಾವು ವಾದಿಸಿದಂತೆ ಆಕಾಶವನ್ನು ನಮ್ಮ ಮೇಲೆ ತುಂಡು ತುಂಡಾಗಿ ಬೀಳಿಸುವ ತನಕ(576) ಅಥವಾ ತಾವು ಅಲ್ಲಾಹುವನ್ನು ಮತ್ತು ಮಲಕ್‍ಗಳನ್ನು ಮುಖಾಮುಖಿಯಾಗಿ ತರುವ ತನಕ.
576. ಲೋಕಾಂತ್ಯದ ಬಗ್ಗೆ ಕುರ್‌ಆನ್ ಪ್ರಸ್ತಾಪಿಸಿದ ಭವಿಷ್ಯಗಳನ್ನು ಲೇವಡಿ ಮಾಡುತ್ತಾ ಅವರು ಹೀಗೆ ಹೇಳುತ್ತಿದ್ದರು.
(93) ಅಥವಾ ತಮಗೆ ಒಂದು ಸ್ವರ್ಣ ಭವನವುಂಟಾಗುವ ತನಕ, ಅಥವಾ ತಾವು ಆಕಾಶಕ್ಕೆ ಏರಿ ಹೋಗುವ ತನಕ. ನಮಗೆ ಓದಬಹುದಾದ ಒಂದು ಗ್ರಂಥವನ್ನು ತಾವು ನಮ್ಮ ಬಳಿಗೆ ಇಳಿಸಿಕೊಡುವ ತನಕ ತಾವು ಏರಿ ಹೋಗಿರುವುದಾಗಿ ನಾವೆಂದೂ ವಿಶ್ವಾಸವಿಡಲಾರೆವು”. (ಓ ಪ್ರವಾದಿಯವರೇ!) ಹೇಳಿರಿ: “ನನ್ನ ರಬ್ ಪರಮಪಾವನನು! ಸಂದೇಶವಾಹಕನಾಗಿರುವ ಒಬ್ಬ ಮಾನವ ಎಂಬುದರ ಹೊರತು ನಾನು ಇನ್ನೇನಾದರೂ ಆಗಿರುವೆನೇ?”(577)
577. ಹೇರಳವಾಗಿ ಅದ್ಭುತ ಕಾರ್ಯಗಳನ್ನು ತೋರಿಸುವ ಶಕ್ತಿ ಪ್ರವಾದಿಗಳಿಗಿಲ್ಲ. ಅಲ್ಲಾಹು ಅವರ ಮೂಲಕ ಅದ್ಭುತ ಕಾರ್ಯಗಳನ್ನು ಪ್ರಕಟಿಸಲು ಇಚ್ಛಿಸುವಾಗ ಅವು ಸಂಭವಿಸುತ್ತವೆ.
(94) ಜನರೆಡೆಗೆ ಸನ್ಮಾರ್ಗವು ಬಂದಾಗ ಅದರಲ್ಲಿ ವಿಶ್ವಾಸವಿಡಲು “ಅಲ್ಲಾಹು ಒಬ್ಬ ಮನುಷ್ಯನನ್ನು ಸಂದೇಶವಾಹಕನಾಗಿ ಕಳುಹಿಸಿರುವನೇ?” ಎಂಬ ಅವರ ಮಾತಿನ ಹೊರತು ಬೇರೇನೂ ಅವರನ್ನು ತಡೆದಿರಲಿಲ್ಲ.
(95) (ಓ ಪ್ರವಾದಿಯವರೇ!) ಹೇಳಿರಿ: “ಭೂಮಿಯಲ್ಲಿರುವುದು ಶಾಂತವಾಗಿ ನಡೆಯುವ ಮಲಕ್‍ಗಳಾಗಿರುತ್ತಿದ್ದರೆ ನಾವು ಅವರೆಡೆಗೆ ಸಂದೇಶವಾಹಕನಾಗಿ ಆಕಾಶದಿಂದ ಒಬ್ಬ ಮಲಕ್‍ನನ್ನೇ ಇಳಿಸುತ್ತಿದ್ದೆವು”.
(96) ಹೇಳಿರಿ: “ನನ್ನ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿ ಅಲ್ಲಾಹು ಸಾಕು. ಖಂಡಿತವಾಗಿಯೂ ಅವನು ತನ್ನ ದಾಸರ ಬಗ್ಗೆ ಸೂಕ್ಷ್ಮವಾಗಿ ವೀಕ್ಷಿಸುವವನೂ ಆಗಿರುವನು”.
(97) ಅಲ್ಲಾಹು ಯಾರನ್ನು ಸನ್ಮಾರ್ಗದಲ್ಲಿ ಸೇರಿಸುವನೋ ಅವನು ಸನ್ಮಾರ್ಗವನ್ನು ಪಡೆದವನಾಗಿರುವನು. ಅವನು ಯಾರನ್ನು ದುರ್ಮಾರ್ಗದಲ್ಲಿ ಸೇರಿಸುವನೋ ಅವರ ರಕ್ಷಕರಾಗಿ ತಾವು ಅವನ ಹೊರತು ಇನ್ನಾರನ್ನೂ ಕಾಣಲಾರಿರಿ. ಪುನರುತ್ಥಾನ ದಿನದಂದು ಮುಖವನ್ನು ನೆಲಕ್ಕೂರಿದವರಾಗಿ ಮತ್ತು ಅಂಧರು, ಮೂಕರು ಹಾಗೂ ಕಿವುಡರಾಗಿ ನಾವು ಅವರನ್ನು ಒಟ್ಟುಗೂಡಿಸುವೆವು. ಅವರ ವಾಸಸ್ಥಳವು ನರಕವಾಗಿರುವುದು. ಅದು ನಂದಿ ಹೋಗುವಾಗಲೆಲ್ಲ ನಾವು ಅವರಿಗೆ ಜ್ವಾಲೆಯನ್ನು ಹೆಚ್ಚಿಸಿಕೊಡುವೆವು.
(98) ಅದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿರುವುದಕ್ಕೆ ಮತ್ತು “ನಾವು ಮೂಳೆಗಳಾಗಿ ಮತ್ತು ಶಿಥಿಲ ಅವಶೇಷಗಳಾಗಿ ಮಾರ್ಪಟ್ಟ ಬಳಿಕ ಹೊಸದೊಂದು ಸೃಷ್ಟಿಯಾಗಿ ಪುನರುತ್ಥಾನಗೊಳಿಸಲಾಗುವೆವೇ?” ಎಂದು ಅವರು ಹೇಳಿರುವುದಕ್ಕೆ ಅವರಿಗಿರುವ ಪ್ರತಿಫಲವಾಗಿದೆ.
(99) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಅಲ್ಲಾಹುವಿಗೆ ಇವರಂತಿರುವವರನ್ನು ಸೃಷ್ಟಿಸುವ ಸಾಮರ್ಥ್ಯವಿದೆಯೆಂದು ಇವರು ಮನಗಂಡಿಲ್ಲವೇ? ಅವನು ಇವರಿಗೊಂದು ಅವಧಿಯನ್ನು ನಿಶ್ಚಯಿಸಿರುವನು. ಅದರಲ್ಲಿ ಸಂದೇಹವೇ ಇಲ್ಲ. ಆದರೆ ಈ ಅಕ್ರಮಿಗಳಿಗೆ ನಿಷೇಧಿಸುವುದಕ್ಕಾಗಿಯೇ ವಿನಾ ಮನಸ್ಸಾಗಲಿಲ್ಲ.
(100) (ಓ ಪ್ರವಾದಿಯವರೇ!) ಹೇಳಿರಿ: “ನನ್ನ ರಬ್‌ನ ಕಾರುಣ್ಯದ ಖಜಾನೆಗಳು ನಿಮ್ಮ ಸ್ವಾಧೀನದಲ್ಲೇನಾದರೂ ಇರುತ್ತಿದ್ದರೆ ಖರ್ಚಾಗಬಹುದೆಂಬ ಭಯದಿಂದ ನೀವು ಹಿಡಿದಿಡುತ್ತಿದ್ದಿರಿ. ಮನುಷ್ಯನು ಕಡು ಜಿಪುಣನಾಗಿರುವನು”.
(101) ಖಂಡಿತವಾಗಿಯೂ ನಾವು ಮೂಸಾರಿಗೆ ಸ್ಪಷ್ಟವಾದ ಒಂಬತ್ತು ದೃಷ್ಟಾಂತಗಳನ್ನು ನೀಡಿದ್ದೆವು. ಅವರು (ಮೂಸಾ) ಅವರ ಬಳಿಗೆ ಬಂದಾಗ, “ಓ ಮೂಸಾ! ಖಂಡಿತವಾಗಿಯೂ ನಾನು ನಿನ್ನನ್ನು ಮಾಟಬಾಧಿತ ವ್ಯಕ್ತಿಯೆಂದು ಭಾವಿಸುತ್ತಿರುವೆನು” ಎಂದು ಫಿರ್‍ಔನ್ ಅವರೊಂದಿಗೆ ಹೇಳಿದ ಸಂದರ್ಭದ ಬಗ್ಗೆ ಇಸ್ರಾಈಲ್ ಸಂತತಿಗಳೊಂದಿಗೆ ಕೇಳಿ ನೋಡಿರಿ.(578)
578. ಸತ್ಯನಿಷೇಧಿಗಳಿಗೆ ಪ್ರವಾದಿ ಮೂಸಾ(ಅ) ರವರ ಪ್ರವಾದಿತ್ವವು ಮನವರಿಕೆಯಾಗುವುದಕ್ಕಾಗಿ ಅಲ್ಲಾಹು ಅವರ ಮೂಲಕ ಒಂಬತ್ತು ಪುರಾವೆಗಳನ್ನು ತೋರಿಸಿಕೊಟ್ಟನು. ಒಂದು: ಅವರ ಕೈ ಬೆಳ್ಳಗಾಗುವುದು. ಎರಡು: ಅವರ ಬೆತ್ತ ಹಾವಾಗುವುದು. ಮೂರರಿಂದ ಒಂಬತ್ತರವರೆಗಿನ ಪುರಾವೆಗಳು ಅಲ್ಲಾಹು ಅವರ ವಿರೋಧಿಗಳ ಮೇಲೆ ಇಳಿಸಿದ ಶಿಕ್ಷೆಗಳಾದ ಬರ, ಸಾಮಗ್ರಿಗಳ ಕೊರತೆ, ಪ್ರಳಯ, ಮಿಡತೆ, ಹೇನು, ಕಪ್ಪೆ ಮತ್ತು ರಕ್ತವಾಗಿದ್ದವು.
(102) ಅವರು ಹೇಳಿದರು: “ಕಣ್ತೆರೆಸುವ ದೃಷ್ಟಾಂತಗಳಾಗಿ ಇವುಗಳನ್ನು ಅವತೀರ್ಣಗೊಳಿಸಿದವನು ಆಕಾಶಗಳ ಮತ್ತು ಭೂಮಿಯ ರಬ್‌ನ ವಿನಾ ಇನ್ನಾರೂ ಅಲ್ಲವೆಂದು ಖಂಡಿತವಾಗಿಯೂ ನೀನು ಅರಿತುಕೊಂಡಿರುವೆ. ಓ ಫಿರ್‍ಔನ್! ಖಂಡಿತವಾಗಿಯೂ ನೀನು ನಾಶ ಹೊಂದಿದವನಾಗಿರುವೆ ಎಂದು ನಾನು ಭಾವಿಸುತ್ತಿರುವೆನು”.
(103) ಅವನು ಅವರನ್ನು (ಇಸ್ರಾಈಲರನ್ನು) ಊರಿನಿಂದ ಹೊರಗಟ್ಟಲು ನಿರ್ಧರಿಸಿದನು. ಆದರೆ ನಾವು ಅವನನ್ನೂ ಅವನ ಜೊತೆಗಿರುವವರೆಲ್ಲರನ್ನೂ ಮುಳುಗಿಸಿದೆವು.
(104) ಅವನ (ವಿನಾಶದ) ಬಳಿಕ ನಾವು ಇಸ್ರಾಈಲ್ ಸಂತತಿಗಳೊಂದಿಗೆ ಹೇಳಿದೆವು: “ನೀವು ಈ ಭೂಮಿಯಲ್ಲಿ ವಾಸಿಸಿರಿ. ತರುವಾಯ ಪರಲೋಕದ ವಾಗ್ದಾನವು ಬಂದರೆ(579) ನಿಮ್ಮೆಲ್ಲರನ್ನೂ ನಾವು ಒಟ್ಟಾಗಿ ಕರೆತರುವೆವು”.
579. ಪರಲೋಕದಲ್ಲಿ ಮನುಷ್ಯರೆಲ್ಲರನ್ನು ಸಂಪೂರ್ಣವಾಗಿ ಒಟ್ಟುಗೂಡಿಸುವೆನೆಂದು ಅಲ್ಲಾಹು ವಾಗ್ದಾನ ಮಾಡಿದ ಸಮಯವು ಬಂದರೆ ಎಂದರ್ಥ.
(105) ಇದನ್ನು (ಕುರ್‌ಆನನ್ನು) ನಾವು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು ಮತ್ತು ಇದು ಸತ್ಯದೊಂದಿಗೇ ಅವತೀರ್ಣಗೊಂಡಿದೆ.(580) ತಮ್ಮನ್ನು ನಾವು ಶುಭವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ವಿನಾ ಕಳುಹಿಸಿಲ್ಲ.
580. ಕುರ್‌ಆನ್ ಅಲ್ಲಾಹುವಿನ ಸನ್ನಿಧಿಯಿಂದ ಪ್ರವಾದಿರವರಿಗೆ ತಲುಪುವುದರ ಮಧ್ಯೆ ಅದರಲ್ಲಿ ಅಸತ್ಯದ ಯಾವುದೇ ಅಂಶವೂ ಬೆರೆತಿಲ್ಲ ಎಂದರ್ಥ.
(106) ತಾವು ಜನರಿಗೆ ಸಾವಕಾಶವಾಗಿ ಓದಿಕೊಡುವ ಸಲುವಾಗಿ ನಾವು ಕುರ್‌ಆನನ್ನು (ಹಲವು ಭಾಗಗಳಾಗಿ) ವಿಂಗಡಿಸಿರುವೆವು. ನಾವು ಅದನ್ನು ಹಂತ ಹಂತವಾಗಿ ಅವತೀರ್ಣಗೊಳಿಸಿರುವೆವು.
(107) (ಓ ಪ್ರವಾದಿಯವರೇ!) ಹೇಳಿರಿ “ನೀವು ಇದರಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿರಿ ಅಥವಾ ವಿಶ್ವಾಸವಿಡದಿರಿ. ಖಂಡಿತವಾಗಿಯೂ ಈ ಮೊದಲು ಜ್ಞಾನವನ್ನು ನೀಡಲಾಗಿರುವವರು ಯಾರೋ ಅವರಿಗೆ ಇದನ್ನು ಓದಿಕೊಡಲಾದರೆ ಅವರು ಸಾಷ್ಟಾಂಗವೆರಗುತ್ತಾ ಮುಖಗಳ ಮೇಲೆ ಬೀಳುವರು”.(581)
581. ಪೂರ್ವಗ್ರಂಥಗಳ ತಿರುಳನ್ನು ಸರಿಯಾಗಿ ಮನದಟ್ಟು ಮಾಡಿಕೊಂಡವರು ಕುರ್‌ಆನನ್ನು ಆಲಿಸುವಾಗ ಅದರ ಅಧಿಕೃತತೆಯನ್ನು ಅರಿತುಕೊಂಡು ಅಲ್ಲಾಹುವಿಗೆ ಸಾಷ್ಟಾಂಗ ಮಾಡುವರು.
(108) ಅವರು ಹೇಳುವರು: “ನಮ್ಮ ರಬ್ ಪರಮ ಪಾವನನು! ಖಂಡಿತವಾಗಿಯೂ ನಮ್ಮ ರಬ್‌ನ ವಾಗ್ದಾನವು ಜಾರಿಯಾಗುವಂತದ್ದೇ ಆಗಿದೆ”.
(109) ಅವರು ಅಳುತ್ತಾ ಮುಖಗಳ ಮೇಲೆ ಬೀಳುವರು. ಅದು ಅವರಿಗೆ ವಿನಯತೆಯನ್ನು ಹೆಚ್ಚಿಸುವುದು.
(110) (ಓ ಪ್ರವಾದಿಯವರೇ!) ಹೇಳಿರಿ: “ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ನೀವು ಯಾವ ಹೆಸರಲ್ಲಿ ಕರೆದರೂ ಅತ್ಯುತ್ಕೃಷ್ಟವಾದ ನಾಮಗಳು ಅವನಿಗಿರುವುದಾಗಿವೆ. ತಾವು ನಮಾಝನ್ನು ಉಚ್ಛಧ್ವನಿಯಲ್ಲಾಗಲಿ ಮೆಲುಧ್ವನಿಯಲ್ಲಾಗಲಿ ನಿರ್ವಹಿಸದಿರಿ. ಅವುಗಳ ನಡುವಿನ ಮಾರ್ಗವನ್ನು ಅರಸಿರಿ”.
(111) ಹೇಳಿರಿ: “ಸಂತತಿಯನ್ನು ಮಾಡಿಕೊಳ್ಳದಿರುವ, ಆಧಿಪತ್ಯದಲ್ಲಿ ಸಹಭಾಗಿಯಿಲ್ಲದಿರುವ ಮತ್ತು ನಿಂದ್ಯತೆಯಿಂದ ರಕ್ಷಿಸಿಕೊಳ್ಳಲು ಯಾವುದೇ ರಕ್ಷಕನ ಅಗತ್ಯವಿಲ್ಲದಿರುವ ಅಲ್ಲಾಹುವಿಗೆ ಸ್ತುತಿ”. ಅವನನ್ನು ಸರಿಯಾದ ವಿಧದಲ್ಲಿ ಮಹತ್ವೀಕರಿಸಿರಿ.