94 - Ash-Sharh ()

|

(1) ನಾವು ತಮಗೆ ತಮ್ಮ ಹೃದಯವನ್ನು ವಿಶಾಲಗೊಳಿಸಲಿಲ್ಲವೇ?

(2) ತಮ್ಮ ಭಾರವನ್ನು ನಾವು ತಮ್ಮಿಂದ ಕೆಳಗಿಳಿಸಿದೆವು.

(3) ಅಂದರೆ ತಮ್ಮ ಬೆನ್ನನ್ನು ಮುರಿಯುತ್ತಿದ್ದ ಭಾರವನ್ನು.

(4) ನಾವು ತಮಗೆ ತಮ್ಮ ಕೀರ್ತಿಯನ್ನು ಉತ್ತುಂಗ ಕ್ಕೇರಿಸಿದೆವು.(1410)
1410. ಕಠಿಣ ವಿರೋಧಗಳನ್ನು ಎದುರಿಸಿಕೊಂಡು ಪ್ರವಾದಿ(ಸ) ರವರು ಬದುಕನ್ನು ಸಾಗಿಸಿದ್ದರು. ಹೆಚ್ಚಿನವರೂ ಅಂತಹ ಸಂಕಷ್ಟಗಳ ಮುಂದೆ ಹತಾಶರಾಗುವುದು ಅಥವಾ ಅಸಹಿಷ್ಣುಗಳಾಗುವುದು ಖಂಡಿತ. ಆದರೆ ಅಲ್ಲಾಹುವಿನ ವಿಶೇಷ ಅನುಗ್ರಹದಿಂದಾಗಿ ಪ್ರವಾದಿ(ಸ) ರವರು ಯಾವಾಗಲೂ ಆತ್ಮವಿಶ್ವಾಸ ಮತ್ತು ಹೃದಯ ವೈಶಾಲ್ಯತೆಯೊಂದಿಗೆ ವರ್ತಿಸುತ್ತಿದ್ದರು. ಎಲ್ಲ ಪ್ರಯಾಸ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಹಿಮ್ಮೆಟ್ಟಿಸಲು ಅವರಿಗೆ ಇದು ನೆರವಾಗಿತ್ತು. ಮನುಷ್ಯ ಚರಿತ್ರೆಯಲ್ಲಿ ಅನುಪಮವಾದ ಗುರಿಗಳನ್ನು ಸಾಧಿಸಲು ಅವರನ್ನು ಪ್ರಾಪ್ತರನ್ನಾಗಿಸಿದ್ದು ಕೂಡ ಇದೇ ಆಗಿತ್ತು.

(5) ಆದ್ದರಿಂದ ಖಂಡಿತವಾಗಿಯೂ ಇಕ್ಕಟ್ಟಿನೊಂದಿಗೆ ಒಂದು ಅನುಕೂಲತೆಯಿರುವುದು.

(6) ಖಂಡಿತವಾಗಿಯೂ ಇಕ್ಕಟ್ಟಿನೊಂದಿಗೆ ಒಂದು ಅನುಕೂಲತೆಯಿರುವುದು.(1411)
1411. ಹೆಚ್ಚಿನ ಜನರ ಸೋಲಿಗೆ ಕಾರಣ ಅಶುಭ ಚಿಂತನೆಗಳು ಮತ್ತು ಜೀವನದಲ್ಲಿರುವ ಹತಾಶೆಯಾಗಿದೆ. ಯಾವುದಾದರೂ ಕ್ಷೇತ್ರದಲ್ಲಿ ಸ್ವಲ್ಪ ಇಕ್ಕಟ್ಟುಂಟಾದರೆ ಜಿಗುಪ್ಸೆಪಡುವವರಿಗೆ ಅಮೂಲ್ಯವಾಗಿರುವುದನ್ನೇನೂ ಸಾಧಿಸಲು ಸಾಧ್ಯವಾಗದು. ಆದರೆ ಕ್ಲೇಶ ಮತ್ತು ತ್ಯಾಗಗಳ ಫಲವಾಗಿ ಅನುಕೂಲತೆ ಮತ್ತು ವೈಶಾಲ್ಯತೆಗಳು ಲಭ್ಯವಾಗುತ್ತವೆ ಎಂಬ ಸತ್ಯವನ್ನು ಗ್ರಹಿಸಿದ ವ್ಯಕ್ತಿಯನ್ನು ಯಾವುದೇ ಅಡ್ಡಿಯೂ ದಣಿವುಗೊಳಿಸಲಾರದು. ಈ ಸೂಕ್ತಿಯು ನಮಗೆ ನೀಡುವ ಪಾಠ ಇದಾಗಿದೆ.

(7) ಆದ್ದರಿಂದ ತಮಗೆ ವಿರಾಮ ಸಿಕ್ಕರೆ ತಾವು (ಆರಾಧನೆಗಳಲ್ಲಿ) ಪರಿಶ್ರಮಿಸಿರಿ.(1412)
1412. ಪರಿಶ್ರಮಗಳನ್ನು ಮತ್ತು ಪ್ರಯತ್ನಗಳನ್ನು ಎಂದೂ ಸ್ಥಗಿತಗೊಳಿಸಬಾರದು. ಆಲಸ್ಯವನ್ನು ಬಿಟ್ಟು ನಿರಂತರ ಸತ್ಕರ್ಮಗಳಲ್ಲಿ ಮಗ್ನರಾಗಿರಿ. ಅದು ಬದುಕಿನ ಯಶಸ್ಸಿಗಿರುವ ಅನಿವಾರ್ಯ ಘಟಕವಾಗಿದೆ.

(8) ತಮ್ಮ ರಬ್‌ನೆಡೆಗೇ ತಮ್ಮ ಹಂಬಲವನ್ನು ಸಮರ್ಪಿಸಿರಿ.