(1) ನಕ್ಷತ್ರ ಪುಂಜಗಳಿರುವ ಆಕಾಶದ ಮೇಲಾಣೆ!
(2) ವಾಗ್ದಾನ ಮಾಡಲಾಗಿರುವ ಆ ದಿನದ ಮೇಲಾಣೆ!
(3) ಸಾಕ್ಷಿ ಮತ್ತು ಸಾಕ್ಷ್ಯವಹಿಸಲಾಗುವ ವಿಷಯದ ಮೇಲಾಣೆ!
(4) ಆ ಹೊಂಡದವರು ನಾಶವಾಗಲಿ.
(5) ಅಂದರೆ ಸೌದೆ ತುಂಬಲಾದ ಅಗ್ನಿಯ ಜನರು.
(6) ಅವರು ಅದರ ಬಳಿ ಕುಳಿತಿದ್ದ ಸಂದರ್ಭ.
(7) ಅವರು ಸತ್ಯವಿಶ್ವಾಸಿಗಳೊಂದಿಗೆ ಏನು ಮಾಡುತ್ತಿದ್ದರೋ ಅದಕ್ಕೆ ಅವರು ಪ್ರತ್ಯಕ್ಷದರ್ಶಿಗಳಾಗಿದ್ದರು.(1376)
1376. ಯಥೇಷ್ಟವಾಗಿ ಸೌದೆಗಳನ್ನು ಸಂಗ್ರಹಿಸಿ ಅಗ್ನಿ ಕುಂಡವನ್ನು ನಿರ್ಮಿಸಿ, ಸತ್ಯವಿಶ್ವಾಸಿಗಳನ್ನು ಅದಕ್ಕೆಸೆದು, ಅವರು ಸುಟ್ಟು ಕರಕಲಾಗುವುದನ್ನು ಕಂಡು ಆನಂದಪಡುವ ಕಠೋರ ಹೃದಯದವರಾದ ದುಷ್ಟರು ಹಿಂದಿನ ಕಾಲದಲ್ಲಿದ್ದರು.
(8) ಅವರ (ಆ ಸತ್ಯವಿಶ್ವಾಸಿಗಳ) ಮೇಲೆ ಅವರು (ದುಷ್ಟರು) ಹೊರಿಸಿದ ಆರೋಪವು ಅವರು ಪ್ರತಾಪಶಾಲಿಯೂ, ಸ್ತುತ್ಯರ್ಹನೂ ಆಗಿರುವ ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವರು ಎಂಬುದು ಮಾತ್ರವಾಗಿತ್ತು.
(9) ಅಂದರೆ ಆಕಾಶಗಳ ಮತ್ತು ಭೂಮಿಯ ಮೇಲೆ ಆಧಿಪತ್ಯವನ್ನು ಹೊಂದಿರುವ ಅಲ್ಲಾಹವಿನಲ್ಲಿ. ಅಲ್ಲಾಹು ಎಲ್ಲ ವಿಷಯಗಳ ಮೇಲೂ ಸಾಕ್ಷಿಯಾಗಿರುವನು.
(10) ಸತ್ಯವಿಶ್ವಾಸಿಗಳನ್ನು ಮತ್ತು ಸತ್ಯವಿಶ್ವಾಸಿನಿಯರನ್ನು ಹಿಂಸಿಸುವವರು ಮತ್ತು ಆ ಬಳಿಕ ಪಶ್ಚಾತ್ತಾಪ ಪಡದವರು ಯಾರೋ ಅವರಿಗೆ ಖಂಡಿತವಾಗಿಯೂ ನರಕಶಿಕ್ಷೆಯಿದೆ. ಅವರಿಗೆ ಸುಟ್ಟು ಕರಕಲಾಗಿಸುವ ಶಿಕ್ಷೆಯಿದೆ.
(11) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಖಂಡಿತವಾಗಿಯೂ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಮಹಾ ವಿಜಯವು ಅದೇ ಆಗಿದೆ.
(12) ಖಂಡಿತವಾಗಿಯೂ ತಮ್ಮ ರಬ್‌ನ ಹಿಡಿತವು ಕಠೋರವಾದುದೇ ಆಗಿದೆ.
(13) ಖಂಡಿತವಾಗಿಯೂ ಮೊದಲ ಬಾರಿ ಸೃಷ್ಟಿಸುವವನು ಮತ್ತು ಪುನರಾವರ್ತಿಸುವವನು ಅವನೇ ಆಗಿರುವನು.
(14) ಅವನು ಅತ್ಯಧಿಕ ಕ್ಷಮಿಸುವವನೂ, ಅತ್ಯಧಿಕ ಪ್ರೀತಿಯುಳ್ಳವನೂ ಆಗಿರುವನು.
(15) ಅವನು ಸಿಂಹಾಸನದ ಒಡೆಯನೂ, ಮಹತ್ವವುಳ್ಳವನೂ ಆಗಿರುವನು.
(16) ತಾನು ಇಚ್ಛಿಸುವುದನ್ನು ಸಂಪೂರ್ಣವಾಗಿ ಜಾರಿಗೆ ತರುವವನೂ ಆಗಿರುವನು.
(17) ಆ ಸೈನ್ಯಗಳ ವೃತ್ತಾಂತವು ತಮ್ಮ ಬಳಿಗೆ ಬಂದಿದೆಯೇ?
(18) ಫಿರ್‍ಔನ್‍ನ ಮತ್ತು ಸಮೂದ್‍ನ ವೃತ್ತಾಂತ?
(19) ಅಲ್ಲ, ಸತ್ಯನಿಷೇಧಿಗಳು ನಿಷೇಧಿಸುವುದರಲ್ಲೇ ಮಗ್ನರಾಗಿರುವರು.
(20) ಅಲ್ಲಾಹು ಅವರ ಹಿಂದಿನಿಂದ (ಅವರನ್ನು) ಆವರಿಸಿಕೊಳ್ಳುವವನಾಗಿರುವನು.
(21) ಅಲ್ಲ, ಅದು ಮಹತ್ವಪೂರ್ಣವಾದ ಒಂದು ಕುರ್‌ಆನ್ ಆಗಿದೆ.
(22) ಅದು ಸುರಕ್ಷಿತವಾದ ಒಂದು ಫಲಕದಲ್ಲಿದೆ.(1377)
1377. ‘ಅಲ್ಲೌಹುಲ್ ಮಹ್‍ಫೂಝ್’ (ಸುರಕ್ಷಿತ ಫಲಕ) ಎಂಬುದು ಅಲ್ಲಾಹುವಿನ ಸೂಕ್ತಿಗಳನ್ನು ದಾಖಲಿಸಲಾಗಿರುವ ಮತ್ತು ಅವನ ವಿಶೇಷ ರಕ್ಷಣೆಯಲ್ಲಿರುವ ಒಂದು ದಾಖಲೆಯಾಗಿದೆ.