(1) (ಓ ಪ್ರವಾದಿಯವರೇ!) ಸಮರಾರ್ಜಿತ ಸೊತ್ತುಗಳ ಬಗ್ಗೆ ಅವರು ತಮ್ಮೊಂದಿಗೆ ಕೇಳುವರು.(265) ಹೇಳಿರಿ: ‘ಸಮರಾರ್ಜಿತ ಸೊತ್ತುಗಳು ಅಲ್ಲಾಹುವಿಗೆ ಮತ್ತು ಸಂದೇಶವಾಹಕರಿಗಿರುವುದಾಗಿದೆ’. ಆದ್ದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬಂಧಗಳನ್ನು ಉತ್ತಮಗೊಳಿಸಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ.
265. ಇದು ಬದ್ರ್ ಯುದ್ಧದಲ್ಲಿ ಮುಸ್ಲಿಮರಿಗೆ ಸಿಕ್ಕಿದ ಸಮರಾರ್ಜಿತ ಸೊತ್ತನ್ನು ಪಾಲು ಮಾಡುವ ಸಂದರ್ಭದಲ್ಲಿ ವಿವಾದವೆಬ್ಬಿಸಿದವರಿಗೆ ನೀಡಿದ ಉತ್ತರವಾಗಿದೆ. ಅಲ್ಲಾಹು ಮತ್ತು ಅವನ ಪ್ರವಾದಿ(ಸ) ರವರು ವಿಧಿಸುವ ಪ್ರಕಾರ ಸಮರಾರ್ಜಿತ ಸೊತ್ತನ್ನು ಪಾಲು ಮಾಡಬೇಕಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು 41ನೇ ಸೂಕ್ತಿಯಲ್ಲಿ ಕಾಣಬಹುದು.
(2) ಅಲ್ಲಾಹುವಿನ ಬಗ್ಗೆ ಪ್ರಸ್ತಾಪಿಸಲಾಗುವಾಗ ಹೃದಯಗಳು ಭಯದಿಂದ ನಡುಗುವವರು, ಅವನ ದೃಷ್ಟಾಂತಗಳನ್ನು ಓದಿಕೊಡಲಾದಾಗ ವಿಶ್ವಾಸವು ಅಧಿಕಗೊಳ್ಳುವವರು ಮತ್ತು ತಮ್ಮ ರಬ್ನ ಮೇಲೆ ಭರವಸೆಯಿಡುವವರು ಮಾತ್ರ ಸತ್ಯವಿಶ್ವಾಸಿಗಳಾಗಿರುವರು.
(3) ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ನೀಡಿದ್ದರಿಂದ ವ್ಯಯಿಸುವವರು.
(4) ನಿಜವಾಗಿಯೂ ಸತ್ಯವಿಶ್ವಾಸಿಗಳು ಅವರು ಮಾತ್ರವಾಗಿರುವರು. ಅವರಿಗೆ ಅವರ ರಬ್ನ ಬಳಿ ಹಲವು ಪದವಿಗಳಿವೆ. ಪಾಪಮುಕ್ತಿಯೂ, ಔದಾರ್ಯಪೂರ್ಣ ಅನ್ನಾಧಾರವೂ ಇದೆ.
(5) ವಿಶ್ವಾಸಿಗಳ ಪೈಕಿ ಒಂದು ಪಂಗಡವು ಅಪ್ರಿಯತೆ ಹೊಂದಿದ್ದರೂ ಸಹ ತಮ್ಮ ರಬ್ ತಮ್ಮನ್ನು ಸತ್ಯದೊಂದಿಗೆ ತಮ್ಮ ಮನೆಯಿಂದ ಹೊರಡಿಸಿದಂತೆ.(266)
266. ಪ್ರವಾದಿ(ಸ) ರವರು ಬದ್ರ್ಗೆ ಹೊರಟು ನಿಂತಾಗ ಅದನ್ನು ಇಷ್ಟಪಡದ ಕೆಲವರಿದ್ದರು. ಒಂದೋ ಕುರೈಶಿಗಳ ವ್ಯಾಪಾರ ತಂಡವನ್ನು (ಶಸ್ತ್ರರಹಿತ ತಂಡವನ್ನು) ಸೋಲಿಸಲು ಸಾಧ್ಯವಾಗಬಹುದು ಅಥವಾ ಖುರೈಶಿಗಳ ಶಸ್ತ್ರಸಜ್ಜಿತ ಸೇನೆಯೊಂದಿಗೆ ಯುದ್ಧ ಮಾಡಬೇಕಾಗಿ ಬರಬಹುದು ಎಂದು ಅಲ್ಲಾಹು ಪ್ರವಾದಿ(ಸ) ರವರ ಮೂಲಕ ಅವರಿಗೆ ತಿಳಿಸಿದ್ದನು. ಯುದ್ಧಕ್ಕೆ ಹೋಗುವ ವಿಷಯದಲ್ಲಿ ಕೆಲವರಿಗೆ ತೀವ್ರ ಸಂಕಟವುಂಟಾಗಿತ್ತು. ವ್ಯಾಪಾರ ಸರಕುಗಳನ್ನು ವಶಪಡಿಸಬೇಕು, ಆದರೆ ಕುರೈಶೀ ಸೈನ್ಯವನ್ನು ಎದುರಿಸುವ ಸನ್ನಿವೇಶ ಬರಬಾರದೆಂಬುದು ಅವರ ಇಂಗಿತವಾಗಿತ್ತು. ಆದರೆ ಅಲ್ಲಾಹುವಿನ ವಿಧಿಯು ನಿರ್ಣಾಯಕವಾದ ಬದ್ರ್ ಯುದ್ಧವು ಸಂಭವಿಸಬೇಕೆಂದಾಗಿತ್ತು. ಅಲ್ಲಾಹು ಅಸತ್ಯವನ್ನು ಪರಾಭವಗೊಳಿಸಿ ಸತ್ಯವನ್ನು ಗೆಲ್ಲಿಸಿದನು.
(6) ಸತ್ಯವು ಸ್ಪಷ್ಟವಾದ ಬಳಿಕವೂ ಅವರು ಅದರ ಬಗ್ಗೆ ತಮ್ಮೊಂದಿಗೆ ತರ್ಕಿಸುತ್ತಿರುವರು; ಅವರು ನೋಡುತ್ತಿರುವಂತೆಯೇ ಅವರನ್ನು ಮರಣದೆಡೆಗೆ ಸಾಗಿಸಲಾಗುತ್ತಿದೆಯೋ ಎಂಬಂತೆ.
(7) ಎರಡು ಬಣಗಳ ಪೈಕಿ ಒಂದನ್ನು ಖಂಡಿತವಾಗಿಯೂ ನಿಮಗೆ ಅಧೀನಪಡಿಸಿಕೊಡುವೆನೆಂದು ಅಲ್ಲಾಹು ನಿಮ್ಮೊಂದಿಗೆ ವಾಗ್ದಾನ ಮಾಡಿದ ಸಂದರ್ಭ(ವನ್ನು ಸ್ಮರಿಸಿರಿ). ನಿರಾಯುಧ ಬಣವು ನಿಮಗೆ ಅಧೀನವಾಗಬೇಕೆಂದು ನೀವು ಆಶಿಸುತ್ತಿದ್ದಿರಿ. ಆದರೆ ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ವಾಸ್ತವೀಕರಿಸಲು ಮತ್ತು ಸತ್ಯನಿಷೇಧಿಗಳ ಬೇರನ್ನು ಕತ್ತರಿಸಲು ಇಚ್ಛಿಸಿದ್ದನು.
(8) ಅದು ಸತ್ಯವನ್ನು ಸತ್ಯವಾಗಿ ತೋರಿಸುವ ಸಲುವಾಗಿ ಮತ್ತು ಅಸತ್ಯವನ್ನು ನಿಷ್ಪಲಗೊಳಿಸುವ ಸಲುವಾಗಿದೆ. ಅಪರಾಧಿಗಳು ಎಷ್ಟು ಅಸಹ್ಯಪಟ್ಟರೂ ಸರಿಯೇ.
(9) ನೀವು ನಿಮ್ಮ ರಬ್ನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಸಾವಿರ ಮಲಕ್ಗಳನ್ನು ಎಡೆಬಿಡದೆ ಕಳುಹಿಸುವ ಮೂಲಕ ನಾನು ನಿಮಗೆ ಸಹಾಯ ಮಾಡುವೆನು ಎಂದು ಅವನು ನಿಮಗೆ ಉತ್ತರವಿತ್ತನು.
(10) ನಿಮಗೊಂದು ಶುಭವಾರ್ತೆಯಾಗಿ ಮತ್ತು ನಿಮ್ಮ ಹೃದಯಗಳಿಗೆ ನೆಮ್ಮದಿಯನ್ನು ನೀಡುವುದಕ್ಕಾಗಿ ವಿನಾ ಅಲ್ಲಾಹು ಅದನ್ನು ಮಾಡಿರಲಿಲ್ಲ. ಅಲ್ಲಾಹುವಿನಿಂದಲ್ಲದೆ ಯಾವುದೇ ಸಹಾಯವೂ ಇಲ್ಲ.(267) ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.
267. ಸಹಾಯವು ಯಾವುದೇ ವಿಧದಲ್ಲಿರಲಿ ಅಥವಾ ಯಾರಿಂದಲೇ ಇರಲಿ, ಆತ್ಯಂತಿಕವಾದ ವಿಶ್ಲೇಷಣೆಯಲ್ಲಿ ಅದು ಅಲ್ಲಾಹುವಿನಿಂದಲೇ ಆಗಿದೆ. ಅವನು ತೀರ್ಮಾನಿಸದೆ ಯಾವುದೇ ಸಂಗತಿಯೂ ಸಂಭವಿಸಲಾರದು.
(11) ಅಲ್ಲಾಹು ತನ್ನ ವತಿಯ ಮನಃಶಾಂತಿಯ ಮೂಲಕ ನಿಮ್ಮನ್ನು ತೂಕಡಿಕೆಯಿಂದ ಆವರಿಸಿಕೊಂಡ ಸಂದರ್ಭ(ವನ್ನು ಸ್ಮರಿಸಿರಿ). ನಿಮ್ಮನ್ನು ಶುದ್ಧೀಕರಿಸಲು, ಸೈತಾನನ ದುರ್ಬೋಧನೆಯನ್ನು ನಿಮ್ಮಿಂದ ತೊಲಗಿಸಲು, ನಿಮ್ಮ ಹೃದಯಗಳಿಗೆ ಸ್ಥೈರ್ಯವನ್ನು ನೀಡಲು ಮತ್ತು ಪಾದಗಳನ್ನು ಅಚಲಗೊಳಿಸಲು ಅವನು ನಿಮ್ಮ ಮೇಲೆ ಆಕಾಶದಿಂದ ಮಳೆಯನ್ನು ಸುರಿಸಿದ ಸಂದರ್ಭ(ವನ್ನು ಸ್ಮರಿಸಿರಿ).
(12) ‘ನಾನು ನಿಮ್ಮೊಂದಿಗಿರುವೆನು. ಆದ್ದರಿಂದ ನೀವು ಸತ್ಯವಿಶ್ವಾಸಿಗಳನ್ನು ಅಚಲರಾಗಿ ನಿಲ್ಲಿಸಿರಿ. ಸತ್ಯನಿಷೇಧಿಗಳ ಹೃದಯಗಳಲ್ಲಿ ನಾನು ಭಯವನ್ನು ಹಾಕುವೆನು. ಆದ್ದರಿಂದ ನೀವು ಕತ್ತುಗಳ ಮೇಲಿನಿಂದ ಕಡಿಯಿರಿ ಮತ್ತು ಅವರ ಬೆರಳುಗಳೆಲ್ಲವನ್ನೂ ಕಡಿಯಿರಿ’ ಎಂದು ತಮ್ಮ ರಬ್ ಮಲಕ್ಗಳಿಗೆ ಬೋಧನೆ ನೀಡಿದ ಸಂದರ್ಭ(ವನ್ನು ಸ್ಮರಿಸಿರಿ).
(13) ಅದು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ನಿಂತಿರುವುದರ ಫಲವಾಗಿದೆ. ಯಾರಾದರೂ ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ನಿಂತರೆ ಖಂಡಿತವಾಗಿಯೂ ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿರುವನು.
(14) ಅಗೋ ಅದರ ರುಚಿಯನ್ನು ಆಸ್ವಾದಿಸಿರಿ. ನರಕ ಶಿಕ್ಷೆಯಿರುವುದು ಸತ್ಯನಿಷೇಧಿಗಳಿಗಾಗಿದೆ ಎಂಬುದನ್ನು (ಅರಿತುಕೊಳ್ಳಿರಿ).
(15) ಓ ಸತ್ಯವಿಶ್ವಾಸಿಗಳೇ! ಸತ್ಯನಿಷೇಧಿಗಳು ಯುದ್ಧಸಜ್ಜಿತರಾಗಿ ಬರುವುದನ್ನು ನೀವು ಕಂಡರೆ, ನೀವು ಅವರಿಂದ ಬೆನ್ನು ತಿರುಗಿಸಿ ಓಡದಿರಿ.
(16) ಯುದ್ಧ(ತಂತ್ರ)ಕ್ಕಾಗಿ ಸ್ಥಳ ಬದಲಾವಣೆ ಮಾಡುವುದಕ್ಕಾಗಿ ಅಥವಾ ಸ್ವಂತ ಗುಂಪಿನೊಂದಿಗೆ ಸೇರುವುದಕ್ಕಾಗಿ ವಿನಾ ಯಾರಾದರೂ ಅಂದು ಅವರಿಂದ (ಶತ್ರುಗಳ ಮುಂದಿನಿಂದ) ಬೆನ್ನು ತಿರುಗಿಸುವುದಾದರೆ ಅವನು ಅಲ್ಲಾಹುವಿನ ಕ್ರೋಧಕ್ಕೆ ಪಾತ್ರನಾಗುವನು. ಅವನ ವಾಸಸ್ಥಳವು ನರಕವಾಗಿರುವುದು. ಆ ಸ್ಥಳ ಎಷ್ಟು ನಿಕೃಷ್ಟವಾದುದು!(268)
268. ಹೇಡಿತನದಿಂದ ಹಿಂಜರಿದು ಓಡುವುದು ಮಹಾಪಾಪವಾಗಿದೆ. ಆದರೆ ಯುದ್ಧ ತಂತ್ರದ ಭಾಗವಾಗಿ ಹಿಂದೆ ಸರಿಯುವುದು ಅಪರಾಧವಲ್ಲ.
(17) ನೀವು ಅವರನ್ನು ಕೊಂದಿರಲಿಲ್ಲ. ಆದರೆ ಅವರನ್ನು ಕೊಂದವನು ಅಲ್ಲಾಹುವಾಗಿದ್ದನು. (ಓ ಪ್ರವಾದಿಯವರೇ!) ತಾವು ಎಸೆದಾಗ ತಾವು ಎಸೆದಿರಲಿಲ್ಲ, ಆದರೆ ಎಸೆದವನು ಅಲ್ಲಾಹುವಾಗಿದ್ದನು.(269) ಅದು ಅಲ್ಲಾಹು ತನ್ನ ವತಿಯ ಒಂದು ಉತ್ತಮ ಪರೀಕ್ಷೆಯ ಮೂಲಕ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸುವುದಕ್ಕಾಗಿತ್ತು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ, ಅರಿಯುವವನೂ ಆಗಿರುವನು.
269. ಮುಸ್ಲಿಮರಿಗೆ ಶತ್ರುಗಳನ್ನು ಹೆಚ್ಚು ಹೆಚ್ಚಾಗಿ ಸಂಹರಿಸಲು ಸಾಧ್ಯವಾಗಿದ್ದು ಅವರ ಸ್ವಸಾಮರ್ಥ್ಯದಿಂದಲ್ಲ. ಬದಲಾಗಿ ಅದು ಮಲಕ್ಗಳನ್ನು ಕಳುಹಿಸುವ ಮೂಲಕ ಮತ್ತು ಸ್ಥೈರ್ಯವನ್ನು ಅಧಿಕಗೊಳಿಸುವ ಮೂಲಕ ಅಲ್ಲಾಹು ಸಹಾಯ ಮಾಡಿದ ಕಾರಣದಿಂದಾಗಿತ್ತು. ಪ್ರವಾದಿ(ಸ) ರವರು ಒಂದು ಹಿಡಿ ಮಣ್ಣನ್ನು ಎಸೆದಾಗ ಸತ್ಯನಿಷೇಧಿಗಳು ಹಿಂಜರಿಯಲು ಆರಂಭಿಸಿದ್ದು ಪ್ರವಾದಿ(ಸ) ರವರ ಸಾಮರ್ಥ್ಯದಿಂದಲ್ಲ. ಅಲ್ಲಾಹುವಿನ ವಿಶೇಷ ಸಹಾಯದಿಂದ ಮಾತ್ರವಾಗಿತ್ತು. ಅಲ್ಲಾಹುವಿನ ಯಾವುದೇ ಸಹಾಯಕ್ಕೂ ಒಂದು ನಿಬಂಧನೆಯಿದೆ. ಮುಸ್ಲಿಮರು ತಮಗೆ ಸಾಧ್ಯವಾಗುವಷ್ಟು ಪರಿಶ್ರಮ ಪಡಬೇಕು. ಆದರೆ ಅವರು ಶಿಸ್ತನ್ನು ಕೈಬಿಟ್ಟರೆ ಅಲ್ಲಾಹು ತನ್ನ ಸಹಾಯವನ್ನು ರದ್ದು ಗೊಳಿಸುವನು. ಉಹುದ್ನಲ್ಲಿ ಸೋಲುಂಟಾಗಲು ಇದೇ ಕಾರಣವಾಗಿತ್ತು.
(18) (ಸಂಗತಿ) ಇದಾಗಿದೆ. ಅಲ್ಲಾಹು ಸತ್ಯನಿಷೇಧಿಗಳ ಸಂಚನ್ನು ಖಂಡಿತವಾಗಿಯೂ ದುರ್ಬಲಗೊಳಿಸುವನು.
(19) (ಓ ಸತ್ಯನಿಷೇಧಿಗಳೇ!) ನೀವು ಗೆಲುವನ್ನು ಬೇಡಿದ್ದರೆ ಖಂಡಿತವಾಗಿಯೂ ಆ ಗೆಲುವು ನಿಮ್ಮ ಬಳಿಗೆ ಬಂದುಬಿಟ್ಟಿದೆ.(270) ನೀವು ನಿಲ್ಲಿಸುವುದಾದರೆ ಅದು ನಿಮಗೆ ಉತ್ತಮವಾಗಿದೆ. ನೀವು ಪುನರಾವರ್ತಿಸುವುದಾದರೆ ನಾವೂ ಪುನರಾವರ್ತಿ ಸುವೆವು. ನಿಮ್ಮ ಬಣವು ಎಷ್ಟು ದೊಡ್ಡ ಸಂಖ್ಯೆಯನ್ನು ಹೊಂದಿದ್ದರೂ ಅದು ನಿಮಗೆಂದೂ ಪ್ರಯೋಜನ ಪಡಲಾರದು. ಖಂಡಿತವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳ ಜೊತೆಗಿರುವನು.
270. ಸತ್ಯನಿಷೇಧಿಗಳಾದ ಕುರೈಶಿಗಳು ಯುದ್ಧಕ್ಕೆ ಹೊರಡುವಾಗ ಕಅ್ಬಾಲಯಕ್ಕೆ ಹೋಗಿ ಈ ರೀತಿ ಪ್ರಾರ್ಥಿಸಿದ್ದರು: ಓ ಅಲ್ಲಾಹ್, ಈ ಎರಡು ಸೈನ್ಯಗಳ ಪೈಕಿ ಅತ್ಯಂತ ಉನ್ನತವಾಗಿರುವುದಕ್ಕೆ, ಎರಡು ಗುಂಪುಗಳ ಪೈಕಿ ಅತ್ಯಂತ ಗೌರವಾನ್ವಿತವಾಗಿರುವುದಕ್ಕೆ ಮತ್ತು ಎರಡು ಗೋತ್ರಗಳ ಪೈಕಿ ಅತ್ಯುತ್ತಮವಾಗಿರುವುದಕ್ಕೆ ನೀನು ಸಹಾಯ ಮಾಡು. ಈ ಪ್ರಾರ್ಥನೆಯ ಆಧಾರದಲ್ಲಿ ಕೂಡ ಸಹಾಯ ಮತ್ತು ಗೆಲುವಿಗೆ ಹೆಚ್ಚು ಅರ್ಹರಾಗಿರುವವರು ಮುಸ್ಲಿಮರಾಗಿದ್ದರು. ಯಾಕೆಂದರೆ ಮುಸ್ಲಿಮರು ಅತ್ಯಂತ ಉನ್ನತರೂ, ಗೌರವಾನ್ವಿತರೂ, ಉತ್ತಮರೂ ಆಗಿದ್ದರು. ಆದ್ದರಿಂದ ಸತ್ಯನಿಷೇಧಿಗಳು ಬೇಡಿದ ಗೆಲುವನ್ನು ಅಲ್ಲಾಹು ನೀಡಿದನು. ಆದರೆ ಅವರಿಗಲ್ಲ, ಬದಲಾಗಿ ಅದಕ್ಕೆ ಅರ್ಹರಾಗಿರುವ ಮುಸ್ಲಿಮರಿಗೆ.
(20) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ. (ಸತ್ಯಸಂದೇಶವನ್ನು) ಆಲಿಸುವವರಾಗಿದ್ದೂ ಸಹ ನೀವು ಅವರಿಂದ (ಸಂದೇಶವಾಹಕರಿಂದ) ವಿಮುಖರಾಗದಿರಿ.
(21) ‘ನಾವು ಆಲಿಸಿರುವೆವು’ ಎಂದು ಹೇಳಿ ಏನನ್ನೂ ಆಲಿಸದವರಂತೆ ನೀವಾಗದಿರಿ.
(22) ಖಂಡಿತವಾಗಿಯೂ ಜೀವಿಗಳ ಪೈಕಿ ಅಲ್ಲಾಹುವಿನ ಬಳಿ ಅತ್ಯಂತ ನಿಕೃಷ್ಟರಾಗಿರುವವರು ಚಿಂತಿಸಿ ಗ್ರಹಿಸದ ಕಿವುಡರೂ, ಮೂಕರೂ ಆಗಿರುವರು.(271)
271. ಮಾತನಾಡುವ ಮತ್ತು ಆಲಿಸುವ ಶಕ್ತಿಯನ್ನು ನೀಡಿ ಅಲ್ಲಾಹು ಅವರನ್ನು ಸೃಷ್ಟಿಸಿದ್ದಾನೆ. ಆದರೆ ಅವರು ಸತ್ಯವನ್ನು ತೆರೆದು ಹೇಳಲು ಮತ್ತು ಸತ್ಯವನ್ನು ಕಿವಿಗೊಟ್ಟು ಆಲಿಸಲು ಸಿದ್ಧರಿಲ್ಲದ ಕಾರಣ ಅವರು ಮೂಕರೂ, ಕಿವುಡರೂ ಆಗಿರುವರು.
(23) ಒಳಿತೇನಾದರೂ ಅವರಲ್ಲಿದೆಯೆಂದು ಅಲ್ಲಾಹು ಅರಿತಿದ್ದರೆ ಅವನು ಅವರನ್ನು ಆಲಿಸುವಂತೆ ಮಾಡುತ್ತಿದ್ದನು. ಅವನು ಅವರನ್ನು ಆಲಿಸುವಂತೆ ಮಾಡಿದ್ದರೂ ಸಹ ಅವರು ಅಲಕ್ಷಿಸುತ್ತಾ ವಿಮುಖರಾಗುತ್ತಿದ್ದರು.
(24) ಓ ಸತ್ಯವಿಶ್ವಾಸಿಗಳೇ! ನಿಮಗೆ ಜೀವ ನೀಡುವ ವಿಷಯದೆಡೆಗೆ ನಿಮ್ಮನ್ನು ಕರೆಯುವಾಗ(272) ನೀವು ಅಲ್ಲಾಹು ಮತ್ತು ಸಂದೇಶವಾಹಕರಿಗೆ ಉತ್ತರ ನೀಡಿರಿ. ಮನುಷ್ಯ ಮತ್ತು ಅವನ ಹೃದಯದ ಮಧ್ಯೆ ಅಲ್ಲಾಹು ಮರೆಯನ್ನಿಡುವನು(273) ಎಂಬುದನ್ನು ಮತ್ತು ನಿಮ್ಮನ್ನು ಅವನೆಡೆಗೆ ಒಟ್ಟುಗೂಡಿಸಲಾಗುವುದು ಎಂಬುದನ್ನು ಅರಿತುಕೊಳ್ಳಿರಿ.
272. ಅವಿಶ್ವಾಸ ಮತ್ತು ಅಧರ್ಮದ ನಿಮಿತ್ತ ಸ್ಫೂರ್ತಿಯನ್ನು ಕಳಕೊಂಡಿರುವ ಮನುಷ್ಯ ಹೃದಯಗಳಿಗೆ ನವಜೀವನವನ್ನು ನೀಡುವ ವಿಷಯಗಳೆಡೆಗೆ ಅಲ್ಲಾಹು ಮನುಷ್ಯರನ್ನು ಆಹ್ವಾನಿಸುತ್ತಿದ್ದಾನೆ.
273. ಅಲ್ಲಾಹು ನಮಗೆ ನೀಡಿದ ದಾನಗಳ ಪೈಕಿ ಅತ್ಯಮೂಲ್ಯವಾದುದು ಹೃದಯವಾಗಿದೆ. ಹೃದಯದಲ್ಲಿ ಮೂಡುವ ಆಲೋಚನೆಗಳನ್ನು ಅಲ್ಲಾಹು ಅರಿಯುತ್ತಾನೆ. ಕೃತಜ್ಞತೆ, ವಿನಮ್ರತೆ ಮತ್ತು ಸತ್ಯಾನ್ವೇಷಣೆಯ ಹಂಬಲವನ್ನು ಹೊಂದಿರುವ ಹೃದಯಕ್ಕೆ ಅಲ್ಲಾಹು ವಿಶಾಲತೆಯನ್ನು ಕರುಣಿಸುತ್ತಾನೆ. ಸತ್ಯಕ್ಕೆ ಬೆನ್ನು ತೋರಿಸಿ ನಿಲ್ಲುವವರ ಹೃದಯದ ಮುಂದೆ ಅಲ್ಲಾಹು ಒಂದು ಬಗೆಯ ಮರೆಯನ್ನಿಡುವನು. ಇದರಿಂದಾಗಿ ಅವರಿಗೆ ಸನ್ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಲಾರದು.
(25) ಒಂದು ಪರೀಕ್ಷೆಯನ್ನು (ಶಿಕ್ಷೆಯನ್ನು) ನೀವು ಭಯಪಡಿರಿ. ಅದು ನಿಮ್ಮಲ್ಲಿರುವ ಅಕ್ರಮಿಗಳಿಗೆ ಮಾತ್ರ ಪ್ರತ್ಯೇಕವಾಗಿ ಬಾಧಿಸುವಂತದ್ದಲ್ಲ.(274) ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು ಎಂಬುದನ್ನು ಅರಿತುಕೊಳ್ಳಿರಿ.
274. ಒಬ್ಬ ಸತ್ಯವಿಶ್ವಾಸಿ ಅಕ್ರಮ ಮತ್ತು ನೀಚ ಪ್ರವೃತ್ತಿಗಳನ್ನು ಪೆÇ್ರೀತ್ಸಾಹಿಸುವುದಾಗಲಿ ಅದಕ್ಕೆದುರಾಗಿ ಉದಾಸೀನನಂತೆ ವರ್ತಿಸುವುದಾಗಲಿ ಮಾಡಬಾರದು. ಅಲ್ಲಾಹುವಿನ ಪರೀಕ್ಷೆ ಅಥವಾ ಶಿಕ್ಷೆ ಕೆಲವೊಮ್ಮೆ ಎಲ್ಲರ ಮೇಲೂ ಎರಗೀತು.
(26) ನೀವು ಭೂಮಿಯಲ್ಲಿ ಬಲಹೀನರೆಂದು ಪರಿಗಣಿಸಲಾಗಿರುವ ಅಲ್ಪಸಂಖ್ಯಾತರಾಗಿದ್ದ ಸಂದರ್ಭವನ್ನು ಸ್ಮರಿಸಿರಿ. ಜನರು ನಿಮ್ಮನ್ನು ಹಾರಿಸಿಕೊಂಡು ಹೋಗುವರೆಂದು ನೀವು ಭಯಪಡುತ್ತಿದ್ದಿರಿ. ತರುವಾಯ ಅವನು ನಿಮಗೆ ಆಸರೆಯನ್ನು ನೀಡಿದನು, ತನ್ನ ಸಹಾಯದಿಂದ ನಿಮ್ಮನ್ನು ಬೆಂಬಲಿಸಿದನು ಮತ್ತು ಉತ್ತಮ ವಸ್ತುಗಳಿಂದ ನಿಮಗೆ ಅನ್ನಾಧಾರವನ್ನು ಒದಗಿಸಿದನು. ನೀವು ಕೃತಜ್ಞತೆ ಸಲ್ಲಿಸುವವರಾಗುವ ಸಲುವಾಗಿ.
(27) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೆ ಮತ್ತು ಸಂದೇಶವಾಹಕರಿಗೆ ನಂಬಿಕೆದ್ರೋಹ ಮಾಡದಿರಿ. ನಿಮ್ಮ ಮೇಲೆ ನಂಬಿಕೆಯಿಟ್ಟು ಒಪ್ಪಿಸಲಾದ ವಿಷಯಗಳಲ್ಲಿ ನೀವು ಅರಿತವರಾಗಿದ್ದೂ ಸಹ ನಂಬಿಕೆದ್ರೋಹ ಮಾಡದಿರಿ.
(28) ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಒಂದು ಪರೀಕ್ಷೆಯಾಗಿದೆ ಮತ್ತು ಮಹಾ ಪ್ರತಿಫಲವಿರುವುದು ಅಲ್ಲಾಹುವಿನ ಬಳಿಯಲ್ಲಾಗಿದೆ ಎಂಬುದನ್ನು ನೀವು ಅರಿತುಕೊಳ್ಳಿರಿ.
(29) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಟ್ಟು ಜೀವಿಸುವುದಾದರೆ ಸತ್ಯಾಸತ್ಯತೆಯನ್ನು ಬೇರ್ಪಡಿಸಿ ತಿಳಿಯುವ ಶಕ್ತಿಯನ್ನು ಅವನು ನಿಮಗೆ ನೀಡುವನು. ಅವನು ನಿಮ್ಮ ಪಾಪಗಳನ್ನು ಅಳಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಮಹಾ ಅನುಗ್ರಹವುಳ್ಳವನಾಗಿರುವನು.
(30) ತಮ್ಮನ್ನು ಸೆರೆ ಹಿಡಿಯಲು ಅಥವಾ ವಧಿಸಲು ಅಥವಾ ನಾಡಿನಿಂದ ಹೊರ ಹಾಕಲು ತಮಗೆ ವಿರುದ್ಧವಾಗಿ ಸತ್ಯನಿಷೇಧಿಗಳು ಒಳಸಂಚು ಹೂಡುತ್ತಿದ್ದ ಸಂದರ್ಭ(ವನ್ನು ಸ್ಮರಿಸಿರಿ). ಅವರು ತಂತ್ರ ರೂಪಿಸುವರು. ಅಲ್ಲಾಹು ಕೂಡ ತಂತ್ರ ರೂಪಿಸುವನು. ತಂತ್ರ ರೂಪಿಸುವರಲ್ಲಿ ಅಲ್ಲಾಹು ಅತ್ಯುತ್ತಮನಾಗಿರುವನು.
(31) ಅವರಿಗೆ ನಮ್ಮ ವಚನಗಳನ್ನು ಓದಿಕೊಡಲಾಗುವಾಗ ‘ನಾವು ಆಲಿಸಿರುವೆವು, ನಾವು ಇಚ್ಛಿಸಿದ್ದರೆ ಇದರಂತಿರುವುದನ್ನು (ಕುರ್ಆನ್ನಂತಿರುವುದನ್ನು) ನಾವೂ ಹೇಳುತ್ತಿದ್ದೆವು. ಇದು ಪೂರ್ವಿಕರ ಪುರಾಣಗಳಲ್ಲದೆ ಇನ್ನೇನೂ ಅಲ್ಲ’ ಎಂದು ಅವರು ಹೇಳುವರು.
(32) ‘ಓ ಅಲ್ಲಾಹ್! ಇದು ನಿನ್ನ ಕಡೆಯಿಂದಿರುವ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮಗೆ ಯಾತನಾಮಯವಾದ ಶಿಕ್ಷೆಯನ್ನು ನೀಡು’ ಎಂದು ಅವರು (ಅವಿಶ್ವಾಸಿಗಳು) ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
(33) ಆದರೆ ತಾವು ಅವರ ನಡುವೆಯಿರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರನು. ಅವರು ಪಾಪಮುಕ್ತಿಯನ್ನು ಬೇಡುತ್ತಿರುವಾಗಲೂ ಅಲ್ಲಾಹು ಅವರನ್ನು ಶಿಕ್ಷಿಸಲಾರನು.
(34) ಅಲ್ಲಾಹು ಅವರನ್ನು ಶಿಕ್ಷಿಸದಿರಲು ಅವರಿಗಿರುವ ಅರ್ಹತೆಯಾದರೂ ಏನು? ಅವರು ಮಸ್ಜಿದುಲ್ ಹರಾಮ್ನಿಂದ ಜನರನ್ನು ತಡೆಯುತ್ತಿರುವರು. ಅವರು ಅದರ ರಕ್ಷಕರೂ ಅಲ್ಲ. ಭಯಭಕ್ತಿಯುಳ್ಳವರ ಹೊರತು ಇನ್ನಾರೂ ಅದರ ರಕ್ಷಕರಾಗ ತಕ್ಕವರಲ್ಲ. ಆದರೆ ಅವರಲ್ಲಿ ಹೆಚ್ಚಿನವರೂ (ಇದನ್ನು) ಗ್ರಹಿಸುವುದಿಲ್ಲ.
(35) ಭವನದ (ಕಅ್ಬಾಲಯದ) ಬಳಿ ಅವರು ಮಾಡುವ ಪ್ರಾರ್ಥನೆಯು ಶಿಳ್ಳೆ ಹೊಡೆಯುವುದು ಮತ್ತು ಚಪ್ಪಾಳೆ ತಟ್ಟುವುದಲ್ಲದೆ ಇನ್ನೇನೂ ಆಗಿರಲಿಲ್ಲ.(275) ಆದ್ದರಿಂದ ನೀವು ಸತ್ಯನಿಷೇಧಿಗಳಾಗಿರುವುದರ ನಿಮಿತ್ತ ಶಿಕ್ಷೆಯನ್ನು ಆಸ್ವಾದಿಸಿರಿ.
275. ಬಹುದೇವಾರಾಧಕರಲ್ಲಿ ಕಾಣುವಂತಹ ಆರಾಧನಾ ಕ್ರಮಗಳೆಲ್ಲವೂ ಸದ್ದುಗದ್ದಲಗಳಿಂದ ಕೂಡಿರುತ್ತದೆ. ತಾಳ ವಾದ್ಯಗಳೇ ಅವುಗಳ ಮುಖಮುದ್ರೆಯಾಗಿದೆ.
(36) ಖಂಡಿತವಾಗಿಯೂ ಸತ್ಯನಿಷೇಧಿಗಳು ತಮ್ಮ ಸಂಪತ್ತನ್ನು ವ್ಯಯಿಸುತ್ತಿರುವುದು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವುದಕ್ಕಾಗಿದೆ. ಅವರದನ್ನು ವ್ಯಯಿಸುತ್ತಿರುವರು. ತರುವಾಯ ಅದು ಅವರ ವಿಷಾದಕ್ಕೆ ಕಾರಣವಾಗುವುದು. ತರುವಾಯ ಅವರು ಸೋಲಿಸಲಾಗುವರು. ಸತ್ಯನಿಷೇಧಿಗಳನ್ನು ಒಟ್ಟುಗೂಡಿಸಲಾಗುವುದು ನರಕಾಗ್ನಿಯೆಡೆಗೇ ಆಗಿರುವುದು.
(37) ಅದು ಅಲ್ಲಾಹು ಒಳಿತಿನಿಂದ ಕೆಡುಕನ್ನು ಬೇರ್ಪಡಿಸುವುದಕ್ಕಾಗಿಯೂ, ಕೆಡುಕನ್ನು ಒಂದರ ಮೇಲೊಂದರಂತೆ ಇಟ್ಟು, ತರುವಾಯ ಎಲ್ಲವನ್ನೂ ರಾಶಿ ಮಾಡಿ ನರಕದಲ್ಲಿ ಹಾಕುವುದಕ್ಕಾಗಿಯೂ ಆಗಿದೆ. ನಷ್ಟಹೊಂದಿದವರು ಅಂತಹವರೇ ಆಗಿರುವರು.
(38) ಅವರು ನಿಲ್ಲಿಸುವುದಾದರೆ ಅವರು ಮುಂಚೆ ಮಾಡಿರುವುದನ್ನು ಅವರಿಗೆ ಕ್ಷಮಿಸಿ ಬಿಡಲಾಗುವುದು ಎಂದು ಸತ್ಯನಿಷೇಧಿಗಳೊಂದಿಗೆ ಹೇಳಿರಿ. ಇನ್ನು ಅವರು (ಸತ್ಯನಿಷೇಧದೆಡೆಗೇ) ಮರಳುವುದಾದರೆ ಪೂರ್ವಿಕರ ವಿಷಯದಲ್ಲಿ (ಅಲ್ಲಾಹುವಿನ) ಕ್ರಮವು ಈಗಾಗಲೇ ಗತಿಸಿಹೋಗಿದೆ.
(39) ಕ್ಷೋಭೆಯು ಇಲ್ಲದಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹುವಿಗಾಗುವ ತನಕ(276) ಅವರೊಂದಿಗೆ ಯುದ್ಧಮಾಡಿರಿ. ಇನ್ನು ಅವರು ನಿಲ್ಲಿಸುವುದಾದರೆ ಅವರು ಮಾಡುತ್ತಿರುವುದನ್ನು ಅಲ್ಲಾಹು ವೀಕ್ಷಿಸುವವನಾಗಿರುವನು.
276. ಪ್ರವಾದಿ(ಸ) ರವರು ಬಹಿರಂಗವಾಗಿ ಧರ್ಮಪ್ರಚಾರವನ್ನು ಆರಂಭಿಸಿದಾಗ ಅದನ್ನು ಕಿವಿಗೊಟ್ಟು ಆಲಿಸಿದ ಕೆಲವರು ಇಸ್ಲಾಮ್ ಸ್ವೀಕರಿಸಿದರು. ಆಗ ಸತ್ಯನಿಷೇಧಿಗಳು ಪ್ರವಾದಿ(ಸ) ರವರನ್ನು ಮತ್ತು ಸತ್ಯವಿಶ್ವಾಸಿಗಳನ್ನು ನಾಮಾವಶೇಷ ಮಾಡಲು ಯುದ್ಧವನ್ನು ಆರಂಭಿಸಿದರು. ಅದನ್ನು ಪ್ರತಿರೋಧಿಸುವುದು ಮತ್ತು ವಿಚಾರ ಸ್ವಾತಂತ್ರ್ಯವನ್ನು ಸ್ಥಾಪಿಸುವುದು ಇಸ್ಲಾಮೀ ಯುದ್ಧದ ಗುರಿಯಾಗಿದೆ. ಧರ್ಮವು ಸಂಪೂರ್ಣವಾಗಿ ಅಲ್ಲಾಹುವಿಗಾಗುವುದು ಎಂಬುದರ ತಾತ್ಪರ್ಯವು ಧರ್ಮವಿಶ್ವಾಸವು ಪುರೋಹಿತರ ಮತ್ತು ಮುಖಂಡರ ಬಲವಂತದಿಂದ ಮುಕ್ತವಾಗಿ ದೇವಭಯದ ಆಧಾರದಲ್ಲಿ ಮಾತ್ರವಾಗುವುದು ಎಂದಾಗಿದೆ.
(40) ಅವರೇನಾದರೂ ವಿಮುಖರಾಗುವುದಾದರೆ ನಿಮ್ಮ ರಕ್ಷಕನು ಅಲ್ಲಾಹುವಾಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ. (ಅವನು) ಎಷ್ಟು ಉತ್ತಮ ರಕ್ಷಕನು! ಎಷ್ಟು ಉತ್ತಮ ಸಹಾಯಕನು!
(41) ನೀವು (ಯುದ್ಧದಲ್ಲಿ) ಗಳಿಸಿದ ಯಾವುದೇ ವಸ್ತುವಿನಿಂದಲೂ ಅದರ ಐದನೇ ಒಂದು ಭಾಗವು ಅಲ್ಲಾಹುವಿಗೂ, ಸಂದೇಶವಾಹಕರಿಗೂ, (ಸಂದೇಶವಾಹಕರ) ನಿಕಟಸಂಬಂಧಿಕರಿಗೂ, ಅನಾಥರಿಗೂ, ದರಿದ್ರರಿಗೂ, ದಾರಿಹೋಕರಿಗೂ ಇರುವುದಾಗಿದೆಯೆಂಬುದನ್ನು ಅರಿತುಕೊಳ್ಳಿರಿ.(277) ನೀವು ಅಲ್ಲಾಹುವಿನಲ್ಲೂ, ಸತ್ಯಾಸತ್ಯ ವಿವೇಚನೆಯ ದಿನದಂದು ಅಥವಾ ಎರಡು ಬಣಗಳು ಮುಖಾಮುಖಿಯಾದ ದಿನದಂದು ನಮ್ಮ ದಾಸನ ಮೇಲೆ ನಾವು ಅವತೀರ್ಣಗೊಳಿಸಿರುವುದರಲ್ಲೂ(278) ವಿಶ್ವಾಸವಿಟ್ಟವರಾಗಿದ್ದರೆ. ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
277. ಯುದ್ಧದಲ್ಲಿ ಗಳಿಸಿದ ಸೊತ್ತಿನ ಐದನೇ ನಾಲ್ಕು ಭಾಗವನ್ನು ಯೋಧರಿಗೆ ಹಂಚಿ, ಉಳಿದ ಐದನೇ ಒಂದು ಭಾಗವನ್ನು ಪುನಃ ಐದು ಭಾಗಗಳಾಗಿ ವಿಂಗಡಿಸಬೇಕಾಗಿದೆ. ಅದರಲ್ಲಿ ಒಂದು ಭಾಗವನ್ನು ಅಲ್ಲಾಹು ಮತ್ತು ಅವನ ರಸೂಲ್ರಿಗೆ ಅಥವಾ ಧಾರ್ಮಿಕ ಅಗತ್ಯಗಳಿಗೆ, ಎರಡನೆ ಭಾಗವನ್ನು ಪ್ರವಾದಿ(ಸ) ರವರ ಕುಟುಂಬಕ್ಕೆ ಅಥವಾ ಬನೂ ಹಾಶಿಮ್, ಬನೂ ಮುತ್ತಲಿಬ್ ಕುಟುಂಬದಲ್ಲಿ ಸೇರಿದವರಿಗೆ (ಇವೆರಡು ಕುಟುಂಬದವರು ಇಸ್ಲಾಮಿಗಾಗಿ ಅತ್ಯಧಿಕ ತ್ಯಾಗ ಸಹಿಸಿದವರಾಗಿದ್ದರು), ಮೂರನೇ ಭಾಗವನ್ನು ಅನಾಥರಿಗೆ, ನಾಲ್ಕನೇ ಭಾಗವನ್ನು ಬಡವರಿಗೆ ಮತ್ತು ಐದನೇ ಭಾಗವನ್ನು ದಾರಿಹೋಕರಿಗೆ ನೀಡಬೇಕಾಗಿದೆ.
278. ಇದರ ತಾತ್ಪರ್ಯವು ಬದ್ರ್ ಯುದ್ಧದ ದಿನದಲ್ಲಿ ಅಲ್ಲಾಹು ಅವತೀರ್ಣಗೊಳಿಸಿದ ದಿವ್ಯ ಸಂದೇಶಗಳು –ವಿಶೇಷತಃ ಯುದ್ಧದಲ್ಲಿ ಗಳಿಸಿದ ಸಂಪತ್ತಿನ ಬಗ್ಗೆಯಿರುವ ನಿರ್ದೇಶನಗಳಾಗಿವೆ.
(42) ನೀವು (ಕಣಿವೆಯಲ್ಲಿ ಮದೀನಕ್ಕೆ) ಸಮೀಪವಿರುವ ಪ್ರದೇಶದಲ್ಲಿ, ಅವರು ದೂರದ ಪ್ರದೇಶದಲ್ಲಿ ಮತ್ತು ಯಾತ್ರಿಕ ತಂಡವು ನಿಮಗಿಂತ ಕೆಳಗಿನ ಪ್ರದೇಶದಲ್ಲಿದ್ದ ಸಂದರ್ಭ(ವನ್ನು ಸ್ಮರಿಸಿರಿ). ನೀವು ಪರಸ್ಪರ (ಹೋರಾಡಲು) ನಿರ್ಧರಿಸಿದ್ದರೆ ಆ ನಿರ್ಧಾರದಲ್ಲಿ ನೀವು ಭಿನ್ನರಾಗುತ್ತಿದ್ದಿರಿ.(279) ಆದರೆ ಅದು ತೀರ್ಮಾನಿಸಲಾದ ಒಂದು ಸಂಗತಿಯನ್ನು ಅಲ್ಲಾಹು ಕಾರ್ಯರೂಪಕ್ಕೆ ತರುವ ಸಲುವಾಗಿತ್ತು. ಅಂದರೆ ನಾಶವಾದವರು ಸ್ಪಷ್ಟವಾದ ಪುರಾವೆಯನ್ನು ಕಂಡು ನಾಶವಾಗುವುದಕ್ಕಾಗಿ ಮತ್ತು ಬದುಕಿದವರು ಸ್ಪಷ್ಟವಾದ ಪುರಾವೆಯನ್ನು ಕಂಡು ಬದುಕುವುದಕ್ಕಾಗಿತ್ತು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
279. ಬದ್ರ್ನಲ್ಲಿ ಮುಸ್ಲಿಮರು ಮತ್ತು ಶತ್ರುಗಳು ಮುಖಾಮುಖಿಯಾಗಿದ್ದು ಪೂರ್ವನಿರ್ಧಾರದಿಂದಾಗಿರಲಿಲ್ಲ.
(43) ತಮ್ಮ ಕನಸಿನಲ್ಲಿ ಅಲ್ಲಾಹು ತಮಗೆ ಅವರನ್ನು (ಶತ್ರುಗಳನ್ನು) ಕಡಿಮೆ ಜನರಾಗಿ ಮಾತ್ರ ತೋರಿಸಿಕೊಟ್ಟ ಸಂದರ್ಭ(ವನ್ನು ಸ್ಮರಿಸಿರಿ). ತಮಗೆ ಅವರನ್ನು ಅಧಿಕವಾಗಿ ತೋರಿಸಿರುತ್ತಿದ್ದರೆ ನೀವು ಎದೆಗುಂದುತ್ತಿದ್ದಿರಿ ಮತ್ತು ಕಾರ್ಯನಿರ್ವಹಣೆಯಲ್ಲಿ ಭಿನ್ನಾಭಿಪ್ರಾಯ ತಾಳುತ್ತಿದ್ದಿರಿ. ಆದರೆ ಅಲ್ಲಾಹು ಕಾಪಾಡಿದನು. ಖಂಡಿತವಾಗಿಯೂ ಅವನು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.
(44) ನೀವು ಮುಖಾಮುಖಿಯಾದ ಸಂದರ್ಭದಲ್ಲಿ ನಿಮ್ಮ ದೃಷ್ಟಿಯಲ್ಲಿ ನಿಮಗೆ ಅವರನ್ನು ಕಡಿಮೆಯಾಗಿ ಮತ್ತು ಅವರ ದೃಷ್ಟಿಯಲ್ಲಿ ನಿಮ್ಮನ್ನು ಕಡಿಮೆಯಾಗಿ ತೋರಿಸಿಕೊಟ್ಟ ಸಂದರ್ಭ(ವನ್ನೂ ಸ್ಮರಿಸಿರಿ).(280) ಇದು ತೀರ್ಮಾನಿಸಲಾದ ಒಂದು ಸಂಗತಿಯನ್ನು ಅಲ್ಲಾಹು ಕಾರ್ಯರೂಪಕ್ಕೆ ತರುವ ಸಲುವಾಗಿತ್ತು. ವಿಷಯಗಳೆಲ್ಲವೂ ಮರಳಿಸಲ್ಪಡುವುದು ಅಲ್ಲಾಹುವಿನೆಡೆಗೇ ಆಗಿರುವುದು.
280. ಬಹಳ ಸುಲಭವಾಗಿ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿ ಎರಡು ಬಣಗಳೂ ರಣರಂಗಕ್ಕಿಳಿಯುವುದಕ್ಕಾಗಿ ಅಲ್ಲಾಹು ಹೀಗೆ ಮಾಡಿದ್ದನು.
(45) ಓ ಸತ್ಯವಿಶ್ವಾಸಿಗಳೇ! ನೀವೊಂದು (ಸೇನಾ) ತುಕಡಿಯನ್ನು ಎದುರುಗೊಂಡರೆ ಅಚಲರಾಗಿ ನಿಲ್ಲಿರಿ ಮತ್ತು ಅಲ್ಲಾಹುವನ್ನು ಅಧಿಕವಾಗಿ ಸ್ಮರಿಸಿರಿ. ನೀವು ಗೆಲುವು ಸಾಧಿಸಲೂ ಬಹುದು.
(46) ನೀವು ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ. ನೀವು ಭಿನ್ನರಾಗದಿರಿ. ಹಾಗೆ ಮಾಡಿದರೆ ನೀವು ಧೈರ್ಯಗುಂದುವಿರಿ ಮತ್ತು ನಿಮ್ಮ ಸ್ಫೂರ್ತಿಯು (ನಾಶವಾಗಿ) ಹೋಗುವುದು. ನೀವು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಅಲ್ಲಾಹು ಸಹನಾಶೀಲರೊಂದಿಗಿರುವನು.
(47) ದರ್ಪದೊಂದಿಗೆ ಮತ್ತು ಜನರಿಗೆ ತೋರಿಸುವುದಕ್ಕಾಗಿ ಹಾಗೂ ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವುದಕ್ಕಾಗಿ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗದಿರಿ. ಅವರು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(48) ‘ಇಂದು ಜನರಲ್ಲಿ ನಿಮ್ಮನ್ನು ಸೋಲಿಸುವವರು ಯಾರೂ ಇಲ್ಲ. ಖಂಡಿತವಾಗಿಯೂ ನಾನು ನಿಮ್ಮ ರಕ್ಷಕನಾಗಿರುವೆನು’ ಎನ್ನುತ್ತಾ ಸೈತಾನನು ಅವರಿಗೆ ಅವರ ಕೃತ್ಯಗಳನ್ನು ಆಕರ್ಷಣೀಯಗೊಳಿಸಿ ತೋರಿಸಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಎರಡು ಬಣಗಳು ಪರಸ್ಪರ ಮುಖಾಮುಖಿಯಾದಾಗ ‘ನಿಮ್ಮಿಂದ ನಾನು ಸಂಬಂಧ ಕಡಿದುಕೊಂಡಿರುವೆನು. ಖಂಡಿತವಾಗಿಯೂ ನೀವು ಕಾಣದಿರುವುದನ್ನು ನಾನು ಕಾಣುತ್ತಿರುವೆನು.(281) ಖಂಡಿತವಾಗಿಯೂ ನಾನು ಅಲ್ಲಾಹುವನ್ನು ಭಯಪಡುತ್ತಿರುವೆನು. ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು’ ಎನ್ನುತ್ತಾ ಅವನು (ಸೈತಾನನು) ಹಿಂದಕ್ಕೆ ಸರಿದನು.
281. ಇಲ್ಲಿ ಸೂಚಿಸಿರುವುದು ಮಲಕ್ಗಳ ಉಪಸ್ಥಿತಿಯನ್ನಾಗಿದೆ.
(49) ‘ಇವರ ಧರ್ಮವು ಇವರನ್ನು (ಮುಸ್ಲಿಮರನ್ನು) ವಂಚಿಸಿದೆ’ ಎಂದು ಕಪಟವಿಶ್ವಾಸಿಗಳು ಮತ್ತು ಹೃದಯದಲ್ಲಿ ರೋಗವಿರುವವರು ಹೇಳುತ್ತಿದ್ದ ಸಂದರ್ಭ. ಯಾರಾದರೂ ಅಲ್ಲಾಹುವಿನ ಮೇಲೆ ಭರವಸೆಯನ್ನಿಡುವುದಾದರೆ ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(50) ಸತ್ಯನಿಷೇಧಿಗಳ ಮುಖಗಳಿಗೆ ಮತ್ತು ಹಿಂಭಾಗಗಳಿಗೆ ಬಡಿಯುತ್ತಾ(282) ಮಲಕ್ಗಳು ಅವರನ್ನು ಮೃತಪಡಿಸುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! (ಮಲಕ್ಗಳು ಅವರೊಂದಿಗೆ ಹೇಳುವರು:) ‘ಜ್ವಲಿಸುತ್ತಿರುವ ಅಗ್ನಿಯ ಶಿಕ್ಷೆಯನ್ನು ನೀವು ಆಸ್ವಾದಿಸಿರಿ.
282. ಮಲಕ್ಗಳ ಪ್ರವೃತ್ತಿಗಳು ನಮಗೆ ನೋಡಿ ಗ್ರಹಿಸಲು ಸಾಧ್ಯವಾಗದ ಅಗೋಚರ ವಿಷಯಗಳಲ್ಲಿ ಸೇರಿದ್ದಾಗಿವೆ.
(51) ಅದು ನಿಮ್ಮ ಕೈಗಳು ಮುಂಗಡವಾಗಿ ಮಾಡಿಟ್ಟಿರುವುದರ ಫಲವಾಗಿದೆ ಮತ್ತು ಅಲ್ಲಾಹು ದಾಸರೊಂದಿಗೆ ಸ್ವಲ್ಪವೂ ಅನ್ಯಾಯವೆಸಗಲಾರನು(283) ಎಂಬುದರಿಂದಾಗಿದೆ’.
283. ದುಷ್ಟರನ್ನು ಶಿಕ್ಷಿಸಬೇಕಾದುದು ನ್ಯಾಯದ ಬೇಡಿಕೆಯಾಗಿದೆ. ದುಷ್ಟರನ್ನು ಸುಮ್ಮನೆ ಬಿಡುವುದು ಶಿಷ್ಟರೊಂದಿಗೆ ತೋರಿಸುವ ಅನ್ಯಾಯವಾಗಿದೆ.
(52) ಫಿರ್ಔನ್ನ ಜನರ ಮತ್ತು ಅವರಿಗಿಂತ ಮುಂಚಿನವರ ರೂಢಿಯಂತೆ. ಅವರು ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿದರು. ಆಗ ಅವರ ಪಾಪಗಳ ನಿಮಿತ್ತ ಅಲ್ಲಾಹು ಅವರನ್ನು ಹಿಡಿದನು. ಖಂಡಿತವಾಗಿಯೂ ಅಲ್ಲಾಹು ಪ್ರಬಲನೂ, ಕಠಿಣವಾಗಿ ಶಿಕ್ಷಿಸುವವನೂ ಆಗಿರುವನು.
(53) ಅದು ಅಲ್ಲಾಹು ಒಂದು ಜನತೆಗೆ ನೀಡಿದ ಅನುಗ್ರಹವನ್ನು, ಅವರು ತಮ್ಮ ನಿಲುವಿನಲ್ಲಿ ಬದಲಾವಣೆಯನ್ನು ತರುವವರೆಗೆ ಅವನು ಬದಲಾಯಿಸಲಾರನು ಮತ್ತು ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು ಎಂಬುದರಿಂದಾಗಿದೆ.
(54) ಫಿರ್ಔನ್ನ ಜನರ ಮತ್ತು ಅವರಿಗಿಂತ ಮುಂಚಿನವರ ರೂಢಿಯಂತೆ. ಅವರು ತಮ್ಮ ರಬ್ನ ದೃಷ್ಟಾಂತಗಳನ್ನು ನಿಷೇಧಿಸಿದರು. ಆಗ ಅವರ ಪಾಪಗಳ ನಿಮಿತ್ತ ನಾವು ಅವರನ್ನು ನಾಶ ಮಾಡಿದೆವು. ಫಿರ್ಔನ್ನ ಜನರನ್ನು ನಾವು ಮುಳುಗಿಸಿದೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.
(55) ಖಂಡಿತವಾಗಿಯೂ ಅಲ್ಲಾಹುವಿನ ಬಳಿ ಜೀವಿಗಳ ಪೈಕಿ ಅತ್ಯಂತ ನಿಕೃಷ್ಟರಾಗಿರುವವರು ಸತ್ಯನಿಷೇಧಿಗಳಾಗಿರುವರು. ಆದ್ದರಿಂದ ಅವರು ವಿಶ್ವಾಸವಿಡಲಾರರು.
(56) ಅವರ ಪೈಕಿ ಒಂದು ಗುಂಪಿನೊಂದಿಗೆ ತಾವು ಕರಾರು ಮಾಡಿಕೊಂಡಿದ್ದಿರಿ. ತರುವಾಯ ಪ್ರತಿ ಬಾರಿಯೂ ಅವರು ತಮ್ಮ ಕರಾರನ್ನು ಉಲ್ಲಂಘಿಸುತ್ತಿರುವರು. ಅವರು (ಅಲ್ಲಾಹುವನ್ನು) ಭಯಪಡುವುದೇ ಇಲ್ಲ.
(57) ಆದ್ದರಿಂದ ತಾವು ಅವರೊಂದಿಗೆ ಯುದ್ಧದಲ್ಲಿ ಮುಖಾಮುಖಿಯಾದರೆ ಅವರ ನಂತರ ಬರುವವರನ್ನೂ ಸಹ ಚೆಲ್ಲಾಪಿಲ್ಲಿ ಮಾಡುವ ವಿಧದಲ್ಲಿ ಅವರಿಗೆ ನಾಶಗಳನ್ನುಂಟುಮಾಡಿರಿ. ಅವರು ಚಿಂತಿಸಿ ಗ್ರಹಿಸಲೂಬಹುದು.
(58) ಯಾವುದೇ ಜನತೆಯಿಂದ ನಂಬಿಕೆದ್ರೋಹವುಂಟಾಗಬಹುದೆಂದು ತಾವು ಭಯಪಡುವುದಾದರೆ ತತ್ಸಮಾನವಾಗಿ ತಾವೂ ಅವರೆಡೆಗೆ ಎಸೆದುಬಿಡಿರಿ.(284) ಖಂಡಿತವಾಗಿಯೂ ಅಲ್ಲಾಹು ವಿಶ್ವಾಸಘಾತುಕರನ್ನು ಮೆಚ್ಚಲಾರನು.
284. ಮುಸ್ಲಿಮರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿರುವ ಶತ್ರುಗಳ ಒಂದು ಗುಂಪು ಹೊಂಚುಹಾಕಿ ದಾಳಿ ಮಾಡಬಹುದೆಂಬ ಸೂಚನೆ ಸಿಕ್ಕಿದರೆ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಅಂದರೆ ನೀವು ತಕ್ಷಣ ಒಂದು ಯುದ್ಧಕ್ಕೆ ಸಿದ್ಧರಾಗ ಬೇಡಿರಿ. ‘ಕರಾರನ್ನು ಪಾಲಿಸುವ ಮನಸ್ಸು ನಿಮಗಿಲ್ಲದಿದ್ದರೆ ಅದೇ ರೀತಿ ನಾವೂ ಕರಾರನ್ನು ತಿರಸ್ಕರಿಸುತ್ತೇವೆ’ ಎಂದು ಅವರೊಂದಿಗೆ ನೇರವಾಗಿ ಹೇಳಿಬಿಡಿರಿ. ನಿಮ್ಮದು ಮುಚ್ಚುಮರೆಯಿಲ್ಲದ ಚಟುವಟಿಕೆಯಾಗಿರಬೇಕು. ವಂಚನಾತ್ಮಕವಾದ ಯಾವುದೇ ಕ್ರಮವೂ ಸಲ್ಲದು.
(59) ತಾವು ಮೇಲುಗೈ ಸಾಧಿಸಿರುವೆವೆಂದು ಸತ್ಯನಿಷೇಧಿಗಳು ಭಾವಿಸದಿರಲಿ. ಖಂಡಿತವಾಗಿಯೂ (ಅಲ್ಲಾಹುವನ್ನು) ಸೋಲಿಸಲು ಅವರಿಂದಾಗದು.
(60) ಅವರನ್ನು ಎದುರಿಸಲು ನಿಮಗೆ ಸಾಧ್ಯವಿರುವ ಎಲ್ಲ ಶಕ್ತಿಯನ್ನೂ, ಅಶ್ವಸೇನೆಯನ್ನೂ ಸಿದ್ಧಗೊಳಿಸಿರಿ.(285) ತನ್ಮೂಲಕ ಅಲ್ಲಾಹುವಿನ ಮತ್ತು ನಿಮ್ಮ ಶತ್ರುವನ್ನು ಹಾಗೂ ಅವರ ಹೊರತಾಗಿರುವ ನೀವು ಅರಿಯದಿರುವ, ಆದರೆ ಅಲ್ಲಾಹು ಅರಿತಿರುವ ಇತರ ಕೆಲವರನ್ನೂ ನೀವು ಭಯಪಡಿಸುವ ಸಲುವಾಗಿ. ನೀವು ಅಲ್ಲಾಹುವಿನ ಮಾರ್ಗದಲ್ಲಿ ಏನೇ ವ್ಯಯಿಸಿದರೂ ಅದಕ್ಕಿರುವ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮ್ಮೊಂದಿಗೆ ಅನ್ಯಾಯವೆಸಗಲಾಗದು.
285. ಆಯಾ ಕಾಲದ ಯುದ್ಧ ತಂತ್ರಗಳು ಮತ್ತು ಆಯುಧಗಳು ಬೇರೆ ಬೇರೆಯಾಗಿರುವುವು. ಆಯಾ ಕಾಲದಲ್ಲಿ ಜಯಗಳಿಸಲು ನೆರವಾಗುವ ಯುದ್ಧ ಸಜ್ಜೀಕರಣಗಳನ್ನು ಮಾಡಿಕೊಂಡಿರಬೇಕು ಎಂದರ್ಥ.
(61) ಇನ್ನು ಅವರೇನಾದರೂ ಶಾಂತಿಯೆಡೆಗೆ ಒಲವು ತೋರುವುದಾದರೆ ತಾವು ಕೂಡ ಅದರೆಡೆಗೆ ಒಲವು ತೋರಿರಿ ಮತ್ತು ಅಲ್ಲಾಹುವಿನ ಮೇಲೆ ಭರವಸೆಯಿಡಿರಿ. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ, ಅರಿಯುವವನೂ ಆಗಿರುವನು.
(62) ಅವರೇನಾದರೂ ತಮ್ಮನ್ನು ವಂಚಿಸಲು ಬಯಸುವುದಾದರೆ ಖಂಡಿತವಾಗಿಯೂ ತಮಗೆ ಅಲ್ಲಾಹು ಸಾಕು. ತನ್ನ ಸಹಾಯದಿಂದಲೂ, ವಿಶ್ವಾಸಿಗಳಿಂದಲೂ ತಮಗೆ ಬೆಂಬಲವಿತ್ತವನು ಅವನೇ ಆಗಿರುವನು.
(63) ಅವನು ಅವರ (ವಿಶ್ವಾಸಿಗಳ) ಹೃದಯಗಳನ್ನು ಪರಸ್ಪರ ಬೆಸೆದಿರುವನು. ಭೂಮಿಯಲ್ಲಿರುವುದೆಲ್ಲವನ್ನೂ ತಾವು ವ್ಯಯಿಸಿದರೂ ಅವರ ಹೃದಯಗಳನ್ನು ಪರಸ್ಪರ ಬೆಸೆಯಲು ತಮ್ಮಿಂದಾಗುತ್ತಿರಲಿಲ್ಲ. ಆದರೆ ಅಲ್ಲಾಹು ಅವರನ್ನು ಪರಸ್ಪರ ಬೆಸೆದಿರುವನು. ಖಂಡಿತವಾಗಿಯೂ ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
(64) ಓ ಪ್ರವಾದಿಯವರೇ! ತಮಗೆ ಮತ್ತು ತಮ್ಮನ್ನು ಅನುಸರಿಸಿದ ವಿಶ್ವಾಸಿಗಳಿಗೆ ಅಲ್ಲಾಹು ಸಾಕು.
(65) ಓ ಪ್ರವಾದಿಯವರೇ! ವಿಶ್ವಾಸಿಗಳನ್ನು ಯುದ್ಧಕ್ಕಾಗಿ ಹುರಿದುಂಬಿಸಿರಿ. ನಿಮ್ಮ ಪೈಕಿ ಸ್ಥೈರ್ಯವಂತರಾದ ಇಪ್ಪತ್ತು ಮಂದಿಯಿರುವುದಾದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು. ನಿಮ್ಮ ಪೈಕಿ ನೂರು ಮಂದಿಯಿರುವುದಾದರೆ ಅವರು ಸತ್ಯನಿಷೇಧಿಗಳಲ್ಲಿ ಸೇರಿದ ಸಾವಿರ ಮಂದಿಯನ್ನು ಸೋಲಿಸುವರು. ಅದು ಅವರು (ಸತ್ಯನಿಷೇಧಿಗಳು) ಚಿಂತಿಸಿ ಗ್ರಹಿಸದ ಜನತೆಯಾಗಿರುವರು ಎಂಬುದರಿಂದಾಗಿದೆ.
(66) ಈಗ ಅಲ್ಲಾಹು ನಿಮಗೆ ಹಗುರಗೊಳಿಸಿರುವನು. ನಿಮ್ಮಲ್ಲಿ ಬಲಹೀನತೆಯಿದೆಯೆಂದು ಅವನು ಅರಿತಿರುವನು. ಆದ್ದರಿಂದ ನಿಮ್ಮ ಪೈಕಿ ಸ್ಥೈರ್ಯವಂತರಾದ ನೂರು ಮಂದಿಯಿರುವುದಾದರೆ ಅವರು ಇನ್ನೂರು ಮಂದಿಯನ್ನು ಸೋಲಿಸುವರು. ನಿಮ್ಮ ಪೈಕಿ ಸಾವಿರ ಮಂದಿಯಿರುವುದಾದರೆ ಅವರು ಅಲ್ಲಾಹುವಿನ ಅನುಮತಿಯೊಂದಿಗೆ ಎರಡು ಸಾವಿರ ಮಂದಿಯನ್ನು ಸೋಲಿಸುವರು.(286) ಅಲ್ಲಾಹು ಸ್ಥೈರ್ಯವಂತರೊಂದಿಗಿರುವನು.
286. ಮುಸ್ಲಿಮರು ದೃಢವಿಶ್ವಾಸಿಗಳೂ ಅಲ್ಪಸಂಖ್ಯಾತರೂ ಆಗಿದ್ದಾಗ ಅವರಿಗಿಂತ ಹತ್ತುಪಟ್ಟು ಅಧಿಕವಿರುವ ಶತ್ರುಸೈನ್ಯದ ಮುಂದೆ ಅಚಲರಾಗಿ ನಿಂತು ಹೋರಾಡಬೇಕು ಮತ್ತು ಹಿಂದಿರುಗಿ ಓಡಬಾರದೆಂದು ಅಲ್ಲಾಹು ಅವರಿಗೆ ಆದೇಶಿಸಿದ್ದನು. ತರುವಾಯ ದುಪ್ಪಟ್ಟು ಸಂಖ್ಯೆಗಿಂತ ಅಧಿಕವಿರುವ ಸೈನ್ಯದೊಂದಿಗೆ ಅಚಲರಾಗಿ ನಿಂತು ಹೋರಾಡಲು ಸಾಧ್ಯವಾಗದಿದ್ದರೆ ಅದರಲ್ಲಿ ದೋಷವಿಲ್ಲವೆಂದು ಆದೇಶದಲ್ಲಿ ರಿಯಾಯಿತಿ ನೀಡಲಾಯಿತು. ವಿಶ್ವಾಸಕ್ಕೆ ಸಂಬಂಧಿಸಿದಂತೆ ಅತಿಶಕ್ತರಲ್ಲದ ಅನೇಕ ಮಂದಿ ಜೊತೆಗೂಡಿ ಮುಸ್ಲಿಮರ ಸಂಖ್ಯೆಯು ಹೆಚ್ಚಾದ ಸಂದರ್ಭದಲ್ಲಿ ಈ ರಿಯಾಯಿತಿಯನ್ನು ನೀಡಲಾಯಿತು.
(67) (ಶತ್ರುಗಳನ್ನು ಸೋಲಿಸಿ) ನಾಡಿನಲ್ಲಿ ಪ್ರಾಬಲ್ಯ ಸ್ಥಾಪಿಸುವವರೆಗೆ ಒಬ್ಬ ಪ್ರವಾದಿಗೆ ಯುದ್ಧ ಕೈದಿಗಳಿರುವುದು ಯುಕ್ತವಾದುದಲ್ಲ.(287) ನೀವು ಇಹಲೋಕದ ತಾತ್ಕಾಲಿಕ ಲಾಭವನ್ನು ಇಚ್ಛಿಸುತ್ತಿರುವಿರಿ.(288) ಆದರೆ ಅಲ್ಲಾಹು ಪರಲೋಕವನ್ನು ಇಚ್ಛಿಸುತ್ತಿರುವನು. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
287. ಶತ್ರುಗಳು ಪ್ರವಾದಿ(ಸ) ರವರ ಮತ್ತು ಅವರ ಅನುಯಾಯಿಗಳ ವಿರುದ್ಧ ಯುದ್ಧವನ್ನು ಘೋಷಿಸಿರುವುದು ಅವರು ಸತ್ಯವಿಶ್ವಾಸ ಸ್ವೀಕರಿಸಿದರು ಮತ್ತು ಸಚ್ಚಾರಿತ್ರ್ಯವಂತರಾದರು ಎಂಬ ಕಾರಣದಿಂದ ಮಾತ್ರವಾಗಿತ್ತು. ವಿಶ್ವಾಸಿಗಳು ಬಲಹೀನರಾದ ಅಲ್ಪಸಂಖ್ಯಾತರಾಗಿದ್ದರು. ಶತ್ರುಗಳು ಶಸ್ತ್ರಸಜ್ಜಿತರಾದ ಬಹು ಸಂಖ್ಯಾತರಾಗಿದ್ದರು. ಆದರೂ ಶತ್ರುಗಳು ಬದ್ರ್ನಲ್ಲಿ ದಯನೀಯ ಸೋಲನ್ನು ಕಂಡರು. ಅವರಲ್ಲಿ ಅನೇಕ ಮಂದಿ ಮುಸ್ಲಿಮರ ಯುದ್ಧಕೈದಿಗಳಾದರು. ಸಹಾಬಿಗಳ ಪೈಕಿ ಅನೇಕ ಮಂದಿಯ ಸಲಹೆಯ ಮೇರೆಗೆ ಪ್ರವಾದಿ(ಸ) ರವರು ಪರಿಹಾರಧನ ಪಡೆದು ಅವರನ್ನು ಬಿಟ್ಟುಬಿಡಲು ಆದೇಶಿಸಿದರು. ಈ ಕ್ರಮವು ಯುದ್ಧತಂತ್ರದ ಪ್ರಕಾರ ಸರಿಯಲ್ಲವೆಂದು ಪ್ರಸ್ತುತ ಸೂಕ್ತಿಯು ಸೂಚಿಸುತ್ತದೆ. ಕ್ರೂರಿಗಳಾದ ಶತ್ರುಗಳನ್ನು ಕೊಲ್ಲುವ ಮೂಲಕ ಅಥವಾ ಗಾಯಗೊಳಿಸುವ ಮೂಲಕ ಅವರನ್ನು ದಮನಿಸಿದ ಬಳಿಕವಲ್ಲದೆ ಅವರೊಂದಿಗೆ ಉದಾರ ನಿಲುವನ್ನು ಹೊಂದಬಾರದು. ಅದು ಅಪಾಯಕಾರಿಯಾಗಿದೆಯೆಂದು ಅಲ್ಲಾಹು ಇಲ್ಲಿ ನೆನಪಿಸುತ್ತಿದ್ದಾನೆ.
288. ಪರಿಹಾರ ಧನವಾಗಿ ಸಿಗುವ ಮೊತ್ತಕ್ಕೆ ಆಸೆಪಟ್ಟು ನೀವು ಅವರನ್ನು ಖುಲಾಸೆಗೊಳಿಸುತ್ತಿರುವಿರಿ. ಶೀಘ್ರದಲ್ಲೇ ಮತ್ತೊಂದು ಯುದ್ಧಕ್ಕೆ ಸಿದ್ಧರಾಗಲು ಅದು ಶತ್ರುಗಳಿಗೆ ಅವಕಾಶ ಮಾಡಿಕೊಡುತ್ತದೆ. ನಿಮ್ಮ ಐಹಿಕ ಮತ್ತು ಪಾರತ್ರಿಕ ನಷ್ಟಕ್ಕೆ ಅದು ಕಾರಣವಾಗಬಹುದು.
(68) ಅಲ್ಲಾಹುವಿನ ಕಡೆಯ ಒಂದು ಪೂರ್ವ ನಿರ್ಧಾರವು ಇಲ್ಲದಿರುತ್ತಿದ್ದರೆ ನೀವು ಪಡೆದಿರುವುದರ ನಿಮಿತ್ತ ಘೋರ ಶಿಕ್ಷೆಯು ನಿಮ್ಮನ್ನು ಸ್ಪರ್ಶಿಸುತ್ತಿತ್ತು.
(69) ಆದ್ದರಿಂದ (ಯುದ್ಧದಲ್ಲಿ) ನೀವು ಗಳಿಸಿರುವುದರ ಪೈಕಿ ಧರ್ಮಸಮ್ಮತವೂ ಉತ್ತಮವೂ ಆಗಿರುವುದನ್ನು ತಿನ್ನಿರಿ. ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(70) ಓ ಪ್ರವಾದಿಯವರೇ! ತಮ್ಮ ವಶದಲ್ಲಿರುವ ಯುದ್ಧಕೈದಿಗಳೊಂದಿಗೆ ಹೇಳಿರಿ: ‘ನಿಮ್ಮ ಹೃದಯಗಳಲ್ಲಿ ಒಳಿತೇನಾದರೂ ಇರುವುದಾಗಿ ಅಲ್ಲಾಹು ಅರಿತರೆ ನಿಮ್ಮಿಂದ ಪಡೆಯಲಾಗಿರುವುದಕ್ಕಿಂತಲೂ ಉತ್ತಮವಾಗಿರುವುದನ್ನು ಅವನು ನಿಮಗೆ ನೀಡುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.
(71) ಅವರು ತಮಗೆ ನಂಬಿಕೆದ್ರೋಹ ಮಾಡಲು ಇಚ್ಛಿಸುವುದಾದರೆ ಇದಕ್ಕಿಂತ ಮುಂಚೆ ಅವರು ಅಲ್ಲಾಹುವಿಗೂ ನಂಬಿಕೆದ್ರೋಹ ಮಾಡಿರುವರು. ಆದ್ದರಿಂದಲೇ ಅವನು ಅವರನ್ನು (ನಿಮಗೆ) ಶರಣಾಗತಗೊಳಿಸಿದನು. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
(72) ಖಂಡಿತವಾಗಿಯೂ ವಿಶ್ವಾಸವಿಟ್ಟವರು, ತಮ್ಮ ಊರನ್ನು ತ್ಯಜಿಸಿದವರು, ತಮ್ಮ ಸಂಪತ್ತುಗಳಿಂದ ಮತ್ತು ಶರೀರಗಳಿಂದ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿದವರು, ಅವರಿಗೆ ಆಶ್ರಯವನ್ನು ಮತ್ತು ಸಹಾಯವನ್ನು ನೀಡಿದವರು ಖಂಡಿತವಾಗಿಯೂ ಪರಸ್ಪರ ಆತ್ಮೀಯ ಮಿತ್ರರಾಗಿರುವರು. ಆದರೆ ವಿಶ್ವಾಸವಿಟ್ಟವರಾಗಿದ್ದೂ ಸಹ ತಮ್ಮ ಊರನ್ನು ತ್ಯಜಿಸದವರನ್ನು, ಅವರು ತಮ್ಮ ಊರನ್ನು ತ್ಯಜಿಸುವವರೆಗೆ, ಅವರನ್ನು ರಕ್ಷಿಸಬೇಕಾದ ಯಾವುದೇ ಹೊಣೆಯೂ ನಿಮಗಿಲ್ಲ.(289) ಅವರೇನಾದರೂ ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಸಹಾಯ ಬೇಡಿದರೆ ಸಹಾಯ ಮಾಡಬೇಕಾದುದು ನಿಮ್ಮ ಹೊಣೆಯಾಗಿದೆ. ಆದರೆ ನಿಮ್ಮೊಂದಿಗೆ ಕರಾರಿನಲ್ಲಿರುವ ಜನತೆಗೆ ವಿರುದ್ಧವಾಗಿ (ನೀವವರಿಗೆ ಸಹಾಯ) ಮಾಡದಿರಿ. ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ವೀಕ್ಷಿಸುವವನಾಗಿರುವನು.
289. ಪ್ರವಾದಿರವರ ಹಿಜ್ರಾ ಮತ್ತು ಮಕ್ಕಾ ವಿಜಯದ ನಡುವೆ ಯಾರು ಎಲ್ಲೇ ಇಸ್ಲಾಮ್ ಸ್ವೀಕರಿಸಿದರೂ ಮದೀನಕ್ಕೆ ಹಿಜ್ರಾ ಮಾಡಬೇಕೆಂಬ ಆಜ್ಞೆಯಿತ್ತು. ಆಶ್ರಯಕೋರಿ ಬಂದ ಮುಸ್ಲಿಮರು ಮತ್ತು ಮದೀನಾ ನಿವಾಸಿಗಳಾದ ಮುಸ್ಲಿಮರು ಪರಸ್ಪರ ಸುದೃಢವಾದ ಮೈತ್ರಿಯನ್ನು ಹೊಂದಿದ್ದರು. ಮದೀನದಲ್ಲಿರುವ ಮುಸ್ಲಿಮರೊಂದಿಗೆ ಸೇರದೆ ಅವಿಶ್ವಾಸಿಗಳ ಮಧ್ಯೆ ಜೀವಿಸುತ್ತಿದ್ದ ಸತ್ಯವಿಶ್ವಾಸಿಗಳೊಂದಿಗೆ ಇಂತಹ ಮೈತ್ರಿಯನ್ನು ಸ್ಥಾಪಿಸುವುದು ಸಾಧ್ಯವಿಲ್ಲ. ಆದರೆ ಅವರು ಸಹಾಯ ಬೇಡಿದರೆ ಶರ್ತಬದ್ಧ ಸಹಾಯ ನೀಡುವ ಹೊಣೆ ಮುಸ್ಲಿಮರಿಗಿದೆ.
(73) ಸತ್ಯನಿಷೇಧಿಗಳು ಪರಸ್ಪರ ಆತ್ಮೀಯ ಮಿತ್ರರಾಗಿರುವರು.(290) ಇದನ್ನು (ಈ ನಿರ್ದೇನಗಳನ್ನು) ನೀವು ಪ್ರಾಯೋಗಿಕಗೊಳಿಸದಿದ್ದರೆ ಭೂಮಿಯಲ್ಲಿ ಕ್ಷೋಭೆಯೂ, ಮಹಾ ವಿನಾಶವೂ ಉಂಟಾಗುವುದು.
290. ಸತ್ಯನಿಷೇಧಿಗಳ ಮಧ್ಯೆ ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಸತ್ಯವಿಶ್ವಾಸಿಗಳನ್ನು ಎದುರಿಸುವ ವಿಷಯದಲ್ಲಿ ಅವರ ಮಧ್ಯೆ ಐಕ್ಯತೆ ಮತ್ತು ಮೈತ್ರಿ ಮೂಡುವುದೆಂದು ಕುರ್ಆನ್ ಎಚ್ಚರಿಸುತ್ತದೆ. ಎಲ್ಲಾ ಕಾಲದಲ್ಲೂ ಈ ಬಗ್ಗೆ ಎಚ್ಚರವಹಿಸಬೇಕಾಗಿದೆ.
(74) ಸತ್ಯವಿಶ್ವಾಸವಿಟ್ಟವರು, ತಮ್ಮ ಊರನ್ನು ತ್ಯಜಿಸಿದವರು, ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿದವರು(291) ಮತ್ತು ಅವರಿಗೆ ಆಶ್ರಯವನ್ನು ಹಾಗೂ ಸಹಾಯವನ್ನು ನೀಡಿದವರು(292) ನೈಜ ಸತ್ಯವಿಶ್ವಾಸಿಗಳಾಗಿರುವರು. ಅವರಿಗೆ ಪಾಪಮುಕ್ತಿಯೂ ಗೌರವಾನ್ವಿತ ಅನ್ನಾಧಾರವೂ ಇರುವುದು.
291. ಮದೀನಕ್ಕೆ ಬಂದ ಮುಹಾಜಿರ್ಗಳಾದ ಮುಸ್ಲಿಮರು.292. ಮದೀನಾ ನಿವಾಸಿಗಳಾದ ಮುಸ್ಲಿಮರು. ಅನ್ಸಾರ್ (ಸಹಾಯಕರು) ಎಂದು ಇವರನ್ನು ಕರೆಯಲಾಗುತ್ತದೆ.
(75) ಅದರ ನಂತರ ವಿಶ್ವಾಸವಿಟ್ಟವರು, ತಮ್ಮ ಊರನ್ನು ತ್ಯಜಿಸಿದವರು ಮತ್ತು ನಿಮ್ಮ ಜೊತೆಗೆ ಯುದ್ಧ ಮಾಡಿದವರು ಕೂಡ ನಿಮ್ಮವರೇ ಆಗಿರುವರು. ಆದರೆ ರಕ್ತಸಂಬಂಧವಿರುವವರು ಅಲ್ಲಾಹುವಿನ ದಾಖಲೆಯಲ್ಲಿ (ನಿಯಮದಲ್ಲಿ) ಪರಸ್ಪರ ಹೆಚ್ಚು ಸಂಬಂಧ ಹೊಂದಿದವರಾಗಿರುವರು. ಖಂಡಿತವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದ ಬಗ್ಗೆಯೂ ಅರಿವುಳ್ಳವನಾಗಿರುವನು.