(1) ಅಲಿಫ್, ಲಾಮ್, ಮೀಮ್, ಸ್ವಾದ್
(2) (ಓ ಪ್ರವಾದಿಯವರೇ!) ಇದು ತಮಗೆ ಅವತೀರ್ಣಗೊಂಡಿರುವ ಗ್ರಂಥವಾಗಿದೆ. ಇದರ ಬಗ್ಗೆ ತಮ್ಮ ಹೃದಯದಲ್ಲಿ ಯಾವುದೇ ಸಂಕಟವುಂಟಾಗದಿರಲಿ. ಇದು ಇದರ ಮೂಲಕ ತಾವು ಮುನ್ನೆಚ್ಚರಿಕೆ ನೀಡುವ ಸಲುವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಒಂದು ಉಪದೇಶವಾಗಿದೆ.
(3) ನಿಮ್ಮ ರಬ್‌ನ ವತಿಯಿಂದ ನಿಮ್ಮೆಡೆಗೆ ಅವತೀರ್ಣಗೊಂಡಿರುವುದನ್ನು ನೀವು ಅನುಸರಿಸಿರಿ. ಅವನ ಹೊರತು ಅನ್ಯ ರಕ್ಷಕರನ್ನು ಅನುಸರಿಸದಿರಿ. ನೀವು ಸ್ವಲ್ಪವೇ ಚಿಂತಿಸಿ ಅರ್ಥಮಾಡಿಕೊಳ್ಳುತ್ತಿರುವಿರಿ.
(4) ಎಷ್ಟು ನಾಡುಗಳನ್ನು ನಾವು ನಾಶ ಮಾಡಿರುವೆವು! ರಾತ್ರಿ ವೇಳೆಯಲ್ಲಿ ಅಥವಾ ಅವರು ಮಧ್ಯಾಹ್ನದ ನಿದ್ದೆಯಲ್ಲಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಿತು.
(5) ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರ ಆಕ್ರಂದನವು ‘ನಾವು ಅಕ್ರಮಿಗಳಾಗಿ ಬಿಟ್ಟೆವಲ್ಲ!’ ಎಂದು ಹೇಳುವುದಲ್ಲದೆ ಇನ್ನೇನೂ ಆಗಿರಲಿಲ್ಲ.
(6) ಖಂಡಿತವಾಗಿಯೂ ಯಾರ ಬಳಿಗೆ (ನಮ್ಮ ಸಂದೇಶವಾಹಕರನ್ನು) ಕಳುಹಿಸಲಾಯಿತೋ ಅವರನ್ನು ನಾವು ಪ್ರಶ್ನಿಸುವೆವು. ಖಂಡಿತವಾಗಿಯೂ ಕಳುಹಿಸಲಾದ ಸಂದೇಶವಾಹಕರನ್ನೂ ನಾವು ಪ್ರಶ್ನಿಸುವೆವು.
(7) ತರುವಾಯ ನಿಖರವಾದ ಜ್ಞಾನದೊಂದಿಗೆ ನಾವು ಅವರಿಗೆ (ವಿಷಯವನ್ನು) ವಿವರಿಸಿಕೊಡುವೆವು. ನಾವು ಒಮ್ಮೆಯೂ ಅನುಪಸ್ಥಿತರಾಗಿರಲಿಲ್ಲ.
(8) ಆ ದಿನದಂದು (ಕರ್ಮಗಳನ್ನು) ತೂಗಿನೋಡುವುದು ಸತ್ಯವಾಗಿದೆ. ಆಗ ಯಾರ ತಕ್ಕಡಿಯು ಭಾರವಾಗುವುದೋ ಅವರೇ ಯಶಸ್ವಿಯಾದವರಾಗಿರುವರು.
(9) ಯಾರ ತಕ್ಕಡಿಗಳು ಹಗುರವಾಗುವುದೋ ಅವರು ನಮ್ಮ ದೃಷ್ಟಾಂತಗಳೊಂದಿಗೆ ಅಕ್ರಮವೆಸಗಿರುವುದರ ನಿಮಿತ್ತ ಸ್ವತಃ ತಮ್ಮನ್ನೇ ನಷ್ಟಕ್ಕೊಳಪಡಿಸಿದವರಾಗಿರುವರು.
(10) ಖಂಡಿತವಾಗಿಯೂ ನಾವು ನಿಮಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು. ಅಲ್ಲಿ ನಿಮಗೆ ಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು. ನೀವು ಸ್ವಲ್ಪವೇ ಕೃತಜ್ಞತೆ ಸಲ್ಲಿಸುತ್ತಿರುವಿರಿ.
(11) ಖಂಡಿತವಾಗಿಯೂ ನಾವು ನಿಮ್ಮನ್ನು ಸೃಷ್ಟಿಸಿದೆವು. ತರುವಾಯ ನಿಮಗೆ ರೂಪವನ್ನು ನೀಡಿದೆವು. ತರುವಾಯ ನಾವು ಮಲಕ್‍ಗಳೊಂದಿಗೆ ಹೇಳಿದೆವು: ‘ನೀವು ಆದಮ್‍ರಿಗೆ ಸಾಷ್ಟಾಂಗವೆರಗಿರಿ’. ಅವರು ಸಾಷ್ಟಾಂಗವೆರಗಿದರು; ಇಬ್ಲೀಸನ ಹೊರತು. ಅವನು ಸಾಷ್ಟಾಂಗವೆರಗಿದವರ ಪೈಕಿ ಸೇರಿದವನಾಗಲಿಲ್ಲ.
(12) ಅವನು (ಅಲ್ಲಾಹು) ಕೇಳಿದನು: ‘ನಾನು ನಿನ್ನೊಂದಿಗೆ ಆಜ್ಞಾಪಿಸಿದಾಗ ಸಾಷ್ಟಾಂಗವೆರಗದಿರಲು ನಿನ್ನನ್ನು ತಡೆದಿರುವುದಾದರೂ ಏನು?’ ಅವನು ಹೇಳಿದನು: ‘ನಾನು ಅವರಿಗಿಂತಲೂ (ಆದಮ್‍ರಿಗಿಂತಲೂ) ಶ್ರೇಷ್ಠನಾಗಿರುವೆನು. ನನ್ನನ್ನು ನೀನು ಅಗ್ನಿಯಿಂದ ಸೃಷ್ಟಿಸಿರುವೆ. ಅವರನ್ನು ನೀನು ಜೇಡಿಮಣ್ಣಿನಿಂದ ಸೃಷ್ಟಿಸಿರುವೆ.’
(13) ಅವನು (ಅಲ್ಲಾಹು) ಹೇಳಿದನು: ‘ನೀನಿಲ್ಲಿಂದ ಇಳಿದುಹೋಗು. ಇಲ್ಲಿ ನಿನಗೆ ಅಹಂಕಾರಪಡಲು ಅನುಮತಿಯಿಲ್ಲ. ಹೊರಗೆ ಹೋಗು! ಖಂಡಿತವಾಗಿಯೂ ನೀನು ಅಪಮಾನಿತರಲ್ಲಿ ಸೇರಿದವನಾಗಿರುವೆ.’
(14) ಅವನು ಹೇಳಿದನು: ‘ಅವರನ್ನು (ಮನುಷ್ಯರನ್ನು) ಪುನರುತ್ಥಾನಗೊಳಿಸಲಾಗುವ ದಿನದವರೆಗೆ ನನಗೆ ಕಾಲಾವಕಾಶವನ್ನು ನೀಡು.’
(15) ಅವನು (ಅಲ್ಲಾಹು) ಹೇಳಿದನು: ‘ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿದವನಾಗಿರುವೆ.’(216)
216. ಪುನರುತ್ಥಾನದ ದಿನದವರೆಗೆ ಕಾರ್ಯನಿರ್ವಹಿಸಲು ನಿನಗೆ ಅನುಮತಿ ನೀಡಲಾಗಿದೆ ಎಂದರ್ಥ.
(16) ಅವನು (ಇಬ್ಲೀಸ್) ಹೇಳಿದನು: ‘ನೀನು ನನ್ನನ್ನು ದಾರಿತಪ್ಪಿಸಿರುವ ಕಾರಣ ಅವರು (ಮನುಷ್ಯರು) ನಿನ್ನ ನೇರವಾದ ಮಾರ್ಗಕ್ಕೆ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ನಾನು ಕಾದುಕುಳಿತುಕೊಳ್ಳುವೆನು.
(17) ತರುವಾಯ ಅವರ ಮುಂಭಾಗದಿಂದಲೂ, ಅವರ ಹಿಂಭಾಗದಿಂದಲೂ, ಅವರ ಬಲಭಾಗಗಳಿಂದಲೂ, ಅವರ ಎಡಭಾಗಗಳಿಂದಲೂ ನಾನು ಅವರ ಬಳಿಗೆ ಬಂದೇ ಬರುವೆನು. ಅವರ ಪೈಕಿ ಹೆಚ್ಚಿನವರನ್ನೂ ನೀನು ಕೃತಜ್ಞತೆ ಸಲ್ಲಿಸುವವರನ್ನಾಗಿ ಕಾಣಲಾರೆ.’
(18) ಅವನು (ಅಲ್ಲಾಹು) ಹೇಳಿದನು: ‘ಅಪಮಾನಿತನಾಗಿಯೂ, ತಿರಸ್ಕೃತನಾಗಿಯೂ ಇಲ್ಲಿಂದ ಹೊರಗೆ ಹೋಗು. ಅವರ ಪೈಕಿ ಯಾರಾದರೂ ನಿನ್ನನ್ನು ಅನುಸರಿಸುವುದಾದರೆ ಖಂಡಿತವಾಗಿಯೂ ನಿಮ್ಮೆಲ್ಲರನ್ನೂ ಸೇರಿಸಿ ನಾನು ನರಕವನ್ನು ತುಂಬಿಸುವೆನು.’
(19) (ಅಲ್ಲಾಹು ಹೇಳಿದನು) ಓ ಆದಮ್! ತಾವು ಮತ್ತು ತಮ್ಮ ಸಂಗಾತಿ ಈ ತೋಟದಲ್ಲಿ ವಾಸಿಸಿರಿ. ತರುವಾಯ ನೀವಿಬ್ಬರೂ ಇಚ್ಛಿಸುವ ಕಡೆಗಳಿಂದೆಲ್ಲ ತಿನ್ನಿರಿ. ಆದರೆ ಈ ಮರದ ಸಮೀಪಕ್ಕೆ ನೀವಿಬ್ಬರೂ ಹೋಗದಿರಿ. ಹೋದರೆ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ.
(20) ಅವರಿಂದ ಮರೆಮಾಚಲಾಗಿರುವ ಅವರ ಗುಹ್ಯಭಾಗಗಳನ್ನು ಅವರಿಗೆ ಪ್ರಕಟಗೊಳಿಸುವ ಸಲುವಾಗಿ ಸೈತಾನನು ಅವರಿಬ್ಬರಿಗೂ ದುಷ್ಪ್ರೇರಣೆ ನೀಡಿದನು. ಅವನು ಹೇಳಿದನು: ‘ನೀವಿಬ್ಬರೂ ಮಲಕ್‍ಗಳಾಗಿ ಬಿಡುವಿರಿ ಅಥವಾ ನೀವಿಬ್ಬರೂ ಇಲ್ಲಿ ಶಾಶ್ವತವಾಗಿ ವಾಸಿಸುವವರಾಗುವಿರಿ ಎಂಬುದರಿಂದಲೇ ವಿನಾ ನಿಮ್ಮ ರಬ್ ನಿಮ್ಮನ್ನು ಈ ಮರದಿಂದ ತಡೆದಿಲ್ಲ.’
(21) ‘ಖಂಡಿತವಾಗಿಯೂ ನಾನು ನಿಮ್ಮಿಬ್ಬರ ಹಿತಾಕಾಂಕ್ಷಿಯಾಗಿರುವೆನು’ ಎಂದು ಅವನು ಅವರೊಂದಿಗೆ ಪ್ರಮಾಣ ಮಾಡಿ ಹೇಳಿದನು.
(22) ಹೀಗೆ ಅವನು ವಂಚನೆಯಿಂದ ಅವರಿಬ್ಬರನ್ನೂ ಕೆಳಗಿಳಿಸಿದನು. ತರುವಾಯ ಅವರಿಬ್ಬರೂ ಆ ಮರದಿಂದ ರುಚಿಯನ್ನು ಸವಿದಾಗ ಅವರಿಗೆ ಅವರ ಗುಹ್ಯಭಾಗಗಳು ಪ್ರಕಟವಾದವು. ಆ ತೋಟದ ಎಲೆಗಳಿಂದ ಅವರಿಬ್ಬರೂ ತಮ್ಮ ಶರೀರಗಳನ್ನು ಮುಚ್ಚತೊಡಗಿದರು. ಅವರಿಬ್ಬರನ್ನೂ ಕರೆದು ಅವರ ರಬ್ ಹೇಳಿದನು: ‘ಆ ಮರದಿಂದ ನಾನು ನಿಮ್ಮಿಬ್ಬರನ್ನೂ ತಡೆದಿರಲಿಲ್ಲವೇ? ಖಂಡಿತವಾಗಿಯೂ ಸೈತಾನನು ನಿಮ್ಮ ಪ್ರತ್ಯಕ್ಷ ಶತ್ರುವಾಗಿರುವನೆಂದು ನಾನು ನಿಮ್ಮಿಬ್ಬರೊಂದಿಗೂ ಹೇಳಿರಲಿಲ್ಲವೇ?’
(23) ಅವರಿಬ್ಬರೂ ಹೇಳಿದರು: ‘ಓ ನಮ್ಮ ರಬ್! ನಾವು ಸ್ವತಃ ನಮ್ಮೊಂದಿಗೇ ಅಕ್ರಮವೆಸಗಿರುವೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮಗೆ ಕರುಣೆ ತೋರದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು.’
(24) ಅವನು (ಅಲ್ಲಾಹು) ಹೇಳಿದನು: ‘ನೀವು ಇಳಿದುಹೋಗಿರಿ. ನಿಮ್ಮಲ್ಲಿ ಕೆಲವರು ಇತರ ಕೆಲವರಿಗೆ ಶತ್ರುಗಳಾಗಿರುವರು. ನಿಮಗೆ ಭೂಮಿಯಲ್ಲಿ ವಾಸಸ್ಥಳವಿದೆ. ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಜೀವನಾನುಕೂಲತೆಗಳೂ ಇವೆ.’
(25) ಅವನು ಹೇಳಿದನು: ‘ಅಲ್ಲೇ (ಭೂಮಿಯಲ್ಲೇ) ನೀವು ಬದುಕುವಿರಿ, ಅಲ್ಲೇ ನೀವು ಮರಣಹೊಂದುವಿರಿ ಮತ್ತು ಅಲ್ಲಿಂದಲೇ ನಿಮ್ಮನ್ನು ಹೊರತರಲಾಗುವುದು.’
(26) ಓ ಆದಮ್ ಸಂತತಿಗಳೇ! ನಿಮ್ಮ ಗುಹ್ಯಭಾಗಗಳನ್ನು ಮರೆಮಾಚುವ ಉಡುಪನ್ನು ಮತ್ತು ಅಲಂಕಾರ ವಸ್ತ್ರವನ್ನು ನಾವು ನಿಮಗೆ ನೀಡಿರುವೆವು. ಧರ್ಮನಿಷ್ಠೆಯ ಉಡುಪು ಯಾವುದೋ ಅದು ಅತ್ಯುತ್ತಮವಾದುದಾಗಿದೆ. ಅದು ಅಲ್ಲಾಹುವಿನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅವರು ಚಿಂತಿಸಿ ಅರ್ಥಮಾಡಿಕೊಳ್ಳಲೂಬಹುದು.
(27) ಓ ಆದಮ್ ಸಂತತಿಗಳೇ! ನಿಮ್ಮ ಮಾತಾಪಿತರನ್ನು, ಅವರಿಬ್ಬರ ಗುಹ್ಯಭಾಗಗಳನ್ನು ಅವರಿಗೆ ತೋರಿಸಿ ಕೊಡುವ ಸಲುವಾಗಿ ಅವನು ಅವರ ವಸ್ತ್ರವನ್ನು ಅವರಿಂದ ಕಳಚಿಹಾಕಿ ಆ ತೋಟದಿಂದ ಹೊರಗಟ್ಟಿದಂತೆ ಸೈತಾನನು ನಿಮ್ಮನ್ನೂ ಕ್ಷೋಭೆಗೊಳಪಡಿಸದಿರಲಿ. ಖಂಡಿತವಾಗಿಯೂ ನೀವು ಅವರನ್ನು ಕಾಣಲಾಗದಂತಹ ವಿಧದಲ್ಲಿ ಅವನು ಮತ್ತು ಅವನ ಪಂಗಡದವರು ನಿಮ್ಮನ್ನು ಕಾಣುತ್ತಿರುವರು. ಖಂಡಿತವಾಗಿಯೂ ವಿಶ್ವಾಸವಿಡದವರಿಗೆ ನಾವು ಸೈತಾನರನ್ನು ಮಿತ್ರರನ್ನಾಗಿ ಮಾಡಿರುವೆವು.
(28) ಅವರು ಯಾವುದಾದರೂ ನೀಚಕೃತ್ಯವನ್ನು ಮಾಡಿದರೆ ‘ನಮ್ಮ ಪೂರ್ವಿಕರು ಇದನ್ನು ಮಾಡುವುದಾಗಿ ನಾವು ಕಂಡಿರುವೆವು ಮತ್ತು ಅಲ್ಲಾಹು ಇದನ್ನು ನಮ್ಮೊಂದಿಗೆ ಆಜ್ಞಾಪಿಸಿರುವನು’ ಎನ್ನುವರು. (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹು ಖಂಡಿತವಾಗಿಯೂ ನೀಚಕೃತ್ಯವನ್ನು ಆಜ್ಞಾಪಿಸಲಾರನು. ನಿಮಗೆ ಅರಿವಿಲ್ಲದಿರುವುದನ್ನು ನೀವು ಅಲ್ಲಾಹುವಿನ ಹೆಸರಲ್ಲಿ ಹೇಳುತ್ತಿರುವಿರಾ?’
(29) ಹೇಳಿರಿ: ‘ನ್ಯಾಯ ಪಾಲಿಸುವಂತೆ ನನ್ನ ರಬ್ ಆಜ್ಞಾಪಿಸಿರುವನು. ಪ್ರತಿಯೊಂದು ಆರಾಧನಾ ವೇಳೆಗಳಲ್ಲ್ಲೂ(217) (ಅಥವಾ ಪ್ರತಿಯೊಂದು ಆರಾಧನಾಲಯಗಳಲ್ಲೂ) ನಿಮ್ಮ ಮುಖಗಳನ್ನು ಸರಿಯಾದ ವಿಧದಲ್ಲಿ (ಅವನೆಡೆಗೆ ತಿರುಗಿಸಿ) ನಿಲ್ಲಿಸಿರಿ ಮತ್ತು ಶರಣಾಗತಿಯನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನೊಂದಿಗೆ ಪ್ರಾರ್ಥಿಸಿರಿ’. ಅವನು ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದ ಸ್ಥಿತಿಗೇ ನೀವು ಮರಳುವಿರಿ.(218)
217. ಮಸ್ಜಿದ್ ಎಂಬ ಪದಕ್ಕೆ ಆರಾಧನಾ ವೇಳೆ ಮತ್ತು ಆರಾಧನಾಲಯ ಎಂಬ ಅರ್ಥಗಳಿವೆ.
218. ನಿಮ್ಮನ್ನು ಮೊದಲಬಾರಿ ಶೂನ್ಯದಿಂದ ಸೃಷ್ಟಿಸಿದಂತೆ ಪುನರುತ್ಥಾನದ ದಿನದಂದು ಅವನು ನಿಮ್ಮನ್ನು ಪುನಃ ಸೃಷ್ಟಿಸುವನು.
(30) ಒಂದು ಪಂಗಡವನ್ನು ಅವನು ಸನ್ಮಾರ್ಗದಲ್ಲಿ ಸೇರಿಸಿರುವನು. ಇನ್ನೊಂದು ಪಂಗಡವು ಪಥಭ್ರಷ್ಟರಾಗಲು ಅರ್ಹರಾಗಿರುವರು. ಅವರು ಅಲ್ಲಾಹುವಿನ ಹೊರತು ಸೈತಾನರನ್ನು ರಕ್ಷಕರನ್ನಾಗಿ ಮಾಡಿಕೊಂಡಿರುವರು ಮತ್ತು ತಾವು ಸನ್ಮಾರ್ಗ ಪಡೆದವರಾಗಿರುವೆವು ಎಂದು ಅವರು ಭಾವಿಸುತ್ತಿರುವರು.
(31) ಓ ಆದಮ್ ಸಂತತಿಗಳೇ! ಪ್ರತಿಯೊಂದು ಆರಾಧನಾಲಯಗಳಲ್ಲೂ (ಅಥವಾ ಪ್ರತಿಯೊಂದು ಆರಾಧನಾ ವೇಳೆಗಳಲ್ಲೂ) ನಿಮಗೆ ಅಲಂಕಾರವಾಗುವ ಉಡುಪುಗಳನ್ನು ಧರಿಸಿರಿ.(219) ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುಂದುಗಾರಿಕೆ ಮಾಡದಿರಿ. ದುಂದುಗಾರಿಕೆ ಮಾಡುವವರನ್ನು ಅಲ್ಲಾಹು ಮೆಚ್ಚಲಾರನು.
219. ನಗ್ನರಾಗಿ ಅಥವಾ ಅರೆನಗ್ನರಾಗಿ ಪ್ರಾರ್ಥಿಸಿದರೆ ಮಾತ್ರ ಭಕ್ತಿ ಸ್ಫುರಿಸುತ್ತದೆ ಎಂಬ ಅಂಧವಿಶ್ವಾಸವು ಹಲವು ಪ್ರಾಕೃತ ಧರ್ಮಗಳಲ್ಲಿತ್ತು. ಕುರ್‌ಆನ್ ಅದನ್ನು ತಿದ್ದುತ್ತದೆ. ದುರ್ವ್ಯಯ ಮತ್ತು ಅಹಂಭಾವ ರಹಿತವಾದ ವಸ್ತ್ರಧಾರಣೆ ಹಾಗೂ ಮಿತವಾದ ಆಹಾರಗಳನ್ನು ಇಸ್ಲಾಮ್ ಅಪೇಕ್ಷಣೀಯವೆಂದು ಸಾರುತ್ತದೆ.
(32) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹು ಅವನ ದಾಸರಿಗಾಗಿ ಉತ್ಪಾದಿಸಿರುವ ಅಲಂಕಾರ ವಸ್ತುಗಳನ್ನು ಮತ್ತು ಉತ್ತಮ ಆಹಾರಗಳನ್ನು ನಿಷಿದ್ಧಗೊಳಿಸಿದವರು ಯಾರು?’ ಹೇಳಿರಿ: ‘ಅವುಗಳು ಐಹಿಕ ಜೀವನದಲ್ಲಿ ಸತ್ಯವಿಶ್ವಾಸಿಗಳಿಗಿರುವುದಾಗಿದೆ. ಪುನರುತ್ಥಾನ ದಿನದಂದು ಅವರಿಗೆ ಮಾತ್ರ ವಿಶೇಷವಾಗಿರುವುದಾಗಿದೆ.’ ಅರಿತುಕೊಳ್ಳುವ ಜನರಿಗಾಗಿ ನಾವು ಹೀಗೆ ದೃಷ್ಟಾಂತಗಳನ್ನು ವಿವರಿಸಿಕೊಡುವೆವು.
(33) ಹೇಳಿರಿ: ‘ನನ್ನ ರಬ್ ನಿಷಿದ್ಧಗೊಳಿಸಿರುವುದು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ನೀಚಕೃತ್ಯಗಳು, ಪಾಪಕೃತ್ಯಗಳು, ಅನ್ಯಾಯವಾದ ದಬ್ಬಾಳಿಕೆ, ಅಲ್ಲಾಹು ಯಾವುದೇ ಆಧಾರಪ್ರಮಾಣವನ್ನು ಇಳಿಸಿಕೊಡದಿರುವುದನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ನಿಮಗೆ ಅರಿವಿಲ್ಲದಿರುವುದನ್ನು ಅಲ್ಲಾಹುವಿನ ಹೆಸರಲ್ಲಿ ಹೇಳುವುದು ಮಾತ್ರವಾಗಿದೆ.’
(34) ಪ್ರತಿಯೊಂದು ಸಮುದಾಯಕ್ಕೂ ಒಂದು ಅವಧಿಯಿದೆ. ಹಾಗೆ ಅವರ ಅವಧಿಯು ಬಂದುಬಿಟ್ಟರೆ ಒಂದು ಕ್ಷಣದಷ್ಟು ಹಿಂದಕ್ಕೆ ತಳ್ಳಲು ಅಥವಾ ಮುಂದಕ್ಕೆ ತಳ್ಳಲು ಅವರಿಂದಾಗದು.
(35) ಓ ಆದಮ್ ಸಂತತಿಗಳೇ! ನಿಮಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ನಿಮ್ಮ ಬಳಿಗೆ ಸಂದೇಶವಾಹಕರು ಬರುವಾಗ ಭಯಭಕ್ತಿ ಪಾಲಿಸುವವರು ಮತ್ತು ನಿಲುವನ್ನು ಸುಧಾರಿಸುವವರು ಯಾರೋ ಅವರು ಯಾವುದನ್ನೂ ಭಯಪಡಬೇಕಾಗಿಲ್ಲ. ಅವರು ದುಃಖಿಸಬೇಕಾಗಿಯೂ ಬರಲಾರದು.
(36) ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರು ಮತ್ತು ಅವುಗಳಿಗೆದುರಾಗಿ ಅಹಂಕಾರಪಡುವವರು ಯಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(37) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಅಂತಹವರು (ಅಲ್ಲಾಹುವಿನ) ದಾಖಲೆಯಲ್ಲಿ ಅವರಿಗೆ ನಿಶ್ಚಯಿಸಲಾಗಿರುವ ಪಾಲನ್ನು ಪಡೆಯುವರು. ಕೊನೆಗೆ ಅವರನ್ನು ಮೃತಪಡಿಸುವುದಕ್ಕಾಗಿ ನಮ್ಮ ದೂತರು (ಮಲಕ್‍ಗಳು) ಅವರ ಬಳಿಗೆ ಬರುವಾಗ ಅವರು (ಮಲಕ್‍ಗಳು) ಹೇಳುವರು: ‘ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿದ್ದವರು ಎಲ್ಲಿರುವರು?’ ಅವರು ಹೇಳುವರು: ‘ಅವರು ನಮ್ಮನ್ನು ಬಿಟ್ಟು ಹೋಗಿರುವರು’. ತಾವು ಸತ್ಯನಿಷೇಧಿಗಳಾಗಿದ್ದೆವು ಎಂದು ಅವರಿಗೆ ವಿರುದ್ಧವಾಗಿ ಸ್ವತಃ ಅವರೇ ಸಾಕ್ಷ್ಯವಹಿಸುವರು.
(38) ಅವನು (ಅಲ್ಲಾಹು) ಹೇಳುವನು: ‘ಜಿನ್ನ್ ಮತ್ತು ಮನುಷ್ಯರ ಪೈಕಿ ನಿಮಗಿಂತ ಮುಂಚೆ ಗತಿಸಿ ಹೋಗಿರುವ ಸಮುದಾಯಗಳೊಂದಿಗೆ ನೀವೂ ನರಕಾಗ್ನಿಯನ್ನು ಪ್ರವೇಶಿಸಿರಿ’. ಒಂದೊಂದು ಸಮುದಾಯವು (ಅದನ್ನು) ಪ್ರವೇಶಿಸುವಾಗಲೆಲ್ಲ ತನ್ನ ಸಹೋದರಿ ಸಮುದಾಯವನ್ನು ಶಪಿಸುವುದು. ಕೊನೆಗೆ ಅವರೆಲ್ಲರೂ ಅಲ್ಲಿ ಒಟ್ಟುಸೇರಿದಾಗ ಅವರ ಪೈಕಿ ನಂತರ ಬಂದವರು ತಮಗಿಂತ ಮುಂಚೆ ಬಂದವರ ಬಗ್ಗೆ ಹೇಳುವರು: ‘ಓ ನಮ್ಮ ರಬ್! ನಮ್ಮನ್ನು ದಾರಿಗೆಡಿಸಿದವರು ಇವರಾಗಿರುವರು. ಆದ್ದರಿಂದ ಇವರಿಗೆ ನರಕಾಗ್ನಿಯ ಇಮ್ಮಡಿ ಶಿಕ್ಷೆಯನ್ನು ನೀಡು’. ಅವನು ಹೇಳುವನು: ‘ಎಲ್ಲರಿಗೂ ಇಮ್ಮಡಿಯಿದೆ. ಆದರೆ ನೀವು ಅರಿತುಕೊಳ್ಳುವುದಿಲ್ಲ’.
(39) ಅವರ ಪೈಕಿ ಮೊದಲು ಬಂದವರು ತಮ್ಮ ನಂತರ ಬಂದವರೊಂದಿಗೆ ಹೇಳುವರು: ‘ನಮಗಿಂತ ಹೆಚ್ಚಿನ ಶ್ರೇಷ್ಠತೆಯೇನೂ ನಿಮಗಿಲ್ಲ. ಆದ್ದರಿಂದ ನೀವು ಗಳಿಸಿಟ್ಟಿರುವುದರ ಫಲವಾಗಿ ಶಿಕ್ಷೆಯನ್ನು ಆಸ್ವಾದಿಸಿರಿ.’
(40) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅದಕ್ಕೆದುರಾಗಿ ಅಹಂಕಾರಪಟ್ಟವರು ಯಾರೋ ಅವರಿಗೆ ಆಕಾಶದ ದ್ವಾರಗಳನ್ನು ತೆರೆದುಕೊಡಲಾಗದು.(220) ಒಂಟೆಯು ಸೂಜಿಯ ರಂಧ್ರದಲ್ಲಿ ಪ್ರವೇಶಿಸುವ ತನಕ ಅವರು ಸ್ವರ್ಗವನ್ನು ಪ್ರವೇಶಿಸಲಾರರು. ಅಪರಾಧಿಗಳಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.
220. ಅವರ ಸತ್ಕರ್ಮಗಳು ಮತ್ತು ಪ್ರಾರ್ಥನೆಗಳು ಅಲ್ಲಾಹುವಿನೆಡೆಗೆ ಎತ್ತಲ್ಪಡಲಾರದು ಎಂದರ್ಥ.
(41) ಅವರಿಗೆ ನರಕಾಗ್ನಿಯಿಂದಿರುವ ಹಾಸಿಗೆಯಿದೆ. ಅವರ ಮೇಲ್ಭಾಗದಲ್ಲಿ ಹೊದಿಕೆಗಳೂ ಇವೆ. ಅಕ್ರಮಿಗಳಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.
(42) ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮಗೈದವರು ಯಾರೋ -ಯಾವ ವ್ಯಕ್ತಿಗೂ ಅವನ ಸಾಮರ್ಥ್ಯಕ್ಕೆ ಮಿಗಿಲಾಗಿ ನಾವು ಹೊರಿಸಲಾರೆವು- ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(43) ಅವರ (ಸತ್ಯವಿಶ್ವಾಸಿಗಳ) ಹೃದಯಗಳಲ್ಲಿರುವ ದ್ವೇಷವನ್ನು ನಾವು ನಿವಾರಿಸುವೆವು. ಅವರ ತಳಭಾಗದಿಂದ ನದಿಗಳು ಹರಿಯುತ್ತಿರುವುವು. ಅವರು ಹೇಳುವರು: ‘ನಮ್ಮನ್ನು ಇದರೆಡೆಗೆ ಮುನ್ನಡೆಸಿದ ಅಲ್ಲಾಹುವಿಗೆ ಸ್ತುತಿ. ಅಲ್ಲಾಹು ನಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸದಿರುತ್ತಿದ್ದರೆ ಖಂಡಿತವಾಗಿಯೂ ನಾವು ಸನ್ಮಾರ್ಗವನ್ನು ಪಡೆಯುತ್ತಿರಲಿಲ್ಲ. ಖಂಡಿತವಾಗಿಯೂ ನಮ್ಮ ರಬ್‌ನ ಸಂದೇಶವಾಹಕರು ಸತ್ಯದೊಂದಿಗೆ ಬಂದಿದ್ದರು’. ‘ನೀವು ಮಾಡಿಕೊಂಡಿದ್ದುದರ ಫಲವಾಗಿ ನೀವು ಉತ್ತರಾಧಿಕಾರವಾಗಿ ಪಡೆದಿರುವ ಸ್ವರ್ಗವು ಇದೇ ಆಗಿದೆ’ ಎಂದು ಅವರೊಂದಿಗೆ ಕರೆದು ಹೇಳಲಾಗುವುದು.
(44) ಸ್ವರ್ಗವಾಸಿಗಳು ನರಕವಾಸಿಗಳನ್ನು ಕರೆದು ‘ನಮ್ಮ ರಬ್ ನಮ್ಮೊಂದಿಗೆ ವಾಗ್ದಾನ ಮಾಡಿರುವುದು ಸತ್ಯವಾಗಿತ್ತೆಂದು ನಾವು ಕಂಡಿರುವೆವು. ನಿಮ್ಮ ರಬ್ (ನಿಮ್ಮೊಂದಿಗೆ) ವಾಗ್ದಾನ ಮಾಡಿರುವುದು ಸತ್ಯವಾಗಿತ್ತೆಂದು ನೀವು ಕಂಡಿರುವಿರಾ?’ ಎಂದು ಕೇಳುವರು. ಅವರು ಹೇಳುವರು: ‘ಹೌದು’. ಆಗ ಅವರ ಮಧ್ಯೆ ಉದ್ಘೋಷಕನೊಬ್ಬನು ಘೋಷಿಸುವನು: ‘ಅಲ್ಲಾಹುವಿನ ಶಾಪವು ಅಕ್ರಮಿಗಳ ಮೇಲಿರಲಿ.
(45) ಅಂದರೆ ಅಲ್ಲಾಹುವಿನ ಮಾರ್ಗದಿಂದ ತಡೆಯುವವರು, ಅದನ್ನು ವಕ್ರಗೊಳಿಸಲು ಬಯಸುವವರು ಮತ್ತು ಪರಲೋಕದಲ್ಲಿ ಅವಿಶ್ವಾಸವಿಡುವವರು ಯಾರೋ ಅವರ ಮೇಲಿರಲಿ’.
(46) ಆ ಎರಡು ಪಂಗಡಗಳ ನಡುವೆ ಒಂದು ತಡೆಯಿದೆ. ಎತ್ತರದ ಸ್ಥಳಗಳಲ್ಲಿ ಕೆಲವು ಜನರಿರುವರು.(221) ಅವರು ಪ್ರತಿಯೊಬ್ಬರನ್ನೂ(222) ಅವರ ಲಕ್ಷಣದ ಮೂಲಕ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ‘ನಿಮ್ಮ ಮೇಲೆ ಶಾಂತಿಯಿರಲಿ’. ಅವರು (ಎತ್ತರದ ಸ್ಥಳದಲ್ಲಿರುವವರು) ಅದನ್ನು (ಸ್ವರ್ಗವನ್ನು) ಪ್ರವೇಶಿಸಲು ಆಶಿಸುತ್ತಿದ್ದರೂ ಅದನ್ನು ಪ್ರವೇಶಿಸಿಲ್ಲ.
221. ಸ್ವರ್ಗವಾಸಿಗಳ ಮತ್ತು ನರಕವಾಸಿಗಳ ಮಧ್ಯೆ ಒಂದು ತಡೆಗೋಡೆ ಎಂಬಂತಿರುವ ಸ್ಥಳವಿದ್ದು, ಅದರ ಎತ್ತರದ ಭಾಗವು ಅಅ್‌ರಾಫ್ ಆಗಿದೆಯೆಂದು ಪ್ರಸ್ತುತ ಸೂಕ್ತಿಗಳಿಂದ ಗ್ರಹಿಸಬಹುದು. ಸ್ವರ್ಗವನ್ನು ನಿರೀಕ್ಷಿಸುತ್ತಿರುವ, ಆದರೆ ಇನ್ನೂ ಸ್ವರ್ಗವನ್ನು ಪ್ರವೇಶಿಸಿರದ ಅನೇಕ ಜನರು ಆ ಎತ್ತರದ ಸ್ಥಳಗಳಲ್ಲಿರುವರು.
222. ಅಅ್‌ರಾಫ್‍ನಲ್ಲಿರುವವರು ಸ್ವರ್ಗವಾಸಿಗಳನ್ನು ಮತ್ತು ನರಕವಾಸಿಗಳನ್ನು ಗುರುತಿಸುವರು ಎಂದರ್ಥ.
(47) ಅವರ ದೃಷ್ಟಿಗಳನ್ನು ನರಕವಾಸಿಗಳೆಡೆಗೆ ತಿರುಗಿಸಲಾದಾಗ ಅವರು ಹೇಳುವರು: ‘ಓ ನಮ್ಮ ರಬ್! ನಮ್ಮನ್ನು ನೀನು ಅಕ್ರಮಿಗಳೊಂದಿಗೆ ಸೇರಿಸದಿರು’.
(48) ಲಕ್ಷಣದ ಮೂಲಕ ತಮಗೆ ಗುರುತಿಸಬಹುದಾದ ಜನರನ್ನು ಕರೆದು ಎತ್ತರದ ಸ್ಥಳಗಳಲ್ಲಿರುವವರು ಹೇಳುವರು: ‘ನೀವು ಸಂಗ್ರಹಿಸಿಟ್ಟಿರುವುದು ಮತ್ತು ನೀವು ಅಹಂಕಾರಪಟ್ಟಿರುವುದು ನಿಮಗೇನು ಪ್ರಯೋಜನವನ್ನು ನೀಡಿತು?’
(49) ಅಲ್ಲಾಹು ಅವರಿಗೆ ತನ್ನ ಕರುಣೆಯಿಂದ ಏನನ್ನೂ ನೀಡಲಾರನು ಎಂದು ನೀವು ಆಣೆಯಿಟ್ಟು ಹೇಳಿದ್ದು ಈ ಜನರ ಬಗ್ಗೆಯೋ? ‘ನೀವು ಸ್ವರ್ಗವನ್ನು ಪ್ರವೇಶಿಸಿರಿ. ನೀವು ಏನನ್ನೂ ಭಯಪಡಬೇಕಾಗಿಲ್ಲ. ನಿಮಗೆ ದುಃಖಿಸಬೇಕಾಗಿಯೂ ಬರದು (ಎಂದು ಹೇಳಲಾಗಿರುವುದು ಇವರೊಂದಿಗಾಗಿದೆ!)’
(50) ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ‘ನಮಗೆ ಸ್ವಲ್ಪ ನೀರನ್ನು ಅಥವಾ ಅಲ್ಲಾಹು ನಿಮಗೆ ನೀಡಿರುವ ಅನ್ನಾಧಾರಗಳಲ್ಲಿ ಏನನ್ನಾದರೂ ಸುರಿದು ಕೊಡಿರಿ’ ಎಂದು ಹೇಳುವರು. ಅವರು ಹೇಳುವರು: ‘ಖಂಡಿತವಾಗಿಯೂ ಅಲ್ಲಾಹು ಅವೆರಡನ್ನೂ ಸತ್ಯನಿಷೇಧಿಗಳಿಗೆ ನಿಷಿದ್ಧಗೊಳಿಸಿರುವನು’.
(51) (ಅಂದರೆ) ತಮ್ಮ ಧರ್ಮವನ್ನು ವಿನೋದವನ್ನಾಗಿಯೂ, ಮನೋರಂಜನೆಯನ್ನಾಗಿಯೂ ಮಾಡಿದವರು ಹಾಗೂ ಐಹಿಕ ಜೀವನವನ್ನು ಕಂಡು ಮರುಳಾದವರು ಯಾರೋ ಅವರಿಗೆ. ಅವರು ಅವರ ಈ ದಿನದ ಭೇಟಿಯನ್ನು ಹೇಗೆ ಮರೆತುಬಿಟ್ಟರೋ ಮತ್ತು ನಮ್ಮ ದೃಷ್ಟಾಂತಗಳನ್ನು ಹೇಗೆ ನಿಷೇಧಿಸಿದರೋ ಹಾಗೆಯೇ ಇಂದು ನಾವೂ ಅವರನ್ನು ಮರೆತುಬಿಡುವೆವು.
(52) ನಾವು ಜ್ಞಾನದ ಆಧಾರದಲ್ಲಿ ವಿಶದೀಕರಿಸಿದ ಒಂದು ಗ್ರಂಥವನ್ನು ಅವರಿಗೋಸ್ಕರ ತಂದಿರುವೆವು. ಅದು ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿಯೂ ಕಾರುಣ್ಯವೂ ಆಗಿದೆ.
(53) ಅದರಲ್ಲಿರುವ ವಿಷಯವು ಸತ್ಯವಾಗಿ ಪರಿಣಮಿಸುವುದನ್ನಲ್ಲದೆ ಅವರು ಇನ್ನೇನನ್ನು ಕಾಯುತ್ತಿರುವರು?(223) ಅದು ಸತ್ಯವಾಗಿ ಪರಿಣಮಿಸುವ ದಿನದಂದು ಅದಕ್ಕೆ ಮುಂಚೆ ಅದನ್ನು ಮರೆತುಬಿಟ್ಟವರು ಹೇಳುವರು: ‘ಖಂಡಿತವಾಗಿಯೂ ನಮ್ಮ ರಬ್‌ನ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು. ಇನ್ನು ನಮಗಾಗಿ ಶಿಫಾರಸು ಮಾಡುವ ಯಾರಾದರೂ ಶಿಫಾರಸುಗಾರರು ಇರುವರೇ? ಅಥವಾ ನಾವು ಮುಂಚೆ ಮಾಡುತ್ತಿದ್ದಂತಹ ಕರ್ಮಗಳಲ್ಲದ ಬೇರೆಯೇ ಕರ್ಮಗಳನ್ನು ಮಾಡುವ ಸಲುವಾಗಿ ನಮ್ಮನ್ನು ಮರಳಿ ಕಳುಹಿಸಲಾಗುವುದೇ?’ ಅವರು ತಮ್ಮನ್ನು ತಾವೇ ನಷ್ಟಕ್ಕೊಳಪಡಿಸಿರುವರು. ಅವರು ಹೆಣೆಯುತ್ತಿದ್ದುದೆಲ್ಲವೂ ಅವರನ್ನು ಬಿಟ್ಟು ಹೋಗಿರುವುವು.
223. ದೈವಿಕ ಗ್ರಂಥಗಳಲ್ಲಿರುವ ವಿಷಯಗಳಲ್ಲಿ ಅತಿಪ್ರಮುಖವಾಗಿರುವುದು ಸ್ವರ್ಗದ ಬಗ್ಗೆಯಿರುವ ಶುಭವಾರ್ತೆ ಮತ್ತು ನರಕದ ಬಗ್ಗೆಯಿರುವ ಮುನ್ನೆಚ್ಚರಿಕೆಗಳಾಗಿವೆ. ಅವು ಸತ್ಯವಾಗಿ ಪರಿಣಮಿಸುವುದು ಪರಲೋಕದಲ್ಲಿ ವಿಚಾರಣೆ ನಡೆಯುವ ದಿನದಲ್ಲಾಗಿದೆ. ಅದನ್ನು ನೋಡಿ ಬಂದ ನಂತರ ವಿಶ್ವಾಸವಿಡೋಣವೆಂದು ಸತ್ಯನಿಷೇಧಿಗಳು ಕಾಯುತ್ತಿರುವರೇ? ಆದರೆ ಅಂದು ವಿಶ್ವಾಸವಿಡುವುದರಿಂದ ಯಾವುದೇ ಪ್ರಯೋಜನವಿರಲಾರದು. ಅಂದು ತಪ್ಪನ್ನು ತಿದ್ದಿಕೊಳ್ಳಲು ಯಾವುದೇ ಅವಕಾಶವೂ ಸಿಗಲಾರದು.
(54) ಖಂಡಿತವಾಗಿಯೂ ಆರು ದಿನಗಳಲ್ಲಿ ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹುವಾಗಿರುವನು ನಿಮ್ಮ ರಬ್. ತರುವಾಯ ಅವನು ಸಿಂಹಾಸನಾರೂಢನಾದನು.(224) ಅವನು ಹಗಲನ್ನು ರಾತ್ರಿಯಿಂದ ಮುಚ್ಚುವನು. ಕ್ಷಿಪ್ರಗತಿಯಲ್ಲಿ ಅದು ಹಗಲನ್ನು ಹುಡುಕುತ್ತಾ ಸಾಗುವುದು. ತನ್ನ ಆಜ್ಞೆಗೆ ವಿಧೇಯಗೊಳಿಸಲಾದ ರೀತಿಯಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು (ಅವನು ಸೃಷ್ಟಿಸಿರುವನು). ತಿಳಿಯಿರಿ! ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನಿಗೇ ಆಗಿವೆ.(225) ಸರ್ವಲೋಕಗಳ ರಬ್ಬಾದ ಅಲ್ಲಾಹು ಅನುಗ್ರಹಪೂರ್ಣನಾಗಿರುವನು.
224. ಅಲ್ಲಾಹು ಸಿಂಹಾಸನಾರೂಢನಾದನು ಅಥವಾ ಸಿಂಹಾಸನಾರೋಹಣ ಮಾಡಿದನು ಎಂದು ಕುರ್‌ಆನಿನ ಹಲವಾರು ಕಡೆ ಪ್ರಸ್ತಾಪಿಸಲಾಗಿದೆ. ಸಿಂಹಾಸನವು ಹೇಗಿದೆಯೆಂದು ಮತ್ತು ಆರೋಹಣವು ಯಾವ ವಿಧಾನದಲ್ಲಾಗಿದೆಯೆಂದು ಅಲ್ಲಾಹು ತಿಳಿಸಿಕೊಟ್ಟಿಲ್ಲ. ನಮ್ಮ ಅರಿವಿನ ವ್ಯಾಪ್ತಿಗೆ ಹೊರತಾಗಿರುವ ಅಗೋಚರ ವಿಷಯಗಳ ಬಗ್ಗೆ ನಮ್ಮ ವತಿಯ ವ್ಯಾಖ್ಯಾನಗಳಿಗೆ ಅಥವಾ ವಿಶದೀಕರಣಗಳಿವೆ ಯಾವುದೇ ಪ್ರಸಕ್ತಿಯಿಲ್ಲ.
225. ಪ್ರಪಂಚದಲ್ಲಿರುವ ಸೂಕ್ಷ್ಮವಾದ ಮತ್ತು ಸ್ಥೂಲವಾದ ಪ್ರತಿಯೊಂದನ್ನೂ ಸೃಷ್ಟಿಸಿರುವುದು ಅಲ್ಲಾಹು ಮಾತ್ರವಾಗಿರುವನು. ಅವು ಹೇಗೆ ಕಾರ್ಯನಿರ್ವಹಿಸಬೇಕೆಂದು ತೀರ್ಮಾನಿಸುವ ಅಧಿಕಾರವು ಅವನಿಗೆ ಮಾತ್ರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ಮನುಷ್ಯನೂ ಸೇರಿದಂತೆ ಸರ್ವ ಚರಾಚರಗಳಿಗೂ ಇದು ಬಾಧಕವಾಗಿದೆ. ಆದರೆ ಅಲ್ಲಾಹುವಿನ ಆಜ್ಞಾಧಿಕಾರಕ್ಕೆ ವಿಧೇಯನಾಗಿ ತನ್ನ ಪಾತ್ರವನ್ನು ನಿಶ್ಚಯಿಸುವ ಹಕ್ಕು ಮನುಷ್ಯನಿಗಿದೆ.
(55) ವಿನಮ್ರತೆಯೊಂದಿಗೆ ಮತ್ತು ರಹಸ್ಯವಾಗಿ ನೀವು ನಿಮ್ಮ ರಬ್‌ನೊಂದಿಗೆ ಪ್ರಾರ್ಥಿಸಿರಿ. ಹದ್ದುಮೀರುವವರನ್ನು ಖಂಡಿತವಾಗಿಯೂ ಅವನು ಮೆಚ್ಚಲಾರನು.
(56) ಭೂಮಿಯಲ್ಲಿ ಸುಧಾರಣೆಯನ್ನುಂಟುಮಾಡಿದ ಬಳಿಕ ನೀವು ಅಲ್ಲಿ ಕ್ಷೋಭೆಯನ್ನುಂಟುಮಾಡದಿರಿ. ಭಯದಿಂದಲೂ ನಿರೀಕ್ಷೆಯಿಂದಲೂ ನೀವು ಅವನೊಂದಿಗೆ ಪ್ರಾರ್ಥಿಸಿರಿ. ಖಂಡಿತವಾಗಿಯೂ ಅಲ್ಲಾಹುವಿನ ಕರುಣೆಯು ಸತ್ಕರ್ಮಿಗಳಿಗೆ ಅತಿನಿಕಟವಾಗಿದೆ.
(57) ತನ್ನ ಅನುಗ್ರಹಕ್ಕೆ (ಮಳೆಗೆ) ಮುಂಚಿತವಾಗಿ ಶುಭವಾರ್ತೆಯನ್ನು ತಿಳಿಸುತ್ತಾ ಮಾರುತಗಳನ್ನು ಕಳುಹಿಸುವವನು ಅವನಾಗಿರುವನು. ಕೊನೆಗೆ ಅವು (ಮಾರುತಗಳು) ಭಾರವಾದ ಮೋಡಗಳನ್ನು ಹೊತ್ತುಕೊಂಡಾಗ ನಾವದನ್ನು ನಿರ್ಜೀವವಾಗಿರುವ ಪ್ರದೇಶದೆಡೆಗೆ ಸಾಗಿಸುವೆವು. ತರುವಾಯ ಅಲ್ಲಿ ನಾವು ನೀರನ್ನು ಸುರಿಸುವೆವು ಮತ್ತು ತನ್ಮೂಲಕ ವಿಧದ ಬೆಳೆಗಳನ್ನು ಹೊರತರುವೆವು. ಹೀಗೆಯೇ ನಾವು ಮರಣಹೊಂದಿದವರನ್ನೂ ಹೊರತರುವೆವು. ನೀವು ಗಮನವಿಟ್ಟು ಗ್ರಹಿಸಲೂಬಹುದು.
(58) ಉತ್ತಮವಾದ ಭೂಪ್ರದೇಶದಲ್ಲಿ ಅದರ ಸಸ್ಯಗಳು ಅದರ ರಬ್‌ನ ಅನುಮತಿಯೊಂದಿಗೆ ಉತ್ತಮವಾಗಿ ಬೆಳೆಯುತ್ತವೆ. ಆದರೆ ಕೆಟ್ಟ ಪ್ರದೇಶದಲ್ಲಿ ಸಸ್ಯಗಳು ಶುಷ್ಕವಾಗಿಯಲ್ಲದೆ ಬೆಳೆಯಲಾರವು. ಕೃತಜ್ಞತೆ ಸಲ್ಲಿಸುವ ಜನರಿಗೆ ನಾವು ಹೀಗೆ ದೃಷ್ಟಾಂತಗಳನ್ನು ವಿವಿಧ ರೀತಿಯಲ್ಲಿ ವಿವರಿಸಿಕೊಡುವೆವು.
(59) ಖಂಡಿತವಾಗಿಯೂ ನಾವು ನೂಹ್‍ರನ್ನು ಅವರ ಜನತೆಯೆಡೆಗೆ ಕಳುಹಿಸಿದೆವು. ಅವರು ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ಭಯಾನಕವಾದ ದಿನವೊಂದರ ಶಿಕ್ಷೆಯನ್ನು ಖಂಡಿತವಾಗಿಯೂ ನಾನು ನಿಮ್ಮ ಮೇಲೆ ಭಯಪಡುತ್ತಿರುವೆನು’.
(60) ಅವರ ಜನತೆಯ ಪೈಕಿ ಮುಖಂಡರು ಹೇಳಿದರು: ‘ಖಂಡಿತವಾಗಿಯೂ ನಾವು ತಮ್ಮನ್ನು ಸ್ಪಷ್ಟವಾದ ದುರ್ಮಾರ್ಗದಲ್ಲಿರುವುದಾಗಿ ಕಾಣುತ್ತಿರುವೆವು’.
(61) ಅವರು (ನೂಹ್) ಹೇಳಿದರು: ‘ಓ ನನ್ನ ಜನರೇ! ನನ್ನಲ್ಲಿ ಯಾವುದೇ ದುರ್ಮಾರ್ಗವಿಲ್ಲ. ಆದರೆ ನಾನು ಸರ್ವಲೋಕಗಳ ರಬ್‌ನ ಕಡೆಯ ಸಂದೇಶವಾಹಕನಾಗಿರುವೆನು.
(62) ನನ್ನ ರಬ್‌ನ ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತಿರುವೆನು ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡುತ್ತಿರುವೆನು. ನೀವು ಅರಿಯದಿರುವ ಅನೇಕ ವಿಷಯಗಳನ್ನು ಅಲ್ಲಾಹುವಿನಿಂದ ನಾನು ಅರಿಯುತ್ತಿರುವೆನು.
(63) ನಿಮಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ, ತನ್ಮೂಲಕ ನೀವು ಭಯಭಕ್ತಿ ಪಾಲಿಸುವುದಕ್ಕಾಗಿ ಮತ್ತು ನಿಮಗೆ ಕಾರುಣ್ಯವು ಲಭ್ಯವಾಗುವುದಕ್ಕಾಗಿ ನಿಮ್ಮ ಪೈಕಿ ಓರ್ವ ಪುರುಷನ ಮೂಲಕ ನಿಮ್ಮ ರಬ್‌ನ ವತಿಯ ಒಂದು ಉಪದೇಶವು ನಿಮ್ಮೆಡೆಗೆ ಬಂದಿರುವುದರಲ್ಲಿ ನೀವು ಅಚ್ಚರಿಪಡುತ್ತಿರುವಿರಾ?’
(64) ಆದರೆ ಅವರು ಅವರನ್ನು ತಿರಸ್ಕರಿಸಿದರು. ಆಗ ನಾವು ಅವರನ್ನು ಮತ್ತು ಅವನ ಜೊತೆಗಿದ್ದವರನ್ನು ಹಡಗಿನಲ್ಲಿ ರಕ್ಷಿಸಿದೆವು. ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರನ್ನು ನಾವು ಮುಳುಗಿಸಿದೆವು. ಖಂಡಿತವಾಗಿಯೂ ಅವರು ಅಂಧರಾಗಿರುವ ಒಂದು ಜನತೆಯಾಗಿದ್ದರು.
(65) ಆದ್ ಸಮುದಾಯದೆಡೆಗೆ ಅವರ ಸಹೋದರರಾದ ಹೂದ್‍ರನ್ನು (ಕಳುಹಿಸಿದೆವು). ಅವರು ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ನೀವು ಭಯಭಕ್ತಿ ಪಾಲಿಸಲಾರಿರೇ?’
(66) ಅವರ ಜನತೆಯಲ್ಲಿದ್ದ ಸತ್ಯನಿಷೇಧಿಗಳಾದ ಮುಖಂಡರು ಹೇಳಿದರು: ‘ಖಂಡಿತವಾಗಿಯೂ ನಾವು ತಮ್ಮನ್ನು ಯಾವುದೋ ಮೂರ್ಖತನದಲ್ಲಿರುವುದಾಗಿ ಕಾಣುತ್ತಿರುವೆವು. ಖಂಡಿತವಾಗಿಯೂ ತಾವು ಸುಳ್ಳು ನುಡಿಯುವವರಲ್ಲಿ ಸೇರಿದವರಾಗಿರುವಿರಿ ಎಂದು ನಾವು ಭಾವಿಸುತ್ತಿರುವೆವು’.
(67) ಅವರು (ಹೂದ್) ಹೇಳಿದರು: ‘ಓ ನನ್ನ ಜನರೇ! ನನ್ನಲ್ಲಿ ಯಾವುದೇ ಮೂರ್ಖತನವೂ ಇಲ್ಲ. ಆದರೆ ನಾನು ಸರ್ವಲೋಕಗಳ ರಬ್‌ನ ವತಿಯ ಒಬ್ಬ ಸಂದೇಶವಾಹಕನಾಗಿರುವೆನು.
(68) ನನ್ನ ರಬ್‌ನ ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತಿರುವೆನು. ಖಂಡಿತವಾಗಿಯೂ ನಾನು ನಿಮ್ಮ ಪ್ರಾಮಾಣಿಕ ಹಿತಾಕಾಂಕ್ಷಿಯಾಗಿರುವೆನು.
(69) ನಿಮಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ನಿಮ್ಮ ಪೈಕಿ ಓರ್ವ ಪುರುಷನ ಮೂಲಕ ನಿಮ್ಮ ರಬ್‌ನ ವತಿಯ ಒಂದು ಉಪದೇಶವು ನಿಮ್ಮೆಡೆಗೆ ಬಂದಿರುವುದರಲ್ಲಿ ನೀವು ಅಚ್ಚರಿಪಡುತ್ತಿರುವಿರಾ? ನೂಹ್‍ರ ಜನತೆಯ ಬಳಿಕ ಅವನು (ಅಲ್ಲಾಹು) ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನು ಸ್ಮರಿಸಿರಿ. ಸೃಷ್ಟಿಯಲ್ಲಿ ಅವನು ನಿಮಗೆ (ದೈಹಿಕ) ವಿಕಾಸವನ್ನು ಅಧಿಕಗೊಳಿಸಿರುವುದನ್ನು ಸ್ಮರಿಸಿರಿ.(226) ಅಲ್ಲಾಹುವಿನ ಅನುಗ್ರಹಗಳನ್ನೂ ಸ್ಮರಿಸಿರಿ. ನೀವು ಯಶಸ್ವಿಯಾಗಲೂ ಬಹುದು’.
226. ಅವರು ದೈಹಿಕ ಪುಷ್ಠಿ ಹಾಗೂ ಆಜಾನುಬಾಹು ಶರೀರದ ನಿಮಿತ್ತ ಅನುಗ್ರಹೀತರಾಗಿದ್ದರು ಎಂದರ್ಥ.
(70) ಅವರು ಹೇಳಿದರು: ‘ನಾವು ಅಲ್ಲಾಹುವನ್ನು ಮಾತ್ರ ಆರಾಧಿಸಲಿಕ್ಕಾಗಿ ಮತ್ತು ನಮ್ಮ ಪೂರ್ವಿಕರು ಆರಾಧಿಸುತ್ತಾ ಬಂದಿರುವುದನ್ನು ವರ್ಜಿಸಲಿಕ್ಕಾಗಿ ತಾವು ನಮ್ಮ ಬಳಿಗೆ ಬಂದಿರುವಿರಾ? ಹಾಗಿದ್ದರೆ ತಾವು ನಮಗೆ ಬೆದರಿಕೆ ನೀಡುತ್ತಿರುವುದನ್ನು (ಶಿಕ್ಷೆಯನ್ನು) ನಮಗೆ ತಂದುಕೊಡಿರಿ. ತಾವು ಸತ್ಯಸಂಧರ ಪೈಕಿ ಸೇರಿದವರಾಗಿದ್ದರೆ’.
(71) ಹೂದ್ ಹೇಳಿದರು: ‘ಖಂಡಿತವಾಗಿಯೂ ನಿಮ್ಮ ರಬ್‌ನ ಕಡೆಯ ಶಿಕ್ಷೆ ಮತ್ತು ಕ್ರೋಧವು ಈಗಾಗಲೇ ನಿಮ್ಮ ಮೇಲೆರಗಿದೆ. ನೀವು ಮತ್ತು ನಿಮ್ಮ ಪೂರ್ವಿಕರು ನಾಮಕರಣ ಮಾಡಿರುವ ಕೆಲವು (ದೇವ)ನಾಮಗಳ ನಿಮಿತ್ತ ನೀವು ನನ್ನೊಂದಿಗೆ ತರ್ಕಿಸುತ್ತಿರುವಿರಾ? ಅಲ್ಲಾಹು ಅದಕ್ಕೆ ಯಾವುದೇ ಆಧಾರಪ್ರಮಾಣವನ್ನೂ ಇಳಿಸಿಲ್ಲ. ಆದ್ದರಿಂದ ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತಿರುವೆನು’.
(72) ತರುವಾಯ ಅವರನ್ನೂ, ಅವರ ಜೊತೆಗಿದ್ದವರನ್ನೂ ನಮ್ಮ ಕಾರುಣ್ಯದಿಂದಾಗಿ ನಾವು ರಕ್ಷಿಸಿದೆವು. ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರನ್ನು ಮತ್ತು ವಿಶ್ವಾಸವಿಡದವರನ್ನು ನಾವು ನಾಮಾವಶೇಷ ಮಾಡಿದೆವು.(227)
227. ಅವರ ಮೇಲೆರಗಿದ ಶಿಕ್ಷೆಯು ಜನರನ್ನು ನೆಲದಿಂದ ಎತ್ತಿ ಎಸೆಯುವ ಒಂದು ಭೀಕರ ಬಿರುಗಾಳಿಯಾಗಿತ್ತು.
(73) ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ನಿಮ್ಮ ರಬ್‌ನ ವತಿಯಿಂದ ನಿಮ್ಮೆಡೆಗೆ ಸ್ಪಷ್ಟವಾದ ಒಂದು ಪುರಾವೆಯು ಬಂದಿದೆ. ಇದು ನಿಮಗೆ ದೃಷ್ಟಾಂತವಾಗಿರುವ ಅಲ್ಲಾಹುವಿನ ಒಂಟೆಯಾಗಿದೆ. ಆದ್ದರಿಂದ ಅದನ್ನು ಬಿಟ್ಟುಬಿಡಿರಿ. ಅದು ಅಲ್ಲಾಹುವಿನ ಭೂಮಿಯಲ್ಲಿ (ಮೇಯ್ದು) ತಿನ್ನಲಿ. ಅದಕ್ಕೆ ಯಾವುದೇ ಹಾನಿಯನ್ನೂ ಮಾಡದಿರಿ. ಹಾಗೇನಾದರೂ ಮಾಡಿದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿದುಕೊಳ್ಳುವುದು.
(74) ಆದ್ ಸಮುದಾಯದ ಬಳಿಕ ಅವನು ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನು ಸ್ಮರಿಸಿರಿ. ನಿಮಗೆ ಭೂಮಿಯಲ್ಲಿ ವಾಸಸ್ಥಳ ಮಾಡಿಕೊಟ್ಟಿರುವುದನ್ನು ಸ್ಮರಿಸಿರಿ. ಅದರ (ಭೂಮಿಯ) ಸಮತಟ್ಟು ಪ್ರದೇಶಗಳಲ್ಲಿ ನೀವು ಸೌಧಗಳನ್ನು ನಿರ್ಮಿಸುತ್ತಿರುವಿರಿ ಮತ್ತು ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿರುವಿರಿ. ಆದ್ದರಿಂದ ನೀವು ಅಲ್ಲಾಹುವಿನ ಅನುಗ್ರಹಗಳನ್ನು ಸ್ಮರಿಸಿರಿ. ವಿನಾಶಕಾರಿಗಳಾಗಿರುತ್ತಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡದಿರಿ’.
(75) ಅವರ ಜನತೆಯಲ್ಲಿ ಸೇರಿದ ಅಹಂಕಾರಿಗಳಾದ ಮುಖಂಡರು ಬಲಹೀನರೆಂದು ಭಾವಿಸಲಾದವರೊಂದಿಗೆ (ಅಂದರೆ) ಅವರ ಪೈಕಿ ವಿಶ್ವಾಸವಿಟ್ಟವರೊಂದಿಗೆ ಹೇಳಿದರು: ‘ಸ್ವಾಲಿಹ್ ಅವರ ರಬ್‌ನ ವತಿಯಿಂದ ಕಳುಹಿಸಲ್ಪಟ್ಟವರಾಗಿರುವರು ಎಂಬುದು ನಿಮಗೆ ತಿಳಿದಿದೆಯೇ?’ ಅವರು ಹೇಳಿದರು: ‘ಅವರು (ಸ್ವಾಲಿಹ್) ಯಾವುದರೊಂದಿಗೆ ಕಳುಹಿಸಲ್ಪಟ್ಟಿರುವರೋ ಅದರಲ್ಲಿ ನಾವು ಖಂಡಿತವಾಗಿಯೂ ವಿಶ್ವಾಸವಿಟ್ಟವರಾಗಿರುವೆವು’.
(76) ಅಹಂಕಾರಿಗಳು ಹೇಳಿದರು: ‘ನೀವು ಯಾವುದರಲ್ಲಿ ವಿಶ್ವಾಸವಿಟ್ಟಿರುವಿರೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸುವವರಾಗಿರುವೆವು’.
(77) ಕೊನೆಗೆ ಅವರು ಆ ಒಂಟೆಯನ್ನು ಕೊಂದು ತಮ್ಮ ರಬ್‌ನ ಆಜ್ಞೆಯನ್ನು ಧಿಕ್ಕರಿಸಿದರು. ಅವರು ಹೇಳಿದರು: ‘ಓ ಸ್ವಾಲಿಹ್! ತಾವು ಸಂದೇಶವಾಹಕರಲ್ಲಿ ಸೇರಿದವರಾಗಿದ್ದರೆ ನಮಗೆ ಬೆದರಿಕೆ ನೀಡುತ್ತಿದ್ದುದನ್ನು (ಶಿಕ್ಷೆಯನ್ನು) ನಮಗೆ ತಂದುಕೊಡಿರಿ’.
(78) ಆಗ ಭೂಕಂಪನವು ಅವರನ್ನು ಹಿಡಿಯಿತು. ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖರಾಗಿ ಬಿದ್ದಿದ್ದರು.
(79) ತರುವಾಯ ಸ್ವಾಲಿಹ್ ಅವರಿಂದ ವಿಮುಖರಾದರು. ಅವರು ಹೇಳಿದರು: ‘ಓ ನನ್ನ ಜನರೇ! ಖಂಡಿತವಾಗಿಯೂ ನಾನು ನನ್ನ ರಬ್‌ನ ಸಂದೇಶವನ್ನು ನಿಮಗೆ ತಲುಪಿಸಿರುವೆನು ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿರುವೆನು. ಆದರೆ ನೀವು ಉಪದೇಶ ಮಾಡುವವರನ್ನು ಇಷ್ಟಪಡುವವರಾಗಿರಲಿಲ್ಲ.’
(80) ಲೂತ್‍ರನ್ನು ಕೂಡ (ನಾವು ಕಳುಹಿಸಿರುವೆವು). ಅವರು ತಮ್ಮ ಜನತೆಯೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ): ‘ನಿಮಗಿಂತ ಮುನ್ನ ಜಗತ್ತಿನಲ್ಲಿರುವವರ ಪೈಕಿ ಯಾರೂ ಮಾಡಿರದಂತಹ ನೀಚಕೃತ್ಯವನ್ನು ನೀವು ಮಾಡುವುದೇ?
(81) ನೀವು ಸ್ತ್ರೀಯರನ್ನು ಬಿಟ್ಟು ಪುರುಷರೆಡೆಗೆ ಲೈಂಗಿಕ ಬಯಕೆಯೊಂದಿಗೆ ತೆರಳುತ್ತಿರುವಿರಿ. ನೀವು ಹದ್ದುಮೀರಿ ವರ್ತಿಸುವ ಒಂದು ಜನತೆಯಾಗಿರುವಿರಿ.’
(82) ‘ಇವರನ್ನು ನಿಮ್ಮ ಊರಿನಿಂದ ಹೊರಗಟ್ಟಿರಿ. ಇವರು ಪರಿಶುದ್ಧರಾಗಿರುವ ಜನರಾಗಿರುವರು’(228) ಎಂದು ಹೇಳುವುದಲ್ಲದೆ ಅವರ ಜನತೆಯ ಉತ್ತರವು ಬೇರೇನೂ ಆಗಿರಲಿಲ್ಲ.
228. ಪ್ರವಾದಿ ಲೂತ್(ಅ) ರಿಗೆ ಅವರು ನೀಡಿದ ಈ ಪ್ರತಿಕ್ರಿಯೆಯು ಅಪಹಾಸ್ಯ ಮಿಶ್ರಿತ ಆಕ್ರೋಶವಾಗಿತ್ತು.
(83) ತರುವಾಯ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರಿದವಳಾಗಿದ್ದಳು.
(84) ನಾವು ಅವರ ಮೇಲೆ ಒಂದು ಬಗೆಯ ಮಳೆಯನ್ನು ಸುರಿಸಿದೆವು.(229) ಆಗ ಆ ಅಕ್ರಮಿಗಳ ಪರ್ಯಾವಸಾನವು ಹೇಗಿತ್ತು ಎಂಬುದನ್ನು ನೋಡಿರಿ.
229. ವಿಶೇಷ ತರಹದ ಕಲ್ಲುಗಳನ್ನು ಅವರ ಮೇಲೆ ಸುರಿಸಲಾಯಿತು ಎಂದು 15:74ರಲ್ಲಿ ಹೇಳಲಾಗಿದೆ.
(85) ಮದ್‍ಯನ್ ಜನಾಂಗದೆಡೆಗೆ ಅವರ ಸಹೋದರ ಶುಐಬ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಅನ್ಯ ಆರಾಧ್ಯರಿಲ್ಲ. ಖಂಡಿತವಾಗಿಯೂ ನಿಮ್ಮ ರಬ್‌ನ ವತಿಯಿಂದ ಸ್ಪಷ್ಟವಾದ ಪುರಾವೆಯು ನಿಮ್ಮೆಡೆಗೆ ಬಂದಿದೆ. ಆದ್ದರಿಂದ ನೀವು ಅಳತೆ ಮತ್ತು ತೂಕವನ್ನು ಪೂರ್ತಿಯಾಗಿ ಕೊಡಿರಿ. ಜನರಿಗೆ ಅವರ ಸಾಮಗ್ರಿಗಳನ್ನು ಕಡಿಮೆಗೊಳಿಸದಿರಿ. ಭೂಮಿಯಲ್ಲಿ ಸುಧಾರಣೆಯನ್ನುಂಟುಮಾಡಿದ ಬಳಿಕ ಅಲ್ಲಿ ವಿನಾಶವನ್ನುಂಟುಮಾಡದಿರಿ. ನೀವು ವಿಶ್ವಾಸಿಗಳಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.
(86) ಬೆದರಿಕೆ ಹಾಕುತ್ತಾ ಮತ್ತು ಅಲ್ಲಾಹುವಿನ ಮಾರ್ಗದಿಂದ ಅದರಲ್ಲಿ ವಿಶ್ವಾಸವಿಟ್ಟವರನ್ನು ತಡೆಯುವ ಮೂಲಕ ಅದು (ಆ ಮಾರ್ಗವು) ವಕ್ರವಾಗಿರಬೇಕೆಂದು ಬಯಸುತ್ತಾ ನೀವು ದಾರಿಗಳಲ್ಲೆಲ್ಲ್ಲಾ ಕೂರದಿರಿ.(230) ನೀವು ಅಲ್ಪಸಂಖ್ಯಾತರಾಗಿದ್ದಾಗ ಅವನು ನಿಮ್ಮ ಸಂಖ್ಯೆಯನ್ನು ಅಧಿಕಗೊಳಿಸಿದ್ದನ್ನು ಸ್ಮರಿಸಿರಿ ಮತ್ತು ವಿನಾಶಕಾರಿಗಳ ಪರ್ಯಾವಸಾನವು ಹೇಗಾಯಿತೆಂಬುದನ್ನು ನೋಡಿರಿ.
230. ಆ ಜನತೆಯು ದೇವನಿಷೇಧಿಗಳೂ ಅಳತೆ ಮತ್ತು ತೂಕಗಳಲ್ಲಿ ಕಡಿಮೆಗೊಳಿಸುವವರೂ ಆಗಿದ್ದರು. ಶುಐಬ್(ಅ) ರವರು ಸತ್ಯಧರ್ಮದೆಡೆಗೆ ಜನರನ್ನು ಕರೆದಾಗ ಆ ಉಪದೇಶವನ್ನು ಕೇಳಲು ಹೋಗುವವರನ್ನು ಅವರು ದಾರಿ ಮಧ್ಯೆ ತಡೆಯುತ್ತಿದ್ದರು. ಸತ್ಯಧರ್ಮವನ್ನು ಅಥವಾ ಅಲ್ಲಾಹುವಿನ ಮಾರ್ಗವನ್ನು ವಕ್ರವಾಗಿ ಮತ್ತು ವಿರೂಪವಾಗಿ ತೋರಿಸಲು ಅವರು ಯತ್ನಿಸುತ್ತಿದ್ದರು.
(87) ನಾನು ಯಾವುದರೊಂದಿಗೆ ಕಳುಹಿಸಲ್ಪಟ್ಟಿರುವೆನೋ ಅದರಲ್ಲಿ ನಿಮ್ಮ ಪೈಕಿ ಒಂದು ಪಂಗಡವು ವಿಶ್ವಾಸವಿಡುವುದಾದರೆ ಮತ್ತು ಇನ್ನೊಂದು ಪಂಗಡವು ಅವಿಶ್ವಾಸವಿಡುವುದಾದರೆ ನಮ್ಮ ಮಧ್ಯೆ ಅಲ್ಲಾಹು ತೀರ್ಪು ನೀಡುವ ತನಕ ತಾಳ್ಮೆಯಿಂದಿರಿ. ಅವನು ತೀರ್ಪು ನೀಡುವವರಲ್ಲಿ ಉತ್ತಮನಾಗಿರುವನು’.
(88) ಅವರ ಜನತೆಯಲ್ಲಿದ್ದ ಅಹಂಕಾರಿಗಳಾದ ಮುಖ ಂಡರು ಹೇಳಿದರು: ‘ಓ ಶುಐಬ್! ಖಂಡಿತವಾಗಿಯೂ ನಾವು ತಮ್ಮನ್ನೂ, ತಮ್ಮ ಜೊತೆಗಿರುವ ವಿಶ್ವಾಸಿಗಳನ್ನೂ ನಮ್ಮ ಊರಿನಿಂದ ಹೊರಗಟ್ಟುವೆವು. ಇಲ್ಲದಿದ್ದರೆ ನೀವು ನಮ್ಮ ಧರ್ಮಕ್ಕೆ ಮರಳಲೇಬೇಕು’. ಶುಐಬ್ ಹೇಳಿದರು: ‘ನಾವು ಅದನ್ನು (ನಿಮ್ಮ ಧರ್ಮವನ್ನು) ಅಸಹ್ಯಪಡುವವರಾಗಿದ್ದರೂ ಸಹ (ಮರಳಬೇಕೇ)?’
(89) ಅಲ್ಲಾಹು ನಮ್ಮನ್ನು ನಿಮ್ಮ ಧರ್ಮದಿಂದ ರಕ್ಷಿಸಿದ ಬಳಿಕ ಪುನಃ ಅದರೆಡೆಗೇ ನಾವು ಮರಳುವುದಾದರೆ ಖಂಡಿತವಾಗಿಯೂ ನಾವು ಅಲ್ಲಾಹುವಿನ ಮೇಲೆ ಸುಳ್ಳನ್ನು ಸೃಷ್ಟಿಸಿದವರಾಗುವೆವು. ನಮ್ಮ ರಬ್ಬಾದ ಅಲ್ಲಾಹು ಇಚ್ಛಿಸಿದ ವಿನಾ ಅದರೆಡೆಗೆ ಮರಳಲು ನಮ್ಮಿಂದಾಗದು. ನಮ್ಮ ರಬ್‌ನ ಅರಿವು ಸರ್ವ ವಿಷಯಗಳನ್ನೂ ಒಳಗೊಂಡಿದೆ. ನಾವು ಅಲ್ಲಾಹುವಿನ ಮೇಲೆ ಭರವಸೆಯಿಟ್ಟಿರುವೆವು. ಓ ನಮ್ಮ ರಬ್! ನಮ್ಮ ಮತ್ತು ನಮ್ಮ ಜನತೆಯ ಮಧ್ಯೆ ನೀನು ಸತ್ಯದೊಂದಿಗೆ ತೀರ್ಪು ನೀಡು. ತೀರ್ಪು ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ’.
(90) ಅವರ ಜನತೆಯಲ್ಲಿದ್ದ ಸತ್ಯನಿಷೇಧಿಗಳಾದ ಮುಖಂಡರು ಹೇಳಿದರು: ‘ನೀವು ಶುಐಬ್‍ರನ್ನು ಅನುಸರಿಸುವುದಾದರೆ ತನ್ನಿಮಿತ್ತ ಖಂಡಿತವಾಗಿಯೂ ನೀವು ನಷ್ಟಹೊಂದಿದವರಾಗುವಿರಿ’.
(91) ತರುವಾಯ ಭೂಕಂಪನವು ಅವರನ್ನು ಹಿಡಿಯಿತು. ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖರಾಗಿ ಬಿದ್ದಿದ್ದರು.
(92) ಶುಐಬ್‍ರನ್ನು ನಿಷೇಧಿಸಿದವರ ಸ್ಥಿತಿಯು ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತಾಯಿತು. ಶುಐಬ್‍ರನ್ನು ನಿಷೇಧಿಸಿದವರಾರೋ ಅವರೇ ನಷ್ಟಹೊಂದಿದವರಾದರು.(231)
231. ಹೀಗೆ ಶುಐಬ್(ಅ) ರನ್ನು ಹೊರದಬ್ಬುವೆವೆಂದು ಬೆದರಿಸಿದವರನ್ನೇ ಈ ಲೋಕದಿಂದ ಹೊರದಬ್ಬಲಾಯಿತು. ಅವರ ನಿವಾಸಗಳು ಮತ್ತು ಕೃಷಿಭೂಮಿಗಳು ಸೇರಿದಂತೆ ಅಲ್ಲಿ ಜನವಾಸವನ್ನು ಸೂಚಿಸುವ ಕುರುಹುಗಳೆಲ್ಲವೂ ನಾಮಾವಶೇಷವಾಗಿ ಹೋದವು. ಶುಐಬ್(ಅ) ರನ್ನು ಅನುಸರಿಸಿದವರು ನಷ್ಟಹೊಂದುವರೆಂದು ಘೋಷಿಸುತ್ತಿದ್ದವರೇ ಇಹಲೋಕ ಮತ್ತು ಪರಲೋಕದಲ್ಲಿ ಸ್ವತಃ ನಷ್ಟಹೊಂದಿದವರಾದರು.
(93) ತರುವಾಯ ಶುಐಬ್ ಅವರಿಂದ ವಿಮುಖರಾದರು. ಅವರು ಹೇಳಿದರು: ‘ಓ ನನ್ನ ಜನರೇ! ನನ್ನ ರಬ್‌ನ ಸಂದೇಶಗಳನ್ನು ಖಂಡಿತವಾಗಿಯೂ ನಾನು ನಿಮಗೆ ತಲುಪಿಸಿಕೊಟ್ಟಿರುವೆನು ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿರುವೆನು. ಹೀಗಿರುವಾಗ ಸತ್ಯನಿಷೇಧಿಗಳಾದ ಜನರಿಗೋಸ್ಕರ ನಾನೇಕೆ ದುಃಖಿಸಲಿ?’
(94) ಯಾವುದೇ ನಾಡಿಗೂ ನಾವು ಯಾವುದೇ ಪ್ರವಾದಿಯನ್ನೂ ಕಳುಹಿಸಿರಲಿಲ್ಲ; (ಅವರು ಪ್ರವಾದಿಯನ್ನು ನಿಷೇಧಿಸಿದಾಗ) ಅಲ್ಲಿನ ನಿವಾಸಿಗಳನ್ನು ನಾವು ವಿಪತ್ತು ಮತ್ತು ಸಂಕಷ್ಟಗಳಿಂದ ಹಿಡಿಯದ ಹೊರತು.(232) ಇದು ಅವರು ವಿನಯವಂತರಾಗುವ ಸಲುವಾಗಿದೆ.
232. ಅಲ್ಲಾಹು ಈ ರೀತಿ ಮಾಡುವುದು ಜನರು ಪ್ರವಾದಿಯನ್ನು ನಿಷೇಧಿಸುವಾಗ ಅವರ ಆ ನಿಷೇಧವು ಅವರ ಸರ್ವನಾಶಕ್ಕೆ ಹೇತುವಾಗಲಿದೆಯೆಂದು ಅವರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿದೆ.
(95) ನಂತರ ಅವರು ಅಭಿವೃದ್ಧಿ ಹೊಂದುವ ತನಕ ನಾವು ಸಂಕಷ್ಟದ ಸ್ಥಳದಲ್ಲಿ ಕ್ಷೇಮವನ್ನಿಟ್ಟೆವು. ಅವರು ಹೇಳಿದರು: ‘ಸಂಕಷ್ಟ ಮತ್ತು ಕ್ಷೇಮವು ನಮ್ಮ ಪೂರ್ವಿಕರನ್ನೂ ಸ್ಪರ್ಶಿಸಿತ್ತು’.(233) ತರುವಾಯ ಅವರು ಗ್ರಹಿಸದ ರೀತಿಯಲ್ಲಿ ನಾವು ಅವರನ್ನು ಹಠಾತ್ತನೆ ಹಿಡಿದೆವು.
233. ‘ನಮಗಿಂತ ಮುಂಚಿನ ತಲೆಮಾರುಗಳಲ್ಲಿಯೂ ಸಂಕಷ್ಟಗಳು ಮತ್ತು ಕ್ಷೇಮಗಳು ಪುನರಾವರ್ತಿಸಿ ಬರುತ್ತಿದ್ದವು. ಇವೆಲ್ಲವೂ ಜಗತ್ತಿನಲ್ಲಿ ಸಹಜವಾಗಿವೆ. ಇವುಗಳನ್ನು ಅಲ್ಲಾಹುವಿನ ಪರೀಕ್ಷೆಯೆಂದು ನಾವೆಂದೂ ಭಾವಿಸಲಾರೆವು.’ ಎಂದು ಅವರು ಹೇಳುತ್ತಿದ್ದರು.
(96) ಆ ನಾಡುಗಳಲ್ಲಿರುವವರು ವಿಶ್ವಾಸವಿಟ್ಟವರೂ, ಭಯಭಕ್ತಿ ಪಾಲಿಸುವವರೂ ಆಗಿರುತ್ತಿದ್ದರೆ ನಾವವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಅನುಗ್ರಹಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ನಿಷೇಧಿಸಿದರು. ಆದ್ದರಿಂದ ಅವರು ಮಾಡಿಟ್ಟಿರುವುದರ ಫಲವಾಗಿ ನಾವು ಅವರನ್ನು ಹಿಡಿದೆವು.
(97) ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ?
(98) ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ?
(99) ಅವರು ಅಲ್ಲಾಹುವಿನ ತಂತ್ರದ ಬಗ್ಗೆ ನಿರ್ಭೀತರಾಗಿರುವರೇ? ನಷ್ಟ ಹೊಂದಿರುವ ಜನರಲ್ಲದೆ ಇನ್ನಾರೂ ಅಲ್ಲಾಹುವಿನ ತಂತ್ರದ ಬಗ್ಗೆ ನಿರ್ಭೀತರಾಗಿರಲಾರರು.
(100) ಪೂರ್ವಿಕರ ಬಳಿಕ ಭೂಮಿಯ ಉತ್ತರಾಧಿಕಾರ ಪಡೆದವರನ್ನು, ನಾವು ಇಚ್ಛಿಸಿದರೆ ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸುವೆವು ಎಂಬ ಪ್ರಜ್ಞೆಯು ಸನ್ಮಾರ್ಗದೆಡೆಗೆ ಮುನ್ನಡೆಸಲಾರದೇ? ನಾವು ಅವರ ಹೃದಯಗಳ ಮೇಲೆ ಮುದ್ರೆಯನ್ನೊತ್ತುವೆವು. ಆದ್ದರಿಂದ ಅವರು ಏನನ್ನೂ ಆಲಿಸಲಾರರು.
(101) ಆ ನಾಡುಗಳ ವೃತ್ತಾಂತಗಳ ಪೈಕಿ ಕೆಲವನ್ನು ನಾವು ತಮಗೆ ವಿವರಿಸಿಕೊಡುವೆವು. ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಮುಂಚೆ ನಿಷೇಧಿಸಿರುವುದರಲ್ಲಿ ಅವರೆಂದೂ ವಿಶ್ವಾಸ ತಾಳುವವರಾಗಲಿಲ್ಲ. ಹೀಗೆ ಅಲ್ಲಾಹು ಸತ್ಯನಿಷೇಧಿಗಳ ಹೃದಯಗಳ ಮೇಲೆ ಮುದ್ರೆಯನ್ನೊತ್ತುವನು.
(102) ಕರಾರನ್ನು ಪಾಲಿಸುವ ಸ್ವಭಾವವು ಅವರಲ್ಲಿ ಹೆಚ್ಚಿನವರಿಗೂ ಇರುವುದಾಗಿ ನಾವು ಕಂಡಿಲ್ಲ.(234) ಅವರ ಪೈಕಿ ಹೆಚ್ಚಿನವರನ್ನೂ ನಾವು ಧಿಕ್ಕಾರಿಗಳನ್ನಾಗಿಯೇ ಕಂಡೆವು.
234. ಅಲ್ಲಾಹುವನ್ನು ಅನುಸರಿಸುವೆನು ಎಂಬ ಕರಾರು, ಪ್ರವಾದಿಯನ್ನು ಅನುಸರಿಸುವೆನು ಮತ್ತು ಅವರಿಗೆ ಸಹಾಯ ಮಾಡುವೆನು ಎಂಬ ಕರಾರು ಹಾಗೂ ಮನುಷ್ಯರು ಪರಸ್ಪರ ಮಾಡುವ ಕರಾರು, ಇವೆಲ್ಲವನ್ನೂ ಪಾಲಿಸುವುದು ಓರ್ವ ಸತ್ಯವಿಶ್ವಾಸಿಯ ಕರ್ತವ್ಯವಾಗಿದೆ.
(103) ತರುವಾಯ ಅವರ ಬಳಿಕ ನಾವು ಮೂಸಾರನ್ನು ಫಿರ್‍ಔನ್ ಮತ್ತು ಅವನ ಮುಖಂಡರೆಡೆಗೆ ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಆದರೆ ಅವರು ಆ ದೃಷ್ಟಾಂತಗಳೊಂದಿಗೆ ಅನ್ಯಾಯವೆಸಗಿದರು. ಆ ವಿನಾಶಕಾರಿಗಳ ಅಂತ್ಯವು ಹೇಗಿತ್ತು ಎಂಬುದನ್ನು ನೋಡಿರಿ.
(104) ಮೂಸಾ ಹೇಳಿದರು: ‘ಓ ಫಿರ್‍ಔನ್! ಖಂಡಿತವಾಗಿಯೂ ನಾನು ಸರ್ವಲೋಕಗಳ ರಬ್‌ನ ಸಂದೇಶವಾಹಕನಾಗಿರುವೆನು.
(105) ಅಲ್ಲಾಹುವಿನ ಮೇಲೆ ಸತ್ಯವನ್ನಲ್ಲದೆ ಇನ್ನೇನನ್ನೂ ಹೇಳದಿರಲು ನಾನು ಬಾಧ್ಯಸ್ಥನಾಗಿರುವೆನು. ನಿಮ್ಮ ರಬ್‌ನ ವತಿಯ ಸ್ಪಷ್ಟವಾದ ಪುರಾವೆಯೊಂದಿಗೆ ನಾನು ನಿಮ್ಮೆಡೆಗೆ ಬಂದಿರುವೆನು. ಆದ್ದರಿಂದ ಇಸ್ರಾಈಲ್ ಸಂತತಿಗಳನ್ನು ನನ್ನ ಸಂಗಡ ಕಳುಹಿಸಿಕೊಡಿರಿ’.(235)
235. ಫಿರ್‍ಔನ್ (ಫರೋವ) ಕೋಪ್ಟಿಕ್ ವಂಶದವನಾಗಿದ್ದನು. ಈಜಿಪ್ಟಿನಲ್ಲಿ ಆಗ ಕೋಪ್ಟಿಕ್ ವಂಶ ಆಡಳಿತ ನಡೆಸುತ್ತಿತ್ತು. ಅವರು ಇಸ್ರಾಈಲರನ್ನು ಗುಲಾಮರನ್ನಾಗಿ ಮಾಡಿ ಅವರ ಕೈಯಲ್ಲಿ ಕಠಿಣವಾದ ಕೆಲಸಗಳನ್ನು ಮಾಡಿಸುತ್ತಲೂ ಅವರನ್ನು ನಿರಂತರವಾಗಿ ಪೀಡಿಸುತ್ತಲೂ ಇದ್ದರು. ಇದರ ಬಗ್ಗೆ ಕುರ್‌ಆನ್ ಹಲವು ಕಡೆಗಳಲ್ಲಿ ವಿವರಿಸಿದೆ. ಈಜಿಪ್ಟಿಯನ್ನರನ್ನು ಸಂಪೂರ್ಣವಾಗಿ ಸತ್ಯದೆಡೆಗೆ ಆಹ್ವಾನಿಸುವುದರೊಂದಿಗೆ ಬನೀ ಇಸ್ರಾಈಲರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ, ಅವರಲ್ಲಿ ಸತ್ಯವಿಶ್ವಾಸ ಮತ್ತು ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸುವುದು ಮೂಸಾ(ಅ) ರವರ ಸಂದೇಶವಾಹಕತ್ವದ ಪ್ರಮುಖ ಭಾಗವಾಗಿತ್ತು.
(106) ಫಿರ್‍ಔನ್ ಹೇಳಿದನು: ‘ನೀನು ಪುರಾವೆಯೊಂದಿಗೆ ಬಂದಿರುವುದಾದರೆ ಅದನ್ನು ತೋರಿಸಿಕೊಡು. ನೀನು ಸತ್ಯಸಂಧರಲ್ಲಿ ಸೇರಿದವನಾಗಿದ್ದರೆ’.
(107) ಆಗ ಮೂಸಾ ತಮ್ಮ ಬೆತ್ತವನ್ನು ಕೆಳಗೆ ಹಾಕಿದರು. ತಕ್ಷಣ ಅದೊಂದು ಪ್ರತ್ಯಕ್ಷ ಸರ್ಪವಾಗಿ ಮಾರ್ಪಟ್ಟಿತು.
(108) ಮೂಸಾ ತಮ್ಮ ಕೈಯ್ಯನ್ನು ಹೊರತೆಗೆದು ತೋರಿಸಿದರು. ಆಗ ನೋಡುವವರಿಗೆಲ್ಲ ಅದು ಬೆಳ್ಳಗಾಗಿ ಕಂಡಿತು.
(109) ಫಿರ್‍ಔನನ ಜನತೆಯಲ್ಲಿದ್ದ ಮುಖಂಡರು ಹೇಳಿದರು: ‘ಖಂಡಿತವಾಗಿಯೂ ಈತನೊಬ್ಬ ಪಾಂಡಿತ್ಯವುಳ್ಳ ಮಾಂತ್ರಿಕನಾಗಿರುವನು.
(110) ಈತ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಗಟ್ಟಲು ಇಚ್ಛಿಸುತ್ತಿರುವನು.(236) ಆದ್ದರಿಂದ ನೀವೇನು ಆದೇಶ ನೀಡುವಿರಿ?’
236. ಮಾನವ ವಿಮೋಚನೆಗಾಗಿ ಪರಿಶ್ರಮಿಸುವವರನ್ನು ದೇಶದ್ರೋಹಿಗಳೆಂದೂ, ಆಡಳಿತ ವಿರೋಧಿಗಳೆಂದೂ ಚಿತ್ರೀಕರಿಸುವುದು ಸರ್ವಾಧಿಕಾರಿಗಳು ಎಲ್ಲಾ ಕಾಲದಲ್ಲೂ ಅನುಸರಿಸುತ್ತಿರುವ ಒಂದು ಕುಟಿಲ ತಂತ್ರವಾಗಿದೆ.
(111) ಅವರು (ಫಿರ್‍ಔನನೊಂದಿಗೆ) ಹೇಳಿದರು: ‘ಈತನಿಗೂ, ಈತನ ಸಹೋದರನಿಗೂ ತಾವು ಸ್ವಲ್ಪ ಕಾಲಾವಕಾಶವನ್ನು ನೀಡಿರಿ. ನಗರಗಳಿಗೆ ಆಳುಗಳನ್ನು ಕಳುಹಿಸಿರಿ.
(112) ಅವರು ಪಾಂಡಿತ್ಯವುಳ್ಳ ಎಲ್ಲ ಮಾಂತ್ರಿಕರನ್ನು ಒಟ್ಟುಗೂಡಿಸಿ ತಮ್ಮ ಬಳಿಗೆ ಕರೆತರಲಿ’.
(113) ಮಾಂತ್ರಿಕರು ಫಿರ್‍ಔನನ ಬಳಿಗೆ ಬಂದರು. ಅವರು ಹೇಳಿದರು: ‘ನಾವು ಜಯಗಳಿಸಿದರೆ ನಮಗೆ ಉತ್ತಮ ಪ್ರತಿಫಲ ಸಿಗುವುದು ಖಚಿತವಲ್ಲವೇ?’
(114) ಫಿರ್‍ಔನ್ ಹೇಳಿದನು: ‘ಹೌದು, ಖಂಡಿತವಾಗಿಯೂ ನೀವು (ನನ್ನ ಬಳಿ) ಸಾಮೀಪ್ಯ ಪಡೆದವರಲ್ಲಿ ಸೇರಿದವರಾಗುವಿರಿ’.
(115) ಅವರು ಹೇಳಿದರು: ‘ಓ ಮೂಸಾ! ಒಂದೋ ತಾವು ಹಾಕಿರಿ. ಅಥವಾ (ಮೊದಲು) ಹಾಕುವವರು ನಾವಾಗಿರುವೆವು’.
(116) ಮೂಸಾ ಹೇಳಿದರು: ‘ನೀವು ಹಾಕಿರಿ’. ಅವರು ಹಾಕಿದಾಗ ಅವರು (ತನ್ಮೂಲಕ) ಜನರ ಕಣ್ಣುಗಳನ್ನು ಸಮ್ಮೋಹಗೊಳಿಸಿದರು ಮತ್ತು ಅವರಲ್ಲಿ ಭಯಹುಟ್ಟಿಸಿದರು. ಅವರು ಮಹಾ ಇಂದ್ರಜಾಲವನ್ನೇ ತಂದಿದ್ದರು.
(117) ‘ತಾವು ತಮ್ಮ ಬೆತ್ತವನ್ನು ಹಾಕಿರಿ’ ಎಂದು ಮೂಸಾರಿಗೆ ನಾವು ದಿವ್ಯ ಸಂದೇಶವನ್ನು ನೀಡಿದೆವು. ಆಗ ಅಗೋ ಅವರು ಕೃತಕವಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗತೊಡಗಿತು.
(118) ಹೀಗೆ ಸತ್ಯವು ಸ್ಥಾಪಿಸಲ್ಪಟ್ಟಿತು ಮತ್ತು ಅವರು ಮಾಡಿರುವುದೆಲ್ಲವೂ ನಿಷ್ಫಲವಾಗಿ ಹೋಯಿತು.
(119) ಅವರು ಅಲ್ಲಿಯೇ ಪರಾಭವಗೊಂಡರು ಮತ್ತು ಅಪಮಾನಿತರಾಗಿ ಮರಳಿದರು.
(120) ಮಾಂತ್ರಿಕರು ಸಾಷ್ಟಾಂಗ ಬಿದ್ದರು.
(121) ಅವರು ಹೇಳಿದರು: ‘ನಾವು ಸರ್ವಲೋಕಗಳ ರಬ್‌ನಲ್ಲಿ ವಿಶ್ವಾಸವಿಟ್ಟಿರುವೆವು.
(122) ಮೂಸಾ ಮತ್ತು ಹಾರೂನ್‍ರ ರಬ್‌ನಲ್ಲಿ’.
(123) ಫಿರ್‍ಔನ್ ಹೇಳಿದನು: ‘ನಾನು ನಿಮಗೆ ಅನುಮತಿ ನೀಡುವ ಮೊದಲೇ ನೀವು ವಿಶ್ವಾಸ ತಾಳಿದಿರಾ? ಇದು ಈ ನಗರದಲ್ಲಿರುವವರನ್ನು ಇಲ್ಲಿಂದ ಹೊರಗಟ್ಟುವುದಕ್ಕಾಗಿ ನೀವೆಲ್ಲರೂ ಸೇರಿ ಇಲ್ಲಿ ಮಾಡಿದ ಒಂದು ಪಿತೂರಿಯಾಗಿದೆ. ತರುವಾಯ ನೀವು ಅರಿತುಕೊಳ್ಳುವಿರಿ.
(124) ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸುವೆನು. ತರುವಾಯ ಖಂಡಿತವಾಗಿಯೂ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು’.
(125) ಅವರು ಹೇಳಿದರು: ‘ಖಂಡಿತವಾಗಿಯೂ ನಾವು ನಮ್ಮ ರಬ್‌ನೆಡೆಗೆ ಮರಳುವವರಾಗಿರುವೆವು.
(126) ನಮ್ಮ ರಬ್‌ನ ದೃಷ್ಟಾಂತಗಳು ನಮ್ಮೆಡೆಗೆ ಬಂದಾಗ ನಾವು ಅದರಲ್ಲಿ ವಿಶ್ವಾಸವಿಟ್ಟೆವು ಎಂಬುದಲ್ಲವೇ ತಾವು ನಮ್ಮ ಮೇಲೆ ಆರೋಪ ಹೊರಿಸುತ್ತಿರುವುದು. ಓ ನಮ್ಮ ರಬ್! ನಮ್ಮ ಮೇಲೆ ಸಹನೆಯನ್ನು ಸುರಿಸಿಕೊಡು ಮತ್ತು ನಮ್ಮನ್ನು ಮುಸ್ಲಿಮರನ್ನಾಗಿ ಮೃತಪಡಿಸು’.
(127) ಫಿರ್‍ಔನನ ಜನತೆಯಲ್ಲಿದ್ದ ಮುಖಂಡರು ಹೇಳಿದರು: ‘ಭೂಮಿಯಲ್ಲಿ ಕ್ಷೋಭೆಯನ್ನುಂಟುಮಾಡಲು ಮತ್ತು ತಮ್ಮನ್ನು ಹಾಗೂ ತಮ್ಮ ಆರಾಧ್ಯರನ್ನು ಕೈಬಿಡಲು ತಾವು ಮೂಸಾ ಮತ್ತು ಆತನ ಜನರನ್ನು ಬಿಟ್ಟುಬಿಡುವಿರಾ?’ ಅವನು (ಫಿರ್‍ಔನ್) ಹೇಳಿದನು: ‘ನಾವು ಅವರ (ಇಸ್ರಾಈಲರ) ಗಂಡುಮಕ್ಕಳನ್ನು ಸಾಯಿಸುವೆವು ಮತ್ತು ಅವರ ಸ್ತ್ರೀಯರನ್ನು ಜೀವಂತ ಬಿಡುವೆವು. ಖಂಡಿತವಾಗಿಯೂ ನಾವು ಅವರ ಮೇಲೆ ಸರ್ವಾಧಿಕಾರವುಳ್ಳವರಾಗಿರುವೆವು’.
(128) ಮೂಸಾ ತಮ್ಮ ಜನತೆಯೊಂದಿಗೆ ಹೇಳಿದರು: ‘ನೀವು ಅಲ್ಲಾಹುವಿನೊಂದಿಗೆ ಸಹಾಯ ಬೇಡಿರಿ ಮತ್ತು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಭೂಮಿಯು ಅಲ್ಲಾಹುವಿನದ್ದಾಗಿದೆ. ಅವನ ದಾಸರ ಪೈಕಿ ತಾನಿಚ್ಛಿಸುವವರಿಗೆ ಅದನ್ನು ಉತ್ತರಾಧಿಕಾರವಾಗಿ ನೀಡುವನು. ಪರ್ಯವಸಾನವಿರುವುದು ಭಯಭಕ್ತಿಯುಳ್ಳವರಿಗಾಗಿದೆ’.
(129) ಅವರು ಹೇಳಿದರು: ‘ತಾವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬರುವ ಮುನ್ನವೂ, ತಾವು ನಮ್ಮ ಬಳಿಗೆ ಬಂದ ಬಳಿಕವೂ ನಾವು ಹಿಂಸೆಗೊಳಗಾಗಿರುವೆವು’. ಮೂಸಾ ಹೇಳಿದರು: ‘ನಿಮ್ಮ ರಬ್ ನಿಮ್ಮ ಶತ್ರುವನ್ನು ನಾಶ ಮಾಡಬಹುದು ಮತ್ತು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದು. ತರುವಾಯ ನೀವು ಹೇಗೆ ಕಾರ್ಯನಿರ್ವಹಿಸುವಿರಿ ಎಂಬುದನ್ನು ಅವನು ನೋಡುವನು’.
(130) ಫಿರ್‍ಔನನ ಜನರನ್ನು ನಾವು (ಬರಗಾಲದ) ವರ್ಷದ ಮೂಲಕ ಮತ್ತು ಬೆಳೆಗಳ ಅಭಾವದ ಮೂಲಕ ಹಿಡಿದೆವು. ಅವರು ಚಿಂತಿಸಿ ಅರ್ಥಮಾಡಿಕೊಳ್ಳುವ ಸಲುವಾಗಿ.
(131) ಒಳಿತೇನಾದರೂ ಅವರೆಡೆಗೆ ಬಂದರೆ ‘ಇದು ನಮಗೆ ಅರ್ಹವಾಗಿರುವುದೇ ಆಗಿದೆ’ ಎಂದು ಅವರು ಹೇಳುವರು.(237) ಕೆಡುಕೇನಾದರೂ ಅವರನ್ನು ಬಾಧಿಸಿದರೆ ಅದನ್ನು ಮೂಸಾ ಮತ್ತು ಅವರ ಜೊತೆಯಲ್ಲಿರುವವರ ಮೇಲೆ ಅಪಶಕುನವಾಗಿ ಹೊರಿಸುತ್ತಿದ್ದರು. ಅರಿತುಕೊಳ್ಳಿರಿ! ಅವರ ಅಪಶಕುನವಿರುವುದು ಅಲ್ಲಾಹುವಿನ ಬಳಿಯಲ್ಲಿ ಮಾತ್ರವಾಗಿದೆ.(238) ಆದರೆ ಅವರಲ್ಲಿ ಹೆಚ್ಚಿನವರೂ ಅರಿಯುವುದಿಲ್ಲ.
237. ಉತ್ತಮವಾದ ಬೆಳೆ ಮತ್ತು ಸಮೃದ್ಧಿಯುಂಟಾದಾಗ ಇದು ನಮ್ಮ ಪರಿಶ್ರಮ ಮತ್ತು ಭೂಮಿಯ ಫಲವತ್ತತೆಯಿಂದ ಉಂಟಾಗಿದೆ ಎಂದು ಹೇಳುತ್ತಿದ್ದರು. ಅಲ್ಲಾಹುವಿನ ಅನುಗ್ರಹ ಎಂಬ ಪ್ರಯೋಗ ಸಹ ಅವರಿಗೆ ಸ್ವೀಕಾರಾರ್ಹವಾಗಿರಲಿಲ್ಲ.
238. ಅಪಶಕುನದ ಬಗ್ಗೆ ಜನರಲ್ಲಿರುವ ಮೂಢನಂಬಿಕೆಗಳನ್ನು ಕುರ್‌ಆನ್ ತಿರಸ್ಕರಿಸುತ್ತದೆ ಮತ್ತು ಲಾಭ ನಷ್ಟಗಳು ಅಲ್ಲಾಹುವಿನ ವಿಧಿಯನುಸಾರವಾಗಿ ಸಂಭವಿಸುತ್ತದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡುತ್ತದೆ.
(132) ಅವರು ಹೇಳಿದರು: ‘ನಮ್ಮನ್ನು ಮಾಂತ್ರಿಕ ವಿದ್ಯೆಯಿಂದ ವಶೀಕರಿಸುವ ಸಲುವಾಗಿ ತಾವು ಯಾವುದೇ ದೃಷ್ಟಾಂತದೊಂದಿಗೆ ನಮ್ಮೆಡೆಗೆ ಬಂದರೂ ನಾವು ತಮ್ಮಲ್ಲಿ ವಿಶ್ವಾಸವಿಡಲಾರೆವು’.
(133) ತರುವಾಯ ನಾವು ಅವರ ವಿರುದ್ಧ ಜಲಪ್ರವಾಹ, ಮಿಡತೆ, ಹೇನು, ಕಪ್ಪೆಗಳು, ರಕ್ತ ಮುಂತಾದ ಸ್ಪಷ್ಟವಾದ ದೃಷ್ಟಾಂತಗಳನ್ನು ಕಳುಹಿಸಿದೆವು. ಆದರೆ ಅವರು ಅಹಂಕಾರಪಟ್ಟರು ಮತ್ತು ಅವರು ಅಪರಾಧಿಗಳಾದ ಒಂದು ಜನತೆಯಾಗಿದ್ದರು.
(134) ಶಿಕ್ಷೆಯು ಅವರ ಮೇಲೆರಗಿದಾಗ ಅವರು ಹೇಳಿದರು: ‘ಓ ಮೂಸಾ! ತಮ್ಮ ರಬ್ ತಮ್ಮೊಂದಿಗೆ ಮಾಡಿರುವ ಕರಾರನ್ನು ಮುಂದಿಟ್ಟು ತಾವು ಅವನೊಂದಿಗೆ ನಮಗಾಗಿ ಪ್ರಾರ್ಥಿಸಿರಿ. ತಾವು ಈ ಶಿಕ್ಷೆಯನ್ನು ನಮ್ಮಿಂದ ನಿವಾರಿಸಿದರೆ ಖಂಡಿತವಾಗಿಯೂ ನಾವು ತಮ್ಮಲ್ಲಿ ವಿಶ್ವಾಸವಿಡುವೆವು ಮತ್ತು ಇಸ್ರಾಈಲ್ ಸಂತತಿಗಳನ್ನು ತಮ್ಮೊಂದಿಗೆ ಕಳುಹಿಸಿಕೊಡುವೆವು’.
(135) ಆದರೆ ಅವರು ತಲುಪಬೇಕಾದ ಒಂದು ಅವಧಿಯ ತನಕ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ ಅವರು ವಾಗ್ದಾನವನ್ನು ಉಲ್ಲಂಘಿಸತೊಡಗಿದರು.
(136) ಆದ್ದರಿಂದ ನಾವು ಅವರ ಮೇಲೆ ಶಿಕ್ಷಾಕ್ರಮವನ್ನು ಕೈಗೊಂಡೆವು. ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ ಕಾರಣದಿಂದ ಮತ್ತು ಅವುಗಳ ಬಗ್ಗೆ ಅಲಕ್ಷ್ಯ ವಹಿಸಿದ್ದರ ಕಾರಣದಿಂದ ನಾವು ಅವರನ್ನು ಸಮುದ್ರದಲ್ಲಿ ಮುಳುಗಿಸಿದೆವು.
(137) ನಾವು ಅನುಗ್ರಹೀತಗೊಳಿಸಿರುವ ಪೂರ್ವ ಮತ್ತು ಪಶ್ಚಿಮದ ಆ ಭೂಪ್ರದೇಶಗಳನ್ನು ದಬ್ಬಾಳಿಕೆಗೊಳಗಾದ ಜನರಿಗೆ ನಾವು ಉತ್ತರಾಧಿಕಾರವಾಗಿ ನೀಡಿದೆವು. ಇಸ್ರಾಈಲ್ ಸಂತತಿಗಳ ಮೇಲೆ ಅವರು ತಾಳ್ಮೆ ವಹಿಸಿದ ಫಲವಾಗಿ ತಮ್ಮ ರಬ್‌ನ ಉತ್ತಮವಾದ ವಚನವು ನೆರವೇರಿತು. ಫಿರ್‍ಔನ್ ಮತ್ತು ಅವನ ಜನತೆಯು ನಿರ್ಮಿಸಿರುವುದನ್ನೂ, ಅವರು ಎತ್ತರಕ್ಕೇರಿಸಿ ಕಟ್ಟಿರುವುದನ್ನೂ ನಾವು ಧ್ವಂಸಗೊಳಿಸಿದೆವು.
(138) ಇಸ್ರಾಈಲ್ ಸಂತತಿಗಳನ್ನು ನಾವು ಸಮುದ್ರ ದಾಟಿಸಿ (ರಕ್ಷಿಸಿ)ದೆವು. ತರುವಾಯ ತಮ್ಮ ವಿಗ್ರಹಗಳ ಮುಂದೆ ಆರಾಧನಾಮಗ್ನರಾಗಿ ಕುಳಿತಿದ್ದ ಒಂದು ಜನಸಮೂಹದ ಬಳಿಗೆ ಅವರು ಬಂದರು. ಅವರು ಹೇಳಿದರು: ‘ಓ ಮೂಸಾ! ಇವರಿಗೆ ಆರಾಧ್ಯರಿರುವಂತೆ ನಮಗೂ ಒಂದು ಆರಾಧ್ಯನನ್ನು ಮಾಡಿಕೊಡಿರಿ’.(239) ಮೂಸಾ ಹೇಳಿದರು: ‘ಖಂಡಿತವಾಗಿಯೂ ನೀವು ಅಜ್ಞಾನಿಗಳಾದ ಒಂದು ಜನತೆಯಾಗಿರುವಿರಿ.
239. ಓರ್ವ ಪ್ರವಾದಿಯ ಶಿಕ್ಷಣದ ಕೆಳಗಿರುವ ಜನರಲ್ಲೂ ಬಹುದೇವಾರಾಧನೆಯೆಡೆಗಿರುವ ಪೈಶಾಚಿಕ ಪ್ರಲೋಭನೆಯು ಎಷ್ಟು ತೀವ್ರವಾಗಿದೆಯೆಂದು ಈ ಘಟನೆಯು ಸೂಚಿಸುತ್ತದೆ.
(139) ಖಂಡಿತವಾಗಿಯೂ ಈ ಜನರು ಯಾವುದರಲ್ಲಿ ನೆಲೆಗೊಂಡಿರುವರೋ ಅದು ನಾಶವಾಗುವಂತದ್ದಾಗಿದೆ. ಅವರು ಮಾಡುತ್ತಿರುವುದೆಲ್ಲವೂ ನಿಷ್ಫಲವಾಗಿವೆ’.
(140) ಮೂಸಾ ಹೇಳಿದರು: ‘ಅಲ್ಲಾಹು ನಿಮ್ಮನ್ನು ಸರ್ವಲೋಕದವರ ಪೈಕಿ ಉತ್ಕೃಷ್ಟಗೊಳಿಸಿರುವಾಗ ಅವನ ಹೊರತು ಬೇರೊಬ್ಬ ಆರಾಧ್ಯನನ್ನು ನಾನು ನಿಮಗಾಗಿ ಅರಸುವುದೇ?’
(141) ನಿಮ್ಮನ್ನು ಕಠಿಣವಾಗಿ ಶಿಕ್ಷಿಸುತ್ತಿದ್ದ, ನಿಮ್ಮ ಗಂಡುಮಕ್ಕಳನ್ನು ಸಾಯಿಸುತ್ತಿದ್ದ ಮತ್ತು ನಿಮ್ಮ ಸ್ತ್ರೀಯರನ್ನು ಜೀವಂತ ಬಿಡುತ್ತಿದ್ದ ಫಿರ್‍ಔನನ ಜನರಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭವನ್ನು (ಸ್ಮರಿಸಿರಿ). ಅದರಲ್ಲಿ ನಿಮ್ಮ ರಬ್‌ನ ವತಿಯ ಒಂದು ಕಠಿಣ ಪರೀಕ್ಷೆಯಿತ್ತು.
(142) ನಾವು ಮೂಸಾರಿಗೆ ಮೂವತ್ತು ರಾತ್ರಿಗಳನ್ನು ನಿಶ್ಚಯಿಸಿಕೊಟ್ಟೆವು ಮತ್ತು ಹತ್ತನ್ನು ಸೇರಿಸಿ ಅದನ್ನು ಪೂರ್ತಿಗೊಳಿಸಿದೆವು. ಹೀಗೆ ಅವರ ರಬ್ ನಿರ್ಣಯಿಸಿದ ನಲ್ವತ್ತು ರಾತ್ರಿಗಳ ಸಮಯಮಿತಿಯು ಪೂರ್ತಿಯಾಯಿತು. ಮೂಸಾ ತಮ್ಮ ಸಹೋದರನಾದ ಹಾರೂನ್‍ರೊಂದಿಗೆ ಹೇಳಿದರು: ‘ನನ್ನ ಜನತೆಯ ಮೇಲೆ ನನ್ನ ಪ್ರತಿನಿಧಿಯಾಗಿರು. ಸುಧಾರಣೆ ಮಾಡು. ವಿನಾಶಕಾರಿಗಳ ಮಾರ್ಗವನ್ನು ಅನುಸರಿಸದಿರು’.
(143) ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ರಬ್ ಅವರೊಂದಿಗೆ ಮಾತನಾಡಿದಾಗ ಅವರು ಹೇಳಿದರು: ‘ನನ್ನ ಪ್ರಭೂ! ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು’. ಅವನು (ಅಲ್ಲಾಹು) ಹೇಳಿದನು: ತಮಗೆಂದಿಗೂ ನನ್ನನ್ನು ಕಾಣಲಾಗದು. ಆದರೆ ತಾವು ಆ ಪರ್ವತದೆಡೆಗೆ ನೋಡಿರಿ. ಅದು ಅದರ ಸ್ಥಳದಲ್ಲಿಯೇ ಅಚಲವಾಗಿ ನಿಂತರೆ ತರುವಾಯ ತಾವು ನನ್ನನ್ನು ಕಾಣುವಿರಿ’. ತರುವಾಯ ಅವರ ರಬ್ ಪರ್ವತಕ್ಕೆ ಪ್ರಕಟವಾದಾಗ ಅವನದನ್ನು ನುಚ್ಚುನೂರು ಮಾಡಿದನು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ತರುವಾಯ ಅವರಿಗೆ ಪ್ರಜ್ಞೆಯು ಮರಳಿ ಬಂದಾಗ ಅವರು ಹೇಳಿದರು: ‘ನೀನು ಪರಮಪಾವನನು. ನಾನು ನಿನ್ನೆಡೆಗೆ ಪಶ್ಚಾತ್ತಾಪದೊಂದಿಗೆ ಮರಳಿರುವೆನು ಮತ್ತು ನಾನು ವಿಶ್ವಾಸಿಗಳ ಪೈಕಿ ಮೊದಲಿಗನಾಗಿರುವೆನು’.
(144) ಅವನು (ಅಲ್ಲಾಹು) ಹೇಳಿದನು: ‘ಓ ಮೂಸಾ! ನಾನು ನನ್ನ ಸಂದೇಶಗಳ ಮೂಲಕ ಮತ್ತು ನನ್ನ (ನೇರ) ಮಾತುಕತೆಯ ಮೂಲಕ ಖಂಡಿತವಾಗಿಯೂ ತಮ್ಮನ್ನು ಮನುಷ್ಯರ ಪೈಕಿ ಶ್ರೇಷ್ಠರನ್ನಾಗಿ ಆರಿಸಿರುವೆನು. ಆದ್ದರಿಂದ ನಾನು ತಮಗೆ ನೀಡಿರುವುದನ್ನು ಹಿಡಿದುಕೊಳ್ಳಿರಿ ಮತ್ತು ಕೃತಜ್ಞತೆ ಸಲ್ಲಿಸುವವರ ಪೈಕಿ ಸೇರಿದವರಾಗಿರಿ’.
(145) ಸದುಪದೇಶ ಮತ್ತು ಸರ್ವ ವಿಷಯಗಳಿಗಿರುವ ವಿಶದೀಕರಣವೂ ಸೇರಿದಂತೆ ಸಕಲ ವಿಷಯಗಳನ್ನೂ ನಾವು ಅವರಿಗೆ (ಮೂಸಾರಿಗೆ) ಹಲಗೆಗಳಲ್ಲಿ ಬರೆದುಕೊಟ್ಟೆವು. ‘ಇದನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ ಮತ್ತು ಇದರಲ್ಲಿರುವ ಉತ್ತಮ ವಿಷಯಗಳನ್ನು ಸ್ವೀಕರಿಸಲು ತಮ್ಮ ಜನರಿಗೆ ಆದೇಶಿಸಿರಿ. ಧಿಕ್ಕಾರಿಗಳ ವಾಸಸ್ಥಳವನ್ನು ತರುವಾಯ ನಾನು ನಿಮಗೆ ತೋರಿಸಿಕೊಡುವೆನು’ (ಎಂದು ನಾವು ಹೇಳಿದೆವು).
(146) ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಡುತ್ತಿರುವವರನ್ನು ನಾನು ನನ್ನ ದೃಷ್ಟಾಂತಗಳಿಂದ ತಿರುಗಿಸಿಬಿಡುವೆನು. ಅವರು ಸಕಲ ದೃಷ್ಟಾಂತಗಳನ್ನು ಕಂಡರೂ ಅದರಲ್ಲಿ ವಿಶ್ವಾಸವಿಡಲಾರರು. ಅವರು ಸನ್ಮಾರ್ಗವನ್ನು ಕಂಡರೆ ಅದನ್ನು ಮಾರ್ಗವನ್ನಾಗಿ ಸ್ವೀಕರಿಸಲಾರರು. ಅವರು ದುರ್ಮಾರ್ಗವನ್ನು ಕಂಡರೆ ಅದನ್ನು ಮಾರ್ಗವನ್ನಾಗಿ ಸ್ವೀಕರಿಸುವರು. ಅದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿರುವುದರ ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿರುವುದರ ಫಲವಾಗಿದೆ.
(147) ನಮ್ಮ ದೃಷ್ಟಾಂತಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದವರಾರೋ ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ಮಾಡಿಕೊಂಡಿರುವುದರ ಫಲವನ್ನಲ್ಲದೆ ಇನ್ನೇನನ್ನಾದರೂ ಅವರಿಗೆ ನೀಡಲಾಗುವುದೇ?
(148) ಮೂಸಾರ ಜನತೆಯು ಅವರು ಹೋದ ಬಳಿಕ ತಮ್ಮ ಆಭರಣಗಳಿಂದ ನಿರ್ಮಿಸಿದ ಹೂಂಕರಿಸುವ ಒಂದು ಕರುವಿನ ರೂಪವನ್ನು ಆರಾಧ್ಯಮೂರ್ತಿಯನ್ನಾಗಿ ಮಾಡಿಕೊಂಡರು. ಅದು ಅವರೊಂದಿಗೆ ಮಾತನಾಡಲಾರದು ಮತ್ತು ಅವರಿಗೆ ದಾರಿ ತೋರಿಸಲಾರದು ಎಂಬುದನ್ನು ಅವರು ಕಾಣುವುದಿಲ್ಲವೇ? ಅವರು ಅದನ್ನು (ಆರಾಧ್ಯಮೂರ್ತಿಯನ್ನಾಗಿ) ಮಾಡಿಕೊಂಡರು ಮತ್ತು ಅದರಿಂದ ಅವರು ಅಕ್ರಮಿಗಳಾಗಿಬಿಟ್ಟರು.
(149) ಅವರಿಗೆ ವಿಷಾದವುಂಟಾದಾಗ ಮತ್ತು ತಾವು ಪಥಭ್ರಷ್ಟರಾಗಿರುವೆವೆಂದು ಕಂಡಾಗ ಅವರು ಹೇಳಿದರು: ‘ನಮ್ಮ ರಬ್ ನಮಗೆ ಕರುಣೆ ತೋರದಿದ್ದರೆ ಮತ್ತು ನಮ್ಮನ್ನು ಕ್ಷಮಿಸದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು.
(150) ಕುಪಿತರಾಗಿ ಮತ್ತು ದುಃಖಿತರಾಗಿ ಮೂಸಾ ತಮ್ಮ ಜನತೆಯೆಡೆಗೆ ಮರಳಿ ಬಂದಾಗ ಹೇಳಿದರು: ‘ನಾನು ಹೋದ ನಂತರ ನೀವು ನನ್ನ ಹಿಂದೆ ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ರಬ್‌ನ ಆಜ್ಞೆಯನ್ನು ಕಾಯದೇ ನೀವು ಆತುರಪಟ್ಟಿರುವಿರಾ?’ ಅವರು ಹಲಗೆಗಳನ್ನು ಕೆಳಗೆ ಹಾಕಿ ತಮ್ಮ ಸಹೋದರನ ತಲೆಯನ್ನು ಹಿಡಿದು ತಮ್ಮೆಡೆಗೆ ಎಳೆದರು. ಅವರು (ಹಾರೂನ್) ಹೇಳಿದರು: ‘ನನ್ನ ತಾಯಿಯ ಮಗನೇ! ಖಂಡಿತವಾಗಿಯೂ ಜನರು ನನ್ನನ್ನು ಬಲಹೀನನೆಂದು ಗಣಿಸಿದರು ಮತ್ತು ಅವರು ನನ್ನನ್ನು ಕೊಂದುಬಿಡುವಷ್ಟರ ಮಟ್ಟಿಗೆ ತಲುಪಿದ್ದರು. ಆದ್ದರಿಂದ (ನನ್ನ ಮೇಲೆ ಕೈಮಾಡಿ) ಶತ್ರುಗಳಿಗೆ ಸಂತೋಷವಾಗಲು ತಾವು ಅವಕಾಶ ನೀಡದಿರಿ ಮತ್ತು ನನ್ನನ್ನು ಅಕ್ರಮಿಗಳಾದ ಜನರ ಪೈಕಿ ಗಣಿಸದಿರಿ’.
(151) ಅವರು (ಮೂಸಾ) ಹೇಳಿದರು: ‘ನನ್ನ ಪ್ರಭೂ, ನನಗೆ ಮತ್ತು ನನ್ನ ಸಹೋದರನಿಗೆ ಪಾಪಮುಕ್ತಿ ದಯಪಾಲಿಸು. ನಮ್ಮನ್ನು ನಿನ್ನ ಕಾರುಣ್ಯದಲ್ಲಿ ಸೇರಿಸು. ನೀನು ಕರುಣೆ ತೋರುವವರಲ್ಲೇ ಅತ್ಯಧಿಕ ಕರುಣೆ ತೋರುವವನಾಗಿರುವೆ’.
(152) ಕರುವನ್ನು ಆರಾಧ್ಯಮೂರ್ತಿಯನ್ನಾಗಿ ಮಾಡಿಕೊಂಡವರು ಯಾರೋ ಅವರಿಗೆ ತಮ್ಮ ರಬ್‌ನ ವತಿಯ ಕ್ರೋಧವೂ, ಐಹಿಕ ಜೀವನದಲ್ಲಿ ನಿಕೃಷ್ಟತೆಯೂ ದೊರೆಯುವುದು. ಸುಳ್ಳನ್ನು ಹೆಣೆಯುವವರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.
(153) ಆದರೆ ಪಾಪವೆಸಗಿದ ಬಳಿಕ ಪಶ್ಚಾತ್ತಾಪಪಡುವವರು ಮತ್ತು ವಿಶ್ವಾಸವಿಡುವವರು ಯಾರೋ ಅವರಿಗೆ ತಮ್ಮ ರಬ್ ಅದರ ನಂತರವೂ ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
(154) ಮೂಸಾರ ಕೋಪವು ತಣ್ಣಗಾದಾಗ ಅವರು (ದಿವ್ಯಸಂದೇಶವಿರುವ) ಹಲಗೆಗಳನ್ನು ಎತ್ತಿದರು. ಅದರಲ್ಲಿರುವ ಉಲ್ಲೇಖಗಳಲ್ಲಿ ತಮ್ಮ ರಬ್ಬನ್ನು ಭಯಪಡುವ ಜನರಿಗೆ ಮಾರ್ಗದರ್ಶನವೂ, ಕಾರುಣ್ಯವೂ ಇತ್ತು.
(155) ನಮ್ಮ ನಿಶ್ಚಿತ ಸಮಯಕ್ಕಾಗಿ ಮೂಸಾ ತನ್ನ ಜನರ ಪೈಕಿ ಎಪ್ಪತ್ತು ಪುರುಷರನ್ನು ಆರಿಸಿದರು. ತರುವಾಯ ಭೀಕರವಾದ ಕಂಪನವು ಅವರನ್ನು ಹಿಡಿದಾಗ ಅವರು (ಮೂಸಾ) ಹೇಳಿದರು:(240) ‘ನನ್ನ ಪ್ರಭೂ! ನೀನು ಇಚ್ಛಿಸಿದ್ದರೆ ಇದಕ್ಕಿಂತ ಮುಂಚೆಯೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಾಗಿತ್ತು. ನಮ್ಮ ಪೈಕಿ ಮೂರ್ಖರು ಮಾಡಿದ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಲ್ಲದೆ ಇನ್ನೇನೂ ಅಲ್ಲ. ಇದರ ಮೂಲಕ ನೀನಿಚ್ಛಿಸುವವರನ್ನು ನೀನು ಪಥಭ್ರಷ್ಟಗೊಳಿಸುವೆ ಮತ್ತು ನೀನಿಚ್ಛಿಸುವವರನ್ನು ನೀನು ಸನ್ಮಾರ್ಗದಲ್ಲಿ ಸೇರಿಸುವೆ. ನೀನು ನಮ್ಮ ರಕ್ಷಕನಾಗಿರುವೆ. ಆದ್ದರಿಂದ ನಮಗೆ ಕ್ಷಮೆ ನೀಡು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನು ಕ್ಷಮಿಸುವವರಲ್ಲಿ ಉತ್ತಮನಾಗಿರುವೆ.
240. ಸೀನಾ ಪರ್ವತದಲ್ಲಿ ನಿರ್ದಿಷ್ಟ ದಿನಗಳನ್ನು ಆರಾಧನಾ ಮಗ್ನರಾಗಿ ಕಳೆಯಲು ಹೊರಡುವಾಗ ವಿಶೇಷವಾಗಿ ಆರಿಸಲ್ಪಟ್ಟ 70 ಜನರನ್ನು ಮೂಸಾ(ಅ) ರವರು ತಮ್ಮೊಂದಿಗೆ ಕರೆದೊಯ್ದಿದ್ದರು. ಕಂಪನಕ್ಕೊಳಗಾದವರು ಅವರೇ ಆಗಿದ್ದರು. ಅನೇಕ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಈ ಘಟನೆಯು ಜರುಗಿದ್ದು ಅವರು ಕರುವನ್ನು ಆರಾಧ್ಯಮೂರ್ತಿಯನ್ನಾಗಿ ಮಾಡಿಕೊಂಡ ನಂತರವಾಗಿತ್ತು.
(156) ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ನೀನು ಒಳಿತನ್ನು ದಾಖಲಿಸು (ಅಥವಾ ವಿಧಿಸು). ಖಂಡಿತವಾಗಿಯೂ ನಾವು ನಿನ್ನೆಡೆಗೆ ಮರಳಿರುವೆವು’. ಅವನು (ಅಲ್ಲಾಹು) ಹೇಳಿದನು: ‘ನಾನು ಇಚ್ಛಿಸುವವರನ್ನು ನಾನು ನನ್ನ ಶಿಕ್ಷೆಯಿಂದ ದಂಡಿಸುವೆನು. ನನ್ನ ಕಾರುಣ್ಯವು ಸರ್ವ ವಸ್ತುಗಳನ್ನೂ ಆವರಿಸಿಕೊಂಡಿದೆ.(241) ಭಯಭಕ್ತಿ ಪಾಲಿಸುತ್ತಲೂ, ಝಕಾತ್ ನೀಡುತ್ತಲೂ ಮತ್ತು ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುತ್ತಲೂ ಇರುವ ಜನರಿಗೆ ನಾನು ಅದನ್ನು (ಕಾರುಣ್ಯವನ್ನು) ವಿಧಿಸುವೆನು.’(242)
241. ದುಷ್ಟರನ್ನು ಶಿಕ್ಷಿಸುವುದು ಕರುಣೆಗೆ ವಿರುದ್ಧವಲ್ಲ. ಮಕ್ಕಳನ್ನು ಒಳ್ಳೆಯವರನ್ನಾಗಿ ಬೆಳೆಸಲು ಇಚ್ಛಿಸುವ ತಂದೆ ಮತ್ತು ವಿದ್ಯಾರ್ಥಿಗಳನ್ನು ಶಿಸ್ತಿನೊಂದಿಗೆ ಬೆಳೆಸಲು ಇಚ್ಛಿಸುವ ಶಿಕ್ಷಕರು ಶಿಕ್ಷಾಕ್ರಮಗಳನ್ನು ಕೈಗೊಳ್ಳುವುದು ಸಹಜ. ಅದು ಅವರಲ್ಲಿರುವ ಕರುಣೆಗೆ ವಿರುದ್ಧವಾಗಿದೆಯೆಂದು ಬುದ್ಧಿಯಿರುವ ಯಾರೂ ಹೇಳಲಾರರು.
242. ಪರಲೋಕದಲ್ಲಿ ಅಲ್ಲಾಹುವಿನ ಕರುಣೆಯು ಸತ್ಯವಿಶ್ವಾಸಿಗಳಾದ ಸಜ್ಜನರಿಗೆ ಮಾತ್ರವಿರುವುದಾಗಿದೆ.
(157) (ಅಂದರೆ) ತಮ್ಮ ಬಳಿಯಿರುವ ತೌರಾತ್‍ನಲ್ಲಿ ಮತ್ತು ಇಂಜೀಲ್‍ನಲ್ಲಿ ದಾಖಲಿಸಲ್ಪಟ್ಟಿರುವುದಾಗಿ ಅವರು ಕಾಣುವ(243) ನಿರಕ್ಷರಿ ಪ್ರವಾದಿಯಾದ ಸಂದೇಶವಾಹಕರನ್ನು (ಪ್ರವಾದಿ ಮುಹಮ್ಮದ್‍ರನ್ನು) ಅನುಸರಿಸುವವರಿಗೆ (ಆ ಕಾರುಣ್ಯವನ್ನು ನಾನು ವಿಧಿಸುವೆನು). ಆ ಪ್ರವಾದಿಯು ಅವರೊಂದಿಗೆ ಸದಾಚಾರವನ್ನು ಆದೇಶಿಸುವರು ಮತ್ತು ದುರಾಚಾರವನ್ನು ವಿರೋಧಿಸುವರು. ಅವರಿಗೆ ಉತ್ತಮ ವಸ್ತುಗಳನ್ನು ಧರ್ಮಸಮ್ಮತಗೊಳಿಸುವರು ಮತ್ತು ಕೆಟ್ಟ ವಸ್ತುಗಳನ್ನು ಅವರ ಮೇಲೆ ನಿಷಿದ್ಧಗೊಳಿಸುವರು. ಅವರ ಭಾರಗಳನ್ನು ಮತ್ತು ಅವರ ಮೇಲಿದ್ದ ಸಂಕೋಲೆಗಳನ್ನು ಕೆಳಗಿಳಿಸುವರು.(244) ಆದ್ದರಿಂದ ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಬೆಂಬಲಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣಗೊಂಡಿರುವ ಪ್ರಕಾಶವನ್ನು ಅನುಸರಿಸುವವರು ಯಾರೋ ಅವರೇ ಯಶಸ್ವಿಯಾದವರಾಗಿರುವರು.
243. ಬೈಬಲ್‍ನ ಯೋಹಾನನ ಸುವಾರ್ತೆಯ ಒಂದನೇ ಅಧ್ಯಾಯದಲ್ಲಿ ಪ್ಯಾರಕ್ಲೀಟ್‍ನ ಆಗಮನದ ಕುರಿತು ಭವಿಷ್ಯ ಹೇಳಲಾಗಿದೆ. ಹೀಬ್ರೂ ಭಾಷೆಯಲ್ಲಿರುವ ಪ್ಯಾರಕ್ಲೀಟ್ ಮತ್ತು ಅರಬಿ ಭಾಷೆಯಲ್ಲಿರುವ ಮುಹಮ್ಮದ್ ಎಂಬ ಪದದ ಅರ್ಥವು ಒಂದೇ ಆಗಿದೆ.
244. ಬನೀ ಇಸ್ರಾಈಲರ ಧಿಕ್ಕಾರ ನಿಮಿತ್ತ ಅಲ್ಲಾಹು ಅವರ ಮೇಲೆ ಕೆಲವು ವಿಶೇಷ ನಿಷೇಧಗಳನ್ನು -ಶನಿವಾರ ಲೌಕಿಕ ಕಾರ್ಯಗಳಲ್ಲಿ ನಿರತನಾಗುವುದರ ಮೇಲೆ, ಕೆಲವು ಬಗೆಯ ಮಾಂಸಗಳನ್ನು ತಿನ್ನುವುದರ ಮೇಲಿದ್ದ ನಿಷೇಧ ಇತ್ಯಾದಿ- ಹೇರಿದ್ದನು. ಪ್ರವಾದಿ ಮುಹಮ್ಮದ್(ಸ) ರವರ ಮೂಲಕ ಅವನು ಇವುಗಳನ್ನು ತೆರವುಗೊಳಿಸಿದನು.
(158) ಹೇಳಿರಿ: ‘ಓ ಮನುಷ್ಯರೇ! ಖಂಡಿತವಾಗಿಯೂ ನಾನು ನಿಮ್ಮೆಲ್ಲರೆಡೆಗೆ (ಕಳುಹಿಸಲಾಗಿರುವ) ಅಲ್ಲಾಹುವಿನ ಸಂದೇಶವಾಹಕನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಯಾರಿಗಾಗಿದೆಯೋ ಅವನ (ಸಂದೇಶವಾಹಕನು). ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಜೀವವನ್ನು ನೀಡುವವನೂ ಮೃತಪಡಿಸುವವನೂ ಆಗಿರುವನು. ಆದ್ದರಿಂದ ನೀವು ಅಲ್ಲಾಹುವಿನಲ್ಲೂ, ಅವನ ಸಂದೇಶವಾಹಕರಲ್ಲೂ, ಅಂದರೆ ಅಲ್ಲಾಹುವಿನಲ್ಲಿ ಮತ್ತು ಅವನ ಸೂಕ್ತಿಗಳಲ್ಲಿ ವಿಶ್ವಾಸವಿಡುವ ನಿರಕ್ಷರಿಯಾದ ಆ ಪ್ರವಾದಿಯಲ್ಲೂ ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗವನ್ನು ಪಡೆಯಲೂಬಹುದು.
(159) ಮೂಸಾರ ಜನತೆಯಲ್ಲಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದನ್ನು ಅನುಸರಿಸಿ ನ್ಯಾಯಪಾಲಿಸುವ ಒಂದು ಪಂಗಡವಿದೆ.
(160) ನಾವು ಅವರನ್ನು ಹನ್ನೆರಡು ಜನಾಂಗಗಳನ್ನಾಗಿ ಅಥವಾ ಸಮುದಾಯಗಳನ್ನಾಗಿ ವಿಂಗಡಿಸಿದೆವು. ಮೂಸಾರೊಂದಿಗೆ ಅವರ ಜನತೆಯು ನೀರನ್ನು ಬೇಡಿದಾಗ, ‘ತಮ್ಮ ಬೆತ್ತದಿಂದ ಆ ಬಂಡೆಗಲ್ಲನ್ನು ಹೊಡೆಯಿರಿ’ ಎಂದು ನಾವು ಅವರಿಗೆ ದಿವ್ಯ ಸಂದೇಶವನ್ನು ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಎಲ್ಲ ಜನರೂ ತಮ್ಮ ಕುಡಿಯುವ ಸ್ಥಳವನ್ನು ಅರಿತುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು ಮತ್ತು ಮನ್ನಃ ಹಾಗೂ ಸಲ್ವಾಗಳನ್ನು ಇಳಿಸಿಕೊಟ್ಟೆವು. ‘ನಾವು ನಿಮಗೆ ನೀಡಿರುವ ಉತ್ತಮ ವಸ್ತುಗಳಿಂದ ತಿನ್ನಿರಿ’ (ಎಂದು ಅವರಿಗೆ ಆದೇಶವನ್ನು ನೀಡಿದೆವು). (ಅವರ ಧಿಕ್ಕಾರದ ನಿಮಿತ್ತ) ಅವರು ನಮಗೆ ಯಾವುದೇ ಅನ್ಯಾಯವನ್ನೂ ಮಾಡಿಲ್ಲ. ಆದರೆ ಅವರು ಅನ್ಯಾಯವೆಸಗುತ್ತಿರುವುದು ಸ್ವತಃ ಅವರೊಂದಿಗೇ ಆಗಿದೆ.
(161) ‘ನೀವು ಈ ನಾಡಿನಲ್ಲಿ ವಾಸಿಸಿರಿ. ಇಲ್ಲಿ ನೀವಿಚ್ಛಿಸುವಲ್ಲಿಂದ ತಿನ್ನಿರಿ. ನೀವು ಪಾಪಮುಕ್ತಿಗಾಗಿ ಪ್ರಾರ್ಥಿಸಿರಿ ಮತ್ತು ತಲೆಬಾಗಿದವರಾಗಿ ದ್ವಾರವನ್ನು ಪ್ರವೇಶಿಸಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು. ಸತ್ಕರ್ಮಿಗಳಿಗೆ ನಾವು ಹೆಚ್ಚು ಹೆಚ್ಚಾಗಿ ಕೊಡುವೆವು’ ಎಂದು ಅವರೊಂದಿಗೆ ಹೇಳಲಾದ ಸಂದರ್ಭ(ವನ್ನು ಸ್ಮರಿಸಿರಿ).
(162) ಆದರೆ ಅವರಲ್ಲಿದ್ದ ಅಕ್ರಮಿಗಳು ಅವರೊಂದಿಗೆ ಆದೇಶಿಸಲಾಗಿರುವುದಕ್ಕೆ ಬದಲಾಗಿ ಬೇರೆಯೇ ಮಾತನ್ನು ಹೇಳಿದರು. ಅವರು ಅಕ್ರಮವೆಸಗುತ್ತಿದ್ದುದರ ಫಲವಾಗಿ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಕಳುಹಿಸಿದೆವು.
(163) ಸಮುದ್ರ ತೀರದಲ್ಲಿದ್ದ ಆ ಪಟ್ಟಣದ ಬಗ್ಗೆ ಅವರೊಂದಿಗೆ ಕೇಳಿ ನೋಡಿರಿ. (ಅಂದರೆ) ಸಬ್ಬತ್ ದಿನ (ಶನಿವಾರ)ವನ್ನು ಆಚರಿಸುವುದರಲ್ಲಿ ಅವರು ಅತಿಕ್ರಮವೆಸಗಿದ ಸಂದರ್ಭದ ಬಗ್ಗೆ.(245) ಅವರ ಸಬ್ಬತ್ ದಿನದಂದು ಅವರಿಗೆ ಬೇಕಾದ ಮೀನುಗಳು ನೀರಿನ ಮೇಲೆ ತಲೆಯೆತ್ತುತ್ತಾ ಅವರೆಡೆಗೆ ಬರುತ್ತಿದ್ದ ಮತ್ತು ಅವರು ಸಬ್ಬತ್ ಆಚರಿಸಬೇಕಾಗಿಲ್ಲದ ದಿನದಂದು ಅವರೆಡೆಗೆ ಬಾರದಿರುತ್ತಿದ್ದ ಸಂದರ್ಭ. ಅವರು ಧಿಕ್ಕಾರ ತೋರಿರುವುದರ ಫಲವಾಗಿ ನಾವು ಅವರನ್ನು ಹೀಗೆ ಪರೀಕ್ಷಿಸಿದೆವು.
245. ಮೀನುಗಾರಿಕೆ ಸೇರಿದಂತೆ ಯಾವುದೇ ಉದ್ಯೋಗವನ್ನೂ ಶನಿವಾರದಂದು ಮಾಡಬಾರದೆಂಬ ನಿಷೇಧವು ಅವರ ಮೇಲಿತ್ತು. ಸಮುದ್ರದಲ್ಲಿ ಮೀನುಗಳು ಭಾರೀ ಪ್ರಮಾಣದಲ್ಲಿ ಕಾಣುತ್ತಿದ್ದುದು ಅದೇ ದಿನವಾಗಿತ್ತು. ಬೇರೆ ದಿನಗಳಲ್ಲಿ ಮೀನುಗಳೇ ಇರುತ್ತಿರಲಿಲ್ಲ. ಇದು ಅಲ್ಲಾಹುವಿನ ಪರೀಕ್ಷೆಯಾಗಿತ್ತು. ಅವರು ಆ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.
(164) ‘ಅಲ್ಲಾಹು ನಾಶ ಮಾಡಲಿರುವ ಅಥವಾ ಕಠಿಣವಾಗಿ ಶಿಕ್ಷಿಸಲಿರುವ ಒಂದು ಜನತೆಗೆ ನೀವೇಕೆ ಉಪದೇಶ ಮಾಡುತ್ತಿರುವಿರಿ’ ಎಂದು ಅವರ ಪೈಕಿ ಒಂದು ಸಮೂಹವು ಹೇಳಿದ ಸಂದರ್ಭ(ವನ್ನು ಗಮನಿಸಿರಿ). (246) ಅವರು ಹೇಳಿದರು: ‘ಇದು ನಿಮ್ಮ ರಬ್‌ನ ಬಳಿ (ನಾವು) ಅಪರಾಧದಿಂದ ಮುಕ್ತರಾಗುವ ಸಲುವಾಗಿದೆ. ಬಹುಶಃ ಅವರು ಭಯಭಕ್ತಿ ಪಾಲಿಸಲೂಬಹುದು’.
246. ಅವರ ಪೈಕಿ ಒಂದು ಗುಂಪು ಸಬ್ಬತ್‍ನ ಪಾವಿತ್ರ್ಯತೆಯನ್ನು ಉಲ್ಲಂಘಿಸಿ ಮೀನು ಹಿಡಿಯಲು ಹೊರಟಾಗ ಸತ್ಯವಿಶ್ವಾಸದಲ್ಲಿ ಅಚಲರಾಗಿದ್ದ ಮತ್ತೊಂದು ಗುಂಪು ಜನರು ಅವರಿಗೆ ಹಿತೋಪದೇಶ ನೀಡತೊಡಗಿದರು ಮತ್ತು ಅಲ್ಲಾಹುವಿನ ವಿಧಿ-ನಿಷೇಧಗಳನ್ನು ಉಲ್ಲಂಘಿಸುವುದರಲ್ಲಿರುವ ಅಪಾಯದ ಬಗ್ಗೆ ತಿಳಿಹೇಳಿದರು. ಇದು ನೈಜ ಸತ್ಯವಿಶ್ವಾಸಿಯ ಕರ್ತವ್ಯವೂ ಆಗಿದೆ. ಆದರೆ ವಿಶ್ವಾಸಿಗಳಲ್ಲಿ ಸೇರಿದ ಇನ್ನೊಂದು ಗುಂಪಿಗೆ ಈ ಉಪದೇಶವು ವ್ಯರ್ಥವಾಗಿ ಕಂಡಿತು. ಅಪರಾಧಿಗಳನ್ನು ಅಲ್ಲಾಹು ಶಿಕ್ಷಿಸುತ್ತಾನಲ್ಲವೇ? ಹಾಗಿರುವಾಗ ನಾವೇಕೆ ಅದರಲ್ಲಿ ಮಧ್ಯಪ್ರವೇಶ ಮಾಡಬೇಕು? ಎಂಬುದಾಗಿತ್ತು ಅವರ ನಿಲುವು. ವಾಸ್ತವಿಕವಾಗಿ ಇದು ಹೇಡಿಗಳ ನಿಲುವಾಗಿದೆ. ಅಪರಾಧಿಗಳನ್ನು ತಿದ್ದಲು ಯತ್ನಿಸುವವರಿಗೆ ಅಲ್ಲಾಹು ರಕ್ಷಣೆಯ ವಾಗ್ದಾನವಿತ್ತಿರುವನು.
(165) ಆದರೆ ಅವರಿಗೆ ನೆನಪಿಸಿಕೊಡಲಾಗಿರುವುದನ್ನು ಅವರು ಮರೆತು ಬಿಟ್ಟಾಗ, ದುಷ್ಕೃತ್ಯವನ್ನು ವಿರೋಧಿಸಿದವರಾರೋ ಅವರನ್ನು ನಾವು ರಕ್ಷಿಸಿದೆವು. ಅಕ್ರಮಿಗಳಾದ ಜನರನ್ನು ಅವರು ಧಿಕ್ಕಾರ ತೋರಿರುವುದರ ಫಲವಾಗಿ ನಾವು ಕಠಿಣವಾದ ಶಿಕ್ಷೆಯ ಮೂಲಕ ಹಿಡಿದೆವು.
(166) ಅವರಿಗೆ ವಿರೋಧಿಸಲಾಗಿರುವ ವಿಷಯಗಳಲ್ಲೆಲ್ಲ ಅವರು ಧಿಕ್ಕಾರವನ್ನು ತೋರಿದಾಗ ನಾವು ಅವರೊಂದಿಗೆ ಹೇಳಿದೆವು: ‘ನೀವು ನಿಕೃಷ್ಟರಾದ ಕಪಿಗಳಾಗಿರಿ’.
(167) ಅವರ (ಇಸ್ರಾಈಲರ) ಮೇಲೆ ಪುನರುತ್ಥಾನ ದಿನದವರೆಗೆ ಅವರಿಗೆ ಹೀನ ಶಿಕ್ಷೆ ನೀಡುತ್ತಿರುವವರನ್ನು ಕಳುಹಿಸಿಯೇ ತೀರುವೆನೆಂದು ತಮ್ಮ ರಬ್ ಘೋಷಿಸಿದ ಸಂದರ್ಭ(ವನ್ನು ಸ್ಮರಿಸಿರಿ).(247) ಖಂಡಿತವಾಗಿಯೂ ತಮ್ಮ ರಬ್ ಅತಿವೇಗವಾಗಿ ಶಿಕ್ಷೆ ನೀಡುವವನಾಗಿರುವನು. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
247. ಧಿಕ್ಕಾರ, ದುಷ್ಟಕೃತ್ಯ, ಪಿತೂರಿ ಮುಂತಾದವುಗಳನ್ನು ವರ್ಜಿಸಿ ನೆಮ್ಮದಿಯ ಜೀವನವನ್ನು ಸಾಗಿಸುವ ಅಭ್ಯಾಸವು ಯಹೂದರಿಗೆ ಹೆಚ್ಚಿನ ಸಂದರ್ಭಗಳಲ್ಲೂ ಇರಲಿಲ್ಲ. ಆದ್ದರಿಂದಲೇ ಅನೇಕ ಸಂದರ್ಭಗಳಲ್ಲಿ ಅವರು ಇತರ ಜನಾಂಗಗಳ ಆಕ್ರಮಣ ಮತ್ತು ದೌರ್ಜನ್ಯಗಳಿಗೆ ಬಲಿಯಾಗುತ್ತಲೇ ಇದ್ದರು.
(168) ನಾವು ಅವರನ್ನು ಭೂಮಿಯಲ್ಲಿ ಹಲವು ಜನ ಸಮೂಹಗಳನ್ನಾಗಿ ವಿಂಗಡಿಸಿದೆವು. ಅವರ ಪೈಕಿ ಸಜ್ಜನರಿರುವರು. ಅದಕ್ಕಿಂತ ಕೆಳಮಟ್ಟದವರೂ ಅವರಲ್ಲಿರುವರು. ಅವರು ಮರಳಿ ಬರುವ ಸಲುವಾಗಿ ನಾವು ಅವರನ್ನು ಒಳಿತುಗಳಿಂದಲೂ ಕೆಡುಕುಗಳಿಂದಲೂ ಪರೀಕ್ಷಿಸಿದೆವು.
(169) ತರುವಾಯ ಅವರ ಬಳಿಕ ಅವರ ಉತ್ತರಾಧಿಕಾರಿಗಳಾಗಿ ಒಂದು ತಲೆಮಾರು ಬಂದಿತು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಈ ತುಚ್ಛವಾದ ಜೀವನದ ಸವಲತ್ತುಗಳನ್ನು ಪಡೆಯುತ್ತಿರುವರು.(248) ‘ನಮಗೆ ಅದೆಲ್ಲವೂ ಕ್ಷಮಿಸಲ್ಪಡುವುದು’ ಎಂದವರು ಹೇಳುವರು. ಅಂತಹ ಬೇರೆ ಸವಲತ್ತುಗಳು ಬಂದರೂ ಅವರದನ್ನು ಪಡೆಯುವರು.(249) ಅಲ್ಲಾಹುವಿನ ಮೇಲೆ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಲಾರೆವು ಎಂದು ಗ್ರಂಥದ ಮೂಲಕ ಅವರಿಂದ ಕರಾರನ್ನು ಪಡೆಯಲಾಗಿಲ್ಲವೇ? ಅದರಲ್ಲಿರುವುದನ್ನು ಅವರು ಅಧ್ಯಯನ ಮಾಡಿಲ್ಲವೇ? ಭಯಭಕ್ತಿ ಪಾಲಿಸುವವರಿಗೆ ಪರಲೋಕ ಜೀವನವೇ ಉತ್ತಮವಾಗಿದೆ. ನೀವು ಚಿಂತಿಸಿ ಗ್ರಹಿಸಲಾರಿರೇ?
248. ಇಲ್ಲಿ ಸೂಚಿಸಿರುವುದು ಅವರು ಭ್ರಷ್ಟಾಚಾರದ ಮೂಲಕ ಮತ್ತು ಧರ್ಮನಿಯಮಗಳನ್ನು ಮರೆಮಾಚುವ ಮೂಲಕ ಗಳಿಸಿಕೊಂಡಿದ್ದ ತುಚ್ಛವಾದ ಐಹಿಕ ಸಂಪಾದನೆಯನ್ನಾಗಿದೆ.
249. ಹೃದಯವನ್ನು ಸ್ಪರ್ಶಿಸದ ಪಶ್ಚಾತ್ತಾಪ ವಚನಗಳಿಂದಲೂ ಪಾಪಗಳು ಮನ್ನಿಸಲ್ಪಡುವುದೆಂದು ಅವರು ಭಾವಿಸಿದ್ದರು. ಅವರು ಸ್ವತಃ ತಮ್ಮನ್ನು ಅಲ್ಲಾಹುವಿನ ಅಚ್ಚುಮೆಚ್ಚಿನ ಸಮುದಾಯವಾಗಿದ್ದೇವೆ ಎಂದು ಪರಿಗಣಿಸಿದ್ದರು. ಭ್ರಷ್ಟಾಚಾರವು ಅಪರಾಧವಾಗಿದೆಯೆಂದು ಮನವರಿಕೆಯಾಗಿ ಅವರು ಪಶ್ಚಾತ್ತಾಪಪಟ್ಟ ಬಳಿಕವೂ ಲಂಚ ಸಿಗುವುದಾದರೆ ಅದನ್ನು ಪಡೆಯಲು ಅವರು ನಾಚುತ್ತಿರಲಿಲ್ಲ.
(170) ಗ್ರಂಥವನ್ನು ಬಿಗಿಯಾಗಿ ಹಿಡಿಯುವವರು ಮತ್ತು ನಮಾಝನ್ನು ಸಂಸ್ಥಾಪಿಸುವವರು ಯಾರೋ ಅಂತಹ ಸತ್ಕರ್ಮಿಗಳ ಪ್ರತಿಫಲವನ್ನು ನಾವು ಖಂಡಿತವಾಗಿಯೂ ವ್ಯರ್ಥಗೊಳಿಸಲಾರೆವು.
(171) ನಾವು ಪರ್ವತವನ್ನು ಅವರ ಮೇಲೆ ಒಂದು ಕೊಡೆಯೆಂಬಂತೆ ಎತ್ತಿಹಿಡಿದ ಮತ್ತು ಅದು ಅವರ ಮೇಲೆ ಬೀಳುವುದೆಂದು ಅವರಿಗೆ ಖಾತ್ರಿಯಾದ ಸಂದರ್ಭವನ್ನು ಸ್ಮರಿಸಿರಿ. (ನಾವು ಹೇಳಿದೆವು): ‘ನಾವು ನಿಮಗೆ ನೀಡಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಅದರಲ್ಲಿರುವುದನ್ನು ಸ್ಮರಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗಲೂ ಬಹುದು’.
(172) ತಮ್ಮ ರಬ್ ಆದಮ್‍ರ ಸಂತತಿಗಳಿಂದ, ಅವರ ಬೆನ್ನುಗಳಿಂದ ಅವರ ಸಂತತಿಗಳನ್ನು ಹೊರತೆಗೆದು, ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿಯಾಗಿ ನಿಲ್ಲಿಸಿದ ಸಂದರ್ಭ(ವನ್ನು ಸ್ಮರಿಸಿರಿ). (ಅವನು ಕೇಳಿದನು): ‘ನಾನು ನಿಮ್ಮ ರಬ್ ಅಲ್ಲವೇ?’ ಅವರು ಹೇಳಿದರು: ‘ಹೌದು, ನಾವು ಸಾಕ್ಷ್ಯ ವಹಿಸಿರುವೆವು’(250) ‘ಖಂಡಿತವಾಗಿಯೂ ನಾವು ಇದರ ಬಗ್ಗೆ ಅಲಕ್ಷ್ಯರಾಗಿದ್ದೆವು’ ಎಂದು ಪುನರುತ್ಥಾನ ದಿನದಂದು ನೀವು ಹೇಳುವಿರಿ ಎಂಬುದರಿಂದ (ಹೀಗೆ ಮಾಡಲಾಯಿತು).
250. ಇಲ್ಲಿ ಹೇಳಲಾಗಿರುವುದು ಮನುಷ್ಯ ಪ್ರಕೃತಿಯಲ್ಲಿ ಒಳಗೊಂಡಿರುವ ಸತ್ಯಸಾಕ್ಷ್ಯದ ಬಗ್ಗೆಯಾಗಿದೆ. ತಾನು ಹೇಗೋ ಉಂಟಾದವನಲ್ಲ, ಬದಲಾಗಿ ಸರ್ವಜ್ಞನೂ ಸರ್ವಶಕ್ತನೂ ಆಗಿರುವ ಸೃಷ್ಟಿಕರ್ತನು ತನ್ನನ್ನು ವಿಸ್ಮಯಕರವಾದ ರೀತಿಯಲ್ಲಿ ಸೃಷ್ಟಿಸಿರುವನೆಂದು ವಿಕಲ ಮನಸ್ಸನ್ನು ಹೊಂದಿರದ ಯಾವುದೇ ವ್ಯಕ್ತಿಯೂ ಒಪ್ಪಿಕೊಳ್ಳುವನು. ತಂದೆಯ ಬೆನ್ನಿನ ಭಾಗದಲ್ಲಿ ರೂಪುಗೊಳ್ಳುವ ಪುರುಷ ಬೀಜದ ಮೂಲಕ, ಪ್ರತ್ಯುತ್ಪಾದನಾ ಕೋಶದ ಮೂಲಕ ಬೆಳೆದು ತಲೆಮಾರು ತಲೆಮಾರುಗಳಾಗಿ ಭೂಮಿಯಲ್ಲಿ ನಾಯಕತ್ವವನ್ನು ವಹಿಸುತ್ತಿರುವ ಮನುಷ್ಯನು ತನ್ನ ಅಸ್ತಿತ್ವದ ಬಗ್ಗೆ ಮಾಡುವ ಯಾವುದೇ ಪ್ರಾಮಾಣಿಕ ಅನ್ವೇಷಣೆಯು ಅವನನ್ನು ದೇವವಿಶ್ವಾಸದೆಡೆಗೆ ಒಯ್ಯದಿರಲಾರದು.
(173) ಅಥವಾ ‘ಇದಕ್ಕಿಂತ ಮುಂಚೆಯೇ ನಮ್ಮ ಪೂರ್ವಿಕರು ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡಿದ್ದರು. ನಾವು ಅವರ ನಂತರ ಸಂತತಿಗಳಾಗಿ ಬಂದವರು ಮಾತ್ರವಾಗಿರುವೆವು. ಹೀಗಿರುವಾಗ ಆ ಅಸತ್ಯವಾದಿಗಳು ಮಾಡಿರುವುದರ ನಿಮಿತ್ತ ನೀನು ನಮ್ಮನ್ನು ನಾಶ ಮಾಡುವೆಯಾ?’ ಎಂದು ನೀವು ಹೇಳುವಿರಿ ಎಂಬುದರಿಂದ (ಹೀಗೆ ಮಾಡಲಾಯಿತು).(251)
251. ಅಲ್ಲಾಹುವಿನ ಅಸ್ತಿತ್ವ ಮತ್ತು ಏಕತ್ವವು ತನಗೆ ಸಂಪೂರ್ಣ ಅಪರಿಚಿತವಾಗಿತ್ತು ಎಂದು ತನ್ನ ಮನಃಸ್ಸಾಕ್ಷಿಯನ್ನು ವಂಚಿಸುವ ಮೂಲಕವಲ್ಲದೆ ಅಲ್ಲಾಹುವಿನ ಮುಂದೆ ಹೇಳಲು ಯಾರಿಗೂ ಸಾಧ್ಯವಾಗಲಾರದು.
(174) ನಾವು ಹೀಗೆ ದೃಷ್ಟಾಂತಗಳನ್ನು ವಿವರಿಸಿಕೊಡುವೆವು. ಅವರು ಮರಳಲೂ ಬಹುದು.
(175) ಅವರಿಗೆ ಒಬ್ಬನ ವೃತ್ತಾಂತವನ್ನು ಓದಿಕೊಡಿರಿ. ನಾವು ಅವನಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದೆವು. ಆದರೆ ಅವನು ಅದರಿಂದ ಕಳಚಿಕೊಂಡನು. ತರುವಾಯ ಸೈತಾನನು ಅವನನ್ನು ಹಿಂಬಾಲಿಸಿದನು. ಕೊನೆಗೆ ಅವನು ದುರ್ಮಾರ್ಗಿಗಳ ಪೈಕಿ ಸೇರಿದವನಾದನು.
(176) ನಾವು ಇಚ್ಛಿಸುತ್ತಿದ್ದರೆ ಅದರಿಂದಾಗಿ (ದೃಷ್ಟಾಂತಗಳಿಂದಾಗಿ) ನಾವು ಅವನನ್ನು ಉನ್ನತಗೊಳಿಸುತ್ತಿದ್ದೆವು. ಆದರೆ ಅವನು ಭೂಮಿಯೆಡೆಗೆ (ಅದು ಶಾಶ್ವತವೆಂಬ ಭಾವನೆಯಲ್ಲಿ) ತಿರುಗಿ ತನ್ನ ದೇಹೇಚ್ಛೆಯನ್ನು ಅನುಸರಿಸಿದನು.(252) ಆದ್ದರಿಂದ ಅವನ ಉಪಮೆಯು ಒಂದು ನಾಯಿಯಂತಿದೆ. ತಾವು ಅದನ್ನು ಅಟ್ಟಿದರೆ ಅದು ನಾಲಗೆಯನ್ನು ಹೊರಚಾಚುವುದು. ತಾವು ಅದನ್ನು ಅದರ ಪಾಡಿಗೆ ಬಿಟ್ಟರೂ ಅದು ನಾಲಗೆಯನ್ನು ಹೊರಚಾಚುವುದು.(253) ಇದು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ ಜನತೆಯ ಉಪಮೆಯಾಗಿದೆ. (ಅವರಿಗೆ) ಈ ಕಥೆಯನ್ನು ವಿವರಿಸಿಕೊಡಿರಿ. ಅವರು ಆಲೋಚಿಸಲೂ ಬಹುದು.
252. ಇಲ್ಲಿ ಸೂಚಿಸಿರುವುದು ಬನೀ ಇಸ್ರಾಈಲರಲ್ಲಿದ್ದ ಓರ್ವ ಧಾರ್ಮಿಕ ವಿದ್ವಾಂಸನ ಕುರಿತಾಗಿದೆ. ಗ್ರಂಥದಲ್ಲಿ ನೈಪುಣ್ಯತೆಯನ್ನು ಪಡೆದ ಬಳಿಕವೂ ಆತ ಐಹಿಕ ಲಾಭಗಳೆಡೆಗೆ ಆಕರ್ಷಿತನಾಗಿ ಅವಿಶ್ವಾಸ ಮತ್ತು ಅನೈತಿಕತೆಗಳೆಡೆಗೆ ವಾಲಿಬಿಟ್ಟನು.
253. ಉಪದೇಶ ಮಾಡಿದರೂ ಮಾಡದಿದ್ದರೂ ಭೌತಿಕ ವಿಷಯಗಳೊಂದಿಗೆ ಆತನಿಗಿರುವ ದುರಾಸೆಯಲ್ಲಿ ಯಾವುದೇ ಬದಲಾವಣೆ ಸಂಭವಿಸದು. ನಾಲಗೆಯನ್ನು ಹೊರಚಾಚಿ ಏದುಸಿರು ಬಿಡುತ್ತಾ ಓಡುವ ನಾಯಿಯಂತೆ ಐಹಿಕ ಸುಖಗಳ ಹಿಂದೆ ಆಸೆಯೊಂದಿಗೆ ಓಡುವ ತನ್ನ ನಿಲುವನ್ನು ಅವನು ಮುಂದುವರಿಸುವನು.
(177) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದ ಮತ್ತು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗಿದ ಜನತೆಯ ಉಪಮೆಯು ಬಹಳ ನಿಕೃಷ್ಟವಾಗಿದೆ.
(178) ಅಲ್ಲಾಹು ಯಾರನ್ನು ಸನ್ಮಾರ್ಗದಲ್ಲಿ ಸೇರಿಸುವನೋ ಅವನೇ ಸನ್ಮಾರ್ಗ ಪಡೆಯುವವನಾಗಿರುವನು. ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರೇ ನಷ್ಟಹೊಂದಿದವರಾಗಿರುವರು.
(179) ಜಿನ್ನ್(254) ಮತ್ತು ಮನುಷ್ಯರಲ್ಲಿ ಸೇರಿದ ಅನೇಕ ಮಂದಿಯನ್ನು ನಾವು ನರಕಕ್ಕಾಗಿ ಸೃಷ್ಟಿಸಿರುವೆವು. ಅವರಿಗೆ ಹೃದಯಗಳಿವೆ; ಅದರಿಂದ ಅವರು ಚಿಂತಿಸಿ ಗ್ರಹಿಸಲಾರರು. ಅವರಿಗೆ ಕಣ್ಣುಗಳಿವೆ; ಅದನ್ನು ಬಳಸಿ ಅವರು ನೋಡಿ ತಿಳಿಯಲಾರರು. ಅವರಿಗೆ ಕಿವಿಗಳಿವೆ; ಅದನ್ನು ಬಳಸಿ ಅವರು ಕೇಳಿ ಅರ್ಥ ಮಾಡಿಕೊಳ್ಳಲಾರರು. ಅವರು ಜಾನುವಾರುಗಳಂತಿರುವರು. ಅಲ್ಲ, ಅವರೇ ಹೆಚ್ಚು ದಾರಿಗೆಟ್ಟವರು. ಅಲಕ್ಷ್ಯರಾಗಿರುವವರು ಅವರೇ ಆಗಿರುವರು.(255)
254. ಜಿನ್ನ್ ಎಂಬುದು ವಿವೇಚನಾ ಶಕ್ತಿಯಿರುವ ಮತ್ತು ಅಲ್ಲಾಹುವಿನ ವಿಧಿ-ನಿಷೇಧಗಳನ್ನು ಪಾಲಿಸಲು ಬಾಧ್ಯಸ್ಥರಾಗಿರುವ ಪ್ರತ್ಯೇಕ ಸೃಷ್ಟಿಗಳಾಗಿದ್ದಾರೆ. ಅವರ ಅಸ್ತಿತ್ವವು ನಮ್ಮ ಕಣ್ಣುಗಳಿಗೆ ಗೋಚರವಲ್ಲವೆಂದು 7:27ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
255. ಸನ್ಮಾರ್ಗವನ್ನು ಕಂಡುಕೊಳ್ಳಲು ನೆರವಾಗುವ ವಿಶೇಷ ಸಾಮರ್ಥ್ಯಗಳನ್ನು ಅಲ್ಲಾಹು ಮನುಷ್ಯನಿಗೆ ನೀಡಿದ್ದಾನೆ. ಮನುಷ್ಯರು ಪಥಭ್ರಷ್ಟರಾಗುತ್ತಿರುವುದು ಅವುಗಳನ್ನು ಬಳಸದಿರುವ ಕಾರಣದಿಂದಾಗಿದೆ. ಆದ್ದರಿಂದ ಅವರು ಶಿಕ್ಷೆಗೆ ಅರ್ಹರಾಗುತ್ತಾರೆ. ಆಲಿಸಬಾರದು, ಓದಬಾರದು, ಚಿಂತಿಸಬಾರದು ಎಂದು ಹೇಳುವವರು ಒಂದೋ ಈ ಕುರ್‌ಆನ್ ಸೂಕ್ತಿಯನ್ನು ಗ್ರಹಿಸಿರಲಾರರು ಅಥವಾ ಅವರು ಅದನ್ನು ವಿಸ್ಮರಿಸಿರುವರು.
(180) ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ.(256) ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವರಾರೋ(257) ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು.
256. ಅಲ್ಲಾಹುವಿನ ಮಹತ್ವಪೂರ್ಣ ಗುಣವಿಶೇಷಣಗಳನ್ನು ತಿಳಿಸುವ ಅನೇಕ ನಾಮವಿಶೇಷಣಗಳು (ಉದಾ: ಅರ್‍ರಹ್ಮಾನ್, ಅರ್‍ರಹೀಮ್) ಕುರ್‌ಆನ್ ಮತ್ತು ಹದೀಸ್‍ಗಳಲ್ಲಿ ಬಂದಿವೆ. ಅಲ್ಲಾಹುವಿಗೆ 99 ಹೆಸರುಗಳಿವೆಯೆಂದು ಹದೀಸ್‍ನಲ್ಲಿ ಬಂದಿದ್ದರೂ ಅತ್ಯುತ್ತಮವಾದ ನಾಮಗಳ ಸಂಖ್ಯೆ ಪರಿಮಿತವಲ್ಲವೆಂದೂ ಇತರ ಹದೀಸ್‍ಗಳಿಂದ ಗ್ರಹಿಸಬಹುದಾಗಿದೆ. ಈ ನಾಮಗಳನ್ನು ಉಚ್ಛರಿಸಿ ಅವನನ್ನು ಸ್ತುತಿಸುವುದು ಮತ್ತು ಆ ಹೆಸರುಗಳ ಮೂಲಕ ಅವನೊಂದಿಗೆ ಪ್ರಾರ್ಥಿಸುವುದು ಮಹಾ ಪುಣ್ಯಕರ್ಮಗಳಾಗಿವೆ. 257. ಅಲ್ಲಾಹನ ನಾಮವಿಶೇಷಣಗಳನ್ನು ದುರ್ವ್ಯಾಖ್ಯಾನ ಮಾಡುವುದು, ದ್ವಂದ್ವಾರ್ಥವಿರುವ ಅಥವಾ ಕೆಟ್ಟ ಅರ್ಥಗಳನ್ನು ಹೊಂದಿರುವ ನಾಮಗಳನ್ನು ಅವನಿಗೆ ಬಳಸುವುದು, ಅವನ ಮಹತ್ತರ ನಾಮಗಳನ್ನು ಬೇರೆಯವರಿಗೆ ನೀಡುವುದು ಇತ್ಯಾದಿಗಳು ಇದರಲ್ಲಿ ಸೇರುತ್ತವೆ.
(181) ನಾವು ಸೃಷ್ಟಿಸಿದವರ ಪೈಕಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದನ್ನು ಅನುಸರಿಸಿ ನ್ಯಾಯಪಾಲಿಸುವ ಒಂದು ಸಮುದಾಯವಿದೆ.
(182) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರು ತಿಳಿಯದ ಹಾಗೆ ಅವರನ್ನು ನಾವು ಹಂತ ಹಂತವಾಗಿ ಹಿಡಿದುಕೊಳ್ಳುವೆವು.
(183) ಅವರಿಗೆ ನಾನು ಕಾಲಾವಕಾಶವನ್ನು ನೀಡುವೆನು. ಖಂಡಿತವಾಗಿಯೂ ನನ್ನ ತಂತ್ರವು ಬಲಿಷ್ಠವಾಗಿದೆ.
(184) ಅವರು ಚಿಂತಿಸಲಾರರೇ! ಅವರ ಜೊತೆಗಾರನಿಗೆ (ಮುಹಮ್ಮದ್‍ರಿಗೆ) ಯಾವುದೇ ಬುದ್ಧಿಭ್ರಮಣೆಯಿಲ್ಲ. ಅವರು ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿರುವರು.
(185) ಆಕಾಶಗಳ ಮತ್ತು ಭೂಮಿಯ ಆಧಿಪತ್ಯ ರಹಸ್ಯಗಳ ಬಗ್ಗೆ, ಅಲ್ಲಾಹು ಸೃಷ್ಟಿಸಿದ ಯಾವುದೇ ವಸ್ತುವಿನ ಬಗ್ಗೆ, ಅವರ ಅವಧಿಯು ಸಮೀಪಿಸಿರಬಹುದು ಎಂಬುದರ ಬಗ್ಗೆ ಅವರು ಚಿಂತಿಸಿ ನೋಡಲಾರರೇ? ಇದರ (ಕುರ್‌ಆನ್‍ನ) ಬಳಿಕ ಅವರು ಯಾವ ವೃತ್ತಾಂತದಲ್ಲಿ ವಿಶ್ವಾಸವಿಡುವರು?
(186) ಅಲ್ಲಾಹು ಯಾರನ್ನು ದಾರಿಗೆಡಿಸುವನೋ ಅವನನ್ನು ಸನ್ಮಾರ್ಗದಲ್ಲಿ ಸೇರಿಸುವವರು ಯಾರೂ ಇರಲಾರರು. ಅವನು (ಅಲ್ಲಾಹು) ಅವರನ್ನು ಅವರ ಧಿಕ್ಕಾರದಲ್ಲಿ ಅಂಧವಾಗಿ ವಿಹರಿಸಲು ಬಿಟ್ಟುಬಿಡುವನು.
(187) ಅಂತ್ಯ ಘಳಿಗೆಯ ಬಗ್ಗೆ ಅದು ಯಾವಾಗ ಬರುವುದೆಂದು ಅವರು ತಮ್ಮೊಂದಿಗೆ ಕೇಳುವರು. ತಾವು ಹೇಳಿರಿ: ‘ಅದರ ಜ್ಞಾನವಿರುವುದು ನನ್ನ ರಬ್‌ನ ಬಳಿ ಮಾತ್ರವಾಗಿದೆ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸಲಾರರು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದು ಭಾರವುಳ್ಳದ್ದಾಗಿದೆ.(258) ಅನಿರೀಕ್ಷಿತವಾಗಿಯೇ ವಿನಾ ಅದು ನಿಮ್ಮ ಬಳಿಗೆ ಬರಲಾರದು’. ತಾವು ಅದರ ಬಗ್ಗೆ ಸೂಕ್ಷ್ಮವಾಗಿ ಅರಿತಿರುವಿರಿ ಎಂಬ ಮಟ್ಟಿನಲ್ಲಿ ಅವರು ತಮ್ಮೊಂದಿಗೆ ಕೇಳುವರು. ತಾವು ಹೇಳಿರಿ: ‘ಅದರ ಜ್ಞಾನವಿರುವುದು ಅಲ್ಲಾಹುವಿನ ಬಳಿ ಮಾತ್ರವಾಗಿದೆ’. ಆದರೆ ಜನರ ಪೈಕಿ ಹೆಚ್ಚಿನವರು ಅರಿತುಕೊಳ್ಳಲಾರರು.
258. ಆಕಾಶ-ಭೂಮಿಗಳಲ್ಲಿರುವವರಿಗೆ ಅಂತ್ಯದಿನವೆಂಬುದು ಅತಿಭಯಂಕರವಾದ ಒಂದು ಅನುಭವವಾಗಿರುವುದು.
(188) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹು ಇಚ್ಛಿಸಿದ ಹೊರತು ಸ್ವತಃ ನನಗಾಗಿ ಯಾವುದೇ ಲಾಭವನ್ನಾಗಲಿ, ಹಾನಿಯನ್ನಾಗಲಿ ನಾನು ಅಧೀನದಲ್ಲಿಟ್ಟುಕೊಂಡಿಲ್ಲ. ನನಗೆ ಅಗೋಚರ ಜ್ಞಾನವಿರುತ್ತಿದ್ದರೆ ನಾನು ಹೇರಳ ಒಳಿತುಗಳನ್ನು ಮಾಡಿಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಿರಲಿಲ್ಲ.(259) ನಾನೊಬ್ಬ ಮುನ್ನೆಚ್ಚರಿಕೆ ನೀಡುವವನು ಮತ್ತು ವಿಶ್ವಾಸವಿಡುವ ಜನರಿಗೆ ಶುಭವಾರ್ತೆ ತಿಳಿಸುವವನು ಮಾತ್ರವಾಗಿರುವೆನು.
259. ಪ್ರವಾದಿಗಳಿಗೆ ಅವರು ಇಚ್ಛಿಸುವ ಸಮಯಗಳಲ್ಲಿ ಅಗೋಚರ ಜ್ಞಾನವು ಸಿಗಲಾರದು. ಆದರೆ ಅಲ್ಲಾಹು ತಾನಿಚ್ಛಿಸುವಾಗ ಮಾತ್ರ ತಿಳಿಸಿಕೊಡುವ ಸಂಗತಿಗಳ ಹೊರತು. ತಮ್ಮ ಪತ್ನಿ ಆಯಿಶಾ(ರ) ರವರ ಬಗ್ಗೆ ಸುಳ್ಳು ವದಂತಿ ಹರಡಿದಾಗ ಅದರ ನಿಜಾವಸ್ಥೆಯ ಅರಿವಿಲ್ಲದೆ ಪ್ರವಾದಿ(ಸ) ರವರು ದುಃಖಿಸಿದ ಘಟನೆಯು ಪ್ರಸಿದ್ಧವಾಗಿದೆ. ಪ್ರವಾದಿ ಮೂಸಾ(ಅ) ರಿಗೆ ತಮ್ಮ ಗೆಳೆಯನ ಕೃತ್ಯಗಳ ತಿರುಳು ಗ್ರಹಿಸಲು ಸಾಧ್ಯವಾಗಿಲ್ಲವೆಂದು ಸೂರ ಅಲ್‍ಕಹ್ಫ್‍ನಲ್ಲಿ ಹೇಳಲಾಗಿದೆ. ಓರ್ವ ವ್ಯಕ್ತಿಗೆ ಅಗೋಚರ ಜ್ಞಾನವು ಸಿಗುವುದಾದರೆ ಶತ್ರುಗಳು ಯಾರು, ಅವರು ಯಾವ ದಾರಿಯಲ್ಲಿ ಬಂದು ದಾಳಿ ಮಾಡುವರು, ಇತ್ಯಾದಿಗಳನ್ನು ಮುಂಗಡವಾಗಿ ಅರಿಯಬಹುದಾಗಿದೆ. ಅದೇ ರೀತಿ ಎಲ್ಲಿ ಅಪಾಯ ಸಂಭವಿಸಬಹುದು ಎಂಬುದನ್ನೂ ಅರಿಯಬಹುದು. ಇದರಿಂದಾಗಿ ಅನೇಕ ನಾಶನಷ್ಟಗಳನ್ನು ನಿವಾರಿಸಬಹುದಾಗಿದೆ. ಹಾಗೆಯೇ ಅನೇಕ ಲಾಭಗಳನ್ನೂ ಗಳಿಸಬಹುದಾಗಿದೆ. ಆದರೆ ಅಗೋಚರ ಜ್ಞಾನವು ಅಲ್ಲಾಹುವಿನ ಅಧೀನದಲ್ಲಿ ಮಾತ್ರವಿರುವುದಾಗಿದೆಯೆಂದು ಕುರ್‌ಆನ್ ಅನೇಕ ಕಡೆ ಅಸಂದಿಗ್ಧವಾಗಿ ಘೋಷಿಸಿದೆ. (3:179, 6:59, 10:20, 27:65)
(189) ನಿಮ್ಮನ್ನು ಒಂದೇ ಶರೀರದಿಂದ ಸೃಷ್ಟಿಸಿದವನು ಅವನಾಗಿರುವನು. ತರುವಾಯ ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು.(260) ಆಕೆಯೊಂದಿಗೆ ಸೇರಿ ಅವನು ಸಮಾಧಾನ ಪಡೆಯುವ ಸಲುವಾಗಿ. ತರುವಾಯ ಅವನು ಅವಳನ್ನು ಕೂಡಿಕೊಂಡಾಗ ಆಕೆ ಹಗುರವಾದ ಭಾರ (ಗರ್ಭ)ವನ್ನು ಹೊತ್ತಳು. ಬಳಿಕ ಅದರೊಂದಿಗೆ ನಡೆದಾಡಿದಳು. ತರುವಾಯ ಆಕೆಗೆ ಭಾರವು ಹೆಚ್ಚಾದಾಗ ಅವರಿಬ್ಬರೂ ಅವರ ರಬ್ಬಾದ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿದರು: ‘ನೀನು ನಮಗೊಂದು ಉತ್ತಮ ಸಂತತಿಯನ್ನು ನೀಡುವುದಾದರೆ ಖಂಡಿತವಾಗಿಯೂ ನಾವು ಕೃತಜ್ಞತೆ ಸಲ್ಲಿಸುವವರ ಪೈಕಿ ಸೇರುವೆವು’.
260. ಅಲ್ಲಾಹು ಆದಮ್‍ರನ್ನು ಸೃಷ್ಟಿಸಿದನು. ತರುವಾಯ ಅವರಿಂದ ಅವರ ಸಂಗಾತಿ ಹವ್ವಾರನ್ನು ಸೃಷ್ಟಿಸಿದನು. ತರುವಾಯ ಒಂದೇ ವರ್ಗದಿಂದಲೇ ಅವನು ಗಂಡು ಮತ್ತು ಹೆಣ್ಣುಗಳನ್ನು ಸೃಷ್ಟಿಸಿ ಪರಿಪಾಲಿಸುತ್ತಿರುವನು.
(190) ಅವನು (ಅಲ್ಲಾಹು) ಅವರಿಗೊಂದು ಉತ್ತಮ ಸಂತತಿಯನ್ನು ನೀಡಿದಾಗ, ಅವನು ಅವರಿಗೆ ನೀಡಿರುವುದರಲ್ಲಿ ಅವರು ಅವನಿಗೆ ಸಹಭಾಗಿಗಳನ್ನು ಮಾಡಿಕೊಂಡರು.(261) ಅವರು ಸಹಭಾಗಿತ್ವ ಮಾಡುವುದರಿಂದ ಅಲ್ಲಾಹು ಎಷ್ಟೋ ಉನ್ನತನಾಗಿರುವನು.
261. ಮನುಷ್ಯರ ಪೈಕಿ ಹೆಚ್ಚಿನವರ ಸ್ಥಿತಿ ಇದೇ ಆಗಿದೆ. ಅಲ್ಲಾಹುವಿನ ಅಪಾರವಾದ ಔದಾರ್ಯದಿಂದ ಅವರಿಗೆ ಮಕ್ಕಳುಂಟಾದರೆ ಅದನ್ನು ಅಲ್ಲಾಹುವಿನ ಅನುಗ್ರಹವಾಗಿ ಪರಿಗಣಿಸಿ ಕೃತಜ್ಞತೆ ಸಲ್ಲಿಸುವ ಬದಲಾಗಿ ಅವರದನ್ನು ಯಾವುದಾದರೂ ದೇವದೇವತೆಯರ ಅಥವಾ ಸಜ್ಜನರ ಪ್ರಸಾದವಾಗಿ ಪರಿಗಣಿಸುತ್ತಾರೆ. ತನ್ಮೂಲಕ ಅವರ ಮೇಲೆ ಹೊತ್ತಿರುವ ಹರಕೆಗಳನ್ನು ನೆರವೇರಿಸಲು ಧಾವಿಸುತ್ತಾರೆ. ಇದು ಅಕ್ಷಮ್ಯ ಅಪರಾಧವಾದ ಶಿರ್ಕ್ ಆಗಿದೆ.
(191) ಅವರೇ (ಆ ಆರಾಧ್ಯರೇ) ಸೃಷ್ಟಿಸಲ್ಪಟ್ಟವರಾಗಿರುವಾಗ ಏನನ್ನೂ ಸೃಷ್ಟಿಸದವರನ್ನು ಅವರು (ಅವನಿಗೆ) ಸಹಭಾಗಿಯನ್ನಾಗಿ ಮಾಡುವುದೇ?
(192) ಅವರಿಗೆ ಯಾವುದೇ ಸಹಾಯವನ್ನು ಮಾಡಲು ಅವರಿಗೆ (ಆ ಸಹಭಾಗಿಗಳಿಗೆ) ಸಾಧ್ಯವಾಗದು. ಸ್ವತಃ ತಮಗೇ ಸಹಾಯ ಮಾಡಲೂ ಅವರಿಂದಾಗದು.
(193) ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ ಅವರು ನಿಮ್ಮನ್ನು ಹಿಂಬಾಲಿಸಲಾರರು. ಅವರನ್ನು ಕರೆಯುವುದು ಅಥವಾ ಮೌನ ತಾಳುವುದು ಎರಡೂ ನಿಮ್ಮ ಪಾಲಿಗೆ ಸಮಾನವಾಗಿದೆ.
(194) ನೀವು ಅಲ್ಲಾಹುವಿನ ಹೊರತು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಖಂಡಿತವಾಗಿಯೂ ಅವರು ನಿಮ್ಮಂತಿರುವ ಸೃಷ್ಟಿಗಳು ಮಾತ್ರವಾಗಿರುವರು. ಅವರನ್ನು ಕರೆದು ಪ್ರಾರ್ಥಿಸಿರಿ; ಅವರು ನಿಮಗೆ ಉತ್ತರವನ್ನು ನೀಡಲಿ; ನೀವು ಸತ್ಯಸಂಧರಾಗಿದ್ದರೆ.
(195) ಅವರಿಗೆ ನಡೆಯಲು ಕಾಲುಗಳಿವೆಯೇ? ಅವರಿಗೆ ಹಿಡಿದುಕೊಳ್ಳಲು ಕೈಗಳಿವೆಯೇ? ಅವರಿಗೆ ನೋಡಲು ಕಣ್ಣುಗಳಿವೆಯೇ? ಅವರಿಗೆ ಆಲಿಸಲು ಕಿವಿಗಳಿವೆಯೇ? (ಓ ಪ್ರವಾದಿಯವರೇ!) ಹೇಳಿರಿ: ‘ನೀವು ನಿಮ್ಮ ಸಹಭಾಗಿಗಳನ್ನು ಕರೆದು ನನಗೆದುರಾಗಿ ಸಂಚು ಹೂಡಿರಿ. ನನಗೆ ಕಾಲಾವಕಾಶವನ್ನು ನೀಡದಿರಿ.(262)
262. ಅಲ್ಲಾಹುವಿನ ಹೊರತು ಯಾರಿಗೆಲ್ಲಾ ದಿವ್ಯತ್ವವನ್ನು ಕಲ್ಪಿಸಲಾಗುತ್ತದೋ ಅವರೆಲ್ಲರೂ ಅಸಹಾಯಕರಾಗಿರುವರು. ಅವರಿಗೆ ಯಾವುದೇ ಸಾಮರ್ಥ್ಯವೂ ಇಲ್ಲ. ಅವರೊಂದಿಗೆ ಪ್ರಾರ್ಥಿಸುವವರ ಮತ್ತು ಅವರ ಹೆಸರು ಹೇಳಿ ಜನರನ್ನು ಭಯಪಡಿಸುವವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
(196) ಖಂಡಿತವಾಗಿಯೂ ನನ್ನ ರಬ್ ಈ ಗ್ರಂಥವನ್ನು ಅವತೀರ್ಣಗೊಳಿಸಿದ ಅಲ್ಲಾಹುವಾಗಿರುವನು. ಅವನು ಸಜ್ಜನರ ಸಂರಕ್ಷಣೆಯನ್ನು ವಹಿಸಿರುವನು’.
(197) ನೀವು ಅವನ ಹೊರತು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ನಿಮಗೆ ಸಹಾಯ ಮಾಡಲು ಅವರಿಂದ ಸಾಧ್ಯವಾಗದು. ಸ್ವತಃ ಅವರಿಗೇ ಸಹಾಯ ಮಾಡಲೂ ಅವರಿಂದಾಗದು.
(198) ನೀವು ಅವರನ್ನು ಸನ್ಮಾರ್ಗದೆಡೆಗೆ ಕರೆದರೆ ಅವರು ಆಲಿಸಲಾರರು. ಅವರು ತಮ್ಮೆಡೆಗೆ ನೋಡುತ್ತಿರುವುದಾಗಿ ತಾವು ಕಾಣುವಿರಿ. ಆದರೆ ಅವರು ಕಾಣುವುದಿಲ್ಲ.(263)
263. ಇಲ್ಲಿ ಸೂಚಿಸಿರುವುದು ಕಣ್ತೆರೆದು ನೋಡುವಂತಹ ರೂಪದಲ್ಲಿರುವ ವಿಗ್ರಹಗಳ ಬಗ್ಗೆಯಿರಬಹುದು.
(199) ತಾವು ಕ್ಷಮಾಶೀಲರಾಗಿರಿ, ಒಳಿತನ್ನು ಆದೇಶಿಸಿರಿ ಮತ್ತು ಅಜ್ಞಾನಿಗಳಿಂದ ವಿಮುಖರಾಗಿರಿ.
(200) ತಮಗೆ ಸೈತಾನನ ಕಡೆಯಿಂದ ಏನಾದರೂ ದುಷ್ಪ್ರೇರಣೆಯುಂಟಾದರೆ ಅಲ್ಲಾಹುವಿನೊಂದಿಗೆ ಅಭಯವನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ, ಅರಿಯುವವನೂ ಆಗಿರುವನು.
(201) ಖಂಡಿತವಾಗಿಯೂ ಭಯಭಕ್ತಿ ಪಾಲಿಸುವವರಿಗೆ ಸೈತಾನನ ಕಡೆಯಿಂದ ಏನಾದರೂ ದುರ್ಬೋಧನೆ ತಟ್ಟಿದರೆ ಅವರಿಗೆ (ಅಲ್ಲಾಹುವಿನ ಬಗ್ಗೆ) ಜ್ಞಾಪಕವಾಗುವುದು. ಆಗ ಅವರು ಒಳದೃಷ್ಟಿಯುಳ್ಳವರಾಗುವರು.
(202) ಆದರೆ ಅವರ (ಸೈತಾನರ) ಸಹೋದರರನ್ನು, ಅವರು ದುರ್ಮಾರ್ಗದಲ್ಲಿ ಬಿಟ್ಟುಬಿಟ್ಟಿರುವರು. ಅವರು (ದುರ್ಮಾರ್ಗದಲ್ಲಿ) ಏನನ್ನೂ ಕಡಿಮೆ ಮಾಡಲಾರರು.
(203) ತಾವು ಅವರಿಗೆ ಯಾವುದಾದರೂ ದೃಷ್ಟಾಂತವನ್ನು ತಂದುಕೊಡದಿದ್ದರೆ ಅವರು ಹೇಳುವರು: ‘ತಾವೇ ಸ್ವತಃ ಅದನ್ನು ಹೆಣೆದು ತರಬಾರದೇಕೆ?’ (ಓ ಪ್ರವಾದಿಯವರೇ!) ಹೇಳಿರಿ: ‘ನಾನು ಅನುಸರಿಸುವುದು ನನ್ನ ರಬ್‌ನ ವತಿಯಿಂದ ನೀಡಲ್ಪಡುವ ದಿವ್ಯ ಸಂದೇಶವನ್ನು ಮಾತ್ರವಾಗಿದೆ. ಇದು (ಕುರ್‌ಆನ್) ನಿಮ್ಮ ರಬ್‌ನ ವತಿಯ ಕಣ್ತೆರೆಸುವ ಪುರಾವೆಗಳೂ, ವಿಶ್ವಾಸವಿಡುವ ಜನರಿಗೆ ಒಂದು ಮಾರ್ಗದರ್ಶಿಯೂ, ಕಾರುಣ್ಯವೂ ಆಗಿದೆ’.
(204) ಕುರ್‌ಆನ್ ಪಾರಾಯಣ ಮಾಡಲಾದರೆ ನೀವದನ್ನು ಕಿವಿಗೊಟ್ಟು ಆಲಿಸಿರಿ ಮತ್ತು ಮೌನ ಪಾಲಿಸಿರಿ. ನಿಮಗೆ ಕರುಣೆ ದೊರೆಯಲೂಬಹುದು.
(205) ವಿನಯದೊಂದಿಗೆ ಮತ್ತು ಭಯದೊಂದಿಗೆ ಧ್ವನಿಯನ್ನು ಏರಿಸದೆ ಮುಂಜಾನೆ ಮತ್ತು ಸಂಜೆ ತಾವು ತಮ್ಮ ರಬ್ಬನ್ನು ತಮ್ಮ ಮನಸ್ಸಿನಲ್ಲಿ ಸ್ಮರಿಸಿರಿ. ತಾವು ಅಲಕ್ಷ್ಯರಾಗಿರುವವರ ಪೈಕಿ ಸೇರದಿರಿ.
(206) ಖಂಡಿತವಾಗಿಯೂ ತಮ್ಮ ರಬ್‌ನ ಬಳಿಯಿರುವವರು (ಮಲಕ್‍ಗಳು) ಅವನನ್ನು ಆರಾಧಿಸುವುದರ ಬಗ್ಗೆ ಅಹಂಕಾರಪಡಲಾರರು.(264) ಅವರು ಅವನ ಪರಿಪಾವನತೆಯನ್ನು ಕೊಂಡಾಡುತ್ತಿರುವರು ಮತ್ತು ಅವನಿಗೆ ಸಾಷ್ಟಾಂಗವೆರಗುತ್ತಿರುವರು.
264. ಅಲ್ಲಾಹುವಿನ ಬಳಿ ಸಾಮೀಪ್ಯವನ್ನು ಪಡೆದಿರುವ ಮಲಕ್‍ಗಳು ಮನುಷ್ಯರಿಗಿಂತಲೂ ಉನ್ನತವಾದ ಪದವಿಯನ್ನು ಹೊಂದಿರುವವರಾಗಿರುವರು. ಆದರೂ ಅಹಂಕಾರವೆಂಬುದು ಅವರ ಬಳಿ ಸುಳಿಯಲಾರದು.