86 - At-Taariq ()

|

(1) ಆಕಾಶದ ಮೇಲಾಣೆ. ರಾತ್ರಿಯಲ್ಲಿ ಬರುವುದರ ಮೇಲಾಣೆ!

(2) ರಾತ್ರಿಯಲ್ಲಿ ಬರುವುದು ಎಂದರೇನೆಂದು ತಮಗೆ ಗೊತ್ತಿದೆಯೇ?

(3) ಅದು ಚುಚ್ಚಿ ಸಾಗುವ ನಕ್ಷತ್ರವಾಗಿದೆ.

(4) ತನ್ನ ವಿಷಯದಲ್ಲಿ ಒಬ್ಬ ಮೇಲ್ವಿಚಾರಕನಿರದೆ ಒಬ್ಬನೂ ಇರಲಾರನು.

(5) ಆದರೆ ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂಬುದನ್ನು ಮನುಷ್ಯನು ಚಿಂತಿಸಿ ನೋಡಲಿ.

(6) ಚಿಮ್ಮುವ ಒಂದು ದ್ರವದಿಂದ ಅವನನ್ನು ಸೃಷ್ಟಿಸಲಾಗಿದೆ.

(7) ಅದು ಬೆನ್ನು ಮೂಳೆ ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ.(1378)
1378. ‘ಯಖ್ರುಜು’ ಎಂಬ ಪದಕ್ಕೆ ಅವನು ಹೊರಬರುತ್ತಾನೆ ಎಂದು ಅರ್ಥ ನೀಡಿದ ವ್ಯಾಖ್ಯಾನಕಾರರಿದ್ದಾರೆ. ‘ಯಖ್ರುಜು’ ಎಂಬ ಪದಕ್ಕೆ ಆವಿರ್ಭವಿಸುವುದು ಎಂದೂ ಅರ್ಥ ನೀಡಬಹುದು. ಈ ಸೂಕ್ತಿಯ ಬಗ್ಗೆ ಪೌರಾಣಿಕ ಮತ್ತು ಆಧುನಿಕ ವ್ಯಾಖ್ಯಾನಕಾರರು ವಿವರಣಾತ್ಮಕವಾದ ಚರ್ಚೆಗಳನ್ನು ಮಾಡಿದ್ದಾರೆ.

(8) ಅವನನ್ನು (ಮನುಷ್ಯನನ್ನು) ಮರಳಿ ತರಲು ಖಂಡಿತವಾಗಿಯೂ ಅವನು (ಅಲ್ಲಾಹು) ಸಾಮರ್ಥ್ಯವುಳ್ಳವನಾಗಿರುವನು.

(9) ರಹಸ್ಯಗಳನ್ನು ಪರಿಶೋಧಿಸಲಾಗುವ ದಿನ!

(10) ಆಗ ಅವನಿಗೆ (ಮನುಷ್ಯನಿಗೆ) ಯಾವುದೇ ಶಕ್ತಿಯಾಗಲಿ, ಸಹಾಯಕರಾಗಲಿ ಇರದು.

(11) ಪದೇ ಪದೇ ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ!

(12) ಸಸ್ಯಲತಾದಿಗಳನ್ನು ಮೊಳಕೆಯೊಡೆಸುವ ಭೂಮಿಯ ಮೇಲಾಣೆ!

(13) ಖಂಡಿತವಾಗಿಯೂ ಇದು ನಿರ್ಣಾಯಕವಾದ ಒಂದು ಮಾತಾಗಿದೆ.

(14) ಇದು ಹಾಸ್ಯವಲ್ಲ.

(15) ಖಂಡಿತವಾಗಿಯೂ ಅವರು (ಮಹಾ) ತಂತ್ರವನ್ನು ಹೂಡುತ್ತಿರುವರು.

(16) ನಾನೂ (ಮಹಾ) ತಂತ್ರವನ್ನು ಹೂಡುವೆನು.

(17) ಆದ್ದರಿಂದ (ಓ ಪ್ರವಾದಿಯವರೇ!) ತಾವು ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಸ್ವಲ್ಪ ಸಮಯದವರೆಗೆ ಅವರಿಗೆ ತಾವು ವಿರಾಮವನ್ನು ಕೊಟ್ಟುಬಿಡಿರಿ.