(1) ಅಂಜೂರ ಮತ್ತು ಆಲಿವ್‌ನ ಮೇಲಾಣೆ!
(2) ಸೀನಾ ಪರ್ವತದ ಮೇಲಾಣೆ!
(3) ನಿರ್ಭೀತವಾಗಿರುವ ಈ ಪಟ್ಟಣದ ಮೇಲಾಣೆ!
(4) ಖಂಡಿತವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರಚನೆಯೊಂದಿಗೆ ಸೃಷ್ಟಿಸಿರುವೆವು.
(5) ತರುವಾಯ ನಾವು ಅವನನ್ನು ಅಧಮರಲ್ಲಿ ಅಧಮನನ್ನಾಗಿ ಮಾಡಿದೆವು.(1413)
1413. ಇತರ ಯಾವುದೇ ಜೀವಿಗೂ ಸಾಧಿಸಲು ಸಾಧ್ಯವಾಗದ ಅನೇಕ ಸಾಧನೆಗಳನ್ನು ಮಾಡುವ ವಿಧದಲ್ಲಿರುವ ಸವಿಶೇಷ ರಚನೆಯೊಂದಿಗೆ ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದಾನೆ. ಇತರ ಯಾವುದೇ ಜೀವಿಗೂ ಸಾಧಿಸಲು ಸಾಧ್ಯವಾಗದ ಅತ್ಯಂತ ದುಷ್ಟ ಮತ್ತು ನಿಕೃಷ್ಟ ಸ್ಥಿತಿಗೆ ಅಧಃಪತನಗೊಳ್ಳುವ ಸಾಧ್ಯತೆಯನ್ನೂ ಅಲ್ಲಾಹು ಮನುಷ್ಯನ ರಚನೆಯಲ್ಲಿ ಒಳಪಡಿಸಿದ್ದಾನೆ. ಔನ್ನತ್ಯ ಮತ್ತು ಅಧಃಪತನದೆಡೆಗೆ ಸಾಗಿಸುವ ಜೀವನ ಕ್ರಮಗಳು ಯಾವುವು ಎಂಬುದನ್ನೂ ಅವನು ಮನುಷ್ಯನಿಗೆ ತಿಳಿಸಿಕೊಟ್ಟಿದ್ದಾನೆ.
(6) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರ ಹೊರತು. ಆದರೆ ಅವರಿಗೆ ಕಡಿದು ಹೋಗದ ಪ್ರತಿಫಲವಿರುವುದು.
(7) ಹೀಗಿರುವಾಗ (ಓ ಪ್ರವಾದಿಯವರೇ!) ಇದರ ಬಳಿಕವೂ (ಪರಲೋಕದ) ಪ್ರತಿಫಲ ಕ್ರಮದ ವಿಷಯದಲ್ಲಿ ತಮ್ಮನ್ನು ನಿಷೇಧಿಸಲು ಅವರಿಗಿರುವ ಸಮರ್ಥನೆಯಾದರೂ ಏನು?
(8) ಅಲ್ಲಾಹು ತೀರ್ಪುಗಾರರಲ್ಲೇ ಅತಿದೊಡ್ಡ ತೀರ್ಪುಗಾರನಲ್ಲವೇ?