(1) ಸೃಷ್ಟಿಸಿರುವ ತಮ್ಮ ರಬ್‌ನ ನಾಮದಿಂದ ಓದಿರಿ.(1414)
1414. ಮುಹಮ್ಮದ್(ಸ) ರಿಗೆ ಮೊಟ್ಟಮೊದಲು ಅವತೀರ್ಣಗೊಂಡ ದಿವ್ಯ ಸಂದೇಶವು ಈ ಅಧ್ಯಾಯದ ಮೊದಲ ಐದು ಸೂಕ್ತಿಗಳಾಗಿವೆ. ಮಕ್ಕಾದಲ್ಲಿರುವ ಹಿರಾ ಗುಹೆಯಲ್ಲಿ ಜಿಬ್ರೀಲ್(ಅ) ಎಂಬ ಮಲಕ್ ಇದನ್ನು ಓದಿಕೊಟ್ಟರು.
(2) ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿರುವನು.
(3) ತಾವು ಓದಿರಿ. ತಮ್ಮ ರಬ್ ಅತ್ಯಧಿಕ ಔದಾರ್ಯವುಳ್ಳವನಾಗಿರುವನು.
(4) ಅವನು ಲೇಖನಿಯ ಮೂಲಕ ಕಲಿಸಿಕೊಟ್ಟನು.
(5) ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಅವನು ಕಲಿಸಿಕೊಟ್ಟಿರುವನು.(1415)
1415. ವಿಚಾರ ಸೃಷ್ಟಿಗಾಗಿ ಲೇಖನಿಯ ಮೂಲಕವಿರುವ ಬರವಣಿಗೆಯನ್ನು ಒಂದು ಉಪಾಧಿಯಾಗಿ ಮಾಡಿಕೊಂಡ ಏಕೈಕ ಜೀವಿ ಮನುಷ್ಯನಾಗಿದ್ದಾನೆ. ಜ್ಞಾನ ಸಂಗ್ರಹಗಳ ಮೂಲಕ ಮನುಷ್ಯ ತಲೆಮಾರುಗಳನ್ನು ಸಂಸ್ಕೃತಿಯ ಮತ್ತು ನಾಗರಿಕತೆಯ ಹಕ್ಕುದಾರರನ್ನಾಗಿ ಮಾಡಿದ್ದು ಅಕ್ಷರ ಜ್ಞಾನವಾಗಿತ್ತು.
(6) ನಿಸ್ಸಂದೇಹವಾಗಿಯೂ ಮನುಷ್ಯನು ಧಿಕ್ಕಾರಿಯಾಗಿ ಬಿಟ್ಟಿರುವನು.(1416)
1416. ಧಿಕ್ಕಾರ ಮತ್ತು ದಾಷ್ಟ್ರ್ಯತನವು ಉದ್ಭವವಾಗುವುದು ತನಗೆ ಯಾರ ಆಶ್ರಯವೂ ಬೇಕಾಗಿಲ್ಲ ಮತ್ತು ತಾನು ಯಾರನ್ನೂ ಭಯಪಡಬೇಕಾಗಿಲ್ಲ ಎಂಬ ಭಾವನೆಯಿಂದಾಗಿದೆ. ಚಿಕ್ಕದಾದ ಮತ್ತು ದೊಡ್ಡದಾದ ಎಲ್ಲ ವಿಷಯಗಳಲ್ಲೂ ತಾನು ಅಲ್ಲಾಹುವನ್ನು ಆಶ್ರಯಿಸಿ ಬದುಕುತ್ತಿದ್ದೇನೆ ಮತ್ತು ಅವನ ಸನ್ನಿಧಿಗೆ ಮರಳಿ ಹೋಗುವವನಾಗಿದ್ದೇನೆ ಎಂಬ ಪ್ರಜ್ಞೆಯು ಸತ್ಯವಿಶ್ವಾಸಿಯನ್ನು ವಿನಮ್ರನನ್ನಾಗಿಯೂ ಆದ್ರ್ರನನ್ನಾಗಿಯೂ ಮಾಡುತ್ತದೆ.
(7) ಅವನು ತನ್ನನ್ನು ತಾನೇ ಸ್ವಯಂ ಪರ್ಯಾಪ್ತನಾಗಿ ಕಂಡಿರುವುದರಿಂದ.
(8) ಖಂಡಿತವಾಗಿಯೂ ಮರಳುವಿಕೆಯು ತಮ್ಮ ರಬ್‌ನೆಡೆಗೇ ಆಗಿದೆ.
(9) ತಡೆಯುವವನನ್ನು ತಾವು ಕಂಡಿರುವಿರಾ?
(10) ಒಬ್ಬ ದಾಸನು ನಮಾಝ್ ಮಾಡುತ್ತಿರುವುದನ್ನು?
(11) ಅವನು ಸನ್ಮಾರ್ಗದಲ್ಲಾಗಿದ್ದರೆ (ಅವನ ಸ್ಥಿತಿ ಏನಾಗಿರಬಹುದೆಂದು) ತಾವು ಕಂಡಿರುವಿರಾ?
(12) ಅಥವಾ ಅವನು ಭಯಭಕ್ತಿ ಪಾಲಿಸುವಂತೆ ಆದೇಶಿಸುತ್ತಿದ್ದರೆ.(1417)
1417. ಮುಸ್ಲಿಮ್ ವರದಿ ಮಾಡಿದ ಹದೀಸೊಂದರಲ್ಲಿರುವಂತೆ ಪ್ರವಾದಿ(ಸ) ರವರು ನಮಾಝ್ ಮಾಡುವುದನ್ನು ವಿರೋಧಿಸಲು ಮತ್ತು ತಡೆಯಲು ಯತ್ನಿಸಿದ ಅಬೂಜಹಲನ ಬಗ್ಗೆ ಈ ಸೂಕ್ತಿಯಲ್ಲಿ ಸೂಚಿಸಲಾಗಿದೆ. ಪ್ರಾರ್ಥನೆ ಮತ್ತು ಸತ್ಕರ್ಮಗೈಯವುದನ್ನು ತಡೆಯಲೆತ್ನಿಸುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಅಬೂ ಜಹಲ್‍ಗಾಗಲಿ ಅಥವಾ ಅವನ ಸಂಗಡಿಗರಿಗಾಗಲಿ ತೊಂದರೆ ಮಾಡುವ ಯಾವುದೇ ಕೃತ್ಯಯನ್ನೂ ಪ್ರವಾದಿ(ಸ) ರವರು ಮಾಡಿರಲಿಲ್ಲ. ಆದರೂ ಅಬೂಜಹಲ್ ಮತ್ತಿತರರು ತಮ್ಮ ಸಂಪ್ರದಾಯಿಕ ಧರ್ಮವನ್ನು ಪ್ರವಾದಿ(ಸ) ರವರು ನಾಶ ಮಾಡಲು ಹವಣಿಸುತ್ತಿದ್ದಾರೆಂದು ಆರೋಪಿಸಿ ಅವರನ್ನು ವಿರೋಧಿಸುತ್ತಿದ್ದರು. ಅವರ ಆರೋಪ ಮತ್ತು ನಿಲುವಿಗೆ ವಿರುದ್ಧವಾಗಿ ಪ್ರವಾದಿ(ಸ) ರವರು ಸನ್ಮಾರ್ಗಿಯೂ ಧರ್ಮಿಷ್ಠರೂ ಆಗಿರುವುದು ಸತ್ಯವಾಗಿದ್ದರೆ ಅವರ ಸ್ಥಿತಿ ಎಷ್ಟು ಶೋಚನೀಯವಾಗಿರಬಹುದು ಎಂದು ಅಲ್ಲಾಹು ಇಲ್ಲಿ ಕೇಳುತ್ತಿದ್ದಾನೆ.
(13) ಅವನು (ತಡೆಯುವವನು) ನಿಷೇಧಿಸಿದರೆ ಮತ್ತು ವಿಮುಖನಾದರೆ (ಅವನ ಸ್ಥಿತಿ ಏನಾಗಿರಬಹುದೆಂದು) ತಾವು ಕಂಡಿರುವಿರಾ?
(14) ಅಲ್ಲಾಹು ಕಾಣುತ್ತಿರುವನೆಂಬುದನ್ನು ಅವನು ಅರಿಯಲಾರನೇ?(1418)
1418. ಸ್ವಂತ ಧರ್ಮವನ್ನು ಸಂರಕ್ಷಿಸುವ ಭಾವನೆಯಲ್ಲಿ ಅಬೂ ಜಹಲ್ ಮಾಡುವುದು ವಾಸ್ತವಿಕವಾಗಿ ಸತ್ಯನಿಷೇಧ ಮತ್ತು ಸತ್ಯದೊಂದಿಗಿರುವ ಅವಗಣನೆಯಾಗಿದ್ದರೆ ಅವನ ಸ್ಥಿತಿ ಎಷ್ಟು ಶೋಚನೀಯವಾಗಿರಬಹುದೆಂದು ಅವನು ಚಿಂತಿಸುವುದಿಲ್ಲವೇ ಎಂದು ಅಲ್ಲಾಹು ಕೇಳುತ್ತಾನೆ.
(15) ನಿಸ್ಸಂದೇಹವಾಗಿಯೂ, ಅವನು ನಿಲ್ಲಿಸದಿದ್ದರೆ ಖಂಡಿತವಾಗಿಯೂ ನಾವು ಆ ಮುಂದಲೆಯನ್ನು ಹಿಡಿದು ಎಳೆಯುವೆವು.
(16) ಸುಳ್ಳು ನುಡಿಯುವ, ಪಾಪವೆಸಗುವ ಮುಂದಲೆಯನ್ನು.
(17) ತರುವಾಯ ಅವನು ತನ್ನ ಸಭೆಯಲ್ಲಿರುವವರನ್ನು ಕರೆಯಲಿ.
(18) ನಾವು ಝಬಾನಿಯಃ(ಶಿಕ್ಷೆ ಜಾರಿಗೊಳಿಸುವ ಮಲಕ್‍ಗಳು)ಗಳನ್ನು ಕರೆಯುವೆವು.
(19) ನಿಸ್ಸಂದೇಹವಾಗಿಯೂ, ತಾವು ಅವನನ್ನು ಅನುಸರಿಸದಿರಿ. ತಾವು ಸಾಷ್ಟಾಂಗವೆರಗಿರಿ ಮತ್ತು ಸಾಮೀಪ್ಯವನ್ನು ಗಳಿಸಿರಿ.