77 - Al-Mursalaat ()

|

(1) ನಿರಂತರವಾಗಿ ಕಳುಹಿಸಲಾಗುವ,

(2) ರಭಸದಿಂದ ಅಪ್ಪಳಿಸುವ,

(3) ವ್ಯಾಪಕವಾಗಿ ಹಬ್ಬುವ,

(4) ಬೇರ್ಪಡಿಸಿ ವಿವೇಚನೆ ಮಾಡುವ,

(5) ದಿವ್ಯಸಂದೇಶ ಹಾಕಿಕೊಡುವವುಗಳ ಮೇಲಾಣೆ.(1337)
1337. 1ರಿಂದ 5ರವರೆಗಿನ ಸೂಕ್ತಿಗಳಲ್ಲಿ ಪ್ರಸ್ತಾಪಿಸಲಾದ ವಿಶೇಷಣಗಳೆಲ್ಲವೂ ಮಲಕ್‍ಗಳ ಬಗ್ಗೆಯಾಗಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 1-3 ಸೂಕ್ತಿಗಳಲ್ಲಿ ಗಾಳಿಯ ಬಗ್ಗೆ ಮತ್ತು 4-5ರಲ್ಲಿ ಮಲಕ್‍ಗಳ ಬಗ್ಗೆ ಪ್ರಸ್ತಾಪಿಸಲಾಗಿದೆಯೆಂದು ಇತರ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

(6) ಒಂದು ನೆಪವಾಗಿ ಅಥವಾ ಎಚ್ಚರಿಕೆಯಾಗಿ.

(7) ಖಂಡಿತವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸಂಭವಿಸಿಯೇ ತೀರುವುದು.

(8) ನಕ್ಷತ್ರಗಳ ಪ್ರಕಾಶವನ್ನು ಅಳಿಸಲಾದಾಗ.

(9) ಆಕಾಶವನ್ನು ಸೀಳಲಾದಾಗ.

(10) ಪರ್ವತಗಳನ್ನು ಧೂಳೀಪಟ ಮಾಡಲಾದಾಗ.

(11) ಸಂದೇಶವಾಹಕರಿಗೆ ಸಮಯವನ್ನು ನಿಶ್ಚಯಿಸಿ ಕೊಡಲಾದಾಗ.(1338)
1338. ಪುನರುತ್ಥಾನ ದಿನದಂದು ಪ್ರತಿಯೊಬ್ಬ ಪ್ರವಾದಿಯನ್ನೂ ಅಲ್ಲಾಹು ಪ್ರತ್ಯೇಕವಾಗಿ ಕರೆಯುವನು. ತರುವಾಯ ಆ ಪ್ರವಾದಿಯ ಜನತೆ ಅವರ ಉಪದೇಶದೊಂದಿಗೆ ಹೇಗೆ ಪ್ರತಿಕ್ರಿಯಿಸಿದರೆಂದು ಅವನು ಕೇಳುವನು. ಹೀಗೆ ಸಮುದಾಯಗಳ ವಿಷಯದಲ್ಲಿ ಸಾಕ್ಷ್ಯ ವಹಿಸಲು ಸಂದೇಶವಾಹಕರಿಗೆ ಸಮಯ ನಿಶ್ಚಯಿಸಿ ಕೊಡುವುದರ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ.

(12) ಯಾವ ದಿನಕ್ಕಾಗಿ ಅವರಿಗೆ ಅವಧಿ ನಿಶ್ಚಯಿಸಲಾಗಿದೆ?

(13) ನ್ಯಾಯ ತೀರ್ಮಾನದ ದಿನಕ್ಕಾಗಿ.

(14) ನ್ಯಾಯ ತೀರ್ಮಾನದ ದಿನ ಎಂದರೆ ಏನೆಂದು ತಮಗೆ ಗೊತ್ತಿದೆಯೇ?

(15) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(16) ನಾವು ಪೂರ್ವಿಕರನ್ನು ನಾಶ ಮಾಡಲಿಲ್ಲವೇ?

(17) ತರುವಾಯ ನಾವು ಅವರ ನಂತರದವರನ್ನು ಅವರ ಹಿಂದೆಯೇ ಕಳುಹಿಸುವೆವು.

(18) ಅಪರಾಧಿಗಳೊಂದಿಗೆ ನಾವು ಹೀಗೆಯೇ ವರ್ತಿಸುವೆವು.

(19) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(20) ತುಚ್ಛವಾದ ಒಂದು ದ್ರವದಿಂದ ನಾವು ನಿಮ್ಮನ್ನು ಸೃಷ್ಟಿಸಲಿಲ್ಲವೇ?

(21) ತರುವಾಯ ನಾವು ಅದನ್ನು ಭದ್ರವಾದ ಒಂದು ಸ್ಥಳದಲ್ಲಿಟ್ಟೆವು.

(22) ನಿಶ್ಚಿತವಾದ ಒಂದು ಅವಧಿಯವರೆಗೆ.

(23) ಹೀಗೆ ನಾವು (ಎಲ್ಲವನ್ನು) ನಿರ್ಣಯಿಸಿರುವೆವು. ಆದ್ದರಿಂದ ನಿರ್ಣಯ ಮಾಡುವುದರಲ್ಲಿ ನಾವು ಎಷ್ಟು ಉತ್ತಮರು!(1339)
1339. ಅತ್ಯಂತ ತುಚ್ಛವಾಗಿ ಕಾಣುವ ವೀರ್ಯ ಮತ್ತು ಅಂಡ ಕೋಶದಿಂದ ಕೋಟ್ಯಾನುಕೋಟಿ ಸೂಕ್ಷ್ಮಕೋಶಗಳನ್ನು ಹೊಂದಿರುವ ಮನುಷ್ಯನನ್ನು ಅಲ್ಲಾಹು ಅತ್ಯಂತ ಕರಾರುವಾಕ್ಕಾಗಿ ಬೆಳೆಸಿ ಹೊರತರುತ್ತಾನೆ.

(24) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(25) ನಾವು ಭೂಮಿಯನ್ನು ಒಳಗೊಳ್ಳುವಂತೆ ಮಾಡಲಿಲ್ಲವೇ?

(26) ಮೃತರನ್ನು ಮತ್ತು ಬದುಕಿರುವವರನ್ನು?

(27) ನಾವು ಅದರಲ್ಲಿ ಉನ್ನತವಾಗಿ ನಾಟಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿದೆವು. ನಿಮಗೆ ಕುಡಿಯಲು ನಾವು ಸ್ವಚ್ಛವಾದ ನೀರನ್ನು ನೀಡಿದೆವು.

(28) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(29) (ಓ ಸತ್ಯನಿಷೇಧಿಗಳೇ!) ನೀವು ಯಾವುದನ್ನು ನಿಷೇಧಿಸುತ್ತಿದ್ದಿರೋ ಅದರೆಡೆಗೆ ತೆರಳಿರಿ.

(30) ಮೂರು ಶಾಖೆಗಳಿರುವ ಒಂದು ರೀತಿಯ ನೆರಳಿನೆಡೆಗೆ(1340) ತೆರಳಿರಿ.
1340. ನರಕದಿಂದ ಶಾಖೆಗಳಾಗಿ ಹರಡಿಕೊಳ್ಳುವ ಕಪ್ಪು ಹೊಗೆಯ ನೆರಳಿನ ಬಗ್ಗೆ ಇಲ್ಲಿ ಸೂಚಿಸಲಾಗಿದೆ.

(31) ಅದು ನೆರಳನ್ನು ನೀಡಲಾರದು. ಅಗ್ನಿಜ್ವಾಲೆಯಿಂದ ರಕ್ಷಣೆಯನ್ನೂ ಒದಗಿಸಲಾರದು.

(32) ಖಂಡಿತವಾಗಿಯೂ ಅದು (ನರಕಾಗ್ನಿಯು) ದೊಡ್ಡ ಕಟ್ಟಡದಂತೆ ಎತ್ತರವಿರುವ ಕಿಡಿಗಳನ್ನು ಎಸೆಯುತ್ತಿರುವುದು.

(33) ಅದು (ಕಿಡಿಯು) ಹಳದಿ ಬಣ್ಣದ ಒಂಟೆಗಳ ಹಿಂಡಿನಂತಿರುವುದು.

(34) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(35) ಇದು ಅವರು ತುಟಿಬಿಚ್ಚದಂತಹ ದಿನವಾಗಿದೆ.

(36) ನೆಪಗಳನ್ನು ಹೇಳಲು ಅವರಿಗೆ ಅನುಮತಿ ನೀಡಲಾಗದು.

(37) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(38) (ಅವರೊಂದಿಗೆ ಹೇಳಲಾಗುವುದು): ‘ಇದು ನ್ಯಾಯ ತೀರ್ಮಾನದ ದಿನವಾಗಿದೆ. ನಾವು ನಿಮ್ಮನ್ನೂ, ಪೂರ್ವಿಕರನ್ನೂ ಒಟ್ಟುಗೂಡಿಸಿರುವೆವು.

(39) ನಿಮಲ್ಲಿ ಯಾವುದಾದರೂ ತಂತ್ರವಿದ್ದರೆ ಆ ತಂತ್ರವನ್ನು ಪ್ರಯೋಗಿಸಿರಿ’.

(40) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(41) ಖಂಡಿತವಾಗಿಯೂ ಭಯಭಕ್ತಿ ಪಾಲಿಸಿದವರು (ಸ್ವರ್ಗದಲ್ಲಿ) ನೆರಳುಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು.

(42) ಅವರು ಇಷ್ಟಪಡುವ ವಿಧದ ಫಲಗಳಲ್ಲಿ.

(43) (ಅವರೊಂದಿಗೆ ಹೇಳಲಾಗುವುದು): ‘ನೀವು ಮಾಡಿಕೊಂಡಿರುವುದರ ಫಲವಾಗಿ ಸಂತೋಷದಿಂದ ತಿನ್ನುತ್ತಲೂ ಕುಡಿಯುತ್ತಲೂ ಇರಿ.

(44) ಖಂಡಿತವಾಗಿಯೂ ನಾವು ಸಜ್ಜನರಿಗೆ ಹೀಗೆ ಪ್ರತಿಫಲವನ್ನು ನೀಡುವೆವು’.

(45) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(46) (ಅವರೊಂದಿಗೆ ಹೇಳಲಾಗುವುದು): ‘ನೀವು ಅಲ್ಪ ಸಮಯದವರೆಗೆ ತಿನ್ನಿರಿ ಮತ್ತು ಸುಖವಾಗಿ ಜೀವಿಸಿರಿ. ಖಂಡಿತವಾಗಿಯೂ ನೀವು ಅಪರಾಧಿಗಳಾಗಿರುವಿರಿ’.

(47) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(48) ಅವರೊಂದಿಗೆ ತಲೆಬಾಗಲು ಹೇಳಲಾದಾಗ ಅವರು ತಲೆಬಾಗಲಾರರು.(1341)
1341. ಇಹಲೋಕದಲ್ಲಿ ಸತ್ಯನಿಷೇಧಿಗಳು ತಾಳುವ ನಿಲುವನ್ನು ಇಲ್ಲಿ ಸೂಚಿಸಲಾಗಿದೆ. ತಲೆಬಾಗುತ್ತಾ, ಸಾಷ್ಟಾಂಗವೆರಗುತ್ತಾ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಲು ಅವರೊಂದಿಗೆ ಆದೇಶಿಸಲಾದರೆ ಅವರು ಅದನ್ನು ಅನುಸರಿಸಲಾರರು.

(49) ಆ ದಿನದಂದು ನಿಷೇಧಿಗಳಿಗೆ ನಾಶವಿದೆ.

(50) ಇದರ (ಈ ಕುರ್‌ಆನಿನ) ಬಳಿಕ ಇನ್ನು ಯಾವ ವೃತ್ತಾಂತದಲ್ಲಿ ಅವರು ವಿಶ್ವಾಸವಿಡುವರು?