(1) ಅಲಿಫ್-ಲಾಮ್-ಮೀಮ್.
(2) ಅಲ್ಲಾಹು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ ಸರ್ವವನ್ನೂ ನಿಯಂತ್ರಿಸುವವನೂ ಆಗಿರುವನು.
(3) ಪೂರ್ವಗ್ರಂಥಗಳನ್ನು ದೃಡೀಕರಿಸುತ್ತಾ ಅವನು ತಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವನು. ಅವನು ತೌರಾತ್ ಮತ್ತು ಇಂಜೀಲನ್ನೂ ಅವತೀರ್ಣಗೊಳಿಸಿದ್ದನು.
(4) ಇದಕ್ಕಿಂತ ಮುಂಚೆ ಮಾನವರಿಗೆ ಸನ್ಮಾರ್ಗದರ್ಶಿಯಾಗಿ. ಸತ್ಯಾಸತ್ಯತೆಗಳ ವಿವೇಚನೆಗಿರುವ ಆಧಾರಪ್ರಮಾಣವನ್ನೂ ಅವನು ಅವತೀರ್ಣಗೊಳಿಸಿರುವನು. ಖಂಡಿತವಾಗಿಯೂ ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರಿಗೆ ಕಠಿಣವಾದ ಶಿಕ್ಷೆಯಿರುವುದು. ಅಲ್ಲಾಹು ಪ್ರತಾಪಶಾಲಿಯೂ, ಶಿಕ್ಷಾಕ್ರಮ ಕೈಗೊಳ್ಳುವವನೂ ಆಗಿರುವನು.
(5) ಖಂಡಿತವಾಗಿಯೂ ಭೂಮಿಯಲ್ಲಿರುವ ಅಥವಾ ಆಕಾಶದಲ್ಲಿರುವ ಯಾವ ವಸ್ತುವೂ ಅಲ್ಲಾಹುವಿನಿಂದ ಮರೆಯಾಗಲಾರದು.
(6) ಗರ್ಭಾಶಯಗಳೊಳಗೆ ತಾನಿಚ್ಛಿಸುವ ವಿಧದಲ್ಲಿ ನಿಮಗೆ ರೂಪವನ್ನು ನೀಡುವವನು ಅವನೇ ಆಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.
(7) (ಓ ಪ್ರವಾದಿಯವರೇ!) ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದವನು ಅವನೇ ಆಗಿರುವನು. ಅದರಲ್ಲಿ ಸುಸ್ಪಷ್ಟವೂ, ಖಚಿತವೂ ಆಗಿರುವ ವಚನಗಳಿವೆ. ಅವು ಗ್ರಂಥದ ಮೂಲಭಾಗವಾಗಿವೆ. ಅರ್ಥದಲ್ಲಿ ಪರಸ್ಪರ ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಆದರೆ ಹೃದಯಗಳಲ್ಲಿ ವಕ್ರತೆಯುಳ್ಳವರಾರೋ ಅವರು ಗೊಂದಲವನ್ನುಂಟು ಮಾಡುವ ಉದ್ದೇಶದಿಂದ ಮತ್ತು ದುರ್ವ್ಯಾಖ್ಯಾನ ಮಾಡುವ ಬಯಕೆಯಿಂದ ಅರ್ಥದಲ್ಲಿ ಪರಸ್ಪರ ಹೋಲಿಕೆಯಿರುವ ವಚನಗಳನ್ನು ಹಿಂಬಾಲಿಸುವರು. ಅದರ ನೈಜ ವ್ಯಾಖ್ಯಾನವು ಅಲ್ಲಾಹುವಿನ ವಿನಾ ಯಾರಿಗೂ ತಿಳಿದಿಲ್ಲ. ಜ್ಞಾನದಲ್ಲಿ ಸುದೃಢರಾಗಿರುವರು ಹೇಳುವರು: ‘ನಾವಿದರಲ್ಲಿ ವಿಶ್ವಾಸವಿಟ್ಟಿರುವೆವು. ಎಲ್ಲವೂ ನಮ್ಮ ರಬ್‌ನ ವತಿಯಿಂದಾಗಿದೆ’. ಬುದ್ಧಿವಂತರು ಮಾತ್ರ ಚಿಂತಿಸಿ ಅರ್ಥಮಾಡಿಕೊಳ್ಳುವರು.
(8) (ಅವರು ಪ್ರಾರ್ಥಿಸುವರು:) ‘ಓ ನಮ್ಮ ರಬ್! ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸದಿರು. ನಿನ್ನ ವತಿಯ ದಯೆಯನ್ನು ನಮಗೆ ದಯಪಾಲಿಸು. ಖಂಡಿತವಾಗಿಯೂ ನೀನು ಅತ್ಯಧಿಕ ಔದಾರ್ಯವುಳ್ಳವನಾಗಿರುವೆ.’
(9) ‘ಓ ನಮ್ಮ ರಬ್! ಖಂಡಿತವಾಗಿಯೂ ಒಂದು ದಿನ ನೀನು ಜನರೆಲ್ಲರನ್ನೂ ಒಟ್ಟುಗೂಡಿಸುವೆ. ಅದರಲ್ಲಿ ಸಂದೇಹವೇ ಇಲ್ಲ. ಖಂಡಿತವಾಗಿಯೂ ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸಲಾರನು’.
(10) ಖಂಡಿತವಾಗಿಯೂ ಸತ್ಯನಿಷೇಧಿಗಳು ಯಾರೋ ಅವರಿಗೆ ಅವರ ಸಂಪತ್ತಾಗಲಿ ಸಂತತಿಯಾಗಲಿ ಅಲ್ಲಾಹುವಿನ ಬಳಿ ಯಾವುದೇ ಪ್ರಯೋಜನವನ್ನೂ ನೀಡಲಾರದು. ನರಕಾಗ್ನಿಯ ಇಂಧನವಾಗುವವರು ಅವರೇ ಆಗಿರುವರು.
(11) ಫಿರ್‍ಔನ್‍ನ ಜನರ ಮತ್ತು ಅವರ ಪೂರ್ವಜರ ಸ್ಥಿತಿಯಂತೆ. ಅವರು ನಮ್ಮ ದೃಷ್ಟಾಂತಗಳನ್ನು ತಿರಸ್ಕರಿಸಿದರು. ಆಗ ಅವರ ಪಾಪಗಳ ನಿಮಿತ್ತ ಅಲ್ಲಾಹು ಅವರನ್ನು ಶಿಕ್ಷಿಸಿದನು. ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು.
(12) (ಓ ಪ್ರವಾದಿಯವರೇ!) ಸತ್ಯನಿಷೇಧಿಗಳೊಂದಿಗೆ ಹೇಳಿರಿ: ‘ನೀವು ಸೋಲಿಸಲಾಗುವಿರಿ ಮತ್ತು ನರಕದೆಡೆಗೆ ಒಟ್ಟಾಗಿ ಮುನ್ನಡೆಸಲಾಗುವಿರಿ. ಆ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!’.
(13) (ಬದ್ರ್‌ನಲ್ಲಿ) ಮುಖಾಮುಖಿಯಾದ ಆ ಎರಡು ಬಣಗಳಲ್ಲಿ ಖಂಡಿತವಾಗಿಯೂ ನಿಮಗೊಂದು ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧಮಾಡುತ್ತಿತ್ತು. ಇನ್ನೊಂದು ಬಣವಾದರೋ ಅವರು ಸತ್ಯನಿಷೇಧಿಗಳಾಗಿದ್ದರು. ಅವರಿಗೆ (ಸತ್ಯನಿಷೇಧಿಗಳಿಗೆ) ಇವರು (ಸತ್ಯವಿಶ್ವಾಸಿಗಳು) ತಮಗಿಂತ ಇಮ್ಮಡಿಯಿರುವುದಾಗಿ ಕಂಡಿದ್ದರು.(67) ಅಲ್ಲಾಹು ಅವನ ಸಹಾಯದಿಂದ ತಾನಿಚ್ಛಿಸುವವರಿಗೆ ಬೆಂಬಲ ನೀಡುವನು. ಖಂಡಿತವಾಗಿಯೂ ದೃಷ್ಟಿಯುಳ್ಳವರಿಗೆ ಇದರಲ್ಲೊಂದು ನೀತಿಪಾಠವಿದೆ.
67. ಮುಸ್ಲಿಮರಿಗಿಂತ ಮೂರು ಪಟ್ಟು ಅಧಿಕ ಸಂಖ್ಯೆಯಲ್ಲಿದ್ದ ಶತ್ರುಗಳಿಗೆ ಭಯ ಹುಟ್ಟಿಸುವ ಸಲುವಾಗಿ ಅಲ್ಲಾಹು ಅವರಿಗೆ ಆ ರೀತಿ ತೋರಿಸಿಕೊಟ್ಟಿದ್ದನು.
(14) ಪತ್ನಿಯರು, ಗಂಡುಮಕ್ಕಳು, ಶೇಖರಿಸಿಡಲಾದ ಚಿನ್ನ ಮತ್ತು ಬೆಳ್ಳಿ, ಉತ್ಕೃಷ್ಟ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿಗಳು ಮುಂತಾದ ಆಸೆಪಡಲಾಗುವ ವಸ್ತುಗಳ ಮೇಲಿನ ಪ್ರೀತಿಯನ್ನು ಜನರಿಗೆ ಆಕರ್ಷಕಗೊಳಿಸಲಾಗಿದೆ. ಅವು ಐಹಿಕ ಜೀವನದ ಸುಖಗಳಾಗಿವೆ. ಆದರೆ (ಜನರಿಗೆ) ಮರಳಿ ತಲುಪಬೇಕಾದ ಅತ್ಯುತ್ತಮ ಸ್ಥಳವಿರುವುದು ಅಲ್ಲಾಹುವಿನ ಬಳಿಯಲ್ಲಾಗಿದೆ.
(15) (ಓ ಪ್ರವಾದಿಯವರೇ!) ಹೇಳಿರಿ: ‘ಅದಕ್ಕಿಂತಲೂ (ಆ ಐಹಿಕ ಸುಖಭೋಗಗಳಿಗಿಂತಲೂ) ಅತ್ಯುತ್ತಮವಾಗಿರುವುದನ್ನು ನಾನು ನಿಮಗೆ ತಿಳಿಸಿಕೊಡಲೇ?’ ಭಯಭಕ್ತಿ ಪಾಲಿಸಿದವರಿಗೆ ತಮ್ಮ ರಬ್‌ನ ಬಳಿ ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. (ಅವರಿಗೆ) ಪರಿಶುದ್ಧ ಸಂಗಾತಿಗಳೂ ಇರುವರು ಮತ್ತು ಅಲ್ಲಾಹುವಿನ ವತಿಯ ಸಂತೃಪ್ತಿಯೂ ಇರುವುದು. ಅಲ್ಲಾಹು ತನ್ನ ದಾಸರನ್ನು ವೀಕ್ಷಿಸುವವನಾಗಿರುವನು.
(16) ‘ಓ ನಮ್ಮ ರಬ್! ನಾವು ವಿಶ್ವಾಸವಿಟ್ಟಿರುವೆವು. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು’ ಎಂದು ಪ್ರಾರ್ಥಿಸುವವರು.
(17) ಅವರು (ಅಲ್ಲಾಹುವಿನ ದಾಸರು) ಸಹನೆ ವಹಿಸುವವರೂ, ಸತ್ಯಸಂಧರೂ, ಭಯಭಕ್ತಿಯುಳ್ಳವರೂ, ವ್ಯಯಿಸುವವರೂ, ರಾತ್ರಿಯ ಅಂತ್ಯಯಾಮಗಳಲ್ಲಿ ಪಾಪಮುಕ್ತಿಯನ್ನು ಬೇಡುವವರೂ ಆಗಿರುವರು.
(18) ತನ್ನ ಹೊರತು ಅನ್ಯ ಆರಾಧ್ಯರಿಲ್ಲವೆಂದು ಅಲ್ಲಾಹು ಸಾಕ್ಷ್ಯವಹಿಸಿರುವನು. ಮಲಕ್‍ಗಳೂ ಜ್ಞಾನವುಳ್ಳವರೂ (ಅದಕ್ಕೆ ಸಾಕ್ಷಿಗಳಾಗಿರುವರು). ಅವನು ಸದಾ ನ್ಯಾಯ ಪಾಲಿಸುವವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಪ್ರತಾಪಶಾಲಿಯೂ, ಯುಕ್ತಿ ಪೂರ್ಣನೂ ಆಗಿರುವನು.
(19) ಖಂಡಿತವಾಗಿಯೂ ಅಲ್ಲಾಹುವಿನ ಬಳಿ ಧರ್ಮವೆಂದರೆ ಇಸ್ಲಾಮ್ ಮಾತ್ರವಾಗಿದೆ. ಗ್ರಂಥ ನೀಡಲಾದವರು ತಮಗೆ (ಧಾರ್ಮಿಕ) ಜ್ಞಾನವು ಬಂದ ಬಳಿಕ ಭಿನ್ನರಾದುದು ಅವರು ಪರಸ್ಪರ ಹೊಂದಿರುವ ವಿದ್ವೇಷದ ನಿಮಿತ್ತವೇ ವಿನಾ ಇನ್ನಾವುದರಿಂದಲೂ ಆಗಿರಲಿಲ್ಲ. ಯಾರಾದರೂ ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತಿ ಶೀಘ್ರವಾಗಿ ವಿಚಾರಣೆ ಮಾಡುವವನಾಗಿರುವನು.
(20) ಅವರೇನಾದರೂ ತಮ್ಮೊಂದಿಗೆ ತರ್ಕಿಸಿದರೆ ತಾವು ಹೇಳಿರಿ: ‘ನಾನು ಸ್ವತಃ ನನ್ನನ್ನೇ ಸಂಪೂರ್ಣವಾಗಿ ಅಲ್ಲಾಹುವಿಗೆ ಶರಣಾಗಿಸಿರುವೆನು. ನನ್ನನ್ನು ಅನುಸರಿಸಿದವರು ಸಹ (ಹಾಗೆಯೇ ಮಾಡಿರುವರು)’. ‘ನೀವು (ಅಲ್ಲಾಹುವಿಗೆ) ಶರಣಾಗಿದ್ದೀರಾ?’ ಎಂದು ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಬಹುದೇವಾರಾಧಕರಾದ ಅರಬರೊಂದಿಗೆ) ತಾವು ಕೇಳಿರಿ. ಅವರೇನಾದರೂ ಶರಣಾಗತರಾದರೆ ಅವರು ಸನ್ಮಾರ್ಗವನ್ನು ಪಡೆದಿರುವರು. ಅವರೇನಾದರೂ ತಿರುಗಿ ನಡೆದರೆ ತಮ್ಮ ಹೊಣೆಯು ಅವರಿಗೆ (ದಿವ್ಯಸಂದೇಶವನ್ನು) ತಲುಪಿಸಿಕೊಡುವುದು ಮಾತ್ರವಾಗಿದೆ. ಅಲ್ಲಾಹು (ತನ್ನ) ದಾಸರನ್ನು ವೀಕ್ಷಿಸುವವನಾಗಿರುವನು.
(21) ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸುವವರು, ಅನ್ಯಾಯವಾಗಿ ಪ್ರವಾದಿಗಳನ್ನು ಹತ್ಯೆ ಮಾಡುವವರು ಮತ್ತು ನ್ಯಾಯ ಪಾಲಿಸಲು ಆದೇಶಿಸುವವರನ್ನು ವಧಿಸುವವರು ಯಾರೋ ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಶುಭವಾರ್ತೆಯನ್ನು ತಿಳಿಸಿರಿ.
(22) ಇಹಲೋಕದಲ್ಲೂ, ಪರಲೋಕದಲ್ಲೂ ತಮ್ಮ ಕರ್ಮಗಳು ನಿಷ್ಫಲಗೊಂಡಿರುವವರು ಅವರೇ ಆಗಿರುವರು. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.
(23) ಗ್ರಂಥದಿಂದ ಒಂದು ಪಾಲನ್ನು ನೀಡಲಾದವರೆಡೆಗೆ ತಾವು ನೋಡಲಿಲ್ಲವೇ? ಅವರ ನಡುವೆ ತೀರ್ಪು ನೀಡುವ ಸಲುವಾಗಿ ಅವರನ್ನು ಅಲ್ಲಾಹುವಿನ ಗ್ರಂಥದತ್ತ ಆಹ್ವಾನಿಸಲಾಗುತ್ತದೆ. ತರುವಾಯ ಅವರಲ್ಲೊಂದು ಬಣವು ಕಡೆಗಣಿಸುತ್ತಾ ಮರಳಿಹೋಗುವುದು.(68)
68. ಜನರ ಸಮಸ್ಯೆಗಳನ್ನು ದೈವಿಕ ಗ್ರಂಥದ ಅಧಾರದಲ್ಲಿ ಬಗೆಹರಿಸುವ ಸಲುವಾಗಿ ಪ್ರವಾದಿ ಮೂಸಾ(ಅ) ಮತ್ತು ಪ್ರವಾದಿ ಈಸಾ(ಅ) ರವರಿಗೆ ಗ್ರಂಥಗಳನ್ನು ಅವತೀರ್ಣಗೊಳಿಸಲಾಗಿತ್ತು. ಆದರೆ ತಾವು ಗ್ರಂಥದವರೆಂದು ಹೆಮ್ಮೆಪಡುವ ಮತ್ತು ತಮಗೆ ಶಾಶ್ವತ ನರಕ ಶಿಕ್ಷೆಯನ್ನು ಸವಿಯಬೇಕಾಗಿ ಬರಲಾರದು ಎಂದು ಖಡಾಖಂಡಿತವಾಗಿ ಹೇಳಿಕೊಳ್ಳುವವರನ್ನು ಗ್ರಂಥದ ತೀರ್ಪು ಅಂಗೀಕರಿಸಲು ಆಹ್ವಾನಿಸಲಾಗುವಾಗ ಅವರ ನಿಲುವು ಬದಲಾಗುತ್ತದೆ. ಗ್ರಂಥವನ್ನು ಕಡೆಗಣಿಸಿ ಅವರು ಸ್ವೇಚ್ಛೆಯನ್ನು ಅನುಸರಿಸುತ್ತಾರೆ. ಕುರ್‌ಆನ್‍ನ ಅನುಯಾಯಿಗಳೆಂದು ಹೆಮ್ಮೆಪಡುವವರಲ್ಲಿ ಹಲವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
(24) ‘ಎಣಿಸಲಾದ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಸ್ಪರ್ಶಿಸದು’ ಎಂದು ಅವರು ಹೇಳಿರುವುದೇ ಅದಕ್ಕಿರುವ ಕಾರಣವಾಗಿದೆ. ಅವರು ಸ್ವತಃ ಏನನ್ನು ಹೆಣೆಯುತ್ತಿದ್ದರೋ ಅದು ಅವರನ್ನು ಅವರ ಧರ್ಮದ ವಿಷಯದಲ್ಲಿ ವಂಚಿಸಿತು.
(25) ಯಾವುದೇ ಸಂದೇಹವೂ ಇಲ್ಲದಂತಹ ಒಂದು ದಿನದಂದು ನಾವು ಅವರನ್ನು ಒಟ್ಟುಗೂಡಿಸುವಾಗ (ಅವರ ಸ್ಥಿತಿ) ಹೇಗಿರಬಹುದು? (ಅಂದು) ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿರುವುದರ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಯಾವುದೇ ಅನ್ಯಾಯವೆಸಗಲಾಗದು.
(26) ಹೇಳಿರಿ: ‘ಓ ಆಧಿಪತ್ಯದ ಒಡೆಯನಾಗಿರುವ ಅಲ್ಲಾಹುವೇ! ನೀನಿಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಂದ ಆಧಿಪತ್ಯವನ್ನು ತೆಗೆದುಬಿಡುವೆ. ನೀನಿಚ್ಛಿಸುವವರನ್ನು ಗೌರವಿಸುವೆ ಮತ್ತು ನೀನಿಚ್ಛಿಸುವವರನ್ನು ಅವಮಾನಿಸುವೆ. ಒಳಿತಿರುವುದು ನಿನ್ನ ಕೈಯಲ್ಲಾಗಿದೆ. ಖಂಡಿತವಾಗಿಯೂ ನೀನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ.
(27) ನೀನು ರಾತ್ರಿಯನ್ನು ಹಗಲಿಗೆ ಪ್ರವೇಶಗೊಳಿಸುವೆ ಮತ್ತು ಹಗಲನ್ನು ರಾತ್ರಿಗೆ ಪ್ರವೇಶಗೊಳಿಸುವೆ. ನಿರ್ಜೀವಿಯಿಂದ ಜೀವವಿರುವುದನ್ನು ಹೊರತರುವೆ ಮತ್ತು ಜೀವವಿರುವುದರಿಂದ ನಿರ್ಜೀವಿಯನ್ನು ಹೊರತರುವೆ.(69) ನೀನಿಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ’.
69. ‘ಜೀವ’ ಎಂಬ ನಿಗೂಢವಾದ ವಿದ್ಯಮಾನವನ್ನು ಸರಿಸಿದರೆ ಯಾವುದೇ ಜೀವಿಯೂ ಕೇವಲ ನಿರ್ಜೀವ ಧಾತು ಲವಣಗಳ ಸಮುಚ್ಚಯ ಮಾತ್ರವಾಗಿದೆ. ನಿರ್ಜೀವಾವಸ್ಥೆಯಿಂದಲೇ ಜೀವದ ಪ್ರಪ್ರಥಮ ಸ್ಫುರಣವುಂಟಾಗಿದೆ ಎಂಬ ವಿಷಯದಲ್ಲಿ ಯಾರಿಗೂ ತರ್ಕವಿರಲಾರದು. ಮರಣದ ಮೂಲಕ ಪುನಃ ನಿರ್ಜೀವಾವಸ್ಥೆಗೆ ಮರಳಿ ಹೋಗುವ ವಿಷಯವೂ ಹೀಗೆಯೇ ಆಗಿದೆ. ಮಾತ್ರವಲ್ಲ, ಜೀವಿಗಳ ದೇಹದಿಂದ ನಿರ್ಜೀವಕೋಶಗಳು, ಉಗುರು, ರೋಮ ಮುಂತಾದ ನಿರ್ಜೀವ ವಸ್ತುಗಳೂ ಹೊರಬರುತ್ತವೆ.
(28) ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನಲ್ಲದೆ ಸತ್ಯನಿಷೇಧಿಗಳನ್ನು ಆಪ್ತಮಿತ್ರರಾಗಿ ಮಾಡಿಕೊಳ್ಳದಿರಲಿ. ಯಾರಾದರೂ ಅದನ್ನು ಮಾಡಿದರೆ ಅವನಿಗೆ ಅಲ್ಲಾಹುವಿನೊಂದಿಗೆ ಯಾವುದೇ ಸಂಬಂಧವೂ ಇರಲಾರದು. ಆದರೆ ನೀವು ಅವರೊಂದಿಗೆ ಎಚ್ಚರದಿಂದ ವರ್ತಿಸುವುದರ ಹೊರತು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿರುವನು. ನಿಮ್ಮ ಮರಳುವಿಕೆಯು ಅಲ್ಲಾಹುವಿನ ಬಳಿಗೇ ಆಗಿದೆ.
(29) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ನಿಮ್ಮ ಹೃದಯಗಳಲ್ಲಿರುವುದನ್ನು ಮರೆಮಾಚಿದರೂ, ಬಹಿರಂಗಪಡಿಸಿದರೂ ಅಲ್ಲಾಹು ಅದನ್ನು ಅರಿಯುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೂ ಅವನು ಅರಿಯುವನು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು’.
(30) ಪ್ರತಿಯೊಬ್ಬ ವ್ಯಕ್ತಿಯೂ ತಾನು ನಿರ್ವಹಿಸಿರುವ ಒಳಿತನ್ನು ಮತ್ತು ತಾನು ನಿರ್ವಹಿಸಿರುವ ಕೆಡುಕನ್ನು (ತನ್ನ ಮುಂದೆ) ಪ್ರದರ್ಶಿಸಲಾಗಿರುವುದಾಗಿ ಕಾಣುವ ದಿನ (ವನ್ನು ಸ್ಮರಿಸಿರಿ)! ತನ್ನ ಮತ್ತು ಅದರ (ದುಷ್ಕರ್ಮಗಳ) ಮಧ್ಯೆ ವಿದೂರವಾದ ಅಂತರವು ಇರುತ್ತಿದ್ದರೆ ಎಂದು ಪ್ರತಿಯೊಬ್ಬನೂ ಅಂದು ಆಶಿಸುವನು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿರುವನು. ಅಲ್ಲಾಹು (ತನ್ನ) ದಾಸರೊಂದಿಗೆ ಅಪಾರ ದಯೆಯುಳ್ಳವನಾಗಿರುವನು.
(31) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಅಲ್ಲಾಹುವನ್ನು ಪ್ರೀತಿಸುತ್ತಿರುವಿರಿ ಎಂದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.
(32) ಹೇಳಿರಿ: ‘ನೀವು ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ’. ಅವರೇನಾದರೂ ವಿಮುಖರಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಮೆಚ್ಚಲಾರನು.
(33) ಖಂಡಿತವಾಗಿಯೂ ಅಲ್ಲಾಹು ಆದಮ್‍ರನ್ನು, ನೂಹ್‍ರನ್ನು, ಇಬ್ರಾಹೀಮ್‍ರ ಕುಟುಂಬವನ್ನು ಮತ್ತು ಇಮ್ರಾನ್‍ರ ಕುಟುಂಬವನ್ನು ಜಗತ್ತಿನ ಜನರ ಪೈಕಿ ಉತ್ಕೃಷ್ಟರನ್ನಾಗಿ ಆರಿಸಿರುವನು.
(34) ಅವರಲ್ಲಿ ಕೆಲವರು ಇತರ ಕೆಲವರ ಸಂತತಿಗಳಾಗಿರುವರು. ಅಲ್ಲಾಹು (ಎಲ್ಲವನ್ನು) ಆಲಿಸುವವನೂ, ಅರಿಯುವವನೂ ಆಗಿರುವನು.
(35) ‘ಓ ನನ್ನ ರಬ್! ನನ್ನ ಉದರದಲ್ಲಿರುವ ಶಿಶುವನ್ನು ನಿನಗೋಸ್ಕರ ಮುಡಿಪಾಗಿಡಲು ನಾನು ಹರಕೆ ಹೊತ್ತಿರುವೆನು.(70) ಆದ್ದರಿಂದ ನೀನು ಅದನ್ನು ನನ್ನಿಂದ ಸ್ವೀಕರಿಸು. ಖಂಡಿತವಾಗಿಯೂ ನೀನು (ಎಲ್ಲವನ್ನು) ಆಲಿಸುವವನೂ ಅರಿಯುವವನೂ ಆಗಿರುವೆ’ ಎಂದು ಇಮ್ರಾನ್‍ರ ಪತ್ನಿ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
70. ಗಂಡು ಮಕ್ಕಳನ್ನು ಬೈತುಲ್ ಮುಕದ್ದಸ್‍ನ ಸೇವೆಗಾಗಿ ಹರಕೆ ಹೊರುವುದು ಆ ಕಾಲದ ಒಂದು ವಾಡಿಕೆಯಾಗಿತ್ತು. ಈ ಸೇವೆ ಹೆಣ್ಣು ಮಕ್ಕಳಿಗೆ ಯೋಗ್ಯವಲ್ಲವೆಂದು ಅವರು ಭಾವಿಸಿದ್ದರು. ಆದರೂ ಮರ್ಯಮ್‍ರ ವಿಷಯದಲ್ಲಿ ತನ್ನ ಹರಕೆಯನ್ನು ನೆರವೇರಿಸಿಯೇ ತೀರುವೆನೆಂದು ಅವರ ತಾಯಿ ನಿರ್ಧರಿಸಿದ್ದರು.
(36) ತರುವಾಯ ಆಕೆ ಶಿಶುವನ್ನು ಹೆತ್ತಾಗ ಆಕೆ ಹೇಳಿದರು: ‘ಓ ನನ್ನ ರಬ್! ನಾನು ಹೆತ್ತಿರುವುದು ಹೆಣ್ಣು ಶಿಶುವನ್ನಾಗಿದೆ!’ ಆಕೆ ಏನನ್ನು ಹೆತ್ತಿರುವಳೆಂಬುದರ ಬಗ್ಗೆ ಅಲ್ಲಾಹು ಹೆಚ್ಚು ಅರಿವುಳ್ಳವನಾಗಿರುವನು. ಗಂಡು ಹೆಣ್ಣಿನಂತಲ್ಲ! ‘ಆ ಶಿಶುವಿಗೆ ನಾನು ಮರ್ಯಮ್ ಎಂದು ಹೆಸರಿಟ್ಟಿರುವೆನು ಮತ್ತು ಆಕೆಯನ್ನೂ ಆಕೆಯ ಸಂತತಿಯನ್ನೂ ಬಹಿಷ್ಕೃತನಾದ ಸೈತಾನನಿಂದ ಕಾಪಾಡಲು ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿರುವೆನು’ (ಎಂದು ಆಕೆ ಹೇಳಿದರು).
(37) ಹೀಗೆ ಆಕೆಯ (ಮರ್ಯಮ್‍ರ) ರಬ್ ಆಕೆಯನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದನು ಮತ್ತು ಆಕೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಿದನು. ಆಕೆಯ ಪೋಷಣೆಯ ಹೊಣೆಯನ್ನು ಅವನು ಝಕರಿಯ್ಯಾರಿಗೆ ವಹಿಸಿಕೊಟ್ಟನು.(71) ಮಿಹ್ರಾಬ್(ಪ್ರಾರ್ಥನಾ ಸ್ಥಳ)ನಲ್ಲಿ ಝಕರಿಯ್ಯಾರವರು ಆಕೆಯ ಬಳಿಗೆ ತೆರಳಿದಾಗಲೆಲ್ಲ ಆಕೆಯ ಬಳಿ ಏನಾದರೂ ಆಹಾರವನ್ನು ಕಾಣುತ್ತಿದ್ದರು. ಅವರು ಕೇಳಿದರು: ‘ಓ ಮರ್ಯಮ್! ಇದು ನಿನಗೆಲ್ಲಿಂದ ದೊರೆಯುತ್ತದೆ?’ ಆಕೆ ಉತ್ತರಿಸಿದರು: ‘ಅದು ಅಲ್ಲಾಹುವಿನ ಬಳಿಯಿಂದಾಗಿದೆ. ಖಂಡಿತವಾಗಿಯೂ ಅಲ್ಲಾಹು ತಾನಿಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುವನು’.
71. ಪ್ರವಾದಿ ಝಕರಿಯ್ಯಾ(ಅ) ರವರು ಮರ್ಯಮ್‍ರವರ ಮಾತೃಸಹೋದರಿಯ ಪತಿಯಾಗಿರುವರು.
(38) ಅಲ್ಲಿ ಝಕರಿಯ್ಯಾ ತಮ್ಮ ರಬ್‌ನೊಂದಿಗೆ ಪ್ರಾರ್ಥಿಸುತ್ತಾ ಹೇಳಿದರು: ‘ಓ ನನ್ನ ರಬ್! ನಿನ್ನ ವತಿಯಿಂದ ನನಗೊಂದು ಉತ್ತಮ ಸಂತತಿಯನ್ನು ದಯಪಾಲಿಸು. ಖಂಡಿತವಾಗಿಯೂ ನೀನು ಪ್ರಾರ್ಥನೆಯನ್ನು ಆಲಿಸುವವನಾಗಿರುವೆ’.
(39) ತರುವಾಯ ಅವರು ಮಿಹ್ರಾಬ್‍ನಲ್ಲಿ ಪ್ರಾರ್ಥನೆ ಮಾಡುತ್ತಾ ನಿಂತಿರುವಾಗ ಮಲಕ್‍ಗಳು ಅವರನ್ನು ಕರೆದು: ‘ಅಲ್ಲಾಹು ತಮಗೆ ಯಹ್ಯಾ (ಎಂಬ ಮಗುವಿ)ನ ಬಗ್ಗೆ ಶುಭವಾರ್ತೆಯನ್ನು ತಿಳಿಸುತ್ತಿರುವನು. ಅವರು (ಯಹ್ಯಾ) ಅಲ್ಲಾಹುವಿನ ವತಿಯ ವಚನವೊಂದನ್ನು ದೃಢೀಕರಿಸುವವರೂ,(72) ನಾಯಕರೂ, ಆತ್ಮಸಂಯಮವುಳ್ಳವರೂ, ಸಜ್ಜನರಲ್ಲಿ ಸೇರಿದ ಪ್ರವಾದಿಯೂ ಆಗಿರುವರು’ ಎಂದು ಹೇಳಿದರು.
72. ಇಲ್ಲಿ ‘ವಚನ’ ಎಂಬುದರ ತಾತ್ಪರ್ಯವು ಪ್ರವಾದಿ ಈಸಾ(ಅ) ರವರಾಗಿರುವರೆಂದು 45ನೇ ಸೂಕ್ತಿಯು ಸೂಚಿಸುತ್ತದೆ. ಪ್ರವಾದಿ ಯಹ್ಯಾ(ಅ) ರವರು ಪ್ರವಾದಿ ಈಸಾ(ಅ) ರವರ ಪ್ರವಾದಿತ್ವಕ್ಕೆ ಸಾಕ್ಷಿಯಾಗಿದ್ದರು.
(40) ಅವರು (ಝಕರಿಯ್ಯಾ) ಹೇಳಿದರು: ‘ಓ ನನ್ನ ರಬ್! ನನಗೊಂದು ಗಂಡು ಮಗು ಹುಟ್ಟುವುದಾದರೂ ಹೇಗೆ? ನಾನು ವೃದ್ಧಾಪ್ಯವನ್ನು ತಲುಪಿದವನಾಗಿರುವೆನು ಮತ್ತು ನನ್ನ ಪತ್ನಿಯು ಬಂಜೆಯಾಗಿರುವಳು’. ಅಲ್ಲಾಹು ಹೇಳಿದನು: ‘ಹಾಗೆಯೇ ಆಗಿದೆ, ಅಲ್ಲಾಹು ತಾನಿಚ್ಛಿಸುವುದನ್ನು ಮಾಡುವನು’.
(41) ಅವರು (ಝಕರಿಯ್ಯಾ) ಹೇಳಿದರು: ‘ಓ ನನ್ನ ರಬ್! ನನಗೊಂದು ದೃಷ್ಟಾಂತವನ್ನು ಮಾಡಿಕೊಡು’. ಅಲ್ಲಾಹು ಹೇಳಿದನು: ‘ತಾವು ಮೂರು ದಿನಗಳ ಕಾಲ ಜನರೊಂದಿಗೆ ಸನ್ನೆಯ ಮೂಲಕವೇ ವಿನಾ ಮಾತನಾಡದಿರುವುದು ತಮಗಿರುವ ದೃಷ್ಟಾಂತವಾಗಿದೆ. ತಾವು ತಮ್ಮ ರಬ್ಬನ್ನು ಅತ್ಯಧಿಕವಾಗಿ ಸ್ಮರಿಸುತ್ತಿರಿ ಮತ್ತು ಸಂಜೆ ಹಾಗೂ ಮುಂಜಾನೆಯಲ್ಲಿ ಅವನ ಪರಿಪಾವನತೆಯನ್ನು ಕೊಂಡಾಡುತ್ತಿರಿ’.
(42) ‘ಓ ಮರ್ಯಮ್! ಖಂಡಿತವಾಗಿಯೂ ಅಲ್ಲಾಹು ತಮ್ಮನ್ನು ವಿಶೇಷವಾಗಿ ಆರಿಸಿರುವನು, ತಮಗೆ ಪಾವಿತ್ರ್ಯತೆಯನ್ನು ದಯಪಾಲಿಸಿರುವನು ಮತ್ತು ಜಗತ್ತಿನ ಸ್ತ್ರೀಯರ ಪೈಕಿ ತಮ್ಮನ್ನು ಉತ್ಕೃಷ್ಟಳನ್ನಾಗಿ ಆರಿಸಿರುವನು’ ಎಂದು ಮಲಕ್‍ಗಳು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
(43) ‘ಓ ಮರ್ಯಮ್! ತಾವು ತಮ್ಮ ರಬ್‌ಗಾಗಿ ಭಯಭಕ್ತಿ ಪಾಲಿಸಿರಿ, ಸಾಷ್ಟಾಂಗವೆರಗಿರಿ ಮತ್ತು ತಲೆಬಾಗುವವರೊಂದಿಗೆ ತಾವೂ ತಲೆಬಾಗಿರಿ’.
(44) (ಓ ಪ್ರವಾದಿಯವರೇ!) ಇವು ನಾವು ತಮಗೆ ದಿವ್ಯಸಂದೇಶವಾಗಿ ನೀಡುತ್ತಿರುವ ಅಗೋಚರ ವಿಷಯಗಳಲ್ಲಿ ಸೇರಿದವುಗಳಾಗಿವೆ. ಅವರ ಪೈಕಿ ಮರ್ಯಮ್‍ರ ಸಂರಕ್ಷಣೆಯ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕೆಂದು ತೀರ್ಮಾನಿಸುವ ಸಲುವಾಗಿ ಅವರು ತಮ್ಮ ಲೇಖನಿಗಳನ್ನು ಹಾಕಿ ಚೀಟಿಯೆತ್ತುವ ಸಂದರ್ಭದಲ್ಲಿ ತಾವು ಅವರ ಬಳಿಯಿರಲಿಲ್ಲ. ಅವರು ತರ್ಕಿಸುತ್ತಿದ್ದಾಗಲೂ ತಾವು ಅವರ ಬಳಿಯಿರಲಿಲ್ಲ.
(45) ‘ಓ ಮರ್ಯಮ್! ಖಂಡಿತವಾಗಿಯೂ ಅಲ್ಲಾಹು ತನ್ನ ವತಿಯ ಒಂದು ‘ವಚನ’ದ(73) ಕುರಿತು ತಮಗೆ ಶುಭವಾರ್ತೆಯನ್ನು ತಿಳಿಸುತ್ತಿರುವನು. ಅವರ ಹೆಸರು ಮರ್ಯಮ್‍ರ ಪುತ್ರ ಈಸಾ ಮಸೀಹ್(74) ಎಂದಾಗಿರುವುದು. ಅವರು ಇಹಲೋಕದಲ್ಲೂ ಪರಲೋಕದಲ್ಲೂ ಮಹತ್ವವುಳ್ಳವರೂ, ಸಾಮೀಪ್ಯವನ್ನು ಗಳಿಸಿದವರಲ್ಲಿ ಸೇರಿದವರೂ ಆಗಿರುವರು’ ಎಂದು ಮಲಕ್‍ಗಳು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
73. ಸ್ತ್ರೀ-ಪುರುಷ ಸಂಪರ್ಕವಿಲ್ಲದೆಯೇ ಅಲ್ಲಾಹುವಿನ ಆಜ್ಞೆಯಂತೆ ಹುಟ್ಟಿದ ಕಾರಣ ಪ್ರವಾದಿ ಈಸಾ(ಅ) ರವರನ್ನು ‘ಅಲ್ಲಾಹುವಿನ ವಚನ’ ಎಂದು ಬಣ್ಣಿಸಲಾಗಿದೆ.
74. ‘ಈಸಾ’ ಎಂಬುದು ವ್ಯಕ್ತಿಯ ಹೆಸರಾಗಿದೆ. ‘ಮಸೀಹ್’ ಎಂಬುದು ಪದವಿಯಾಗಿದೆ. ಮಸೀಹ್ ಎಂದರೆ ಅಭಿಷೇಕ ಮಾಡಲಾದವನು ಎಂದರ್ಥ. ಪೀಠಾರೋಹಣದ ಸಮಯದಲ್ಲಿ ದೊರೆಗಳನ್ನು ಸುಗಂಧ ದೃವ್ಯಗಳ ಲೇಪನ ಇತ್ಯಾದಿಗಳಿಂದ ಅಭಿಷೇಕ ಮಾಡುವ ಸಂಪ್ರದಾಯವಿರುವ ಕಾರಣ ಅವರು ದೊರೆ ಎಂಬುದರ ಪರ್ಯಾಯ ಪದವಾದ ಮಸೀಹ್ ಎಂಬ ಪದವನ್ನು ಬಳಸಲಾರಂಭಿಸಿದರು. ಪ್ರವಾದಿ ಈಸಾ(ಅ) ರವರ ಅನುಯಾಯಿಗಳು ಅವರಿಗೆ ಇಸ್ರೇಲಿನ ದೊರೆ ಎಂಬ ಪದವಿ ನೀಡಿದ್ದರು.
(46) ‘ಅವರು ತೊಟ್ಟಿಲಲ್ಲಿರುವಾಗಲೂ, ಮಧ್ಯವಯಸ್ಕ ರಾಗಿರುವಾಗಲೂ ಜನರೊಂದಿಗೆ ಮಾತನಾಡುವರು ಮತ್ತು ಅವರು ಸಜ್ಜನರಲ್ಲಿ ಸೇರಿದವರಾಗಿರುವರು’.
(47) ಆಕೆ (ಮರ್ಯಮ್) ಹೇಳಿದರು: ‘ಓ ನನ್ನ ರಬ್! ನನ್ನನ್ನು ಯಾವೊಬ್ಬ ಮನುಷ್ಯನೂ ಸ್ಪರ್ಶಿಸದಿರುವಾಗ ನನಗೆ ಮಗುವಾಗುವುದಾದರೂ ಹೇಗೆ!?’ ಅಲ್ಲಾಹು ಹೇಳಿದನು: ‘ಹಾಗೆಯೇ ಆಗುವುದು. ಅಲ್ಲಾಹು ತಾನಿಚ್ಛಿಸುವುದನ್ನು ಸೃಷ್ಟಿಸುವನು. ಅವನೊಂದು ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ ‘ಉಂಟಾಗು’ ಎಂದಷ್ಟೇ ಹೇಳುವನು. ತಕ್ಷಣ ಅದುಂಟಾಗುವುದು!’
(48) ಅವನು ಅವರಿಗೆ (ಈಸಾರಿಗೆ) ಗ್ರಂಥವನ್ನೂ, ಜ್ಞಾನವನ್ನೂ, ತೌರಾತನ್ನೂ, ಇಂಜೀಲನ್ನೂ(75) ಕಲಿಸುವನು.
75. ತೌರಾತ್ ಎಂದರೆ ಬೈಬಲ್‍ನ ಹಳೆಯ ಒಡಂಬಡಿಕೆ ಮತ್ತು ಇಂಜೀಲ್ ಎಂದರೆ ಬೈಬಲ್‍ನ ಹೊಸ ಒಡಂಬಡಿಕೆ ಎಂದು ಭಾವಿಸಲಾಗುತ್ತದೆ. ಆದರೆ ಮೂಸಾ(ಅ) ಮತ್ತು ಈಸಾ(ಅ) ರವರಿಗೆ ಅಲ್ಲಾಹುವಿನ ಕಡೆಯಿಂದ ಅವತೀರ್ಣಗೊಂಡಿದ್ದ ಸಂದೇಶಗಳ ಹೊರತಾಗಿ ಪುರೋಹಿತರು ಮತ್ತು ಇತಿಹಾಸಕಾರರು ಸ್ವತಃ ರಚಿಸಿ ಸೇರ್ಪಡೆಗೊಳಿಸಿದ ಹಲವು ಭಾಗಗಳು ಇಂದಿನ ಬೈಬಲ್‍ನಲ್ಲಿ ಸೇರಿಕೊಂಡಿವೆಯೆಂದು ಬೈಬಲ್ ಹಾಗೂ ಕ್ರೈಸ್ತ ಸಭೆಯ ಇತಿಹಾಸದಿಂದ ತಿಳಿದು ಬರುತ್ತದೆ.
(49) (ಅವನು ಅವರನ್ನು) ಇಸ್ರಾಈಲ್ ಸಂತತಿಯೆಡೆಗೆ ಒಬ್ಬ ಸಂದೇಶವಾಹಕರಾಗಿ ಕಳುಹಿಸುವನು. (ಈಸಾ ಅವರೊಂದಿಗೆ ಹೇಳುವರು:) ‘ನಾನು ನಿಮ್ಮ ರಬ್‌ನ ವತಿಯ ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿರುವೆನು. ನಾನು ಜೇಡಿ ಮಣ್ಣಿನಿಂದ ಹಕ್ಕಿಯ ಆಕೃತಿಯೊಂದನ್ನು ನಿಮಗಾಗಿ ವಿನ್ಯಾಸಗೊಳಿಸುವೆನು. ತರುವಾಯ ನಾನು ಅದರಲ್ಲಿ ಊದುವಾಗ ಅಲ್ಲಾಹುವಿನ ಅನುಮತಿಯೊಂದಿಗೆ ಅದೊಂದು ಹಕ್ಕಿಯಾಗಿ ಮಾರ್ಪಡುವುದು. ನಾನು ಅಲ್ಲಾಹುವಿನ ಅನುಮತಿಯೊಂದಿಗೆ ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತ್ತು ಸತ್ತವರನ್ನು ಜೀವಂತಗೊಳಿಸುವೆನು. ನೀವು ತಿನ್ನುತ್ತಿರುವುದರ ಕುರಿತು ಮತ್ತು ನೀವು ನಿಮ್ಮ ಮನೆಗಳಲ್ಲಿ ಜೋಪಾನವಾಗಿಡುವುದರ ಕುರಿತು ನಾನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿಡುವವರಾಗಿದ್ದರೆ ಖಂಡಿತವಾಗಿಯೂ ಅದರಲ್ಲಿ ನಿಮಗೊಂದು ದೃಷ್ಟಾಂತವಿದೆ.
(50) ನನ್ನ ಮುಂದಿರುವ ತೌರಾತನ್ನು ದೃಢೀಕರಿಸುವವನಾಗಿಯೂ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿರುವ ವಸ್ತುಗಳ ಪೈಕಿ ಕೆಲವನ್ನು ನಿಮಗೆ ಧರ್ಮಸಮ್ಮತಗೊಳಿಸುವ ಸಲುವಾಗಿಯೂ(76) (ನಾನು ನಿಯೋಗಿಸಲ್ಪಟ್ಟಿರುವೆನು). ನಿಮ್ಮ ರಬ್‌ನ ವತಿಯ ದೃಷ್ಟಾಂತವನ್ನೂ ನಾನು ನಿಮ್ಮ ಬಳಿಗೆ ತಂದಿರುವೆನು. ಆದ್ದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
76. ಯಹೂದರ ಧಿಕ್ಕಾರದ ನಿಮಿತ್ತ ಅಲ್ಲಾಹು ಅವರ ಮೇಲೆ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದನು. ಒಂಟೆಯ ಮಾಂಸ ತಿನ್ನುವುದು, ಶನಿವಾರ ಉದ್ಯೋಗ ಮಾಡುವುದು ಇತ್ಯಾದಿ ಅವರ ಮೇಲೆ ಹೇರಲಾದ ನಿಷೇಧಗಳಾಗಿದ್ದವು. ಆದರೆ ಅಲ್ಲಾಹು ಈಸಾರವರ ಮೂಲಕ ಇಂತಹ ನಿಯಮಗಳಿಗೆ ರಿಯಾಯಿತಿ ನೀಡಿದನು.
(51) ಖಂಡಿತವಾಗಿಯೂ ಅಲ್ಲಾಹು ನನ್ನ ಮತ್ತು ನಿಮ್ಮ ರಬ್ ಆಗಿರುವನು. ಆದ್ದರಿಂದ ಅವನನ್ನು ಆರಾಧಿಸಿರಿ. ಇದು ನೇರವಾದ ಮಾರ್ಗವಾಗಿದೆ’.
(52) ತರುವಾಯ ಈಸಾರಿಗೆ ಅವರ ನಿಷೇಧವು ಮನದಟ್ಟಾದಾಗ ಅವರು ಹೇಳಿದರು: ‘ಅಲ್ಲಾಹುವಿನೆಡೆಗೆ ನನ್ನ ಸಹಾಯಕರಾಗಿ ಯಾರಿದ್ದೀರಿ?’ ಹವಾರಿಗಳು ಹೇಳಿದರು: ‘ನಾವು ಅಲ್ಲಾಹುವಿನ ಸಹಾಯಕರಾಗಿರುವೆವು. ನಾವು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವೆವು ಮತ್ತು ನಾವು (ಅವನಿಗೆ) ಶರಣಾದವರಾಗಿರುವೆವು ಎಂಬುದಕ್ಕೆ ತಾವು ಸಾಕ್ಷ್ಯವಹಿಸಿರಿ’.
(53) (ತರುವಾಯ ಅವರು ಹೀಗೆ ಪ್ರಾರ್ಥಿಸಿದರು): ‘ಓ ನಮ್ಮ ರಬ್! ನೀನು ಅವತೀರ್ಣಗೊಳಿಸಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು ಮತ್ತು ನಾವು (ನಿನ್ನ) ಸಂದೇಶವಾಹಕರನ್ನು ಅನುಸರಿಸಿರುವೆವು. ಆದ್ದರಿಂದ ನಮ್ಮನ್ನು ಸಾಕ್ಷ್ಯವಹಿಸಿದವರೊಂದಿಗೆ ದಾಖಲಿಸು’.
(54) ಅವರು (ಸತ್ಯನಿಷೇಧಿಗಳು) ತಂತ್ರ ಹೂಡಿದರು. ಅಲ್ಲಾಹು ಕೂಡ ತಂತ್ರ ಹೂಡಿದನು. ತಂತ್ರ ಹೂಡುವವರಲ್ಲಿ ಅಲ್ಲಾಹು ಅತ್ಯುತ್ತಮನಾಗಿರುವನು.
(55) ‘ಓ ಈಸಾ! ಖಂಡಿತವಾಗಿಯೂ ತಮ್ಮನ್ನು ನಾನು ಪೂರ್ಣವಾಗಿ ವಹಿಸಿಕೊಳ್ಳುವೆನು ಮತ್ತು ತಮ್ಮನ್ನು ನನ್ನ ಬಳಿಗೆ ಎತ್ತಿಕೊಳ್ಳುವೆನು. ತಮ್ಮನ್ನು ನಾನು ಸತ್ಯ ನಿಷೇಧಿಗಳಿಂದ ಪರಿಶುದ್ಧಗೊಳಿಸುವೆನು ಮತ್ತು ತಮ್ಮನ್ನು ಅನುಸರಿಸಿದವರನ್ನು ಪುನರುತ್ಥಾನ ದಿನದವರೆಗೂ ಸತ್ಯ ನಿಷೇಧಿಗಳಿಗಿಂತ ಶ್ರೇಷ್ಠರಾಗಿ ಮಾಡುವೆನು. ತರುವಾಯ ನಿಮ್ಮ ಮರಳುವಿಕೆಯು ನನ್ನ ಬಳಿಗಾಗಿದೆ. ನೀವು ಭಿನ್ನಾಭಿಪ್ರಾಯ ಹೊಂದುತ್ತಿರುವ ವಿಷಯದಲ್ಲಿ ಆಗ ನಾನು ನಿಮ್ಮ ನಡುವೆ ತೀರ್ಪು ನೀಡುವೆನು’ ಎಂದು ಅಲ್ಲಾಹು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
(56) ಆದರೆ (ಸತ್ಯವನ್ನು) ನಿಷೇಧಿಸಿದವರಿಗೆ ನಾನು ಇಹಲೋಕದಲ್ಲೂ, ಪರಲೋಕದಲ್ಲೂ ಕಠೋರ ಶಿಕ್ಷೆಯನ್ನು ನೀಡುವೆನು. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.
(57) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ, ಅವರಿಗೆ ಅಲ್ಲಾಹು ಅವರ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡಲಾರನು.
(58) ಇವು ನಾವು ತಮಗೆ ಓದಿಕೊಡುತ್ತಿರುವ (ಅಲ್ಲಾಹುವಿನ) ದೃಷ್ಟಾಂತಗಳಲ್ಲೂ, ಯುಕ್ತಿಪೂರ್ಣ ಉಪದೇಶಗಳಲ್ಲೂ ಸೇರಿದ ವಿಷಯಗಳಾಗಿವೆ.
(59) ಅಲ್ಲಾಹುವಿನ ಮಟ್ಟಿಗೆ ಈಸಾರವರ ಉಪಮೆಯು ಆದಮ್‍ರ ಉಪಮೆಯಂತಿದೆ. ಅವರನ್ನು (ಆದಮ್‍ರ ರೂಪವನ್ನು) ಅವನು ಮಣ್ಣಿನಿಂದ ಸೃಷ್ಟಿಸಿದನು. ತರುವಾಯ ಅದರೊಂದಿಗೆ ಉಂಟಾಗು ಎಂದನು. ತಕ್ಷಣ ಅವರು (ಆದಮ್) ಉಂಟಾದರು.(77)
77. ತಂದೆಯಿಲ್ಲದೆ ಜನಿಸಿದ ಈಸಾ(ಅ) ರವರು ಮತ್ತು ತಂದೆ ತಾಯಂದಿರಿಬ್ಬರೂ ಇಲ್ಲದೆ ಸೃಷ್ಟಿಸಲಾದ ಆದಮ್(ಅ) ರವರು ಅಲ್ಲಾಹುವಿನ ಸೃಷ್ಟಿಗಳೇ ವಿನಾ ಅವನ ಪುತ್ರರಲ್ಲ.
(60) ಇದು ತಮ್ಮ ರಬ್‌ನ ವತಿಯ ಸತ್ಯವಾಗಿದೆ. ಆದ್ದರಿಂದ ತಾವು ಸಂದೇಹಪಡುವವರ ಪೈಕಿ ಸೇರದಿರಿ.
(61) ಜ್ಞಾನವು ತಮ್ಮ ಬಳಿಗೆ ಬಂದ ಬಳಿಕವೂ ಅವರ (ಈಸಾರವರ) ವಿಷಯದಲ್ಲಿ ಯಾರಾದರೂ ತಮ್ಮೊಂದಿಗೆ ತರ್ಕಿಸಿದರೆ ತಾವು ಹೇಳಿರಿ: ‘ಬನ್ನಿರಿ! ನಾವು ನಮ್ಮ ಮಕ್ಕಳನ್ನೂ ನಿಮ್ಮ ಮಕ್ಕಳನ್ನೂ ಕರೆಯೋಣ. ನಮ್ಮ ಸ್ತ್ರೀಯರನ್ನೂ ನಿಮ್ಮ ಸ್ತ್ರೀಯರನ್ನೂ ಕರೆಯೋಣ. ನಾವು ಮತ್ತು ನೀವೂ (ಒಟ್ಟುಗೂಡೋಣ). ತರುವಾಯ ಸುಳ್ಳು ಹೇಳುವವರ ಮೇಲೆ ಅಲ್ಲಾಹುವಿನ ಶಾಪವೆರಗಲು ಮನಸಾರೆ ಪ್ರಾರ್ಥಿಸೋಣ’.
(62) ಖಂಡಿತವಾಗಿಯೂ ಇದು ನೈಜ ಘಟನೆಗಳ ವಿವರಣೆಯಾಗಿದೆ. ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿಲ್ಲ. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.
(63) ತರುವಾಯ ಅವರು ವಿಮುಖರಾಗುವುದಾದರೆ ಖಂಡಿತವಾಗಿಯೂ ಅಲ್ಲಾಹು ವಿನಾಶಕಾರಿಗಳ ಕುರಿತು ಅರಿವುಳ್ಳವನಾಗಿರುವನು.
(64) (ಓ ಪ್ರವಾದಿಯವರೇ!) ಹೇಳಿರಿ: ‘ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ.(78) ಅಂದರೆ ನಾವು ಅಲ್ಲಾಹುವಿನ ಹೊರತು (ಇನ್ನಾರನ್ನೂ) ಆರಾಧಿಸಬಾರದು, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬಾರದು ಮತ್ತು ನಮ್ಮಲ್ಲಿ ಕೆಲವರು ಕೆಲವರನ್ನು ಅಲ್ಲಾಹುವಿನ ಹೊರತಾಗಿರುವ ರಬ್‌ಗಳನ್ನಾಗಿ ಮಾಡಬಾರದು’ (ಎಂಬ ತತ್ವ ಸಿದ್ಧಾಂತದೆಡೆಗೆ ಬನ್ನಿರಿ). ತರುವಾಯ ಅವರೇನಾದರೂ ವಿಮುಖರಾಗುವುದಾದರೆ ‘ನಾವು (ಅಲ್ಲಾಹುವಿಗೆ) ಶರಣಾಗತರಾಗಿರುವೆವು ಎಂಬುದಕ್ಕೆ ನೀವು ಸಾಕ್ಷ್ಯ ವಹಿಸಿರಿ’ ಎಂದು ಅವರೊಂದಿಗೆ ಹೇಳಿರಿ.(79)
78. ಅರ್ಥಾತ್ ನಮಗೂ ನಿಮಗೂ ಸಮಾನವಾಗಿ ಅಂಗೀಕರಿಸಬಹುದಾದ ಒಂದು ಸಾಮಾನ್ಯ ತತ್ವದೆಡೆಗೆ ಬನ್ನಿರಿ.
(65) ಓ ಗ್ರಂಥದವರೇ! ನೀವು ಇಬ್ರಾಹೀಮ್‍ರ ವಿಷಯದಲ್ಲಿ ಏಕೆ ತರ್ಕಿಸುತ್ತಿರುವಿರಿ? ತೌರಾತ್ ಮತ್ತು ಇಂಜೀಲ್ ಅವರ ಕಾಲಾನಂತರವಲ್ಲದೆ ಅವತೀರ್ಣಗೊಂಡಿಲ್ಲ. ನೀವು ಚಿಂತಿಸಲಾರಿರೇ?
ಧರ್ಮಬೋಧಕರಿಗಾಗಲಿ ಇಲ್ಲ.
(66) ಓ ಜನರೇ! ನೀವು ನಿಮಗೆ ಅರಿವಿರುವ ವಿಷಯದಲ್ಲಿ ತರ್ಕಿಸಿರುವಿರಿ. ಆದರೆ ನಿಮಗೆ ಅರಿವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತಿರುವಿರಿ? ಅಲ್ಲಾಹು ಅರಿಯುವನು. ನೀವು ಅರಿಯಲಾರಿರಿ.
(67) ಇಬ್ರಾಹೀಮ್‍ರು ಯಹೂದಿಯೋ, ಕ್ರೈಸ್ತರೋ ಆಗಿರಲಿಲ್ಲ, ಆದರೆ ಅವರು ಋಜುಮನಸ್ಕರೂ, (ಅಲ್ಲಾಹುವಿಗೆ) ಶರಣಾದವರೂ ಆಗಿದ್ದರು. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.
(68) ಖಂಡಿತವಾಗಿಯೂ ಜನರ ಪೈಕಿ ಇಬ್ರಾಹೀಮ್‌ರೊಂದಿಗೆ ಹೆಚ್ಚು ನಿಕಟರಾಗಿರುವವರು ಅವರನ್ನು ಅನುಸರಿಸಿದವರು ಮತ್ತು ಈ ಪ್ರವಾದಿಯೂ, (ಈ ಪ್ರವಾದಿಯಲ್ಲಿ) ವಿಶ್ವಾಸವಿಟ್ಟವರೂ ಆಗಿರುವರು. ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿರುವನು.
(69) ನಿಮ್ಮನ್ನು ಪಥಭ್ರಷ್ಟಗೊಳಿಸಲು ಸಾಧ್ಯವಾಗುತ್ತಿದ್ದರೆ ಎಂದು ಗ್ರಂಥದವರ ಪೈಕಿ ಒಂದು ಪಂಗಡದವರು ಆಶಿಸುವರು. ಆದರೆ ಸ್ವತಃ ತಮ್ಮನ್ನೇ ವಿನಾ ಅವರು ಪಥಭ್ರಷ್ಟಗೊಳಿಸಲಾರರು. ಅವರದನ್ನು ಗ್ರಹಿಸುವುದಿಲ್ಲ.
(70) ಓ ಗ್ರಂಥದವರೇ! ನೀವು ಅಲ್ಲಾಹುವಿನ ದೃಷ್ಟಾಂತಗಳನ್ನು, ಸ್ವತಃ ನೀವೇ ಅವುಗಳಿಗೆ ಸಾಕ್ಷಿಗಳಾಗಿದ್ದೂ ಕೂಡ ಏಕೆ ನಿಷೇಧಿಸುತ್ತಿರುವಿರಿ?
(71) ಓ ಗ್ರಂಥದವರೇ! ನೀವು ಸತ್ಯವನ್ನು ಅಸತ್ಯದೊಂದಿಗೆ ಏಕೆ ಬೆರೆಸುತ್ತಿರುವಿರಿ ಮತ್ತು ತಿಳಿದವರಾಗಿದ್ದೂ ಸಹ ಸತ್ಯವನ್ನೇಕೆ ಮುಚ್ಚಿಡುತ್ತಿರುವಿರಿ?
(72) ಗ್ರಂಥದವರ ಪೈಕಿ ಒಂದು ಪಂಗಡದವರು (ತಮ್ಮ ಅನುಯಾಯಿಗಳೊಂದಿಗೆ) ಹೇಳಿದರು: ‘ನೀವು ಹಗಲಿನ ಆರಂಭದಲ್ಲಿ ಈ ವಿಶ್ವಾಸಿಗಳಿಗೆ ಅವತೀರ್ಣಗೊಂಡಿರುವುದರಲ್ಲಿ ವಿಶ್ವಾಸವಿಡಿರಿ ಮತ್ತು ಅದರ ಕೊನೆಯಲ್ಲಿ ಅದನ್ನು ನಿಷೇಧಿಸಿರಿ. (ಅದನ್ನು ನೋಡಿ) ಅವರು (ವಿಶ್ವಾಸಿಗಳು) ಹಿಂದಕ್ಕೆ ಬರಲೂಬಹುದು.’(80)
80. ಬೆಳಗ್ಗೆ ವಿಶ್ವಾಸ ಘೋಷಿಸಿದವರು ಸಂಜೆಯಾಗುವಾಗ ವಿಶ್ವಾಸವನ್ನು ತ್ಯಜಿಸಿದರೆಂಬ ವಿಷಯ ತಿಳಿದಾಗ, ಅವರು ಸತ್ಯವಿಶ್ವಾಸವನ್ನು ತ್ಯಜಿಸಲು ಸಮರ್ಪಕವಾದ ಕಾರಣಗಳೇನಾದರೂ ಇರಬಹುದೆಂದು ಕೆಲವರಾದರೂ ಭಾವಿಸುವರು ಎಂಬುದಾಗಿತ್ತು ಅವರ ಲೆಕ್ಕಾಚಾರ.
(73) (ಅವರು ಹೇಳುವರು): ‘ನಿಮ್ಮ ಧರ್ಮವನ್ನು ಹಿಂಬಾಲಿಸಿದವರನ್ನಲ್ಲದೆ ನೀವು ನಂಬದಿರಿ’. (ಓ ಪ್ರವಾದಿಯವರೇ!) ಹೇಳಿರಿ: ‘ಖಂಡಿತವಾಗಿಯೂ (ನೈಜ) ಮಾರ್ಗದರ್ಶನವು ಅಲ್ಲಾಹುವಿನ ಮಾರ್ಗದರ್ಶನವಾಗಿದೆ.’ (ಅವರು ಹೀಗೂ ಹೇಳುವರು): ‘ನಿಮಗೆ ನೀಡಲಾದಂತಹ (ಗ್ರಂಥ) ಇನ್ನಾರಿಗಾದರೂ ನೀಡಲಾಗುವುದೆಂದಾಗಲಿ ಅಥವಾ ಅವರು (ವಿಶ್ವಾಸಿಗಳು) ನಿಮ್ಮ ರಬ್‌ನ ಬಳಿ ನಿಮ್ಮೊಂದಿಗೆ ವಾದ ಮಾಡುವರೆಂದಾಗಲಿ (ನೀವು ನಂಬದಿರಿ)’. (ಓ ಪ್ರವಾದಿಯವರೇ!) ಹೇಳಿರಿ: ‘ಖಂಡಿತವಾಗಿಯೂ ಅನುಗ್ರಹವಿರುವುದು ಅಲ್ಲಾಹುವಿನ ಕೈಯಲ್ಲಾಗಿದೆ. ತಾನಿಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುವನು. ಅಲ್ಲಾಹು ಅಪಾರ ಸಾಮರ್ಥ್ಯವುಳ್ಳವನೂ, (ಎಲ್ಲವನ್ನು) ಅರಿಯುವವನೂ ಆಗಿರುವನು.’
(74) ಅವನು ತಾನಿಚ್ಛಿಸುವವರನ್ನು ತನ್ನ ಕರುಣೆಯಿಂದ ವಿಶೇಷವಾಗಿ ಆರಿಸುವನು. ಅಲ್ಲಾಹು ಮಹಾ ಅನುಗ್ರಹದ ಒಡೆಯನಾಗಿರುವನು.
(75) ತಾವು ಒಂದು ಚಿನ್ನದ ರಾಶಿಯನ್ನು ನಂಬಿಕೆಯೊಂದಿಗೆ ವಹಿಸಿಕೊಟ್ಟರೆ ಅದನ್ನು ತಮಗೆ ಮರಳಿ ಒಪ್ಪಿಸುವಂತಹವರು ಗ್ರಂಥದವರಲ್ಲಿರುವರು. ಅವರಲ್ಲಿ ಮತ್ತೊಂದು ವಿಧದವರೂ ಇರುವರು. ಅವರಿಗೆ ತಾವು ನಂಬಿಕೆಯೊಂದಿಗೆ ಒಂದು ದೀನಾರ್ ವಹಿಸಿಕೊಟ್ಟರೂ ನಿರಂತರವಾಗಿ (ಕೇಳುತ್ತಾ) ನಿಲ್ಲದ ಹೊರತು ಅವರು ಅದನ್ನು ತಮಗೆ ಮರಳಿ ಒಪ್ಪಿಸಲಾರರು. ಇದು ಅನಕ್ಷರಸ್ಥರ(81) ವಿಷಯದಲ್ಲಿ (ಅವರನ್ನು ವಂಚಿಸುವುದರಲ್ಲಿ) ನಮಗೆ ದೋಷವಿಲ್ಲವೆಂದು ಅವರು ಹೇಳಿರುವ ಕಾರಣದಿಂದಾಗಿದೆ. ಅವರು ತಿಳಿದವರಾಗಿದ್ದೂ ಸಹ ಅಲ್ಲಾಹುವಿನ ಹೆಸರಲ್ಲಿ ಸುಳ್ಳು ಹೇಳುತ್ತಿರುವರು.
81. ಪಾವಿತ್ರ್ಯತೆಯಿರುವುದು ದೇವರ ಮಕ್ಕಳಾದ ಇಸ್ರಾಈಲರ ಜೀವ ಹಾಗೂ ಸೊತ್ತುಗಳಿಗೆ ಮಾತ್ರವಾಗಿದೆ. ಆದ್ದರಿಂದ ಅನಕ್ಷರಸ್ಥರೂ ಅನಾಗರಿಕರೂ ಆಗಿರುವ ಅರಬರ ಸೊತ್ತನ್ನು ವಶಪಡಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲವೆಂದು ಯಹೂದಿಗಳ ಪೈಕಿ ಕೆಲವರು ಭಾವಿಸಿದ್ದರು.
(76) ಹಾಗಲ್ಲ, ಯಾರಾದರೂ ತನ್ನ ಕರಾರನ್ನು ನೆರವೇರಿಸಿದರೆ ಮತ್ತು ಭಯಭಕ್ತಿ ಪಾಲಿಸಿದರೆ ಖಂಡಿತವಾಗಿಯೂ ಅಲ್ಲಾಹು ಭಯಭಕ್ತಿ ಪಾಲಿಸುವವರನ್ನು ಪ್ರೀತಿಸುವನು.
(77) ಅಲ್ಲಾಹುವಿನೊಂದಿಗಿರುವ ಕರಾರನ್ನು ಮತ್ತು ತಮ್ಮ ಶಪಥಗಳನ್ನು ನಿಕೃಷ್ಟ ಬೆಲೆಗೆ ಮಾರುವವರಾರೋ ಅಂತಹವರಿಗೆ ಪರಲೋಕದಲ್ಲಿ ಯಾವುದೇ ಪಾಲೂ ಇರಲಾರದು. ಪುನರುತ್ಥಾನ ದಿನದಂದು ಅಲ್ಲಾಹು ಅವರೊಂದಿಗೆ ಮಾತನಾಡುವುದಾಗಲಿ, ಅವರೆಡೆಗೆ (ಕರುಣೆಯ) ನೋಟವನ್ನು ಬೀರುವುದಾಗಲಿ ಮಾಡಲಾರನು. ಅವರನ್ನು ಶುದ್ಧೀಕರಿಸುವುದನ್ನೂ ಮಾಡಲಾರನು. ಅವರಿಗೆ ಯಾತನಾಮಯವಾದ ಶಿಕ್ಷೆಯಿರುವುದು.
(78) ಗ್ರಂಥದ ವಾಕ್ಯಶೈಲಿಯನ್ನು, ಅದು ಗ್ರಂಥದಲ್ಲಿ ಸೇರಿದ್ದಾಗಿದೆಯೆಂದು ನೀವು ಭಾವಿಸುವ ಸಲುವಾಗಿ, ತಮ್ಮ ನಾಲಗೆಗಳ ಮೂಲಕ ತಿರುಚುವಂತಹ ಕೆಲವರೂ ಅವರಲ್ಲಿರುವರು. ಆದರೆ ಅದು ಗ್ರಂಥಕ್ಕೆ ಸೇರಿದ್ದಲ್ಲ. ‘ಅದು ಅಲ್ಲಾಹುವಿನ ವತಿಯಿಂದಾಗಿದೆ’ ಎಂದು ಅವರು ಹೇಳುವರು. ಆದರೆ ಅದು ಅಲ್ಲಾಹುವಿನ ವತಿಯಿಂದಲ್ಲ. ಅವರು ತಿಳಿದವರಾಗಿದ್ದೂ ಸಹ ಅಲ್ಲಾಹುವಿನ ಹೆಸರಲ್ಲಿ ಸುಳ್ಳು ಹೇಳುತ್ತಿರುವರು.
(79) ಒಬ್ಬ ಮನುಷ್ಯನಿಗೆ ಅಲ್ಲಾಹು ಗ್ರಂಥವನ್ನು, ಧಾರ್ಮಿಕ ಜ್ಞಾನವನ್ನು ಮತ್ತು ಪ್ರವಾದಿತ್ವವನ್ನು ನೀಡುವುದು, ತರುವಾಯ ಅವನು ಜನರೊಂದಿಗೆ ‘ನೀವು ಅಲ್ಲಾಹುವಿನ ಹೊರತು ನನ್ನ ದಾಸರಾಗಿರಿ’ ಎಂದು ಹೇಳುವುದು ಉಂಟಾಗಲು ಸಾಧ್ಯವಿಲ್ಲ. ಆದರೆ ‘ನೀವು ಗ್ರಂಥವನ್ನು ಕಲಿಸಿಕೊಡುತ್ತಿರುವ ಮೂಲಕ ಮತ್ತು ನೀವು ಕಲಿಯುತ್ತಿರುವುದರ ಮೂಲಕ ನೀವು ಅಲ್ಲಾಹುವಿನ ನಿಷ್ಕಳಂಕ ದಾಸರಾಗಿರಿ’ (ಎಂದೇ ಅವನು ಹೇಳುವನು).
(80) ನೀವು ಮಲಕ್‍ಗಳನ್ನು ಮತ್ತು ಪ್ರವಾದಿಗಳನ್ನು ರಬ್‌ಗಳನ್ನಾಗಿ ಮಾಡಿಕೊಳ್ಳಿರಿ ಎಂದು ಅವನು ನಿಮ್ಮೊಂದಿಗೆ ಆದೇಶಿಸಲಾರನು. ನೀವು ಮುಸ್ಲಿಮರಾದ ಬಳಿಕ ಅವನು ನಿಮ್ಮೊಂದಿಗೆ ಅವಿಶ್ವಾಸಿಗಳಾಗಲು ಆದೇಶಿಸುವನು (ಎಂದೇ ನೀವು ಭಾವಿಸುತ್ತಿರುವುದು)?
(81) ಅಲ್ಲಾಹು ಪ್ರವಾದಿಗಳಿಂದ ಕರಾರು ಪಡೆದ ಸಂದರ್ಭ(ವನ್ನು ಸ್ಮರಿಸಿರಿ). ‘ನಾನು ನಿಮಗೆ ಗ್ರಂಥವನ್ನು ಮತ್ತು ಜ್ಞಾನವನ್ನು ನೀಡಿ, ತರುವಾಯ ನಿಮ್ಮ ಬಳಿಯಿರುವುದನ್ನು ದೃಢೀಕರಿಸುತ್ತಾ ಓರ್ವ ಸಂದೇಶವಾಹಕರು ನಿಮ್ಮ ಬಳಿ ಬಂದರೆ ನೀವು ಖಂಡಿತವಾಗಿಯೂ ಅವರಲ್ಲಿ ವಿಶ್ವಾಸವಿಡಬೇಕು ಮತ್ತು ಅವರಿಗೆ ಸಹಾಯ ಮಾಡಬೇಕು’. (ತರುವಾಯ) ಅವನು (ಅವರೊಂದಿಗೆ) ಕೇಳಿದನು: ‘ನೀವಿದನ್ನು ಒಪ್ಪಿಕೊಂಡು, ಆ ವಿಷಯದಲ್ಲಿ ನನ್ನೊಂದಿಗಿರುವ ಹೊಣೆಯನ್ನು ವಹಿಸಿಕೊಂಡಿರುವಿರಾ?’ ಅವರು ಹೇಳಿದರು: ‘ಹೌದು. ನಾವು ಒಪ್ಪಿಕೊಂಡಿರುವೆವು’. ಅವನು ಹೇಳಿದನು: ‘ಹಾಗಾದರೆ ನೀವು ಅದಕ್ಕೆ ಸಾಕ್ಷಿಗಳಾಗಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿಯಾಗಿರುವೆನು’.
(82) ಅದರ ನಂತರವೂ(82) ಯಾರಾದರೂ ವಿಮುಖರಾಗುವುದಾದರೆ ಅವರೇ ಧಿಕ್ಕಾರಿಗಳಾಗಿರುವರು.
82. ಈ ಕರಾರಿನ ಬಗ್ಗೆ ಅರಿತುಕೊಂಡ ಬಳಿಕ ಒಬ್ಬ ಪೂರ್ವ ಪ್ರವಾದಿಯ ಅನುಯಾಯಿಗಳು ತಮ್ಮತ್ತ ಕಳುಹಿಸಲಾಗುವ ಹೊಸ ಪ್ರವಾದಿಯನ್ನು ತಿರಸ್ಕರಿಸಿದರೆ ಅದು ಗಂಭೀರ ಅಪರಾಧವಾಗಿದೆ. ಆದರೆ ಅಂತ್ಯ ಪ್ರವಾದಿ ಮುಹಮ್ಮದ್(ಸ) ರವರ ಬಳಿಕ ನಕಲಿ ಪ್ರವಾದಿತ್ವವನ್ನು ವಾದಿಸುತ್ತಾ ಬರುವವರ ವಿಷಯವು ಇದರಿಂದ ಸಂಪೂರ್ಣ ಭಿನ್ನವಾಗಿದೆ. ನಕಲಿ ಪ್ರವಾದಿಗಳನ್ನು ತಿರಸ್ಕರಿಸದವರೇ ಸತ್ಯನಿಷೇಧಿಗಳಾಗಿರುವರು.
(83) ಅಲ್ಲಾಹುವಿನ ಧರ್ಮವಲ್ಲದ ಬೇರಾವುದೋ ಧರ್ಮವನ್ನು ಅವರು ಅರಸುತ್ತಿರುವರೇ? (ವಾಸ್ತವಿಕವಾಗಿ) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ವಿಧೇಯತೆಯೊಂದಿಗೆ ಅಥವಾ ಬಲವಂತವಾಗಿ ಅವನಿಗೆ ಶರಣಾಗಿರುವರು. ಅವರನ್ನು ಮರಳಿಸಲಾಗುವುದು ಅವನ ಬಳಿಗೇ ಆಗಿರುವುದು.
(84) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹುವಿನಲ್ಲಿ, ನಮಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ (ಕುರ್‌ಆನ್‌ನಲ್ಲಿ), ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಅ್‌ಕೂಬ್ ಮತ್ತು ಯಅ್‌ಕೂಬ್ ಸಂತತಿಗಳಿಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ, ಮೂಸಾ, ಈಸಾ ಹಾಗೂ ಇತರ ಪ್ರವಾದಿಗಳಿಗೆ ಅವರ ರಬ್‌ನ ವತಿಯಿಂದ ನೀಡಲಾಗಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ವ್ಯತ್ಯಾಸ ಕಲ್ಪಿಸಲಾರೆವು. ನಾವು ಅಲ್ಲಾಹುವಿಗೆ ಶರಣಾದವರಾಗಿರುವೆವು’.
(85) ಯಾರಾದರೂ ಇಸ್ಲಾಮ್‍ಗೆ (ಅಲ್ಲಾಹುವಿಗಿರುವ ಸಮರ್ಪಣೆಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.
(86) ವಿಶ್ವಾಸವಿಟ್ಟ ಬಳಿಕ, ಸಂದೇಶವಾಹಕರನ್ನು ಸತ್ಯವೆಂದು ಸಾಕ್ಷ್ಯವಹಿಸಿದ ಬಳಿಕ ಮತ್ತು ಸುವ್ಯಕ್ತ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕ ಅವಿಶ್ವಾಸಿಗಳಾಗಿ ಮಾರ್ಪಟ್ಟ ಒಂದು ಜನತೆಯನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸುವುದಾದರೂ ಹೇಗೆ? ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
(87) ಅಂತಹವರಿಗಿರುವ ಪ್ರತಿಫಲವು ಅಲ್ಲಾಹುವಿನ, ಮಲಕ್‍ಗಳ ಮತ್ತು ಜನರೆಲ್ಲರ ಶಾಪವು ಅವರ ಮೇಲಿರುವುದು ಎಂಬುದಾಗಿದೆ.
(88) ಅವರು ಅದರಲ್ಲಿ (ಶಾಪ ನಿಮಿತ್ತ ಶಿಕ್ಷೆಯಲ್ಲಿ) ಶಾಶ್ವತರಾಗಿರುವರು. ಅವರಿಗೆ ಶಿಕ್ಷೆಯನ್ನು ಹಗುರ ಗೊಳಿಸಲಾಗದು. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.
(89) ಆದರೆ ಅದರ (ಅವಿಶ್ವಾಸದ) ಬಳಿಕ ಪಶ್ಚಾತ್ತಾಪಪಟ್ಟು, ಜೀವನವನ್ನು ಸುಧಾರಿಸಿಕೊಂಡವರ ಹೊರತು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
(90) ಖಂಡಿತವಾಗಿಯೂ ವಿಶ್ವಾಸವಿಟ್ಟ ಬಳಿಕ ಅವಿಶ್ವಾಸಿಗಳಾಗಿ ಮಾರ್ಪಟ್ಟವರು ಮತ್ತು ಅವಿಶ್ವಾಸವನ್ನು ಹೆಚ್ಚಿಸುತ್ತಲೇ ಹೋದವರು ಯಾರೋ ಅವರ ಪಶ್ಚಾತ್ತಾಪವನ್ನು ಎಂದಿಗೂ ಸ್ವೀಕರಿಸಲಾಗದು. ಪಥಭ್ರಷ್ಟರಾಗಿರುವವರು ಅವರೇ ಆಗಿರುವರು.
(91) ಅವಿಶ್ವಾಸವಿರಿಸಿದವರು ಮತ್ತು ಅವಿಶ್ವಾಸಿಗಳಾಗಿಯೇ ಮರಣಹೊಂದಿದವರ ಪೈಕಿ ಒಬ್ಬನು ಭೂಮಿ ತುಂಬಾ ಚಿನ್ನವನ್ನು ಪ್ರಾಯಶ್ಚಿತ್ತವಾಗಿ ನೀಡಿದರೂ ಅದನ್ನು ಅವನಿಂದ ಸ್ವೀಕರಿಸಲಾಗದು. ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.
(92) ನೀವು ಏನನ್ನು ಇಷ್ಟಪಡುತ್ತಿರುವಿರೋ ಅದರಿಂದ ನೀವು ವ್ಯಯಿಸುವ ತನಕ ನಿಮಗೆ ಪುಣ್ಯವನ್ನು ಸಂಪಾದಿಸಲು ಸಾಧ್ಯವಾಗದು. ನೀವು ಏನೇ ವ್ಯಯಿಸಿದರೂ ಖಂಡಿತವಾಗಿಯೂ ಅಲ್ಲಾಹು ಅದರ ಕುರಿತು ಅರಿವುಳ್ಳವನಾಗಿರುವನು.
(93) ಇಸ್ರಾಈಲ್ ಸಂತತಿಗಳಿಗೆ ಎಲ್ಲ ಆಹಾರಗಳೂ ಧರ್ಮಸಮ್ಮತವಾಗಿತ್ತು. ತೌರಾತ್ ಅವತೀರ್ಣಗೊಳ್ಳುವ ಮುನ್ನ ಇಸ್ರಾಈಲ್‍ರು (ಯಅ್‌ಕೂಬ್‍ರು) ಸ್ವತಃ ತಮ್ಮ ಮೇಲೆ ನಿಷಿದ್ಧಗೊಳಿಸಿದವುಗಳ ಹೊರತು. (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಸತ್ಯಸಂಧರಾಗಿದ್ದರೆ ತೌರಾತನ್ನು ತಂದು ಅದನ್ನು ಪಾರಾಯಣ ಮಾಡಿರಿ’.(83)
83. ಗ್ರಂಥದವರನ್ನು ಕುರ್‌ಆನ್ ಪ್ರವಾದಿ ಇಬ್ರಾಹೀಮ್(ಅ) ರವರ ಋಜುವಾದ ಮಾರ್ಗದೆಡೆಗೆ ಆಹ್ವಾನಿಸಿದಾಗ ಅವರೊಂದು ತರ್ಕವನ್ನು ಮುಂದಿಟ್ಟರು. ಇಬ್ರಾಹೀಮ್(ಅ) ರವರ ಧರ್ಮದಲ್ಲಿ ಒಂಟೆ ಮಾಂಸವು ನಿಷಿದ್ಧವಲ್ಲವೇ? ಹಾಗಾದರೆ ಪ್ರವಾದಿ ಮುಹಮ್ಮದ್(ಸ) ರವರು ಅದನ್ನು ಏಕೆ ಸೇವಿಸುತ್ತಿರುವರು? ಈ ಆಯತ್ ಅದಕ್ಕಿರುವ ಉತ್ತರವಾಗಿದೆ. ಒಂಟೆ ಮಾಂಸವನ್ನು ಪ್ರವಾದಿ ಇಬ್ರಾಹೀಮ್(ಅ) ರವರು ನಿಷಿದ್ಧವೆಂದು ಘೋಷಿಸಿರಲಿಲ್ಲ. ಅವರ ಕಾಲಾನಂತರ ಪ್ರವಾದಿ ಯಅ್‌ಕೂಬ್(ಅ) ರವರು ಸ್ವತಃ ತಮ್ಮ ಮೇಲೆ ಅದನ್ನು ನಿಷಿದ್ಧವೆಂದು ಘೋಷಿಸಿದ್ದರು. ತರುವಾಯ ಇಸ್ರಾಈಲರಿಗೆ ಅದನ್ನು ನಿಷಿದ್ಧಗೊಳಿಸಲಾಯಿತು.
(94) ತರುವಾಯ ಅದರ ಬಳಿಕವೂ ಅಲ್ಲಾಹುವಿನ ಮೇಲೆ ಸುಳ್ಳು ಹೆಣೆದವರಾರೋ ಅವರೇ ಅಕ್ರಮಿಗಳಾಗಿರುವರು.
(95) (ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹು ಸತ್ಯವನ್ನೇ ಹೇಳಿರುವನು. ಆದ್ದರಿಂದ ಋಜುಮನಸ್ಕರಾದ ಇಬ್ರಾಹೀಮ್‍ರ ಮಾರ್ಗವನ್ನು ಅನುಸರಿಸಿರಿ. ಅವರು ಬಹುದೇವಾರಾಧಕರ ಪೈಕಿ ಸೇರಿದವರಾಗಿರಲಿಲ್ಲ.’
(96) ಖಂಡಿತವಾಗಿಯೂ ಮನುಷ್ಯರಿಗಾಗಿ ಸ್ಥಾಪಿಸಲಾದ ಮೊಟ್ಟಮೊದಲ ಆರಾಧನಾಲಯವು ಬಕ್ಕಾ(84)ದಲ್ಲಿರುವುದಾಗಿದೆ. (ಅದು) ಅನುಗ್ರಹೀತವಾಗಿಯೂ, ಸರ್ವ ಲೋಕದವರಿಗೆ ಮಾರ್ಗದರ್ಶಿಯಾಗಿಯೂ (ಅಸ್ತಿತ್ವದಲ್ಲಿದೆ).
84. ಪವಿತ್ರ ಮಕ್ಕಾಗೆ ಅರಬಿಯಲ್ಲಿ ‘ಬಕ್ಕ’ ಎಂಬ ಹೆಸರೂ ಇದೆ.
(97) ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. (ವಿಶೇಷತಃ) ಇಬ್ರಾಹೀಮ್‍ರು ನಿಂತ ಸ್ಥಳವಿದೆ. ಯಾರು ಅದನ್ನು ಪ್ರವೇಶಿಸಿದನೋ ಅವನು ನಿರ್ಭೀತನಾಗಿರುವನು. ಆ ಭವನವನ್ನು ತಲುಪಲು ಸಾಧ್ಯವಿರುವ ಜನರು ಅದರೆಡೆಗೆ ಹಜ್ಜ್ ಯಾತ್ರೆ ಮಾಡುವುದು ಅವರಿಗೆ ಅಲ್ಲಾಹುವಿನೊಂದಿಗಿರುವ ಬಾಧ್ಯತೆಯಾಗಿದೆ. ಯಾರಾದರೂ ಅವಿಶ್ವಾಸವಿಡುವುದಾದರೆ ಖಂಡಿತವಾಗಿಯೂ ಅಲ್ಲಾಹು ಸರ್ವಲೋಕದವರಿಂದ ನಿರಪೇಕ್ಷನಾಗಿರುವನು.
(98) (ಓ ಪ್ರವಾದಿಯವರೇ!) ಹೇಳಿರಿ: ‘ಓ ಗ್ರಂಥದವರೇ! ನೀವು ಮಾಡುತ್ತಿರುವವುಗಳಿಗೆಲ್ಲ ಅಲ್ಲಾಹು ಸಾಕ್ಷಿಯಾಗಿರುವಾಗ ನೀವೇಕೆ ಅಲ್ಲಾಹುವಿನ ವಚನಗಳನ್ನು ನಿಷೇಧಿಸುತ್ತಿರುವಿರಿ?’
(99) (ಓ ಪ್ರವಾದಿಯವರೇ!) ಹೇಳಿರಿ: ‘ಓ ಗ್ರಂಥದವರೇ! ವಿಶ್ವಾಸವಿಟ್ಟವರನ್ನು ಅಲ್ಲಾಹುವಿನ ಮಾರ್ಗದಿಂದ, (ಅದು ಸರಿಯಾಗಿದೆ ಎಂಬುದಕ್ಕೆ) ಸ್ವತಃ ನೀವೇ ಸಾಕ್ಷಿಗಳಾಗಿರುವಾಗ, ಅದನ್ನು ವಕ್ರವಾಗಿಸಲು ಪ್ರಯತ್ನಿಸುತ್ತಾ ನೀವೇಕೆ ತಡೆಯುತ್ತಿರುವಿರಿ?’ ನೀವು ಮಾಡುತ್ತಿರುವ ಯಾವುದರ ಬಗ್ಗೆಯೂ ಅಲ್ಲಾಹು ಅಲಕ್ಷ್ಯನಲ್ಲ.
(100) ಓ ಸತ್ಯವಿಶ್ವಾಸಿಗಳೇ! ನೀವು ಗ್ರಂಥ ನೀಡಲಾದವರ ಪೈಕಿ ಒಂದು ಪಂಗಡವನ್ನು ಅನುಸರಿಸಿದರೆ, ನೀವು ವಿಶ್ವಾಸವಿಟ್ಟ ಬಳಿಕ ಅವರು ನಿಮ್ಮನ್ನು ಅವಿಶ್ವಾಸಿಗಳಾಗಿ ಮಾರ್ಪಡಿಸುವರು.
(101) ನಿಮಗೆ ಅಲ್ಲಾಹುವಿನ ವಚನಗಳನ್ನು ಓದಿ ಕೊಡಲಾಗುತ್ತಿರುವಾಗ ಮತ್ತು ನಿಮ್ಮ ಮಧ್ಯೆ ಅವನ ಸಂದೇಶವಾಹಕರಿರುವಾಗ ನೀವು ಹೇಗೆ ತಾನೆ ಅವಿಶ್ವಾಸಿಗಳಾಗಿ ಮಾರ್ಪಡುವಿರಿ? ಯಾರು ಅಲ್ಲಾಹುವನ್ನು ಬಿಗಿಯಾಗಿ ಹಿಡಿಯುವನೋ ಅವನು ನೇರಮಾರ್ಗದೆಡೆಗೆ ಮುನ್ನಡೆಸಲಾಗಿರುವನು.
(102) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಬೇಕಾದ ರೀತಿಯಲ್ಲಿ ಭಯಪಡಿರಿ. ಮುಸ್ಲಿಮರಾಗಿಯೇ ವಿನಾ ನೀವು ಮರಣಹೊಂದುವಂತಾಗದಿರಲಿ.
(103) ನೀವು ಒಟ್ಟಾಗಿ ಅಲ್ಲಾಹುವಿನ ಹಗ್ಗವನ್ನು ಬಿಗಿಯಾಗಿ ಹಿಡಿಯಿರಿ. ನೀವು ಭಿನ್ನರಾಗದಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅವನು ನಿಮ್ಮ ಹೃದಯಗಳನ್ನು ಪರಸ್ಪರ ಬೆಸೆದನು. ಹಾಗೆ ಅವನ ಅನುಗ್ರಹದ ನಿಮಿತ್ತ ನೀವು ಸಹೋದರರಾಗಿ ಮಾರ್ಪಟ್ಟಿರಿ. ನೀವು ಅಗ್ನಿಕುಂಡದ(85) ಅಂಚಿನಲ್ಲಿದ್ದಿರಿ. ತರುವಾಯ ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ಹೀಗೆ ಅಲ್ಲಾಹು ತನ್ನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಿರುವನು. ನೀವು ಸನ್ಮಾರ್ಗವನ್ನು ಪಡೆದವರಾಗುವ ಸಲುವಾಗಿ.
85. ಬಹುದೇವಾರಾಧನೆ ಹಾಗೂ ಧರ್ಮಬಾಹಿರ ಪ್ರವೃತ್ತಿಗಳ ನಿಮಿತ್ತ ನೀವು ನರಕಾಗ್ನಿಯ ಹೊಂಡದಲ್ಲಿ ಬೀಳುವವರಾಗಿದ್ದಿರಿ. ಆಗ ಅಲ್ಲಾಹು ನಿಮ್ಮನ್ನು ಸತ್ಯವಿಶ್ವಾಸದ ಮೂಲಕ ರಕ್ಷಿಸಿದನು ಎಂದು ಅಲ್ಲಾಹು ಅವರಿಗೆ ನೆನಪಿಸುತ್ತಿರುವನು.
(104) ಒಳಿತಿನೆಡೆಗೆ ಆಹ್ವಾನಿಸುವ, ಸದಾಚಾರವನ್ನು ಆದೇಶಿಸುವ ಮತ್ತು ದುರಾಚಾರವನ್ನು ವಿರೋಧಿಸುವ ಒಂದು ಸಮುದಾಯವು ನಿಮ್ಮಲ್ಲಿ ಉದ್ಭವಿಸಲಿ. ಯಶಸ್ಸು ಗಳಿಸಿದವರು ಅವರೇ ಆಗಿರುವರು.
(105) ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಗಳು ಬಂದ ಬಳಿಕವೂ ವಿವಿಧ ಪಂಗಡಗಳಾಗಿ ಬೇರ್ಪಟ್ಟು ಭಿನ್ನರಾಗಿ ಹೋದವರಂತೆ ನೀವಾಗದಿರಿ. ಘೋರ ಶಿಕ್ಷೆಯಿರುವುದು ಅವರಿಗೇ ಆಗಿದೆ.
(106) ಕೆಲವು ಮುಖಗಳು ಬೆಳ್ಳಗಾಗುವ ಮತ್ತು ಕೆಲವು ಮುಖಗಳು ಕರ್‍ರಗಾಗುವ ದಿನ! ಮುಖಗಳು ಕರ್‍ರಗಾದವರಾರೋ ಅವರೊಂದಿಗೆ, ‘ವಿಶ್ವಾಸವಿಟ್ಟ ಬಳಿಕ ನೀವು ಅವಿಶ್ವಾಸಿಗಳಾಗಿ ಮಾರ್ಪಟ್ಟಿರುವಿರಾ? ನೀವು ಅವಿಶ್ವಾಸಿಗಳಾಗಿ ಮಾರ್ಪಟ್ಟ ಫಲವಾಗಿ ಶಿಕ್ಷೆಯ ರುಚಿಯನ್ನು ಸವಿಯಿರಿ.’ ಎಂದು ಹೇಳಲಾಗುವುದು.
(107) ಆದರೆ ಮುಖಗಳು ಬೆಳ್ಳಗಾದವರು ಯಾರೋ ಅವರು ಅಲ್ಲಾಹುವಿನ ಕರುಣೆಯಲ್ಲಿರುವರು. ಅವರು ಅದರಲ್ಲಿ ಶಾಶ್ವತವಾಸಿಗಳಾಗಿರುವರು.
(108) ಇವು ಅಲ್ಲಾಹುವಿನ ದೃಷ್ಟಾಂತಗಳಾಗಿವೆ. ನಾವು ಇವುಗಳನ್ನು ತಮಗೆ ಸತ್ಯದೊಂದಿಗೆ ಓದಿಕೊಡುತ್ತಿರುವೆವು. ಅಲ್ಲಾಹು ಸರ್ವಲೋಕದವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲು ಇಚ್ಛಿಸಲಾರನು.
(109) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ವಿಷಯಗಳೆಲ್ಲವೂ ಮರಳಿಸಲಾಗುವುದು ಅಲ್ಲಾಹುವಿನ ಬಳಿಗಾಗಿದೆ.
(110) ನೀವು ಮನುಕುಲಕ್ಕಾಗಿ ಹೊರತರಲಾಗಿರುವ ಉತ್ತಮ ಸಮುದಾಯವಾಗಿರುವಿರಿ. ನೀವು ಸದಾಚಾರವನ್ನು ಆದೇಶಿಸುತ್ತಿರುವಿರಿ, ದುರಾಚಾರವನ್ನು ವಿರೋಧಿಸುತ್ತಿರುವಿರಿ ಮತ್ತು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವಿರಿ. ಗ್ರಂಥದವರು ವಿಶ್ವಾಸವಿಡುತ್ತಿದ್ದರೆ ಅದು ಅವರ ಪಾಲಿಗೆ ಉತ್ತಮವಾಗಿರುತ್ತಿತ್ತು. ಅವರ ಪೈಕಿ ವಿಶ್ವಾಸವಿಟ್ಟವರೂ ಇರುವರು. ಆದರೆ ಅವರ ಪೈಕಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವರು.
(111) ಕ್ಷುಲ್ಲಕ ಉಪಟಳಗಳ ವಿನಾ ನಿಮಗೆ ಯಾವುದೇ ಹಾನಿಯನ್ನು ಮಾಡಲೂ ಅವರಿಗೆ ಸಾಧ್ಯವಾಗಲಾರದು. ಇನ್ನು ಅವರು ನಿಮ್ಮೊಂದಿಗೆ ಯುದ್ಧ ಹೂಡುವುದಾದರೂ ಅವರು ವಿಮುಖರಾಗಿ ಓಡುವರು. ತರುವಾಯ ಅವರಿಗೆ ಸಹಾಯವು ದೊರೆಯಲಾರದು.
(112) ಅವರು ಎಲ್ಲಿ ಕಂಡುಬಂದರೂ ನಿಂದ್ಯತೆಯು ಅವರ ಮೇಲೆ ಹೇರಲ್ಪಟ್ಟಿರುವುದು. ಅಲ್ಲಾಹುವಿನಿಂದಿರುವ ಹಗ್ಗದಿಂದ ಅಥವಾ ಜನರಿಂದಿರುವ ಹಗ್ಗದಿಂದ ವಿನಾ (ಅವರಿಗೆ ಅದರಿಂದ ಮುಕ್ತಿ ಸಿಗಲಾರದು). ಅವರು ಅಲ್ಲಾಹುವಿನ ಕ್ರೋಧಕ್ಕೆ ಪಾತ್ರರಾಗಿರುವರು ಮತ್ತು ನಿಕೃಷ್ಟತೆಯು ಅವರ ಮೇಲೆ ಹೇರಲ್ಪಟ್ಟಿರುವುದು. ಅದು ಅವರು ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿರುವ ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆಗೈದಿರುವ ಕಾರಣದಿಂದಾಗಿದೆ. ಅದು ಅವರು ಧಿಕ್ಕಾರ ತೋರಿರುವ ಮತ್ತು ಅತಿಕ್ರಮವೆಸಗಿರುವ ಕಾರಣದಿಂದಲೂ ಆಗಿದೆ.
(113) ಅವರೆಲ್ಲರೂ ಸಮಾನರಲ್ಲ. ಸನ್ಮಾರ್ಗದಲ್ಲಿ ನೆಲೆನಿಂತಿರುವ ಒಂದು ಸಮುದಾಯವೂ ಗ್ರಂಥದವರಲ್ಲಿದೆ. ಅವರು ರಾತ್ರಿ ವೇಳೆಯಲ್ಲಿ ಸಾಷ್ಟಾಂಗ (ನಮಾಝ್) ಮಾಡುತ್ತಾ ಅಲ್ಲಾಹುವಿನ ವಚನಗಳನ್ನು ಪಾರಾಯಣ ಮಾಡುತ್ತಿರುವರು.
(114) ಅವರು ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರೂ, ಸದಾಚಾರವನ್ನು ಆದೇಶಿಸುವವರೂ, ದುರಾಚಾರವನ್ನು ವಿರೋಧಿಸುವವರೂ, ಸತ್ಕರ್ಮಗಳೆಡೆಗೆ ಧಾವಂತದಿಂದ ಮುನ್ನುಗ್ಗುವವರೂ ಆಗಿರುವರು. ಅವರು ಸಜ್ಜನರಲ್ಲಿ ಸೇರಿದವರಾಗಿರುವರು.
(115) ಅವರು ಯಾವುದೇ ಸತ್ಕಾರ್ಯ ಮಾಡಿದರೂ ಅದರ ಪ್ರತಿಫಲವು ಅವರಿಗೆ ನಿಷೇಧಿಸಲ್ಪಡದು. ಅಲ್ಲಾಹು ಭಯಭಕ್ತಿ ಪಾಲಿಸುವವರ ಕುರಿತು ಅರಿವುಳ್ಳವನಾಗಿರುವನು.
(116) ಖಂಡಿತವಾಗಿಯೂ ಸತ್ಯನಿಷೇಧಿಗಳಾರೋ, ಅವರಿಗೆ ಅವರ ಸಂಪತ್ತಾಗಲಿ, ಸಂತತಿಯಾಗಲಿ ಅಲ್ಲಾಹುವಿನ ಶಿಕ್ಷೆಯಿಂದ ಎಂದಿಗೂ ಯಾವ ರಕ್ಷಣೆಯನ್ನೂ ಒದಗಿಸದು. ನರಕವಾಸಿಗಳು ಅವರೇ ಆಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(117) ಈ ಐಹಿಕ ಜೀವನದಲ್ಲಿ ಅವರು ವ್ಯಯಿಸುವುದನ್ನು ಸ್ವತಃ ತಮ್ಮ ಮೇಲೆಯೇ ಅನ್ಯಾಯವೆಸಗಿದ ಒಂದು ಜನತೆಯ ಕೃಷಿಸ್ಥಳದಲ್ಲಿ ಬಲವಾಗಿ ಬೀಸಿ ತರುವಾಯ ಅದನ್ನು ನಾಶ ಮಾಡಿದ ಒಂದು ಶೀತಲ ಮಾರುತದೊಂದಿಗೆ ಹೋಲಿಸಬಹುದು.(86) ಅಲ್ಲಾಹು ಅವರೊಂದಿಗೆ ಅನ್ಯಾಯವೆಸಗಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿರುವರು.
86. ಕೀರ್ತಿ ಮತ್ತು ದುರಭಿಮಾನಕ್ಕಾಗಿ ಹಣ ಖರ್ಚುಮಾಡುವವರ ಪೈಕಿ ಹೆಚ್ಚಿನವರೂ ತಾವು ದೊಡ್ಡ ಜನಸೇವೆ ಮಾಡುತ್ತಿರುವೆವು ಎಂದು ತೋರ್ಪಡಿಸುವರು. ಆದರೆ ಪರಲೋಕವನ್ನು ತಲುಪಿದಾಗ ಸತ್ಯನಿಷೇಧ ಮತ್ತು ಕಾಪಟ್ಯವು ತಮ್ಮ ಕರ್ಮಗಳನ್ನೆಲ್ಲ ನಿಷ್ಫಲಗೊಳಿಸಿದ್ದಾಗಿ ಅವರು ಕಾಣುವರು. ಆಗ ಅವರ ಸ್ಥಿತಿಯು ಅತಿವೃಷ್ಟಿಯುಂಟಾಗಿ ನಾಶವಾದ ಕೃಷಿಯ ಒಡೆಯನಂತಿರುವುದು.
(118) ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮವರನ್ನಲ್ಲದೆ ಇತರರನ್ನು ಆತ್ಮೀಯಮಿತ್ರರನ್ನಾಗಿ ಮಾಡಿಕೊಳ್ಳದಿರಿ. ನಿಮಗೆ ಹಾನಿಯನ್ನುಂಟುಮಾಡುವ ಯಾವುದೇ ವಿಷಯದಲ್ಲಿ ಅವರು ಒಂದಿಷ್ಟೂ ಎಡವಲಾರರು. ನೀವು ಸಂಕಷ್ಟಕ್ಕೀಡಾಗುವುದು ಅವರಿಗೆ ಪ್ರಿಯವಾಗಿದೆ. ಅವರ ಬಾಯಿಯಿಂದ ವಿದ್ವೇಷವು ಬಹಿರಂಗಗೊಂಡಿದೆ. ಅವರ ಹೃದಯಗಳು ಏನನ್ನು ಮರೆಮಾಚುತ್ತಿರುವುದು ಹೆಚ್ಚು ಮಾರಕವಾಗಿದೆ. ನಿಮಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು, ನೀವು ಚಿಂತಿಸಿ ಗ್ರಹಿಸುವವರಾಗಿದ್ದರೆ.
(119) ಅಗೋ ನೋಡಿರಿ! ನೀವು ಅವರನ್ನು ಪ್ರೀತಿಸುತ್ತಿರುವಿರಿ. ಆದರೆ ಅವರು ನಿಮ್ಮನ್ನು ಪ್ರೀತಿಸುತ್ತಿಲ್ಲ. ನೀವು ಎಲ್ಲ ಗ್ರಂಥಗಳಲ್ಲೂ ವಿಶ್ವಾಸವಿಡುತ್ತಿರುವಿರಿ.(87) ನಿಮ್ಮನ್ನು ಭೇಟಿಯಾಗುವಾಗ ಅವರು ‘ನಾವು ವಿಶ್ವಾಸವಿಟ್ಟಿರುವೆವು’ ಎನ್ನುವರು. ಆದರೆ ಅವರು ಏಕಾಂಗಿಗಳಾಗುವಾಗ ನಿಮ್ಮ ಮೇಲಿರುವ ಕೋಪದ ನಿಮಿತ್ತ ಅವರು ಬೆರಳುಗಳನ್ನು ಕಚ್ಚುವರು. (ಓ ಪ್ರವಾದಿಯವರೇ!) ಹೇಳಿರಿ: ‘ನೀವು ನಿಮ್ಮ ಕೋಪದೊಂದಿಗೆ ಮರಣ ಹೊಂದಿರಿ!’. ಖಂಡಿತವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.
87. ಮುಸ್ಲಿಮರ ಮತ್ತು ಗ್ರಂಥದವರ ಮಧ್ಯೆಯಿರುವ ಮೂಲಭೂತವಾದ ವ್ಯತ್ಯಾಸವೊಂದನ್ನು ಇಲ್ಲಿ ಸೂಚಿಸಲಾಗಿದೆ. ಅಲ್ಲಾಹು ಅವತೀರ್ಣಗೊಳಿಸಿದ ಸರ್ವ ಗ್ರಂಥಗಳಲ್ಲೂ ಮುಸ್ಲಿಮರು ವಿಶ್ವಾಸವಿಡುತ್ತಾರೆ. ಆದರೆ ಯಹೂದಿಗಳು ಇಂಜೀಲ್ ಮತ್ತು ಕುರ್‌ಆನನ್ನು ತಿರಸ್ಕರಿಸುತ್ತಾರೆ. ಕ್ರೈಸ್ತರು ಕುರ್‌ಆನ್‍ನ ಹೊರತು ಉಳಿದ ಗ್ರಂಥಗಳಲ್ಲಿ ವಿಶ್ವಾಸವಿಡುತ್ತಾರೆ. ಆದ್ದರಿಂದ ಮುಸ್ಲಿಮರ ಹೊರತು ಇತರೆಲ್ಲರೂ ಅಲ್ಲಾಹುವಿನ ಸಂದೇಶವನ್ನು ತಿರಸ್ಕರಿಸುವವರಾಗಿರುವರು.
(120) ನಿಮಗೇನಾದರೂ ಒಳಿತುಂಟಾದರೆ ಅದು ಅವರಿಗೆ ಅಸಮಾಧಾನವನ್ನುಂಟು ಮಾಡುವುದು. ನಿಮಗೇನಾದರೂ ಕೆಡುಕು ಬಾಧಿಸಿದರೆ ಅದರಿಂದಾಗಿ ಅವರು ಆನಂದಿಸುವರು. ನೀವು ಸಹನೆ ವಹಿಸುತ್ತಲೂ, ಭಯಭಕ್ತಿ ಪಾಲಿಸುತ್ತಲೂ ಇದ್ದರೆ ಅವರ ಕುತಂತ್ರವು ನಿಮಗೆ ಯಾವುದೇ ಹಾನಿಯನ್ನೂ ಉಂಟುಮಾಡದು. ಖಂಡಿತವಾಗಿಯೂ ಅಲ್ಲಾಹು ಅವರು ಮಾಡುತ್ತಿರುವುದನ್ನೆಲ್ಲ ಆವರಿಸಿಕೊಂಡಿರುವನು.
(121) (ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳಿಗೆ ಯುದ್ಧ ತಾಣಗಳನ್ನು ಸಜ್ಜುಗೊಳಿಸುವ ಸಲುವಾಗಿ ತಾವು ಮುಂಜಾನೆ ತಮ್ಮ ಕುಟುಂಬದಿಂದ ಹೊರಹೋದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
(122) ನಿಮ್ಮ ಪೈಕಿ ಎರಡು ಪಂಗಡಗಳು ಹೇಡಿತನ ತೋರಲು ಬಯಸಿದ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ಆ ಎರಡು ಪಂಗಡಗಳ ರಕ್ಷಕನು ಅಲ್ಲಾಹುವಾಗಿರುವನು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆಯೇ ಭರವಸೆಯಿಡಲಿ.(88)
88. ಉಹುದ್ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳತ್ತ ಕುರ್‌ಆನ್ ಗಮನ ಸೆಳೆಯುತ್ತದೆ. ಕಾಲಾಳುಪಡೆ, ಅಶ್ವಸೇನೆ ಮತ್ತು ಬಿಲ್ವಿದ್ಯೆ ಪ್ರವೀಣರನ್ನು ಕೆಲವು ವಿಶೇಷ ಸ್ಥಳಗಳಲ್ಲಿ ನಿಲ್ಲಿಸುವ ಮೂಲಕ ಪ್ರವಾದಿ(ಸ) ರವರು ಯುದ್ಧವನ್ನು ರೂಪಿಸಿದ್ದರು. ಯುದ್ಧತಂತ್ರದ ಪ್ರಮುಖ ಭಾಗವಾದ ಒಂದು ಸ್ಥಳದಲ್ಲಿ ಕಾವಲು ನಿಲ್ಲಿಸಲಾಗಿದ್ದ ಬಿಲ್ಗಾರರು ತಮ್ಮ ಕಾರ್ಯನಿರ್ವಹಣೆಯಲ್ಲಿ ಲೋಪವೆಸಗಿದ ಕಾರಣ ಉಹುದ್ ಯುದ್ಧದಲ್ಲಿ ಮುಸ್ಲಿಮರಿಗೆ ಕೆಲವು ನಾಶನಷ್ಟಗಳು ಸಂಭವಿಸಿದವು. ರಣರಂಗದಲ್ಲಿ ಹೋರಾಡುತ್ತಿದ್ದವರ ಪೈಕಿ ಎರಡು ಜನಾಂಗದವರು ಭಯವಿಹ್ವಲತೆಯಿಂದಾಗಿ ಹಿಂದಿರುಗಿ ಓಡಬೇಕೆಂದು ಒಂದು ಕ್ಷಣ ಭಾವಿಸಿದರಾದರೂ ಅಲ್ಲಾಹು ಅವರ ಮನಸ್ಸಿಗೆ ಸುದೃಢತೆಯನ್ನು ನೀಡಿದ ವಿಷಯವನ್ನು ಇಲ್ಲಿ ನೆನಪಿಸುತ್ತಿರುವನು.
(123) ನೀವು ಬಲಹೀನರಾಗಿದ್ದಾಗ ಬದ್ರ್‌ನಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿರುವನು. ಆದ್ದರಿಂದ ನೀವು ಅಲ್ಲಾಹುವನ್ನು ಭಯಪಡಿರಿ. ನೀವು ಕೃತಜ್ಞತೆ ಸಲ್ಲಿಸುವವರಾಗಲೂಬಹುದು.
(124) (ಓ ಪ್ರವಾದಿಯವರೇ!) ‘ನಿಮ್ಮ ರಬ್ ಮೂರು ಸಾವಿರ ಮಲಕ್‍ಗಳನ್ನು ಇಳಿಸಿ ನಿಮಗೆ ಸಹಾಯ ಮಾಡುವನು ಎಂಬುದು ನಿಮಗೆ ಸಾಕಾಗಲಾರದೇ?’ ಎಂದು ತಾವು ಸತ್ಯವಿಶ್ವಾಸಿಗಳೊಂದಿಗೆ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ).
(125) (ತರುವಾಯ ಅಲ್ಲಾಹು ಹೀಗೆ ವಾಗ್ದಾನ ಮಾಡಿದನು): ಹೌದು! ನೀವು ಸಹನೆ ವಹಿಸಿದರೆ ಮತ್ತು ಭಯಭಕ್ತಿ ಪಾಲಿಸಿದರೆ ನಿಮ್ಮ ಬಳಿಗೆ ಶತ್ರುಗಳು ಈ ಕ್ಷಣದಲ್ಲೇ ಬಂದರೂ ನಿಮ್ಮ ರಬ್ ವಿಶೇಷ ಗುರುತುಗಳಿರುವ ಐದು ಸಾವಿರ ಮಲಕ್‍ಗಳ ಮೂಲಕ ನಿಮಗೆ ಸಹಾಯ ಮಾಡುವನು.(89)
89. ಬದ್ರ್‌ನಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮಲಕ್‍ಗಳ ಬೆಂಬಲವನ್ನು ನೀಡಿದ್ದನೆಂದು ಹೆಚ್ಚಿನ ಕುರ್‌ಆನ್ ವ್ಯಾಖ್ಯಾನಕಾರರು ಹೇಳಿದ್ದಾರೆ. ಇಲ್ಲಿ ಪರಾಮರ್ಶಿಸಿರುವುದು ಅಲ್ಲಾಹುವಿನ ವಾಗ್ದಾನವನ್ನಾಗಿದೆ. ಅವನು ವಾಗ್ದಾನ ನೆರವೇರಿಸುವುದು ಅಗತ್ಯಕ್ಕನು ಸಾರವಾಗಿದೆ. ಎಷ್ಟು ಮಲಕ್‍ಗಳನ್ನು ಬದ್ರ್‌ಗೆ ಕಳುಹಿಸಲಾಯಿತು ಮತ್ತು ಅವರು ಯುದ್ಧದಲ್ಲಿ ಯಾವ ಪಾತ್ರವನ್ನು ವಹಿಸಿದ್ದರು ಎಂಬ ಬಗ್ಗೆ ದೃಢಪಟ್ಟ ವರದಿಗಳು ಲಭ್ಯವಿಲ್ಲ.
(126) ನಿಮಗೊಂದು ಶುಭವಾರ್ತೆಯಾಗಿ ಮತ್ತು ನಿಮ್ಮ ಹೃದಯಗಳು ಶಾಂತವಾಗಲಿಕ್ಕಾಗಿಯೇ ವಿನಾ ಅಲ್ಲಾಹು ಅದನ್ನು ಮಾಡಿರಲಿಲ್ಲ. ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಿನ ಬಳಿಯಿಂದಲೇ ವಿನಾ ಸಹಾಯವು ಬರಲಾರದು.
(127) ಇದು ಸತ್ಯನಿಷೇಧಿಗಳ ಒಂದು ಭಾಗವನ್ನು ನಿರ್ಮೂಲನ ಮಾಡುವುದಕ್ಕಾಗಿ ಅಥವಾ ಅವರನ್ನು ಶರಣಾಗಿಸಿ ಅವರು ಹತಾಶರಾಗಿ ಮರಳಿ ಹೋಗುವ ಸಲುವಾಗಿದೆ.
(128) (ಓ ಪ್ರವಾದಿಯವರೇ!) ತೀರ್ಮಾನದಲ್ಲಿ ತಮಗೆ ಯಾವ ಹಕ್ಕೂ ಇಲ್ಲ.(90) ಅವನು (ಅಲ್ಲಾಹು) ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು ಅಥವಾ ಅವರನ್ನು ಶಿಕ್ಷಿಸಲೂಬಹುದು. ಖಂಡಿತವಾಗಿಯೂ ಅವರು ಅಕ್ರಮಿಗಳಾಗಿರುವರು.
90. ಕೆಲವು ನಿರ್ದಿಷ್ಟ ವ್ಯಕ್ತಿಗಳನ್ನು ಶಪಿಸಲು ಪ್ರವಾದಿ(ಸ) ರವರು ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿದಾಗ ಯಾವುದೇ ವಿಷಯದಲ್ಲೂ ತೀರ್ಮಾನ ಕೈಗೊಳ್ಳುವ ಅಧಿಕಾರವಿರುವುದು ಕೇವಲ ಅಲ್ಲಾಹುವಿಗೆ ಮಾತ್ರವೆಂದು ಸ್ಪಷ್ಟಪಡಿಸುವ ಈ ಆಯತ್ ಅವತೀರ್ಣಗೊಂಡಿತೆಂದು ಬುಖಾರಿ (4549) ಮತ್ತಿತರರು ವರದಿ ಮಾಡಿದ ಹದೀಸಿನಲ್ಲಿ ಕಾಣಬಹುದು.
(129) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ತಾನಿಚ್ಛಿಸುವವರನ್ನು ಅವನು ಕ್ಷಮಿಸುವನು ಮತ್ತು ತಾನಿಚ್ಛಿಸುವವರನ್ನು ಅವನು ಶಿಕ್ಷಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(130) ಓ ಸತ್ಯವಿಶ್ವಾಸಿಗಳೇ! ನೀವು ದುಪ್ಪಟ್ಟು ದುಪ್ಪಟ್ಟಾಗಿ ಬಡ್ಡಿಯನ್ನು ತಿನ್ನದಿರಿ. ಅಲ್ಲಾಹುವನ್ನು ಭಯಪಡಿರಿ. ನೀವು ಯಶಸ್ಸು ಗಳಿಸಲೂಬಹುದು.
(131) ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿರುವ ನರಕಾಗ್ನಿಯನ್ನು ನೀವು ಭಯಪಡಿರಿ.
(132) ಅಲ್ಲಾಹುವನ್ನು ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನೀವು ಕರುಣೆ ಲಭಿಸಲೂಬಹುದು.
(133) ನಿಮ್ಮ ರಬ್‌ನ ವತಿಯ ಪಾಪಮುಕ್ತಿಗಾಗಿ ಮತ್ತು ಆಕಾಶ ಭೂಮಿಗಳಷ್ಟು ವಿಶಾಲವಾಗಿರುವ ಸ್ವರ್ಗಕ್ಕಾಗಿ ಧಾವಂತದಿಂದ ಮುಂದೆ ಬನ್ನಿರಿ. ಅದನ್ನು ಭಯಭಕ್ತಿ ಪಾಲಿಸುವವರಿಗಾಗಿ ಸಿದ್ಧಗೊಳಿಸಲಾಗಿದೆ.
(134) (ಅಂದರೆ) ಅನುಕೂಲ ಸ್ಥಿತಿಯಲ್ಲೂ ಪ್ರತಿಕೂಲ ಸ್ಥಿತಿಯಲ್ಲೂ ದಾನಧರ್ಮ ಮಾಡುವ, ಕೋಪವನ್ನು ಅದುಮಿಡುವ ಮತ್ತು ಜನರಿಗೆ ಕ್ಷಮೆ ನೀಡುವವರಿಗೆ. ಅಲ್ಲಾಹು ಸತ್ಕರ್ಮಿಗಳನ್ನು ಪ್ರೀತಿಸುವನು.
(135) ಏನಾದರೂ ನೀಚಕೃತ್ಯವನ್ನು ಮಾಡಿದರೆ ಅಥವಾ ಸ್ವತಃ ತಮ್ಮೊಂದಿಗೇ ಅನ್ಯಾಯವೆಸಗಿದರೆ ಅಲ್ಲಾಹು ವನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುವವರಿಗಾಗಿದೆ. ಅಲ್ಲಾಹುವಿನ ಹೊರತು ಪಾಪಗಳನ್ನು ಕ್ಷಮಿಸುವವನು ಇನ್ನಾರಿರುವನು? ತಿಳಿದವರಾಗಿದ್ದೂ ಸಹ ತಾವು ಮಾಡಿದ (ನೀಚ)ಕೃತ್ಯಗಳಲ್ಲಿ ಅವರು ಅಚಲರಾಗಿ ನಿಲ್ಲಲಾರರು.
(136) ಅಂತಹವರಿಗಿರುವ ಪ್ರತಿಫಲವು ಅವರ ರಬ್‌ನ ವತಿಯ ಪಾಪಮುಕ್ತಿ ಮತ್ತು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಶಾಶ್ವತರಾಗಿರುವರು. ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲ ಎಷ್ಟು ಉತ್ತಮವಾದುದು!
(137) ನಿಮಗಿಂತ ಮುಂಚೆ ಹಲವು (ದೈವಿಕ) ಕ್ರಮಗಳು ಗತಿಸಿಹೋಗಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಪರ್ಯಾವಸಾನವು ಹೇಗಾಯಿತೆಂಬುದನ್ನು ನೋಡಿರಿ.
(138) ಇದು ಮನುಷ್ಯರಿಗಿರುವ ಒಂದು ಘೋಷಣೆಯೂ ಭಯಭಕ್ತಿಯುಳ್ಳವರಿಗಿರುವ ಮಾರ್ಗದರ್ಶಿಯೂ, ಉಪದೇಶವೂ ಆಗಿದೆ.
(139) ನೀವು ಬಲಹೀನರಾಗುವುದಾಗಲಿ ದುಃಖಿಸುವುದಾಗಲಿ ಮಾಡದಿರಿ. ನೀವು ವಿಶ್ವಾಸಿಗಳಾಗಿದ್ದರೆ ನೀವೇ ಅತ್ಯುನ್ನತರಾಗಿರುವಿರಿ.
(140) ನಿಮಗೆ ಗಾಯಗಳುಂಟಾಗಿದ್ದರೆ (ಈ ಹಿಂದೆ) ಆ ಜನರಿಗೂ ಗಾಯಗಳುಂಟಾಗಿದ್ದವು. ವಿಶ್ವಾಸವಿಟ್ಟವರು ಯಾರೆಂದು ಅಲ್ಲಾಹು ಗುರುತಿಸುವ ಸಲುವಾಗಿ ಮತ್ತು ನಿಮ್ಮ ಪೈಕಿ ಹುತಾತ್ಮರನ್ನು ಪಡೆಯುವ ಸಲುವಾಗಿ ಆ (ಯುದ್ಧ) ದಿನಗಳಲ್ಲಿ ಸೋಲು ಗೆಲುವುಗಳನ್ನು ನಾವು ಜನರ ನಡುವೆ ಬದಲಾಯಿಸುತ್ತಿದ್ದೆವು. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡಲಾರನು.
(141) ವಿಶ್ವಾಸವಿಟ್ಟವರನ್ನು ಅಲ್ಲಾಹು ಶುದ್ಧೀಕರಿಸುವ ಸಲುವಾಗಿ ಮತ್ತು ಸತ್ಯನಿಷೇಧಿಗಳನ್ನು ಅಳಿಸಿಹಾಕುವ ಸಲುವಾಗಿ.
(142) ನಿಮ್ಮ ಪೈಕಿ ಯುದ್ಧದಲ್ಲಿ ಪಾಲ್ಗೊಂಡವರು ಮತ್ತು ಸಹನೆ ವಹಿಸಿದವರು ಯಾರೆಂದು ಅಲ್ಲಾಹು ಗುರುತಿಸದೆ ಸ್ವರ್ಗ ಪ್ರವೇಶ ಮಾಡಬಹುದೆಂದು ನೀವು ಭಾವಿಸಿರುವಿರಾ?
(143) ಮರಣವನ್ನು ನೇರವಾಗಿ ಕಾಣುವ ಮುನ್ನ ನೀವದನ್ನು ಆಶಿಸುವವರಾಗಿದ್ದಿರಿ. ಈಗಲಾದರೋ ನೀವದನ್ನು ಕಣ್ಣಾರೆ ನೋಡಿರುವಿರಿ.
(144) ಮುಹಮ್ಮದ್‍ರು ಅಲ್ಲಾಹುವಿನ ಓರ್ವ ಸಂದೇಶವಾಹಕರಾಗಿರುವರೇ ಹೊರತು ಇನ್ನಾರೂ ಅಲ್ಲ. ಅವರಿಗಿಂತ ಮುಂಚೆ ಅನೇಕ ಸಂದೇಶವಾಹಕರು ಗತಿಸಿ ಹೋಗಿರುವರು. ಅವರೇನಾದರೂ ಮರಣಹೊಂದಿದರೆ ಅಥವಾ ಕೊಲ್ಲಲ್ಪಟ್ಟರೆ ನೀವು ಹಿಮ್ಮುಖವಾಗಿ ಮರಳಿ ಹೋಗುವುದೇ? ಯಾರಾದರೂ ಹಿಮ್ಮುಖವಾಗಿ ಮರಳಿ ಹೋದರೆ ಅವನು ಅಲ್ಲಾಹುವಿಗೆ ಯಾವ ಹಾನಿಯನ್ನೂ ಮಾಡಲಾರನು. ಕೃತಜ್ಞತೆ ಸಲ್ಲಿಸುವವರಿಗೆ ಅಲ್ಲಾಹು ತಕ್ಕ ಪ್ರತಿಫಲವನ್ನು ನೀಡುವನು.
(145) ಅಲ್ಲಾಹುವಿನ ಅನುಮತಿಯಿಲ್ಲದೆ ಯಾವ ವ್ಯಕ್ತಿಗೂ ಮರಣಹೊಂದಲು ಸಾಧ್ಯವಾಗಲಾರದು. ಅದು ಅವಧಿ ನಿಶ್ಚಯಿಸಲಾದ ಒಂದು ವಿಧಿಯಾಗಿದೆ. ಯಾರು ಇಹಲೋಕದ ಪ್ರತಿಫಲವನ್ನು ಬಯಸುವನೋ ಅವನಿಗೆ ನಾವದನ್ನು ಇಲ್ಲಿಯೇ ನೀಡುವೆವು. ಯಾರು ಪರಲೋಕದ ಪ್ರತಿಫಲವನ್ನು ಬಯಸುವನೋ ಅವನಿಗೆ ನಾವದನ್ನು ಅಲ್ಲಿ ನೀಡುವೆವು. ಕೃತಜ್ಞತೆ ಸಲ್ಲಿಸುವವರಿಗೆ ನಾವು ಸೂಕ್ತ ಪ್ರತಿಫಲವನ್ನು ನೀಡುವೆವು.
(146) ಎಷ್ಟೊಂದು ಪ್ರವಾದಿಗಳ ಜೊತೆಗೂಡಿ ಅನೇಕ ಮಂದಿ ಅಲ್ಲಾಹುವಿನ ದಾಸರು ಯುದ್ಧ ಮಾಡಿರುವರು! ಅಲ್ಲಾಹುವಿನ ಮಾರ್ಗದಲ್ಲಿ ತಮಗೆ ಒದಗಿದ ಯಾವುದರಿಂದಲೂ ಅವರು ಎದೆಗುಂದಲಿಲ್ಲ, ಅವರು ಬಲಹೀನರಾಗಲಿಲ್ಲ ಮತ್ತು ದೈನ್ಯತೆ ತೋರಿಸಲೂ ಇಲ್ಲ. ಅಲ್ಲಾಹು ಸಹನಾಶೀಲರನ್ನು ಪ್ರೀತಿಸುವನು.
(147) ಅವರ ಮಾತು, ‘ಓ ನಮ್ಮ ರಬ್! ನಮ್ಮ ಪಾಪಗಳನ್ನೂ, ನಮ್ಮ ಕರ್ಮಗಳಲ್ಲಿ ಉಂಟಾದಂತಹ ಅತಿಕ್ರಮಗಳನ್ನೂ ಕ್ಷಮಿಸು, ನಮ್ಮ ಪಾದಗಳನ್ನು ಸುದೃಢಗೊಳಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು’ ಎಂದು ಹೇಳಿರುವುದಲ್ಲದೆ ಇನ್ನೇನೂ ಆಗಿರಲಿಲ್ಲ.
(148) ಆದ್ದರಿಂದ ಅಲ್ಲಾಹು ಅವರಿಗೆ ಇಹಲೋಕದ ಪ್ರತಿಫಲವನ್ನೂ, ಪರಲೋಕದ ಉತ್ಕೃಷ್ಟ ಪ್ರತಿಫಲವನ್ನೂ ನೀಡಿದನು. ಅಲ್ಲಾಹು ಸತ್ಕರ್ಮಿಗಳನ್ನು ಪ್ರೀತಿಸುವನು.
(149) ಓ ಸತ್ಯವಿಶ್ವಾಸಿಗಳೇ! ನೀವು ಸತ್ಯನಿಷೇಧಿಗಳನ್ನು ಅನುಸರಿಸುವುದಾದರೆ ಅವರು ನಿಮ್ಮನ್ನು ಹಿಂದಕ್ಕೆ ಮರಳಿ ಕೊಂಡೊಯ್ಯುವರು. ತರುವಾಯ ನೀವು ನಷ್ಟಹೊಂದಿದವರಾಗಿ ಮಾರ್ಪಡುವಿರಿ.
(150) ಅಲ್ಲ, ನಿಮ್ಮ ರಕ್ಷಕನು ಅಲ್ಲಾಹುವಾಗಿರುವನು. ಅವನು ಸಹಾಯ ಮಾಡುವವರಲ್ಲಿ ಅತ್ಯುತ್ತಮನಾಗಿರುವನು.
(151) ಅಲ್ಲಾಹು ಯಾವ ಆಧಾರಪ್ರಮಾಣವನ್ನು ಅವತೀರ್ಣಗೊಳಿಸದಿರುವ ವಸ್ತುಗಳನ್ನು ಅವನೊಂದಿಗೆ ಸಹಭಾಗಿಗಳನ್ನಾಗಿ ಮಾಡಿರುವ ಕಾರಣದಿಂದ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕುವೆವು. ಅವರ ವಾಸಸ್ಥಳವು ನರಕವಾಗಿದೆ. ಅಕ್ರಮಿಗಳ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!
(152) ಅಲ್ಲಾಹುವಿನ ಅನುಮತಿಯೊಂದಿಗೆ ನೀವು ಅವರನ್ನು ವಧಿಸುತ್ತಿರುವಾಗ ನಿಮ್ಮೊಂದಿಗಿರುವ ವಾಗ್ದಾನದಲ್ಲಿ ಅಲ್ಲಾಹು ಸತ್ಯಸಂಧತೆಯನ್ನು ಪಾಲಿಸಿರುವನು. ಆದರೆ ನೀವು ಹೇಡಿತನ ತೋರಿಸಿ, ಕಾರ್ಯನಿರ್ವಹಣೆಯಲ್ಲಿ ಪರಸ್ಪರ ತರ್ಕಿಸಿ, ನೀವು ಇಷ್ಟಪಡುವುದನ್ನು ಅಲ್ಲಾಹು ನಿಮಗೆ ತೋರಿಸಿಕೊಟ್ಟ ಬಳಿಕವೂ ನೀವು ಅವಿಧೇಯತೆ ತೋರಿದಾಗ (ಪರಿಸ್ಥಿತಿಯು ನಿಮಗೆ ವಿರುದ್ಧವಾಯಿತು). ನಿಮ್ಮಲ್ಲಿ ಇಹಲೋಕವನ್ನು ಬಯಸುವವರಿರುವರು. ಪರಲೋಕವನ್ನು ಬಯಸುವವರೂ ನಿಮ್ಮಲ್ಲಿರುವರು. ತರುವಾಯ ನಿಮ್ಮನ್ನು ಪರೀಕ್ಷಿಸುವ ಸಲುವಾಗಿ ಅಲ್ಲಾಹು ನಿಮ್ಮನ್ನು ಅವರಿಂದ (ಶತ್ರುಗಳಿಂದ) ವಿಮುಖಗೊಳಿಸಿದನು. ಅಲ್ಲಾಹು ನಿಮಗೆ ಕ್ಷಮಿಸಿರುವನು. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಔದಾರ್ಯವುಳ್ಳವವನಾಗಿರುವನು.
(153) ಯಾರನ್ನೂ ತಿರುಗಿನೋಡದೆ ನೀವು (ರಣರಂಗದಿಂದ) ಓಡಿಹೋಗುತ್ತಿದ್ದ ಸಂದರ್ಭ(ವನ್ನು ಸ್ಮರಿಸಿರಿ). ಸಂದೇಶವಾಹಕರು ನಿಮ್ಮನ್ನು ಹಿಂದಿನಿಂದ ಕರೆಯುತ್ತಿದ್ದರು. ಆಗ ಯಾವುದು ನಿಮ್ಮ ಕೈತಪ್ಪಿ ಹೋಯಿತೋ ಅದರ ನಿಮಿತ್ತವಾಗಲಿ ಅಥವಾ ನಿಮ್ಮನ್ನು ಬಾಧಿಸಿರುವ ಆಪತ್ತಿನ ನಿಮಿತ್ತವಾಗಲಿ ನೀವು ದುಃಖಿಸದಿರಲೆಂದು ಅಲ್ಲಾಹು ನಿಮಗೆ ವ್ಯಥೆಯ ಮೇಲೆ ವ್ಯಥೆಯನ್ನು ಪ್ರತಿಫಲವಾಗಿ ನೀಡಿದನು. ನೀವು ಮಾಡುತ್ತಿರುವುದರ ಕುರಿತು ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(154) ತರುವಾಯ ಆ ವ್ಯಥೆಯ ಬಳಿಕ ಅಲ್ಲಾಹು ನಿಮಗೆ ಒಂದು ನಿರ್ಭೀತ ಸ್ಥಿತಿಯನ್ನು ಅಥವಾ ತೂಕಡಿಕೆಯನ್ನು ನೀಡಿದನು.(91) ತೂಕಡಿಕೆಯು ನಿಮ್ಮಲ್ಲಿ ಒಂದು ಪಂಗಡವನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ತಮ್ಮ ದೇಹದ ಬಗ್ಗೆ ಚಿಂತಿಸುತ್ತಾ ಅಸ್ವಸ್ಥರಾಗಿದ್ದರು. ಅವರು ಅಲ್ಲಾಹುವಿನ ಬಗ್ಗೆ ಭಾವಿಸಿದ್ದುದು ಸತ್ಯಕ್ಕೆ ವಿರುದ್ಧವಾದ ಇಸ್ಲಾಮೇತರ ಭಾವನೆಯನ್ನಾಗಿತ್ತು. ‘ವಿಷಯದಲ್ಲಿ ನಮಗೇನಾದರೂ ಸ್ವಾಧೀನತೆಯಿದೆಯೇ?’ ಎಂದು ಅವರು ಕೇಳುವರು. (ಓ ಪ್ರವಾದಿಯವರೇ!) ಹೇಳಿರಿ: ‘ವಿಷಯವು ಸಂಪೂರ್ಣವಾಗಿಯೂ ಅಲ್ಲಾಹುವಿನ ಸ್ವಾಧೀನದಲ್ಲಾಗಿದೆ.’ ತಮ್ಮ ಮುಂದೆ ಪ್ರಕಟಗೊಳಿಸದಂತಹ ಇನ್ನೇನನ್ನೋ ಅವರು ತಮ್ಮ ಮನಸ್ಸುಗಳಲ್ಲಿ ಮರೆಮಾಚುತ್ತಿರುವರು. ‘ವಿಷಯದಲ್ಲಿ ನಮಗೇನಾದರೂ ಸ್ವಾಧೀನತೆಯಿರುತ್ತಿದ್ದರೆ ನಾವಿಲ್ಲಿ ವಧಿಸಲ್ಪಡುತ್ತಿರಲಿಲ್ಲ.’ ಎಂದು ಅವರು ಹೇಳುವರು. (ಓ ಪ್ರವಾದಿಯವರೇ!) ಹೇಳಿರಿ: ‘ನೀವು ನಿಮ್ಮ ಮನೆಗಳಲ್ಲಿದ್ದರೂ ಕೂಡ ಹತರಾಗಲು ವಿಧಿಸಲ್ಪಟ್ಟವರು ಯಾರೋ ಅವರು ತಾವು ಹತರಾಗಿ ಬೀಳುವ ಸ್ಥಳಗಳೆಡೆಗೆ (ಸ್ವತಃ) ಹೊರಟುಬರುತ್ತಿದ್ದರು.’ ಇದು ನಿಮ್ಮ ಹೃದಯಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವ ಸಲುವಾಗಿತ್ತು ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವ ಸಲುವಾಗಿತ್ತು. ಅಲ್ಲಾಹು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.
91. ಉಹುದ್ ಯುದ್ಧದ ಪ್ರಾರಂಭ ಹಂತದಲ್ಲಿ ಮುಸ್ಲಿಮರಿಗೆ ನಿರ್ಣಾಯಕವಾದ ಗೆಲುವು ಸಿಕ್ಕಿತ್ತು. ಒಂದು ಗುಡ್ಡದ ಮೇಲೆ ಕಾವಲು ನಿಲ್ಲಿಸಲಾಗಿದ್ದ ಬಿಲ್ಗಾರರು ಇನ್ನು ಇಲ್ಲಿ ಕಾವಲು ನಿಲ್ಲಬೇಕಾದ ಅಗತ್ಯವಿಲ್ಲವೆಂದು ಭಾವಿಸಿ ಶತ್ರುಗಳು ಬಿಟ್ಟು ಹೋದ ಯುದ್ಧಸಾಮಾಗ್ರಿಗಳನ್ನು ಸಂಗ್ರಹಿಸುವ ಸಲುವಾಗಿ ರಣರಂಗಕ್ಕೆ ಇಳಿದು ಬಂದರು. ಈ ಸಂದರ್ಭವನ್ನು ಗಮನಿಸಿದ ಶತ್ರುಗಳು ಅಡಗುದಾಣದಿಂದ ಒಮ್ಮೆಲೇ ಆಕ್ರಮಣ ಮಾಡಿದಾಗ ಮುಸ್ಲಿಮ್ ಸೈನಿಕರು ದಿಕ್ಕೆಟ್ಟು ಹೋದರು. ಪ್ರವಾದಿ(ಸ) ರವರ ಮುಂದಿನ ಹಲ್ಲು ಬಾಣದೇಟಿನಿಂದ ತುಂಡಾಯಿತು. ಎಪ್ಪತ್ತು ಸಹಾಬಿಗಳು ಹತರಾದರು. ಪ್ರವಾದಿ(ಸ) ರವರು ಹತರಾದರೆಂಬ ವದಂತಿಯೂ ಹಬ್ಬಿತು. 144ನೇ ವಚನದಲ್ಲಿ ಇದನ್ನು ಸೂಚಿಸಲಾಗಿದೆ. ಆದರೆ ಅಲ್ಪ ಸಮಯದ ಗೊಂದಲದ ಬಳಿಕ ಧೀರರಾದ ಕೆಲವು ಸಹಾಬಾಗಳು ಪ್ರವಾದಿ(ಸ) ರವರ ಸುತ್ತಲೂ ಅಚಲರಾಗಿ ನಿಂತು ಧೈರ್ಯದಿಂದ ಹೋರಾಡುತ್ತಾ ಯುದ್ಧದ ಗತಿಯನ್ನು ತಿರುಗಿಸಿ ಶತ್ರುಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದರು. ಇಲ್ಲಿ ಪರಾಮರ್ಶಿಸಿರುವುದು ಆ ಸಂದರ್ಭದಲ್ಲಿ ಅಲ್ಲಾಹು ಅವರಿಗೆ ನೀಡಿದ ಸುರಕ್ಷತಾ ಪ್ರಜ್ಞೆ ಮತ್ತು ಸುಖಕರವಾದ ತೂಕಡಿಕೆಯ ಬಗ್ಗೆಯಾಗಿದೆ.
(155) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮ್ಮ ಪೈಕಿ ವಿಮುಖರಾಗಿ ಓಡಿದವರಾರೋ ಅವರು ಮಾಡಿದ ಕೆಲವು ಕೃತ್ಯಗಳ ಕಾರಣದಿಂದಾಗಿ ಸೈತಾನನು ಅವರನ್ನು ದಾರಿ ತಪ್ಪಿಸಿದ್ದನು. ಅಲ್ಲಾಹುವಾದರೋ ಅವರನ್ನು ಕ್ಷಮಿಸಿರುವನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಸಹನಾಶೀಲನೂ ಆಗಿರುವನು.
(156) ಓ ಸತ್ಯವಿಶ್ವಾಸಿಗಳೇ! ತಮ್ಮ ಸಹೋದರರು ಯಾತ್ರೆಗಾಗಿ ಅಥವಾ ಯುದ್ಧ ಸನ್ನದ್ಧರಾಗಿ ಹೊರಟು ತರುವಾಯ ಮರಣವನ್ನಪ್ಪಿದರೆ ‘ಇವರು ನಮ್ಮ ಬಳಿಯಿರುತ್ತಿದ್ದರೆ ಮರಣವನ್ನಪ್ಪುತ್ತಿರಲಿಲ್ಲ ಮತ್ತು ಕೊಲೆಗೀಡಾಗುತ್ತಲೂ ಇರಲಿಲ್ಲ.’ ಎಂದು ಹೇಳುವ ಸತ್ಯನಿಷೇಧಿಗಳಂತೆ ನೀವಾಗದಿರಿ. ಅಲ್ಲಾಹು ಅವರ ಹೃದಯಗಳಲ್ಲಿ ಅದನ್ನೊಂದು ಖೇದಕರ ವಿಷಯವಾಗಿಸುವನು. ಜೀವ ಮತ್ತು ಮರಣವನ್ನು ನೀಡುವವನು ಅಲ್ಲಾಹುವಾಗಿರುವನು. ಅಲ್ಲಾಹು ನೀವು ಮಾಡುತ್ತಿರುವುದನ್ನು ವೀಕ್ಷಿಸುವವನಾಗಿರುವನು.
(157) ನೀವು ಅಲ್ಲಾಹುವಿನ ಮಾರ್ಗದಲ್ಲಿ ವಧಿಸಲ್ಪಟ್ಟರೆ ಅಥವಾ ಮರಣವನ್ನಪ್ಪಿದರೆ ಅಲ್ಲಾಹುವಿನಿಂದ ದೊರೆಯುವ ಪಾಪಮುಕ್ತಿ ಮತ್ತು ದಯೆಯು ಅವರು ಶೇಖರಿಸಿಡುವುದೆಲ್ಲಕ್ಕಿಂತಲೂ ಹೆಚ್ಚು ಉತ್ತಮವಾಗಿದೆ.
(158) ನೀವು ಮರಣವನ್ನಪ್ಪಿದರೂ ವಧಿಸಲ್ಪಟ್ಟರೂ ಖಂಡಿತವಾಗಿಯೂ ನಿಮ್ಮನ್ನು ಒಟ್ಟುಗೂಡಿಸಲಾಗುವುದು ಅಲ್ಲಾಹುವಿನ ಬಳಿಗೇ ಆಗಿರುವುದು.
(159) (ಓ ಪ್ರವಾದಿಯವರೇ!) ತಾವು ಅವರೊಂದಿಗೆ ಸೌಮ್ಯವಾಗಿ ವರ್ತಿಸಿರುವುದು ಅಲ್ಲಾಹುವಿನ ವತಿಯ ದಯೆಯಿಂದಲೇ ಆಗಿದೆ. ತಾವೊಬ್ಬ ಒರಟು ಸ್ವಭಾವಿಯೋ ಕಠಿಣ ಹೃದಯಿಯೋ ಆಗಿರುತ್ತಿದ್ದರೆ ಅವರು ತಮ್ಮ ಸನಿಹದಿಂದ ಚದುರಿಹೋಗುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗೋಸ್ಕರ ಪಾಪಮುಕ್ತಿಯನ್ನು ಬೇಡಿರಿ. ಕಾರ್ಯನಿರ್ವಹಣೆಯಲ್ಲಿ ಅವರೊಂದಿಗೆ ಸಮಾಲೋಚನೆ ಮಾಡಿರಿ. ತರುವಾಯ ತಾವೊಂದು ನಿರ್ಧಾರವನ್ನು ತಳೆದರೆ ಅಲ್ಲಾಹುವಿನ ಮೇಲೆ ಭರವಸೆಯಿಡಿರಿ. ತನ್ನ ಮೇಲೆ ಭರವಸೆಯಿಡುವವರನ್ನು ಅಲ್ಲಾಹು ಖಂಡಿತವಾಗಿಯೂ ಪ್ರೀತಿಸುವನು.
(160) ಅಲ್ಲಾಹು ನಿಮಗೆ ಸಹಾಯ ಮಾಡುವುದಾದರೆ ನಿಮ್ಮನ್ನು ಸೋಲಿಸುವವರಾರೂ ಇರಲಾರರು. ಅವನೇನಾದರೂ ನಿಮ್ಮನ್ನು ಕೈಬಿಡುವುದಾದರೆ ಅವನ ನಂತರ ನಿಮಗೆ ಸಹಾಯ ಮಾಡುವವನು ಯಾರಿರುವನು? ಸತ್ಯವಿಶ್ವಾಸಿಗಳು ಭರವಸೆಯಿಡುವುದು ಅಲ್ಲಾಹುವಿನ ಮೇಲೆಯೇ ಆಗಿರಲಿ.
(161) ವಂಚನೆ ಮಾಡುವುದು ಯಾವುದೇ ಪ್ರವಾದಿಗೂ ಯುಕ್ತವಲ್ಲ.(92) ಯಾರಾದರೂ ವಂಚನೆ ಮಾಡಿದರೆ ಅವನು ಪುನರುತ್ಥಾನ ದಿನದಂದು ತಾನು ವಂಚನೆ ಮಾಡಿ ಪಡೆದ ವಸ್ತುವಿನೊಂದಿಗೆ ಬರುವನು. ತರುವಾಯ ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿಟ್ಟಿರುವುದರ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರೊಂದಿಗೆ ಯಾವುದೇ ಅನ್ಯಾಯವೆಸಗಲಾಗದು.
92. ಶತ್ರುಗಳು ರಣರಂಗದಲ್ಲಿ ಬಿಟ್ಟು ಹೋಗುವ ಸೊತ್ತುಗಳು ಮುಸ್ಲಿಮರ ಹಕ್ಕಾಗಿವೆ. ಅವುಗಳನ್ನು ಹೇಗೆ ಹಂಚಿಕೊಳ್ಳಬೇಕೆಂಬ ಬಗ್ಗೆ ಕುರ್‌ಆನ್‍ನಲ್ಲಿ ಸ್ಪಷ್ಟ ನಿರ್ದೇಶನವಿದೆ (ನೋಡಿ: 8/41). ಆದರೆ ಪ್ರವಾದಿ(ಸ) ರವರು ಅದನ್ನು ನ್ಯಾಯಬದ್ಧವಾಗಿ ಹಂಚುತ್ತಿಲ್ಲವೆಂದು ಕಪಟವಿಶ್ವಾಸಿಗಳು ಆರೋಪ ಹೊರಿಸಿದಾಗ ಅವರಿಗೆ ಈ ಸೂಕ್ತಿಯಲ್ಲಿ ಉತ್ತರವನ್ನು ನೀಡಲಾಗಿದೆ.
(162) ಅಲ್ಲಾಹುವಿನ ಸಂತೃಪ್ತಿಯನ್ನು ಹಿಂಬಾಲಿಸಿದವನು ಅಲ್ಲಾಹುವಿನ ಕ್ರೋಧಕ್ಕೆ ಪಾತ್ರನಾದವನಂತಾಗಿರುವನೇ? ಅವನ ವಾಸಸ್ಥಳವು ನರಕವಾಗಿದೆ. ಆ ಸ್ಥಳವು ಎಷ್ಟು ನಿಕೃಷ್ಟವಾದುದು!
(163) ಅವರು ಅಲ್ಲಾಹುವಿನ ಬಳಿ ಹಲವು ಪದವಿಗಳಲ್ಲಿರುವರು. ಅವರು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ವೀಕ್ಷಿಸುತ್ತಿರುವನು.
(164) ಸತ್ಯವಿಶ್ವಾಸಿಗಳಿಗೆ ಅಲ್ಲಾಹುವಿನ ಸೂಕ್ತಿಗಳನ್ನು ಓದಿಕೊಡುವ, ಅವರನ್ನು ಶುದ್ದೀಕರಿಸುವ, ಅವರಿಗೆ ಗ್ರಂಥವನ್ನು ಮತ್ತು ಜ್ಞಾನವನ್ನು ಕಲಿಸುವ ಓರ್ವ ಸಂದೇಶವಾಹಕರನ್ನು ಅವರಿಂದಲೇ ಕಳುಹಿಸುವ ಮೂಲಕ ಖಂಡಿತವಾಗಿಯೂ ಅಲ್ಲಾಹು ಅವರಿಗೆ ಮಹಾ ಅನುಗ್ರಹವನ್ನು ನೀಡಿರುವನು. ಇದಕ್ಕೆ ಮುನ್ನ ಅವರು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದವರಾಗಿದ್ದರು.
(165) ನಿಮಗೊಂದು ಆಪತ್ತು ಬಾಧಿಸಿದಾಗ ಅದರ ದುಪ್ಪಟ್ಟನ್ನು ನೀವು ಶತ್ರುಗಳಿಗೆ ಮಾಡಿಟ್ಟಿದ್ದರೂ(93) ‘ಇದು ಹೇಗೆ ಸಂಭವಿಸಿತು’ ಎಂದು ನೀವು ಕೇಳುವುದೇ? (ಓ ಪ್ರವಾದಿಯವರೇ!) ಹೇಳಿರಿ: ‘ಅದು ಸಂಭವಿಸಿದ್ದು ನಿಮ್ಮ ವತಿಯಿಂದಲೇ ಆಗಿದೆ.’ ಖಂಡಿತವಾಗಿಯೂ ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
93. ಉಹುದ್ ಯುದ್ಧದಲ್ಲಿ ಎಪ್ಪತ್ತು ಮುಸ್ಲಿಮರು ಹತರಾದರು. ಆದರೆ ಅದಕ್ಕಿಂತ ಮೊದಲು ಬದ್ರ್ ಯುದ್ಧದಲ್ಲಿ ಎಪ್ಪತ್ತು ಸತ್ಯನಿಷೇಧಿಗಳನ್ನು ವಧಿಸಲಾಗಿತ್ತು ಮತ್ತು ಎಪ್ಪತ್ತು ಜನರನ್ನು ಸೆರೆ ಹಿಡಿಯಲಾಗಿತ್ತು.
(166) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮಗೆ ವಿಪತ್ತು ಬಾಧಿಸಿದ್ದು ಅಲ್ಲಾಹುವಿನ ಅನುಮತಿಯಿಂದಲೇ ಆಗಿತ್ತು. ಅದು ಸತ್ಯವಿಶ್ವಾಸಿಗಳು ಯಾರೆಂದು ಗುರುತಿಸುವುದಕ್ಕಾಗಿತ್ತು.
(167) ಮತ್ತು ಕಪಟವಿಶ್ವಾಸಿಗಳು ಯಾರೆಂದು ಗುರುತಿಸುವುದಕ್ಕಾಗಿತ್ತು. ‘ಬನ್ನಿರಿ! ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿರಿ ಅಥವಾ ಪ್ರತಿರೋಧವನ್ನಾದರೂ ಒಡ್ಡಿರಿ’ ಎಂದು ಅವರೊಂದಿಗೆ (ಕಪಟವಿಶ್ವಾಸಿಗಳೊಂದಿಗೆ) ಹೇಳಲಾಯಿತು. ಆಗ ಅವರು ‘ಯುದ್ಧವು ನಡೆಯುವುದೆಂದು ನಮಗೆ ತಿಳಿದಿರುತ್ತಿದ್ದರೆ ನಾವೂ ನಿಮ್ಮನ್ನು ಹಿಂಬಾಲಿಸುತ್ತಿದ್ದೆವು’ ಎಂದು ಹೇಳಿದರು. ಅಂದು ಅವರು ಸತ್ಯವಿಶ್ವಾಸಕ್ಕಿಂತಲೂ ಹೆಚ್ಚಾಗಿ ಸತ್ಯನಿಷೇಧಕ್ಕೆ ನಿಕಟರಾಗಿದ್ದರು. ತಮ್ಮ ಹೃದಯಗಳಲ್ಲಿ ಇಲ್ಲದ್ದನ್ನು ಅವರು ಬಾಯಿ ಮೂಲಕ ಹೇಳುತ್ತಿರುವರು. ಅವರು ಮರೆಮಾಚುವುದರ ಕುರಿತು ಅಲ್ಲಾಹು ಅತಿಹೆಚ್ಚು ಅರಿವುಳ್ಳವನಾಗಿರುವನು.
(168) ಅವರು (ಯುದ್ಧಕ್ಕೆ ಹೋಗದೆ) ಮನೆಯಲ್ಲೇ ಕುಳಿತುಕೊಂಡು (ಯುದ್ಧಕ್ಕೆ ಹೋದ) ತಮ್ಮ ಸಹೋದರರ ಕುರಿತು ‘ನಮ್ಮ ಮಾತನ್ನು ಕೇಳಿರುತ್ತಿದ್ದರೆ ಅವರು ವಧಿಸಲ್ಪಡುತ್ತಿರಲಿಲ್ಲ’ ಎಂದು ಹೇಳುವವರೂ ಆಗಿರುವರು. (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಸತ್ಯಸಂಧರಾಗಿದ್ದರೆ ಸ್ವತಃ ನಿಮ್ಮಿಂದಲೇ ಮರಣವನ್ನು ತಡೆಗಟ್ಟಿರಿ.’
(169) ಅಲ್ಲಾಹುವಿನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ತಾವು ಮೃತರೆಂದು ಭಾವಿಸದಿರಿ. ಅವರು ಅವರ ರಬ್‌ನ ಬಳಿ ಜೀವಂತವಾಗಿರುವರು. ಅವರಿಗೆ ಅನ್ನಾಧಾರವನ್ನು ನೀಡಲಾಗುತ್ತಿದೆ.(94)
94. ಹುತಾತ್ಮರಿಗೆ ಅಲ್ಲಾಹುವಿನ ಬಳಿಯಿರುವ ಜೀವನ ಮತ್ತು ಅವರಿಗಿರುವ ಅನ್ನಾಧಾರವು ಅಲೌಕಿಕ ವಿಷಯಗಳಲ್ಲಿ ಸೇರಿದ್ದಾಗಿರುವುದರಿಂದ ಅದರ ಕುರಿತಿರುವ ಹೆಚ್ಚಿನ ಮಾಹಿತಿಗಳು ನಮಗೆ ಅಜ್ಞಾತವಾಗಿದೆ.
(170) ಅಲ್ಲಾಹು ತನ್ನ ಅನುಗ್ರಹದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತುಷ್ಟರಾಗಿರುವರು. ತಮ್ಮೊಂದಿಗೆ ಸೇರದಿರುವ, ಆದರೆ ತಮ್ಮ ಹಿಂದೆ (ಇಹಲೋಕದಲ್ಲಿ) ಜೀವಿಸುತ್ತಿರುವ ವಿಶ್ವಾಸಿಗಳ ಕುರಿತು, ಅವರಿಗೆ ಯಾವುದೇ ಭಯವೂ ಇರಲಾರದು ಮತ್ತು ಅವರು ದುಃಖಿಸಬೇಕಾಗಿಯೂ ಬರಲಾರದೆಂದು ಭಾವಿಸಿ ಅವರು (ಆ ಹುತಾತ್ಮರು) ಹರ್ಷಪಡುತ್ತಿರುವರು.
(171) ಅಲ್ಲಾಹುವಿನ ಅನುಗ್ರಹ ಮತ್ತು ಔದಾರ್ಯದಿಂದಾಗಿ ಮತ್ತು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ಅಲ್ಲಾಹು ವ್ಯರ್ಥಗೊಳಿಸಲಾರನು ಎಂಬುದರಿಂದಾಗಿ ಅವರು ಹರ್ಷಪಡುತ್ತಿರುವರು.
(172) ಗಾಯಗೊಂಡ ಬಳಿಕವೂ ಅಲ್ಲಾಹುವಿನ ಮತ್ತು ಸಂದೇಶವಾಹಕರ ಕರೆಗೆ ಓಗೊಟ್ಟವರಾರೋ ಅವರ ಪೈಕಿ ಸತ್ಕರ್ಮವೆಸಗಿದವರಿಗೂ ಭಯಭಕ್ತಿ ಪಾಲಿಸಿದವರಿಗೂ ಮಹಾ ಪ್ರತಿಫಲವಿದೆ.
(173) ‘ಆ ಜನರು ನಿಮ್ಮ ವಿರುದ್ಧ (ಸೈನ್ಯವನ್ನು) ಜಮಾವಣೆಗೊಳಿಸಿರುವರು; ಆದ್ದರಿಂದ ಅವರನ್ನು ಭಯಪಡಿರಿ’ ಎಂದು ಜನರು ಅವರೊಂದಿಗೆ ಹೇಳಿದಾಗ ಅದು ಅವರ ವಿಶ್ವಾಸವನ್ನು ಅಧಿಕಗೊಳಿಸಿತು. ಅವರು ಹೇಳಿದರು: ‘ನಮಗೆ ಅಲ್ಲಾಹು ಸಾಕು. ಭರವಸೆಯಿಡಲು ಅತ್ಯುತ್ತಮನು ಅವನೇ ಆಗಿರುವನು.’(95)
95. ಅಬೂ ಸುಫ್ಯಾನ್ ಮತ್ತು ಅವರ ಅನುಯಾಯಿಗಳು ಉಹುದ್ ಯುದ್ಧದಲ್ಲಿ ಸೋತು ಹಿಂದಿರುಗಿದಾಗ ಅವರನ್ನು ಹಿಂಬಾಲಿಸಿ ಪುನಃ ಬೆದರಿಸಲು ಪ್ರವಾದಿ(ಸ) ರವರು ಮತ್ತು ಮುಸ್ಲಿಮರು ನಿರ್ಧರಿಸಿದರು. ಈ ವಿಷಯವನ್ನರಿತ ಅಬೂ ಸುಫ್ಯಾನ್ ದಾರಿ ಮಧ್ಯೆ ಭೇಟಿಯಾದ ಒಂದು ವರ್ತಕ ತಂಡದೊಂದಿಗೆ, ನೀವು ಮುಹಮ್ಮದ್‍ರನ್ನು ಪುನಃ ಮದೀನಕ್ಕೆ ಮರಳುವಂತೆ ಪ್ರೇರೇಪಿಸಬೇಕು, ಅದಕ್ಕಾಗಿ ನಾನು ಅವರನ್ನು ಎದುರಿಸಲು ದೊಡ್ಡ ಸೈನ್ಯವೊಂದನ್ನು ಜಮಾವಣೆಗೊಳಿಸಿರುವೆನು ಎಂದು ಹೆದರಿಸಬೇಕು ಎಂದು ಹೇಳಿದರು. ವರ್ತಕ ತಂಡವು ‘ಹಂರಾಉಲ್ ಅಸದ್’ ಎಂಬ ಸ್ಥಳದಲ್ಲಿ ಪ್ರವಾದಿ(ಸ) ರನ್ನು ಭೇಟಿಯಾಗಿ ಅಬೂ ಸುಫ್ಯಾನ್ ಹೇಳಿದಂತೆ ಹೇಳಿ ಹೆದರಿಸಿದರು. ಆಗ ಪ್ರವಾದಿ(ಸ) ಮತ್ತು ಸಹಾಬಾಗಳು ಹೇಳಿದ ಮಾತುಗಳಾಗಿವೆ ಇವು.
(174) ತರುವಾಯ ಅವರು ಅಲ್ಲಾಹುವಿನ ವತಿಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಯಾವುದೇ ಹಾನಿಯೂ ಅವರನ್ನು ಸ್ಪರ್ಷಿಸಲಿಲ್ಲ. ಅವರು ಅಲ್ಲಾಹುವಿನ ಸಂತೃಪ್ತಿಯನ್ನು ಹಿಂಬಾಲಿಸಿದರು. ಅಲ್ಲಾಹು ಮಹಾ ಔದಾರ್ಯವುಳ್ಳವನಾಗಿರುವನು.
(175) ಅದು (ನಿಮ್ಮನ್ನು ಹೆದರಿಸಿದ್ದು) ಸ್ವತಃ ಸೈತಾನನೇ ಆಗಿದ್ದನು. ಅವನು ತನ್ನ ಮಿತ್ರರ ಬಗ್ಗೆ (ನಿಮ್ಮನ್ನು) ಹೆದರಿಸುತ್ತಿರುವನು. ಆದ್ದರಿಂದ ನೀವು ಅವರನ್ನು ಭಯಪಡದಿರಿ. ನನ್ನನ್ನು ಭಯಪಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
(176) ಸತ್ಯನಿಷೇಧದೆಡೆಗೆ ಧಾವಂತದಿಂದ ಮುನ್ನುಗ್ಗುತ್ತಿರುವವರು ತಮ್ಮನ್ನು ದುಃಖಕ್ಕೀಡು ಮಾಡದಿರಲಿ. ಖಂಡಿತವಾಗಿಯೂ ಅವರು ಅಲ್ಲಾಹುವಿಗೆ ಯಾವುದೇ ಹಾನಿಯನ್ನೂ ಉಂಟುಮಾಡಲಾರರು. ಪರಲೋಕದಲ್ಲಿ ಅವರಿಗೆ ಯಾವ ಪಾಲನ್ನೂ ನೀಡದಿರಲು ಅಲ್ಲಾಹು ಬಯಸುತ್ತಿರುವನು. ಅವರಿಗೆ ಕಠಿಣವಾದ ಶಿಕ್ಷೆಯಿರುವುದು.
(177) ಖಂಡಿತವಾಗಿಯೂ ಸತ್ಯವಿಶ್ವಾಸಕ್ಕೆ ಬದಲಾಗಿ ಸತ್ಯನಿಷೇಧವನ್ನು ಖರೀದಿಸಿದವರು ಯಾರೋ ಅವರು ಅಲ್ಲಾಹುವಿಗೆ ಯಾವುದೇ ಹಾನಿಯನ್ನೂ ಉಂಟು ಮಾಡಲಾರರು. ಯಾತನಾಮಯವಾದ ಶಿಕ್ಷೆಯಿರುವುದು ಅವರಿಗೇ ಆಗಿರುವುದು.
(178) ಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶವನ್ನು ದೀರ್ಘಗೊಳಿಸಿಕೊಡುವುದು ಅವರಿಗೆ ಒಳಿತಾಗಿದೆಯೆಂದು ಅವರೆಂದೂ ಭಾವಿಸದಿರಲಿ. ನಾವು ಅವರಿಗೆ ಕಾಲಾವಕಾಶವನ್ನು ದೀರ್ಘಗೊಳಿಸಿಕೊಡುವುದು ಅವರು ಪಾಪಗಳನ್ನು ಹೆಚ್ಚಿಸಲೆಂದೇ ಆಗಿದೆ. ಅವರಿಗೆ ನಿಂದ್ಯವಾದ ಶಿಕ್ಷೆಯಿರುವುದು.
(179) ಒಳಿತಿನಿಂದ ಕೆಡುಕನ್ನು ಬೇರ್ಪಡಿಸಿ ತೋರಿಸುವ ತನಕ ಇಂದು ನೀವಿರುವ ಸ್ಥಿತಿಯಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಬಿಟ್ಟುಬಿಡಲಾರನು. ಅಲ್ಲಾಹು ನಿಮಗೆ ಅಗೋಚರ ಜ್ಞಾನವನ್ನು ಪ್ರಕಟಗೊಳಿಸುವುದನ್ನೂ ಮಾಡಲಾರನು. ಆದರೆ (ಅಗೋಚರ ಜ್ಞಾನವನ್ನು ತಿಳಿಸಿ ಕೊಡುವ ಸಲುವಾಗಿ) ಅಲ್ಲಾಹು ತನ್ನ ಸಂದೇಶವಾಹಕರ ಪೈಕಿ ತಾನಿಚ್ಛಿಸುವವರನ್ನು ಆರಿಸುವನು. ಆದ್ದರಿಂದ ಅಲ್ಲಾಹುವಿನಲ್ಲಿಯೂ ಅವನ ಸಂದೇಶವಾಹಕರಲ್ಲಿಯೂ ವಿಶ್ವಾಸವಿಡಿರಿ. ನೀವು ವಿಶ್ವಾಸವಿಟ್ಟರೆ ಮತ್ತು ಭಯಭಕ್ತಿ ಪಾಲಿಸಿದರೆ ನಿಮಗೆ ಮಹಾ ಪ್ರತಿಫಲವಿರುವುದು.
(180) ಜಿಪುಣತನ ತೋರುವವರು ಯಾರೋ ಅವರಿಗೆ ಅಲ್ಲಾಹು ತನ್ನ ಅನುಗ್ರಹದಿಂದ ದಯಪಾಲಿಸಿರುವುದನ್ನು ಅವರೆಂದೂ ಪ್ರಯೋಜನಕರವೆಂದು ಭಾವಿಸದಿರಲಿ. ಅಲ್ಲ, ಅದು ಅವರಿಗೆ ಹಾನಿಕರವಾಗಿದೆ. ಅವರು ಜಿಪುಣತನ ತೋರಿದ ಧನದಿಂದ ಪುನರುತ್ಥಾನ ದಿನದಂದು ಅವರ ಕೊರಳಿಗೆ ಹಾರವನ್ನು ಹಾಕಲಾಗುವುದು. ಆಕಾಶಗಳ ಮತ್ತು ಭೂಮಿಯ ವಾರೀಸು ಹಕ್ಕು ಅಲ್ಲಾಹುವಿಗಿರುವುದಾಗಿದೆ. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನಾಗಿರುವನು.
(181) ‘ಅಲ್ಲಾಹು ಬಡವನಾಗಿರುವನು ಮತ್ತು ನಾವು ಧನಿಕರಾಗಿರುವೆವು’ ಎಂದು ಹೇಳಿದವರ ಮಾತನ್ನು(96) ಖಂಡಿತವಾಗಿಯೂ ಅಲ್ಲಾಹು ಆಲಿಸಿರುವನು. ಅವರು ಹೇಳಿರುವ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ವಧಿಸಿರುವುದನ್ನು ನಾವು ದಾಖಲಿಸುವೆವು. ‘ಧಗಧಗಿಸುವ ನರಕ ಶಿಕ್ಷೆಯನ್ನು ಆಸ್ವಾದಿಸಿರಿ’ ಎಂದು ನಾವು (ಅವರೊಂದಿಗೆ) ಹೇಳುವೆವು.
96. ‘ನೀವು ಅಲ್ಲಾಹುವಿಗೆ ಉತ್ತಮವಾದ ಸಾಲವನ್ನು ನೀಡಿರಿ’ ಎಂಬ ಕುರ್‌ಆನಿನ ಆಹ್ವಾನವನ್ನು ಲೇವಡಿ ಮಾಡುತ್ತಾ ಯಹೂದಿಗಳು ಈ ಮಾತನ್ನು ಹೇಳಿದ್ದರು.
(182) ಅದು ನಿಮ್ಮ ಕೈಗಳು ಮುಂಗಡವಾಗಿ ಮಾಡಿಟ್ಟಿರುವುದರಿಂದಲೂ ಅಲ್ಲಾಹು ದಾಸರೊಂದಿಗೆ ಅನ್ಯಾಯವೆಸಗಲಾರನು ಎಂಬುದರಿಂದಲೂ ಆಗಿದೆ.
(183) ‘ನಮ್ಮ ಮುಂದೆ ಒಂದು ಬಲಿ ನೀಡಿ ಅದನ್ನು ಅಗ್ನಿಯು ಭಕ್ಷಿಸುವುದನ್ನು (ಕಣ್ಣಾರೆ ಕಾಣುವ) ತನಕ ಯಾವ ಸಂದೇಶವಾಹಕನಲ್ಲಿಯೂ ವಿಶ್ವಾಸವಿಡಬಾರದು ಎಂದು ಅಲ್ಲಾಹು ನಮ್ಮಿಂದ ಕರಾರು ಪಡೆದಿರುವನು’ ಎಂದು ಹೇಳಿದವರಾಗಿರುವರು. (ಓ ಪ್ರವಾದಿಯವರೇ!) ಹೇಳಿರಿ: ‘ಸ್ಪಷ್ಟವಾದ ಪುರಾವೆಗಳ ಸಹಿತ ಮತ್ತು ನೀವು ಹೇಳುತ್ತಿರುವ ಇದರ ಸಹಿತ ನನಗಿಂತ ಮುಂಚೆ ಅನೇಕ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿರುವರು. ನೀವು ಸತ್ಯಸಂಧರಾಗಿದ್ದರೆ ನೀವೇಕೆ ಅವರನ್ನು ವಧಿಸಿದಿರಿ?’
(184) ಅವರು ತಮ್ಮನ್ನು ನಿಷೇಧಿಸುವುದಾದರೆ ತಮಗಿಂತ ಮುಂಚೆ ಸ್ಪಷ್ಟವಾದ ಪುರಾವೆಗಳೊಂದಿಗೆ, ಗ್ರಂಥಗಳೊಂದಿಗೆ ಮತ್ತು ಪ್ರಕಾಶ ಬೀರುವ ಗ್ರಂಥದೊಂದಿಗೆ ಬಂದ ಸಂದೇಶವಾಹಕರು ಕೂಡ ನಿಷೇಧಿಸಲ್ಪಟ್ಟಿರುವರು.
(185) ಪ್ರತಿಯೊಂದು ಶರೀರವೂ ಮರಣದ ರುಚಿಯನ್ನು ಸವಿಯಲಿದೆ. ನಿಮಗೆ ನಿಮ್ಮ ಪ್ರತಿಫಲಗಳನ್ನು ಪೂರ್ಣವಾಗಿ ನೀಡಲಾಗುವುದು ಪುನರುತ್ಥಾನ ದಿನದಂದು ಮಾತ್ರವಾಗಿದೆ. ಆಗ ಯಾರು ನರಕದಿಂದ ದೂರ ಸರಿಸಲಾಗುವನೋ ಮತ್ತು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಗುವನೋ ಅವನು ಜಯಗಳಿಸಿದನು. ಐಹಿಕ ಜೀವನವು ವಂಚನಾತ್ಮಕವಾದ ಸುಖಾನುಭೂತಿಯಲ್ಲದೆ ಇನ್ನೇನೂ ಅಲ್ಲ.
(186) ಖಂಡಿತವಾಗಿಯೂ ನಿಮ್ಮ ಸಂಪತ್ತುಗಳಲ್ಲಿಯೂ ಶರೀರಗಳಲ್ಲಿಯೂ ನಿಮ್ಮನ್ನು ಪರೀಕ್ಷಿಸಲಾಗುವುದು. ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಂದಲೂ, ಬಹುದೇವಾರಾಧಕರಿಂದಲೂ ಖಂಡಿತವಾಗಿಯೂ ನೀವು ಅನೇಕ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳಲಿರುವಿರಿ. ನೀವು ತಾಳ್ಮೆ ವಹಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಖಂಡಿತವಾಗಿಯೂ ಅದು ದೃಢನಿರ್ಧಾರ ತಳೆಯುವ ವಿಷಯಗಳಲ್ಲಿ ಸೇರಿದ್ದಾಗಿವೆ.
(187) ಗ್ರಂಥ ನೀಡಲಾದವರೊಂದಿಗೆ ಖಂಡಿತವಾಗಿಯೂ ಅದನ್ನು (ಗ್ರಂಥವನ್ನು) ನೀವು ಜನರಿಗೆ ವಿವರಿಸಿಕೊಡಬೇಕು ಮತ್ತು ಅದನ್ನು ಮರೆಮಾಚಬಾರದೆಂದು ಅಲ್ಲಾಹು ಕರಾರು ಪಡೆದ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ಅವರದನ್ನು (ಗ್ರಂಥವನ್ನು) ತಮ್ಮ ಬೆನ್ನಹಿಂದಕ್ಕೆ ಎಸೆದರು ಮತ್ತು ಅದರ ಬದಲಿಗೆ ತುಚ್ಛವಾದ ಬೆಲೆಯನ್ನು ಪಡೆದರು. ಅವರು ಬದಲಿಗೆ ಪಡೆದದ್ದು ಎಷ್ಟು ನಿಕೃಷ್ಟವಾದುದು!
(188) ತಾವು ಮಾಡಿರುವ ಕರ್ಮಗಳ ಬಗ್ಗೆ ಸಂತೋಷಪಡುವ ಮತ್ತು ತಾವು ಮಾಡಿರದಂತಹ ಕರ್ಮಗಳ ಹೆಸರಿನಲ್ಲಿ ಪ್ರಶಂಸಿಸಲಾಗುವುದನ್ನು ಇಷ್ಟಪಡುವ ಜನರ ಬಗ್ಗೆ ಅವರು ಶಿಕ್ಷೆಯಿಂದ ಮುಕ್ತರಾದ ಸ್ಥಿತಿಯಲ್ಲಿರುವರು ಎಂದು ತಾವೆಂದೂ ಭಾವಿಸದಿರಿ. ಯಾತನಾಮಯವಾದ ಶಿಕ್ಷೆಯಿರುವುದು ಅವರಿಗಾಗಿದೆ.
(189) ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹುವಿಗಿರುವುದಾಗಿದೆ. ಅಲ್ಲಾಹು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(190) ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಸೃಷ್ಟಿಯಲ್ಲಿ ಮತ್ತು ರಾತ್ರಿ ಹಗಲುಗಳ ಬದಲಾವಣೆಯಲ್ಲಿ ಬುದ್ಧಿವಂತರಿಗೆ ಅನೇಕ ದೃಷ್ಟಾಂತಗಳಿವೆ.
(191) ಅವರು ನಿಂತುಕೊಂಡು, ಕುಳಿತುಕೊಂಡು ಮತ್ತು ಮಲಗಿಕೊಂಡು ಅಲ್ಲಾಹುವನ್ನು ಸ್ಮರಿಸುವವರೂ, ಆಕಾಶಗಳ ಮತ್ತು ಭೂಮಿಯ ಸೃಷ್ಟಿಯ ಕುರಿತು ಚಿಂತಿಸುವವರೂ ಆಗಿರುವರು. (ಅವರು ಹೇಳುವರು): ‘ಓ ನಮ್ಮ ರಬ್! ನೀನಿದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಮ ಪಾವನನಾಗಿರುವೆ. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ಪಾರುಮಾಡು.
(192) ಓ ನಮ್ಮ ರಬ್! ನೀನು ಯಾರನ್ನಾದರೂ ನರಕಾಗ್ನಿಗೆ ಪ್ರವೇಶ ಮಾಡಿಸಿದರೆ ಅವನನ್ನು ನೀನು ನಿಂದ್ಯನಾಗಿ ಮಾಡಿರುವೆ. ಅಕ್ರಮಿಗಳಿಗೆ ಸಹಾಯಕರಾಗಿ ಯಾರೂ ಇರಲಾರರು.
(193) ಓ ನಮ್ಮ ರಬ್! ಸತ್ಯವಿಶ್ವಾಸದೆಡೆಗೆ ಕರೆಯುವ ಓರ್ವ ಧರ್ಮೋಪದೇಶಕನು ‘ನೀವು ನಿಮ್ಮ ರಬ್‌ನಲ್ಲಿ ವಿಶ್ವಾಸವಿಡಿರಿ’ ಎಂದು ಹೇಳುವುದನ್ನು ಖಂಡಿತವಾಗಿಯೂ ನಾವು ಆಲಿಸಿರುವೆವು. ಆದ್ದರಿಂದ ನಾವು ವಿಶ್ವಾಸವಿಟ್ಟಿರುವೆವು. ಓ ನಮ್ಮ ರಬ್! ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ನಮ್ಮಿಂದ ಅಳಿಸು. ನಮ್ಮನ್ನು ಸಜ್ಜನರೊಂದಿಗೆ ಮರಣಗೊಳಿಸು.
(194) ಓ ನಮ್ಮ ರಬ್! ನಿನ್ನ ಸಂದೇಶವಾಹಕರ ಮೂಲಕ ನೀನು ನಮಗೆ ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು ಮತ್ತು ಪುನರುತ್ಥಾನ ದಿನದಂದು ನಮ್ಮನ್ನು ಅಪಮಾನಿಸದಿರು. ಖಂಡಿತವಾಗಿಯೂ ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.’
(195) ಆಗ ಅವರ ರಬ್ ಅವರಿಗೆ ಉತ್ತರಿಸಿದನು: ‘ಪುರುಷನಾಗಿರಲಿ ಸ್ತ್ರೀಯಾಗಿರಲಿ ನಿಮ್ಮ ಪೈಕಿ ಕರ್ಮವೆಸಗುವ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸೆನು. ನಿಮ್ಮಲ್ಲಿ ಪ್ರತಿಯೊಂದು ವರ್ಗದವರೂ ಇನ್ನೊಂದು ವರ್ಗದಿಂದ ಉದ್ಭವಿಸಿದವರಾಗಿರುವಿರಿ.(97) ಆದ್ದರಿಂದ ತಮ್ಮ ಊರನ್ನು ತೊರೆದವರು, ಸ್ವಂತ ಮನೆಗಳಿಂದ ಹೊರದಬ್ಬಲಾದವರು, ನನ್ನ ಮಾರ್ಗದಲ್ಲಿ ಹಿಂಸೆಗೀಡಾದವರು, ಯುದ್ಧದಲ್ಲಿ ನಿರತರಾದವರು ಮತ್ತು ವಧಿಸಲಾದವರು ಯಾರೋ ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಅವರನ್ನು ಪ್ರವೇಶಗೊಳಿಸುವೆನು.’ ಇದು ಅಲ್ಲಾಹುವಿನ ವತಿಯ ಪ್ರತಿಫಲವಾಗಿದೆ. ಅಲ್ಲಾಹುವಿನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ.
97. ಗಂಡು ಮತ್ತು ಹೆಣ್ಣು ಬೇರೆ ಬೇರೆ ವರ್ಗಗಳಲ್ಲ. ಮನುಷ್ಯಕುಲದ ಎರಡು ವಿಭಾಗಗಳಷ್ಟೇ ಆಗಿವೆ. ಇದರ ತಾತ್ಪರ್ಯ ವೇನೆಂದರೆ ಸತ್ಕರ್ಮಗೈಯ್ಯುವವನು ಗಂಡಾದರೂ ಹೆಣ್ಣಾದರೂ ಅವರಿಬ್ಬರೂ ಪುಣ್ಯ ಪಡೆಯುವುದರಲ್ಲಿ ಸಮಾನರು ಎಂದಾಗಿದೆ.
(196) ನಾಡುಗಳಲ್ಲಿ ಸತ್ಯನಿಷೇಧಿಗಳ ಸ್ವಚ್ಛಂದ ಮೆರೆದಾಟವು ತಮ್ಮನ್ನು ವಂಚಿಸದಿರಲಿ.
(197) ಅದು ಕ್ಷಣಿಕವಾದ ಒಂದು ಸುಖಾನುಭೂತಿಯಾಗಿದೆ. ತರುವಾಯ ಅವರಿಗಿರುವ ವಾಸಸ್ಥಳವು ನರಕಾಗ್ನಿಯಾಗಿದೆ. ಆ ವಾಸಸ್ಥಳ ಅದೆಷ್ಟು ನಿಕೃಷ್ಟವಾದುದು!
(198) ಆದರೆ ತಮ್ಮ ರಬ್ಬನ್ನು ಭಯಪಟ್ಟು ಜೀವಿಸಿದವರು ಯಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹುವಿನ ವತಿಯ ಸತ್ಕಾರವಾಗಿದೆ. ಸಜ್ಜನರಿಗೆ ಅಲ್ಲಾಹುವಿನ ಬಳಿಯಿರುವುದೇ ಅತ್ಯುತ್ತಮವಾಗಿದೆ.
(199) ಖಂಡಿತವಾಗಿಯೂ ಗ್ರಂಥದವರ ಪೈಕಿ ಅಲ್ಲಾಹುವಿನಲ್ಲಿಯೂ, ನಿಮಗೆ ಅವತೀರ್ಣಗೊಂಡಿರುವುದರಲ್ಲಿಯೂ ತಮಗೆ ಅವತೀರ್ಣಗೊಂಡಿರುವುದರಲ್ಲಿಯೂ ವಿಶ್ವಾಸವಿಡುವವರಿರುವರು. (ಅವರು) ಅಲ್ಲಾಹುವಿನೊಂದಿಗೆ ವಿನಮ್ರತೆಯುಳ್ಳವರೂ, ಅಲ್ಲಾಹುವಿನ ವಚನಗಳನ್ನು ಮಾರಿ ತುಚ್ಛವಾದ ಬೆಲೆ ಪಡೆಯದವರೂ ಆಗಿರುವರು. ಅಂತಹವರಿಗೆ ಅವರ ರಬ್‌ನ ಬಳಿ ಅರ್ಹ ಪ್ರತಿಫಲವಿದೆ. ಖಂಡಿತವಾಗಿಯೂ ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ಮಾಡುವವನಾಗಿರುವನು.
(200) ಓ ಸತ್ಯವಿಶ್ವಾಸಿಗಳೇ! ಸಹನೆ ವಹಿಸಿರಿ, ಸ್ಥೈರ್ಯವಂತರಾಗಿರಿ ಮತ್ತು ಪ್ರತಿರೋಧ ಸನ್ನದ್ಧರಾಗಿರಿ. ಅಲ್ಲಾಹುವನ್ನು ಭಯಪಟ್ಟು ಜೀವಿಸಿರಿ. ನೀವು ಯಶಸ್ವಿಯಾಗಲೂ ಬಹುದು.