25 - Al-Furqaan ()

|

(1) ಸತ್ಯಾಸತ್ಯ ವಿವೇಚನೆಗಾಗಿರುವ ಆಧಾರ ಪ್ರಮಾಣವನ್ನು (ಕುರ್‌ಆನನ್ನು) ತನ್ನ ದಾಸನ (ಪ್ರವಾದಿಯವರ) ಮೇಲೆ, ಅವರು ಸರ್ವಲೋಕದವರಿಗೆ ಒಬ್ಬ ಮುನ್ನೆಚ್ಚರಿಕೆಗಾರರಾಗುವ ಸಲುವಾಗಿ ಅವತೀರ್ಣಗೊಳಿಸಿದವನು ಅನುಗ್ರಹಪೂರ್ಣನಾಗಿರುವನು.

(2) ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗಾಗಿದೆಯೋ ಅವನಾಗಿರುವನು (ಕುರ್‌ಆನನ್ನು ಅವತೀರ್ಣಗೊಳಿಸಿದವನು). ಅವನು ಸಂತತಿಯನ್ನು ಮಾಡಿಕೊಂಡವನಲ್ಲ. ಆಧಿಪತ್ಯದಲ್ಲಿ ಅವನೊಂದಿಗೆ ಯಾವುದೇ ಸಹಭಾಗಿಗಳಿಲ್ಲ. ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿ ಅದನ್ನು ಯಥಾವತ್ತಾಗಿ ವ್ಯವಸ್ಥೆಗೊಳಿಸಿರುವನು.

(3) ಅವರು ಅವನ ಹೊರತು ಅನ್ಯ ಆರಾಧ್ಯರನ್ನು ಮಾಡಿಕೊಂಡಿರುವರು. ಅವರು (ಆರಾಧ್ಯರು) ಏನನ್ನೂ ಸೃಷ್ಟಿಸಲಾರರು. ಅವರು ಸೃಷ್ಟಿಸಲ್ಪಟ್ಟವರಾಗಿರುವರು. ಅವರು ಸ್ವತಃ ತಮಗಾಗಿ ಯಾವುದೇ ಹಾನಿಯನ್ನೋ ಲಾಭವನ್ನೋ ಸ್ವಾಧೀನಪಡಿಸಲಾರರು. ಮರಣವನ್ನೋ, ಬದುಕನ್ನೋ ಅಥವಾ ಪುನರುತ್ಥಾನವನ್ನೋ ಅವರು ಸ್ವಾಧೀನಪಡಿಸಲಾರರು.(763)
763. ಸ್ವತಃ ತಮ್ಮದೇ ವಿಷಯಗಳಲ್ಲಿ ಸಂಪೂರ್ಣ ಅಸಹಾಯಕರಾದ ಆ ಆರಾಧ್ಯರುಗಳಿಂದ ಸಹಾಯವನ್ನು ನಿರೀಕ್ಷಿಸುವುದು ಮತ್ತು ಅವುಗಳನ್ನು ಪೂಜಿಸುವುದು ಮಹಾ ಮೂರ್ಖತನವಾಗಿದೆ.

(4) ಸತ್ಯನಿಷೇಧಿಗಳು ಹೇಳಿದರು: “ಇದು (ಕುರ್‌ಆನ್) ಅವರು (ಪ್ರವಾದಿ) ಸ್ವತಃ ರಚಿಸಿದ ಸುಳ್ಳು ಮಾತ್ರವಾಗಿದೆ. ಅದಕ್ಕಾಗಿ ಇತರ ಕೆಲವರು ಅವರಿಗೆ ನೆರವಾಗಿರುವರು”. ಇವರು ಮಹಾ ಅಕ್ರಮ ಮತ್ತು ಸುಳ್ಳಾರೋಪವನ್ನು ತಂದಿರುವರು.

(5) ಅವರು ಹೇಳಿದರು: “ಇದು ಪೂರ್ವಿಕರ ಪುರಾಣಗಳು ಮಾತ್ರವಾಗಿವೆ. ಅವರು ಅದನ್ನು ಬರೆದಿಟ್ಟಿರುವರು. ತರುವಾಯ ಪ್ರಭಾತದಲ್ಲೂ ಮುಸ್ಸಂಜೆಯಲ್ಲೂ ಅವರಿಗೆ ಅದನ್ನು ಓದಿಕೊಡಲಾಗುತ್ತಿರುವುದು”.

(6) (ಓ ಪ್ರವಾದಿಯವರೇ!) ಹೇಳಿರಿ: “ಇದನ್ನು ಅವತೀರ್ಣಗೊಳಿಸಿದವನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ರಹಸ್ಯಗಳನ್ನು ಅರಿಯುವವನಾಗಿರುವನು. ಖಂಡಿತವಾಗಿಯೂ ಅವನು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು”.

(7) ಅವರು ಹೇಳಿದರು: “ಈ ಸಂದೇಶವಾಹಕರು ಯಾಕೆ ಹೀಗೆ? ಇವರು ಆಹಾರ ಸೇವಿಸುತ್ತಿರುವರು ಮತ್ತು ಪೇಟೆಗಳಲ್ಲಿ ನಡೆಯುತ್ತಿರುವರು. ಇವರ ಜೊತೆಗೆ ಮುನ್ನೆಚ್ಚರಿಕೆಗಾರನಾಗಿರಬಲ್ಲ ಒಬ್ಬ ಮಲಕ್‍ನನ್ನು ಇವರ ಬಳಿಗೆ ಕಳುಹಿಸಲಾಗಿಲ್ಲವೇಕೆ?

(8) ಅಥವಾ ಇವರಿಗೆ ಒಂದು ನಿಧಿಯನ್ನು ಹಾಕಿಕೊಡಲಾಗಿಲ್ಲವೇಕೆ? ಅಥವಾ (ಫಲಗಳನ್ನು) ಸೇವಿಸುವುದಕ್ಕಾಗಿ ಇವರಿಗೆ ಒಂದು ತೋಟವನ್ನು ಕೊಡಲಾಗಿಲ್ಲ ವೇಕೆ?” (ಪ್ರವಾದಿಯವರ ಬಗ್ಗೆ) ಅಕ್ರಮಿಗಳು ಹೇಳಿದರು: “ನೀವು ಅನುಸರಿಸುತ್ತಿರುವುದು ಒಬ್ಬ ಮಾಟ ಬಾಧಿತ ವ್ಯಕ್ತಿಯನ್ನು ಮಾತ್ರವಾಗಿದೆ”.

(9) ಅವರು ತಮ್ಮ ಬಗ್ಗೆ ಯಾವೆಲ್ಲ ರೀತಿಯ ಚಿತ್ರೀಕರಣಗಳನ್ನು ನೀಡುತ್ತಿರುವರೆಂದು ನೋಡಿರಿ. ಅದರಿಂದಾಗಿ ಅವರು ಪಥಭ್ರಷ್ಟರಾಗಿರುವರು. ಆದುದರಿಂದ ಯಾವುದೇ ಮಾರ್ಗವನ್ನು ಕಾಣಲು ಅವರಿಗೆ ಸಾಧ್ಯವಾಗಲಾರದು.(764)
764. ಪ್ರವಾದಿ(ಸ) ರವರ ವ್ಯಕ್ತಿತ್ವವನ್ನು ಕೀಳಾಗಿಸಲು ಅವರು ಮಾಡಿದ ಚಿತ್ರೀಕರಣಗಳಲ್ಲಿ ಅವರಿಗೆ ತಪ್ಪು ಸಂಭವಿಸಿದೆ. ಅವರನ್ನು ಹತ್ತಿರದಿಂದ ಅರಿತುಕೊಂಡಿರುವವರು ಅದರಿಂದ ಮೋಸಹೋಗಲಾರರು. ಪ್ರವಾದಿ(ಸ) ರವರ ತೇಜೋವಧೆ ಮಾಡಲು ಫಲಪ್ರದವಾದ ಯಾವುದೇ ಮಾರ್ಗವನ್ನೂ ಅವರು ಕಾಣಲಾರರು.

(10) ತಾನು ಇಚ್ಛಿಸುವುದಾದರೆ ಅದಕ್ಕಿಂತಲೂ ಉತ್ತಮವಾದ ಅಥವಾ ತಳಭಾಗದಲ್ಲಿ ನದಿಗಳು ಹರಿಯುವ ತೋಟಗಳನ್ನು ತಮಗೆ ದಯಪಾಲಿಸಲು ಮತ್ತು ತಮಗೆ ಅರಮನೆಗಳನ್ನು ಮಾಡಿಕೊಡಲು ಸಾಮರ್ಥ್ಯವುಳ್ಳವನಾರೋ ಅವನು ಅನುಗ್ರಹಪೂರ್ಣನಾಗಿರುವನು.

(11) ಅಲ್ಲ, ಅವರು ಅಂತ್ಯಘಳಿಗೆಯನ್ನು ನಿಷೇಧಿಸಿರುವರು. ಅಂತ್ಯಘಳಿಗೆಯನ್ನು ನಿಷೇಧಿಸಿದವರಿಗೆ ನಾವು ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು.

(12) ವಿದೂರಸ್ಥಳದಿಂದ ಅದು ಅವರನ್ನು ಕಾಣುವಾಗ ಅದರ ರೋಷಾವೇಶವನ್ನು ಮತ್ತು ಆರ್ಭಟವನ್ನು ಅವರು ಆಲಿಸುವರು.

(13) ಅವರನ್ನು ಅದರಲ್ಲಿ (ನರಕಾಗ್ನಿಯಲ್ಲಿ) ಸಂಕೋಲೆಗಳಿಂದ ಬಂಧಿಸಲ್ಪಟ್ಟು ಒಂದು ಇಕ್ಕಟ್ಟಾದ ಸ್ಥಳದಲ್ಲಿ ಇಡಲಾದರೆ ಅವರು ಅಲ್ಲಿ ವಿನಾಶಕ್ಕಾಗಿ ಕೂಗುವರು.

(14) “ಇಂದು ನೀವು ಒಂದು ವಿನಾಶಕ್ಕಾಗಿ ಕೂಗದಿರಿ. ಅನೇಕ ವಿನಾಶಗಳಿಗಾಗಿ ಕೂಗಿರಿ” (ಎಂದು ಅವರೊಂದಿಗೆ ಹೇಳಲಾಗುವುದು).

(15) (ಓ ಪ್ರವಾದಿಯವರೇ!) ಹೇಳಿರಿ: “ಅದು ಉತ್ತಮವೇ? ಅಥವಾ ಭಯಭಕ್ತಿ ಪಾಲಿಸುವವರಿಗೆ ವಾಗ್ದಾನ ಮಾಡಲಾದ ಶಾಶ್ವತ ಸ್ವರ್ಗವೇ?” ಅದು ಅವರಿಗಿರುವ ಪ್ರತಿಫಲವಾಗಿದೆ ಮತ್ತು ತಲುಪಲಿರುವ ಸ್ಥಳವೂ ಆಗಿದೆ.

(16) ಅವರಿಗೆ ಅವರು ಬಯಸುವುದೆಲ್ಲವೂ ಅಲ್ಲಿದೆ. ಅವರು ಶಾಶ್ವತವಾಸಿಗಳಾಗಿರುವರು. ಅದು ತಮ್ಮ ರಬ್ ಹೊಣೆವಹಿಸಿಕೊಂಡಿರುವ ಜವಾಬ್ದಾರಿಯುತ ವಾಗ್ದಾನವಾಗಿದೆ.

(17) ಅವರನ್ನು ಮತ್ತು ಅಲ್ಲಾಹುವಿನ ಹೊರತು ಅವರು ಆರಾಧಿಸುತ್ತಿರುವುದನ್ನು ಅವನು ಒಟ್ಟುಗೂಡಿಸುವ ದಿನ! ತರುವಾಯ ಅವನು ಕೇಳುವನು: “ನನ್ನ ಈ ದಾಸರನ್ನು ದಾರಿತಪ್ಪಿಸಿದವರು ನೀವೋ? ಅಥವಾ ಅವರು ಸ್ವತಃ ದಾರಿತಪ್ಪಿದರೋ?”

(18) ಅವರು (ಆರಾಧ್ಯರು) ಹೇಳುವರು: “ನೀನು ಪರಮ ಪಾವನನು! ನಿನ್ನ ಹೊರತು ಅನ್ಯರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದು ನಮಗೆ ಯುಕ್ತವಾದುದಲ್ಲ. ಆದರೆ ಅವರಿಗೂ ಅವರ ಪೂರ್ವಿಕರಿಗೂ ನೀನು ಸುಖಸೌಕರ್ಯವನ್ನು ಒದಗಿಸಿದೆ. ಹೀಗೆ ಅವರು ಉಪದೇಶವನ್ನು ಮರೆತುಬಿಟ್ಟರು ಮತ್ತು ನಾಶ ಹೊಂದಿದ ಒಂದು ಜನತೆಯಾಗಿ ಮಾರ್ಪಟ್ಟರು”.

(19) (ಆಗ ಅಲ್ಲಾಹು ಬಹುದೇವಾರಾಧಕರೊಂದಿಗೆ ಹೇಳುವನು): “ನೀವು ಹೇಳುತ್ತಿರುವುದನ್ನು ಅವರು ನಿರಾಕರಿಸಿರುವರು. ಇನ್ನು (ಶಿಕ್ಷೆಯನ್ನು) ಸರಿಸಿಬಿಡಲು ಅಥವಾ ಯಾವುದಾದರೂ ಸಹಾಯವನ್ನು ಪಡೆಯಲು ನಿಮ್ಮಿಂದ ಸಾಧ್ಯವಾಗದು. ಆದುದರಿಂದ ನಿಮ್ಮ ಪೈಕಿ ಅಕ್ರಮವೆಸಗಿದವನಾರೋ(765) ಅವನಿಗೆ ನಾವು ಮಹಾ ಶಿಕ್ಷೆಯ ರುಚಿಯನ್ನು ಆಸ್ವಾದಿಸುವಂತೆ ಮಾಡುವೆವು”.
765. ಇಲ್ಲಿ ಅಕ್ರಮ ಎಂಬದರ ತಾತ್ಪರ್ಯವು ಬಹುದೇವಾರಾಧನೆಯಾಗಿದೆಯೆಂದು ಅನೇಕ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.

(20) ಆಹಾರವನ್ನು ಸೇವಿಸುವವರಾಗಿ ಮತ್ತು ಪೇಟೆಗಳಲ್ಲಿ ನಡೆಯುವವರಾಗಿ ಹೊರತು ತಮಗಿಂತ ಮುಂಚೆ ನಾವು ಸಂದೇಶವಾಹಕರ ಪೈಕಿ ಯಾರನ್ನೂ ಕಳುಹಿಸಿಲ್ಲ. ನೀವು ತಾಳ್ಮೆ ವಹಿಸುವಿರೋ ಎಂದು ನೋಡುವುದಕ್ಕಾಗಿ ನಿಮ್ಮಲ್ಲಿ ಕೆಲವರನ್ನು ನಾವು ಇತರ ಕೆಲವರಿಗೆ ಒಂದು ಪರೀಕ್ಷೆಯನ್ನಾಗಿ ಮಾಡಿರುವೆವು.(766) ತಮ್ಮ ರಬ್ (ಎಲ್ಲವನ್ನೂ) ವೀಕ್ಷಿಸುತ್ತಿರುವನು.
766. ಅಲ್ಲಾಹು ಕೆಲವರಿಗೆ ಆಧ್ಯಾತ್ಮಿಕ ಪದವಿಗಳನ್ನು ನೀಡುತ್ತಾನೆ. ಕೆಲವರಿಗೆ ಲೌಕಿಕ ಸ್ಥಾನಮಾನ ಮತ್ತು ಸಮೃದ್ಧಿಯನ್ನು ನೀಡಿದರೆ ಕೆಲವರಿಗೆ ಏನನ್ನೂ ನೀಡುವುದಿಲ್ಲ. ಅಲ್ಲಾಹು ತನ್ನ ಯುಕ್ತಿಗನುಗುಣವಾಗಿಯೇ ಮಾಡುತ್ತಿದ್ದಾನೆ. ಅದನ್ನು ಅರ್ಥಮಾಡಿ ಕೃತಜ್ಞತಾಪೂರ್ವಕವಾಗಿ ಪ್ರತಿಕ್ರಿಯಿಸಲು ಮತ್ತು ಸಂಕಷ್ಟಗಳನ್ನು ತಾಳ್ಮೆಯೊಂದಿಗೆ ಎದುರಿಸಲು ಯಾರಿಗೆ ಸಾಧ್ಯವಾಗುತ್ತದೆ ಎಂದು ಅವನು ಪರೀಕ್ಷಿಸುತ್ತಾನೆ. ಪ್ರವಾದಿಯನ್ನು ಕಳುಹಿಸಿ ಅವರ ಬಗ್ಗೆ ನಿಮ್ಮ ನಿಲುವನ್ನೂ ಪರೀಕ್ಷಿಸುತ್ತಾನೆ. ನಿಮ್ಮ ವಿರೋಧಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೇಗಿರುತ್ತದೆಂದೂ ಪರೀಕ್ಷಿಸುತ್ತಾನೆ.

(21) “ನಮ್ಮ ಮೇಲೇಕೆ ಮಲಕ್‍ಗಳನ್ನು ಇಳಿಸಲಾಗುವುದಿಲ್ಲ? ಅಥವಾ ನಮಗೇಕೆ ನಮ್ಮ ರಬ್ಬನ್ನು (ಪ್ರತ್ಯಕ್ಷವಾಗಿ) ಕಾಣಲಾಗುವುದಿಲ್ಲ?” ಎಂದು ನಮ್ಮ ಭೇಟಿಯನ್ನು ಆಶಿಸದವರು ಹೇಳಿದರು. ಖಂಡಿತವಾಗಿಯೂ ಅವರು ಸ್ವತಃ ಅಹಂಕಾರಪಟ್ಟವರೂ ಮಹಾ ಧಿಕ್ಕಾರ ತೋರಿದವರೂ ಆಗಿರುವರು.

(22) ಅವರು ಮಲಕ್‍ಗಳನ್ನು ನೋಡುವ ದಿನ!(767) ಅಂದು ಅಪರಾಧಿಗಳಿಗೆ ಯಾವುದೇ ಶುಭವಾರ್ತೆಯೂ ಇರಲಾರದು. “ಕಠೋರವಾದ ನಿರ್ಬಂಧವನ್ನು ಹೇರಲಾಗಿದೆ” ಎಂದು ಅವರು (ಮಲಕ್‍ಗಳು) ಹೇಳುವರು.
767. ಅರ್ಥಾತ್ ಪುನರುತ್ಥಾನ ದಿನ. ಅಂದು ಮಲಕ್‍ಗಳು ಅಪರಾಧಿಗಳೊಂದಿಗೆ ‘ಇಂದು ನಿಮಗೆ ಸಂತೋಷ ಮತ್ತು ಅನುಗ್ರಹಗಳೆಲ್ಲವನ್ನೂ ತಡೆಹಿಡಿಯಲಾಗಿದೆ’ ಎಂದು ಹೇಳುವರು.

(23) ನಾವು ಅವರು ಮಾಡಿರುವ ಕರ್ಮಗಳೆಡೆಗೆ ತಿರುಗುವೆವು ಮತ್ತು ಅವುಗಳನ್ನು ನಾವು ಚೆದರಿದ ಧೂಳಿಯನ್ನಾಗಿ ಮಾಡುವೆವು.

(24) ಅಂದು ಸ್ವರ್ಗವಾಸಿಗಳು ಅತ್ಯುತ್ತಮವಾದ ವಾಸಸ್ಥಳವನ್ನೂ ಅತ್ಯುತ್ತಮ ವಿಶ್ರಾಂತಿಧಾಮವನ್ನೂ ಹೊಂದಿದವರಾಗಿರುವರು.

(25) ಆಕಾಶವು ಒಡೆದು ಮೇಘಪದರಗಳು ಹೊರಹೊಮ್ಮುವ ಮತ್ತು ಮಲಕ್‍ಗಳನ್ನು ಬಲವಾಗಿ ಇಳಿಸಲಾಗುವ ದಿನ!

(26) ಅಂದು ನೈಜವಾದ ಆಧಿಪತ್ಯವು ಪರಮ ದಯಾಮಯನಿಗಾಗಿದೆ. ಅದು ಸತ್ಯನಿಷೇಧಿಗಳ ಪಾಲಿಗೆ ಒಂದು ಕಷ್ಟಕರ ದಿನವಾಗಿದೆ.

(27) ಅಕ್ರಮಿಯು ತನ್ನ ಕೈಗಳನ್ನು ಕಚ್ಚುವ ದಿನ! ಅವನು ಹೇಳುವನು: “ನಾನು ಸಂದೇಶವಾಹಕರೊಂದಿಗೆ ಒಂದು ಮಾರ್ಗವನ್ನು ಪಡೆದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!,

(28) ನನ್ನ ದುರದೃಷ್ಟವೇ! ಇಂತಿಂತಹವನನ್ನು ನಾನು ಮಿತ್ರನನ್ನಾಗಿ ಮಾಡದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!

(29) ನನ್ನ ಬಳಿಗೆ ಉಪದೇಶವು ಬಂದ ಬಳಿಕವೂ ಅವನು ನನ್ನನ್ನು ಅದರಿಂದ ತಪ್ಪಿಸಿದನು”. ಸೈತಾನನು ಮಾನವನನ್ನು ಕೈ ಚೆಲ್ಲುವವನೇ ಆಗಿರುವನು.

(30) (ಅಂದು) ಸಂದೇಶವಾಹಕರು ಹೇಳುವರು: “ನನ್ನ ಪ್ರಭೂ, ಖಂಡಿತವಾಗಿಯೂ ನನ್ನ ಜನತೆಯು ಈ ಕುರ್‌ಆನನ್ನು ಕಡೆಗಣಿಸಿ ತಿರಸ್ಕರಿಸಿರುವರು”.

(31) ಹೀಗೆ ಪ್ರತಿಯೊಬ್ಬ ಸಂದೇಶವಾಹಕರಿಗೂ, ನಾವು ಅಪರಾಧಿಗಳಲ್ಲಿ ಸೇರಿದ ಕೆಲವು ಶತ್ರುಗಳನ್ನು ಮಾಡಿರುವೆವು. ಮಾರ್ಗದರ್ಶಕನಾಗಿ ಮತ್ತು ಸಹಾಯಕನಾಗಿ ತಮ್ಮ ರಬ್ ಸಾಕು!

(32) ಸತ್ಯನಿಷೇಧಿಗಳು ಹೇಳಿದರು: “ಕುರ್‌ಆನನ್ನು ಇವರ ಮೇಲೆ ಒಮ್ಮೆಲೇ ಇಳಿಸಲಾಗಿಲ್ಲವೇಕೆ?” ಅದು ಹೀಗೆ (ಹಂತ ಹಂತವಾಗಿ ಅವತೀರ್ಣಗೊಳ್ಳಬೇಕಾಗಿದೆ). ತನ್ಮೂಲಕ ತಮ್ಮ ಹೃದಯವನ್ನು ನಾವು ಅಚಲವಾಗಿ ನಿಲ್ಲಿಸುವ ಸಲುವಾಗಿ. ನಾವು ಅದನ್ನು ಸಾವಧಾನವಾಗಿ ಪಾರಾಯಣ ಮಾಡುತ್ತಾ ಕೇಳಿಸಿರುವೆವು.

(33) ಅವರು ಯಾವುದೇ ಸಮಸ್ಯೆಯೊಂದಿಗೆ ತಮ್ಮ ಬಳಿ ಬರಲಾರರು, ನಾವು ಅದರ ವಾಸ್ತವವನ್ನು ಮತ್ತು ಅತ್ಯುತ್ತಮ ವಿವರಣೆಯನ್ನು ತಮಗೆ ತಂದುಕೊಡದ ಹೊರತು.(768)
768. ಅಂದರೆ ಪ್ರವಾದಿ(ಸ) ರವರ ಪ್ರವಾದಿತ್ವಕ್ಕೆದುರಾಗಿ ಅವರು ಯಾವುದೇ ಸಮಸ್ಯೆಯನ್ನು ಮುಂದಿಟ್ಟರೂ ಅದಕ್ಕೆ ಸೂಕ್ತವಾದ ಮತ್ತು ವಿವರಣಾತ್ಮಕವಾದ ಉತ್ತರವನ್ನು ಅಲ್ಲಾಹು ಪ್ರವಾದಿ(ಸ) ರಿಗೆ ತಿಳಿಸಿಕೊಡದಿರಲಾರನು ಎಂದರ್ಥ.

(34) ಮುಖಗಳನ್ನು ನೆಲಕ್ಕೂರಿದವರಾಗಿ ನರಕದೆಡೆಗೆ ಒಟ್ಟುಗೂಡಿಸಲಾಗುವವರು ಅತಿ ನಿಕೃಷ್ಟ ಸ್ಥಾನದಲ್ಲಿರುವವರೂ ಅತ್ಯಧಿಕ ಪಥಭ್ರಷ್ಟರೂ ಆಗಿರುವರು.

(35) ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು.ಅವರ ಸಹೋದರರಾದ ಹಾರೂನ್‍ರನ್ನು ನಾವು ಅವರೊಂದಿಗೆ ಸಹಾಯಕರನ್ನಾಗಿ ಮಾಡಿದೆವು.

(36) ನಂತರ ನಾವು ಹೇಳಿದೆವು: “ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿರುವ ಜನರೆಡೆಗೆ ನೀವಿಬ್ಬರೂ ತೆರಳಿರಿ.” ತರುವಾಯ ನಾವು ಆ ಜನರನ್ನು ಸಂಪೂರ್ಣವಾಗಿ ನಾಶ ಮಾಡಿದೆವು.

(37) ನೂಹ್‍ರ ಜನತೆಯನ್ನು (ನಾವು ನಾಶ ಮಾಡಿದೆವು). ಅವರು ಸಂದೇಶವಾಹಕರನ್ನು ನಿಷೇಧಿಸಿದಾಗ ಅವರನ್ನು ನಾವು ಮುಳುಗಿಸಿ ನಾಶ ಮಾಡಿದೆವು. ನಾವು ಅವರನ್ನು ಜನರಿಗೊಂದು ದೃಷ್ಟಾಂತವನ್ನಾಗಿ ಮಾಡಿದೆವು. (ಪರಲೋಕದಲ್ಲಿ) ಅಕ್ರಮಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.

(38) ಆದ್ ಜನಾಂಗವನ್ನು, ಸಮೂದ್ ಜನಾಂಗವನ್ನು, ರಸ್ಸ್‌ನ ಜನರನ್ನು(769) ಮತ್ತು ಅದರ ಮಧ್ಯೆ ಬದುಕಿದ ಅನೇಕ ತಲೆಮಾರುಗಳನ್ನು (ನಾವು ನಾಶ ಮಾಡಿದೆವು).
769. ರಸ್ಸ್‌ನವರ ಬಗ್ಗೆ ಕುರ್‌ಆನ್ ವ್ಯಾಖ್ಯಾನಕಾರರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರ ಪ್ರಕಾರ ಅವರು ಶುಐಬ್(ಅ) ರವರ ಜನತೆಯಾಗಿದ್ದಾರೆ. ಇತರ ಕೆಲವರು ಹೇಳುವ ಪ್ರಕಾರ ಅವರು ಸಮೂದ್ ಜನಾಂಗದ ಒಂದು ಪಂಗಡವಾಗಿದ್ದಾರೆ. ಇತರ ಅಭಿಪ್ರಾಯಗಳೂ ಇವೆ.

(39) ಎಲ್ಲರಿಗೂ ನಾವು ಉದಾಹರಣೆಗಳನ್ನು ವಿವರಿಸಿಕೊಟ್ಟೆವು. (ಅದನ್ನು ತಿರಸ್ಕರಿಸಿದಾಗ) ಎಲ್ಲರನ್ನೂ ನಾವು ನಿರ್ನಾಮ ಮಾಡಿದೆವು.

(40) ನಿಕೃಷ್ಟ ಮಳೆಯನ್ನು ಸುರಿಸಲಾದ ನಾಡಿನ ಮೂಲಕ(770) ಇವರು ಹಾದುಹೋಗಿರುವರು. ಆಗ ಇವರು ಅದನ್ನು ಕಂಡಿರಲಿಲ್ಲವೇ? ಅಲ್ಲ, ಇವರು ಪುನರುತ್ಥಾನವನ್ನು ನಿರೀಕ್ಷಿಸದವರಾಗಿರುವರು.
770. ಇಲ್ಲಿ ಪ್ರವಾದಿ ಲೂತ್(ಅ) ರವರ ಊರಾದ ಸದೂಮ್ (ಸೊದೋಮ್) ಅನ್ನು ಉದ್ದೇಶಿಸಲಾಗಿದೆ.

(41) ಅವರು ತಮ್ಮನ್ನು ಕಾಣುವಾಗ ತಮ್ಮನ್ನು ಹಾಸ್ಯವಸ್ತುವನ್ನಾಗಿ ಮಾಡಿ “ಅಲ್ಲಾಹು ಸಂದೇಶವಾಹಕರಾಗಿ ಕಳುಹಿಸಿರುವುದು ಇವರನ್ನೇ ಏನು?” ಎಂದು ಕೇಳುವುದನ್ನು ಮಾತ್ರ ಅವರು ಮಾಡುವರು.

(42) “ನಮ್ಮ ಆರಾಧ್ಯರುಗಳ ವಿಷಯದಲ್ಲಿ ನಾವು ತಾಳ್ಮೆಯೊಂದಿಗೆ ಅಚಲವಾಗಿ ನಿಲ್ಲದಿರುತ್ತಿದ್ದರೆ ಇವರು ನಮ್ಮನ್ನು ಅವುಗಳಿಂದ ತಪ್ಪಿಸಿ ಬಿಡುತ್ತಿದ್ದರು” (ಎಂದೂ ಅವರು ಹೇಳುತ್ತಿರುವರು). ಶಿಕ್ಷೆಯನ್ನು ಕಣ್ಣಾರೆ ಕಾಣುವ ಸಂದರ್ಭ ಅತ್ಯಧಿಕ ಪಥಭ್ರಷ್ಟರು ಯಾರೆಂಬುದನ್ನು ಅವರು ಅರಿಯುವರು.

(43) ತನ್ನ ಆರಾಧ್ಯನನ್ನು ತನ್ನ ದೇಹೇಚ್ಛೆಯನ್ನಾಗಿ ಮಾಡಿಕೊಂಡವನನ್ನು ತಾವು ಕಂಡಿದ್ದೀರಾ?(771) ಹಾಗಿರುವಾಗ ಅವನ ವಿಷಯದಲ್ಲಿ ತಾವು ಹೊಣೆಯಾಗುವಿರಾ?
771. ತಾನು ಯಾರನ್ನು ಅಥವಾ ಯಾವುದನ್ನು ಆರಾಧಿಸಬೇಕೆಂದು ತನ್ನಿಚ್ಛೆಯಂತೆ ತೀರ್ಮಾನ ಕೈಗೊಳ್ಳುವವನನ್ನು ಅಲ್ಲಾಹು ವಿರೋಧಿಸುತ್ತಾನೆ. ಕೆಲವು ವ್ಯಾಖ್ಯಾನಕಾರರ ಪ್ರಕಾರ ಇದರ ಅರ್ಥವು: ತನ್ನ ಇಚ್ಛೆಯನ್ನು (ಅಥವಾ ದೇಹೇಚ್ಛೆಯನ್ನು) ಆರಾಧ್ಯನನ್ನಾಗಿ ಮಾಡಿಕೊಂಡವನನ್ನು ತಾವು ಕಂಡಿರುವಿರಾ? ಎಂದಾಗಿದೆ.

(44) ಅಥವಾ ಅವರಲ್ಲಿ ಹೆಚ್ಚಿನವರೂ ಆಲಿಸುವರು ಮತ್ತು ಆಲೋಚಿಸುವರು ಎಂದು ತಾವು ಭಾವಿಸಿದ್ದೀರಾ? ಅವರು ಕೇವಲ ಜಾನುವಾರುಗಳಂತೆ ಮಾತ್ರವಾಗಿರುವರು. ಅಲ್ಲ, ಅವರೇ ಅತಿಹೆಚ್ಚು ಪಥಭ್ರಷ್ಟರು.

(45) ತಮ್ಮ ರಬ್ ನೆರಳನ್ನು ಹೇಗೆ ಚಾಚುವನೆಂದು ತಾವು ನೋಡಿಲ್ಲವೇ? ಅವನು ಇಚ್ಛಿಸುತ್ತಿದ್ದರೆ ಅವನು ಅದನ್ನು ನಿಶ್ಚಲವನ್ನಾಗಿ ಮಾಡುತ್ತಿದ್ದನು. ತರುವಾಯ ನಾವು ಸೂರ್ಯನನ್ನು ಅದಕ್ಕೆ ಮಾರ್ಗದರ್ಶಿಯನ್ನಾಗಿ ಮಾಡಿದೆವು.

(46) ತರುವಾಯ ನಾವು ಅದನ್ನು ನಮ್ಮೆಡೆಗೆ ಸ್ವಲ್ಪ ಸ್ವಲ್ಪವಾಗಿ ವಶಪಡಿಸಿದೆವು.(772)
772. ನೆರಳು, ಬೆಳಕು, ಬಿಸಿಲು ಇತ್ಯಾದಿಗಳು ಮನುಷ್ಯನ ಮಟ್ಟಿಗೆ ನಿರ್ಣಾಯಕ ಪ್ರಾಮುಖ್ಯತೆಯುಳ್ಳದ್ದಾಗಿವೆ. ಸುಡುವ ಮರುಭೂಮಿಯಲ್ಲಿ ಯಾತ್ರೆ ಮಾಡುವವನಿಗೆ ಬೆಳಗ್ಗೆ ಮತ್ತು ಸಂಜೆ ಚಾಚಿಕೊಳ್ಳುವ ನೆರಳು, -ಬೋರಲು ಗುಡ್ಡಗಳ ಹಾಗೂ ಇನ್ನಿತರ ನೆರಳುಗಳು- ನೆಮ್ಮದಿಯನ್ನು ನೀಡುತ್ತವೆ. ನೆರಳು ಉದ್ದವಾಗುವುದು ಮತ್ತು ಕುಗ್ಗುವುದು ಮತ್ತು ಪುನಃ ಉದ್ದವಾಗುವುದು ಭೂಮಿಯ ಪರಿಭ್ರಮಣದಿಂದಾಗಿದೆ. ಆದರೆ ನಮಗೆ ಅದು ಅನುಭವವಾಗುವುದು ಸೂರ್ಯನ ಚಲನೆಯ ಮೂಲಕವಾಗಿದೆ. ‘ನಮ್ಮೆಡೆಗೆ’ ಎಂಬುದರ ತಾತ್ಪರ್ಯವು ‘ನಾವು ನಿರ್ಧರಿಸುವ ದಿಕ್ಕಿನೆಡೆಗೆ’ ಎಂದಾಗಿದೆ.

(47) ನಿಮಗೆ ರಾತ್ರಿಯನ್ನು ಒಂದು ಉಡುಪನ್ನಾಗಿಯೂ ನಿದ್ದೆಯನ್ನು ಒಂದು ವಿಶ್ರಾಂತಿಯನ್ನಾಗಿಯೂ ಮಾಡಿಕೊಟ್ಟವನು ಅವನಾಗಿರುವನು. ಅವನು ಹಗಲನ್ನು ಎಚ್ಚೆತ್ತುಕೊಳ್ಳುವ ಸಮಯವನ್ನಾಗಿ ಮಾಡಿರುವನು.

(48) ತನ್ನ ಕಾರುಣ್ಯದ ಮುಂಭಾಗದಲ್ಲಿ ಶುಭಸೂಚನೆಯಾಗಿ ಮಾರುತಗಳನ್ನು ಕಳುಹಿಸಿದವನು ಅವನಾಗಿರುವನು. ನಾವು ಆಕಾಶದಿಂದ ಶುದ್ಧವಾದ ಜಲವನ್ನು ಇಳಿಸಿರುವೆವು.

(49) ನಿರ್ಜೀವವಾದ ಪಟ್ಟಣಕ್ಕೆ ತನ್ಮೂಲಕ ನಾವು ಜೀವ ನೀಡುವ ಸಲುವಾಗಿ ಹಾಗೂ ನಾವು ಸೃಷ್ಟಿಸಿದ ಅನೇಕ ಜಾನುವಾರುಗಳಿಗೆ ಮತ್ತು ಮನುಷ್ಯರಿಗೆ ಅದನ್ನು ಕುಡಿಸುವ ಸಲುವಾಗಿ.

(50) ಅವರು ಚಿಂತಿಸಿ ಗ್ರಹಿಸುವುದಕ್ಕಾಗಿ ನಾವು ಅದನ್ನು (ಮಳೆನೀರನ್ನು) ಅವರ ಮಧ್ಯೆ ವಿತರಣೆ ಮಾಡಿರುವೆವು. ಆದರೆ ಜನರಲ್ಲಿ ಹೆಚ್ಚಿನವರೂ ಕೃತಘ್ನರಾಗಲು ಹೊರತು ಇನ್ನಾವುದಕ್ಕೂ ಮನಸ್ಸು ಮಾಡಲಿಲ್ಲ.

(51) ನಾವಿಚ್ಛಿಸುತ್ತಿದ್ದರೆ ಎಲ್ಲ ನಾಡುಗಳಿಗೂ ನಾವು ಒಬ್ಬ ಮುನ್ನೆಚ್ಚರಿಕೆಗಾರರನ್ನು ಕಳುಹಿಸುತ್ತಿದ್ದೆವು.(773)
773. ಬೇಕಾದಷ್ಟು ಪ್ರವಾದಿಗಳನ್ನು ಕಳುಹಿಸಲು ಮತ್ತು ಬೇಕಾದಷ್ಟು ಗ್ರಂಥಗಳನ್ನು ಅವತೀರ್ಣಗೊಳಿಸಲು ಅಲ್ಲಾಹುವಿಗೆ ಸಾಧ್ಯವಿದೆ. ಆದರೆ ಅವನಿಚ್ಛಿಸುವ ಸಂದರ್ಭಗಳಲ್ಲಿ ಅವನಿಚ್ಛಿಸುವ ಪ್ರದೇಶಗಳಿಗೆ ಮಾತ್ರ ಅವನು ಪ್ರವಾದಿಗಳನ್ನು ಕಳುಹಿಸಿದ್ದಾನೆ. ಅವನ ತೀರ್ಪು ಅನುಲ್ಲಂಘನೀಯವಾಗಿದೆ.

(52) ಆದುದರಿಂದ ತಾವು ಸತ್ಯನಿಷೇಧಿಗಳನ್ನು ಅನುಸರಿಸದಿರಿ. ತಾವು ಇದರ (ಕುರ್‌ಆನ್‍ನ) ಮೂಲಕ ಅವರೊಂದಿಗೆ ಅತಿದೊಡ್ಡ ಹೋರಾಟವನ್ನು ಮಾಡಿರಿ.

(53) ಎರಡು ಜಲಾಶಯಗಳನ್ನು(774) ಸ್ವತಂತ್ರವಾಗಿ ಹರಿಯಲು ಬಿಟ್ಟವನು ಅವನಾಗಿರುವನು. ಒಂದರಲ್ಲಿ ಸ್ವಚ್ಛವಾದ ಶುದ್ಧಜಲವೂ ಇನ್ನೊಂದರಲ್ಲಿ ಕಹಿಯಾದ ಉಪ್ಪು ನೀರೂ ಇರುವುದು. ಅವನು ಅವೆರಡರ ಮಧ್ಯೆ ಒಂದು ಪರದೆಯನ್ನೂ, ಬಲಿಷ್ಠವಾದ ಒಂದು ತಡೆಯನ್ನೂ ಸ್ಥಾಪಿಸಿರುವನು.(775)
774. ಅಗಾಧ ಪ್ರಮಾಣದ ನೀರನ್ನು ಹೊಂದಿರುವ ದೊಡ್ಡ ಜಲಾಶಯಗಳನ್ನು ‘ಬಹ್ರ್’ ಎನ್ನಲಾಗುತ್ತದೆ. 775. ಪ್ರಬಲ ಹರಿವನ್ನು ಹೊಂದಿರುವ ನದಿಗಳು ಸಮುದ್ರವನ್ನು ಸೇರುವಾಗ ಭಾರೀ ಅಲೆಗಳನ್ನು ಹಾಗೂ ಉಬ್ಬರಗಳನ್ನು ಗೆದ್ದು ಸಮುದ್ರದ ನೀರಿನೊಂದಿಗೆ ಬೆರೆಯದೆ ಬಹಳ ದೂರದವರೆಗೆ ಹರಿಯುತ್ತದೆ.

(54) ಮನುಷ್ಯನನ್ನು ನೀರಿನಿಂದ ಸೃಷ್ಟಿಸಿದವನು ಅವನಾಗಿರುವನು. ತರುವಾಯ ಅವನನ್ನು ರಕ್ತಸಂಬಂಧವುಳ್ಳವನನ್ನಾಗಿ ಮತ್ತು ವಿವಾಹಸಂಬಂಧವುಳ್ಳವನನ್ನಾಗಿ ಮಾಡಿದನು.(776) ತಮ್ಮ ರಬ್ ಸಾಮರ್ಥ್ಯವುಳ್ಳವನಾಗಿರುವನು.
776. ಮನುಷ್ಯರು ಕೂಡ ಇತರ ಜೀವಿಗಳಂತೆ ವೀರ್ಯದಿಂದಲೇ ಬೆಳೆಯುತ್ತಾನಾದರೂ ಇತರೆಲ್ಲ ಜೀವರಾಶಿಗಳಿಗೆ ವ್ಯತಿರಿಕ್ತವಾಗಿ ಮನುಷ್ಯರ ಸಾಮಾಜಿಕ ಸಂಬಂಧಗಳು ಅವರ ಬದುಕಿಗೆ ಭದ್ರತೆಯನ್ನು ಮತ್ತು ವಿಕಸನವನ್ನು ನೀಡುತ್ತದೆ. ರಕ್ತಸಂಬಂಧ ಮತ್ತು ವೈವಾಹಿಕ ಸಂಬಂಧವು ಮನುಷ್ಯನ ಸಾಮಾಜಿಕ ಬದುಕಿಗೆ ಅಡಿಪಾಯವನ್ನು ಹಾಕುತ್ತದೆ. ಸಂಬಂಧಿಕರೊಂದಿಗಿರುವ ಹೊಣೆಗಾರಿಕೆಗಳನ್ನು ನಿಭಾಯಿಸಲು ಇಸ್ಲಾಮ್ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದೆ. ಕುಟುಂಬ ಸಂಬಂಧವನ್ನು ವಿಚ್ಛೇದಿಸುವುದನ್ನು ಇಸ್ಲಾಮ್ ಮಹಾ ಅಪರಾಧವಾಗಿ ಪರಿಗಣಿಸುತ್ತದೆ. ಇವೆರಡು ವಿಧದ ಸಂಬಂಧಿಕರಿಗೆ ಇಸ್ಲಾಮ್ ಉತ್ತರಾಧಿಕಾರದ ಹಕ್ಕನ್ನು ನೀಡುತ್ತದೆ.

(55) ಅವರು ಅಲ್ಲಾಹುವಿನ ಹೊರತು ತಮಗೆ ಲಾಭವನ್ನಾಗಲಿ ಹಾನಿಯನ್ನಾಗಲಿ ಮಾಡದವುಗಳನ್ನು ಆರಾಧಿಸುತ್ತಿರುವರು. ಸತ್ಯನಿಷೇಧಿಯು ತನ್ನ ರಬ್‌ಗೆದುರಾಗಿ (ದುಷ್ಟಶಕ್ತಿಗಳಿಗೆ) ಬೆಂಬಲ ನೀಡುವವನಾಗಿರುವನು.

(56) (ಓ ಪ್ರವಾದಿಯವರೇ!) ತಮ್ಮನ್ನು ಒಬ್ಬ ಶುಭವಾರ್ತೆ ತಿಳಿಸುವವರನ್ನಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರನ್ನಾಗಿಯೇ ವಿನಾ ನಾವು ಕಳುಹಿಸಿಲ್ಲ.

(57) ಹೇಳಿರಿ: “ನಾನು ಇದಕ್ಕಾಗಿ ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡುವುದಿಲ್ಲ, ಯಾರಾದರೂ ತನ್ನ ರಬ್‌ನೆಡೆಗಿರುವ ಮಾರ್ಗವನ್ನು ಸ್ವೀಕಾರ ಮಾಡಲು ಬಯಸುವುದಾದರೆ (ಹಾಗೆ ಮಾಡಲಿ) ಎಂಬುದರ ಹೊರತು.

(58) ಎಂದಿಗೂ ಮರಣಹೊಂದದೆ ಜೀವಂತವಾಗಿ ರುವವನ ಮೇಲೆ ತಾವು ಭರವಸೆಯನ್ನಿಡಿರಿ. ಅವನ ಸ್ತುತಿಯೊಂದಿಗೆ ಅವನನ್ನು ಕೊಂಡಾಡಿರಿ. ತನ್ನ ದಾಸರ ಪಾಪಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿ ಅವನೇ ಸಾಕು.

(59) ಅವನು ಆಕಾಶಗಳನ್ನು, ಭೂಮಿಯನ್ನು ಮತ್ತು ಅವೆರಡರ ಮಧ್ಯೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾಗಿರುವನು. ತರುವಾಯ ಅವನು ಸಿಂಹಾಸನಾರೂಢನಾದನು. ಅವನು ಪರಮ ದಯಾಮಯನಾಗಿರುವನು. ಆದುದರಿಂದ ಇದರ ಬಗ್ಗೆ ಸೂಕ್ಷ್ಮಜ್ಞಾನವಿರುವವನಲ್ಲಿಯೇ ಕೇಳಿರಿ.

(60) “ಪರಮ ದಯಾಮಯನಿಗೆ ಸಾಷ್ಟಾಂಗವೆರಗಿರಿ” ಎಂದು ಅವರೊಂದಿಗೆ ಹೇಳಲಾದರೆ ಅವರು ಹೇಳುವರು: “ಪರಮ ದಯಾಮಯ ಎಂದರೇನು?(777) ತಾವು ನಮ್ಮೊಂದಿಗೆ ಆಜ್ಞಾಪಿಸುವುದಕ್ಕೆ ನಾವು ಸಾಷ್ಟಾಂಗವೆರಗುವುದೇ?” ಹೀಗೆ ಅದು ಅವರ ವಿಕರ್ಷಣೆಯನ್ನು ಇನ್ನಷ್ಟು ಅಧಿಕಗೊಳಿಸಿತು.
777. ಅಲ್ಲಾಹು ಪರಮ ದಯಾಮಯ ಆಗಿರುವನು ಎಂಬ ವಿಶೇಷಣವನ್ನು ಅವರು ನಿಷೇಧಿಸುತ್ತಿದ್ದರು ಮತ್ತು ದೇವ ದೇವತೆಯರ ಕರುಣೆಯನ್ನು ನಿರೀಕ್ಷಿಸುತ್ತಿದ್ದರು.

(61) ಆಕಾಶದಲ್ಲಿ ನಕ್ಷತ್ರಪುಂಜಗಳನ್ನು ಸ್ಥಾಪಿಸಿದವನು ಅನುಗ್ರಹಪೂರ್ಣನಾಗಿರುವನು. ಅವನು ಅದರಲ್ಲಿ ಒಂದು ದೀಪವನ್ನು (ಸೂರ್ಯನನ್ನು) ಮತ್ತು ಬೆಳಗುವ ಒಂದು ಚಂದ್ರನನ್ನೂ ಉಂಟುಮಾಡಿರುವನು.

(62) ರಾತ್ರಿ ಹಗಲುಗಳು ಒಂದರ ಹಿಂದೆ ಒಂದು ಬರುವಂತೆ ಮಾಡಿದವನು ಅವನಾಗಿರುವನು. ಚಿಂತಿಸಿ ಗ್ರಹಿಸಲು ಇಚ್ಛಿಸುವವರಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವರಿಗೆ (ಒಂದು ದೃಷ್ಟಾಂತವಾಗಿ).

(63) ಪರಮ ದಯಾಮಯನ ದಾಸರು ಭೂಮಿಯಲ್ಲಿ ವಿನಯದೊಂದಿಗೆ ಚಲಿಸುವವರಾಗಿರುವರು. ಅಜ್ಞಾನಿಗಳು ಅವರೊಂದಿಗೆ ಮಾತನಾಡಿದರೆ ಅವರು ಸಮಾಧಾನದೊಂದಿಗೆ ಉತ್ತರಿಸುವರು.(778)
778. ‘ಸುರಕ್ಷಿತವಾದ ಮಾತುಗಳನ್ನು ಆಡಿ ಪಾರಾಗುವವರು’ ಎಂದೂ ಅರ್ಥಮಾಡಿಕೊಳ್ಳಬಹುದು.

(64) ಅವರು ತಮ್ಮ ರಬ್‌ಗೆ ಸಾಷ್ಟಾಂಗವೆರಗುವವರಾಗಿ ಮತ್ತು ನಿಂತು ನಮಾಝ್ ಮಾಡುವವರಾಗಿ ರಾತ್ರಿಯನ್ನು ಕಳೆಯುವವರಾಗಿರುವರು.

(65) ಅವರು ಹೇಳುವರು: “ನಮ್ಮ ಪ್ರಭೂ! ನಮ್ಮಿಂದ ನರಕ ಶಿಕ್ಷೆಯನ್ನು ತೊಲಗಿಸು. ಖಂಡಿತವಾಗಿಯೂ ಅದರ ಶಿಕ್ಷೆಯು ಬಿಟ್ಟು ತೊಲಗದ ವಿಪತ್ತಾಗಿದೆ.

(66) ಖಂಡಿತವಾಗಿಯೂ ಅದು ನಿಕೃಷ್ಟ ತಂಗುದಾಣವೂ, ವಾಸಸ್ಥಳವೂ ಆಗಿದೆ”.

(67) ಅವರು ಖರ್ಚು ಮಾಡುವಾಗ ದುಂದುಗಾರಿಕೆ ಮತ್ತು ಜಿಪುಣತನ ಮಾಡದೆ ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುವವರಾಗಿರುವರು.

(68) ಅವರು ಅಲ್ಲಾಹುವಿನೊಂದಿಗೆ ಅನ್ಯ ಆರಾಧ್ಯರನ್ನು ಕರೆದು ಪ್ರಾರ್ಥಿಸದವರೂ, ಅಲ್ಲಾಹು ಪಾವಿತ್ರ್ಯತೆ ನೀಡಿರುವ ಯಾವುದೇ ಜೀವವನ್ನು ನ್ಯಾಯವಾಗಿಯೇ ಹೊರತು ಹತ್ಯೆ ಮಾಡದವರೂ, ವ್ಯಭಿಚಾರ ಮಾಡದವರೂ ಆಗಿರುವರು. ಯಾರಾದರೂ ಇವುಗಳನ್ನು ಮಾಡುವುದಾದರೆ ಅವನು ಪಾಪಫಲವನ್ನು ಕಾಣುವನು.

(69) ಪುನರುತ್ಥಾನ ದಿನದಂದು ಅವನಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಲಾಗುವುದು. ಅವನು ಅದರಲ್ಲಿ ಅಪಮಾನದೊಂದಿಗೆ ಶಾಶ್ವತವಾಗಿ ವಾಸಿಸುವನು.

(70) ಆದರೆ ಪಶ್ಚಾತ್ತಾಪಪಟ್ಟವರು, ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರ ಹೊರತು. ಅಂತಹವರಿಗೆ ಅಲ್ಲಾಹು ಅವರ ಕೆಡುಕುಗಳನ್ನು ಒಳಿತುಗಳನ್ನಾಗಿ ಬದಲಿಸಿಕೊಡುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(71) ಯಾರು ಪಶ್ಚಾತ್ತಾಪಪಟ್ಟು ಸತ್ಕರ್ಮವೆಸಗುವನೋ ಅವನು ಅಲ್ಲಾಹುವಿನೆಡೆಗೆ ಯಥಾವತ್ತಾಗಿ ಮರಳುವನು.

(72) ಅವರು ಸುಳ್ಳಿಗೆ ಸಾಕ್ಷಿ ನಿಲ್ಲದವರೂ, ಅನಾವಶ್ಯಕ ವಿಷಯಗಳ ಬಳಿಯಿಂದ ಹಾದುಹೋಗುವುದಾದರೆ ಸಭ್ಯರಾಗಿ ಹಾದುಹೋಗುವವರೂ ಆಗಿರುವರು.

(73) ತಮ್ಮ ರಬ್‌ನ ವಚನಗಳ ಮೂಲಕ ಅವರಿಗೆ ಉಪದೇಶ ನೀಡಲಾದರೆ ಅವರು ಅವುಗಳ ಮೇಲೆ ಕಿವುಡರೂ, ಕುರುಡರೂ ಆಗಿ ಬೀಳದವರಾಗಿರುವರು.(779)
779. ಅವರು ಉಪದೇಶವನ್ನು ಆಲಿಸಲು ಅಥವಾ ಗ್ರಹಿಸಲು ಮುಂದಾಗದೆ ಅಂಧವಾಗಿ ವಿರೋಧಿಸುವ ಬದಲು ಅದನ್ನು ಗಮನವಿಟ್ಟು ಆಲಿಸಿ ಸೂಕ್ತ ನಿಲುವನ್ನು ಹೊಂದುವವರಾಗಿದ್ದಾರೆ.

(74) ಅವರು, “ನಮ್ಮ ಪ್ರಭೂ! ನಮ್ಮ ಪತ್ನಿಯರಲ್ಲಿ ಮತ್ತು ನಮ್ಮ ಸಂತತಿಗಳಲ್ಲಿ ನೀನು ನಮಗೆ ಕಣ್ತಣಿಸುವಿಕೆಯನ್ನು ದಯಪಾಲಿಸು ಮತ್ತು ಭಯಭಕ್ತಿ ಪಾಲಿಸುವವರಿಗೆ ನಮ್ಮನ್ನು ಮಾದರೀಯೋಗ್ಯರನ್ನಾಗಿ ಮಾಡು” ಎಂದು ಪ್ರಾರ್ಥಿಸುವವರಾಗಿರುವರು.

(75) ಅಂತಹವರಿಗೆ ಅವರು ತಾಳ್ಮೆ ವಹಿಸಿದ ಫಲವಾಗಿ (ಸ್ವರ್ಗದಲ್ಲಿ) ಉನ್ನತ ಸ್ಥಾನವನ್ನು ಪ್ರತಿಫಲವಾಗಿ ನೀಡಲಾಗುವುದು. ಅಲ್ಲಿ ಅವರನ್ನು ಅಭಿವಂದನೆಯೊಂದಿಗೆ ಮತ್ತು ಶಾಂತಿಯ ಹಾರೈಕೆಯೊಂದಿಗೆ ಬರಮಾಡಿಕೊಳ್ಳಲಾಗುವುದು.

(76) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಆ ತಂಗುದಾಣ ಮತ್ತು ವಾಸಸ್ಥಳವು ಎಷ್ಟು ಉತ್ತಮವಾದುದು!

(77) (ಓ ಪ್ರವಾದಿಯವರೇ!) ಹೇಳಿರಿ: “ನಿಮ್ಮ ಪ್ರಾರ್ಥನೆಯಿಲ್ಲದಿದ್ದರೆ ನನ್ನ ರಬ್ ನಿಮಗೆ ಯಾವ ಪರಿಗಣನೆಯನ್ನು ನೀಡಿಯಾನು?”.(780) ಆದರೆ ನೀವು ನಿಷೇಧಿಸಿದ್ದೀರಿ. ಆದುದರಿಂದ ಅದಕ್ಕಿರುವ ಶಿಕ್ಷೆಯು ಅನಿವಾರ್ಯವಾಗಿದೆ.
780. ಮನುಷ್ಯನು ಎಷ್ಟೇ ಉನ್ನತನಾಗಿದ್ದರೂ ಅಲ್ಲಾಹು ಅವನನ್ನು ಪರಿಗಣಿಸಲಾರನು. ಅವನೊಂದಿಗೆ ನಿಷ್ಕಳಂಕವಾಗಿ ಪ್ರಾರ್ಥಿಸುವವರನ್ನು ಮಾತ್ರ ಅವನು ಪರಿಗಣಿಸುತ್ತಾನೆ.