45 - Al-Jaathiya ()

|

(1) ಹಾ-ಮೀಮ್.

(2) ಈ ಗ್ರಂಥದ ಅವತೀರ್ಣವು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಿನ ಕಡೆಯಿಂದಾಗಿದೆ.

(3) ಖಂಡಿತವಾಗಿಯೂ ಭೂಮ್ಯಾಕಾಶಗಳಲ್ಲಿ ಸತ್ಯವಿಶ್ವಾಸಿಗಳಿಗೆ ಹಲವು ದೃಷ್ಟಾಂತಗಳಿವೆ.

(4) ನಿಮ್ಮ ಸೃಷ್ಟಿಯಲ್ಲಿ ಮತ್ತು ಅವನು ಜೀವರಾಶಿಗಳನ್ನು ಹಬ್ಬಿಸಿರುವುದರಲ್ಲಿ ದೃಢವಾಗಿ ವಿಶ್ವಾಸವಿಡುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

(5) ರಾತ್ರಿ ಮತ್ತು ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಅನ್ನಾಧಾರವನ್ನು ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವಗೊಂಡ ಬಳಿಕ ಜೀವವನ್ನು ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಚಿಂತಿಸಿ ಅರ್ಥಮಾಡಿಕೊಳ್ಳುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

(6) ಇವು ಅಲ್ಲಾಹುವಿನ ಪುರಾವೆಗಳಾಗಿವೆ. ನಾವು ತಮಗೆ ಅವುಗಳನ್ನು ಸತ್ಯದೊಂದಿಗೆ ಓದಿಕೊಡುತ್ತಿರುವೆವು. ಅಲ್ಲಾಹುವಿನ ಮತ್ತು ಅವನ ಪುರಾವೆಗಳ ಬಳಿಕ ಇನ್ನು ಯಾವ ವೃತ್ತಾಂತದಲ್ಲಿ ಅವರು ವಿಶ್ವಾಸವಿಡುವರು?

(7) ಸುಳ್ಳುಕೋರನೂ ಪಾಪಿಯೂ ಆಗಿರುವ ಪ್ರತಿಯೊಬ್ಬರಿಗೂ ನಾಶವಿದೆ.

(8) ಅಲ್ಲಾಹುವಿನ ದೃಷ್ಟಾಂತಗಳನ್ನು ತನಗೆ ಓದಿಕೊಡಲಾಗುವುದನ್ನು ಅವನು ಆಲಿಸಿ, ಅನಂತರ ಅವನು ಅದನ್ನು ಆಲಿಸದಂತೆ ಅಹಂಕಾರಪಡುತ್ತಾ ಹಟತೊಟ್ಟು ನಿಲ್ಲುವನು. ಆದುದರಿಂದ ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಶುಭವಾರ್ತೆಯನ್ನು ತಿಳಿಸಿರಿ.

(9) ಅವನು ನಮ್ಮ ಪುರಾವೆಗಳಿಂದ ಏನಾದರೂ ಅರಿತುಕೊಂಡರೆ ಅದನ್ನು ಅವನು ಹಾಸ್ಯ ವಸ್ತುವನ್ನಾಗಿ ಮಾಡುವನು. ಅವರಿಗೆ ಅಪಮಾನಕರವಾದ ಶಿಕ್ಷೆಯಿದೆ.

(10) ನರಕಾಗ್ನಿಯು ಅವರ ಮುಂದೆಯೇ ಇದೆ! ಅವರು ಸಂಪಾದಿಸಿರುವುದಾಗಲಿ, ಅಲ್ಲಾಹುವಿನ ಹೊರತು ಅವರು ರಕ್ಷಕರನ್ನಾಗಿ ಮಾಡಿಕೊಂಡವರಾಗಲಿ ಅವರಿಗೆ ಯಾವುದೇ ಪ್ರಯೋಜನವನ್ನೂ ಮಾಡಲಾರರು. ಅವರಿಗೆ ಕಠೋರ ಶಿಕ್ಷೆಯಿದೆ.

(11) ಇದೊಂದು ಮಾರ್ಗದರ್ಶನವಾಗಿದೆ. ತಮ್ಮ ರಬ್‌ನ ದೃಷ್ಟಾಂತಗಳಲ್ಲಿ ಅವಿಶ್ವಾಸವಿಟ್ಟವರು ಯಾರೋ ಅವರಿಗೆ ಕಠೋರವಾದ ವಿಧದಲ್ಲಿರುವ ಯಾತನಾಮಯ ಶಿಕ್ಷೆಯಿದೆ.

(12) ಸಮುದ್ರವನ್ನು ನಿಮಗೆ ಅಧೀನಪಡಿಸಿಕೊಟ್ಟವನು ಅಲ್ಲಾಹುವಾಗಿರುವನು. ಅವನ ಅಪ್ಪಣೆ ಪ್ರಕಾರ ಅದರಲ್ಲಿ ಹಡಗುಗಳು ಸಂಚರಿಸುವ ಸಲುವಾಗಿ, ನೀವು ಅವನ ಅನುಗ್ರಹದಿಂದ ಬೇಡಿಕೊಳ್ಳುವ ಸಲುವಾಗಿ ಮತ್ತು ನೀವು ಕೃತಜ್ಞತೆ ಸಲ್ಲಿಸುವವರಾಗುವ ಸಲುವಾಗಿ.

(13) ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅವನು ತನ್ನ ಕಡೆಯಿಂದ ನಿಮಗೆ ಅಧೀನಪಡಿಸಿಕೊಟ್ಟಿರುವನು. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.

(14) (ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳೊಂದಿಗೆ ಹೇಳಿರಿ: ಅಲ್ಲಾಹುವಿನ (ಶಿಕ್ಷೆಯ) ದಿನಗಳನ್ನು ನಿರೀಕ್ಷಿಸದ ಸತ್ಯನಿಷೇಧಿಗಳಿಗೆ ಅವರು ಕ್ಷಮಿಸಲಿ. ಇದು ಅವನು ಪ್ರತಿಯೊಂದು ಜನತೆಗೂ ಅವರು ಸಂಪಾದಿಸಿರುವುದರ ಫಲವನ್ನು ನೀಡುವ ಸಲುವಾಗಿದೆ.(1114)
1114. ಸತ್ಯನಿಷೇಧ ಮತ್ತು ಅಧರ್ಮದ ವಕ್ತಾರರೊಂದಿಗೆ ಹಗೆಯಿಂದ ವರ್ತಿಸುವ ಬದಲು ಸತ್ಯವಿಶ್ವಾಸಿಗಳು ಅವರನ್ನು ಕ್ಷಮಿಸಬೇಕೆಂದು ಮತ್ತು ಅವರ ನಿಷೇಧಕ್ಕಿರುವ ಪ್ರತಿಫಲವನ್ನು ಅಲ್ಲಾಹು ಅವರಿಗೆ ನೀಡುವನು ಎಂದು ಭಾವಿಸಿ ನಿರಾಳರಾಗಬೇಕೆಂದು ಈ ಸೂಕ್ತಿಯು ಬೋಧಿಸುತ್ತದೆ.

(15) ಯಾರಾದರೂ ಸತ್ಕರ್ಮವೆಸಗಿದರೆ ಅದು ಅವನ ಒಳಿತಿಗೇ ಆಗಿದೆ. ಯಾರಾದರೂ ದುಷ್ಕರ್ಮವೆಸಗಿದರೆ ಅದರ ಕೆಡುಕು ಅವನಿಗೇ ಆಗಿದೆ. ತರುವಾಯ ನಿಮ್ಮ ರಬ್‌ನೆಡೆಗೆ ನಿಮ್ಮನ್ನು ಮರಳಿಸಲಾಗುವುದು.

(16) ನಾವು ಇಸ್ರಾಈಲ್ ಸಂತತಿಗಳಿಗೆ ಗ್ರಂಥವನ್ನು, ಜ್ಞಾನವನ್ನು ಮತ್ತು ಪ್ರವಾದಿತ್ವವನ್ನು ನೀಡಿದೆವು. ಉತ್ತಮ ವಸ್ತುಗಳಿಂದ ನಾವು ಅವರಿಗೆ ಆಹಾರವನ್ನು ಒದಗಿಸಿದೆವು ಮತ್ತು ಸರ್ವಲೋಕದವರಿಗಿಂತ ನಾವು ಅವರಿಗೆ ಶ್ರೇಷ್ಠತೆಯನ್ನು ನೀಡಿದೆವು.

(17) ನಾವು ಅವರಿಗೆ (ಧಾರ್ಮಿಕ) ವಿಷಯಗಳ ಬಗ್ಗೆ ಸ್ಪಷ್ಟವಾದ ಪುರಾವೆಗಳನ್ನು ನೀಡಿದೆವು. ಆದರೆ ಅವರಿಗೆ ಅರಿವು ಬಂದ ಬಳಿಕವೇ ವಿನಾ ಅವರು ಭಿನ್ನರಾಗಿರಲಿಲ್ಲ. ಅದು ಅವರು ಪರಸ್ಪರ ಇಟ್ಟುಕೊಂಡಿದ್ದ ಅಸೂಯೆಯ ನಿಮಿತ್ತವಾಗಿತ್ತು. ಯಾವ ವಿಷಯದಲ್ಲಿ ಅವರು ಭಿನ್ನರಾದರೋ ಆ ವಿಷಯದಲ್ಲಿ ಪುನರುತ್ಥಾನ ದಿನದಂದು ತಮ್ಮ ರಬ್ ಅವರ ಮಧ್ಯೆ ಖಂಡಿತ ತೀರ್ಪು ನೀಡುವನು.

(18) (ಓ ಪ್ರವಾದಿಯವರೇ!) ತರುವಾಯ ತಮ್ಮನ್ನು ನಾವು (ಧಾರ್ಮಿಕ) ವಿಷಯದಲ್ಲಿ ಒಂದು ಸ್ಪಷ್ಟ ಮಾರ್ಗದಲ್ಲಿ ಮಾಡಿದೆವು. ಆದುದರಿಂದ ತಾವು ಅದನ್ನು ಅನುಸರಿಸಿರಿ. ಅರಿವಿಲ್ಲದವರ ದೇಹೇಚ್ಛೆಗಳನ್ನು ತಾವು ಅನುಸರಿಸದಿರಿ.

(19) ಅಲ್ಲಾಹುನಿಂದಿರುವ ಯಾವುದೇ ವಿಷಯದಲ್ಲೂ ಅವರು ತಮಗೆ ಸ್ವಲ್ಪವೂ ಪ್ರಯೋಜನಪಡಲಾರರು. ಖಂಡಿತವಾಗಿಯೂ ಅಕ್ರಮಿಗಳಲ್ಲಿ ಕೆಲವರು ಇತರ ಕೆಲವರ ರಕ್ಷಕರಾಗಿರುವರು. ಆದರೆ ಅಲ್ಲಾಹು ಭಯಭಕ್ತಿ ಪಾಲಿಸುವವರ ರಕ್ಷಕನಾಗಿರುವನು.

(20) ಇದು ಮನುಷ್ಯರ ಕಣ್ಣು ತೆರೆಸುವ ಪುರಾವೆಗಳು ಮತ್ತು ದೃಢವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿಯೂ ಕಾರುಣ್ಯವೂ ಆಗಿದೆ.

(21) ಅಥವಾ, ನಾವು ದುಷ್ಕರ್ಮವೆಸಗಿದವರನ್ನು ಸತ್ಯವಿಶ್ವಾಸವಿಟ್ಟು ಸತ್ಕರ್ಮವೆಸಗಿದವರಂತೆ, ಅಂದರೆ ಅವರ (ಎರಡೂ ಗುಂಪುಗಳ) ಜೀವನ ಮತ್ತು ಮರಣಗಳು ಸರಿಸಮಾನವಾಗುವಂತೆ ಮಾಡುವೆವು ಎಂದು ದುಷ್ಕರ್ಮಿಗಳು ಭಾವಿಸಿರುವರೇ?(1115) ಅವರು ನೀಡುತ್ತಿರುವ ತೀರ್ಪು ಎಷ್ಟು ನಿಕೃಷ್ಟವಾದುದು!
1115. ರಾಜಕೀಯ ಮತ್ತು ಆರ್ಥಿಕ ಆಧಿಪತ್ಯಗಳು ಪ್ರವಾದಿ(ಸ) ರವರ ಮತ್ತು ಸತ್ಯವಿಶ್ವಾಸಿಗಳ ಪ್ರಮುಖ ಶತ್ರುಗಳ ವಶದಲ್ಲಿತ್ತು. ಐಹಿಕ ಜೀವನದಲ್ಲಿ ತಮಗೆ ಐಶ್ವರ್ಯವನ್ನು ಕರುಣಿಸಿದ ಅಲ್ಲಾಹು ಪರಲೋಕದಲ್ಲೂ ತಮ್ಮನ್ನೇ ಅನುಗ್ರಹಿಸುವನು ಎಂದು ಅವರು ವಾದಿಸುತ್ತಿದ್ದರು. ಇವರ ದೃಷ್ಟಿಯಲ್ಲಿ ಸತ್ಯವಿಶ್ವಾಸಿಗಳು ಅನುಭವಿಸುತ್ತಿರುವ ಕಷ್ಟಕೋಟಲೆಗಳು ಅಲ್ಲಾಹು ಅವರನ್ನು ಕೈಬಿಟ್ಟಿದ್ದಾನೆ ಎಂಬುದರ ಸಂಕೇತವಾಗಿತ್ತು. ಅಲ್ಲಾಹುವಿನ ಕ್ರಮಗಳನ್ನು ಅರ್ಥಮಾಡಿಕೊಳ್ಳದಿರುವುದೇ ಅವರ ಈ ತಪ್ಪುಕಲ್ಪನೆಗೆ ಕಾರಣವಾಗಿತ್ತು. ಅಲ್ಲಾಹು ಇಹಲೋಕದಲ್ಲಿ ಸಜ್ಜನರಿಗೆ ಮತ್ತು ದುರ್ಜನರಿಗೆ ಏಕರೀತಿಯಲ್ಲಿ ಸೌಭಾಗ್ಯ ನೀಡಲೂಬಹುದು. ಆದರೆ ಮರಣಾನಂತರ ಪರಲೋಕದಲ್ಲಿ ಸತ್ಯವಿಶ್ವಾಸಿಗಳು ಮತ್ತು ಸಜ್ಜನರು ಮಾತ್ರ ಅಲ್ಲಾಹುವಿನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಐಹಿಕ ಜೀವನದಲ್ಲಿ ಅನುಗ್ರಹಿಸಿದಂತೆ ಮರಣಾನಂತರ ಜೀವನದಲ್ಲೂ ಅಲ್ಲಾಹು ನಮ್ಮನ್ನು ಅನುಗ್ರಹಿಸುವನು ಎಂದು ಸತ್ಯನಿಷೇಧಿಗಳು ಭಾವಿಸಿದ್ದರೆ ಅದು ಅವರಿಗೆ ಉಂಟಾದ ಗುರುತರವಾದ ಪ್ರಮಾದ ಮಾತ್ರವಾಗಿದೆ.

(22) ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅದು ಪ್ರತಿಯೊಬ್ಬನಿಗೂ ಅವನು ಮಾಡಿಕೊಂಡಿರುವುದಕ್ಕಿರುವ ಪ್ರತಿಫಲವನ್ನು ನೀಡುವ ಸಲುವಾಗಿದೆ. ಅವರೊಂದಿಗೆ ಅನ್ಯಾಯವೆಸಗಲಾಗದು.

(23) ಆದರೆ ತನ್ನ ಆರಾಧ್ಯನನ್ನು ತನ್ನ ದೇಹೇಚ್ಛೆಯನ್ನಾಗಿ ಮಾಡಿಕೊಂಡವನನ್ನು ತಾವು ಕಂಡಿದ್ದೀರಾ?(1116) ಅರಿತಿದ್ದೇ ಅಲ್ಲಾಹು ಅವನನ್ನು ಪಥಭ್ರಷ್ಟಗೊಳಿಸಿರುವನು. ಅವನ ಕಿವಿ ಮತ್ತು ಹೃದಯಕ್ಕೆ ಮುದ್ರೆಯೊತ್ತಿರುವನು ಮತ್ತು ಅವನ ಕಣ್ಣಿನ ಮೇಲೆ ಒಂದು ಪರದೆಯನ್ನು ಇಟ್ಟಿರುವನು. ಹಾಗಾದರೆ ಅಲ್ಲಾಹುವಿನ ಹೊರತು ಅವನನ್ನು ಸನ್ಮಾರ್ಗದಲ್ಲಿ ಸೇರಿಸುವವರಾದರೂ ಯಾರು? ಆದರೂ ನೀವು ಚಿಂತಿಸಿ ಅರ್ಥಮಾಡಿಕೊಳ್ಳಲಾರಿರೇ?
1116. ತನಗೆ ತೋಚಿದ್ದೆಲ್ಲಕ್ಕೂ ದೈವತ್ವವನ್ನು ನೀಡಿ ತನ್ನಿಷ್ಟ ಪ್ರಕಾರ ಆರಾಧಿಸುವವರ ಬಗ್ಗೆ ಈ ಸೂಕ್ತಿಯು ಅವತೀರ್ಣಗೊಂಡಿತೆಂದು ಇದರ ಅವತೀರ್ಣ ಹಿನ್ನೆಲೆಯ ಬಗ್ಗೆ ವರದಿಯಾದ ಸಹೀಹಾದ ವರದಿಗಳು ಸ್ಪಷ್ಟಪಡಿಸುತ್ತವೆ.

(24) ಅವರು ಹೇಳಿದರು: “ಜೀವನವೆಂದರೆ ನಮ್ಮ ಐಹಿಕ ಜೀವನ ಮಾತ್ರವಾಗಿದೆ. ನಾವು ಮೃತಪಡುತ್ತೇವೆ. ನಾವು ಬದುಕುತ್ತೇವೆ. ನಮ್ಮನ್ನು ನಾಶ ಮಾಡುವುದು ಕಾಲ ಮಾತ್ರವಾಗಿದೆ”. (ವಾಸ್ತವವಾಗಿ) ಅವರಿಗೆ ಅದರ ಬಗ್ಗೆ ಯಾವುದೇ ಅರಿ ವಿಲ್ಲ. ಅವರು ಊಹಿಸುವುದನ್ನು ಮಾತ್ರ ಮಾಡುತ್ತಿರುವರು.

(25) ನಮ್ಮ ದೃಷ್ಟಾಂತಗಳನ್ನು ಅವರಿಗೆ ಸ್ಪಷ್ಟವಾಗಿ ಓದಿಕೊಡಲಾದರೆ “ನೀವು ಸತ್ಯಸಂಧರಾಗಿದ್ದರೆ ನಮ್ಮ ಪೂರ್ವಿಕರನ್ನು (ಜೀವಂತವಾಗಿ) ತನ್ನಿರಿ” ಎಂದು ಹೇಳುವುದರ ಹೊರತು ಅವರ ವಾದವು ಇನ್ನೇನೂ ಆಗಿರದು.

(26) ಹೇಳಿರಿ: “ಅಲ್ಲಾಹು ನಿಮಗೆ ಜೀವ ನೀಡುವನು. ತರುವಾಯ ಅವನು ನಿಮ್ಮನ್ನು ಮೃತಪಡಿಸುವನು. ತರುವಾಯ ಪುನರುತ್ಥಾನ ದಿನದೆಡೆಗೆ ಅವನು ನಿಮ್ಮನ್ನು ಒಟ್ಟುಗೂಡಿಸುವನು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಮನುಷ್ಯರಲ್ಲಿ ಹೆಚ್ಚಿನವರೂ ಅರಿಯುವುದಿಲ್ಲ.

(27) ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹುವಿಗಾಗಿದೆ. ಆ ಅಂತ್ಯಘಳಿಗೆಯು ಅಸ್ತಿತ್ವಕ್ಕೆ ಬರುವ ದಿನ! ಅಂದು ಅಸತ್ಯವಾದಿಗಳು ನಷ್ಟಕ್ಕೊಳಗಾಗುವರು.

(28) (ಆ ದಿನದಂದು) ತಾವು ಎಲ್ಲ ಸಮುದಾಯಗಳನ್ನೂ ಮಂಡಿಯೂರಿದ ಸ್ಥಿತಿಯಲ್ಲಿ ಕಾಣುವಿರಿ. ಪ್ರತಿಯೊಂದು ಸಮುದಾಯವನ್ನೂ ಅದರ ದಾಖಲೆಯೆಡೆಗೆ ಕರೆಯಲಾಗುವುದು.(1117) “ನೀವು ಮಾಡಿರುವುದಕ್ಕೆ ಇಂದು ನಿಮಗೆ ಪ್ರತಿಫಲ ನೀಡಲಾಗುವುದು” (ಎಂದು ಅವರೊಂದಿಗೆ ಹೇಳಲಾಗುವುದು).
1117. ಯಾವುದೇ ವಿಶ್ವಾಸಾಚಾರವನ್ನು ಹೊಂದಿದವನಾಗಿರಲಿ ಅಥವಾ ಯಾವುದೇ ಧರ್ಮದಲ್ಲಿ, ವಿಭಾಗದಲ್ಲಿ ಸೇರಿದವನಾಗಿರಲಿ ಅವನ ಕರ್ಮಗಳನ್ನು ನಿಖರವಾಗಿ ದಾಖಲಿಸಲಾದ ಗ್ರಂಥವನ್ನು ಅವನಿಗೆ ನೀಡಲಾಗುವುದು. ಅದರ ಆಧಾರದಲ್ಲೇ ಅವರನ್ನು ವಿಚಾರಣೆ ಮಾಡಲಾಗುವುದು. ಕೆಲವು ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಇಲ್ಲಿ ಹೇಳಲಾಗಿರುವ ‘ದಾಖಲೆ’ ಎಂದರೆ ಅದು ಪ್ರತಿಯೊಂದು ಸಮುದಾಯಕ್ಕೂ ನೀಡಲಾಗಿರುವ ಗ್ರಂಥವಾಗಿದೆ. ಪ್ರತಿಯೊಂದು ಸಮುದಾಯವನ್ನೂ ಅದಕ್ಕೆ ನೀಡಲಾದ ಗ್ರಂಥದ ಆಧಾರದಲ್ಲೇ ವಿಚಾರಣೆ ಮಾಡಲಾಗುವುದು ಎಂದಾಗಿದೆ ಇದರ ತಾತ್ಪರ್ಯವೆಂದು ಅವರು ಹೇಳುತ್ತಾರೆ.

(29) ಇದು ನಮ್ಮ ದಾಖಲೆ! ಇದು ನಿಮಗೆದುರಾಗಿ ಸತ್ಯವನ್ನು ಹೇಳಲಿದೆ. ಖಂಡಿತವಾಗಿಯೂ ನೀವು ಮಾಡಿಕೊಂಡಿರುವುದನ್ನೆಲ್ಲ ನಾವು ದಾಖಲಿಸುತ್ತಿದ್ದೆವು.

(30) ಆದರೆ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರನ್ನು ಅವರ ರಬ್ ಅವನ ಕರುಣೆಯಲ್ಲಿ ಪ್ರವೇಶ ಮಾಡಿಸುವನು. ಸ್ಪಷ್ಟವಾದ ಗೆಲುವು ಅದೇ ಆಗಿದೆ.

(31) ಆದರೆ ಅವಿಶ್ವಾಸವಿಟ್ಟವರಾರೋ, (ಅವರೊಂದಿಗೆ ಹೇಳಲಾಗುವುದು:) “ನನ್ನ ದೃಷ್ಟಾಂತಗಳನ್ನು ನಿಮಗೆ ಓದಿಕೊಡಲಾಗಿಲ್ಲವೇ? ಆದರೂ ನೀವು ಅಹಂಕಾರಪಟ್ಟಿರಿ ಮತ್ತು ಪಾಪಿಗಳಾದ ಒಂದು ಜನತೆಯಾಗಿ ಮಾರ್ಪಟ್ಟಿರಿ”.

(32) “ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ಆ ಅಂತ್ಯಘಳಿಗೆಯ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಲಾದರೆ “ಅಂತ್ಯಘಳಿಗೆಯೆಂದರೆ ಏನೆಂದು ನಮಗೆ ತಿಳಿದಿಲ್ಲ. ನಮಗಿರುವುದು ಒಂದು ಊಹೆ ಮಾತ್ರವಾಗಿದೆ. ನಮಗೆ ಯಾವುದೇ ಖಾತ್ರಿಯೂ ಇಲ್ಲ” ಎಂದು ನೀವು ಹೇಳುವಿರಿ.

(33) ಅವರು ಮಾಡಿರುವುದರ ಕೆಡುಕುಗಳು ಅವರಿಗೆ ಗೋಚರವಾಗುವುದು. ಅವರು ಏನನ್ನು ಗೇಲಿ ಮಾಡುತ್ತಿದ್ದರೋ ಅದು ಅವರನ್ನು ಆವರಿಸುವುದು.

(34) (ಅವರೊಂದಿಗೆ) ಹೇಳಲಾಗುವುದು: “ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತಂತೆ ಇಂದು ನಿಮ್ಮನ್ನೂ ನಾವು ಮರೆಯುವೆವು. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಸಹಾಯಕರಾಗಿ ಯಾರೂ ಇಲ್ಲ”.

(35) ಇದೇಕೆಂದರೆ ನೀವು ಅಲ್ಲಾಹುವಿನ ದೃಷ್ಟಾಂತಗಳನ್ನು ಗೇಲಿ ಮಾಡಿದ್ದೀರಿ ಮತ್ತು ಐಹಿಕ ಜೀವನವು ನಿಮ್ಮನ್ನು ವಂಚಿಸಿದೆ ಎಂಬುದರಿಂದಾಗಿದೆ. ಆದುದರಿಂದ ಇಂದು ಅವರನ್ನು ಅಲ್ಲಿಂದ ಹೊರತರಲಾಗದು. ಅವರೊಂದಿಗೆ ಪ್ರಾಯಶ್ಚಿತ್ತವನ್ನೂ ಕೇಳಲಾಗದು.

(36) ಆದುದರಿಂದ ಆಕಾಶಗಳ ರಬ್‌, ಭೂಮಿಯ ರಬ್ ಮತ್ತು ಸರ್ವಲೋಕಗಳ ರಬ್ ಆಗಿರುವ ಅಲ್ಲಾಹುವಿಗೆ ಸ್ತುತಿ.

(37) ಭೂಮ್ಯಾಕಾಶಗಳಲ್ಲಿ ಮಹಾತ್ಮೆಯು ಅವನಿಗೇ ಆಗಿದೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.