90 - Al-Balad ()

|

(1) ನಾನು ಈ ಪಟ್ಟಣದ (ಮಕ್ಕಾದ) ಮೇಲೆ ಆಣೆಯಿಡುವೆನು.

(2) ತಾವು ಈ ಪಟ್ಟಣದ ನಿವಾಸಿಯಾಗಿರುವಿರಿ.(1398)
1398. ‘ಹಿಲ್ಲ್’ ಎಂದರೆ ನಿವಾಸಿ, ಅನುಮತಿಯಿರುವವನು, ಸ್ವಾತಂತ್ರ್ಯವಿರುವವನು ಇತ್ಯಾದಿ ಅರ್ಥಗಳಿವೆ.

(3) ಜನ್ಮದಾತನ ಮತ್ತು ಅವನು ಜನ್ಮ ನೀಡಿದವುಗಳ ಮೇಲಾಣೆ!

(4) ಖಂಡಿತವಾಗಿಯೂ ಮನುಷ್ಯನನ್ನು ನಾವು ಸೃಷ್ಟಿಸಿ ರುವುದು ಕಷ್ಟವನ್ನು ಅನುಭವಿಸುವ ಸ್ಥಿತಿಯಲ್ಲಾಗಿದೆ.(1399)
1399. ಬದುಕಿನ ಎಲ್ಲ ಸಾಧನೆಗಳಿಗೂ ಮಾನದಂಡ ಕಠಿಣ ಪರಿಶ್ರಮವಾಗಿದೆ. ಪರಿಶ್ರಮಿಸಲು ಅಥವಾ ಕ್ಲೇಶ ಸಹಿಸಲು ಸ್ವಲ್ಪವೂ ಸಿದ್ಧನಾಗದವನು ಬದುಕಿನಲ್ಲಿ ಯಶಸ್ವಿಯಾಗಲಾರನು.

(5) ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲವೆಂದು ಅವನು ಭಾವಿಸುತ್ತಿರುವನೇ?

(6) ಅವನು ಹೇಳುವನು: ‘ನಾನು ಸಂಪತ್ತನ್ನು ಯಥೇಷ್ಟವಾಗಿ ಹಾಳು ಮಾಡಿರುವೆನು’.(1400)
1400. ದೇವಭಯವಿಲ್ಲದ ಧನಿಕರು ಧರ್ಮಬಾಹಿರವಾಗಿ ಸಂಪತ್ತನ್ನು ವ್ಯಯಿಸುವವರೂ, ಅದರ ಹೆಸರಲ್ಲಿ ಜಂಬಕೊಚ್ಚುವವರೂ ಆಗಿದ್ದಾರೆ ಮತ್ತು ತಮ್ಮ ಕರ್ಮಗಳನ್ನು ಅಲ್ಲಾಹು ವೀಕ್ಷಿಸುತ್ತಿದ್ದಾನೆಂಬುದರ ಬಗ್ಗೆ ಪ್ರಜ್ಞೆಯಿಲ್ಲದವರಾಗಿದ್ದಾರೆ.

(7) ಅವನನ್ನು ಯಾರೂ ಕಂಡಿಲ್ಲವೆಂದು ಅವನು ಭಾವಿಸುತ್ತಿರುವನೇ?

(8) ಅವನಿಗೆ ನಾವು ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ?

(9) ಒಂದು ನಾಲಗೆ ಮತ್ತು ಎರಡು ತುಟಿಗಳನ್ನು?

(10) ಸ್ಪಷ್ಟವಾದ ಎರಡು ಹಾದಿಗಳನ್ನು(1401) ನಾವು ಅವನಿಗೆ ತೋರಿಸಿಕೊಟ್ಟಿರುವೆವು.
1401. ಸತ್ಯ ಮತ್ತು ಅಸತ್ಯದ ಹಾದಿಗಳು ಸ್ಪಷ್ಟವಾಗಿವೆ. ಯಾವುದೇ ಸಂದೇಹವೂ ಉಳಿಯದ ರೀತಿಯಲ್ಲಿ ಅಲ್ಲಾಹು ಪ್ರವಾದಿಗಳ ಮೂಲಕ ಆ ಹಾದಿಗಳನ್ನು ಬೇರ್ಪಡಿಸಿ ತೋರಿಸಿದ್ದಾನೆ.

(11) ತರುವಾಯ ಆ ಕಡಿದಾದ ಹಾದಿಯಲ್ಲಿ(1402) ಅವನು ಪ್ರವೇಶಿಸಲಿಲ್ಲ.
1402. ಸತ್ಯದ ಹಾದಿಯು ಅನಾಯಾಸವಾಗಿ ಚಲಿಸುವಂತದ್ದಲ್ಲ. ಅತ್ಯಂತ ಪ್ರಯಾಸದೊಂದಿಗೆ ಏರುತ್ತಾ ಚಲಿಸಬೇಕಾದ ಕಡಿದಾದ ಹಾದಿಯೊಂದಿಗೆ ಅದನ್ನು ಹೋಲಿಸಲಾಗಿದೆ.

(12) ಆ ಕಡಿದಾದ ಹಾದಿ ಏನೆಂದು ತಮಗೆ ಗೊತ್ತಿದೆಯೇ?

(13) ಅದು ಒಬ್ಬ ಗುಲಾಮನನ್ನು ವಿಮೋಚನೆಗೊಳಿಸುವುದಾಗಿದೆ.

(14) ಅಥವಾ ಹಸಿವಿನ ದಿನದಲ್ಲಿ ಆಹಾರ ನೀಡುವುದಾಗಿದೆ.

(15) ಸಂಬಂಧಿಕನಾಗಿರುವ ಒಬ್ಬ ಅನಾಥನಿಗೆ.

(16) ಅಥವಾ ಕಡು ಬಡತನದಲ್ಲಿರುವ ಒಬ್ಬ ನಿರ್ಗತಿಕನಿಗೆ.

(17) ಮಾತ್ರವಲ್ಲ, ಅವನು ವಿಶ್ವಾಸವಿಡುವವರ ಹಾಗೂ ತಾಳ್ಮೆಯಿಂದ ಮತ್ತು ಕರುಣೆಯಿಂದ ಪರಸ್ಪರ ಉಪದೇಶ ನೀಡುವವರ ಪೈಕಿ ಸೇರುವುದಾಗಿದೆ.

(18) ಹಾಗಿರುವವರೇ ಬಲಭಾಗದವರು.

(19) ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರೇ ಎಡಭಾಗದವರಾಗಿರುವರು.

(20) ಅವರ ಮೇಲೆ ಮುಚ್ಚಲಾಗಿರುವ ನರಕಾಗ್ನಿಯಿದೆ.