(1) ಓ ಪ್ರವಾದಿಯವರೇ! ಅಲ್ಲಾಹುವನ್ನು ಭಯಪಡಿರಿ. ಸತ್ಯನಿಷೇಧಿಗಳನ್ನು ಮತ್ತು ಕಪಟವಿಶ್ವಾಸಿಗಳನ್ನು ಅನುಸರಿಸದಿರಿ. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
(2) ತಮಗೆ ತಮ್ಮ ರಬ್‌ನ ಕಡೆಯಿಂದ ನೀಡಲಾಗುವ ದಿವ್ಯಸಂದೇಶಗಳನ್ನು ಅನುಸರಿಸಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(3) ಅಲ್ಲಾಹುವಿನ ಮೇಲೆ ಭರವಸೆಯನ್ನಿಡಿರಿ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
(4) ಅಲ್ಲಾಹು ಯಾವುದೇ ವ್ಯಕ್ತಿಗೂ ಅವನ ಆಂತರ್ಯದಲ್ಲಿ ಎರಡು ಹೃದಯಗಳನ್ನು ಉಂಟುಮಾಡಿಲ್ಲ.(886) ನಿಮ್ಮ ತಾಯಂದಿರಂತೆ ಎಂದು ನೀವು ಘೋಷಿಸುವ ನಿಮ್ಮ ಪತ್ನಿಯರನ್ನು ಅವನು ನಿಮಗೆ ತಾಯಂದಿರನ್ನಾಗಿ ಮಾಡಿಲ್ಲ.(887) ನಿಮಗೆ ಸೇರಿಸಿ ಕರೆಯಲಾಗುವ ನಿಮ್ಮ ದತ್ತುಪುತ್ರರನ್ನು ಅವನು ನಿಮಗೆ ಪುತ್ರರನ್ನಾಗಿ ಮಾಡಿಲ್ಲ.(888) ಇವೆಲ್ಲವೂ ನೀವು ನಿಮ್ಮ ಬಾಯಿಯಿಂದ ಹೇಳುವ ಮಾತುಗಳು ಮಾತ್ರವಾಗಿವೆ. ಅಲ್ಲಾಹು ಸತ್ಯವನ್ನೇ ನುಡಿಯುವನು ಮತ್ತು ಅವನು ಸನ್ಮಾರ್ಗವನ್ನು ತೋರಿಸಿಕೊಡುವನು.
886. ಆತ್ಮ ಸಾಕ್ಷಿಯನ್ನು ವಂಚಿಸದೆ ಯಾರಿಗೂ ಏಕಕಾಲದಲ್ಲಿ ಪರಸ್ಪರ ವಿರುದ್ಧವಾದ ನಿಲುವುಗಳನ್ನು ಹೊಂದಲು ಸಾಧ್ಯವಿಲ್ಲ ಎಂಬುದರ ಕಡೆಗೆ ಇಲ್ಲಿ ಸೂಚನೆ ನೀಡಲಾಗಿದೆ. 887. ‘ನೀನು ನನಗೆ ನನ್ನ ತಾಯಿ ಸಮಾನ’ ಎಂದು ಪತ್ನಿಯೊಂದಿಗೆ ಘೋಷಿಸಿ ಆಕೆಯೊಂದಿಗಿನ ದಾಂಪತ್ಯವನ್ನು ಕೊನೆಗೊಳಿಸುವ ಸಂಪ್ರದಾಯವು ಅರಬರಲ್ಲಿ ರೂಢಿಯಲ್ಲಿತ್ತು. ಇದನ್ನು ‘ಝಿಹಾರ್’ ಎನ್ನಲಾಗುತ್ತದೆ. ‘ಝಿಹಾರ್’ ಮಾಡಲಾದ ಸ್ತ್ರೀ ವಿಚ್ಛೇದಿತೆಯಾಗುತ್ತಿರಲಿಲ್ಲ. ಆಕೆಗೆ ಬೇರೆ ವಿವಾಹವಾಗುವ ಅವಕಾಶವೂ ಇರಲಿಲ್ಲ. ಇಂತಹ ಸ್ತ್ರೀದೌರ್ಜನ್ಯ ಸಂಪ್ರದಾಯವನ್ನು ಇಸ್ಲಾಮ್ ಕೊನೆಗೊಳಿಸಿತು.
888. ಮಕ್ಕಳನ್ನು ದತ್ತು ಸ್ವೀಕರಿಸುವುದನ್ನು ಇಸ್ಲಾಮ್ ವಿರೋಧಿಸುವುದಿಲ್ಲ. ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಸಂರಕ್ಷಣೆ ನೀಡುವುದನ್ನು ಇಸ್ಲಾಮ್ ಮಹಾ ಪುಣ್ಯಕರ್ಮವೆಂದು ಪರಿಗಣಿಸುತ್ತದೆ. ಆದರೆ ದತ್ತು ಸ್ವೀಕರಿಸಲಾಗುವ ಮಗು ದತ್ತುಪುತ್ರನಾಗಿರುತ್ತಾನೆಯೇ ಹೊರತು ಸ್ವಂತ ಮಗನಾಗಲಾರನು. ದತ್ತು ಸ್ವೀಕರಿಸಿದ ವ್ಯಕ್ತಿ ಕೇವಲ ಸಂರಕ್ಷಕನೇ ಹೊರತು ನೈಜ ತಂದೆಯಾಗಲಾರನು. ತಂದೆ-ಮಗ ಸಂಬಂಧದ ಎಲ್ಲ ಮಾನದಂಡಗಳೂ ಇದಕ್ಕೆ ಅನ್ವಯವಾಗಲಾರದು. ಸಂರಕ್ಷಣೆಯ ಹೆಸರಿನಲ್ಲಿ ಸ್ಥಾಪಿತವಾಗುವ ಸಂಬಂಧವನ್ನು ರಕ್ತಸಂಬಂಧದ ಸ್ಥಾನಕ್ಕೇರಿಸಿದರೆ ಅದು ಕೌಟುಂಬಿಕ ಮತ್ತು ಸಾಮಾಜಿಕವಾದ ಹಲವಾರು ಸಮಸ್ಯೆಗಳಿಗೆ ಕಾರಣವಾಗುವುದು.
(5) ನೀವು ಅವರನ್ನು (ದತ್ತುಪುತ್ರರನ್ನು) ಅವರ ತಂದೆಯಂದಿರಿಗೆ ಸೇರಿಸಿ ಕರೆಯಿರಿ. ಅದು ಅಲ್ಲಾಹುವಿನ ಬಳಿ ಅತ್ಯಂತ ನ್ಯಾಯಬದ್ಧವಾಗಿದೆ. ಅವರ ತಂದೆಯಂದಿರು ಯಾರೆಂದು ನೀವು ತಿಳಿದಿರದಿದ್ದರೆ ಧರ್ಮದಲ್ಲಿ ಅವರು ನಿಮ್ಮ ಸಹೋದರರೂ, ಮಿತ್ರರೂ ಆಗಿರುವರು.(889) ನೀವು ಪ್ರಮಾದವಶಾತ್ ಮಾಡಿರುವುದರಲ್ಲಿ ನಿಮ್ಮ ಮೇಲೆ ದೋಷವಿಲ್ಲ.(890) ಆದರೆ ನಿಮ್ಮ ಹೃದಯಗಳು ಅರಿತುಕೊಂಡು ಮಾಡಿರುವುದು (ದೋಷಕರವಾಗಿದೆ). ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
889. ತಂದೆ ಯಾರೆಂದು ತಿಳಿದಿದ್ದರೂ ತಿಳಿಯದಿದ್ದರೂ ಒಬ್ಬ ಸತ್ಯವಿಶ್ವಾಸಿಯ ಸ್ಥಾನಕ್ಕೆ ಯಾವುದೇ ಏರುಪೇರುಂಟಾಗದು. ಅವನನ್ನು ಸಹೋದರನನ್ನಾಗಿ, ಆದರ್ಶ ಸಂಬಂಧಿಯನ್ನಾಗಿ ಪರಿಗಣಿಸುವುದು ಸತ್ಯವಿಶ್ವಾಸಿಗಳ ಬಾಧ್ಯತೆಯಾಗಿದೆ. ‘ಮವಾಲೀ’ ಎಂಬ ಪದಕ್ಕೆ ಸಂಬಂಧಿಕರು, ಮಿತ್ರರು, ಗುಲಾಮಗಿರಿಯಿಂದ ವಿಮೋಚಿತರಾದವರು ಎಂಬಿತ್ಯಾದಿ ಅರ್ಥಗಳಿವೆ. 890. ಪ್ರವಾದಿ(ಸ) ರವರ ದತ್ತು ಪುತ್ರರಾದ ಝೈದ್‍ರನ್ನು ಕೆಲವರು ‘ಮುಹಮ್ಮದ್‍ರ ಮಗ ಝೈದ್’ ಎಂದು ಕರೆಯುತ್ತಿದ್ದರು. ಹೀಗೆ ಓರ್ವ ವ್ಯಕ್ತಿಯನ್ನು ಅವನ ಸ್ವಂತ ತಂದೆಯಲ್ಲದವನಿಗೆ ಸೇರಿಸಿ ಕರೆಯುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ಪ್ರಮಾದವಶಾತ್ ಹಾಗೆ ಕರೆದರೆ ಅದರಲ್ಲಿ ತಪ್ಪಿಲ್ಲ.
(6) ಸತ್ಯವಿಶ್ವಾಸಿಗಳಿಗೆ ಅವರ ಶರೀರಗಳಿಗಿಂತಲೂ ಹೆಚ್ಚು ಆಪ್ತರು ಸಂದೇಶವಾಹಕರಾಗಿರುವರು. ಅವರ ಮಡದಿಯರು ಅವರಿಗೆ ಮಾತೆಯರಾಗಿರುವರು.(891) ಅಲ್ಲಾಹುವಿನ ನಿಯಮದಲ್ಲಿ ರಕ್ತ ಸಂಬಂಧಿಗಳು ಪರಸ್ಪರರಿಗೆ ಇತರ ಸತ್ಯವಿಶ್ವಾಸಿಗಳಿಗಿಂತಲೂ, ಮುಹಾಜಿರ್‌ಗಳಿಗಿಂತಲೂ ಹೆಚ್ಚು ನಿಕಟರಾಗಿರುವರು.(892) ನೀವು ನಿಮ್ಮ ಮಿತ್ರರಿಗೆ ಏನಾದರೂ ಉಪಕಾರ ಮಾಡುವುದಾದರೆ ಅದು ಇದರಿಂದ ಹೊರತಾಗಿದೆ. ಅದು ಗ್ರಂಥದಲ್ಲಿ ದಾಖಲಿಸಲಾಗಿರುವ ವಿಷಯವಾಗಿದೆ.
891. ಪ್ರವಾದಿ(ಸ) ರವರ ಮಡದಿಯರಿಗೆ ‘ಸತ್ಯವಿಶ್ವಾಸಿಗಳ ಮಾತೆಯರು’ ಎಂಬ ಸ್ಥಾನವನ್ನು ಇಸ್ಲಾಮ್ ನೀಡಿದೆ. 892. ಮದೀನ ಜೀವನದ ಆರಂಭಕಾಲದಲ್ಲಿ ಪ್ರವಾದಿ(ಸ) ರವರು ಸತ್ಯವಿಶ್ವಾಸಿಗಳ ಪೈಕಿ ಇಬ್ಬಿಬ್ಬರ ಮಧ್ಯೆ ವಿಶೇಷ ಸಹೋದರ ಸಂಬಂಧವನ್ನು ಸ್ಥಾಪಿಸಿದ್ದರು. ಅವರ ಪೈಕಿ ಒಬ್ಬನು ಮೃತಪಟ್ಟರೆ ಮತ್ತೊಬ್ಬನಿಗೆ ಅವನ ಸೊತ್ತಿನಲ್ಲಿ ಹಕ್ಕನ್ನು ನೀಡುತ್ತಿದ್ದರು. ಬಳಿಕ ಉತ್ತರಾಧಿಕಾರ ನಿಯಮಗಳನ್ನು ವಿವರಿಸುವ ಕುರ್‌ಆನ್ ಸೂಕ್ತಿಗಳ ಮೂಲಕ ಉತ್ತರಾಧಿಕಾರದ ಹಕ್ಕು ಕೇವಲ ನಿಕಟ ಸಂಬಂಧಿಕರಿಗೆ ಮಾತ್ರವಾಗಿದೆ ಎಂದು ನಿರ್ಣಯಿಸಲಾಯಿತು. ಈ ಸೂಕ್ತಿಯಲ್ಲದೆ ಸೂರಃ ಅನ್‍ಫಾಲ್ 75ನೇ ಸೂಕ್ತಿಯಲ್ಲೂ ರಕ್ತ ಸಂಬಂಧಿಗಳಿಗೆ ಆದ್ಯತೆ ನೀಡಬೇಕೆಂದು ಆದೇಶಿಸಲಾಗಿದೆ.
(7) ನಾವು ಪ್ರವಾದಿಗಳಿಂದ ಅವರ ಕರಾರನ್ನು ಪಡೆದ ಸಂದರ್ಭ. ತಮ್ಮಿಂದಲೂ, ನೂಹ್, ಇಬ್ರಾಹೀಮ್, ಮೂಸಾ ಮತ್ತು ಮರ್ಯಮ್‍ರ ಪುತ್ರ ಈಸಾರಿಂದಲೂ (ನಾವು ಕರಾರು ಪಡೆದ ಸಂದರ್ಭ). ನಾವು ಅವರಿಂದ ಮಹತ್ವಪೂರ್ಣವಾದ ಕರಾರನ್ನು ಪಡೆದಿರುವೆವು.
(8) ಅವನು (ಅಲ್ಲಾಹು) ಸತ್ಯಸಂಧರೊಂದಿಗೆ ಅವರ ಸತ್ಯಸಂಧತೆಯ ಬಗ್ಗೆ ಪ್ರಶ್ನಿಸುವ ಸಲುವಾಗಿ. ಸತ್ಯನಿಷೇಧಿಗಳಿಗೆ ಅವನು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿರುವನು.
(9) ಓ ಸತ್ಯವಿಶ್ವಾಸಿಗಳೇ! ನಿಮ್ಮ ಬಳಿಗೆ ಸೈನ್ಯಗಳು ಬಂದಾಗ, ನಾವು ಅವರ ಮೇಲೆ ಗಾಳಿಯನ್ನು ಮತ್ತು ನೀವು ಕಾಣದಂತಹ ಸೈನ್ಯಗಳನ್ನು ಕಳುಹಿಸಿದ ಸಂದರ್ಭದಲ್ಲಿ ಅಲ್ಲಾಹು ನಿಮ್ಮ ಮೇಲೆ ಸುರಿಸಿದ ಅವನ ಅನುಗ್ರಹವನ್ನು ಸ್ಮರಿಸಿರಿ.(893) ಅಲ್ಲಾಹು ನೀವು ಮಾಡುತ್ತಿರುವುದನ್ನು ವೀಕ್ಷಿಸುತ್ತಿರುವನು.
893. ಹಿಜ್ರಾ 5ನೇ ವರ್ಷದಲ್ಲಿ ಕುರೈಶರು ಮತ್ತು ಅವರ ಮಿತ್ರಪಕ್ಷಗಳು ಒಟ್ಟಾಗಿ 10,000 ಜನರಿರುವ ಸೇನೆಯನ್ನು ಜಮಾಯಿಸಿ ಮದೀನಾ ಮುಸ್ಲಿಮರನ್ನು ಸುತ್ತುವರಿದು ಅವರನ್ನು ನಿರ್ಮೂಲನ ಮಾಡಲು ಯತ್ನಿಸಿದ ಘಟನೆಯ ಕಡೆಗೆ ಇಲ್ಲಿ ಸೂಚನೆ ನೀಡಲಾಗಿದೆ. ಈ ಘಟನೆಯನ್ನು ಅಹ್‍ಝಾಬ್ ಯುದ್ಧ ಅಥವಾ ಖಂದಕ್ ಯುದ್ಧ ಎಂದು ಕರೆಯಲಾಗುತ್ತದೆ.
(10) ಅವರು ನಿಮ್ಮ ಮೇಲ್ಭಾಗದಿಂದಲೂ, ನಿಮ್ಮ ತಳಭಾಗದಿಂದಲೂ ನಿಮ್ಮ ಬಳಿಗೆ ಬಂದ ಸಂದರ್ಭ. ಕಣ್ಣುಗಳು ಜಾರಿಹೋದ, ಹೃದಯಗಳು ಗಂಟಲಿಗೆ ತಲುಪಿದ ಮತ್ತು ಅಲ್ಲಾಹುವಿನ ಬಗ್ಗೆ ನೀವು ವಿಭಿನ್ನ ಕಲ್ಪನೆಗಳನ್ನು ಕಲ್ಪಿಸಿಕೊಂಡ ಸಂದರ್ಭ.(894)
894. ಅಲ್ಲಾಹು ನಮ್ಮನ್ನು ಕೈಬಿಡುವನೇ ಎಂದು ಭಯಪಡುವಷ್ಟರ ಮಟ್ಟಿಗೆ ಆ ಪರೀಕ್ಷೆಯು ಭಯಾನಕವಾಗಿತ್ತು.
(11) ಅಲ್ಲಿ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸಲಾಯಿತು ಮತ್ತು ತೀವ್ರ ಸ್ವರೂಪದಲ್ಲಿ ನಡುಗಿಸಲಾಯಿತು.
(12) “ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಮ್ಮೊಂದಿಗೆ ವಾಗ್ದಾನ ಮಾಡಿರುವುದು ವಂಚನೆ ಮಾತ್ರವಾಗಿದೆ” ಎಂದು ಕಪಟವಿಶ್ವಾಸಿಗಳು ಮತ್ತು ಹೃದಯಗಳಲ್ಲಿ ರೋಗವಿರುವವರು ಹೇಳಿದ ಸಂದರ್ಭ.
(13) “ಓ ಯಸ್ರಿಬ್ ನಿವಾಸಿಗಳೇ!(895) (ಅಚಲರಾಗಿ) ನಿಲ್ಲಲು ನಿಮ್ಮಿಂದಾಗದು. ಆದುದರಿಂದ ನೀವು ಮರಳಿ ಹೋಗಿರಿ” ಎಂದು ಅವರ ಪೈಕಿ ಒಂದು ಗುಂಪು ಹೇಳಿದ ಸಂದರ್ಭ.(896) “ನಮ್ಮ ಮನೆಗಳು ಅಭದ್ರವಾಗಿವೆ” ಎನ್ನುತ್ತಾ ಅವರ ಪೈಕಿ ಇನ್ನೊಂದು ಗುಂಪು (ರಣರಂಗವನ್ನು ಬಿಟ್ಟು ಓಡಿಹೋಗಲು) ಪ್ರವಾದಿಯೊಂದಿಗೆ ಅನುಮತಿಯನ್ನು ಕೇಳುತ್ತಿರುವರು. ವಾಸ್ತವದಲ್ಲಿ ಅವರ ಮನೆಗಳು ಅಭದ್ರವಾಗಿಲ್ಲ. ಅವರು ಪಲಾಯನ ಮಾಡಲು ಮಾತ್ರ ಬಯಸುತ್ತಿರುವರು.
895. ಪ್ರವಾದಿ(ಸ) ರವರ ಆಗಮನಕ್ಕೆ ಮುಂಚೆ ಮದೀನದ ಹೆಸರು ‘ಯಸ್ರಿಬ್’ ಎಂದಾಗಿತ್ತು. 896. ಶತ್ರುಗಳ ಆಗಮನ ಸುದ್ದಿ ತಿಳಿದಾಗ ಮುಸ್ಲಿಮರು ಮದೀನದ ಸುತ್ತಲೂ ಹೊಂಡ (ಖಂದಕ್) ತೋಡಿದರು. ಅದನ್ನು ದಾಟಿ ಅವರೇನಾದರೂ ಮದೀನವನ್ನು ಪ್ರವೇಶಿಸಿದರೆ ಅವರನ್ನು ಎದುರಿಸುವುದಕ್ಕಾಗಿ ಮದೀನ ನಗರ ಮತ್ತು ಹೊಂಡದ ಮಧ್ಯೆ ಖಾಲಿ ಸ್ಥಳದಲ್ಲಿ ಮುಸ್ಲಿಮರು ಶಸ್ತ್ರಸಜ್ಜಿತರಾಗಿ ಡೇರೆ ಹೂಡಿದ್ದರು. ಈ ಮಧ್ಯೆ ಮುಸ್ಲಿಮರೆಡೆಯಲ್ಲಿ ಭೀತಿಯನ್ನು ಸೃಷ್ಟಿಸಲು ವದಂತಿಗಳನ್ನು ಹರಡುವುದರಲ್ಲಿ ನಿರತರಾಗಿದ್ದ ಕಪಟವಿಶ್ವಾಸಿಗಳ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ.
(14) ಅದರ (ಮದೀನದ) ಸರ್ವ ದಿಕ್ಕುಗಳಿಂದಲೂ (ಶತ್ರುಗಳು) ಅವರ ಬಳಿಗೆ ಪ್ರವೇಶಿಸಿ, ತರುವಾಯ (ಮುಸ್ಲಿಮರಲ್ಲಿ) ಕ್ಷೋಭೆಯನ್ನುಂಟುಮಾಡಲು ಅವರೊಂದಿಗೆ ಬೇಡಿಕೆಯಿಡಲಾದರೆ ಅವರು ಅದನ್ನು ಮಾಡುವರು. ಅಲ್ಪವೇ ಹೊರತು ಅವರು ಅದಕ್ಕಾಗಿ ಹಿಂಜರಿಯಲಾರರು.
(15) ಹಿಂದಿರುಗಿ ಓಡಲಾರೆವು ಎಂದು ಅವರು ಮುಂಚೆ ಅಲ್ಲಾಹುವಿನೊಂದಿಗೆ ಕರಾರು ಮಾಡಿದ್ದರು. ಅಲ್ಲಾಹುವಿನೊಂದಿಗಿರುವ ಕರಾರು ವಿಚಾರಣೆ ಮಾಡುವಂತದ್ದೇ ಆಗಿದೆ.
(16) (ಓ ಪ್ರವಾದಿಯವರೇ!) ಹೇಳಿರಿ: “ನೀವು ಮರಣದಿಂದ ಅಥವಾ ಹತ್ಯೆಗೀಡಾಗುವುದರಿಂದ ಪಲಾಯನ ಮಾಡುವುದಾದರೆ ಆ ಪಲಾಯನವು ನಿಮಗೆ ಯಾವುದೇ ಪ್ರಯೋಜನವನ್ನೂ ನೀಡದು. ಆ ರೀತಿ (ಪಲಾಯನ ಮಾಡಿ ಪಾರಾದರೂ) ನಿಮಗೆ ಜೀವನ ಸುಖವನ್ನು ಅಲ್ಪವೇ ಹೊರತು ನೀಡಲಾಗದು”.
(17) ಹೇಳಿರಿ: “ಅಲ್ಲಾಹು ನಿಮಗೇನಾದರೂ ಹಾನಿಯನ್ನು ಮಾಡಲು ಇಚ್ಛಿಸಿದ್ದರೆ, ಅಥವಾ ಅವನು ನಿಮಗೆ ಯಾವುದಾದರೂ ಅನುಗ್ರಹವನ್ನು ಕರುಣಿಸಲು ಇಚ್ಛಿಸಿದ್ದರೆ, ಅಲ್ಲಾಹುವಿನಿಂದ ನಿಮ್ಮನ್ನು ರಕ್ಷಿಸುವವನು ಯಾರಿರುವನು? ಅಲ್ಲಾಹುವಿನ ಹೊರತು ಅವರು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು.
(18) ನಿಮ್ಮ ಪೈಕಿ ತಡೆಯೊಡ್ಡುವವರನ್ನು(897) ಮತ್ತು ತಮ್ಮ ಸಹೋದರರೊಂದಿಗೆ “ನಮ್ಮ ಕಡೆಗೆ ಬನ್ನಿರಿ” ಎಂದು ಹೇಳುವವರನ್ನು(898) ಅಲ್ಲಾಹು ಅರಿತಿರುವನು. ಅಲ್ಪವೇ ಹೊರತು ಅವರು ಯುದ್ಧಕ್ಕೆ ತೆರಳಲಾರರು.
897. ಪ್ರವಾದಿ(ಸ) ರವರಿಗೆ ಉತ್ತೇಜನ ನೀಡುತ್ತಿದ್ದವರನ್ನು ಹಿಂಜರಿಯುವಂತೆ ಮಾಡಲು ಯತ್ನಿಸಿದ ಕಪಟವಿಶ್ವಾಸಿಗಳ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ. 898. ಅಬ್ದುಲ್ಲಾಹ್ ಇಬ್ನ್ ಉಬೈನಂತಹ ಕಪಟ ವಿಶ್ವಾಸಿಗಳು ಖಂದಕ್ ರಣರಂಗದಿಂದ ಅನೇಕ ಮಂದಿಯನ್ನು ಮದೀನಕ್ಕೆ ಮರಳಲು ಕರೆ ನೀಡುತ್ತಾ ಪ್ರವಾದಿ(ಸ) ರವರಿಗಿದ್ದ ಉತ್ತೇಜನವನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದರು.
(19) ಅವರು ನಿಮಗೆದುರಾಗಿ ಜಿಪುಣತನ ತೋರಿಸುವವರಾಗಿರುವರು. (ಯುದ್ಧ) ಭೀತಿಯುಂಟಾದರೆ ಅವರು ತಮ್ಮನ್ನು ದಿಟ್ಟಿಸಿ ನೋಡುತ್ತಿರುವುದಾಗಿ ತಾವು ಕಾಣುವಿರಿ. ಸಾವಿನ ದವಡೆಯಲ್ಲಿರುವ ಒಬ್ಬ ವ್ಯಕ್ತಿಯಂತೆ ಅವರ ಕಣ್ಣುಗಳು ತಿರುಗುತ್ತಿರುವುವು. ಆದರೆ (ಯುದ್ಧ) ಭೀತಿಯು ನೀಗಿದರೆ ಸಂಪತ್ತಿನಲ್ಲಿರುವ ಅತ್ಯಾಸೆಯಿಂದ ಅವರು ಹರಿತವಾದ ನಾಲಗೆಗಳ ಮೂಲಕ ನಿಮ್ಮನ್ನು ಚುಚ್ಚಿ ಮಾತನಾಡುವರು.(899) ಅಂತಹವರು ವಿಶ್ವಾಸವನ್ನಿಟ್ಟಿಲ್ಲ. ಆದುದರಿಂದ ಅಲ್ಲಾಹು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು. ಅದು ಅಲ್ಲಾಹುವಿನ ಮಟ್ಟಿಗೆ ಅತಿಸುಲಭವಾಗಿದೆ.
899. ಯುದ್ಧವು ಮುಸ್ಲಿಮರಿಗೆ ಪೂರಕವಾಗಿ ಕೊನೆಗೊಂಡರೆ ತಕ್ಷಣ ಕಪಟವಿಶ್ವಾಸಿಗಳು ಸಮರಾರ್ಜಿತ ಸೊತ್ತಿನಲ್ಲಿ ಪಾಲನ್ನು ಪಡೆಯುವ ಬೇಡಿಕೆಯೊಂದಿಗೆ ಮುಂದೆ ಬರುತ್ತಿದ್ದರು. ಅವರಿಗೆ ಏನನ್ನೂ ಕೊಡದಿದ್ದರೆ ಅವರು ಪ್ರವಾದಿ(ಸ) ರವರನ್ನು ಮತ್ತು ಸಹಾಬಾಗಳನ್ನು ಆಕ್ಷೇಪಿಸುತ್ತಿದ್ದರು.
(20) ಮಿತ್ರಪಕ್ಷಗಳು ಹೊರಟುಹೋಗಿಲ್ಲವೆಂದು ಅವರು (ಕಪಟವಿಶ್ವಾಸಿಗಳು) ಭಾವಿಸುತ್ತಿರುವರು.(900) ಮಿತ್ರಪಕ್ಷಗಳು (ಮರಳಿ) ಬರುವುದಾದರೆ (ಯುದ್ಧದಲ್ಲಿ ಪಾಲ್ಗೊಳ್ಳದೆ) ನಿಮ್ಮ ಬಗ್ಗೆ ಮಾಹಿತಿ ಪಡೆಯುತ್ತಾ ಗ್ರಾಮೀಣ ಅರಬರೊಂದಿಗೆ ಮರುಭೂಮಿ ನಿವಾಸಿಗಳಾಗಿ ಕಳೆಯುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವರು (ಕಪಟವಿಶ್ವಾಸಿಗಳು) ಆಶಿಸುವರು.(901) ನಿಮ್ಮ ಜೊತೆಗಿದ್ದರೂ ಅವರು ಅಲ್ಪವೇ ಹೊರತು ಯುದ್ಧ ಮಾಡಲಾರರು.
900. ಮಿತ್ರಪಕ್ಷಗಳ ದೊಡ್ಡ ಸೈನ್ಯವು ಅಲ್ಲಾಹುವಿನ ಶಿಕ್ಷೆಯಿಂದಾಗಿ ಹಿಂದಿರುಗಿ ಓಡಿದ ಬಳಿಕವೂ ಅವರು ಹೋಗಿರಲಾರರು ಎಂದು ಕಪಟ ವಿಶ್ವಾಸಿಗಳು ಭಾವಿಸಿದ್ದರು. ಹೇಡಿಗಳಾದ ಅವರಿಗೆ ಅಷ್ಟು ದೊಡ್ಡ ಸೈನ್ಯವು ಅಲ್ಲಿಂದ ಕಾಲ್ಕಿತ್ತಿದೆ ಎಂಬುದನ್ನು ನಂಬಲಾಗಲಿಲ್ಲ. 901. ಯಾವುದಾದರೊಂದು ಗುಂಪಿನೊಂದಿಗೆ ಸೇರಿ ಯುದ್ಧ ಮಾಡುವ ಧೈರ್ಯ ಕಪಟವಿಶ್ವಾಸಿಗಳಿಗಿರಲಿಲ್ಲ. ಆದುದರಿಂದ ಮದೀನದ ಹೊರಗೆ ಮರುಭೂಮಿ ನಿವಾಸಿಗಳೊಂದಿಗೆ ವಾಸಿಸಿ, ಯುದ್ಧದ ಗತಿಯನ್ನು ವೀಕ್ಷಿಸಿ ಕೊನೆಗೆ ವಿಜೇತರಾಗುವವರೊಂದಿಗೆ ಸೇರಿಕೊಳ್ಳಲು ಅವರು ಹವಣಿಸಿದ್ದರು.
(21) ಖಂಡಿತವಾಗಿಯೂ ನಿಮಗೆ ಅಲ್ಲಾಹುವಿನ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ. ಅಂದರೆ ಅಲ್ಲಾಹುವನ್ನು ಮತ್ತು ಅಂತ್ಯದಿನವನ್ನು ನಿರೀಕ್ಷಿಸುವವರಿಗೆ ಹಾಗೂ ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರಿಗೆ.
(22) ಸತ್ಯವಿಶ್ವಾಸಿಗಳು ಮಿತ್ರಪಕ್ಷಗಳನ್ನು ಕಂಡಾಗ “ಇದು ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಮ್ಮೊಂದಿಗೆ ವಾಗ್ದಾನ ಮಾಡಿದ್ದಾಗಿದೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ಸತ್ಯವನ್ನೇ ನುಡಿದಿರುವರು” ಎಂದು ಹೇಳಿದರು. ಅದು ಅವರಿಗೆ ಅಧಿಕಗೊಳಿಸಿದ್ದು ವಿಶ್ವಾಸ ಮತ್ತು ಶರಣಾಗತಿಯನ್ನು ಮಾತ್ರವಾಗಿತ್ತು.
(23) ಸತ್ಯವಿಶ್ವಾಸಿಗಳ ಪೈಕಿ ಕೆಲವು ಪುರುಷರಿರುವರು. ಅವರು ಅಲ್ಲಾಹುವಿನೊಂದಿಗೆ ಯಾವ ವಿಷಯದಲ್ಲಿ ಕರಾರು ಮಾಡಿರುವರೋ ಅದರಲ್ಲಿ ಅವರು ಸತ್ಯಸಂಧತೆಯನ್ನು ಪಾಲಿಸಿದರು. ಅವರ ಪೈಕಿ ಕೆಲವರು (ಹುತಾತ್ಮರಾಗುವ ಮೂಲಕ) ತಮ್ಮ ಪ್ರತಿಜ್ಞೆಯನ್ನು ನೆರವೇರಿಸಿದರು. ಅವರಲ್ಲಿ ಕೆಲವರು (ಅದನ್ನು) ನಿರೀಕ್ಷಿಸುತ್ತಿರುವರು. ಅವರು (ಕರಾರಿಗೆ) ಯಾವುದೇ ಬದಲಾವಣೆಯನ್ನೂ ಮಾಡಲಿಲ್ಲ.
(24) ಅಲ್ಲಾಹು ಸತ್ಯಸಂಧರಿಗೆ ಅವರ ಸತ್ಯಸಂಧತೆಗಿರುವ ಪ್ರತಿಫಲವನ್ನು ನೀಡುವ ಸಲುವಾಗಿ. ಅವನು ಇಚ್ಛಿಸುವುದಾದರೆ ಕಪಟವಿಶ್ವಾಸಿಗಳನ್ನು ಶಿಕ್ಷಿಸುವ ಸಲುವಾಗಿ ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವ ಸಲುವಾಗಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
(25) ಅಲ್ಲಾಹು ಸತ್ಯನಿಷೇಧಿಗಳನ್ನು ಅವರ ಕ್ರೋಧದೊಂದಿಗೇ ಮರಳಿ ಕಳುಹಿಸಿದನು. ಅವರು ಯಾವುದೇ ಒಳಿತನ್ನೂ ಪಡೆಯಲಿಲ್ಲ. ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಯುದ್ಧದ ಅಗತ್ಯವಿಲ್ಲದಂತೆ ಮಾಡಿದನು. ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.
(26) ಗ್ರಂಥದವರ ಪೈಕಿ ಅವರಿಗೆ (ಸತ್ಯನಿಷೇಧಿಗಳಿಗೆ) ಬೆಂಬಲ ನೀಡಿದವರನ್ನು ಅವನು ಅವರ ಕೋಟೆಗಳಿಂದ ಕೆಳಗಿಳಿಸಿದನು ಮತ್ತು ಅವರ ಹೃದಯಗಳಲ್ಲಿ ಭಯವನ್ನು ಬಿತ್ತಿದನು.(902) ಅವರಲ್ಲಿ ಒಂದು ಗುಂಪನ್ನು ನೀವು ವಧಿಸುತ್ತಿದ್ದೀರಿ ಮತ್ತು ಇನ್ನೊಂದು ಗುಂಪನ್ನು ಸೆರೆಹಿಡಿಯುತ್ತಿದ್ದೀರಿ.
902. ಮದೀನ ನಿವಾಸಿಗಳ ಮೇಲೆ ಬಾಹ್ಯ ಆಕ್ರಮಣವುಂಟಾದರೆ ಮುಸ್ಲಿಮರೊಂದಿಗೆ ಸೇರಿ ಹೋರಾಡುವೆವೆಂದು ಮದೀನದ ಯಹೂದ ಗೋತ್ರಗಳ ಪೈಕಿ ಬನೂ ಕುರೈಝಾ ಗೋತ್ರದವರು ಒಪ್ಪಂದ ಮಾಡಿದ್ದರು. ಆದರೆ ಮಿತ್ರಪಕ್ಷಗಳ ಸೈನ್ಯವು ಮದೀನವನ್ನು ಸುತ್ತುವರಿದಾಗ ಅವರು ಶತ್ರುಗಳ ಪರ ವಹಿಸಿದರು. ವಂಚಕರಾದ ಯಹೂದರಿಗೆ ಮದೀನದಲ್ಲಿರಲು ಅವಕಾಶ ನೀಡಿದರೆ ಅವರು ಮುಸ್ಲಿಮರ ಸುರಕ್ಷತೆಗೆ ಶಾಶ್ವತ ಬೆದರಿಕೆಯಾಗುವರು ಎಂಬುದನ್ನು ಮನಗಂಡ ಪ್ರವಾದಿ(ಸ) ರವರು ಮತ್ತು ಸಹಾಬಿಗಳು ಖಂದಕ್ ಯುದ್ಧದ ಬಳಿಕ ಅವರ ವಿರುದ್ಧ ಹೋರಾಡಲು ತೀರ್ಮಾನಿಸಿದರು. ಯಹೂದಿಗಳು ಮದೀನದ ಈಶಾನ್ಯ ದಿಕ್ಕಿನಲ್ಲಿದ್ದ ಅವರ ಕೋಟೆಗಳಲ್ಲಿ ಆಶ್ರಯ ಪಡೆದರು. ಮುಸ್ಲಿಮರು 25 ದಿನಗಳ ಕಾಲ ಅವರ ಕೋಟೆಗೆ ದಿಗ್ಬಂಧನ ಹಾಕಿದರು. ಕೊನೆಗೆ ಯಹೂದಿಗಳು ತಮ್ಮ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಹಕ್ಕನ್ನು ಸಅ್‌ದ್ ಇಬ್ನ್ ಮುಆದ್‍ಗೆ ನೀಡಿ ಶರಣಾದರು. ಯಹೂದ ನಿಯಮ ಪ್ರಕಾರ ಅವರ ಪೈಕಿ ಹಿರಿಯ ಗಂಡಸರನ್ನು ವಧಿಸಿ, ಸ್ತ್ರೀಯರನ್ನು ಮತ್ತು ಮಕ್ಕಳನ್ನು ಯುದ್ಧಕೈದಿಗಳನ್ನಾಗಿ ಸೆರೆಹಿಡಿಯಲು ಸಅ್‌ದ್ ತೀರ್ಮಾನಿಸಿದರು.
(27) ಅವರ ಜಮೀನುಗಳನ್ನು, ವಸತಿಗಳನ್ನು ಮತ್ತು ಸೊತ್ತುಗಳನ್ನು ಹಾಗೂ (ಮುಂಚೆ) ನೀವು ಕಾಲೂರಿರದ ಪ್ರದೇಶಗಳನ್ನು ಅವನು ನಿಮಗೆ ಉತ್ತರಾಧಿಕಾರವಾಗಿ ನೀಡಿದನು.(903) ಅಲ್ಲಾಹುವಿಗೆ ಸಕಲ ವಿಷಯಗಳಲ್ಲೂ ಸಾಮರ್ಥ್ಯವಿದೆ.
903. ಮದೀನದ ಈಶಾನ್ಯ ದಿಕ್ಕಿನಲ್ಲಿ ಸರಿಸುಮಾರು ನೂರು ಮೈಲು ದೂರದಲ್ಲಿ ಖೈಬರ್ ಎಂಬ ಸ್ಥಳದಲ್ಲಿ ಯಹೂದರಿಗೆ ಎಂಟು ಕೋಟೆಗಳಿದ್ದವು. ಖೈಬರನ್ನು ಕೇಂದ್ರವಾಗಿಟ್ಟುಕೊಂಡು ಯಹೂದಿಗಳು ಮುಸ್ಲಿಮರ ವಿರುದ್ಧ ಒಳಸಂಚುಗಳನ್ನು ರೂಪಿಸುತ್ತಿದ್ದರು. ಹಿಜ್ರಾ 7ನೇ ವರ್ಷದಲ್ಲಿ ಪ್ರವಾದಿ(ಸ) ರವರು ಅಲ್ಲಿಗೆ ಒಂದು ಸೈನ್ಯದೊಂದಿಗೆ ಹೊರಟರು ಮತ್ತು ಖೈಬರನ್ನು ವಶಪಡಿಸಿದರು. 27ನೇ ಸೂಕ್ತಿಯು ಈ ಘಟನೆಯನ್ನು ಪರಾಮರ್ಶಿಸುತ್ತಿದೆಯೆಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(28) ಓ ಪ್ರವಾದಿಯವರೇ! ತಮ್ಮ ಪತ್ನಿಯರೊಂದಿಗೆ ಹೇಳಿರಿ: “ನೀವು ಐಹಿಕ ಬದುಕನ್ನು ಮತ್ತು ಅದರ ಶೃಂಗಾರವನ್ನು ಬಯಸುವುದಾದರೆ ಬನ್ನಿರಿ! ನಾನು ನಿಮಗೆ ಜೀವನಾಂಶವನ್ನು ನೀಡುವೆನು ಮತ್ತು ಸುಂದರವಾದ ರೀತಿಯಲ್ಲಿ ವಿಚ್ಛೇದನೆ ಮಾಡುವೆನು.(904)
904. ಪ್ರವಾದಿ(ಸ) ರವರ ಮಡದಿಯರು ಸತ್ಯವಿಶ್ವಾಸಿಗಳ ಮಾತೆಯರಾಗಿದ್ದಾರೆ. ಅವರಿಗೆ ಅನೇಕ ಉನ್ನತ ಹೊಣೆಗಾರಿಕೆಗಳಿವೆ. ಇತರ ಸ್ತ್ರೀಯರಂತೆ ಲೌಕಿಕ ಆಡಂಬರಗಳು ಅವರ ಉದ್ದೇಶವಾಗಿರಬಾರದು. ಲೌಕಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವವರು ಆ ಪದವಿಯಲ್ಲಿ ಮುಂದುವರಿಯಲು ಅರ್ಹರಲ್ಲವೆಂದು ಅಲ್ಲಾಹು ಪ್ರವಾದಿ(ಸ) ರವರ ಮೂಲಕ ತಿಳಿಸುತ್ತಾನೆ.
(29) ನೀವು ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಪರಲೋಕ ಭವನವನ್ನು ಬಯಸುವುದಾದರೆ ನಿಮ್ಮ ಪೈಕಿ ಸತ್ಕರ್ಮಿಗಳಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ಸಿದ್ಧಗೊಳಿಸಿರುವನು.
(30) ಓ ಪ್ರವಾದಿಪತ್ನಿಯರೇ! ನಿಮ್ಮ ಪೈಕಿ ಯಾರಾದರೂ ಸ್ಪಷ್ಟವಾದ ನೀಚಕೃತ್ಯವನ್ನು ಮಾಡಿದರೆ ಅವರಿಗೆ ಶಿಕ್ಷೆಯನ್ನು ದುಪ್ಪಟ್ಟು ಹೆಚ್ಚಿಸಲಾಗುವುದು. ಇದು ಅಲ್ಲಾಹುವಿನ ಮಟ್ಟಿಗೆ ಅತಿ ಸುಲಭವಾದುದಾಗಿದೆ.
(31) ನಿಮ್ಮ ಪೈಕಿ ಯಾರಾದರೂ ಅಲ್ಲಾಹುವಿಗೆ ಮತ್ತು ಅವನ ಸಂದೇಶವಾಹಕರಿಗೆ ವಿನಮ್ರತೆ ತೋರುವುದಾದರೆ ಮತ್ತು ಸತ್ಕರ್ಮವೆಸಗುವುದಾದರೆ ಆಕೆಗೆ ನಾವು ಆಕೆಯ ಪ್ರತಿಫಲವನ್ನು ಇಮ್ಮಡಿಯಾಗಿ ನೀಡುವೆವು. ನಾವು ಆಕೆಗೆ ಗೌರವಾನ್ವಿತ ಅನ್ನಾಧಾರವನ್ನು ಸಿದ್ಧಗೊಳಿಸಿರುವೆವು.
(32) ಓ ಪ್ರವಾದಿ ಪತ್ನಿಯರೇ! ನೀವು ಸ್ತ್ರೀಯರ ಪೈಕಿ ಇತರರಂತಲ್ಲ. ನೀವು ಭಯಭಕ್ತಿ ಪಾಲಿಸುವವರಾಗಿದ್ದರೆ (ಅನ್ಯರೊಂದಿಗೆ) ನಯವಾದ ಧ್ವನಿಯಲ್ಲಿ ಮಾತನಾಡದಿರಿ. ಆಗ ಹೃದಯದಲ್ಲಿ ರೋಗವಿರುವವನಿಗೆ ಆಸೆಯುಂಟಾಗಬಹುದು.(905) ನೀವು ನ್ಯಾಯೋಚಿತವಾದ ಮಾತುಗಳನ್ನಾಡಿರಿ.
905. ಪ್ರವಾದಿಪತ್ನಿಯರು ಅನ್ಯಪುರುಷರೊಂದಿಗೆ ಮಾತನಾಡುವಾಗ ಸಭ್ಯತೆಯ ಅತ್ಯುನ್ನತ ಮಾದರಿಗಳಾಗಿ ಮಾರ್ಪಡಬೇಕೆಂದು ಅಲ್ಲಾಹು ಉಪದೇಶ ಮಾಡುತ್ತಿರುವನು. ಮನಸ್ಸುಗಳಲ್ಲಿ ಆಸೆಯನ್ನು ಹುಟ್ಟಿಸುವ ಸ್ನೇಹತುಂಬಿದ ಮಾತುಗಳನ್ನು ವರ್ಜಿಸಬೇಕೆಂದೂ ಅವರಿಗೆ ಉಪದೇಶ ಮಾಡುತ್ತಿರುವನು. ಮುಸ್ಲಿಮ್ ಸ್ತ್ರೀಯರಿಗೆ ಅವರು ಮಾದರಿಯಾಗಿದ್ದಾರೆ.
(33) ನೀವು ನಿಮ್ಮ ಮನೆಗಳಲ್ಲಿ ತಂಗಿರಿ. ಗತ ಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತಿರುವ ಸೌಂದರ್ಯ ಪ್ರದರ್ಶನವನ್ನು ನೀವು ಮಾಡದಿರಿ. ನೀವು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ. ಓ (ಪ್ರವಾದಿ) ಮನೆಯವರೇ! ಅಲ್ಲಾಹು ಬಯಸುತ್ತಿರುವುದು ನಿಮ್ಮಿಂದ ಮಾಲಿನ್ಯವನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಮಾತ್ರವಾಗಿದೆ.
(34) ನಿಮ್ಮ ಮನೆಗಳಲ್ಲಿ ಓದಿಕೊಡಲಾಗುವ ಅಲ್ಲಾಹುವಿನ ಸೂಕ್ತಿಗಳನ್ನು ಮತ್ತು ತತ್ವಜ್ಞಾನವನ್ನು ಸ್ಮರಿಸಿರಿ. ಖಂಡಿತವಾಗಿಯೂ ಅಲ್ಲಾಹು ಸೂಕ್ಷ್ಮಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವನು.
(35) (ಅಲ್ಲಾಹುವಿಗೆ) ಶರಣಾಗಿರುವ ಪುರುಷರು ಮತ್ತು ಸ್ತ್ರೀಯರು, ವಿಶ್ವಾಸಿಗಳಾಗಿರುವ ಪುರುಷರು ಮತ್ತು ಸ್ತ್ರೀಯರು, ಭಯಭಕ್ತಿಯುಳ್ಳ ಪುರುಷರು ಮತ್ತು ಸ್ತ್ರೀಯರು, ಸತ್ಯಸಂಧರಾಗಿರುವ ಪುರುಷರು ಮತ್ತು ಸ್ತ್ರೀ ಯರು, ತಾಳ್ಮೆ ವಹಿಸುವ ಪುರುಷರು ಮತ್ತು ಸ್ತ್ರೀಯರು, ವಿನಮ್ರರಾಗಿರುವ ಪುರುಷರು ಮತ್ತು ಸ್ತ್ರೀಯರು, ದಾನಧರ್ಮ ಮಾಡುವ ಪುರುಷರು ಮತ್ತು ಸ್ತ್ರೀಯರು, ಉಪವಾಸವನ್ನಾಚರಿಸುವ ಪುರುಷರು ಮತ್ತು ಸ್ತ್ರೀಯರು, ತಮ್ಮ ಗುಪ್ತಾಂಗಗಳನ್ನು ಸಂರಕ್ಷಿಸುವ ಪುರುಷರು ಮತ್ತು ಸ್ತ್ರೀಯರು, ಅಲ್ಲಾಹುವನ್ನು ಹೇರಳವಾಗಿ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು. ಇವರಿಗೆ ಅಲ್ಲಾಹು ಪಾಪಮುಕ್ತಿಯನ್ನು ಮತ್ತು ಮಹಾ ಪ್ರತಿಫಲವನ್ನು ಸಿದ್ಧಗೊಳಿಸಿರುವನು.
(36) ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದ ಬಳಿಕ ಸತ್ಯವಿಶ್ವಾಸಿಗಾಗಲಿ, ಸತ್ಯವಿಶ್ವಾಸಿನಿಗಾಗಲಿ ತಮ್ಮ ವಿಷಯಕ್ಕೆ ಸಂಬಂಧಿಸಿ ಮುಕ್ತವಾದ ಅಭಿಪ್ರಾಯವಿರುವುದು ಯುಕ್ತವಾದುದಲ್ಲ. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುವನೋ ಅವನು ಸ್ಪಷ್ಟವಾದ ವಿಧದಲ್ಲಿ ಪಥಭ್ರಷ್ಟನಾಗಿರುವನು.
(37) “ನಿನ್ನ ಪತ್ನಿಯನ್ನು ನಿನ್ನ ಬಳಿಯೇ ಇರಿಸು ಮತ್ತು ಅಲ್ಲಾಹುವನ್ನು ಭಯಪಡು” ಎಂದು ಅಲ್ಲಾಹು ಅನುಗ್ರಹ ನೀಡಿರುವ ಮತ್ತು ತಾವು ಅನುಗ್ರಹ ನೀಡಿರುವ ಒಬ್ಬ ವ್ಯಕ್ತಿಯೊಂದಿಗೆ(906) ತಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಬಹಿರಂಗಪಡಿಸಲು ಮುಂದಾಗಿರುವ ವಿಷಯವನ್ನು ತಾವು ತಮ್ಮ ಹೃದಯದಲ್ಲಿ ಮರೆಮಾಚಿದ್ದೀರಿ ಮತ್ತು ತಾವು ಜನರನ್ನು ಭಯಪಟ್ಟಿರಿ.(907) ಆದರೆ ತಾವು ಭಯಪಡಲು ಹೆಚ್ಚು ಅರ್ಹತೆಯುಳ್ಳವನು ಅಲ್ಲಾಹುವಾಗಿರುವನು. ತರುವಾಯ ಝೈದ್ ಆಕೆಯಿಂದ ಅಗತ್ಯವನ್ನು ಪೂರೈಸಿದಾಗ(908) ನಾವು ಆಕೆಯನ್ನು ತಮಗೆ ಪತ್ನಿಯನ್ನಾಗಿ ಮಾಡಿದೆವು. ಇದು ತಮ್ಮ ದತ್ತುಪುತ್ರರು ಅವರ ಪತ್ನಿಯರಿಂದ ಅಗತ್ಯವನ್ನು ಪೂರೈಸಿದ ಬಳಿಕ ಅವರನ್ನು ವಿವಾಹವಾಗುವ ವಿಷಯದಲ್ಲಿ ಸತ್ಯವಿಶ್ವಾಸಿಗಳಿಗೆ ಯಾವುದೇ ಪ್ರಯಾಸವೂ ಉಂಟಾಗದಿರುವ ಸಲುವಾಗಿದೆ.(909) ಅಲ್ಲಾಹುವಿನ ಆಜ್ಞೆಯು ಜಾರಿಗೊಳ್ಳುವಂತದ್ದೇ ಆಗಿದೆ.
906. ಝೈದ್ ಇಬ್ನ್ ಹಾರಿಸ(ರ) ರವರು ಪ್ರವಾದಿ(ಸ) ರವರ ಗುಲಾಮರಾಗಿದ್ದರು. ತರುವಾಯ ಪ್ರವಾದಿ(ಸ) ರವರು ಅವರನ್ನು ವಿಮೋಚನೆಗೊಳಿಸಿ ತಮ್ಮ ದತ್ತುಪುತ್ರನನ್ನಾಗಿ ಮಾಡಿಕೊಂಡರು. ತನ್ನ ಸಂಬಂಧಿಯಾದ ಜಹ್‍ಶ್‍ನ ಮಗಳು ಝೈನಬ್(ರ) ರನ್ನು ಪ್ರವಾದಿ(ಸ) ರವರು ತಮ್ಮ ದತ್ತುಪುತ್ರನಿಗೆ ವಿವಾಹಮಾಡಿಕೊಟ್ಟರು. ಸುಂದರಿಯೂ ಕುಲೀನೆಯೂ ಆಗಿದ್ದ ಝೈನಬ್(ರ) ರನ್ನು ಮುಂಚೆ ಗುಲಾಮರಾಗಿದ್ದ ಮತ್ತು ಸೌಂದರ್ಯವಿಲ್ಲದ ಝೈದ್(ರ) ರಿಗೆ ವಿವಾಹ ಮಾಡಿಕೊಡುವುದರ ಮೂಲಕ ಅವರು ಇಸ್ಲಾಮಿನಲ್ಲಿರುವ ಸಮಾನತೆಯನ್ನು ತೋರಿಸಿಕೊಟ್ಟರು. ಆದರೆ ದಂಪತಿಗಳಿಗೆ ಹೆಚ್ಚು ಕಾಲ ಹೊಂದಾಣಿಕೆಯೊಂದಿಗೆ ಬಾಳಲು ಸಾಧ್ಯವಾಗಲಿಲ್ಲ. ಝೈನಬ್(ರ) ರವರ ಸೌಂದರ್ಯ ಮತ್ತು ಉನ್ನತ ಮನೆತನವು ದಾಂಪತ್ಯ ಜೀವನದ ಯಶಸ್ಸಿಗೆ ಅಡ್ಡಿಯಾಯಿತು. ಝೈನಬ್(ರ) ರೊಂದಿಗೆ ನೆಮ್ಮದಿಯ ದಾಂಪತ್ಯವನ್ನು ಮುಂದುವರಿಸಲು ಸಾಧ್ಯವಿಲ್ಲವೆಂದು ಮನಗಂಡ ಝೈದ್(ರ) ಪ್ರವಾದಿ(ಸ) ರವರ ಬಳಿಗೆ ಬಂದು ವಿಚ್ಛೇದನೆ ಮಾಡಲು ಅನುಮತಿಕೊಡಬೇಕೆಂದು ವಿನಂತಿಸಿದರು. ಆದರೆ ಸ್ವತಃ ತಾನೇ ಮುತುವರ್ಜಿ ವಹಿಸಿ ಮಾಡಿಕೊಟ್ಟ ಈ ವಿವಾಹವು ವಿಚ್ಛೇದನೆಯಲ್ಲಿ ಕೊನೆಗೊಳ್ಳುವುದು ಪ್ರವಾದಿ(ಸ) ರವರಿಗೆ ಇಷ್ಟವಿರಲಿಲ್ಲ. ಆದುದರಿಂದ ದಾಂಪತ್ಯವನ್ನು ಮುಂದುವರಿಸಬೇಕೆಂದು ಅವರು ಝೈದ್‍ರೊಂದಿಗೆ ವಿನಂತಿಸಿದರು.
907. ಪ್ರವಾದಿ(ಸ) ರವರು ಮರೆಮಾಚಿದ ವಿಷಯ ಯಾವುದು? ಕುರ್‌ಆನ್ ವ್ಯಾಖ್ಯಾನಕಾರರು ಈ ವಿಷಯದಲ್ಲಿ ಏಕಾಭಿಪ್ರಾಯ ಹೊಂದಿಲ್ಲ. ವಿಚ್ಛೇದನೆಯು ಅನಿವಾರ್ಯವಾಗುವಷ್ಟರ ಮಟ್ಟಿಗೆ ಝೈದ್-ಝೈನಬ್‍ರವರ ದಾಂಪತ್ಯವು ಜರ್ಜರಿತವಾಗಿದೆ ಎಂಬುದನ್ನು ಪ್ರವಾದಿ(ಸ) ರವರು ಜನರಿಂದ ಸ್ವಲ್ಪ ಕಾಲ ಮರೆಮಾಚಿದರು ಎಂಬುದು ಒಂದನೆ ವ್ಯಾಖ್ಯಾನವಾಗಿದೆ. ಝೈದ್(ರ) ರವರು ಝೈನಬ್(ರ) ರನ್ನು ವಿಚ್ಛೇದನೆ ಮಾಡುವರು, ತರುವಾಯ ಝೈನಬ್(ರ) ರವರು ಪ್ರವಾದಿ(ಸ) ರವರ ಮಡದಿಯಾಗುವರೆಂದು ಅಲ್ಲಾಹು ಪ್ರವಾದಿ(ಸ) ರಿಗೆ ತಿಳಿಸಿದ್ದನು. ಅದನ್ನು ಪ್ರವಾದಿ(ಸ) ರವರು ತಮ್ಮ ಮನದಲ್ಲೇ ಬಚ್ಚಿಟ್ಟರು ಎಂಬುದು ಎರಡನೆ ವ್ಯಾಖ್ಯಾನ. ಇದಲ್ಲದೆ ಇನ್ನಿತರ ವ್ಯಾಖ್ಯಾನಗಳೂ ಇವೆ.
908. ‘ಲಮ್ಮಾ ಕದಾ ವತರನ್’ ಎಂಬ ವಾಕ್ಯಕ್ಕೆ ಅಗತ್ಯವನ್ನು ಪೂರೈಸಿಕೊಂಡಾಗ ಅಥವಾ ಅಗತ್ಯವಿಲ್ಲದೆ ಹೋದಾಗ ಎಂಬ ಅರ್ಥಗಳಿವೆ. ಝೈದ್(ರ) ರವರು ವಿಚ್ಛೇದನೆ ಮಾಡಿ ಇದ್ದಃ ಮುಗಿದ ಬಳಿಕ ಪ್ರವಾದಿ(ಸ) ರವರು ಝೈನಬ್(ರ) ರವರನ್ನು ವಿವಾಹವಾದರು.
909. ದತ್ತುಪುತ್ರರು ವಿಚ್ಛೇದನೆ ಮಾಡಿದ ಸ್ತ್ರೀಯರನ್ನು ಸಾಕು ತಂದೆಯರು ವಿವಾಹವಾಗಬಾರದು ಎಂಬುದು ಅರಬರ ಭಾವನೆಯಾಗಿತ್ತು. ರಕ್ತಸಂಬಂಧ ಅಥವಾ ಸ್ತನಪಾನ ಸಂಬಂಧ ಆಧಾರದಲ್ಲಿ ಮಾತ್ರ ವಿವಾಹ ನಿಷಿದ್ಧವಾಗುತ್ತದೆಯೆಂದು ಘೋಷಿಸುವ ಮೂಲಕ ಇಸ್ಲಾಮ್ ಈ ತಪ್ಪುಭಾವನೆಯನ್ನು ತಿದ್ದಿತು.
(38) ಅಲ್ಲಾಹು ತನಗೆ ನಿಶ್ಚಯಿಸಿಕೊಟ್ಟಿರುವ ವಿಷಯದಲ್ಲಿ ಪ್ರವಾದಿಯವರಿಗೆ ಯಾವುದೇ ವ್ಯಥೆಯೂ ಉಂಟಾಗಬೇಕಾಗಿಲ್ಲ.(910) ಮುಂಚೆ ಗತಿಸಿದವರ ಮೇಲೆ ಅಲ್ಲಾಹು ಜರುಗಿಸಿದ ಕ್ರಮವಾಗಿದೆ. ಅಲ್ಲಾಹುವಿನ ಆಜ್ಞೆಯು ಖಚಿತವಾಗಿರುವ ಒಂದು ವಿಧಿಯಾಗಿದೆ.
910. ಅಲ್ಲಾಹು ವಿಧಿಸಿದ್ದನ್ನು ಯಾವುದೇ ಮನಪ್ರಯಾಸವಿಲ್ಲದೆ ಅಂಗೀಕರಿಸುವುದು ಪ್ರವಾದಿಯ ಬಾಧ್ಯತೆಯಾಗಿದೆ. ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಒಬ್ಬ ಪ್ರವಾದಿಯ ಮಟ್ಟಿಗೆ ಸಮಸ್ಯೆಯಾಗಬಾರದು. ಅಲ್ಲಾಹು ತೀರ್ಮಾನ ಕೈಗೊಳ್ಳುವುದು ಸಮಗ್ರ ಜ್ಞಾನದ ಆಧಾರದಲ್ಲಾಗಿದೆ. ಜನರ ಪ್ರತಿಕ್ರಿಯೆಗೆ ನಿಮಿತ್ತವಾಗಿರುವುದು ಅವರ ಸೀಮಿತ ಜ್ಞಾನವಾಗಿದೆ. ಅದು ಯಾವತ್ತೂ ಪ್ರಬುದ್ಧವಾಗಿರಲಾರದು.
(39) ಅಂದರೆ ಅಲ್ಲಾಹುವಿನ ಸಂದೇಶಗಳನ್ನು ತಲುಪಿಸುವ, ಅವನನ್ನು ಭಯಪಡುವ ಮತ್ತು ಅಲ್ಲಾಹುವಿನ ಹೊರತು ಇತರ ಯಾರನ್ನೂ ಭಯಪಡದವರ ವಿಷಯದಲ್ಲಿರುವ (ಅಲ್ಲಾಹುವಿನ ಕ್ರಮ). ವಿಚಾರಣೆ ಮಾಡುವವನಾಗಿ ಅಲ್ಲಾಹು ಸಾಕು.
(40) ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ.(911) ಆದರೆ ಅವರು ಅಲ್ಲಾಹುವಿನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಕಟ್ಟಕಡೆಯವರಾಗಿರುವರು.(912) ಅಲ್ಲಾಹು ಎಲ್ಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.
911. ಝೈದ್(ರ) ರವರು ವಿಚ್ಛೇದಿಸಿದ ಝೈನಬ್(ರ) ರವರನ್ನು ಪ್ರವಾದಿ(ಸ) ರವರು ವಿವಾಹವಾದಾಗ ಅನಗತ್ಯ ವಿಮರ್ಶೆಗಳು ಉದ್ಭವವಾದವು. ಮುಹಮ್ಮದ್ ತನ್ನ ಸೊಸೆಯನ್ನೇ ವಿವಾಹವಾಗಿದ್ದಾರೆ ಎಂದು ಶತ್ರುಗಳು ಅಪಪ್ರಚಾರ ಮಾಡಿದರು. ಪ್ರವಾದಿ(ಸ) ರವರು ಯಾರಿಗೆ ಜನ್ಮ ನೀಡಿರುವರೋ ಅವರು ಮಾತ್ರ ಅವರಿಗೆ ಪುತ್ರರಾಗುವರು. ಆದುದರಿಂದ ಅವರಲ್ಲಿದ್ದ ಪುರುಷರ ಪೈಕಿ ಯಾರೊಬ್ಬರಿಗೂ ಪ್ರವಾದಿ(ಸ) ರವರು ಜನ್ಮ ನೀಡಿಲ್ಲವೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ. 912. ‘ಖಾತಮ್’ ಎಂದರೆ ಮುದ್ರೆ ಎಂದರ್ಥ. ಒಂದು ಪತ್ರವನ್ನು ಕೊನೆಗೊಳಿಸುವಾಗ ಅದಕ್ಕೆ ಮುದ್ರೆಯೊತ್ತಲಾಗುತ್ತದೆ. ಆದುದರಿಂದಲೇ ‘ಖತ್ಮ್’ ಎಂಬ ಕ್ರಿಯಾಧಾತುವಿಗೆ ಮುದ್ರೆಯೊತ್ತುವುದು ಮತ್ತು ಸಮಾಪ್ತಿ ಎಂಬ ಅರ್ಥಗಳಿವೆ. ‘ಖಾತಮುನ್ನಬಿಯ್ಯೀನ್’ ಎಂಬ ಪದಕ್ಕೆ ಪ್ರವಾದಿತ್ವಕ್ಕೆ ಮುದ್ರೆಯೊತ್ತಿದ ಅಥವಾ ಪ್ರವಾದಿತ್ವವನ್ನು ಸಮಾಪ್ತಿಗೊಳಿಸಿದ ವ್ಯಕ್ತಿ ಎಂದು ಸರ್ವ ಅಧಿಕೃತ ಕುರ್‌ಆನ್ ವ್ಯಾಖ್ಯಾನಕಾರರೂ ಅರ್ಥ ನೀಡಿದ್ದಾರೆ.
(41) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಹೇರಳವಾಗಿ ಸ್ಮರಿಸಿರಿ.
(42) ಬೆಳಗ್ಗೆ ಮತ್ತು ಸಂಜೆ ಅವನನ್ನು ಕೊಂಡಾಡುತ್ತಿರಿ.
(43) ಅವನು ನಿಮ್ಮ ಮೇಲೆ ಅನುಗ್ರಹಗಳನ್ನು ಸುರಿಸುವವನಾಗಿರುವನು ಮತ್ತು ಅವನ ಮಲಕ್‍ಗಳು (ನಿಮಗಾಗಿ ಪ್ರಾರ್ಥಿಸುವರು). ಅದು ನಿಮ್ಮನ್ನು ಅಂಧಕಾರಗಳಿಂದ ಪ್ರಕಾಶದೆಡೆಗೆ ಹೊರತರುವ ಸಲುವಾಗಿ. ಅವನು ಸತ್ಯವಿಶ್ವಾಸಿಗಳೊಂದಿಗೆ ಅತ್ಯಧಿಕ ಕರುಣೆಯುಳ್ಳವನಾಗಿರುವನು.
(44) ಅವರು ಅವನನ್ನು ಭೇಟಿಯಾಗುವ ದಿನ ಅವರಿಗಿರುವ ಅಭಿವಂದನೆಯು ಸಲಾಮ್ ಎಂದಾಗಿರುವುದು. ಅವನು ಅವರಿಗೆ ಗೌರವಾನ್ವಿತ ಪ್ರತಿಫಲವನ್ನು ಸಿದ್ಧಗೊಳಿಸಿರುವನು.
(45) ಓ ಪ್ರವಾದಿಯವರೇ! ಖಂಡಿತವಾಗಿಯೂ ತಮ್ಮನ್ನು ನಾವು ಒಬ್ಬ ಸಾಕ್ಷಿಯನ್ನಾಗಿ ಮತ್ತು ಶುಭವಾರ್ತೆ ತಿಳಿಸುವವರನ್ನಾಗಿ ಹಾಗೂ ಮುನ್ನೆಚ್ಚರಿಕೆ ನೀಡುವವರನ್ನಾಗಿ ಕಳುಹಿಸಿರುವೆವು.
(46) ಅಲ್ಲಾಹುವಿನ ಅನುಮತಿ ಪ್ರಕಾರ ಅವನೆಡೆಗೆ ಆಹ್ವಾನಿಸುವವರನ್ನಾಗಿ ಮತ್ತು ಪ್ರಕಾಶ ಬೀರುವ ಒಂದು ದೀಪವನ್ನಾಗಿಯೂ (ಕಳುಹಿಸಿರುವೆವು).
(47) ಸತ್ಯವಿಶ್ವಾಸಿಗಳಿಗೆ ಅಲ್ಲಾಹುವಿನ ಕಡೆಯಿಂದ ಮಹಾ ಔದಾರ್ಯವು ಲಭ್ಯವಾಗಲಿದೆಯೆಂಬ ಶುಭವಾರ್ತೆಯನ್ನು ಅವರಿಗೆ ತಿಳಿಸಿರಿ.
(48) ಸತ್ಯನಿಷೇಧಿಗಳನ್ನು ಮತ್ತು ಕಪಟವಿಶ್ವಾಸಿಗಳನ್ನು ತಾವು ಅನುಸರಿಸದಿರಿ. ಅವರ ಕಿರುಕುಳಗಳನ್ನು ಕಡೆಗಣಿಸಿರಿ ಮತ್ತು ಅಲ್ಲಾಹುವಿನ ಮೇಲೆ ಭರವಸೆಯಿಡಿರಿ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
(49) ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿನಿಯರನ್ನು ವಿವಾಹವಾಗಿ, ತರುವಾಯ ಅವರನ್ನು ಸ್ಪರ್ಶಿಸುವುದಕ್ಕೆ ಮುಂಚೆಯೇ ವಿಚ್ಛೇದಿಸುವುದಾದರೆ ನೀವು ಎಣಿಕೆ ಮಾಡುವ ಇದ್ದಃವನ್ನು(913) ಆಚರಿಸಬೇಕಾದ ಹೊಣೆಯು ಅವರಿಗೆ ನಿಮ್ಮೊಂದಿಗಿಲ್ಲ. ನೀವು ಅವರಿಗೆ ಮತಾಅ್(914) ನೀಡಿರಿ ಮತ್ತು ಸುಂದರವಾದ ರೀತಿಯಲ್ಲಿ ಅವರನ್ನು ಬಿಡುಗಡೆ ಮಾಡಿರಿ.
913. ವಿವಾಹ ವಿಚ್ಛೇದಿತೆಯು ಬೇರೊಂದು ವಿವಾಹವಾಗದೆ ಕಾಯಲು ಬಾಧ್ಯಸ್ಥಳಾಗಿರುವ ದೀಕ್ಷಾಕಾಲವನ್ನು ‘ಇದ್ದಃ’ ಎನ್ನಲಾಗುತ್ತದೆ. ಆಕೆ ಗರ್ಭಿಣಿಯಲ್ಲವೆಂದು ಖಾತ್ರಿಯಾಗುವವರೆಗೆ ಅಥವಾ ಆಕೆ ಗರ್ಭಿಣಿಯಾಗಿದ್ದರೆ ಹೆರಿಗೆಯಾಗುವವರೆಗೆ ‘ಇದ್ದಃ’ ಆಚರಿಸಬೇಕಾಗಿದೆ. ಲೈಂಗಿಕ ಸಂಪರ್ಕವು ನಡೆಯದಿದ್ದಲ್ಲಿ ಇದರ ಅಗತ್ಯವೇ ಇರಲಾರದು.
914. ಪತ್ನಿಯನ್ನು ಬಿಡುಗಡೆಗೊಳಿಸಿ ಕಳುಹಿಸುವಾಗ ಆಕೆಯ ಮನಸ್ಸಿಗೆ ಸಂತೃಪ್ತಿ ಮತ್ತು ಬದುಕಿಗೆ ಸಾಂತ್ವನ ನೀಡುವ ರೀತಿಯಲ್ಲಿ ಪತಿಯು ಕೊಡುವ ಉಡುಗೊರೆಯನ್ನು ‘ಮತಾಅ್’ ಎನ್ನಲಾಗುತ್ತದೆ.
(50) ಓ ಪ್ರವಾದಿಯವರೇ! ತಾವು ವಧುದಕ್ಷಿಣೆ ನೀಡಿ ವರಿಸಿರುವ ತಮ್ಮ ಮಡದಿಯರನ್ನು(915) ನಾವು ತಮಗೆ ಧರ್ಮಸಮ್ಮತಗೊಳಿಸಿರುವೆವು. ಅಲ್ಲಾಹು ತಮಗೆ (ಯುದ್ಧದಲ್ಲಿ) ಅಧೀನಪಡಿಸಿಕೊಟ್ಟವರ ಪೈಕಿ ತಮ್ಮ ಬಲಗೈ ಸ್ವಾಧೀನದಲ್ಲಿರಿಸಿರುವ (ಗುಲಾಮ) ಸ್ತ್ರೀಯರನ್ನು,(916) ತಮ್ಮೊಂದಿಗೆ ಊರು ಬಿಟ್ಟು ಬಂದ ತಮ್ಮ ಪಿತೃಸಹೋದರ ಪುತ್ರಿಯರು, ಪಿತೃಸಹೋದರಿ ಪುತ್ರಿಯರು, ಮಾತೃಸಹೋದರ ಪುತ್ರಿಯರು, ಮಾತೃಸಹೋದರಿ ಪುತ್ರಿಯರು (ಮುಂತಾದವರನ್ನು ವಿವಾಹವಾಗುವುದು ತಮಗೆ ಧರ್ಮಸಮ್ಮತವಾಗಿದೆ).(917) ಸತ್ಯವಿಶ್ವಾಸಿನಿಯಾಗಿರುವ ಒಬ್ಬ ಹೆಣ್ಣು ತನ್ನ ಶರೀರವನ್ನು ಪ್ರವಾದಿಗೆ ದಾನ ಮಾಡುವುದಾದರೆ ಮತ್ತು ಪ್ರವಾದಿಯು ಆಕೆಯನ್ನು ವಿವಾಹವಾಗಲು ಇಚ್ಛಿಸುವುದಾದರೆ (ಅದು ಕೂಡ ಧರ್ಮಸಮ್ಮತವಾಗಿದೆ). ಇದು ಇತರ ಸತ್ಯವಿಶ್ವಾಸಿಗಳಿಗಿರದೆ ತಮಗೆ ಮಾತ್ರವಿರುವುದಾಗಿದೆ.(918) ಅವರ ಪತ್ನಿಯರ ಮತ್ತು ಅವರ ಬಲಗೈ ಸ್ವಾಧೀನದಲ್ಲಿರಿಸಿರುವವರ ವಿಷಯದಲ್ಲಿ ನಾವು ಶಾಸನಗೊಳಿಸಿರುವುದು ನಮಗೆ ಚೆನ್ನಾಗಿ ತಿಳಿದಿದೆ.(919) ಇದು ತಮಗೆ ಯಾವುದೇ ತೊಂದರೆಯುಂಟಾಗದಿರುವ ಸಲುವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
915. ಪ್ರವಾದಿ(ಸ) ರವರ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರು ಎಂಬ ವಿಶೇಷ ಪದವಿಯನ್ನು ಹೊಂದಿದವರೆಂದು 6ನೇ ಸೂಕ್ತಿಯಲ್ಲಿ ಹೇಳಲಾಗಿದೆ. ಪ್ರವಾದಿ(ಸ) ರವರ ಜೀವಿತಾವಧಿಯಲ್ಲೂ, ಅವರ ಮರಣಾನಂತರವೂ ಅವರ ಪತ್ನಿಯರಿಗೆ ಇಸ್ಲಾಮೀ ಸಮಾಜದಲ್ಲಿ ಅನೇಕ ಮಹತ್ವಪೂರ್ಣ ಕರ್ತವ್ಯಗಳನ್ನು ನಿಭಾಯಿಸಬೇಕಾಗಿದೆ. ಆದುದರಿಂದ ಪ್ರವಾದಿ(ಸ) ರವರ ವಿವಾಹಗಳು ಲೈಂಗಿಕಾಸಕ್ತಿಯನ್ನು ತೀರಿಸುವುದಕ್ಕಿಂತಲೂ ಮಿಗಿಲಾಗಿ ಮಹತ್ವಪೂರ್ಣವಾದ ಆ ಪದವಿಗೆ ನ್ಯಾಯ ಒದಗಿಸಲಿಕ್ಕಿರುವ ಸಾಮರ್ಥ್ಯದ ಆಧಾರದಲ್ಲಾಗಿದ್ದವು. ಈ ಸೂಕ್ತಿಯು ಅವತೀರ್ಣಗೊಳ್ಳುವುದಕ್ಕೆ ಮುಂಚೆ ಪ್ರವಾದಿ(ಸ) ರವರು ವಧುದಕ್ಷಿಣೆ ನೀಡಿ ಮಾಡಿಕೊಂಡ ವಿವಾಹಗಳಿಗೆ ಅಲ್ಲಾಹು ಅಂಗೀಕಾರ ನೀಡಿದ್ದಾನೆ. ಆದರೆ ಇನ್ನು ಮುಂದೆ ವಿವಾಹವಾಗುವುದಾದರೆ ಅದಕ್ಕಿರುವ ನಿಯಮಗಳನ್ನು ಸ್ಪಷ್ಟಗೊಳಿಸಿದ್ದಾನೆ.
916. ಪ್ರಾಚೀನ ಅರಬರ ಸಂಪ್ರದಾಯ ಪ್ರಕಾರ ಯುದ್ಧ ಕೈದಿಗಳನ್ನು ಗುಲಾಮರನ್ನಾಗಿ ಮಾಡಿ ಅವರನ್ನು ಸೈನಿಕರು ಹಂಚಿಕೊಳ್ಳುತ್ತಿದ್ದರು. ಮುಸ್ಲಿಮ್ ಕೈದಿಗಳೊಂದಿಗೆ ಶತ್ರುಗಳು ಇದೇ ಸಂಪ್ರದಾಯವನ್ನು ಮುಂದುವರಿಸಿರುವುದರಿಂದ ಮತ್ತು ಕೈದಿಗಳನ್ನು ವಿಮೋಚನೆಗೊಳಿಸಿದರೆ ಶತ್ರುಗಳು ತಕ್ಷಣ ಇನ್ನೊಂದು ಯುದ್ಧಕ್ಕೆ ಸಿದ್ಧರಾಗುವ ಸಾಧ್ಯತೆಯಿದ್ದುದರಿಂದ ಈ ಸಂಪ್ರದಾಯವನ್ನು ಏಕಪಕ್ಷೀಯವಾಗಿ ಕೊನೆಗೊಳಿಸಲು ಮುಸ್ಲಿಮರಿಗೆ ಸಾಧ್ಯವಾಗಿರಲಿಲ್ಲ. ಓರ್ವ ಮುಸ್ಲಿಮ್ ಸೇನಾನಿಗೆ ಬಳುವಳಿಯಾಗಿ ಸಿಗುವ ಮಹಿಳಾ ಕೈದಿಯನ್ನು ಪತ್ನಿಯಂತೆ ಮಾಡಿಕೊಳ್ಳಲು ಅವನಿಗೆ ಅನುಮತಿಯಿತ್ತು. ಅನೈತಿಕ ಸಂಬಂಧದ ಮಾರ್ಗವನ್ನು ಮುಚ್ಚಲು ಇದು ಅನಿವಾರ್ಯವಾಗಿತ್ತು.
917. ಪ್ರವಾದಿ(ಸ) ರವರ ಆಪ್ತಸಂಬಂಧಿಕರ ಪೈಕಿ ಕೆಲವರು ಮುಂಚೆಯೇ ಇಸ್ಲಾಮ್ ಸ್ವೀಕರಿಸಿದವರಾಗಿದ್ದು ಸ್ವಂತ ಊರನ್ನು ತೊರೆದು ಮದೀನಕ್ಕೆ ವಲಸೆ ಹೋಗಿದ್ದರು. ಕೆಲವರು ಮಕ್ಕಾ ವಿಜಯದವರೆಗೆ ಶತ್ರುಗಳೊಂದಿಗೆ ಮಕ್ಕಾದಲ್ಲೇ ತಂಗಿದ್ದರು. ಪ್ರವಾದಿ(ಸ) ರವರು ತಂದೆಯ ಅಥವಾ ತಾಯಿಯ ಸಂಬಂಧಿಕರ ಪೈಕಿ ಯಾರನ್ನಾದರೂ ವಿವಾಹವಾಗ ಬಯಸುವುದಾದರೆ ಅದು ಇಸ್ಲಾಮಿಗಾಗಿ ದೇಶತ್ಯಾಗ ಮಾಡಿದವರನ್ನು ಮಾತ್ರವಾಗಿರಬೇಕು ಎಂದು ಅಲ್ಲಾಹು ಉಪದೇಶ ಮಾಡುತ್ತಿದ್ದಾನೆ.
918. ಓರ್ವ ಸ್ತ್ರೀ ನೇರವಾಗಿ ಓರ್ವ ಪುರುಷನನ್ನು ವರಿಸುವ ಪದ್ಧತಿ ಇಸ್ಲಾಮಿನಲ್ಲಿಲ್ಲ. ಪೋಷಕರು ವಧುವಿನ ಸಮ್ಮತಿಯೊಂದಿಗೆ ಸಾಕ್ಷಿಗಳ ಸಮಕ್ಷಮದಲ್ಲಿ ಆಕೆಯನ್ನು ವರನಿಗೆ ಮಹ್ರ್ ನಿಶ್ಚಯಿಸಿ ವಿವಾಹ ಮಾಡಿಕೊಡುವುದಾಗಿದೆ ಇಸ್ಲಾಮಿನ ಪದ್ಧತಿ. ಆದರೆ ಪ್ರವಾದಿ(ಸ) ರವರಿಗೆ ಅಲ್ಲಾಹು ಈ ವಿಷಯದಲ್ಲಿ ರಿಯಾಯಿತಿ ನೀಡಿದ್ದಾನೆ. ಯಾವುದೇ ಮಹ್ರನ್ನೂ ಪಡೆಯದೆ ಓರ್ವ ಸ್ತ್ರೀ ಪ್ರವಾದಿ(ಸ) ರವರೊಂದಿಗೆ ತನ್ನನ್ನು ಪತ್ನಿಯನ್ನಾಗಿ ಮಾಡಿಕೊಳ್ಳಿರಿ ಎಂದು ವಿನಂತಿಸಿದರೆ ಅದನ್ನು ಒಪ್ಪಿಕೊಳ್ಳಲು ಅಲ್ಲಾಹು ಅವರಿಗೆ ಅನುಮತಿ ನೀಡಿದ್ದಾನೆ. ಆದರೆ ಈ ರೀತಿ ಅವರು ಯಾರನ್ನಾದರೂ ವಿವಾಹವಾದ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ.
919. ಸಾಮಾನ್ಯ ಮುಸ್ಲಿಮರಿಗೆ ಅನ್ವಯಿಸುವ ವಿವಾಹ-ದಾಂಪತ್ಯ ನಿಯಮಗಳು ಅಲ್‍ಬಕರಾ, ಅನ್ನಿಸಾಅ್ ಮುಂತಾದ ಅಧ್ಯಾಯಗಳಲ್ಲಿ ಮತ್ತು ಸಹೀಹಾದ ಹದೀಸ್‍ಗಳಲ್ಲಿ ದಾಖಲಾಗಿದೆ.
(51) ಅವರ ಪೈಕಿ ತಾವಿಚ್ಛಿಸುವವರನ್ನು ತಮಗೆ ಒತ್ತಟ್ಟಿಗಿಡಬಹುದು ಮತ್ತು ತಾವಿಚ್ಛಿಸುವವರನ್ನು ತಮ್ಮ ಬಳಿಗೆ ನಿಕಟಗೊಳಿಸಬಹುದು.(920) ತಾವು ಒತ್ತಟ್ಟಿಗಿಟ್ಟವರ ಪೈಕಿ ಯಾರನ್ನಾದರೂ ತಾವು ಬಯಸುವುದಾದರೆ ತಮಗೆ ದೋಷವಿಲ್ಲ.(921) ಅವರ ಕಣ್ಣು ತಂಪಾಗಲು, ಅವರು ದುಃಖಿಸದಿರಲು ಮತ್ತು ತಾವು ಅವರಿಗೆ ನೀಡಿರುವುದರಲ್ಲಿ ಅವರೆಲ್ಲರೂ ಸಂತೃಪ್ತರಾಗಲು ಅದು ಅತ್ಯಂತ ಸೂಕ್ತವಾಗಿದೆ. ನಿಮ್ಮ ಹೃದಯಗಳಲ್ಲಿರುವುದನ್ನು ಅಲ್ಲಾಹು ಅರಿಯುವನು. ಅಲ್ಲಾಹು ಸರ್ವಜ್ಞನೂ ಸಹನಾಶೀಲನೂ ಆಗಿರುವನು.
920. ಅಗತ್ಯವೆನಿಸಿದಾಗ ಪತ್ನಿಯರೊಂದಿಗೆ ಸಹಶಯನ ಮಾಡುವ ವಿಷಯದಲ್ಲಿ ಮುಕ್ತ ತೀರ್ಮಾನ ಕೈಗೊಳ್ಳಲು ಅಲ್ಲಾಹು ಪ್ರವಾದಿ(ಸ) ರಿಗೆ ಅನುಮತಿ ನೀಡಿದ್ದಾನೆಂದು ಈ ಸೂಕ್ತಿಯಿಂದ ಗ್ರಹಿಸಬಹುದಾದರೂ ಸರದಿಯನ್ನು ಕಾಪಾಡಲು ಪ್ರವಾದಿ(ಸ) ರವರು ಮರಣದವರೆಗೆ ಎಚ್ಚರವಹಿಸಿದ್ದರು ಎಂದು ಹದೀಸ್‍ಗಳಿಂದ ತಿಳಿದುಬರುತ್ತದೆ.
921. ಪ್ರವಾದಿ(ಸ) ರವರು ಇಚ್ಛಿಸುವುದಾದರೆ ಸಹಶಯನವನ್ನು ದೂರವಿಡಲಾದ ಪತ್ನಿಯರೊಂದಿಗೆ ಅದನ್ನು ಪುನರಾರಂಭಿಸಲು ಮತ್ತು ವಿಚ್ಛೇದನ ನೀಡಿದ ಪತ್ನಿಯರನ್ನು ಮರಳಿ ಪಡೆಯಲು ಅವರಿಗೆ ಅನುಮತಿಯಿದೆಯೆಂದು ಈ ಸೂಕ್ತಿಯಿಂದ ತಿಳಿದುಬರುತ್ತದೆ.
(52) ಇನ್ನು ಮುಂದೆ (ಇತರ) ಸ್ತ್ರೀಯರನ್ನು ವಿವಾಹವಾಗಲು ತಮಗೆ ಅನುಮತಿಯಿಲ್ಲ. ಇವರ ಬದಲಿಗೆ ಇತರರನ್ನು ಪತ್ನಿಯರನ್ನಾಗಿ ಮಾಡಿಕೊಳ್ಳಲೂ ತಮಗೆ (ಅನುಮತಿಯಿಲ್ಲ).(922) ಅವರ ಸೌಂದರ್ಯವು ತಮಗೆ ಎಷ್ಟೇ ಆಕರ್ಷಕವಾಗಿ ಕಂಡರೂ ಸರಿ. ತಮ್ಮ ಬಲಗೈ ಸ್ವಾಧೀನದಲ್ಲಿರಿಸಿಕೊಂಡಿರುವ (ಗುಲಾಮಸ್ತ್ರೀಯರ) ಹೊರತು. ಅಲ್ಲಾಹು ಎಲ್ಲ ವಿಷಯಗಳನ್ನು ವೀಕ್ಷಿಸುವವನಾಗಿರುವನು.
922. ಈ ಸೂಕ್ತಿಯು ಅವತೀರ್ಣಗೊಳ್ಳುವಾಗ ಪ್ರವಾದಿ(ಸ) ರವರಿಗೆ ಒಂಬತ್ತು ಮಂದಿ ಪತ್ನಿಯರಿದ್ದರು. ತರುವಾಯ ಪ್ರವಾದಿ(ಸ) ರವರು ಬೇರೆ ವಿವಾಹವಾಗಿಲ್ಲ.
(53) ಓ ಸತ್ಯವಿಶ್ವಾಸಿಗಳೇ! ಆಹಾರ ಸೇವಿಸುವುದಕ್ಕಾಗಿ (ನಿಮ್ಮನ್ನು ಕರೆಯಲಾದರೆ) ನಿಮಗೆ ಅನುಮತಿ ಸಿಕ್ಕಿದ ವಿನಾ ನೀವು ಪ್ರವಾದಿಯವರ ಮನೆಗಳನ್ನು ಪ್ರವೇಶಿಸದಿರಿ. ಆಹಾರ ಸಿದ್ಧಗೊಳ್ಳುವುದನ್ನು ವೀಕ್ಷಿಸುತ್ತಾ ಕೂರುವವರಾಗದಿರಿ. ಆದರೆ ನಿಮ್ಮನ್ನು ಕರೆಯಲಾದರೆ ಒಳ ಪ್ರವೇಶಿಸಿರಿ ಮತ್ತು ಆಹಾರ ಸೇವಿಸಿದ ಬಳಿಕ ಚದುರಿ ಹೋಗಿರಿ. ನೀವು ಹರಟೆ ಹೊಡೆಯುತ್ತಾ ಕೂರುವವರಾಗದಿರಿ. ಖಂಡಿತವಾಗಿಯೂ ಇವು ಪ್ರವಾದಿಯವರಿಗೆ ಕಿರುಕುಳ ಕೊಡುವುದಾಗಿದೆ. ನಿಮ್ಮೊಂದಿಗೆ (ಅದನ್ನು ಹೇಳಲು) ಅವರು ಸಂಕೋಚಪಡುತ್ತಿರುವರು. ಆದರೆ ಸತ್ಯದ ವಿಚಾರದಲ್ಲಿ ಅಲ್ಲಾಹು ಸಂಕೋಚಪಡಲಾರನು. ನೀವು ಅವರೊಂದಿಗೆ (ಪ್ರವಾದಿ ಪತ್ನಿಯರೊಂದಿಗೆ) ಯಾವುದೇ ವಸ್ತುವನ್ನು ಕೇಳುವುದಾದರೆ ಪರದೆಯ ಹಿಂದಿನಿಂದ ಕೇಳಿರಿ. ಅದು ನಿಮ್ಮ ಹೃದಯಗಳಿಗೆ ಮತ್ತು ಅವರ ಹೃದಯಗಳಿಗೆ ಹೆಚ್ಚು ಪರಿಶುದ್ಧವಾಗಿದೆ. ಅಲ್ಲಾಹನ ಪ್ರವಾದಿಗೆ ಕಿರುಕುಳ ಕೊಡುವುದು ಮತ್ತು ಅವರ ಬಳಿಕ ಅವರ ಪತ್ನಿಯರನ್ನು ವಿವಾಹವಾಗುವುದು ನಿಮಗೆ ಧರ್ಮಸಮ್ಮತವಲ್ಲ.(923) ಖಂಡಿತವಾಗಿಯೂ ಅವೆಲ್ಲವೂ ಅಲ್ಲಾಹುವಿನ ಬಳಿ ಗಂಭೀರ ವಿಷಯಗಳಾಗಿವೆ.
923. ಎಲ್ಲ ಸತ್ಯವಿಶ್ವಾಸಿಗಳೂ ಪ್ರವಾದಿಪತ್ನಿಯರನ್ನು ತಮ್ಮ ಮಾತೆಯರಿಗೆ ಸಮಾನವಾದ ಪದವಿಯಲ್ಲಿ ಪರಿಗಣಿಸಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಅವರನ್ನು ವಿವಾಹವಾಗುವುದು ನಿಷಿದ್ಧವಾಗಿದೆ.
(54) ನೀವು ಏನನ್ನಾದರೂ ಬಹಿರಂಗಪಡಿಸುವುದಾದರೆ ಅಥವಾ ಮರೆಮಾಚುವುದಾದರೆ ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.
(55) ಆ ಸ್ತ್ರೀಯರಿಗೆ ಅವರ ಪಿತರೊಂದಿಗೆ, ಪುತ್ರರೊಂದಿಗೆ, ಸಹೋದರರೊಂದಿಗೆ, ಸಹೋದರ ಪುತ್ರರೊಂದಿಗೆ, ಸಹೋದರಿ ಪುತ್ರರೊಂದಿಗೆ, ಅವರಲ್ಲಿ ಸೇರಿದ ಸ್ತ್ರೀಯರೊಂದಿಗೆ ಮತ್ತು ಅವರ ಬಲಗೈಗಳು ಅಧೀನದಲ್ಲಿರಿಸಿದವರೊಂದಿಗೆ ಬೆರೆಯುವುದರಲ್ಲಿ ವಿರೋಧವಿಲ್ಲ.(924) ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳಿಗೂ ಸಾಕ್ಷಿಯಾಗಿರುವನು.
924. ಇವರ ಮುಂದೆ ಸ್ತ್ರೀಯರು ಪರ್ದಾ ಧರಿಸಬೇಕಾಗಿಲ್ಲ. ಸಭ್ಯವಾದ ಉಡುಪನ್ನು ಧರಿಸಿದರೆ ಸಾಕು. ಇವರೊಂದಿಗೆ ಬೆರೆಯುವುದರಲ್ಲಿ ಅಥವಾ ಹತ್ತಿರದಲ್ಲೇ ನಿಂತು ಮಾತನಾಡುವುದರಲ್ಲಿ ವಿರೋಧವಿಲ್ಲ. ಆದರೆ ಮುಸ್ಲಿಮ್ ಸ್ತ್ರೀಯರು ಮುಸ್ಲಿಮೇತರ ಸ್ತ್ರೀಯರೊಂದಿಗೆ ಹೀಗೆ ಸ್ವಚ್ಛಂದವಾಗಿ ಬೆರೆಯಬಾರದು.
(56) ಖಂಡಿತವಾಗಿಯೂ ಅಲ್ಲಾಹು ಮತ್ತು ಅವನ ಮಲಕ್‍ಗಳು ಪ್ರವಾದಿಯವರ ಮೇಲೆ ಕರುಣೆ ತೋರುತ್ತಾರೆ. ಓ ಸತ್ಯವಿಶ್ವಾಸಿಗಳೇ! ನೀವು ಸಹ ಅವರ ಮೇಲೆ (ಅಲ್ಲಾಹುವಿನ) ಕರುಣೆ ಮತ್ತು ಶಾಂತಿಯು ವರ್ಷಿಸಲು ಪ್ರಾರ್ಥಿಸಿರಿ.(925)
925. ‘ಸಲ್ಲಿಮೂ ತಸ್ಲೀಮನ್’ ಎಂದರೆ ‘ನೀವು ಅವರ ಆಜ್ಞೆಗಳಿಗೆ ಸಂಪೂರ್ಣ ಶರಣಾಗಿರಿ’ ಎಂದು ಕೆಲವರು ಅರ್ಥ ನೀಡಿದ್ದಾರೆ.
(57) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ಕಿರುಕುಳ ಕೊಡುವವರನ್ನು ಅಲ್ಲಾಹು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಿರುವನು. ಅವರಿಗೆ ಅಪಮಾನಕರ ಶಿಕ್ಷೆಯನ್ನು ಅವನು ಸಿದ್ಧಗೊಳಿಸಿರುವನು.
(58) ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಗಳಿಗೆ ಅವರು (ಕೆಡುಕಾಗಿರುವ) ಏನನ್ನೂ ಮಾಡದಿದ್ದರೂ ಕಿರುಕುಳ ಕೊಡುವವರು ಯಾರೋ ಅವರು ಸುಳ್ಳಾರೋಪವನ್ನು ಮತ್ತು ಬಹಿರಂಗವಾದ ಪಾಪವನ್ನು ವಹಿಸಿಕೊಂಡಿರುವರು.
(59) ಓ ಪ್ರವಾದಿಯವರೇ! ತಮ್ಮ ಪತ್ನಿಯರೊಂದಿಗೆ, ಪುತ್ರಿಯರೊಂದಿಗೆ ಮತ್ತು ಸತ್ಯವಿಶ್ವಾಸಿನಿ ಸ್ತ್ರೀಯರೊಂದಿಗೆ ಅವರು ತಮ್ಮ ಜಲಾಬೀಬನ್ನು(926) ತಮ್ಮ ಶರೀರದ ಮೇಲೆ ಇಳಿಸಿಕೊಳ್ಳುವಂತೆ ಹೇಳಿರಿ. ಅವರು ಗುರುತಿಸಲ್ಪಡಲು ಮತ್ತು ಅವರು ಕಿರುಕುಳಕ್ಕೊಳಗಾಗದಿರಲು ಅದು ಅತ್ಯಂತ ಸೂಕ್ತವಾಗಿದೆ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
926. ‘ಜಲಾಬೀಬ್’ ಎಂದರೆ ಶರೀರವನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳು ಅಥವಾ ತಲೆ, ಮುಖ, ಕತ್ತು ಮತ್ತು ಎದೆಗಳನ್ನು ಮುಚ್ಚುವ ಉಡುಪುಗಳು ಎಂದು ಅರ್ಥ ನೀಡಲಾಗಿದೆ.
(60) ಕಪಟವಿಶ್ವಾಸಿಗಳು, ತಮ್ಮ ಹೃದಯಗಳಲ್ಲಿ ರೋಗವಿರುವವರು ಮತ್ತು ಮದೀನದಲ್ಲಿ ವದಂತಿ ಹಬ್ಬಿಸಿ ಕ್ಷೋಭೆಯನ್ನುಂಟು ಮಾಡುವವರು (ಅದನ್ನು) ನಿಲ್ಲಿಸದಿದ್ದರೆ ಖಂಡಿತವಾಗಿಯೂ ತಮ್ಮನ್ನು ನಾವು ಅವರ ವಿರುದ್ಧ ತಿರುಗಿಸಿ ಬಿಡುವೆವು. ತರುವಾಯ ಅಲ್ಪ ಸಮಯ ಮಾತ್ರ ಅವರಿಗೆ ತಮ್ಮ ನೆರೆಯವರಾಗಿರಲು ಸಾಧ್ಯ.
(61) ಅವರು ಶಾಪಪೀಡಿತ ಸ್ಥಿತಿಯಲ್ಲಿರುವರು. ಅವರೆಲ್ಲೇ ಕಂಡುಬಂದರೂ ಹಿಡಿಯಲ್ಪಡುವರು ಮತ್ತು ಕೊಲ್ಲಲ್ಪಡುವರು.
(62) ಮುಂಚೆ ಗತಿಸಿದವರ ವಿಷಯದಲ್ಲಿ ಅಲ್ಲಾಹು ಕೈಗೊಂಡಿರುವ ಅದೇ ಕ್ರಮ.(927) ಅಲ್ಲಾಹುವಿನ ಕ್ರಮಕ್ಕೆ ತಾವು ಯಾವುದೇ ಬದಲಾವಣೆಯನ್ನೂ ಕಾಣಲಾರಿರಿ.
927. ಯಾವುದೇ ಕಾರಣವೂ ಇಲ್ಲದೆ ಅನ್ಯಾಯವಾಗಿ ಸತ್ಯವಿಶ್ವಾಸಿಗಳನ್ನು ಹಿಂಸಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅಲ್ಲಾಹುವಿನ ಕ್ರಮವಾಗಿದೆ.
(63) ಅಂತ್ಯಘಳಿಗೆಯ ಬಗ್ಗೆ ಜನರು ತಮ್ಮೊಂದಿಗೆ ಕೇಳುವರು. ತಾವು ಹೇಳಿರಿ: “ಅದರ ಅರಿವಿರುವುದು ಅಲ್ಲಾಹುವಿನ ಬಳಿ ಮಾತ್ರವಾಗಿದೆ”. (ಅದರ ಬಗ್ಗೆ) ತಮಗೆ ತಿಳಿಸಿಕೊಡುವಂತಹದು ಏನಿದೆ? ಅಂತ್ಯಘಳಿಗೆಯು ಸನಿಹದಲ್ಲೇ ಇರಲೂಬಹುದು!
(64) ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಶಪಿಸಿರುವನು ಮತ್ತು ಅವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವನು.
(65) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು.
(66) ಅವರ ಮುಖಗಳನ್ನು ನರಕಾಗ್ನಿಯಲ್ಲಿ ಬುಡ ಮೇಲುಗೊಳಿಸಲಾಗುವ ದಿನ! ಅವರು ಹೇಳುವರು: “ನಾವು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು!”
(67) ಅವರು ಹೇಳುವರು: “ನಮ್ಮ ಪ್ರಭೂ! ನಾವು ನಮ್ಮ ನಾಯಕರನ್ನು ಮತ್ತು ಮುಖಂಡರನ್ನು ಅನುಸರಿಸಿದೆವು. ಅವರು ನಮ್ಮನ್ನು ಪಥಭ್ರಷ್ಟಗೊಳಿಸಿದರು.
(68) ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಶಿಕ್ಷೆಯನ್ನು ನೀಡು ಮತ್ತು ಅವರನ್ನು ಉಗ್ರವಾಗಿ ಶಪಿಸು”.
(69) ಓ ಸತ್ಯವಿಶ್ವಾಸಿಗಳೇ! ಮೂಸಾರಿಗೆ ಕಿರುಕುಳ ಕೊಟ್ಟವರಂತೆ ನೀವಾಗದಿರಿ.(928) ಅಲ್ಲಾಹು ಅವರು ಹೇಳಿರುವುದರಿಂದ ಅವರನ್ನು (ಮೂಸಾರನ್ನು) ಮುಕ್ತಗೊಳಿಸಿದನು.(929) ಅವರು (ಮೂಸಾ) ಅಲ್ಲಾಹುವಿನ ಬಳಿ ಉತ್ಕೃಷ್ಟರಾಗಿರುವರು.
928. ಪ್ರವಾದಿ(ಸ) ರವರ ನಡೆನುಡಿಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಹುಡುಕುವ ಕಪಟವಿಶ್ವಾಸಿಗಳ ಸ್ವಭಾವವನ್ನು ಸತ್ಯವಿಶ್ವಾಸಿಗಳು ಅನುಸರಿಸಕೂಡದು ಎಂದು ಎಚ್ಚರಿಸಲಾಗಿದೆ. 929. ಪ್ರವಾದಿ ಮೂಸಾ(ಅ) ರವರಿಗೆ ಕೆಲವು ದೈಹಿಕ ನ್ಯೂನತೆಗಳಿವೆಯೆಂದು ಜನರು ಅಪಪ್ರಚಾರ ಮಾಡಿದಾಗ, ಅವರು ಒಂಟಿಯಾಗಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಉಡುಪನ್ನು ಕಳಚಿಟ್ಟ ಕಲ್ಲು ಅದರೊಂದಿಗೆ ಓಡಿದ ಘಟನೆಯ ಮೂಲಕ ಅಲ್ಲಾಹು ಆ ತಪ್ಪುಕಲ್ಪನೆಯನ್ನು ನಿವಾರಿಸಿದನೆಂದು ಪ್ರವಾದಿ(ಸ) ರವರು ವಿವರಿಸಿದ್ದಾಗಿ ಬುಖಾರಿ(3404)ರಲ್ಲಿ ಕಾಣಬಹುದು.
(70) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಸರಿಯಾದ ಮಾತುಗಳನ್ನಾಡಿರಿ.
(71) ಹಾಗಾದರೆ ಅವನು ನಿಮಗೆ ನಿಮ್ಮ ಕರ್ಮಗಳನ್ನು ಸುಧಾರಿಸಿ ಕೊಡುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಯಾರು ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುವನೋ ಅವನು ಮಹಾ ವಿಜಯವನ್ನು ಗಳಿಸಿರುವನು.
(72) ಖಂಡಿತವಾಗಿಯೂ ನಾವು ಆ ಅಮಾನತ್ತನ್ನು (ಹೊಣೆಗಾರಿಕೆಯನ್ನು) ಆಕಾಶಗಳ, ಭೂಮಿಯ ಮತ್ತು ಪರ್ವತಗಳ ಮುಂದೆ ತೋರಿಸಿದೆವು. ಆದರೆ ಅದನ್ನು ವಹಿಸಿಕೊಳ್ಳಲು ಅವು ನಿರಾಕರಿಸಿದವು ಮತ್ತು ಅದರ ಬಗ್ಗೆ ಅವು ಭಯಪಟ್ಟವು. ಆದರೆ ಮನುಷ್ಯನು ಅದನ್ನು ವಹಿಸಿಕೊಂಡನು. ಖಂಡಿತವಾಗಿಯೂ ಅವನು ಮಹಾ ಅಕ್ರಮಿಯೂ ಅವಿವೇಕಿಯೂ ಆಗಿರುವನು.(930)
930. ಈ ಸೂಕ್ತಿಯಲ್ಲಿ ಮನುಷ್ಯರು ಮತ್ತು ಇತರ ಸೃಷ್ಟಿಗಳು ಪರಸ್ಪರ ಹೊಂದಿರುವ ಮೂಲಭೂತವಾದ ಅಂತರವನ್ನು ಸೂಚ್ಯವಾಗಿ ತಿಳಿಸಲಾಗಿದೆ. ಬೃಹತ್ ಆಕಾಶಕಾಯಗಳಿಗಾಗಲಿ, ಭೂಮಿಗಾಗಲಿ, ಉನ್ನತ ಪರ್ವತಗಳಿಗಾಗಲಿ ಈ ಅಮಾನತ್ (ಹೊಣೆಗಾರಿಕೆ) ಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲಾಹು ನಿಶ್ಚಯಿಸಿದ ಪ್ರಕೃತಿ ನಿಯಮಗಳಿಗೆ ವಿಧೇಯವಾಗಿರಲು ಮಾತ್ರ ಅವುಗಳಿಗೆ ಸಾಧ್ಯ. ವಿಶ್ವವ್ಯವಸ್ಥೆಯಲ್ಲಿ ಅವು ವಹಿಸಬೇಕಾದ ಪಾತ್ರವನ್ನು ಸ್ವಯಂ ನಿರ್ಧರಿಸಲು ಅವುಗಳಿಗೆ ಅವಕಾಶವಿಲ್ಲ. ಆದರೆ ಮನುಷ್ಯನು ಹಾಗಲ್ಲ. ಅವನಿಗೆ ಒಂದು ಹಂತದವರೆಗೆ ಪ್ರಕೃತಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಸ್ವತಂತ್ರ ಕರ್ಮಗಳ ಮೂಲಕ ತನ್ನ ವಿಧಿನಿಯತಿಯನ್ನು ನಿರ್ಧರಿಸುವ ಅವಕಾಶವನ್ನು ಅವನಿಗೆ ನೀಡಲಾಗಿದೆ. ವಿವೇಕಮತಿಗಳಾದ ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೆಲುವು ಸಾಧಿಸುತ್ತಾರೆ. ಆದರೆ ಅದಕ್ಕೆ ಇನ್ನೊಂದು ಮಗ್ಗುಲು ಇದೆ. ಅಂದರೆ ಅವಿವೇಕ ಮತ್ತು ಅನ್ಯಾಯ ಮಾಡುವ ತ್ವರೆ. ಅದನ್ನು ಮೆಟ್ಟಿನಿಲ್ಲುವ ಸಾಮರ್ಥ್ಯದ ಮೇಲೆ ಮನುಷ್ಯರ ಗೆಲುವು ಮತ್ತು ಮೋಕ್ಷವು ಅವಲಂಬಿತವಾಗಿವೆ.
(73) ಕಪಟವಿಶ್ವಾಸಿಗಳನ್ನು ಮತ್ತು ಕಪಟವಿಶ್ವಾಸಿನಿಯರನ್ನು, ಬಹುದೇವವಿಶ್ವಾಸಿಗಳನ್ನು ಮತ್ತು ಬಹುದೇವ ವಿಶ್ವಾಸಿನಿಯರನ್ನು ಅಲ್ಲಾಹು ಶಿಕ್ಷಿಸುವ ಸಲುವಾಗಿ. ಸತ್ಯವಿಶ್ವಾಸಿಗಳ ಮತ್ತು ಸತ್ಯವಿಶ್ವಾಸಿನಿಯರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುವ ಸಲುವಾಗಿ.(931) ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
931. ಅಮಾನತ್ ಅಥವಾ ಹೊಣೆಗಾರಿಕೆಯನ್ನು ವಹಿಸಿಕೊಂಡು ನಿಭಾಯಿಸುವ ಶಕ್ತಿಯನ್ನು ಅಲ್ಲಾಹು ಮನುಷ್ಯರಿಗೆ ವೃಥಾ ನೀಡಿಲ್ಲ. ಅವನು ಅದನ್ನು ನೀಡಿರುವುದು ಆ ಶಕ್ತಿಯನ್ನು ಮನುಷ್ಯನು ಯಾವುದಕ್ಕಾಗಿ ಹೇಗೆ ವಿನಿಯೋಗಿಸುತ್ತಾನೆ ಎಂಬುದನ್ನು ವೀಕ್ಷಿಸಿ ತಕ್ಕ ಪ್ರತಿಫಲವನ್ನು ನೀಡುವ ನಿರ್ಧಾರದ ಆಧಾರದಲ್ಲಾಗಿದೆ.