(1) ಬಹುದೇವವಿಶ್ವಾಸಿಗಳ ಪೈಕಿ ಯಾರೊಂದಿಗೆ ನೀವು ಒಪ್ಪಂದದಲ್ಲಿರುವಿರೋ ಅವರೊಂದಿಗಿರುವ ಅಲ್ಲಾಹುವಿನ ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯನ್ನು ಘೋಷಿಸಲಾಗಿದೆ.
(2) ಆದ್ದರಿಂದ (ಓ ಬಹುದೇವವಿಶ್ವಾಸಿಗಳೇ!) ನೀವು ನಾಲ್ಕು ತಿಂಗಳ ಕಾಲ ಭೂಮಿಯಲ್ಲಿ ಯಥೇಷ್ಟವಾಗಿ ಸಂಚರಿಸಿರಿ.(293) ಅಲ್ಲಾಹುವನ್ನು ಸೋಲಿಸಲು ನಿಮ್ಮಿಂದಾಗದು ಮತ್ತು ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಗೊಳಿಸುವನು ಎಂಬುದನ್ನು ಅರಿತುಕೊಳ್ಳಿರಿ.
293. ಇದು ಒಳಸಂಚು, ಕರಾರು ಉಲ್ಲಂಘನೆ ಇತ್ಯಾದಿಗಳನ್ನು ರೂಢಿಯಾಗಿಸಿಕೊಂಡಿರುವ ಸತ್ಯನಿಷೇಧಿಗಳ ಬಗ್ಗೆ ಒಂದು ಬಹಿರಂಗ ಘೋಷಣೆಯಾಗಿದೆ. ಈ ಘೋಷಣೆಯ ಪ್ರಕಾರ ಮುಸ್ಲಿಮರು ನಾಲ್ಕು ತಿಂಗಳವರೆಗೆ ಯಾವುದೇ ದಾಳಿಯನ್ನು ಮಾಡಲಾರರು. ತರುವಾಯ ಪ್ರಾಮಾಣಿಕ ಮಿತ್ರಪಕ್ಷಗಳ ಹೊರತು ಇತರರ ಮೇಲೆ ಎಂತಹ ದಾಳಿಯನ್ನು ಮಾಡಲೂ ಹಿಂಜರಿಯಲಾರರು.
(3) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ಬಹುದೇವವಿಶ್ವಾಸಿಗಳೊಂದಿಗೆ ಯಾವುದೇ ಹೊಣೆಯೂ ಇಲ್ಲವೆಂದು ಮಹಾ ಹಜ್ಜ್ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯಿಂದ ಜನರಿಗೆ (ಸಾರ್ವತ್ರಿಕವಾಗಿ) ಸಾರಲಾಗುತ್ತಿದೆ. ಆದರೆ (ಓ ಬಹುದೇವ ವಿಶ್ವಾಸಿಗಳೇ!) ನೀವು ಪಶ್ಚಾತ್ತಾಪಪಡುವುದಾದರೆ ಅದು ನಿಮಗೆ ಒಳಿತಾಗಿದೆ. ನೀವೇನಾದರೂ ವಿಮುಖರಾಗುವುದಾದರೆ ಅಲ್ಲಾಹುವನ್ನು ಸೋಲಿಸಲು ನಿಮ್ಮಿಂದಾಗದು ಎಂಬುದನ್ನು ಅರಿತುಕೊಳ್ಳಿರಿ. (ಓ ಪ್ರವಾದಿಯವರೇ!) ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಶುಭವಾರ್ತೆಯನ್ನು ತಿಳಿಸಿರಿ.
(4) ಆದರೆ ಬಹುದೇವವಿಶ್ವಾಸಿಗಳ ಪೈಕಿ ನೀವು ಒಪ್ಪಂದ ಮಾಡಿಕೊಂಡಿರುವವರು, ಅವರು (ಒಪ್ಪಂದವನ್ನು ಪಾಲಿಸುವುದರಲ್ಲಿ) ನಿಮ್ಮೊಂದಿಗೆ ಯಾವುದೇ ಕೊರತೆ ತೋರಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ಯಾರಿಗೂ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗುವರು. ನೀವು ಅವರೊಂದಿಗಿರುವ ಕರಾರನ್ನು ಅವರ ಅವಧಿಯವರೆಗೆ ಪೂರ್ತಿ ಮಾಡಿರಿ. ಖಂಡಿತವಾಗಿಯೂ ಅಲ್ಲಾಹು ಭಯಭಕ್ತಿ ಪಾಲಿಸುವವರನ್ನು ಪ್ರೀತಿಸುವನು.
(5) ತರುವಾಯ ಆ ನಿಷಿದ್ಧ ತಿಂಗಳುಗಳು ಕಳೆದರೆ(294) ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ, ಸುತ್ತುವರಿಯಿರಿ ಮತ್ತು ಅವರಿಗಾಗಿ ಹೊಂಚುಹಾಕಬಹುದಾದ ಎಲ್ಲ ಸ್ಥಳಗಳಲ್ಲೂ ಹೊಂಚುಹಾಕಿರಿ.(295) ಅವರೇನಾದರೂ ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ.(296) ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
294. ಅಂದರೆ ಕರಾರಿನ ಪ್ರಕಾರ ಅಥವಾ ಮೇಲೆ ವಿವರಿಸಿದ ಘೋಷಣೆಯ ಪ್ರಕಾರ ದಾಳಿ ಮಾಡಬಾರದ ಅವಧಿಯು ಮುಗಿದರೆ ಎಂದರ್ಥ. ಕೆಲವು ವ್ಯಾಖ್ಯಾನಕಾರರು ಇದನ್ನು ‘ಯುದ್ಧ ನಿಷೇಧಿತ ತಿಂಗಳುಗಳು ಕಳೆದರೆ’ ಎಂದು ವ್ಯಾಖ್ಯಾನಿಸಿದ್ದಾರೆ.
295. ಇಲ್ಲಿ ಪ್ರಸ್ತಾಪಿಸಿರುವುದು ಮುಸ್ಲಿಮರೊಂದಿಗೆ ಶತ್ರುತ್ವ ಹೊಂದಿದವರ ಬಗ್ಗೆಯಾಗಿದೆಯೆಂದು ಇದರ ಮೊದಲಿನ ಮತ್ತು ನಂತರದ ಸೂಕ್ತಿಗಳಿಂದ ಗ್ರಹಿಸಬಹುದಾಗಿದೆ.
296. ಅವರು ನೆಮ್ಮದಿಯಿಂದ ಬದುಕು ಸಾಗಿಸಲು ನೀವು ಅಡ್ಡಿಯಾಗದಿರಿ ಎಂದರ್ಥ.
(6) ಬಹುದೇವವಿಶ್ವಾಸಿಗಳ ಪೈಕಿ ಯಾರಾದರೂ ಆಶ್ರಯ ಕೋರಿ ತಮ್ಮ ಬಳಿಗೆ ಬಂದರೆ ಅವನು ಅಲ್ಲಾಹುವಿನ ವಚನವನ್ನು ಆಲಿಸುವುದಕ್ಕಾಗಿ ಅವನಿಗೆ ಆಶ್ರಯವನ್ನು ನೀಡಿರಿ. ತರುವಾಯ ಅವನು ಸುರಕ್ಷಿತವಾಗಿರಬಹುದಾದ ಸ್ಥಳಕ್ಕೆ ಅವನನ್ನು ತಲುಪಿಸಿರಿ. ಅದು ಅವರು ಅರಿವಿಲ್ಲದ ಜನರಾಗಿರುವ ಕಾರಣದಿಂದಾಗಿದೆ.
(7) ಬಹುದೇವ ವಿಶ್ವಾಸಿಗಳಿಗೆ ಅಲ್ಲಾಹುವಿನ ಬಳಿ ಮತ್ತು ಅವನ ಸಂದೇಶವಾಹಕರ ಬಳಿ ಒಪ್ಪಂದ ನೆಲೆನಿಲ್ಲುವುದು ಹೇಗೆ? ನೀವು ಮಸ್ಜಿದುಲ್ ಹರಾಮ್ನ ಬಳಿ ಯಾರೊಂದಿಗೆ ಕರಾರು ಮಾಡಿಕೊಂಡಿರುವಿರೋ ಅವರಿಗಲ್ಲದೆ.(297) ಅವರು ನಿಮ್ಮೊಂದಿಗೆ ನೇರವಾಗಿ ವರ್ತಿಸುತ್ತಿರುವ ತನಕ ನೀವೂ ಅವರೊಂದಿಗೆ ನೇರವಾಗಿ ವರ್ತಿಸಿರಿ. ಖಂಡಿತವಾಗಿಯೂ ಅಲ್ಲಾಹು ಭಯಭಕ್ತಿ ಪಾಲಿಸುವವರನ್ನು ಪ್ರೀತಿಸುವನು.
297. ಇಲ್ಲಿ ಸೂಚಿಸಿರುವುದು ಹುದೈಬಿಯ್ಯಃ ಎಂಬ ಸ್ಥಳದಲ್ಲಿ ಮುಸ್ಲಿಮರೊಂದಿಗೆ ಶಾಂತಿ ಒಪ್ಪಂದ ಮಾಡಿದ ಬಳಿಕ ಅದನ್ನು ಉಲ್ಲಂಘಿಸದಿರುವ ಕೆಲವು ಗೋತ್ರಗಳ ಬಗ್ಗೆಯಾಗಿದೆ.
(8) ಅದು (ನೆಲೆನಿಲ್ಲುವುದು) ಹೇಗೆ? ಅವರು ನಿಮ್ಮ ಮೇಲೆ ಗೆಲುವು ಸಾಧಿಸುವುದಾದರೆ ನಿಮ್ಮ ವಿಷಯದಲ್ಲಿ ಕುಟುಂಬ ಸಂಬಂಧವನ್ನೋ ಒಪ್ಪಂದವನ್ನೋ ಅವರು ಪರಿಗಣಿಸಲಾರರು. ಅವರು ತಮ್ಮ ಬಾಯಿ ಮೂಲಕ ನಿಮ್ಮನ್ನು ಸಂತೃಪ್ತಗೊಳಿಸುವರು. ಆದರೆ ಅವರ ಮನಸ್ಸುಗಳು ಅಸಹ್ಯಪಡುವುವು. ಅವರ ಪೈಕಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವರು.
(9) ಅವರು ಅಲ್ಲಾಹುವಿನ ದೃಷ್ಟಾಂತಗಳನ್ನು ತುಚ್ಛ ಬೆಲೆಗೆ ಮಾರಿದರು. ತರುವಾಯ ಅವನ ಮಾರ್ಗದಿಂದ (ಜನರನ್ನು) ತಡೆದರು. ಖಂಡಿತವಾಗಿಯೂ ಅವರು ಮಾಡುತ್ತಿರುವುದು ಅತ್ಯಂತ ನಿಕೃಷ್ಟವಾಗಿದೆ.
(10) ಯಾವುದೇ ಸತ್ಯವಿಶ್ವಾಸಿಯ ವಿಷಯದಲ್ಲೂ ಅವರು ಕುಟುಂಬ ಸಂಬಂಧವನ್ನೋ ಒಪ್ಪಂದವನ್ನೋ ಪರಿಗಣಿಸಲಾರರು. ಅತಿಕ್ರಮಿಗಳು ಅವರೇ ಆಗಿರುವರು.
(11) ಆದರೆ ಅವರೇನಾದರೂ ಪಶ್ಚಾತ್ತಾಪಪಟ್ಟು, ನಮಾಝನ್ನು ಸಂಸ್ಥಾಪಿಸಿ, ಝಕಾತ್ ನೀಡುವುದಾದರೆ ಧರ್ಮದಲ್ಲಿ ಅವರು ನಿಮ್ಮ ಸಹೋದರರಾಗಿರುವರು. ಅರಿತುಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವೆವು.
(12) ಅವರು ಕರಾರು ಮಾಡಿದ ಬಳಿಕ ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅಪಹಾಸ್ಯ ಮಾಡಿದರೆ ಸತ್ಯನಿಷೇಧದ ನಾಯಕರೊಂದಿಗೆ ನೀವು ಯುದ್ಧ ಮಾಡಿರಿ. ಖಂಡಿತವಾಗಿಯೂ ಅವರಿಗೆ ಪ್ರತಿಜ್ಞೆಗಳೇ ಇಲ್ಲ.(298) ಅವರು ನಿಲ್ಲಿಸಲೂಬಹುದು.
298. ಪ್ರತಿಜ್ಞೆ ಮಾಡಿದರೆ ಅದನ್ನು ನೆರವೇರಿಸುವ ರೂಢಿ ಅವರಿಗಿಲ್ಲ ಎಂದರ್ಥ.
(13) ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿರುವ ಮತ್ತು ಸಂದೇಶವಾಹಕರನ್ನು ಹೊರಗಟ್ಟಲು ಯತ್ನಿಸಿರುವ ಒಂದು ಜನತೆಯೊಂದಿಗೆ ನೀವು ಯುದ್ಧ ಮಾಡುವುದಿಲ್ಲವೇ? ನಿಮ್ಮೊಂದಿಗೆ ಮೊಟ್ಟಮೊದಲ ಬಾರಿ (ಯುದ್ಧವನ್ನು) ಆರಂಭಿಸಿದವರು ಅವರೇ ಆಗಿರುವರು. ನೀವು ಅವರನ್ನು ಭಯಪಡುತ್ತಿರುವಿರಾ? ಆದರೆ ನೀವು ಭಯಪಡಲು ಹೆಚ್ಚು ಅರ್ಹನಾಗಿರುವವನು ಅಲ್ಲಾಹುವಾಗಿರುವನು. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
(14) ನೀವು ಅವರೊಂದಿಗೆ ಯುದ್ಧ ಮಾಡಿರಿ. ಅಲ್ಲಾಹು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು, ಅವರನ್ನು ಅಪಮಾನಗೊಳಿಸುವನು, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ಮಾಡುವನು ಮತ್ತು ಸತ್ಯವಿಶ್ವಾಸಿಗಳ ಹೃದಯಗಳಿಗೆ ಅವನು ಉಪಶಮನವನ್ನು ನೀಡುವನು.
(15) ಅವರ ಹೃದಯಗಳಲ್ಲಿರುವ ಕ್ರೋಧವನ್ನು ಅವನು ನಿವಾರಿಸುವನು. ಅಲ್ಲಾಹು ಅವನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
(16) ನಿಮ್ಮ ಪೈಕಿ ಯುದ್ಧ ಮಾಡಿದವರು ಮತ್ತು ಅಲ್ಲಾಹು, ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳೊಂದಿಗಲ್ಲದೆ ಇನ್ನಾರೊಂದಿಗೂ ಖಾಸಗಿ ಮೈತ್ರಿ ಮಾಡಿಕೊಳ್ಳದವರು ಯಾರೆಂದು ಅರಿತುಕೊಳ್ಳದೆ ಅಲ್ಲಾಹು ನಿಮ್ಮನ್ನು ಬಿಟ್ಟುಬಿಡುವನೆಂದು ನೀವು ಭಾವಿಸಿರುವಿರಾ? ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(17) ಸತ್ಯನಿಷೇಧಕ್ಕೆ ಸ್ವತಃ ಸಾಕ್ಷ್ಯವಹಿಸುವವರಾಗಿರುತ್ತಾ ಅಲ್ಲಾಹುವಿನ ಮಸೀದಿಗಳ ಪರಿಪಾಲನೆ ಮಾಡಲು ಬಹುದೇವಾರಾಧಕರಿಗೆ ಹಕ್ಕಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುವವರಾಗಿವರು.
(18) ಅಲ್ಲಾಹುವಿನ ಮಸೀದಿಗಳನ್ನು ಪರಿಪಾಲನೆ ಮಾಡಬೇಕಾದುದು ಅಲ್ಲಾಹುವಿನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಟ್ಟವರು, ನಮಾಝನ್ನು ಸಂಸ್ಥಾಪಿಸಿದವರು, ಝಕಾತ್ ನೀಡಿದವರು ಮತ್ತು ಅಲ್ಲಾಹುವಿನ ಹೊರತು ಇನ್ನಾರನ್ನೂ ಭಯಪಡದಿರುವವರು ಮಾತ್ರವಾಗಿರುವರು. ಅಂತಹವರು ಸನ್ಮಾರ್ಗ ಪಡೆದವರಲ್ಲಿ ಸೇರಿದವರಾಗಲೂ ಬಹುದು.
(19) ಹಜ್ಜ್ ಯಾತ್ರಾರ್ಥಿಗಳಿಗೆ ಕುಡಿಯಲು ನೀಡುವುದನ್ನು ಮತ್ತು ಮಸ್ಜಿದುಲ್ ಹರಾಮ್ನ ಪರಿಪಾಲನೆ ಮಾಡುವುದನ್ನು ಅಲ್ಲಾಹುವಿನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಹಾಗೂ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುವವರ ಕರ್ಮಗಳಿಗೆ ಸಮಾನವಾಗಿ ನೀವು ಗಣಿಸುತ್ತಿರುವಿರಾ?(299) ಅವರು ಅಲ್ಲಾಹುವಿನ ಬಳಿ ಸಮಾನರಾಗಲಾರರು. ಅಕ್ರಮಿಗಳಾದ ಜನತೆಯನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
299. ಹಜ್ಜ್ ಯಾತ್ರಾರ್ಥಿಗಳಿಗೆ ಕುಡಿಯುವ ನೀರು ನೀಡುವುದು ಮತ್ತು ಮಸ್ಜಿದುಲ್ ಹರಾಮ್ನ ಪರಿಪಾಲನೆ ಮಾಡುವುದನ್ನು ಮಕ್ಕಾದಲ್ಲಿದ್ದ ಬಹುದೇವಾರಾಧಕರು ತಾವು ಮಾಡುವ ಮಹಾ ಪುಣ್ಯಕರ್ಮವಾಗಿ ಎತ್ತಿತೋರಿಸುತ್ತಿದ್ದರು. ಇಂತಹ ಯಾವುದೇ ಪುಣ್ಯಕರ್ಮಗಳು ಅಲ್ಲಾಹುವಿನ ಬಳಿ ಸ್ವೀಕಾರವಾಗಬೇಕಾದರೆ ಸರಿಯಾದ ವಿಶ್ವಾಸ ಮತ್ತು ತ್ಯಾಗ ಸನ್ನದ್ಧತೆಯಿರಬೇಕು. ಬಹುದೇವಾರಾಧಕರಿಗೆ ಇವೆರಡೂ ಇಲ್ಲ. ಆದ್ದರಿಂದ ಅವರು ಮತ್ತು ಸತ್ಯವಿಶ್ವಾಸಿಗಳು ಎಂದೂ ಸಮಾನರಾಗಲಾರರು.
(20) ಸತ್ಯವಿಶ್ವಾಸವಿಟ್ಟವರು, ಸ್ವಂತ ಊರನ್ನು ತ್ಯಜಿಸಿದವರು ಮತ್ತು ತಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿದವರು ಅಲ್ಲಾಹುವಿನ ಬಳಿ ಅತ್ಯುನ್ನತವಾದ ಪದವಿಯುಳ್ಳವರಾಗಿರುವರು. ವಿಜಯಗಳಿಸಿದವರು ಅವರೇ ಆಗಿರುವರು.
(21) ಅವರಿಗೆ ಅವರ ರಬ್ ತನ್ನ ವತಿಯ ಅನುಗ್ರಹ, ಸಂತೃಪ್ತಿ ಮತ್ತು ಸ್ವರ್ಗೋದ್ಯಾನಗಳ ಬಗ್ಗೆ ಶುಭವಾರ್ತೆಯನ್ನು ತಿಳಿಸುವನು. ಅವರಿಗೆ ಅಲ್ಲಿ ಶಾಶ್ವತವಾದ ಸುಖಾನುಭೂತಿಗಳಿರುವುದು.
(22) ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಖಂಡಿತವಾಗಿಯೂ ಮಹಾ ಪ್ರತಿಫಲವಿರುವುದು ಅಲ್ಲಾಹುವಿನ ಬಳಿಯಲ್ಲಾಗಿದೆ.
(23) ಓ ಸತ್ಯವಿಶ್ವಾಸಿಗಳೇ! ನಿಮ್ಮ ತಂದೆಯಂದಿರಾಗಲಿ, ನಿಮ್ಮ ಸಹೋದರರಾಗಲಿ ಸತ್ಯವಿಶ್ವಾಸಕ್ಕಿಂತ ಸತ್ಯನಿಷೇಧ ವನ್ನು ಇಷ್ಟಪಡುವುದಾದರೆ ನೀವು ಅವರನ್ನು ರಕ್ಷಕರನ್ನಾಗಿ ಮಾಡಿಕೊಳ್ಳದಿರಿ. ನಿಮ್ಮ ಪೈಕಿ ಯಾರಾದರೂ ಅವರನ್ನು ರಕ್ಷಕರನ್ನಾಗಿ ಮಾಡಿಕೊಳ್ಳುವುದಾದರೆ ಅವರೇ ಅಕ್ರಮಿಗಳಾಗಿರುವರು.
(24) (ಓ ಪ್ರವಾದಿಯವರೇ!) ಹೇಳಿರಿ: ‘ನಿಮ್ಮ ತಂದೆಯಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಸಂಗಾತಿಗಳು, ನಿಮ್ಮ ಕುಟುಂಬಿಕರು, ನೀವು ಸಂಪಾದಿಸಿಟ್ಟಿರುವ ಸಂಪತ್ತುಗಳು, ಕುಸಿತ ಎದುರಾಗಬಹುದೆಂದು ನೀವು ಭಯಪಡುವ ವ್ಯಾಪಾರ, ನೀವು ತೃಪ್ತಿಪಡುವ ವಸತಿಗಳು ನಿಮಗೆ ಅಲ್ಲಾಹುವಿಗಿಂತಲೂ, ಅವನ ಸಂದೇಶವಾಹಕರಿಗಿಂತಲೂ ಮತ್ತು ಅವನ ಮಾರ್ಗದಲ್ಲಿರುವ ಹೋರಾಟಕ್ಕಿಂತಲೂ ಹೆಚ್ಚು ಪ್ರಿಯವಾಗಿರುವುದಾದರೆ ಅಲ್ಲಾಹು ತನ್ನ ಆದೇಶವನ್ನು ತರುವವರೆಗೆ ನೀವು ಕಾಯುತ್ತಿರಿ. ಧಿಕ್ಕಾರಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.’(300)
300. ಲೌಕಿಕ ಸಂಬಂಧಗಳಿಗೆ ಮತ್ತು ಐಹಿಕ ಲಾಭಗಳಿಗೆ ಅಲ್ಲಾಹುವಿನ ಮಾರ್ಗದರ್ಶನಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡುವವರಿಗೆ ಈ ಸೂಕ್ತಿಯು ಕಠಿಣವಾದ ಎಚ್ಚರಿಕೆಯನ್ನು ನೀಡುತ್ತದೆ.
(25) ಖಂಡಿತವಾಗಿಯೂ ಅನೇಕ (ಯುದ್ಧ)ಕ್ಷೇತ್ರಗಳಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿರುವನು. ಹುನೈನ್ (ಯುದ್ಧದ) ದಿನದಂದೂ(301) (ಸಹಾಯ ಮಾಡಿರುವನು). ಅಂದರೆ ನಿಮ್ಮ ಸಂಖ್ಯಾಬಲವು ನಿಮಗೆ ಆಹ್ಲಾದ ನೀಡಿದ, ಆದರೆ ಅದು ನಿಮಗೆ ಯಾವುದೇ ಪ್ರಯೋಜನವನ್ನೂ ಮಾಡದ ಮತ್ತು ಭೂಮಿಯು ವಿಶಾಲವಾಗಿದ್ದೂ ನಿಮಗೆ ಇಕ್ಕಟ್ಟಾಗಿ ಬಿಟ್ಟ ಹಾಗೂ ತದನಂತರ ನೀವು ವಿಮುಖರಾಗಿ ಹೋದ ಸಂದರ್ಭ.
301. ಹಿಜ್ರಾ 8ನೇ ವರ್ಷದಲ್ಲಿ ಹುನೈನ್ ಯುದ್ಧವು ಜರಗಿತು. ಮಕ್ಕಾ ವಿಜಯದಿಂದಾಗಿ ಕುಪಿತರಾದ ಕೆಲವೊಂದು ಗೋತ್ರಗಳು ಮುಸ್ಲಿಮರ ವಿರುದ್ಧ ಯುದ್ಧ ಸಾರಿದರು. ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದೂ ಸಹ ಯುದ್ಧದ ಆರಂಭ ಘಟ್ಟದಲ್ಲಿ ಪ್ರವಾದಿ(ಸ) ರವರು ಮತ್ತು ಕೆಲವು ಆಪ್ತ ಅನುಚರರ ಹೊರತು ಉಳಿದವರೆಲ್ಲರೂ ವಿಮುಖರಾಗಿ ಓಡಿದರು. ಆದರೆ ಓಡಿಹೋದವರು ತಡವರಿಸದೆ ರಣರಂಗಕ್ಕೆ ಮರಳಿ ಅಲ್ಲಾಹುವಿನ ಸಹಾಯದೊಂದಿಗೆ ಹೋರಾಡಿ ಗೆಲುವನ್ನು ಪಡೆದರು.
(26) ತರುವಾಯ ಅಲ್ಲಾಹು ತನ್ನ ಸಂದೇಶವಾಹಕರ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ತನ್ನ ವತಿಯ ಮನಃಶಾಂತಿಯನ್ನು ಇಳಿಸಿದನು. ನೀವು ಕಾಣದಿರುವಂತಹ ಕೆಲವು ಸೈನ್ಯಗಳನ್ನೂ ಇಳಿಸಿದನು ಮತ್ತು ಸತ್ಯನಿಷೇಧಿಗಳನ್ನು ಶಿಕ್ಷಿಸಿದನು. ಇದು ಸತ್ಯನಿಷೇಧಿಗಳಿಗಿರುವ ಪ್ರತಿಫಲವಾಗಿದೆ.
(27) ತರುವಾಯ ಅದರ ಬಳಿಕ ಅಲ್ಲಾಹು ಅವನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(28) ಓ ಸತ್ಯವಿಶ್ವಾಸಿಗಳೇ! ಬಹುದೇವವಿಶ್ವಾಸಿಗಳು ಅಶುದ್ಧರಾಗಿರುವರು.(302) ಆದ್ದರಿಂದ ಈ ವರ್ಷದ ಬಳಿಕ ಅವರು ಮಸ್ಜಿದುಲ್ ಹರಾಮ್ನ ಸಮೀಪಕ್ಕೆ ಬರದಿರಲಿ.(303) (ಅವರ ಅನುಪಸ್ಥಿತಿಯಲ್ಲಿ) ಬಡತನವು ಎದುರಾಗಬಹುದೆಂದು ನೀವು ಭಯಪಡುವುದಾದರೆ ಅಲ್ಲಾಹು ಇಚ್ಛಿಸಿದರೆ ಅವನು ತನ್ನ ಅನುಗ್ರಹದಿಂದ ನಿಮಗೆ ಐಶ್ವರ್ಯವನ್ನು ನೀಡುವನು.(304) ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
302. ಇದರ ತಾತ್ಪರ್ಯ ಬಹುದೇವವಿಶ್ವಾಸಿಗಳ ದೇಹವು ಅಶುದ್ಧವಾಗಿದೆ ಎಂದಲ್ಲ. ಅವರೊಂದಿಗೆ ಅಸ್ಪೃಶ್ಯತೆಯಿಂದ ವರ್ತಿಸಬೇಕು ಎಂದಲ್ಲ. ಬದಲಾಗಿ ಅವಿಶ್ವಾಸ ಮತ್ತು ಅಧಾರ್ಮಿಕತೆಯ ನಿಮಿತ್ತ ಅವರ ಹೃದಯ ಮತ್ತು ಆತ್ಮ ಮಲಿನಗೊಂಡಿದೆ ಎಂದಾಗಿದೆ.
303. ಮಸ್ಜಿದುಲ್ ಹರಾಮ್ ಸ್ಥಾಪಿಸಲ್ಪಟ್ಟಿರುವುದು ಅಲ್ಲಾಹುವಿನ ಆರಾಧನೆಗಾಗಿ ಮಾತ್ರವಾಗಿದೆ. ತನ್ಮಧ್ಯೆ ಅಲ್ಲಿ ಬಹುದೇವಾರಾಧನಾ ಸಂಪ್ರದಾಯಗಳು ನುಸುಳಿಕೊಂಡವು. ಪ್ರವಾದಿ(ಸ) ರವರು ಮಕ್ಕಾವನ್ನು ಜಯಿಸಿದೊಡನೆ ಮಸ್ಜಿದುಲ್ ಹರಾಮ್ನಲ್ಲಿದ್ದ ವಿಗ್ರಹಗಳನ್ನು ತೊಲಗಿಸಿ ಅದನ್ನು ಶುದ್ಧೀಕರಿಸಿದರು ಮತ್ತು ಬಹುದೇವಾರಾಧಕರಿಗೆ ಮಸ್ಜಿದುಲ್ ಹರಾಮ್ನ ಪ್ರವೇಶವನ್ನು ನಿಷಿದ್ಧಗೊಳಿಸಿದರು.
304. ಮಕ್ಕಾ ನಿವಾಸಿಗಳ ಆದಾಯವು ಸಂಪೂರ್ಣವಾಗಿ ಹಜ್ಜ್ ಯಾತ್ರಾರ್ಥಿಗಳನ್ನು ಅವಲಂಬಿಸಿದೆ. ಬಹುದೇವಾರಾಧಕರಿಗೆ ಪ್ರವೇಶ ನಿಷಿದ್ಧಗೊಳಿಸಿದರೆ ಆದಾಯದಲ್ಲಿ ಕುಸಿತವುಂಟಾಗಬಹುದು ಎಂಬ ಅವರ ಭಯವನ್ನು ಅಲ್ಲಾಹು ದೂರೀಕರಿಸಿರುವನು.
(29) ಗ್ರಂಥ ನೀಡಲಾದವರ ಪೈಕಿ ಅಲ್ಲಾಹುವಿನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡದವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷಿದ್ಧಗೊಳಿಸಿರುವುದನ್ನು ನಿಷಿದ್ಧವೆಂದು ಪರಿಗಣಿಸದವರು ಮತ್ತು ಸತ್ಯಧರ್ಮವನ್ನು ಧರ್ಮವಾಗಿ ಸ್ವೀಕಾರ ಮಾಡದವರು ಯಾರೋ ಅವರು ವಿಧೇಯತೆಯೊಂದಿಗೆ ಸ್ವತಃ ತಮ್ಮ ಕೈಯಿಂದ ಕಪ್ಪವನ್ನು ನೀಡುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.
(30) ಉಝೈರ್ (ಎಜ್ರಾ ಪ್ರವಾದಿ) ಅಲ್ಲಾಹುವಿನ ಪುತ್ರರಾಗಿರುವರೆಂದು ಯಹೂದರು ಹೇಳಿದರು. ಮಸೀಹ್ (ಯೇಸು) ಅಲ್ಲಾಹುವಿನ ಪುತ್ರರಾಗಿರುವರೆಂದು ಕ್ರೈಸ್ತರು ಹೇಳಿದರು. ಅದು ಅವರು ಬಾಯಿ ಮೂಲಕ ಹೇಳುವ ಮಾತುಗಳಾಗಿವೆ. ಈ ಮೊದಲು ನಿಷೇಧಿಸಿದವರ ಮಾತುಗಳನ್ನು ಅವರು ಅನುಕರಿಸುತ್ತಿರುವರು. ಅಲ್ಲಾಹು ಅವರನ್ನು ಶಪಿಸಿರುವನು. ಅವರು (ಸತ್ಯದಿಂದ) ಹೇಗೆ ತಪ್ಪಿಸಲ್ಪಡುತ್ತಿರುವರು?
(31) ಅವರು ಅಲ್ಲಾಹುವಿನ ಹೊರತು ತಮ್ಮ ವಿದ್ವಾಂಸರನ್ನೂ, ಪುರೋಹಿತರನ್ನೂ, ಮರ್ಯಮ್ರ ಮಗನಾದ ಮಸೀಹರನ್ನೂ ರಬ್ಗಳನ್ನಾಗಿ ಮಾಡಿಕೊಂಡರು. ಆದರೆ ಏಕೈಕ ಆರಾಧ್ಯನನ್ನು ಮಾತ್ರ ಆರಾಧಿಸಬೇಕು ಎಂಬುದನ್ನಲ್ಲದೆ ಬೇರೇನನ್ನೂ ಅವರೊಂದಿಗೆ ಆದೇಶಿಸಲಾಗಿರಲಿಲ್ಲ. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವರು ಸಹಭಾಗಿತ್ವ ಮಾಡುವುದರಿಂದ ಅವನು ಎಷ್ಟೋ ಪರಿಶುದ್ಧನಾಗಿರುವನು.
(32) ಅವರು ತಮ್ಮ ಬಾಯಿಯಿಂದ ಅಲ್ಲಾಹುವಿನ ಪ್ರಕಾಶವನ್ನು ಊದಿ ನಂದಿಸಲು ಇಚ್ಛಿಸುತ್ತಿರುವರು. ಆದರೆ ಸತ್ಯನಿಷೇಧಿಗಳು ಎಷ್ಟು ಅಸಹ್ಯಪಟ್ಟರೂ ಅಲ್ಲಾಹು ತನ್ನ ಪ್ರಕಾಶವನ್ನು ಪೂರ್ಣಗೊಳಿಸದೆ ಬಿಡಲಾರನು.
(33) ಮಾರ್ಗದರ್ಶನ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದವನು ಅವನೇ ಆಗಿರುವನು. ಎಲ್ಲ ಧರ್ಮಗಳ ಮೇಲೂ ಅದು ಮೇಲುಗೈ ಸಾಧಿಸುವುದಕ್ಕಾಗಿ. ಬಹುದೇವವಿಶ್ವಾಸಿಗಳು ಎಷ್ಟು ಅಸಹ್ಯಪಟ್ಟರೂ ಸರಿ.
(34) ಓ ಸತ್ಯವಿಶ್ವಾಸಿಗಳೇ! ಖಂಡಿತವಾಗಿಯೂ ವಿದ್ವಾಂಸರು ಮತ್ತು ಪುರೋಹಿತರ ಪೈಕಿ ಹೆಚ್ಚಿನವರು ಅನ್ಯಾಯವಾಗಿ ಜನರ ಸಂಪತ್ತನ್ನು ತಿನ್ನುವವರೂ, ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವವರೂ ಆಗಿರುವರು.(305) ಚಿನ್ನ ಮತ್ತು ಬೆಳ್ಳಿಯನ್ನು ನಿಕ್ಷೇಪ ಮಾಡಿಡುವವರು ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಅದನ್ನು ವ್ಯಯಿಸದಿರುವವರು ಯಾರೋ ಅವರಿಗೆ ಯಾತನಾಮಯವಾದ ಶಿಕ್ಷೆಯಿದೆಯೆಂಬ ಶುಭವಾರ್ತೆಯನ್ನು ತಿಳಿಸಿರಿ.
305. ಪ್ರವಾದಿಗಳನ್ನು ಕಳುಹಿಸಲಾಗಿರುವುದು ಜನರನ್ನು ಅಲ್ಲಾಹುವಿಗೆ ನಿಕಟಗೊಳಿಸುವ ಸಲುವಾಗಿದೆ. ಯಾವುದೇ ಮಧ್ಯವರ್ತಿಯೂ ಇಲ್ಲದೆ ಅಲ್ಲಾಹುವಿನೊಂದಿಗೆ ನೇರವಾಗಿ ಪ್ರಾರ್ಥಿಸಬೇಕೆಂದು ಕಲಿಸುವುದಕ್ಕಾಗಿದೆ. ಆದರೆ ಪುರೋಹಿತರು ಎಲ್ಲಾ ಕಾಲದಲ್ಲೂ ಇದಕ್ಕೆ ವಿರುದ್ಧವಾಗಿ ವರ್ತಿಸುವವರಾಗಿದ್ದಾರೆ. ಅವರು ಅಲ್ಲಾಹುವಿನ ಮತ್ತು ಜನರ ಮಧ್ಯೆ ಮಧ್ಯವರ್ತಿಗಳಾಗಿ ವರ್ತಿಸಿ ಜನರನ್ನು ಶೋಷಣೆ ಮಾಡುವುದಕ್ಕಾಗಿ ಧರ್ಮಗ್ರಂಥಗಳನ್ನು ದುರ್ವ್ಯಾಖ್ಯಾನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅವರು ಜನರನ್ನು ಅಲ್ಲಾಹುವಿನಿಂದ ದೂರ ಮಾಡುವುದರಲ್ಲಿ ನಿರತರಾಗಿದ್ದಾರೆ.
(35) ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಸಿ, ತರುವಾಯ ಅದರಿಂದ ಅವರ ಹಣೆಗಳ, ಪಾರ್ಶ್ವಗಳ ಮತ್ತು ಬೆನ್ನುಗಳ ಮೇಲೆ ಬರೆ ಎಳೆಯುವ ದಿನದಂದು ‘ಇದು ನೀವು ನಿಮಗೋಸ್ಕರ ನಿಕ್ಷೇಪ ಮಾಡಿಟ್ಟಿರುವ ನಿಧಿಯಾಗಿದೆ. ಆದ್ದರಿಂದ ನೀವು ನಿಕ್ಷೇಪ ಮಾಡಿಟ್ಟಿರುವುದನ್ನು ಆಸ್ವಾದಿಸಿರಿ’ (ಎಂದು ಅವರೊಂದಿಗೆ ಹೇಳಲಾಗುವುದು).
(36) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ದಿನದಂದು ಅಲ್ಲಾಹು ದಾಖಲಿಸಿರುವ ಪ್ರಕಾರ ಅಲ್ಲಾಹುವಿನ ಬಳಿ ತಿಂಗಳುಗಳ ಸಂಖ್ಯೆಯು ಹನ್ನೆರಡಾಗಿದೆ. ಅವುಗಳ ಪೈಕಿ ನಾಲ್ಕು (ಯುದ್ಧವನ್ನು) ನಿಷಿದ್ಧಗೊಳಿಸಲಾದ ತಿಂಗಳುಗಳಾಗಿವೆ. ಅದೇ ಋಜುವಾದ ಧರ್ಮ. ಆದ್ದರಿಂದ ಆ (ನಾಲ್ಕು) ತಿಂಗಳುಗಳಲ್ಲಿ ನೀವು ಸ್ವತಃ ನಿಮ್ಮ ಮೇಲೆಯೇ ಅಕ್ರಮವೆಸಗದಿರಿ. ಬಹುದೇವವಿಶ್ವಾಸಿಗಳು ನಿಮ್ಮೊಂದಿಗೆ ಒಟ್ಟಾಗಿ ಯುದ್ಧ ಮಾಡುವಂತೆ ನೀವೂ ಅವರೊಂದಿಗೆ ಒಟ್ಟಾಗಿ ಯುದ್ಧ ಮಾಡಿರಿ. ಖಂಡಿತವಾಗಿಯೂ ಅಲ್ಲಾಹು ಭಯಭಕ್ತಿ ಪಾಲಿಸುವವರ ಜೊತೆಗಿರುವನೆಂಬುದನ್ನು ನೀವು ಅರಿತುಕೊಳ್ಳಿರಿ.
(37) ನಿಷಿದ್ಧಗೊಳಿಸಲಾದ ತಿಂಗಳನ್ನು ಮುಂದೂಡುವುದು ಸತ್ಯನಿಷೇಧದ ವೃದ್ಧಿಯಾಗಿದೆ.(306) ತನ್ಮೂಲಕ ಸತ್ಯನಿಷೇಧಿಗಳು ಪಥಭ್ರಷ್ಟತೆಯೆಡೆಗೆ ಒಯ್ಯಲ್ಪಡುತ್ತಿರುವರು. ಒಂದು ವರ್ಷದಲ್ಲಿ ಅವರದನ್ನು ಸಮ್ಮತಾರ್ಹೊಗೊಳಿಸುವರು. ಮತ್ತೊಂದು ವರ್ಷದಲ್ಲಿ ಅದನ್ನು ನಿಷಿದ್ಧಗೊಳಿಸುವರು. ಅಲ್ಲಾಹು ನಿಷಿದ್ಧಗೊಳಿಸಿದ (ತಿಂಗಳುಗಳ) ಸಂಖ್ಯೆಯನ್ನು ಸರಿದೂಗಿಸಲು ಮತ್ತು ಅಲ್ಲಾಹು ನಿಷಿದ್ಧಗೊಳಿಸಿರುವುದನ್ನು ಸಮ್ಮತಾರ್ಹಗೊಳಿಸಲು ಅವರು ಹೀಗೆ ಮಾಡುತ್ತಿರುವರು. ಅವರ ದುಷ್ಕೃತ್ಯಗಳನ್ನು ಅವರಿಗೆ ಆಕರ್ಷಣೀಯಗೊಳಿಸಿ ತೋರಿಸಲಾಗಿದೆ. ಸತ್ಯನಿಷೇಧಿಗಳಾದ ಜನತೆಯನ್ನು ಅಲ್ಲಾಹು ಸತ್ಯಮಾರ್ಗದಲ್ಲಿ ಸೇರಿಸಲಾರನು.
306. ಯುದ್ಧದಾಹಿಗಳಾದ ಅರೇಬಿಯನ್ ಗೋತ್ರಗಳಿಗೆ ನಿರಂತರ ಮೂರು ತಿಂಗಳುಗಳ ಕಾಲ ಯುದ್ಧ ಮಾಡದೆ ಸುಮ್ಮನಿರಲು ಏನೋ ಒಂದು ಅಳುಕು. ಆದ್ದರಿಂದ ಯುದ್ಧ ನಿಷಿದ್ಧವಾದ ಯಾವುದಾದರೂ ಒಂದು ತಿಂಗಳಲ್ಲಿ ಯುದ್ಧದ ಅಗತ್ಯ ಬಂದರೆ ಯುದ್ಧ ಮಾಡಿ, ನಂತರ ಬರುವ ಯಾವುದಾದರೂ ಒಂದು ತಿಂಗಳನ್ನು ಇದಕ್ಕೆ ಬದಲಿಯಾಗಿ ಯುದ್ಧ ನಿಷಿದ್ಧವೆಂದು ಪರಿಗಣಿಸುವ ಸಂಪ್ರದಾಯ ಅವರ ಮಧ್ಯೆ ರೂಢಿಯಲ್ಲಿತ್ತು. ಇದನ್ನು ‘ನಸೀಅ್’ ಎನ್ನಲಾಗುತ್ತದೆ. ತೀರ್ಥಾಟನೆಯು ವರ್ಷಂಪ್ರತಿ ಒಂದೇ ಋತುವಿನಲ್ಲಾಗುವ ಸಲುವಾಗಿ ಚಾಂದ್ರಮಾನ ವರ್ಷವನ್ನು ಸೌರಮಾನ ವರ್ಷದೊಂದಿಗೆ ಸರಿದೂಗಿಸುವುದನ್ನೂ ‘ನಸೀಅ್’ ಎನ್ನಲಾಗುತ್ತದೆ. ಇವೆಲ್ಲವೂ ನಿಷಿದ್ಧವಾಗಿವೆ.
(38) ಓ ಸತ್ಯವಿಶ್ವಾಸಿಗಳೇ! ನಿಮಗೇನಾಗಿದೆ? ‘ಅಲ್ಲಾಹುವಿನ ಮಾರ್ಗದಲ್ಲಿ (ಯುದ್ಧಕ್ಕಾಗಿ) ಹೊರಡಿರಿ’ ಎಂದು ನಿಮ್ಮೊಂದಿಗೆ ಹೇಳಲಾದಾಗ ನೀವು ಭೂಮಿಯೆಡೆಗೆ ತೊನೆದಾಡುತ್ತಿರುವಿರಿ! ಪರಲೋಕಕ್ಕೆ ಬದಲಾಗಿ ಐಹಿಕ ಜೀವನದಲ್ಲಿ ನೀವು ಸಂತೃಪ್ತರಾಗಿರುವಿರಾ? ಆದರೆ ಪರಲೋಕದ ಮುಂದೆ ಐಹಿಕ ಸುಖಗಳು ತುಚ್ಛವೇ ಆಗಿವೆ.
(39) ನೀವು (ಯುದ್ಧಕ್ಕಾಗಿ) ಹೊರಡದಿದ್ದರೆ ಅಲ್ಲಾಹು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಹೊರತಾದ ಬೇರೊಂದು ಜನತೆಯನ್ನು ಬದಲಿಯಾಗಿ ತರುವನು. ನೀವು ಅವನಿಗೆ ಯಾವುದೇ ಹಾನಿಯನ್ನೂ ಮಾಡಲಾರಿರಿ. ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(40) ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ; ಸತ್ಯನಿಷೇಧಿಗಳು ಅವರನ್ನು ಹೊರಗಟ್ಟಿದ ಸಂದರ್ಭದಲ್ಲಿ ಮತ್ತು ಅವರು ಇಬ್ಬರಲ್ಲಿ ಒಬ್ಬರಾಗಿ ಅಥವಾ ಅವರಿಬ್ಬರೂ (ಪ್ರವಾದಿಯವರು ಮತ್ತು ಅಬೂಬಕ್ರ್) ಗುಹೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಾಹು ಅವರಿಗೆ ಸಹಾಯ ಮಾಡಿರುವನು. ಅವರು ತಮ್ಮ ಸಂಗಡಿಗನೊಂದಿಗೆ ‘ದುಃಖಿಸದಿರಿ, ಖಂಡಿತವಾಗಿಯೂ ಅಲ್ಲಾಹು ನಮ್ಮೊಂದಿಗಿರುವನು’(307) ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ವತಿಯ ಶಾಂತಿಯನ್ನು ಇಳಿಸಿದನು, ನೀವು ಕಾಣದಂತಹ ಸೈನ್ಯಗಳೊಂದಿಗೆ ಅವರಿಗೆ ಬೆಂಬಲವನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಅತ್ಯಂತ ಕೀಳಾಗಿಸಿದನು. ಅಲ್ಲಾಹುವಿನ ವಚನವು ಅತ್ಯುನ್ನತವಾಗಿರುವುದಾಗಿದೆ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
307. ಸತ್ಯನಿಷೇಧಿಗಳು ಪ್ರವಾದಿ(ಸ) ರವರನ್ನು ವಧಿಸಲು ನಿರ್ಧರಿಸಿದಾಗ ತಮ್ಮ ಊರಾದ ಮಕ್ಕವನ್ನು ತ್ಯಜಿಸಿ ಪಲಾಯನ ಮಾಡುವುದು ಅವರಿಗೆ ಅನಿವಾರ್ಯವಾಯಿತು. ರಾತ್ರಿ ವೇಳೆಯಲ್ಲಿ ಯಾರೂ ತಿಳಿಯದಂತೆ ಪ್ರವಾದಿ(ಸ) ರವರು ಮತ್ತು ಅಬೂಬಕರ್(ರ) ರವರು ಮದೀನಾದೆಡೆಗೆ ಹೊರಟರು. ಬೆಳಗಾದಾಗ ಪ್ರವಾದಿ(ಸ) ರವರು ಪಾರಾದ ವಿಷಯವನ್ನು ಅರಿತ ಶತ್ರುಗಳು ಅವರನ್ನು ಹುಡುಕಲು ಆರಂಭಿಸಿದರು. ತಮ್ಮನ್ನು ಶತ್ರುಗಳು ಹಿಂಬಾಲಿಸುತ್ತಿದ್ದಾರೆಂಬುದನ್ನು ಅರಿತ ಪ್ರವಾದಿ(ಸ) ರವರು ಮತ್ತು ಅಬೂಬಕರ್(ರ) ರವರು ಸೌರ್ ಪರ್ವತದ ಒಂದು ಗುಹೆಯಲ್ಲಿ ಆಶ್ರಯಪಡೆದರು. ಶತ್ರುಗಳು ಗುಹೆಯ ಮುಂಭಾಗಕ್ಕೆ ಬಂದರು. ಆಗ ಅಬೂಬಕರ್(ರ) ತನ್ನ ಭಯವನ್ನು ಪ್ರಕಟಿಸಿದರು. ಆಗ ಪ್ರವಾದಿ(ಸ) ರವರು ನೀಡಿದ ಉತ್ತರವಾಗಿದೆ ಇದು. ಅವರನ್ನು ಕಾಣಲು ಸಾಧ್ಯವಾಗದೆ ಶತ್ರುಗಳು ಹೊರಟುಹೋದರು. ಇದು ಅಲ್ಲಾಹುವಿನ ಒಂದು ವಿಶೇಷ ಸಹಾಯವಾಗಿತ್ತು.
(41) ನೀವು ಅನುಕೂಲತೆಯಲ್ಲಿರುವಾಗಲೂ, ಇಕ್ಕಟ್ಟಿನಲ್ಲಿರುವಾಗಲೂ (ಯುದ್ಧಕ್ಕಾಗಿ) ಹೊರಡಿರಿ. ನಿಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.
(42) ಹತ್ತಿರದಲ್ಲೇ ಇರುವ ಒಂದು ಲಾಭವಾಗಿದ್ದರೆ ಮತ್ತು ಪ್ರಯಾಸಕರವಲ್ಲದ ಯಾತ್ರೆಯಾಗಿದ್ದರೆ ಅವರು ತಮ್ಮನ್ನು ಹಿಂಬಾಲಿಸುತ್ತಿದ್ದರು. ಆದರೆ ಪ್ರಯಾಸಕರವಾಗಿರುವ ಯಾತ್ರೆಯ ಗುರಿಯು ಅವರಿಗೆ ವಿದೂರವಾಗಿ ತೋರುತ್ತಿದೆ.(308) ‘ನಮಗೆ ಸಾಧ್ಯವಿರುತ್ತಿದ್ದರೆ ನಾವೂ ನಿಮ್ಮೊಂದಿಗೆ ಹೊರಡುತ್ತಿದ್ದೆವು’ ಎಂದು ಅವರು ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಹೇಳುವರು. ಅವರು ಸ್ವತಃ ತಮ್ಮನ್ನೇ ನಾಶ ಮಾಡುತ್ತಿರುವರು. ಖಂಡಿತವಾಗಿಯೂ ಅವರು ಸುಳ್ಳು ಹೇಳುತ್ತಿರುವರೆಂದು ಅಲ್ಲಾಹುವಿಗೆ ತಿಳಿದಿದೆ.
308. ಜನರು ಬರ ಮತ್ತು ಕ್ಷಾಮದಿಂದಾಗಿ ಸಂಕಷ್ಟದಲ್ಲಿದ್ದಾಗ ತಬೂಕ್ಗೆ ಯುದ್ಧಕ್ಕೆ ಹೊರಡಲು ಆದೇಶವುಂಟಾಯಿತು. ಇಲ್ಲಿ ಸೂಚಿಸಿರುವುದು ಪ್ರತಿಕೂಲ ಪರಿಸ್ಥಿತಿಯಲ್ಲಿ ವಿದೂರ ಸ್ಥಳಕ್ಕೆ ಹೋಗಿ ಯುದ್ಧ ಮಾಡಲು ಹಿಂಜರಿದ ಕಪಟವಿಶ್ವಾಸಿಗಳ ಬಗ್ಗೆಯಾಗಿದೆ.
(43) (ಓ ಪ್ರವಾದಿಯವರೇ!) ಅಲ್ಲಾಹು ತಮ್ಮನ್ನು ಕ್ಷಮಿಸಿರುವನು. ಸತ್ಯವನ್ನು ನುಡಿಯುವವರು ಯಾರೆಂದು ತಮಗೆ ಸ್ಪಷ್ಟವಾಗಿ ತಿಳಿದುಬರುವ ತನಕ ಮತ್ತು ಸುಳ್ಳು ನುಡಿಯುವವರನ್ನು ತಾವು ಗುರುತಿಸುವ ತನಕ ತಾವೇಕೆ ಅವರಿಗೆ ಅನುಮತಿ ನೀಡಿದಿರಿ?
(44) ಅಲ್ಲಾಹುವಿನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರು ಯಾರೋ ಅವರು ತಮ್ಮ ಸಂಪತ್ತುಗಳ ಮೂಲಕ ಮತ್ತು ಶರೀರಗಳ ಮೂಲಕ ಯುದ್ಧ ಮಾಡುವುದರಿಂದ ಬಿಟ್ಟುನಿಲ್ಲಲು ತಮ್ಮೊಂದಿಗೆ ಅನುಮತಿ ಬೇಡಲಾರರು. ಭಯಭಕ್ತಿ ಪಾಲಿಸುವವರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿತಿರುವನು.
(45) ತಮ್ಮಲ್ಲಿ ಅನುಮತಿ ಬೇಡುವವರು ಅಲ್ಲಾಹುವಿನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಹೃದಯಗಳಲ್ಲಿ ಸಂದೇಹವನ್ನು ಹೊಂದಿರುವವರು ಮಾತ್ರವಾಗಿರುವರು. ಯಾಕೆಂದರೆ ಅವರು ತಮ್ಮ ಸಂದೇಹದಲ್ಲಿ ತೊಳಲಾಡುತ್ತಿರುವರು.
(46) ಅವರು ಹೊರಡಲು ಇಚ್ಛಿಸಿದ್ದರೆ ಅದಕ್ಕೆ ಬೇಕಾದ ತಯಾರಿಗಳೆಲ್ಲವನ್ನೂ ಮಾಡಿಕೊಳ್ಳುತ್ತಿದ್ದರು. ಆದರೆ ಅವರ ಹೊರಡುವಿಕೆಯನ್ನು ಅಲ್ಲಾಹು ಇಷ್ಟಪಡದಿರುವುದರಿಂದ ಅವನು ಅವರನ್ನು ಹಿಂದೆಯೇ ಉಳಿಸಿದನು. ‘ಹಿಂದೆ ಉಳಿದುಕೊಳ್ಳುವವರೊಂದಿಗೆ ನೀವೂ ಉಳಿದುಕೊಳ್ಳಿರಿ’ ಎಂದು ಅವರೊಡನೆ ಹೇಳಲಾಯಿತು.
(47) ಅವರು ನಿಮ್ಮೊಂದಿಗೆ ಹೊರಡುತ್ತಿದ್ದರೆ ನಿಮಗೆ ನಾಶವನ್ನಲ್ಲದೆ ಇನ್ನೇನನ್ನೂ ಅವರು ಅಧಿಕಗೊಳಿಸಿಕೊಡುತ್ತಿರಲಿಲ್ಲ. ನಿಮ್ಮ ಮಧ್ಯೆ ಅವ್ಯವಸ್ಥೆಯನ್ನುಂಟು ಮಾಡಲು ಹವಣಿಸುತ್ತಾ ಅವರು ನಿಮ್ಮ ನಡುವೆ ಓಡಾಡುತ್ತಿದ್ದರು.(309) ಅವರು ಹೇಳುವುದನ್ನು ಕಿವಿಗೊಟ್ಟು ಆಲಿಸುವವರೂ ನಿಮ್ಮಲ್ಲಿರುವರು. ಅಲ್ಲಾಹು ಅಕ್ರಮಿಗಳ ಬಗ್ಗೆ ಚೆನ್ನಾಗಿ ಅರಿತಿರುವನು.
309. ಸುಳ್ಳು ಹೇಳುತ್ತಲೂ ಚಾಡಿ ಹೇಳುತ್ತಲೂ ನಿಮ್ಮ ಮಧ್ಯೆ ಗೊಂದಲವುಂಟಾಗುವಂತೆ ಮಾಡಲು ಮತ್ತು ಸೈನಿಕರನ್ನು ಹಿಂಜರಿಯುವಂತೆ ಮಾಡಲು ಅವರು ಗರಿಷ್ಠ ಪ್ರಯತ್ನ ಮಾಡುತ್ತಿದ್ದರು ಎಂದರ್ಥ.
(48) ಮುಂಚೆಯೂ ಅವರು ಅವ್ಯವಸ್ಥೆಯನ್ನುಂಟು ಮಾಡಲು ಹವಣಿಸಿದ್ದರು ಮತ್ತು ತಮಗೆದುರಾಗಿ ವಿಷಯಗಳನ್ನು ಬುಡಮೇಲುಗೊಳಿಸಿದ್ದ್ದರು. ಕೊನೆಗೆ ಅವರು ಅಸಹ್ಯಪಡುವವರಾಗಿದ್ದೂ ಸಹ ಸತ್ಯವು ಬಂದಿತು ಮತ್ತು ಅಲ್ಲಾಹುವಿನ ತೀರ್ಮಾನವು ಜಯಗಳಿಸಿತು.
(49) ‘(ಯುದ್ಧಕ್ಕೆ ಹೊರಡದಿರಲು) ನನಗೆ ಅನುಮತಿ ನೀಡಿರಿ. ನನ್ನನ್ನು ಕ್ಷೋಭೆಗೆ ತಳ್ಳದಿರಿ’ ಎಂದು ಹೇಳುವ ಕೆಲವರು ಅವರಲ್ಲಿರುವರು. ಅರಿತುಕೊಳ್ಳಿರಿ! ಅವರು ಬಿದ್ದಿರುವುದು ಕ್ಷೋಭೆಯಲ್ಲೇ ಆಗಿದೆ. ಖಂಡಿತವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
(50) ತಮಗೇನಾದರೂ ಒಳಿತುಂಟಾದರೆ ಅದು ಅವರನ್ನು ದುಃಖಿತರನ್ನಾಗಿ ಮಾಡುವುದು. ತಮಗೇನಾದರೂ ಆಪತ್ತುಂಟಾದರೆ ‘ನಾವು ನಮ್ಮ ವಿಷಯದಲ್ಲಿ ಮೊದಲೇ ಎಚ್ಚರ ವಹಿಸಿರುವೆವು’ ಎಂದು ಅವರು ಹೇಳುವರು ಮತ್ತು ಸಂತೋಷಪಡುತ್ತಾ ಹಿಂದಿರುಗಿ ಹೋಗುವರು.
(51) ಹೇಳಿರಿ: ‘ಅಲ್ಲಾಹು ನಮಗೆ ವಿಧಿಸಿರುವುದಲ್ಲದೆ ಬೇರೇನೂ ನಮ್ಮನ್ನು ಬಾಧಿಸಲಾರದು. ಅವನು ನಮ್ಮ ಒಡೆಯನಾಗಿರುವನು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆಯೇ ಭರವಸೆಯನ್ನಿಡಲಿ’.
(52) ಹೇಳಿರಿ: ‘(ಹುತಾತ್ಮತೆ ಅಥವಾ ಗೆಲುವು ಎಂಬ) ಎರಡು ಉತ್ತಮ ಸಂಗತಿಗಳಲ್ಲಿ ಯಾವುದಾದರೂ ಒಂದರ ವಿನಾ ನೀವು ನಮ್ಮ ಬಗ್ಗೆ ನಿರೀಕ್ಷಿಸುತ್ತಿರುವಿರಾ? ಆದರೆ ನಿಮ್ಮ ಬಗ್ಗೆ ನಾವು ನಿರೀಕ್ಷಿಸುತ್ತಿರುವುದು ಅಲ್ಲಾಹು ನಿಮಗೆ ತನ್ನ ವತಿಯಿಂದ ನೇರವಾಗಿ ಅಥವಾ ನಮ್ಮ ಕೈಗಳ ಮೂಲಕ ಶಿಕ್ಷೆ ನೀಡಬೇಕು ಎಂಬುದನ್ನಾಗಿದೆ. ಆದ್ದರಿಂದ ನೀವು ನಿರೀಕ್ಷಿಸುತ್ತಿರಿ. ನಾವೂ ನಿಮ್ಮೊಂದಿಗೆ ನಿರೀಕ್ಷಿಸುತ್ತಿರುವವರಾಗಿರುವೆವು’.
(53) ಹೇಳಿರಿ: ‘ನೀವು ಸ್ವಇಚ್ಛೆಯಿಂದ ಅಥವಾ ಒಲ್ಲದ ಮನಸ್ಸಿನಿಂದ ವ್ಯಯಿಸಿರಿ. (ಹೇಗೆ ವ್ಯಯಿಸಿದರೂ) ನಿಮ್ಮಿಂದ ಅದು ಸ್ವೀಕಾರವಾಗಲಾರದು. ಖಂಡಿತವಾಗಿಯೂ ನೀವು ಧಿಕ್ಕಾರಿಗಳಾದ ಒಂದು ಜನತೆಯಾಗಿರುವಿರಿ’.
(54) ಅವರಿಂದ ಅವರ ದಾನಗಳು ಸ್ವೀಕಾರವಾಗಲು ತಡೆಯಾಗಿರುವುದು ಅವರು ಅಲ್ಲಾಹುವಿನಲ್ಲೂ, ಅವನ ಸಂದೇಶವಾಹಕರಲ್ಲೂ ಅವಿಶ್ವಾಸವಿಟ್ಟಿರುವರು, ಸೋಮಾರಿಗಳಾಗಿಯೇ ವಿನಾ ನಮಾಝ್ ಮಾಡಲು ಹೊರಡಲಾರರು ಮತ್ತು ಒಲ್ಲದ ಮನಸ್ಸಿನಿಂದಲೇ ವಿನಾ ವ್ಯಯಿಸಲಾರರು ಎಂಬವುಗಳು ಮಾತ್ರವಾಗಿವೆ.
(55) ಅವರ ಸಂಪತ್ತುಗಳು ಮತ್ತು ಸಂತತಿಗಳು ತಮ್ಮನ್ನು ಅಚ್ಚರಿಪಡಿಸದಿರಲಿ. ಅಲ್ಲಾಹು ಇಚ್ಛಿಸುವುದು ಅವುಗಳ ಮೂಲಕ ಅವರನ್ನು ಇಹಲೋಕದಲ್ಲಿ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿರುತ್ತಲೇ ಅವರು ಪ್ರಾಣ ಕಳೆದುಕೊಳ್ಳಲು ಮಾತ್ರವಾಗಿದೆ.
(56) ಖಂಡಿತವಾಗಿಯೂ ಅವರು ನಿಮ್ಮ ಪೈಕಿ ಸೇರಿದವರಾಗಿರುವರು ಎಂದು ಅವರು ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಹೇಳುವರು. ಆದರೆ ಅವರು ನಿಮ್ಮ ಪೈಕಿ ಸೇರಿದವರಲ್ಲ; ಆದರೆ ಅವರು ಭಯಭೀತರಾಗಿರುವ ಒಂದು ಜನತೆಯಾಗಿರುವರು.
(57) ಯಾವುದಾದರೂ ಆಶ್ರಯಸ್ಥಾನವನ್ನು, ಗುಹೆಗಳನ್ನು ಅಥವಾ ಪ್ರವೇಶಿಸಬಹುದಾದ ಸ್ಥಳವನ್ನು ಅವರು ಕಂಡರೆ ದೌಡಾಯಿಸುತ್ತಾ ಅವರು ಅದರೆಡೆಗೆ ತಿರುಗುವರು.
(58) ದಾನಧರ್ಮಗಳ ವಿಷಯದಲ್ಲಿ ತಮ್ಮನ್ನು ದೂಷಿಸುವ ಕೆಲವರು ಅವರಲ್ಲಿರುವರು. ಅವರಿಗೆ ಅದರಿಂದ ಏನಾದರೂ ನೀಡಲಾದರೆ ಅವರು ಸಂತೃಪ್ತರಾಗುವರು. ಅವರಿಗೆ ಅದರಿಂದ ಏನನ್ನೂ ನೀಡಲಾಗದಿದ್ದರೆ ಅವರು ಕೋಪಿಸಿಕೊಳ್ಳುವರು.
(59) ಅಲ್ಲಾಹು ಮತ್ತು ಅವನ ಸಂದೇಶವಾಹಕರು ನೀಡಿರುವುದರಲ್ಲಿ ಸಂತೃಪ್ತರಾಗಿ, ‘ನಮಗೆ ಅಲ್ಲಾಹು ಸಾಕು, ಅಲ್ಲಾಹುವಿನ ಅನುಗ್ರಹದಿಂದ ಅವನು ಮತ್ತು ಅವನ ಸಂದೇಶವಾಹಕರು ನಮಗೆ ನೀಡುವರು, ಖಂಡಿತವಾಗಿಯೂ ನಾವು ಅಲ್ಲಾಹುವಿನೆಡೆಗೆ ಅಪೇಕ್ಷೆ ಸಲ್ಲಿಸುವವರಾಗಿರುವೆವು’ ಎಂದು ಅವರು ಹೇಳುತ್ತಿದ್ದರೆ (ಎಷ್ಟು ಚೆನ್ನಾಗಿರುತ್ತಿತ್ತು!)
(60) ಝಕಾತ್ (ನೀಡಬೇಕಾದುದು) ಬಡವರಿಗೆ, ನಿರ್ಗತಿಕರಿಗೆ, ಅದಕ್ಕಾಗಿ ಕಾರ್ಯನಿರ್ವಹಿಸುವವರಿಗೆ(310), (ಇಸ್ಲಾಮ್ ಧರ್ಮದೊಂದಿಗೆ) ಹೃದಯಗಳು ಬೆಸೆಯಲ್ಪಟ್ಟವರಿಗೆ, ಗುಲಾಮ ವಿಮೋಚನೆಗೆ, ಸಾಲದಿಂದಾಗಿ ಕಷ್ಟಪಡುವವರಿಗೆ, ಅಲ್ಲಾಹುವಿನ ಮಾರ್ಗದಲ್ಲಿ ಮತ್ತು ದಾರಿಹೋಕರಿಗೆ(311) ಮಾತ್ರವಾಗಿದೆ. ಇದು ಅಲ್ಲಾಹುವಿನ ವತಿಯ ನಿರ್ಣಯವಾಗಿದೆ. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
310. ಝಕಾತನ್ನು ಸಂಗ್ರಹಿಸಿ ವಿತರಣೆ ಮಾಡುವವರಿಗೂ ಅದರಲ್ಲಿ ಒಂದು ಪಾಲನ್ನು ಪಡೆಯುವ ಹಕ್ಕಿದೆ. ಝಕಾತನ್ನು ಪ್ರತಿಯೊಬ್ಬ ಶ್ರೀಮಂತನೂ ನೇರವಾಗಿ ನೀಡುವುದಲ್ಲ; ಬದಲಾಗಿ ಝಕಾತನ್ನು ಸಾಮೂಹಿಕವಾಗಿ ಸಂಗ್ರಹಿಸಿ ವ್ಯವಸ್ಥಿತವಾಗಿ ವಿತರಣೆ ಮಾಡುವ ವಿಧಾನವನ್ನು ಇಸ್ಲಾಮ್ ಪ್ರತಿಪಾದಿಸುತ್ತಿದೆಯೆಂದು ಈ ಸೂಕ್ತಿಯಿಂದ ಗ್ರಹಿಸಬಹುದಾಗಿದೆ.
311. ಊರಿನಿಂದ ಹೊರಟು ಕೈಯಲ್ಲಿ ಏನೂ ಇಲ್ಲದೆ ಕಷ್ಟಪಡುವವರೆಲ್ಲರೂ ಇದರ ವ್ಯಾಪ್ತಿಯಲ್ಲಿ ಸೇರುತ್ತಾರೆ.
(61) ಪ್ರವಾದಿಗೆ ಕಿರುಕುಳ ಕೊಡುವವರು ಮತ್ತು ಅವರು ಎಲ್ಲವನ್ನೂ ಕಿವಿಗೊಟ್ಟು ಆಲಿಸುವವರಾಗಿರುವರು ಎಂದು ಹೇಳುವವರು ಅವರಲ್ಲಿರುವರು. ತಾವು ಹೇಳಿರಿ: ‘ಅವರು ನಿಮಗೆ ಒಳಿತಾಗಿರುವುದನ್ನು ಕಿವಿಗೊಟ್ಟು ಆಲಿಸುವವರಾಗಿರುವರು.’ ಅವರು ಅಲ್ಲಾಹುವಿನಲ್ಲಿ ವಿಶ್ವಾಸವಿಡುವವರೂ, ನೈಜ ವಿಶ್ವಾಸಿಗಳಲ್ಲಿ ವಿಶ್ವಾಸವಿಡುವವರೂ ಆಗಿರುವರು. ಅವರು ನಿಮ್ಮ ಪೈಕಿ ವಿಶ್ವಾಸವಿಟ್ಟವರಿಗೆ ಒಂದು ಅನುಗ್ರಹವಾಗಿರುವರು. ಅಲ್ಲಾಹುವಿನ ಸಂದೇಶವಾಹಕರಿಗೆ ಕಿರುಕುಳ ಕೊಡುವವರು ಯಾರೋ ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ.
(62) ನಿಮ್ಮನ್ನು ತೃಪ್ತಿಪಡಿಸುವುದಕ್ಕಾಗಿ ಅವರು ಅಲ್ಲಾಹುವಿನ ಹೆಸರಲ್ಲಿ ಪ್ರಮಾಣ ಮಾಡಿ ನಿಮ್ಮೊಂದಿಗೆ ಮಾತನಾಡುವರು. ಆದರೆ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅವರು ತೃಪ್ತಿಪಡಿಸಲು ಹೆಚ್ಚು ಅರ್ಹರಾಗಿರುವವರು ಅಲ್ಲಾಹು ಮತ್ತು ಅವನ ಸಂದೇಶವಾಹಕರಾಗಿರುವರು.
(63) ಯಾರಾದರೂ ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವುದಾದರೆ ಅವನಿಗಿರುವುದು ನರಕಾಗ್ನಿಯಾಗಿದೆ ಮತ್ತು ಅವನದರಲ್ಲಿ ಶಾಶ್ವತವಾಗಿ ವಾಸಿಸುವನು ಎಂಬುದನ್ನು ಅವರು ಅರಿಯಲಾರರೇ? ಮಹಾ ಅಪಮಾನವು ಅದೇ ಆಗಿದೆ.
(64) ಅವರಿಗೆ ಅವರ ಹೃದಯಗಳಲ್ಲಿರುವುದನ್ನು ತಿಳಿಸಿಕೊಡುವ (ಕುರ್ಆನ್ನಿಂದಿರುವ) ಯಾವುದಾದರೂ ಒಂದು ಅಧ್ಯಾಯವು ಅವರ ವಿಷಯದಲ್ಲಿ ಅವತೀರ್ಣವಾಗಬಹುದೋ ಎಂದು ಕಪಟವಿಶ್ವಾಸಿಗಳು ಭಯಪಡುವರು. ಹೇಳಿರಿ: ‘ನೀವು ಅಪಹಾಸ್ಯ ಮಾಡಿರಿ. ನೀವು ಭಯಪಡುತ್ತಿರುವುದನ್ನು ಖಂಡಿತವಾಗಿಯೂ ಅಲ್ಲಾಹು ಹೊರಗೆಡಹುವನು’.
(65) (ಅದರ ಬಗ್ಗೆ) ತಾವು ಅವರೊಂದಿಗೆ ಪ್ರಶ್ನಿಸಿದರೆ ಅವರು ಹೇಳುವರು: ‘ನಾವು ತಮಾಷೆ ಮಾಡಿ ಆಡುವುದನ್ನಷ್ಟೇ ಮಾಡುತ್ತಿದ್ದೆವು’. ತಾವು ಹೇಳಿರಿ: ‘ಅಲ್ಲಾಹುವನ್ನು, ಅವನ ದೃಷ್ಟಾಂತಗಳನ್ನು ಮತ್ತು ಅವನ ಸಂದೇಶವಾಹಕರನ್ನೋ ನೀವು ಗೇಲಿ ಮಾಡುತ್ತಿರುವುದು?
(66) ನೆಪಗಳನ್ನು ಹೇಳದಿರಿ. ವಿಶ್ವಾಸವಿಟ್ಟ ಬಳಿಕ ನೀವು ಅವಿಶ್ವಾಸವಿಟ್ಟಿರುವಿರಿ’. ನಿಮ್ಮ ಪೈಕಿ ಒಂದು ಗುಂಪಿಗೆ ನಾವು ಕ್ಷಮೆ ನೀಡಿದರೆ ಇನ್ನೊಂದು ಗುಂಪನ್ನು ನಾವು ಶಿಕ್ಷಿಸುವೆವು. ಯಾಕೆಂದರೆ ಅವರು ಅಪರಾಧಿಗಳಾಗಿರುವರು.
(67) ಕಪಟವಿಶ್ವಾಸಿಗಳು ಮತ್ತು ಕಪಟವಿಶ್ವಾಸಿನಿಯರೆಲ್ಲರೂ ಒಂದೇ ವಿಧದವರಾಗಿರುವರು. ಅವರು ದುರಾಚಾರವನ್ನು ಆದೇಶಿಸುವವರೂ, ಸದಾಚಾರವನ್ನು ವಿರೋಧಿಸುವವರೂ, ತಮ್ಮ ಕೈಗಳನ್ನು ಹಿಂದಕ್ಕೆಳೆಯುವವರೂ ಆಗಿರುವರು.(312) ಅವರು ಅಲ್ಲಾಹುವನ್ನು ಮರೆತುಬಿಟ್ಟಿರುವರು. ಆದ್ದರಿಂದ ಅವನು ಕೂಡ ಅವರನ್ನು ಮರೆತುಬಿಟ್ಟಿರುವನು. ಖಂಡಿತವಾಗಿಯೂ ಕಪಟವಿಶ್ವಾಸಿಗಳೇ ಧಿಕ್ಕಾರಿಗಳಾಗಿರುವರು.
312. ಅವರು ಕಡು ಜಿಪುಣರಾಗಿರುವರು ಎಂದರ್ಥ.
(68) ಅಲ್ಲಾಹು ಕಪಟವಿಶ್ವಾಸಿಗಳಿಗೆ, ಕಪಟವಿಶ್ವಾಸಿನಿಯರಿಗೆ ಮತ್ತು ಸತ್ಯನಿಷೇಧಿಗಳಿಗೆ ನರಕಾಗ್ನಿಯನ್ನು ವಾಗ್ದಾನ ಮಾಡಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಅದು ಸಾಕು. ಅಲ್ಲಾಹು ಅವರನ್ನು ಶಪಿಸಿರುವನು. ಅವರಿಗೆ ಶಾಶ್ವತ ಶಿಕ್ಷೆಯೂ ಇದೆ.
(69) ನಿಮಗಿಂತ ಮುಂಚಿನವರಂತೆಯೇ. ಅವರು ನಿಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು ಮತ್ತು ಹೇರಳ ಸಂಪತ್ತುಗಳನ್ನೂ, ಸಂತತಿಗಳನ್ನೂ ಹೊಂದಿದವರಾಗಿದ್ದರು. ಅವರು ತಮ್ಮ ಪಾಲಿನೊಂದಿಗೆ ಸುಖ ಅನುಭವಿಸಿದರು. ನಿಮ್ಮ ಪೂರ್ವಿಕರು ಅವರ ಪಾಲಿನೊಂದಿಗೆ ಸುಖ ಅನುಭವಿಸಿದಂತೆಯೇ ಈಗ ನೀವೂ ಸಹ ನಿಮ್ಮ ಪಾಲಿನೊಂದಿಗೆ ಸುಖ ಅನುಭವಿಸಿದಿರಿ. ಅವರು (ಅಧಾರ್ಮಿಕತೆಯಲ್ಲಿ) ಮಗ್ನರಾದಂತೆಯೇ ನೀವೂ ಮಗ್ನರಾದಿರಿ. ಇಹಲೋಕದಲ್ಲೂ, ಪರಲೋಕದಲ್ಲೂ ಅಂತಹವರ ಕರ್ಮಗಳು ನಿಷ್ಫಲವಾಗಿವೆ. ನಷ್ಟ ಹೊಂದಿದವರು ಅವರೇ ಆಗಿರುವರು.
(70) ಇವರ ಮುಂಚಿನವರ ವೃತ್ತಾಂತವು ಇವರ ಬಳಿಗೆ ಬಂದಿಲ್ಲವೇ? ನೂಹ್ರ ಜನಾಂಗದವರ, ಆದ್, ಸಮೂದ್ ಜನಾಂಗಗಳ, ಇಬ್ರಾಹೀಮ್ರ ಜನತೆಯ, ಮದ್ಯನ್ನವರ ಮತ್ತು ಬುಡಮೇಲುಗೊಳಿಸಲಾದ ದೇಶದವರ(313) (ವೃತ್ತಾಂತ)? ಅವರ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆಗ ಅಲ್ಲಾಹು ಅವರೊಂದಿಗೆ ಯಾವುದೇ ಅನ್ಯಾಯವೆಸಗಿರಲಿಲ್ಲ. ಆದರೆ ಅವರು ಸ್ವತಃ ತಮ್ಮೊಂದಿಗೇ ಅನ್ಯಾಯವೆಸಗಿದರು.
313. ಪ್ರವಾದಿ ಲೂತ್(ಅ) ರವರ ಜನತೆಯು ವಾಸವಾಗಿದ್ದ ಸೊದೋಮ್ ಪ್ರಾಂತ್ಯವನ್ನು ಅಲ್ಲಾಹುವಿನ ಶಿಕ್ಷೆಯ ನಿಮಿತ್ತ ಬುಡಮೇಲುಗೊಳಿಸಲಾಗಿತ್ತು.
(71) ಸತ್ಯವಿಶ್ವಾಸಿಗಳು ಮತ್ತು ಸತ್ಯವಿಶ್ವಾಸಿನಿಯರು ಪರಸ್ಪರ ಮಿತ್ರರಾಗಿರುವರು. ಅವರು ಸದಾಚಾರವನ್ನು ಆದೇಶಿಸುವವರೂ, ದುರಾಚಾರವನ್ನು ವಿರೋಧಿಸುವವರೂ, ನಮಾಝನ್ನು ಸಂಸ್ಥಾಪಿಸುವವರೂ, ಝಕಾತನ್ನು ನೀಡುವವರೂ, ಅಲ್ಲಾಹುವನ್ನು ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸುವವರೂ ಆಗಿರುವರು. ಅಂತಹವರಿಗೆ ಅಲ್ಲಾಹು ಕರುಣೆ ತೋರುವನು. ಖಂಡಿತವಾಗಿಯೂ ಅಲ್ಲಾಹು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.
(72) ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಯವಿಶ್ವಾಸಿನಿಯರಿಗೆ ತಳಭಾಗದಿಂದ ನದಿಗಳು ಹರಿಯುವಂತಹ ಸ್ವರ್ಗೋದ್ಯಾನಗಳನ್ನು ವಾಗ್ದಾನ ಮಾಡಿರುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಸ್ಥಿರವಾಸಕ್ಕಿರುವ ತೋಟಗಳಲ್ಲಿ ವಿಶಿಷ್ಟವಾದ ಭವನಗಳನ್ನೂ (ವಾಗ್ದಾನ ಮಾಡಿರುವನು). ಆದರೆ ಅಲ್ಲಾಹುವಿನ ವತಿಯ ಸಂತೃಪ್ತಿಯು ಅತಿಹಿರಿದಾಗಿದೆ. ಮಹಾಗೆಲುವು ಅದೇ ಆಗಿದೆ.
(73) ಓ ಪ್ರವಾದಿಯವರೇ! ಸತ್ಯನಿಷೇಧಿಗಳೊಂದಿಗೆ ಮತ್ತು ಕಪಟವಿಶ್ವಾಸಿಗಳೊಂದಿಗೆ ಯುದ್ಧ ಮಾಡಿರಿ. ಅವರೊಂದಿಗೆ ಒರಟಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕವಾಗಿದೆ. ತಲುಪಲಿರುವ ಆ ಸ್ಥಳ ಎಷ್ಟು ನಿಕೃಷ್ಟವೇ ಆಗಿದೆ.
(74) ನಾವು (ಆ ರೀತಿ) ಹೇಳಿರಲಿಲ್ಲವೆಂದು ಅವರು ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಹೇಳುವರು.(314) ಖಂಡಿತವಾಗಿಯೂ ಅವರು ಅವಿಶ್ವಾಸದ ಮಾತನ್ನು ಆಡಿರುವರು, ಇಸ್ಲಾಮನ್ನು ಸ್ವೀಕರಿಸಿದ ಬಳಿಕ ಅವರು ಅವಿಶ್ವಾಸಿಗಳಾಗಿರುವರು. ತಮಗೆ ಸಾಧಿಸಲು ಸಾಧ್ಯವಾಗದ ಸಂಗತಿಗಾಗಿ(315) ಅವರು ಚಿಂತನೆ ನಡೆಸಿದ್ದರು. ಅಲ್ಲಾಹುವಿನ ಅನುಗ್ರಹದಿಂದ ಅವನು ಮತ್ತು ಅವನ ಸಂದೇಶವಾಹಕರು ಅವರಿಗೆ ಐಶ್ವರ್ಯವನ್ನು ನೀಡಿದರು ಎಂಬುದರ ಹೊರತು ಅವರ ವಿರೋಧಕ್ಕೆ ಇನ್ನಾವುದೇ ಕಾರಣವಿರಲಿಲ್ಲ. ಆದ್ದರಿಂದ ಅವರು ಪಶ್ಚಾತ್ತಾಪಪಡುವುದಾದರೆ ಅದು ಅವರಿಗೆ ಒಳಿತಾಗಿದೆ. ಅವರೇನಾದರೂ ವಿಮುಖರಾಗುವುದಾದರೆ ಇಹಲೋಕದಲ್ಲೂ, ಪರಲೋಕದಲ್ಲೂ ಅಲ್ಲಾಹು ಅವರನ್ನು ಯಾತನಾಮಯ ಶಿಕ್ಷೆಯೊಂದಿಗೆ ಶಿಕ್ಷಿಸುವನು. ಭೂಮಿಯಲ್ಲಿ ಅವರಿಗೆ ಮಿತ್ರರಾಗಿ ಮತ್ತು ಸಹಾಯಕರಾಗಿ ಯಾರೂ ಇರಲಾರರು.
314. ಪ್ರವಾದಿ(ಸ) ರವರನ್ನು ಅಪಹಾಸ್ಯ ಮಾಡಿ ಮಾತನಾಡಿದ ಮತ್ತು ಅದರ ಬಗ್ಗೆ ವಿಚಾರಿಸಲ್ಪಟ್ಟಾಗ ಅದನ್ನು ಅಲ್ಲಗಳೆದ ಕೆಲವು ಕಪಟವಿಶ್ವಾಸಿಗಳ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ.
315. ಈ ಸೂಕ್ತಿಯು ಅವತೀರ್ಣಗೊಂಡಿರುವುದು ತಬೂಕ್ನಿಂದ ಮರಳಿ ಬರುವಾಗ ಪ್ರವಾದಿ(ಸ) ರವರನ್ನು ಅಪಾಯಕ್ಕೊಳಪಡಿಸಲು ಯತ್ನಿಸಿದ ಕೆಲವು ಕಪಟವಿಶ್ವಾಸಿಗಳ ಬಗ್ಗೆಯೆಂದು ಕೆಲವು ಹದೀಸ್ಗಳಲ್ಲಿ ಬಂದಿದೆ.
(75) ‘ಅಲ್ಲಾಹು ತನ್ನ ಅನುಗ್ರಹದಿಂದ ನಮಗೆ ನೀಡುವುದಾದರೆ ಖಂಡಿತವಾಗಿಯೂ ನಾವು ದಾನಧರ್ಮ ಮಾಡುವೆವು ಮತ್ತು ಸಜ್ಜನರ ಪೈಕಿ ಸೇರಿದವರಾಗುವೆವು’ ಎಂದು ಅಲ್ಲಾಹುವಿನೊಂದಿಗೆ ಕರಾರು ಮಾಡಿದ ಕೆಲವರು ಅವರಲ್ಲಿರುವರು.
(76) ತರುವಾಯ ಅವನು ಅವರಿಗೆ ತನ್ನ ಅನುಗ್ರಹದಿಂದ ನೀಡಿದಾಗ ಅವರು ಅದರಲ್ಲಿ ಜಿಪುಣತನ ತೋರಿದರು ಮತ್ತು ಕಡೆಗಣಿಸುತ್ತಾ ವಿಮುಖರಾದರು.
(77) ಅವರು ಅಲ್ಲಾಹುವಿನೊಂದಿಗೆ ಮಾಡಿದ ವಾಗ್ದಾನ ವನ್ನು ಉಲ್ಲಂಘಿಸಿರುವುದರಿಂದ ಮತ್ತು ಅವರು ಸುಳ್ಳು ನುಡಿದಿರುವುದರಿಂದ ಅವರು ಅವನನ್ನು ಭೇಟಿಯಾಗುವ ದಿನದವರೆಗೂ (ವಿಚಾರಣೆಯ ದಿನದವರೆಗೂ) ಅವರ ಹೃದಯಗಳಲ್ಲಿ ಕಾಪಟ್ಯವಿರುವುದು ಎಂಬುದನ್ನು ಅದರ ಅನಂತರಫಲವಾಗಿ ಅವನು ಅವರಿಗೆ ನೀಡಿದನು.
(78) ಅವರ ರಹಸ್ಯವನ್ನು ಮತ್ತು ಅವರ ಗೂಢ ಮಾತುಕತೆಯನ್ನು ಅಲ್ಲಾಹು ಅರಿಯುತ್ತಿರುವನು ಹಾಗೂ ಅಲ್ಲಾಹು ಅಗೋಚರ ವಿಷಯಗಳನ್ನು ಚೆನ್ನಾಗಿ ಅರಿಯುವವನಾಗಿರುವನು ಎಂಬುದನ್ನು ಅವರು ಅರಿತಿಲ್ಲವೇ?
(79) ಸತ್ಯವಿಶ್ವಾಸಿಗಳ ಪೈಕಿ ದಾನಧರ್ಮ ಮಾಡಲು(316) ಸ್ವಇಚ್ಛೆಯಿಂದ ಮುಂದೆ ಬರುವವರನ್ನು ಮತ್ತು (ದಾನಧರ್ಮವಾಗಿ ನೀಡಲು) ತಮ್ಮ ಪರಿಶ್ರಮವನ್ನಲ್ಲದೆ ಬೇರೇನನ್ನೂ ಕಾಣದವರನ್ನು ಅವರು ದೂಷಿಸುವರು. ಹೀಗೆ ಆ ವಿಶ್ವಾಸಿಗಳನ್ನು ಅವರು ಅಪಹಾಸ್ಯ ಮಾಡುತ್ತಿರುವರು. ಅಲ್ಲಾಹು ಅವರನ್ನೂ ಅಪಹಾಸ್ಯ ಮಾಡಿರುವನು. ಅವರಿಗೆ ಯಾತನಾಮಯ ಶಿಕ್ಷೆಯಿರುವುದು.
316. ಮಹಾತ್ಮರಾದ ಸಹಾಬಿಗಳು ತಮ್ಮ ಸಂಪತ್ತನ್ನು ಪೂರ್ಣವಾಗಿ ಅಥವಾ ಭಾಗಶಃ ಅಲ್ಲಾಹುವಿನ ಮಾರ್ಗದಲ್ಲಿ ದಾನ ಮಾಡುವಾಗ ಅವೆಲ್ಲವೂ ಜನರಿಗೆ ತೋರಿಸುವ ಸಲುವಾಗಿದೆ ಎಂದು ಕಪಟವಿಶ್ವಾಸಿಗಳು ದೂಷಿಸುತ್ತಿದ್ದರು.
(80) (ಓ ಪ್ರವಾದಿಯವರೇ!) ತಾವು ಅವರಿಗೋಸ್ಕರ ಪಾಪಮುಕ್ತಿಯನ್ನು ಬೇಡಿರಿ ಅಥವಾ ಅವರಿಗೋಸ್ಕರ ಪಾಪಮುಕ್ತಿಯನ್ನು ಬೇಡದಿರಿ. ತಾವು ಅವರಿಗೋಸ್ಕರ ಎಪ್ಪತ್ತು ಬಾರಿ ಪಾಪಮುಕ್ತಿಯನ್ನು ಬೇಡಿದರೂ ಅಲ್ಲಾಹು ಅವರಿಗೆ ಕ್ಷಮಿಸಲಾರನು. ಅದು ಅವರು ಅಲ್ಲಾಹುವಿನಲ್ಲೂ, ಅವನ ಸಂದೇಶವಾಹಕರಲ್ಲೂ ಅವಿಶ್ವಾಸವಿಟ್ಟ ಕಾರಣದಿಂದಾಗಿದೆ. ಧಿಕ್ಕಾರಿಗಳಾಗಿರುವ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
(81) (ಯುದ್ಧಕ್ಕೆ ಹೋಗದೆ) ಹಿಂದೆಯೇ ಉಳಿದವರು ಅಲ್ಲಾಹುವಿನ ಸಂದೇಶವಾಹಕರ ಆದೇಶಕ್ಕೆ ವಿರುದ್ಧವಾಗಿರುವ ತಮ್ಮ ಆ ಉಳಿಯುವಿಕೆಯಲ್ಲಿ ಆನಂದಪಟ್ಟರು. ತಮ್ಮ ಸಂಪತ್ತುಗಳಿಂದ ಮತ್ತು ಶರೀರಗಳಿಂದ ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುವುದನ್ನು ಅವರು ಅಸಹ್ಯಪಟ್ಟಿರುವರು. ಅವರು ಹೇಳಿದರು: ‘ಈ ಉರಿಬಿಸಿಲಿನಲ್ಲಿ ನೀವು ಹೊರಡದಿರಿ’. ಹೇಳಿರಿ: ‘ನರಕಾಗ್ನಿಯು ಅತಿತೀಕ್ಷ್ಣ ಉರಿಯನ್ನು ಹೊಂದಿದೆ’. ಅವರು ಅದನ್ನು ಗ್ರಹಿಸುವವರಾಗಿರುತ್ತಿದ್ದರೆ!
(82) ಆದ್ದರಿಂದ ತಾವು ಮಾಡಿಟ್ಟಿರುವುದರ ಫಲವಾಗಿ ಅವರು ಸ್ವಲ್ಪವೇ ನಗುತ್ತಿರಲಿ ಮತ್ತು ಹೆಚ್ಚು ಹೆಚ್ಚಾಗಿ ಅಳುತ್ತಿರಲಿ.
(83) (ಯುದ್ಧವು ಮುಗಿದು) ಅವರ ಪೈಕಿ ಒಂದು ಗುಂಪಿನೆಡೆಗೆ ಅಲ್ಲಾಹು ತಮ್ಮನ್ನು (ಸುರಕ್ಷಿತವಾಗಿ) ಮರಳಿಸಿ, ಅನಂತರ (ಇನ್ನೊಂದು ಯುದ್ಧಕ್ಕೆ) ಹೊರಡಲು ಅವರು ತಮ್ಮೊಂದಿಗೆ ಅನುಮತಿಯನ್ನು ಬೇಡಿದರೆ ತಾವು ಹೇಳಿರಿ: ‘ನೀವೆಂದಿಗೂ ನನ್ನ ಜೊತೆಗೆ ಹೊರಡಲಾರಿರಿ. ನೀವು ನನ್ನ ಜೊತೆಗೆ ಒಬ್ಬ ಶತ್ರುವಿನೊಂದಿಗೂ ಯುದ್ಧ ಮಾಡಲಾರಿರಿ. ಖಂಡಿತವಾಗಿಯೂ ಮೊದಲ ಬಾರಿ ನೀವು (ಯುದ್ಧಕ್ಕೆ ಹೋಗದೆ) ಹಿಂದೆ ಉಳಿಯುವುದರಲ್ಲಿ ತೃಪ್ತಿಪಟ್ಟಿರಿ. ಆದ್ದರಿಂದ ಹಿಂದೆ ಉಳಿದವರೊಂದಿಗೆ ನೀವೂ ಕುಳಿತುಕೊಳ್ಳಿರಿ’.
(84) ಅವರ ಪೈಕಿ ಮೃತಪಟ್ಟ ಯಾರಿಗೂ ತಾವೆಂದೂ ನಮಾಝ್ ಮಾಡದಿರಿ. ಅವನ ಗೋರಿಯ ಬಳಿ ನಿಲ್ಲದಿರಿ. ಖಂಡಿತವಾಗಿಯೂ ಅವರು ಅಲ್ಲಾಹುವಿನಲ್ಲೂ, ಅವನ ಸಂದೇಶವಾಹಕರಲ್ಲೂ ಅವಿಶ್ವಾಸವಿಟ್ಟಿರುವರು ಮತ್ತು ಧಿಕ್ಕಾರಿಗಳಾಗಿಯೇ ಮೃತಪಟ್ಟಿರುವರು.
(85) ಅವರ ಸಂಪತ್ತುಗಳು ಮತ್ತು ಸಂತತಿಗಳು ತಮ್ಮನ್ನು ಅಚ್ಚರಿಪಡಿಸದಿರಲಿ. ಅಲ್ಲಾಹು ಇಚ್ಛಿಸುವುದು ಅವುಗಳ ಮೂಲಕ ಅವರನ್ನು ಇಹಲೋಕದಲ್ಲಿ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿರುತ್ತಲೇ ಅವರು ಪ್ರಾಣ ಕಳೆದುಕೊಳ್ಳಲು ಮಾತ್ರವಾಗಿದೆ.
(86) ನೀವು ಅಲ್ಲಾಹುವಿನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ಸಂದೇಶವಾಹಕರ ಜೊತೆಗೆ ಯುದ್ಧ ಮಾಡಿರಿ ಎಂದು (ಆದೇಶಿಸುವ) ಯಾವುದಾದರೂ ಅಧ್ಯಾಯವು ಅವತೀರ್ಣವಾದರೆ ಅವರ ಪೈಕಿ ಸಾಮರ್ಥ್ಯವುಳ್ಳವರು (ಯುದ್ಧಕ್ಕೆ ಹೊರಡದಿರಲು) ತಮ್ಮೊಂದಿಗೆ ಅನುಮತಿ ಬೇಡುವರು. ಅವರು ಹೇಳುವರು: ‘ನಮ್ಮನ್ನು ಬಿಟ್ಟುಬಿಡಿರಿ. ನಾವು ಹಿಂದೆ ಉಳಿಯುವವರೊಂದಿಗೆ ಸೇರುವೆವು’.
(87) (ಯುದ್ಧಕ್ಕೆ ಹೊರಡದೆ) ಹಿಂದೆ ಉಳಿದಿರುವ ಸ್ತ್ರೀಯರೊಂದಿಗೆ ಸೇರುವುದರಲ್ಲಿ ಅವರು ಸಂತೃಪ್ತರಾಗಿರುವರು. ಅವರ ಹೃದಯಗಳ ಮೇಲೆ ಮುದ್ರೆಯೊತ್ತಲ್ಪಟ್ಟಿರುವುದು. ಆದ್ದರಿಂದ ಅವರು (ವಿಷಯವನ್ನು) ಗ್ರಹಿಸಲಾರರು.
(88) ಆದರೆ ಸಂದೇಶವಾಹಕರು ಮತ್ತು ಅವರೊಂದಿಗೆ ವಿಶ್ವಾಸವಿಟ್ಟವರು ತಮ್ಮ ಸಂಪತ್ತು ಮತ್ತು ಶರೀರಗಳ ಮೂಲಕ ಯುದ್ಧ ಮಾಡಿರುವರು. ಒಳಿತುಗಳಿರುವುದು ಅವರಿಗೇ ಆಗಿದೆ. ಯಶಸ್ವಿಯಾದವರೂ ಅವರೇ ಆಗಿರುವರು.
(89) ತಳಭಾಗದಿಂದ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಅಲ್ಲಾಹು ಅವರಿಗೋಸ್ಕರ ಸಿದ್ಧಗೊಳಿಸಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಮಹಾ ಗೆಲುವು ಅದೇ ಆಗಿದೆ.
(90) ಗ್ರಾಮೀಣ ಅರಬಿಗಳ ಪೈಕಿ ಕೆಲವರು (ಯುದ್ಧಕ್ಕೆ ಹೊರಡದಿರಲು) ತಮಗೆ ಅನುಮತಿ ಸಿಗುವುದಕ್ಕಾಗಿ ನೆಪಗಳನ್ನು ಹೇಳಿ ಶ್ರುತಪಡಿಸಲು (ಪ್ರವಾದಿಯವರ ಬಳಿಗೆ) ಬಂದರು. ಆದರೆ ಅಲ್ಲಾಹುವಿನೊಂದಿಗೆ ಮತ್ತು ಅವನ ಸಂದೇಶವಾಹಕರೊಂದಿಗೆ ಸುಳ್ಳು ನುಡಿದವರು (ಮನೆಯಲ್ಲೇ) ಕುಳಿತರು. ಅವರ ಪೈಕಿ ಅವಿಶ್ವಾಸವಿಟ್ಟವರಿಗೆ ಯಾತನಾಮಯವಾದ ಶಿಕ್ಷೆಯು ಬಾಧಿಸಲಿರುವುದು.
(91) ಬಲಹೀನರು, ರೋಗಿಗಳು ಮತ್ತು ಖರ್ಚು ಮಾಡಲು ಏನನ್ನೂ ಕಾಣದವರು –ಅವರು ಅಲ್ಲಾಹುವಿನ ಮತ್ತು ಸಂದೇಶವಾಹಕರ ಹಿತಾಕಾಂಕ್ಷಿಗಳಾಗಿದ್ದರೆ- (ಯುದ್ಧಕ್ಕೆ ಹೊರಡದಿರುವುದಕ್ಕಾಗಿ) ಅವರ ಮೇಲೆ ದೋಷವಿಲ್ಲ. ಸಜ್ಜನರ ಮೇಲೆ (ದೋಷಾರೋಪಣೆ ಮಾಡಲು) ಯಾವುದೇ ಮಾರ್ಗವೂ ಇಲ್ಲ. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(92) (ಯುದ್ಧಕ್ಕೆ ಹೊರಡಲು) ತಾವು ಅವರಿಗೆ ವಾಹನವನ್ನು ನೀಡುವುದಕ್ಕಾಗಿ ತಮ್ಮ ಬಳಿಗೆ ಬಂದವರ ಮೇಲೂ ದೋಷವಿಲ್ಲ. ತಾವು ಅವರೊಂದಿಗೆ ಹೇಳಿದಿರಿ: ‘ನಿಮಗೆ ನೀಡಲು ಯಾವುದೇ ವಾಹನವನ್ನೂ ನಾನು ಕಾಣುತ್ತಿಲ್ಲ’. ಆಗ (ಯುದ್ಧಕ್ಕೆ) ವ್ಯಯಿಸಲು ಏನನ್ನೂ ಕಾಣಲಾಗದ ದುಃಖದಿಂದ ಕಣ್ಣೀರು ಸುರಿಸುತ್ತಾ ಅವರು ಮರಳಿಹೋದರು.
(93) (ದೋಷಾರೋಪಣೆ ಮಾಡಲು) ಮಾರ್ಗವಿರುವುದು ಶ್ರೀಮಂತರಾಗಿದ್ದೂ ಸಹ (ಹಿಂದೆ ಉಳಿಯಲು) ತಮ್ಮೊಂದಿಗೆ ಅನುಮತಿಯನ್ನು ಬೇಡುವವರ ಮತ್ತು ಹಿಂದೆ ಉಳಿದಿರುವ ಸ್ತ್ರೀಯರೊಂದಿಗೆ ಸೇರುವುದರಲ್ಲಿ ಸಂತೃಪ್ತರಾಗಿರುವವರ ಮೇಲೆ ಮಾತ್ರವಾಗಿದೆ. ಅವರ ಹೃದಯಗಳ ಮೇಲೆ ಅಲ್ಲಾಹು ಮುದ್ರೆಯನ್ನೊತ್ತಿರುವನು. ಆದ್ದರಿಂದ ಅವರು (ವಸ್ತುಸ್ಥಿತಿಯನ್ನು) ಅರಿಯಲಾರರು.
(94) (ಯುದ್ಧವು ಮುಗಿದು) ನೀವು ಅವರ ಬಳಿಗೆ ಮರಳಿದಾಗ ಅವರು ನಿಮ್ಮೊಂದಿಗೆ ನೆಪಗಳನ್ನು ಹೇಳ ತೊಡಗುವರು. ಹೇಳಿರಿ: ‘ನೀವು ನೆಪಗಳನ್ನು ಹೇಳದಿರಿ. ನಾವು ನಿಮ್ಮನ್ನು ನಂಬಲಾರೆವು. (ಯಾಕೆಂದರೆ) ನಿಮ್ಮ ವೃತ್ತಾಂತಗಳಲ್ಲಿ ಕೆಲವನ್ನು ಅಲ್ಲಾಹು ನಮಗೆ ತಿಳಿಸಿಕೊಟ್ಟಿರುವನು’. ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಮ್ಮ ಕೃತ್ಯವನ್ನು ಕಾಣುತ್ತಿರುವರು. ತರುವಾಯ ನಿಮ್ಮನ್ನು ಅಗೋಚರ ಮತ್ತು ಗೋಚರವಾಗಿರುವುದನ್ನು ಅರಿಯುವವನೆಡೆಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿರುವುದರ ಬಗ್ಗೆ ಅವನು ನಿಮಗೆ ವಿವರಿಸಿಕೊಡುವನು.
(95) ನೀವು ಅವರ ಬಳಿಗೆ ಮರಳಿದಾಗ, ನೀವು ಅವರ ಗೊಡವೆಗೆ ಹೋಗದಿರುವುದಕ್ಕಾಗಿ(317) ಅವರು ನಿಮ್ಮೊಂದಿಗೆ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡುವರು. ಆದ್ದರಿಂದ ನೀವು ಅವರ ಗೊಡವೆಗೆ ಹೋಗಬೇಡಿರಿ. ಖಂಡಿತವಾಗಿಯೂ ಅವರು ಹೊಲಸಾಗಿರುವರು. ಅವರು ಸಂಪಾದಿಸಿರುವುದರ ಪ್ರತಿಫಲವಾಗಿ ನರಕಾಗ್ನಿಯು ಅವರ ವಾಸಸ್ಥಳವಾಗಿರುವುದು.
317. ಅಂದರೆ ನೀವು ಅವರನ್ನು ದೂಷಿಸುವುದೋ, ಅವರ ಮೇಲೆ ಯಾವುದಾದರೂ ಶಿಸ್ತುಕ್ರಮ ಕೈಗೊಳ್ಳುವುದೋ ಮಾಡದಿರುವುದಕ್ಕಾಗಿ.
(96) ಅವರು ನಿಮ್ಮೊಂದಿಗೆ ಪ್ರಮಾಣ ಮಾಡುವುದು ನೀವು ಅವರ ಬಗ್ಗೆ ಸಂತೃಪ್ತರಾಗುವುದಕ್ಕಾಗಿದೆ. ನೀವು ಅವರ ಬಗ್ಗೆ ಸಂತೃಪ್ತರಾದರೂ ಧಿಕ್ಕಾರಿಗಳಾಗಿರುವ ಜನರ ಬಗ್ಗೆ ಅಲ್ಲಾಹು ಖಂಡಿತವಾಗಿಯೂ ಸಂತೃಪ್ತನಾಗಲಾರನು.
(97) ಅಅ್ರಾಬಿಗಳು (ಗ್ರಾಮೀಣ ಅರಬರು) ಅತಿ ತೀಕ್ಷ್ಣವಾದ ಅವಿಶ್ವಾಸವನ್ನೂ, ಕಾಪಟ್ಯವನ್ನೂ ಹೊಂದಿರುವರು. ಅಲ್ಲಾಹು ತನ್ನ ಸಂದೇಶವಾಹಕರ ಮೇಲೆ ಅವತೀರ್ಣಗೊಳಿಸಿರುವ ನಿಯಮವ್ಯಾಪ್ತಿಗಳನ್ನು ಅರಿಯದಿರಲು ಅವರು ಹೆಚ್ಚು ಅರ್ಹರಾಗಿರುವರು.(318) ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
318. ಅನಾಗರಿಕರಾಗಿರುವ ಜನರ ಸಾಮಾನ್ಯ ಸ್ಥಿತಿಯನ್ನು ಇಲ್ಲಿ ಪರಾಮರ್ಶಿಸಲಾಗಿದೆ. ಪಟ್ಟಣದಲ್ಲಿರುವವರೊಂದಿಗೆ ಸಂಪರ್ಕ ಹೊಂದಲು ಅನಾನುಕೂಲತೆಯಿರುವುದರಿಂದಾಗಿ ಅವರಿಗೆ ಮಾಹಿತಿಗಳು ದೊರೆಯುವ ಸಾಧ್ಯತೆಯು ಅತಿವಿರಳವಾಗಿದೆ. ಅವರ ಮಾತು ಮತ್ತು ವರ್ತನೆಗಳಲ್ಲಿ ಒರಟುತನ ಮತ್ತು ಕರ್ಕಶತೆಯು ಹೆಚ್ಚಾಗಿರುತ್ತದೆ. ಆದರೂ ಅವರ ಪೈಕಿ ಸತ್ಯವಿಶ್ವಾಸ ಸ್ವೀಕರಿಸಲು ಮತ್ತು ಜ್ಞಾನವನ್ನು ಸಂಪಾದಿಸಲು ಅವಕಾಶ ಸಿಕ್ಕಿದ ಕೆಲವರು ಪ್ರಾಮಾಣಿಕತೆಯ ಜ್ವಲಂತ ಉದಾಹರಣೆಗೆಳಾಗಿ ಮಾರ್ಪಟ್ಟಿರುವುದನ್ನು ಕಾಣಬಹುದಾಗಿದೆ. 99ನೇ ಸೂಕ್ತಿಯು ಅದನ್ನು ಪ್ರಸ್ತಾಪಿಸುತ್ತದೆ.
(98) ತಾವು (ದಾನಧರ್ಮಗಳಾಗಿ) ವ್ಯಯಿಸುವುದನ್ನು ಧನನಷ್ಟವಾಗಿ ಪರಿಗಣಿಸುವ(319) ಮತ್ತು ನಿಮಗೆ ಅನಾಹುತಗಳು ಸಂಭವಿಸುವುದನ್ನು ಕಾಯುತ್ತಿರುವ ಕೆಲವರು ಅಅ್ರಾಬಿಗಳಲ್ಲಿರುವರು. ಕೆಟ್ಟ ಅನಾಹುತವು ಅವರಿಗೇ ಸಂಭವಿಸಲಿ. ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
319. ಅಲ್ಲಾಹು ದಾನಧರ್ಮ ಮಾಡುವವನ ಮನಸ್ಥಿತಿಯನ್ನು ನೋಡುತ್ತಾನೆ. ನಷ್ಟವೆಂದು ಭಾವಿಸಿ ಏನನ್ನಾದರೂ ದಾನ ಮಾಡುವವನಿಗೆ ಅಲ್ಲಾಹುವಿನ ಬಳಿ ಯಾವುದೇ ಪ್ರತಿಫಲವಿರಲಾರದು. ಅಲ್ಲಾಹುವಿನ ಬಳಿ ಪ್ರತಿಫಲವಿರುವುದು ಪುಣ್ಯವೆಂಬ ನೆಲೆಯಲ್ಲಿ ಮತ್ತು ಅಲ್ಲಾಹುವಿನ ಪ್ರೀತಿಯನ್ನು ಗಳಿಸಲಿರುವ ಮಾರ್ಗವೆಂಬ ನೆಲೆಯಲ್ಲಿ ದಾನ ಮಾಡುವವರಿಗೆ ಮಾತ್ರವಾಗಿದೆ.
(99) ಅಲ್ಲಾಹುವಿನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಮತ್ತು ತಾವು ವ್ಯಯಿಸುವುದನ್ನು ಅಲ್ಲಾಹುವಿನ ಬಳಿಗೆ ನಿಕಟಗೊಳಿಸುವ ಪುಣ್ಯಕರ್ಮಗಳನ್ನಾಗಿ ಮತ್ತು ಸಂದೇಶವಾಹಕರ ಪ್ರಾರ್ಥನೆಗಳಿಗಿರುವ ಕಾರಣವನ್ನಾಗಿ ಮಾಡಿಕೊಳ್ಳುವವರೂ ಅಅ್ರಾಬಿಗಳಲ್ಲಿರುವರು.(320) ಅರಿತುಕೊಳ್ಳಿರಿ! ಖಂಡಿತವಾಗಿಯೂ ಅದು ಅವರಿಗೆ (ಅಲ್ಲಾಹುವಿನ) ಸಾಮೀಪ್ಯವನ್ನು ತಂದುಕೊಡುವುದು. ಅಲ್ಲಾಹು ಅವರನ್ನು ತನ್ನ ಕರುಣೆಯಲ್ಲಿ ಪ್ರವೇಶ ಮಾಡಿಸುವನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
320. ಯಾರಾದರೂ ಪ್ರವಾದಿ(ಸ) ರವರ ಮುಂದೆ ಅಲ್ಲಾಹುವಿನ ಮಾರ್ಗದಲ್ಲಿ ವ್ಯಯಿಸಿದರೆ ಅವರಿಗೋಸ್ಕರ ಪ್ರವಾದಿ(ಸ) ರವರು ಪ್ರಾರ್ಥಿಸುತ್ತಿದ್ದರು.
(100) ಮುಹಾಜಿರ್ಗಳ ಮತ್ತು ಅನ್ಸಾರ್ಗಳ ಪೈಕಿ ಮೊಟ್ಟಮೊದಲು ಮುಂದೆ ಬಂದವರು ಮತ್ತು ಸುಕೃತ್ಯವನ್ನು ಮಾಡುತ್ತಾ ಅವರನ್ನು ಅನುಸರಿಸಿದವರು ಯಾರೋ ಅವರ ಬಗ್ಗೆ ಅಲ್ಲಾಹು ಸಂತೃಪ್ತನಾಗಿರುವನು ಮತ್ತು ಅವನ ಬಗ್ಗೆ ಅವರೂ ಸಂತೃಪ್ತರಾಗಿರುವರು. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗೋಸ್ಕರ ಸಿದ್ಧಗೊಳಿಸಿರುವನು. ಅವರು ಅದರಲ್ಲಿ ಎಂದೆಂದಿಗೂ ಶಾಶ್ವತವಾಗಿ ವಾಸಿಸುವರು. ಮಹಾಭಾಗ್ಯವು ಅದೇ ಆಗಿದೆ.
(101) ನಿಮ್ಮ ಸುತ್ತಮುತ್ತಲಲ್ಲಿರುವ ಅಅ್ರಾಬಿಗಳಲ್ಲೂ ಕಪಟವಿಶ್ವಾಸಿಗಳಿರುವರು. ಮದೀನಾ ನಿವಾಸಿಗಳಲ್ಲಿಯೂ ಇರುವರು. ಅವರು ಕಡು ಕಾಪಟ್ಯದಲ್ಲಿರುವರು. ತಾವು ಅವರನ್ನು ಅರಿಯಲಾರಿರಿ. ಆದರೆ ನಾವು ಅವರನ್ನು ಅರಿಯುವೆವು. ನಾವು ಅವರನ್ನು ಎರಡು ಬಾರಿ ಶಿಕ್ಷಿಸುವೆವು.(321) ತರುವಾಯ ಭೀಕರವಾದ ಶಿಕ್ಷೆಯೆಡೆಗೆ ಅವರನ್ನು ತಳ್ಳಲಾಗುವುದು.
321. ಕಪಟವಿಶ್ವಾಸಿಗಳಿಗೆ ಐಹಿಕ ಜೀವನದಲ್ಲಿರುವ ಶಿಕ್ಷೆಯು ತಮ್ಮ ಕಾಪಟ್ಯವು ಬಹಿರಂಗವಾಗುವುದರ ಮೂಲಕ ಉಂಟಾಗುವ ಅಪಮಾನ ಮತ್ತು ಹೀನವಾದ ಮರಣವಾಗಿದೆ.
(102) ತಮ್ಮ ತಪ್ಪುಗಳನ್ನು ಒಪ್ಪಿಕೊಂಡ ಬೇರೆ ಕೆಲವರಿರುವರು. ಅವರು ಸತ್ಕರ್ಮವನ್ನು ಬೇರೊಂದು ದುಷ್ಕರ್ಮದೊಂದಿಗೆ ಬೆರೆಸಿರುವರು. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
(103) ಅವರನ್ನು ಶುದ್ಧೀಕರಿಸಲು ಮತ್ತು ಸಂಸ್ಕರಿಸಲು ನೆರವಾಗುವ ದಾನವನ್ನು ತಾವು ಅವರ ಸಂಪತ್ತುಗಳಿಂದ ಪಡೆದುಕೊಳ್ಳಿರಿ ಮತ್ತು ಅವರಿಗೋಸ್ಕರ (ಅನುಗ್ರಹಕ್ಕಾಗಿ) ಪ್ರಾರ್ಥಿಸಿರಿ. ಖಂಡಿತವಾಗಿಯೂ ತಮ್ಮ ಪ್ರಾರ್ಥನೆಯು ಅವರಿಗೆ ಶಾಂತಿಯನ್ನು ನೀಡುತ್ತದೆ. ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.
(104) ಖಂಡಿತವಾಗಿಯೂ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ದಾನಧರ್ಮಗಳನ್ನು ಪಡೆಯುವವನು ಅಲ್ಲಾಹುವಾಗಿರುವನು ಹಾಗೂ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು ಎಂಬುದನ್ನು ಅವರು ಅರಿತಿಲ್ಲವೇ?
(105) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಕಾರ್ಯವೆಸಗಿರಿ. ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನಿಮ್ಮ ಪ್ರವೃತ್ತಿಯನ್ನು ವೀಕ್ಷಿಸುವರು. ತರುವಾಯ ಅಗೋಚರ ಮತ್ತು ಗೋಚರವಾಗಿರುವುದನ್ನು(322) ಅರಿಯುವವನೆಡೆಗೆ ನಿಮ್ಮನ್ನು ಮರಳಿಸಲಾಗುವುದು. ನೀವು ಮಾಡಿಕೊಂಡಿರುವುದರ ಬಗ್ಗೆ ಆಗ ಅವನು ನಿಮಗೆ ಮಾಹಿತಿ ನೀಡುವನು’.
322. ‘ಗೈಬ್’ ಎಂಬ ಪದಕ್ಕೆ ಅಗೋಚರ ಎಂದು ಅರ್ಥ ನೀಡಲಾಗಿದೆ. ಈ ಪದದ ನಿಖರವಾದ ಮತ್ತು ಸೂಕ್ಷ್ಮವಾದ ಅರ್ಥವು ಮನುಷ್ಯನಿಗೆ ಅಲ್ಲಾಹು ನೀಡಿದ ಅರಿವಿನ ವ್ಯಾಪ್ತಿಗೆ ಅತೀತವಾಗಿರುವುದು ಎಂದಾಗಿದೆ. ಈ ವ್ಯಾಪ್ತಿಗೊಳಪಟ್ಟಿರುವುದನ್ನು ‘ಶಹಾದತ್’ ಎನ್ನಲಾಗುತ್ತದೆ.
(106) ಅಲ್ಲಾಹುವಿನ ಆಜ್ಞೆ ಬರುವವರೆಗೆ ತೀರ್ಪು ಕಾದಿರಿಸಲಾದ ಬೇರೆ ಕೆಲವರಿರುವರು.(323) ಅಲ್ಲಾಹು ಅವರನ್ನು ಶಿಕ್ಷಿಸಲೂಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
323. ತಬೂಕ್ ಯುದ್ಧಕ್ಕೆ ಹೋಗದೆ ಹಿಂದೆ ಉಳಿದವರನ್ನು 101, 102 ಮತ್ತು 106ನೇ ಸೂಕ್ತಿಗಳಲ್ಲಿ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು: ಕಾಪಟ್ಯದಲ್ಲಿ ಆಳವಾಗಿ ಬೇರೂರಿರುವವರು. ಎರಡು: ತಮ್ಮ ತಪ್ಪನ್ನು ಒಪ್ಪಿಕೊಂಡವರು ಮತ್ತು ಪಶ್ಚಾತ್ತಾಪ ಸ್ವೀಕರಿಸಲ್ಪಟ್ಟವರು. ಮೂರು: ಅಲ್ಲಾಹುವಿನ ಆಜ್ಞೆ ಬರುವವರೆಗೆ ತೀರ್ಪು ಕಾದಿರಿಸಲ್ಪಟ್ಟವರು.
(107) ಹಾನಿ ಮಾಡುವ ಉದ್ದೇಶದಿಂದ, ಸತ್ಯನಿಷೇಧದಿಂದ ಮತ್ತು ಸತ್ಯವಿಶ್ವಾಸಿಗಳ ಮಧ್ಯೆ ಒಡಕುಂಟು ಮಾಡಲು ಮತ್ತು ಈ ಮೊದಲೇ ಅಲ್ಲಾಹು ಹಾಗೂ ಅವನ ಸಂದೇಶವಾಹಕರ ವಿರುದ್ಧ ಹೋರಾಡಿದವರಿಗೆ ತಂಗುದಾಣವನ್ನು ಮಾಡಿಕೊಡಲು ಒಂದು ಮಸೀದಿಯನ್ನು ನಿರ್ಮಿಸಿದವರು (ಆ ಕಪಟವಿಶ್ವಾಸಿಗಳಲ್ಲಿರುವರು).(324) ‘ನಾವು ಒಳಿತನ್ನಲ್ಲದೆ ಬೇರೇನನ್ನೂ ಉದ್ದೇಶಿಸಿಲ್ಲ’ ಎಂದು ಅವರು ಪ್ರಮಾಣ ಮಾಡಿ ಹೇಳುವರು. ಖಂಡಿತವಾಗಿಯೂ ಅವರು ಸುಳ್ಳು ನುಡಿಯುವವರಾಗಿರುವರು ಎಂಬುದಕ್ಕೆ ಅಲ್ಲಾಹು ಸಾಕ್ಷ್ಯವಹಿಸುವನು.
324. ಇಲ್ಲಿ ಸೂಚಿಸಿರುವುದು ಮದೀನದ ಕುಬಾ ಮಸೀದಿಯ ಸಮೀಪ ಕಪಟವಿಶ್ವಾಸಿಗಳು ನಿರ್ಮಿಸಿದ ಬೇರೊಂದು ಮಸೀದಿಯನ್ನಾಗಿದೆ. ‘ಮಸ್ಜಿದುದ್ದಿರಾರ್’ ಅಥವಾ ಹಾನಿಯ ಮಸೀದಿ ಎಂಬ ಹೆಸರಲ್ಲಿ ಇದನ್ನು ಕರೆಯಲಾಗುತ್ತದೆ.
(108) (ಓ ಪ್ರವಾದಿಯವರೇ!) ತಾವು ಎಂದಿಗೂ ಅದರಲ್ಲಿ ನಮಾಝ್ಗಾಗಿ ನಿಲ್ಲದಿರಿ. ತಾವು ನಮಾಝ್ ಮಾಡಲು ಅತ್ಯಂತ ಅರ್ಹವಾಗಿರುವುದು ಮೊದಲ ದಿನದಿಂದಲೇ ಭಯಭಕ್ತಿಯ ಮೇಲೆ ಸ್ಥಾಪಿಸಲಾಗಿರುವ ಮಸೀದಿಯಾಗಿದೆ.(325) ಶುದ್ಧಿ ಗಳಿಸಲು ಇಷ್ಟಪಡುವ ಕೆಲವು ಜನರು ಆ ಮಸೀದಿಯಲ್ಲಿರುವರು. ಶುದ್ಧಿ ಗಳಿಸುವವರನ್ನು ಅಲ್ಲಾಹು ಪ್ರೀತಿಸುವನು.
325. ಪ್ರವಾದಿ(ಸ) ರವರು ಮೊದಲ ಬಾರಿ ಮದೀನಕ್ಕೆ ಬಂದಾಗ ಮದೀನದ ದಕ್ಷಿಣ ದಿಕ್ಕಿನಲ್ಲಿರುವ ಕುಬಾ ಎಂಬ ಸ್ಥಳದಲ್ಲಿ ಇಳಿದು ಕೆಲವು ದಿನಗಳ ಕಾಲ ತಂಗಿದ್ದರು. ಅಲ್ಲಿ ಅಂದು ನಿರ್ಮಿಸಲಾದ ಮಸೀದಿಯ ಬಗ್ಗೆ ಈ ಸೂಕ್ತಿಯಲ್ಲಿ ಪರಾಮರ್ಶಿಸಲಾಗಿದೆ. ಮದೀನದಲ್ಲಿರುವ ಅಲ್ಮಸ್ಜಿದುನ್ನಬವೀ ನಂತರ ನಿರ್ಮಿಸಿದ ಮಸೀದಿಯಾಗಿದೆ.
(109) ಅಲ್ಲಾಹುವಿನಲ್ಲಿರುವ ಭಯಭಕ್ತಿ ಮತ್ತು ಅವನ ಸಂತೃಪ್ತಿಯ ಮೇಲೆ ತನ್ನ ಕಟ್ಟಡವನ್ನು ಸ್ಥಾಪಿಸಿದವನೋ ಅಥವಾ ಕುಸಿದುಬೀಳಲು ಸಿದ್ಧವಾಗಿರುವ ಪ್ರಪಾತದ ಅಂಚಿನಲ್ಲಿ ಕಟ್ಟಡವನ್ನು ಸ್ಥಾಪಿಸಿ ತರುವಾಯ ಅದು ತನ್ನೊಂದಿಗೆ ಸೇರಿ ನರಕಾಗ್ನಿಯಲ್ಲಿ ಕುಸಿದುಬಿದ್ದವನೋ ಉತ್ತಮನು? ಅಕ್ರಮಿಗಳಾಗಿರುವ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
(110) ಅವರ ಹೃದಯಗಳು ಚೂರು ಚೂರಾಗಿ ಬಿಡುವ ವಿನಾ ಅವರು ಸ್ಥಾಪಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಒಂದು ಭೀತಿಯಾಗಿ ಉಳಿಯದೆ ಇರಲಾರದು.(326) ಅಲ್ಲಾಹು ಎಲ್ಲವನ್ನು ಅರಿಯುವವನೂ ಯುಕ್ತಿಪೂರ್ಣನೂ ಆಗಿರುವನು.
326. ಆ ಮಸೀದಿ ಮತ್ತು ಅದನ್ನು ಸ್ಥಾಪಿಸಿದ ಕಪಟವಿಶ್ವಾಸಿಗಳ ವಿಷಯದಲ್ಲಿ ಅಲ್ಲಾಹು ಮತ್ತು ಅವನ ಸಂದೇಶವಾಹಕರವರು ಯಾವ ತೀರ್ಮಾನವನ್ನು ಕೈಗೊಳ್ಳುವರು ಎಂಬುದು ಅವರನ್ನು ಭಯಭೀತಗೊಳಿಸಿದ ವಿಷಯವಾಗಿದೆ. ಅವರ ಹೃದಯಗಳು ಜೀವಂತವಾಗಿರುವವರೆಗೂ ಆ ಭೀತಿಯು ಅಸ್ತಿತ್ವದಲ್ಲಿರುವುದೆಂದು ಅಲ್ಲಾಹು ಸ್ಪಷ್ಟಪಡಿಸುತ್ತಿದ್ದಾನೆ.
(111) ಖಂಡಿತವಾಗಿಯೂ ಸತ್ಯವಿಶ್ವಾಸಿಗಳಿಂದ, ಅವರಿಗೆ ಸ್ವರ್ಗವು ಸಿಗುವುದು ಎಂಬುದಕ್ಕೆ ಬದಲಿಯಾಗಿ ಅಲ್ಲಾಹು ಅವರ ಶರೀರಗಳನ್ನು ಮತ್ತು ಸಂಪತ್ತುಗಳನ್ನು ಪಡೆದಿರುವನು. ಅವರು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುವರು. ತನ್ಮೂಲಕ ಅವರು ಕೊಲ್ಲುತ್ತಲೂ ಕೊಲ್ಲಲ್ಪಡುತ್ತಲೂ ಇರುವರು. (ಹೀಗೆ ಅವರು ಸ್ವರ್ಗವಾಸಿಗಳಾಗುವರು.) ಇದು ಅಲ್ಲಾಹು ತೌರಾತ್ನಲ್ಲಿ, ಇಂಜೀಲ್ನಲ್ಲಿ ಮತ್ತು ಕುರ್ಆನ್ನಲ್ಲಿ ತನ್ನ ಮೇಲಿರುವ ಒಂದು ಹೊಣೆಯಾಗಿ ಘೋಷಿಸಿದ ವಾಗ್ದಾನವಾಗಿದೆ.(327) ಅಲ್ಲಾಹುವಿಗಿಂತಲೂ ಹೆಚ್ಚು ತನ್ನ ಕರಾರನ್ನು ಈಡೇರಿಸುವವನು ಇನ್ನಾರಿರುವನು? ಆದ್ದರಿಂದ ನೀವು (ಅಲ್ಲಾಹುವಿನೊಂದಿಗೆ) ಮಾಡಿಕೊಂಡಿರುವ ಈ ವ್ಯವಹಾರದಲ್ಲಿ ಸಂತೋಷಪಡಿರಿ. ಮಹಾ ಗೆಲುವು ಅದೇ ಆಗಿದೆ.
327. ಅಲ್ಲಾಹುವಿನ ಮಾರ್ಗದಲ್ಲಿ ದೇಹ ಮತ್ತು ಧನವನ್ನು ಅರ್ಪಿಸುವವರಿಗೆ ಸ್ವರ್ಗವನ್ನು ನೀಡಲಾಗುವುದು ಎಂಬ ವಾಗ್ದಾನ.
(112) ಪಶ್ಚಾತ್ತಾಪಪಡುವವರು, ಆರಾಧನಾ ಮಗ್ನರಾಗುವವರು, ಸ್ತುತಿಕೀರ್ತನೆ ಮಾಡುವವರು, ಉಪವಾಸ ವನ್ನಾಚರಿಸುವವರು, ತಲೆಬಾಗುವವರು, ಸಾಷ್ಟಾಂಗ ಮಾಡುವವರು, ಸದಾಚಾರವನ್ನು ಆದೇಶಿಸುವವರು, ದುರಾಚಾರವನ್ನು ವಿರೋಧಿಸುವವರು ಮತ್ತು ಅಲ್ಲಾಹುವಿನ ನಿಯಮಮಿತಿಗಳನ್ನು ಪಾಲಿಸುವವರು. (ಇಂತಹ) ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿರಿ.
(113) ಬಹುದೇವವಿಶ್ವಾಸಿಗಳು ಜ್ವಲಿಸುವ ನರಕಾಗ್ನಿಯ ವಾಸಿಗಳಾಗಿರುವರೆಂದು ತಮಗೆ ಸ್ಪಷ್ಟವಾದ ಬಳಿಕ ಅವರಿಗಾಗಿ ಪಾಪಮುಕ್ತಿಯನ್ನು ಬೇಡುವುದು -ಅವರು ಆಪ್ತ ಸಂಬಂಧಿಕರಾಗಿದ್ದರೂ ಕೂಡ- ಪ್ರವಾದಿಯವರಿಗಾಗಲಿ ಸತ್ಯವಿಶ್ವಾಸಿಗಳಿಗಾಗಲಿ ಯುಕ್ತವಾದುದಲ್ಲ.
(114) ಇಬ್ರಾಹೀಮ್ರು ತಮ್ಮ ತಂದೆಗಾಗಿ ಪಾಪಮುಕ್ತಿಯನ್ನು ಬೇಡಿರುವುದು ಅವರು ತಮ್ಮ ತಂದೆಯೊಂದಿಗೆ ಮಾಡಿದ್ದ ವಾಗ್ದಾನದ ನಿಮಿತ್ತ ಮಾತ್ರವಾಗಿತ್ತು. ಆದರೆ ಆತ (ತಂದೆ) ಅಲ್ಲಾಹುವಿನ ಶತ್ರುವೆಂದು ಅವರಿಗೆ ಸ್ಪಷ್ಟವಾದಾಗ ಅವರು ಆತನಿಂದ (ತಂದೆಯಿಂದ) ದೂರವಾದರು. ಖಂಡಿತವಾಗಿಯೂ ಇಬ್ರಾಹೀಮ್ರು ಅತ್ಯಂತ ವಿನಯವಂತರೂ ಸಹನಾಶೀಲರೂ ಆಗಿದ್ದರು.
(115) ಒಂದು ಜನತೆಗೆ ಮಾರ್ಗದರ್ಶನ ಮಾಡಿದ ಬಳಿಕ, ಅವರು ಯಾವುದರ ಬಗ್ಗೆ ಎಚ್ಚರವಹಿಸಬೇಕೆಂಬುದನ್ನು ಸ್ಪಷ್ಟಪಡಿಸಿಕೊಡುವ ತನಕ ಅಲ್ಲಾಹು ಅವರನ್ನು ಪಥಭ್ರಷ್ಟರನ್ನಾಗಿ ಎಣಿಸಲಾರನು.(328) ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು.
328. ಮದ್ಯವನ್ನು ನಿಷಿದ್ಧಗೊಳಿಸುವ ವಿಧಿಯು ಕುರ್ಆನ್ನಲ್ಲಿ ಅವತೀರ್ಣಗೊಳ್ಳುವ ಮೊದಲು ಮದ್ಯಪಾನ ಮಾಡಿದವರನ್ನು ದುರ್ಮಾರ್ಗಿಗಳೆಂದು ಅಲ್ಲಾಹು ಎಣಿಸಲಾರನು ಎಂದು ಇದರಿಂದ ಗ್ರಹಿಸಬಹುದು. ಒಂದು ಕಾರ್ಯವು ನಿಷಿದ್ಧವೆಂದು ಘೋಷಿಸಲಾಗುವ ಮುನ್ನ ಅದನ್ನು ಮಾಡಿದವರ ವಿಧಿ ಇದೇ ರೀತಿಯಾಗಿದೆ.
(116) ಖಂಡಿತವಾಗಿಯೂ ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಅಲ್ಲಾಹುವಿಗಿರುವುದಾಗಿದೆ. ಅವನು ಜೀವವನ್ನು ನೀಡುವನು ಮತ್ತು ಮೃತಪಡಿಸುವನು. ಅಲ್ಲಾಹುವಿನ ಹೊರತು ನಿಮಗೆ ಅನ್ಯ ರಕ್ಷಕನಾಗಲಿ, ಸಹಾಯಕನಾಗಲಿ ಇರಲಾರರು.
(117) ಖಂಡಿತವಾಗಿಯೂ ಅಲ್ಲಾಹು ಪ್ರವಾದಿಯವರ, ಮತ್ತು ಸಂದಿಗ್ಧಸ್ಥಿತಿಯಲ್ಲಿ ಅವರನ್ನು ಹಿಂಬಾಲಿಸಿದ ಮುಹಾಜಿರ್ ಮತ್ತು ಅನ್ಸಾರ್ಗಳ ಪಶ್ಚಾತ್ತಾಪವನ್ನು ಸ್ವೀಕರಿಸಿರುವನು. -ಅವರ ಪೈಕಿ ಒಂದು ಗುಂಪಿನ(329) ಹೃದಯಗಳು ವ್ಯತಿಚಲಿಸುವಂತಾದ ಬಳಿಕ. ತರುವಾಯ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಖಂಡಿತವಾಗಿಯೂ ಅವನು ಅವರೊಂದಿಗೆ ಅತ್ಯಧಿಕ ಕೃಪೆಯುಳ್ಳವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.
329. ತಬೂಕ್ನೆಡೆಗಿರುವ ದುರ್ಗಮವಾದ ಯಾತ್ರೆಯ ವಿಷಯದಲ್ಲಿ ಕಡು ಪ್ರಯಾಸಗಳನ್ನು ಎದುರಿಸಬೇಕಾಗಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಬಲಹೀನತೆ ಮತ್ತು ಚಂಚಲತೆಯನ್ನು ಪ್ರಕಟಿಸಿದ ದುರ್ಬಲ ಮನಸ್ಕರಾದ ಸತ್ಯವಿಶ್ವಾಸಿಗಳ ಬಗ್ಗೆ ಇಲ್ಲಿ ಪರಾಮರ್ಶಿಸಲಾಗಿದೆ. 102ನೇ ಸೂಕ್ತಿಯಲ್ಲೂ ಅವರ ಬಗ್ಗೆ ಪರಾಮರ್ಶಿಸಲಾಗಿದೆ.
(118) ತೀರ್ಪು ಕಾದಿರಿಸಲಾಗಿರುವ ಆ ಮೂವರ (ಪಶ್ಚಾತ್ತಾಪವನ್ನೂ ಅಲ್ಲಾಹು ಸ್ವೀಕರಿಸಿರುವನು). (330) ಭೂಮಿಯು ವಿಶಾಲವಾಗಿದ್ದೂ ಕೂಡ ಅದವರಿಗೆ ಇಕ್ಕಟ್ಟಾಗಿ ಬಿಟ್ಟಿತು. ಅವರ ಮನಸ್ಸುಗಳು ಸಹ ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು. ಅಲ್ಲಾಹುವಿನಿಂದ ಪಾರಾಗಲು ಅವನೆಡೆಗಲ್ಲದೆ ಬೇರೆ ಆಶ್ರಯಗಳಿಲ್ಲವೆಂದು ಅವರು (ದೃಢವಾಗಿ) ಅರಿತುಕೊಂಡರು. ಅವರು ಪಶ್ಚಾತ್ತಾಪಪಟ್ಟು ಮರಳುವ ಸಲುವಾಗಿ ತರುವಾಯ ಅವನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
330. ತೀರ್ಪು ಕಾದಿರಿಸಲ್ಪಟ್ಟವರು ಎಂದು 106ನೇ ಸೂಕ್ತಿಯಲ್ಲಿ ಹೇಳಲಾಗಿರುವುದು ಈ ಮೂರು ಮಂದಿಯ ಬಗ್ಗೆಯಾಗಿದೆ. ಅವರು ಕಅ್ಬ್ ಇಬ್ನ್ ಮಾಲಿಕ್, ಹಿಲಾಲ್ ಇಬ್ನ್ ಉಮಯ್ಯಃ ಮತ್ತು ಮುರಾರಃ ಇಬ್ನ್ ರಬೀಅ್ ಎಂಬ ಸಹಾಬಿಗಳಾಗಿದ್ದರು. ಅನ್ಸಾರಿಗಳಾದ ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಹೋಗದೆ ಹಿಂದೆ ಉಳಿದಿದ್ದರು. ಇವರು ಮಾಡಿದ ಈ ಅಪರಾಧದ ನಿಮಿತ್ತ ಪ್ರವಾದಿ(ಸ) ರವರು ಮತ್ತು ಸಹಾಬಾಗಳು ಅವರೊಂದಿಗೆ ತಮ್ಮ ಸಂಪರ್ಕವನ್ನು ಕಡಿದುಬಿಟ್ಟರು. ಅವರಿಗೆ ತೀವ್ರ ದುಃಖ ಮತ್ತು ಪಶ್ಚಾತ್ತಾಪವುಂಟಾಯಿತು. ಕೊನೆಗೆ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು.
(119) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿದವರಾಗಿರಿ.
(120) ಮದೀನಾ ನಿವಾಸಿಗಳಿಗೆ ಮತ್ತು ಅವರ ಸುತ್ತ ಮುತ್ತಲಿನಲ್ಲಿರುವ ಅಅ್ರಾಬಿಗಳಿಗೆ ಅಲ್ಲಾಹುವಿನ ಸಂದೇಶವಾಹಕರನ್ನು ಬಿಟ್ಟು ಹಿಂದೆ ಉಳಿಯುವುದಾಗಲಿ ಅಥವಾ ಅವರ ವಿಷಯವನ್ನು ಕಡೆಗಣಿಸಿ ತಮ್ಮದೇ ವಿಷಯಗಳಲ್ಲಿ ಆಸಕ್ತಿ ವಹಿಸುವುದಾಗಲಿ ಯುಕ್ತವಾದು ದಲ್ಲ. ಅದು ಯಾಕೆಂದರೆ ಅಲ್ಲಾಹುವಿನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹವಾಗಲಿ, ದಣಿವಾಗಲಿ, ಹಸಿವೆಯಾಗಲಿ ಉಂಟಾಗಲಾರದು, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದಾದರೂ ಸ್ಥಳದಲ್ಲಿ ಅವರು ಹೆಜ್ಜೆಯೂರಲಾರರು ಮತ್ತು ಶತ್ರುವಿಗೆ ಯಾವುದೇ ನಾಶ ನಷ್ಟಗಳನ್ನೂ ಉಂಟುಮಾಡಲಾರರು, ಅದರಿಂದಾಗಿ ಅವರಿಗೆ ಒಂದು ಪುಣ್ಯಕರ್ಮವು ದಾಖಲಾಗುವ ಹೊರತು. ಖಂಡಿತವಾಗಿಯೂ ಸತ್ಕರ್ಮಗೈಯ್ಯುವವರ ಪ್ರತಿಫಲವನ್ನು ಅಲ್ಲಾಹು ನಿಷ್ಫಲಗೊಳಿಸಲಾರನು.
(121) ಅವರು ಚಿಕ್ಕದಾಗಿರುವ ಅಥವಾ ದೊಡ್ಡದಾಗಿರುವ ಏನನ್ನೂ ವ್ಯಯಿಸಲಾರರು ಮತ್ತು ಯಾವುದೇ ಕಣಿವೆಯನ್ನೂ ಕಡಿದು ದಾಟಲಾರರು, ಅದು ಅವರಿಗೆ (ಪುಣ್ಯಕರ್ಮವಾಗಿ) ದಾಖಲಾಗುವ ಹೊರತು. ಇದು ಅವರು ಮಾಡುತ್ತಿರುವ ಅತ್ಯುತ್ತಮ ಕರ್ಮಕ್ಕೆ ಅಲ್ಲಾಹು ತಕ್ಕ ಪ್ರತಿಫಲವನ್ನು ನೀಡುವ ಸಲುವಾಗಿದೆ.
(122) ಎಲ್ಲರೂ ಒಟ್ಟಾಗಿ (ಯುದ್ಧಕ್ಕೆ) ಹೊರಡುವುದು ಸತ್ಯವಿಶ್ವಾಸಿಗಳಿಗೆ ಯುಕ್ತವಾದುದಲ್ಲ. ಅವರ ಪೈಕಿ ಪ್ರತಿಯೊಂದು ವಿಭಾಗದಿಂದ ಒಂದು ತಂಡ ಮಾತ್ರ ಹೋಗಬಾರದೇಕೆ?(331) ಹಾಗಾದರೆ (ಉಳಿದವರಿಗೆ ಪ್ರವಾದಿಯವರೊಂದಿಗೆ ತಂಗಿ) ಧರ್ಮಜ್ಞಾನವನ್ನು ಪಡೆಯಲು ಮತ್ತು ತಮ್ಮ ಜನರು (ಯುದ್ಧದಿಂದ) ಅವರ ಬಳಿಗೆ ಮರಳಿ ಬಂದಾಗ ಅವರಿಗೆ ಎಚ್ಚರಿಕೆ ನೀಡಲು ಸಾಧ್ಯವಾಗಬಹುದು.(332) ಅವರು ಎಚ್ಚರವಹಿಸಲೂ ಬಹುದು.
331. ಆರೋಗ್ಯ ಮತ್ತು ಹೋರಾಡಲು ಶಕ್ತಿಯುಳ್ಳವರು ಯುದ್ಧಕ್ಕೆ ಹೋಗಲಿ. ಬೇರೆ ವಿಧದಲ್ಲಿ ಸೇವೆ ಸಲ್ಲಿಸಲು ಸಾಧ್ಯವಿರುವವರು ಹಾಗೆ ಮಾಡಲಿ.
332. ಈ ವಚನಕ್ಕೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಲಾಗಿದೆ. ಅವುಗಳ ಪೈಕಿ ಒಂದನ್ನು ಇಲ್ಲಿ ಅವಲಂಬಿಸಲಾಗಿದೆ.
(123) ಓ ಸತ್ಯವಿಶ್ವಾಸಿಗಳೇ! ನಿಮ್ಮ ಬಳಿ ವಾಸಿಸುವ ಸತ್ಯನಿಷೇಧಿಗಳೊಂದಿಗೆ ನೀವು ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಠೋರತೆಯನ್ನು ಕಾಣಲಿ.(333) ಅಲ್ಲಾಹು ಭಯಭಕ್ತಿ ಪಾಲಿಸುವವರೊಂದಿಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ.
333. ಅವಕಾಶ ಸಿಕ್ಕಾಗ ನಿಮಗೆ ಹಿಂಸೆ ನೀಡಲು ಯತ್ನಿಸುವವರಿಗೆ ನೀವು ನಿಮ್ಮ ಧೈರ್ಯ ಹಾಗೂ ಆವೇಶವನ್ನು ತೋರಿಸಿರಿ ಎಂದರ್ಥ.
(124) (ಕುರ್ಆನ್ನ) ಯಾವುದಾದರೂ ಅಧ್ಯಾಯವು ಅವತೀರ್ಣವಾದಾಗ ‘ಇದು ನಿಮ್ಮಲ್ಲಿ ಯಾರಿಗೆ ವಿಶ್ವಾಸವನ್ನು ಅಧಿಕಗೊಳಿಸಿದೆ?’ ಎಂದು ಅವರ ಪೈಕಿ ಕೆಲವರು ಕೇಳುವರು. ಸತ್ಯವಿಶ್ವಾಸಿಗಳಾರೋ, ಅದು ಅವರಿಗೆ ಖಂಡಿತವಾಗಿಯೂ ವಿಶ್ವಾಸವನ್ನು ಅಧಿಕಗೊಳಿಸಿದೆ. ಅವರು (ಅದರಿಂದಾಗಿ) ಸಂತೋಷಪಡುವರು.
(125) ಆದರೆ ಹೃದಯಗಳಲ್ಲಿ ರೋಗವಿರುವವರಾರೋ, ಅದು ಅವರ ಕೆಡುಕಿಗೆ ಇನ್ನಷ್ಟು ಕೆಡುಕನ್ನು ಹೆಚ್ಚಿಸುವುದು. ಅವರು ಸತ್ಯನಿಷೇಧಿಗಳಾಗಿಯೇ ಮರಣಹೊಂದಿದರು.
(126) ಅವರು ಪ್ರತಿಯೊಂದು ವರ್ಷದಲ್ಲಿಯೂ ಒಂದೋ ಎರಡೋ ಬಾರಿ ಪರೀಕ್ಷಿಸಲ್ಪಡುತ್ತಿರುವರು ಎಂಬುದನ್ನು ಅವರು ಕಾಣುವುದಿಲ್ಲವೇ? ಆ ಬಳಿಕವೂ ಅವರು ಪಶ್ಚಾತ್ತಾಪಪಟ್ಟು ಮರಳುವುದಿಲ್ಲ. ಅವರು ಚಿಂತಿಸಿ ಗ್ರಹಿಸುವುದೂ ಇಲ್ಲ.(334)
334. ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳಿಗೆ ಸಿಗುತ್ತಿರುವ ಗೆಲುವುಗಳ ಬಗ್ಗೆ ಮತ್ತು ಸತ್ಯನಿಷೇಧಿಗಳಿಗೆ ಉಂಟಾಗುತ್ತಿರುವ ಅಪಮಾನ, ಪರಾಭವಗಳ ಬಗ್ಗೆ ಅವರು ಸರಿಯಾಗಿ ಚಿಂತಿಸಿ ಗ್ರಹಿಸಿರುತ್ತಿದ್ದರೆ ಅವರು ಖಂಡಿತವಾಗಿಯೂ ಪಶ್ಚಾತ್ತಾಪಪಡುತ್ತಿದ್ದರು.
(127) ಯಾವುದಾದರೂ ಒಂದು ಅಧ್ಯಾಯವನ್ನು ಅವತೀರ್ಣಗೊಳಿಸಲಾದಾಗ ಅವರ ಪೈಕಿ ಕೆಲವರು ಇತರ ಕೆಲವರನ್ನು ‘ನಿಮ್ಮನ್ನು ಯಾರಾದರೂ ಕಾಣುತ್ತಿದ್ದಾರೆಯೇ?’ ಎಂಬ ಪ್ರಶ್ನಾರ್ಥಕ ಭಾವದಲ್ಲಿ ನೋಡುವರು. ತರುವಾಯ ಅವರು ವಿಮುಖರಾಗಿ ಹೋಗುವರು.(335) ಅವರು ಚಿಂತಿಸಿ ಗ್ರಹಿಸದ ಒಂದು ಜನತೆಯಾಗಿರುವುದರಿಂದ ಅಲ್ಲಾಹು ಅವರ ಹೃದಯಗಳನ್ನು (ಸತ್ಯದಿಂದ) ತಿರುಗಿಸಿ ಬಿಟ್ಟಿರುವನು.
335. ಕುರ್ಆನ್ನ ಪ್ರತಿಯೊಂದು ಸೂಕ್ತಿ ಮತ್ತು ಅಧ್ಯಾಯವು ಅವತೀರ್ಣಗೊಳ್ಳುವಾಗ ಸತ್ಯವಿಶ್ವಾಸಿಗಳು ಸಂತುಷ್ಟರಾಗುತ್ತಾರೆ. ಪ್ರವಾದಿ(ಸ) ರವರು ಕುರ್ಆನನ್ನು ಓದಿಕೊಡುವಾಗ ಅವರ ಸನ್ನಿಧಿಯಲ್ಲಿರುವ ವಿಶ್ವಾಸಿಗಳು ಅದನ್ನು ಗಮನಕೊಟ್ಟು ಕೇಳುತ್ತಾರೆ. ಆದರೆ ಕಪಟ ವಿಶ್ವಾಸಿಗಳು ಹಾಗಲ್ಲ. ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ನೋಡುತ್ತಾ ಅವರು ಅಲ್ಲಿಂದ ಕದಲಲು ಯತ್ನಿಸುತ್ತಾರೆ.
(128) ಖಂಡಿತವಾಗಿಯೂ ನಿಮಗೆ ನಿಮ್ಮಿಂದಲೇ ಒಬ್ಬ ಸಂದೇಶವಾಹಕರು ಬಂದಿರುವರು. ನೀವು ಕಷ್ಟಪಡುವುದು ಅವರಿಗೆ ಸಹಿಸಲಾಗದು, ಅವರು ನಿಮ್ಮ ಬಗ್ಗೆ ಅತ್ಯಾಸಕ್ತಿಯುಳ್ಳವರಾಗಿರುವರು ಮತ್ತು ಸತ್ಯವಿಶ್ವಾಸಿಗಳೊಂದಿಗೆ ಅಪಾರ ದಯೆಯುಳ್ಳವರೂ, ಕರುಣೆಯುಳ್ಳವರೂ ಆಗಿರುವರು.
(129) ಅವರೇನಾದರೂ ವಿಮುಖರಾಗುವುದಾದರೆ (ಓ ಪ್ರವಾದಿಯವರೇ!) ತಾವು ಹೇಳಿರಿ: ‘ನನಗೆ ಅಲ್ಲಾಹು ಸಾಕು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ನಾನು ಅವನ ಮೇಲೆ ಭರವಸೆಯಿಟ್ಟಿರುವೆನು. ಅವನು ಮಹಾ ಸಿಂಹಾಸನದ ಒಡೆಯನಾಗಿರುವನು’.