(1) ಹಾ-ಮೀಮ್.
(2) (ವಿಷಯಗಳನ್ನು) ವಿವರಿಸುವ ಗ್ರಂಥದ ಮೇಲಾಣೆ!
(3) ಖಂಡಿತವಾಗಿಯೂ ನಾವು ಇದನ್ನು ಅರಬೀ ಭಾಷೆಯಲ್ಲಿರುವ ಒಂದು ಕುರ್‌ಆನ್ ಆಗಿ ಮಾಡಿರುವುದು ನೀವು ಚಿಂತಿಸಿ ಗ್ರಹಿಸುವ ಸಲುವಾಗಿದೆ.
(4) ಖಂಡಿತವಾಗಿಯೂ ಅದು ಮೂಲಗ್ರಂಥದಲ್ಲಿ ನಮ್ಮ ಬಳಿ (ಸುರಕ್ಷಿತವಾಗಿ) ಇದೆ. ಅದು ಉನ್ನತವೂ ಜ್ಞಾನಸಂಪನ್ನವೂ ಆಗಿದೆ.
(5) ನೀವು ಅತಿಕ್ರಮಿಗಳಾದ ಜನತೆಯಾಗಿರುವ ಕಾರಣ (ನಿಮ್ಮನ್ನು) ಹೊರತುಪಡಿಸಿ ನಾವು ಈ ಉಪದೇಶವನ್ನು ನಿಮ್ಮಿಂದ ದೂರಸರಿಸುವೆವೇ?
(6) ಪೂರ್ವಿಕ ಸಮುದಾಯಗಳಲ್ಲಿ ನಾವು ಎಷ್ಟೋ ಪ್ರವಾದಿಗಳನ್ನು ಕಳುಹಿಸಿರುವೆವು.
(7) ಯಾವುದೇ ಪ್ರವಾದಿಯೂ ಅವರ ಬಳಿ ಬರುವಾಗಲೆಲ್ಲ ಅವರು ಅವರನ್ನು ಗೇಲಿ ಮಾಡದಿರಲಿಲ್ಲ.
(8) ಇವರಿಗಿಂತಲೂ ಬಲಿಷ್ಠರಾಗಿದ್ದವರನ್ನು ನಾವು ನಾಶ ಮಾಡಿರುವೆವು. ಪೂರ್ವಿಕರ ಉದಾಹರಣೆಗಳು ಈಗಾಗಲೇ ಗತಿಸಿಹೋಗಿವೆ.
(9) “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು?” ಎಂದು ತಾವು ಅವರೊಂದಿಗೆ ಕೇಳಿದರೆ “ಅವುಗಳನ್ನು ಸೃಷ್ಟಿಸಿದವನು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವವನು” ಎಂದು ಖಂಡಿತವಾಗಿಯೂ ಅವರು ಹೇಳುವರು.
(10) ಅಂದರೆ ನಿಮಗೆ ಭೂಮಿಯನ್ನು ಒಂದು ತೊಟ್ಟಿಲನ್ನಾಗಿ(1094) ಮಾಡಿಕೊಟ್ಟವನು ಮತ್ತು ನೀವು ನೇರವಾದ ಮಾರ್ಗವನ್ನು ಕಾಣಲು ಅದರಲ್ಲಿ ನಿಮಗೆ ಹಾದಿಗಳನ್ನು ಮಾಡಿಕೊಟ್ಟವನು.
1094. ಭೂಮಿಯ ಮೇಲ್ಮೈಯ ವಿಶೇಷತೆಗಳು, ವಾತಾವರಣ ಮತ್ತು ಹವಾಗುಣ ಇತ್ಯಾದಿ ಅನೇಕ ಘಟಕಗಳನ್ನು ಜೊತೆಗೂಡಿಸಿ ಅಲ್ಲಾಹು ಭೂಮಿಯನ್ನು ಜೀವರಾಶಿಗಳಿಗೆ ತೊಟ್ಟಿಲಿನಂತೆ ಮಾಡಿರುವನು. ಮಹ್ದ್, ಮಿಹಾದ್ ಎಂಬ ಪದಗಳಿಗೆ ತೊಟ್ಟಿಲು, ಹಾಸಿಗೆ ಇತ್ಯಾದಿ ಅರ್ಥಗಳಿವೆ.
(11) ಒಂದು ಪ್ರಮಾಣಕ್ಕನುಗುಣವಾಗಿ ಆಕಾಶದಿಂದ (ಮಳೆ)ನೀರನ್ನು ಸುರಿಸಿಕೊಟ್ಟವನು. ತರುವಾಯ ಅದರಿಂದ ನಾವು ನಿರ್ಜೀವವಾದ ಪ್ರದೇಶಕ್ಕೆ ಜೀವವನ್ನು ನೀಡಿದೆವು. ನಿಮ್ಮನ್ನು (ಮರಣಾನಂತರ) ಹೀಗೆಯೇ ಹೊರತರಲಾಗುವುದು.
(12) ಎಲ್ಲ ಜೋಡಿಗಳನ್ನು ಸೃಷ್ಟಿಸಿದವನು ಮತ್ತು ನಿಮಗೆ ಸವಾರಿ ಮಾಡುವುದಕ್ಕಿರುವ ಹಡಗುಗಳನ್ನು ಹಾಗೂ ಜಾನುವಾರುಗಳನ್ನು ಮಾಡಿಕೊಟ್ಟವನು.
(13) ನೀವು ಅವುಗಳ ಬೆನ್ನ ಮೇಲೆ ಆಸೀನರಾಗುವ ಸಲುವಾಗಿ, ತರುವಾಯ ನೀವು ಅಲ್ಲಿ ಆಸೀನರಾಗುವಾಗ ನಿಮ್ಮ ರಬ್‌ನ ಅನುಗ್ರಹವನ್ನು ಸ್ಮರಿಸುವ ಸಲುವಾಗಿ ಮತ್ತು ನೀವು ಹೀಗೆ ಹೇಳುವ ಸಲುವಾಗಿ: “ನಮಗೋಸ್ಕರ ಇದನ್ನು ವಿಧೇಯಗೊಳಿಸಿಕೊಟ್ಟವನು ಪರಮಪಾವನನಾಗಿರುವನು! ಇದನ್ನು ಪಳಗಿಸಲು ನಮಗೆ ಸಾಧ್ಯವಿರಲಿಲ್ಲ.
(14) ಖಂಡಿತವಾಗಿಯೂ ನಾವು ನಮ್ಮ ರಬ್‌ನೆಡೆಗೆ ಮರಳಿಹೋಗುವವರೇ ಆಗಿರುವೆವು”.
(15) ಅವರು ಅವನ ದಾಸರ ಪೈಕಿ ಕೆಲವರನ್ನು ಅವನ ಒಂದು ಭಾಗ (ಅಥವಾ ಸಂತತಿ)ವಾಗಿ ಮಾಡಿಕೊಂಡಿರುವರು.(1095) ಖಂಡಿತವಾಗಿಯೂ ಮನುಷ್ಯನು ಪ್ರತ್ಯಕ್ಷವಾಗಿಯೇ ಕೃತಘ್ನನಾಗಿರುವನು.
1095. ಸೃಷ್ಟಿಗಳು ಮತ್ತು ಸೃಷ್ಟಿಕರ್ತನು ಸಂಪೂರ್ಣ ಭಿನ್ನರಾಗಿದ್ದಾರೆ. ಮಲಕ್‍ಗಳು ಅಲ್ಲಾಹುವಿನ ಹೆಣ್ಮಕ್ಕಳೆಂದು ವಿಶ್ವಾಸವಿಡುವವರು ಮತ್ತು ಯೇಸು ಅಲ್ಲಾಹುವಿನ ಪುತ್ರನೆಂದು ವಿಶ್ವಾಸವಿಡುವವರು ತನ್ಮೂಲಕ ಸೃಷ್ಟಿ ಮತ್ತು ಸೃಷ್ಟಿಕರ್ತನ ಅಸ್ತಿತ್ವವನ್ನು ಪರಸ್ಪರ ಬೆರೆಸುವ ಮಹಾಪಾಪವನ್ನು ಮಾಡುತ್ತಿದ್ದಾರೆ.
(16) ಅಥವಾ, ತಾನು ಸೃಷ್ಟಿಸಿದವುಗಳ ಪೈಕಿ ಅವನು ಹೆಣ್ಣುಮಕ್ಕಳನ್ನು (ತನಗಾಗಿ) ಇಟ್ಟುಕೊಂಡು ಗಂಡು ಮಕ್ಕಳನ್ನು ನಿಮಗೆ ವಿಶೇಷವಾಗಿ ಕರುಣಿಸಿರುವನೇ?
(17) ತಾನು ಪರಮ ದಯಾಮಯನಿಗೆ ಉದಾಹರಣೆಯಾಗಿ ತೋರಿಸುತ್ತಿದ್ದುದರ (ಹೆಣ್ಣುಮಗುವಿನ) ಬಗ್ಗೆ ಅವರ ಪೈಕಿ ಒಬ್ಬನಿಗೆ ಶುಭವಾರ್ತೆ ತಿಳಿಸಲಾದರೆ ಅವನ ಮುಖವು ಕರ್‍ರಗಾಗುವುದು ಮತ್ತು ಅವನು ದುಃಖಬಾಧಿತನಾಗುವನು.(1096)
1096. ತನಗೊಂದು ಹೆಣ್ಣು ಶಿಶು ಜನಿಸುವುದು ಅವಮಾನವೆಂದು ಪರಿಗಣಿಸುವ ಮತ್ತು ಅದರಿಂದಾಗಿ ಅತೀವ ದುಃಖಿತನಾಗುವ ಅರೇಬಿಯನ್ ಬಹುದೇವವಿಶ್ವಾಸಿ ತಾನು ಆರಾಧಿಸುವ ದೇವನಿಗೆ ಹೆಣ್ಣುಮಕ್ಕಳಿದ್ದಾರೆಂದು ಆರೋಪಿಸುವುದರಲ್ಲಿರುವ ವಿರೋಧಾಭಾಸದೆಡೆಗೆ ಈ ಸೂಕ್ತಿಯು ಬೊಟ್ಟು ಮಾಡುತ್ತದೆ.
(18) ಆಭರಣಗಳನ್ನು ತೊಡಿಸಿ ಬೆಳೆಸಲಾಗುವ ಮತ್ತು ತರ್ಕದಲ್ಲಿ (ನ್ಯಾಯವನ್ನು) ಸ್ಪಷ್ಟಪಡಿಸಲು ಸಾಧ್ಯವಾಗದ ಒಂದನ್ನಾಗಿದೆಯೇ (ಅವರು ಅಲ್ಲಾಹುವಿಗೆ ಸಂತತಿಯಾಗಿ ಮಾಡಿರುವುದು)?(1097)
1097. ಅವರ ದೃಷ್ಟಿಕೋನದ ಪ್ರಕಾರ ಸ್ತ್ರೀಯು ಬದುಕಿನಲ್ಲಿ ನಿರ್ಣಾಯಕವಾದ ಯಾವುದೇ ಪಾತ್ರವನ್ನು ವಹಿಸದ ಒಂದು ಅಲಂಕಾರ ವಸ್ತು ಮಾತ್ರವಾಗಿರುವಳು.
(19) ಪರಮ ದಯಾಮಯನ ದಾಸರಾದ ಮಲಕ್‌ಗಳನ್ನು ಅವರು ಹೆಣ್ಣಾಗಿ ಮಾಡಿರುವರು. ಅವರ (ಮಲಕ್‍ಗಳ) ಸೃಷ್ಟಿಗೆ ಅವರು ಸಾಕ್ಷಿಯಾಗಿದ್ದರೇ? ಅವರ ಸಾಕ್ಷ್ಯವನ್ನು ದಾಖಲಿಸಲಾಗುವುದು ಮತ್ತು ಅವರನ್ನು ವಿಚಾರಣೆ ಮಾಡಲಾಗುವುದು.
(20) “ಪರಮ ದಯಾಮಯನು ಇಚ್ಛಿಸುತ್ತಿದ್ದರೆ ನಾವು ಅವರನ್ನು (ಮಲಕ್‍ಗಳನ್ನು) ಆರಾಧಿಸುತ್ತಿರಲಿಲ್ಲ” ಎಂದು ಅವರು ಹೇಳುವರು. ಅವರಿಗೆ ಅದರ ಬಗ್ಗೆ ಯಾವುದೇ ಅರಿವೂ ಇಲ್ಲ. ಅವರು ಊಹಿಸಿ ಹೇಳುವವರು ಮಾತ್ರವಾಗಿರುವರು.
(21) ಅಥವಾ, ಅವರಿಗೆ ನಾವು ಮುಂಚೆ ಯಾವುದಾದರೂ ಗ್ರಂಥವನ್ನು ನೀಡಿ ಅವರು ಅದನ್ನು ಬಿಗಿಯಾಗಿ ಹಿಡಿದುಕೊಂಡಿರುವರೇ?
(22) ಅಲ್ಲ, “ನಾವು ನಮ್ಮ ಪೂರ್ವಿಕರನ್ನು ಒಂದು ಮಾರ್ಗದಲ್ಲಿರುವುದಾಗಿ ಕಂಡಿರುವೆವು. ಖಂಡಿತವಾಗಿಯೂ ನಾವು ಅವರ ಹೆಜ್ಜೆಗುರುತುಗಳಲ್ಲಿ ಸನ್ಮಾರ್ಗವನ್ನು ಕಂಡಿರುವೆವು” ಎಂದು ಅವರು ಹೇಳುವರು.
(23) ಹೀಗೆ ತಮಗಿಂತ ಮುಂಚೆ ಯಾವುದೇ ಪ್ರದೇಶಕ್ಕೆ ನಾವು ಮುನ್ನೆಚ್ಚರಿಕೆಗಾರರನ್ನು ಕಳುಹಿಸಿದಾಗಲೆಲ್ಲ “ನಾವು ನಮ್ಮ ಪೂರ್ವಿಕರನ್ನು ಒಂದು ಮಾರ್ಗದಲ್ಲಿರುವುದಾಗಿ ಕಂಡಿರುವೆವು. ಖಂಡಿತವಾಗಿಯೂ ನಾವು ಅವರ ಹೆಜ್ಜೆಗುರುತುಗಳನ್ನು ಹಿಂಬಾಲಿಸುವೆವು” ಎಂದು ಅಲ್ಲಿನ ಸುಖಲೋಲುಪರು ಹೇಳದಿರಲಿಲ್ಲ.
(24) ಅವರು (ಮುನ್ನೆಚ್ಚರಿಕೆಗಾರರು) ಹೇಳಿದರು: “ನೀವು ನಿಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿರುವುದಾಗಿ ಕಂಡಿರುವಿರೋ ಅದಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸಿಕೊಡುವ ಸಂದೇಶದೊಂದಿಗೆ ನಾನು ನಿಮ್ಮ ಬಳಿ ಬಂದರೂ (ನೀವು ಪೂರ್ವಿಕರನ್ನೇ ಹಿಂಬಾಲಿಸುವಿರಾ)? ಅವರು ಹೇಳಿದರು: “ನಿಮ್ಮನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿದೆಯೋ ಅದರಲ್ಲಿ ಖಂಡಿತವಾಗಿಯೂ ನಾವು ಅವಿಶ್ವಾಸವಿಟ್ಟಿರುವೆವು”.
(25) ಆದುದರಿಂದ ನಾವು ಅವರನ್ನು ಶಿಕ್ಷಿಸಿದೆವು. ಆಗ ಆ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂಬುದನ್ನು ನೋಡಿರಿ.
(26) ಇಬ್ರಾಹೀಮ್ ತಮ್ಮ ತಂದೆಯೊಂದಿಗೆ ಮತ್ತು ಜನತೆಯೊಂದಿಗೆ ಹೇಳಿದ ಸಂದರ್ಭ. “ಖಂಡಿತವಾಗಿಯೂ ನೀವು ಆರಾಧಿಸುತ್ತಿರುವವುಗಳಿಂದ ನಾನು ವಿಮುಕ್ತನಾಗಿರುವೆನು.
(27) ನನ್ನನ್ನು ಸೃಷ್ಟಿಸಿದವನ ಹೊರತು. ಯಾಕೆಂದರೆ ಖಂಡಿತವಾಗಿಯೂ ಅವನು ನನಗೆ ಮಾರ್ಗದರ್ಶನ ಮಾಡುವನು”.
(28) ಅವರ ನಂತರದವರು (ಸತ್ಯದೆಡೆಗೆ) ಮರಳುವುದಕ್ಕಾಗಿ ಅವರು ಅದನ್ನು (ಆ ಘೋಷಣೆಯನ್ನು) ಅವರ ಮಧ್ಯೆ ನೆಲೆನಿಲ್ಲುವ ಒಂದು ವಚನವನ್ನಾಗಿ ಮಾಡಿದರು.
(29) ಅಲ್ಲ, ಸತ್ಯಸಂದೇಶ ಮತ್ತು ಸ್ಪಷ್ಟವಾಗಿ ವಿವರಿಸಿ ಕೊಡುವ ಒಬ್ಬ ಸಂದೇಶವಾಹಕರು ಇವರ ಬಳಿಗೆ ಬರುವವರೆಗೆ ನಾನು ಇವರಿಗೆ ಮತ್ತು ಇವರ ಪೂರ್ವಿಕರಿಗೆ ಜೀವನಾನುಕೂಲತೆಯನ್ನು ನೀಡಿದೆನು.
(30) ಸತ್ಯವು ಅವರ ಬಳಿಗೆ ಬಂದಾಗ ಅವರು ಹೇಳಿದರು: “ಇದೊಂದು ಮಾಂತ್ರಿಕತೆಯಾಗಿದೆ. ಖಂಡಿತವಾಗಿಯೂ ನಾವು ಇದರಲ್ಲಿ ವಿಶ್ವಾಸವಿಲ್ಲದವರಾಗಿರುವೆವು”.
(31) “ಈ ಎರಡು ನಗರಗಳಲ್ಲಿರುವ ಯಾರಾದರೂ ಒಬ್ಬ ಮಹಾಪುರುಷನ ಮೇಲೆ ಈ ಕುರ್‌ಆನ್ ಅವತೀರ್ಣಗೊಂಡಿಲ್ಲವೇಕೆ?” ಎಂದು ಅವರು ಹೇಳಿದರು.(1098)
1098. ಪ್ರವಾದಿಯಾಗಬೇಕಾದುದು ಸಂಪತ್ತಾಗಲಿ ಪ್ರತಾಪವಾಗಲಿ ಇಲ್ಲದ ಮುಹಮ್ಮದ್(ಸ) ಅಲ್ಲ; ಬದಲಾಗಿ ಮಕ್ಕಾ ಅಥವಾ ತಾಇಫ್‍ನಲ್ಲಿರುವ ಯಾವುದಾದರೂ ಮುಖಂಡನು ಪ್ರವಾದಿಯಾಗಬೇಕಿತ್ತು ಎಂಬುದು ಅವರ ವಾದವಾಗಿತ್ತು.
(32) ತಮ್ಮ ರಬ್‌ನ ಅನುಗ್ರಹವನ್ನು ಹಂಚುವವರು(1099) ಅವರಾಗಿರುವರೇ? ಐಹಿಕ ಜೀವನದಲ್ಲಿ ಅವರ ಮಧ್ಯೆ ಅವರ ಜೀವನ ಮಾರ್ಗವನ್ನು ಹಂಚಿಕೊಟ್ಟವರು ನಾವಾಗಿರುವೆವು. ಅವರಲ್ಲಿ ಕೆಲವರು ಇತರ ಕೆಲವರನ್ನು ಅಡಿಯಾಳನ್ನಾಗಿ ಮಾಡಿಕೊಳ್ಳುವಂತಹ ವಿಧದಲ್ಲಿ ಅವರ ಪೈಕಿ ಕೆಲವರನ್ನು ಇತರ ಕೆಲವರಿಗಿಂತ ನಾವು ಹಲವು ದರ್ಜೆಗಳಿಗೆ ಏರಿಸಿರುವೆವು. ತಮ್ಮ ರಬ್‌ನ ಕಾರುಣ್ಯವು ಅವರು ಸಂಗ್ರಹಿಸಿಡುವುದಕ್ಕಿಂತಲೂ ಉತ್ತಮವಾಗಿದೆ.
1099. ಪ್ರವಾದಿಯ ನಿಯುಕ್ತಿಯು ಅಲ್ಲಾಹುವಿನ ಅನುಗ್ರಹವಾಗಿದೆ. ಅದು ಯಾರಿಗೆಲ್ಲ ಸಿಗಬೇಕೆಂದು ತೀರ್ಮಾನಿಸಬೇಕಾದುದು ಅವರಲ್ಲ.
(33) ಮನುಷ್ಯರು ಒಂದೇ ರೀತಿಯ (ದುಷ್ಟ) ಸಮುದಾಯವಾಗಲಾರರು ಎಂದಾಗಿದ್ದರೆ ಪರಮ ದಯಾಮಯನಲ್ಲಿ ಅವಿಶ್ವಾಸವಿಡುವವರ ಮನೆಗಳಿಗೆ ಬೆಳ್ಳಿಯ ಮೇಲ್ಛಾವಣಿಗಳನ್ನು ಮತ್ತು ಅವರಿಗೆ ಏರಿ ಹೋಗಲು (ಬೆಳ್ಳಿಯ) ಏಣಿಗಳನ್ನು ನಾವು ನಿರ್ಮಿಸಿಕೊಡುತ್ತಿದ್ದೆವು.
(34) ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲುಗಳನ್ನು, ಒರಗಿ ಕೂರಲು ಅವರಿಗೆ (ಬೆಳ್ಳಿಯ) ಮಂಚಗಳನ್ನು ನಾವು ನೀಡುತ್ತಿದ್ದೆವು.
(35) ಮತ್ತು ಸ್ವರ್ಣಾಲಂಕಾರಗಳನ್ನು. ಆದರೆ ಅವೆಲ್ಲವೂ ಐಹಿಕ ಜೀವನದ ಸುಖಭೋಗಗಳು ಮಾತ್ರವಾಗಿವೆ. ತಮ್ಮ ರಬ್‌ನ ಬಳಿ ಪರಲೋಕವು ಭಯಭಕ್ತಿ ಪಾಲಿಸುವವರಿಗೆ ಇರುವುದಾಗಿದೆ.
(36) ಪರಮ ದಯಾಮಯನ ಉಪದೇಶದ ಬಗ್ಗೆ ಯಾರಾದರೂ ಅಂಧನಾಗುವುದಾದರೆ ನಾವು ಅವನಿಗೆ ಒಬ್ಬ ಸೈತಾನನನ್ನು ನಿಶ್ಚಯಿಸುವೆವು. ತರುವಾಯ ಅವನು (ಸೈತಾನನು) ಅವನ ಸಂಗಡಿಗನಾಗಿರುವನು.
(37) ಖಂಡಿತವಾಗಿಯೂ ಅವರು (ಸೈತಾನರು) ಅವರನ್ನು ಸನ್ಮಾರ್ಗದಿಂದ ತಡೆಯುವರು. ತಾವು ಸನ್ಮಾರ್ಗ ಪಡೆದವರೆಂದೇ ಅವರು ಭಾವಿಸಿಕೊಳ್ಳುವರು.
(38) ಹಾಗೆ ನಮ್ಮ ಬಳಿಗೆ ತಲುಪುವಾಗ (ತನ್ನ ಸಂಗಡಿಗನಾದ ಸೈತಾನನೊಂದಿಗೆ) ಅವನು ಹೇಳುವನು: “ನನ್ನ ಮತ್ತು ನಿನ್ನ ಮಧ್ಯೆ ಉದಯಾಸ್ತಮಾನ ಸ್ಥಳಗಳ ನಡುವಿನ ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!” ಆ ಸಂಗಡಿಗನು ಎಷ್ಟು ನಿಕೃಷ್ಟನು!
(39) ನೀವು ಅಕ್ರಮವೆಸಗಿರುವಾಗ ಶಿಕ್ಷೆಯಲ್ಲಿ ನೀವು ಪಾಲುದಾರರಾಗಿದ್ದೀರಿ ಎಂಬ ವಾಸ್ತವಿಕತೆಯು ಇಂದು ನಿಮಗೆ ಕಿಂಚಿತ್ತೂ ಪ್ರಯೋಜನವನ್ನು ನೀಡದು.
(40) (ಓ ಪ್ರವಾದಿಯವರೇ!) ಕಿವುಡರನ್ನು ಆಲಿಸುವಂತೆ ಮಾಡಲು, ಕುರುಡರಿಗೆ ಮತ್ತು ಸ್ಪಷ್ಟವಾದ ದುರ್ಮಾರ್ಗದಲ್ಲಿರುವವರಿಗೆ ದಾರಿ ತೋರಿಸಿಕೊಡಲು ತಮಗೆ ಸಾಧ್ಯವೇ?
(41) ನಾವು ತಮ್ಮನ್ನು ಕೊಂಡೊಯ್ಯುವುದಾದರೆ, ಖಂಡಿತವಾಗಿಯೂ ನಾವು ಅವರ ವಿರುದ್ಧ ಶಿಕ್ಷಾಕ್ರಮ ಕೈಗೊಳ್ಳುವೆವು.
(42) ಅಥವಾ ಅವರಿಗೆ ನಾವು ಮುನ್ನೆಚ್ಚರಿಕೆ ನೀಡಿದ್ದನ್ನು (ಶಿಕ್ಷೆಯನ್ನು) ನಾವು ತಮಗೆ ತೋರಿಸಿಕೊಡುವುದಾದರೂ ನಾವು ಅವರ ವಿಷಯದಲ್ಲಿ ಸಾಮರ್ಥ್ಯವುಳ್ಳವರೇ ಆಗಿರುವೆವು.
(43) ಆದುದರಿಂದ ತಮಗೆ ದಿವ್ಯಸಂದೇಶವಾಗಿ ನೀಡಲಾಗಿರುವುದನ್ನು ತಾವು ಬಿಗಿಯಾಗಿ ಹಿಡಿಯಿರಿ. ಖಂಡಿತವಾಗಿಯೂ ತಾವು ನೇರ ಹಾದಿಯಲ್ಲಿದ್ದೀರಿ.
(44) ಖಂಡಿತವಾಗಿಯೂ ಅದು ತಮಗೆ ಮತ್ತು ತಮ್ಮ ಜನತೆಗಿರುವ ಒಂದು ಉಪದೇಶವಾಗಿದೆ. ನಿಮ್ಮನ್ನು ತರುವಾಯ ಪ್ರಶ್ನಿಸಲಾಗುವುದು.
(45) “ಪರಮ ದಯಾಮಯನ ಹೊರತು ಆರಾಧಿಸಲಾಗುವಂತಹ ಯಾವುದಾದರೂ ಆರಾಧ್ಯರನ್ನು ನಾವು ಮಾಡಿಕೊಂಡಿರುವೆವೇ?” ಎಂದು ತಮಗಿಂತ ಮೊದಲು ನಾವು ಕಳುಹಿಸಿರುವ ನಮ್ಮ ಸಂದೇಶವಾಹಕರೊಂದಿಗೆ ಕೇಳಿ ನೋಡಿರಿ.(1100)
1100. ಕುರ್‌ಆನ್ ವ್ಯಾಖ್ಯಾನಕಾರರಲ್ಲಿ ಹೆಚ್ಚಿನವರ ಅಭಿಪ್ರಾಯ ಪ್ರಕಾರ ಪೂರ್ವ ಪ್ರವಾದಿಗಳೊಂದಿಗೆ ಕೇಳಿ ನೋಡಿರಿ ಎಂಬ ವಾಕ್ಯವು ಒಂದು ಆಲಂಕಾರಿಕ ಪ್ರಯೋಗವಾಗಿದೆಯೇ ಹೊರತು ಭಾಷಾರ್ಥದಲ್ಲಿರುವ ಆಜ್ಞೆಯಲ್ಲ. ಪೂರ್ವ ಪ್ರವಾದಿಗಳಲ್ಲಿ ವಿಶ್ವಾಸವಿಡುವ ಸಮುದಾಯಗಳೊಂದಿಗೆ, ವಿಶೇಷತಃ ಅವರ ವಿದ್ವಾಂಸರೊಂದಿಗೆ ಕೇಳಿರಿ ಎಂದಾಗಿದೆ ಈ ಸೂಕ್ತಿಯ ತಾತ್ಪರ್ಯ. ಯಾವುದೇ ಪ್ರವಾದಿಯಾಗಲಿ ಅಥವಾ ಯಾವುದೇ ಗ್ರಂಥವಾಗಲಿ ಬಹುದೇವಾರಾಧನೆಯನ್ನು ಕಲಿಸಿಕೊಟ್ಟಿಲ್ಲ ಎಂಬುದನ್ನು ಈ ಸೂಕ್ತಿಯು ಸಮರ್ಥಿಸುತ್ತದೆ.
(46) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‍ಔನ್ ಮತ್ತು ಅವನ ಮುಖಂಡರೆಡೆಗೆ ಕಳುಹಿಸಿದೆವು. ತರುವಾಯ ಅವರು (ಮೂಸಾ) ಹೇಳಿದರು: “ಖಂಡಿತವಾಗಿಯೂ ನಾನು ಸರ್ವಲೋಕಗಳ ರಬ್‌ನ ಸಂದೇಶವಾಹಕನಾಗಿರುವೆನು”.
(47) ತರುವಾಯ ಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿಗೆ ಬಂದಾಗ ಅಗೋ! ಅವರು ಅವುಗಳನ್ನು ಲೇವಡಿ ಮಾಡಿ ನಗುತ್ತಿರುವರು.
(48) ಒಂದು ಅದರ ಜೋಡಿಗಿಂತ ದೊಡ್ಡದಾಗಿರುವ ಇನ್ನೊಂದು(1101) ಎಂಬ ವಿಧದಲ್ಲೇ ವಿನಾ ನಾವು ಅವರಿಗೆ ಯಾವುದೇ ದೃಷ್ಟಾಂತವನ್ನು ತೋರಿಸಿಕೊಟ್ಟಿಲ್ಲ. ಅವರು (ಪಶ್ಚಾತ್ತಾಪಪಟ್ಟು) ಮರಳುವ ಸಲುವಾಗಿ ನಾವು ಅವರನ್ನು ಶಿಕ್ಷೆಗಳ ಮೂಲಕ ಹಿಡಿದೆವು.
1101. ದೃಷ್ಟಾಂತಗಳನ್ನು ಒಂದಕ್ಕಿಂತ ಮತ್ತೊಂದು ಮಿಗಿಲು ಎಂಬ ರೀತಿಯಲ್ಲಿ ಅವರಿಗೆ ತೋರಿಸಿಕೊಡಲಾಯಿತು ಎಂದರ್ಥ.
(49) ಅವರು ಹೇಳಿದರು: “ಓ ಮಾಂತ್ರಿಕನೇ! ತಮ್ಮೊಂದಿಗೆ ತಮ್ಮ ರಬ್ ಕರಾರು ಮಾಡಿಕೊಂಡಿರುವ ಪ್ರಕಾರ ತಾವು ನಮಗಾಗಿ ಅವನಲ್ಲಿ ಪ್ರಾರ್ಥಿಸಿರಿ. ಖಂಡಿತವಾಗಿಯೂ ನಾವು ಸನ್ಮಾರ್ಗವನ್ನು ಪಡೆಯುವವರಾಗುವೆವು”.
(50) ತರುವಾಯ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ ಅಗೋ! ಅವರು ಮಾತು ತಪ್ಪುತ್ತಿರುವರು.
(51) ಫಿರ್‍ಔನ್ ತನ್ನ ಜನರೊಂದಿಗೆ ಘೋಷಿಸಿದನು. ಅವನು ಹೇಳಿದನು: “ಓ ನನ್ನ ಜನರೇ! ಈಜಿಪ್ಟಿನ ಆಧಿಪತ್ಯವು ನನಗಲ್ಲವೇ? ಈ ನದಿಗಳು ಹರಿಯುತ್ತಿರುವುದು ನನ್ನ ತಳಭಾಗದಿಂದಾಗಿದೆ. ಆದರೂ ನೀವು (ವಿಷಯಗಳನ್ನು) ಕಂಡು ತಿಳಿಯಲಾರಿರೇ?
(52) ಅಥವಾ, ಅಧಮನೂ, ಸ್ಪಷ್ಟವಾಗಿ ಮಾತನಾಡಲಾಗದವನೂ ಆಗಿರುವ ಈತನಿಗಿಂತ ಉತ್ತಮನು ನಾನೇ ಆಗಿರುವೆನು.(1102)
1102. ಮೂಸಾ(ಅ) ರವರಿಗೆ ನಿರರ್ಗಳವಾಗಿ ಮಾತನಾಡಲು ಆಗುತ್ತಿರಲಿಲ್ಲ. ಫಿರ್‍ಔನ್ ಅದನ್ನು ಒಂದು ನ್ಯೂನತೆಯಾಗಿ ಎತ್ತಿತೋರಿಸುತ್ತಿದ್ದಾನೆ.
(53) ಹಾಗಾದರೆ ಈತನಿಗೆ ಸ್ವರ್ಣ ಕಡಗಗಳನ್ನು ತೊಡಿಸಲಾಗಿಲ್ಲವೇಕೆ? ಅಥವಾ ಈತನೊಂದಿಗೆ ಮಲಕ್‍ಗಳು ಸಹಾಯಕರಾಗಿ ಬಂದಿಲ್ಲವೇಕೆ?”(1103)
1103. ಓರ್ವ ಸಂದೇಶವಾಹಕನು ಆಭರಣಗಳನ್ನು ಧರಿಸಿ ಮಲಕ್‍ಗಳನ್ನು ಅಂಗರಕ್ಷಕರನ್ನಾಗಿ ಮಾಡಿಕೊಂಡು ಬರಬೇಕು ಎಂಬುದು ಫಿರ್‍ಔನ್‍ನ ವಾದವಾಗಿತ್ತು.
(54) ಹಾಗೆ ಫಿರ್‍ಔನ್ ತನ್ನ ಜನರನ್ನು ಮರುಳುಗೊಳಿಸಿದನು. ಅವರು ಅವನನ್ನು ಅನುಸರಿಸಿದರು. ಖಂಡಿತವಾಗಿಯೂ ಅವರು ಧಿಕ್ಕಾರಿಗಳಾದ ಒಂದು ಜನತೆಯಾಗಿದ್ದರು.
(55) ತರುವಾಯ ಅವರು ನಮ್ಮನ್ನು ರೇಗಿಸಿದಾಗ ನಾವು ಅವರನ್ನು ಶಿಕ್ಷಿಸಿದೆವು. ನಾವು ಅವರೆಲ್ಲರನ್ನು ಮುಳುಗಿಸಿದೆವು.
(56) ತರುವಾಯ ನಾವು ಅವರನ್ನು ಒಂದು ಪೂರ್ವ ಮಾದರಿಯನ್ನಾಗಿ ಮತ್ತು ನಂತರದವರಿಗಿರುವ ಒಂದು ಉದಾಹರಣೆಯನ್ನಾಗಿ ಮಾಡಿದೆವು.
(57) ಮರ್ಯಮ್‍ರ ಪುತ್ರನನ್ನು ಒಂದು ಉದಾಹರಣೆಯಾಗಿ ತೋರಿಸಲಾದಾಗ ಅಗೋ! ತಮ್ಮ ಜನತೆಯು ಅಟ್ಟಹಾಸಗೈಯ್ಯುತ್ತಿರುವರು.
(58) “ಶ್ರೇಷ್ಠರಾಗಿರುವುದು ನಮ್ಮ ಆರಾಧ್ಯರೋ ಅಥವಾ ಅವರೋ?” ಎಂದು ಅವರು ಹೇಳಿದರು. ಅವರು ತಮ್ಮೊಂದಿಗೆ ಅದನ್ನು ಹೇಳಿರುವುದು ಒಂದು ತರ್ಕಕ್ಕಾಗಿ ಮಾತ್ರವಾಗಿತ್ತು.(1104) ಅಲ್ಲ, ಅವರು ಹಟಮಾರಿಗಳಾದ ಒಂದು ಜನತೆಯಾಗಿರುವರು.
1104. ‘ಖಂಡಿತವಾಗಿಯೂ ನೀವು ಮತ್ತು ಅಲ್ಲಾಹುವಿನ ಹೊರತು ನೀವು ಆರಾಧಿಸುವವುಗಳು ನರಕಾಗ್ನಿಯ ಇಂಧನವಾಗುವಿರಿ.’ (21:98) ಎಂಬ ಸೂಕ್ತಿಯ ಪ್ರಕಾರ ನಮ್ಮ ಆರಾಧ್ಯರು ಮಾತ್ರವಲ್ಲ, ಕ್ರೈಸ್ತರು ಆರಾಧಿಸುತ್ತಿರುವ ಈಸಾ(ಅ) ಕೂಡ ನರಕಾಗ್ನಿಗೆ ಇಂಧನವಾಗಲಿದ್ದಾರೆ ಎಂದು ಬಹುದೇವಾರಾಧಕರು ತರ್ಕಿಸುತ್ತಿದ್ದರು. 21:101ರಲ್ಲಿ ಈ ಕುತರ್ಕಕ್ಕೆ ಉತ್ತರವಿದೆ. ಮಲಕ್‍ಗಳಾಗಲಿ, ಪ್ರವಾದಿಗಳಾಗಲಿ, ಸಜ್ಜನರಾಗಲಿ ತಾವು ಆರಾಧಿಸಲಾಗುವುದನ್ನು ಇಷ್ಟಪಡದ ಕಾರಣದಿಂದ ಖಂಡಿತವಾಗಿಯೂ ಅವರು ನರಕದ ಇಂಧನವಾಗಲಾರರು ಎಂದು ಆ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(59) ಅವರು ಒಬ್ಬ ದಾಸರು ಮಾತ್ರವಾಗಿರುವರು. ನಾವು ಅವರಿಗೆ ಅನುಗ್ರಹವನ್ನು ನೀಡಿದೆವು ಮತ್ತು ಅವರನ್ನು ಇಸ್ರಾಈಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ಮಾಡಿದೆವು.
(60) ನಾವು ಇಚ್ಛಿಸುತ್ತಿದ್ದರೆ (ನಿಮ್ಮ) ಉತ್ತರಾಧಿಕಾರಿಗಳಾಗಿ ಭೂಮಿಯಲ್ಲಿ ನಿಮ್ಮಿಂದಲೇ ಮಲಕ್‍ಗಳನ್ನು ಉಂಟುಮಾಡುತ್ತಿದ್ದೆವು.(1105)
1105. ‘ಭೂಮಿಯಲ್ಲಿ ನಿಮ್ಮ ಬದಲಿಗೆ ಮಲಕ್‍ಗಳನ್ನು ಮಾಡುತ್ತಿದ್ದೆವು’ ಎಂದೂ ಅರ್ಥವಿದೆ. ತಂದೆಯಿಲ್ಲದೆ ಹುಟ್ಟುವುದು ದೇವತ್ವಕ್ಕೆ ಪುರಾವೆಯಲ್ಲ. ಎಲ್ಲಿ, ಹೇಗೆ ಬೇಕಾದರೂ ಸೃಷ್ಟಿಸಲು ಅಲ್ಲಾಹುವಿಗೆ ಸಾಮರ್ಥ್ಯವಿದೆ. ಒಂದು ಸೃಷ್ಟಿಯು ಅಸಾಮಾನ್ಯವಾಗಿರುವುದು ಅದನ್ನು ಆರಾಧ್ಯವಸ್ತುವನ್ನಾಗಿ ಮಾಡಿಕೊಳ್ಳಲು ಉಪಾಧಿಯಾಗಲಾರದು. ಆರಾಧನೆಯು ಸೃಷ್ಟಿಕರ್ತನಿಗೆ ಮಾತ್ರವಿರುವುದಾಗಿದೆ.
(61) ಖಂಡಿತವಾಗಿಯೂ ಅವರು ಅಂತ್ಯಘಳಿಗೆಗಿರುವ ಒಂದು ತಿಳುವಳಿಕೆಯಾಗಿರುವರು.(1106) ಆದುದರಿಂದ ನೀವು ಅದರ (ಅಂತ್ಯಘಳಿಗೆಯ) ಬಗ್ಗೆ ಸಂದೇಹಪಡದಿರಿ. ನನ್ನನ್ನು ಅನುಸರಿಸಿರಿ. ನೇರವಾದ ಹಾದಿ ಇದೇ ಆಗಿದೆ.
1106. ಅಂತ್ಯಕಾಲದ ಸಮೀಪದಲ್ಲಿ ಈಸಾರವರು ಇಳಿದುಬರುವರು ಎಂದು ಅನೇಕ ಹದೀಸ್‍ಗಳಲ್ಲಿ ಉಲ್ಲೇಖಿಸಲಾಗಿದೆ. ಈಸಾ(ಅ) ರವರ ಪುನರಾಗಮನವು ಅಂತ್ಯಕಾಲವು ಸನ್ನಿಹಿತವಾಗಿದೆ ಎಂಬುದಕ್ಕೆ ಸೂಚನೆಯಾಗಿದೆಯೆಂದು ಹೆಚ್ಚಿನ ವ್ಯಾಖ್ಯಾನಕಾರರು ಈ ಸೂಕ್ತಿಗೆ ಅರ್ಥನೀಡಿದ್ದಾರೆ.
(62) ಸೈತಾನನು ನಿಮ್ಮನ್ನು (ಅದರಿಂದ) ತಡೆಯದಿರಲಿ. ಖಂಡಿತವಾಗಿಯೂ ಅವನು ನಿಮ್ಮ ಬಹಿರಂಗ ಶತ್ರುವಾಗಿರುವನು.
(63) ಈಸಾ ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದು ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಬಳಿಗೆ ಜ್ಞಾನದೊಂದಿಗೇ ಬಂದಿರುವೆನು. ಮತ್ತು ನೀವು ಭಿನ್ನಾಭಿಪ್ರಾಯ ಹೊಂದುತ್ತಿರುವ ವಿಷಯಗಳಲ್ಲಿ ಕೆಲವನ್ನು ನಿಮಗೆ ವಿವರಿಸಿಕೊಡುವ ಸಲುವಾಗಿ. ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
(64) ಖಂಡಿತವಾಗಿಯೂ ಅಲ್ಲಾಹು ನನ್ನ ರಬ್ ಮತ್ತು ನಿಮ್ಮ ರಬ್ ಆಗಿರುವನು. ಆದುದರಿಂದ ಅವನನ್ನು ಆರಾಧಿಸಿರಿ. ನೇರವಾದ ಮಾರ್ಗವು ಇದೇ ಆಗಿದೆ”.
(65) ತರುವಾಯ ಅವರಲ್ಲಿದ್ದ ಗುಂಪುಗಳು ಭಿನ್ನರಾದರು. ಆದುದರಿಂದ ಅಕ್ರಮವೆಸಗಿದವರಿಗೆ ಯಾತನಾಮಯ ದಿನವೊಂದರ ಶಿಕ್ಷೆಯಿಂದಾಗಿ ವಿನಾಶವಿದೆ!
(66) ಅವರು ನಿರೀಕ್ಷಿಸದ ರೀತಿಯಲ್ಲಿ ಹಠಾತ್ತನೆ ಆ ಅಂತ್ಯಘಳಿಗೆಯು(1107) ಅವರ ಬಳಿಗೆ ಬರುವುದನ್ನೇ ಹೊರತು ಅವರು ಇನ್ನೇನನ್ನು ಕಾಯುತ್ತಿರುವರು?
1107. ಅಂತ್ಯದಿನ ಅಥವಾ ವಿಚಾರಣೆ ಮಾಡಲಾಗುವ ಸಂದರ್ಭ.
(67) ಆ ದಿನದಂದು ಮಿತ್ರರು ಪರಸ್ಪರ ಶತ್ರುಗಳಾಗುವರು. ಭಯಭಕ್ತಿ ಪಾಲಿಸುವವರ ಹೊರತು.
(68) ಓ ನನ್ನ ದಾಸರೇ! ಇಂದು ನಿಮಗೆ ಯಾವುದೇ ಭಯವೂ ಇರಲಾರದು. ನೀವು ದುಃಖಿಸಬೇಕಾಗಿಯೂ ಬರದು.
(69) ನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಟ್ಟವರು ಮತ್ತು ಶರಣಾಗತರಾಗಿ ಬದುಕಿದವರು (ನೀವಾಗಿದ್ದೀರಿ).
(70) ನೀವು ಮತ್ತು ನಿಮ್ಮ ಸಂಗಾತಿಗಳು ಸಂತೋಷದಿಂದ ಸ್ವರ್ಗವನ್ನು ಪ್ರವೇಶಿಸಿರಿ.
(71) ಸ್ವರ್ಣ ಬಟ್ಟಲುಗಳನ್ನು ಮತ್ತು ಲೋಟಗಳನ್ನು ಅವರ ಸುತ್ತಲೂ ತರಲಾಗುವುದು. ಮನಸ್ಸುಗಳು ಬಯಸುವ ಮತ್ತು ಕಣ್ಣುಗಳಿಗೆ ಆನಂದ ನೀಡುವ ವಸ್ತುಗಳು ಅಲ್ಲಿರುವುವು. ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ.
(72) ಆ ಸ್ವರ್ಗವು ನೀವು ಮಾಡಿರುವುದರ (ಕರ್ಮಗಳ) ಫಲವಾಗಿ ನಿಮಗೆ ಉತ್ತರಾಧಿಕಾರವಾಗಿ ನೀಡಲಾದುದಾಗಿದೆ.
(73) ಅಲ್ಲಿ ನಿಮಗೆ ಹೇರಳ ಫಲಗಳಿರುವುವು. ಅದರಿಂದ ನೀವು ತಿನ್ನುವಿರಿ.
(74) ಖಂಡಿತವಾಗಿಯೂ ಅಪರಾಧಿಗಳು ನರಕಾಗ್ನಿಯ ಶಿಕ್ಷೆಯಲ್ಲಿ ಶಾಶ್ವತವಾಗಿ ವಾಸಿಸುವರು.
(75) ಅದನ್ನು ಅವರಿಗೆ ಹಗುರಗೊಳಿಸಿಕೊಡಲಾಗದು. ಅವರು ಅದರಲ್ಲಿ ನಿರಾಶರಾಗಿರುವರು.
(76) ನಾವು ಅವರೊಂದಿಗೆ ಅಕ್ರಮವೆಸಗಿಲ್ಲ. ಆದರೆ ಸ್ವತಃ ಅವರೇ ಅಕ್ರಮಿಗಳಾಗಿರುವರು.
(77) ಅವರು ಕೂಗಿ ಹೇಳುವರು: “ಓ ಮಾಲಿಕ್!(1108) ತಮ್ಮ ರಬ್ ನಮ್ಮ ಮೇಲೆ (ಮರಣವನ್ನು) ವಿಧಿಸಲಿ!” ಅವರು (ಮಾಲಿಕ್) ಹೇಳುವರು: “ನೀವು (ಇಲ್ಲಿ) ತಂಗಬೇಕಾದವರೇ ಆಗಿದ್ದೀರಿ”.
1108. ಮಾಲಿಕ್ ನರಕದ ಮೇಲ್ವಿಚಾರಣೆ ಮಾಡುವ ಮಲಕ್ ಆಗಿರುವರು.
(78) (ಅಲ್ಲಾಹು ಹೇಳುವನು): ಖಂಡಿತವಾಗಿಯೂ ನಾವು ಸತ್ಯವನ್ನು ನಿಮ್ಮ ಬಳಿಗೆ ತಂದಿದ್ದೆವು. ಆದರೆ ನಿಮ್ಮ ಪೈಕಿ ಹೆಚ್ಚಿನವರೂ ಸತ್ಯವನ್ನು ದ್ವೇಷಿಸುವವರಾಗಿರುವರು.
(79) ಅಥವಾ, ಅವರು ಯಾವುದಾದರೂ ವಿಷಯವನ್ನು ತೀರ್ಮಾನಿಸಿರುವರೇ? ಹಾಗಾದರೆ ತೀರ್ಮಾನ ಮಾಡುವವರು ನಾವೇ ಆಗಿರುವೆವು.
(80) ಅಥವಾ ಅವರ ರಹಸ್ಯಗಳನ್ನು ಮತ್ತು ಗುಪ್ತ ಮಾತುಕತೆಗಳನ್ನು ನಾವು ಆಲಿಸುತ್ತಿಲ್ಲ ಎಂದು ಅವರು ಭಾವಿಸಿರುವರೇ? ಹೌದು! ನಮ್ಮ ದೂತರು (ಮಲಕ್‍ಗಳು) ಅವರ ಬಳಿ ದಾಖಲಿಸುತ್ತಿರುವರು.(1109)
1109. ಮನುಷ್ಯರ ಸರ್ವ ಕರ್ಮಗಳನ್ನೂ ಮಲಕ್‍ಗಳು ಅಲ್ಲಾಹುವಿನ ಆದೇಶ ಪ್ರಕಾರ ದಾಖಲಿಸುತ್ತಿರುವರು.
(81) ಹೇಳಿರಿ: “ಪರಮ ದಯಾಮಯನಿಗೆ ಸಂತತಿಯಿರುತ್ತಿದ್ದರೆ ಅದನ್ನು ಆರಾಧಿಸುವವರಲ್ಲಿ ಮೊದಲಿಗನು ನಾನಾಗಿರುವೆನು”.
(82) ಭೂಮ್ಯಾಕಾಶಗಳ ರಬ್, ಸಿಂಹಾಸನದ ರಬ್ ಅವರು ಸುಳ್ಳು ಸುಳ್ಳಾಗಿ ಆರೋಪಿಸುವುದರಿಂದೆಲ್ಲ ಪರಮ ಪಾವನನಾಗಿರುವನು.
(83) ಆದುದರಿಂದ ತಾವು ಅವರನ್ನು ಬಿಟ್ಟುಬಿಡಿರಿ. ಅವರಿಗೆ ಎಚ್ಚರಿಕೆ ನೀಡಲಾಗುವ ಅವರ ಆ ದಿನವನ್ನು ಭೇಟಿಯಾಗುವವರೆಗೆ ಅವರು ಅಸಂಬದ್ಧಗಳನ್ನು ಹೇಳುತ್ತಲೂ ಆಟವಿನೋದಗಳಲ್ಲಿ ಮಗ್ನರಾಗುತ್ತಲೂ ಇರಲಿ.
(84) ಆಕಾಶದಲ್ಲಿರುವ ಆರಾಧ್ಯನು ಮತ್ತು ಭೂಮಿಯಲ್ಲಿರುವ ಆರಾಧ್ಯನು ಅವನೇ ಆಗಿರುವನು. ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿರುವನು.
(85) ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ಆಧಿಪತ್ಯವು ಯಾರಿಗೆ ಸೇರಿದೆಯೋ ಅವನು ಅನುಗ್ರಹಪೂರ್ಣನಾಗಿರುವನು. ಅಂತ್ಯಘಳಿಗೆಯ ಜ್ಞಾನವು ಅವನ ಬಳಿ ಮಾತ್ರವಿದೆ. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.
(86) ಅವನ ಹೊರತು ಇವರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಅವರು ಶಿಫಾರಸನ್ನು ಸ್ವಾಧೀನದಲ್ಲಿಟ್ಟುಕೊಂಡಿಲ್ಲ. ಅರಿತವರಾಗಿದ್ದೂ ಸತ್ಯಕ್ಕೆ ಸಾಕ್ಷ್ಯ ವಹಿಸಿದವರ ಹೊರತು.(1110)
1110. ಅಲ್ಲಾಹುವೇತರರೊಂದಿಗೆ ಪ್ರಾರ್ಥಿಸುವ ಹೆಚ್ಚಿನವರ ನಂಬಿಕೆಯು ಅವರು (ಮಿಥ್ಯಾರಾಧ್ಯರು) ಅಲ್ಲಾಹುವಿನ ಬಳಿ ಶಿಫಾರಸು ಮಾಡಿ ತಮ್ಮ ಕಾರ್ಯವನ್ನು ಸಾಧಿಸಿಕೊಡುವರು ಎಂದಾಗಿದೆ. ಆದರೆ ಅಂತಹ ಶಿಫಾರಸು ಮಾಡುವ ಅಧಿಕಾರ ಯಾರಿಗೂ ಇಲ್ಲ. ಸತ್ಯಕ್ಕೆ ಸಾಕ್ಷ್ಯವಹಿಸಿದವರಿಗೆ ಶಿಫಾರಸು ಮಾಡಲು ಅಲ್ಲಾಹು ಅನುವು ಮಾಡಿಕೊಡುತ್ತಾನೆ. ಆದರೆ ಅದಕ್ಕಾಗಿ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸಬೇಕೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(87) “ಅವರನ್ನು ಸೃಷ್ಟಿಸಿದ್ದು ಯಾರು?” ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು “ಅಲ್ಲಾಹು” ಎನ್ನುವರು. ಆದರೂ ಅವರು ತಪ್ಪಿಸಲ್ಪಡುತ್ತಿರುವುದು ಹೇಗೆ?
(88) “ಓ ನನ್ನ ಪ್ರಭೂ! ಖಂಡಿತವಾಗಿಯೂ ಇವರು ವಿಶ್ವಾಸವಿಡದ ಒಂದು ಜನತೆಯಾಗಿರುವರು” ಎಂದು ಅವರು (ಪ್ರವಾದಿಯವರು) ಹೇಳುವುದನ್ನು (ಅಲ್ಲಾಹು ಅರಿತಿರುವನು).
(89) ಆದುದರಿಂದ ತಾವು ಅವರನ್ನು ಬಿಟ್ಟು ವಿಮುಖರಾಗಿರಿ. “ಸಲಾಂ” ಎಂದು ಹೇಳಿರಿ. ಅವರು ತರುವಾಯ ಅರಿತುಕೊಳ್ಳುವರು.