(1) ಆ ಸತ್ಯ ಘಟನೆ.
(2) ಏನು ಆ ಸತ್ಯ ಘಟನೆ?
(3) ಆ ಸತ್ಯ ಘಟನೆ ಏನೆಂದು ತಮಗೇನು ಗೊತ್ತು?
(4) ಸಮೂದ್ ಜನಾಂಗ ಮತ್ತು ಆದ್ ಜನಾಂಗವು ಆ ಭೀಕರ ಘಟನೆಯನ್ನು ನಿಷೇಧಿಸಿದರು.
(5) ಆದರೆ ಸಮೂದ್ ಜನಾಂಗವು ಅತಿಭಯಾನಕವಾದ ಒಂದು ಶಿಕ್ಷೆಯ ಮೂಲಕ ನಾಶ ಮಾಡಲ್ಪಟ್ಟಿತು.
(6) ಆದ್ ಜನಾಂಗವು ಬಲವಾಗಿ ಅಪ್ಪಳಿಸುವ ಒಂದು ಉಗ್ರ ಬಿರುಗಾಳಿಯ ಮೂಲಕ ನಾಶ ಮಾಡಲ್ಪಟ್ಟಿತು.
(7) ನಿರಂತರ ಏಳು ರಾತ್ರಿ ಮತ್ತು ಎಂಟು ಹಗಲುಗಳ ಕಾಲ ಅವನು ಅದನ್ನು (ಗಾಳಿಯನ್ನು) ಅವರ ವಿರುದ್ಧ ತಿರುಗಿಸಿದನು. ಆಗ ಕುಸಿದುಬಿದ್ದ ಖರ್ಜೂರದ ಮರಗಳ ಕಾಂಡಗಳಂತೆ ಆ ಗಾಳಿಯಲ್ಲಿ ಜನರು ಮಗುಚಿ ಬಿದ್ದಿರುವುದನ್ನು ತಾವು ಕಾಣುವಿರಿ.
(8) ಇನ್ನು ಅವರದ್ದಾಗಿ ಬಾಕಿಯಾಗಿರುವ ಏನನ್ನಾದರೂ ತಾವು ಕಾಣುತ್ತಿರುವಿರಾ?
(9) ಫಿರ್‍ಔನ್, ಅವನಿಗಿಂತ ಮುಂಚಿನವರು, ಮತ್ತು ಬುಡಮೇಲಾಗಿ ಹೋದ ಪ್ರದೇಶಗಳು(1287) ಪಾಪಕೃತ್ಯದೊಂದಿಗೆ ಬಂದರು.
1287. ಲೂತ್(ಅ) ರವರ ಜನತೆ ವಾಸಿಸುತ್ತಿದ್ದ ಸ್ಥಳ.
(10) ಅವರು ಅವರ ರಬ್‌ನ ಸಂದೇಶವಾಹಕರನ್ನು ಧಿಕ್ಕರಿಸಿದರು. ಆಗ ಅವನು ಅವರನ್ನು ಬಲಿಷ್ಠವಾದ ಒಂದು ಹಿಡಿತದೊಂದಿಗೆ ಹಿಡಿದನು.
(11) ಖಂಡಿತವಾಗಿಯೂ ನೀರು ಮಿತಿಮೀರಿದ ಸಂದರ್ಭದಲ್ಲಿ ನಾವು ನಿಮ್ಮನ್ನು ಹಡಗಿನಲ್ಲಿ ಒಯ್ದು ರಕ್ಷಿಸಿದೆವು.(1288)
1288. ನೂಹ್(ಅ) ರವರ ಕಾಲದಲ್ಲಿ ಸಂಭವಿಸಿದ ಮಹಾಪ್ರಳಯದಲ್ಲಿ ಸತ್ಯವಿಶ್ವಾಸಿಗಳನ್ನು ಅಲ್ಲಾಹು ಹಡಗಿನಲ್ಲಿ ಸಾಗಿಸಿ ರಕ್ಷಿಸಿರುವುದರೆಡೆಗೆ ಸೂಚನೆ.
(12) ನಾವು ಅದನ್ನು ನಿಮಗೊಂದು ಸ್ಮರಣೆಯನ್ನಾಗಿ ಮಾಡುವ ಸಲುವಾಗಿ ಮತ್ತು ಗಮನವಿಟ್ಟು ಗ್ರಹಿಸುವ ಕಿವಿಗಳು ಅದನ್ನು ಕಿವಿಗೊಟ್ಟು ಗ್ರಹಿಸುವ ಸಲುವಾಗಿ.
(13) ಕಹಳೆಯಲ್ಲಿ ಒಂದು ಊದುವಿಕೆಯನ್ನು ಊದಲಾದಾಗ.
(14) ಭೂಮಿ ಮತ್ತು ಪರ್ವತಗಳು ಎತ್ತಲ್ಪಟ್ಟು ತರುವಾಯ ಅವೆರಡನ್ನೂ ಒಂದೇ ಹೊಡೆತಕ್ಕೆ ಪುಡಿ ಪುಡಿ ಮಾಡಲಾಗುವಾಗ.
(15) ಆ ದಿನದಂದು ಆ ಘಟನೆಯು ಸಂಭವಿಸುವುದು.
(16) ಆಕಾಶವು ಒಡೆದು ಹೋಗುವುದು. ಅಂದು ಅದು ಅತಿ ಬಲಹೀನವಾಗಿರುವುದು.
(17) ಮಲಕ್‍ಗಳು ಅದರ ನಾನಾ ಭಾಗಗಳಲ್ಲಿರುವರು. ಅಂದು ತಮ್ಮ ರಬ್‌ನ ಸಿಂಹಾಸನವನ್ನು ಅವರ ಮೇಲ್ಭಾಗದಲ್ಲಿ ಎಂಟು ಮಲಕ್‍ಗಳು ಹೊರುವರು.(1289)
1289. ಪುನರುತ್ಥಾನದಿನದಂದು ಅಲ್ಲಾಹುವಿನ ಸಿಂಹಾಸನವನ್ನು ಎಂಟು ಮಲಕ್‍ಗಳು ಹೊರುವರು ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಎಂಟು ಗುಂಪು ಮಲಕ್‍ಗಳೆಂದು ಇತರ ಕೆಲವರು ವ್ಯಾಖ್ಯಾನಿಸಿದ್ದಾರೆ.
(18) ಆ ದಿನದಂದು ನಿಮ್ಮನ್ನು ಪ್ರದರ್ಶಿಸಲಾಗುವುದು. ಯಾವುದೇ ಗೋಪ್ಯ ಸಂಗತಿಯೂ ನಿಮ್ಮಿಂದ ಮರೆಯಾಗದು.(1290)
1290. ನೀವು ಗೋಪ್ಯವಾಗಿಟ್ಟಿದ್ದ ಮಾತು ಮತ್ತು ಪ್ರವೃತ್ತಿಗಳು ಅಂದು ಅನಾವರಣವಾಗುವುವು ಎಂದರ್ಥ.
(19) ಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುವುದೋ ಅವನು ಹೇಳುವನು: ‘ಇಗೋ! ನನ್ನ ಗ್ರಂಥವನ್ನು ಓದಿ ನೋಡಿರಿ!
(20) ಖಂಡಿತವಾಗಿಯೂ ನಾನು ನನ್ನ ವಿಚಾರಣೆಯನ್ನು(1291) ಎದುರುಗೊಳ್ಳುವೆನೆಂದು ನಾನು ದೃಢವಾಗಿ ನಂಬಿದ್ದೆನು’.
1291. ‘ಹಿಸಾಬ್’ ಎಂಬ ಪದಕ್ಕೆ ವಿಚಾರಣೆ, ಲೆಕ್ಕ ಕೇಳುವುದು ಅಥವಾ (ಕರ್ಮಗಳ) ಲೆಕ್ಕ ಎಂಬ ಅರ್ಥಗಳಿವೆ.
(21) ಆದ್ದರಿಂದ ಅವನು(1292) ತೃಪ್ತಿಕರವಾದ ಜೀವನದಲ್ಲಿರುವನು.
1292. ಬಲಗೈಯಲ್ಲಿ ಕರ್ಮದಾಖಲೆ ನೀಡಲಾದವನು.
(22) ಉನ್ನತವಾದ ಸ್ವರ್ಗದಲ್ಲಿ.
(23) ಅವುಗಳ ಫಲಗಳು ಸನಿಹಕ್ಕೆ ಬಾಗಿರುವುವು.
(24) ‘ಗತಿಸಿ ಹೋದ ದಿನಗಳಲ್ಲಿ ನೀವು ಪೂರ್ವಭಾವಿಯಾಗಿ ಮಾಡಿರುವ ಕರ್ಮಗಳ ಫಲವಾಗಿ ನೀವು ಸಂತೋಷದಿಂದ ತಿನ್ನುತ್ತಲೂ, ಕುಡಿಯುತ್ತಲೂ ಇರಿ’ (ಎಂದು ಅವರೊಂದಿಗೆ ಹೇಳಲಾಗುವುದು).
(25) ಆದರೆ ಯಾರಿಗೆ ಅವನ ಗ್ರಂಥವನ್ನು ಎಡಗೈಯ್ಯಲ್ಲಿ ನೀಡಲಾಗುವುದೋ ಅವನು ಹೇಳುವನು: ‘ಅಯ್ಯೋ! ನನಗೆ ನನ್ನ ಗ್ರಂಥವನ್ನು ನೀಡಲಾಗದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
(26) ನನ್ನ ವಿಚಾರಣೆ ಏನೆಂದು ನಾನು ಅರಿಯದಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು).
(27) ಅದು (ಮರಣ) ಎಲ್ಲವನ್ನೂ ಕೊನೆಗೊಳಿಸುವುದಾಗಿರುತ್ತಿದ್ದರೆ (ಎಷ್ಟು ಚೆನ್ನಾಗಿತ್ತು).
(28) ನನಗೆ ನನ್ನ ಸಂಪತ್ತು ಪ್ರಯೋಜನಪಡಲಿಲ್ಲ.
(29) ನನ್ನ ಅಧಿಕಾರ ನನ್ನಿಂದ ಕಳೆದು ಹೋಗಿದೆ.
(30) (ಆಗ ಹೀಗೆ ಆಜ್ಞಾಪಿಸಲಾಗುವುದು): ‘ಅವನನ್ನು ಹಿಡಿಯಿರಿ ಮತ್ತು ಬಂಧಿಸಿರಿ.
(31) ತರುವಾಯ ಅವನನ್ನು ಜ್ವಲಿಸುವ ನರಕಾಗ್ನಿಗೆ ಪ್ರವೇಶ ಮಾಡಿಸಿರಿ.
(32) ತರುವಾಯ ನೀವು ಅವನನ್ನು ಎಪ್ಪತ್ತು ಮೊಳ ಉದ್ದವಿರುವ ಒಂದು ಸಂಕೋಲೆಯಲ್ಲಿ ನುಸುಳಿಸಿರಿ.
(33) ಖಂಡಿತವಾಗಿಯೂ ಅವನು ಮಹಾನನಾದ ಅಲ್ಲಾಹುವಿನಲ್ಲಿ ವಿಶ್ವಾಸವಿಡಲಿಲ್ಲ.
(34) ಬಡವನಿಗೆ ಆಹಾರ ನೀಡಲು ಅವನು ಪ್ರೇರಣೆ ನೀಡಿರಲಿಲ್ಲ.
(35) ಆದ್ದರಿಂದ ಇಂದು ಅವನಿಗೆ ಇಲ್ಲಿ ಯಾವುದೇ ಆಪ್ತಮಿತ್ರನಿಲ್ಲ.
(36) ಗಾಯದಿಂದ ಹರಿಯುವ ಕೀವಿನ ಹೊರತು ಅವರಿಗೆ ಬೇರೆ ಆಹಾರವಿಲ್ಲ.
(37) ಪಾಪಿಗಳ ಹೊರತು ಯಾರೂ ಅದನ್ನು ಸೇವಿಸಲಾರರು.
(38) ಆದ್ದರಿಂದ ನೀವು ಕಾಣುತ್ತಿರುವವುಗಳ ಮೇಲೆ ಆಣೆಯಿಟ್ಟು ನಾನು ಹೇಳುತ್ತಿರುವೆನು.
(39) ಮತ್ತು ನೀವು ಕಾಣದಿರುವವುಗಳ ಮೇಲೆ.
(40) ಖಂಡಿತವಾಗಿಯೂ ಇದು ಒಬ್ಬ ಗೌರವಾನ್ವಿತ ದೂತರ ಮಾತುಗಳಾಗಿವೆ.
(41) ಇದು ಒಬ್ಬ ಕವಿಯ ಮಾತಲ್ಲ. ನೀವು ಅಲ್ಪವೇ ವಿಶ್ವಾಸವಿಡುತ್ತಿರುವಿರಿ.
(42) ಒಬ್ಬ ಜ್ಯೋತಿಷಿಯ ಮಾತೂ ಅಲ್ಲ. ನೀವು ಅಲ್ಪವೇ ಚಿಂತಿಸಿ ಅರ್ಥಮಾಡುತ್ತಿರುವಿರಿ.
(43) ಇದು ಸರ್ವಲೋಕಗಳ ರಬ್‌ನ ವತಿಯಿಂದ ಅವತೀರ್ಣಗೊಂಡಿರುವುದಾಗಿದೆ.
(44) ನಮ್ಮ ಹೆಸರಲ್ಲಿ ಅವರು (ಪ್ರವಾದಿಯವರು) ಯಾವುದಾದರೂ ಮಾತುಗಳನ್ನು ಸ್ವತಃ ರಚಿಸಿ ಹೇಳಿರುತ್ತಿದ್ದರೆ.
(45) ನಾವು ಅವರನ್ನು ಬಲಗೈಯಿಂದ ಹಿಡಿಯುತ್ತಿದ್ದೆವು.
(46) ತರುವಾಯ ಅವರ ಕಂಠನಾಡಿಯನ್ನು ನಾವು ಕತ್ತರಿಸಿ ಹಾಕುತ್ತಿದ್ದೆವು.
(47) ಆಗ ನಿಮ್ಮ ಪೈಕಿ ಯಾರಿಗೂ ಅವರಿಂದ (ಶಿಕ್ಷೆಯನ್ನು) ತಡೆಯಲಾಗದು.
(48) ಖಂಡಿತವಾಗಿಯೂ ಇದು (ಕುರ್‌ಆನ್) ಭಯಭಕ್ತಿ ಪಾಲಿಸುವವರಿಗಿರುವ ಒಂದು ಉಪದೇಶವಾಗಿದೆ.
(49) ಖಂಡಿತವಾಗಿಯೂ ನಿಮ್ಮ ಪೈಕಿ (ಇದನ್ನು) ನಿಷೇಧಿಸುವವರಿರುವರು ಎಂಬುದನ್ನು ನಾವು ಅರಿತಿರುವೆವು.
(50) ಖಂಡಿತವಾಗಿಯೂ ಇದು ಸತ್ಯನಿಷೇಧಿಗಳ ವಿಷಾದಕ್ಕೆ ಕಾರಣವಾಗುವುದು.
(51) ಖಂಡಿತವಾಗಿಯೂ ಇದು ದೃಢವಾದ ಸತ್ಯವಾಗಿದೆ.
(52) ಆದ್ದರಿಂದ ತಾವು ಮಹಾನನಾಗಿರುವ ತಮ್ಮ ರಬ್‌ನ ನಾಮವನ್ನು ಸ್ತುತಿಸಿರಿ.