93 - Ad-Dhuhaa ()

|

(1) ಪೂರ್ವಾಹ್ನದ ಮೇಲಾಣೆ!

(2) ರಾತ್ರಿಯ ಮೇಲಾಣೆ! ಅದು ಶಾಂತವಾಗುವಾಗ.

(3) (ಓ ಪ್ರವಾದಿಯವರೇ!) ತಮ್ಮ ರಬ್ ತಮ್ಮನ್ನು ಕೈಬಿಟ್ಟಿಲ್ಲ. ದ್ವೇಷಿಸಿಯೂ ಇಲ್ಲ.

(4) ಖಂಡಿತವಾಗಿಯೂ ಇಹಲೋಕಕ್ಕಿಂತಲೂ ಪರಲೋಕವು ತಮಗೆ ಉತ್ತಮವಾಗಿದೆ.

(5) ತಮ್ಮ ರಬ್ ತರುವಾಯ ತಮಗೆ (ಅನುಗ್ರಹಗಳನ್ನು) ಕರುಣಿಸುವನು. ಆಗ ತಾವು ಸಂತೃಪ್ತರಾಗುವಿರಿ.

(6) ಅವನು ತಮ್ಮನ್ನು ಒಬ್ಬ ಅನಾಥನಾಗಿ ಕಂಡಾಗ(1408) ಅವನು (ತಮಗೆ) ಆಶ್ರಯ ನೀಡಲಿಲ್ಲವೇ?
1408. ಪ್ರವಾದಿ(ಸ) ರು ತಾಯಿಯ ಗರ್ಭದಲ್ಲಿರುವಾಗಲೇ ಅವರ ತಂದೆ ತೀರಿಹೋದರು. ಆರು ವಯಸ್ಸಾದಾಗ ಅವರ ತಾಯಿಯೂ ತೀರಿಹೋದರು. ಅನಾಥರಾಗಿದ್ದ ಅವರನ್ನು ಮೊದಲು ಅವರ ಅಜ್ಜ ಮತ್ತು ನಂತರ ಚಿಕ್ಕಪ್ಪ ಸಾಕಿದರು.

(7) ಅವನು ತಮ್ಮನ್ನು ದಾರಿ ಅರಿಯದವನಾಗಿ ಕಂಡಾಗ ಅವನು (ತಮಗೆ) ಮಾರ್ಗದರ್ಶನ ಮಾಡಿರುವನು.

(8) ಅವನು ತಮ್ಮನ್ನು ನಿರ್ಗತಿಕನಾಗಿ ಕಂಡಾಗ ಅವನು (ತಮಗೆ) ಐಶ್ವರ್ಯವನ್ನು ನೀಡಿರುವನು(1409)
1409. ಅಜ್ಜ ಮತ್ತು ಚಿಕ್ಕಪ್ಪನ ಸಹಾಯವನ್ನು ಮಾತ್ರ ಅವಲಂಬಿಸಿ ಬದುಕಬೇಕಾಗಿ ಬಂದ ನಿರ್ಗತಿಕರಾದ ಪ್ರವಾದಿ(ಸ) ರವರು ತರುವಾಯ ಖದೀಜಃರವರ ವ್ಯಾಪಾರದಲ್ಲಿ ಸೇರುವ ಮೂಲಕ ಅಲ್ಲಾಹುವಿನ ಅನುಗ್ರಹದಿಂದ ಉತ್ತಮ ಆರ್ಥಿಕ ನೆಲೆಗಟ್ಟನ್ನು ಗಳಿಸಿದರು.

(9) ಆದ್ದರಿಂದ ತಾವು ಅನಾಥನನ್ನು ದಮನಿಸದಿರಿ.

(10) ಬೇಡುತ್ತಾ ಬರುವವನನ್ನು ಗದರಿಸದಿರಿ.

(11) ತಮ್ಮ ರಬ್‌ನ ಅನುಗ್ರಹದ ಬಗ್ಗೆ ತಾವು ಮಾತನಾಡುತ್ತಿರಿ.