(1) ಹಾ-ಮೀಮ್.
(2) ಇದು ಅವತೀರ್ಣಗೊಂಡಿರುವುದು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವವನ ಕಡೆಯಿಂದಾಗಿದೆ.
(3) ಸೂಕ್ತಿಗಳನ್ನು ವಿವರಿಸಲಾಗಿರುವ ಒಂದು ಗ್ರಂಥ. ಅರ್ಥಮಾಡಿಕೊಳ್ಳುವ ಜನರಿಗಾಗಿ ಅರಬಿ ಭಾಷೆಯಲ್ಲಿ ಪಾರಾಯಣ ಮಾಡಲಾಗುವ (ಒಂದು ಗ್ರಂಥ).
(4) ಶುಭವಾರ್ತೆಯನ್ನು ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ (ಗ್ರಂಥ). ಆದರೆ ಅವರ ಪೈಕಿ ಹೆಚ್ಚಿನವರೂ ವಿಮುಖರಾದರು. ಅವರು ಆಲಿಸಲಾರರು.
(5) ಅವರು ಹೇಳಿದರು: “ತಾವು ನಮ್ಮನ್ನು ಯಾವುದರೆಡೆಗೆ ಕರೆಯುತ್ತಿರುವಿರೋ ಅದನ್ನು ಗ್ರಹಿಸಲಾಗದ ರೀತಿಯಲ್ಲಿ ನಮ್ಮ ಹೃದಯಗಳನ್ನು ಮುಚ್ಚಲಾಗಿವೆ. ನಮ್ಮ ಕಿವಿಗಳು ಕಿವುಡಾಗಿವೆ. ನಮ್ಮ ಮತ್ತು ತಮ್ಮ ಮಧ್ಯೆ ಒಂದು ಪರದೆಯಿದೆ.(1065) ಆದುದರಿಂದ ತಾವು ಕಾರ್ಯವೆಸಗಿರಿ. ಖಂಡಿತವಾಗಿಯೂ ನಾವೂ ಕಾರ್ಯವೆಸಗುವವರಾಗಿರುವೆವು”.
1065. ವಿಚಾರ ವಿನಿಮಯ ಮಾಡಲು ಸಾಧ್ಯವಾಗದಷ್ಟು ನಾವು ಪರಸ್ಪರ ಅಗಲಿರುವೆವು ಎಂದು ಉದ್ದೇಶಿಸುತ್ತಿರಬಹುದು.
(6) ಹೇಳಿರಿ: “ನಾನು ನಿಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿರುವೆನು. ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನೆಂದು ನನಗೆ ದಿವ್ಯಸಂದೇಶ ನೀಡಲಾಗುತ್ತಿದೆ. ಆದುದರಿಂದ ಅವನೆಡೆಗಿರುವ ಮಾರ್ಗದಲ್ಲಿ ನೀವು ನೇರವಾಗಿ ನೆಲೆಗೊಳ್ಳಿರಿ. ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಬಹುದೇವಾರಾಧಕರಿಗೆ(1066) ವಿನಾಶವಿದೆ.
1066. ಬಹುದೇವಾರಾಧಕರಲ್ಲಿ ಸಾಮಾನ್ಯವಾಗಿ ಕಾಣುವ ಸ್ಥಿತಿಯನ್ನು ಈ ವಾಕ್ಯದಲ್ಲಿ ಪ್ರಸ್ತಾಪಿಸಲಾಗಿದೆ. ಅನೇಕ ರೀತಿಯ ಪ್ರಾರ್ಥನೆ, ಪೂಜೆ ಪುನಸ್ಕಾರಗಳನ್ನು ಅತೀವ ಭಕ್ತಿಯಿಂದ ನಿರ್ವಹಿಸುವ ಅವರು ಹೆಚ್ಚಿನ ಸಂದರ್ಭಗಳಲ್ಲೂ ಆರ್ಥಿಕ ಬಾಧ್ಯತೆಗಳನ್ನು ನಿರ್ವಹಿಸುವುದರಿಂದ ವಿಮುಖರಾಗುತ್ತಾರೆ. ಇಹಲೋಕದಲ್ಲಿ ಬಯಕೆಗಳ ಈಡೇರಿಕೆಗಾಗಿ ಹೇರಳವಾಗಿ ಹರಕೆಗಳನ್ನು ಹೊರುತ್ತಾರಾದರೂ ಅವರ ಪೈಕಿ ಹೆಚ್ಚಿನವರೂ ಪರಲೋಕದಲ್ಲಿ ಸರಿಯಾದ ವಿಶ್ವಾಸವಿಲ್ಲದವರಾಗಿದ್ದಾರೆ.
(7) ಅಂದರೆ ಝಕಾತ್ ನೀಡದ ಮತ್ತು ಪರಲೋಕದಲ್ಲಿ ವಿಶ್ವಾಸವಿಡದವರಿಗೆ.
(8) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಅಂತ್ಯವಿಲ್ಲದ ಪ್ರತಿಫಲವಿದೆ.
(9) ಹೇಳಿರಿ: “ಎರಡು ದಿನಗಳಲ್ಲಿ ಭೂಮಿಯನ್ನು ಸೃಷ್ಟಿಸಿದವನಲ್ಲಿ ಅವಿಶ್ವಾಸವಿಟ್ಟು ಅವನೊಂದಿಗೆ ನೀವು ಪ್ರತಿಸ್ಪರ್ಧಿಗಳನ್ನು ಮಾಡುವಿರಾ? ಸರ್ವಲೋಕಗಳ ರಬ್ ಅವನೇ ಆಗಿರುವನು”.
(10) ಅವನು ಅದರಲ್ಲಿ (ಭೂಮಿಯಲ್ಲಿ) -ಅದರ ಮೇಲ್ಭಾಗದಲ್ಲಿ- ಅಚಲವಾಗಿರುವ ಪರ್ವತಗಳನ್ನು ಸ್ಥಾಪಿಸಿ, ಅದರಲ್ಲಿ ಸಮೃದ್ಧಿಯನ್ನುಂಟುಮಾಡಿ, ಅದರಲ್ಲಿರುವ ಆಹಾರಗಳನ್ನು ಅಲ್ಲಿ ನಿರ್ಣಯಿಸಿದನು. (ಅವನು ಇದನ್ನು ಮಾಡಿದ್ದು) ನಾಲ್ಕು ದಿನಗಳಲ್ಲಾಗಿತ್ತು.(1067) ಆವಶ್ಯಕತೆಯುಳ್ಳವರಿಗೆ ಸರಿಯಾದ ಪ್ರಮಾಣದಲ್ಲಿ.(1068)
1067. ಒಂಬತ್ತನೇ ಸೂಕ್ತಿಯಲ್ಲಿ ಹೇಳಲಾದ ಭೂಮಿಯ ಸೃಷ್ಟಿ ಮತ್ತು ಹತ್ತನೇ ಸೂಕ್ತಿಯಲ್ಲಿ ಹೇಳಲಾದ ವಿಷಯಗಳೂ ಸೇರಿದಂತೆ ಒಟ್ಟು ನಾಲ್ಕು ದಿನಗಳಲ್ಲಿ ಅಥವಾ ಹಂತಗಳಲ್ಲಿ ನಡೆಯಿತೆಂದು ಪೂರ್ವಿಕರಾದ ಅನೇಕ ವ್ಯಾಖ್ಯಾನಕಾರರೂ ಅಭಿಪ್ರಾಯಪಟ್ಟಿದ್ದಾರೆ. 1068. ‘ಸವಾಅ್’ ಎಂಬ ಪದಕ್ಕೆ ಸರಿಯಾದುದು, ಪೂರ್ಣವಾದುದು ಇತ್ಯಾದಿ ಅರ್ಥಗಳಿವೆ. ‘ಸಾಇಲೀನ್’ ಎಂಬ ಪದಕ್ಕೆ ಕೇಳುವವರು, ಬೇಡುವವರು, ಆವಶ್ಯಕತೆಯುಳ್ಳವರು ಇತ್ಯಾದಿ ಅರ್ಥಗಳಿವೆ.
(11) ಅದರ ಹೊರತಾಗಿ(1069) ಅವನು ಆಕಾಶದೆಡೆಗೆ ತಿರುಗಿದನು. ಅದೊಂದು ಹೊಗೆಯಾಗಿತ್ತು. ತರುವಾಯ ಅವನು ಅದರೊಂದಿಗೆ ಮತ್ತು ಭೂಮಿಯೊಂದಿಗೆ ಹೇಳಿದನು: “ನೀವು ವಿಧೇಯತೆಯಿಂದ ಅಥವಾ ಬಲಾತ್ಕಾರದಿಂದ ಬನ್ನಿರಿ”. ಅವೆರಡೂ ಹೇಳಿದವು: “ನಾವು ವಿಧೇಯತೆಯಿಂದಲೇ ಬಂದಿರುವೆವು”.
1069. ತರುವಾಯ ಎಂಬ ಅರ್ಥವಿರುವ ‘ಸುಮ್ಮ’ ಎಂಬ ಅವ್ಯಯವನ್ನು ಘಟನೆಗಳ ಅನುಕ್ರಮವನ್ನು ಸೂಚಿಸಲು ಮಾತ್ರವಲ್ಲದೆ ವಿವರಣೆಗಳ ಅನುಕ್ರಮವನ್ನು ಸೂಚಿಸಲೂ ಬಳಸಲಾಗುತ್ತದೆ. 79:30ರಲ್ಲಿ ಆಕಾಶದ ಸೃಷ್ಟಿಯ ನಂತರವೇ ಭೂಮಿಯನ್ನು ವಿಕಾಸಗೊಳಿಸಲಾಯಿತೆಂದು ಹೇಳಲಾಗಿದೆ.
(12) ತರುವಾಯ ಎರಡು ದಿನಗಳಲ್ಲಿ ಅವನು ಅವುಗಳನ್ನು ಏಳು ಆಕಾಶಗಳನ್ನಾಗಿ ಮಾಡಿದನು. ಪ್ರತಿಯೊಂದು ಆಕಾಶದಲ್ಲೂ ಅದರ ಕಾರ್ಯನಿರ್ವಹಣೆಯನ್ನು ಆದೇಶಿಸಿದನು. ಸಮೀಪದ ಆಕಾಶವನ್ನು ನಾವು ಕೆಲವು ದೀಪಗಳಿಂದ ಅಲಂಕರಿಸಿರುವೆವು ಮತ್ತು ಸುರಕ್ಷಿತಗೊಳಿಸಿರುವೆವು. ಇದು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವ ಅಲ್ಲಾಹುವಿನ ನಿರ್ಣಯವಾಗಿದೆ.
(13) ಇನ್ನು ಅವರೇನಾದರೂ ವಿಮುಖರಾಗುವುದಾದರೆ ತಾವು ಹೇಳಿರಿ: “ಆದ್, ಸಮೂದ್ ಎಂಬೀ ಸಮುದಾಯಗಳ ಮೇಲೆರಗಿದ ಭೀಕರ ಶಿಕ್ಷೆಯಂತಿರುವ ಒಂದು ಶಿಕ್ಷೆಯ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡುತ್ತಿರುವೆನು”.
(14) “ಅಲ್ಲಾಹುವಿನ ಹೊರತು ಅನ್ಯರನ್ನು ಆರಾಧಿಸದಿರಿ” ಎಂದು ಹೇಳುತ್ತಾ ಅವರ ಮುಂಭಾಗದಿಂದಲೂ ಹಿಂಭಾಗದಿಂದಲೂ ಸಂದೇಶವಾಹಕರು ಅವರ ಬಳಿಗೆ ಬಂದಾಗ ಅವರು ಹೇಳಿದರು: “ನಮ್ಮ ರಬ್ ಇಚ್ಛಿಸುತ್ತಿದ್ದರೆ ಅವನು ಮಲಕ್‍ಗಳನ್ನು ಇಳಿಸುತ್ತಿದ್ದನು. ಆದುದರಿಂದ ನಿಮ್ಮನ್ನು ಯಾವುದರೊಂದಿಗೆ ಕಳುಹಿಸಲಾಗಿದೆಯೋ ಖಂಡಿತವಾಗಿಯೂ ಅದರಲ್ಲಿ ನಾವು ಅವಿಶ್ವಾಸವಿಟ್ಟಿರುವೆವು”.
(15) ಆದ್ ಜನಾಂಗವು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಡುತ್ತಿದ್ದರು ಮತ್ತು “ನಮಗಿಂತಲೂ ಬಲಿಷ್ಠರು ಯಾರಿರುವರು?” ಎಂದು ಕೇಳುತ್ತಿದ್ದರು. ಅವರನ್ನು ಸೃಷ್ಟಿಸಿದ ಅಲ್ಲಾಹು ಅವರಿಗಿಂತಲೂ ಬಲಿಷ್ಠನಾಗಿರುವನೆಂದು ಅವರಿಗೆ ಕಾಣುವುದಿಲ್ಲವೇ? ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದರು.
(16) ತರುವಾಯ ದುರದೃಷ್ಟ ಬಾಧಿಸಿದ ಕೆಲವು ದಿನಗಳಲ್ಲಿ ನಾವು ಅವರೆಡೆಗೆ ಭೀಕರವಾದ ಚಳಿಗಾಳಿಯೊಂದನ್ನು ಕಳುಹಿಸಿದೆವು. ಅಪಮಾನಕರ ಶಿಕ್ಷೆಯನ್ನು ಐಹಿಕ ಜೀವನದಲ್ಲಿ ಅವರು ಆಸ್ವಾದಿಸುವಂತೆ ಮಾಡುವ ಸಲುವಾಗಿ. ಆದರೆ ಪರಲೋಕದಲ್ಲಿರುವ ಶಿಕ್ಷೆಯು ಅತ್ಯಧಿಕ ಅಪಮಾನದಿಂದ ಕೂಡಿದ್ದಾಗಿದೆ. ಅವರಿಗೆ ಯಾವುದೇ ಸಹಾಯವೂ ಸಿಗಲಾರದು.
(17) ಸಮೂದ್ ಜನಾಂಗಕ್ಕೆ ನಾವು ಸನ್ಮಾರ್ಗವನ್ನು ತೋರಿಸಿಕೊಟ್ಟೆವು. ಆದರೆ ಅವರು ಸನ್ಮಾರ್ಗಕ್ಕಿಂತಲೂ ಅಂಧತೆಯನ್ನೇ ಇಷ್ಟಪಟ್ಟರು. ಆದುದರಿಂದ ಅವರು ಮಾಡಿಕೊಂಡಿರುವುದರ ಫಲವಾಗಿ ಅಪಮಾನಕರವಾದ ಭೀಕರ ಶಿಕ್ಷೆಯೊಂದು ಅವರನ್ನು ಹಿಡಿಯಿತು.
(18) ವಿಶ್ವಾಸವಿಟ್ಟವರನ್ನು ಮತ್ತು ಧರ್ಮನಿಷ್ಠೆ ಪಾಲಿಸಿದವರನ್ನು ನಾವು ರಕ್ಷಿಸಿದೆವು.
(19) ಅಲ್ಲಾಹುವಿನ ಶತ್ರುಗಳನ್ನು ನರಕದೆಡೆಗೆ ಹೋಗುವ ಸಲುವಾಗಿ ಒಟ್ಟುಗೂಡಿಸುವ, ತರುವಾಯ ಅವರನ್ನು ಅಟ್ಟಿಕೊಂಡು ಸಾಗಿಸುವ ದಿನ!
(20) ಹಾಗೆ ಅವರು ಅಲ್ಲಿಗೆ (ನರಕಕ್ಕೆ) ಬಂದಾಗ ಅವರ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ಅವರು ಮಾಡುತ್ತಿದ್ದುದರ ಬಗ್ಗೆ ಅವರಿಗೆ ವಿರುದ್ಧವಾಗಿ ಸಾಕ್ಷಿ ನುಡಿಯುವುವು.
(21) ಅವರು ತಮ್ಮ ಚರ್ಮಗಳೊಂದಿಗೆ ಹೇಳುವರು: “ನೀವೇಕೆ ನಮ್ಮ ವಿರುದ್ಧ ಸಾಕ್ಷಿ ನುಡಿದಿರಿ?” ಅವು ಹೇಳುವುವು: “ಎಲ್ಲ ವಸ್ತುಗಳನ್ನು ಮಾತನಾಡಿಸಿದ ಅಲ್ಲಾಹು ನಮ್ಮನ್ನು ಮಾತನಾಡಿಸಿದನು”. ಮೊದಲಬಾರಿ ನಿಮ್ಮನ್ನು ಸೃಷ್ಟಿಸಿದವನು ಅವನೇ ಆಗಿರುವನು. ಅವನೆಡೆಗೇ ನಿಮ್ಮನ್ನು ಮರಳಿಸಲಾಗುವುದು.
(22) ನಿಮ್ಮ ಕಿವಿಗಳಾಗಲಿ, ನಿಮ್ಮ ಕಣ್ಣುಗಳಾಗಲಿ ಅಥವಾ ನಿಮ್ಮ ಚರ್ಮಗಳಾಗಲಿ ನಿಮ್ಮ ವಿರುದ್ಧ ಸಾಕ್ಷಿ ನುಡಿಯುವುವು ಎಂದು ಭಾವಿಸಿ ನೀವು (ಅವುಗಳಿಂದ) ಅಡಗಿರುತ್ತಿರಲಿಲ್ಲ. ಆದರೆ ನೀವು ಮಾಡುತ್ತಿರುವುದರ ಪೈಕಿ ಹೆಚ್ಚಿನವುಗಳನ್ನೂ ಅಲ್ಲಾಹು ಅರಿಯಲಾರನೆಂದೇ ನೀವು ಭಾವಿಸಿದಿರಿ.
(23) ಅದು ನೀವು ನಿಮ್ಮ ರಬ್‌ನ ಬಗ್ಗೆ ಭಾವಿಸಿರುವ ಭಾವನೆಯಾಗಿದೆ. ಅದು ನಿಮಗೆ ನಾಶವನ್ನು ತಂದಿಟ್ಟಿದೆ. ಆದುದರಿಂದ ನೀವು ನಷ್ಟ ಹೊಂದಿದವರಲ್ಲಿ ಸೇರಿದವರಾದಿರಿ.
(24) ಅವರು ತಾಳ್ಮೆ ವಹಿಸಿದರೂ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅವರು ವಿನಾಯಿತಿಯನ್ನು ಬೇಡುವುದಾದರೆ ವಿನಾಯಿತಿ ನೀಡಲಾದವರಲ್ಲಿ ಅವರು ಸೇರಲಾರರು.
(25) ನಾವು ಅವರಿಗೆ ಕೆಲವು ಸಂಗಡಿಗರನ್ನು ಕೊಟ್ಟಿರುವೆವು. ಆ ಸಂಗಡಿಗರು ಅವರಿಗೆ ಅವರ ಮುಂಭಾಗದಲ್ಲಿರುವುದನ್ನು ಮತ್ತು ಹಿಂಭಾಗದಲ್ಲಿರುವುದನ್ನು ಆಕರ್ಷಣೀಯಗೊಳಿಸಿ ತೋರಿಸಿದರು. ಅವರಿಗಿಂತ ಮುಂಚೆ ಗತಿಸಿರುವ ಜಿನ್ನ್ ಮತ್ತು ಮನುಷ್ಯ ಸಮುದಾಯಗಳ ಜೊತೆಗೆ ಇವರ ಮೇಲೂ (ಶಿಕ್ಷೆಯ) ವಚನವು ಸತ್ಯವಾಗಿ ಬಿಟ್ಟಿತು. ಖಂಡಿತವಾಗಿಯೂ ಅವರು ನಷ್ಟ ಹೊಂದಿದವರಾಗಿದ್ದರು.
(26) ಸತ್ಯನಿಷೇಧಿಗಳು ಹೇಳಿದರು: “ನೀವು ಈ ಕುರ್‌ಆನನ್ನು ಆಲಿಸದಿರಿ. ಅದನ್ನು ಪಾರಾಯಣ ಮಾಡಲಾಗುವಾಗ ಗದ್ದಲ ಮಾಡಿರಿ. ನಿಮಗೆ (ಅದನ್ನು) ಸೋಲಿಸಲು ಸಾಧ್ಯವಾಗಬಹುದು”.
(27) ಖಂಡಿತವಾಗಿಯೂ ಆ ಸತ್ಯನಿಷೇಧಿಗಳಿಗೆ ನಾವು ಕಠಿಣವಾದ ಶಿಕ್ಷೆಯನ್ನು ಆಸ್ವಾದಿಸುವಂತೆ ಮಾಡುವೆವು. ಅವರು ಮಾಡುತ್ತಿರುವ ಕರ್ಮಗಳ ಪೈಕಿ ಅತಿಹೀನವಾಗಿರುವುದಕ್ಕೆ ನಾವು ಖಂಡಿತವಾಗಿಯೂ ಪ್ರತಿಫಲವನ್ನು ನೀಡುವೆವು.
(28) ಅಲ್ಲಾಹುವಿನ ಶತ್ರುಗಳಿಗೆ ಪ್ರತಿಫಲವಾಗಿರುವ ನರಕಾಗ್ನಿಯು ಅದೇ ಆಗಿದೆ. ಅವರಿಗೆ ಅಲ್ಲಿ ಶಾಶ್ವತ ವಾಸಕ್ಕಿರುವ ವಸತಿಯಿರುವುದು. ಅದು ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿರುವುದರ ಪ್ರತಿಫಲವಾಗಿದೆ.
(29) ಸತ್ಯನಿಷೇಧಿಗಳು ಹೇಳುವರು: “ನಮ್ಮ ಪ್ರಭೂ! ನಮ್ಮನ್ನು ಪಥಭ್ರಷ್ಟಗೊಳಿಸಿದ ಜಿನ್ನ್ ಮತ್ತು ಮನುಷ್ಯರಲ್ಲಿ ಸೇರಿದ ಎರಡು ಪಂಗಡಗಳನ್ನೂ ನಮಗೆ ತೋರಿಸಿಕೊಡು. ಅವರು ಅಧಮರ ಪೈಕಿ ಸೇರಿದವರಾಗಲು ನಾವು ಅವರನ್ನು ನಮ್ಮ ಪಾದಗಳಡಿಯಲ್ಲಿ ಹಾಕಿ ತುಳಿಯುವೆವು”.
(30) “ನಮ್ಮ ರಬ್ ಅಲ್ಲಾಹು” ಎಂದು ಹೇಳಿ, ತರುವಾಯ ಅದರಲ್ಲಿ ಅಚಲರಾಗಿ ನಿಂತವರಾರೋ ಅವರ ಬಳಿಗೆ ಮಲಕ್‍ಗಳು ಇಳಿದು ಬಂದು ಹೇಳುವರು:(1070) “ನೀವು ಭಯಪಡದಿರಿ ಮತ್ತು ದುಃಖಿಸದಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಬಗ್ಗೆ ನೀವು ಸಂತುಷ್ಟರಾಗಿರಿ.
1070. ಸಜ್ಜನರು ಮೃತಪಡುವಾಗ ಮಲಕ್‍ಗಳು ಶುಭವಾರ್ತೆಯೊಂದಿಗೆ ಆಗಮಿಸುವರೆಂದು ಅನೇಕ ವ್ಯಾಖ್ಯಾನಕಾರರೂ ಅಭಿಪ್ರಾಯಪಟ್ಟಿದ್ದಾರೆ.
(31) ಇಹಲೋಕದಲ್ಲೂ, ಪರಲೋಕದಲ್ಲೂ ನಾವು ನಿಮ್ಮ ಮಿತ್ರರಾಗಿರುವೆವು. ನಿಮ್ಮ ಮನಸ್ಸುಗಳು ಬಯಸುವುದೆಲ್ಲವೂ ನಿಮಗೆ ಅಲ್ಲಿ (ಪರಲೋಕದಲ್ಲಿ) ಇರುವುವು. ನೀವು ಬೇಡುವುದೆಲ್ಲವೂ ಅಲ್ಲಿ ನಿಮಗಿರುವುವು.
(32) ಅದು ಅತ್ಯಧಿಕ ಕ್ಷಮಿಸುವವನೂ, ಅಪಾರ ಕರುಣೆಯುಳ್ಳವನೂ ಆಗಿರುವ ಅಲ್ಲಾಹುವಿನ ಕಡೆಯ ಆತಿಥ್ಯವಾಗಿದೆ.
(33) ಅಲ್ಲಾಹುವಿನೆಡೆಗೆ ಆಹ್ವಾನಿಸುವ, ಸತ್ಕರ್ಮವೆಸಗುವ ಮತ್ತು ಖಂಡಿತವಾಗಿಯೂ ನಾನು ಮುಸ್ಲಿಮರ ಪೈಕಿ ಸೇರಿದವನಾಗಿರುವೆನೆಂದು ಹೇಳಿದವನಿಗಿಂತ ಉತ್ತಮವಾದ ಮಾತನ್ನು ಹೇಳಿದವನು ಯಾರಿರುವನು?(1071)
1071. ನಿರರ್ಥಕವಾದ ಮಾತುಗಳನ್ನು ಅತೀವ ಆಸಕ್ತಿಯಿಂದ ಹೇಳುವವರು ಮತ್ತು ಆಲಿಸುವವರು ಸತ್ಯವಿಶ್ವಾಸದ ಮತ್ತು ಧಾರ್ಮಿಕ ಜೀವನದ ಬೋಧನೆಯನ್ನು ಅತಿ ಕೀಳಾಗಿ ಕಾಣುತ್ತಾರೆ. ಸತ್ಯದ ಧ್ವನಿಯನ್ನು ನಿಷ್ಕ್ರಿಯಗೊಳಿಸಲು ಕೆಡುಕಿನ ವಕ್ತಾರರು ನಡೆಸುವ ನಿರಂತರ ಶ್ರಮಗಳ ಮಧ್ಯೆಯೂ ಸತ್ಯಸಂದೇಶದ ಪ್ರಚಾರದೊಂದಿಗೆ ಮುನ್ನುಗ್ಗಲು ಸತ್ಯವಿಶ್ವಾಸಿಗಳಿಗೆ ಈ ಸೂಕ್ತಿಯು ಪ್ರೇರಣೆಯನ್ನು ನೀಡುತ್ತದೆ. ಹೌದು! ಸತ್ಯಸಂದೇಶವನ್ನು ಪ್ರಚಾರ ಮಾಡುವುದಕ್ಕಿಂತಲೂ ಉತ್ತಮವಾದ ಮಾತು ಬೇರೊಂದಿಲ್ಲ.
(34) ಒಳಿತು ಮತ್ತು ಕೆಡುಕು ಸಮಾನವಾಗಲಾರದು. ಅತ್ಯುತ್ತಮವಾದುದು ಯಾವುದೋ ಅದರ ಮೂಲಕ ತಾವು (ಕೆಡುಕನ್ನು) ತಡೆಯಿರಿ. ಆಗ ಯಾರ ಮತ್ತು ತಮ್ಮ ಮಧ್ಯೆ ಶತ್ರುತ್ವವಿದೆಯೋ ಅವನು (ತಮ್ಮ) ಆಪ್ತ ಮಿತ್ರನೋ ಎಂಬಂತೆ ಮಾರ್ಪಡುವನು.
(35) ತಾಳ್ಮೆ ವಹಿಸಿದವರಿಗೇ ಹೊರತು ಅದಕ್ಕಿರುವ ಅನುಗ್ರಹವನ್ನು ನೀಡಲಾಗದು. ಮಹಾಭಾಗ್ಯವಂತರಿಗೇ ಹೊರತು ಅದಕ್ಕಿರುವ ಅನುಗ್ರಹವನ್ನು ನೀಡಲಾಗದು.(1072)
1072. ನಿಂದೆಗೆ ಪ್ರತಿಯಾಗಿ ನಿಂದೆ, ಅವಹೇಳನಕ್ಕೆ ಪ್ರತಿಯಾಗಿ ಅವಹೇಳನ ಎಂಬ ನಿಲುವನ್ನು ಸ್ವೀಕರಿಸಲಷ್ಟೇ ಹೆಚ್ಚಿನವರಿಗೂ ಸಾಧ್ಯವಾಗುವುದು. ನಿಂದಿಸುವವರಿಗೆ ಪ್ರತಿಯಾಗಿ ನಿಂದಿಸುವ ಬದಲು ಪ್ರೀತಿಯನ್ನು ಧಾರೆಯೆರೆಯುವ ಮೂಲಕ ಇತ್ತಂಡಗಳಿಗೂ ಉಂಟಾಗಲಿರುವ ಲಾಭದ ಬಗ್ಗೆಯಿರುವ ದೂರದೃಷ್ಟಿಯು ಅಲ್ಲಾಹುವಿನ ಅನುಗ್ರಹೀತ ದಾಸರಿಗೆ ಮಾತ್ರ ಸಿಗುವ ವಿಶೇಷ ಗುಣವಾಗಿದೆ.
(36) ಸೈತಾನನ ಕಡೆಯ ಯಾವುದಾದರೂ ದುಷ್ಪ್ರೇರಣೆಯು ತಮ್ಮನ್ನು ವ್ಯತಿಚಲನೆಗೊಳಿಸುವುದಾದರೆ ತಾವು ಅಲ್ಲಾಹುವಿನೊಂದಿಗೆ ಅಭಯವನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ ಆಗಿರುವನು.
(37) ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗದಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹುವಿಗೆ ಸಾಷ್ಟಾಂಗವೆರಗಿರಿ. ನೀವು ಅವನನ್ನು ಆರಾಧಿಸುವವರಾಗಿದ್ದರೆ.
(38) ಅವರೇನಾದರೂ ಅಹಂಕಾರಪಡುವುದಾದರೆ ತಮ್ಮ ರಬ್‌ನ ಬಳಿಯಿರುವವರು (ಮಲಕ್‍ಗಳು) ರಾತ್ರಿಯೂ ಹಗಲೂ ಅವನನ್ನು ಕೊಂಡಾಡುತ್ತಿರುವರು. ಅವರು ದಣಿಯಲಾರರು.
(39) ಭೂಮಿಯು ಒಣಗಿ ಬರಡಾಗಿರುವುದಾಗಿ ತಾವು ಕಾಣುವಿರಿ. ತರುವಾಯ ನಾವು ಅದರ ಮೇಲೆ ನೀರನ್ನು ಸುರಿಸಿದರೆ ಅದಕ್ಕೆ ಸಂಚಲನವುಂಟಾಗುವುದು(1073) ಮತ್ತು ಅದು ಬೆಳೆಯತೊಡಗುವುದು. ಇದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅದಕ್ಕೆ ಜೀವವನ್ನು ನೀಡಿದವನು ಖಂಡಿತವಾಗಿಯೂ ಮೃತಪಟ್ಟವರಿಗೂ ಜೀವವನ್ನು ನೀಡುವನು. ಖಂಡಿತವಾಗಿಯೂ ಅವನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
1073. ನಿರ್ಜೀವವಾಗಿರುವ ಭೂಮಿಗೆ ಮಳೆ ಸುರಿದರೆ ಅದರಲ್ಲಿ ಸಸ್ಯಗಳು ಮೊಳೆಯತೊಡಗಿ ಅದಕ್ಕೆ ಸಂಚಲನವುಂಟಾಗುತ್ತದೆ. ಬರಡಾಗಿರುವ ಮಣ್ಣಿಗೆ ನೀರು ಹರಿಯುವುದರೊಂದಿಗೆ ಅದಕ್ಕೂ ಸಂಚಲನ ಮತ್ತು ವಿಕಾಸವುಂಟಾಗುತ್ತದೆ.
(40) ನಮ್ಮ ದೃಷ್ಟಾಂತಗಳೆಡೆಗೆ ವಕ್ರತೆ ತೋರಿಸುವವರಾರೋ ಅವರು ಖಂಡಿತವಾಗಿಯೂ ನಮ್ಮ ದೃಷ್ಟಿಯಿಂದ ಮರೆಯಾಗಿ ಹೋಗಲಾರರು. ಹಾಗಾದರೆ ನರಕಾಗ್ನಿಗೆ ಎಸೆಯಲಾಗುವವನು ಉತ್ತಮನೇ? ಅಥವಾ ಪುನರುತ್ಥಾನ ದಿನದಂದು ನಿರ್ಭೀತನಾಗಿ ಬರುವವನೇ? ನೀವು ಇಚ್ಛಿಸುವುದನ್ನು ಮಾಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅವನು ವೀಕ್ಷಿಸುತ್ತಿರುವನು.
(41) ಖಂಡಿತವಾಗಿಯೂ ಈ ಉಪದೇಶವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿದವರು (ನಷ್ಟ ಹೊಂದಿದವರಾಗಿರುವರು). ಖಂಡಿತವಾಗಿಯೂ ಅದೊಂದು ಪ್ರತಾಪಶಾಲಿ ಗ್ರಂಥವಾಗಿದೆ.
(42) ಅದರ ಮುಂದಿನಿಂದಾಗಲಿ, ಹಿಂದಿನಿಂದಾಗಲಿ ಅಸತ್ಯವು ಅದರಲ್ಲಿ ಸೇರದು. ಅದು ಯುಕ್ತಿಪೂರ್ಣನೂ ಸ್ತುತ್ಯರ್ಹನೂ ಆಗಿರುವವನಿಂದ ಅವತೀರ್ಣಗೊಂಡಿರುವುದಾಗಿದೆ.
(43) (ಓ ಪ್ರವಾದಿಯವರೇ!) ತಮಗಿಂತ ಮುಂಚಿನ ಸಂದೇಶವಾಹಕರೊಂದಿಗೆ ಹೇಳಲಾಗಿರುವುದನ್ನೇ ಹೊರತು ಬೇರೇನನ್ನೂ ತಮ್ಮೊಂದಿಗೆ ಹೇಳಲಾಗುತ್ತಿಲ್ಲ. ಖಂಡಿತವಾಗಿಯೂ ತಮ್ಮ ರಬ್ ಪಾಪಮುಕ್ತಿ ನೀಡುವವನೂ, ಯಾತನಾಮಯ ಶಿಕ್ಷೆ ನೀಡುವವನೂ ಆಗಿರುವನು.(1074)
1074. ಅಂದರೆ ಪಶ್ಚಾತ್ತಾಪಪಟ್ಟವರಿಗೆ ಪಾಪಮುಕ್ತಿ ಮತ್ತು ಅಧರ್ಮದಲ್ಲಿ ಮಗ್ನರಾಗಿರುವವರಿಗೆ ಯಾತನಾಮಯ ಶಿಕ್ಷೆ.
(44) ನಾವು ಇದನ್ನೊಂದು ಅರಬೇತರ ಕುರ್‌ಆನ್ ಆಗಿ ಮಾಡಿರುತ್ತಿದ್ದರೆ ಅವರು ಹೇಳುತ್ತಿದ್ದರು: “ಇದರ ಸೂಕ್ತಿಗಳನ್ನು ವಿವರಿಸಲಾಗಿಲ್ಲವೇಕೆ? ಅರಬೇತರ (ಗ್ರಂಥ) ಮತ್ತು ಅರಬಿ(ಪ್ರವಾದಿ)ಯೇ?” ಹೇಳಿರಿ: “ಅದು (ಕುರ್‌ಆನ್) ಸತ್ಯವಿಶ್ವಾಸಿಗಳಿಗಿರುವ ಮಾರ್ಗದರ್ಶಿ ಮತ್ತು ಉಪಶಮನವಾಗಿದೆ. ವಿಶ್ವಾಸವಿಡದವರು ಯಾರೋ ಅವರ ಕಿವಿಗಳಲ್ಲಿ ಒಂದು ವಿಧ ಕಿವುಡುತನವಿದೆ. ಅದು (ಕುರ್‌ಆನ್) ಅವರ ಪಾಲಿಗೆ ಒಂದು ಅಂಧತೆಯಾಗಿದೆ. ಆ ಜನರನ್ನು ವಿದೂರವಾದ ಯಾವುದೋ ಸ್ಥಳದಿಂದ ಕರೆಯಲಾಗುತ್ತಿದೆ” (ಎಂಬಂತಿದೆ ಅವರ ಪ್ರತಿಕ್ರಿಯೆ).
(45) ಮೂಸಾರಿಗೆ ನಾವು ಗ್ರಂಥವನ್ನು ನೀಡಿದೆವು. ತರುವಾಯ ಅದರಲ್ಲಿ ಅವರು ಭಿನ್ನರಾದರು. ತಮ್ಮ ರಬ್‌ನ ಕಡೆಯ ಒಂದು ವಚನವು ಮೊದಲೇ ವಿಧಿಸಿಲ್ಲದಿರುತ್ತಿದ್ದರೆ ಅವರ ಮಧ್ಯೆ (ಈಗಾಗಲೇ) ತೀರ್ಪು ನೀಡಲಾಗಿರುತ್ತಿತ್ತು. ಖಂಡಿತವಾಗಿಯೂ ಅವರು ಇದರ (ಕುರ್‌ಆನಿನ) ಬಗ್ಗೆ ಅವಿಶ್ವಾಸವನ್ನು ಹುಟ್ಟಿಸುವಂತಹ ಸಂದೇಹದಲ್ಲಿರುವರು.
(46) ಯಾರಾದರೂ ಸತ್ಕರ್ಮವೆಸಗಿದರೆ ಅದರ ಒಳಿತು ಅವನಿಗೇ ಆಗಿದೆ. ಯಾರಾದರೂ ದುಷ್ಕರ್ಮವೆಸಗಿದರೆ ಅದರ ದೋಷವೂ ಅವನಿಗೇ ಆಗಿದೆ. ತಮ್ಮ ರಬ್ (ತನ್ನ) ದಾಸರೊಂದಿಗೆ ಅನ್ಯಾಯವೆಸಗುವವನೇ ಅಲ್ಲ.
(47) ಆ ಅಂತ್ಯಘಳಿಗೆಯ ಬಗ್ಗೆಯಿರುವ ಜ್ಞಾನವನ್ನು ಅವನೆಡೆಗೆ ಮರಳಿಸಲಾಗುವುದು.(1075) ಅವನ ಅರಿವಿನ ವಿನಾ ಯಾವುದೇ ಫಲಗಳು ಅದರ ತೊಗಲಿನಿಂದ ಹೊರಬರುವುದಿಲ್ಲ ಮತ್ತು ಯಾವುದೇ ಸ್ತ್ರೀಯೂ ಗರ್ಭ ಧರಿಸುವುದಾಗಲಿ ಹಡೆಯುವುದಾಗಲಿ ಮಾಡುವುದಿಲ್ಲ. “ನನ್ನ ಸಹಭಾಗಿಗಳು ಎಲ್ಲಿ?” ಎಂದು ಅವನು ಅವರನ್ನು ಕರೆದು ಕೇಳುವ ದಿನ! ಅವರು ಹೇಳುವರು: “ನಾವು ನಿನಗೆ ತಿಳಿಸುತ್ತಿರುವೆವು. (ಅದಕ್ಕೆ) ಸಾಕ್ಷಿಗಳಾಗಿ ನಮ್ಮ ಪೈಕಿ ಯಾರೂ ಇಲ್ಲ”.(1076)
1075. ಅಂತ್ಯಘಳಿಗೆ ಯಾವಾಗ ಸಂಭವಿಸುತ್ತದೆಯೆಂದು ಅಲ್ಲಾಹುವಿನ ಹೊರತು ಯಾರೂ ತಿಳಿದಿಲ್ಲ. 1076. ಅಲ್ಲಾಹುವೇತರರನ್ನು ಆರಾಧಿಸಲು ಮತ್ತು ಪ್ರಾರ್ಥಿಸಲು ಇಹಲೋಕದಲ್ಲಿ ಪುರಾವೆಗಳನ್ನು ಸಮರ್ಪಿಸಿ ಸಮರ್ಥಿಸುವವರಿಗೆ ಪರಲೋಕದಲ್ಲಿ ಯಾವುದೇ ಪುರಾವೆಗಳನ್ನು ಸಮರ್ಪಿಸಲೂ ಸಾಧ್ಯವಾಗದು. ಅಲ್ಲಿ ಅವರು ಸಂಪೂರ್ಣ ಅಸಹಾಯಕರಾಗಿರುವರು.
(48) ಮುಂಚೆ ಅವರು ಏನನ್ನೆಲ್ಲ ಕರೆದು ಪ್ರಾರ್ಥಿ ಸುತ್ತಿದ್ದರೋ ಅವೆಲ್ಲವೂ ಅವರನ್ನು ಬಿಟ್ಟು ಅಪ್ರತ್ಯಕ್ಷ ವಾಗುವುವು. ತಮಗೆ ಯಾವುದೇ ಅಭಯಕೇಂದ್ರವೂ ಇಲ್ಲವೆಂದು ಅವರಿಗೆ ಮನವರಿಕೆಯಾಗುವುದು.
(49) ಒಳಿತಿಗಾಗಿ ಪ್ರಾರ್ಥಿಸುವುದರಲ್ಲಿ ಮನುಷ್ಯನಿಗೆ ಆಯಾಸವುಂಟಾಗುವುದಿಲ್ಲ. ಅವನಿಗೆ ಹಾನಿಯೇನಾದರೂ ತಟ್ಟಿದರೆ ಅವನು ಹತಾಶನೂ ನಿರಾಶನೂ ಆಗುವನು.
(50) ಅವನಿಗೆ ಸಂಕಷ್ಟ ತಟ್ಟಿದ ಬಳಿಕ ನಾವು ಅವನಿಗೆ ನಮ್ಮ ಕಡೆಯ ಕಾರುಣ್ಯವನ್ನು ಆಸ್ವಾದಿಸುವಂತೆ ಮಾಡಿದರೆ ಖಂಡಿತವಾಗಿಯೂ ಅವನು ಹೇಳುವನು: “ಇದು ನನಗಿರುವುದಾಗಿದೆ. ಅಂತ್ಯಘಳಿಗೆಯು ಅಸ್ತಿತ್ವಕ್ಕೆ ಬರುವುದೆಂದು ನಾನು ಭಾವಿಸಲಾರೆನು.(1077) ಇನ್ನು ನನ್ನನ್ನು ನನ್ನ ರಬ್‌ನೆಡೆಗೆ ಮರಳಿಸಲ್ಪಟ್ಟರೂ ಖಂಡಿತವಾಗಿಯೂ ಅವನ ಬಳಿ ನನಗೆ ಅತ್ಯುತ್ತಮವಾದುದೇ ಇರುವುದು.” ಸತ್ಯನಿಷೇಧಿಗಳಿಗೆ ಅವರು ಮಾಡಿರುವುದರ ಬಗ್ಗೆ ನಾವು ತಿಳಿಸಿಕೊಡುವೆವು ಮತ್ತು ಅವರಿಗೆ ಕಠೋರವಾದ ಶಿಕ್ಷೆಯನ್ನು ಆಸ್ವಾದಿಸುವಂತೆ ಮಾಡುವೆವು.
1077. ಐಶ್ವರ್ಯ ಮತ್ತು ಅನುಗ್ರಹಗಳು ಪ್ರಾಪ್ತವಾದಾಗ ಮನುಷ್ಯನು ಅಲ್ಲಾಹು ಮತ್ತು ಪರಲೋಕವನ್ನು ಮರೆತುಬಿಡುತ್ತಾನೆ.
(51) ನಾವು ಮನುಷ್ಯನಿಗೆ ಅನುಗ್ರಹವನ್ನು ದಯಪಾಲಿಸಿದರೆ ಅವನು ವಿಮುಖನಾಗುವನು ಮತ್ತು ತನ್ನ ಪಾಡಿಗೆ ಸರಿದು ಬಿಡುವನು. ಆದರೆ ಅವನಿಗೇನಾದರೂ ಹಾನಿಯು ತಟ್ಟಿದರೆ ಅವನು ದೀರ್ಘವಾಗಿ ಪ್ರಾರ್ಥಿಸುವವನಾಗುವನು.
(52) ಹೇಳಿರಿ: “ನೀವು ಚಿಂತಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹುವಿನ ಕಡೆಯಿಂದಾಗಿದ್ದು, ತರುವಾಯ ನೀವು ಅದರಲ್ಲಿ ಅವಿಶ್ವಾಸವಿಡುವುದಾದರೆ, ಕಡು ವಿರೋಧದಲ್ಲಿರುವವನಿಗಿಂತಲೂ ಹೆಚ್ಚು ಪಥಭ್ರಷ್ಟನಾದವನು ಯಾರಿರುವನು?”
(53) ಇದು (ಕುರ್‌ಆನ್) ಸತ್ಯವೆಂದು ಅವರಿಗೆ ಸ್ಪಷ್ಟವಾಗುವ ರೀತಿಯಲ್ಲಿ ದಿಗಂತಗಳಲ್ಲೂ, ಸ್ವತಃ ಅವರಲ್ಲೂ ನಾವು ಅವರಿಗೆ ತರುವಾಯ ನಮ್ಮ ದೃಷ್ಟಾಂತಗಳನ್ನು ತೋರಿಸಿ ಕೊಡುವೆವು. ತಮ್ಮ ರಬ್ ಎಲ್ಲ ವಿಷಯಕ್ಕೂ ಸಾಕ್ಷಿಯಾಗಿರುವನೆಂಬುದು ಸಾಕಾಗಲಾರದೇ?
(54) ಅರಿಯಿರಿ! ಖಂಡಿತವಾಗಿಯೂ ಅವರು ಅವರ ರಬ್‌ನೊಂದಿಗಿರುವ ಭೇಟಿಯ ಬಗ್ಗೆ ಸಂದೇಹದಲ್ಲಿರುವರು. ಅರಿಯಿರಿ! ಖಂಡಿತವಾಗಿಯೂ ಅವನು ಎಲ್ಲ ವಸ್ತುಗಳನ್ನೂ ಆವರಿಸಿದವನಾಗಿರುವನು.