(1) ಅಲಿಫ್ ಲಾಮ್ ಮೀಮ್ ರಾ. ಇವು ಗ್ರಂಥದ ಸೂಕ್ತಿಗಳಾಗಿವೆ. ತಮ್ಮ ರಬ್‌ನ ಕಡೆಯಿಂದ ತಮ್ಮೆಡೆಗೆ ಏನನ್ನು ಅವತೀರ್ಣಗೊಳಿಸಲಾಗಿದೆಯೋ ಅದು ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರೂ ವಿಶ್ವಾಸವಿಡುವುದಿಲ್ಲ.
(2) ನೀವು ಕಾಣುವಂತಹ ಯಾವುದೇ ಸ್ಥಂಭಗಳಿಲ್ಲದೆ ಆಕಾಶವನ್ನು ಎತ್ತಿ ನಿಲ್ಲಿಸಿದವನು ಅಲ್ಲಾಹುವಾಗಿರುವನು.(436) ತರುವಾಯ ಅವನು ಸಿಂಹಾಸನಾರೂಢನಾದನು. ಸೂರ್ಯನನ್ನೂ, ಚಂದ್ರನನ್ನೂ ಅವನು ಅಧೀನಪಡಿಸಿರುವನು. ಎಲ್ಲವೂ ಒಂದು ನಿಶ್ಚಿತ ಅವಧಿಯ ತನಕ ಚಲಿಸುತ್ತಿರುವುವು. ಅವನು ಎಲ್ಲ ಸಂಗತಿಗಳನ್ನೂ ನಿಯಂತ್ರಿಸುತ್ತಿರುವನು. ನೀವು ನಿಮ್ಮ ರಬ್‌ನ ಭೇಟಿಯ ಬಗ್ಗೆ ದೃಢವಿಶ್ವಾಸ ಹೊಂದುವ ಸಲುವಾಗಿ ಅವನು ದೃಷ್ಟಾಂತಗಳನ್ನು ವಿವರಿಸುತ್ತಿರುವನು.
436. ಪರಸ್ಪರ ಡಿಕ್ಕಿ ಹೊಡೆದು ನುಚ್ಚುನೂರಾಗದ ರೀತಿಯಲ್ಲಿ ಅಸಂಖ್ಯಾತ ಆಕಾಶಕಾಯಗಳನ್ನು ಶೂನ್ಯಾಕಾಶದಲ್ಲಿ ಊರೆಕೊಟ್ಟು ನಿಲ್ಲಿಸುವ ಶಕ್ತಿನಿಯಮವು ಅತ್ಯಂತ ಸಂಕೀರ್ಣವಾಗಿದೆ. ನಿಶ್ಚಿತ ಕಕ್ಷೆಗಳನ್ನು ಮತ್ತು ನಿಗದಿತ ವೇಗವನ್ನು ಹೊಂದಿರುವ ಆಕಾಶಕಾಯಗಳ ಸಂವಿಧಾನವು ಸರ್ವಜ್ಞನೂ, ಸರ್ವಶಕ್ತನೂ ಆದ ಸೃಷ್ಟಿಕರ್ತನ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ.
(3) ಭೂಮಿಯನ್ನು ವಿಶಾಲಗೊಳಿಸಿದವನು ಅವನಾಗಿರುವನು. ಅವನು ಅದರಲ್ಲಿ ನಾಟಿ ನಿಲ್ಲುವ ಪರ್ವತಗಳನ್ನು ಮತ್ತು ನದಿಗಳನ್ನು ಉಂಟುಮಾಡಿದನು. ಎಲ್ಲ ವಿಧದ ಫಲವರ್ಗಗಳಲ್ಲೂ ಅವನು ಎರಡು ಜೋಡಿಗಳನ್ನು(437) ಮಾಡಿರುವನು. ಅವನು ರಾತ್ರಿಯಿಂದ ಹಗಲನ್ನು ಹೊದಿಸುವನು. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
437. ‘ಝೌಜೈನ್’ ಎಂಬ ಪದಕ್ಕೆ ಜೋಡಿಗಳು, ವಿಧಗಳು, ಸಂಗಾತಿಗಳು ಇತ್ಯಾದಿ ಅರ್ಥಗಳಿವೆ.
(4) ಭೂಮಿಯಲ್ಲಿ ಒಂದಕ್ಕೊಂದು ಹತ್ತಿರವಾಗಿರುವಂತಹ ಖಂಡಗಳಿವೆ.(438) ದ್ರಾಕ್ಷಿ ತೋಟಗಳೂ, ಕೃಷಿಗಳೂ ಇವೆ. ಒಂದೇ ಕಾಂಡದಿಂದ ಹಲವು ಗೆಲ್ಲುಗಳಾಗಿ ಬೆಳೆಯುವ ಮತ್ತು ಬೇರೆ ಬೇರೆ ಕಾಂಡಗಳಿಂದ ಬೆಳೆಯುವ ಖರ್ಜೂರದ ಮರಗಳೂ ಇವೆ. ಇವುಗಳಿಗೆಲ್ಲ ಒಂದೇ ಜಲದಿಂದ ನೀರುಣಿಸಲಾಗುತ್ತದೆ. ಫಲಗಳ ವಿಷಯದಲ್ಲಿ ನಾವು ಅವುಗಳ ಪೈಕಿ ಕೆಲವನ್ನು ಇತರವುಗಳಿಗಿಂತ ಶ್ರೇಷ್ಠಗೊಳಿಸುವೆವು. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.
438. ಭೂಮಿಯಲ್ಲಿ ಒಂದಕ್ಕೊಂದು ಹತ್ತಿರವಾಗಿರುವಂತಹ ಅನೇಕ ಖಂಡಗಳಿವೆ. ಈ ಖಂಡಗಳ ಮಣ್ಣು ವಿಭಿನ್ನವಾಗಿದ್ದು ಒಂದೊಂದು ರೀತಿಯ ಮಣ್ಣು ಒಂದೊಂದು ರೀತಿಯ ಬೆಳೆಗೆ ಸೂಕ್ತವಾಗಿರುತ್ತದೆ. ಭೂಮುಖವು ಒಂದಕ್ಕೊಂದು ಹತ್ತಿರವಿರುವ ಅನೇಕ ಪ್ಲೇಟ್‍ಗಳು ಅಥವಾ ಖಂಡಗಳಿಂದ ಜೋಡಿಸಲ್ಪಟ್ಟದ್ದಾಗಿವೆಯೆಂದು ಆಧುನಿಕ ವಿಜ್ಞಾನವು ಹೇಳುತ್ತದೆ. ಈ ವಚನದಲ್ಲಿ ಹೇಳಲಾದ ‘ಒಂದಕ್ಕೊಂದು ಹತ್ತಿರವಾಗಿರುವಂತಹ ಖಂಡಗಳಿವೆ’ ಎಂಬುದರ ತಾತ್ಪರ್ಯವೇನೆಂದು ನಿಖರವಾಗಿ ಹೇಳಲಾಗದು.
(5) ತಾವು ಅಚ್ಚರಿಪಡುವುದಾದರೆ “ನಾವು ಮಣ್ಣಾಗಿ ಹೋದ ಬಳಿಕ ನಮ್ಮನ್ನು ಪುನಃ ಹೊಸದಾಗಿ ಸೃಷ್ಟಿಸಲಾಗುವುದೇ?” ಎಂಬ ಅವರ ಮಾತು ಅತ್ಯಂತ ಅಚ್ಚರಿದಾಯಕವಾಗಿದೆ. ಅಂತಹವರು ತಮ್ಮ ರಬ್‌ನಲ್ಲಿ ಅವಿಶ್ವಾಸವಿಟ್ಟವರಾಗಿರುವರು. ಕೊರಳುಗಳಲ್ಲಿ ಸಂಕೋಲೆಗಳಿರುವವರು ಅವರಾಗಿರುವರು. ಅವರು ನರಕವಾಸಿಗಳಾಗಿರುವರು. ಅದರಲ್ಲಿ ಅವರು ಶಾಶ್ವತವಾಗಿ ವಾಸಿಸುವರು.
(6) (ಓ ಪ್ರವಾದಿಯವರೇ!) ಅವರು ತಮ್ಮೊಂದಿಗೆ ಒಳಿತಿಗಿಂತ ಮುಂಚಿತವಾಗಿ ಕೆಡುಕಿಗೋಸ್ಕರ (ಶಿಕ್ಷೆಗೋಸ್ಕರ) ಆತುರಪಡುತ್ತಿರುವರು. ಅವರಿಗಿಂತ ಮುಂಚೆ ಮಾದರೀಯೋಗ್ಯ ಶಿಕ್ಷೆಗಳು ಗತಿಸಿಹೋಗಿವೆ. ಮನುಷ್ಯರು ಅಕ್ರಮವೆಸಗಿದವರಾಗಿದ್ದೂ ಸಹ ತಮ್ಮ ರಬ್ ಖಂಡಿತವಾಗಿಯೂ ಅವರಿಗೆ ಪಾಪಮುಕ್ತಿಯನ್ನು ನೀಡುವವನಾಗಿರುವನು.(439) ಖಂಡಿತವಾಗಿಯೂ ತಮ್ಮ ರಬ್ ಅತಿಕಠಿಣವಾಗಿ ಶಿಕ್ಷಿಸುವವನೂ ಆಗಿರುವನು.
439. ಮಹಾ ಅಕ್ರಮವೆಸಗಿದ ವ್ಯಕ್ತಿ ಕೂಡ ನಿಷ್ಕಳಂಕವಾಗಿ ಪಶ್ಚಾತ್ತಾಪಪಟ್ಟು, ತಪ್ಪನ್ನು ಪುನರಾವರ್ತಿಸುವುದಿಲ್ಲವೆಂದು ದೃಢನಿಶ್ಚಯ ಮಾಡಿದರೆ ಖಂಡಿತವಾಗಿಯೂ ಅಲ್ಲಾಹು ಅವನನ್ನು ಕ್ಷಮಿಸುತ್ತಾನೆ.
(7) “ಇವರ ರಬ್‌ನ ಕಡೆಯಿಂದ ಇವರ ಮೇಲೆ ಒಂದು ದೃಷ್ಟಾಂತವನ್ನು ಇಳಿಸಲಾಗಿಲ್ಲವೇಕೆ?” ಎಂದು (ಪ್ರವಾದಿಯವರನ್ನು ಲೇವಡಿ ಮಾಡುತ್ತಾ) ಸತ್ಯನಿಷೇಧಿಗಳು ಕೇಳುವರು. (ಓ ಪ್ರವಾದಿಯವರೇ!) ತಾವು ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿದ್ದೀರಿ. ಎಲ್ಲ ಜನ ಸಮುದಾಯಕ್ಕೂ ಒಬ್ಬ ಮಾರ್ಗದರ್ಶಕರಿರುವರು.
(8) ಪ್ರತಿಯೊಬ್ಬ ಹೆಣ್ಣು ಏನನ್ನು ಗರ್ಭ ಧರಿಸುತ್ತಿರುವಳೆಂದು ಅಲ್ಲಾಹು ಅರಿಯುವನು. ಗರ್ಭಾಶಯಗಳು ಕಡಿಮೆಯುಂಟುಮಾಡುವುದನ್ನೂ, ವರ್ಧನೆಯುಂಟುಮಾಡುವುದನ್ನೂ ಅವನು ಅರಿಯುವನು.(440) ಅವನ ಬಳಿ ಪ್ರತಿಯೊಂದು ವಸ್ತುವೂ ಒಂದು ನಿಶ್ಚಿತ ಪ್ರಮಾಣದಲ್ಲಿದೆ.
440. ಗರ್ಭಸ್ಥ ಶಿಶುಗಳ ಸಂಖ್ಯೆ ಕಮ್ಮಿಯೋ ಅಥವಾ ಹೆಚ್ಚೋ, ಗರ್ಭಸ್ಥ ಶಿಶು ಪೂರ್ಣ ಬೆಳವಣಿಗೆ ಹೊಂದಿದೆಯೋ ಅಥವಾ ಇಲ್ಲವೋ, ಗರ್ಭಕಾಲವು ಹೆಚ್ಚಾಗುವುದೋ ಅಥವಾ ಕಮ್ಮಿಯಾಗುವುದೋ ಇತ್ಯಾದಿಗಳೆಲ್ಲವನ್ನೂ ಅಲ್ಲಾಹು ಅರಿಯುತ್ತಾನೆ.
(9) ಅವನು ಅಗೋಚರವಾಗಿರುವುದನ್ನು ಮತ್ತು ಗೋಚರವಾಗಿರುವುದನ್ನು ಅರಿಯುವವನೂ, ಮಹಾನನೂ ಅತ್ಯುನ್ನತನೂ ಆಗಿರುವನು.
(10) ನಿಮ್ಮ ಪೈಕಿ ರಹಸ್ಯವಾಗಿ ಮಾತನಾಡಿದವನು, ಬಹಿರಂಗವಾಗಿ ಮಾತನಾಡಿದವನು, ರಾತ್ರಿಯಲ್ಲಿ ಅಡಗುವವನು ಮತ್ತು ಹಗಲಲ್ಲಿ ನಡೆದಾಡುವವನು (ಅಲ್ಲಾಹುವಿನ ಮಟ್ಟಿಗೆ) ಸಮಾನರಾಗಿರುವರು.(441)
441. ಎಲ್ಲರ ಬಗ್ಗೆ ಮತ್ತು ಎಲ್ಲ ವಿಷಯಗಳ ಬಗ್ಗೆ ಅಲ್ಲಾಹು ಅರಿಯುತ್ತಾನೆ.
(11) ಮಾನವನಿಗೆ ಅವನ ಮುಂದಿನಿಂದಲೂ ಹಿಂದಿನಿಂದಲೂ ನಿರಂತರವಾಗಿ ಬರುತ್ತಾ ಅಲ್ಲಾಹುವಿನ ಆದೇಶ ಪ್ರಕಾರ ಅವನನ್ನು ಕಾಪಾಡುವ (ಮಲಕ್‍ಗಳು) ಇರುವರು. ಜನರು ತಮ್ಮ ನಿಲುವಿನಲ್ಲಿ ಬದಲಾವಣೆ ತರುವವರೆಗೆ ಅಲ್ಲಾಹು ಯಾವುದೇ ಜನತೆಯ ಸ್ಥಿತಿಯನ್ನು ಖಂಡಿತವಾಗಿಯೂ ಬದಲಾಯಿಸಲಾರನು.(442) ಒಂದು ಜನತೆಗೆ ಹಾನಿಯನ್ನುಂಟುಮಾಡಲು ಅಲ್ಲಾಹು ಇಚ್ಛಿಸಿದರೆ ಅದನ್ನು ನಿವಾರಿಸಲು ಸಾಧ್ಯವಿಲ್ಲ. ಅವನ ಹೊರತು ಅವರಿಗೆ ಬೇರೆ ಸಂರಕ್ಷಕರೂ ಇಲ್ಲ.
442. ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿ ಮತ್ತು ಪತನವು ಅವರ ಬದುಕಿನ ನಿಲುವು ಮತ್ತು ಕರ್ಮರೀತಿಗಳನ್ನು ಅವಲಂಬಿಸಿಕೊಂಡಿದೆ. ಮನುಷ್ಯರು ತಮ್ಮ ನಿಲುವಿನಲ್ಲಿ ಸ್ವತಃ ಬದಲಾವಣೆಯನ್ನು ತರುವ ತನಕ ಅಲ್ಲಾಹು ಅವರ ಸ್ಥಿತಿಗತಿಗಳನ್ನು ಬದಲಾಯಿಸಲಾರನು.
(12) ಭಯ ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಾ ನಿಮಗೆ ಮಿಂಚನ್ನು ತೋರಿಸಿಕೊಡುವವನು ಅವನಾಗಿರುವನು. ಅವನು (ಜಲ ನಿಮಿತ್ತ) ಭಾರವಾಗಿರುವ ಮೋಡಗಳನ್ನು ಸೃಷ್ಟಿಸುವನು.
(13) ಸಿಡಿಲು ಅವನ ಸ್ತುತಿಯೊಂದಿಗೆ ಅವನ ಪರಿಪಾವನತೆಯನ್ನು ಕೊಂಡಾಡುತ್ತಿರುವುದು.(443) ಮಲಕ್‌ಗಳು ಸಹ ಅವನ ಭಯದಿಂದ (ಅವನನ್ನು ಸ್ತುತಿಸುತ್ತಿರುವರು). ಅವನು ಸಿಡಿಲುಗಳನ್ನು ಕಳುಹಿಸುವನು. ತರುವಾಯ ಅವನಿಚ್ಛಿಸುವವರಿಗೆ ಅವುಗಳನ್ನು ತಗುಲಿಸುವನು. ಆದರೂ ಅವರು (ಸತ್ಯನಿಷೇಧಿಗಳು) ಅಲ್ಲಾಹುವಿನ ಬಗ್ಗೆ ತರ್ಕಿಸುತ್ತಿರುವರು. ಅವನು ಪ್ರಬಲಶಕ್ತಿಯುಳ್ಳವನಾಗಿರುವನು.
443. ಪ್ರಕೃತಿಯಲ್ಲಿರುವ ಪ್ರತಿಯೊಂದು ವಿದ್ಯಮಾನವೂ ಅಲ್ಲಾಹುವಿನ ಸೃಷ್ಟಿ ವೈಭವವನ್ನು ಪ್ರಶಂಸಿಸುತ್ತದೆ.
(14) ಅವನೊಂದಿಗಿರುವ ಪ್ರಾರ್ಥನೆಯೇ ಸತ್ಯವಾದ ಪ್ರಾರ್ಥನೆ. ಅವನ ಹೊರತು ಯಾರೊಂದಿಗೆಲ್ಲ ಅವರು ಪ್ರಾರ್ಥಿಸುತ್ತಿರುವರೋ ಅವರಾರೂ ಅವರಿಗೆ ಉತ್ತರ ನೀಡಲಾರರು. ಅವರ ಸ್ಥಿತಿಯು ತನ್ನ ಎರಡು ಕೈಗಳನ್ನು ನೀರಿನೆಡೆಗೆ ಅದು (ಸ್ವತಃ) ತನ್ನ ಬಾಯಿಗೆ ತಲುಪುವ ಸಲುವಾಗಿ ಚಾಚಿದವನಂತೆ ಮಾತ್ರವಾಗಿದೆ. ಅದು ಅವನ ಬಾಯಿಗೆ ತಲುಪಲಾರದು. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವೇ ವಿನಾ ಇನ್ನೇನೂ ಅಲ್ಲ.
(15) ಭೂಮ್ಯಾಕಾಶಗಳಲ್ಲಿರುವವರೆಲ್ಲರೂ ಸ್ವಇಚ್ಛೆಯಿಂದ ಅಥವಾ ನಿರ್ಬಂಧಿತರಾಗಿ ಅಲ್ಲಾಹುವಿಗೆ ಸಾಷ್ಟಾಂಗವೆರಗುತ್ತಿರುವರು. ಪ್ರಭಾತ ಮತ್ತು ಮುಸ್ಸಂಜೆಗಳಲ್ಲಿ ಅವರ ನೆರಳುಗಳೂ (ಅವನಿಗೆ ಸಾಷ್ಟಾಂಗವೆರಗುತ್ತಿರುವುವು).(444)
444. ಬೆಳಗ್ಗೆ ಮತ್ತು ಸಂಜೆಯ ವೇಳೆಗಳಲ್ಲಿ ಅವರ ನೆರಳು ದೀರ್ಘವಾಗುವುದು ಮತ್ತು ಗಿಡ್ಡವಾಗುವುದು ಅಲ್ಲಾಹುವಿನ ನಿಯಮ ಪ್ರಕಾರವೇ ಹೊರತು ಅವರ ತೀರ್ಮಾನ ಪ್ರಕಾರವಲ್ಲ. ನೆರಳು ತಿರುಗುವುದು ಅವರು ತಿರುಗಿದೆಡೆಗಲ್ಲ. ಬದಲಾಗಿ ಅಲ್ಲಾಹು ನಿಶ್ಚಯಿಸಿದ ದಿಕ್ಕಿನೆಡೆಗಾಗಿದೆ.
(16) (ಓ ಪ್ರವಾದಿಯವರೇ!) ಕೇಳಿರಿ: “ಭೂಮ್ಯಾಕಾಶಗಳ ರಬ್ ಯಾರು?” ಹೇಳಿರಿ: “ಅಲ್ಲಾಹು”. ಹೇಳಿರಿ: “ಆದರೂ ಅವನನ್ನು ಬಿಟ್ಟು, ಸ್ವತಃ ತಮಗೇ ಯಾವುದೇ ಲಾಭವನ್ನೂ, ಹಾನಿಯನ್ನೂ ಸ್ವಾಧೀನದಲ್ಲಿಟ್ಟುಕೊಳ್ಳದಂತಹ ರಕ್ಷಕರನ್ನು ನೀವು ಮಾಡಿಕೊಂಡಿದ್ದೀರಾ?” ಕೇಳಿರಿ: “ಕುರುಡನೂ ದೃಷ್ಟಿಯುಳ್ಳವನೂ(445) ಸಮಾನರಾಗುವರೇ? ಅಥವಾ ಅಂಧಕಾರಗಳು ಮತ್ತು ಪ್ರಕಾಶವು ಸಮಾನವಾಗುವುದೇ? ಅಥವಾ ಅವರು ಅಲ್ಲಾಹುವಿನೊಂದಿಗೆ ಸಹಭಾಗಿಗಳನ್ನಾಗಿ ಮಾಡಿರುವವರು, ಅವನು ಸೃಷ್ಟಿಸುವಂತೆಯೇ ಸೃಷ್ಟಿಸಿ (ಎರಡೂ ಕಡೆಯ) ಸೃಷ್ಟಿಗಳನ್ನು ಅವರಿಗೆ ಗುರುತಿಸಲು ಸಾಧ್ಯವಾಗದೇ ಹೋಯಿತೇ?” ಹೇಳಿರಿ: “ಸರ್ವ ವಸ್ತುಗಳ ಸೃಷ್ಟಿಕರ್ತನು ಅಲ್ಲಾಹುವಾಗಿರುವನು. ಅವನು ಏಕಮೇವನೂ ಸರ್ವಾಧಿಕಾರಿಯೂ ಆಗಿರುವನು”.
445. ಆಧಾರರಹಿತವಾಗಿ ಯಾರಿಗಾದರೂ ದಿವ್ಯತ್ವವನ್ನು ಕಲ್ಪಿಸಿಕೊಳ್ಳುವವರು ಅಂಧಕಾರದಲ್ಲಿ ಅಲೆದಾಡುವವರಾಗಿದ್ದಾರೆ. ಜಗತ್ತಿನ ಪ್ರಭುವನ್ನು ಮಾತ್ರ ಆರಾಧಿಸುವವರು ಪರಮ ಸತ್ಯದ ಪ್ರಕಾಶವನ್ನು ಪಡೆದವರಾಗಿದ್ದಾರೆ.
(17) ಅವನು (ಅಲ್ಲಾಹು) ಆಕಾಶದಿಂದ ಮಳೆನೀರನ್ನು ಸುರಿಸಿದನು. ತರುವಾಯ ಕಣಿವೆಗಳಲ್ಲಿ ಅವುಗಳ ಗಾತ್ರಕ್ಕನುಗುಣವಾಗಿ ನೀರು ಹರಿಯಿತು. ಆಗ ಆ ಹರಿವು ಮೇಲ್ಭಾಗದಲ್ಲಿ ತೇಲುತ್ತಿರುವ ನೊರೆಗಳನ್ನು ವಹಿಸಿ ಹರಿಯತೊಡಗಿತು. ಅವರು ಯಾವುದಾದರೂ ಆಭರಣವನ್ನೋ ಉಪಕರಣವನ್ನೋ ನಿರ್ಮಿಸಲು ಬೆಂಕಿಯಲ್ಲಿ ಕಾಯಿಸುವ ಲೋಹದಿಂದಲೂ ಇದೇ ರೀತಿಯ ನೊರೆಯುಂಟಾಗುತ್ತದೆ. ಹೀಗೆ ಅಲ್ಲಾಹು ಸತ್ಯ ಮತ್ತು ಅಸತ್ಯವನ್ನು ಉದಾಹರಣೆಯಾಗಿ ತೋರಿಸಿ ಕೊಡುವನು. ತರುವಾಯ ನೊರೆಯು ಆವಿಯಾಗಿ ಹೊರಟು ಹೋಗುವುದು. ಮನುಷ್ಯರಿಗೆ ಪ್ರಯೋಜನವಿರುವುದು ಭೂಮಿಯಲ್ಲಿ ತಂಗುವುದು.(446) ಹೀಗೆ ಅಲ್ಲಾಹು ಉಪಮೆಗಳನ್ನು ವಿವರಿಸಿಕೊಡುವನು.
446. ಶುದ್ಧವಾದ ಲೋಹವು ಕೆಳಭಾಗದಲ್ಲಿ ತಂಗುತ್ತದೆ. ಶುದ್ಧ ನೀರು ಭೂಮಿಯಾಳಕ್ಕೆ ಇಂಗಿ ಮನುಷ್ಯರಿಗೂ ಜಾನುವಾರುಗಳಿಗೂ ಪ್ರಯೋಜನಕಾರಿಯಾಗುತ್ತದೆ. ಬದುಕೆಂಬ ಪ್ರವಾಹದ ಮೇಲ್ಭಾಗದಲ್ಲಿ ಅಸತ್ಯದ ಕಸಕಡ್ಡಿಗಳು ತೇಲುತ್ತಿರುವುದನ್ನು ನಮಗೆ ಕೆಲವೊಮ್ಮೆ ಕಾಣಬಹುದಾಗಿದೆ. ಆದರೆ ಕಾಲಕ್ರಮೇಣ ಅವೆಲ್ಲವೂ ನಾಶವಾಗಿ ಹೋಗುತ್ತವೆ. ಆದರೆ ಸತ್ಯವು ಸ್ಥಾಯಿಯಾದ ಅಂಗೀಕಾರದೊಂದಿಗೆ ಸಮಾಜದ ಅಂತರ್ಧಾರೆಯಾಗಿ ನೆಲೆನಿಲ್ಲುತ್ತದೆ.
(18) ತಮ್ಮ ರಬ್‌ನ ಕರೆಗೆ ಓಗೊಟ್ಟವರಾರೋ ಅವರಿಗೆ ಅತ್ಯುತ್ತಮ ಪ್ರತಿಫಲವಿದೆ. ಅವನ ಕರೆಗೆ ಓಗೊಡದವರಾರೋ ಅವರ ಬಳಿ ಭೂಮಿಯಲ್ಲಿರುವುದೆಲ್ಲವೂ ಮತ್ತು ಅದರೊಂದಿಗೆ ಅದರಷ್ಟೇ ಬೇರೆಯೂ ಇದ್ದರೂ (ತಮ್ಮ ರಕ್ಷೆಗಾಗಿ) ಅವರು ಅವೆಲ್ಲವನ್ನೂ ವಿಮೋಚನಾ ಶುಲ್ಕವಾಗಿ ನೀಡುತ್ತಿದ್ದರು! ಅವರಿಗೆ ತೀವ್ರ ವಿಚಾರಣೆಯಿದೆ ಮತ್ತು ಅವರ ವಾಸಸ್ಥಳವು ನರಕವಾಗಿದೆ. ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!
(19) ಹಾಗಾದರೆ ತಮಗೆ ತಮ್ಮ ರಬ್‌ನ ಕಡೆಯಿಂದ ಅವತೀರ್ಣಗೊಂಡಿರುವುದು ಸತ್ಯವೆಂದು ಅರಿತಿರುವವನು ಕುರುಡನಾದ ಒಬ್ಬನಂತಾಗುವನೇ? ಬುದ್ಧಿವಂತರು ಮಾತ್ರ ಚಿಂತಿಸಿ ಗ್ರಹಿಸುವರು.
(20) ಅಲ್ಲಾಹುವಿನೊಂದಿಗಿರುವ ಬಾಧ್ಯತೆಯನ್ನು ನೆರವೇರಿಸುವವರು ಮತ್ತು ಕರಾರನ್ನು ಉಲ್ಲಂಘಿಸದವರು,
(21) ಅಲ್ಲಾಹು ಜೋಡಿಸಲು ಆಜ್ಞಾಪಿಸಿರುವುದನ್ನು (ಸಂಬಂಧಗಳನ್ನು) ಜೋಡಿಸುವವರು, ತಮ್ಮ ರಬ್ಬನ್ನು ಭಯಪಡುವವರು, ತೀವ್ರ ವಿಚಾರಣೆಯನ್ನು ಭಯಪಡುವವರು,
(22) ತಮ್ಮ ರಬ್‌ನ ಸಂತೃಪ್ತಿಯನ್ನು ಆಶಿಸಿ ತಾಳ್ಮೆ ವಹಿಸುವವರು, ನಮಾಝನ್ನು ಸಂಸ್ಥಾಪಿಸುವವರು, ನಾವು ನೀಡಿರುವವುಗಳಿಂದ ಗುಪ್ತವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡುವವರು ಮತ್ತು ಕೆಡುಕನ್ನು ಒಳಿತಿನಿಂದ ತಡೆಯುವವರು. ಅಂತಹವರಿಗೆ ಇಹಲೋಕದ ಪರ್ಯಾವಸಾನವು ಅನುಕೂಲಕರವಾಗಿರುವುದು.
(23) ಶಾಶ್ವತವಾಗಿ ವಾಸಿಸುವುದಕ್ಕಿರುವ ಸ್ವರ್ಗೋದ್ಯಾನಗಳು! ಅವರು ಮತ್ತು ಅವರ ಪೂರ್ವಿಕರಲ್ಲಿ, ಸಂಗಾತಿಗಳಲ್ಲಿ ಮತ್ತು ಸಂತತಿಗಳಲ್ಲಿ ಸೇರಿದ ಸಜ್ಜನರು ಅದರಲ್ಲಿ ಪ್ರವೇಶಿಸುವರು. ಪ್ರತಿಯೊಂದು ದ್ವಾರದಿಂದಲೂ ಅವರೆಡೆಗೆ ಪ್ರವೇಶಿಸುತ್ತಾ ಮಲಕ್‍ಗಳು ಹೇಳುವರು:
(24) “ನೀವು ತಾಳ್ಮೆ ವಹಿಸಿರುವ ಕಾರಣ ನಿಮಗೆ ಶಾಂತಿಯಿರಲಿ!” ಅಂತಿಮ ಭವನ(ಸ್ವರ್ಗವು ಎಷ್ಟು ಉತ್ತಮವಾದುದು!
(25) ಅಲ್ಲಾಹುವಿನೊಂದಿಗಿರುವ ಕರಾರನ್ನು ಸುದೃಢಗೊಳಿಸಿದ ನಂತರವೂ ಉಲ್ಲಂಘಿಸುವವರು, ಅಲ್ಲಾಹು ಜೋಡಿಸಲು ಆಜ್ಞಾಪಿಸಿರುವುದನ್ನು (ಸಂಬಂಧಗಳನ್ನು) ಕಡಿಯುವವರು ಮತ್ತು ಭೂಮಿಯಲ್ಲಿ ವಿನಾಶವನ್ನುಂಟು ಮಾಡುವವರು. ಅವರಿಗೆ ಶಾಪವಿರುವುದು ಮತ್ತು ಅವರಿಗೆ ನಿಕೃಷ್ಟ ಭವನವಿರುವುದು!
(26) ಅಲ್ಲಾಹು ಅವನಿಚ್ಛಿಸುವವರಿಗೆ ಅನ್ನಾಧಾರವನ್ನು ವಿಶಾಲಗೊಳಿಸುವನು ಮತ್ತು ಸೀಮಿತಗೊಳಿಸುವನು. ಅವರು ಇಹಲೋಕ ಜೀವನದೊಂದಿಗೆ ಸಂತುಷ್ಟರಾಗಿರುವರು. ಆದರೆ ಪರಲೋಕಕ್ಕೆ ಹೋಲಿಸಿದರೆ ಇಹಲೋಕ ಜೀವನವು ಒಂದು (ಕ್ಷುಲ್ಲಕವಾದ) ಸುಖಾನುಭೂತಿ ಮಾತ್ರವಾಗಿದೆ.
(27) “ಇವರ ಮೇಲೆ ಇವರ ರಬ್‌ನ ಕಡೆಯಿಂದ ಯಾವುದಾದರೂ ದೃಷ್ಟಾಂತವನ್ನು ಇಳಿಸಲಾಗಿಲ್ಲವೇಕೆ?” ಎಂದು ಸತ್ಯನಿಷೇಧಿಗಳು (ಪ್ರವಾದಿಯವರನ್ನು ಲೇವಡಿ ಮಾಡುತ್ತಾ) ಕೇಳುವರು. (ಓ ಪ್ರವಾದಿಯವರೇ!) ಹೇಳಿರಿ: “ಅಲ್ಲಾಹು ಅವನಿಚ್ಛಿಸುವವರನ್ನು ಪಥಭ್ರಷ್ಟಗೊಳಿಸುವನು ಮತ್ತು ಪಶ್ಚಾತ್ತಾಪಪಟ್ಟು ಮರಳಿದವರನ್ನು ತನ್ನ ಮಾರ್ಗದೆಡೆಗೆ ಮುನ್ನಡೆಸುವನು”.
(28) ಅಂದರೆ ವಿಶ್ವಾಸವಿಟ್ಟವರನ್ನು ಮತ್ತು ಅಲ್ಲಾಹುವಿನ ಸ್ಮರಣೆಯಿಂದಾಗಿ ಹೃದಯಗಳು ಶಾಂತಗೊಳ್ಳುವವರನ್ನು. ಅರಿಯಿರಿ! ಹೃದಯಗಳು ಶಾಂತಗೊಳ್ಳುವುದು ಅಲ್ಲಾಹುವಿನ ಸ್ಮರಣೆಯಿಂದಾಗಿದೆ.
(29) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರಿಗೆ ಮಂಗಳವಾಗಲಿ! ಮರಳಿ ತಲುಪುವ ಉತ್ತಮ ವಾಸಸ್ಥಳವು (ಅವರಿಗಿರುವುದಾಗಿದೆ).
(30) ಹೀಗೆ ನಾವು ತಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿದ್ದೇವೆ. ಅದಕ್ಕಿಂತ ಮುಂಚೆ ಅನೇಕ ಸಮುದಾಯಗಳು ಗತಿಸಿಹೋಗಿವೆ. ನಾವು ತಮಗೆ ದಿವ್ಯ ಸಂದೇಶವಾಗಿ ನೀಡಿರುವುದನ್ನು ತಾವು ಅವರಿಗೆ ಓದಿಕೊಡುವ ಸಲುವಾಗಿ (ತಮ್ಮನ್ನು ಕಳುಹಿಸಿದ್ದೇವೆ). ಅವರು ಪರಮ ದಯಾಮಯನಲ್ಲಿ ಅವಿಶ್ವಾಸವಿಡುತ್ತಿರುವರು. ಹೇಳಿರಿ: “ನನ್ನ ರಬ್ ಅವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ನಾನು ಅವನ ಮೇಲೆ ಭರವಸೆಯಿಟ್ಟಿರುವೆನು. ನನ್ನ ಮರಳುವಿಕೆಯು ಅವನೆಡೆಗೇ ಆಗಿರುವುದು”.
(31) ಪಾರಾಯಣ ಮಾಡಲಾಗುವ ಒಂದು ಗ್ರಂಥದ ಮೂಲಕ ಪರ್ವತಗಳನ್ನು ಚಲಿಸುವಂತೆ ಮಾಡಲ್ಪಟ್ಟರೂ, ಅಥವಾ ಅದರಿಂದಾಗಿ ಭೂಮಿಯನ್ನು ನುಚ್ಚುನೂರು ಮಾಡಲ್ಪಟ್ಟರೂ ಅಥವಾ ಅದರ ಮೂಲಕ ಮೃತಪಟ್ಟವರನ್ನು ಮಾತನಾಡಿಸಲ್ಪಟ್ಟರೂ (ಅವರು ವಿಶ್ವಾಸವಿಡಲಾರರು). ಆದರೆ ಎಲ್ಲ ವಿಷಯಗಳ ತೀರ್ಮಾನವು ಅಲ್ಲಾಹುವಿನ ನಿಯಂತ್ರಣದಲ್ಲಿದೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಸರ್ವ ಮನುಷ್ಯರನ್ನೂ ಅವನು ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನು ಎಂಬುದನ್ನು ಸತ್ಯವಿಶ್ವಾಸಿಗಳು ಅರ್ಥಮಾಡಿಕೊಂಡಿಲ್ಲವೇ?(447) ಸತ್ಯನಿಷೇಧಿಗಳಿಗೆ ಅವರ ಕೃತ್ಯದ ನಿಮಿತ್ತ ಯಾವುದಾದರೂ ಆಪತ್ತು ಬಾಧಿಸುತ್ತಲೇ ಇರುವುದು ಅಥವಾ ಅವರ ವಾಸಸ್ಥಳದ ಬಳಿಯೇ ಅದು (ಶಿಕ್ಷೆಯು) ಇಳಿಯುತ್ತಿರುವುದು; ಅಲ್ಲಾಹುವಿನ ವಾಗ್ದಾನವು ಬರುವ ತನಕ.(448) ಖಂಡಿತವಾಗಿಯೂ ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸುವವನಲ್ಲ.
447. ‘ಅಫಲಮ್ ಯಯ್‌ಅಸ್’ ಎಂಬುದರ ಭಾಷಿಕ ಅರ್ಥವು ಆಸೆ ಮುರಿದಿಲ್ಲವೇ ಎಂದಾಗಿದೆ. ಸರ್ವ ಮನುಷ್ಯರನ್ನೂ ಸತ್ಯಮಾರ್ಗದಲ್ಲಿ ಸೇರಿಸಲು ಅಲ್ಲಾಹು ಇಚ್ಛಿಸಿಲ್ಲ ಎಂಬ ಮೂಲತತ್ವವನ್ನು ಸತ್ಯವಿಶ್ವಾಸಿಗಳು ಅರಿತುಕೊಳ್ಳುವುದಾಗಲಿ, ಜನರೆಲ್ಲರೂ ವಿಶ್ವಾಸವಿಡುವುದನ್ನು ನೋಡುವ ಆಸೆಯನ್ನು ಕೈಬಿಡುವುದಾಗಲಿ ಮಾಡಲಿಲ್ಲವೇಕೆ? ಎಂದು ಅಲ್ಲಾಹು ಕೇಳುತ್ತಿರುವನು.
448. ಪ್ರವಾದಿ(ಸ) ರವರಿಗೆ ಮತ್ತು ಸಹಾಬಾಗಳಿಗೆ ಅಲ್ಲಾಹು ವಾಗ್ದಾನ ಮಾಡಿರುವ ನಿರ್ಣಾಯಕ ಗೆಲುವು ಮತ್ತು ಸತ್ಯನಿಷೇಧಿಗಳ ಹೀನಾಯ ಸೋಲಿಗೆ ಸಮಯವಾಗುವ ತನಕ.
(32) ಖಂಡಿತವಾಗಿಯೂ ತಮಗಿಂತ ಮುಂಚೆಯೂ ಸಂದೇಶವಾಹಕರು ಅಪಹಾಸ್ಯಕ್ಕೊಳಗಾಗಿರುವರು. ಆದರೆ ನಾನು ಸತ್ಯನಿಷೇಧಿಗಳಿಗೆ ಕಾಲಾವಕಾಶವನ್ನು ಹೆಚ್ಚಿಸಿಕೊಟ್ಟಿರುವೆನು. ತರುವಾಯ ನಾನು ಅವರನ್ನು ಹಿಡಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು?
(33) ಹಾಗಾದರೆ ಪ್ರತಿಯೊಬ್ಬ ವ್ಯಕ್ತಿ ನಿರ್ವಹಿಸುವ ಕರ್ಮದ ಮೇಲ್ನೋಟ ವಹಿಸುವವನು (ಅಲ್ಲಾಹು) (ಏನೂ ಅರಿಯದವರಂತಾಗಿರುವನೇ?) ಅವರು ಅಲ್ಲಾಹುವಿಗೆ ಸಹಭಾಗಿಗಳನ್ನು ಮಾಡಿಕೊಂಡಿರುವರು. (ಓ ಪ್ರವಾದಿಯವರೇ!) ಹೇಳಿರಿ: “ಅವರ ಹೆಸರನ್ನು ಹೇಳಿಕೊಡಿರಿ. ಭೂಮಿಯಲ್ಲಿ ಅಲ್ಲಾಹು ಅರಿಯದಿರುವ ವಿಷಯವೊಂದನ್ನು ನೀವು ಅವನಿಗೆ ತಿಳಿಸಿಕೊಡುತ್ತಿರುವಿರಾ? ಅಥವಾ (ನೀವು ಹೇಳುತ್ತಿರುವುದು) ಗಹನವಲ್ಲದ ಮಾತುಗಳಾಗಿವೆಯೇ?”(449) ಅಲ್ಲ, ಸತ್ಯನಿಷೇಧಿಗಳಿಗೆ ಅವರ ಕುತಂತ್ರವನ್ನು ಆಕರ್ಷಕಗೊಳಿಸಿ ತೋರಿಸಲಾಗಿದೆ ಮತ್ತು ಅವರನ್ನು (ನೈಜ) ಮಾರ್ಗದಿಂದ ತಡೆಯಲಾಗಿದೆ. ಅಲ್ಲಾಹು ಯಾರನ್ನಾದರೂ ಪಥಭ್ರಷ್ಟಗೊಳಿಸಿದರೆ ಅವನಿಗೆ ಮಾರ್ಗದರ್ಶನ ಮಾಡುವವರು ಯಾರೂ ಇಲ್ಲ.
449. ಅಲ್ಲಾಹುವಿನ ಅಧಿಕಾರ ಮತ್ತು ಹಕ್ಕುಗಳನ್ನು ಇತರರಿಗೆ ಹಂಚಿಕೊಡುವವರು, ಹಾಗೆ ಹಂಚಲು ಏನಾದರೂ ಆಧಾರಪುರಾವೆಗಳಿವೆಯೇ ಎಂಬುದನ್ನು ಅನ್ವೇಷಿಸುವುದಿಲ್ಲ. ಗಹನವಾದ ತಿಳುವಳಿಕೆಯಿಲ್ಲದ ಬಾಯಿ ಮಾತುಗಳ ಮೂಲಕ ದಿವ್ಯತ್ವವನ್ನು ಸೃಷ್ಟಿಸುವುದೇ ಅವರ ಜಾಯಮಾನವಾಗಿರುತ್ತದೆ.
(34) ಅವರಿಗೆ ಇಹಲೋಕದಲ್ಲಿ ಶಿಕ್ಷೆಯಿದೆ. ಪರಲೋಕದ ಶಿಕ್ಷೆಯಂತೂ ಅತಿದಾರುಣವಾಗಿದೆ. ಅಲ್ಲಾಹುವಿನ ಶಿಕ್ಷೆಯಿಂದ ಅವರನ್ನು ಪಾರುಗೊಳಿಸುವವರು ಯಾರೂ ಇಲ್ಲ.
(35) ಭಯಭಕ್ತಿ ಪಾಲಿಸುವವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗವು (ಹೀಗಿದೆ:) ಅದರ ತಳಭಾಗದಲ್ಲಿ ನದಿಗಳು ಹರಿಯುತ್ತಿರುವುವು. ಅದರ ಫಲ ಮತ್ತು ಅದರ ನೆರಳು ಶಾಶ್ವತವಾಗಿರುವುದು. ಅದು ಭಯಭಕ್ತಿ ಪಾಲಿಸುವವರ ಪರ್ಯಾವಸಾನವಾಗಿದೆ! ಸತ್ಯನಿಷೇಧಿಗಳ ಪರ್ಯಾವಸಾನವು ನರಕಾಗ್ನಿಯಾಗಿದೆ.
(36) ನಾವು (ಮುಂಚೆ) ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ತಮಗೆ ಅವತೀರ್ಣಗೊಂಡಿರುವುದರಲ್ಲಿ (ಕುರ್‌ಆನ್‍ನಲ್ಲಿ) ಹರ್ಷಪಡುತ್ತಿರುವರು. ಅದರ ಕೆಲವು ಭಾಗಗಳನ್ನು ನಿಷೇಧಿಸುವವರೂ ಅವರ ಪಂಗಡದಲ್ಲಿರುವರು. ತಾವು ಹೇಳಿರಿ: “ನನ್ನೊಂದಿಗೆ ಆಜ್ಞಾಪಿಸಲಾಗಿರುವುದು ಅಲ್ಲಾಹುವನ್ನು ಆರಾಧಿಸಲು ಮತ್ತು ಅವನೊಂದಿಗೆ ಯಾವುದೇ ಸಹಭಾಗಿತ್ವ ಮಾಡದಿರಲು ಮಾತ್ರವಾಗಿದೆ. ನಾನು (ನಿಮ್ಮನ್ನು) ಕರೆಯುತ್ತಿರುವುದು ಅವನೆಡೆಗಾಗಿದೆ. ನನ್ನ ಮರಳುವಿಕೆಯೂ ಅವನೆಡೆಗಾಗಿದೆ”.
(37) ಹೀಗೆ ನಾವು ಇದನ್ನು (ಕುರ್‌ಆನನ್ನು) ಅರಬಿ ಭಾಷೆಯಲ್ಲಿರುವ ಒಂದು ಶಾಸನವನ್ನಾಗಿ ಅವತೀರ್ಣಗೊಳಿಸಿದ್ದೇವೆ. ತಮ್ಮೆಡೆಗೆ ಜ್ಞಾನವು ಬಂದ ಬಳಿಕವೂ ತಾವು ಅವರ ದೇಹೇಚ್ಛೆಗಳನ್ನು ಅನುಸರಿಸುವುದಾದರೆ ಅಲ್ಲಾಹುವಿನ ಶಿಕ್ಷೆಯಿಂದ ತಮ್ಮನ್ನು ಪಾರು ಮಾಡಲು ಯಾವುದೇ ರಕ್ಷಕನಾಗಲಿ, ಕಾವಲುಗಾರನಾಗಲಿ ತಮಗಿರಲಾರರು.
(38) ತಮಗಿಂತ ಮುಂಚೆಯೂ ನಾವು ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರಿಗೆ ನಾವು ಪತ್ನಿಯರನ್ನೂ ಸಂತತಿಗಳನ್ನೂ ಮಾಡಿಕೊಟ್ಟಿದ್ದೇವೆ. ಅಲ್ಲಾಹುವಿನ ಅನುಮತಿಯ ವಿನಾ ಯಾವುದೇ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕನಿಗೂ ಸಾಧ್ಯವಾಗಲಾರದು. ಪ್ರತಿಯೊಂದು ಕಾಲಕ್ಕೂ ಒಂದು (ಆಧಾರಪ್ರಮಾಣ) ಗ್ರಂಥವಿರುವುದು.
(39) ಅಲ್ಲಾಹು ಅವನಿಚ್ಛಿಸಿದ್ದನ್ನು ಅಳಿಸುವನು ಮತ್ತು (ಅವನಿಚ್ಛಿಸಿದ್ದನ್ನು) ಸ್ಥಿರಗೊಳಿಸುವನು. ಮೂಲಗ್ರಂಥವಿರುವುದು ಅವನ ಬಳಿಯಲ್ಲೇ ಆಗಿದೆ.(450)
450. ‘ಕಿತಾಬ್’ ಎಂಬ ಪದಕ್ಕೆ ಗ್ರಂಥ, ದಾಖಲೆ ಇತ್ಯಾದಿ ಅರ್ಥಗಳಿವೆ. ಈ ಸೂಕ್ತಿಯು ಅಲ್ಲಾಹುವಿನ ಪ್ರಾಪಂಚಿಕ ಆಡಳಿತದಲ್ಲಿನ ಕಾರ್ಯವಿಧಾನದ ಬಗ್ಗೆ ಮೊತ್ತವಾಗಿ ಪರಾಮರ್ಶಿಸುತ್ತದೆ ಎಂದು ಹೆಚ್ಚಿನ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿರುವರು. ಎಲ್ಲ ವಿಷಯಗಳಿಗೂ ಅವನು ಕಾಲಾವಧಿಯನ್ನು ನಿಶ್ಚಯಿಸಿ ದಾಖಲಿಸಿರುವನು. ಎಲ್ಲ ವಿಷಯಗಳಿಗೂ ಅವನು ಕಟ್ಟಳೆಗಳನ್ನಿಟ್ಟಿರುವನು. ಕಾಲಾವಧಿಯನ್ನು ನಿಶ್ಚಯಿಸಿ ಅವನು ಗ್ರಂಥಗಳನ್ನು ಅವತೀರ್ಣಗೊಳಿಸುತ್ತಾನೆ. ಶಾಸನಗಳಲ್ಲಿ ಕೆಲವನ್ನು ಅವನು ಕಾಲಕ್ಕನುಸಾರವಾಗಿ ಬದಲಾಯಿಸುತ್ತಾನೆ ಮತ್ತು ಕೆಲವನ್ನು ಸ್ಥಿರವಾಗಿಡುತ್ತಾನೆ. ಮೂಲಗ್ರಂಥವೆಂದರೆ ಜಗದೊಡೆಯನ ಬಳಿಯಿರುವ ದಾಖಲೆಯಾಗಿದೆ.
(40) ನಾವು ಅವರಿಗೆ ಮುನ್ನೆಚ್ಚರಿಕೆ ನೀಡಿರುವವುಗಳ ಪೈಕಿ ಕೆಲವನ್ನು ನಾವು ತಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮುಂಚೆಯೇ) ನಾವು ತಮ್ಮನ್ನು ಮೃತಪಡಿಸಿದರೂ ತಮ್ಮ ಮೇಲಿರುವುದು ಸಂದೇಶವನ್ನು ತಲುಪಿಸುವ ಹೊಣೆ ಮಾತ್ರ.(451) ವಿಚಾರಣೆ ಮಾಡಬೇಕಾದ ಹೊಣೆಯಿರುವುದು ನಮ್ಮ ಮೇಲಾಗಿದೆ.
451. ಯಾರನ್ನು ಯಾವಾಗ ಹೇಗೆ ಶಿಕ್ಷಿಸಬೇಕೆಂಬುದನ್ನು ತೀರ್ಮಾನಿಸುವವನು ಅಲ್ಲಾಹು ಮಾತ್ರವಾಗಿರುವನು. ಕೆಲವೊಮ್ಮೆ ಪ್ರವಾದಿಗಳು ನೋಡುತ್ತಿದ್ದ ಹಾಗೆಯೇ ಅಲ್ಲಾಹುವಿನ ಶಿಕ್ಷಾಕ್ರಮವು ಜರಗಲೂಬಹುದು ಅಥವಾ ಕೆಲವೊಮ್ಮೆ ಅಕ್ರಮಿಗಳಿಗೆ ಒಂದು ಅವಧಿಯವರೆಗೆ ಕಾಲಾವಕಾಶ ನೀಡಲಾಗಲೂಬಹುದು.
(41) ನಾವು ಭೂಮಿಯನ್ನು ಅದರ ವಿವಿಧ ತುದಿಗಳಿಂದ ಕುಗ್ಗಿಸುತ್ತಿರುವುದನ್ನು ಅವರು ಕಾಣಲಿಲ್ಲವೇ?(452) ಅಲ್ಲಾಹು ವಿಧಿ ನೀಡುವನು. ಅವನ ವಿಧಿಯನ್ನು ತಿದ್ದುಪಡಿ ಮಾಡುವವರಾರೂ ಇಲ್ಲ. ಅವನು ಅತಿವೇಗವಾಗಿ ವಿಚಾರಣೆ ಮಾಡುವವನಾಗಿರುವನು.
452. ಒಂದು ಕಾಲದಲ್ಲಿ ಅರೇಬಿಯಾ ಸಂಪೂರ್ಣವಾಗಿ ಬಹುದೇವಾರಾಧಕರ ಅಧೀನದಲ್ಲಿತ್ತು. ಅರೇಬಿಯಾದ ಭೂಪಟದಲ್ಲಿ ಇಸ್ಲಾಮ್‍ಗೆ ಯಾವುದೇ ಸ್ಥಾನವಿರಲಿಲ್ಲ. ಆದರೆ ಇಸ್ಲಾಮೀ ಸಂದೇಶಪ್ರಚಾರ ಮತ್ತು ಧರ್ಮಸಮರವು ಗೆಲುವು ಸಾಧಿಸಲು ತೊಡಗಿದ ಬಳಿಕ ಬಹುದೇವಾರಾಧಕರ ವಶದಲ್ಲಿದ್ದ ಪ್ರದೇಶಗಳು ಕುಗ್ಗಲಾರಂಭಿಸಿದವು. ಕಾಲಕ್ರಮೇಣ ಅರೇಬಿಯಾ ಸಂಪೂರ್ಣವಾಗಿ ಇಸ್ಲಾಮೀ ರಾಷ್ಟ್ರದ ಭಾಗವಾಗಿ ಮಾರ್ಪಟ್ಟಿತು. ಆ ಬಳಿಕ ಅದು ಇತರ ದೇಶಗಳಿಗೂ ವ್ಯಾಪಿಸಿತು.
(42) ಇವರಿಗಿಂತ ಮುಂಚಿನವರೂ ಸಂಚು ಹೂಡಿರುವರು. ಆದರೆ ತಂತ್ರಗಳೆಲ್ಲವೂ ಅಲ್ಲಾಹುವಿಗಿರುವುದಾಗಿದೆ. ಪ್ರತಿಯೊಬ್ಬ ವ್ಯಕ್ತಿ ಏನು ಮಾಡುತ್ತಿರುವನು ಎಂಬುದನ್ನು ಅವನು ಅರಿಯುವನು. ಜಗತ್ತಿನ ಪರ್ಯಾವಸಾನವು ಯಾರ ಪಾಲಿಗೆ ಅನುಕೂಲಕರವಾಗಿರುವುದೆಂದು ಸತ್ಯನಿಷೇಧಿಗಳು ತರುವಾಯ ಅರಿತುಕೊಳ್ಳುವರು.
(43) ಸತ್ಯನಿಷೇಧಿಗಳು ಹೇಳುವರು: “ತಾವು (ಅಲ್ಲಾಹುವಿನಿಂದ) ಕಳುಹಿಸಲ್ಪಟ್ಟವರಲ್ಲ”. ತಾವು ಹೇಳಿರಿ: “ನನ್ನ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿ ಅಲ್ಲಾಹು ಸಾಕು ಮತ್ತು ಯಾರ ಬಳಿ ಗ್ರಂಥದ ಜ್ಞಾನವಿದೆಯೋ ಅವರು ಸಾಕು”.