(1) ಅಲಿಫ್ ಲಾಮ್ ರಾ. ಇವು ಗ್ರಂಥದ ಮತ್ತು ಸ್ಪಷ್ಟವಾದ ಕುರ್ಆನ್ನ ಸೂಕ್ತಿಗಳಾಗಿವೆ.
(2) ನಾವು ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೆಲವೊಮ್ಮೆ ಸತ್ಯನಿಷೇಧಿಗಳು ಆಶಿಸುವರು.
(3) ತಾವು ಅವರನ್ನು ಬಿಟ್ಟುಬಿಡಿರಿ. ಅವರು ತಿನ್ನುತ್ತಲೂ, ಸುಖವಾಗಿ ಜೀವಿಸುತ್ತಲೂ, ಆಸೆ ಆಕಾಂಕ್ಷೆಗಳಲ್ಲಿ ಮಗ್ನರಾಗುತ್ತಲೂ ಇರಲಿ. (ತರುವಾಯ) ಅವರು ಅರಿತುಕೊಳ್ಳುವರು.
(4) ನಾವು ಯಾವುದೇ ನಾಡನ್ನೂ ಅದಕ್ಕೆ ನಿಶ್ಚಿತವಾದ ಒಂದು ಅವಧಿಯನ್ನು ನೀಡಲಾಗಿರುವ ಹೊರತು ನಾಶಮಾಡಿಲ್ಲ.
(5) ಯಾವುದೇ ಜನತೆಯೂ ಅದರ ಅವಧಿಯನ್ನು ದಾಟಿಹೋಗಲಾರದು. (ಅವಧಿಯನ್ನು ಬಿಟ್ಟು) ಅವರು ಹಿಂದಕ್ಕೂ ಹೋಗಲಾರರು.
(6) ಅವರು (ಸತ್ಯನಿಷೇಧಿಗಳು) ಹೇಳಿದರು: “ಓ ದಿವ್ಯ ಸಂದೇಶ ಅವತೀರ್ಣಗೊಂಡಿರುವ ಮನುಷ್ಯನೇ! ಖಂಡಿತವಾಗಿಯೂ ತಾವೊಬ್ಬ ಹುಚ್ಚರಾಗಿದ್ದೀರಿ.
(7) ತಾವು ಸತ್ಯಸಂಧರಲ್ಲಿ ಸೇರಿದವರಾಗಿದ್ದರೆ ತಾವೇಕೆ ನಮ್ಮ ಬಳಿಗೆ ಮಲಕ್ಗಳನ್ನು ತರುವುದಿಲ್ಲ?”(469)
469. ಒಬ್ಬರು ಅಲ್ಲಾಹುವಿನ ಸಂದೇಶವಾಹಕರಾಗಬೇಕಾದರೆ ಅವರೊಂದಿಗೆ ಮಲಕ್ಗಳನ್ನು ಕೂಡ ಕಳುಹಿಸಲಾಗಬೇಕು ಎಂಬುದು ಅವರ ವಾದವಾಗಿತ್ತು.
(8) ಆದರೆ ಸಮರ್ಪಕವಾದ ಕಾರಣವಿರುವ ಹೊರತು ನಾವು ಮಲಕ್ಗಳನ್ನು ಇಳಿಸಲಾರೆವು. ಅಂತಹ ಸಂದರ್ಭದಲ್ಲಿ ಅವರಿಗೆ (ಸತ್ಯನಿಷೇಧಿಗಳಿಗೆ) ಕಾಲಾವಕಾಶವನ್ನು ನೀಡಲಾಗದು.(470)
470. ಮಲಕ್ಗಳನ್ನು ಕಳುಹಿಸಿದ ಬಳಿಕವೂ ಅವರು ವಿಶ್ವಾಸವಿಡುವುದಿಲ್ಲವೆಂದಾದರೆ, ಬಳಿಕ ಅಲ್ಲಾಹುವಿನ ಶಿಕ್ಷೆಯು ಬರುವುದು ತಡವಾಗಲಾರದು.
(9) ಖಂಡಿತವಾಗಿಯೂ ಈ ಉಪದೇಶವನ್ನು ಅವತೀರ್ಣಗೊಳಿಸಿದವರು ನಾವಾಗಿರುವೆವು. ಖಂಡಿತವಾಗಿಯೂ ಅದನ್ನು ನಾವು ಸಂರಕ್ಷಿಸುವೆವು.(471)
471. ಯಾವುದೇ ರೀತಿಯ ಬದಲಾವಣೆಗಾಗಲಿ, ತಿದ್ದುಪಡಿಗಾಗಲಿ ಒಳಗಾಗದಂತೆ ಅಲ್ಲಾಹು ಆದರಣೀಯ ಕುರ್ಆನನ್ನು ಅಂತ್ಯದಿನದ ತನಕ ಸಂರಕ್ಷಿಸುವನು.
(10) ಖಂಡಿತವಾಗಿಯೂ ತಮಗಿಂತ ಮುಂಚೆ ಪೂರ್ವಿಕರ ಅನೇಕ ಪಂಗಡಗಳೆಡೆಗೆ ನಾವು ಸಂದೇಶವಾಹಕರನ್ನು ಕಳುಹಿಸಿದ್ದೆವು.
(11) ಅವರೆಡೆಗೆ ಯಾವುದೇ ಸಂದೇಶವಾಹಕರು ಬಂದಾಗಲೂ ಅವರನ್ನು ಅವರು ಅಪಹಾಸ್ಯ ಮಾಡದೆ ಬಿಟ್ಟಿರಲಿಲ್ಲ.
(12) ಹೀಗೆ ಅಪರಾಧಿಗಳ ಹೃದಯಗಳಲ್ಲಿ ಅದನ್ನು (ಅಪಹಾಸ್ಯವನ್ನು) ನಾವು ನುಸುಳಿಸಿ ಬಿಡುವೆವು.
(13) ಪೂರ್ವಿಕರ ಮೇಲೆ (ಅಲ್ಲಾಹುವಿನ) ಕ್ರಮವು ಜರುಗಿಯೂ ಸಹ ಅವರು ಇದರಲ್ಲಿ ವಿಶ್ವಾಸವಿಡಲಾರರು.
(14) ಅವರಿಗೆ ನಾವು ಆಕಾಶದಿಂದ ಒಂದು ದ್ವಾರವನ್ನು ತೆರೆದುಕೊಟ್ಟು, ತರುವಾಯ ಅದರ ಮೂಲಕ ಅವರು ಏರಿಹೋದರೂ ಸಹ.
(15) ಅವರು ಹೇಳುವರು: “ನಮ್ಮ ಕಣ್ಣುಗಳಿಗೆ ಅಮಲು ಬಾಧಿಸಿದೆ. ಅಲ್ಲ, ನಾವು ಮಾಟಕ್ಕೊಳಗಾದ ಒಂದು ಜನತೆಯಾಗಿರುವೆವು”.
(16) ನಾವು ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿರುವೆವು ಮತ್ತು ವೀಕ್ಷಕರಿಗಾಗಿ ಅವುಗಳನ್ನು ಅಲಂಕರಿಸಿರುವೆವು.
(17) ಬಹಿಷ್ಕೃತರಾಗಿರುವ ಎಲ್ಲ ಸೈತಾನರಿಂದಲೂ ನಾವು ಅದನ್ನು ಸಂರಕ್ಷಿಸಿರುವೆವು.
(18) ಆದರೆ ಕದ್ದಾಲಿಸಲು ಯತ್ನಿಸುವವನ ಹೊರತು. ಆಗ ಪ್ರತ್ಯಕ್ಷ ಅಗ್ನಿಜ್ವಾಲೆಯೊಂದು ಅವನನ್ನು ಹಿಂಬಾಲಿಸುವುದು.(472)
472. ಆಕಾಶಲೋಕದಿಂದ ಮಾಹಿತಿಗಳನ್ನು ಕದ್ದಾಲಿಸಲು ಸೈತಾನರು ಪ್ರಯತ್ನಿಸುವರು, ಆಗ ಅವರೆಡೆಗೆ ಅಗ್ನಿಜ್ವಾಲೆಗಳು ಎಸೆಯಲ್ಪಡುವುದೆಂದು ಕುರ್ಆನ್ನ ಅನೇಕ ಕಡೆ ಕಾಣಬಹುದು. ಮಲಕ್ಗಳ ಮತ್ತು ಪಿಶಾಚಿ (ಜಿನ್ನ್)ಗಳ ಪ್ರಕೃತಿ ಮತ್ತು ಅವರ ಕಾರ್ಯವಿಧಾನದ ಬಗ್ಗೆ ಕುರ್ಆನ್ ಮತ್ತು ಪ್ರವಾದಿ(ಸ) ರವರ ವಚನಗಳು ತಿಳಿಸಿರುವುದಕ್ಕಿಂತ ಹೆಚ್ಚಾಗಿ ಮನುಷ್ಯರಿಗೆ ಏನನ್ನೂ ತಿಳಿಯಲು ಸಾಧ್ಯವಾಗಲಾರದು.
(19) ನಾವು ಭೂಮಿಯನ್ನು ವಿಶಾಲಗೊಳಿಸಿರುವೆವು. ಅದರಲ್ಲಿ ನಾಟಿ ನಿಲ್ಲುವ ಪರ್ವತಗಳನ್ನು ಸ್ಥಾಪಿಸಿರುವೆವು. ಅದರಲ್ಲಿ ನಾವು ಪ್ರಮಾಣವನ್ನು ನಿಶ್ಚಯಿಸಲಾದ ಸಕಲ ವಸ್ತುಗಳನ್ನೂ(473) ಬೆಳೆಸಿರುವೆವು.
473. ಭೂಮಿಯಲ್ಲಿ ಅಲ್ಲಾಹು ಬೆಳೆಸಿದ ಸಸ್ಯಗಳ ಗುಣಗಣಗಳು ನಿಶ್ಚಿತ ಹಾಗೂ ಸಮತೋಲನವಾಗಿದೆಯೆಂದು ಇದರಿಂದ ಗ್ರಹಿಸಬಹುದು. ‘ಮೌಝೂನ್’ ಎಂಬ ಪದಕ್ಕೆ ತೂಕ ಅಥವಾ ಪ್ರಮಾಣ ನಿಶ್ಚಯಿಸಲ್ಪಟ್ಟದ್ದು, ಸಮತೋಲನ ಇತ್ಯಾದಿ ಅರ್ಥಗಳಿವೆ.
(20) ನಿಮಗೂ, ಯಾರಿಗೆ ನೀವು ಅನ್ನಾಹಾರ ಒದಗಿಸುವುದಿಲ್ಲವೋ ಅವರಿಗೂ, ನಾವು ಅದರಲ್ಲಿ ಜೀವನ ಮಾರ್ಗಗಳನ್ನು ಮಾಡಿಕೊಟ್ಟಿರುವೆವು.(474)
474. ಗರ್ಭಸ್ಥ ಶಿಶುಗಳ ಸಹಿತ ಸರ್ವ ಜೀವರಾಶಿಗಳಿಗೂ ಅವುಗಳ ಪ್ರಕೃತಿಗೆ ಸರಿದೂಗುವ ಆಹಾರವನ್ನೊದಗಿಸುವ ಅಲ್ಲಾಹುವಿಗಿಂತ ದೊಡ್ಡ ಅನುಗ್ರಹದಾತನು ಇನ್ನಾರಿರುವನು?
(21) ಯಾವುದೇ ವಸ್ತುವೂ ಇಲ್ಲ; ಅದರ ಖಜಾನೆಗಳು ನಮ್ಮ ಬಳಿಯಿರುವ ಹೊರತು. (ಆದರೆ) ಒಂದು ನಿರ್ದಿಷ್ಟ ಪ್ರಮಾಣದೊಂದಿಗಲ್ಲದೆ ಅದನ್ನು ನಾವು ಇಳಿಸಲಾರೆವು.(475)
475. ಅಲ್ಲಾಹುವಿಗೆ ಯಾವುದೇ ವಸ್ತುವನ್ನೂ ಹೇರಳವಾಗಿ ಸೃಷ್ಟಿಸಲು ಸಾಧ್ಯವಿದೆ. ಆದರೆ ನಿಗದಿತ ಪ್ರಮಾಣದಲ್ಲೇ ಹೊರತು ಅವನು ಏನೊಂದನ್ನೂ ಸೃಷ್ಟಿಸುವುದಿಲ್ಲ.
(22) ನಾವು ಮೋಡಗಳನ್ನು ಉತ್ಪಾದಿಸುವ ಗಾಳಿಯನ್ನು(476) ಕಳುಹಿಸುವೆವು. ತರುವಾಯ ಆಕಾಶದಿಂದ ಮಳೆನೀರನ್ನು ಸುರಿಸುವೆವು. ತರುವಾಯ ಅದನ್ನು ನಿಮಗೆ ಕುಡಿಯಲು ನೀಡುವೆವು. ಅದನ್ನು ಸಂಗ್ರಹಿಸಿಡಲು ನಿಮಗಂತೂ ಸಾಧ್ಯವಾಗಲಾರದು.(477)
476. ‘ಲವಾಕಿಹ್’ ಎಂಬ ಪದವನ್ನು ಸಸ್ಯಗಳಲ್ಲಿ ಪರಾಗಸ್ಪರ್ಶ ನಡೆಸುವ ಗಾಳಿ ಎಂದು ಸಹ ವ್ಯಾಖ್ಯಾನಿಸಲಾಗಿದೆ. ವಾತಾವರಣದಲ್ಲಿರುವ ನೀರಾವಿಯನ್ನು ಕಾರ್ಮೋಡಗಳನ್ನಾಗಿ ಮಾರ್ಪಡಿಸುವುದರಲ್ಲಿ ಮತ್ತು ಕಾರ್ಮೋಡಗಳನ್ನು ವಿವಿಧ ಭೂಪ್ರದೇಶಗಳೆಡೆಗೆ ರವಾನಿಸುವುದರಲ್ಲಿ ಗಾಳಿಯ ಪಾತ್ರವು ಗಮನಾರ್ಹವಾಗಿದೆ. 477. ಅತಿದೀರ್ಘ ಕಾಲಕ್ಕಾಗಿ ನೀರನ್ನು ಸಂಗ್ರಹಿಸಿಡಲು ಮಾನವನಿಗೆ ಸಾಧ್ಯವಿಲ್ಲ. ನೀರಾವಿ-ಕಾರ್ಮೋಡ-ಮಳೆ ಈ ರೀತಿಯ ಒಂದು ಚಕ್ರ ನಿಯಮಾವಳಿಯು ಇಲ್ಲದಿರುತ್ತಿದ್ದರೆ ಇಲ್ಲಿನ ಜೀವನವೇ ದುಸ್ತರವಾಗುತ್ತಿತ್ತು.
(23) ಖಂಡಿತವಾಗಿಯೂ ಜೀವ ನೀಡುವವರು ಮತ್ತು ಮೃತಪಡಿಸುವವರು ನಾವಾಗಿರುವೆವು. (ಎಲ್ಲದರ) ಉತ್ತರಾಧಿಕಾರಿಗಳೂ ನಾವಾಗಿರುವೆವು.
(24) ಖಂಡಿತವಾಗಿಯೂ ನಿಮ್ಮ ಪೈಕಿ ಮುಂಚೆ ಗತಿಸಿದವರನ್ನು (ಪೂರ್ವಿಕರನ್ನು) ನಾವು ಅರಿತಿರುವೆವು. ನಂತರದವರನ್ನೂ (ಮುಂದೆ ಬರುವವರನ್ನೂ) ನಾವು ಅರಿತಿರುವೆವು.(478)
478. ಜೀವನ, ಮರಣ ಹಾಗೂ ಕರ್ಮಗಳಲ್ಲಿ ಮುಂದೆ ಇರುವವರನ್ನು ಮತ್ತು ಹಿಂದಿರುವವರನ್ನು ಅಲ್ಲಾಹು ಸಮಾನವಾಗಿ ಅರಿಯುತ್ತಾನೆ.
(25) ಖಂಡಿತವಾಗಿಯೂ ತಮ್ಮ ರಬ್ ಅವರನ್ನು ಒಟ್ಟುಗೂಡಿಸುವನು. ಖಂಡಿತವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞಾನಿಯೂ ಆಗಿರುವನು.
(26) ಕಪ್ಪಾಗಿರುವ, (ತಟ್ಟಿದರೆ) ಶಬ್ದವನ್ನುಂಟು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ನಾವು ಮನುಷ್ಯನನ್ನು ಸೃಷ್ಟಿಸಿದೆವು.
(27) ಜಿನ್ನ್ಗಳನ್ನು ನಾವು ಅದಕ್ಕಿಂತ ಮುಂಚೆಯೇ ಅತಿಶಾಖವಿರುವ ಅಗ್ನಿಜ್ವಾಲೆಯಿಂದ ಸೃಷ್ಟಿಸಿದೆವು.
(28) ತಮ್ಮ ರಬ್ ಮಲಕ್ಗಳೊಂದಿಗೆ ಹೇಳಿದ ಸಂದರ್ಭ: “ಕಪ್ಪಾಗಿರುವ, (ತಟ್ಟಿದರೆ) ಶಬ್ದವನ್ನುಂಟು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಖಂಡಿತವಾಗಿಯೂ ನಾನು ಒಬ್ಬ ಮನುಷ್ಯನನ್ನು ಸೃಷ್ಟಿಸುವೆನು.
(29) ತರುವಾಯ ನಾನು ಅವನಿಗೆ ಪೂರ್ಣ ರೂಪವನ್ನು ನೀಡಿ, ಅವನಿಗಾಗಿ ಸೃಷ್ಟಿಸಲಾಗಿರುವ ಆತ್ಮವನ್ನು ಅವನಲ್ಲಿ ಊದಿದರೆ ನೀವು ಅವನಿಗೆ ಸಾಷ್ಟಾಂಗವೆರಗಿರಿ”.(479)
479. ಈ ಸುಜೂದ್ (ಸಾಷ್ಟಾಂಗ) ಭೂಮಿಯಲ್ಲಿ ಸ್ವತಂತ್ರವಾದ ಕಾರ್ಯ ನಿರ್ವಹಣೆಯನ್ನು ವಹಿಸಿಕೊಡಲಾಗಿರುವ ಮನುಷ್ಯ ಎಂಬ ಸೃಷ್ಟಿಗೆ ಗೌರವವನ್ನು ಸೂಚಿಸುವ ಸಲುವಾಗಿದೆ. ಇದು ಆರಾಧನಾಭಾವವನ್ನು ಹೊಂದಿರುವ ಸುಜೂದ್ ಅಲ್ಲ.
(30) ಆಗ ಮಲಕ್ಗಳೆಲ್ಲರೂ ಒಟ್ಟಾಗಿ ಸಾಷ್ಟಾಂಗವೆರಗಿದರು.
(31) ಇಬ್ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರೊಂದಿಗೆ ಸೇರಲು ನಿರಾಕರಿಸಿದನು.
(32) ಅಲ್ಲಾಹು ಕೇಳಿದನು: “ಓ ಇಬ್ಲೀಸ್! ನೀನು ಸಾಷ್ಟಾಂಗವೆರಗಿದವರಲ್ಲಿ ಸೇರದಿರಲು ಕಾರಣವೇನು?”
(33) ಅವನು ಹೇಳಿದನು: “ನೀನು ಕಪ್ಪಾಗಿರುವ, (ತಟ್ಟಿದರೆ) ಶಬ್ದವನ್ನುಂಟು ಮಾಡುವ, ಬದಲಾದ ಒಣ ಜೇಡಿಮಣ್ಣಿನಿಂದ ಸೃಷ್ಟಿಸಿದ ಒಬ್ಬ ಮನುಷ್ಯನಿಗೆ ಸಾಷ್ಟಾಂಗವೆರಗ ಬೇಕಾದವನಲ್ಲ ನಾನು!”
(34) ಅಲ್ಲಾಹು ಹೇಳಿದನು: “ನೀನು ಇಲ್ಲಿಂದ ಹೊರಟು ಹೋಗು. ಖಂಡಿತವಾಗಿಯೂ ನೀನು ಬಹಿಷ್ಕೃತನಾಗಿರುವೆ.
(35) ಖಂಡಿತವಾಗಿಯೂ ವಿಚಾರಣೆಯ ದಿನದ ತನಕ ಶಾಪವು ನಿನ್ನ ಮೇಲಿರುವುದು”.
(36) ಅವನು ಹೇಳಿದನು: “ನನ್ನ ಪ್ರಭೂ! ಅವರನ್ನು ಪುನರುತ್ಥಾನಗೊಳಿಸಲಾಗುವ ದಿನದ ತನಕ ನೀನು ನನಗೆ ಕಾಲಾವಕಾಶವನ್ನು ನೀಡು”.
(37) ಅಲ್ಲಾಹು ಹೇಳಿದನು: “ಖಂಡಿತವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿದವನಾಗಿರುವೆ .
(38) ಆ ನಿಶ್ಚಿತಾವಧಿಯು ಬರುವ ದಿನದ ತನಕ”.
(39) ಅವನು ಹೇಳಿದನು: “ನನ್ನ ಪ್ರಭೂ! ನೀನು ನನ್ನನ್ನು ಪಥಭ್ರಷ್ಟಗೊಳಿಸಿರುವುದರಿಂದಾಗಿ ಖಂಡಿತವಾಗಿಯೂ ನಾನು ಅವರಿಗೆ ಭೂಲೋಕದಲ್ಲಿ (ದುಷ್ಕೃತ್ಯಗಳನ್ನು) ಆಕರ್ಷಕಗೊಳಿಸಿ ತೋರಿಸುವೆನು ಮತ್ತು ಅವರೆಲ್ಲರನ್ನೂ ನಾನು ಪಥಭ್ರಷ್ಟಗೊಳಿಸುವೆನು.
(40) ಅವರ ಪೈಕಿ ನಿನ್ನ ನಿಷ್ಕಳಂಕ ದಾಸರಾಗಿರುವವರ ಹೊರತು”.(480)
480. ಅಲ್ಲಾಹುವಿನ ನಿಷ್ಕಳಂಕ ದಾಸರನ್ನು ದಾರಿಗೆಡಿಸಲು ಸಾಧ್ಯವಾದೀತೆಂಬ ನಿರೀಕ್ಷೆಯು ಇಬ್ಲೀಸನಿಗಿರಲಿಲ್ಲ.
(41) ಅಲ್ಲಾಹು ಹೇಳಿದನು: “ಇದು ನನ್ನೆಡೆಗಿರುವ ನೇರವಾದ ಮಾರ್ಗವಾಗಿದೆ.(481)
481. ‘ಇದು ನಾನು ತೋರಿಸಿಕೊಡಬೇಕಾದ ನೇರ ಮಾರ್ಗವಾಗಿದೆ’ ಎಂದೂ ಇದನ್ನು ವ್ಯಾಖ್ಯಾನಿಸಲಾಗಿದೆ.
(42) ಖಂಡಿತವಾಗಿಯೂ ನಿನ್ನನ್ನು ಅನುಸರಿಸಿದ ದುರ್ಮಾರ್ಗಿಗಳ ಮೇಲೆಯೇ ಹೊರತು ನನ್ನ ದಾಸರ ಮೇಲೆ ನಿನಗೆ ಯಾವುದೇ ಅಧಿಕಾರವಿರಲಾರದು”.
(43) ಖಂಡಿತವಾಗಿಯೂ ಅವರೆಲ್ಲರಿಗೂ ನಿಶ್ಚಯಿಸಲಾಗಿರುವ ಸ್ಥಾನವು ನರಕಾಗ್ನಿಯಾಗಿದೆ.
(44) ಅದಕ್ಕೆ ಏಳು ದ್ವಾರಗಳಿವೆ. ಪ್ರತಿಯೊಂದು ದ್ವಾರದ ಮೂಲಕವೂ ಪ್ರವೇಶಿಸುವ ಸಲುವಾಗಿ ಅವರ ಪೈಕಿ ವಿಂಗಡಿಸಲಾಗಿರುವ ವಿಭಾಗಗಳಿವೆ.
(45) ಖಂಡಿತವಾಗಿಯೂ ಭಯಭಕ್ತಿ ಪಾಲಿಸಿದವರು ಉದ್ಯಾನಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು.
(46) “ನಿರ್ಭೀತರಾಗಿ ಶಾಂತಿಯೊಂದಿಗೆ ಅದನ್ನು ಪ್ರವೇಶಿಸಿರಿ” (ಎಂದು ಅವರನ್ನು ಸ್ವಾಗತಿಸಲಾಗುವುದು).
(47) ಅವರ ಹೃದಯಗಳಲ್ಲಿ ವಿದ್ವೇಷವೇನಾದರೂ ಇದ್ದರೆ ನಾವದನ್ನು ತೆಗೆದುಹಾಕುವೆವು. ಅವರು ಸಹೋದರರಂತೆ ಮಂಚಗಳಲ್ಲಿ(482) ಪರಸ್ಪರ ಎದುರು ಬದುರಾಗಿ ಆಸೀನರಾಗುವರು.
482. ‘ಸುರುರ್’ ಎಂಬುದು ‘ಸರೀರ್’ ಎಂಬ ಪದದ ಬಹುವಚನವಾಗಿದೆ. ಮಂಚಗಳಿಗಷ್ಟೇ ಅಲ್ಲದೆ ವಿಶೇಷ ರೀತಿಯ ಆಸನಗಳಿಗೂ ಈ ಪದವನ್ನು ಬಳಸಲಾಗುತ್ತದೆ.
(48) ಅಲ್ಲಿ ಯಾವುದೇ ದಣಿವು ಅವರನ್ನು ಸ್ಪರ್ಶಿಸಲಾರದು ಮತ್ತು ಅವರನ್ನು ಅಲ್ಲಿಂದ ಹೊರಹಾಕಲ್ಪಡಲಾಗದು.
(49) (ಓ ಪ್ರವಾದಿಯವರೇ!) ಖಂಡಿತವಾಗಿಯೂ ನಾನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವೆನೆಂದು ನನ್ನ ದಾಸರಿಗೆ ತಿಳಿಸಿಕೊಡಿರಿ.
(50) ಖಂಡಿತವಾಗಿಯೂ ನನ್ನ ಶಿಕ್ಷೆಯು ಅತ್ಯಧಿಕ ಯಾತನೆಯಿರುವ ಶಿಕ್ಷೆಯೆಂದೂ (ತಿಳಿಸಿಕೊಡಿರಿ).
(51) ಇಬ್ರಾಹೀಮ್ರ (ಬಳಿಗೆ ಬಂದ) ಅತಿಥಿಗಳ ಬಗ್ಗೆ ತಾವು ಅವರಿಗೆ ತಿಳಿಸಿಕೊಡಿರಿ.
(52) ಅವರು ಇಬ್ರಾಹೀಮ್ರ ಬಳಿಗೆ ಬಂದು “ಸಲಾಮ್” ಎಂದು ಹೇಳಿದ ಸಂದರ್ಭ. ಇಬ್ರಾಹೀಮ್ ಹೇಳಿದರು: “ಖಂಡಿತವಾಗಿಯೂ ನಾವು ನಿಮ್ಮ ಬಗ್ಗೆ ಭಯಭೀತರಾಗಿರುವೆವು”.(483)
483. ಇಬ್ರಾಹೀಮ್(ಅ) ರವರು ಅತಿಥಿಗಳಿಗೆ ಆಹಾರ ನೀಡಿದಾಗ ಅವರು ಅದನ್ನು ಸೇವಿಸಲಿಲ್ಲ. ಅದನ್ನು ಕಂಡಾಗ ಅವರ ಬಗ್ಗೆ ಇಬ್ರಾಹೀಮ್(ಅ) ರಿಗೆ ಭಯವುಂಟಾಯಿತೆಂದು 11:70ರಲ್ಲಿ ಹೇಳಲಾಗಿದೆ.
(53) ಅವರು ಹೇಳಿದರು: “ತಾವು ಭಯಪಡದಿರಿ! ಖಂಡಿತವಾಗಿಯೂ ನಾವು ತಮಗೆ ಜ್ಞಾನಿಯಾಗಿರುವ ಒಂದು ಗಂಡುಮಗುವಿನ ಬಗ್ಗೆ ಶುಭವಾರ್ತೆಯನ್ನು ತಿಳಿಸುವೆವು”.
(54) ಇಬ್ರಾಹೀಮ್ ಹೇಳಿದರು: “ನನಗೆ ವೃದ್ಧಾಪ್ಯ ಬಾಧಿಸಿದ ಬಳಿಕವೇ ನೀವು ನನಗೆ ಶುಭವಾರ್ತೆ ತಿಳಿಸುತ್ತಿರುವುದು? ನೀವು ನನಗೆ ಯಾವುದರ ಬಗ್ಗೆ ಶುಭವಾರ್ತೆ ತಿಳಿಸುತ್ತಿದ್ದೀರಿ?”
(55) ಅವರು ಹೇಳಿದರು: “ನಾವು ತಮಗೆ ಶುಭವಾರ್ತೆಯನ್ನು ತಿಳಿಸಿರುವುದು ಒಂದು ಸತ್ಯದ ಬಗ್ಗೆಯಾಗಿದೆ. ಆದುದರಿಂದ ತಾವು ನಿರಾಶೆಪಡುವವರಲ್ಲಿ ಸೇರದಿರಿ”.
(56) ಇಬ್ರಾಹೀಮ್ ಹೇಳಿದರು: “ಪಥಭ್ರಷ್ಟರಾಗಿರುವವರ ಹೊರತು ತನ್ನ ರಬ್ನ ಕಾರುಣ್ಯದ ಬಗ್ಗೆ ನಿರಾಶರಾಗುವವರು ಇನ್ನಾರಿರುವರು?”
(57) ಇಬ್ರಾಹೀಮ್ ಹೇಳಿದರು: “ಓ ದೂತರೇ! (ನೀವು ಬಂದಿರುವ) ನಿಮ್ಮ (ಮುಖ್ಯ) ವಿಷಯವೇನು?”
(58) ಅವರು ಹೇಳಿದರು: “ನಮ್ಮನ್ನು ಅಪರಾಧಿಗಳಾದ ಒಂದು ಜನತೆಯೆಡೆಗೆ ಕಳುಹಿಸಲಾಗಿದೆ.
(59) (ಆದರೆ) ಲೂತ್ರ ಕುಟುಂಬವು ಇದರಿಂದ ಹೊರತಾಗಿದೆ. ಖಂಡಿತವಾಗಿಯೂ ನಾವು ಅವರೆಲ್ಲರನ್ನೂ ರಕ್ಷಿಸುವೆವು.
(60) ಆದರೆ ಅವರ ಪತ್ನಿಯ ಹೊರತು. ಖಂಡಿತವಾಗಿಯೂ ನಾವು ಆಕೆಯನ್ನು ಹಿಂದೆ ಉಳಿದವರಲ್ಲಿ (ಶಿಕ್ಷೆಗೀಡಾಗುವವರಲ್ಲಿ) ಎಣಿಸಿರುವೆವು”.(484)
484. ಅಲ್ಲಾಹು ತೀರ್ಮಾನಿಸಿದ ಸಂಗತಿಯ ಬಗ್ಗೆ ‘ನಾವು ಎಣಿಸಿರುವೆವು’ ಎಂದು ಮಲಕ್ಗಳು ಹೇಳುವುದು ಅಲ್ಲಾಹುವಿನ ತೀರ್ಮಾನವನ್ನು ಜಾರಿಗೊಳಿಸಲು ತೀರ್ಮಾನಿಸಿದೆವು ಎಂಬ ಅರ್ಥದಲ್ಲಾಗಿದೆ. ಅಲ್ಲಾಹುವಿನ ತೀರ್ಮಾನಕ್ಕೆ ವಿರುದ್ಧವಾದ ತೀರ್ಮಾನವನ್ನು ಕೈಗೊಳ್ಳಲು ಮಲಕ್ಗಳಿಗೆ ಸಾಧ್ಯವಿಲ್ಲ.
(61) ತರುವಾಯ ಲೂತ್ರ ಕುಟುಂಬದೆಡೆಗೆ ಆ ದೂತರು ಬಂದಾಗ.
(62) ಲೂತ್ ಹೇಳಿದರು: “ಖಂಡಿತವಾಗಿಯೂ ನೀವು ಅಪರಿಚಿತರಾದ ಜನರಾಗಿದ್ದೀರಿ”.
(63) ಅವರು (ಮಲಕ್ಗಳು) ಹೇಳಿದರು: “ಅಲ್ಲ, ಯಾವುದರ (ಶಿಕ್ಷೆಯ) ಬಗ್ಗೆ ಅವರು (ಜನರು) ಸಂದೇಹದಲ್ಲಿರುವರೋ ಅದರೊಂದಿಗೇ ನಾವು ತಮ್ಮೆಡೆಗೆ ಬಂದಿರುವೆವು.
(64) ನಾವು ತಮ್ಮೆಡೆಗೆ ಸತ್ಯದೊಂದಿಗೇ ಬಂದಿರುವೆವು. ಖಂಡಿತವಾಗಿಯೂ ನಾವು ಸತ್ಯವನ್ನು ನುಡಿಯುವವರಾಗಿರುವೆವು.
(65) ಆದುದರಿಂದ ರಾತ್ರಿಯ ಅಲ್ಪಭಾಗವು ಬಾಕಿಯಿರುವಾಗ ತಾವು ತಮ್ಮ ಕುಟುಂಬದೊಂದಿಗೆ ಪ್ರಯಾಣ ಮಾಡಿರಿ. ತಾವು ಅವರನ್ನು ಹಿಂದಿನಿಂದ ಹಿಂಬಾಲಿಸಿರಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ನಿಮಗೆ ಆದೇಶ ನೀಡಲಾಗುವ ದಿಕ್ಕಿನೆಡೆಗೆ ಸಾಗಿರಿ”.
(66) ಆ ವಿಷಯವನ್ನು, (ಅಂದರೆ) ಬೆಳಗಾಗುವುದರೊಂದಿಗೆ ಇವರ ಬುಡವನ್ನೇ ಕತ್ತರಿಸಿ ಹಾಕಲಾಗುವುದೆಂಬ ವಿಷಯವನ್ನು ನಾವು ಅವರಿಗೆ (ಲೂತ್ರಿಗೆ) ಖಚಿತವಾಗಿ ತಿಳಿಸಿಕೊಟ್ಟೆವು.
(67) ನಗರ ವಾಸಿಗಳು ಹರ್ಷಪಡುತ್ತಾ ಬಂದರು.(485)
485. ಲೂತ್(ಅ) ರವರ ಬಳಿಗೆ ಬಂದ ಯುವಕರನ್ನು ಪ್ರಕೃತಿ ವಿರುದ್ಧ ಲೈಂಗಿಕತೆಗೆ (ಸಲಿಂಗರತಿಗೆ) ಬಳಸಬಹುದೆಂದು ಭಾವಿಸಿ ಅವರು ಬಂದಿದ್ದರು.
(68) ಲೂತ್ ಹೇಳಿದರು: “ಖಂಡಿತವಾಗಿಯೂ ಇವರು ನನ್ನ ಅತಿಥಿಗಳಾಗಿರುವರು. ಆದುದರಿಂದ ನೀವು ನನ್ನನ್ನು ನಾಚಿಕೆಗೀಡು ಮಾಡದಿರಿ.
(69) ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅಪಮಾನ ಮಾಡದಿರಿ”.
(70) ಅವರು ಹೇಳಿದರು: “ತಮ್ಮನ್ನು ನಾವು ಜನರಿಂದ (ಜನರ ವಿಷಯದಲ್ಲಿ ಮಧ್ಯಪ್ರವೇಶಿಸುವುದರಿಂದ) ವಿರೋಧಿಸಿರಲಿಲ್ಲವೇ?”
(71) ಲೂತ್ ಹೇಳಿದರು: “ಇವರು ನನ್ನ ಹೆಣ್ಮಕ್ಕಳು (ಇವರನ್ನು ವಿವಾಹವಾಗಿರಿ). ನೀವು ಮಾಡುವವರಾಗಿದ್ದರೆ.”
(72) ತಮ್ಮ ಜೀವನದ ಮೇಲಾಣೆ!(486) ಖಂಡಿತವಾಗಿಯೂ ಅವರು ತಮ್ಮ ಅಮಲಿನಲ್ಲಿ ವಿಹರಿಸುತ್ತಿರುವರು.
486. ‘ಅಮ್ರ್’ ಎಂಬ ಪದಕ್ಕೆ ಆಯುಷ್ಯ ಅಥವಾ ಜೀವನ ಎಂಬ ಅರ್ಥವಿದೆ. ಅಭಿಸಂಬೋಧಿತನ ಜೀವನದ ಮೇಲೆ ಆಣೆಯಿಟ್ಟು ಮಾಡನಾಡುವ ಶೈಲಿಯು ಅರಬಿಗಳ ಮಧ್ಯೆ ಸಾಮಾನ್ಯವಾಗಿತ್ತು. ಈ ವಾಕ್ಯವನ್ನು ಅಲ್ಲಾಹು ಹೇಳಿರುವುದು ಲೂತ್(ಅ) ರೊಂದಿಗೋ ಅಥವಾ ಮುಹಮ್ಮದ್(ಸ) ರೊಂದಿಗೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ.
(73) ಸೂರ್ಯೋದಯವಾಗುವುದರೊಂದಿಗೆ ಘೋರ ಶಬ್ದವು ಅವರನ್ನು ಹಿಡಿದುಬಿಟ್ಟಿತು.
(74) ತರುವಾಯ ನಾವು ಆ ನಾಡನ್ನು ಬುಡಮೇಲುಗೊಳಿಸಿದೆವು ಮತ್ತು ಅವರ ಮೇಲೆ ಸುಟ್ಟ ಇಟ್ಟಿಗೆಗಳ ಮಳೆಯನ್ನು ಸುರಿಸಿದೆವು.
(75) ವಿವೇಚನೆಯೊಂದಿಗೆ ನೋಡಿ ಗ್ರಹಿಸುವವರಿಗೆ ಖಂಡಿತವಾಗಿಯೂ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
(76) ಖಂಡಿತವಾಗಿಯೂ ಅದು (ಆ ನಾಡು) (ಇಂದೂ) ಅಸ್ತಿತ್ವದಲ್ಲಿರುವ ಹಾದಿಯಲ್ಲಿಯೇ ಇದೆ.(487)
487. ಅರಬರ ವಾಣಿಜ್ಯ ಮಾರ್ಗಗಳ ಪೈಕಿ ಕೆಲವು ನಾಶ ಮಾಡಲಾದ ಸೊದೋಮ್ ಪ್ರದೇಶವನ್ನು ಒಳಗೊಂಡಿರುವ ಮೃತಸಮುದ್ರದ ಸನಿಹದಿಂದ ಹಾದುಹೋಗುತ್ತಿತ್ತು. ಕುರ್ಆನ್ ಅವತೀರ್ಣವಾಗುವ ಕಾಲದಲ್ಲಿ ಆ ನಾಡಿನ ನಾಶಗೊಂಡ ಅವಶೇಷಗಳು ಆ ಪ್ರದೇಶದಲ್ಲಿ ಕಾಣಬಹುದಾಗಿತ್ತು ಎಂದು ಅನೇಕ ಸೂಕ್ತಿಗಳು ತಿಳಿಸುತ್ತವೆ.
(77) ಖಂಡಿತವಾಗಿಯೂ ಅದರಲ್ಲಿ ವಿಶ್ವಾಸಿಗಳಿಗೆ ಒಂದು ದೃಷ್ಟಾಂತವಿದೆ.
(78) ಖಂಡಿತವಾಗಿಯೂ ವೃಕ್ಷವನದಲ್ಲಿ(488) ವಾಸಿಸುತ್ತಿದ್ದ ಜನರು ಅಕ್ರಮಿಗಳಾಗಿದ್ದರು.
488. ‘ಐಕತ್’ (ವೃಕ್ಷವನ) ಎಂದರೆ ವೃಕ್ಷಗಳಿಂದ ತುಂಬಿ ತುಳುಕುವ ಪ್ರದೇಶ ಎಂದರ್ಥ. ಇದು ಮದ್ಯನ್ ಭೂಪ್ರದೇಶದ ಸಮೀಪವಿತ್ತು. ಶುಐಬ್(ಅ) ರವರು ಅವರೆಡೆಗೆ ಕಳುಹಿಸಲ್ಪಟ್ಟ ಪ್ರವಾದಿಯಾಗಿದ್ದರು.
(79) ಆದುದರಿಂದ ನಾವು ಅವರ ವಿರುದ್ಧ ಶಿಕ್ಷಾಕ್ರಮಗಳನ್ನು ಕೈಗೊಂಡೆವು. ಖಂಡಿತವಾಗಿಯೂ ಈ ಎರಡು ಪ್ರದೇಶಗಳೂ(489) ಬಯಲು ಹಾದಿಯಲ್ಲಿಯೇ ಇವೆ.
489. ಸೊದೋಮ್ ಪ್ರದೇಶ ಮತ್ತು ಮದ್ಯನ್ ಪರಿಸರ.
(80) ಖಂಡಿತವಾಗಿಯೂ ಹಿಜ್ರ್(490) ನಿವಾಸಿಗಳು ಸಂದೇಶವಾಹಕರನ್ನು ನಿಷೇಧಿಸಿದರು.
490. ಹಿಜ್ರ್ ಮದೀನಾ ಮತ್ತು ತಬೂಕ್ನ ಮಧ್ಯೆಯಿರುವ ಪ್ರದೇಶವಾಗಿದೆ. ಸಮೂದ್ ಜನಾಂಗವು ಅಲ್ಲಿ ವಾಸವಾಗಿತ್ತು.
(81) ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವರು ಅವುಗಳನ್ನು ಕಡೆಗಣಿಸಿದರು.
(82) ಅವರು ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸಿ ನಿರ್ಭೀತರಾಗಿ ಜೀವಿಸುತ್ತಿದ್ದರು.
(83) ಹೀಗಿರುವಾಗ ಪ್ರಭಾತವೇಳೆಯಲ್ಲಿ ಘೋರವಾದ ಒಂದು ಶಬ್ದವು ಅವರನ್ನು ಹಿಡಿದುಬಿಟ್ಟಿತು.
(84) ಆಗ ಅವರು ಸಂಪಾದಿಸಿದ ಯಾವುದೂ ಸಹ ಅವರ ಪ್ರಯೋಜನಕ್ಕೆ ಬರಲಿಲ್ಲ.
(85) ಆಕಾಶಗಳು ಮತ್ತು ಭೂಮಿ ಹಾಗೂ ಅವೆರಡರ ಮಧ್ಯೆಯಿರುವುದನ್ನು ಸತ್ಯದೊಂದಿಗೇ ವಿನಾ ನಾವು ಸೃಷ್ಟಿಸಿಲ್ಲ. ಖಂಡಿತವಾಗಿಯೂ ಅಂತ್ಯದಿನವು ಬರಲಿರುವುದು. ಆದುದರಿಂದ ತಾವು ಸುಂದರವಾದ ಕ್ಷಮೆಯೊಂದಿಗೆ ಕ್ಷಮಿಸಿರಿ.(491)
491. ಸತ್ಯನಿಷೇಧಿಗಳು ಶಿಕ್ಷಿಸಲ್ಪಡಲಾರರು ಎಂದು ಭಾವಿಸಿ ದುಃಖಪಡಬೇಕಾಗಿಲ್ಲ. ವಿಚಾರಣೆಯ ದಿನವು ಬರುವುದೆಂಬುದು ಖಚಿತವಾಗಿದೆ. ಆದುದರಿಂದ ಅವರ ದುಷ್ಟತನಕ್ಕೆ ಕ್ಷಮೆ ನೀಡಿರಿ. ಅವರನ್ನು ಅಲ್ಲಾಹು ವಿಚಾರಿಸಿಕೊಳ್ಳುವನು.
(86) ಖಂಡಿತವಾಗಿಯೂ ತಮ್ಮ ರಬ್ ಎಲ್ಲವನ್ನೂ ಸೃಷ್ಟಿಸುವವನೂ ಎಲ್ಲವನ್ನೂ ಅರಿಯುವವನೂ ಆಗಿರುವನು.
(87) ಖಂಡಿತವಾಗಿಯೂ ನಾವು ತಮಗೆ ಪುನರಾವರ್ತಿಸಿ ಓದಲಾಗುವ ಏಳು ಸೂಕ್ತಿಗಳನ್ನು(492) ಮತ್ತು ಮಹಾ ಕುರ್ಆನನ್ನು ನೀಡಿರುವೆವು.
492. ಇದರ ತಾತ್ಪರ್ಯವು ಸತ್ಯವಿಶ್ವಾಸಿಗಳು ನಮಾಝ್ನಲ್ಲಿ ದಿನನಿತ್ಯ ಪಾರಾಯಣ ಮಾಡುವ ಸೂರಃ ಅಲ್ಫಾತಿಹಃ ಆಗಿದೆ. ಇದರಲ್ಲಿ ಏಳು ಸೂಕ್ತಿಗಳಿವೆ.
(88) ನಾವು ಅವರ (ಅವಿಶ್ವಾಸಿಗಳ) ಪೈಕಿ ಹಲವು ಪಂಗಡಗಳಿಗೆ ನೀಡಿರುವ ಸುಖಭೋಗಗಳೆಡೆಗೆ ತಾವು ತಮ್ಮ ದೃಷ್ಟಿಯನ್ನು ಹಾಯಿಸದಿರಿ.(493) ಅವರ ಬಗ್ಗೆ ತಾವು ದುಃಖಿಸದಿರಿ.(494) ತಾವು ಸತ್ಯವಿಶ್ವಾಸಿಗಳಿಗೆ ತಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿರಿ.(495)
493. ಸತ್ಯನಿಷೇಧಿಗಳಿಗೆ ಅಲ್ಲಾಹು ನೀಡಿದ ಸುಖಭೋಗಗಳೆಡೆಗೆ ಕಣ್ಣು ಹಾಯಿಸದಿರಿ. ಅದು ಕೇವಲ ಒಂದು ಪರೀಕ್ಷೆಯಾಗಿದೆ. ಅಲ್ಲಾಹುವಿನ ಪರಮ ಅನುಗ್ರಹವೆಂದರೆ ಸತ್ಯವಿಶ್ವಾಸ, ಸತ್ಕರ್ಮ ಹಾಗೂ ಪರಲೋಕ ಯಶಸ್ಸಾಗಿದೆ. 494. ಅವರು ವಿಶ್ವಾಸವಿಡುವುದಿಲ್ಲವೆಂದು ದುಃಖಿಸದಿರಿ ಎಂದರ್ಥ.
495. ಅವರೊಂದಿಗೆ ವಿನಯದಿಂದ ವರ್ತಿಸಿರಿ.
(89) “ಖಂಡಿತವಾಗಿಯೂ ನಾನೊಬ್ಬ ಸ್ಪಷ್ಟವಾದ ಮುನ್ನೆಚ್ಚರಿಕೆ ನೀಡುವವನಾಗಿರುವೆನು” ಎಂದು ಹೇಳಿರಿ.
(90) ವಿಭಜನೆ ಮಾಡಿದವರ ಮೇಲೆ ನಾವು ಅವತೀರ್ಣಗೊಳಿಸಿದಂತೆ.
(91) ಅಂದರೆ ಕುರ್ಆನನ್ನು ವಿವಿಧ ತುಂಡುಗಳನ್ನಾಗಿ ಮಾಡಿದವರು.(496)
496. ವಿಭಜನೆ ಮಾಡಿದವರು ಎಂಬುದರ ತಾತ್ಪರ್ಯ ಯಹೂದಿಗಳು ಮತ್ತು ಕ್ರೈಸ್ತರಾಗಿರುವರು. ಕುರ್ಆನ್ ಹೇಳಿದ ವಿಷಯಗಳ ಪೈಕಿ ಅವರ ಹಿತಾಸಕ್ತಿಗಳಿಗೆ ಪೂರಕವಾಗಿರುವುದನ್ನು ಅವರು ಸ್ವೀಕರಿಸಿದರು ಮತ್ತು ವಿರುದ್ಧವಾಗಿರುವುದನ್ನು ಅವರು ತಿರಸ್ಕರಿಸಿದರು. ಅವರಿಗೆ ಅಲ್ಲಾಹು ಗ್ರಂಥಗಳನ್ನು ಅವತೀರ್ಣಗೊಳಿಸಿದಂತೆಯೇ ಪ್ರವಾದಿ ಮುಹಮ್ಮದ್(ಸ) ರವರಿಗೆ ಕುರ್ಆನ್ ಅವತೀರ್ಣಗೊಳಿಸಲಾಗಿದೆ. ಈ ಸೂಕ್ತಿಗಳಿಗೆ ಬೇರೆ ಕೆಲವು ವ್ಯಾಖ್ಯಾನಗಳೂ ಇವೆ.
(92) ತಮ್ಮ ರಬ್ನ ಮೇಲಾಣೆ! ಖಂಡಿತವಾಗಿಯೂ ನಾವು ಅವರೆಲ್ಲರನ್ನೂ ವಿಚಾರಣೆ ಮಾಡುವೆವು.
(93) ಅವರು ಮಾಡಿರುವುದರ ಬಗ್ಗೆ.
(94) ಆದುದರಿಂದ ತಮಗೆ ಏನನ್ನು ಆಜ್ಞಾಪಿಸಲಾಗುವುದೋ ಅದನ್ನು ಬಹಿರಂಗವಾಗಿ ಘೋಷಿಸಿರಿ ಮತ್ತು ಬಹುದೇವಾರಾಧಕರಿಂದ ವಿಮುಖರಾಗಿರಿ.
(95) ಅಪಹಾಸ್ಯಕಾರರಿಂದ ತಮ್ಮನ್ನು ಸಂರಕ್ಷಿಸಲು ಖಂಡಿತವಾಗಿಯೂ ತಮಗೆ ನಾವು ಸಾಕು.
(96) ಅಂದರೆ ಅಲ್ಲಾಹುವಿನ ಜೊತೆಗೆ ಇತರ ಆರಾಧ್ಯರನ್ನು ನಿಶ್ಚಯಿಸುವವರಿಂದ. ತರುವಾಯ ಅವರು ಅರಿತುಕೊಳ್ಳುವರು.
(97) ಅವರು ಹೇಳುತ್ತಿರುವುದರ ನಿಮಿತ್ತ ಖಂಡಿತವಾಗಿಯೂ ತಮಗೆ ಮನಃಪ್ರಯಾಸವುಂಟಾಗುತ್ತಿದೆ ಎಂಬುದನ್ನು ನಾವು ಅರಿಯುತ್ತಿರುವೆವು.
(98) ಆದುದರಿಂದ ತಾವು ತಮ್ಮ ರಬ್ಬನ್ನು ಸ್ತುತಿಸುತ್ತಾ ಅವನಿಗೆ ಸ್ತೋತ್ರಗಳನ್ನು ಸಲ್ಲಿಸಿರಿ ಮತ್ತು ಸಾಷ್ಟಾಂಗವೆರಗುವವರಲ್ಲಿ ಸೇರಿದವರಾಗಿರಿ.
(99) ದೃಢವಾದ ಸಂಗತಿಯು (ಮರಣವು) ತಮ್ಮೆಡೆಗೆ ಬರುವ ತನಕ ತಾವು ತಮ್ಮ ರಬ್ಬನ್ನು ಆರಾಧಿಸುತ್ತಿರಿ.