59 - Al-Hashr ()

|

(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನ ಕೀರ್ತನೆ ಮಾಡಿವೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(2) ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳನ್ನು ಪ್ರಥಮ ಗಡಿಪಾರಿನಲ್ಲಿ ಅವರ ಮನೆಗಳಿಂದ ಹೊರಗಟ್ಟಿದವನು ಅವನಾಗಿರುವನು.(1230) ಅವರು ಹೊರಬರುವರೆಂದು ನೀವು ಭಾವಿಸಿರಲಿಲ್ಲ. ತಮ್ಮ ಕೋಟೆಗಳು ಅಲ್ಲಾಹುವಿನಿಂದ ತಮ್ಮನ್ನು ಪ್ರತಿರೋಧಿಸಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಊಹಿಸಿರದ ರೀತಿಯಲ್ಲಿ ಅಲ್ಲಾಹು ಅವರ ಬಳಿಗೆ ಬಂದನು ಮತ್ತು ಅವರ ಹೃದಯಗಳಲ್ಲಿ ಭೀತಿಯನ್ನು ಬಿತ್ತಿದನು. ಅವರು ಸ್ವತಃ ತಮ್ಮದೇ ಕೈಗಳಿಂದಲೂ, ಸತ್ಯವಿಶ್ವಾಸಿಗಳ ಕೈಗಳಿಂದಲೂ ತಮ್ಮ ಮನೆಗಳನ್ನು ದ್ವಂಸ ಮಾಡಿದರು.(1231) ಆದ್ದರಿಂದ ಓ ಕಣ್ಣುಳ್ಳವರೇ! ನೀವು ನೀತಿಪಾಠವನ್ನು ಕಲಿಯಿರಿ!
1230. ಮದೀನಕ್ಕೆ ತೆರಳಿದೊಡನೆ ಪ್ರವಾದಿ(ಸ) ರವರು ಅಲ್ಲಿನ ಯಹೂದರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡಿದ್ದರು. ಆ ಒಪ್ಪಂದದ ಪ್ರಕಾರ ಮುಸ್ಲಿಮರು ಮತ್ತು ಯಹೂದರು ಪರಸ್ಪರ ದಾಳಿ ಮಾಡುವುದಾಗಲಿ, ದಾಳಿ ಮಾಡಲು ಸಹಾಯ ಮಾಡುವುದಾಗಲಿ ಕೂಡದು. ಆದರೆ ಯಹೂದರು ಹಲವಾರು ಬಾರಿ ಈ ಒಪ್ಪಂದಕ್ಕೆ ವಿರುದ್ಧವಾಗಿ ಇಸ್ಲಾಮಿನ ಶತ್ರುಗಳೊಂದಿಗೆ ಗೂಡಾಲೋಚನೆ ಮಾಡಿಕೊಂಡಿದ್ದರು. ತನ್ನಿಮಿತ್ತ ಪ್ರವಾದಿ(ಸ) ರವರು ಮತ್ತು ಸಹಾಬಿಗಳು ಅಲ್ಲಾಹುವಿನ ಅಪ್ಪಣೆ ಪ್ರಕಾರ ಯಹೂದ ಜನಾಂಗವೊಂದನ್ನು ಮದೀನದಿಂದ ಗಡಿಪಾರು ಮಾಡಿದರು. ಮದೀನ ತೊರೆದ ಯಹೂದರು ಖೈಬರ್‌ನಲ್ಲಿ ಆಶ್ರಯಪಡೆದರು. ಆದರೆ ಖೈಬರ್‌ನಿಂದಲೂ ಅವರು ಕಿರುಕುಳ ನೀಡಲಾರಂಭಿಸಿದಾಗ ಅವರನ್ನು ಅಲ್ಲಿಂದಲೂ ಗಡಿಪಾರು ಮಾಡುವುದು ಮುಸ್ಲಿಮರಿಗೆ ಅನಿವಾರ್ಯವಾಯಿತು. 1231. ಯಹೂದರು ಮದೀನವನ್ನು ಬಿಟ್ಟು ಹೋಗುವಾಗ ಅವರ ಸರಕು ಸಾಮಗ್ರಿಗಳನ್ನು ಜೊತೆಗೊಯ್ಯಲು ಪ್ರವಾದಿ(ಸ) ರವರು ಅನುಮತಿ ನೀಡಿದ್ದರು. ಆದ್ದರಿಂದ ಅವರು ತಮ್ಮ ಮನೆಗಳನ್ನು ಒಡೆದು ತೆಗೆಯಬಹುದಾದ ಮರದ ತುಂಡುಗಳನ್ನು ತೆಗೆದೊಯ್ದರು. ಆದರೆ ಒಯ್ಯಲು ಸಾಧ್ಯವಾಗದ್ದನ್ನು ಮುಸ್ಲಿಮರು ಬಳಸಬಾರದೆಂದು ಅವುಗಳನ್ನು ನಾಶ ಮಾಡಿದರು. ಮನೆಗಳ ಉಳಿದ ಭಾಗಗಳನ್ನು ವಿಶ್ವಾಸಿಗಳು ನೆಲಸಮಗೊಳಿಸಿದರು.

(3) ಊರು ಬಿಟ್ಟು ಹೋಗುವುದನ್ನು ಅಲ್ಲಾಹು ಅವರ ಮೇಲೆ ವಿಧಿಸದಿರುತ್ತಿದ್ದರೆ ಅವನು ಅವರನ್ನು ಇಹಲೋಕದಲ್ಲಿ ಶಿಕ್ಷಿಸುತ್ತಿದ್ದನು.(1232) ಪರಲೋಕದಲ್ಲಿ ಅವರಿಗೆ ನರಕಾಗ್ನಿಯ ಶಿಕ್ಷೆಯಿದೆ.
1232. ಮದೀನದ ಮುಸ್ಲಿಮರನ್ನು ನಿರ್ನಾಮ ಮಾಡಲು ನಿರಂತರ ಪಿತೂರಿಗಳನ್ನು ರೂಪಿಸುತ್ತಿದ್ದ ಯಹೂದ ಜನಾಂಗವನ್ನು ನಿರ್ನಾಮ ಮಾಡಲು ನಿರ್ಧರಿಸಿದರೂ ಅದರಲ್ಲಿ ಅತಿಶಯೋಕ್ತಿಯಿಲ್ಲ. ಆದರೆ ಅಲ್ಲಾಹುವಿನ ತೀರ್ಮಾನ ಪ್ರಕಾರ ಅವರನ್ನು ಕೇವಲ ಗಡಿಪಾರು ಮಾಡಲಾಯಿತು.

(4) ಅದೇಕೆಂದರೆ ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ವಿರೋ ಧಿಸಿದರು ಎಂಬುದರಿಂದಾಗಿದೆ. ಯಾರಾದರೂ ಅಲ್ಲಾಹುವನ್ನು ವಿರೋಧಿಸಿದರೆ ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು.

(5) ನೀವು ಯಾವುದಾದರೂ ಖರ್ಜೂರದ ಮರವನ್ನು ಕಡಿಯುವುದಾಗಲಿ ಅಥವಾ ಅವುಗಳನ್ನು ಅವುಗಳ ಬುಡಗಳ ಮೇಲೆ ನಿಲ್ಲಲು ಬಿಟ್ಟುಬಿಡುವುದಾಗಲಿ ಮಾಡುವುದಾದರೆ ಅದು ಅಲ್ಲಾಹುವಿನ ಅಪ್ಪಣೆ ಪ್ರಕಾರವಾಗಿದೆ ಮತ್ತು ಧಿಕ್ಕಾರಿಗಳನ್ನು ಅಪಮಾನಗೊಳಿಸುವ ಸಲುವಾಗಿದೆ.

(6) ಅಲ್ಲಾಹು ಅವರಿಂದ (ಯಹೂದರಿಂದ) ಅವನ ಸಂದೇಶವಾಹಕರಿಗೆ ಏನನ್ನು ವಶಪಡಿಸಿಕೊಟ್ಟನೋ ಅದಕ್ಕಾಗಿ ನೀವು ಕುದುರೆಗಳನ್ನೋ ಒಂಟೆಗಳನ್ನೋ ಓಡಿಸಬೇಕಾಗಿ ಬರಲಿಲ್ಲ.(1233) ಆದರೆ ಅಲ್ಲಾಹು ಅವನಿಚ್ಛಿಸುವವರ ಮೇಲೆ ಅವನ ಸಂದೇಶವಾಹಕರಿಗೆ ಅಧಿಕಾರವನ್ನು ಕೊಡುವನು.(1234) ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
1233. ಅಂದರೆ ಯಾವುದೇ ಹೋರಾಟವನ್ನೂ ನಡೆಸದೆ ಯಹೂದರ ವಾಸಸ್ಥಳಗಳು ಮುಸ್ಲಿಮರ ಪಾಲಾದವು. 1234. ಯುದ್ಧವಿಲ್ಲದೆ ಪ್ರವಾದಿ(ಸ) ರಿಗೆ ಮತ್ತು ಅನುಯಾಯಿಗಳಿಗೆ ಅಧೀನವಾಗುವ ಸಂಪತ್ತು ಸಮರಾರ್ಜಿತ ಸೊತ್ತಿನಂತೆ ಪಾಲು ಮಾಡಬೇಕಾದುದಲ್ಲ. ಬದಲಾಗಿ ಪ್ರವಾದಿ(ಸ) ರವರು ತಮ್ಮ ವಿವೇಚನೆಗೆ ಅನುಸಾರವಾಗಿ ಸತ್ಯವಿಶ್ವಾಸಿಗಳ ಪೈಕಿ ಅರ್ಹರಿಗೆ ಅದನ್ನು ಪಾಲು ಮಾಡಬೇಕಾಗಿದೆ. ಈ ಆಯತ್ತಿನ ತಳಹದಿಯಲ್ಲಿ ಹಲವಾರು ವ್ಯಾಖ್ಯಾನಕಾರರು ಈ ಅಭಿಪ್ರಾಯ ಹೊಂದಿದ್ದಾರೆ.

(7) ಅಲ್ಲಾಹು ಅವನ ಸಂದೇಶವಾಹಕರಿಗೆ ವಿವಿಧ ಪ್ರದೇಶದವರಿಂದ ಏನನ್ನು ವಶಪಡಿಸಿಕೊಟ್ಟಿರುವನೋ ಅದು ಅಲ್ಲಾಹುವಿಗೂ, ಸಂದೇಶವಾಹಕರಿಗೂ, ನಿಕಟ ಸಂಬಂಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ದಾರಿಹೋಕರಿಗೂ ಇರುವುದಾಗಿದೆ. ಅದು (ಸಂಪತ್ತು) ನಿಮ್ಮ ಪೈಕಿ ಧನಿಕರ ಮಧ್ಯೆ ಮಾತ್ರ ವಿನಿಮಯವಾಗುವ ವಸ್ತುವಾಗದಿರುವ ಸಲುವಾಗಿ. ಸಂದೇಶವಾಹಕರು ನಿಮಗೆ ಏನನ್ನು ನೀಡುವರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ನಿಮ್ಮನ್ನು ಯಾವುದರಿಂದ ವಿರೋಧಿಸುವರೋ ಅದರಿಂದ ದೂರಸರಿಯಿರಿ. ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಕಠಿಣವಾಗಿ ಶಿಕ್ಷಿಸುವವನಾಗಿರುವನು.

(8) (ಆ ಸಂಪತ್ತು) ತಮ್ಮ ಮನೆಗಳಿಂದ ಮತ್ತು ಸಂಪತ್ತುಗಳಿಂದ ಹೊರಗಟ್ಟಲಾದ ಮುಹಾಜಿರ್‌ಗಳಾದ ಬಡವರಿಗೆ (ಇರುವುದಾಗಿದೆ). ಅವರು ಅಲ್ಲಾಹುವಿನ ವತಿಯ ಅನುಗ್ರಹವನ್ನು ಮತ್ತು ಸಂತೃಪ್ತಿಯನ್ನು ಅರಸುತ್ತಿರುವರು ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರಿಗೆ ಸಹಾಯ ಮಾಡುತ್ತಿರುವರು. ಸತ್ಯಸಂಧರು ಅವರೇ ಆಗಿರುವರು.

(9) ಅವರ (ಮುಹಾಜಿರ್‌ಗಳ) ಆಗಮನಕ್ಕೆ ಮುಂಚಿತವಾಗಿ ವಾಸಸ್ಥಳವನ್ನು ಮತ್ತು ವಿಶ್ವಾಸವನ್ನು ಸಿದ್ಧಗೊಳಿಸಿದವರಿಗೂ (ಅನ್ಸಾರ್‌ಗಳಿಗೂ). ಸ್ವಂತ ಊರನ್ನು ಬಿಟ್ಟು ತಮ್ಮ ಬಳಿ ಬಂದವರನ್ನು ಅವರು ಪ್ರೀತಿಸುತ್ತಿರುವರು. ಅವರಿಗೆ (ಮುಹಾಜಿರ್‌ಗಳಿಗೆ) ನೀಡಲಾದ ಸಂಪತ್ತಿನ ಬಗ್ಗೆ ಅವರು (ಅನ್ಸಾರ್‌ಗಳು) ತಮ್ಮ ಹೃದಯಗಳಲ್ಲಿ ಯಾವುದೇ ಅಗತ್ಯವನ್ನೂ ಕಾಣುವುದಿಲ್ಲ. ತಮಗೆ ಬಡತನವಿದ್ದರೂ ಸಹ ಸ್ವತಃ ತಮಗಿಂತಲೂ ಹೆಚ್ಚಾಗಿ ಅವರು ಇತರರಿಗೆ ಪ್ರಾಮುಖ್ಯತೆಯನ್ನು ನೀಡುವರು.(1235) ತನ್ನ ಮನಸ್ಸಿನ ಜಿಪುಣತನದಿಂದ ಯಾರನ್ನು ಕಾಪಾಡಲಾಗುತ್ತದೋ ಅವರೇ ಯಶಸ್ವಿಯಾದವರು.
1235. ಮುಹಾಜಿರ್‌ಗಳೆಂದರೆ ಮಕ್ಕಾದಿಂದ ಮದೀನಕ್ಕೆ ಆಶ್ರಯ ಕೋರಿ ಬಂದ ಮುಸ್ಲಿಮರಾಗಿದ್ದಾರೆ. ಅವರಿಗೆ ಸಂರಕ್ಷಣೆ ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳಾದ ಮುಸ್ಲಿಮರನ್ನು ಅನ್ಸಾರ್ ಎನ್ನಲಾಗುತ್ತದೆ. ಮದೀನದಿಂದ ಬನೂ ನಝೀರ್ ಎಂಬ ಯಹೂದ ಜನಾಂಗವನ್ನು ಹೊರಗಟ್ಟಿದಾಗ ಅವರು ಬಿಟ್ಟು ಹೋದ ಸಂಪತ್ತುಗಳಲ್ಲಿ ಹೆಚ್ಚಿನವುಗಳನ್ನೂ ಪ್ರವಾದಿ(ಸ) ರವರು ಮುಹಾಜಿರ್‌ಗಳಿಗೆ ನೀಡಿದ್ದರು. ಯಾಕೆಂದರೆ ಅವರು ಹೆಚ್ಚು ಬಡವರಾಗಿದ್ದರು. ಪ್ರಸ್ತುತ ಸಂಪತ್ತು ದೊರೆಯದ ಅನ್ಸಾರ್‌ಗಳಿಗೆ ಆ ವಿಷಯದಲ್ಲಿ ಯಾವುದೇ ವಿಧದ ಅತೃಪ್ತಿಯೂ ಇರಲಿಲ್ಲವೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.

(10) ಅವರ ಬಳಿಕ ಬಂದವರಿಗೂ. ಅವರು ಹೇಳುವರು: ‘ನಮ್ಮ ಪ್ರಭೂ! ನಮಗೂ, ವಿಶ್ವಾಸದಲ್ಲಿ ನಮಗಿಂತ ಮುಂಚೆ ಗತಿಸಿಹೋಗಿರುವ ನಮ್ಮ ಸಹೋದರರಿಗೂ ಕ್ಷಮಿಸು. ನಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸಿಗಳೊಂದಿಗೆ ಯಾವುದೇ ವಿದ್ವೇಷವನ್ನೂ ಉಂಟುಮಾಡದಿರು. ನಮ್ಮ ಪ್ರಭೂ! ಖಂಡಿತವಾಗಿಯೂ ನೀನು ಅತ್ಯಧಿಕ ದಯೆಯುಳ್ಳವನೂ, ಅಪಾರ ಕರುಣೆಯುಳ್ಳವನೂ ಆಗಿರುವೆ’.

(11) ಆ ಕಪಟ ವಿಶ್ವಾಸಿಗಳೆಡೆಗೆ ತಾವು ನೋಡಲಿಲ್ಲವೇ? ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳಾದ ತಮ್ಮ ಸಹೋದರರೊಂದಿಗೆ ಅವರು ಹೇಳುವರು: ‘ನಿಮ್ಮನ್ನು ಹೊರಗಟ್ಟಲಾದರೆ ಖಂಡಿತವಾಗಿಯೂ ನಾವು ನಿಮ್ಮೊಂದಿಗೆ ಹೊರಹೋಗುವೆವು. ನಿಮ್ಮ ವಿಷಯದಲ್ಲಿ ನಾವು ಯಾರನ್ನೂ ಎಂದಿಗೂ ಅನುಸರಿಸಲಾರೆವು. ನಿಮ್ಮ ವಿರುದ್ಧ ಯುದ್ಧ ನಡೆದರೆ ಖಂಡಿತವಾಗಿಯೂ ನಾವು ನಿಮಗೆ ಸಹಾಯ ಮಾಡುವೆವು’. ಖಂಡಿತವಾಗಿಯೂ ಅವರು ಸುಳ್ಳು ನುಡಿಯುವವರಾಗಿರುವರು ಎಂಬುದಕ್ಕೆ ಅಲ್ಲಾಹು ಸಾಕ್ಷ್ಯವಹಿಸುವನು.

(12) ಅವರನ್ನು (ಯಹೂದರನ್ನು) ಹೊರಗಟ್ಟಲಾದರೆ ಇವರು (ಕಪಟವಿಶ್ವಾಸಿಗಳು) ಅವರೊಂದಿಗೆ ಖಂಡಿತವಾಗಿಯೂ ಹೊರಹೋಗಲಾರರು. ಅವರು ಒಂದು ಯುದ್ಧವನ್ನು ಎದುರಿಸಬೇಕಾಗಿ ಬಂದರೆ ಇವರು ಅವರಿಗೆ ಸಹಾಯ ಮಾಡಲಾರರು. ಇವರು ಅವರಿಗೆ ಸಹಾಯ ಮಾಡುವುದಾದರೂ ಇವರು ಖಂಡಿತವಾಗಿಯೂ ವಿಮುಖರಾಗಿ ಓಡುವರು. ತರುವಾಯ ಅವರಿಗೆ ಯಾವುದೇ ಸಹಾಯವೂ ಲಭ್ಯವಾಗದು.

(13) ಖಂಡಿತವಾಗಿಯೂ ಅವರ ಹೃದಯಗಳಲ್ಲಿ ಅಲ್ಲಾಹುವಿಗಿಂತಲೂ ಹೆಚ್ಚು ನಿಮ್ಮ ಬಗ್ಗೆ ಭಯವಿದೆ. ಇದೇಕೆಂದರೆ ಅವರು ವಾಸ್ತವತೆಯನ್ನು ಗ್ರಹಿಸದ ಒಂದು ಜನತೆಯಾಗಿರುವರು ಎಂಬುದರಿಂದಾಗಿದೆ.

(14) ಕೋಟೆಗಳಿಂದಾವೃತವಾದ ಪಟ್ಟಣಗಳಿಂದ ಅಥವಾ ಗೋಡೆಗಳ ಹಿಂಭಾಗದಿಂದಲೇ ಹೊರತು ಅವರು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಲಾರರು. ಅವರಲ್ಲಿರುವ ಒಳಜಗಳವು ಅತ್ಯುಗ್ರವಾಗಿದೆ. ಅವರು ಒಗ್ಗಟ್ಟಾಗಿರುವರೆಂದು ತಾವು ಭಾವಿಸುವಿರಿ. ಆದರೆ ಅವರ ಹೃದಯಗಳು ಭಿನ್ನಮತ ಹೊಂದಿವೆ. ಅದು ಅವರು ಚಿಂತಿಸಿ ಗ್ರಹಿಸದ ಒಂದು ಜನತೆಯಾಗಿರುವರು ಎಂಬುದರಿಂದಾಗಿದೆ.

(15) ಇತ್ತೀಚೆಗಷ್ಟೇ ಗತಿಸಿಹೋದ ಅವರಿಗಿಂತ ಮುಂಚಿನವರ ಸ್ಥಿತಿಯಂತೆ! ಅವರು ಮಾಡಿರುವುದರ ದುಷ್ಫಲವನ್ನು ಅವರು ಆಸ್ವಾದಿಸಿದರು. ಅವರಿಗೆ ಯಾತನಾಮಯವಾದ ಶಿಕ್ಷೆಯೂ ಇದೆ.

(16) ಸೈತಾನನ ಸ್ಥಿತಿಯಂತೆ! ‘ಅವಿಶ್ವಾಸವಿಡು’ ಎಂದು ಅವನು ಮನುಷ್ಯನೊಂದಿಗೆ ಹೇಳಿದ ಸಂದರ್ಭ. ಅವನು (ಮನುಷ್ಯನು) ಅವಿಶ್ವಾಸಿಯಾದಾಗ ಅವನು (ಸೈತಾನನು) ಹೇಳಿದನು: ‘ಖಂಡಿತವಾಗಿಯೂ ನಾನು ನಿನ್ನಿಂದ ವಿಮುಕ್ತನಾಗಿರುವೆನು. ಖಂಡಿತವಾಗಿಯೂ ನಾನು ಸರ್ವಲೋಕಗಳ ರಬ್ ಆದ ಅಲ್ಲಾಹುವನ್ನು ಭಯಪಡುತ್ತಿರುವೆನು’.

(17) ಹಾಗೆ ಅವರಿಬ್ಬರ ಪರ್ಯವಸಾನವು ಅವರಿಬ್ಬರೂ ನರಕಾಗ್ನಿಯಲ್ಲಿ ಶಾಶ್ವತವಾಗಿ ವಾಸಿಸುವರು ಎಂಬುದಾಗಿದೆ. ಅದು ಅಕ್ರಮಿಗಳಿಗಿರುವ ಪ್ರತಿಫಲವಾಗಿದೆ.

(18) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ. ಪ್ರತಿಯೊಬ್ಬ ವ್ಯಕ್ತಿಯೂ ತಾನು ನಾಳೆಗಾಗಿ ಏನನ್ನು ಪೂರ್ವಭಾವಿಯಾಗಿ ಮಾಡಿಟ್ಟಿರುವೆನು ಎಂಬುದನ್ನು ನೋಡಲಿ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿರುವನು.

(19) ಅಲ್ಲಾಹುವನ್ನು ಮರೆತುಬಿಟ್ಟ ಒಂದು ಜನತೆಯಂತೆ ನೀವಾಗದಿರಿ. ಅವರು ಸ್ವತಃ ಅವರನ್ನೇ ಮರೆಯುವಂತೆ ಅಲ್ಲಾಹು ಮಾಡಿದನು. ಧಿಕ್ಕಾರಿಗಳು ಅವರೇ ಆಗಿರುವರು.

(20) ನರಕವಾಸಿಗಳು ಮತ್ತು ಸ್ವರ್ಗವಾಸಿಗಳು ಸಮಾನರಾಗಲಾರರು. ಸ್ವರ್ಗವಾಸಿಗಳು ವಿಜಯಗಳಿಸಿದವರಾಗಿರುವರು.

(21) ನಾವು ಈ ಕುರ್‌ಆನನ್ನು ಒಂದು ಪರ್ವತದ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ ಅದು (ಪರ್ವತ) ವಿನಮ್ರಗೊಳ್ಳುವುದನ್ನು ಮತ್ತು ಅಲ್ಲಾಹುವಿನ ಭಯದಿಂದ ಒಡೆದು ಹೋಳಾಗುವುದನ್ನು ತಾವು ಕಾಣುತ್ತಿದ್ದಿರಿ.(1236) ನಾವು ಜನರಿಗಾಗಿ ಈ ಉದಾಹರಣೆಗಳನ್ನು ವಿವರಿಸಿಕೊಡುತ್ತಿರುವೆವು. ಅವರು ಚಿಂತಿಸುವ ಸಲುವಾಗಿ.
1236. ಅಲ್ಲಾಹುವಿನ ವಚನವು ನೇರವಾಗಿ (ಯಾವ ಮಾಧ್ಯಮವೂ ಇಲ್ಲದೆ) ಅವತೀರ್ಣಗೊಳ್ಳುವುದು ನಮಗೆ ಊಹಿಸಲು ಸಾಧ್ಯವಾಗದ ವಿಧ ಅತಿಭಯಾನಕವಾಗಿರುವುದೆಂದು ಇದರಿಂದ ಗ್ರಹಿಸಬಹುದು. ಅಲ್ಲಾಹು ಒಂದು ಪರ್ವತದ ಮುಂದೆ ಪ್ರತ್ಯಕ್ಷವಾದಾಗ ಅದು ನುಚ್ಚುನೂರಾದ ವಿಷಯವನ್ನು 7:143ರಲ್ಲಿ ಪ್ರಸ್ತಾಪಿಸಲಾಗಿದೆ.

(22) ಅವನಾಗಿರುವನು ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಅಗೋಚರವಾಗಿರುವುದನ್ನು ಮತ್ತು ಗೋಚರವಾಗಿರುವುದನ್ನು ಅರಿಯುವವನಾಗಿರುವನು. ಅವನು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವನು.

(23) ಅವನಾಗಿರುವನು ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಸಾಮ್ರಾಟನೂ, ಪರಮಪಾವನನೂ, ಶಾಂತಿ ನೀಡುವವನೂ, ಅಭಯ ನೀಡುವವನೂ, ಮೇಲ್ನೋಟ ವಹಿಸುವವನೂ, ಪ್ರತಾಪಶಾಲಿಯೂ, ಸರ್ವಾಧಿಕಾರಿಯೂ ಮತ್ತು ಮಹತ್ವವುಳ್ಳವನೂ ಆಗಿರುವನು. ಅವರು ಸಹಭಾಗಿತ್ವ ಮಾಡುವುದರಿಂದ ಅಲ್ಲಾಹು ಪರಮ ಪಾವನನಾಗಿರುವನು.

(24) ಅವನಾಗಿರುವನು ಅಲ್ಲಾಹು! ಅವನು ಸೃಷ್ಟಿಕರ್ತನೂ, ನಿರ್ಮಾತೃನೂ, ರೂಪ ನೀಡುವವನೂ ಆಗಿರುವನು. ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಮಹಾತ್ಮೆಯನ್ನು ಕೊಂಡಾಡುತ್ತಿವೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.