73 - Al-Muzzammil ()

|

(1) ಓ ಬಟ್ಟೆಯಿಂದ ಹೊದ್ದುಕೊಂಡವರೇ!(1308)
1308. ಪ್ರವಾದಿ(ಸ) ರವರನ್ನು ಬಟ್ಟೆಯಿಂದ ಹೊದಿಸಿದವರೇ ಎಂದು ಕರೆಯಲಾಗಿರುವುದರ ಬಗ್ಗೆ ವ್ಯಾಖ್ಯಾನಕಾರರಿಗೆ ವಿಭಿನ್ನ ಅಭಿಪ್ರಾಯಗಳಿವೆ. ಮೊದಲ ಬಾರಿ ದಿವ್ಯ ಸಂದೇಶ ಲಭ್ಯವಾದಾಗ ಉಂಟಾದ ಭಯಭೀತಿಯಿಂದಾಗಿ ಹೊದಿಸಲಾದವನು, ಪ್ರಾರ್ಥನೆ ಮಾಡುವ ಸಲುವಾಗಿ ಉಡುಪುಗಳನ್ನು ಹೊದ್ದು ಸಜ್ಜಾದವನು, ಮೈಮೇಲೆ ಹೊದ್ದು ನಿದ್ರಿಸಲು ಹೊರಡುವವನು ಇತ್ಯಾದಿ ಹಲವು ವಿಧಗಳಲ್ಲಿ ಮುಝ್ಝಮ್ಮಿಲ್ ಎಂಬ ಪದವನ್ನು ವಿವರಿಸಲಾಗಿದೆ.

(2) ರಾತ್ರಿಯಲ್ಲಿ ಸ್ವಲ್ಪ ಸಮಯವನ್ನು ಹೊರತುಪಡಿಸಿ ಎದ್ದು ನಿಂತು ನಮಾಝ್ ಮಾಡಿರಿ.

(3) ಅದರ (ರಾತ್ರಿಯ) ಅರ್ಧಭಾಗದಲ್ಲಿ ಅಥವಾ ಅದರಿಂದ (ಸ್ವಲ್ಪ) ಕಡಿಮೆಗೊಳಿಸಿರಿ.

(4) ಅಥವಾ ಅದಕ್ಕಿಂತ ಅಧಿಕಗೊಳಿಸಿರಿ. ಕುರ್‌ಆನನ್ನು ಸಾವಕಾಶವಾಗಿ ಪಾರಾಯಣ ಮಾಡಿರಿ.

(5) ಖಂಡಿತವಾಗಿಯೂ ನಾವು ತಮ್ಮ ಮೇಲೆ ಭಾರವಾದ ಒಂದು ವಚನವನ್ನು(1309) ಹಾಕಲಿರುವೆವು.
1309. ಅಲ್ಲಾಹು ಪ್ರವಾದಿ(ಸ) ರಿಗೆ ಮುಂದೆ ಅವತೀರ್ಣಗೊಳಿಸಿಕೊಡಲು ಇಚ್ಛಿಸುವ ಧರ್ಮೋಪದೇಶ ಹಾಗೂ ವಿಧಿನಿಷೇಧಗಳ ಬಗ್ಗೆ ಇಲ್ಲಿ ಭಾರವಾದ ವಚನ ಎನ್ನಲಾಗಿದೆ. ಇದು ಪ್ರವಾದಿತ್ವ ನಿಯೋಗದ ಆರಂಭಕಾಲದಲ್ಲಿ ಅವತೀರ್ಣಗೊಂಡ ಅಧ್ಯಾಯಗಳಲ್ಲೊಂದಾಗಿದೆ.

(6) ಖಂಡಿತವಾಗಿಯೂ ರಾತ್ರಿಯಲ್ಲಿ ಎದ್ದು ನಮಾಝ್ ಮಾಡುವುದು ಬಲಿಷ್ಠ ಹೃದಯ ಸಾನಿಧ್ಯತೆಯನ್ನು ನೀಡುತ್ತದೆ ಮತ್ತು ಮಾತನ್ನು ಅತ್ಯಂತ ನೇರವಾಗಿಸುತ್ತದೆ.

(7) ಖಂಡಿತವಾಗಿಯೂ ತಮಗೆ ಹಗಲಿನ ವೇಳೆಯಲ್ಲಿ ದೀರ್ಘವಾದ ಕೆಲಸದ ಒತ್ತಡವಿದೆ.(1310)
1310. ಹಗಲ ವೇಳೆ ಕೆಲಸದ ಒತ್ತಡವಿರುವುದರಿಂದ ದೀರ್ಘ ಹೊತ್ತು ಪ್ರಾರ್ಥನೆಗಳಲ್ಲಿ ಮಗ್ನರಾಗಲು ಸಾಧ್ಯವಾಗದು. ಆದ್ದರಿಂದ ರಾತ್ರಿಯಲ್ಲಿ ಸಾಧ್ಯವಾದಷ್ಟು ಆರಾಧನೆಯಲ್ಲಿ ಮಗ್ನರಾಗಿರಿ. ಇದು ಅಲ್ಲಾಹು ಪ್ರವಾದಿ(ಸ) ರಿಗೆ ನೀಡಿದ ಆದೇಶವಾಗಿದೆ.

(8) ತಮ್ಮ ರಬ್‌ನ ನಾಮವನ್ನು ಸ್ಮರಿಸಿರಿ ಮತ್ತು (ಇತರ ಚಿಂತೆಗಳನ್ನು ಬಿಟ್ಟು) ಅವನಿಗೆ ಪೂರ್ಣವಾಗಿ ಅರ್ಪಿಸಿಕೊಳ್ಳಿರಿ.

(9) ಅವನು ಉದಯಸ್ಥಾನದ ಮತ್ತು ಅಸ್ತಮಸ್ಥಾನದ ರಬ್ ಆಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ಅವನನ್ನು ಭರವಸೆಯಿಡಲ್ಪಡುವವನನ್ನಾಗಿ ಮಾಡಿಕೊಳ್ಳಿರಿ.

(10) ಅವರು (ಸತ್ಯನಿಷೇಧಿಗಳು) ಹೇಳುವುದರ ಬಗ್ಗೆ ತಾವು ತಾಳ್ಮೆ ವಹಿಸಿರಿ ಮತ್ತು ಸುಂದರವಾದ ರೀತಿಯಲ್ಲಿ ಅವರಿಂದ ದೂರ ಸರಿಯಿರಿ.(1311)
1311. ಸತ್ಯನಿಷೇಧಿಗಳು ಅಪಹಾಸ್ಯ ಮಾಡುವಾಗ ಅವರ ಬಳಿ ಜಗಳಕ್ಕೆ ನಿಲ್ಲದೆ ಸಭ್ಯವಾಗಿ ಅವರಿಂದ ದೂರಸರಿಯಲು ಅಲ್ಲಾಹು ಪ್ರವಾದಿ(ಸ) ರಿಗೆ ಉಪದೇಶ ನೀಡುತ್ತಾನೆ.

(11) ನನ್ನನ್ನೂ, ಸುಖಾನುಗ್ರಹಗಳನ್ನು ಹೊಂದಿರುವ ಸತ್ಯನಿಷೇಧಿಗಳನ್ನೂ ಬಿಟ್ಟುಬಿಡಿರಿ.(1312) ಅವರಿಗೆ ಸ್ವಲ್ಪ ಕಾಲಾವಕಾಶವನ್ನು ನೀಡಿರಿ.
1312. ಸುಖಲೋಲುಪರಾದ ಸತ್ಯನಿಷೇಧಿಗಳ ಸ್ವಚ್ಛಂದತೆಯ ಬಗ್ಗೆ ದುಃಖಿಸದಿರಿ. ಅವರನ್ನು ನಾನು ನೋಡಿಕೊಳ್ಳುವೆನು ಎಂದು ಅಲ್ಲಾಹು ಹೇಳುತ್ತಿದ್ದಾನೆ.

(12) ಖಂಡಿತವಾಗಿಯೂ ನಮ್ಮ ಬಳಿ ಕಾಲು ಸಂಕೋಲೆಗಳೂ, ಜ್ವಲಿಸುವ ನರಕಾಗ್ನಿಯೂ ಇವೆ.

(13) ಉಸಿರು ಕಟ್ಟಿಸುವ ಆಹಾರವೂ ಯಾತನಾಮಯವಾದ ಶಿಕ್ಷೆಯೂ ಇವೆ.

(14) ಭೂಮಿಯು ಮತ್ತು ಪರ್ವತಗಳು ಕಂಪಿಸುವ ಮತ್ತು ಪರ್ವತಗಳು ಹರಿಯುತ್ತಿರುವ ಮರಳ ರಾಶಿಯಂತಾಗುವ ದಿನ!

(15) ಖಂಡಿತವಾಗಿಯೂ ನಾವು ನಿಮ್ಮೆಡೆಗೆ ನಿಮ್ಮ ಮೇಲೆ ಸಾಕ್ಷಿಯಾಗಿರುವ ಓರ್ವ ಸಂದೇಶವಾಹಕರನ್ನು ಕಳುಹಿಸಿರುವೆವು. ಫಿರ್‍ಔನನ ಬಳಿಗೆ ನಾವು ಓರ್ವ ಸಂದೇಶವಾಹಕರನ್ನು ಕಳುಹಿಸಿದಂತೆ.

(16) ತರುವಾಯ ಫಿರ್‍ಔನ್ ಆ ಸಂದೇಶವಾಹಕರನ್ನು ಧಿಕ್ಕರಿಸಿದನು. ಆಗ ನಾವು ಅವನನ್ನು ಬಲಿಷ್ಠವಾದ ಒಂದು ಹಿಡಿತದಿಂದ ಹಿಡಿದೆವು.

(17) ಆದರೆ ನೀವು ಅವಿಶ್ವಾಸವಿಡುವುದಾದರೆ ಮಕ್ಕಳನ್ನು ನೆರೆತ ಕೂದಲಿನವರನ್ನಾಗಿ ಮಾಡುವ ಒಂದು ದಿನವನ್ನು ಭಯಪಡಲು ನಿಮಗೆ ಹೇಗೆ ಸಾಧ್ಯವಾಗುವುದು?(1313)
1313. ಭಯವಿಹ್ವಲತೆಯಿಂದಾಗಿ ಮಕ್ಕಳಿಗೆ ಹಠಾತ್ತನೆ ವೃದ್ಧಾಪ್ಯ ಬಾಧಿಸಿ ಕೂದಲು ನೆರೆತವರಾಗಿ ಬಿಡುವ ಭೀಕರ ದಿನವೊಂದರ ಶಿಕ್ಷೆಯಿಂದ ಸ್ವತಃ ತಮ್ಮನ್ನು ರಕ್ಷಣೆ ಮಾಡಲು ನಿಮಗೆ ಹೇಗೆ ತಾನೇ ಸಾಧ್ಯ?

(18) ಅದರಿಂದಾಗಿ ಆಕಾಶವು ಒಡೆದು ಹೋಗುವುದು. ಅಲ್ಲಾಹುವಿನ ವಾಗ್ದಾನವು ಜಾರಿಯಾಗಿಯೇ ತೀರುವುದು.

(19) ಖಂಡಿತವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಯಾರಾದರೂ ಇಚ್ಛಿಸು ವುದಾದರೆ ಅವನು ತನ್ನ ರಬ್‌ನೆಡೆಗೆ ಒಂದು ಮಾರ್ಗವನ್ನು ಪಡೆದುಕೊಳ್ಳಲಿ.

(20) ತಾವು ಮತ್ತು ತಮ್ಮ ಜೊತೆಯಲ್ಲಿರುವವರಲ್ಲಿನ ಒಂದು ಗುಂಪು ರಾತ್ರಿಯ ಸರಿಸುಮಾರು ಮೂರನೇ ಎರಡು ಭಾಗ, (ಕೆಲವೊಮ್ಮೆ) ಅರ್ಧಭಾಗ, (ಕೆಲವೊಮ್ಮೆ) ಮೂರನೇ ಒಂದು ಭಾಗದಲ್ಲಿ ನಿಂತು ನಮಾಝ್ ಮಾಡುತ್ತಿರುವಿರಿ ಎಂದು ಖಂಡಿತವಾಗಿಯೂ ತಮ್ಮ ರಬ್ ಅರಿತಿರುವನು. ರಾತ್ರಿ ಮತ್ತು ಹಗಲನ್ನು ಎಣಿಸುವವನು ಅಲ್ಲಾಹುವಾಗಿರುವನು. ಅದನ್ನು ಎಣಿಸಿಡಲು ನಿಮಗೆ ಸಾಧ್ಯವಾಗದು ಎಂದು ಅವನು ಅರಿತಿರುವನು.(1314) ಆದ್ದರಿಂದ ಅವನು ನಿಮಗೆ ವಿನಾಯಿತಿ ನೀಡಿರುವನು.(1315) ಆದ್ದರಿಂದ ನೀವು ಕುರ್‌ಆನ್‍ನಿಂದ ಅನುಕೂಲಕರವಾಗಿರುವುದನ್ನು ಪಾರಾಯಣ ಮಾಡಿ ನಮಾಝ್ ಮಾಡಿರಿ. ನಿಮ್ಮ ಪೈಕಿ ರೋಗಿಗಳಿರುವರು, ಭೂಮಿಯಲ್ಲಿ ಸಂಚರಿಸಿ ಅಲ್ಲಾಹುವಿನ ಅನುಗ್ರಹವನ್ನು ಅರಸುವ ಕೆಲವರಿರುವರು ಮತ್ತು ಅಲ್ಲಾಹುವಿನ ಮಾರ್ಗದಲ್ಲಿ ಯುದ್ಧ ಮಾಡುವ ಇತರ ಕೆಲವರಿರುವರು ಎಂಬುದನ್ನು ಅಲ್ಲಾಹು ಅರಿತಿರುವನು. ಆದ್ದರಿಂದ ನೀವು ಅದರಿಂದ (ಕುರ್‌ಆನ್‍ನಿಂದ) ಅನುಕೂಲಕರವಾಗಿರುವುದನ್ನು ಪಾರಾಯಣ ಮಾಡಿರಿ, ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಮತ್ತು ಅಲ್ಲಾಹುವಿಗೆ ಉತ್ತಮವಾದ ಸಾಲವನ್ನು ನೀಡಿರಿ. ನೀವು ಸ್ವತಃ ನಿಮಗಾಗಿ ಯಾವುದೇ ಒಳಿತನ್ನು ಪೂರ್ವಭಾವಿಯಾಗಿ ಮಾಡಿದರೂ ಅಲ್ಲಾಹುವಿನ ಬಳಿ ಅದನ್ನು ಒಳಿತಾಗಿಯೂ, ಮಹಾ ಪ್ರತಿಫಲವಿರುವುದಾಗಿಯೂ ನೀವು ಕಾಣುವಿರಿ. ಅಲ್ಲಾಹುವಿನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1314. ರಾತ್ರಿ ಹಗಲುಗಳ ಪ್ರಮಾಣದಲ್ಲಿ ದಿನನಿತ್ಯ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ತನ್ನಿಮಿತ್ತ ರಾತ್ರಿಯ ಪೂರ್ಣಾರ್ಧ ಅಥವಾ ಸರಿಯಾಗಿ ಮೂರನೆ ಒಂದಂಶವನ್ನು ಲೆಕ್ಕಹಾಕಲು ಹೆಚ್ಚಿನವರಿಗೆ ಅಸಾಧ್ಯವಾಗಿದೆ. ಎಲ್ಲರಿಗೂ ನಿರ್ವಹಿಸಲು ಸಾಧ್ಯವಾಗುವ ಸಂಗತಿಗಳನ್ನು ಮಾತ್ರ ಇಸ್ಲಾಮ್ ಬೋಧಿಸುತ್ತದೆ. 1315. 2-4 ಸೂಕ್ತಿಗಳಲ್ಲಿ ಹೇಳಿದಂತೆ ರಾತ್ರಿಯ ಒಂದು ನಿಶ್ಚಿತ ಭಾಗವನ್ನು ಆರಾಧನೆಯಲ್ಲಿ ಕಳೆಯಬೇಕೆಂಬ ಆದೇಶದಿಂದ ಅಲ್ಲಾಹು ಈ ಸೂಕ್ತಿಯ ಮೂಲಕ ವಿನಾಯಿತಿ ನೀಡಿದ್ದಾನೆ.