55 - Ar-Rahmaan ()

|

(1) ಪರಮ ದಯಾಮಯನು.

(2) ಅವನು ಕುರ್‌ಆನನ್ನು ಕಲಿಸಿದನು.

(3) ಅವನು ಮನುಷ್ಯನನ್ನು ಸೃಷ್ಟಿಸಿದನು.

(4) ಅವನಿಗೆ ಮಾತನಾಡಲು(1185) ಕಲಿಸಿದನು.
1185. ಮನಸ್ಸಿನಲ್ಲಿರುವ ವಿಚಾರವನ್ನು ಸ್ಪಷ್ಟವಾಗಿ ಹೊರಹೊಮ್ಮಿಸುವ ಮಾತಿಗೆ ಬಯಾನ್ ಎನ್ನಲಾಗುತ್ತದೆ.

(5) ಸೂರ್ಯ ಮತ್ತು ಚಂದ್ರ ಒಂದು ಗಣನೆಯ ಪ್ರಕಾರ (ಚಲಿಸುತ್ತಿವೆ).

(6) ಸಸ್ಯಗಳು ಮತ್ತು ಮರಗಳು (ಅಲ್ಲಾಹುವಿಗೆ) ಸಾಷ್ಟಾಂಗವೆರಗುತ್ತಿವೆ.

(7) ಆಕಾಶವನ್ನು ಅವನು ಎತ್ತರಿಸಿದನು ಮತ್ತು (ಎಲ್ಲವನ್ನೂ ತೂಗಿನೋಡುವ) ತಕ್ಕಡಿಯನ್ನು ಅವನು ಸ್ಥಾಪಿಸಿರುವನು.(1186)
1186. ಪ್ರಾಪಂಚಿಕ ವ್ಯವಸ್ಥೆಗಳಲ್ಲೆಲ್ಲ ಗೋಚರವಾಗುವ ಸಮತೋಲನವನ್ನು ಇಲ್ಲಿ ತಕ್ಕಡಿ ಎಂದು ಹೇಳಲಾಗಿರಬಹುದು. ಅದರಲ್ಲಿ ಮನುಷ್ಯನು ಅಸಮತೋಲನವನ್ನುಂಟು ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಗೊಂದಲಮಯ ಸನ್ನಿವೇಶವುಂಟಾಗುವುದು. ಪ್ರಾಪಂಚಿಕ ವ್ಯವಸ್ಥೆಯಲ್ಲಿರುವ ಸಮತೋಲನದ ಸತ್ಫಲಗಳನ್ನು ಸವಿಯುತ್ತಿರುವ ಮನುಷ್ಯನು ತನ್ನ ಬದುಕಿನ ವ್ಯವಹಾರದಲ್ಲೂ ಸಮತೋಲನವನ್ನು ಕಾಪಾಡಲು ಬಾಧ್ಯಸ್ಥನಾಗಿದ್ದಾನೆ.

(8) ನೀವು ತಕ್ಕಡಿಯಲ್ಲಿ ಅಸಮತೋಲನ ಮಾಡದಿರುವ ಸಲುವಾಗಿ.

(9) ನೀವು ನ್ಯಾಯಬದ್ಧವಾಗಿ ತೂಕವನ್ನು ಸರಿಪಡಿಸಿರಿ. ತಕ್ಕಡಿಯಲ್ಲಿ ನೀವು ಕಮ್ಮಿ ಮಾಡದಿರಿ.

(10) ಅವನು ಭೂಮಿಯನ್ನು ಮನುಷ್ಯರಿಗಾಗಿ ಇಟ್ಟಿರುವನು.

(11) ಅದರಲ್ಲಿ ಫಲಗಳು ಮತ್ತು ಪೊರೆಗಳುಳ್ಳ ಖರ್ಜೂರ ಮರಗಳಿವೆ.

(12) ಹೊಟ್ಟಿರುವ ಧಾನ್ಯಗಳೂ ಸುಗಂಧ ಸಸ್ಯಗಳೂ ಇವೆ.

(13) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು(1187) ಯಾವುದನ್ನು ನಿಷೇಧಿಸುವಿರಿ?
1187. ನಿಮ್ಮಿಬ್ಬರ ರಬ್ ಎಂದರೆ ಮನುಷ್ಯರು ಮತ್ತು ಜಿನ್ನ್‌ಗಳ ರಬ್.

(14) ಮಡಿಕೆಯಂತೆ ತಟ್ಟಿದರೆ ಮೊಳಗುವ ಜೇಡಿಮಣ್ಣಿನಿಂದ(1188) ಅವನು ಮನುಷ್ಯನನ್ನು ಸೃಷ್ಟಿಸಿದನು.
1188. ‘ಸ್ವಲ್‍ಸ್ವಾಲ್’ ಎಂದರೆ ತಟ್ಟಿದರೆ ಮೊಳಗುವ ಜೇಡಿಮಣ್ಣೆಂದು ಹೆಚ್ಚಿನ ವ್ಯಾಖ್ಯಾನಕಾರರು ಹೇಳಿದ್ದಾರೆ. ಅದು ಬದಲಾದ ಜೇಡಿಮಣ್ಣೆಂದು ಬೇರೆ ಕೆಲವರು ಅರ್ಥ ನೀಡಿದ್ದಾರೆ.

(15) ಹೊಗೆರಹಿತ ಅಗ್ನಿಜ್ವಾಲೆಯಿಂದ ಅವನು ಜಿನ್ನ್‌ಗಳನ್ನು ಸೃಷ್ಟಿಸಿದನು.

(16) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(17) ಅವನು ಎರಡು ಉದಯಸ್ಥಾನಗಳ ರಬ್ ಮತ್ತು ಎರಡು ಅಸ್ತಮಸ್ಥಾನಗಳ ರಬ್ ಆಗಿರುವನು.(1189)
1189. ಎರಡು ಉದಯಸ್ಥಾನಗಳು ಮತ್ತು ಎರಡು ಅಸ್ತಮಸ್ಥಾನಗಳು ಎಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ ಕಾಲಗಳ ಉದಯಾಸ್ತಮ ಸ್ಥಾನಗಳೆಂದು ಅನೇಕ ವ್ಯಾಖ್ಯಾನಕಾರರು ವಿವರಿಸಿದ್ದಾರೆ. ಪೂರ್ವಾರ್ಧಗೋಳದಲ್ಲಿರುವವರಿಗೆ ಸೂರ್ಯೋದಯವಾಗುವಾಗ ಪಶ್ಚಿಮಾರ್ಧಗೋಳದಲ್ಲಿರುವವರಿಗೆ ಸೂರ್ಯಾಸ್ತವಾಗಿರುತ್ತದೆ. ಪೂರ್ವಾರ್ಧಗೋಳದಲ್ಲಿರುವವರಿಗೆ ಸೂರ್ಯಾಸ್ತವಾಗುವಾಗ ಪಶ್ಚಿಮಾರ್ಧಗೋಳದಲ್ಲಿರುವವರಿಗೆ ಸೂರ್ಯೋದಯವಾಗುತ್ತದೆ. ಹಾಗಾದರೆ ಎರಡು ಅರ್ಧಗೋಳಗಳಲ್ಲಿರುವವರಿಗೆ ವಿಭಿನ್ನವಾದ ಎರಡು ಸೂರ್ಯೋದಯಗಳು ಮತ್ತು ಎರಡು ಸೂರ್ಯಾಸ್ತಮಗಳು ಅನುಭವವಾಗುತ್ತವೆ. ಇದು ‘ಮಶ್ರಿಕೈನಿ’ ಮತ್ತು ‘ಮಗ್ರಿಬೈನಿ’ ಎಂಬ ಪದಗಳ ಅರ್ಥವಾಗಿರಬಹುದು. 70:40ರಲ್ಲಿ ಅನೇಕ ಉದಯಸ್ಥಾನಗಳ ಮತ್ತು ಅನೇಕ ಅಸ್ತಮಸ್ಥಾನಗಳ ರಬ್ ಎಂಬ ವಾಕ್ಯವು ಉದಯಾಸ್ತಮ ಸ್ಥಾನಗಳು ಸಾಪೇಕ್ಷಿಕವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಸೂಚಿಸುತ್ತದೆ.

(18) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(19) ಅವನು ಎರಡು ಸಮುದ್ರಗಳನ್ನು (ಜಲಾಶಯಗಳನ್ನು) ಪರಸ್ಪರ ಬೆರೆಯುವಂತೆ ಬಿಟ್ಟಿರುವನು.

(20) ಅವೆರಡರ ಮಧ್ಯೆ ಅವು ಪರಸ್ಪರ ಅತಿಕ್ರಮಿಸಿ ದಾಟದಂತೆ ಒಂದು ತಡೆಯಿದೆ.(1190)
1190. ಇಲ್ಲಿ ಪ್ರಸ್ತಾಪಿಸಿರುವುದು ನದಿನೀರು ಮತ್ತು ಸಮುದ್ರ ನೀರು ಪರಸ್ಪರ ಮಿಶ್ರವಾಗದೆ ಬಹುದೂರ ಹರಿಯುವ ನದಿಮುಖಗಳ ಬಗ್ಗೆಯಾಗಿರಬಹುದು. ಸಮುದ್ರದಲ್ಲಿಯೂ ಪರಸ್ಪರ ಮಿಶ್ರವಾಗದೆ ಬೇರ್ಪಟ್ಟು ಹರಿಯುವ ಜಲಪ್ರವಾಹಗಳಿವೆ.

(21) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(22) ಅವೆರಡರಿಂದಲೂ(1191) ಮುತ್ತು ಮತ್ತು ಹವಳಗಳು ಹೊರಬರುತ್ತವೆ.
1191. ಅರ್ಥಾತ್ ನದಿನೀರಿನಿಂದ ಮತ್ತು ಸಮುದ್ರನೀರಿನಿಂದ.

(23) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(24) ಸಮುದ್ರದಲ್ಲಿ (ಚಲಿಸುವ ಸಲುವಾಗಿ) ಪರ್ವತಗಳಂತೆ ಎತ್ತರವಾಗಿ ನಿರ್ಮಿಸಲಾಗುವ ಹಡಗುಗಳು ಅವನ ನಿಯಂತ್ರಣದಲ್ಲಿವೆ.

(25) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(26) ಅಲ್ಲಿ (ಭೂಮುಖದಲ್ಲಿ)ರುವ ಎಲ್ಲರೂ ನಾಶವಾಗುವರು.

(27) ಮಹತ್ವವುಳ್ಳವನೂ ಔದಾರ್ಯವುಳ್ಳವನೂ ಆದ ತಮ್ಮ ರಬ್‌ನ ಮುಖವು ಬಾಕಿಯುಳಿಯುವುದು.

(28) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(29) ಆಕಾಶಗಳಲ್ಲಿರುವವರು ಮತ್ತು ಭೂಮಿಯಲ್ಲಿರುವವರು ಅವನೊಂದಿಗೆ ಬೇಡುತ್ತಿರುವರು. ಅವನು ಅನುದಿನವೂ ಕಾರ್ಯಮಗ್ನನಾಗಿರುವನು.

(30) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(31) ಓ ಭಾರವಾದ ಎರಡು ಸಮುದಾಯಗಳೇ!(1192) ನಿಮಗಾಗಿ ನಾವು ಬಿಡುವು ಮಾಡಿಕೊಳ್ಳುವೆವು.(1193)
1192. ಅಂದರೆ ಮನುಷ್ಯರು ಮತ್ತು ಜಿನ್ನ್‌ಗಳು. 1193. ನಿಮ್ಮನ್ನು ವಿಚಾರಣೆ ಮಾಡಲು ಮತ್ತು ಪ್ರತಿಫಲ ನೀಡಲು ನಾವು ಒಂದು ಸಂದರ್ಭವನ್ನು ನಿಗದಿಗೊಳಿಸುವೆವು ಎಂದರ್ಥ.

(32) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(33) ಓ ಜಿನ್ನ್ ಮತ್ತು ಮನುಷ್ಯ ಸಮುದಾಯಗಳೇ! ಆಕಾಶಗಳ ಮತ್ತು ಭೂಮಿಯ ವಲಯಗಳಿಂದ ಹೊರಹೋಗಲು ನಿಮಗೆ ಸಾಧ್ಯವೆಂದಾದರೆ ಹೊರಹೋಗಿರಿ. ಒಂದು ಅಧಿಕಾರವು ಲಭ್ಯವಾಗದೆ ನೀವು ಹೊರಹೋಗಲಾರಿರಿ.

(34) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(35) ನಿಮ್ಮಿಬ್ಬರೆಡೆಗೆ ಅಗ್ನಿಜ್ವಾಲೆ ಮತ್ತು ಹೊಗೆಯನ್ನು ಕಳುಹಿಸಲಾಗುವುದು. ಆಗ ನಿಮಗೆ ರಕ್ಷಾಮಾರ್ಗವನ್ನು ಸ್ವೀಕರಿಸಲು ಸಾಧ್ಯವಾಗದು.

(36) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(37) ಆಕಾಶವು ಒಡೆದು ಹೋಳಾಗಿ ಅದು ಎಣ್ಣೆಯಂತೆಯೂ ಗುಲಾಬಿ ಬಣ್ಣವುಳ್ಳದ್ದೂ ಆಗುವುದು.

(38) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(39) ಆ ದಿನದಂದು ಯಾವುದೇ ಮನುಷ್ಯನಲ್ಲಾಗಲಿ ಜಿನ್ನ್‌ಗಳಲ್ಲಾಗಲಿ ಅವನ ಪಾಪದ ಬಗ್ಗೆ ಕೇಳಲಾಗದು.(1194)
1194. ಈ ಜಗತ್ತಿನಲ್ಲಿರುವ ನ್ಯಾಯಾಧೀಶರಿಗೆ ಅಪರಾಧಿಗಳ ವಿಚಾರಣೆ ಮಾಡಿ ಸತ್ಯವನ್ನು ಹೊರತರಿಸಬೇಕಾಗುತ್ತದೆ. ಆದರೆ ಅಲ್ಲಾಹುವಿಗೆ ನ್ಯಾಯ ತೀರ್ಮಾನ ಮಾಡಲು ಅವುಗಳ ಅಗತ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನ ಕರ್ಮ ದಾಖಲೆಯನ್ನು ಅವನವನ ಸಮ್ಮುಖದಲ್ಲಿಟ್ಟು, ಮನುಷ್ಯನ ಕೈಕಾಲುಗಳು ಅವರಿಗೆ ವಿರುದ್ಧವಾಗಿ ಸಾಕ್ಷಿ ನುಡಿಯುವಂತೆ (36:65) ಮಾಡುವ ಮೂಲಕ ಪ್ರಶ್ನೆ ಕೇಳುವ ಅಥವಾ ವಿಚಾರಿಸುವ ಅಗತ್ಯವಿಲ್ಲವಾಗುತ್ತದೆ.

(40) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(41) ಅಪರಾಧಿಗಳನ್ನು ಅವರ ಲಕ್ಷಣಗಳ ಮೂಲಕ ಗುರುತಿಸಲಾಗುವುದು. ತರುವಾಯ (ಅವರ) ಜುಟ್ಟು ಮತ್ತು ಪಾದಗಳಿಂದ ಅವರನ್ನು ಹಿಡಿಯಲಾಗುವುದು.

(42) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(43) ಅಪರಾಧಿಗಳು ನಿಷೇಧಿಸುವ ನರಕಾಗ್ನಿಯು ಇದೇ ಆಗಿದೆ.

(44) ಅದರ ಮತ್ತು ಕುದಿಯುವ ಬಿಸಿನೀರಿನ ನಡುವೆ ಅವರು ಸುತ್ತುತ್ತಿರುವರು.

(45) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(46) ತನ್ನ ರಬ್‌ನ ಸನ್ನಿಧಿಯನ್ನು ಭಯಪಟ್ಟವನಿಗೆ ಎರಡು ಸ್ವರ್ಗೋದ್ಯಾನಗಳಿವೆ.(1195)
1195. 46ರಿಂದ 60ರವರೆಗಿನ ಸೂಕ್ತಿಗಳಲ್ಲಿ ಅಲ್ಲಾಹುವಿನ ಬಳಿ ಅತಿಹೆಚ್ಚು ಸಾಮೀಪ್ಯಗಳಿಸಿದ ದಾಸರಿಗಿರುವ ಪ್ರತಿಫಲದ ಬಗ್ಗೆ ಮತ್ತು 62ರಿಂದ 76ರವರೆಗಿರುವ ವಚನಗಳಲ್ಲಿ ಅದರ ಕೆಳಗಿನ ಪದವಿಯಲ್ಲಿರುವ ಸತ್ಯವಿಶ್ವಾಸಿಗಳ ಪ್ರತಿಫಲದ ಬಗ್ಗೆ ಪ್ರಸ್ತಾಪಿಸಲಾಗಿದೆಯೆಂದು ಪ್ರಮುಖ ವ್ಯಾಖ್ಯಾನಕಾರರು ಹೇಳಿದ್ದಾರೆ.

(47) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(48) ಹಲವು ತರಹದ ಸುಖ ಐಶ್ವರ್ಯಗಳಿರುವ ಎರಡು (ಸ್ವರ್ಗೋದ್ಯಾನಗಳು).

(49) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(50) ಅವೆರಡರಲ್ಲಿಯೂ ಹರಿಯುತ್ತಿರುವ ಎರಡು ತೊರೆಗಳಿವೆ.

(51) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(52) ಅವೆರಡರಲ್ಲಿಯೂ ಪ್ರತಿಯೊಂದು ಫಲವರ್ಗಕ್ಕೆ ಸೇರಿದ ಎರಡೆರಡು ಜೋಡಿಗಳಿವೆ.

(53) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(54) ಅವರು ಕೆಲವು ಹಾಸಿಗೆಗಳಲ್ಲಿ ಒರಗಿ ಕುಳಿತಿರುವರು. ಅವುಗಳ ಒಳಭಾಗವನ್ನು ದಪ್ಪ ರೇಷ್ಮೆಯಿಂದ ನಿರ್ಮಿಸಲಾಗಿದೆ. ಆ ಎರಡು ಉದ್ಯಾನಗಳಲ್ಲಿ ಫಲಗಳು ಬಾಗಿಕೊಂಡಿರುವುದು.

(55) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(56) ದೃಷ್ಟಿಯನ್ನು ನಿಯಂತ್ರಿಸುವ ಸ್ತ್ರೀಯರು ಅವುಗಳಲ್ಲಿರುವರು. ಅವರಿಗಿಂತ ಮುಂಚೆ ಮನುಷ್ಯನಾಗಲಿ ಜಿನ್ನಾಗಲಿ ಅವರನ್ನು ಸ್ಪರ್ಶಿಸಿಲ್ಲ.

(57) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(58) ಅವರು ಮಾಣಿಕ್ಯ ಮತ್ತು ಹವಳದಂತಿರುವರು.

(59) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(60) ಸತ್ಕರ್ಮಕ್ಕಿರುವ ಪ್ರತಿಫಲವು ಸತ್ಫಲವಲ್ಲದೆ ಇನ್ನೇನು?(1196)
1196. ಮನುಷ್ಯನ ಕರ್ಮ ಒಳಿತಾಗಿರುವಾಗ ಅದಕ್ಕಿರುವ ಅಲ್ಲಾಹುವಿನ ಪ್ರತಿಫಲವೂ ಒಳಿತಾಗಿರುವುದು ಎಂದರ್ಥ.

(61) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(62) ಅವೆರಡರ ಹೊರತಾಗಿ(1197) ಬೇರೆ ಎರಡು ಸ್ವರ್ಗೋದ್ಯಾನಗಳಿವೆ.
1197. ‘ಮಿನ್ ದೂನಿಹಿಮಾ’ ಎಂದರೆ ಅವೆರಡರ ಹೊರತಾಗಿ ಅಥವಾ ಅವೆರಡರ ಕೆಳಗಿನದಾಗಿ ಎಂದೂ ಅರ್ಥೈಸಲಾಗುತ್ತದೆ.

(63) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(64) ಕಡುಹಸಿರನ್ನು ಹೊದ್ದುಕೊಂಡಿರುವ ಎರಡು ಸ್ವರ್ಗೋದ್ಯಾನಗಳು.

(65) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(66) ಅವೆರಡರಲ್ಲಿಯೂ ರಭಸವಾಗಿ ಹರಿಯುವ ಎರಡು ತೊರೆಗಳಿವೆ.

(67) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(68) ಅವೆರಡರಲ್ಲಿಯೂ ಫಲಗಳಿವೆ. ಖರ್ಜೂರ ಮತ್ತು ದಾಳಿಂಬೆಗಳಿವೆ.

(69) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(70) ಅವುಗಳಲ್ಲಿ ಸುರಸುಂದರಿಯರಾದ ಉತ್ತಮ ಸ್ತ್ರೀಯರಿರುವರು.

(71) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(72) ಡೇರೆಗಳಲ್ಲಿ ಅದುಮಿಡಲಾಗಿರುವ ಬೆಳ್ಳಗಿನ ತರುಣಿಯರು!

(73) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(74) ಅವರಿಗಿಂತ ಮೊದಲು ಮನುಷ್ಯನಾಗಲಿ ಜಿನ್ನಾಗಲಿ ಅವರನ್ನು ಸ್ಪರ್ಶಿಸಿಲ್ಲ.

(75) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(76) ಅವರು ಹಸಿರು ವರ್ಣದ ದಿಂಬುಗಳಲ್ಲಿ ಮತ್ತು ಸುಂದರ ನೆಲಹಾಸುಗಳಲ್ಲಿ ಒರಗಿ ಕುಳಿತಿರುವರು.

(77) ಹಾಗಾದರೆ ನಿಮ್ಮಿಬ್ಬರ ರಬ್ ದಯಪಾಲಿಸಿರುವ ಅನುಗ್ರಹಗಳಲ್ಲಿ ನೀವು ಯಾವುದನ್ನು ನಿಷೇಧಿಸುವಿರಿ?

(78) ಮಹತ್ವಪೂರ್ಣನೂ ಔದಾರ್ಯಪೂರ್ಣನೂ ಆಗಿರುವ ತಮ್ಮ ರಬ್‌ನ ನಾಮವು ಅನುಗ್ರಹೀತವಾಗಿದೆ.