(1) ನಕ್ಷತ್ರದ ಮೇಲಾಣೆ! ಅದು ಮರೆಯಾಗುವಾಗ.
(2) ನಿಮ್ಮ ಜೊತೆಗಾರ(1160) ದಾರಿತಪ್ಪಿಲ್ಲ, ಅವರು ದುರ್ಮಾರ್ಗಿಯೂ ಆಗಿಲ್ಲ.
1160. ನಲ್ವತ್ತು ವರ್ಷಗಳ ಕಾಲ ಮಕ್ಕಾ ನಿವಾಸಿಗಳಾದ ಕುರೈಶರ ಮಧ್ಯೆ ಅವರ ಉತ್ತಮ ಜೊತೆಗಾರರಾಗಿ ಬದುಕಿದ ಮುಹಮ್ಮದ್(ಸ) ರವರ ಬಗ್ಗೆ ಇಲ್ಲಿ ‘ನಿಮ್ಮ ಜೊತೆಗಾರರು’ ಎಂದು ಹೇಳಲಾಗಿದೆ.
(3) ಅವರು ತಮ್ಮಿಷ್ಟದಂತೆ ಮಾತನಾಡುವುದಿಲ್ಲ.
(4) ಅದು ಅವರಿಗೆ ದಿವ್ಯಸಂದೇಶವಾಗಿ ನೀಡಲಾಗುವ ಒಂದು ಸಂದೇಶ ಮಾತ್ರವಾಗಿದೆ.
(5) ಅಪಾರ ಶಕ್ತಿಯುಳ್ಳವರು (ಜಿಬ್ರೀಲ್) ಅವರಿಗೆ ಕಲಿಸಿರುವರು.
(6) ಸಾಮರ್ಥ್ಯವುಳ್ಳ ಒಬ್ಬ ವ್ಯಕ್ತಿ.(1161) ಅವರು (ತಮ್ಮ ನಿಜರೂಪದಲ್ಲಿ) ನೆಲೆಗೊಂಡರು.
1161. ‘ದೂ ಮಿರ್‍ರ’ ಎಂಬುದಕ್ಕೆ ದೈಹಿಕ ಸಾಮರ್ಥ್ಯವುಳ್ಳವರು, ಬುದ್ಧಿ ಸಾಮರ್ಥ್ಯವುಳ್ಳವರು ಎಂಬಿತ್ಯಾದಿಯಾಗಿ ಅರ್ಥ ನೀಡಲಾಗಿದೆ.
(7) ಅವರು ಅತ್ಯುನ್ನತವಾದ ಕ್ಷಿತಿಜದಲ್ಲಿದ್ದರು.(1162)
1162. ಜಿಬ್ರೀಲ್(ಅ) ದಿವ್ಯಸಂದೇಶದೊಂದಿಗೆ ತಮ್ಮ ನಿಜರೂಪದಲ್ಲಿ ಪ್ರವಾದಿ(ಸ) ರವರ ಸಮೀಪ ಬಂದ ಸಂದರ್ಭವನ್ನು ಈ ಸೂಕ್ತಿಯಲ್ಲಿ ಸೂಚಿಸಲಾಗಿದೆಯೆಂದು ಪ್ರಮುಖ ಕುರ್‌ಆನ್ ವ್ಯಾಖ್ಯಾನಕಾರರು ಹೇಳಿದ್ದಾರೆ.
(8) ತರುವಾಯ ಅವರು ಹತ್ತಿರಕ್ಕೆ ಬಂದರು. ತರುವಾಯ ಇನ್ನಷ್ಟು ಹತ್ತಿರವಾದರು.
(9) ಅವರು ಎರಡು ಬಿಲ್ಲುಗಳ ಅಂತರದಲ್ಲಿ(1163) ಅಥವಾ ಅದಕ್ಕಿಂತಲೂ ಹತ್ತಿರವಾಗಿದ್ದರು.
1163. ಅಭಿಮುಖವಾಗಿ ನಿಂತು ಸಂಭಾಷಣೆ ಮಾಡುವ ಇಬ್ಬರು ವ್ಯಕ್ತಿಗಳ ನಡುವಿನ ಅಂತರವನ್ನು ಸೂಚಿಸಲು ಬಳಸುವ ಒಂದು ರೂಪಕವಾಗಿದೆ ಎರಡು ಬಿಲ್ಲುಗಳ ಅಂತರ.
(10) ಆಗ ಅವನು (ಅಲ್ಲಾಹು) ತನ್ನ ದಾಸನಿಗೆ ದಿವ್ಯ ಸಂದೇಶವಾಗಿ ನೀಡಿದ್ದನ್ನು ದಿವ್ಯಸಂದೇಶವಾಗಿ ನೀಡಿದನು.
(11) ಅವರು ಕಂಡ ಆ ನೋಟವನ್ನು (ಅವರ) ಹೃದಯವು ನಿಷೇಧಿಸಲಿಲ್ಲ.
(12) ಹೀಗಿರುವಾಗ ಅವರು (ಪ್ರತ್ಯಕ್ಷವಾಗಿ) ಕಾಣುವುದರ ಬಗ್ಗೆ ನೀವು ಅವರೊಂದಿಗೆ ತರ್ಕಿಸುತ್ತಿರುವಿರಾ?
(13) ಇನ್ನೊಂದು ಅವರೋಹಣದಲ್ಲೂ(1164) ಅವರು ಆ ಮಲಕನ್ನು ಕಂಡಿದ್ದರು.
1164. ಮತ್ತೊಂದು ಬಾರಿ ಜಿಬ್ರೀಲ್(ಅ) ರವರು ಉಪರಿಲೋಕದಿಂದ ಇಳಿದ ಸಂದರ್ಭ ಎಂದರ್ಥ.
(14) ತುತ್ತತುದಿಯ ಬೋರೆ ಮರದ ಬಳಿಯಲ್ಲಿ.(1165)
1165. ‘ಸಿದ್‍ರಃ’ ಎಂದರೆ ಬೋರೆ ಮರ ಮತ್ತು ‘ಮುನ್ತಹಾ’ ಎಂದರೆ ತುತ್ತತುದಿ ಅಥವಾ ಗಡಿ ಎಂದರ್ಥ. ಸಿದ್ರತುಲ್ ಮುನ್ತಹಾ ಎಂದರೆ ಉಪರಿಲೋಕದಲ್ಲಿರುವ ಅತ್ಯದ್ಭುತವಾದ ಒಂದು ಮರವಾಗಿದೆಯೆಂದು ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(15) ವಾಸ್ತವ್ಯದ ಸ್ವರ್ಗವು ಅದರ ಬಳಿಯಿದೆ.
(16) ಆ ಬೋರೆ ಮರವನ್ನು ಆವರಿಸಬೇಕಾದುದೆಲ್ಲವೂ ಆವರಿಸಿದಾಗ.
(17) (ಪ್ರವಾದಿಯವರ) ದೃಷ್ಟಿಯು ಜಾರಿಹೋಗುವುದಾಗಲಿ, ಅತಿಕ್ರಮಿಸುವುದಾಗಲಿ ಮಾಡಲಿಲ್ಲ.(1166)
1166. ಆಕಾಶಾರೋಹಣದ ಸಂದರ್ಭದಲ್ಲಿ ಪ್ರವಾದಿ(ಸ) ರವರು ಕಂಡ ದೃಶ್ಯಗಳ ಬಗ್ಗೆ 13ರಿಂದ 18ರವರೆಗಿನ ಸೂಕ್ತಿಗಳಲ್ಲಿ ವಿವರಿಸಲಾಗಿದೆಯೆಂದು ಪ್ರಮುಖ ವ್ಯಾಖ್ಯಾನಕಾರರು ಹೇಳಿದ್ದಾರೆ. ಇದಕ್ಕೆ ಮಿಅ್‌ರಾಜ್‍ನ ಬಗ್ಗೆ ವರದಿಯಾದ ಹದೀಸ್‍ಗಳು ಬೆಂಬಲ ನೀಡುತ್ತವೆ. ಅಲ್ಲಾಹು ತೋರಿಸಿಕೊಟ್ಟ ವಿಷಯಗಳನ್ನು ನೋಡಿ ಗ್ರಹಿಸಿಕೊಳ್ಳುವುದರಲ್ಲಿ ಪ್ರವಾದಿ(ಸ) ರಿಗೆ ತಪ್ಪಾಗುವುದಾಗಲಿ ವಿರೋಧಿಸಲಾದ ವಿಷಯಗಳೆಡೆಗೆ ಅವರ ದೃಷ್ಟಿ ಅತಿಕ್ರಮಿಸುವುದಾಗಲಿ ಆಗಿಲ್ಲವೆಂದು 17ನೇ ಸೂಕ್ತಿಯು ಹೇಳುತ್ತದೆ.
(18) ಖಂಡಿತವಾಗಿಯೂ ಅವರು ತಮ್ಮ ರಬ್‌ನ ಮಹಾ ದೃಷ್ಟಾಂತಗಳ ಪೈಕಿ ಕೆಲವನ್ನು ಕಂಡರು.
(19) ನೀವು ಲಾತ ಮತ್ತು ಉಝ್ಝಾದ ಬಗ್ಗೆ ಚಿಂತಿಸಿ ನೋಡಿರುವಿರಾ?
(20) ಮೂರನೆಯದಾಗಿರುವ ಬೇರೊಂದು ಮನಾತದ ಬಗ್ಗೆ.(1167)
1167. ಲಾತ, ಉಝ್ಝಾ ಮತ್ತು ಮನಾತ ಅರಬ್ ಜನರು ಆರಾಧಿಸುತ್ತಿದ್ದ ಮೂರು ಆರಾಧ್ಯರಾಗಿದ್ದರು. ಲಾತ ಯಾತ್ರಾರ್ಥಿಗಳಿಗೆ ಪಾಯಸ ಬಡಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಮರಣಾನಂತರ ಅವರ ವಿಗ್ರಹವನ್ನು ಸ್ಥಾಪಿಸಿ ಅವರು ಆರಾಧಿಸತೊಡಗಿದರು. ಉಝ್ಝಾ ಎಂಬುದು ಒಂದು ಪುಣ್ಯಮರವಾಗಿತ್ತು. ಮನಾತ ಎಂಬುದು ಹುದೈಲ್ ಜನಾಂಗದವರು ಆರಾಧಿಸುತ್ತಿದ್ದ ಒಂದು ಬಂಡೆಯಾಗಿತ್ತು. ಇಂತಹ ಆರಾಧನೆಗಳಿಗೆ ಏನಾದರೂ ಆಧಾರವಿದೆಯೇ ಎಂದು ಅವರು ಚಿಂತಿಸಿದ್ದೇ ಇಲ್ಲ. ಅವರು ಕೇವಲ ಅಂಧಾನುಕರಣೆಯನ್ನು ಮಾತ್ರ ಮಾಡುತ್ತಿದ್ದರು.
(21) ನಿಮಗೆ (ಸಂತತಿಯಾಗಿ) ಗಂಡು ಮತ್ತು ಅಲ್ಲಾಹುವಿಗೆ ಹೆಣ್ಣೇ?
(22) ಹಾಗಾದರೆ ಅದು ನ್ಯಾಯಬದ್ಧವಲ್ಲದ ವಿಭಜನೆಯಾಗಿದೆ!(1168)
1168. ತಮ್ಮ ದೇವತೆಯರನ್ನು ಅಲ್ಲಾಹುವಿನ ಪುತ್ರಿಯರೆಂದು ಅರಬ್ ಬಹುದೇವವಿಶ್ವಾಸಿಗಳು ಕಲ್ಪಿಸಿಕೊಂಡಿದ್ದರು. ಆದರೆ ತಮಗೇನಾದರೂ ಹೆಣ್ಣುಮಗು ಜನಿಸಿದರೆ ಅವರಲ್ಲಿ ಹೆಚ್ಚಿನವರೂ ಅದನ್ನು ಅವಮಾನವೆಂದು ಬಗೆದು ಜೀವಂತ ಹೂಳುತ್ತಿದ್ದರು.
(23) ಅವು (ನಿಮ್ಮ ಆರಾಧ್ಯರು) ನೀವು ಮತ್ತು ನಿಮ್ಮ ಪೂರ್ವಿಕರು ನಾಮಕರಣ ಮಾಡಿರುವ ಕೆಲವು ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನು ಇಳಿಸಿಕೊಟ್ಟಿಲ್ಲ. ಅವರು ಅನುಸರಿಸುತ್ತಿರುವುದು ಊಹೆಯನ್ನು ಮತ್ತು ದೇಹೇಚ್ಛೆಯನ್ನು ಮಾತ್ರವಾಗಿದೆ. ಅವರ ಬಳಿಗೆ ಅವರ ರಬ್‌ನ ವತಿಯ ಸನ್ಮಾರ್ಗವು ಬಂದುಬಿಟ್ಟಿದೆ.
(24) ಅಥವಾ ಮನುಷ್ಯನಿಗೆ ಅವನು ಆಸೆಪಟ್ಟದ್ದು ದಕ್ಕುವುದೇ?
(25) ಆದರೆ ಪರಲೋಕ ಮತ್ತು ಇಹಲೋಕವು ಅಲ್ಲಾಹುವಿನದ್ದಾಗಿವೆ.(1169)
1169. ಇಹಲೋಕದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮತ್ತು ಪರಲೋಕದಲ್ಲಿ ಶಿಫಾರಸು ಮಾಡುವುದಕ್ಕಾಗಿ ಬಹುದೇವಾರಾಧಕರು ಅಲ್ಲಾಹುವಿನ ಹೊರತಾದ ಆರಾಧ್ಯರನ್ನು ಅರಸುತ್ತಿದ್ದರು. ಅದೊಂದು ಭ್ರಮೆ ಮಾತ್ರವಾಗಿದೆ. ಇಹಪರದಲ್ಲಿ ಸುಖಸೌಭಾಗ್ಯ ನೀಡಲು ಅಲ್ಲಾಹುವಿಗೆ ಮಾತ್ರ ಸಾಧ್ಯ ಎಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(26) ಆಕಾಶಗಳಲ್ಲಿ ಎಷ್ಟು ಮಲಕ್‍ಗಳಿವೆ! ಅಲ್ಲಾಹು ಅವನಿಚ್ಚಿಸುವವರಿಗೆ ಮತ್ತು ಅವನು ತೃಪ್ತಿಪಡುವವರಿಗೆ (ಶಿಫಾರಸು) ಮಾಡಲು ಅನುಮತಿ ನೀಡಿದ ಬಳಿಕವೇ ವಿನಾ ಅವರ ಶಿಫಾರಸು ಯಾವುದೇ ಪ್ರಯೋಜನವನ್ನು ನೀಡದು.
(27) ಖಂಡಿತವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಮಲಕ್‍ಗಳಿಗೆ ಸ್ತ್ರೀಯರ ಹೆಸರನ್ನಿಡುವರು.(1170)
1170. ಅರಬ್ ಮುಶ್ರಿಕರು ಮಲಕ್‍ಗಳನ್ನು ಅಲ್ಲಾಹುವಿನ ಪುತ್ರಿಯರೆಂದು ಹೇಳುತ್ತಿದ್ದರು.
(28) ಅವರಿಗೆ ಅದರ ಬಗ್ಗೆ ಯಾವುದೇ ಅರಿವಿಲ್ಲ. ಅವರು ಊಹೆಯನ್ನು ಮಾತ್ರ ಅನುಸರಿಸುತ್ತಿರುವರು. ಖಂಡಿತವಾಗಿಯೂ ಸತ್ಯಕ್ಕೆ ಸಂಬಂಧಿಸಿದಂತೆ ಊಹೆಯು ಯಾವುದೇ ಪ್ರಯೋಜನವನ್ನು ನೀಡದು.
(29) ಆದ್ದರಿಂದ ನಮ್ಮ ಸ್ಮರಣೆಯನ್ನು ಬಿಟ್ಟು ವಿಮುಖರಾದವರಿಂದ ಮತ್ತು ಇಹಲೋಕವನ್ನು ಮಾತ್ರ ಗುರಿಯಾಗಿಸಿದವರಿಂದ ತಾವು ವಿಮುಖರಾಗಿರಿ.
(30) ಜ್ಞಾನದಲ್ಲಿ ಅವರು ತಲುಪಿದ್ದು ಅಲ್ಲಿಯವರೆಗಾಗಿದೆ. ತನ್ನ ಮಾರ್ಗದಿಂದ ವ್ಯತಿಚಲಿಸಿದವರ ಬಗ್ಗೆ ಖಂಡಿತವಾಗಿಯೂ ತಮ್ಮ ರಬ್ ಹೆಚ್ಚು ಅರಿವುಳ್ಳವನಾಗಿರುವನು. ಅವನು ಸನ್ಮಾರ್ಗ ಪಡೆದವರ ಬಗ್ಗೆಯೂ ಹೆಚ್ಚು ಅರಿವುಳ್ಳವನಾಗಿರುವನು.
(31) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ದುಷ್ಕರ್ಮವೆಸಗಿದವರಿಗೆ ಅವರು ಮಾಡಿರುವುದಕ್ಕಿರುವ ಪ್ರತಿಫಲವನ್ನು ನೀಡುವ ಸಲುವಾಗಿ ಮತ್ತು ಸತ್ಕರ್ಮವೆಸಗಿದವರಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡುವ ಸಲುವಾಗಿ.
(32) ಅಂದರೆ ಮಹಾಪಾಪಗಳಿಂದ ಮತ್ತು ಕ್ಷುಲ್ಲಕವಲ್ಲದ ನೀಚಕೃತ್ಯಗಳಿಂದ ದೂರವಿರುವವರಿಗೆ. ಖಂಡಿತವಾಗಿಯೂ ತಮ್ಮ ರಬ್ ವಿಶಾಲವಾಗಿ ಪಾಪಮುಕ್ತಿ ನೀಡುವವನಾಗಿರುವನು. ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದ ಸಂದರ್ಭದಲ್ಲಿ(1171) ಮತ್ತು ನೀವು ನಿಮ್ಮ ತಾಯಂದಿರ ಉದರಗಳಲ್ಲಿ ಗರ್ಭಸ್ಥ ಶಿಶುಗಳಾಗಿದ್ದ ಸಂದರ್ಭದಲ್ಲಿಯೂ ನಿಮ್ಮ ಬಗ್ಗೆ ಹೆಚ್ಚು ಅರಿವುಳ್ಳವನು ಅವನೇ ಆಗಿರುವನು.(1172) ಆದ್ದರಿಂದ ನೀವು ಆತ್ಮಪ್ರಶಂಸೆ ಮಾಡದಿರಿ. ಭಯಭಕ್ತಿ ಪಾಲಿಸಿದವರ ಬಗ್ಗೆ ಅವನು ಚೆನ್ನಾಗಿ ಅರಿತಿರುವನು.
1171. ಸರ್ವಶಕ್ತನಾದ ಅಲ್ಲಾಹುವಿನ ಅನುಮತಿ ಪ್ರಕಾರ ಭೂಮಿಯಲ್ಲಿರುವ ಧಾತುಲವಣಗಳು ‘ಬುದ್ಧಿವಂತನಾದ ಮನುಷ್ಯ’ ಎಂಬ ಮಹಾ ಅದ್ಭುತವಾಗಿ ಮತ್ತು ಮನುಷ್ಯನ ಅತಿಸೂಕ್ಷ್ಮವಾದ ಕೋಟ್ಯಾನುಕೋಟಿ ಕೋಶಗಳಾಗಿ ರೂಪುಗೊಳ್ಳುತ್ತವೆ. 1172. ವೀರ್ಯಕೋಶ ಮತ್ತು ಅಂಡಕೋಶ ಸೇರಿಕೊಂಡು ಗರ್ಭಾಶಯದೊಳಗೆ ಸುಂದರ ಮಾನವ ಶಿಶುವಾಗಿ ಮಾರ್ಪಡುವ ಪ್ರಕ್ರಿಯೆಯಲ್ಲಿ ಅಲ್ಲಾಹುವಿನ ಹೊರತು ಇನ್ನಾರೂ ನಿರ್ಣಾಯಕ ಪಾತ್ರ ವಹಿಸುವುದಿಲ್ಲ. ಭ್ರೂಣದ ವ್ಯವಸ್ಥಿತವಾದ ಬೆಳವಣಿಗೆಯು ಕೇವಲ ಅಲ್ಲಾಹುವಿನ ಪರಿಪೂರ್ಣವಾದ ಅರಿವು ಮತ್ತು ಸಾಮರ್ಥ್ಯದಿಂದ ಮಾತ್ರ ನಡೆಯುತ್ತದೆ.
(33) ವಿಮುಖನಾಗಿ ಹೋದವನನ್ನು ತಾವು ಕಂಡಿರುವಿರಾ?
(34) ಅವನು ಸ್ವಲ್ಪ ದಾನಧರ್ಮ ಮಾಡಿದನು. ತರುವಾಯ ಅದನ್ನು ನಿಲ್ಲಿಸಿದನು.(1173)
1173. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸತ್ಯಧರ್ಮವನ್ನು ಸ್ವೀಕರಿಸಿ ತರುವಾಯ ಆವೇಶ, ಆಮಿಷಗಳಿಗೆ ಬಲಿಯಾಗಿ ವಿಶ್ವಾಸವನ್ನು ಮತ್ತು ಸತ್ಕರ್ಮವನ್ನು ಪರಿತ್ಯಾಗ ಮಾಡುವವರ ಬಗ್ಗೆ ಈ ಸೂಕ್ತಿಯು ಅವತೀರ್ಣಗೊಂಡಿದೆ.
(35) ಅವನ ಬಳಿ ಅಗೋಚರ ಜ್ಞಾನವಿದ್ದು ಅವನು ಅದರ ಮೂಲಕ ಕಂಡು ತಿಳಿಯುತ್ತಿರುವನೇ?
(36) ಅಥವಾ ಮೂಸಾರ ಹೊತ್ತಗೆಗಳಲ್ಲಿರುವುದರ(1174) ಬಗ್ಗೆ ಅವನಿಗೆ ತಿಳಿಸಲಾಗಿಲ್ಲವೇ?
1174. ಮೂಸಾ(ಅ) ರಿಗೆ ಮತ್ತು ಇಬ್ರಾಹೀಮ್(ಅ) ರಿಗೆ ನೀಡಲಾದ ಗ್ರಂಥಗಳು.
(37) ಮತ್ತು (ಕರ್ತವ್ಯಗಳನ್ನು) ಪೂರ್ಣಗೊಳಿಸಿದ ಇಬ್ರಾಹೀಮ್‌ರ ಹೊತ್ತಗೆಗಳಲ್ಲಿರುವುದನ್ನು.
(38) ಅಂದರೆ ಪಾಪಭಾರವನ್ನು ಹೊರುವ ಯಾರೂ ಇನ್ನೊಬ್ಬರ ಪಾಪಭಾರವನ್ನು ಹೊರಲಾರರೆಂದು,
(39) ಮನುಷ್ಯನಿಗೆ ಅವನು ಪರಿಶ್ರಮಪಟ್ಟಿರುವುದರ ಹೊರತು ಬೇರೇನೂ ಇಲ್ಲವೆಂದು,(1175)
1175. ಯಾವುದೇ ಮನುಷ್ಯನಿಗೆ ಮೋಕ್ಷವು ಸಿಗಬೇಕಾದರೆ ಅದಕ್ಕೆ ಅವನ ಕರ್ಮಗಳ ಹೊರತು ಇನ್ನಾವುದೂ ಪ್ರಯೋಜನಪಡಲಾರದೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
(40) ಅವನ ಪರಿಶ್ರಮದ ಫಲವನ್ನು ಅವನಿಗೆ ತರುವಾಯ ತೋರಿಸಿಕೊಡಲಾಗುವುದೆಂದು,
(41) ತರುವಾಯ ಅವನಿಗೆ ಅತ್ಯಂತ ಪೂರ್ಣವಾದ ಪ್ರತಿಫಲವನ್ನು ನೀಡಲಾಗುವುದೆಂದು,
(42) ಎಲ್ಲವೂ ಕೊನೆಗೊಳ್ಳುವುದು ತಮ್ಮ ರಬ್‌ನ ಬಳಿಗೆಂದು,
(43) ನಗುವಂತೆ ಮಾಡುವವನು ಮತ್ತು ಅಳುವಂತೆ ಮಾಡುವವನು ಅವನಾಗಿರುವನೆಂದು,
(44) ಮರಣವನ್ನು ನೀಡುವವನು ಮತ್ತು ಜೀವವನ್ನು ನೀಡುವವನು ಅವನಾಗಿರುವನೆಂದು,
(45) ಗಂಡು ಹೆಣ್ಣು ಎಂಬ ಜೋಡಿಯನ್ನು ಸೃಷ್ಟಿಸಿದ್ದು ಅವನಾಗಿರುವನೆಂದು,
(46) (ಗರ್ಭಾಶಯದಲ್ಲಿ) ಸ್ರವಿಸಲಾದಾಗ ಒಂದು ವೀರ್ಯದಿಂದ.
(47) ಎರಡನೆಯ ಬಾರಿ ಜೀವವನ್ನು ನೀಡುವುದು ಅವನ ಹೊಣೆಯಾಗಿದೆಯೆಂದು,
(48) ಐಶ್ವರ್ಯವನ್ನು ದಯಪಾಲಿಸಿದವನು ಮತ್ತು ಸಂತೃಪ್ತಗೊಳಿಸಿದವನು ಅವನಾಗಿರುವನೆಂದು,
(49) ಶಿಅ್‌ರಾ ನಕ್ಷತ್ರದ ಒಡೆಯನು ಅವನಾಗಿರುವನೆಂದು,(1176)
1176. ಶಿಅ್‌ರಾ ಅಥವಾ ಲುಬ್ಧಕ ನಕ್ಷತ್ರ ಅರೇಬಿಯಾದ ಕೆಲವು ಬಹುದೇವಾರಾಧಕರ ಆರಾಧ್ಯ ವಸ್ತುವಾಗಿತ್ತು.
(50) ಪೂರ್ವಕಾಲ ಜನತೆಯಾದ ಆದ್ ಜನಾಂಗವನ್ನು ಅವನು ನಾಶ ಮಾಡಿದವನೆಂದು,
(51) ಮತ್ತು ಸಮೂದ್ ಜನಾಂಗವನ್ನು. ಅವರಲ್ಲಿ ಒಬ್ಬನನ್ನೂ ಬಾಕಿಯುಳಿಸದೆ.
(52) ಅದಕ್ಕಿಂತ ಮುಂಚೆ ನೂಹ್‍ರ ಜನತೆಯನ್ನು (ಅವನು ನಾಶ ಮಾಡಿರುವನು). ಖಂಡಿತವಾಗಿಯೂ ಅವರು ಮಹಾ ಅಕ್ರಮಿಗಳೂ ಮಹಾ ಧಿಕ್ಕಾರಿಗಳೂ ಆಗಿದ್ದರು.
(53) ಬುಡಮೇಲುಗೊಳಿಸಲಾದ ಪ್ರದೇಶವನ್ನೂ(1177) ಅವನು ಧ್ವಂಸ ಮಾಡಿದನು.
1177. ಅಂದರೆ ಲೂತ್(ಅ) ರವರ ಜನತೆ ವಾಸವಾಗಿದ್ದ ಸೊದೋಮ್ ಮತ್ತು ಗೊಮೋರಾ ಪ್ರದೇಶಗಳು.
(54) ತರುವಾಯ ಅವನು ಆ ಪ್ರದೇಶವನ್ನು ಭೀಕರವಾದ ಒಂದು (ಶಿಕ್ಷೆಯ) ಹೊದಿಕೆಯಿಂದ ಹೊದಿಸಿದನು.
(55) ಆದ್ದರಿಂದ ತಮ್ಮ ರಬ್‌ನ ಅನುಗ್ರಹಗಳ ಪೈಕಿ ಯಾವುದರ ಬಗ್ಗೆ ತಾವು ತರ್ಕಿಸುತ್ತಿರುವಿರಿ?
(56) ಇವರು (ಪ್ರವಾದಿಯವರು) ಪೂರ್ವಿಕರಾದ ಮುನ್ನೆಚ್ಚರಿಕೆಗಾರರಲ್ಲಿ ಸೇರಿದ ಒಬ್ಬ ಮುನ್ನೆಚ್ಚರಿಕೆಗಾರರಾಗಿರುವರು.
(57) ಸನ್ನಿಹಿತವಾಗಿರುವ ಆ ಘಟನೆ(1178) ಸನ್ನಿಹಿತವಾಗಿದೆ.
1178. ಲೋಕಾಂತ್ಯ ಅಥವಾ ಅಂತಿಮ ವಿಚಾರಣೆ
(58) ಅದನ್ನು ನಿವಾರಿಸುವವರು ಅಲ್ಲಾಹುವಿನ ಹೊರತು ಯಾರೂ ಇಲ್ಲ.(1179)
1179. ಅಲ್ಲಾಹುವಿನ ಹೊರತು ಯಾರಿಗೂ ಅದನ್ನು ನಿವಾರಿಸಲು ಸಾಧ್ಯವಾಗದು ಎಂದರ್ಥ.
(59) ಹಾಗಾದರೆ ನೀವು ಈ ವಾರ್ತೆಯ ಬಗ್ಗೆ ಅಚ್ಚರಿಪಡುತ್ತಿರುವಿರಾ?
(60) ನೀವು ನಗುತ್ತಿರುವಿರಾ? ನೀವು ಅಳಲಾರಿರಾ?
(61) ನೀವು ಅಲಕ್ಷ್ಯತೆಯಲ್ಲಿರುವಿರಾ?
(62) ಆದ್ದರಿಂದ ನೀವು ಅಲ್ಲಾಹುವಿಗೆ ಸಾಷ್ಟಾಂಗ ಮಾಡಿರಿ ಮತ್ತು (ಅವನನ್ನು) ಆರಾಧಿಸಿರಿ.