(1) ಅಲಿಫ್, ಲಾಮ್, ರಾ. ಇದು ಗ್ರಂಥವಾಗಿದೆ. ಇದರಲ್ಲಿರುವ ಸೂಕ್ತಿಗಳನ್ನು ವಿಚಾರಭದ್ರಗೊಳಿಸಲಾಗಿದೆ. ತರುವಾಯ ಅವುಗಳನ್ನು ವಿಶದೀಕರಿಸಲಾಗಿದೆ. ಇದು ಯುಕ್ತಿಪೂರ್ಣನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹುವಿನ ಬಳಿಯಿಂದಿರುವುದಾಗಿದೆ.
(2) ನೀವು ಅಲ್ಲಾಹುವಿನ ಹೊರತು ಇನ್ನಾರನ್ನೂ ಆರಾಧಿಸಬಾರದು ಎಂಬುದಕ್ಕಾಗಿ. ಖಂಡಿತವಾಗಿಯೂ ನಾನು ನಿಮಗೆ ಅವನಿಂದಿರುವ ಒಬ್ಬ ಮುನ್ನೆಚ್ಚರಿಕೆ ನೀಡುವವನೂ, ಶುಭವಾರ್ತೆ ತಿಳಿಸುವವನೂ ಆಗಿರುವೆನು.(368)
368. ಸತ್ಯವಿಶ್ವಾಸಿಗಳಿಗೆ ಇಹಪರ ಸೌಭಾಗ್ಯಗಳ ಬಗ್ಗೆ ಶುಭವಾರ್ತೆಯನ್ನು ನೀಡುವುದು ಮತ್ತು ಸತ್ಯನಿಷೇಧಿಗಳಿಗೆ ಇಹಪರ ಶಿಕ್ಷೆಯ ಬಗ್ಗೆ ಮುನ್ನೆಚ್ಚರಿಕೆ ನೀಡುವುದು ಸಂದೇಶವಾಹಕತ್ವದ ಒಂದು ಪ್ರಮುಖ ಅಂಗವಾಗಿದೆ.
(3) ನೀವು ನಿಮ್ಮ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ತರುವಾಯ ಅವನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ಅವನು ನಿಮಗೆ ನಿರ್ದಿಷ್ಟ ಅವಧಿಯೊಂದರ ತನಕ ಉತ್ತಮವಾದ ಸುಖಾನುಭೂತಿಗಳನ್ನು ನೀಡುವನು ಮತ್ತು ಉದಾರಮನಸ್ಕರಾದ ಸರ್ವರಿಗೂ ಅವರ ಉದಾರತೆಗಿರುವ ಪ್ರತಿಫಲವನ್ನು ನೀಡುವನು. ನೀವೇನಾದರೂ ವಿಮುಖರಾಗುವುದಾದರೆ ಖಂಡಿತವಾಗಿಯೂ ಭಯಾನಕವಾದ ದಿನವೊಂದರ ಶಿಕ್ಷೆಯನ್ನು ನಾನು ನಿಮ್ಮ ಮೇಲೆ ಭಯಪಡುತ್ತಿರುವೆನು.
(4) ನಿಮ್ಮ ಮರಳುವಿಕೆಯು ಅಲ್ಲಾಹುವಿನೆಡೆಗೇ ಆಗಿದೆ. ಅವನು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.
(5) ಅರಿಯಿರಿ! ಅವರು ಅವನಿಂದ (ಅಲ್ಲಾಹುವಿನಿಂದ) ಅಡಗಿಕೊಳ್ಳುಸಲುವಾಗಿ ತಮ್ಮ ಎದೆಗಳನ್ನು ಮಡಚುತ್ತಿರುವರು.(369) ಅರಿಯಿರಿ! ಅವರು ತಮ್ಮ ಉಡುಪುಗಳನ್ನು ಹೊದ್ದುಕೊಳ್ಳುವಾಗಲೂ ಅವರು ಬಚ್ಚಿಡುವುದನ್ನು ಮತ್ತು ಬಹಿರಂಗಗೊಳಿಸುವುದನ್ನು ಅವನು ಅರಿಯುವನು. ಖಂಡಿತವಾಗಿಯೂ ಅವನು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.
369. ಈ ಸೂಕ್ತಿಯು ಸತ್ಯದೆಡೆಗೆ ಕರೆಯಲಾದರೆ ತಲೆಯನ್ನು ಸಂಪೂರ್ಣವಾಗಿ ತಗ್ಗಿಸಿ ಅಡಗಿಬಿಡುತ್ತಿದ್ದ ಜನರ ಬಗ್ಗೆಯಾಗಿದೆ ಎಂಬುದು ಇದರ ಒಂದು ವ್ಯಾಖ್ಯಾನವಾಗಿದೆ. ‘ಎದೆಗಳನ್ನು ಮಡಚುತ್ತಿರುವರು’ ಎಂಬುದಕ್ಕೆ ತಮ್ಮ ಹಗೆಯನ್ನು ಹುದುಗಿಸಿಡುವರು ಎಂಬ ಅರ್ಥವನ್ನು ನೀಡಿದ ವ್ಯಾಖ್ಯಾನಕಾರರೂ ಇದ್ದಾರೆ.
(6) ಭೂಮಿಯಲ್ಲಿ ಯಾವುದೇ ಜೀವಿಯೂ ಇಲ್ಲ, ಅದಕ್ಕೆ ಅನ್ನಾಧಾರ ನೀಡುವ ಹೊಣೆಯನ್ನು ಅಲ್ಲಾಹು ವಹಿಸಿಕೊಂಡಿರುವ ಹೊರತು. ಅವುಗಳ ವಾಸ್ತವ್ಯವನ್ನೂ ಸಂಗ್ರಹಣಾಸ್ಥಳವನ್ನೂ(370) ಅವನು ಅರಿಯುವನು. ಎಲ್ಲವೂ ಸ್ಪಷ್ಟವಾದ ಒಂದು ದಾಖಲೆಯಲ್ಲಿದೆ.
370. ‘ಸಂಗ್ರಹಣಾ ಸ್ಥಳ’ವೆಂದರೆ ಗರ್ಭಾಶಯ, ಗೋರಿ, ತಾತ್ಕಾಲಿಕ ನೆಲೆ ಎಂಬಿತ್ಯಾದಿಯಾಗಿ ವ್ಯಾಖ್ಯಾನಿಸಲಾಗಿದೆ.
(7) ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ ಆಗಿರುವನು. ಅವನ ಅರ್ಶ್ (ಸಿಂಹಾಸನ) ನೀರಿನ ಮೇಲಿತ್ತು.(371) ಇದು ಕರ್ಮವೆಸಗುವುದರಲ್ಲಿ ನಿಮ್ಮ ಪೈಕಿ ಅತ್ಯುತ್ತಮನು ಯಾರೆಂದು ನಿಮ್ಮನ್ನು ಪರೀಕ್ಷಿಸುವ ಸಲುವಾಗಿದೆ. “ಖಂಡಿತವಾಗಿಯೂ ಮರಣಾನಂತರ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು” ಎಂದು ತಾವು ಹೇಳಿದರೆ ಅವಿಶ್ವಾಸಿಗಳು ಹೇಳುವರು: “ಇದು ಸ್ಪಷ್ಟವಾದ ಮಾಂತ್ರಿಕತೆಯಲ್ಲದೆ ಇನ್ನೇನೂ ಅಲ್ಲ.”
371. ‘ಅಲ್ಲಾಹುವಿನ ಸಿಂಹಾಸನವು ನೀರಿನ ಮೇಲಿತ್ತು’ ಎಂಬುದರ ಅರ್ಥದ ಬಗ್ಗೆ ಖಚಿತವಾದ ಅರಿವು ತಫ್ಸೀರ್ ಗ್ರಂಥಗಳಿಂದ ಸಿಗುವುದಿಲ್ಲ. ಅಗೋಚರ ವಿಷಯಗಳ ಬಗ್ಗೆ ಅಲ್ಲಾಹು ನಮಗೆ ಏನನ್ನು ತಿಳಿಸಿಕೊಟ್ಟಿರುತ್ತಾನೋ ಅದಕ್ಕಿಂತ ಆಚೆ ಹೋಗಲು ನಮಗೆ ಅನುಮತಿಯಿಲ್ಲ. ಪ್ರಪಂಚೋತ್ಪತ್ತಿಯ ಬಗ್ಗೆಯಿರುವ ಆಧುನಿಕ ಸಂಶೋಧನೆಗಳ ಬೆಳಕಿನಲ್ಲಿ ‘ಆದಿಜಲ’ದ ಬಗ್ಗೆ ಬಹಳ ಸ್ಪಷ್ಟವಾಗಿ ಅರಿಯಬಹುದಾಗಿದೆ ಎಂದು ಆಧುನಿಕ ಮುಸ್ಲಿಮ್ ವಿದ್ವಾಂಸರ ಪೈಕಿ ಕೆಲವರು ಹೇಳಿರುವರು.
(8) ಒಂದು ನಿರ್ದಿಷ್ಟ ಅವಧಿಯವರೆಗೆ ನಾವು ಅವರಿಂದ ಶಿಕ್ಷೆಯನ್ನು ಮುಂದೂಡಿದರೆ ಅವರು ಹೇಳುವರು: “ಅದನ್ನು ತಡೆಹಿಡಿದಿರುವುದಾದರೂ ಏನು?” ತಿಳಿಯಿರಿ! ಅದು ಅವರೆಡೆಗೆ ಬರುವ ದಿನ ಅದನ್ನು ಅವರಿಂದ ತಿರುಗಿಸಿಬಿಡಲಾಗದು. ಯಾವುದರ ಬಗ್ಗೆ ಅವರು ಗೇಲಿ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿಯೇ ಬಿಡುವುದು.
(9) ನಾವು ಮನುಷ್ಯನಿಗೆ ನಮ್ಮ ಕಡೆಯ ಒಂದು ಅನುಗ್ರಹವನ್ನು ಆಸ್ವಾದಿಸುವಂತೆ ಮಾಡಿ, ತರುವಾಯ ಅದನ್ನು ಅವನಿಂದ ಹಿಂದೆಗೆದರೆ ಖಂಡಿತವಾಗಿಯೂ ಅವನು ನಿರಾಶನೂ, ಕೃತಘ್ನನೂ ಆಗುವನು.
(10) ಯಾವುದಾದರೂ ಸಂಕಷ್ಟವು ಅವನನ್ನು ಸ್ಪರ್ಶಿಸಿದ ಬಳಿಕ ನಾವು ಅವನಿಗೆ ಅನುಗ್ರಹವೊಂದನ್ನು ಆಸ್ವಾದಿಸುವಂತೆ ಮಾಡಿದರೆ ಖಂಡಿತವಾಗಿಯೂ ಅವನು ಹೇಳುವನು: “ಕೆಡುಕುಗಳು ನನ್ನಿಂದ ದೂರವಾಗಿವೆ”. ಖಂಡಿತವಾಗಿಯೂ ಅವನು ಆನಂದಭರಿತನೂ ಅಹಂಭಾವಿಯೂ ಆಗುವನು.
(11) ಆದರೆ ತಾಳ್ಮೆ ವಹಿಸಿದವರು ಮತ್ತು ಸತ್ಕರ್ಮಗೈದವರ ಹೊರತು. ಅವರಿಗೆ ಪಾಪಮುಕ್ತಿಯೂ, ಮಹಾ ಪ್ರತಿಫಲವೂ ಇರುವುದು.
(12) “ಇವರ ಮೇಲೆ ಒಂದು ನಿಧಿಯನ್ನು ಇಳಿಸಲಾಗಿಲ್ಲವೇಕೆ? ಅಥವಾ ಇವರೊಂದಿಗೆ ಒಬ್ಬ ಮಲಕ್ ಬರಲಿಲ್ಲವೇಕೆ?” ಎಂದು ಅವರು (ತಮ್ಮ ಬಗ್ಗೆ) ಹೇಳುತ್ತಿರುವ ಕಾರಣದಿಂದ ತಮಗೆ ನೀಡಲಾಗುತ್ತಿರುವ ದಿವ್ಯ ಸಂದೇಶಗಳ ಪೈಕಿ ಕೆಲವನ್ನು ತಾವು ಕೈಬಿಡಲೂಬಹುದು ಮತ್ತು ಅದರ ಬಗ್ಗೆ ತಮಗೆ ಮನಃಕ್ಲೇಶವುಂಟಾಗಲೂ ಬಹುದು.(372) ಆದರೆ ತಾವು ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿದ್ದೀರಿ. ಅಲ್ಲಾಹು ಎಲ್ಲ ವಸ್ತುಗಳ ಸಂರಕ್ಷಣೆಯನ್ನು ವಹಿಸಿಕೊಂಡವನಾಗಿರುವನು.
372. ಪದೇ ಪದೇ ವಿರೋಧವನ್ನೆದುರಿಸುವಾಗ ಮತ್ತು ಅಸಹ್ಯವಾದ ಚುಚ್ಚುಮಾತುಗಳನ್ನು ಕೇಳುವಾಗ ಪ್ರವಾದಿ(ಸ) ರಿಗೆ ಸಹಜವಾಗಿಯೂ ದುಃಖವುಂಟಾಗುತ್ತಿತ್ತು. ವಿರೋಧಿಗಳಿಗೆ ಇಷ್ಟವಿಲ್ಲದ ಕೆಲವು ಕುರ್‌ಆನ್ ಸೂಕ್ತಿಗಳನ್ನು ಅವರಿಗೆ ಓದಿಕೊಡದಿರುವುದು ಒಳ್ಳೆಯದಲ್ಲವೇ ಎಂಬ ಭಾವನೆಯು ಕೆಲವೊಮ್ಮೆ ಅವರಿಗೆ ಉಂಟಾಗುತ್ತಿತ್ತು. ಪ್ರವಾದಿ(ಸ) ರವರ ಹೊಣೆಯು ದಿವ್ಯ ಸಂದೇಶವನ್ನು ಪೂರ್ಣವಾಗಿ ಜನರಿಗೆ ತಲುಪಿಸಿಕೊಡುವುದು ಮಾತ್ರವಾಗಿದೆಯೇ ವಿನಾ ಜನರನ್ನು ವಿಶ್ವಾಸಿಗಳನ್ನಾಗಿ ಮಾರ್ಪಡಿಸುವ ಹೊಣೆ ಅವರಿಗಿಲ್ಲವೆಂದು ಅಲ್ಲಾಹು ಇಲ್ಲಿ ನೆನಪಿಸಿಕೊಡುತ್ತಾನೆ.
(13) ಅಥವಾ, ಇದನ್ನು ಅವರು (ಪ್ರವಾದಿಯವರು) ಸ್ವತಃ ರಚಿಸಿರುವರು ಎಂದು ಅವರು ಹೇಳುತ್ತಿರುವರೇ? ತಾವು ಹೇಳಿರಿ: “ಹಾಗಾದರೆ ಇದರಂತೆ ರಚಿಸಲಾಗಿರುವ ಹತ್ತು ಅಧ್ಯಾಯಗಳನ್ನು ತನ್ನಿರಿ. ಅಲ್ಲಾಹುವಿನ ಹೊರತು ನಿಮಗೆ ಸಾಧ್ಯವಾಗುವವರನ್ನೆಲ್ಲ ಆಹ್ವಾನಿಸಿರಿ. ನೀವು ಸತ್ಯಸಂಧರಾಗಿದ್ದರೆ!
(14) ನಿಮ್ಮ ಆಹ್ವಾನಕ್ಕೆ ಅವರಾರೂ ಓಗೊಡದಿದ್ದರೆ ಇದು ಅವತೀರ್ಣಗೊಂಡಿರುವುದು ಅಲ್ಲಾಹುವಿನ ಅರಿವಿನೊಂದಿಗೆ ಮಾತ್ರವಾಗಿದೆ ಮತ್ತು ಅವನ ಹೊರತು ಅನ್ಯ ಆರಾಧ್ಯನಿಲ್ಲ ಎಂಬುದನ್ನು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಮುಸ್ಲಿಮರಾಗಲು ಸಿದ್ಧರಿದ್ದೀರಾ?”
(15) ಯಾರಾದರೂ ಐಹಿಕ ಜೀವನವನ್ನು ಮತ್ತು ಅದರ ಸೊಬಗನ್ನು ಬಯಸುವುದಾದರೆ(373) ಅವರ ಕರ್ಮಗಳ (ಪ್ರತಿಫಲವ)ನ್ನು ನಾವು ಅವರಿಗೆ ಅಲ್ಲಿಯೇ (ಇಹಲೋಕದಲ್ಲಿಯೇ) ಪೂರ್ಣವಾಗಿ ನೀಡುವೆವು. ಅಲ್ಲಿ ನಾವು ಅವರಿಗೆ ಏನನ್ನೂ ಕಡಿಮೆ ಮಾಡಲಾರೆವು.
373. ಲೌಕಿಕ ಜೀವನದ ಗುರಿಯು ಅನಶ್ವರವಾದ ಸ್ವರ್ಗವಾಗಿರಬೇಕು. ನಶ್ವರವಾದ ಐಹಿಕ ಲಾಭಗಳು ಮಹತ್ವಪೂರ್ಣವಾದ ಮನುಷ್ಯ ಜೀವನದ ಪರಮ ಗುರಿಯಾಗಿರಬಾರದು. ಇದರರ್ಥ ಲೌಕಿಕವಾದ ಸುಖಸೌಕರ್ಯಗಳನ್ನೆಲ್ಲಾ ತಿರಸ್ಕರಿಸಬೇಕೆಂದಲ್ಲ. ಆದರೆ ಇಸ್ಲಾಮ್ ಕಲಿಸುವುದೇನೆಂದರೆ ಅವುಗಳನ್ನು ಪರಮ ಗುರಿಗೆ ತಲುಪಲು ಬೇಕಾದ ಮಾರ್ಗಗಳನ್ನಾಗಿ ಮಾಡಿಕೊಳ್ಳಬೇಕೆಂದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಇಹಲೋಕವನ್ನೇ ಬದುಕಿನ ಗುರಿಯಾಗಿ ಮಾಡಿಕೊಂಡಿರುವರು. ಐಹಿಕಲೋಕದಲ್ಲಿ ಅವರು ಆಶಿಸುವುದನ್ನು ನೀಡಲು ಅಲ್ಲಾಹು ಹಿಂಜರಿಯುವುದಿಲ್ಲ. ಆದರೆ ಪರಲೋಕದಲ್ಲಿ ಅವರಿಗೆ ನರಕವಲ್ಲದೆ ಬೇರೇನೂ ಇರಲಾರದು.
(16) ಅಂತಹವರಿಗೆ ಪರಲೋಕದಲ್ಲಿ ನರಕಾಗ್ನಿಯ ಹೊರತು ಇನ್ನೇನೂ ಇರದು. ಇಹಲೋಕದಲ್ಲಿ ಅವರು ಮಾಡಿರುವುದೆಲ್ಲವೂ ವ್ಯರ್ಥವಾಗಿ ಬಿಟ್ಟಿರುವುದು. ಅವರು ಮಾಡಿಕೊಂಡಿರುವುದೆಲ್ಲವೂ ನಿಷ್ಫಲವಾಗಿರುವುವು.
(17) ಒಬ್ಬನು ತನ್ನ ರಬ್‌ನ ಕಡೆಯಿಂದಿರುವ ಸ್ಪಷ್ಟವಾದ ಪುರಾವೆಯನ್ನು ಅವಲಂಬಿಸಿರುವನು. ಅವನ ಕಡೆಯಿಂದಿರುವ ಒಂದು ಸಾಕ್ಷಿ (ಕುರ್‌ಆನ್) ಅದನ್ನು ಹಿಂಬಾಲಿಸುತ್ತಲೂ ಇರುವುದು. ಅದಕ್ಕಿಂತ ಮುಂಚೆ ಮಾರ್ಗದರ್ಶಿಯೂ ಕಾರುಣ್ಯವೂ ಆಗಿ ಮೂಸಾರ ಗ್ರಂಥವು ಬಂದಿತ್ತು. (ಹೀಗಿರುವವನು ಆ ಇಹಲೋಕ ಪ್ರೇಮಿಗಳಂತೆ ಕುರ್‌ಆನನ್ನು ನಿಷೇಧಿಸುವನೇ? ಇಲ್ಲ.) ಅಂತಹವರು ಅದರಲ್ಲಿ ವಿಶ್ವಾಸವಿಡುವರು.(374) ವಿವಿಧ ಗುಂಪುಗಳ ಪೈಕಿ ಅದರಲ್ಲಿ ಅವಿಶ್ವಾಸವಿಡುವವರು ಯಾರೋ ಅವರಿಗೆ ವಾಗ್ದಾನ ಮಾಡಲಾದ ಸ್ಥಳವು ನರಕವಾಗಿದೆ. ಆದುದರಿಂದ ಅದರ ಬಗ್ಗೆ ತಾವು ಸಂದೇಹ ಪಡದಿರಿ. ಖಂಡಿತವಾಗಿಯೂ ಅದು ತಮ್ಮ ರಬ್‌ನ ಕಡೆಯಿಂದಿರುವ ಸತ್ಯವಾಗಿದೆ. ಆದರೆ ಜನರ ಪೈಕಿ ಹೆಚ್ಚಿನವರೂ ವಿಶ್ವಾಸವಿಡಲಾರರು.
374. ಈ ಸೂಕ್ತಿಯಲ್ಲಿರುವ ‘ಯತ್ಲೂ’ ಎಂಬ ಪದಕ್ಕೆ ಹಿಂಬಾಲಿಸುವುದು, ಓದಿಕೊಡುವುದು ಎಂಬ ಅರ್ಥಗಳಿವೆ. ‘ಬಯ್ಯಿನಃ’ (ಪುರಾವೆ) ಎಂಬುದರ ತಾತ್ಪರ್ಯವು ಭೌದ್ಧಿಕ ಪುರಾವೆಯಾಗಿರಬಹುದು ಅಥವಾ ಗ್ರಂಥ ಪ್ರಮಾಣವಾಗಿರಬಹುದು. ಈ ವಚನವು ಕ್ರೈಸ್ತರ ಪೈಕಿ ಕುರ್‌ಆನ್‍ನಲ್ಲಿ ವಿಶ್ವಾಸವಿಟ್ಟವರ ಬಗ್ಗೆಯಾಗಿರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಅವರು ಇಂಜೀಲನ್ನು ಅವಲಂಬಿಸಿದ್ದರು. ಅದರ ಮೂಲವು ದೈವಿಕವಾಗಿದೆಯೆಂಬುದನ್ನು ದೃಢೀಕರಿಸುವ ಕುರ್‌ಆನ್ ಅದನ್ನು ಹಿಂಬಾಲಿಸುತ್ತಾ ಬಂದಿದೆ. ಅದಕ್ಕಿಂತ ಮುಂಚೆ ಬಂದ ಮೂಸಾ(ಅ) ರವರಿಗೆ ಅವತೀರ್ಣವಾದ ತೌರಾತ್ ಕೂಡ ಅವರ ಬಳಿಯಿದೆ. ಆದುದರಿಂದ ಸಂದೇಹರಹಿತವಾಗಿ ಅವರು ಕುರ್‌ಆನ್‍ನಲ್ಲಿ ವಿಶ್ವಾಸವಿಡುತ್ತಾರೆ.
(18) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತಲೂ ದೊಡ್ಡ ಅಕ್ರಮಿ ಇನ್ನಾರಿರುವನು? ಅವರನ್ನು ಅವರ ರಬ್‌ನ ಮುಂದೆ ಹಾಜರುಪಡಿಸಲಾಗುವುದು. ಸಾಕ್ಷಿಗಳು ಹೇಳುವರು: “ತಮ್ಮ ರಬ್‌ನ ಮೇಲೆ ಸುಳ್ಳು ಹೇಳಿದವರು ಇವರೇ ಆಗಿರುವರು.” ಅರಿಯಿರಿ! ಅಲ್ಲಾಹುವಿನ ಶಾಪವು ಆ ಅಕ್ರಮಿಗಳ ಮೇಲಿರುವುದು.
(19) ಅವರು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆಯುವವರೂ ಅದನ್ನು ವಕ್ರಗೊಳಿಸಲು ಬಯಸುವವರೂ ಆಗಿರುವರು. ಅವರು ಪರಲೋಕದಲ್ಲಿ ವಿಶ್ವಾಸವಿಡದವರಾಗಿರುವರು.
(20) ಭೂಮಿಯಲ್ಲಿ (ಅಲ್ಲಾಹುವನ್ನು) ಪರಾಭವಗೊಳಿಸಲು ಅವರಿಂದಾಗದು. ಅಲ್ಲಾಹುವಿನ ಹೊರತು ಅವರಿಗೆ ಅನ್ಯ ರಕ್ಷಕರೂ ಇರಲಾರರು. ಅವರಿಗೆ ಶಿಕ್ಷೆಯನ್ನು ಇಮ್ಮಡಿಗೊಳಿಸಲಾಗುವುದು. ಅವರಿಗೆ ಆಲಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರು ನೋಡಿ ತಿಳಿಯುವವರೂ ಆಗಿರಲಿಲ್ಲ.
(21) ಅಂತಹವರು ಸ್ವತಃ ತಮ್ಮನ್ನೇ ನಷ್ಟಪಡಿಸಿದವರಾಗಿರುವರು. ಅವರು ಹೆಣೆದು ರಚಿಸಿರುವುದೆಲ್ಲವೂ ಅವರನ್ನು ಬಿಟ್ಟು ಹೋಗಿರುವುದು.
(22) ನಿಸ್ಸಂದೇಹವಾಗಿಯೂ ಪರಲೋಕದಲ್ಲಿ ಅತ್ಯಧಿಕ ನಷ್ಟ ಹೊಂದಿದವರು ಅವರೇ ಆಗಿರುವರು.
(23) ಖಂಡಿತವಾಗಿಯೂ ವಿಶ್ವಾಸವಿಟ್ಟವರು, ಸತ್ಕರ್ಮಗೈದವರು ಮತ್ತು ತಮ್ಮ ರಬ್‌ನೆಡೆಗೆ ವಿನಯವಂತರಾಗಿ ಮರಳಿದವರು ಯಾರೋ ಅವರೇ ಸ್ವರ್ಗವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(24) ಈ ಎರಡು ಪಂಗಡಗಳ ಉಪಮೆಯು ಕುರುಡನೂ ಕಿವುಡನೂ ಆಗಿರುವ ಒಬ್ಬ ವ್ಯಕ್ತಿಯಂತೆಯೂ, ದೃಷ್ಟಿಯೂ ಶ್ರವಣಶಕ್ತಿಯೂ ಇರುವ ಇನ್ನೋರ್ವ ವ್ಯಕ್ತಿಯಂತೆಯೂ ಆಗಿದೆ. ಇವರಿಬ್ಬರೂ ಉಪಮೆಯಲ್ಲಿ ಸಮಾನರಾಗುವರೇ? ನೀವು ಚಿಂತಿಸುವುದಿಲ್ಲವೇ?
(25) ಖಂಡಿತವಾಗಿಯೂ ನಾವು ನೂಹ್‍ರನ್ನು ಅವರ ಜನತೆಯೆಡೆಗೆ ಕಳುಹಿಸಿದ್ದೇವೆ. (ಅವರು ಹೇಳಿದರು:) “ಖಂಡಿತವಾಗಿಯೂ ನಾನು ನಿಮಗೆ ಸ್ಪಷ್ಟವಾದ ಮುನ್ನೆಚ್ಚರಿಕೆ ನೀಡುವವನಾಗಿರುವೆನು.
(26) ಏನೆಂದರೆ ನೀವು ಅಲ್ಲಾಹುವಿನ ಹೊರತು ಬೇರೆ ಯಾರನ್ನೂ ಆರಾಧಿಸಬಾರದು. ಖಂಡಿತವಾಗಿಯೂ ನಾನು ನಿಮ್ಮ ಮೇಲೆ ಯಾತನಾಮಯವಾದ ದಿನವೊಂದರ ಶಿಕ್ಷೆಯನ್ನು ಭಯಪಡುತ್ತಿರುವೆನು.”
(27) ಆಗ ಅವರ ಜನತೆಯಲ್ಲಿರುವ ಸತ್ಯನಿಷೇಧಿಗಳಾದ ಮುಖಂಡರು ಹೇಳಿದರು: “ತಮ್ಮನ್ನು ನಾವು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ವಿನಾ ಕಾಣುತ್ತಿಲ್ಲ. ನಮ್ಮಲ್ಲಿ ಅತ್ಯಂತ ಕೆಳವರ್ಗದವರು ತಮ್ಮನ್ನು ಪ್ರಥಮ ನೋಟದಲ್ಲೇ (ಸರಿಯಾಗಿ ವಿವೇಚನೆ ಮಾಡದೆ) ಹಿಂಬಾಲಿಸಿರುವುದಾಗಿ ಹೊರತು ಬೇರೆ ಯಾರಾದರೂ ತಮ್ಮನ್ನು ಹಿಂಬಾಲಿಸಿರುವುದಾಗಿ ನಾವು ಕಾಣುತ್ತಿಲ್ಲ. ನಿಮಗೆ ನಮ್ಮ ಮೇಲೆ ಯಾವುದಾದರೂ ಶ್ರೇಷ್ಠತೆಯಿರುವುದಾಗಿಯೂ ನಾವು ಕಾಣುತ್ತಿಲ್ಲ. ಬದಲಾಗಿ, ನೀವು ಸುಳ್ಳು ಹೇಳುವವರಾಗಿದ್ದೀರಿ ಎಂದೇ ನಾವು ಭಾವಿಸುತ್ತಿದ್ದೇವೆ”.
(28) ನೂಹ್ ಹೇಳಿದರು: “ಓ ನನ್ನ ಜನರೇ! ನೀವೇನಾದರೂ ಆಲೋಚಿಸಿದ್ದೀರಾ? ನಾನು ನನ್ನ ರಬ್‌ನ ಕಡೆಯ ಸ್ಪಷ್ಟವಾದ ಪುರಾವೆಯನ್ನು ಅವಲಂಬಿಸುವವನಾಗಿರುವಾಗ ಮತ್ತು ಅವನು ತನ್ನ ಕಡೆಯ ಕಾರುಣ್ಯವನ್ನು ನನಗೆ ದಯಪಾಲಿಸಿರುವಾಗ, (ಅದು ಕಾಣಲು ಸಾಧ್ಯವಾಗದ ರೀತಿಯಲ್ಲಿ) ನಿಮಗೆ ಅಂಧತೆಯನ್ನು ನೀಡಲಾಗಿದ್ದರೆ (ನಾನೇನು ಮಾಡಲಿ?) ನೀವದನ್ನು ಇಷ್ಟಪಡದವರಾಗಿದ್ದೂ ಸಹ ನಾವು ನಿಮ್ಮನ್ನು ಅದಕ್ಕಾಗಿ ಬಲವಂತಗೊಳಿಸುವೆವೇ?(375)
375. ಜನರು ಸತ್ಯವನ್ನು ಇಷ್ಟಪಡುವುದಿಲ್ಲವೆಂದಾದರೆ ಅದನ್ನು ಅವರ ಮೇಲೆ ಬಲವಂತವಾಗಿ ಹೇರುವುದು ಪ್ರವಾದಿಗಳ ಹೊಣೆಯಲ್ಲ.
(29) ಓ ನನ್ನ ಜನರೇ! ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಸಂಪತ್ತನ್ನೂ ಬೇಡಲಾರೆನು. ನನಗೆ ಪ್ರತಿಫಲ ನೀಡಬೇಕಾದವನು ಅಲ್ಲಾಹು ಮಾತ್ರವಾಗಿರುವನು. ವಿಶ್ವಾಸವಿಟ್ಟವರನ್ನು ನಾನು ದೂರ ಅಟ್ಟಲಾರೆನು.(376) ಖಂಡಿತವಾಗಿಯೂ ಅವರು ತಮ್ಮ ರಬ್ಬನ್ನು ಭೇಟಿಯಾಗುವರು.(377) ಆದರೆ ನಾನು ನಿಮ್ಮನ್ನು ಅರಿವಿಲ್ಲದ ಒಂದು ಜನತೆಯಾಗಿ ಕಾಣುತ್ತಿರುವೆನು.(378)
376. ಇದು ನೂಹ್(ಅ) ರನ್ನು ಹಿಂಬಾಲಿಸಿರುವುದು ಕೆಳವರ್ಗದ ಕೆಲವು ಜನರಾಗಿರುವರೆಂದು ಗೇಲಿ ಮಾಡುತ್ತಾ, ಅವರನ್ನು ದೂರ ಮಾಡಿದರೆ ನಾವು ತಮ್ಮ ಜೊತೆಗೆ ಸೇರಿಕೊಳ್ಳುವೆವು ಎಂದು ವಾಗ್ದಾನ ಮಾಡುತ್ತಿದ್ದ ಮುಖಂಡರಿಗೆ ನೀಡಿದ ಉತ್ತರವಾಗಿದೆ.
377. ಅವರು ಕೆಳವರ್ಗದವರೋ ಅಥವಾ ಮೇಲ್ವರ್ಗದವರೋ ಎಂಬುದನ್ನು ಅಲ್ಲಾಹು ಆಗ ತೀರ್ಮಾನಿಸುವನು.
378. ಅರಿವಿಲ್ಲದ ಜನರು ಬಡಪಾಯಿಗಳಾದ ಸತ್ಯವಿಶ್ವಾಸಿಗಳಲ್ಲ ಬದಲಾಗಿ ಬಲಾಢ್ಯರಾದ ಸತ್ಯನಿಷೇಧಿಗಳಾಗಿರುವರು.
(30) ಓ ನನ್ನ ಜನರೇ! ನಾನು ಅವರನ್ನು ದೂರ ಅಟ್ಟುವುದಾದರೆ ಅಲ್ಲಾಹುವಿನ ಶಿಕ್ಷೆಯಿಂದ ನನ್ನನ್ನು ರಕ್ಷಿಸುವವರು ಯಾರಿರುವರು? ನೀವು ಚಿಂತಿಸಲಾರಿರೇ?
(31) ಅಲ್ಲಾಹುವಿನ ಖಜಾನೆಗಳು ನನ್ನ ಬಳಿಯಿವೆಯೆಂದು ನಾನು ನಿಮ್ಮೊಂದಿಗೆ ಹೇಳುವುದಿಲ್ಲ. ನನಗೆ ಅಗೋಚರ ವಿಷಯವೂ ತಿಳಿಯದು. ನಾನೊಬ್ಬ ಮಲಕ್ ಆಗಿರುವೆನೆಂದೂ ನಾನು ಹೇಳುವುದಿಲ್ಲ. ನಿಮ್ಮ ಕಣ್ಣುಗಳು ಯಾರನ್ನು ಕೀಳಾಗಿ ಕಾಣುತ್ತಿವೆಯೋ ಅವರ ಬಗ್ಗೆ, ಅಲ್ಲಾಹು ಅವರಿಗೆ ಯಾವುದೇ ಒಳಿತನ್ನೂ ನೀಡಲಾರನು ಎಂದು ನಾನು ಹೇಳುವುದಿಲ್ಲ. ಅವರ ಮನಸ್ಸಿನಲ್ಲಿರುವುದರ ಬಗ್ಗೆ ಚೆನ್ನಾಗಿ ಅರಿತಿರುವವನು ಅಲ್ಲಾಹುವಾಗಿರುವನು. ಹಾಗೇನಾದರೂ (ಅವರನ್ನು ದೂಷಿಸಿದರೆ) ಖಂಡಿತವಾಗಿಯೂ ನಾನು ಅಕ್ರಮಿಗಳ ಪೈಕಿ ಸೇರಿದವನಾಗುವೆನು”.
(32) ಅವರು ಹೇಳಿದರು: “ಓ ನೂಹ್! ತಾವು ನಮ್ಮೊಂದಿಗೆ ತರ್ಕಿಸಿದ್ದೀರಿ. ಬಹಳ ಹೆಚ್ಚಾಗಿ ತರ್ಕಿಸಿರುವಿರಿ. ತಾವು ಸತ್ಯವನ್ನೇ ಹೇಳುವವರಲ್ಲಿ ಸೇರಿದವರಾಗಿದ್ದರೆ ನಮಗೆ ಎಚ್ಚರಿಕೆ ನೀಡುತ್ತಿರುವುದನ್ನು (ಶಿಕ್ಷೆಯನ್ನು) ನಮ್ಮೆಡೆಗೆ ತನ್ನಿರಿ”.
(33) ಅವರು (ನೂಹ್) ಹೇಳಿದರು: “ಅದನ್ನು ತರುವವನು ಅಲ್ಲಾಹು ಮಾತ್ರವಾಗಿರುವನು; ಅವನು ಇಚ್ಛಿ ಸುವುದಾದರೆ! ನಿಮಗೆ (ಅವನನ್ನು) ಸೋಲಿಸಲಾಗದು.
(34) ಅಲ್ಲಾಹು ನಿಮ್ಮನ್ನು ದಾರಿಗೆಡಿಸಲು ಇಚ್ಛಿಸಿದರೆ ನಾನು ನಿಮಗೆ ಉಪದೇಶ ನೀಡಲು ಬಯಸಿದರೂ ನನ್ನ ಉಪದೇಶವು ನಿಮಗೆ ಪ್ರಯೋಜನಪಡದು. ಅವನು ನಿಮ್ಮ ರಬ್ ಆಗಿರುವನು. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು”.
(35) ಅಥವಾ, ಅವರು (ಪ್ರವಾದಿಯವರು) ಇದನ್ನು ಸ್ವತಃ ರಚಿಸಿರುವರು ಎಂದು ಅವರು ಹೇಳುತ್ತಿರುವರೇ? ಹೇಳಿರಿ: “ನಾನಿದನ್ನು ಸ್ವತಃ ರಚಿಸಿದ್ದರೆ ನಾನು ಮಾಡಿದ ಅಪರಾಧವು ನನಗೇ ಆಗಿದೆ. ನೀವು ಮಾಡುವ ಅಪರಾಧಗಳಿಂದ ನಾನು ಸಂಪೂರ್ಣ ವಿಮುಕ್ತನಾಗಿರುವೆನು”.
(36) “ತಮ್ಮ ಜನತೆಯ ಪೈಕಿ ಈಗಾಗಲೇ ವಿಶ್ವಾಸವಿಟ್ಟಿರುವವರ ಹೊರತು ಇನ್ನಾರೂ ವಿಶ್ವಾಸವಿಡಲಾರರು. ಆದುದರಿಂದ ಅವರು ಮಾಡುತ್ತಿರುವುದರ ಬಗ್ಗೆ ತಾವು ದುಃಖಿಸದಿರಿ” ಎಂದು ನೂಹ್‍ರಿಗೆ ದಿವ್ಯ ಸಂದೇಶವನ್ನು ನೀಡಲಾಯಿತು.
(37) ನಮ್ಮ ಕಣ್ಣುಗಳ ಅಡಿಯಲ್ಲಿ ಮತ್ತು ನಮ್ಮ ನಿರ್ದೇಶನದ ಪ್ರಕಾರ ತಾವು ಹಡಗನ್ನು ನಿರ್ಮಿಸಿರಿ. ಅಕ್ರಮವೆಸಗಿದವರ ಬಗ್ಗೆ ತಾವು ನನ್ನೊಂದಿಗೆ ಮಾತನಾಡದಿರಿ. ಖಂಡಿತವಾಗಿಯೂ ಅವರು ಮುಳುಗಿಸಲ್ಪಡುವರು.”
(38) ಅವರು (ನೂಹ್) ಹಡಗನ್ನು ನಿರ್ಮಿಸುತ್ತಿದ್ದರು. ಅವರ ಜನತೆಯಲ್ಲಿರುವ ಮುಖಂಡರು ಅವರ ಸನಿಹದಿಂದ ಹಾದು ಹೋಗುವಾಗಲೆಲ್ಲ ಅವರನ್ನು ಗೇಲಿ ಮಾಡಿದರು. ಅವರು ಹೇಳಿದರು: “ನೀವು ನಮ್ಮನ್ನು ಗೇಲಿಮಾಡುವುದಾದರೆ ಖಂಡಿತವಾಗಿಯೂ ನೀವು ಗೇಲಿ ಮಾಡಿದಂತೆಯೇ ನಾವೂ ನಿಮ್ಮನ್ನು ಗೇಲಿಮಾಡುವೆವು.
(39) ಅಪಮಾನಕರವಾದ ಶಿಕ್ಷೆಯು ಯಾರಿಗೆ ಬರಲಿದೆ ಮತ್ತು ಶಾಶ್ವತವಾದ ಶಿಕ್ಷೆಯು ಯಾರ ಮೇಲೆರಗಲಿದೆ ಎಂಬುದನ್ನು ತರುವಾಯ ನೀವು ಅರಿಯಲಿದ್ದೀರಿ”.
(40) ಹಾಗೆ ನಮ್ಮ ಆಜ್ಞೆಯು ಬಂದಾಗ ಮತ್ತು ಒಲೆಯು ಒರತೆಯೊಡೆದು ಹರಿದಾಗ(379) ನಾವು ಹೇಳಿದೆವು: “ಎಲ್ಲ ವರ್ಗದಿಂದಲೂ ಒಂದೊಂದು ಜೋಡಿಯನ್ನು ಮತ್ತು ತಮ್ಮ ಕುಟುಂಬವನ್ನು -(ಅವರ ಪೈಕಿ) ಯಾರ ಮೇಲೆ (ಶಿಕ್ಷೆಯ) ವಚನವು ಪೂರ್ವಭಾವಿಯಾಗಿ ಸಂಭವಿಸಿದೆಯೋ ಅವರ ಹೊರತಾದವರನ್ನು ಹಾಗೂ ವಿಶ್ವಾಸವಿಟ್ಟವರನ್ನು ಅದರಲ್ಲಿ ಹತ್ತಿಸಿರಿ.” ಕೆಲವೇ ಜನರ ಹೊರತು ಯಾರೂ ಅವರೊಂದಿಗೆ ವಿಶ್ವಾಸವಿಟ್ಟಿರಲಿಲ್ಲ.
379. ಸತ್ಯನಿಷೇಧಿಗಳನ್ನು ಮುಳುಗಿಸಿ ನಾಶ ಮಾಡಲು ಅಲ್ಲಾಹು ಸೃಷ್ಟಿಸಿದ ಮಹಾಪ್ರಳಯದ ಆರಂಭವು ಒಲೆಯಲ್ಲಿ ಒರತೆಯೊಡೆದು ನೀರು ಉಕ್ಕಿ ಹರಿಯುವ ಮೂಲಕ ಸಂಭವಿಸಿತು.
(41) (ನೂಹ್ ಅವರೊಂದಿಗೆ) ಹೇಳಿದರು: “ಇದರಲ್ಲಿ ಹತ್ತಿಕೊಳ್ಳಿರಿ. ಇದರ ಸಂಚಾರವೂ, ನಿಲುಗಡೆಯೂ ಅಲ್ಲಾಹುವಿನ ಹೆಸರಲ್ಲಾಗಿದೆ. ಖಂಡಿತವಾಗಿಯೂ ನನ್ನ ರಬ್ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು”.
(42) ಬೆಟ್ಟಗಳಂತಿರುವ ಅಲೆಗಳ ಮಧ್ಯೆ ಅದು (ಹಡಗು) ಅವರನ್ನು ಹೊತ್ತು ಚಲಿಸುತ್ತಿತ್ತು. ನೂಹ್ ತಮ್ಮ ಮಗನನ್ನು ಕರೆದರು. ಅವನು ದೂರದ ಒಂದು ಸ್ಥಳದಲ್ಲಿದ್ದನು. “ಓ ನನ್ನ ಮಗನೇ! ನೀನು ನಮ್ಮೊಂದಿಗೆ ಹತ್ತು. ನೀನು ಸತ್ಯನಿಷೇಧಿಗಳಲ್ಲಿ ಸೇರಿದವನಾಗದಿರು”.
(43) ಅವನು ಹೇಳಿದನು: “ನೀರಿನಿಂದ ನನ್ನನ್ನು ಪಾರು ಮಾಡುವ ಯಾವುದಾದರೂ ಪರ್ವತದಲ್ಲಿ ನಾನು ಆಶ್ರಯ ಪಡೆಯುವೆನು”. ನೂಹ್ ಹೇಳಿದರು: “ಅಲ್ಲಾಹುವಿನ ಆಜ್ಞೆಯಿಂದ ರಕ್ಷಿಸುವವರು ಇಂದು ಯಾರೂ ಇಲ್ಲ. ಯಾರ ಮೇಲೆ ಅವನು ಕರುಣೆ ತೋರಿರುವನೋ ಅವರ ಹೊರತು”. ಆಗ ಅವರಿಬ್ಬರ ಮಧ್ಯೆ ಅಲೆಯು ಅಡ್ಡವಾಗಿ ಎದ್ದಿತು. ಅವನು ಮುಳುಗಿ ನಾಶವಾದವರಲ್ಲಿ ಸೇರಿದವನಾದನು.
(44) “ಓ ಭೂಮಿಯೇ! ನಿನ್ನ ನೀರನ್ನು ನುಂಗಿಬಿಡು! ಓ ಆಕಾಶವೇ! ಮಳೆಯನ್ನು ನಿಲ್ಲಿಸು!” ಎಂದು ಆಜ್ಞಾಪಿಸಲಾಯಿತು. ನೀರು ಇಂಗಿಹೋಯಿತು ಮತ್ತು ವಿಧಿಯು ನೆರವೇರಿಸಲ್ಪಟ್ಟಿತು. ಅದು (ಹಡಗು) ಜೂದಿ(380) ಪರ್ವತದ ಮೇಲೆ ಅಚಲವಾಗಿ ನಿಂತಿತು. “ಅಕ್ರಮಿಗಳಾದ ಜನರಿಗೆ (ಅಲ್ಲಾಹುವಿನ ಕಾರುಣ್ಯದಿಂದ) ವಿದೂರತೆಯಿರಲಿ” ಎಂದು ಹೇಳಲಾಯಿತು.
380. ಆರ್ಮೇನಿಯಾದಲ್ಲಿರುವ ಅರಾರಾತ್ ಪರ್ವತ ಶ್ರೇಣಿಯಲ್ಲಿನ ಒಂದು ಪರ್ವತವನ್ನು ‘ಜೂದೀ’ ಎಂದು ಹೇಳಲಾಗುತ್ತದೆ.
(45) ನೂಹ್ ತಮ್ಮ ರಬ್ಬನ್ನು ಕರೆದು ಹೇಳಿದರು: “ನನ್ನ ಪ್ರಭೂ! ನನ್ನ ಮಗನು ನನ್ನ ಕುಟುಂಬಕ್ಕೆ ಸೇರಿದವನಾಗಿರುವನು. ಖಂಡಿತವಾಗಿಯೂ ನಿನ್ನ ವಾಗ್ದಾನವು ಸತ್ಯವಾಗಿದೆ.(381) ತೀರ್ಪುಗಾರರ ಪೈಕಿ ನೀನು ಅತ್ಯುತ್ತಮ ತೀರ್ಪುಗಾರನಾಗಿರುವೆ”.
381. ಇಲ್ಲಿ ಪರಾಮರ್ಶಿಸಿರುವುದು ನೂಹ್(ಅ) ರವರ ಕುಟುಂಬವನ್ನು ರಕ್ಷಿಸುವೆನು ಎಂಬ ಅಲ್ಲಾಹುವಿನ ವಾಗ್ದಾನದ ಕುರಿತಾಗಿದೆ.
(46) ಅವನು (ಅಲ್ಲಾಹು) ಹೇಳಿದನು: “ಓ ನೂಹ್! ಖಂಡಿತವಾಗಿಯೂ ಅವನು ತಮ್ಮ ಕುಟುಂಬಕ್ಕೆ ಸೇರಿದವನಲ್ಲ.(382) ಖಂಡಿತವಾಗಿಯೂ ಅವನು ಒಳಿತಲ್ಲದ ಕರ್ಮವನ್ನು ಮಾಡಿದವನಾಗಿರುವನು. ಆದುದರಿಂದ ತಮಗೆ ಅರಿವಿಲ್ಲದಿರುವುದನ್ನು ನನ್ನಲ್ಲಿ ಬೇಡದಿರಿ. ತಾವು ಅರಿವಿಲ್ಲದವರ ಪೈಕಿ ಸೇರಿದವರಾಗಬಾರದೆಂದು ನಾನು ತಮಗೆ ಉಪದೇಶ ನೀಡುತ್ತಿರುವೆನು”.
382. ಒಬ್ಬ ಪ್ರವಾದಿಯ ಕುಟುಂಬವೆಂದರೆ ಅದು ಕೇವಲ ರಕ್ತಸಂಬಂಧಿಗಳು ಮಾತ್ರವಲ್ಲ. ಪ್ರವಾದಿಯಲ್ಲಿ ವಿಶ್ವಾಸವಿಡುವವರೆಲ್ಲರೂ ಅವರ ಕುಟುಂಬವಾಗಿರುವರು.
(47) ಅವರು (ನೂಹ್) ಹೇಳಿದರು: “ನನ್ನ ಪ್ರಭೂ! ನನಗೆ ಅರಿವಿಲ್ಲದಿರುವುದನ್ನು ನಿನ್ನಲ್ಲಿ ಬೇಡುವುದರಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿರುವೆನು. ನೀನು ನನ್ನನ್ನು ಕ್ಷಮಿಸದಿದ್ದರೆ ಮತ್ತು ನನ್ನೊಂದಿಗೆ ಕರುಣೆ ತೋರದಿದ್ದರೆ ನಾನು ನಷ್ಟ ಹೊಂದಿದವರಲ್ಲಿ ಸೇರಿದವನಾಗುವೆನು”.
(48) (ಅವರೊಂದಿಗೆ) ಹೇಳಲಾಯಿತು: “ಓ ನೂಹ್! ನಮ್ಮ ಕಡೆಯ ಶಾಂತಿಯೊಂದಿಗೆ ಮತ್ತು ತಮಗೆ ಹಾಗೂ ತಮ್ಮ ಜೊತೆಯಲ್ಲಿರುವವರ(383) ಜನತೆಗಳಿಗಿರುವ ಅನುಗ್ರಹಗಳೊಂದಿಗೆ ತಾವು ಇಳಿಯಿರಿ. ಆದರೆ (ಬೇರೆ) ಕೆಲವು ಜನರಿರುವರು. ಅವರಿಗೆ ನಾವು ಅನುಕೂಲತೆಗಳನ್ನು ದಯಪಾಲಿಸುವೆವು. ತರುವಾಯ ನಮ್ಮ ಕಡೆಯ ಯಾತನಾಮಯವಾದ ಶಿಕ್ಷೆಯು ಅವರನ್ನು ಸ್ಪರ್ಶಿಸಲಿದೆ”.
383. ‘ಅಲಾ ಉಮಮಿನ್ ಮಿಮ್ಮನ್ ಮಅಕ್’ ಎಂಬುದನ್ನು ‘ನಿನ್ನ ಜೊತೆಯಲ್ಲಿರುವವರ ವಿವಿಧ ಪಂಗಡಗಳಿಗೆ’ ಎಂದು, ಮತ್ತು ‘ನಿನ್ನ ಜೊತೆಗಿರುವವರಿಂದ ಜನ್ಮ ಪಡೆಯುವ ಅವರ ನಂತರದ ತಲೆಮಾರುಗಳಿಗೆ’ ಎಂದು ವ್ಯಾಖ್ಯಾನಿಸಲಾಗಿದೆ.
(49) (ಓ ಪ್ರವಾದಿಯವರೇ!) ಇವು ಅಗೋಚರ ವೃತ್ತಾಂತಗಳಲ್ಲಿ ಸೇರಿದ್ದಾಗಿವೆ. ನಾವು ಇದನ್ನು ತಮಗೆ ದಿವ್ಯ ಸಂದೇಶವಾಗಿ ನೀಡುತ್ತಿದ್ದೇವೆ. ಇದಕ್ಕಿಂತ ಮುಂಚೆ ತಾವಾಗಲಿ, ತಮ್ಮ ಜನತೆಯಾಗಲಿ ಇದನ್ನು ಅರಿತಿರಲಿಲ್ಲ. ಆದುದರಿಂದ ತಾವು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ (ಅತ್ಯುತ್ತಮ) ಪರ್ಯಾವಸಾನವು ಭಯಭಕ್ತಿ ಪಾಲಿಸುವವರಿಗೇ ಆಗಿದೆ.
(50) ಆದ್ ಸಮೂಹದೆಡೆಗೆ ಅವರ ಸಹೋದರರಾದ ಹೂದ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ನೀವು ಕೇವಲ ಸುಳ್ಳು ಹೆಣೆಯುವವರು ಮಾತ್ರವಾಗಿದ್ದೀರಿ.
(51) ಓ ನನ್ನ ಜನರೇ! ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ನನ್ನನ್ನು ಸೃಷ್ಟಿಸಿದವನು ಮಾತ್ರವಾಗಿರುವನು. ನೀವು ಆಲೋಚಿಸುವುದಿಲ್ಲವೇ?
(52) ಓ ನನ್ನ ಜನರೇ! ನೀವು ನಿಮ್ಮ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ತರುವಾಯ ಅವನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ಅವನು ನಿಮಗೆ ಹೇರಳವಾಗಿ ಮಳೆಯನ್ನು ಸುರಿಸಿಕೊಡುವನು. ನಿಮ್ಮ ಶಕ್ತಿಗೆ ಅವನು ಇನ್ನಷ್ಟು ಶಕ್ತಿಯನ್ನು ಸೇರಿಸಿಕೊಡುವನು. ನೀವು ಅಪರಾಧಿಗಳಾಗಿ ವಿಮುಖರಾಗದಿರಿ”.
(53) ಅವರು ಹೇಳಿದರು: “ಓ ಹೂದ್! ತಾವು ನಮಗೆ ಸ್ಪಷ್ಟವಾದ ಯಾವುದೇ ಪುರಾವೆಯನ್ನೂ ತಂದಿಲ್ಲ. ತಮ್ಮ ಮಾತಿನಿಂದಾಗಿ ನಾವು ನಮ್ಮ ಆರಾಧ್ಯರನ್ನು ಕೈಬಿಡಲಾರೆವು. ನಾವು ತಮ್ಮಲ್ಲಿ ವಿಶ್ವಾಸವನ್ನೂ ಇಡಲಾರೆವು.
(54) ನಮ್ಮ ಆರಾಧ್ಯರ ಪೈಕಿ ಕೆಲವರು ತಮಗೆ ಯಾವುದೋ ಕೆಡುಕನ್ನು ತಗುಲಿಸಿರುವರು ಎಂದು ಮಾತ್ರವಾಗಿದೆ ನಮಗೆ ಹೇಳಲಿಕ್ಕಿರುವುದು”(384) ಹೂದ್ ಹೇಳಿದರು: “ನೀವು ಸಹಭಾಗಿಯನ್ನಾಗಿ ಮಾಡುತ್ತಿರುವ ಎಲ್ಲದರಿಂದಲೂ ನಾನು ವಿಮುಕ್ತನಾಗಿರುವೆನು ಎಂಬುದಕ್ಕೆ ನಾನು ಅಲ್ಲಾಹುವನ್ನು ಸಾಕ್ಷಿಯಾಗಿಸುತ್ತಿರುವೆನು. ನೀವೂ (ಅದಕ್ಕೆ) ಸಾಕ್ಷಿಗಳಾಗಿರಿ.
384. ಹೂದ್(ಅ) ರಿಗೆ ನಮ್ಮ ಆರಾಧ್ಯರ ಪೈಕಿ ಯಾರದೋ ಶಾಪ ತಟ್ಟಿದೆ. ಆದುದರಿಂದಲೇ ಅವರು ನಮಗೆ ಅರ್ಥವಾಗದ ಏನೇನನ್ನೋ ಹೇಳುತ್ತಿರುವರು ಎಂದು ಬಹುದೇವಾರಾಧಕರಾದ ಜನರು ಹೇಳುತ್ತಿದ್ದರು.
(55) ಅಲ್ಲಾಹುವಿನ ಹೊರತು. ಆದುದರಿಂದ ನೀವು ಒಟ್ಟಾಗಿ ನನ್ನ ವಿರುದ್ಧ ಸಂಚು ಹೂಡಿರಿ. ತರುವಾಯ ನನಗೆ ಸ್ವಲ್ಪವೂ ಕಾಲಾವಕಾಶವನ್ನು ನೀಡದಿರಿ.
(56) ನಾನು ನನ್ನ ಮತ್ತು ನಿಮ್ಮ ರಬ್ ಆಗಿರುವ ಅಲ್ಲಾಹುವಿನ ಮೇಲೆ ಭರವಸೆಯಿಟ್ಟಿರುವೆನು. ಯಾವುದೇ ಜೀವಿಯೂ ಇರಲಾರದು, ಅದರ ಮುಂದಲೆಯು(385) ಅವನ ವಶದಲ್ಲಿರುವ ಹೊರತು. ಖಂಡಿತವಾಗಿಯೂ ನನ್ನ ರಬ್ ನೇರವಾದ ಮಾರ್ಗದಲ್ಲಿರುವನು.
385. ಮುಂದಲೆಯು ಅವನ ವಶದಲ್ಲಿರುವುದು ಎಂದರೆ ಸಂಪೂರ್ಣ ನಿಯಂತ್ರಣವು ಅವನ ವಶದಲ್ಲಿರುವುದು ಎಂದರ್ಥ.
(57) ನೀವೇನಾದರೂ ವಿಮುಖರಾಗುವುದಾದರೆ ನನ್ನನ್ನು ನಿಮ್ಮೆಡೆಗೆ ಯಾವುದರೊಂದಿಗೆ ಕಳುಹಿಸಲಾಗಿ ದೆಯೋ ಅದನ್ನು ನಾನು ನಿಮಗೆ ತಲುಪಿಸಿಕೊಟ್ಟಿರುವೆನು. ನನ್ನ ರಬ್ ನಿಮ್ಮ ಹೊರತಾದ ಬೇರೊಂದು ಜನತೆಯನ್ನು ಉತ್ತರಾಧಿಕಾರಿಯಾಗಿ ತರುವನು. ಅವನಿಗೆ ಯಾವುದೇ ಹಾನಿಯನ್ನು ಮಾಡಲೂ ನಿಮ್ಮಿಂದ ಸಾಧ್ಯವಾಗಲಾರದು. ಖಂಡಿತವಾಗಿಯೂ ನನ್ನ ರಬ್ ಸರ್ವ ವಸ್ತುಗಳ ಸಂರಕ್ಷಕನಾಗಿರುವನು”.
(58) ನಮ್ಮ ಆಜ್ಞೆಯು ಬಂದಾಗ ಹೂದ್‍ರನ್ನು ಮತ್ತು ಅವರ ಜೊತೆಗೆ ವಿಶ್ವಾಸವಿಟ್ಟವರನ್ನು ನಾವು ನಮ್ಮ ಕಡೆಯ ಕರುಣೆಯಿಂದಾಗಿ ರಕ್ಷಿಸಿದೆವು. ನಾವವರನ್ನು ಕಠೋರವಾದ ಶಿಕ್ಷೆಯಿಂದ ರಕ್ಷಿಸಿದೆವು.
(59) ಅದಾಗಿದೆ ಆದ್ ಜನಾಂಗ. ಅವರು ತಮ್ಮ ರಬ್‌ನ ದೃಷ್ಟಾಂತಗಳನ್ನು ನಿಷೇಧಿಸಿದರು, ಅವನ ಸಂದೇಶವಾಹಕರನ್ನು ಧಿಕ್ಕರಿಸಿದರು ಮತ್ತು ಹಟಮಾರಿಗಳಾದ ಸರ್ವ ಸ್ವೇಚ್ಛಾಧಿಪತಿಗಳ ಆದೇಶವನ್ನು ಅನುಸರಿಸಿದರು.
(60) ಇಹಲೋಕದಲ್ಲೂ ಪುನರುತ್ಥಾನ ದಿನದಲ್ಲೂ ಶಾಪವನ್ನು ಅವರ ಹಿಂದೆಯೇ ಕಳುಹಿಸಲಾಗಿರುವುದು. ಅರಿಯಿರಿ! ಖಂಡಿತವಾಗಿಯೂ ಆದ್ ಜನಾಂಗದವರು ಅವರ ರಬ್ಬನ್ನು ನಿಷೇಧಿಸಿದರು.(386) ಅರಿಯಿರಿ! ಹೂದ್‍ರ ಜನತೆಯಾಗಿರುವ ಆದ್ ಜನಾಂಗಕ್ಕೆ (ಅಲ್ಲಾಹುವಿನ ಕಾರಣ್ಯದಿಂದ) ವಿದೂರತೆಯಿರಲಿ!
386. ಕಫರ ಎಂಬ ಪದಕ್ಕೆ ಅವಿಶ್ವಾಸವಿಟ್ಟನು, ನಿಷೇಧಿಸಿದನು, ಕೃತಘ್ನತೆ ತೋರಿದನು ಇತ್ಯಾದಿ ಅರ್ಥಗಳಿವೆ.
(61) ಸಮೂದ್ ಜನಾಂಗದೆಡೆಗೆ ಅವರ ಸಹೋದರರಾದ ಸ್ವಾಲಿಹ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ಅವನು ನಿಮ್ಮನ್ನು ಭೂಮಿಯಿಂದ ಬೆಳೆಸಿದನು ಮತ್ತು ಅಲ್ಲಿ ನಿಮಗೆ ನೆಲೆಬೀಡನ್ನು ಒದಗಿಸಿದನು. ಆದುದರಿಂದ ನೀವು ಅವನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ತರುವಾಯ ಅವನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ಖಂಡಿತವಾಗಿಯೂ ನನ್ನ ರಬ್ ಅತಿನಿಕಟನೂ, (ಪ್ರಾರ್ಥನೆಗೆ) ಉತ್ತರ ನೀಡುವವನೂ ಆಗಿರುವನು”.
(62) ಅವರು ಹೇಳಿದರು: “ಓ ಸ್ವಾಲಿಹ್! ತಾವು ಇದಕ್ಕೆ ಮುಂಚೆ ನಮ್ಮಲ್ಲಿ ಒಬ್ಬ ಆಶಾಪೂರ್ಣ ವ್ಯಕ್ತಿಯಾಗಿದ್ದಿರಿ. ನಮ್ಮ ಪೂರ್ವಿಕರು ಏನನ್ನು ಆರಾಧಿಸುತ್ತಿದ್ದರೋ ಅದನ್ನು ನಾವು ಆರಾಧಿಸುವುದರಿಂದ ತಾವು ನಮ್ಮನ್ನು ತಡೆಯುತ್ತಿದ್ದೀರಾ? ತಾವು ನಮ್ಮನ್ನು ಯಾವುದರೆಡೆಗೆ ಆಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಾವು ಅವಿಶ್ವಾಸ ಹುಟ್ಟಿಸುವಂತಹ ಸಂದೇಹದಲ್ಲಿದ್ದೇವೆ”.
(63) ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿದ್ದೀರಾ? ನಾನು ನನ್ನ ರಬ್‌ನ ಕಡೆಯ ಸ್ಪಷ್ಟವಾದ ಪುರಾವೆಯನ್ನು ಅವಲಂಬಿಸಿದವನಾಗಿರುವಾಗ ಮತ್ತು ತನ್ನ ಕಡೆಯ ಕಾರುಣ್ಯವನ್ನು ಅವನು ನನಗೆ ದಯಪಾಲಿಸಿರುವಾಗ, ನಾನು ಅವನನ್ನು ಧಿಕ್ಕರಿಸುವುದಾದರೆ, ಅಲ್ಲಾಹುವಿನ ಶಿಕ್ಷೆಯಿಂದ (ನನ್ನನ್ನು ರಕ್ಷಿಸುವುದಕ್ಕಾಗಿ) ನನ್ನ ನೆರವಿಗೆ ಬರುವವರು ಯಾರಿರುವರು? ನೀವು ನನಗೆ ನಷ್ಟವನ್ನೇ ಹೊರತು ಬೇರೇನನ್ನೂ ಅಧಿಕಗೊಳಿಸಲಾರಿರಿ.
(64) ಓ ನನ್ನ ಜನರೇ! ಇದು ನಿಮಗೆ ದೃಷ್ಟಾಂತವಾಗಿರುವ ಅಲ್ಲಾಹುವಿನ ಒಂಟೆಯಾಗಿದೆ. ಆದುದರಿಂದ ಅದನ್ನು ಬಿಟ್ಟುಬಿಡಿರಿ. ಅಲ್ಲಾಹುವಿನ ಭೂಮಿಯಲ್ಲಿ ಅದು ಮೇಯುತ್ತಿರಲಿ. ಯಾವುದೇ ಹಾನಿಯೊಂದಿಗೂ ಅದನ್ನು ಮುಟ್ಟದಿರಿ. ಹಾಗೇನಾದರೂ ಆದರೆ ಸನಿಹದಲ್ಲೇ ಇರುವ ಶಿಕ್ಷೆಯು ನಿಮ್ಮನ್ನು ಹಿಡಿಯುವುದು”.
(65) ಆದರೆ ಅವರು ಅದನ್ನು ಕಡಿದು ಸಾಯಿಸಿದರು. ಆಗ ಸ್ವಾಲಿಹ್ ಹೇಳಿದರು: “ಮೂರು ದಿನಗಳ ಕಾಲ ನೀವು ನಿಮ್ಮ ಮನೆಗಳಲ್ಲಿ ಸುಖವಾಗಿರಿ. (ಅಷ್ಟರಲ್ಲಿ ಶಿಕ್ಷೆಯು ಬರಲಿರುವುದು.) ಇದು ಹುಸಿಯಾಗಿಸಲು ಸಾಧ್ಯವಾಗದ ಒಂದು ವಾಗ್ದಾನವಾಗಿದೆ”.
(66) ತರುವಾಯ ನಮ್ಮ ಆಜ್ಞೆಯು ಬಂದಾಗ ನಾವು ನಮ್ಮ ಕಾರುಣ್ಯದಿಂದಾಗಿ ಸ್ವಾಲಿಹ್ ಮತ್ತು ಅವರ ಜೊತೆಗೆ ವಿಶ್ವಾಸವಿಟ್ಟವರನ್ನು ರಕ್ಷಿಸಿದೆವು. ಆ ದಿನದ ಅಪಮಾನದಿಂದಲೂ (ಅವರನ್ನು ಕಾಪಾಡಿದೆವು). ಖಂಡಿತವಾಗಿಯೂ ತಮ್ಮ ರಬ್ ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.
(67) ಅಕ್ರಮವೆಸಗಿದವರನ್ನು ಘೋರವಾದ ಒಂದು ಶಬ್ದವು ಹಿಡಿದುಬಿಟ್ಟಿತು. ಪ್ರಭಾತವಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖರಾಗಿ ಬಿದ್ದಿದ್ದರು.
(68) ಅವರು ಅಲ್ಲಿ ವಾಸಿಸಿರಲೇ ಇಲ್ಲ ಎಂಬಂತೆ (ನಿರ್ನಾಮವಾದರು). ಅರಿಯಿರಿ! ಖಂಡಿತವಾಗಿಯೂ ಸಮೂದ್ ಜನಾಂಗದವರು ತಮ್ಮ ರಬ್ಬನ್ನು ನಿಷೇಧಿಸಿದರು. ಅರಿಯಿರಿ! ಸಮೂದ್ ಜನಾಂಗದವರಿಗೆ (ಅಲ್ಲಾಹುವಿನ ಕಾರಣ್ಯದಿಂದ) ವಿದೂರತೆಯಿರಲಿ!
(69) ನಮ್ಮ ದೂತರು ಇಬ್ರಾಹೀಮ್‌ರ ಬಳಿಗೆ ಶುಭವಾರ್ತೆಯೊಂದಿಗೆ ಬಂದರು. ಅವರು ಹೇಳಿದರು: “ಸಲಾಮ್”. ಇಬ್ರಾಹೀಮ್ ಹೇಳಿದರು: “ಸಲಾಮ್”. ಹೆಚ್ಚು ತಡಮಾಡದೆ ಅವರು ಹುರಿದ ಕರುವೊಂದನ್ನು ತಂದರು.
(70) ಆದರೆ ಅವರ ಕೈಗಳು ಅದರೆಡೆಗೆ (ಆಹಾರದೆಡೆಗೆ) ತಲುಪದಿರುವುದನ್ನು ಕಂಡಾಗ ಅವರಿಗೆ (ಇಬ್ರಾಹೀಮ್‌ರಿಗೆ) ಅವರ ಬಗ್ಗೆ ಶಂಕೆಯುಂಟಾಯಿತು. ಅವರ ಬಗ್ಗೆ ಅವರಿಗೆ ಭಯವುಂಟಾಯಿತು.(387) ಅವರು ಹೇಳಿದರು: “ತಾವು ಭಯಪಡದಿರಿ. ನಮ್ಮನ್ನು ಕಳುಹಿಸಲಾಗಿರುವುದು ಲೂತ್‍ರ ಜನತೆಯೆಡೆಗಾಗಿದೆ”.
387. ಸಾಧಾರಣ ಅತಿಥಿಗಳ ರೂಪದಲ್ಲಿ ಮಲಕ್‍ಗಳು ಇಬ್ರಾಹೀಮ್(ಅ) ರವರ ಬಳಿಗೆ ಬಂದಿದ್ದರು. ಆದುದರಿಂದ ಅವರನ್ನು ಸತ್ಕರಿಸಲು ಇಬ್ರಾಹೀಮ್(ಅ) ಮುಂದಾದರು. ತರುವಾಯ ಅವರು ಮಲಕ್‍ಗಳೆಂಬ ವಿಷಯವು ಅವರಿಗೆ ತಿಳಿಯಿತು.
(71) ಅವರ (ಇಬ್ರಾಹೀಮ್‌ರ) ಪತ್ನಿ ಅಲ್ಲಿ ನಿಂತಿದ್ದರು. ಅವರು ನಕ್ಕರು. ಆಗ ನಾವು ಅವರಿಗೆ (ಪತ್ನಿಗೆ) ಇಸ್‍ಹಾಕ್‍ರ ಬಗ್ಗೆ ಮತ್ತು ಇಸ್‍ಹಾಕ್‍ರ ಹಿಂದೆಯೇ ಯಅ್‌ಕೂಬ್‍ರ ಬಗ್ಗೆ ಶುಭವಾರ್ತೆ ನೀಡಿದೆವು.(388)
388. ಇಬ್ರಾಹೀಮ್(ಅ) ರಿಗೆ ಇಸ್‍ಹಾಕ್(ಅ) ಎಂಬ ಮಗನೂ, ಯಅ್‌ಕೂಬ್(ಅ) ಎಂಬ ಮೊಮ್ಮಗನೂ ಹುಟ್ಟುವರೆಂದು ಮಲಕ್‍ಗಳು ಅವರ ಪತ್ನಿಯಾದ ಸಾರರಿಗೆ ಶುಭವಾರ್ತೆಯನ್ನು ನೀಡಿದರು.
(72) ಅವರು (ಪತ್ನಿ) ಹೇಳಿದರು: “ಅಯ್ಯೋ ನನ್ನ ಪಾಡೇ! ನಾನೋರ್ವ ವೃದ್ಧೆಯಾಗಿದ್ದೂ ಹೆರುವುದೇ? ಈ ನನ್ನ ಪತಿ ಒಬ್ಬ ವೃದ್ಧನಾಗಿರುವರು! ಖಂಡಿತವಾಗಿಯೂ ಇದೊಂದು ಅಚ್ಚರಿದಾಯಕ ವಿಷಯವೇ ಆಗಿದೆ!”
(73) ಅವರು (ದೂತರು) ಹೇಳಿದರು: “ಅಲ್ಲಾಹುವಿನ ಆಜ್ಞೆಯ ಬಗ್ಗೆ ತಾವು ಅಚ್ಚರಿಪಡುತ್ತಿದ್ದೀರಾ? ಓ (ಇಬ್ರಾಹೀಮ್) ಕುಟುಂಬದವರೇ! ನಿಮ್ಮ ಮೇಲೆ ಅಲ್ಲಾಹುವಿನ ಕರುಣೆಯೂ ಅನುಗ್ರಹಗಳೂ ಇರಲಿ. ಖಂಡಿತವಾಗಿಯೂ ಅವನು ಸ್ತುತ್ಯರ್ಹನೂ ಮಹಿಮೆಯುಳ್ಳವನೂ ಆಗಿರುವನು”.
(74) ತರುವಾಯ ಇಬ್ರಾಹೀಮ್‌ರಿಂದ ಭಯವು ನೀಗಿದಾಗ ಮತ್ತು ಅವರಿಗೆ ಶುಭವಾರ್ತೆಯು ತಲುಪಿದಾಗ ಅವರು ಲೂತ್‍ರ ಜನತೆಯ ಬಗ್ಗೆ ನಮ್ಮೊಂದಿಗೆ ತರ್ಕಿಸತೊಡಗಿದರು.
(75) ಖಂಡಿತವಾಗಿಯೂ ಇಬ್ರಾಹೀಮ್ ಸಹನಾಶೀಲರೂ, ಅತ್ಯಂತ ಅನುಕಂಪವುಳ್ಳವರೂ,(389) ಪಶ್ಚಾತ್ತಾಪಪಡುವವರೂ ಆಗಿದ್ದರು.
389. ‘ಅವ್ವಾಹ್’ ಎಂಬ ಪದಕ್ಕೆ ಜನರೊಂದಿಗೆ ಅತ್ಯಧಿಕ ಅನುಕಂಪ ತೋರುವವನು, ಅಲ್ಲಾಹುವಿನಲ್ಲಿ ಅತ್ಯಧಿಕ ಭಯಭಕ್ತಿ ಹೊಂದಿರುವವನು ಎಂಬಿತ್ಯಾದಿ ಅರ್ಥಗಳಿವೆ.
(76) ಓ ಇಬ್ರಾಹೀಮ್! ತಾವು ಇದರಿಂದ ವಿಮುಖರಾಗಿರಿ. ಖಂಡಿತವಾಗಿಯೂ ತಮ್ಮ ರಬ್‌ನ ಆಜ್ಞೆಯು ಬಂದುಬಿಟ್ಟಿದೆ. ಖಂಡಿತವಾಗಿಯೂ ರದ್ದುಗೊಳಿಸಲಾಗದ ಶಿಕ್ಷೆಯು ಅವರೆಡೆಗೆ ಬರಲಿರುವುದು.(390)
390. ಅನೈಸರ್ಗಿಕ ಲೈಂಗಿಕತೆಯನ್ನು (ಸಲಿಂಗರತಿಯನ್ನು) ಬಿಟ್ಟುಬಿಡಲು ಒಪ್ಪದಿರುವ ಆ ಜನತೆಯನ್ನು ಶಿಕ್ಷಿಸಲು ಅಲ್ಲಾಹುವಿನ ಆಜ್ಞೆಯು ಬಂದಿದೆ. ಇನ್ನು ಅವರ ಬಗ್ಗೆ ತರ್ಕ ಮಾಡಿ ಪ್ರಯೋಜನವಿಲ್ಲ.
(77) ನಮ್ಮ ದೂತರು (ಮಲಕ್‍ಗಳು) ಲೂತ್‍ರ ಬಳಿಗೆ ಬಂದಾಗ ಅವರ ವಿಷಯದಲ್ಲಿ ಲೂತ್‍ರಿಗೆ ಸಂಕಟವುಂಟಾಯಿತು. ಅವರ ಬಗ್ಗೆ ನೆನೆದು ಅವರಿಗೆ ಮನಪ್ರಯಾಸವುಂಟಾಯಿತು. ಅವರು ಹೇಳಿದರು: “ಇದೊಂದು ಸಂಕಟದಾಯಕ ದಿನವಾಗಿದೆ”.(391)
391. ಸ್ಫುರದ್ರೂಪಿಗಳಾದ ಯಾರನ್ನೇ ಆಗಲಿ ತಮ್ಮ ಅನೈತಿಕ ದಂಧೆಗೆ ಬಲಿಪಶುವಾಗಿಸಲು ಹೇಸದ ಆ ದುಷ್ಟರು ಎಲ್ಲಿ ತನ್ನ ಅತಿಥಿಗಳನ್ನೂ ಅದಕ್ಕೆ ಬಳಸುವರೋ ಎಂದು ನೆನೆದು ಲೂತ್ ಸಂಕಟಪಟ್ಟರು.
(78) ಲೂತ್‍ರ ಜನರು ಅವರೆಡೆಗೆ ಧಾವಿಸಿ ಬಂದರು. ಅವರು ಮುಂಚಿನಿಂದಲೇ ದುಷ್ಕೃತ್ಯಗಳನ್ನು ಮಾಡುವವರಾಗಿದ್ದರು. ಲೂತ್ ಹೇಳಿದರು: “ಓ ನನ್ನ ಜನರೇ! ನನ್ನ ಹೆಣ್ಣುಮಕ್ಕಳು ಇಲ್ಲಿರುವರು. (ನೀವು ಅವರನ್ನು ವಿವಾಹವಾಗುವುದಾದರೆ) ಅವರು ನಿಮಗೆ ಅತ್ಯಂತ ಪರಿಶುದ್ಧರಾಗಿರುವರು. ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅಪಮಾನಿಸದಿರಿ. ನಿಮ್ಮ ಪೈಕಿ ವಿವೇಚನೆಯಿರುವ ಪುರುಷನಾರೂ ಇಲ್ಲವೇ?”
(79) ಅವರು ಹೇಳಿದರು: “ತಮ್ಮ ಹೆಣ್ಮಕ್ಕಳ ಯಾವುದೇ ಅಗತ್ಯವೂ ನಮಗಿಲ್ಲವೆಂದು ತಾವು ಖಂಡಿತವಾಗಿಯೂ ಅರಿತಿದ್ದೀರಿ. ನಾವು ಏನನ್ನು ಬಯಸುತ್ತಿದ್ದೇವೆ ಎಂಬುದನ್ನೂ ತಾವು ಚೆನ್ನಾಗಿ ಅರಿತಿದ್ದೀರಿ”.
(80) ಲೂತ್ ಹೇಳಿದರು: “ನಿಮ್ಮನ್ನು ತಡೆಯುವ ಶಕ್ತಿ ನನಗಿರುತ್ತಿದ್ದರೆ! ಅಥವಾ ಒಬ್ಬ ಬಲಿಷ್ಠ ಸಹಾಯಕನ ಆಶ್ರಯವನ್ನು ನಾನು ಪಡೆಯುವಂತಿರುತ್ತಿದ್ದರೆ!”
(81) ಅವರು (ಮಲಕ್‍ಗಳು) ಹೇಳಿದರು: “ಓ ಲೂತ್! ಖಂಡಿತವಾಗಿಯೂ ನಾವು ತಮ್ಮ ರಬ್‌ನ ದೂತರಾಗಿದ್ದೇವೆ. ತಮ್ಮ ಬಳಿ ತಲುಪಲು ಅವರಿಗೆ ಸಾಧ್ಯವಾಗಲಾರದು. ಆದುದರಿಂದ ತಾವು ರಾತ್ರಿಯ ಒಂದು ಹಂತದಲ್ಲಿ ತಮ್ಮ ಕುಟುಂಬದೊಂದಿಗೆ ಯಾತ್ರೆ ಹೊರಡಿರಿ. ನಿಮ್ಮ ಪೈಕಿ ಯಾರೂ ಹಿಂದಿರುಗಿ ನೋಡದಿರಲಿ. ಆದರೆ ತಮ್ಮ ಪತ್ನಿಯ ಹೊರತು. ಖಂಡಿತವಾಗಿಯೂ ಅವರಿಗೆ (ಜನರಿಗೆ) ಬಾಧಿಸುವ ಶಿಕ್ಷೆಯು ಆಕೆಗೂ ಬಾಧಿಸುವುದು. ಖಂಡಿತವಾಗಿಯೂ ಪ್ರಭಾತವು ಅವರಿಗೋಸ್ಕರ ನಿರ್ಣಯಿಸಲಾಗಿರುವ ಅವಧಿಯಾಗಿದೆ. ಪ್ರಭಾತವು ಸನಿಹದಲ್ಲೇ ಇಲ್ಲವೇ?”
(82) ತರುವಾಯ ನಮ್ಮ ಆಜ್ಞೆಯು ಬಂದಾಗ ನಾವು ಅದನ್ನು (ಆ ನಾಡನ್ನು) ಬುಡಮೇಲುಗೊಳಿಸಿದೆವು ಮತ್ತು ಅವರ ಮೇಲೆ ಪದರ ಪದರವಾಗಿ ಸುಟ್ಟ ಇಟ್ಟಿಗೆಗಳ ಮಳೆಯನ್ನು ಸುರಿಸಿದೆವು.
(83) ತಮ್ಮ ರಬ್‌ನ ಬಳಿ ಗುರುತು ಹಾಕಲಾಗಿರುವ (ಇಟ್ಟಿಗೆಗಳು). ಅದು ಅಕ್ರಮಿಗಳಿಂದ ಹೆಚ್ಚು ದೂರವಾಗಿಲ್ಲ.(392)
392. ಲೂತ್(ಅ) ರವರ ಜನತೆಯು ವಾಸವಾಗಿದ್ದ ನಾಡು ಅರೇಬಿಯಾದ ಸತ್ಯನಿಷೇಧಿಗಳಿಗೆ ಸಂಬಂಧಿಸಿದಂತೆ ಹೆಚ್ಚು ದೂರದಲ್ಲಿಲ್ಲ ಎಂದರ್ಥ.
(84) ಮದ್‍ಯನ್ ಜನಾಂಗದೆಡೆಗೆ ಅವರ ಸಹೋದರರಾದ ಶುಐಬ್‍ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ಅಳತೆ ಮತ್ತು ತೂಕದಲ್ಲಿ ನೀವು ಕಡಿಮೆ ಮಾಡದಿರಿ. ಖಂಡಿತವಾಗಿಯೂ ನೀವು ಏಳಿಗೆಯಲ್ಲಿರುವುದಾಗಿ ನಾನು ಕಾಣುತ್ತಿರುವೆನು. ನಿಮ್ಮನ್ನು ಸಂಪೂರ್ಣವಾಗಿ ಆವರಿಸುವ ದಿನವೊಂದರ ಶಿಕ್ಷೆಯನ್ನು ಖಂಡಿತವಾಗಿಯೂ ನಾನು ನಿಮ್ಮ ಮೇಲೆ ಭಯಪಡುತ್ತಿರುವೆನು.
(85) ಓ ನನ್ನ ಜನರೇ! ಅಳತೆ ಮತ್ತು ತೂಕವನ್ನು ನ್ಯಾಯಬದ್ಧವಾದ ರೀತಿಯಲ್ಲಿ ಪೂರ್ಣವಾಗಿ ಕೊಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿಮೆ ಮಾಡದಿರಿ. ವಿನಾಶಕಾರಿಗಳಾಗಿರುತ್ತಾ ಭೂಮಿಯಲ್ಲಿ ಕ್ಷೋಭೆಯನ್ನುಂಟುಮಾಡದಿರಿ.
(86) ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹು ಬಾಕಿಯುಳಿಸಿ ಕೊಡುವವುಗಳು ನಿಮಗೆ ಅತ್ಯುತ್ತಮವಾಗಿವೆ. ನಾನು ನಿಮ್ಮ ಮೇಲೆ ಕಾವಲುಗಾರನೇನೂ ಅಲ್ಲ”.
(87) ಅವರು ಹೇಳಿದರು: “ಓ ಶುಐಬ್! ನಮ್ಮ ಪೂರ್ವಿಕರು ಆರಾಧಿಸುತ್ತಾ ಬಂದಿರುವುದನ್ನು ನಾವು ವರ್ಜಿಸಬೇಕೆಂದು ಅಥವಾ ನಮ್ಮ ಸಂಪತ್ತುಗಳಲ್ಲಿ ನಾವಿಚ್ಛಿಸುವ ಪ್ರಕಾರ ವ್ಯವಹರಿಸಬಾರದೆಂದು ತಮ್ಮ ನಮಾಝ್ ತಮಗೆ ಆದೇಶಿಸುತ್ತಿದೆಯೇ? ಖಂಡಿತವಾಗಿಯೂ ತಾವು ಸಹನಾಶೀಲರೂ ವಿವೇಚನೆಯುಳ್ಳವರೂ ಆಗಿದ್ದೀರಿ!”(393)
393. ಅವರ ಈ ಮಾತು ಶುಐಬ್(ಅ) ರವರ ಮೇಲಿರುವ ವಿಶ್ವಾಸದಿಂದಾಗಿರಲಿಲ್ಲ. ಬದಲಾಗಿ ಅವರನ್ನು ಹೀಯಾಳಿಸುಸಲುವಾಗಿತ್ತು.
(88) ಅವರು (ಶುಐಬ್) ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ರಬ್‌ನ ಕಡೆಯ ಸ್ಪಷ್ಟವಾದ ಪುರಾವೆಯನ್ನು ಅವಲಂಬಿಸುವವನಾಗಿರುವಾಗ ಮತ್ತು ತನ್ನ ಕಡೆಯ ಉತ್ತಮವಾದ ಅನ್ನಾಧಾರವನ್ನು(394) ಅವನು ನನಗೆ ಕರುಣಿಸಿರುವಾಗ (ಸತ್ಯವನ್ನು ಮುಚ್ಚಿಡುವುದು ನನ್ನಿಂದ ಹೇಗೆ ಸಾಧ್ಯ?) ನಾನು ನಿಮಗೆ ಒಂದು ವಿಷಯವನ್ನು ವಿರೋಧಿಸಿ ತರುವಾಯ ನಿಮಗೆ ವ್ಯತಿರಿಕ್ತವಾಗಿ ನಾನೇ ಅದನ್ನು ಮಾಡಲು ಬಯಸುವುದಿಲ್ಲ.(395) ನಾನು ಬಯಸುತ್ತಿರುವುದು ನನ್ನಿಂದ ಸಾಧ್ಯವಾಗುವಷ್ಟು ಸುಧಾರಣೆ ಮಾಡುವುದನ್ನು ಮಾತ್ರವಾಗಿದೆ. (ಅದಕ್ಕಿರುವ) ನೆರವು ಅಲ್ಲಾಹುವಿನಿಂದಲ್ಲದೆ ನನಗೆ ದೊರೆಯಲಾರದು. ಅವನ ಮೇಲೆಯೇ ನಾನು ಭರವಸೆಯಿಟ್ಟಿರುವೆನು ಮತ್ತು ಅವನೆಡೆಗೆ ನಾನು ವಿನಮ್ರತೆಯೊಂದಿಗೆ ಮರಳುವೆನು.
394. ರಿಝ್ಕ್ ಎಂಬ ಪದಕ್ಕೆ ಉಪಜೀವನ, ಅನ್ನಾಧಾರ, ದಾನ, ಅನುಗ್ರಹ ಇತ್ಯಾದಿ ಅರ್ಥಗಳಿವೆ.
395. ಪ್ರವಾದಿಗಳು ಜನರಿಗೆ ಉಪದೇಶ ನೀಡುವುದು, ವಿಧಿನಿಷೇಧಗಳನ್ನು ಜಾರಿಗೊಳಿಸುವುದು ಮಾತ್ರವಲ್ಲದೆ ಅವುಗಳನ್ನು ತಮ್ಮ ಜೀವನದಲ್ಲಿ ಕರಾರುವಾಕ್ಕಾಗಿ ಅಳವಡಿಸಿ ಮಾದರಿಯನ್ನು ತೋರಿಸಿಕೊಡುತ್ತಿದ್ದರು.
(89) ಓ ನನ್ನ ಜನರೇ! ನೂಹ್‍ರ ಜನತೆಗೆ ಅಥವಾ ಹೂದ್‍ರ ಜನತೆಗೆ ಅಥವಾ ಸ್ವಾಲಿಹ್‍ರ ಜನತೆಗೆ ಬಾಧಿಸಿದಂತಹ ಶಿಕ್ಷೆಯು ನಿಮಗೂ ಬಾಧಿಸುವಂತಾಗಲು ನನ್ನೊಂದಿಗಿರುವ ವಿರೋಧವು ನಿಮಗೊಂದು ಹೇತುವಾಗದಿರಲಿ. ಲೂತ್‍ರ ಜನತೆಯು ನಿಮ್ಮಿಂದ ಹೆಚ್ಚು ವಿದೂರವಾಗಿಲ್ಲ.
(90) ನೀವು ನಿಮ್ಮ ರಬ್‌ನೊಂದಿಗೆ ಪಾಪಮುಕ್ತಿಯನ್ನು ಬೇಡಿರಿ. ತರುವಾಯ ಅವನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರಿ. ಖಂಡಿತವಾಗಿಯೂ ನನ್ನ ರಬ್ ಅಪಾರ ಕರುಣೆಯುಳ್ಳವನೂ, ಅತ್ಯಧಿಕ ಪ್ರೀತಿಸುವವನೂ ಆಗಿರುವನು”.
(91) ಅವರು ಹೇಳಿದರು: “ಓ ಶುಐಬ್! ತಾವು ಹೇಳುತ್ತಿರುವವುಗಳಲ್ಲಿ ಹೆಚ್ಚಿನವುಗಳೂ ನಮಗೆ ಅರ್ಥವಾಗುತ್ತಿಲ್ಲ. ಖಂಡಿತವಾಗಿಯೂ ತಮ್ಮನ್ನು ನಾವು ನಮ್ಮ ಪೈಕಿ ಒಬ್ಬ ಬಲಹೀನನಾಗಿ ಕಾಣುತ್ತಿದ್ದೇವೆ. ತಮ್ಮ ಕುಟುಂಬವು ಇಲ್ಲದಿರುತ್ತಿದ್ದರೆ ನಾವು ತಮ್ಮನ್ನು ಕಲ್ಲೆಸೆದು ಸಾಯಿಸುತ್ತಿದ್ದೆವು. ನಮ್ಮ ಮಟ್ಟಿಗೆ ತಾವು ಒಬ್ಬ ಪ್ರತಾಪಶಾಲಿಯೇನೂ ಅಲ್ಲ”.
(92) ಅವರು (ಶುಐಬ್) ಹೇಳಿದರು: “ಓ ನನ್ನ ಜನರೇ! ನಿಮ್ಮ ಮಟ್ಟಿಗೆ ನನ್ನ ಕುಟುಂಬವು ಅಲ್ಲಾಹುವಿಗಿಂತಲೂ ಹೆಚ್ಚು ಪ್ರತಾಪವುಳ್ಳವರೇ? ನೀವಂತೂ ಅವನನ್ನು ನಿಮ್ಮ ಬೆನ್ನ ಹಿಂಭಾಗಕ್ಕೆ ತಳ್ಳಿದ್ದೀರಿ. ಖಂಡಿತವಾಗಿಯೂ ನನ್ನ ರಬ್ ನೀವು ಮಾಡುತ್ತಿರುವುದನ್ನು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(93) ಓ ನನ್ನ ಜನರೇ! ನೀವು ನಿಮ್ಮ ನಿಲುವಿಗೆ ಅನುಗುಣವಾಗಿ ಕರ್ಮವೆಸಗಿರಿ. ಖಂಡಿತವಾಗಿಯೂ ನಾನೂ ಕರ್ಮವೆಸಗುತ್ತಿರುವೆನು. ತರುವಾಯ ಯಾರಿಗೆ ಅಪಮಾನಕರವಾದ ಶಿಕ್ಷೆಯು ಬರುವುದು ಮತ್ತು ಯಾರು ಸುಳ್ಳು ಹೇಳುತ್ತಿರುವರು ಎಂಬುದನ್ನು ಮುಂದೆ ನೀವು ಅರಿತುಕೊಳ್ಳುವಿರಿ. ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತಿರುವವನಾಗಿರುವೆನು”.
(94) ನಮ್ಮ ಆಜ್ಞೆಯು ಬಂದಾಗ ನಾವು ಶುಐಬ್‍ರನ್ನು ಮತ್ತು ಅವರ ಜೊತೆಗೆ ವಿಶ್ವಾಸವಿಟ್ಟವರನ್ನು ನಮ್ಮ ಕಡೆಯ ಕಾರುಣ್ಯದಿಂದಾಗಿ ರಕ್ಷಿಸಿದೆವು. ಅಕ್ರಮವೆಸಗಿದವರನ್ನು ಘೋರವಾದ ಶಬ್ದವು ಹಿಡಿದುಬಿಟ್ಟಿತು. ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖರಾಗಿ ಬಿದ್ದಿದ್ದರು.
(95) ಅವರಲ್ಲಿ ವಾಸಿಸಿರಲೇ ಇಲ್ಲವೆಂಬಂತೆ (ನಿರ್ನಾಮ ವಾದರು). ಅರಿಯಿರಿ! ಸಮೂದ್ ಜನಾಂಗವು ವಿದೂರವಾದಂತೆಯೇ ಮದ್‍ಯನ್ ಜನಾಂಗಕ್ಕೂ (ಅಲ್ಲಾಹುವಿನ ಕಾರಣ್ಯದಿಂದ) ವಿದೂರತೆಯಿರಲಿ!
(96) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಮತ್ತು ಸ್ಪಷ್ಟವಾದ ಆಧಾರಪ್ರಮಾಣಗಳೊಂದಿಗೆ ಕಳುಹಿಸಿದೆವು.
(97) ಫಿರ್‍ಔನ್ ಮತ್ತು ಅವನ ಮುಖಂಡರ ಕಡೆಗೆ. ಆದರೆ ಅವರು (ಮುಖಂಡರು) ಫಿರ್‍ಔನನ ಆಜ್ಞೆಯನ್ನು ಅನುಸರಿಸಿದರು. ಫಿರ್‍ಔನನ ಆಜ್ಞೆಯು ವಿವೇಚನೆಯುಳ್ಳದ್ದಾಗಿರಲಿಲ್ಲ.
(98) ಪುನರುತ್ಥಾನದ ದಿನದಂದು ಅವನು (ಫಿರ್‍ಔನ್) ತನ್ನ ಜನತೆಯ ಮುಂಚೂಣಿಯಲ್ಲಿರುವನು. ತರುವಾಯ ಅವನು ಅವರನ್ನು ನರಕದೆಡೆಗೆ ಸಾಗಿಸುವನು. (ಅವರನ್ನು) ಸಾಗಿಸಲಾಗುವ ಆ ಸ್ಥಳವು ಎಷ್ಟೊಂದು ನಿಕೃಷ್ಟವಾದುದು!
(99) ಇಹಲೋಕದಲ್ಲೂ ಪುನರುತ್ಥಾನ ದಿನದಲ್ಲೂ ಶಾಪವನ್ನು ಅವರ ಹಿಂದೆಯೇ ಕಳುಹಿಸಲಾಗಿರುವುದು. (ಅವರಿಗೆ) ನೀಡಲಾಗಿರುವ ಆ ಉಡುಗೊರೆಯು ಎಷ್ಟೊಂದು ನಿಕೃಷ್ಟವಾದುದು!
(100) ಇವು ವಿವಿಧ ನಾಡುಗಳ ವೃತ್ತಾಂತಗಳ ಪೈಕಿ ಕೆಲವು ಮಾತ್ರವಾಗಿವೆ. ನಾವು ಇದನ್ನು ತಮಗೆ ವಿವರಿಸಿ ಕೊಡುತ್ತಿದ್ದೇವೆ. ಅವುಗಳ (ಆ ನಾಡುಗಳ) ಪೈಕಿ ಕೆಲವು ಅಸ್ತಿತ್ವದಲ್ಲಿವೆ ಮತ್ತು ಕೆಲವು ನಿರ್ನಾಮವಾಗಿವೆ.
(101) ನಾವು ಅವರಿಗೆ ಯಾವುದೇ ಅನ್ಯಾಯ ಮಾಡಿರಲಿಲ್ಲ. ಆದರೆ ಅವರು ಸ್ವತಃ ತಮಗೇ ಅನ್ಯಾಯ ಮಾಡಿರುವರು. ತಮ್ಮ ರಬ್‌ನ ಆಜ್ಞೆಯು ಬಂದಾಗ ಅವರು ಅಲ್ಲಾಹುವಿನ ಹೊರತು ಪ್ರಾರ್ಥಿಸುತ್ತಿದ್ದ ಅವರ ಆರಾಧ್ಯರು ಅವರಿಗೆ ಯಾವುದೇ ಪ್ರಯೋಜನವನ್ನೂ ಮಾಡಲಿಲ್ಲ. ಅವರು (ಆರಾಧ್ಯರು) ಅವರಿಗೆ ನಾಶವನ್ನೇ ಹೊರತು ಬೇರೇನನ್ನೂ ಅಧಿಕಗೊಳಿಸಿಲ್ಲ.
(102) ವಿವಿಧ ನಾಡುಗಳಲ್ಲಿರುವವರು ಅಕ್ರಮಿಗಳಾಗಿದ್ದು ಅವರನ್ನು ತಮ್ಮ ರಬ್ ಹಿಡಿದಾಗ ಅವನ ಹಿಡಿತವು ಹೀಗೆಯೇ ಆಗಿತ್ತು. ಖಂಡಿತವಾಗಿಯೂ ಅವನ ಹಿಡಿತವು ಯಾತನಾಮಯವೂ ಅತಿಕಠೋರವೂ ಆಗಿದೆ.
(103) ಪರಲೋಕದ ಶಿಕ್ಷೆಯನ್ನು ಭಯಪಡುವವರಿಗೆ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಅದು ಸರ್ವ ಮನುಷ್ಯರನ್ನೂ ಒಟ್ಟುಗೂಡಿಸಲಾಗುವ ಒಂದು ದಿನವಾಗಿದೆ. ಅದು (ಸರ್ವರೂ) ಹಾಜರಾಗುವ ಒಂದು ದಿನವಾಗಿದೆ.
(104) ನಾವದನ್ನು ಮುಂದೂಡುತ್ತಿರುವುದು ನಿರ್ದಿಷ್ಟವಾದ ಒಂದು ಅವಧಿಯವರೆಗೆ ಮಾತ್ರವಾಗಿದೆ.
(105) ಆ ಅವಧಿಯು ಬರುವ ದಿನದಂದು ಅವನ (ಅಲ್ಲಾಹುವಿನ) ಅನುಮತಿಯ ವಿನಾ ಯಾವುದೇ ವ್ಯಕ್ತಿಯೂ ಮಾತನಾಡಲಾರನು. ಆಗ ಅವರ ಪೈಕಿ ದೌರ್ಭಾಗ್ಯವಂತನೂ, ಸೌಭಾಗ್ಯವಂತನೂ ಇರುವರು.
(106) ಆದರೆ ದೌರ್ಭಾಗ್ಯವಂತರು ಯಾರೋ ಅವರು ನರಕಾಗ್ನಿಯಲ್ಲಿರುವರು. ಅವರಿಗೆ ಅಲ್ಲಿ ನಿಟ್ಟುಸಿರು ಮತ್ತು ಬಿಕ್ಕಳಿಕೆಗಳಿರುವುವು.
(107) ಆಕಾಶಗಳು ಮತ್ತು ಭೂಮಿಯು ಅಸ್ತಿತ್ವದಲ್ಲಿರುವವರೆಗೆ(396) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ತಮ್ಮ ರಬ್ ಇಚ್ಛಿಸಿದವುಗಳ ಹೊರತು.(397) ತಾನು ಇಚ್ಛಿಸುವುದೆಲ್ಲವನ್ನೂ ತಮ್ಮ ರಬ್ ಖಂಡಿತವಾಗಿಯೂ ಜಾರಿಗೊಳಿಸುವವನಾಗಿರುವನು.
396. ಇದು ಅನಂತ ಕಾಲದವರೆಗೆ ಎಂಬುದಕ್ಕಿರುವ ಆಲಂಕಾರಿಕ ಪ್ರಯೋಗವಾಗಿದೆ.
397. ಅಲ್ಲಾಹು ರಿಯಾಯಿತಿ ನೀಡಲು ಇಚ್ಛಿಸಿದವರಿಗೆ ಹೊರತು ನರಕ ಶಿಕ್ಷೆಯಿಂದ ಯಾರಿಗೂ ರಿಯಾಯಿತಿ ದೊರೆಯಲಾರದು. ಅವನು ಇಚ್ಛಿಸುವವರನ್ನು ನಿಶ್ಚಿತ ಕಾಲದವರೆಗೆ ನರಕದಲ್ಲಿ ಶಿಕ್ಷಿಸಿ ತರುವಾಯ ಅವರನ್ನು ಸ್ವರ್ಗಕ್ಕೆ ಕಳುಹಿಸುವನು.
(108) ಆದರೆ ಸೌಭಾಗ್ಯವಂತರು ಯಾರೋ ಅವರು ಸ್ವರ್ಗದಲ್ಲಿರುವರು. ಆಕಾಶಗಳು ಮತ್ತು ಭೂಮಿಯು ಅಸ್ತಿತ್ವದಲ್ಲಿರುವವರೆಗೆ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ತಮ್ಮ ರಬ್ ಇಚ್ಛಿಸಿದವುಗಳ ಹೊರತು.(398) ಅದು ಕಡಿದುಹೋಗದ ಒಂದು ಉಡುಗೊರೆಯಾಗಿದೆ.
398. ಇದು ಸ್ವರ್ಗಪ್ರವೇಶಕ್ಕೆ ಮುಂಚಿತವಾಗಿ ನರಕಶಿಕ್ಷೆಯನ್ನು ಅನುಭವಿಸುವ ಕೆಲವರ ಬಗ್ಗೆಯಾಗಿರಬಹುದು. ‘ನಿನ್ನ ರಬ್ ಇಚ್ಛಿಸಿದವುಗಳ ಹೊರತು’ ಎಂಬ ವಚನಕ್ಕೆ ಬೇರೆ ಕೆಲವು ವ್ಯಾಖ್ಯಾನಗಳನ್ನೂ ನೀಡಲಾಗಿದೆ.
(109) ಆದುದರಿಂದ ಇವರು ಆರಾಧಿಸುತ್ತಿರುವವುಗಳ ಬಗ್ಗೆ ತಾವು ಯಾವುದೇ ಸಂದೇಹಕ್ಕೂ ಒಳಗಾಗದಿರಿ. ಮುಂಚೆ ಇವರ ಪೂರ್ವಿಕರು ಆರಾಧಿಸುತ್ತಿದ್ದಂತೆಯೇ ಇವರೂ ಆರಾಧಿಸುತ್ತಿರುವರು. ಖಂಡಿತವಾಗಿಯೂ ಅವರಿಗಿರುವ ಪಾಲನ್ನು ಸ್ವಲ್ಪವೂ ಕಡಿಮೆ ಮಾಡದೆ ನಾವು ಅವರಿಗೆ ನೆರವೇರಿಸಿಕೊಡುವೆವು.
(110) ಖಂಡಿತವಾಗಿಯೂ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ತರುವಾಯ ಅದರ ಬಗ್ಗೆ ಭಿನ್ನಾಭಿಪ್ರಾಯಗಳುಂಟಾದವು. ತಮ್ಮ ರಬ್‌ನ ಕಡೆಯ ಒಂದು ವಚನವು ಪೂರ್ವಭಾವಿಯಾಗಿ ಇಲ್ಲದಿರುತ್ತಿದ್ದರೆ ಅವರ ನಡುವೆ ಈಗಾಗಲೇ ತೀರ್ಪು ನೀಡಲಾಗಿರುತ್ತಿತ್ತು. ಖಂಡಿತವಾಗಿಯೂ ಅವರು ಅದರ ಬಗ್ಗೆ ಅವಿಶ್ವಾಸವನ್ನು ಹುಟ್ಟಿಸುವಂತಹ ಸಂದೇಹದಲ್ಲಿರುವರು.
(111) ಖಂಡಿತವಾಗಿಯೂ ತಮ್ಮ ರಬ್ ಅವರಲ್ಲಿ ಪ್ರತಿಯೊಬ್ಬರಿಗೂ ಅವರ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಖಂಡಿತವಾಗಿಯೂ ಅವರು ಮಾಡುತ್ತಿರುವುದರ ಬಗ್ಗೆ ಅವನು ಸೂಕ್ಷ್ಮವಾಗಿ ಅರಿಯುವವನಾಗಿರುವನು.
(112) ಆದುದರಿಂದ ತಮಗೆ ಆದೇಶಿಸಲಾಗಿರುವ ಪ್ರಕಾರ ತಾವು ಮತ್ತು ತಮ್ಮೊಂದಿಗೆ (ಅಲ್ಲಾಹುವಿನೆಡೆಗೆ) ಮರಳಿದವರು ನೇರವಾದ ಮಾರ್ಗದಲ್ಲಿ ನೆಲೆಗೊಳ್ಳಿರಿ. ನೀವು ಹದ್ದು ಮೀರಿ ವರ್ತಿಸದಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅವನು ವೀಕ್ಷಿಸುತ್ತಿರುವನು.
(113) ನೀವು ಅಕ್ರಮವೆಸಗಿದವರ ಕಡೆಗೆ ವಾಲದಿರಿ. ಹಾಗೇನಾದರೂ ಆದರೆ ನರಕವು ನಿಮ್ಮನ್ನು ಸ್ಪರ್ಶಿಸುವುದು. ಅಲ್ಲಾಹುವಿನ ಹೊರತು ನಿಮಗೆ ಯಾವುದೇ ರಕ್ಷಕರೂ ಇಲ್ಲ. ತರುವಾಯ ನಿಮಗೆ ಸಹಾಯವೂ ಸಿಗಲಾರದು.
(114) ಹಗಲಿನ ಎರಡು ತುದಿಗಳಲ್ಲಿ ಮತ್ತು ರಾತ್ರಿಯ ಅಂತ್ಯಯಾಮಗಳಲ್ಲಿ ತಾವು ನಮಾಝನ್ನು ಸಂಸ್ಥಾಪಿಸಿರಿ.(399) ಖಂಡಿತವಾಗಿಯೂ ಸತ್ಕರ್ಮಗಳು ದುಷ್ಕರ್ಮಗಳನ್ನು ಅಳಿಸಿ ಹಾಕುತ್ತವೆ. ಇದು ಚಿಂತಿಸಿ ಗ್ರಹಿಸುವವರಿಗಿರುವ ಒಂದು ಉಪದೇಶವಾಗಿದೆ.
399. ಈ ಸೂಕ್ತಿಯಲ್ಲಿರುವ ಸೂಚನೆಯು ಐದು ವೇಳೆಯ ನಮಾಝ್‍ಗಳ ನಿರ್ಣಯಿತ ಸಮಯವಲ್ಲ, ಬದಲಾಗಿ ಹಗಲು ರಾತ್ರಿ ಕ್ರಮ ಪ್ರಕಾರ ನಮಾಝ್ ನಿರ್ವಹಿಸುವುದಕ್ಕಿರುವ ಆದೇಶವಾಗಿದೆ. ಹಗಲಿನ ಎರಡು ತುದಿಗಳು ಎಂದರೆ ಸುಬಬ್‍ಹ್ ನಮಾಝ್ ಮತ್ತು ಅಸ್ರ್ ನಮಾಝ್‍ಗಳಾಗಿವೆ. ಝುಹ್ರ್ ನಮಾಝ್ ಮಧ್ಯಾಹ್ನದ ನಂತರವಿರುವ ನಮಾಝ್ ಆಗಿರುವುದರಿಂದ ಕೆಲವರು ಅದನ್ನು ಅಸರ್‌ನೊಂದಿಗೆ ಸೇರಿಸಿರುವರು. ಝುಲಫ್ ಎಂದರೆ ಹಗಲಿಗೆ ಹತ್ತಿರವಿರುವ ರಾತ್ರಿಯ ಭಾಗ ಎಂದಾಗಿದೆ. ಇದರ ತಾತ್ಪರ್ಯವು ಮಗ್ರಿಬ್ ಮತ್ತು ಇಶಾ ನಮಾಝ್‍ಗಳಾಗಿವೆ.
(115) ತಾವು ತಾಳ್ಮೆ ವಹಿಸಿರಿ. ಖಂಡಿತವಾಗಿಯೂ ಅಲ್ಲಾಹು ಸತ್ಕರ್ಮಿಗಳ ಪ್ರತಿಫಲವನ್ನು ವ್ಯರ್ಥಗೊಳಿಸಲಾರನು.
(116) ಭೂಮಿಯಲ್ಲಿ ವಿನಾಶವನ್ನುಂಟುಮಾಡುವುದರಿಂದ (ಜನರನ್ನು) ತಡೆಯುವ ಮತ್ತು (ಒಳಿತಿನ) ಪರಂಪರೆಯಿರುವ ಒಂದು ವಿಭಾಗವು ನಿಮಗಿಂತ ಮುಂಚಿನ ತಲೆಮಾರುಗಳಲ್ಲಿ ಉಂಟಾಗಲಿಲ್ಲವೇಕೆ? ಅವರ ಪೈಕಿ ನಾವು ಪಾರು ಮಾಡಿರುವ ಕೆಲವರ ಹೊರತು. ಆದರೆ ಅಕ್ರಮಿಗಳು ತಮಗೆ ನೀಡಲಾಗಿರುವ ಸುಖಾಡಂಬರಗಳ ಬೆನ್ನು ಹತ್ತಿದರು. ಅವರು ಅಪರಾಧಿಗಳಾಗಿದ್ದರು.
(117) ಊರ ನಿವಾಸಿಗಳು ಸತ್ಕಾರ್ಯಗಳನ್ನು ಮಾಡುವವರಾಗಿರುವಾಗ, ತಮ್ಮ ರಬ್ ಅನ್ಯಾಯವಾಗಿ ನಾಡುಗಳನ್ನು ನಾಶ ಮಾಡಲಾರನು.
(118) ತಮ್ಮ ರಬ್ ಇಚ್ಛಿಸಿರುತ್ತಿದ್ದರೆ ಅವನು ಮನುಕುಲವನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. (ಆದರೆ) ಅವರು ಭಿನ್ನರಾಗುತ್ತಲೇ ಇರುವರು.
(119) ತಮ್ಮ ರಬ್ ಕರುಣೆ ತೋರಿದವರ ಹೊರತು. ಅವನು ಅವರನ್ನು ಅದಕ್ಕಾಗಿಯೇ ಸೃಷ್ಟಿಸಿರುವನು.(400) “ಜಿನ್ನ್ ಮತ್ತು ಮನುಷ್ಯರನ್ನು ಸೇರಿಸಿ ಖಂಡಿತವಾಗಿಯೂ ನಾನು ನರಕವನ್ನು ತುಂಬಿಸುವೆನು” ಎಂಬ ತಮ್ಮ ರಬ್‌ನ ವಚನವು ನೆರವೇರಿದೆ.
400. ವಿಭಿನ್ನ ಧರ್ಮಗಳನ್ನು ಸ್ವೀಕರಿಸುವ ಸ್ವಾತಂತ್ರ್ಯವನ್ನು ನೀಡಿ ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿರುವನು. ಆದುದರಿಂದ ಸ್ವತಃ ತಮ್ಮದೇ ಕರ್ಮಗಳ ಪ್ರತಿಫಲವನ್ನು ಅನುಭವಿಸಲು ಅವರು ನಿರ್ಬಂಧಿತರಾಗಿರುವರು.
(120) ತಮ್ಮ ಹೃದಯಕ್ಕೆ ಸ್ಥಿರತೆಯನ್ನು ನೀಡುವ ಎಲ್ಲವನ್ನೂ ಸಂದೇಶವಾಹಕರ ವೃತ್ತಾಂತಗಳಿಂದ ನಾವು ತಮಗೆ ವಿವರಿಸಿಕೊಡುತ್ತಿದ್ದೇವೆ. ಇದರ ಮೂಲಕ ತಮಗೆ ಸತ್ಯವೂ, ಸತ್ಯವಿಶ್ವಾಸಿಗಳಿಗೆ ಉಪದೇಶ ಮತ್ತು ಬೋಧನೆಯೂ ಬಂದಿರುವುದು.
(121) ವಿಶ್ವಾಸವಿಡದವರೊಂದಿಗೆ ತಾವು ಹೇಳಿರಿ: “ನೀವು ನಿಮ್ಮ ನಿಲುವಿಗೆ ಅನುಗುಣವಾಗಿ ಕರ್ಮವೆಸಗಿರಿ. ಖಂಡಿತವಾಗಿಯೂ ನಾವೂ ಕರ್ಮವೆಸಗುವೆವು.
(122) ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾವೂ ಕಾಯುತ್ತಿದ್ದೇವೆ”.
(123) ಭೂಮ್ಯಾಕಾಶಗಳಲ್ಲಿರುವ ಅಗೋಚರ ಜ್ಞಾನಗಳು ಅಲ್ಲಾಹುವಿಗೆ ಸೇರಿದ್ದಾಗಿವೆ. ಸಂಗತಿಗಳೆಲ್ಲವೂ ಮರಳಿಸಲಾಗುವುದು ಅವನೆಡೆಗೇ ಆಗಿದೆ. ಆದುದರಿಂದ ತಾವು ಅವನನ್ನು ಆರಾಧಿಸಿರಿ ಮತ್ತು ಅವನ ಮೇಲೆ ಭರವಸೆಯಿಡಿರಿ. ನೀವು ಮಾಡುತ್ತಿರುವುದರ ಬಗ್ಗೆ ತಮ್ಮ ರಬ್ ಅಲಕ್ಷ್ಯನಲ್ಲ.