46 - Al-Ahqaf ()

|

(1) ಹಾ-ಮೀಮ್.

(2) ಈ ಗ್ರಂಥದ ಅವತೀರ್ಣವು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಿನ ಕಡೆಯಿಂದಾಗಿದೆ.

(3) ನಾವು ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆಯಿರುವವುಗಳನ್ನು ಸತ್ಯದೊಂದಿಗೆ ಮತ್ತು ಒಂದು ನಿಶ್ಚಿತ ಅವಧಿಗೆ ವಿನಾ ಸೃಷ್ಟಿಸಿಲ್ಲ. ಸತ್ಯನಿಷೇಧಿಗಳು ಅವರಿಗೆ ಎಚ್ಚರಿಕೆ ನೀಡಲಾಗಿರುವುದನ್ನು ಕಡೆಗಣಿಸಿ ವಿಮುಖರಾಗುತ್ತಿರುವರು.

(4) (ಓ ಪ್ರವಾದಿಯವರೇ!) ಹೇಳಿರಿ: “ಅಲ್ಲಾಹುವಿನ ಹೊರತು ನೀವು ಕರೆದು ಪ್ರಾರ್ಥಿಸುತ್ತಿರುವುದರ ಬಗ್ಗೆ ನೀವು ಚಿಂತಿಸಿ ನೋಡಿದ್ದೀರಾ? ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿರುವರೆಂದು ನನಗೆ ತೋರಿಸಿಕೊಡಿ. ಅಥವಾ ಆಕಾಶಗಳ ಸೃಷ್ಟಿಯಲ್ಲಿ ಅವರಿಗೆ ಏನಾದರೂ ಸಹಭಾಗಿತ್ವವಿದೆಯೇ? ನೀವು ಸತ್ಯವಂತರಾಗಿದ್ದರೆ ಇದಕ್ಕಿಂತ ಮುಂಚಿನ ಯಾವುದಾದರೂ ಗ್ರಂಥವನ್ನು ಅಥವಾ ಜ್ಞಾನದ ಕುರುಹನ್ನು ನನ್ನ ಬಳಿಗೆ ತನ್ನಿರಿ”.

(5) ಅಲ್ಲಾಹುವಿನ ಹೊರತು ಪುನರುತ್ಥಾನ ದಿನದವರೆಗೆ ತನಗೆ ಉತ್ತರ ನೀಡದವರನ್ನು ಕರೆದು ಪ್ರಾರ್ಥಿಸುವವನಿಗಿಂತಲೂ ದೊಡ್ಡ ಪಥಭ್ರಷ್ಟನು ಇನ್ನಾರಿರುವನು? ಅವರು ಇವರ ಪ್ರಾರ್ಥನೆಯ ಬಗ್ಗೆ ಅಲಕ್ಷ್ಯರಾಗಿರುವರು.

(6) ಮನುಷ್ಯರನ್ನು ಒಟ್ಟುಗೂಡಿಸಲಾಗುವ ಸಂದರ್ಭದಲ್ಲಿ ಅವರು ಇವರ ಶತ್ರುಗಳಾಗುವರು. ಇವರು ಅವರ ಆರಾಧನೆ ಮಾಡಿರುವುದನ್ನು ಅವರು ನಿಷೇಧಿಸುವರು.(1118)
1118. ಅಲ್ಲಾಹುವೇತರರೊಂದಿಗೆ ಪ್ರಾರ್ಥಿಸುವುದು ಅವರಿಗೆ ಸಲ್ಲಿಸುವ ಆರಾಧನೆಯಾಗಿದೆ ಮತ್ತು ಅಲ್ಲಾಹುವಿನ ಹೊರತು ಯಾರೂ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲವೆಂದು 5-6 ಸೂಕ್ತಿಗಳು ಸ್ಪಷ್ಟಪಡಿಸುತ್ತವೆ. ಮಹಾತ್ಮರನ್ನು ಕರೆದು ಪ್ರಾರ್ಥಿಸುವ ಜನರೊಂದಿಗೆ ಆ ಮಹಾತ್ಮರು ಪುನರುತ್ಥಾನದಿನದಂದು ಪ್ರೀತಿ ತೋರಿಸುವುದೋ ಅವರಿಗಾಗಿ ಶಿಫಾರಸು ಮಾಡುವುದೋ ಮಾಡಲಾರರು. ಬದಲಾಗಿ ಆ ಆರಾಧನೆಯನ್ನು ಅವರು ನಿಷೇಧಿಸುವರೆಂದು ಈ ಸೂಕ್ತಿಗಳು ನಮಗೆ ಮನದಟ್ಟು ಮಾಡಿಕೊಡುತ್ತವೆ.

(7) ಸ್ಪಷ್ಟವಾದ ರೀತಿಯಲ್ಲಿ ನಮ್ಮ ದೃಷ್ಟಾಂತಗಳನ್ನು ಅವರಿಗೆ ಓದಿಕೊಡಲಾದರೆ ಸತ್ಯವು ತಮ್ಮ ಬಳಿಗೆ ಬಂದಾಗ ಅದರ ಬಗ್ಗೆ ಆ ಸತ್ಯನಿಷೇಧಿಗಳು ಹೇಳುವರು: “ಇದೊಂದು ಸ್ಪಷ್ಟವಾದ ಮಾಂತ್ರಿಕತೆಯಾಗಿದೆ”.

(8) ಅಥವಾ, ಅದನ್ನು ಅವರು (ಪ್ರವಾದಿಯವರು) ಸ್ವತಃ ರಚಿಸಿದರು ಎಂದು ಅವರು ಹೇಳುತ್ತಿರುವರೇ? ತಾವು ಹೇಳಿರಿ: “ಅದು ನಾನು ಸ್ವತಃ ರಚಿಸಿದ್ದಾಗಿದ್ದರೆ ಅಲ್ಲಾಹುವಿನ ಶಿಕ್ಷೆಯಿಂದ ನನಗೆ ಸ್ವಲ್ಪವಾದರೂ ರಕ್ಷಣೆ ಒದಗಿಸಲು ನಿಮ್ಮಿಂದ ಸಾಧ್ಯವಾಗದು. ಅದರ (ಕುರ್‌ಆನಿನ) ಬಗ್ಗೆ ನೀವು ಮಾತುಕತೆಯಲ್ಲಿ ಮಗ್ನರಾಗುವುದನ್ನು ಅವನು ಚೆನ್ನಾಗಿ ಅರಿಯುವವನಾಗಿರುವನು. ನನ್ನ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿ ಅವನು ಸಾಕು. ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು”.

(9) (ಓ ಪ್ರವಾದಿಯವರೇ!) ಹೇಳಿರಿ: “ನಾನು ಸಂದೇಶವಾಹಕರಲ್ಲಿ ಹೊಸಬನಲ್ಲ. ನನ್ನೊಂದಿಗೆ ಅಥವಾ ನಿಮ್ಮೊಂದಿಗೆ ಏನು ಮಾಡಲಾಗುವುದೆಂದು ನಾನು ಅರಿತಿಲ್ಲ. ನಾನು ಅನುಸರಿಸುತ್ತಿರುವುದು ನನಗೆ ದಿವ್ಯ ಸಂದೇಶವಾಗಿ ನೀಡಲಾಗುತ್ತಿರುವುದನ್ನು ಮಾತ್ರವಾಗಿದೆ. ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನೇ ವಿನಾ ಇನ್ನೇನೂ ಅಲ್ಲ.

(10) (ಓ ಪ್ರವಾದಿಯವರೇ!) ಹೇಳಿರಿ: “ನೀವೇನಾದರೂ ಚಿಂತಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹುವಿನ ಕಡೆಯಿಂದಾಗಿದ್ದು, ತರುವಾಯ ನೀವು ಇದನ್ನು ನಿಷೇಧಿಸಿ, ಇದರಂತಿರುವ ಒಂದಕ್ಕೆ ಇಸ್ರಾಈಲ್ ಸಂತತಿಗಳ ಪೈಕಿ ಒಬ್ಬ ಸಾಕ್ಷಿಯು ಸಾಕ್ಷ್ಯವಹಿಸಿ,(1119) ತರುವಾಯ ಅವನು (ಇದರಲ್ಲಿ) ವಿಶ್ವಾಸವಿಟ್ಟು, ನೀವು ಅಹಂಕಾರ ಪಡುವುದಾದರೆ (ನಿಮ್ಮ ಸ್ಥಿತಿ ಎಷ್ಟು ಶೋಚ ನೀಯವಾಗಿದೆ!) ಖಂಡಿತವಾಗಿಯೂ ಅಕ್ರಮಿಗಳಾಗಿರುವ ಜನರನ್ನು ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸಲಾರನು”.
1119. ಆಗಮಿಸಲಿರುವ ಪ್ರವಾದಿಯ ಬಗ್ಗೆ ಬೈಬಲ್‍ನಲ್ಲಿರುವ ಉಲ್ಲೇಖಗಳ ಆಧಾರದಲ್ಲಿ ಪ್ರವಾದಿ(ಸ) ರವರ ಕಾಲದ ಯಹೂದ, ಕ್ರೈಸ್ತ ಸಮುದಾಯಗಳಲ್ಲಿ ಸೇರಿದ ಅನೇಕ ಮಂದಿ ಕುರ್‌ಆನ್ ಮತ್ತು ಪ್ರವಾದಿ(ಸ) ರವರ ಪ್ರವಾದಿತ್ವದಲ್ಲಿ ವಿಶ್ವಾಸ ತಾಳಿದ್ದರು.

(11) ಸತ್ಯವಿಶ್ವಾಸಿಗಳ ಬಗ್ಗೆ ಸತ್ಯನಿಷೇಧಿಗಳು ಹೇಳಿದರು: “ಇದೊಂದು ಒಳಿತಾಗಿದ್ದರೆ ನಮಗಿಂತ ಮುಂಚಿತವಾಗಿ ಇವರು ಅದನ್ನು ತಲುಪುತ್ತಿರಲಿಲ್ಲ”. ಇದರ ಮೂಲಕ ಅವರು ಸನ್ಮಾರ್ಗಿಗಳಾಗದ ಕಾರಣ ಅವರು ಹೇಳುವರು: “ಇದೊಂದು ಪುರಾತನ ಕಾಲದ ಕಟ್ಟುಕಥೆಯಾಗಿದೆ”.

(12) ಇದಕ್ಕಿಂತ ಮುಂಚೆ ಮೂಸಾರ ಗ್ರಂಥವು ಮಾದರೀಯೋಗ್ಯವಾಗಿ ಮತ್ತು ಕಾರುಣ್ಯವಾಗಿ ಬಂದಿತ್ತು. ಇದು (ಅದನ್ನು) ದೃಢೀಕರಿಸುವ ಅರಬಿ ಭಾಷೆಯಲ್ಲಿರುವ ಒಂದು ಗ್ರಂಥವಾಗಿದೆ. ಅಕ್ರಮಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಮತ್ತು ಸತ್ಕರ್ಮಿಗಳಿಗೆ ಶುಭವಾರ್ತೆ ತಿಳಿಸುವ ಸಲುವಾಗಿ.

(13) “ನಮ್ಮ ರಬ್ ಅಲ್ಲಾಹುವಾಗಿರುವನು” ಎಂದು ಹೇಳಿ ತರುವಾಯ ನೇರವಾಗಿ ನೆಲೆಗೊಂಡವರು ಯಾರೋ ಅವರಿಗೆ ಯಾವುದೇ ಭಯವಿರಲಾರದು. ಅವರು ದುಃಖಿಸಬೇಕಾಗಿಯೂ ಬರದು.

(14) ಅವರು ಸ್ವರ್ಗವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅವರು ಮಾಡಿರುವುದಕ್ಕಿರುವ ಪ್ರತಿಫಲವಾಗಿದೆ.

(15) ತನ್ನ ಮಾತಾಪಿತರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ನಾವು ಮನುಷ್ಯನಿಗೆ ಉಪದೇಶ ಮಾಡಿರುವೆವು. ಅವನ ತಾಯಿ ಬಹಳ ಕಷ್ಟದಿಂದ ಅವನನ್ನು ಗರ್ಭ ಧರಿಸಿರುವಳು ಮತ್ತು ಬಹಳ ಕಷ್ಟದಿಂದಲೇ ಅವನಿಗೆ ಜನ್ಮ ನೀಡಿರುವಳು. ಅವನ ಗರ್ಭಾವಧಿ ಮತ್ತು ಮೊಲೆಬಿಡಿಸುವ ಕಾಲವು ಸೇರಿ ಒಟ್ಟು ಮೂವತ್ತು ಮಾಸಗಳಾಗಿವೆ.(1120) ಹೀಗೆ ಅವನು ತನ್ನ ಪೂರ್ಣ ಬಲವನ್ನು ಪಡೆದು ನಲ್ವತ್ತು ವಯಸ್ಸಿನವನಾದಾಗ ಅವನು ಹೇಳುವನು: “ನನ್ನ ಪ್ರಭೂ! ನನಗೆ ಮತ್ತು ನನ್ನ ಹೆತ್ತವರಿಗೆ ನೀನು ದಯಪಾಲಿಸಿರುವ ಅನುಗ್ರಹಗಳಿಗಾಗಿ ಕೃತಜ್ಞತೆ ಸಲ್ಲಿಸಲು ಮತ್ತು ನೀನು ಸಂತೃಪ್ತನಾಗುವ ಸತ್ಕರ್ಮವನ್ನು ಮಾಡಲು ನನಗೆ ಪ್ರೇರಣೆ ನೀಡು. ನನ್ನ ಸಂತತಿಗಳಲ್ಲಿ ನನಗೆ ಒಳಿತನ್ನುಂಟುಮಾಡು. ಖಂಡಿತವಾಗಿಯೂ ನಾನು ನಿನ್ನೆಡೆಗೆ ಪಶ್ಚಾತ್ತಾಪಪಟ್ಟು ಮರಳಿರುವೆನು. ಖಂಡಿತವಾಗಿಯೂ ನಾನು ಶರಣಾಗತರಾಗುವವರ ಪೈಕಿ ಸೇರಿದವನಾಗಿರುವೆನು”.
1120. ಪೂರ್ಣವಾದ ಸ್ತನಪಾನ ಅವಧಿಯು ಎರಡು ವರ್ಷಗಳಾಗಿವೆಯೆಂದು 31:14ರಲ್ಲಿ ಹೇಳಲಾಗಿದೆ. ಗರ್ಭಧಾರಣೆಯ ಅತ್ಯಂತ ಕನಿಷ್ಠ ಸಮಯವು ಆರು ತಿಂಗಳೆಂದು ಈ ಸೂಕ್ತಿ ಸೂಚಿಸುತ್ತದೆ. 30ರಿಂದ 34ರವರೆಗಿನ ತಿಂಗಳುಗಳಾಗಿ ಬದಲಾಗುತ್ತಾ ಬರುವ ಒಂದು ಕಾಲಾವಧಿಯನ್ನು ಸೂಚಿಸಲು 30 ತಿಂಗಳು ಎಂದು ಹೇಳುವ ಪರಿಪಾಠವಿದೆ.

(16) ಅಂತಹ ಜನರಿಂದ ಅವರು ಮಾಡಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದನ್ನು ನಾವು ಸ್ವೀಕರಿಸುವೆವು. ಅವರ ದುಷ್ಕರ್ಮಗಳನ್ನು ನಾವು ಮನ್ನಿಸುವೆವು. (ಅವರು) ಸ್ವರ್ಗವಾಸಿಗಳ ಪೈಕಿ ಸೇರಿದವರಾಗಿರುವರು. ಅದು ಅವರಿಗೆ ನೀಡಲಾಗಿರುವ ಸತ್ಯ ವಾಗ್ದಾನವಾಗಿದೆ.

(17) ಒಬ್ಬನು ತನ್ನ ಹೆತ್ತವರೊಂದಿಗೆ ಹೇಳಿದನು: “ಛೇ! ನಿಮಗೆ ನಾಶವಿರಲಿ! (ಮರಣಾನಂತರ) ನನ್ನನ್ನು ಹೊರತರಲಾಗುವುದೆಂದು ನೀವಿಬ್ಬರು ನನಗೆ ವಾಗ್ದಾನ ಮಾಡುತ್ತಿದ್ದೀರಾ? ನನಗಿಂತ ಮುಂಚೆ ತಲೆಮಾರುಗಳು ಗತಿಸಿಹೋಗಿವೆ”. ಅವರು (ಹೆತ್ತವರು) ಅಲ್ಲಾಹುವಿನೊಂದಿಗೆ ಸಹಾಯ ಬೇಡುತ್ತಾ ಹೇಳುವರು: “ನಿನಗೆ ದುರದೃಷ್ಟ ಕಾದಿದೆ! ವಿಶ್ವಾಸವಿಡು! ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ”. ಆಗ ಅವನು ಹೇಳುವನು: “ಇವು ಪೂರ್ವಿಕರ ಕಟ್ಟುಕಥೆಗಳು ಮಾತ್ರವಾಗಿವೆ”.

(18) ಜಿನ್ನ್ ಮತ್ತು ಮನುಷ್ಯರಲ್ಲಿ ಅವರಿಗಿಂತ ಮುಂಚೆ ಗತಿಸಿಹೋಗಿರುವ ಅನೇಕ ಸಮುದಾಯಗಳ ಪೈಕಿ ಇಂತಹ ಜನರ ವಿಷಯದಲ್ಲಿ (ಶಿಕ್ಷೆಯ) ವಚನವು ಸ್ಥಿರವಾಗಿ ಬಿಟ್ಟಿದೆ. ಖಂಡಿತವಾಗಿಯೂ ಅವರು ನಷ್ಟ ಹೊಂದಿದವರಾಗಿರುವರು.

(19) ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಅನುಗುಣವಾಗಿ ಪದವಿಗಳಿರುವುವು. ಅದು ಅವರು ಮಾಡಿದ ಕರ್ಮಗಳ ಫಲವನ್ನು ಅವರಿಗೆ ಪೂರ್ಣವಾಗಿ ನೀಡುವ ಸಲುವಾಗಿದೆ. ಅವರೊಂದಿಗೆ ಅನ್ಯಾಯವೆಸಗಲಾಗದು.

(20) ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಪ್ರದರ್ಶಿಸಲಾಗುವ ದಿನ! (ಅವರೊಂದಿಗೆ ಹೇಳಲಾಗುವುದು): “ಐಹಿಕ ಜೀವನದಲ್ಲಿ ನಿಮ್ಮ ಉತ್ತಮ ವಸ್ತುಗಳನ್ನೆಲ್ಲ ನೀವು ಹಾಳು ಮಾಡಿದಿರಿ ಮತ್ತು ಅವುಗಳ ಮೂಲಕ ನೀವು ಸುಖವನ್ನು ಅನುಭವಿಸಿದಿರಿ. ಆದುದರಿಂದ ನೀವು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಟ್ಟ ಕಾರಣ ಮತ್ತು ಧಿಕ್ಕಾರ ತೋರಿದ ಕಾರಣ ಇಂದು ನಿಮಗೆ ಅಪಮಾನ ಕರವಾದ ಶಿಕ್ಷೆಯನ್ನು ಪ್ರತಿಫಲವಾಗಿ ನೀಡಲಾಗುವುದು.

(21) ಆದ್ ಜನಾಂಗದವರ ಸಹೋದರರನ್ನು (ಹೂದ್‍ರನ್ನು) ಸ್ಮರಿಸಿರಿ. ಅಹ್ಕಾಫ್‍ನಲ್ಲಿರುವ ತಮ್ಮ ಜನರಿಗೆ ಅವರು ಮುನ್ನೆಚ್ಚರಿಕೆ ನೀಡಿದ ಸಂದರ್ಭ.(1121) ಅವರಿಗಿಂತ ಮುಂಚೆಯೂ ಅವರ ನಂತರವೂ ಮುನ್ನೆಚ್ಚರಿಕೆಗಾರರು ಗತಿಸಿ ಹೋಗಿರುವರು. “ನೀವು ಅಲ್ಲಾಹುವಿನ ಹೊರತು ಅನ್ಯರನ್ನು ಆರಾಧಿಸದಿರಿ. ಖಂಡಿತವಾಗಿಯೂ ನಾನು ನಿಮ್ಮ ಬಗ್ಗೆ ಭಯಾನಕವಾದ ದಿನವೊಂದರ ಶಿಕ್ಷೆಯನ್ನು ಭಯಪಡುತ್ತಿರುವೆನು” (ಎಂದು ಅವರು ಎಚ್ಚರಿಸಿದರು).
1121. ಅರೇಬಿಯಾದ ದಕ್ಷಿಣ ದಿಕ್ಕಿನ ಹದರ್‍ಮೌತ್‍ನಲ್ಲಿ ಮರಳ ರಾಶಿಗಳು ತುಂಬಿದ ಪ್ರದೇಶದಲ್ಲಿ (ಅಹ್ಕಾಫ್) ಆದ್ ಜನತೆಯು ವಾಸವಾಗಿದ್ದರು. ಅವರೆಡೆಗೆ ಹೂದ್(ಅ) ರವರನ್ನು ಕಳುಹಿಸಲಾಗಿತ್ತು.

(22) ಅವರು ಹೇಳಿದರು: “ನಮ್ಮ ಆರಾಧ್ಯರಿಂದ ನಮ್ಮನ್ನು ತಿರುಗಿಸುವುದಕ್ಕಾಗಿ ತಾವು ನಮ್ಮ ಬಳಿಗೆ ಬಂದಿರುವಿರಾ? ತಾವು ಸತ್ಯಸಂಧರಲ್ಲಿ ಸೇರಿದವರಾಗಿದ್ದರೆ ನಮಗೆ ಎಚ್ಚರಿಕೆ ನೀಡುವ (ಶಿಕ್ಷೆಯನ್ನು) ನಮ್ಮ ಬಳಿಗೆ ತನ್ನಿರಿ”.

(23) ಅವರು ಹೇಳಿದರು: (ಅದಕ್ಕೆ ಸಂಬಂಧಿಸಿದ) ಜ್ಞಾನವಿರುವುದು ಅಲ್ಲಾಹುವಿನ ಬಳಿ ಮಾತ್ರವಾಗಿದೆ. ನನ್ನನ್ನು ಯಾವುದರೊಂದಿಗೆ ಕಳುಹಿಸಲಾಗಿದೆಯೋ ಅದನ್ನು ನಾನು ನಿಮಗೆ ತಲುಪಿಸುತ್ತಿರುವೆನು. ಆದರೆ ನಾನು ನಿಮ್ಮನ್ನು ಅಜ್ಞಾನಿಗಳಾದ ಒಂದು ಜನತೆಯಾಗಿ ಕಾಣುತ್ತಿರುವೆನು”.

(24) ತರುವಾಯ ಅದನ್ನು (ಶಿಕ್ಷೆಯನ್ನು) ತಮ್ಮ ಕಣಿವೆ ಗಳಿಗೆ ಅಭಿಮುಖವಾಗಿ ಪ್ರತ್ಯಕ್ಷವಾದ ಒಂದು ಮೋಡವಾಗಿ ಕಂಡಾಗ ಅವರು ಹೇಳಿದರು: “ಇದು ನಮಗೆ ಮಳೆಯನ್ನು ಸುರಿಸುವ ಒಂದು ಮೋಡವಾಗಿದೆ!” ಅಲ್ಲ, ಅದು ನೀವು ಯಾವುದಕ್ಕಾಗಿ ಆತುರಪಡುತ್ತಿದ್ದಿರೋ ಅದೇ ಆಗಿದೆ. ಯಾತನಾಮಯ ಶಿಕ್ಷೆಯನ್ನು ಹೊಂದಿರುವ ಒಂದು ಗಾಳಿ.

(25) ಅದು ತನ್ನ ರಬ್‌ನ ಆಜ್ಞೆಯಂತೆ ಸರ್ವ ವಸ್ತುಗಳನ್ನೂ ನಾಶ ಮಾಡುವುದು. ತರುವಾಯ ಅವರು ತಾವು ವಾಸವಾಗಿದ್ದ ಸ್ಥಳಗಳ ಹೊರತು ಬೇರೇನನ್ನೂ ಕಾಣಲಾಗದ ಸ್ಥಿತಿಯಲ್ಲಾದರು. ಅಪರಾಧಿಗಳಾದ ಜನರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.

(26) ನಾವು ನಿಮಗೆ ಅಧಿಕಾರ ನೀಡದ ವಲಯಗಳಲ್ಲಿ ಅವರಿಗೆ ಅಧಿಕಾರ ನೀಡಿದ್ದೆವು. ಅವರಿಗೆ ಶ್ರವಣ, ದೃಷ್ಟಿ ಮತ್ತು ಹೃದಯಗಳನ್ನು ನೀಡಿದ್ದೆವು. ಆದರೆ ಅಲ್ಲಾಹುವಿನ ದೃಷ್ಟಾಂತಗಳನ್ನು ಅವರು ನಿಷೇಧಿಸಿದ್ದರಿಂದ ಅವರ ಶ್ರವಣ, ದೃಷ್ಟಿ ಮತ್ತು ಹೃದಯಗಳು ಅವರಿಗೆ ಯಾವುದೇ ಪ್ರಯೋಜನವನ್ನೂ ನೀಡಲಿಲ್ಲ. ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿತು.

(27) ನಿಮ್ಮ ಸುತ್ತಮುತ್ತಲಲ್ಲಿರುವ ಕೆಲವು ದೇಶಗಳನ್ನು ನಾವು ನಾಶ ಮಾಡಿದೆವು. ಅವರು ಸತ್ಯದೆಡೆಗೆ ಮರಳುವ ಸಲುವಾಗಿ ನಾವು ಪುರಾವೆಗಳನ್ನು ವಿವಿಧ ರೀತಿಯಲ್ಲಿ ವಿವರಿಸಿಕೊಟ್ಟಿದ್ದೆವು.

(28) ಅವರು ಅಲ್ಲಾಹುವಿನ ಹೊರತು ಅವನೆಡೆಗೆ ಸಾಮೀಪ್ಯ ಪಡೆಯಲು ಆರಾಧ್ಯರನ್ನಾಗಿ ಮಾಡಿಕೊಂಡಿದ್ದವರು ಆ ಸಂದರ್ಭದಲ್ಲಿ ಅವರಿಗೇಕೆ ಸಹಾಯ ಮಾಡಲಿಲ್ಲ? ಅಲ್ಲ, ಅವರು (ಆರಾಧ್ಯರು) ಅವರನ್ನು ಬಿಟ್ಟು ಅಪ್ರತ್ಯಕ್ಷರಾದರು. ಅದು (ಬಹುದೇವವಿಶ್ವಾಸವು) ಅವರು ಸೃಷ್ಟಿಸಿದ ಮಿಥ್ಯೆಯೂ, ಅವರು ಕೃತಕವಾಗಿ ರಚಿಸಿದ್ದೂ ಆಗಿದೆ.

(29) ಕುರ್‌ಆನನ್ನು ಕಿವಿಗೊಟ್ಟು ಆಲಿಸುವುದಕ್ಕಾಗಿ ಜಿನ್ನ್‌ಗಳ ಪೈಕಿ ಒಂದು ಗುಂಪನ್ನು ನಾವು ತಮ್ಮ ಬಳಿಗೆ ತಿರುಗಿಸಿದ ಸಂದರ್ಭ. ಅವರು ಅದಕ್ಕೆ ಸನ್ನಿಹಿತರಾದಾಗ ಅವರು ಪರಸ್ಪರ ಹೇಳಿದರು: “ಮೌನವಹಿಸಿರಿ!” ತರುವಾಯ ಅದು ಮುಗಿದಾಗ ಅವರು ತಮ್ಮ ಜನರೆಡೆಗೆ ಮುನ್ನೆಚ್ಚರಿಕೆಗಾರರಾಗಿ ಮರಳಿದರು.

(30) ಅವರು ಹೇಳಿದರು: “ಓ ನಮ್ಮ ಜನರೇ! ಮೂಸಾರ ನಂತರ ಅವತೀರ್ಣಗೊಂಡಿರುವ ಮತ್ತು ಅದಕ್ಕಿಂತ ಮುಂಚಿನದ್ದನ್ನು ದೃಢೀಕರಿಸುವ ಒಂದು ಗ್ರಂಥವನ್ನು ಖಂಡಿತವಾಗಿಯೂ ನಾವು ಆಲಿಸಿರುವೆವು. ಅದು ಸತ್ಯದೆಡೆಗೆ ಮತ್ತು ನೇರವಾದ ಮಾರ್ಗದೆಡೆಗೆ ಮುನ್ನಡೆಸುತ್ತದೆ.

(31) ಓ ನಮ್ಮ ಜನರೇ! ಅಲ್ಲಾಹುವಿನೆಡೆಗೆ ಕರೆಯುವ ವ್ಯಕ್ತಿಗೆ ಉತ್ತರ ನೀಡಿರಿ ಮತ್ತು ಅವರಲ್ಲಿ ವಿಶ್ವಾಸವಿಡಿರಿ. ಅವನು ನಿಮಗೆ ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಯಾತನಾಮಯ ಶಿಕ್ಷೆಯಿಂದ ಪಾರುಗೊಳಿಸುವನು.

(32) ಅಲ್ಲಾಹುವಿನೆಡೆಗೆ ಕರೆ ನೀಡುವ ವ್ಯಕ್ತಿಗೆ ಯಾರು ಉತ್ತರ ನೀಡುವುದಿಲ್ಲವೋ, ಅವನಿಗೆ ಈ ಭೂಮಿಯಲ್ಲಿ (ಅಲ್ಲಾಹುವನ್ನು) ಸೋಲಿಸಲಾಗದು. ಅಲ್ಲಾಹುವಿನ ಹೊರತು ಅವನಿಗೆ ಯಾವುದೇ ರಕ್ಷಕರೂ ಇರಲಾರರು. ಅವರು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವರು.

(33) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಮತ್ತು ಅವುಗಳನ್ನು ಸೃಷ್ಟಿಸಿದ ಕಾರಣ ಆಯಾಸಗೊಳ್ಳದಿರುವ ಅಲ್ಲಾಹುವಿಗೆ ಖಂಡಿತವಾಗಿಯೂ ಮೃತಪಟ್ಟವರನ್ನು ಬದುಕಿಸುವ ಸಾಮರ್ಥ್ಯವಿದೆ ಎಂಬುದನ್ನು ಅವರು ಕಾಣುವುದಿಲ್ಲವೇ? ಹೌದು! ಖಂಡಿತವಾಗಿಯೂ ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(34) ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಪ್ರದರ್ಶಿಸಲಾಗುವ ದಿನ! (ಅವರೊಂದಿಗೆ ಕೇಳಲಾಗುವುದು): “ಇದು ಸತ್ಯವಲ್ಲವೇ?” ಅವರು ಹೇಳುವರು: “ಹೌದು! ನಮ್ಮ ರಬ್‌ನ ಮೇಲಾಣೆ!” ಅವನು ಹೇಳುವನು: “ಹಾಗಾದರೆ ನೀವು ನಿಷೇಧಿಸಿದ ಫಲವಾಗಿ ಶಿಕ್ಷೆಯನ್ನು ಆಸ್ವಾದಿಸಿರಿ!”

(35) ಆದುದರಿಂದ ದೃಢಮನಸ್ಕರಾದ ಸಂದೇಶವಾಹಕರು ತಾಳ್ಮೆ ವಹಿಸಿದಂತೆ ತಾವೂ ತಾಳ್ಮೆ ವಹಿಸಿರಿ. ಅವರ (ಸತ್ಯನಿಷೇಧಿಗಳ) ವಿಷಯದಲ್ಲಿ ತಾವು ಆತುರಪಡದಿರಿ. ಅವರಿಗೆ ಎಚ್ಚರಿಕೆ ನೀಡಲಾಗಿರುವುದನ್ನು (ಶಿಕ್ಷೆಯನ್ನು) ಅವರು ಕಣ್ಣಾರೆ ಕಾಣುವ ದಿನ ತಾವು (ಇಹಲೋಕದಲ್ಲಿ) ತಂಗಿರುವುದು ಹಗಲಿನ ಒಂದು ತಾಸಿನಷ್ಟು ಮಾತ್ರವಾಗಿದೆ ಎಂದು ಅವರಿಗೆ ಭಾಸವಾಗುವುದು. ಇದೊಂದು ಉಪದೇಶವಾಗಿದೆ. ಆದರೆ ಧಿಕ್ಕಾರಿಗಳಾದ ಜನರನ್ನೇ ಹೊರತು ನಾಶ ಮಾಡಲಾಗುವುದೇ?