64 - At-Taghaabun ()

|

(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವುಗಳು ಅಲ್ಲಾಹುವನ್ನು ಕೊಂಡಾಡುತ್ತಿವೆ. ಆಧಿಪತ್ಯವಿರುವುದು ಅವನಿಗಾಗಿದೆ. ಸ್ತುತಿಯು ಅವನಿಗಾಗಿದೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(2) ನಿಮ್ಮನ್ನು ಸೃಷ್ಟಿಸಿದವನು ಅವನಾಗಿರುವನು. ತರುವಾಯ ನಿಮ್ಮಲ್ಲಿ ಸತ್ಯನಿಷೇಧಿಗಳಿರುವರು ಮತ್ತು ನಿಮ್ಮಲ್ಲಿ ಸತ್ಯವಿಶ್ವಾಸಿಗಳೂ ಇರುವರು. ನೀವು ಮಾಡುತ್ತಿರುವುದನ್ನು ಅಲ್ಲಾಹು ವೀಕ್ಷಿಸುವವನಾಗಿರುವನು.

(3) ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅವನು ನಿಮಗೆ ರೂಪವನ್ನು ನೀಡಿರುವನು ಮತ್ತು ನಿಮ್ಮ ರೂಪಗಳನ್ನು ಉತ್ತಮಗೊಳಿಸಿರುವನು. ಮರಳುವಿಕೆಯು ಅವನೆಡೆಗೇ ಆಗಿದೆ.

(4) ಆಕಾಶಗಳಲ್ಲಿರುವುದನ್ನು ಮತ್ತು ಭೂಮಿಯಲ್ಲಿರುವುದನ್ನು ಅವನು ಅರಿಯುವನು. ನೀವು ಮರೆಮಾಚುವುದನ್ನೂ ಬಹಿರಂಗಪಡಿಸುವುದನ್ನೂ ಅವನು ಅರಿಯುವನು. ಅಲ್ಲಾಹು ಹೃದಯಗಳಲ್ಲಿರುವುದನ್ನು ಅರಿಯುವವನಾಗಿರುವನು.

(5) ಮುಂಚೆ ನಿಷೇಧಿಸಿದವರ ವೃತ್ತಾಂತವು ನಿಮ್ಮ ಬಳಿಗೆ ಬಂದಿಲ್ಲವೇ? ಅವರ ಕರ್ಮದ ಭವಿಷ್ಯವನ್ನು ಅವರು ಆಸ್ವಾದಿಸಿದರು. ಅವರಿಗೆ (ಪರಲೋಕದಲ್ಲಿ) ಯಾತನಾಮಯವಾದ ಶಿಕ್ಷೆಯಿದೆ.

(6) ಅದೇಕೆಂದರೆ ಅವರೆಡೆಗಿರುವ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿ ಬರುತ್ತಿದ್ದರು ಎಂಬುದರಿಂದಾಗಿದೆ. ಆಗ ಅವರು ಹೇಳಿದರು: ‘ಒಬ್ಬ ಮನುಷ್ಯನು ನಮಗೆ ಮಾರ್ಗದರ್ಶನ ಮಾಡುವುದೇ?’(1254) ತರುವಾಯ ಅವರು ನಿಷೇಧಿಸಿದರು ಮತ್ತು ವಿಮುಖರಾಗಿ ಹೋದರು. ಅಲ್ಲಾಹು ನಿರಪೇಕ್ಷನಾಗಿರುವನು. ಅಲ್ಲಾಹು ನಿರಾವಲಂಬಿಯೂ ಸ್ತುತ್ಯರ್ಹನೂ ಆಗಿರುವನು.
1254. ತಮ್ಮಂತಿರುವ ಓರ್ವ ಮನುಷ್ಯನನ್ನು ಮಾರ್ಗದರ್ಶಕನಾಗಿ ಅಂಗೀಕರಿಸಲು ನಮಗೆ ಸಾಧ್ಯವಿಲ್ಲ ಎಂಬುದು ಅವರ ನಿಲುವಾಗಿತ್ತು.

(7) ತಮ್ಮನ್ನು ಪುನರುತ್ಥಾನಗೊಳಿಸಲಾಗುವುದಿಲ್ಲ ಎಂದು ಸತ್ಯನಿಷೇಧಿಗಳು ವಾದಿಸಿದರು. (ಓ ಪ್ರವಾದಿಯವರೇ!) ಹೇಳಿರಿ: ‘ಹೌದು! ನನ್ನ ರಬ್‌ನ ಮೇಲಾಣೆ! ಖಂಡಿತವಾಗಿಯೂ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು. ತರುವಾಯ ನೀವು ಮಾಡಿರುವುದರ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಅದು ಅಲ್ಲಾಹುವಿನ ಮಟ್ಟಿಗೆ ಅತಿ ಸುಲಭವಾಗಿದೆ’.

(8) ಆದ್ದರಿಂದ ನೀವು ಅಲ್ಲಾಹುವಿನಲ್ಲಿಯೂ, ಅವನ ಸಂದೇಶವಾಹಕರಲ್ಲಿಯೂ, ನಾವು ಅವತೀರ್ಣಗೊಳಿಸಿರುವ ಪ್ರಕಾಶದಲ್ಲಿಯೂ ವಿಶ್ವಾಸವಿಡಿರಿ. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.

(9) ಒಟ್ಟುಗೂಡಿಸಲಾಗುವ ಆ ದಿನಕ್ಕಾಗಿ ಅವನು ನಿಮ್ಮನ್ನು ಒಟ್ಟುಗೂಡಿಸುವ ದಿನ! ಅದು ನಷ್ಟ ಬಹಿರಂಗವಾಗುವ ದಿನವಾಗಿದೆ.(1255) ಯಾರು ಅಲ್ಲಾಹುವಿನಲ್ಲಿ ವಿಶ್ವಾಸವಿಡುವನೋ ಮತ್ತು ಸತ್ಕರ್ಮವೆಸಗುವನೋ ಅವನ ಪಾಪಗಳನ್ನು ಅವನು (ಅಲ್ಲಾಹು) ಅಳಿಸಿಹಾಕುವನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಅವನನ್ನು ಪ್ರವೇಶ ಮಾಡಿಸುವನು. ಅದರಲ್ಲಿ (ಸ್ವರ್ಗದಲ್ಲಿ) ಅವರು ಶಾಶ್ವತವಾಗಿ ವಾಸಿಸುವರು. ಮಹಾ ವಿಜಯವು ಅದೇ ಆಗಿದೆ.
1255. ತಮಗೆ ಉಂಟಾಗಿರುವ ನಷ್ಟದ ಪ್ರಮಾಣವು ಎಷ್ಟು ಅಗಾಧವಾಗಿದೆಯೆಂದು ಅಂತಿಮ ನ್ಯಾಯ ತೀರ್ಮಾನದ ದಿನದಲ್ಲಿ ಸತ್ಯನಿಷೇಧಿಗಳಿಗೆ ಸ್ಪಷ್ಟವಾಗಿ ಮನದಟ್ಟಾಗುವುದು.

(10) ಅವಿಶ್ವಾಸವಿಟ್ಟವರು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರಾರೋ ಅವರು ನರಕವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. (ಅವರು) ತಲುಪುವ ಆ ಸ್ಥಳವು ನಿಕೃಷ್ಟವೇ ಆಗಿದೆ.

(11) ಅಲ್ಲಾಹುವಿನ ಅಪ್ಪಣೆ ಪ್ರಕಾರವೇ ಹೊರತು ಯಾವುದೇ ವಿಪತ್ತೂ ಬಾಧಿಸಿಲ್ಲ. ಯಾರಾದರೂ ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟರೆ ಅವನ ಹೃದಯವನ್ನು ಅವನು ಸನ್ಮಾರ್ಗದಲ್ಲಿ ಮುನ್ನಡೆಸುವನು. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.

(12) ನೀವು ಅಲ್ಲಾಹುವನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನೀವು ವಿಮುಖರಾಗುವುದಾದರೆ ನಮ್ಮ ಸಂದೇಶವಾಹಕರ ಹೊಣೆಯು ಸ್ಪಷ್ಟವಾದ ರೀತಿಯಲ್ಲಿ ತಲುಪಿಸಿಕೊಡುವುದು ಮಾತ್ರವಾಗಿದೆ.

(13) ಅಲ್ಲಾಹು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.

(14) ಓ ಸತ್ಯವಿಶ್ವಾಸಿಗಳೇ! ಖಂಡಿತವಾಗಿಯೂ ನಿಮ್ಮ ಪತ್ನಿಯರಲ್ಲಿ ಮತ್ತು ನಿಮ್ಮ ಮಕ್ಕಳಲ್ಲಿ ನಿಮಗೆ ಶತ್ರುಗಳಿರುವರು. ಆದ್ದರಿಂದ ಅವರ ಬಗ್ಗೆ ಎಚ್ಚರವಹಿಸಿರಿ. ನೀವು ಮನ್ನಿಸುವುದಾದರೆ, ವಿನಾಯಿತಿ ತೋರುವುದಾದರೆ ಮತ್ತು ಕ್ಷಮಿಸುವುದಾದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(15) ನಿಮ್ಮ ಸಂಪತ್ತುಗಳು ಮತ್ತು ನಿಮ್ಮ ಸಂತತಿಗಳು ಒಂದು ಪರೀಕ್ಷೆ ಮಾತ್ರವಾಗಿದೆ. ಮಹಾ ಪ್ರತಿಫಲವಿರುವುದು ಅಲ್ಲಾಹುವಿನ ಬಳಿಯಾಗಿದೆ.

(16) ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹುವನ್ನು ಭಯಪಡಿರಿ. ಆಲಿಸಿರಿ, ಅನುಸರಿಸಿರಿ ಮತ್ತು ಸ್ವತಃ ನಿಮಗೇ ಒಳಿತಾಗಿರುವ ವಿಧದಲ್ಲಿ ವ್ಯಯಿಸಿರಿ.(1256) ಮನಸ್ಸಿನ ಜಿಪುಣತನದಿಂದ ಯಾರನ್ನು ಪಾರು ಮಾಡಲಾಗುವುದೋ ಅವರು ಯಶಸ್ವಿಯಾದವರಾಗಿರುವರು.
1256. ಅಲ್ಲಾಹು ಆದೇಶಿಸಿದ ದಾರಿಯಲ್ಲಿ ವ್ಯಯಿಸಿದರೆ ವ್ಯಯಿಸುವ ವ್ಯಕ್ತಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಒಳಿತಾಗಲಿದೆ. ಅಲ್ಲಾಹು ವಿರೋಧಿಸಿದ ದಾರಿಯಲ್ಲಿ ವ್ಯಯಿಸಿದರೆ ಅದು ಅವನಿಗೆ ಎಂದಿಗೂ ಒಳಿತಾಗಿ ಪರಿಣಮಿಸಲಾರದು.

(17) ನೀವು ಅಲ್ಲಾಹುವಿಗೆ ಉತ್ತಮವಾದ ಸಾಲವನ್ನು ನೀಡುವುದಾದರೆ ಅವನು ಅದನ್ನು ನಿಮಗೆ ಇಮ್ಮಡಿಗೊಳಿಸಿ ಕೊಡುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕೃತಜ್ಞನೂ, ಸಹನಶೀಲನೂ ಆಗಿರುವನು.

(18) ಅವನು ಅಗೋಚರವಾಗಿರುವುದನ್ನು ಮತ್ತು ಗೋಚರವಾಗಿರುವುದನ್ನು ಅರಿಯುವವನೂ, ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.