87 - Al-A'laa ()

|

(1) ಅತ್ಯುನ್ನತನಾದ ತಮ್ಮ ರಬ್‌ನ ನಾಮವನ್ನು ಕೊಂಡಾಡಿರಿ.

(2) ಸೃಷ್ಟಿಸಿದವನೂ ವ್ಯವಸ್ಥಿತಗೊಳಿಸಿದವನೂ,

(3) ನಿಯಮವನ್ನು ನಿರ್ಣಯಿಸಿ ಮಾರ್ಗದರ್ಶನ ಮಾಡಿದವನೂ,(1379)
1379. ಪ್ರಕೃತಿಯಲ್ಲಿರುವ ಚೇತನ ಮತ್ತು ಅಚೇತನವಾಗಿರುವ ಎಲ್ಲ ವಸ್ತುಗಳಿಗೂ ಅಲ್ಲಾಹು ಸೂಕ್ಷ್ಮವಾದ ಮತ್ತು ಕರಾರುವಾಕ್ಕಾದ ನಿಯಮಗಳನ್ನು ವಿಧಿಸಿದ್ದಾನೆ. ಪ್ರತಿಯೊಂದು ವಸ್ತು ಹೇಗೆ ವರ್ತಿಸಬೇಕೆಂಬ ಬಗ್ಗೆ ಮಾರ್ಗದರ್ಶನವನ್ನು ಅದರೊಂದಿಗೇ ಅವನು ನೀಡಿದ್ದಾನೆ.

(4) ಮೇವು ಪ್ರದೇಶಗಳನ್ನು ಉಂಟು ಮಾಡಿದವನೂ,

(5) ತರುವಾಯ ಅದನ್ನು ಒಣಗಿದ ಕಸಕಡ್ಡಿಗಳನ್ನಾಗಿ ಮಾಡಿದವನೂ ಆಗಿರುವ (ರಬ್‌ನ ನಾಮವನ್ನು).

(6) ನಾವು ತಮಗೆ ಓದಿಕೊಡುವೆವು. ತಾವು ಮರೆಯಲಾರಿರಿ.

(7) ಅಲ್ಲಾಹು ಇಚ್ಛಿಸಿರುವುದರ ಹೊರತು.(1380) ಖಂಡಿತವಾಗಿಯೂ ಅವನು ಬಹಿರಂಗವಾಗಿರುವುದನ್ನೂ ರಹಸ್ಯವಾಗಿರುವುದನ್ನೂ ಅರಿಯುವನು.
1380. ಇದರ ಅರ್ಥ ಕುರ್‌ಆನಿನ ಯಾವುದಾದರೂ ಭಾಗವನ್ನು ಪ್ರವಾದಿ(ಸ) ರವರು ಮರೆತು ಬಿಡುವರು ಎಂದಲ್ಲ. ಜ್ಞಾಪಕದಂತೆಯೇ ಮರೆವು ಕೂಡ ಅಲ್ಲಾಹುವಿನ ಒಂದು ಅನುಗ್ರಹವಾಗಿದೆ. ಕೆಲವು ದುರ್ಘಟನೆಗಳನ್ನು ಮರೆಯಲು ಸಾಧ್ಯವಾಗುವುದು ಬದುಕಿನ ಸತ್ಯಗಳನ್ನು ಯಶಸ್ವಿಯಾಗಿ ಅಭಿಮುಖೀಕರಿಸುವುದಕ್ಕೆ ಅನಿವಾರ್ಯ. ಪ್ರವಾದಿ(ಸ) ರವರು ಏನೆಲ್ಲ ನೆನಪಿಡಬೇಕು ಮತ್ತು ಏನೆಲ್ಲ ಮರೆಯಬೇಕು ಎಂದು ಅಲ್ಲಾಹು ತೀರ್ಮಾನಿಸುತ್ತಾನೆ.

(8) ಅತ್ಯಂತ ಸರಳವಾಗಿರುವುದರೆಡೆಗೆ ನಾವು ತಮಗೆ ಅನುಕೂಲ ಮಾಡಿಕೊಡುವೆವು.

(9) ಆದ್ದರಿಂದ ಉಪದೇಶವು ಫಲ ನೀಡುವುದಾದರೆ ತಾವು ಉಪದೇಶ ನೀಡಿರಿ.

(10) ಭಯಪಡುವವರು ಉಪದೇಶವನ್ನು ಸ್ವೀಕರಿಸುವರು.

(11) ಅತ್ಯಂತ ಭಾಗ್ಯಹೀನನಾದವನು ಅದನ್ನು (ಉಪದೇಶವನ್ನು) ಬಿಟ್ಟು ದೂರಸರಿಯುವನು.

(12) ಅವನು ಬಹುದೊಡ್ಡ ಅಗ್ನಿಯಲ್ಲಿ ಪ್ರವೇಶಿಸಿ ಉರಿಯುವವನಾಗಿರುವನು.

(13) ತರುವಾಯ ಅವನು ಅದರಲ್ಲಿ ಮೃತಪಡಲಾರನು. ಜೀವಂತವೂ ಇರಲಾರನು.(1381)
1381. ಯಾವುದೇ ಸುಖವಾಗಲಿ ಸಂತೋಷವಾಗಲಿ ಇಲ್ಲದ, ದುರಂತಗಳಿಂದ ತುಂಬಿದ ನರಕವಾಸವನ್ನು ಜೀವನವೆಂದು ಹೇಳಲಾಗದು. ಮರಣದ ಮೂಲಕ ಆ ದುರಂತಗಳಿಂದ ಮುಕ್ತಿ ಸಿಗುತ್ತಿದ್ದರೆ ಎಂದು ನರಕವಾಸಿಗಳು ಆಸೆಪಡುವರು. ಆದರೆ ಅಲ್ಲಾಹು ಅವರಿಗೆ ಮರಣವನ್ನು ವಿಧಿಸುವುದಿಲ್ಲ.

(14) ಖಂಡಿತವಾಗಿಯೂ ಪರಿಶುದ್ಧಿ ಪಡೆದವನು ಯಶಸ್ವಿಯಾದನು.

(15) ತನ್ನ ರಬ್‌ನ ನಾಮವನ್ನು ಸ್ಮರಿಸಿ ನಮಾಝ್ ಮಾಡಿದವನು.

(16) ಆದರೆ ನೀವು ಐಹಿಕ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವಿರಿ.

(17) ಪರಲೋಕವು ಅತ್ಯುತ್ತಮವೂ ಶಾಶ್ವತವೂ ಆಗಿದೆ.

(18) ಖಂಡಿತವಾಗಿಯೂ ಇದು ಪೂರ್ವ ಗ್ರಂಥಗಳಲ್ಲಿದೆ.

(19) ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.(1382)
1382. ಪಾಪ, ಪುಣ್ಯ ಮತ್ತು ಮೋಕ್ಷದ ಬಗ್ಗೆ ಕುರ್‌ಆನಿನಲ್ಲಿ ಪ್ರತಿಪಾದಿಸಲಾದ ವಿಷಯಗಳ ಸಾರಾಂಶವು ಪೂರ್ವ ಪ್ರವಾದಿಗಳಿಗೆ ನೀಡಲಾದ ಗ್ರಂಥಗಳಲ್ಲಿರುವುದೇ ಆಗಿದೆ ಎಂದರ್ಥ.