(1) (ಓ ಪ್ರವಾದಿಯವರೇ!) ತನ್ನ ಪತಿಯ ವಿಷಯದಲ್ಲಿ ತಮ್ಮೊಂದಿಗೆ ತರ್ಕಿಸುತ್ತಿರುವ ಮತ್ತು ಅಲ್ಲಾಹುವಿನೊಂದಿಗೆ ದುಃಖವನ್ನು ತೋಡಿಕೊಳ್ಳುತ್ತಿರುವ ಒಬ್ಬಾಕೆಯ ಮಾತನ್ನು ಅಲ್ಲಾಹು ಆಲಿಸಿರುವನು. ಅಲ್ಲಾಹು ನಿಮ್ಮಿಬ್ಬರ ಸಂಭಾಷಣೆಯನ್ನು ಆಲಿಸುತ್ತಿರುವನು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ವೀಕ್ಷಿಸುವವನೂ ಆಗಿರುವನು.
(2) ನಿಮ್ಮ ಪೈಕಿ ತಮ್ಮ ಪತ್ನಿಯರನ್ನು ತಾಯಂದಿರಿಗೆ ಸಮಾನರೆಂದು ಘೋಷಿಸುವವರು(1222) (ತಪ್ಪು ಮಾಡುತ್ತಿರುವರು). ಅವರು (ಪತ್ನಿಯರು) ಅವರ ತಾಯಂದಿರಾಗಲಾರರು. ಅವರ ತಾಯಂದಿರು ಅವರನ್ನು ಹೆತ್ತವರೇ ವಿನಾ ಇನ್ನಾರೂ ಅಲ್ಲ. ಖಂಡಿತವಾಗಿಯೂ ಅವರು ನಿಷಿದ್ಧ ಮಾತನ್ನು ಮತ್ತು ಅಸತ್ಯವನ್ನು ಹೇಳುತ್ತಿರುವರು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಪಾಪಮುಕ್ತಿ ನೀಡುವವನೂ ಆಗಿರುವನು.
1222. ‘ಝಿಹಾರ್’ ಎಂಬುದು ಪ್ರವಾದಿ(ಸ) ರವರ ಕಾಲದಲ್ಲಿ ಅರಬರ ಮಧ್ಯೆ ರೂಢಿಯಲ್ಲಿದ್ದ ಒಂದು ಕೆಟ್ಟ ಸಂಪ್ರದಾಯವಾಗಿತ್ತು. ‘ಇನ್ನು ಮೇಲೆ ನಿನ್ನೊಂದಿಗಿರುವ ಲೈಂಗಿಕ ಸಂಬಂಧವು ನನ್ನ ತಾಯಿಯೊಂದಿಗಿರುವ ಲೈಂಗಿಕ ಸಂಬಂಧದಂತೆ ನನಗೆ ನಿಷಿದ್ಧವಾಗಿದೆ’ ಎಂದು ಘೋಷಿಸಿ ಪತ್ನಿಯೊಂದಿಗಿನ ಲೈಂಗಿಕ ಸಂಬಂಧವನ್ನು ಕಡಿಯುವ ಸಂಪ್ರದಾಯಕ್ಕೆ ‘ಝಿಹಾರ್’ ಎನ್ನಲಾಗುತ್ತದೆ.
(3) ತಮ್ಮ ಪತ್ನಿಯರನ್ನು ತಾಯಂದಿರಿಗೆ ಸಮಾನರೆಂದು ಘೋಷಿಸಿ, ತರುವಾಯ ತಾವು ಹೇಳಿರುವ ಮಾತಿನಿಂದ ಹಿಂದೆ ಸರಿಯುವವರು ಯಾರೋ ಅವರು ಪರಸ್ಪರ ಸ್ಪರ್ಶಿಸುವ ಮುಂಚೆ ಒಬ್ಬ ಗುಲಾಮನನ್ನು ವಿಮೋಚನೆಗೊಳಿಸಬೇಕಾಗಿದೆ.(1223) ಅದು ನಿಮಗೆ ನೀಡಲಾಗುವ ಉಪದೇಶವಾಗಿದೆ. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿರುವನು.
1223. ಇದು ‘ಝಿಹಾರ್’ನ ಪ್ರಾಯಶ್ಚಿತ್ತವಾಗಿದೆ.
(4) ಇನ್ನು ಯಾರಿಗಾದರೂ (ಗುಲಾಮನು) ಸಿಗದಿದ್ದರೆ, ಅವರು ಪರಸ್ಪರ ಸ್ಪರ್ಶಿಸುವುದಕ್ಕೆ ಮುಂಚೆ ನಿರಂತರವಾಗಿ ಎರಡು ತಿಂಗಳ ಕಾಲ ಉಪವಾಸ ಆಚರಿಸಬೇಕಾಗಿದೆ. ಯಾರಿಗಾದರೂ (ಅದೂ) ಸಾಧ್ಯವಿಲ್ಲವೆಂದಾದರೆ ಅವರು ಅರುವತ್ತು ಬಡವರಿಗೆ ಆಹಾರ ನೀಡಬೇಕಾಗಿದೆ. ಅದು ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವ ಸಲುವಾಗಿದೆ. ಇವು ಅಲ್ಲಾಹುವಿನ ವ್ಯಾಪ್ತಿಗಳಾಗಿವೆ. ಸತ್ಯ ನಿಷೇಧಿಗಳಿಗೆ ಯಾತನಾಮಯವಾದ ಶಿಕ್ಷೆಯಿದೆ.
(5) ಖಂಡಿತವಾಗಿಯೂ ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುತ್ತಿರುವವರು ಅವರ ಪೂರ್ವಿಕರು ಹೀನಾಯಿಸಲಾದಂತೆ ಹೀನಾಯಿಸಲಾಗುವರು. ನಾವು ಸುಸ್ಪಷ್ಟವಾದ ಅನೇಕ ಪುರಾವೆಗಳನ್ನು ಅವತೀರ್ಣಗೊಳಿಸಿರುವೆವು. ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯಿದೆ.
(6) ಅಲ್ಲಾಹು ಅವರೆಲ್ಲರನ್ನೂ ಪುನರುತ್ಥಾನಗೊಳಿಸಿ, ತರುವಾಯ ಅವರು ಮಾಡಿದ ಕರ್ಮಗಳ ಬಗ್ಗೆ ಅವರಿಗೆ ತಿಳಿಸಿಕೊಡುವ ದಿನ! ಅಲ್ಲಾಹು ಅದನ್ನು ಎಣಿಸಿರುವನು. ಆದರೆ ಅವರು ಅದನ್ನು ಮರೆತುಬಿಟ್ಟಿರುವರು. ಅಲ್ಲಾಹು ಎಲ್ಲ ವಿಷಯಗಳ ಮೇಲೂ ಸಾಕ್ಷಿಯಾಗಿರುವನು.
(7) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ಅರಿಯುತ್ತಿರುವನೆಂಬುದನ್ನು ತಾವು ಕಾಣುವುದಿಲ್ಲವೇ? ಮೂವರು ಪರಸ್ಪರ ನಡೆಸುವ ಯಾವುದೇ ಗುಪ್ತ ಸಂಭಾಷಣೆಯು ನಾಲ್ಕನೆಯವನಾಗಿ ಅವನು (ಅಲ್ಲಾಹು) ಅವರೊಂದಿಗೆ ಇರದ ಹೊರತು ಜರುಗಲಾರದು. ಐವರು ನಡೆಸುವ ಸಂಭಾಷಣೆಯಾಗಿದ್ದಲ್ಲಿ ಆರನೆಯವನಾಗಿ ಅವನು ಅವರೊಂದಿಗೆ ಇರದ ಹೊರತು. ಅದಕ್ಕಿಂತ ಕಡಿಮೆ ಜನರಾಗಲಿ, ಅಧಿಕ ಜನರಾಗಲಿ ನಡೆಸುವ (ಸಂಭಾಷಣೆ)ಯಾಗಿದ್ದಲ್ಲಿ ಅವರು ಎಲ್ಲೇ ಇದ್ದರೂ ಅವನು ಅವರೊಂದಿಗೆ ಇರದ ಹೊರತು ಜರುಗಲಾರದು. ತರುವಾಯ ಪುನರುತ್ಥಾನ ದಿನದಂದು ಅವರು ಮಾಡಿರುವುದರ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು. ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.
(8) ಗುಪ್ತ ಸಂಭಾಷಣೆಯಲ್ಲಿ ತೊಡಗುವುದರಿಂದ ವಿರೋಧಿಸಲಾಗಿರುವವರನ್ನು ತಾವು ಕಂಡಿಲ್ಲವೇ? ತರುವಾಯ ಅವರನ್ನು ವಿರೋಧಿಸಲಾದೆಡೆಗೆ ಅವರು ಮರಳುವರು.(1224) ಪಾಪಕ್ಕೂ, ಅತಿಕ್ರಮಗಳಿಗೂ, ಸಂದೇಶವಾಹಕರನ್ನು ಧಿಕ್ಕರಿಸುವುದಕ್ಕೂ ಅವರು ಪರಸ್ಪರ ಗುಪ್ತವಾಗಿ ಉಪದೇಶ ಮಾಡುತ್ತಿರುವರು. ಅವರು ತಮ್ಮ ಬಳಿ ಬಂದರೆ ಅಲ್ಲಾಹು ತಮ್ಮನ್ನು ಅಭಿವಂದಿಸದ ರೀತಿಯಲ್ಲಿ ಅವರು ತಮ್ಮನ್ನು ಅಭಿವಂದಿಸುವರು.(1225) ‘ನಾವು ಹೀಗೆ ಹೇಳುವ ನಿಮಿತ್ತ ಅಲ್ಲಾಹು ನಮ್ಮನ್ನು ಶಿಕ್ಷಿಸುವುದಿಲ್ಲ ವೇಕೆ?’ ಎಂದು ಅವರು ಪರಸ್ಪರ ಕೇಳುವರು. ಅವರಿಗೆ ನರಕಾಗ್ನಿಯೇ ಸಾಕು. ಅವರು ಅದರಲ್ಲಿ ಉರಿಯುವರು. ಆ ಪರ್ಯವಸಾನವು ನಿಕೃಷ್ಟವೇ ಆಗಿದೆ.
1224. ಮುಸ್ಲಿಮರೊಂದಿಗೆ ಬೆರೆತು ಜೀವಿಸುತ್ತಿದ್ದ ಕಪಟವಿಶ್ವಾಸಿಗಳು ಮುಸ್ಲಿಮರ ವಿರುದ್ಧ ಹಲವು ರೀತಿಯ ಪಿತೂರಿಗಳನ್ನು ಹೆಣೆಯತೊಡಗಿದರು. ಈ ಮಾಹಿತಿ ಸಿಕ್ಕಿದಾಗ ಪ್ರತ್ಯೇಕ ಗುಂಪುಗಳಾಗಿ ಗುಪ್ತ ಸಂಭಾಷಣೆಯಲ್ಲಿ ತೊಡಗುವುದನ್ನು ಪ್ರವಾದಿ(ಸ) ರವರು ನಿಷೇಧಿಸಿದರು. ಆದರೆ ಕಪಟವಿಶ್ವಾಸಿಗಳು ಈ ನಿಷೇಧವನ್ನು ಉಲ್ಲಂಘಿಸಿ ಪುನಃ ಗುಪ್ತ ಸಂಭಾಷಣೆಗಳಲ್ಲಿ ನಿರತರಾಗ ತೊಡಗಿದರು. ಅದರ ಬಗ್ಗೆ ಇಲ್ಲಿ ಸೂಚಿಸಲಾಗಿದೆ. 1225. ‘ಅಸ್ಸಲಾಮು ಅಲೈಕುಮ್’ (ನಿಮ್ಮ ಮೇಲೆ ಶಾಂತಿಯಿರಲಿ) ಎಂಬ ಅಭಿವಂದನೆಯನ್ನು ಅಲ್ಲಾಹು ಅಂಗೀಕರಿಸಿದ್ದಾನೆ. ಆದರೆ ಸಲಾಮ್ ಎಂಬ ಪದಕ್ಕೆ ಬದಲಾಗಿ ‘ಅಸ್ಸಾಮು ಅಲೈಕುಮ್’ (ನಿಮ್ಮ ಮೇಲೆ ಮರಣವುಂಟಾಗಲಿ) ಎಂದು ಯಹೂದರು ಹೇಳುತ್ತಿದ್ದರು.
(9) ಓ ಸತ್ಯವಿಶ್ವಾಸಿಗಳೇ! ನೀವು ಗುಪ್ತ ಸಂಭಾಷಣೆಯಲ್ಲಿ ತೊಡಗುವುದಾದರೆ ಪಾಪಕ್ಕೂ, ಅತಿಕ್ರಮಕ್ಕೂ ಹಾಗೂ ಸಂದೇಶವಾಹಕರನ್ನು ಧಿಕ್ಕರಿಸಲಿಕ್ಕೂ ಗುಪ್ತ ಸಂಭಾಷಣೆಯನ್ನು ನಡೆಸದಿರಿ. ಪುಣ್ಯ ಮತ್ತು ಭಯಭಕ್ತಿಯ ವಿಷಯದಲ್ಲಿ ನೀವು ಗುಪ್ತ ಉಪದೇಶ ಮಾಡಿರಿ. ಯಾವ ಅಲ್ಲಾಹುವಿನೆಡೆಗೆ ನಿಮ್ಮನ್ನು ಒಟ್ಟುಗೂಡಿಸಲಾಗುವುದೋ ಅವನನ್ನು ನೀವು ಭಯಪಡಿರಿ.
(10) ಆ ಗುಪ್ತ ಸಂಭಾಷಣೆಯು ಕೇವಲ ಸೈತಾನನಿಂದಿರುವುದಾಗಿದೆ. ಅದು ಸತ್ಯವಿಶ್ವಾಸಿಗಳನ್ನು ದುಃಖಕ್ಕೀಡು ಮಾಡುವ ಸಲುವಾಗಿದೆ. ಆದರೆ ಅಲ್ಲಾಹುವಿನ ಅನುಮತಿಯ ವಿನಾ ಅದು ಅವರಿಗೆ ಯಾವುದೇ ಹಾನಿಯನ್ನೂ ಮಾಡದು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆ ಭರವಸೆಯಿಡಲಿ.
(11) ಓ ಸತ್ಯವಿಶ್ವಾಸಿಗಳೇ! ‘ಸಭೆಗಳಲ್ಲಿ ಎಡೆ ಮಾಡಿಕೊಡಿರಿ’ ಎಂದು ನಿಮ್ಮೊಂದಿಗೆ ಹೇಳಲಾದರೆ ಎಡೆ ಮಾಡಿಕೊಡಿರಿ. ಹಾಗಾದರೆ ಅಲ್ಲಾಹು ನಿಮಗೆ ಎಡೆ ಮಾಡಿಕೊಡುವನು. ‘ಎದ್ದು ಹೋಗಿರಿ’ ಎಂದು ನಿಮ್ಮೊಂದಿಗೆ ಹೇಳಲಾದರೆ ಎದ್ದು ಹೋಗಿರಿ. ನಿಮ್ಮ ಪೈಕಿ ವಿಶ್ವಾಸವಿಟ್ಟವರನ್ನು ಮತ್ತು ಜ್ಞಾನ ನೀಡಲಾದವರನ್ನು ಅಲ್ಲಾಹು ಹಲವು ಪದವಿಗಳಿಗೆ ಏರಿಸುವನು. ಅಲ್ಲಾಹು ನೀವು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನಾಗಿರುವನು.
(12) ಓ ಸತ್ಯವಿಶ್ವಾಸಿಗಳೇ! ನೀವು ಸಂದೇಶವಾಹಕರೊಂದಿಗೆ ಗುಪ್ತ ಸಂಭಾಷಣೆಯಲ್ಲಿ ತೊಡಗುವುದಾದರೆ ನಿಮ್ಮ ಗುಪ್ತ ಸಂಭಾಷಣೆಗೆ ಮುಂಚಿತವಾಗಿ ನೀವು ಏನಾದರೂ ದಾನಧರ್ಮ ಮಾಡಿರಿ.(1226) ಅದು ನಿಮಗೆ ಉತ್ತಮವಾಗಿದೆ ಮತ್ತು ಹೆಚ್ಚು ಪರಿಶುದ್ಧವಾಗಿದೆ. ಇನ್ನು ನಿಮಗೆ (ದಾನಧರ್ಮ ಮಾಡಲು) ಏನೂ ಸಿಗದಿದ್ದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1226. ಪ್ರವಾದಿ(ಸ) ರವರ ಸಭೆಯು ಬಹಿರಂಗ ಸಭೆಯಾಗಿರುತ್ತಿತ್ತು. ಸಹಾಬಿಗಳ ಪೈಕಿ ಯಾರಿಗೂ ಅಲ್ಲಿ ಪ್ರವಾದಿ(ಸ) ರವರೊಂದಿಗೆ ವಿಷಯಗಳನ್ನು ಕೇಳಿ ಮನದಟ್ಟು ಮಾಡಿಕೊಳ್ಳಬಹುದಿತ್ತು. ಪ್ರವಾದಿ(ಸ) ರವರು ನೀಡುವ ಉತ್ತರವನ್ನು ಆಲಿಸಿ ಗ್ರಹಿಸಲು ಎಲ್ಲರಿಗೂ ಸಾಧ್ಯವಾಗುವುದರಿಂದ ಈ ಬಹಿರಂಗ ಸಭೆಯು ಧರ್ಮ ಬೋಧನೆಗೆ ಉತ್ತಮ ವೇದಿಕೆಯಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರವಾದಿ(ಸ) ರವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಗುಪ್ತ ಸಂಭಾಷಣೆ ನಡೆಸುವುದು ಅನಿವಾರ್ಯವಾಗಿರುವ ಕೆಲವರಿದ್ದರು. ಇವರಲ್ಲಿ ಹೆಚ್ಚಿನವರು ಪ್ರವಾದಿ(ಸ) ರವರೊಂದಿಗೆ ಗುಪ್ತ ಸಂಭಾಷಣೆ ನಡೆಸಲು ಅವಕಾಶ ದೊರೆಯುವುದು ಹೆಮ್ಮೆಯ ವಿಷಯವಾಗಿ ಪರಿಗಣಿಸುವ ಧನಿಕರಾಗಿದ್ದರು. ಪ್ರವಾದಿ(ಸ) ರವರ ಸಹಚರರಲ್ಲಿ ಹೆಚ್ಚಿನವರೂ ಬಡವರಾಗಿದ್ದರು. ಅವರೊಂದಿಗೆ ಸಮಯ ಕಳೆಯಲು ಅಥವಾ ಅವರಿಗೆ ಮಾರ್ಗನಿರ್ದೇಶನ ನೀಡಲು ಸಾಧ್ಯವಾಗದ ವಿಧದಲ್ಲಿ ಖಾಸಗಿ ಸಂಭಾಷಣೆಗಳು ಅಧಿಕವಾಗ ತೊಡಗಿದಾಗ ಅಂತಹ ಸಂಭಾಷಣೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಖಾಸಗಿ ಸಂಭಾಷಣೆ ಮಾಡುವ ಅವಕಾಶವನ್ನು ಅರಸುತ್ತಾ ಬರುವವರ ಪ್ರಾಮಾಣಿಕತೆಯನ್ನು ಪರೀಕ್ಷಿಸುವುದಕ್ಕಾಗಿ ಪ್ರವಾದಿ(ಸ) ರವರೊಂದಿಗೆ ಗುಪ್ತ ಸಂಭಾ ಷಣೆಯಲ್ಲಿ ತೊಡಗಲು ಇಚ್ಛಿಸುವವರು ಅದಕ್ಕಿಂತ ಮುಂಚೆ ಇಸ್ಲಾಮ್ ಮತ್ತು ಮುಸ್ಲಿಮರಿಗೆ ಏನಾದರೂ ದಾನ ಮಾಡಬೇಕೆಂದು ಶಾಸನ ಮಾಡಲಾಯಿತು. ಇದು ಧನಿಕರಿಗೆ ಮಾತ್ರವಾಗಿದ್ದ ಶಾಸನವಾಗಿತ್ತೆಂದು ಹೆಚ್ಚಿನ ವ್ಯಾಖ್ಯಾನಕಾರರೂ ಹೇಳಿದ್ದಾರೆ.
(13) ನಿಮ್ಮ ಗುಪ್ತ ಸಂಭಾಷಣೆಗೆ ಮುಂಚಿತವಾಗಿ ನೀವು ದಾನಧರ್ಮ ಮಾಡುವುದರ ಬಗ್ಗೆ ನೀವು ಭಯಪಟ್ಟಿರುವಿರಾ?(1227) ಆದರೆ ನೀವು ಅದನ್ನು ಮಾಡದಿರುವುದರಿಂದ ಮತ್ತು ಅಲ್ಲಾಹು ನಿಮಗೆ ಕ್ಷಮಿಸಿರುವುದರಿಂದ ನೀವು ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಹಾಗೂ ಅಲ್ಲಾಹುವನ್ನೂ ಅವನ ಸಂದೇಶವಾಹಕರನ್ನೂ ಅನುಸರಿಸಿರಿ.(1228) ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
1227. ಜಿಪುಣರಾದ ಹಲವರು ತರುವಾಯ ಖಾಸಗಿ ಸಂಭಾಷಣೆಗಾಗಿ ಬರುವುದನ್ನು ನಿಲ್ಲಿಸಿದರು. 1228. ಮಹತ್ವವಿರುವುದು ಪ್ರವಾದಿ(ಸ) ರವರೊಂದಿಗೆ ಗುಪ್ತ ಸಂಭಾಷಣೆಯನ್ನು ನಡೆಸಲು ಅವಕಾಶ ಸಿಗುವುದರಲ್ಲಿ ಅಲ್ಲ; ಬದಲಾಗಿ ಮಹತ್ವವಿರುವುದು ಇಸ್ಲಾಮಿನ ವಿಧಿನಿಷೇಧಗಳನ್ನು ಪಾಲಿಸುವುದರಲ್ಲಾಗಿದೆ.
(14) ಅಲ್ಲಾಹು ಕೋಪಿಸಿಕೊಂಡಿರುವ ಒಂದು ಜನತೆಯೊಂದಿಗೆ (ಯಹೂದರೊಂದಿಗೆ) ಮೈತ್ರಿ ಮಾಡಿಕೊಂಡವರನ್ನು (ಕಪಟವಿಶ್ವಾಸಿಗಳನ್ನು) ತಾವು ಕಂಡಿಲ್ಲವೇ? ಅವರು ನಿಮ್ಮ ಪೈಕಿ ಸೇರಿದವರಲ್ಲ. ಅವರ (ಯಹೂದರ) ಪೈಕಿ ಸೇರಿದವರೂ ಅಲ್ಲ. ಅವರು ಅರಿತಿರುತ್ತಲೇ ಸುಳ್ಳು ಆಣೆ ಹಾಕುತ್ತಿರುವರು.
(15) ಅಲ್ಲಾಹು ಅವರಿಗೆ ಕಠೋರ ಶಿಕ್ಷೆಯನ್ನು ಸಿದ್ಧಗೊಳಿಸಿರುವನು. ಖಂಡಿತವಾಗಿಯೂ ಅವರು ಮಾಡುತ್ತಿರುವುದು ಅತಿ ನಿಕೃಷ್ಟವಾದುದಾಗಿದೆ!
(16) ಅವರು ತಮ್ಮ ಶಪಥಗಳನ್ನು ಒಂದು ಗುರಾಣಿಯನ್ನಾಗಿ ಮಾಡಿಕೊಂಡಿರುವರು. ತರುವಾಯ ಅವರು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದರು. ಆದ್ದರಿಂದ ಅವರಿಗೆ ಅಪಮಾನಕರವಾದ ಶಿಕ್ಷೆಯಿದೆ.
(17) ಅವರ ಸಂಪತ್ತುಗಳಾಗಲಿ, ಸಂತತಿಗಳಾಗಲಿ ಅಲ್ಲಾಹುವಿನ ಬಳಿ ಅವರಿಗೆ ಯಾವುದೇ ಪ್ರಯೋಜನವನ್ನೂ ಮಾಡದು. ಅವರು ನರಕವಾಸಿಗಳಾಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
(18) ಅಲ್ಲಾಹು ಅವರೆಲ್ಲರನ್ನೂ ಪುನರುತ್ಥಾನಗೊಳಿಸುವ ದಿನ! ನಿಮ್ಮೊಂದಿಗೆ ಅವರು ಶಪಥ ಮಾಡುವಂತೆ ಅವನೊಂದಿಗೂ ಅವರು ಶಪಥ ಮಾಡುವರು. ತಾವು (ಈ ಸುಳ್ಳು ಆಣೆಯ ಮೂಲಕ) ಏನನ್ನೋ ಗಳಿಸಿರುವುದಾಗಿ ಅವರು ಭಾವಿಸುವರು. ಅರಿಯಿರಿ! ಖಂಡಿತವಾಗಿಯೂ ಸುಳ್ಳು ಹೇಳುವವರು ಅವರೇ ಆಗಿರುವರು.
(19) ಸೈತಾನನು ಅವರನ್ನು ಸ್ವಾಧೀನಪಡಿಸಿರುವನು. ಆದ್ದರಿಂದ ಅವರು ಅಲ್ಲಾಹುವಿನ ಸ್ಮರಣೆಯನ್ನು ಮರೆಯುವಂತೆ ಮಾಡಿದನು. ಅವರು ಸೈತಾನನ ಪಕ್ಷದವರಾಗಿರುವರು. ಅರಿಯಿರಿ! ಖಂಡಿತವಾಗಿಯೂ ಸೈತಾನನ ಪಕ್ಷದವರು ನಷ್ಟ ಹೊಂದಿದವರಾಗಿರುವರು.
(20) ಖಂಡಿತವಾಗಿಯೂ ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರು ಯಾರೋ ಅವರು ಅತ್ಯಂತ ಅಪಮಾನಿತ ಸ್ಥಿತಿಯಲ್ಲಿರುವರು.
(21) ‘ಖಂಡಿತವಾಗಿಯೂ ನಾನು ಮತ್ತು ನನ್ನ ಸಂದೇಶವಾಹಕರು ವಿಜಯಗಳಿಸುವವರಾಗಿರುವೆವು’ ಎಂದು ಅಲ್ಲಾಹು ದಾಖಲಿಸಿರುವನು. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.
(22) ಅಲ್ಲಾಹುವಿನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ಒಂದು ಜನತೆಯು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೊಂದಿಗೆ ಮೈತ್ರಿ ಸ್ಥಾಪಿಸುವುದನ್ನು ತಾವು ಕಾಣಲಾರಿರಿ. ಅವರು (ವಿರೋಧಿಗಳು) ಅವರ ತಂದೆಯಂದಿರೋ, ಪುತ್ರರೋ, ಸಹೋದರರೋ, ಸಂಬಂಧಿಕರೋ ಆಗಿದ್ದರೂ ಸಹ. ಅಂತಹವರ(1229) ಹೃದಯಗಳಲ್ಲಿ ಅವನು ವಿಶ್ವಾಸವನ್ನು ದಾಖಲಿಸಿಟ್ಟಿರುವನು ಮತ್ತು ತನ್ನ ವತಿಯ ಆತ್ಮ ಚೈತನ್ಯದಿಂದ ಅವನು ಅವರಿಗೆ ಬೆಂಬಲವನ್ನು ನೀಡಿರುವನು. ಅವನು ಅವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿರುವನು ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿರುವರು. ಅವರು ಅಲ್ಲಾಹುವಿನ ಪಕ್ಷದವರಾಗಿರುವರು. ಅರಿಯಿರಿ! ಖಂಡಿತವಾಗಿಯೂ ವಿಜಯಗಳಿಸುವವರು ಅಲ್ಲಾಹುವಿನ ಪಕ್ಷದವರೇ ಆಗಿರುವರು.
1229. ಅಂದರೆ ಅಲ್ಲಾಹು ಮತ್ತು ಪ್ರವಾದಿ(ಸ) ರವರ ಶತ್ರುಗಳೊಂದಿಗೆ ಮೈತ್ರಿ ಮಾಡಿಕೊಳ್ಳದ ನೈಜ ವಿಶ್ವಾಸಿಗಳು.