(1) ಮನುಷ್ಯನು ಪ್ರಸ್ತಾಪಯೋಗ್ಯವಾದ ಒಂದು ವಸ್ತುವೇ ಆಗಿರದ ಕಾಲವೊಂದು ಅವನ ಮೇಲೆ ಗತಿಸಿ ಹೋಗಿಲ್ಲವೇ?(1333)
1333. ಪ್ರಪಂಚವು ತನ್ನ ಇಚ್ಛೆಯಂತೆ ನಡೆಯಬೇಕೆಂದು ಆಸೆ ಪಡುವ ಸರ್ವಾಧಿಕಾರಿಯು ತನ್ನ ಅಸ್ತಿತ್ವದ ಕ್ಷಣಿಕತೆಯನ್ನು ಮರೆತು ಬಿಡುತ್ತಾನೆ. ಕೆಲವು ವರ್ಷಗಳ ಹಿಂದೆ ತನಗೆ ಅಸ್ತಿತ್ವವೇ ಇರಲಿಲ್ಲ ಮತ್ತು ತನ್ನ ಅನುಪಸ್ಥಿತಿಯಲ್ಲಿ ತನಗಿಂತ ಮುಂಚೆ ಜಗತ್ತು ಅಸ್ತಿತ್ವದಲ್ಲಿತ್ತು ಎಂಬ ವಾಸ್ತವತೆಯನ್ನು ಅವನು ಮರೆಯುತ್ತಾನೆ.
(2) ಸಮ್ಮಿಶ್ರಗೊಂಡ ಒಂದು ವೀರ್ಯಕೋಶದಿಂದ ಖಂಡಿತವಾಗಿಯೂ ನಾವು ಮನುಷ್ಯನನ್ನು ಸೃಷ್ಟಿಸಿರುವೆವು. ನಾವು ಅವನನ್ನು ಪರೀಕ್ಷಿಸುವುದಕ್ಕಾಗಿ. ತರುವಾಯ ನಾವು ಅವನನ್ನು ಶ್ರವಣ ಮತ್ತು ದೃಷ್ಟಿಯುಳ್ಳವನನ್ನಾಗಿ ಮಾಡಿದೆವು.
(3) ಖಂಡಿತವಾಗಿಯೂ ನಾವು ಅವನಿಗೆ ಮಾರ್ಗವನ್ನು ತೋರಿಸಿಕೊಟ್ಟಿರುವೆವು. ಅವನು ಒಂದೋ ಕೃತಜ್ಞತೆ ಸಲ್ಲಿಸುವವನಾಗುವನು ಅಥವಾ ಕೃತಘ್ನನಾಗುವನು.
(4) ಖಂಡಿತವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು, ಬೇಡಿಗಳನ್ನು ಮತ್ತು ಜ್ವಲಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು.
(5) ಖಂಡಿತವಾಗಿಯೂ ಪುಣ್ಯವಂತರು (ಸ್ವರ್ಗದಲ್ಲಿ) ಒಂದು ಪಾನಪಾತ್ರೆಯಿಂದ ಕುಡಿಯುವರು. ಅದರಲ್ಲಿರುವ ಮಿಶ್ರಣವು ಕರ್ಪೂರವಾಗಿರುವುದು.
(6) ಅದು ಅಲ್ಲಾಹುವಿನ ದಾಸರು ಕುಡಿಯುವ ಒಂದು ಚಿಲುಮೆಯ ನೀರಾಗಿದೆ. ಅವರು ಅದನ್ನು ಚಿಮ್ಮಿ ಹರಿಯುವಂತೆ ಮಾಡುವರು.
(7) ಅವರು ಹರಕೆಗಳನ್ನು ನೆರವೇರಿಸುವವರೂ ವಿಪತ್ತು ವ್ಯಾಪಕವಾಗಿ ಹರಡುವ ಒಂದು ದಿನವನ್ನು ಭಯಪಡುವವರೂ ಆಗಿರುವರು.(1334)
1334. 7ರಿಂದ 10ರವರೆಗಿನ ಸೂಕ್ತಿಗಳಲ್ಲಿ ಸ್ವರ್ಗವಾಸಿಗಳ ಇಹಲೋಕ ಜೀವನ ರೀತಿಯ ಬಗ್ಗೆ ವಿವರಿಸಲಾಗಿದೆ.
(8) ಆಹಾರದೊಂದಿಗೆ ಪ್ರೀತಿಯಿದ್ದೂ ಸಹ ಅವರು ಅದನ್ನು ನಿರ್ಗತಿಕರಿಗೆ, ಅನಾಥರಿಗೆ ಮತ್ತು ಸೆರೆಯಾಳುಗಳಿಗೆ ನೀಡುವರು.
(9) (ಅವರು ಹೇಳುವರು): ‘ನಾವು ನಿಮಗೆ ಆಹಾರ ನೀಡುತ್ತಿರುವುದು ಅಲ್ಲಾಹುವಿನ ಸಂತೃಪ್ತಿಗಾಗಿ ಮಾತ್ರವಾಗಿದೆ. ನಿಮ್ಮ ವತಿಯ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ನಾವು ಬಯಸುವುದಿಲ್ಲ.
(10) ನಾವು ನಮ್ಮ ರಬ್‌ನ ವತಿಯಿಂದ ಮುಖವನ್ನು ವಿರೂಪಗೊಳಿಸುವ ಮತ್ತು ಕಡು ಸಂಕಷ್ಟದಿಂದ ಕೂಡಿದ ಒಂದು ದಿನವನ್ನು ಖಂಡಿತವಾಗಿಯೂ ಭಯಪಡುತ್ತಿರುವೆವು’.
(11) ಆದ್ದರಿಂದ ಅಲ್ಲಾಹು ಅವರನ್ನು ಆ ದಿನದ ಕೆಡುಕಿನಿಂದ ಕಾಪಾಡುವನು ಮತ್ತು ಅವರಿಗೆ ಪ್ರಸನ್ನತೆಯನ್ನೂ, ಸಂತೋಷವನ್ನೂ ದಯಪಾಲಿಸುವನು.
(12) ಅವರು ತಾಳ್ಮೆ ವಹಿಸಿದ ಕಾರಣದಿಂದಾಗಿ ಅವನು ಅವರಿಗೆ ಸ್ವರ್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಪ್ರತಿಫಲವಾಗಿ ನೀಡುವನು.
(13) ಅವರು ಅಲ್ಲಿ ಮೆತ್ತಗಿನ ಆಸನಗಳಲ್ಲಿ ಒರಗಿ ಕುಳಿತಿರುವರು. ಅವರು ಅಲ್ಲಿ ಬಿಸಿಲನ್ನಾಗಲಿ ಕಡುಚಳಿಯನ್ನಾಗಲಿ ಕಾಣಲಾರರು.
(14) ಆ ಸ್ವರ್ಗದ ನೆರಳು ಅವರ ಮೇಲೆ ನಿಕಟವಾಗಿರುವುದು. ಅದರ ಫಲಗಳನ್ನು ಕೀಳಲು ಅವರಿಗೆ ಅನುಕೂಲಗೊಳಿಸಲಾಗಿರುವುದು.
(15) ಬೆಳ್ಳಿಯ ಪಾತ್ರೆಗಳೊಂದಿಗೆ ಮತ್ತು (ಹೊಳಪಿನಲ್ಲಿ) ಸ್ಫಟಿಕದಂತಿರುವ ಲೋಟಗಳೊಂದಿಗೆ (ಸೇವಕರು) ಅವರ ನಡುವೆ ಸುತ್ತುತ್ತಿರುವರು.
(16) ಬೆಳ್ಳಿಯ ಲೋಟಗಳೊಂದಿಗೆ. ಅವರು ಅವುಗಳಿಗೆ (ಪಾತ್ರೆಗಳಿಗೆ) ಒಂದು ಅಳತೆಗನುಸಾರವಾಗಿ ಅಳವನ್ನು ನಿರ್ಣಯಿಸಿರುವರು.
(17) ಶುಂಠಿಯ ಮಿಶ್ರಣವನ್ನು ಹೊಂದಿರುವ ಒಂದು ಲೋಟವನ್ನು ಅಲ್ಲಿ ಅವರಿಗೆ ಕುಡಿಯಲು ನೀಡಲಾಗುವುದು.
(18) ಅಂದರೆ ಅಲ್ಲಿರುವ (ಸ್ವರ್ಗದಲ್ಲಿರುವ) ಸಲ್‍ಸಬೀಲ್ ಎಂಬ ಹೆಸರಿನ ಚಿಲುಮೆಯ ನೀರು.
(19) ಚಿರಂಜೀವಿಗಳಾದ ಕೆಲವು ಬಾಲಕರು ಅವರ ನಡುವೆ ಸುತ್ತುತ್ತಿರುವರು. ತಾವು ಅವರನ್ನು ಕಂಡರೆ ಅವರನ್ನು ಹರಡಲಾಗಿರುವ ಮುತ್ತುಗಳಾಗಿರುವರು ಎಂದು ತಾವು ಭಾವಿಸುವಿರಿ.
(20) ತಾವು ಅಲ್ಲಿ ನೋಡಿದರೆ ಸುಖಾನುಗ್ರಹ ಮತ್ತು ಮಹಾ ಸಾಮ್ರಾಜ್ಯವೊಂದನ್ನು ಕಾಣುವಿರಿ.
(21) ಅವರ ಮೇಲೆ ಹಸಿರು ಬಣ್ಣದ ನಯವಾದ ರೇಷ್ಮೆ ಉಡುಪುಗಳು ಮತ್ತು ದಪ್ಪವಾದ ರೇಷ್ಮೆ ಉಡುಪುಗಳಿರುವುವು. ಬೆಳ್ಳಿಯ ಕಡಗಗಳನ್ನು ಅವರಿಗೆ ತೊಡಿಸಲಾಗುವುದು. ಅವರ ರಬ್ ಅವರಿಗೆ ಅತ್ಯಂತ ಶುದ್ಧವಾದ ಪಾನೀಯವನ್ನು ಕುಡಿಯಲು ನೀಡುವನು.(1335)
1335. ಸ್ವರ್ಗದಲ್ಲಿರುವ ಅನುಗ್ರಹಗಳನ್ನು ಮನುಷ್ಯರಿಗೆ ಪರಿಚಿತವಾಗಿರುವ ರೀತಿಯಲ್ಲಿ ವಿವರಿಸಿದರೆ ಮಾತ್ರ ಅವರಿಗೆ ಅದನ್ನು ಗ್ರಹಿಸಲು ಸಾಧ್ಯ. ಆದರೆ ಅವು ಇಹಲೋಕದ ಅನುಗ್ರಹಗಳಂತೆ ಪರಿಮಿತ, ಶುಷ್ಕ ಮತ್ತು ತಾತ್ಕಾಲಿಕವೆಂದು ಭಾವಿಸುವುದು ತಪ್ಪಾಗಿದೆ. ಸ್ವರ್ಗದಲ್ಲಿರುವ ಸುಖಾಡಂಬರಗಳು ಭೂಮಿಯಲ್ಲಿರುವವುಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ.
(22) (ಅವರೊಂದಿಗೆ ಹೇಳಲಾಗುವುದು): ‘ಖಂಡಿತವಾಗಿಯೂ ಇದು ನಿಮಗಿರುವ ಪ್ರತಿಫಲವಾಗಿದೆ. ನಿಮ್ಮ ಪರಿಶ್ರಮವನ್ನು ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿದೆ’.
(23) ಖಂಡಿತವಾಗಿಯೂ ನಾವು ತಮಗೆ ಈ ಕುರ್‌ಆನನ್ನು ಹಂತ ಹಂತವಾಗಿ ಅವತೀರ್ಣಗೊಳಿಸಿರುವೆವು.
(24) ಆದ್ದರಿಂದ ತಾವು ತಮ್ಮ ರಬ್‌ನ ತೀರ್ಪನ್ನು ತಾಳ್ಮೆಯೊಂದಿಗೆ ಕಾಯುತ್ತಿರಿ. ಅವರ ಪೈಕಿ ಯಾವುದೇ ಪಾಪಿಯನ್ನೂ, ಕೃತಘ್ನನನ್ನೂ ತಾವು ಅನುಸರಿಸದಿರಿ.
(25) ಮುಂಜಾನೆ ಮತ್ತು ಸಂಜೆ ತಮ್ಮ ರಬ್‌ನ ನಾಮವನ್ನು ಸ್ಮರಿಸುತ್ತಿರಿ.
(26) ರಾತ್ರಿಯಲ್ಲಿ ತಾವು ಅವನಿಗೆ ಸಾಷ್ಟಾಂಗ ಮಾಡಿರಿ ಮತ್ತು ದೀರ್ಘವಾದ ರಾತ್ರಿ ವೇಳೆಯಲ್ಲಿ ಅವನ ಪರಿಪಾವನತೆಯನ್ನು ಕೊಂಡಾಡಿರಿ.
(27) ಖಂಡಿತವಾಗಿಯೂ ಇವರು ಕ್ಷಣಿಕವಾದ ಐಹಿಕ ಜೀವನವನ್ನು ಇಷ್ಟಪಡುತ್ತಿರುವರು. ಭಾರವಾದ ಒಂದು ದಿನವನ್ನು ಅವರು ತಮ್ಮ ಬೆನ್ನ ಹಿಂದೆಯೇ ಬಿಟ್ಟುಬಿಡುತ್ತಿರುವರು.
(28) ಅವರನ್ನು ಸೃಷ್ಟಿಸಿದವರು ಮತ್ತು ಅವರ ಶರೀರ ರಚನೆಯನ್ನು ಸುದೃಢಗೊಳಿಸಿದವರು ನಾವಾಗಿರುವೆವು. ನಾವು ಇಚ್ಛಿಸುವುದಾದರೆ ಅವರಿಗೆ ಸಮಾನರಾಗಿರುವವರನ್ನು ನಾವು ಅವರಿಗೆ ಬದಲಿಯಾಗಿ ತರುವೆವು.
(29) ಖಂಡಿತವಾಗಿಯೂ ಇದೊಂದು ಉಪದೇಶವಾಗಿದೆ. ಆದ್ದರಿಂದ ಯಾರಾದರೂ ಇಚ್ಛಿಸುವುದಾದರೆ ಅವನು ತನ್ನ ರಬ್‌ನೆಡೆಗಿರುವ ಮಾರ್ಗವನ್ನು ಪಡೆದುಕೊಳ್ಳಲಿ.
(30) ಅಲ್ಲಾಹು ಇಚ್ಛಿಸಿದ ಹೊರತು ನೀವು ಇಚ್ಛಿಸಲಾರಿರಿ.(1336) ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.
1336. ಪ್ರಪಂಚದ ಸೂಕ್ಷ್ಮ ಮತ್ತು ಸ್ಥೂಲವಾದ ಯಾವುದೇ ವಸ್ತುವೂ, ಮನುಷ್ಯ ಸೇರಿದಂತೆ ಯಾವುದೇ ಜೀವಿಯೂ ಹೇಗೆ ವರ್ತಿಸಬೇಕೆಂದು ತೀರ್ಮಾನಿಸುವುದು ಅಲ್ಲಾಹುವಾಗಿದ್ದಾನೆ. ಅವನ ತೀರ್ಮಾನದ ಹೊರತು ಏನೂ ಸಂಭವಿಸುವುದಿಲ್ಲ.
(31) ಅವನಿಚ್ಛಿಸುವವರನ್ನು ಅವನು ಅವನ ಕಾರುಣ್ಯದಲ್ಲಿ ಪ್ರವೇಶ ಮಾಡಿಸುವನು. ಅಕ್ರಮಿಗಳಿಗೆ ಅವನು ಯಾತನಾಮಯವಾದ ಶಿಕ್ಷೆಯನ್ನು ಸಿದ್ಧಗೊಳಿಸಿರುವನು.