(1) ಪರಸ್ಪರ ಹಿರಿಮೆ ತೋರುವುದು ಎಂಬ ವಿಷಯವು ನಿಮ್ಮನ್ನು ಅಲಕ್ಷ್ಯರನ್ನಾಗಿ ಮಾಡಿದೆ.(1426)
1426. ನೀವು ಗೋರಿಗಳನ್ನು ಸಂದರ್ಶಿಸುವವರೆಗೆ ಎಂದರೆ ನೀವು ಮೃತಪಟ್ಟು ಗೋರಿಯಲ್ಲಿ ದಫನಗೊಳಿಸಲಾಗುವವರೆಗೆ ಎಂದರ್ಥ. ಭೌತಿಕ ಸಾಧನೆಗಳ ಹೆಸರಲ್ಲಿರುವ ಹಿರಿಮೆ ಮತ್ತು ಗರ್ವದ ನಿಮಿತ್ತ ಮನುಷ್ಯನು ಸತ್ಯ ಮತ್ತು ಧರ್ಮದ ಬಗ್ಗೆ ನಿರ್ಲಕ್ಷ್ಯನಾಗುವ ಸ್ಥಿತಿ ಮರಣದವರೆಗೆ ಮುಂದುವರಿಯುವುದು ಎಂಬ ವಾಸ್ತವಿಕತೆಯೆಡೆಗೆ ಈ ಸೂಕ್ತಿಯು ಸೂಚನೆ ನೀಡುತ್ತದೆ.
(2) ನೀವು ಗೋರಿಗಳನ್ನು ಸಂದರ್ಶಿಸುವವರೆಗೂ (ಇದು ಮುಂದುವರಿಯುವುದು).
(3) ಅನುಮಾನವೇ ಇಲ್ಲ, ನೀವು ತರುವಾಯ ಅರಿಯಲಿರುವಿರಿ.
(4) ಪುನಃ ಅನುಮಾನವೇ ಇಲ್ಲ, ನೀವು ತರುವಾಯ ಅರಿಯಲಿರುವಿರಿ.
(5) ಅನುಮಾನವೇ ಇಲ್ಲ, ನೀವು ದೃಢವಾದ ಜ್ಞಾನವನ್ನು ಅರಿಯುವವರಾಗಿದ್ದರೆ.
(6) ಜ್ವಲಿಸುತ್ತಿರುವ ನರಕಾಗ್ನಿಯನ್ನು ಖಂಡಿತವಾಗಿಯೂ ನೀವು ಕಾಣುವಿರಿ.
(7) ಪುನಃ ಖಂಡಿತವಾಗಿಯೂ ನೀವು ಅದನ್ನು ದೃಢವಾಗಿ ಕಣ್ಣಾರೆ ಕಾಣುವಿರಿ.
(8) ತರುವಾಯ ಆ ದಿನದಂದು ಸುಖಾನುಭೂತಿಗಳ ಬಗ್ಗೆ ಖಂಡಿತವಾಗಿಯೂ ನಿಮ್ಮಲ್ಲಿ ಪ್ರಶ್ನಿಸಲಾಗುವುದು.(1427)
1427. ನಾವು ಬದುಕುವ ಪ್ರತಿಯೊಂದು ನಿಮಿಷದಲ್ಲಿಯೂ ನಾವು ಅಲ್ಲಾಹುವಿನ ಅಸಂಖ್ಯ ಅನುಗ್ರಹಗಳನ್ನು ಸವಿಯುತ್ತಿದ್ದೇವೆ. ಈ ಅನುಗ್ರಹಗಳಿಗೆ ಪ್ರತಿಯಾಗಿ ನಾವೇನು ಮಾಡಿದ್ದೇವೆ ಎಂಬ ಅಲ್ಲಾಹುವಿನ ಪ್ರಶ್ನೆಗೆ ಉತ್ತರಿಸದೆ ಪಾರಾಗಲು ನಮಗೆ ಸಾಧ್ಯವಾಗದು.