(1) ತ್ವಾಹಾ
(2) ತಾವು ಕಷ್ಟಪಡಬೇಕೆಂದು ನಾವು ತಮಗೆ ಕುರ್‌ಆನನ್ನು ಅವತೀರ್ಣಗೊಳಿಸಿಲ್ಲ.
(3) ಇದು ಭಯಪಡುವವರಿಗಿರುವ ಒಂದು ಉಪದೇಶ ಮಾತ್ರವಾಗಿದೆ.
(4) ಇದು ಭೂಮಿಯನ್ನು ಮತ್ತು ಉನ್ನತವಾದ ಆಕಾಶಗಳನ್ನು ಸೃಷ್ಟಿಸಿದವನ ಬಳಿಯಿಂದ ಅವತೀರ್ಣಗೊಂಡಿರುವುದಾಗಿದೆ.
(5) ಪರಮ ದಯಾಮಯನು ಸಿಂಹಾಸನಾರೂಢನಾಗಿರುವನು.
(6) ಆಕಾಶಗಳಲ್ಲಿರುವುದು, ಭೂಮಿಯಲ್ಲಿರುವುದು, ಅವೆರಡರ ಮಧ್ಯೆಯಿರುವುದು ಮತ್ತು ಮಣ್ಣಿನಡಿಯಲ್ಲಿರುವುದೆಲ್ಲವೂ ಅವನಿಗಿರುವುದಾಗಿವೆ.
(7) ತಾವು ಧ್ವನಿಯೆತ್ತಿ ಮಾತನಾಡುವುದಾದರೆ, ಖಂಡಿತವಾಗಿಯೂ ಅವನು (ಅಲ್ಲಾಹು) ರಹಸ್ಯವಾಗಿರುವುದನ್ನೂ ಅತಿ ನಿಗೂಢವಾಗಿರುವುದನ್ನೂ ಅರಿಯುವನು.(643)
643. ಅಲ್ಲಾಹು ಕೇಳಲು ಪ್ರಾರ್ಥನೆಯನ್ನು ಅಥವಾ ಕುರ್‌ಆನ್ ಪಾರಾಯಣವನ್ನು ಗಟ್ಟಿಯಾಗಿ ಓದಬೇಕಾಗಿಲ್ಲ. ಯಾಕೆಂದರೆ ಅಲ್ಲಾಹು ಯಾವುದೇ ಧ್ವನಿಯನ್ನೂ ಕೇಳುತ್ತಾನೆ. ಆದರೆ ಸ್ವಲ್ಪ ಧ್ವನಿಯೆತ್ತಿ ಹೇಳಲು ಅಲ್ಲಾಹು ಆದೇಶಿಸಿದ ವಿಷಯಗಳನ್ನು ಹಾಗೆಯೇ ಹೇಳಬೇಕಾಗಿದೆ. ಅದರಲ್ಲಿ ನಮಗೆ ತಿಳಿದಿರದಂತಹ ಯಾವುದಾದರೂ ಯುಕ್ತಿಯಿರಬಹುದು.
(8) ಅಲ್ಲಾಹು, ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅತ್ಯುತ್ಕೃಷ್ಟವಾದ ನಾಮಗಳು ಅವನದ್ದಾಗಿವೆ.
(9) ಮೂಸಾರ ವೃತ್ತಾಂತವು ತಮ್ಮ ಬಳಿಗೆ ಬಂದಿದೆಯೇ?
(10) ಅವರು ಒಂದು ಬೆಂಕಿಯನ್ನು ಕಂಡ ಸಂದರ್ಭ.(644) ಆಗ ಅವರು ತಮ್ಮ ಕುಟುಂಬದವರೊಂದಿಗೆ ಹೇಳಿದರು: “ನೀವಿಲ್ಲಿ ತಂಗಿರಿ. ನಾನೊಂದು ಬೆಂಕಿಯನ್ನು ಕಂಡಿರುವೆನು. ಅದರಿಂದ ಏನಾದರೂ ಉರಿಸಿಕೊಂಡು ನಾನು ನಿಮ್ಮ ಬಳಿಗೆ ಬರುವೆನು ಅಥವಾ ಬೆಂಕಿಯ ಬಳಿ ಯಾವುದಾದರೂ ಮಾರ್ಗದರ್ಶಿಯನ್ನು ಕಾಣುವೆನು”.
644. ಮದ್‍ಯನ್ ಪ್ರದೇಶದಲ್ಲಿ ಅನೇಕ ವರ್ಷಗಳ ಕಾಲ ಆಶ್ರಯವನ್ನು ಪಡೆದ ಬಳಿಕ ಸ್ವದೇಶವಾದ ಈಜಿಪ್ಟಿಗೆ ಮರಳುವ ಹಾದಿಯಲ್ಲಿ ಸೀನಾ ಕಣಿವೆಯಲ್ಲಿ ಮೂಸಾರವರು ಆ ಬೆಂಕಿಯನ್ನು ಕಂಡರು.
(11) ತರುವಾಯ ಅವರು ಅದರ ಬಳಿಗೆ ಬಂದಾಗ (ಹೀಗೆ) ಕರೆಯಲಾಯಿತು: “ಓ ಮೂಸಾ! (645)
645. ಇದು ಮೂಸಾ(ಅ) ರಿಗೆ ಅಲ್ಲಾಹುವಿನಿಂದ ಸಿಗುತ್ತಿರುವ ಪ್ರಥಮ ಸಂದೇಶವಾಗಿದೆ.
(12) ಖಂಡಿತವಾಗಿಯೂ ನಾನು ತಮ್ಮ ರಬ್ ಆಗಿರುವೆನು. ಆದುದರಿಂದ ತಾವು ತಮ್ಮ ಚಪ್ಪಲಿಗಳನ್ನು ಕಳಚಿರಿ. ತಾವು ತ್ವುವಾ ಎಂಬ ಪವಿತ್ರ ಕಣಿವೆಯಲ್ಲಿದ್ದೀರಿ.
(13) ನಾನು ತಮ್ಮನ್ನು ಆರಿಸಿರುವೆನು. ಆದುದರಿಂದ ದಿವ್ಯಸಂದೇಶ ನೀಡಲಾಗುವುದನ್ನು ತಾವು ಕಿವಿಗೊಟ್ಟು ಆಲಿಸಿರಿ.
(14) ಖಂಡಿತವಾಗಿಯೂ ಅಲ್ಲಾಹು ನಾನೇ ಆಗಿರುವೆನು. ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದುದರಿಂದ ತಾವು ನನ್ನನ್ನು ಆರಾಧಿಸಿರಿ ಮತ್ತು ನನ್ನನ್ನು ಸ್ಮರಿಸುವುದಕ್ಕಾಗಿ ನಮಾಝನ್ನು ಸಂಸ್ಥಾಪಿಸಿರಿ.
(15) ಖಂಡಿತವಾಗಿಯೂ ಅಂತ್ಯಘಳಿಗೆಯು ಬಂದೇ ಬರುವುದು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಪರಿಶ್ರಮಕ್ಕೆ ಅನುಗುಣವಾಗಿ ಪ್ರತಿಫಲವನ್ನು ನೀಡುವ ಸಲುವಾಗಿ ನಾನು ಅದನ್ನು ಗೋಪ್ಯವಾಗಿಡುವೆನು.
(16) ಆದುದರಿಂದ ಅದರಲ್ಲಿ (ಅಂತ್ಯಘಳಿಗೆಯಲ್ಲಿ) ವಿಶ್ವಾಸವಿಡದವರು ಮತ್ತು ತಮ್ಮ ದೇಹೇಚ್ಛೆಗಳನ್ನು ಅನುಸರಿಸುವವರು ಅದರಿಂದ (ಅದರಲ್ಲಿ ವಿಶ್ವಾಸವಿಡುವುದರಿಂದ) ತಮ್ಮನ್ನು ತಡೆಯದಿರಲಿ. ಹಾಗೇನಾದರೂ ಆದರೆ ತಾವು ನಾಶವಾಗುವಿರಿ.
(17) ಓ ಮೂಸಾ! ತಮ್ಮ ಬಲಗೈಯಲ್ಲಿರುವುದೇನು?”
(18) ಅವರು (ಮೂಸಾ) ಹೇಳಿದರು: “ಇದು ನನ್ನ ಬೆತ್ತ. ಇದನ್ನು ನೆಲಕ್ಕೂರಿ ನಾನು ನಿಲ್ಲುವೆನು. ಅದರಿಂದ ನಾನು ನನ್ನ ಆಡುಗಳಿಗೆ (ಎಲೆಗಳನ್ನು) ಉದುರಿಸುವೆನು ಮತ್ತು ಅದರಲ್ಲಿ ನನಗೆ ಇತರ ಪ್ರಯೋಜನಗಳೂ ಇವೆ”.
(19) ಅವನು (ಅಲ್ಲಾಹು) ಹೇಳಿದನು: “ಓ ಮೂಸಾ! ತಾವು ಆ ಬೆತ್ತವನ್ನು ಕೆಳಕ್ಕೆ ಹಾಕಿರಿ”.
(20) ಅವರು ಅದನ್ನು ಕೆಳಕ್ಕೆ ಹಾಕಿದರು. ಆಗ ಅಗೋ! ಅದೊಂದು ಹಾವಾಗಿ ಓಡುತ್ತಿರುವುದು.
(21) ಅವನು ಹೇಳಿದನು: “ಅದನ್ನು ಹಿಡಿಯಿರಿ. ಭಯಪಡದಿರಿ. ಅದನ್ನು ನಾವು ಅದರ ಪೂರ್ವ ಸ್ಥಿತಿಗೆ ಮರಳಿಸುವೆವು.
(22) ತಾವು ತಮ್ಮ ಕೈಯನ್ನು ತಮ್ಮ ಕಂಕುಳಕ್ಕೆ ಜೋಡಿಸಿರಿ. ಯಾವುದೇ ದೋಷವಿಲ್ಲದೆ ಸ್ಪಷ್ಟ ಶ್ವೇತವರ್ಣದೊಂದಿಗೆ ಅದು ಹೊರಬರುವುದು. ಅದು ಇನ್ನೊಂದು ದೃಷ್ಟಾಂತವಾಗಿದೆ.
(23) ಇದು ನಮ್ಮ ಮಹಾ ದೃಷ್ಟಾಂತಗಳಲ್ಲಿ ಸೇರಿದ ಕೆಲವನ್ನು ನಾವು ತಮಗೆ ತೋರಿಸಿಕೊಡುವ ಸಲುವಾಗಿದೆ.(646)
646. ಬೆತ್ತ ಮತ್ತು ಕೈ ಓರ್ವ ಪ್ರವಾದಿಯೆಂಬ ನೆಲೆಯಲ್ಲಿ ಅಲ್ಲಾಹು ಅವರಿಗೆ ತೋರಿಸಿದ ಮಹಾನ್ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ.
(24) ತಾವು ಫಿರ್‍ಔನನ ಬಳಿಗೆ ತೆರಳಿರಿ. ಖಂಡಿತವಾಗಿಯೂ ಅವನು ಅತಿಕ್ರಮಿಯಾಗಿರುವನು”.
(25) ಅವರು (ಮೂಸಾ) ಹೇಳಿದರು: “ನನ್ನ ಪ್ರಭೂ! ನನ್ನ ಹೃದಯವನ್ನು ವಿಶಾಲಗೊಳಿಸು.
(26) ನನಗೆ ನನ್ನ ಕಾರ್ಯವನ್ನು ಸರಳಗೊಳಿಸು.
(27) ನನ್ನ ನಾಲಗೆಯ ಕಟ್ಟುಗಳನ್ನು ಬಿಚ್ಚಿಹಾಕು.(647)
647. ಪ್ರವಾದಿ ಮೂಸಾ(ಅ) ರಿಗೆ ಮಾತಿನಲ್ಲಿ ತೊದಲಿಕೆ ಇತ್ತು. ಅದರ ನಿವಾರಣೆಗಾಗಿ ಅವರು ಪ್ರಾರ್ಥಿಸಿದರು.
(28) ಜನರು ನನ್ನ ಮಾತನ್ನು ಗ್ರಹಿಸುವುದಕ್ಕಾಗಿ.
(29) ನನಗೆ ನನ್ನ ಕುಟುಂಬದಲ್ಲಿ ಸೇರಿದ ಒಬ್ಬ ಸಹಾಯಕನನ್ನು ಮಾಡಿಕೊಡು.
(30) ನನ್ನ ಸಹೋದರನಾದ ಹಾರೂನ್‍ನನ್ನು.
(31) ಅವನ ಮೂಲಕ ನನ್ನ ಶಕ್ತಿಯನ್ನು ಬಲಪಡಿಸು.
(32) ನನ್ನ ಕಾರ್ಯದಲ್ಲಿ ಅವನನ್ನು ಸಹಭಾಗಿಯನ್ನಾಗಿ ಮಾಡು.
(33) ನಾವು ನಿನ್ನ ಪರಿಪಾವನತೆಯನ್ನು ಹೇರಳವಾಗಿ ಕೊಂಡಾಡಲು.
(34) ಮತ್ತು ನಿನ್ನನ್ನು ಹೇರಳವಾಗಿ ಸ್ಮರಿಸಲು.
(35) ಖಂಡಿತವಾಗಿಯೂ ನೀನು ನಮ್ಮನ್ನು ಸದಾ ವೀಕ್ಷಿಸುವವನಾಗಿರುವೆ”.
(36) ಅಲ್ಲಾಹು ಹೇಳಿದನು: “ಓ ಮೂಸಾ! ತಾವು ಕೇಳಿರುವುದನ್ನು ತಮಗೆ ನೀಡಲಾಗಿದೆ.
(37) ಇನ್ನೊಂದು ಸಂದರ್ಭದಲ್ಲೂ ನಾವು ತಮಗೆ ಅನುಗ್ರಹವನ್ನು ನೀಡಿದ್ದೆವು.
(38) ತಮ್ಮ ತಾಯಿಗೆ ಸಂದೇಶ ನೀಡಬೇಕಾದ ವಿಷಯವನ್ನು ನಾವು ಸಂದೇಶ ನೀಡಿದ ಸಂದರ್ಭ!
(39) ತಾವು ಅವರನ್ನು (ಮಗುವನ್ನು) ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ಹಾಕಿರಿ. ಆಗ ನದಿಯು ಆ ಪೆಟ್ಟಿಗೆಯನ್ನು ದಡಕ್ಕೆ ಒಯ್ಯುವುದು. ನನ್ನ ಮತ್ತು ಅವರ ಶತ್ರುವಾಗಿರುವವನು ಅವರನ್ನು ತೆಗೆದುಕೊಳ್ಳುವನು.(648) (ಓ ಮೂಸಾ!) ನನ್ನ ಕಡೆಯ ಪ್ರೀತಿಯನ್ನು ನಾನು ತಮ್ಮ ಮೇಲೆ ಇಟ್ಟಿರುವೆನು. ತಾವು ನನ್ನ ಮೇಲ್ನೋಟದಲ್ಲಿ ಬೆಳೆಯುವ ಸಲುವಾಗಿ.
648. ಇಸ್ರಾಈಲ್ ಜನಾಂಗದಲ್ಲಿ ಹುಟ್ಟುವ ಎಲ್ಲ ಗಂಡುಮಕ್ಕಳನ್ನೂ ಹತ್ಯೆ ಮಾಡಲು ಫಿರ್‍ಔನ್ (ಫರೋವ) ಆದೇಶ ಹೊರಡಿಸಿದ್ದನು. ಆದರೆ ಬನೂ ಇಸ್ರಾಈಲರ ವಿಮೋಚಕನೂ ಅಲ್ಲಾಹುವಿನ ಪ್ರವಾದಿಯೂ ಆದ ಮೂಸಾ(ಅ) ಶತ್ರುವಿನ ಅರಮನೆಯಲ್ಲೇ ಬೆಳೆಯಬೇಕೆಂಬುದು ಅಲ್ಲಾಹುವಿನ ವಿಧಿಯಾಗಿತ್ತು. ಅದನ್ನು ಜಾರಿಗೊಳಿಸುವುದಕ್ಕಾಗಿ ಮೂಸಾ(ಅ) ರನ್ನು ಹುಟ್ಟಿದ ತಕ್ಷಣ ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿಬಿಡಲು ಅವರ ತಾಯಿಗೆ ಆದೇಶ ನೀಡಿದನು.
(40) ತಮ್ಮ ಸಹೋದರಿ ನಡೆಯುತ್ತಾ ಬಂದು “ಇವನ (ಮಗುವಿನ) ಲಾಲನೆಪಾಲನೆಯನ್ನು ವಹಿಸುವ ಒಬ್ಬರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?” ಎಂದು ಕೇಳಿದ ಸಂದರ್ಭ. ತರುವಾಯ ನಾವು ತಮ್ಮನ್ನು ತಮ್ಮ ತಾಯಿಯ ಬಳಿಗೆ ಆಕೆಯ (ತಾಯಿಯ) ಕಣ್ಮನ ತಣಿಸಲು ಮತ್ತು ಆಕೆ ದುಃಖಿಸದಿರಲು ಮರಳಿಸಿದೆವು. ತಾವು ಒಬ್ಬ ವ್ಯಕ್ತಿಯನ್ನು ಕೊಂದಾಗ (ಅದರ) ದುಃಖದಿಂದ ನಾವು ತಮ್ಮನ್ನು ರಕ್ಷಿಸಿದೆವು. ಅನೇಕ ಪರೀಕ್ಷೆಗಳ ಮೂಲಕ ನಾವು ತಮ್ಮನ್ನು ಪರೀಕ್ಷಿಸಿದೆವು. ತರುವಾಯ ತಾವು ಮದ್‍ಯನ್ ಜನರೊಂದಿಗೆ ಹಲವು ವರ್ಷ ವಾಸಿಸಿದಿರಿ. ತರುವಾಯ ಓ ಮೂಸಾ! (ನನ್ನ) ತೀರ್ಮಾನದಂತೆ ತಾವು ಬಂದಿದ್ದೀರಿ!
(41) ನನ್ನ ಸ್ವಂತ ವಿಷಯಕ್ಕಾಗಿ ನಾನು ತಮ್ಮನ್ನು ಬೆಳೆಸಿರುವೆನು.
(42) ತಾವು ಮತ್ತು ತಮ್ಮ ಸಹೋದರ ನನ್ನ ದೃಷ್ಟಾಂತಗಳೊಂದಿಗೆ ತೆರಳಿರಿ. ನನ್ನನ್ನು ಸ್ಮರಿಸುವ ವಿಷಯದಲ್ಲಿ ತಾವು ಉದಾಸೀನರಾಗದಿರಿ.
(43) ನೀವಿಬ್ಬರೂ ಫಿರ್‍ಔನನ ಬಳಿಗೆ ಹೋಗಿರಿ. ಖಂಡಿತವಾಗಿಯೂ ಅವನು ಅತಿಕ್ರಮಿಯಾಗಿರುವನು.
(44) ನೀವು ಅವನೊಂದಿಗೆ ಸೌಮ್ಯವಾದ ಮಾತನ್ನು ಹೇಳಿರಿ. ಒಂದು ವೇಳೆ ಅವನು ಚಿಂತಿಸಿ ಗ್ರಹಿಸಲೂ ಬಹುದು ಅಥವಾ ಭಯಪಡಲೂಬಹುದು”.(649)
649. ಸತ್ಯದ ಧ್ವನಿಯು ಪ್ರಬಲವಾಗಬಹುದೇ ಎಂಬ ಭಯವು ಎಲ್ಲ ಸ್ವೇಚ್ಛಾಧಿಪತಿಗಳಿಗೂ ಇರುವಂತದ್ದೇ ಆಗಿದೆ.
(45) ಅವರಿಬ್ಬರು ಹೇಳಿದರು: “ನಮ್ಮ ಪ್ರಭೂ! ಅವನು (ಫಿರ್‍ಔನ್) ನಮ್ಮ ಮೇಲೆ ಮುಗಿಬೀಳುವನೋ ಅಥವಾ ಅತಿಕ್ರಮವೆಸಗುವನೋ ಎಂದು ನಾವು ಭಯಪಡುತ್ತಿರುವೆವು”.
(46) ಅವನು (ಅಲ್ಲಾಹು) ಹೇಳಿದನು: “ನೀವು ಭಯಪಡದಿರಿ. ಖಂಡಿತವಾಗಿಯೂ ನಾನು ನಿಮ್ಮೊಂದಿಗಿರುವೆನು. ನಾನು ಆಲಿಸುತ್ತಲೂ, ನೋಡುತ್ತಲೂ ಇರುವೆನು.
(47) ನೀವಿಬ್ಬರೂ ಅವನ ಬಳಿಗೆ ತೆರಳಿ ಹೇಳಿರಿ: “ಖಂಡಿತವಾಗಿಯೂ ನಾವು ತಮ್ಮ ರಬ್‌ನ ಸಂದೇಶವಾಹಕರಾಗಿರುವೆವು. ಆದುದರಿಂದ ಇಸ್ರಾಈಲ್ ಸಂತತಿಯನ್ನು ನಮ್ಮೊಂದಿಗೆ ಕಳುಹಿಸಿರಿ. ಅವರನ್ನು ಹಿಂಸಿಸದಿರಿ. ತಮ್ಮ ರಬ್‌ನ ಕಡೆಯ ದೃಷ್ಟಾಂತದೊಂದಿಗೆ ನಾವು ತಮ್ಮ ಬಳಿಗೆ ಬಂದಿರುವೆವು. ಸನ್ಮಾರ್ಗವನ್ನು ಅನುಸರಿಸಿದವರ ಮೇಲೆ ಶಾಂತಿಯಿರುವುದು.
(48) ನಿಷೇಧಿಸಿದವರಿಗೆ ಮತ್ತು ವಿಮುಖರಾದವರಿಗೆ ಶಿಕ್ಷೆಯಿರುವುದೆಂದು ಖಂಡಿತವಾಗಿಯೂ ನಮಗೆ ದಿವ್ಯಸಂದೇಶ ನೀಡಲಾಗಿದೆ”.
(49) ಅವನು (ಫಿರ್‍ಔನ್) ಕೇಳಿದನು: “ಓ ಮೂಸಾ! ಹಾಗಾದರೆ ನಿಮ್ಮಿಬ್ಬರ ರಬ್ ಯಾರು?”
(50) ಅವರು ಹೇಳಿದರು: “ಪ್ರತಿಯೊಂದು ವಸ್ತುವಿಗೂ ಅದರ ಗುಣಲಕ್ಷಣವನ್ನು ನೀಡಿ ತರುವಾಯ (ಅದಕ್ಕೆ) ಮಾರ್ಗದರ್ಶನ ಮಾಡಿದವನಾರೋ(650) ಅವನೇ ನಮ್ಮ ರಬ್”.
650. ಪರಮಾಣುವಿನಿಂದ ತೊಡಗಿ ಬ್ರಹತ್ ನಕ್ಷತ್ರಪುಂಜಗಳ ತನಕ ಪ್ರತಿಯೊಂದು ಪದಾರ್ಥವೂ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ಅನುಪಮ ಮಾರ್ಗದರ್ಶಿಯ ಅಸ್ತಿತ್ವನ್ನು ಸಾಬೀತುಪಡಿಸುತ್ತದೆ.
(51) ಅವನು ಹೇಳಿದನು: “ಹಾಗಾದರೆ ಗತ ತಲೆಮಾರುಗಳ ಸ್ಥಿತಿಯೇನು?”(651)
651. ಸಂಪ್ರದಾಯವಾದಿಗಳ ತುರುಪು ಎಲೆಯನ್ನು ಫಿರ್‍ಔನ್ ಇಲ್ಲಿ ಹಾಕುತ್ತಿದ್ದಾನೆ. ಅಂದರೆ ‘ಹಾಗಾದರೆ ನಮ್ಮ ಪೂರ್ವಿಕರೆಲ್ಲರೂ ದಾರಿಗೆಟ್ಟವರೇ?’ ಎಂಬ ಹಳೇ ರಾಗ.
(52) ಅವರು ಹೇಳಿದರು: “ಅವರ ಬಗ್ಗೆಯಿರುವ ಜ್ಞಾನವು ನನ್ನ ರಬ್‌ನ ಬಳಿ ಒಂದು ಗ್ರಂಥದಲ್ಲಿದೆ. ನನ್ನ ರಬ್ ಪ್ರಮಾದವೆಸಗಲಾರನು ಮತ್ತು ಅವನು (ಏನನ್ನೂ)ಮರೆಯಲಾರನು”.
(53) ಭೂಮಿಯನ್ನು ನಿಮಗೊಂದು ತೊಟ್ಟಿಲನ್ನಾಗಿ ಮಾಡಿಕೊಟ್ಟವನು, ಅದರಲ್ಲಿ ನಿಮಗೆ ದಾರಿಗಳನ್ನು ತೆರೆದುಕೊಟ್ಟವನು ಮತ್ತು ಆಕಾಶದಿಂದ (ಮಳೆ)ನೀರನ್ನು ಇಳಿಸಿಕೊಟ್ಟವನು. ತರುವಾಯ ಅದರ (ನೀರಿನ) ಮೂಲಕ ನಾವು (ಅಲ್ಲಾಹು) ವಿವಿಧ ತರಹದ ಸಸ್ಯಗಳಿಂದ ಜೋಡಿಗಳನ್ನು ಉತ್ಪಾದಿಸಿದೆವು.
(54) ನೀವು ತಿನ್ನಿರಿ ಮತ್ತು ನಿಮ್ಮ ಜಾನುವಾರುಗಳನ್ನು ಮೇಯಿಸಿರಿ. ಬುದ್ಧಿವಂತರಿಗೆ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
(55) ನಾವು ನಿಮ್ಮನ್ನು ಅದರಿಂದಲೇ (ಭೂಮಿಯಿಂದಲೇ) ಸೃಷ್ಟಿಸಿರುವೆವು, ನಿಮ್ಮನ್ನು ಅದರೆಡೆಗೇ ಮರಳಿಸುವೆವು ಮತ್ತು ಅದರಿಂದಲೇ ನಿಮ್ಮನ್ನು ಪುನಃ ಹೊರತರುವೆವು.
(56) ನಾವು ಅವನಿಗೆ (ಫಿರ್‍ಔನ್‍ಗೆ) ನಮ್ಮ ದೃಷ್ಟಾಂತಗಳನ್ನು ಒಂದೊಂದಾಗಿ ತೋರಿಸಿಕೊಟ್ಟೆವು. ಆದರೆ ಅವನು ನಿಷೇಧಿಸಿದನು ಮತ್ತು ನಿರಾಕರಿಸಿದನು.
(57) ಅವನು ಹೇಳಿದನು: “ಓ ಮೂಸಾ! ನೀನು ನಿನ್ನ ಮಾಂತ್ರಿಕತೆಯನ್ನು ಬಳಸಿ ನಮ್ಮನ್ನು ನಮ್ಮ ದೇಶದಿಂದ ಹೊರಗಟ್ಟುವ ಸಲುವಾಗಿ ನಮ್ಮ ಬಳಿಗೆ ಬಂದಿರುವೆಯಾ?
(58) ಹಾಗಾದರೆ ಅದಕ್ಕೆ ಸಮಾನವಾಗಿರುವ ಮಾಂತ್ರಿಕತೆಯನ್ನು ನಾವೂ ನಿನ್ನ ಬಳಿಗೆ ತರುವೆವು. ಆದುದರಿಂದ ನೀನು ನಮ್ಮ ಮತ್ತು ನಿನ್ನ ಮಧ್ಯೆ ಒಂದು ಅವಧಿಯನ್ನು ನಿಶ್ಚಯಿಸು. ಅದನ್ನು ನಾವಾಗಲಿ ನೀನಾಗಲಿ ಉಲ್ಲಂಘಿಸಬಾರದು. ಅದು ಮಧ್ಯಮವಾಗಿರುವ ಒಂದು ಸ್ಥಳದಲ್ಲಾಗಿರಲಿ”.(652)
652. ‘ಸಿವಾ’ ಮತ್ತು ‘ಸುವಾ’ ಎಂಬ ವಿಭಿನ್ನ ಪಾರಾಯಣಗಳಿವೆ. ‘ಮಕಾನನ್ ಸಿವಾ’ ಎಂದಾದರೆ ಬೇರೊಂದು ಸ್ಥಳ ಎಂದರ್ಥ. ‘ಮಕಾನನ್ ಸುವಾ’ ಎಂದಾದರೆ ಎರಡು ಗುಂಪಿಗೂ ಒಂದೇ ರೀತಿ ಅನುಕೂಲಕರವಾಗಿರುವ ಸ್ಥಳ ಅಥವಾ ಸಮತಟ್ಟಾದ ಪ್ರದೇಶ ಅಥವಾ ಎರಡು ಗುಂಪಿಗೂ ಒಪ್ಪಿಗೆಯಾದ ಸ್ಥಳ ಎಂದರ್ಥ.
(59) ಅವರು ಹೇಳಿದರು: “ನಿಮಗಿರುವ ಅವಧಿಯು ಉತ್ಸವ ದಿನವಾಗಿದೆ.(653) (ಅಂದು) ಪೂರ್ವಾಹ್ನ ಜನರನ್ನು ಒಟ್ಟುಗೂಡಿಸಲಾಗಲಿ”.
653. ಒಂದೇ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಜನರಿಗೆ ಮಾಂತ್ರಿಕತೆಯ ವಿರುದ್ಧ ಅಲ್ಲಾಹುವಿನ ದೃಷ್ಟಾಂತದ ಶಕ್ತಿಯನ್ನು ತೋರಿಸಿಕೊಡಬಹುದೆಂಬ ಉದ್ದೇಶದಿಂದ ನಾಡಹಬ್ಬದ ದಿನವನ್ನು ಅವರು ಆರಿಸಿಕೊಂಡರು.
(60) ತರುವಾಯ ಫಿರ್‍ಔನ್ ನಿರ್ಗಮಿಸಿದನು. ತನ್ನ ತಂತ್ರವನ್ನು ಒಟ್ಟುಗೂಡಿಸಿದನು. ನಂತರ ಅವನು (ನಿಶ್ಚಿತ ಸಮಯಕ್ಕೆ) ಬಂದನು.
(61) ಮೂಸಾ ಅವರೊಂದಿಗೆ ಹೇಳಿದರು: “ನಿಮಗೆ ವಿನಾಶ ಕಾದಿದೆ! ನೀವು ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆಯದಿರಿ. ಹಾಗೆ ಮಾಡಿದರೆ ಯಾವುದಾದರೂ ಒಂದು ಶಿಕ್ಷೆಯ ಮೂಲಕ ಅವನು ನಿಮ್ಮನ್ನು ನಾಶ ಮಾಡುವನು. ಸುಳ್ಳನ್ನು ಹೆಣೆಯುವವನಾರೋ ಅವನು ಖಂಡಿತವಾಗಿಯೂ ಪರಾಭವಗೊಂಡಿರುವನು”.
(62) (ಇದನ್ನು ಕೇಳಿದಾಗ) ಅವರು (ಜನರು) ಪರಸ್ಪರ ತಮ್ಮೊಳಗೆ ಭಿನ್ನಮತ ತಾಳಿದರು.(654) ಅವರು ರಹಸ್ಯ ಸಂಭಾಷಣೆ ಮಾಡತೊಡಗಿದರು.
654. ಪ್ರವಾದಿ ಮೂಸಾ(ಅ) ರವರ ಎಚ್ಚರಿಕೆಯನ್ನು ಆಲಿಸಿದಾಗ ಕೆಲವರಿಗೆ ಅವರನ್ನು ವಿರೋಧಿಸುವುದರ ಬಗ್ಗೆ ಭಿನ್ನಮತವುಂಟಾಯಿತು. ಆದರೆ ಕೊನೆಗೆ ದುರಭಿಮಾನದಿಂದಾಗಿ ಅವರು ಅದಕ್ಕೆ ಒಪ್ಪಿಕೊಂಡರು.
(63) (ತರುವಾಯ) ಅವರು ಹೇಳಿದರು: “ಖಂಡಿತವಾಗಿಯೂ ಇವರಿಬ್ಬರೂ ಮಾಂತ್ರಿಕರಾಗಿರುವರು. ಇವರು ತಮ್ಮ ಮಾಂತ್ರಿಕತೆಯಿಂದ ನಿಮ್ಮನ್ನು ನಿಮ್ಮ ದೇಶದಿಂದ ಹೊರಗಟ್ಟಲು ಮತ್ತು ನಿಮ್ಮ ಮಾದರಿಯೋಗ್ಯವಾದ ಸಂಪ್ರದಾಯವನ್ನು ನಾಶ ಮಾಡಲು ಬಯಸುತ್ತಿರುವರು.
(64) ಆದುದರಿಂದ ನೀವು ನಿಮ್ಮ ತಂತ್ರವನ್ನು ಒಕ್ಕೊರಲಿನಿಂದ ನಿರ್ಧರಿಸಿರಿ. ತರುವಾಯ ಒಂದೇ ಸಾಲಿನಲ್ಲಿ ಬನ್ನಿರಿ. ಮೇಲುಗೈ ಸಾಧಿಸಿದವರೇ ಇಂದು ಜಯಗಳಿಸುವರು”.
(65) ಅವರು (ಮಾಂತ್ರಿಕರು) ಹೇಳಿದರು: “ಓ ಮೂಸಾ! ಒಂದೋ ತಾವು ಹಾಕಿರಿ ಅಥವಾ ಮೊದಲು ಹಾಕುವವರು ನಾವಾಗುವೆವು”.
(66) ಅವರು (ಮೂಸಾ) ಹೇಳಿದರು: “ಅಲ್ಲ, ನೀವು ಹಾಕಿರಿ”. ಆಗ ಅಗೋ! ಅವರ ಮಾಂತ್ರಿಕತೆಯಿಂದಾಗಿ ಅವರ ಹಗ್ಗಗಳು ಮತ್ತು ಬೆತ್ತಗಳು ಚಲಿಸುತ್ತಿರುವುದಾಗಿ ಅವರಿಗೆ ಭಾಸವಾಯಿತು.
(67) ಆಗ ಮೂಸಾರಿಗೆ ತಮ್ಮ ಮನದಲ್ಲಿ ಭಯ ಮೂಡಿತು.
(68) ನಾವು ಹೇಳಿದೆವು: “ಭಯಪಡದಿರಿ. ಖಂಡಿತವಾಗಿಯೂ ಮೇಲುಗೈ ಸಾಧಿಸುವವರು ತಾವೇ ಆಗಿದ್ದೀರಿ.
(69) ತಾವು ತಮ್ಮ ಬಲಗೈಯ್ಯಲ್ಲಿರುವುದನ್ನು (ಬೆತ್ತವನ್ನು) ಹಾಕಿರಿ. ಅವರು ನಿರ್ಮಿಸಿದ್ದೆಲ್ಲವನ್ನೂ ಅದು ನುಂಗುವುದು”. ಅವರು ಮಾಡಿರುವುದು ಮಾಂತ್ರಿಕನ ತಂತ್ರ ಮಾತ್ರವಾಗಿದೆ. ಮಾಂತ್ರಿಕನು ಎಲ್ಲೇ ಹೋದರೂ ಯಶಸ್ವಿಯಾಗಲಾರನು.
(70) ಆಗ ಮಾಂತ್ರಿಕರು ಸಾಷ್ಟಾಂಗ ಬಿದ್ದರು. ಅವರು ಹೇಳಿದರು: “ನಾವು ಹಾರೂನ್ ಮತ್ತು ಮೂಸಾರ ರಬ್‌ನಲ್ಲಿ ವಿಶ್ವಾಸವಿಟ್ಟಿರುವೆವು”.
(71) ಅವನು ಹೇಳಿದನು: “ನಾನು ನಿಮಗೆ ಅನುಮತಿ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಟ್ಟಿರಾ? ಖಂಡಿತವಾಗಿಯೂ ಅವನು ನಿಮಗೆ ಮಾಂತ್ರಿಕತೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿರುವನು. ಆದುದರಿಂದ ಖಂಡಿತವಾಗಿಯೂ ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸುವೆನು ಮತ್ತು ಖರ್ಜೂರ ಮರದ ಕಾಂಡದಲ್ಲಿ ನಿಮ್ಮನ್ನು ಶಿಲುಬೆಗೇರಿಸುವೆನು. ನಮ್ಮಲ್ಲಿ ಅತಿಕಠಿಣವಾದ ಮತ್ತು ದೀರ್ಘಕಾಲ ಅವಶೇಷಿಸುವ ಶಿಕ್ಷೆಯನ್ನು ನೀಡುವವನು ಯಾರೆಂದು(655) ಖಂಡಿತವಾಗಿಯೂ ನೀವು ಅರಿಯಲಿದ್ದೀರಿ”.
655. ಅತಿ ಕಠೋರವಾದ ಶಿಕ್ಷೆಯನ್ನು ನೀಡುವ ಸಾಮರ್ಥ್ಯವಿರುವುದು ನನಗೋ, ಮೂಸಾರಿಗೋ ಅಥವಾ ಮೂಸಾರ ದೇವರಿಗೋ ಎಂಬುದನ್ನು ನೀವು ಅರಿತುಕೊಳ್ಳುವಿರಿ ಎಂದರ್ಥ.
(72) ಅವರು ಹೇಳಿದರು: “ನಮ್ಮ ಬಳಿಗೆ ಬಂದಿರುವ ಪ್ರತ್ಯಕ್ಷ ಪುರಾವೆಗಳಿಗಿಂತಲೂ ಮತ್ತು ನಮ್ಮನ್ನು ಸೃಷ್ಟಿಸಿದವನಿಗಿಂತಲೂ ಹೆಚ್ಚಿನ ಆದ್ಯತೆಯನ್ನು ನಾವು ತಮಗೆಂದೂ ನೀಡಲಾರೆವು. ಆದುದರಿಂದ ತಾವು ಏನನ್ನು ವಿಧಿಸುವಿರೋ ಅದನ್ನು ವಿಧಿಸಿರಿ. ತಮಗೆ ವಿಧಿಸಲು ಸಾಧ್ಯವಾಗುವುದು ಇಹಲೋಕ ಜೀವನದಲ್ಲಿ ಮಾತ್ರವಾಗಿದೆ.
(73) ನಾವು ಮಾಡಿದ ಪಾಪಗಳನ್ನು ಮತ್ತು ತಾವು ನಮ್ಮಿಂದ ಬಲವಂತವಾಗಿ ಮಾಡಿಸಿದ ಮಾಂತ್ರಿಕತೆಯನ್ನು ಅವನು ನಮಗೆ ಕ್ಷಮಿಸುವ ಸಲುವಾಗಿ ನಾವು ನಮ್ಮ ರಬ್‌ನಲ್ಲಿ ವಿಶ್ವಾಸವಿಟ್ಟಿರುವೆವು. ಅಲ್ಲಾಹು ಅತ್ಯುತ್ತಮನೂ, ಶಾಶ್ವತವಾಗಿ ಅಸ್ತಿತ್ವದಲ್ಲಿರುವವನೂ ಆಗಿರುವನು.(656)
656. ಅತ್ಯುತ್ತಮವಾದ ಪ್ರತಿಫಲವನ್ನು ನೀಡುವವನು ಮತ್ತು ಶಾಶ್ವತವಾಗಿರುವ ಶಿಕ್ಷೆ ನೀಡುವವನು ಎಂದೂ ಅರ್ಥೈಸಬಹುದಾಗಿದೆ.
(74) ಖಂಡಿತವಾಗಿಯೂ ಯಾರು ತನ್ನ ರಬ್‌ನ ಬಳಿಗೆ ಅಪರಾಧಿಯಾಗಿ ಬರುವನೋ ಅವನಿಗಿರುವುದು ನರಕಾಗ್ನಿಯಾಗಿದೆ. ಅವನು ಅದರಲ್ಲಿ ಮರಣಹೊಂದುವುದೋ ಜೀವಿಸುವುದೋ ಇಲ್ಲ.
(75) ಯಾರು ಅವನ ಬಳಿಗೆ ಸತ್ಯವಿಶ್ವಾಸಿಯಾಗಿಯೂ, ಸತ್ಕರ್ಮವೆಸಗಿದವನಾಗಿಯೂ ಬರುವನೋ ಅಂತಹವರಿಗೆ ಉನ್ನತ ಪದವಿಗಳಿರುವುವು.
(76) ತಳಭಾಗದಿಂದ ನದಿಗಳು ಹರಿಯುವ ಶಾಶ್ವತವಾಗಿರುವ ಸ್ವರ್ಗೋದ್ಯಾನಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಪರಿಶುದ್ಧಿ ಗಳಿಸಿದವರಿಗಿರುವ ಪ್ರತಿಫಲವಾಗಿದೆ.
(77) ನಾವು ಮೂಸಾರಿಗೆ ದಿವ್ಯಸಂದೇಶವನ್ನು ನೀಡಿದೆವು: “ರಾತ್ರಿ ವೇಳೆಯಲ್ಲಿ ನನ್ನ ದಾಸರೊಂದಿಗೆ ಹೊರಡಿರಿ. ತರುವಾಯ ಅವರಿಗೆ ಸಮುದ್ರದ ಮೂಲಕ ಒಂದು ಒಣಗಿದ ಹಾದಿಯನ್ನು(657) ಮಾಡಿಕೊಡಿರಿ. (ಶತ್ರುಗಳು) ಹಿಂಬಾಲಿಸಿ ಬರುವರೆಂದು ತಾವು ಭಯಪಡದಿರಿ. ತಾವು (ಏನನ್ನೂ) ಭಯಪಡದಿರಿ”.
657. ನೀರು ಎರಡು ಕಡೆಗೆ ಸರಿದು ನಿಂತು ನಡುವೆ ಉಂಟಾದ ಒಣಗಿದ ಹಾದಿ.
(78) ಆಗ ಫಿರ್‍ಔನ್ ತನ್ನ ಸೈನ್ಯದೊಂದಿಗೆ ಅವರನ್ನು ಹಿಂಬಾಲಿಸಿದನು. ಆಗ ಸಮುದ್ರದಿಂದ ಅವರನ್ನು ಬಾಧಿಸಿದ್ದೆಲ್ಲವೂ ಅವರನ್ನು ಬಾಧಿಸಿತು.
(79) ಫಿರ್‍ಔನ್ ತನ್ನ ಜನರನ್ನು ಪಥಭ್ರಷ್ಟಗೊಳಿಸಿದನು. ಅವನು ಅವರನ್ನು ಸನ್ಮಾರ್ಗದೆಡೆಗೆ ಮುನ್ನಡೆಸಲಿಲ್ಲ.
(80) ಓ ಬನೂ ಇಸ್ರಾಈಲರೇ! ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದೆವು. ತೂರ್ ಪರ್ವತದ ಬಲಭಾಗವನ್ನು ನಾವು ನಿಮಗೆ ವಾಗ್ದಾನ ಮಾಡಿದೆವು.(658) ಮನ್ನ ಮತ್ತು ಸಲ್ವಾವನ್ನು ನಾವು ನಿಮಗೆ ಇಳಿಸಿಕೊಟ್ಟೆವು.
658. ಅಲ್ಲಾಹುವಿನ ವಿಧಿ ನಿಷೇಧಗಳನ್ನು ಪಾಲಿಸಿ ಸೀನಾ ಕಣಿವೆಯಲ್ಲಿ ವಾಸಿಸಲು ಅವರಿಗೆ ವ್ಯವಸ್ಥೆ ಮಾಡಿಕೊಟ್ಟನು.
(81) ನಾವು ನಿಮಗೆ ಒದಗಿಸಿರುವ ಉತ್ತಮವಾದ ವಸ್ತುಗಳಿಂದ ತಿನ್ನಿರಿ. ಆದರೆ ಅದರಲ್ಲಿ ಮಿತಿಮೀರದಿರಿ. (ಮಿತಿಮೀರಿದರೆ) ನನ್ನ ಕ್ರೋಧವು ನಿಮ್ಮ ಮೇಲೆ ಇಳಿಯುವುದು. ಯಾರ ಮೇಲೆ ನನ್ನ ಕ್ರೋಧವು ಇಳಿಯುವುದೋ ಅವನು ನಾಶವಾಗಿ ಹೋಗುವನು.
(82) ಪಶ್ಚಾತ್ತಾಪಪಡುವವರಿಗೆ, ವಿಶ್ವಾಸವಿಡುವವರಿಗೆ ಮತ್ತು ಸತ್ಕರ್ಮವೆಸಗುವವರಿಗೆ, ತರುವಾಯ ಸನ್ಮಾರ್ಗದಲ್ಲಿ ಅಚಲವಾಗಿ ನೆಲೆಗೊಳ್ಳುವವರಿಗೆ ಖಂಡಿತವಾಗಿಯೂ ನಾನು ಅತ್ಯಧಿಕವಾಗಿ ಕ್ಷಮಿಸುವೆನು.
(83) (ಅಲ್ಲಾಹು ಕೇಳಿದನು): “ಓ ಮೂಸಾ! ತಾವು ತಮ್ಮ ಜನರನ್ನು ಬಿಟ್ಟು ಆತುರಪಟ್ಟು ಬರಲು ಕಾರಣವೇನು?”
(84) ಅವರು ಹೇಳಿದರು: “ಅವರು ನನ್ನ ಹಿಂದೆಯೇ ಇರುವರು. ನನ್ನ ಪ್ರಭೂ! ನೀನು ಸಂತೃಪ್ತನಾಗುವ ಸಲುವಾಗಿ ನಾನು ನಿನ್ನ ಬಳಿಗೆ ಆತುರಪಟ್ಟು ಬಂದಿರುವೆನು”.
(85) ಅಲ್ಲಾಹು ಹೇಳಿದನು: “ಆದರೆ ತಾವು ಹೋದ ಬಳಿಕ ನಾವು ತಮ್ಮ ಜನರನ್ನು ಪರೀಕ್ಷಿಸಿದೆವು. ಸಾಮಿರೀ ಅವರನ್ನು ಪಥಭ್ರಷ್ಟಗೊಳಿಸಿದನು”.
(86) ಆಗ ಮೂಸಾ ತಮ್ಮ ಜನರ ಬಳಿಗೆ ಕುಪಿತರಾಗಿ ಮತ್ತು ದುಃಖಿತರಾಗಿ ಮರಳಿದರು. ಅವರು ಹೇಳಿದರು: “ಓ ನನ್ನ ಜನರೇ! ನಿಮ್ಮ ರಬ್ ನಿಮಗೊಂದು ಉತ್ತಮವಾದ ವಾಗ್ದಾನವನ್ನು ನೀಡಿಲ್ಲವೇ? ಆದರೂ ನಿಮಗೆ ಅವಧಿಯು ದೀರ್ಘವಾಗಿ ಹೋಯಿತೇ? ಅಥವಾ ನಿಮ್ಮ ರಬ್‌ನ ಕಡೆಯ ಕ್ರೋಧವು ನಿಮ್ಮ ಮೇಲೆ ಇಳಿಯಲೆಂದು ಆಶಿಸಿ ನೀವು ನನ್ನೊಂದಿಗಿನ ಕರಾರನ್ನು ಉಲ್ಲಂಘಿಸಿದಿರಾ?”
(87) ಅವರು ಹೇಳಿದರು: “ನಾವು ನಮ್ಮಿಷ್ಟ ಪ್ರಕಾರ ತಮ್ಮೊಂದಿಗಿನ ಕರಾರನ್ನು ಉಲ್ಲಂಘಿಸಿಲ್ಲ. ಆದರೆ ಆ ಜನತೆಯ ಆಭರಣಗಳ ಹೊರೆಗಳನ್ನು ನಮ್ಮ ಮೇಲೆ ಹೊರಿಸಲಾಗಿತ್ತು.(659) ತರುವಾಯ ನಾವು ಅದನ್ನು (ಬೆಂಕಿಗೆ) ಎಸೆದೆವು. ಆಗ ಸಾಮಿರೀ ಕೂಡ ಅದೇ ರೀತಿ ಅದನ್ನು (ಬೆಂಕಿಗೆ) ಎಸೆದನು.(660)
659. ಫಿರ್‍ಔನನ ವಂಶಜರಾದ ಕಿಬ್ತೀ (ಕೋಪ್ಟಿಕ್)ಗಳ ಆಭರಣಗಳನ್ನು ಸಾಲವಾಗಿ ಪಡೆದು ಇಸ್ರಾಈಲರು ಪಲಾಯನ ಮಾಡಿದ್ದರು. ತಮಗೆ ಮದುವೆಯೊಂದರಲ್ಲಿ ಭಾಗವಹಿಸಲಿದೆಯೆಂದು ಹೇಳಿ ಅವರು ಅಲ್ಲಿಂದ ಓಡಿದ್ದರು. ಕಿಬ್ತೀಗಳಿಗೆ ಸಂದೇಹ ಉಂಟಾಗದಿರಲು ಇಸ್ರಾಈಲರು ಹೀಗೆ ತಂತ್ರ ಹೂಡಿದ್ದರು. ಸಮುದ್ರ ದಾಟಿ ಸೀನಾ ತಲುಪಿದ ಬಳಿಕ ಆ ಆಭರಣಗಳನ್ನು ಒಟ್ಟುಸೇರಿಸಿ ಬೆಂಕಿಗೆಸೆಯಲು ಅವರಿಗೆ ಆದೇಶ ನೀಡಲಾಯಿತು. 660. ಸಾಮಿರೀ ಇಸ್ರಾಈಲರ ಪೈಕಿ ಹೃದಯದಲ್ಲಿ ವಿಶ್ವಾಸವಿಲ್ಲದ ಒಬ್ಬ ಕಪಟವಿಶ್ವಾಸಿಯಾಗಿದ್ದನು.
(88) ತರುವಾಯ ಅವನು ಅವರಿಗೆ (ಅದರಿಂದ) ಹೂಂಕರಿಸುವ ಕರುವಿನ ಮೂರ್ತಿಯನ್ನು ನಿರ್ಮಿಸಿಕೊಟ್ಟನು.(661) ಆಗ ಅವರು (ಪರಸ್ಪರ) ಹೇಳಿದರು: “ಇದೇ ನಿಮ್ಮ ದೇವರು ಮತ್ತು ಮೂಸಾರ ದೇವರು. ಆದರೆ ಅವರು (ಮೂಸಾ) ಮರೆತುಬಿಟ್ಟಿರುವರು”.
661. ಆ ಲೋಹನಿರ್ಮಿತ ಕರುವಿನ ಒಳಭಾಗಕ್ಕೆ ಗಾಳಿ ಪ್ರವೇಶಿಸಿದಾಗ ಅದರಿಂದ ಹೂಂಕರಿಸುವಂತಹ ಸದ್ದು ಹೊರಡುತ್ತಿತ್ತು.
(89) ಆದರೆ ಅದು ಅವರೊಂದಿಗೆ ಒಂದು ಮಾತನ್ನು ಸಹ ಆಡುವುದಿಲ್ಲ ಮತ್ತು ಅವರಿಗೆ ಯಾವುದೇ ಹಾನಿಯನ್ನಾಗಲಿ, ಲಾಭವನ್ನಾಗಲಿ ಮಾಡಲು ಅದಕ್ಕೆ ಸಾಮರ್ಥ್ಯವಿಲ್ಲವೆಂದು ಅವರು ಕಾಣುವುದಿಲ್ಲವೇ?
(90) ಇದಕ್ಕಿಂತ ಮುಂಚೆ ಹಾರೂನ್ ಅವರೊಂದಿಗೆ ಹೇಳಿದ್ದರು: “ಓ ನನ್ನ ಜನರೇ! ಇದರ (ಈ ಕರುವಿನ) ಮೂಲಕ ನಿಮ್ಮನ್ನು ಪರೀಕ್ಷಿಸಲಾಗುತ್ತಿದೆ. ಖಂಡಿತವಾಗಿಯೂ ನಿಮ್ಮ ರಬ್ ಪರಮ ದಯಾಮಯನಾಗಿರುವನು. ಆದುದರಿಂದ ನೀವು ನನ್ನನ್ನು ಅನುಸರಿಸಿರಿ ಮತ್ತು ನನ್ನ ಆಜ್ಞೆಯನ್ನು ಪಾಲಿಸಿರಿ”.
(91) ಅವರು ಹೇಳಿದರು: “ಮೂಸಾ ನಮ್ಮ ಬಳಿಗೆ ಮರಳಿ ಬರುವ ತನಕ ನಾವು ಇದನ್ನು ಪೂಜಿಸುತ್ತಲೇ ಇರುವೆವು”.
(92) ಅವರು (ಮೂಸಾ) ಹೇಳಿದರು: “ಓ ಹಾರೂನ್! ಇವರು ದಾರಿತಪ್ಪುವುದನ್ನು ಕಂಡಾಗ ನಿನ್ನನ್ನು ತಡೆದಿರುವುದಾದರೂ ಏನು?(662)
662. ಇದರರ್ಥ ಅವರನ್ನು ಅವರ ಪಾಡಿಗೆ ಬಿಟ್ಟು ನಿನಗೆ ನನ್ನ ಬಳಿ ಬರಬಾರದಾಗಿತ್ತೇ ಎಂದಾಗಿರಬಹುದು. ನೀನು ಯಾಕೆ ನನ್ನ ಆಜ್ಞೆಯನ್ನು ಪಾಲಿಸಲಿಲ್ಲ ಎಂದೂ ಆಗಿರಬಹುದು.
(93) ನನ್ನನ್ನು ಅನುಸರಿಸದಿರುವಂತೆ. ನೀನು ನನ್ನ ಆಜ್ಞೆಯನ್ನು ಧಿಕ್ಕರಿಸಿಬಿಟ್ಟೆಯಾ?”
(94) ಅವರು ಹೇಳಿದರು: “ಓ ನನ್ನ ತಾಯಿಯ ಮಗನೇ! ತಾವು ನನ್ನ ಗಡ್ಡವನ್ನಾಗಲಿ ನನ್ನ ತಲೆಯನ್ನಾಗಲಿ ಹಿಡಿಯದಿರಿ. “ನೀನು ಇಸ್ರಾಈಲ್ ಸಂತತಿಗಳ ಮಧ್ಯೆ ಒಡಕನ್ನುಂಟು ಮಾಡಿರುವೆ. ನನ್ನ ಆಜ್ಞೆಗಾಗಿ ನೀನು ಕಾಯಲಿಲ್ಲ” ಎಂದು ತಾವು ಹೇಳುವಿರೆಂದು ನಾನು ಭಯಪಟ್ಟೆನು”.
(95) (ತರುವಾಯ) ಅವರು (ಸಾಮಿರೀಯೊಂದಿಗೆ) ಕೇಳಿದರು: “ಓ ಸಾಮಿರೀ! ನಿನ್ನ ವಿಷಯವೇನು?”
(96) ಅವನು ಹೇಳಿದನು: “ಅವರು (ಜನರು) ಕಾಣದಿರುವುದನ್ನು ನಾನು ಕಂಡೆನು.(663) ತರುವಾಯ ಅಲ್ಲಾಹುವಿನ ದೂತನ ಹೆಜ್ಜೆಗುರುತಿನಿಂದ ನಾನೊಂದು ಹಿಡಿಯನ್ನು ಹಿಡಿದು ಅದಕ್ಕೆ ಹಾಕಿಬಿಟ್ಟೆನು.(664) ಹೀಗೆ ಮಾಡಲು ನನ್ನ ಮನಸ್ಸು ನನ್ನನ್ನು ಪ್ರೇರೇಪಿಸಿತು”.
663. ಇದರರ್ಥ ಜನಸಾಮಾನ್ಯರಿಗೆ ತಿಳಿದಿರದ ಕೆಲವು ತಂತ್ರಗಳನ್ನು ನಾನು ಕರಗತ ಮಾಡಿಕೊಂಡೆನು ಎಂದಾಗಿರಬಹುದು. 664. ‘ಅಲ್ಲಾಹುವಿನ ಮಲಕ್ ಆಗಿರುವ ಜಿಬ್ರೀಲ್(ಅ) ರವರ ಹೆಜ್ಜೆಗುರುತಿನಿಂದ ಒಂದು ಹಿಡಿ ಮಣ್ಣನ್ನು ತೆಗೆದು ಕಾಯಿಸಿದ ಲೋಹಕ್ಕೆ ಹಾಕಿದೆನು’ ಎಂದು ಹೆಚ್ಚಿನ ವ್ಯಾಖ್ಯಾನಕಾರರು ಇದನ್ನು ವ್ಯಾಖ್ಯಾನಿಸಿದ್ದಾರೆ.
(97) ಅವರು ಹೇಳಿದರು: “ಹಾಗಾದರೆ ಹೊರಟು ಹೋಗು! ಖಂಡಿತವಾಗಿಯೂ ನಿನಗೆ ಈ ಜೀವನದಲ್ಲಿರುವುದು “ಸ್ಪರ್ಶಿಸದಿರಿ” ಎಂದು ಹೇಳುವುದು ಮಾತ್ರವಾಗಿದೆ.(665) ಖಂಡಿತವಾಗಿಯೂ ಉಲ್ಲಂಘಿಸಲಾಗದ ಒಂದು ನಿಶ್ಚಿತ ಅವಧಿಯು ನಿನಗಿದೆ. ನೀನು ಪೂಜಿಸುತ್ತಲೇ ಇರುವ ಆ ನಿನ್ನ ದೇವರೆಡೆಗೆ ನೋಡು. ಖಂಡಿತವಾಗಿಯೂ ನಾವದನ್ನು ಸುಟ್ಟುಹಾಕುವೆವು. ತರುವಾಯ ಅದನ್ನು ಪುಡಿ ಪುಡಿ ಮಾಡಿ ಸಮುದ್ರದಲ್ಲಿ ಚೆಲ್ಲುವೆವು”.
665. ‘ಲಾಮಿಸಾಸ’ ಎಂಬುದರ ಅರ್ಥವು ಪರಸ್ಪರ ಸ್ಪರ್ಶವಿಲ್ಲ ಅಥವಾ ಪರಸ್ಪರ ಸಂಪರ್ಕವಿಲ್ಲ ಎಂದಾಗಿದೆ. ಪ್ರವಾದಿ ಮೂಸಾ(ಅ) ರವರು ಸಾಮಿರೀಗೆ ಸಂಪೂರ್ಣ ಬಹಿಷ್ಕಾರವನ್ನು ಘೋಷಿಸಿದರು ಮತ್ತು ಅದರಿಂದಾಗಿ ಅವನು ಜೀವನಪರ್ಯಂತ ಜನರೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ಕಡಿದುಕೊಂಡವನಂತೆ ಬದುಕಬೇಕಾಗಿ ಬಂತು ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ.
(98) ನಿಮ್ಮ ಆರಾಧ್ಯನು ಅಲ್ಲಾಹು ಮಾತ್ರವಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನೂ ಆವರಿಸುವಷ್ಟು ವಿಶಾಲವಾಗಿದೆ.
(99) ಹೀಗೆ ಗತ ಚರಿತ್ರೆಗಳ ವೃತ್ತಾಂತಗಳಿಂದ ನಾವು ತಮಗೆ ವಿವರಿಸಿಕೊಡುವೆವು. ಖಂಡಿತವಾಗಿಯೂ ನಾವು ತಮಗೆ ನಮ್ಮ ಕಡೆಯ ಸಂದೇಶವನ್ನು ನೀಡಿರುವೆವು.
(100) ಯಾರು ಅದರಿಂದ ವಿಮುಖನಾಗುವನೋ ಅವನು ಖಂಡಿತವಾಗಿಯೂ ಪುನರುತ್ಥಾನ ದಿನದಂದು (ಪಾಪದ) ಹೊರೆಯನ್ನು ಹೊರುವನು.
(101) ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಪುನರುತ್ಥಾನ ದಿನದ ಅವರ ಆ ಹೊರೆಯು ಎಷ್ಟು ನಿಕೃಷ್ಟವಾದುದು!
(102) ಕಹಳೆಯಲ್ಲಿ ಊದಲಾಗುವ ದಿನ!. ಅಂದು ನಾವು ಅಪರಾಧಿಗಳನ್ನು ನೀಲಿ ಬಣ್ಣದವರನ್ನಾಗಿ ಒಟ್ಟುಗೂಡಿಸುವೆವು.
(103) ಅವರು ಪರಸ್ಪರ ಪಿಸುಗುಡುತ್ತಾ ಹೇಳುವರು: “ನೀವು (ಭೂಮಿಯಲ್ಲಿ) ಹತ್ತು ದಿನಗಳವರೆಗಲ್ಲದೆ ತಂಗಿಲ್ಲ”.
(104) ಅವರಲ್ಲಿ ಅತ್ಯುತ್ತಮ ನಿಲುವನ್ನು ಹೊಂದಿರುವವನು “ನೀವು ವಾಸಿಸಿರುವುದು ಒಂದೇ ಒಂದು ದಿನ ಮಾತ್ರವಾಗಿದೆ”(666) ಎಂದು ಹೇಳುವಾಗ ಅವರು ಹೇಳುವುದರ ಬಗ್ಗೆ ನಾವು ಚೆನ್ನಾಗಿ ಅರಿತಿರುವೆವು.
666. ಅನಂತ ದಿನವನ್ನು ತಲುಪುವಾಗ ಐಹಿಕ ಜೀವನವು ಒಂದು ದಿನದಷ್ಟಾಗಿತ್ತೆಂದು ಅವರಿಗೆ ಭಾಸವಾಗುವುದು.
(105) ಅವರು ತಮ್ಮೊಂದಿಗೆ ಪರ್ವತಗಳ ಬಗ್ಗೆ ಕೇಳುವರು. ತಾವು ಹೇಳಿರಿ: “ನನ್ನ ರಬ್ ಅವುಗಳನ್ನು ಧೂಳಿಯಾಗಿಸಿ ಚದುರಿಸಿ ಬಿಡುವನು”.
(106) ತರುವಾಯ ಅವನು ಅದನ್ನು ಸಮತಟ್ಟಾದ ಬಯಲನ್ನಾಗಿ ಮಾಡುವನು.
(107) ತಾವು ಅದರಲ್ಲಿ ಇಳಿಯುವಿಕೆಯನ್ನಾಗಲಿ ಏರುವಿಕೆಯನ್ನಾಗಲಿ ಕಾಣಲಾರಿರಿ.
(108) ಅಂದು ಅವರು ಕರೆ ನೀಡುವಾತನನ್ನು ಯಾವುದೇ ವಕ್ರತೆಯನ್ನು ತೋರಿಸದೆ ಹಿಂಬಾಲಿಸುವರು. ಧ್ವನಿಗಳೆಲ್ಲವೂ ಪರಮ ದಯಾಮಯನಿಗೆ ಶರಣಾಗಿ ಬಿಡುವುವು. ಆದುದರಿಂದ ತಾವು ಪಿಸುಗುಡುವ ಸದ್ದಿನ ಹೊರತು ಬೇರೇನನ್ನೂ ಆಲಿಸಲಾರಿರಿ.
(109) ಅಂದು ಪರಮ ದಯಾಮಯನು ಯಾರ ಪರವಾಗಿ ಅನುಮತಿ ನೀಡುವನೋ ಮತ್ತು ಯಾರ ಮಾತನ್ನು ಇಷ್ಟಪಡುವನೋ ಅವನಿಗೇ ಹೊರತು ಶಿಫಾರಸು ಪ್ರಯೋಜನಕಾರಿಯಾಗಲಾರದು.
(110) ಅವರ ಮುಂದಿರುವುದನ್ನೂ, ಹಿಂದಿರುವುದನ್ನೂ ಅವನು ಅರಿಯುವನು. ಅದರ ಬಗ್ಗೆ ಸಂಪೂರ್ಣವಾಗಿ ಏನನ್ನೂ ಅರಿತುಕೊಳ್ಳಲು ಅವರಿಗೆ ಸಾಧ್ಯವಾಗದು.
(111) ಎಂದೆಂದಿಗೂ ಬದುಕಿರುವವನು ಮತ್ತು ಎಲ್ಲವನ್ನೂ ನಿಯಂತ್ರಿಸುವವನಿಗೆ ಮುಖಗಳು ಶರಣಾಗತವಾಗಿವೆ. ಅಕ್ರಮದ ಹೊರೆಯನ್ನು ಹೊತ್ತವನು ಪರಾಭವ ಹೊಂದಿದನು.
(112) ಯಾರಾದರೂ ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮಗಳಲ್ಲಿ ಏನನ್ನಾದರೂ ಮಾಡಿದರೆ ಅವನು ಅಕ್ರಮವನ್ನಾಗಲಿ ಅನ್ಯಾಯವನ್ನಾಗಲಿ ಭಯಪಡಬೇಕಾಗಿ ಬರದು.
(113) ಹೀಗೆ ನಾವು ಇದನ್ನು ಅರಬಿಯಲ್ಲಿ ಪಾರಾಯಣ ಮಾಡಲಾಗುವ ಒಂದು ಗ್ರಂಥವಾಗಿ ಅವತೀರ್ಣ ಗೊಳಿಸಿರುವೆವು. ಅದರಲ್ಲಿ ನಾವು ಎಚ್ಚರಿಕೆಗಳನ್ನು ಅನೇಕ ವಿಧಗಳಲ್ಲಿ ವಿವರಿಸಿರುವೆವು. ಅವರು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ ಅಥವಾ ಅವರಲ್ಲಿ ಪ್ರಜ್ಞೆ ಮೂಡುವ ಸಲುವಾಗಿ.
(114) ನೈಜ ಒಡೆಯನಾದ ಅಲ್ಲಾಹು ಅತ್ಯುನ್ನತನಾಗಿರುವನು. ಕುರ್‌ಆನನ್ನು ತಮಗೆ ಓದಿಕೊಡಲಾಗುವ ಮುನ್ನ ಅದನ್ನು ಪಾರಾಯಣ ಮಾಡಲು ತಾವು ಆತುರಪಡದಿರಿ.(667) “ನನ್ನ ಪ್ರಭೂ! ನನಗೆ ಜ್ಞಾನವನ್ನು ಹೆಚ್ಚಿಸಿಕೊಡು” ಎಂದು ಹೇಳಿರಿ.
667. ಪ್ರತಿ ಸಂದರ್ಭದಲ್ಲೂ ಜಿಬ್ರೀಲ್(ಅ) ರವರು ಪ್ರವಾದಿ(ಸ) ರವರಿಗೆ ದಿವ್ಯಸಂದೇಶವನ್ನು ಓದಿಕೊಡುವಾಗ ಅವರು ಓದಿಕೊಟ್ಟು ಮುಗಿಯುವುದಕ್ಕೆ ಮೊದಲೇ ಮರೆತುಹೋಗಬಹುದೋ ಎಂಬ ಭಯದಿಂದ ಪ್ರವಾದಿ(ಸ) ರವರು ಅದನ್ನು ಕಂಠಪಾಠ ಮಾಡಲು ಆತುರಪಡುತ್ತಿದ್ದರು. ಅದು ಅನಗತ್ಯವಾಗಿದೆ, ಜ್ಞಾನ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಡಲು ಪ್ರಾರ್ಥಿಸಿದರೆ ಸಾಕೆಂದು ಅಲ್ಲಾಹು ತಿಳಿಸಿಕೊಡುತ್ತಾನೆ.
(115) ನಾವು ಮುಂಚೆ ಆದಮ್‍ರೊಂದಿಗೆ ಕರಾರು ಮಾಡಿದ್ದೆವು. ಆದರೆ ಅವರು ಅದನ್ನು ಮರೆತರು. ಅವರಲ್ಲಿ ದೃಢ ನಿಶ್ಚಯವಿರುವುದಾಗಿ ನಾವು ಕಾಣಲಿಲ್ಲ.
(116) “ನೀವು ಆದಮ್‍ರಿಗೆ ಸುಜೂದ್ ಮಾಡಿರಿ” ಎಂದು ನಾವು ಮಲಕ್‍ಗಳೊಂದಿಗೆ ಹೇಳಿದ ಸಂದರ್ಭ. ಅವರು ಸುಜೂದ್ ಮಾಡಿದರು; ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು.
(117) ಆಗ ನಾವು ಹೇಳಿದೆವು: “ಓ ಆದಮ್! ಈತ ತಮ್ಮ ಮತ್ತು ತಮ್ಮ ಸಂಗಾತಿಯ ಶತ್ರುವಾಗಿರುವನು. ಆದುದರಿಂದ ನಿಮ್ಮಿಬ್ಬರನ್ನೂ ಅವನು ಸ್ವರ್ಗದಿಂದ ಹೊರಗಟ್ಟದಿರಲಿ. (ಹಾಗೇನಾದರೂ ಆದರೆ) ತಾವು ಕಷ್ಟಪಡುವಿರಿ.
(118) ಖಂಡಿತವಾಗಿಯೂ ಇಲ್ಲಿ ತಮಗೆ ಹಸಿವೆಯಾಗಲಿ, ನಗ್ನತೆಯಾಗಲಿ ಇರಲಾರದು.
(119) ಇಲ್ಲಿ ತಮಗೆ ಬಾಯಾರಿಕೆಯಾಗಲಿ ಬಿಸಿಲ ಬೇಗೆಯಾಗಲಿ ಇರಲಾರದು.
(120) ಆಗ ಸೈತಾನನು ಅವರಿಗೆ ದುಷ್ಪ್ರೇರಣೆ ಮಾಡಿದನು: “ಓ ಆದಮ್! ಶಾಶ್ವತತೆಯನ್ನು ನೀಡುವ ಒಂದು ವೃಕ್ಷದ ಬಗ್ಗೆ ಮತ್ತು ನಾಶವಾಗದ ಆಧಿಪತ್ಯದ ಬಗ್ಗೆ ನಾನು ತಮಗೆ ತಿಳಿಸಿಕೊಡಲೇ?”
(121) ತರುವಾಯ ಅವರಿಬ್ಬರು (ಆದಮ್ ಮತ್ತು ಹವ್ವಾ) ಆ ಮರದಿಂದ ತಿಂದರು. ಆಗ ಅವರಿಬ್ಬರಿಗೂ ಅವರ ಗುಪ್ತಾಂಗಗಳು ಪ್ರಕಟವಾದವು ಮತ್ತು ಸ್ವರ್ಗದ ಎಲೆಗಳನ್ನು ಜೋಡಿಸಿ ಅವರು ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆದಮ್ ತನ್ನ ರಬ್‌ನೊಂದಿಗೆ ಅವಿಧೇಯತೆ ತೋರಿದರು. ಅದರಿಂದಾಗಿ ಅವರು ದಾರಿತಪ್ಪಿದರು.
(122) ತರುವಾಯ ಅವರ ರಬ್ ಅವರನ್ನು ಉತ್ಕೃಷ್ಟರನ್ನಾಗಿ ಆರಿಸಿದನು ಮತ್ತು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದನು.
(123) ಅವನು (ಅಲ್ಲಾಹು) ಹೇಳಿದನು: “ನೀವಿಬ್ಬರೂ ಜೊತೆಯಾಗಿ ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಇತರ ಕೆಲವರಿಗೆ ಶತ್ರುಗಳಾಗಿರುವರು. ಆದರೆ ನನ್ನ ಕಡೆಯಿಂದ ಯಾವುದಾದರೂ ಮಾರ್ಗದರ್ಶನವು ನಿಮಗೆ ಬಂದರೆ, ಆಗ ನನ್ನ ಮಾರ್ಗದರ್ಶನವನ್ನು ಯಾರು ಅನುಸರಿಸುವನೋ ಅವನು ಪಥಭ್ರಷ್ಟನಾಗಲಾರನು ಮತ್ತು ಕಷ್ಟಪಡಲಾರನು”.
(124) ಯಾರು ನನ್ನ ಸಂದೇಶವನ್ನು ಕಡೆಗಣಿಸಿ ವಿಮುಖನಾಗುವನೋ ಖಂಡಿತವಾಗಿಯೂ ಅವನಿಗಿರುವುದು ಇಕ್ಕಟ್ಟಾದ ಜೀವನವಾಗಿದೆ. ಪುನರುತ್ಥಾನ ದಿನದಂದು ಅವನನ್ನು ನಾವು ಅಂಧನನ್ನಾಗಿ ಎಬ್ಬಿಸುವೆವು.
(125) ಅವನು ಹೇಳುವನು: “ನನ್ನ ಪ್ರಭೂ! ನಾನು ದೃಷ್ಟಿಯುಳ್ಳವನಾಗಿದ್ದೂ ಸಹ ನೀನೇಕೆ ನನ್ನನ್ನು ಅಂಧನನ್ನಾಗಿ ಎಬ್ಬಿಸಿದೆ?”
(126) ಅವನು (ಅಲ್ಲಾಹು) ಹೇಳುವನು: “ಹಾಗೆಯೇ ಆಗಿದೆ. ನಮ್ಮ ದೃಷ್ಟಾಂತಗಳು ನಿನ್ನ ಬಳಿಗೆ ಬಂದಾಗ ಅದನ್ನು ನೀನು ವಿಸ್ಮರಿಸಿದೆ. ಹಾಗೆಯೇ ಇಂದು ನಿನ್ನನ್ನೂ ವಿಸ್ಮರಿಸಲಾಗಿದೆ”
(127) ಹದ್ದು ಮೀರುವವರಿಗೆ ಮತ್ತು ತಮ್ಮ ರಬ್‌ನ ದೃಷ್ಟಾಂತಗಳಲ್ಲಿ ವಿಶ್ವಾಸವಿಡದವರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು. ಖಂಡಿತವಾಗಿಯೂ ಪರಲೋಕದ ಶಿಕ್ಷೆಯು ಅತಿಕಠೋರವೂ ಶಾಶ್ವತವೂ ಆಗಿದೆ.
(128) ಅವರಿಗಿಂತ ಮುಂಚೆ ಎಷ್ಟೋ ತಲೆಮಾರುಗಳನ್ನು ನಾವು ನಾಶ ಮಾಡಿರುವೆವು ಎಂಬ ವಾಸ್ತವಿಕತೆಯು ಅವರಿಗೆ ಮಾರ್ಗದರ್ಶನ ಮಾಡುವುದಿಲ್ಲವೇ?(668) ಅವರ ವಾಸಸ್ಥಳಗಳ ಮೂಲಕ ಇವರು ಹಾದುಹೋಗುತ್ತಿರುವರು. ಖಂಡಿತವಾಗಿಯೂ ಬುದ್ಧಿವಂತರಿಗೆ ಇದರಲ್ಲಿ ದೃಷ್ಟಾಂತಗಳಿವೆ.
668. ಧಿಕ್ಕಾರಿಗಳಾಗಿದ್ದ ಪೂರ್ವಿಕರ ಪತನದಿಂದ ಇವರು ನೀತಿಪಾಠ ಕಲಿತಿಲ್ಲವೇ ಎಂದರ್ಥ.
(129) ತಮ್ಮ ರಬ್‌ನ ಕಡೆಯ ಒಂದು ವಚನ(669) ಹಾಗೂ ಒಂದು ನಿಶ್ಚಿತ ಅವಧಿ ಪೂರ್ವಭಾವಿಯಾಗಿ ತೀರ್ಮಾನಿಸಲ್ಪಡದಿರುತ್ತಿದ್ದರೆ ಅದು (ಶಿಕ್ಷೆ) (ಇವರಿಗೂ) ಅನಿವಾರ್ಯವಾಗಿ ಬಿಡುತ್ತಿತ್ತು.
669. ಈ ಸೂಕ್ತಿಯ ಅರ್ಥವು ಪ್ರವಾದಿ ಮುಹಮ್ಮದ್(ಸ) ರವರ ಸಮುದಾಯವನ್ನು ನಿರ್ನಾಮ ಮಾಡುವುದಿಲ್ಲ ಎಂಬ ಅಲ್ಲಾಹುವಿನ ನಿರ್ಧಾರವಾಗಿದೆಯೆಂದು ವ್ಯಾಖ್ಯಾನಕಾರರು ಹೇಳಿದ್ದಾರೆ.
(130) ಆದುದರಿಂದ ಇವರು ಹೇಳುತ್ತಿರುವುದರ ಬಗ್ಗೆ ತಾವು ತಾಳ್ಮೆವಹಿಸಿರಿ. ಸೂರ್ಯೋದಯಕ್ಕೆ ಮುಂಚೆ ಮತ್ತು ಸೂರ್ಯಾಸ್ತಕ್ಕೆ ಮುಂಚೆ ತಾವು ತಮ್ಮ ರಬ್ಬನ್ನು ಸ್ತುತಿಸುವುದರೊಂದಿಗೆ ಅವನ ಪರಿಪಾವನತೆಯನ್ನು ಕೊಂಡಾಡಿರಿ. ರಾತ್ರಿಯ ಕೆಲವು ತಾಸುಗಳಲ್ಲೂ, ಹಗಲಿನ ಕೆಲವು ಭಾಗಗಳಲ್ಲೂ ತಾವು ಅವನ ಪರಿಪಾವನತೆಯನ್ನು ಕೊಂಡಾಡಿರಿ. ತಮಗೆ ಸಂತೃಪ್ತಿಯುಂಟಾಗಲೂ ಬಹುದು.
(131) ಅವರಲ್ಲಿ ಹಲವರಿಗೆ ನಾವು ನೀಡಿದ ಸುಖಾನುಭೂತಿಯೆಡೆಗೆ ತಾವು ತಮ್ಮ ದೃಷ್ಟಿಯನ್ನು ಹಾಯಿಸದಿರಿ. ಅವು ಐಹಿಕ ಜೀವನದ ಶೃಂಗಾರಗಳಾಗಿವೆ. ತನ್ಮೂಲಕ ನಾವು ಅವರನ್ನು ಪರೀಕ್ಷಿಸುತ್ತಿರುವೆವು. ತಮ್ಮ ರಬ್ ಒದಗಿಸುವ ಅನ್ನಾಧಾರವು ಅತ್ಯುತ್ತಮವೂ ಶಾಶ್ವತವೂ ಆಗಿದೆ.
(132) ತಾವು ತಮ್ಮ ಕುಟುಂಬದವರಿಗೆ ನಮಾಝ್ ನಿರ್ವಹಿಸಲು ಆದೇಶಿಸಿರಿ. ಅದರಲ್ಲಿ (ನಮಾಝ್‍ನಲ್ಲಿ) ತಾವು ತಾಳ್ಮೆಯೊಂದಿಗೆ ಅಚಲರಾಗಿ ನಿಲ್ಲಿರಿ. ನಾವು ತಮ್ಮೊಂದಿಗೆ ಯಾವುದೇ ಅನ್ನಾಧಾರವನ್ನು ಬೇಡಲಾರೆವು. ತಮಗೆ ಅನ್ನಾಧಾರವನ್ನು ಒದಗಿಸುವವರು ನಾವಾಗಿರುವೆವು. ಶುಭಕರ ಅಂತ್ಯವು ಧರ್ಮನಿಷ್ಠೆಗಾಗಿದೆ.
(133) ಅವರು ಹೇಳಿದರು: “ಅವರು (ಪ್ರವಾದಿಯು) ತಮ್ಮ ರಬ್‌ನಿಂದ ನಮಗೋಸ್ಕರ ಒಂದು ದೃಷ್ಟಾಂತವನ್ನೇಕೆ ತರುವುದಿಲ್ಲ?” ಪೂರ್ವ ಗ್ರಂಥಗಳಲ್ಲಿರುವ ಪ್ರತ್ಯಕ್ಷ ಪುರಾವೆಯು ಅವರ ಬಳಿಗೆ ಬಂದಿಲ್ಲವೇ?
(134) ಇದಕ್ಕಿಂತ ಮುಂಚೆ ಯಾವುದಾದರೂ ಶಿಕ್ಷೆಯ ಮೂಲಕ ಅವರನ್ನು ನಾವು ನಾಶ ಮಾಡುತ್ತಿದ್ದರೆ ಅವರು ಹೇಳುತ್ತಿದ್ದರು: “ನಮ್ಮ ಪ್ರಭೂ! ನೀನೇಕೆ ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಲಿಲ್ಲ? ಹಾಗಿರುತ್ತಿದ್ದರೆ ನಾವು ಅಪಮಾನಿತರೂ, ನಿಂದಿತರೂ ಆಗುವುದಕ್ಕಿಂತ ಮುಂಚೆ ನಿನ್ನ ದೃಷ್ಟಾಂತಗಳನ್ನು ಅನುಸರಿಸುತ್ತಿದ್ದೆವು”.
(135) (ಓ ಪ್ರವಾದಿಯವರೇ!) ಹೇಳಿರಿ: “ಎಲ್ಲರೂ ಕಾಯುತ್ತಿರುವರು. ನೀವೂ ಕಾಯುತ್ತಿರಿ. ಆಗ ಸತ್ಯಮಾರ್ಗದ ಒಡೆಯರು ಯಾರೆಂದು ನೀವು ಅರಿಯುವಿರಿ. ಸನ್ಮಾರ್ಗವನ್ನು ಪಡೆದವರು ಯಾರೆಂದೂ (ನೀವು ಅರಿಯುವಿರಿ).