(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವುಗಳು ಸಾಮ್ರಾಟನೂ, ಪರಮ ಪವಿತ್ರನೂ, ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವ ಅಲ್ಲಾಹುವಿನ ಕೀರ್ತನೆ ಮಾಡುತ್ತಿವೆ.
(2) ಅನಕ್ಷರಸ್ಥರ ಮಧ್ಯೆ, ತನ್ನ ದೃಷ್ಟಾಂತಗಳನ್ನು ಅವರಿಗೆ ಓದಿಕೊಡುವ ಸಲುವಾಗಿ, ಅವರನ್ನು ಸಂಸ್ಕರಿಸುವ ಸಲುವಾಗಿ ಮತ್ತು ಅವರಿಗೆ ಗ್ರಂಥ ಹಾಗೂ ತತ್ವಜ್ಞಾನವನ್ನು ಕಲಿಸಿಕೊಡುವ ಸಲುವಾಗಿ ಅವರಿಂದಲೇ ಇರುವ ಒಬ್ಬ ಸಂದೇಶವಾಹಕರನ್ನು ಕಳುಹಿಸಿದವನು ಅವನಾಗಿರುವನು. ಖಂಡಿತವಾಗಿಯೂ ಇದಕ್ಕಿಂತ ಮುಂಚೆ ಅವರು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದರು.
(3) ಅವರ ಪೈಕಿ ಇನ್ನೂ ಅವರೊಂದಿಗೆ ಸೇರಿಕೊಳ್ಳದವರೂ ಆಗಿರುವ ಇತರರೆಡೆಗೂ (ಅವರನ್ನು ಕಳುಹಿಸಲಾಗಿದೆ).(1245) ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.
1245. ಪ್ರವಾದಿ(ಸ) ರವರ ಸಮಕಾಲೀನರೋ ದೇಶೀಯರೋ ಅಲ್ಲದವರಿಗೂ ಅವರ ಸಂದೇಶವಾಹಕತ್ವವು ಅನ್ವಯವಾಗುತ್ತದೆ.
(4) ಅದು ಅಲ್ಲಾಹುವಿನ ಅನುಗ್ರಹವಾಗಿದೆ. ಅವನಿಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುವನು. ಅಲ್ಲಾಹು ಮಹಾ ಅನುಗ್ರಹದಾತನಾಗಿರುವನು.
(5) ತೌರಾತಿನ ಹೊಣೆ ವಹಿಸಿಕೊಡಲಾಗಿರುವವರು ಮತ್ತು ತರುವಾಯ ಅದನ್ನು ವಹಿಸಿಕೊಳ್ಳದಿರುವವರ (ಯಹೂದರ) ಉದಾಹರಣೆಯು ಗ್ರಂಥಗಳನ್ನು ಹೊರುವ ಕತ್ತೆಯಂತಾಗಿದೆ.(1246) ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿರುವ ಜನರ ಉದಾಹರಣೆಯು ಎಷ್ಟು ನಿಕೃಷ್ಟವಾದುದು! ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.
1246. ಗ್ರಂಥದ ವಾಹಕರೆಂದು ಅಭಿಮಾನಪಡುವ, ಆದರೆ ಗ್ರಂಥದ ಸಾರೋಪದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದ ಎಲ್ಲರಿಗೂ ಈ ಉಪಮೆಯು ಅನ್ವಯವಾಗುತ್ತದೆ.
(6) (ಓ ಪ್ರವಾದಿಯವರೇ!) ಹೇಳಿರಿ: ‘ಓ ಯಹೂದರೇ! ಇತರೆಲ್ಲರ ಹೊರತು ನೀವು ಮಾತ್ರ ಅಲ್ಲಾಹುವಿನ ಮಿತ್ರರಾಗಿರುವಿರಿ ಎಂದು ನೀವು ವಾದಿಸುವುದಾದರೆ ನೀವು ಮರಣವನ್ನು ಆಶಿಸಿರಿ.(1247) ನೀವು ಸತ್ಯಸಂಧರಾಗಿದ್ದರೆ’.
1247. ಮರಣದೊಂದಿಗೆ ಸ್ವರ್ಗ ಸುಖಗಳು ಲಭ್ಯವಾಗಲಿವೆ ಎಂದು ದೃಢವಾಗಿ ಹೇಳುವಷ್ಟು ದೇವಸಾಮೀಪ್ಯವನ್ನು ನಾವು ಗಳಿಸಿದ್ದೇವೆ ಎಂಬ ಯಹೂದಿಗಳ ವಾದವು ಸತ್ಯಸಂಧವಾಗಿದ್ದರೆ ಅವರು ಮರಣವನ್ನು ಆಶಿಸಲಿ. ಹಲವು ರೀತಿಯ ಕಷ್ಟಗಳನ್ನು ಅನುಭವಿಸಿ ಇಹಲೋಕದಲ್ಲಿ ಬದುಕುವುದು ಅವರ ಪಾಲಿಗೆ ಯೋಗ್ಯವಾದುದಲ್ಲ.
(7) ಆದರೆ ಅವರ ಕೈಗಳು ಪೂರ್ವಭಾವಿಯಾಗಿ ಮಾಡಿಟ್ಟಿರುವುದರ ಫಲವಾಗಿ ಅವರು ಎಂದಿಗೂ ಅದನ್ನು ಆಶಿಸಲಾರರು. ಅಲ್ಲಾಹು ಅಕ್ರಮಿಗಳ ಬಗ್ಗೆ ಅರಿವುಳ್ಳವನಾಗಿರುವನು.
(8) (ಓ ಪ್ರವಾದಿಯವರೇ!) ಹೇಳಿರಿ: ‘ಯಾವ ಮರಣದಿಂದ ನೀವು ಓಡಿ ಹೋಗುತ್ತಿರುವಿರೋ ಅದು ಖಂಡಿತವಾಗಿಯೂ ನಿಮ್ಮನ್ನು ಸಂಧಿಸಲಿದೆ. ತರುವಾಯ ಅಗೋಚರವನ್ನು ಮತ್ತು ಗೋಚರವನ್ನು ಅರಿಯುವವನ ಬಳಿಗೆ ನಿಮ್ಮನ್ನು ಮರಳಿಸಲಾಗುವುದು. ಆಗ ನೀವು ಮಾಡಿಕೊಂಡಿರುವವುಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು’.
(9) ಓ ಸತ್ಯವಿಶ್ವಾಸಿಗಳೇ! ಶುಕ್ರವಾರದಂದು ನಮಾಝ್‍ಗಾಗಿ ಕರೆಯಲಾದರೆ ಅಲ್ಲಾಹುವಿನ ಸ್ಮರಣೆಯೆಡೆಗೆ ವೇಗವಾಗಿ ಧಾವಿಸಿರಿ ಮತ್ತು ವ್ಯಾಪಾರವನ್ನು ವರ್ಜಿಸಿರಿ. ಅದು ನಿಮಗೆ ಉತ್ತಮವಾಗಿದೆ. ನೀವು ಅರಿತವರಾಗಿದ್ದರೆ.
(10) ತರುವಾಯ ನಮಾಝ್ ನಿರ್ವಹಿಸಿದ ಬಳಿಕ ನೀವು ಭೂಮಿಯಲ್ಲಿ ಚದುರಿ ಹೋಗಿರಿ ಮತ್ತು ಅಲ್ಲಾಹುವಿನ ಅನುಗ್ರಹದಿಂದ ಅರಸಿರಿ. ನೀವು ಅಲ್ಲಾಹುವನ್ನು ಹೇರಳವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗಲೂಬಹುದು.
(11) ಅವರೊಂದು ವ್ಯಾಪಾರವನ್ನಾಗಲಿ, ಮನೋರಂಜನೆಯನ್ನಾಗಲಿ ಕಂಡರೆ ಅದರೆಡೆಗೆ ಧಾವಿಸುವರು ಮತ್ತು ತಮ್ಮನ್ನು ನಿಂತ ಸ್ಥಿತಿಯಲ್ಲೇ ಬಿಟ್ಟು ಬಿಡುವರು.(1248) ಹೇಳಿರಿ: ‘ಮನೋರಂಜನೆ ಮತ್ತು ವ್ಯಾಪಾರಕ್ಕಿಂತ ಅಲ್ಲಾಹುವಿನ ಬಳಿಯಿರುವುದು ಅತ್ಯುತ್ತಮವಾಗಿದೆ. ಅಲ್ಲಾಹು ಅನ್ನಾಧಾರ ನೀಡುವವರಲ್ಲಿ ಅತ್ಯುತ್ತಮನಾಗಿರುವನು’.
1248. ಒಂದು ಶುಕ್ರವಾರದಂದು ಮದೀನ ಮಸೀದಿಯ ಮಿಂಬರ್‍ನಲ್ಲಿ ಪ್ರವಾದಿ(ಸ) ರವರು ಖುತ್ಬಾ ನಿರ್ವಹಿಸುತ್ತಿದ್ದಾಗ ಮದೀನದ ಮಾರುಕಟ್ಟೆಗೆ ವರ್ತಕರ ತಂಡವೊಂದು ಆಗಮಿಸಿ ಗದ್ದಲ ಮಾಡತೊಡಗಿದಾಗ ಖುತ್ಬಾ ಆಲಿಸುತ್ತಿದ್ದವರ ಪೈಕಿ ಕೆಲವರ ಹೊರತು ಉಳಿದವರೆಲ್ಲರೂ ಮಾರುಕಟ್ಟೆಗೆ ಓಡಿದರು. ಆ ಸಂದರ್ಭದಲ್ಲಿ ಈ ಸೂಕ್ತಿಯು ಅವತೀರ್ಣಗೊಂಡಿತು.