26 - Ash-Shu'araa ()

|

(1) ತ್ವಾ ಸೀನ್ ಮೀಮ್.

(2) ಇವು ಸುಸ್ಪಷ್ಟ ಗ್ರಂಥದ ಸೂಕ್ತಿಗಳಾಗಿವೆ.

(3) ಅವರು ವಿಶ್ವಾಸಿಗಳಾಗದಿರುವುದರ ನಿಮಿತ್ತ ತಾವು ತಮ್ಮ ಜೀವವನ್ನೇ ನಾಶ ಮಾಡಲೂಬಹುದು.

(4) ನಾವಿಚ್ಛಿಸುವುದಾದರೆ ಅವರ ಮೇಲೆ ನಾವು ಆಕಾಶದಿಂದ ಒಂದು ದೃಷ್ಟಾಂತವನ್ನು ಇಳಿಸುವೆವು. ಆಗ ಅವರ ಕೊರಳುಗಳು ಅದಕ್ಕೆ ಶರಣಾಗುವುವು.

(5) ಪರಮ ದಯಾಮಯನ ಕಡೆಯ ಯಾವುದೇ ಹೊಸ ಬೋಧನೆಯು ಅವರ ಬಳಿಗೆ ಬಂದಾಗಲೂ ಅವರು ಅದರಿಂದ ವಿಮುಖರಾಗದಿರಲಿಲ್ಲ.

(6) ಹೀಗೆ ಅವರು ನಿಷೇಧಿಸಿದರು. ಆದುದರಿಂದ ಅವರು ಯಾವುದನ್ನು ಅಪಹಾಸ್ಯ ಮಾಡುತ್ತಿದ್ದರೋ ಅದರ ವೃತ್ತಾಂತಗಳು ಅವರೆಡೆಗೆ ಬರಲಿರುವುದು.

(7) ಅವರು ಭೂಮಿಯೆಡೆಗೆ ನೋಡುವುದಿಲ್ಲವೇ? ಎಲ್ಲ ವಿಧ ಉನ್ನತ ಸಸ್ಯವರ್ಗಗಳ ಪೈಕಿ ಎಷ್ಟೊಂದು ಸಸ್ಯಗಳನ್ನು ನಾವು ಅದರಲ್ಲಿ ಬೆಳೆಸಿರುವೆವು!

(8) ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಸತ್ಯವಿಶ್ವಾಸಿಗಳಾಗಲಿಲ್ಲ.

(9) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(10) ತಮ್ಮ ರಬ್ ಮೂಸಾರನ್ನು ಕರೆದು ಹೇಳಿದ ಸಂದರ್ಭ: “ಅಕ್ರಮಿಗಳಾದ ಆ ಜನರ ಬಳಿಗೆ ಹೋಗಿರಿ.

(11) ಅಂದರೆ ಫಿರ್‍ಔನ್‍ನ ಜನರ ಬಳಿಗೆ. ಅವರು ಭಯಭಕ್ತಿ ಪಾಲಿಸುವುದಿಲ್ಲವೇ (ಎಂದು ಅವರೊಂದಿಗೆ ಕೇಳಿರಿ)”.

(12) ಅವರು (ಮೂಸಾ) ಹೇಳಿದರು: “ನನ್ನ ಪ್ರಭೂ! ಅವರು ನನ್ನನ್ನು ತಿರಸ್ಕರಿಸುವರೆಂದು ಖಂಡಿತವಾಗಿಯೂ ನಾನು ಭಯಪಡುತ್ತಿರುವೆನು.

(13) ನನ್ನ ಹೃದಯವು ಇಕಟ್ಟಾಗುವುದು ಮತ್ತು ನನ್ನ ನಾಲಗೆ ಸಲೀಸಾಗಿ ಹೊರಳಲಾರದು. ಆದುದರಿಂದ ಹಾರೂನ್‍ರಿಗೆ ಕೂಡ ನೀನು ಸಂದೇಶವನ್ನು ಕಳುಹಿಸು.

(14) ಅವರಿಗೆ ನನ್ನ ಮೇಲೆ ಒಂದು ಅಪರಾಧದ ಆರೋಪವೂ ಇದೆ.(781) ಆದುದರಿಂದ ಅವರು ನನ್ನನ್ನು ಸಾಯಿಸುವರು ಎಂದು ನಾನು ಭಯಪಡುತ್ತಿರುವೆನು”.
781. ಪ್ರವಾದಿ ಮೂಸಾ(ಅ) ರವರು ಪ್ರಮಾದವಶಾತ್ ಕಿಬ್ತೀ (ಕೋಪ್ಟ್)ಗಳ ಪೈಕಿ ಓರ್ವನನ್ನು ಕೊಂದು ಹಾಕಿದ ಘಟನೆಯ ಬಗ್ಗೆ 28/15ರಲ್ಲಿ ವಿವರಿಸಲಾಗಿದೆ.

(15) ಅವನು (ಅಲ್ಲಾಹು) ಹೇಳಿದನು: “ಎಂದಿಗೂ ಇಲ್ಲ. ನಮ್ಮ ದೃಷ್ಟಾಂತಗಳೊಂದಿಗೆ ನೀವಿಬ್ಬರೂ ತೆರಳಿರಿ. ಖಂಡಿತವಾಗಿಯೂ ನಾವೂ ನಿಮ್ಮೊಂದಿಗೆ ಗಮನಕೊಟ್ಟು ಆಲಿಸುತ್ತಿರುವೆವು”.

(16) ತರುವಾಯ ನೀವು ಫಿರ್‍ಔನ್‍ನ ಬಳಿಗೆ ತೆರಳಿ ಹೇಳಿರಿ: “ನಾವು ಸರ್ವಲೋಕಗಳ ರಬ್‌ನ ಕಡೆಯಿಂದ ಕಳುಹಿಸಲಾಗಿರುವ ಸಂದೇಶವಾಹಕರಾಗಿರುವೆವು.

(17) ಇಸ್ರಾಈಲ್ ಸಂತತಿಗಳನ್ನು ನಮ್ಮೊಂದಿಗೆ ಕಳುಹಿಸಿಕೊಡಬೇಕು ಎಂಬ ಆದೇಶದೊಂದಿಗೆ ನಾವು ಬಂದಿದ್ದೇವೆ”.

(18) ಅವನು (ಫಿರ್‍ಔನ್) ಹೇಳಿದನು: “ನೀನು ಶಿಶುವಾಗಿದ್ದಾಗ ನಮ್ಮೊಂದಿಗೆ ನಾವು ನಿನ್ನನ್ನು ಪೋಷಿಸಲಿಲ್ಲವೇ? ನಿನ್ನ ಆಯುಷ್ಯದಲ್ಲಿ ಅನೇಕ ವರ್ಷಗಳನ್ನು ನೀನು ನಮ್ಮೊಂದಿಗೆ ಕಳೆದಿರುವೆ.

(19) ನೀನು ಮಾಡಿದ ನಿನ್ನ ಆ (ಕೆಟ್ಟ) ಕೆಲಸವನ್ನು ನೀನು ಮಾಡಿರುವೆ.(782) ಖಂಡಿತವಾಗಿಯೂ ನೀನು ಕೃತಘ್ನರಲ್ಲಿ ಸೇರಿದವನಾಗಿರುವೆ”.
782. ಮೇಲೆ ಪ್ರಸ್ತಾಪಿಸಿದ ಕೊಲೆಪಾತಕದ ಬಗ್ಗೆಯೇ ಇಲ್ಲೂ ಸೂಚಿಸಲಾಗಿದೆ.

(20) ಅವರು (ಮೂಸಾ) ಹೇಳಿದರು: “ಅಂದು ನಾನು ಅದನ್ನು ಮಾಡಿದ್ದೆನು. ಆಗ ನಾನು ಪ್ರಮಾದವೆಸಗಿದವರಲ್ಲಿ ಸೇರಿದವನಾಗಿದ್ದೆನು.(783)
783. ಆಕ್ರಮಣವೊಂದನ್ನು ತಡೆಯುವುದಕ್ಕೋಸ್ಕರ ಪ್ರವಾದಿ ಮೂಸಾ(ಅ) ರವರು ತನ್ನ ಎದುರಾಳಿಗೆ ಮುಷ್ಠಿ ಬಿಗಿಹಿಡಿದು ಹೊಡೆದಾಗ ಅದು ಆತನ ಮರಣಕ್ಕೆ ಹೇತುವಾಯಿತು.

(21) ತರುವಾಯ ನಿಮ್ಮ ಬಗ್ಗೆ ಭಯಪಟ್ಟಾಗ ನಾನು ನಿಮ್ಮಿಂದ ಓಡಿಹೋದೆನು. ತರುವಾಯ ನನ್ನ ರಬ್ ನನಗೆ ತತ್ವಜ್ಞಾನವನ್ನು ದಯಪಾಲಿಸಿದನು ಮತ್ತು ನನ್ನನ್ನು ಸಂದೇಶವಾಹಕರಲ್ಲಿ ಸೇರಿಸಿದನು.

(22) ತಾವು ನನಗೆ ಮಾಡಿರುವುದಾಗಿ ಎತ್ತಿ ಹೇಳುತ್ತಿರುವ ಆ ಅನುಗ್ರಹವು ಇಸ್ರಾಈಲ್ ಸಂತತಿಗಳನ್ನು ತಾವು ಗುಲಾಮರನ್ನಾಗಿ ಮಾಡಿಕೊಂಡಿರುವುದರಿಂದ ಉಂಟಾದುದಾಗಿದೆ”.(784)
784. ‘ತಾವು ನನಗೆ ಮಾಡಿರುವುದಾಗಿ ಎತ್ತಿ ಹೇಳುವ ಆ ಅನುಗ್ರಹವು ಇಸ್ರಾಈಲ್ ಸಂತತಿಯನ್ನು ತಾವು ಗುಲಾಮಗಿರಿಗೆ ದೂಡಿರುವಿರಿ ಎಂಬುದಲ್ಲವೇ’ ಎಂದೂ ಅರ್ಥೈಸಬಹುದಾಗಿದೆ. ಮೂಸಾ(ಅ) ರವರಿಗೆ ಮಾಡಿರುವುದಾಗಿ ಫಿರ್‍ಔನ್ ಮೇಲೆ ಎತ್ತಿಹೇಳುವ ಯಾವುದೇ ಅನುಗ್ರಹವೂ ಸದುದ್ದೇಶದಿಂದ ಮಾಡಿದ್ದಾಗಿರಲಿಲ್ಲ. ಅವೆಲ್ಲವೂ ಇಸ್ರಾಈಲರ ವಿರುದ್ಧ ಅವನು ಎಸಗಿದ ಘೋರ ದೌರ್ಜನ್ಯಗಳ ಫಲವಾಗಿ ಉದ್ಭವಿಸಿದ ಕೆಲವು ಘಟನಾವಳಿಗಳು ಮಾತ್ರವಾಗಿದ್ದವು. ಅಲ್ಲಾಹುವಿನ ಅನುಲ್ಲಂಘನೀಯ ವಿಧಿಯು ಫಿರ್‍ಔನನಿಂದ ಇವುಗಳನ್ನು ಮಾಡಿಸಿತು ಎನ್ನುವುದೇ ಹೆಚ್ಚು ಸೂಕ್ತ. ಈ ವಾಸ್ತವಿಕತೆಯನ್ನು ವ್ಯಂಗ್ಯವಾಗಿ ಸೂಚಿಸುವುದರ ಮೂಲಕ ಮೂಸಾ(ಅ) ರವರು ಫಿರ್‍ಔನನ ಸಮಯಸಾಧಕತನವನ್ನು ಗೇಲಿ ಮಾಡುತ್ತಿದ್ದಾರೆ.

(23) ಫಿರ್‍ಔನ್ ಕೇಳಿದನು: “ಸರ್ವಲೋಕಗಳ ರಬ್ ಎಂದರೇನು?”

(24) ಅವರು (ಮೂಸಾ) ಹೇಳಿದರು: “ಆಕಾಶಗಳ, ಭೂಮಿಯ ಮತ್ತು ಅವೆರಡರ ಮಧ್ಯೆಯಿರುವವುಗಳ ರಬ್‌. ನೀವು ದೃಢವಿಶ್ವಾಸವುಳ್ಳವರಾಗಿದ್ದರೆ”.

(25) ಅವನು ತನ್ನ ಸುತ್ತಲಿರುವವರೊಂದಿಗೆ ಹೇಳಿದನು: “ಏನು? ನೀವು ಕಿವಿಗೊಟ್ಟು ಆಲಿಸುವುದಿಲ್ಲವೇ?”

(26) ಅವರು (ಮೂಸಾ) ಹೇಳಿದರು: (ಅವನು) ನಿಮ್ಮ ರಬ್ ಮತ್ತು ನಿಮ್ಮ ಪೂರ್ವಿಕರ ರಬ್ ಆಗಿರುವನು”.

(27) ಅವನು (ಫಿರ್‍ಔನ್) ಹೇಳಿದನು: “ನಿಮ್ಮ ಬಳಿಗೆ ಕಳುಹಿಸಲಾಗಿರುವ ನಿಮ್ಮ ಈ ಸಂದೇಶವಾಹಕನು ಖಂಡಿತವಾಗಿಯೂ ಒಬ್ಬ ಹುಚ್ಚನಾಗಿರುವನು”.

(28) ಅವರು (ಮೂಸಾ) ಹೇಳಿದರು: (ಅವನು) ಪೂರ್ವ, ಪಶ್ಚಿಮ ಹಾಗೂ ಅವೆರಡರ ಮಧ್ಯೆಯಿರುವವುಗಳ ರಬ್ ಆಗಿರುವನು. ನೀವು ಆಲೋಚಿಸುವವರಾಗಿದ್ದರೆ”.

(29) ಅವನು (ಫಿರ್‍ಔನ್) ಹೇಳಿದನು: “ನೀನು ನನ್ನ ಹೊರತು ಅನ್ಯರನ್ನು ಆರಾಧ್ಯನನ್ನಾಗಿ ಮಾಡಿದರೆ ಖಂಡಿತವಾಗಿಯೂ ನಾನು ನಿನ್ನನ್ನು ಸೆರೆಯಾಳುಗಳಲ್ಲಿ ಸೇರಿಸುವೆನು”.

(30) ಅವರು (ಮೂಸಾ) ಹೇಳಿದರು: “ನಾನು ತಮ್ಮ ಬಳಿಗೆ ಸ್ಪಷ್ಟವಾದ ಯಾವುದಾದರೂ ಪುರಾವೆಯನ್ನು ತಂದರೂ (ತಾವು ಒಪ್ಪಿಕೊಳ್ಳಲಾರಿರೇ?)

(31) ಅವನು ಹೇಳಿದನು: “ಹಾಗಾದರೆ ಅದನ್ನು ತಾ. ನೀನು ಸತ್ಯಸಂಧರಲ್ಲಿ ಸೇರಿದವನಾಗಿದ್ದರೆ”.

(32) ಆಗ ಅವರು (ಮೂಸಾ) ತಮ್ಮ ಬೆತ್ತವನ್ನು ಕೆಳಗೆ ಹಾಕಿದರು. ಆಗ ಅದೊಂದು ಪ್ರತ್ಯಕ್ಷ ಸರ್ಪವಾಗಿ ಮಾರ್ಪಟ್ಟಿತು.

(33) ಅವರು ತಮ್ಮ ಕೈಯನ್ನು ಹೊರತೆಗೆದರು. ಆಗ ಅದು ವೀಕ್ಷಕರಿಗೆ ಬೆಳ್ಳಗಾಗಿ ಕಂಡಿತು.

(34) ತನ್ನ ಸುತ್ತಮುತ್ತಲಿರುವ ಮುಖಂಡರೊಂದಿಗೆ ಅವನು (ಫಿರ್‍ಔನ್) ಹೇಳಿದನು: “ಖಂಡಿತವಾಗಿಯೂ ಇವನೊಬ್ಬ ಪಾಂಡಿತ್ಯವುಳ್ಳ ಮಾಂತ್ರಿಕನಾಗಿರುವನು.

(35) ಅವನು ತನ್ನ ಮಾಂತ್ರಿಕತೆಯಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಗಟ್ಟಲು ಇಚ್ಛಿಸುತ್ತಾನೆ. ಆದುದರಿಂದ ನೀವೇನು ಆದೇಶಿಸುವಿರಿ”.

(36) ಅವರು ಹೇಳಿದರು: “ತಾವು ಅವನಿಗೂ, ಅವನ ಸಹೋದರನಿಗೂ ಕಾಲಾವಕಾಶವನ್ನು ನೀಡಿರಿ. ಜನರನ್ನು ಒಟ್ಟುಗೂಡಿಸುವುದಕ್ಕಾಗಿ ತಾವು ನಗರಗಳಿಗೆ ದೂತರನ್ನು ಕಳುಹಿಸಿರಿ.

(37) ಪಾಂಡಿತ್ಯವುಳ್ಳ ಸರ್ವ ಮಾಂತ್ರಿಕರನ್ನೂ ಅವರು ತಮ್ಮ ಬಳಿಗೆ ಕರೆತರಲಿ”.

(38) ಹೀಗೆ ಒಂದು ಸುಪರಿಚಿತವಾದ ದಿನದ(785) ನಿಶ್ಚಿತ ಸಮಯದಲ್ಲಿ ಮಾಂತ್ರಿಕರನ್ನು ಒಟ್ಟುಗೂಡಿಸಲಾಯಿತು.
785. ಅದೊಂದು ಉತ್ಸವ ದಿನವಾಗಿತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುವುದಕ್ಕೋಸ್ಕರ ಆ ದಿನವನ್ನು ಆರಿಸಲಾಗಿತ್ತು.

(39) “ನೀವು ಒಟ್ಟು ಸೇರುತ್ತೀರಲ್ಲವೇ?” ಎಂದು ಜನರೊಂದಿಗೆ ಕೇಳಲಾಯಿತು.

(40) ಮಾಂತ್ರಿಕರು ವಿಜಯಿಗಳಾದರೆ ನಮಗೆ ಅವರನ್ನು ಅನುಸರಿಸಬಹುದು.

(41) ತರುವಾಯ ಮಾಂತ್ರಿಕರು ಬಂದಾಗ ಅವರು ಫಿರ್‍ಔನ್‍ನೊಂದಿಗೆ ಕೇಳಿದರು: “ಗೆದ್ದವರು ನಾವಾದರೆ ಖಂಡಿತವಾಗಿಯೂ ನಮಗೆ ಪ್ರತಿಫಲವಿರುವುದೇ?”

(42) ಅವನು ಹೇಳಿದನು: “ಹೌದು! ಖಂಡಿತವಾಗಿಯೂ ನೀವು ಸಾಮೀಪ್ಯ ಗಳಿಸಿದವರಲ್ಲಿ ಸೇರಿದವರಾಗುವಿರಿ”.

(43) ಮೂಸಾ ಅವರೊಂದಿಗೆ ಹೇಳಿದರು: “ನಿಮಗೆ ಹಾಕಲಿಕ್ಕಿರುವುದೆಲ್ಲವನ್ನು ಹಾಕಿರಿ”.

(44) ಆಗ ಅವರು ತಮ್ಮ ಹಗ್ಗಗಳನ್ನು ಮತ್ತು ಬೆತ್ತಗಳನ್ನು ಹಾಕಿದರು. ಅವರು ಹೇಳಿದರು: “ಫಿರ್‍ಔನ್‍ನ ಪ್ರತಾಪದ ಮೇಲಾಣೆ! ಖಂಡಿತವಾಗಿಯೂ ನಾವೇ ವಿಜೇತರಾಗುವೆವು”.

(45) ತರುವಾಯ ಮೂಸಾ ತಮ್ಮ ಬೆತ್ತವನ್ನು ಹಾಕಿದರು. ಆಗ ಅವರು ಮಿಥ್ಯವಾಗಿ ನಿರ್ಮಿಸಿರುವುದೆಲ್ಲವನ್ನೂ ಅದು ನುಂಗಿಹಾಕಿತು.

(46) ಆಗ ಮಾಂತ್ರಿಕರು ಸಾಷ್ಟಾಂಗ ಬಿದ್ದರು.

(47) ಅವರು ಹೇಳಿದರು: “ಸರ್ವಲೋಕಗಳ ರಬ್‌ನಲ್ಲಿ ನಾವು ವಿಶ್ವಾಸವಿಟ್ಟಿರುವೆವು”.

(48) ಮೂಸಾ ಮತ್ತು ಹಾರೂನ್‍ರ ರಬ್‌ನಲ್ಲಿ.

(49) ಅವನು (ಫಿರ್‍ಔನ್) ಹೇಳಿದನು: “ನಾನು ನಿಮಗೆ ಅಪ್ಪಣೆ ಕೊಡುವ ಮೊದಲೇ ನೀವು ಅವನಲ್ಲಿ ವಿಶ್ವಾಸವಿಡುವುದೇ? ಖಂಡಿತವಾಗಿಯೂ ಅವನು ನಿಮಗೆ ಮಾಂತ್ರಿಕತೆಯನ್ನು ಕಲಿಸಿಕೊಟ್ಟ ನಿಮ್ಮ ಮುಖಂಡನಾಗಿರುವನು. ತರುವಾಯ ನೀವು ಅರಿತುಕೊಳ್ಳುವಿರಿ. ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ನಿಮ್ಮ ಕಾಲುಗಳನ್ನು ಪರಸ್ಪರ ವಿರುದ್ಧ ದಿಕ್ಕುಗಳಿಂದ(786) ಕತ್ತರಿಸುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು”.
786. ಅರ್ಥಾತ್ ಬಲಗೈ ಮತ್ತು ಎಡಗಾಲು ಅಥವಾ ಎಡಗೈ ಮತ್ತು ಬಲಗಾಲು.

(50) ಅವರು ಹೇಳಿದರು: “ತೊಂದರೆಯಿಲ್ಲ. ಖಂಡಿತವಾಗಿಯೂ ನಾವು ನಮ್ಮ ರಬ್‌ನ ಕಡೆಗೆ ಮರಳುವವರಾಗಿರುವೆವು.

(51) ನಾವು ಮೊಟ್ಟ ಮೊದಲು ವಿಶ್ವಾಸವಿಟ್ಟವರಾಗಿರುವುದರಿಂದ ನಮ್ಮ ರಬ್ ನಮ್ಮ ಪಾಪಗಳನ್ನು ಮನ್ನಿಸುವನೆಂದು ನಾವು ಆಶಿಸುವೆವು”.

(52) ಮೂಸಾರಿಗೆ ನಾವು ದಿವ್ಯಸಂದೇಶವನ್ನು ನೀಡಿದೆವು: “ತಾವು ರಾತ್ರಿ ನನ್ನ ದಾಸರೊಂದಿಗೆ ಹೊರಡಿರಿ. ಖಂಡಿತವಾಗಿಯೂ (ಶತ್ರುಗಳು) ನಿಮ್ಮನ್ನು ಹಿಂಬಾಲಿಸುವರು”.

(53) ಆಗ ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಫಿರ್‍ಔನ್ ಪಟ್ಟಣಗಳಿಗೆ ದೂತರನ್ನು ಕಳುಹಿಸಿದನು.

(54) “ಖಂಡಿತವಾಗಿಯೂ ಇವರೊಂದು ಅಲ್ಪ ಸಂಖ್ಯಾತ ಸಮೂಹವಾಗಿರುವರು.

(55) ಖಂಡಿತವಾಗಿಯೂ ಅವರು ನಮ್ಮನ್ನು ಕೆರಳಿಸುತ್ತಿರುವರು.

(56) ಖಂಡಿತವಾಗಿಯೂ ನಾವು ಸಂಘಟಿತರೂ ಜಾಗರೂಕರೂ ಆಗಿರುವೆವು” (ಎಂದು ಸಾರಲು ಫಿರ್‍ಔನ್ ಆದೇಶಿಸಿದನು).

(57) ಹೀಗೆ ನಾವು ಅವರನ್ನು ತೋಟಗಳಿಂದಲೂ, ನೀರಿನ ಚಿಲುಮೆಗಳಿಂದಲೂ ಹೊರಗಟ್ಟಿದೆವು.

(58) ಭಂಡಾರಗಳಿಂದಲೂ, ಗೌರವಾನ್ವಿತ ವಾಸಸ್ಥಳಗಳಿಂದಲೂ.

(59) ಹೀಗಿದೆ (ನಮ್ಮ ಕ್ರಮ). ನಾವು ಅವೆಲ್ಲವನ್ನೂ ಇಸ್ರಾಈಲ್ ಸಂತತಿಗಳ ಹಕ್ಕನ್ನಾಗಿ ಮಾಡಿದೆವು.(787)
787. ಫಿರ್‍ಔನ್ ಮತ್ತು ಅವನ ಸಂಗಡಿಗರು ಮುಳುಗಿ ನಾಶವಾದ ಬಳಿಕ ಇಸ್ರಾಈಲರು ಈಜಿಪ್ಟಿನಲ್ಲಿ ವಾಸಿಸತೊಡಗಿದರೇ? ಇಸ್ರಾಈಲರು ಈಜಿಪ್ಟಿನಿಂದ ನಿರ್ಗಮಿಸಿದ ನಂತರ ಪುನಃ ಅಲ್ಲಿಗೇ ಮರಳಿ ವಾಸಿಸತೊಡಗಿದರು ಎಂಬುದಕ್ಕೆ ಕುರ್‌ಆನ್‍ನಲ್ಲಿ ಖಚಿತವಾದ ಯಾವುದೇ ಮಾಹಿತಿಗಳಿಲ್ಲ. ಈಜಿಪ್ಟಿನಿಂದ ನಿರ್ಗಮಿಸಿದ ಬಳಿಕ ಅವರು ಸೀನಾ ಕಣಿವೆಯಲ್ಲಿ ಅಲೆದಾಡುತ್ತಾ ಹಲವಾರು ದಶಕಗಳ ನಂತರ ವಾಗ್ದಾನ ಮಾಡಲಾದ ಭೂಮಿಯನ್ನು (ಪ್ಯಾಲಸ್ತೀನನ್ನು) ಪ್ರವೇಶಿಸಿದರು ಎಂದು ಕುರ್‌ಆನ್‍ನಿಂದ ತಿಳಿದುಬರುತ್ತದೆ. ‘ನಾವು ಅವೆಲ್ಲವನ್ನೂ ಇಸ್ರಾಈಲ್ ಸಂತತಿಗಳ ಹಕ್ಕನ್ನಾಗಿ ಮಾಡಿದೆವು’ ಎಂಬ ಸೂಕ್ತಿಯ ಅರ್ಥವು ಈಜಿಪ್ಟಿನಲ್ಲಿದ್ದುದಕ್ಕೆ ಸಮಾನವಾದ ಸುಖ ಸೌಕರ್ಯಗಳನ್ನು ನಾವು ಅವರಿಗೆ ಪ್ಯಾಲಸ್ತೀನಿನಲ್ಲಿ ನೀಡಿದೆವು ಎಂದಾಗಿದೆಯೆಂದು ಕೆಲವರು ವಿವರಿಸಿರುವರು. ಫಿರ್‍ಔನ್ ಮುಳುಗಿ ನಾಶವಾದ ತಕ್ಷಣ ಇಸ್ರಾಈಲರು ಈಜಿಪ್ಟಿಗೆ ಮರಳಿ ಅಲ್ಲಿ ಅನೇಕ ಕಾಲದವರೆಗೆ ವಾಸಿಸಿದರು ಎಂದು ಹೇಳಿದ ವ್ಯಾಖ್ಯಾನಕಾರರೂ ಇದ್ದಾರೆ. ಅವರು ಈ ಸೂಕ್ತಿಯನ್ನು ಅದರ ಬಾಹ್ಯಾರ್ಥದಲ್ಲೇ ಅರ್ಥಮಾಡಿಕೊಂಡಿದ್ದಾರೆ. ಪ್ರಾಚೀನ ಈಜಿಪ್ಟಿನ ಬಗ್ಗೆಯಿರುವ ಆಧುನಿಕ ಸಂಶೋಧನೆಗಳು ಈ ಅಭಿಪ್ರಾಯಕ್ಕೆ ಪೂರಕವಾಗಿದೆಯೆಂದು ಹೇಳಲಾಗುತ್ತದೆ.

(60) ತರುವಾಯ ಅವರು (ಫಿರ್‍ಔನ್ ಮತ್ತು ಸೈನ್ಯವು) ಸೂರ್ಯೋದಯದ ವೇಳೆಯಲ್ಲಿ ಅವರನ್ನು (ಇಸ್ರಾಈಲರನ್ನು) ಹಿಂಬಾಲಿಸಿದರು.

(61) ತರುವಾಯ ಎರಡು ಗುಂಪುಗಳು ಪರಸ್ಪರ ಕಂಡಾಗ ಮೂಸಾರ ಅನುಚರರು ಹೇಳಿದರು: “ಖಂಡಿತವಾಗಿಯೂ ನಾವು ಹಿಡಿಯಲ್ಪಡುವೆವು”.

(62) ಅವರು ಹೇಳಿದರು: “ಎಂದಿಗೂ ಇಲ್ಲ. ಖಂಡಿತವಾಗಿಯೂ ನನ್ನ ರಬ್ ನನ್ನ ಜೊತೆಗಿರುವನು. ಅವನು ನನಗೆ ದಾರಿತೋರಿಸುವನು”.

(63) ಆಗ ನಾವು ಮೂಸಾರಿಗೆ “ತಾವು ತಮ್ಮ ಬೆತ್ತದಿಂದ ಸಮುದ್ರಕ್ಕೆ ಬಡಿಯಿರಿ” ಎಂದು ದಿವ್ಯಸಂದೇಶ ನೀಡಿದೆವು. ಆಗ ಅದು (ಸಮುದ್ರ) ಇಬ್ಭಾಗವಾಗಿ ಅದರ (ನೀರಿನ) ಪ್ರತಿಯೊಂದು ಹೋಳು ದೊಡ್ಡ ಪರ್ವತದಂತಾಯಿತು.

(64) ಇತರರನ್ನು (ಫಿರ್‍ಔನ್‍ನ ಜನರನ್ನು) ನಾವು ಅದರ ಬಳಿಗೆ ಮುಟ್ಟಿಸಿದೆವು.

(65) ಮೂಸಾ ಮತ್ತು ಅವರೊಂದಿಗಿದ್ದ ಎಲ್ಲರನ್ನೂ ನಾವು ರಕ್ಷಿಸಿದೆವು.

(66) ತರುವಾಯ ಇತರರನ್ನು ನಾವು ಮುಳುಗಿಸಿದೆವು.

(67) ಖಂಡಿತವಾಗಿಯೂ ಅದರಲ್ಲಿ (ಸತ್ಯನಿಷೇಧಿಗಳಿಗೆ) ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(68) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(69) ಇಬ್ರಾಹೀಮ್‌ರ ವೃತ್ತಾಂತವನ್ನು ತಾವು ಅವರಿಗೆ ಓದಿಕೊಡಿರಿ.

(70) “ನೀವು ಏನನ್ನು ಆರಾಧಿಸುತ್ತಿದ್ದೀರಿ” ಎಂದು ಅವರು ತಮ್ಮ ತಂದೆಯೊಂದಿಗೆ ಮತ್ತು ತಮ್ಮ ಜನತೆಯೊಂದಿಗೆ ಕೇಳಿದ ಸಂದರ್ಭ.

(71) ಅವರು ಹೇಳಿದರು: “ನಾವು ಕೆಲವು ವಿಗ್ರಹಗಳನ್ನು ಆರಾಧಿಸುತ್ತಿರುವೆವು ಮತ್ತು ಅವುಗಳ ಮುಂದೆ ಆರಾಧನಾಮಗ್ನರಾಗಿ ಕೂರುವೆವು”.

(72) ಅವರು (ಇಬ್ರಾಹೀಮ್) ಕೇಳಿದರು: “ನೀವು ಪ್ರಾರ್ಥಿಸುವಾಗ ಅವರು ಅದನ್ನು ಆಲಿಸುವರೇ?

(73) ಅಥವಾ ಅವರು ನಿಮಗೆ ಲಾಭವನ್ನಾಗಲಿ ಹಾನಿಯನ್ನಾಗಲಿ ಮಾಡುವರೇ?”

(74) ಅವರು ಹೇಳಿದರು: “ಅಲ್ಲ, ನಮ್ಮ ಪೂರ್ವಿಕರು ಹೀಗೆ ಮಾಡುತ್ತಿರುವುದಾಗಿ ನಾವು ಕಂಡಿರುವೆವು”.

(75) ಅವರು ಹೇಳಿದರು: “ಹಾಗಾದರೆ ನೀವು ಆರಾಧಿಸುತ್ತಿರುವುದಾದರೂ ಏನನ್ನು ಎಂದು ನೀವು ಆಲೋಚಿಸಿದ್ದೀರಾ?

(76) ನೀವು ಮತ್ತು ನಿಮ್ಮ ಪೂರ್ವಿಕರು?

(77) ಅವರು (ಆರಾಧ್ಯರು) ಖಂಡಿತವಾಗಿಯೂ ನನ್ನ ಶತ್ರುಗಳಾಗಿರುವರು, ಸರ್ವಲೋಕಗಳ ರಬ್‌ನ ಹೊರತು.

(78) ಅಂದರೆ ನನ್ನನ್ನು ಸೃಷ್ಟಿಸಿ ನನಗೆ ಮಾರ್ಗದರ್ಶನ ಮಾಡುತ್ತಿರುವವನು.

(79) ನನಗೆ ಅನ್ನವನ್ನೂ ಪಾನೀಯವನ್ನೂ ನೀಡುವವನು.

(80) ನಾನು ಕಾಯಿಲೆ ಬಿದ್ದರೆ ನನಗೆ ಸೌಖ್ಯವನ್ನು ನೀಡುವವನು.

(81) ನನ್ನನ್ನು ಮೃತಪಡಿಸುವವನು ಮತ್ತು ತರುವಾಯ ನನಗೆ ಜೀವವನ್ನು ನೀಡುವವನು.

(82) ಪ್ರತಿಫಲ ದಿನದಂದು ಯಾರು ನನ್ನ ಪಾಪಗಳನ್ನು ಕ್ಷಮಿಸುವನೆಂದು ನಾನು ಆಶಿಸುತ್ತಿರುವೆನೋ ಅವನು.

(83) ನನ್ನ ಪ್ರಭೂ! ನನಗೆ ತತ್ವಜ್ಞಾನವನ್ನು ಕರುಣಿಸು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು.

(84) ಮುಂದಿನ ತಲೆಮಾರುಗಳಲ್ಲಿ ನನಗೆ ಅತ್ಯುತ್ತಮ ಕೀರ್ತಿಯನ್ನು ಕರುಣಿಸು.

(85) ಸುಖಸಮೃದ್ಧಿಯಿಂದ ಕೂಡಿದ ಸ್ವರ್ಗದ ಹಕ್ಕುದಾರರಲ್ಲಿ ನನ್ನನ್ನು ಸೇರಿಸು.

(86) ನನ್ನ ತಂದೆಗೆ ಪಾಪಮುಕ್ತಿ ನೀಡು. ಖಂಡಿತವಾಗಿಯೂ ಅವರು ಪಥಭ್ರಷ್ಟರಲ್ಲಿ ಸೇರಿದವರಾಗಿರುವರು.

(87) ಅವರನ್ನು (ಮನುಷ್ಯರನ್ನು) ಪುನರುತ್ಥಾನಗೊಳಿಸಲಾಗುವ ದಿನದಂದು ನನಗೆ ಅವಮಾನ ಮಾಡದಿರು.

(88) ಅಂದರೆ ಸಂಪತ್ತಾಗಲಿ, ಸಂತತಿಯಾಗಲಿ ಪ್ರಯೋಜನಪಡದ ದಿನ!

(89) ಪಾಪರಹಿತವಾದ ಹೃದಯದೊಂದಿಗೆ ಅಲ್ಲಾಹುವಿನ ಬಳಿ ಬಂದವನಿಗಲ್ಲದೆ.

(90) ಭಯಭಕ್ತಿ ಪಾಲಿಸಿದವರಿಗೆ (ಅಂದು) ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು.

(91) ದುರ್ಮಾರ್ಗಿಗಳಿಗೆ ನರಕವನ್ನು ತೆರೆದು ತೋರಿಸಲಾಗುವುದು.

(92) ಅವರೊಂದಿಗೆ ಕೇಳಲಾಗುವುದು: “ನೀವು ಆರಾಧಿಸುತ್ತಿದ್ದುದೆಲ್ಲವೂ ಎಲ್ಲಿ ಹೋದವು?

(93) ಅಲ್ಲಾಹುವಿನ ಹೊರತು. ಅವರು ನಿಮಗೆ ಸಹಾಯ ಮಾಡುವರೇ? ಅಥವಾ ಸ್ವತಃ ಅವರಿಗೇ ಸಹಾಯ ಮಾಡುವರೇ?”

(94) ತರುವಾಯ ಅವರನ್ನು (ಆ ಆರಾಧ್ಯರನ್ನು) ಮತ್ತು ದುರ್ಮಾರ್ಗಿಗಳನ್ನು ಅದರಲ್ಲಿ (ನರಕಾಗ್ನಿಯಲ್ಲಿ) ತಲೆಕೆಳಗಾಗಿ ಬೀಳಿಸಲಾಗುವುದು.

(95) ಮತ್ತು ಇಬ್ಲೀಸನ ಸಂಪೂರ್ಣ ಸೈನ್ಯವನ್ನು.

(96) ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು:

(97) “ಅಲ್ಲಾಹುವಿನ ಮೇಲಾಣೆ! ಖಂಡಿತವಾಗಿಯೂ ನಾವು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿದ್ದೆವು.

(98) ನಾವು ನಿಮ್ಮನ್ನು ಸರ್ವಲೋಕಗಳ ರಬ್‌ನೊಂದಿಗೆ ಸಮೀಕರಿಸಿದಾಗ.

(99) ನಮ್ಮನ್ನು ಪಥಭ್ರಷ್ಟಗೊಳಿಸಿದ್ದು ಆ ಅಪರಾಧಿಗಳ ಹೊರತು ಇನ್ನಾರೂ ಅಲ್ಲ.

(100) ಈಗ ನಮಗೆ ಶಿಫಾರಸು ಮಾಡುವವರು ಯಾರೂ ಇಲ್ಲ.

(101) ಆಪ್ತ ಮಿತ್ರನೂ ಇಲ್ಲ.

(102) ಆದುದರಿಂದ ನಮಗೆ ಮರಳಿ ಹೋಗಲು ಸಾಧ್ಯವಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಲ್ಲಿ ಸೇರಿದವರಾಗುತ್ತಿದ್ದೆವು”.

(103) ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(104) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(105) ನೂಹ್‍ರ ಜನತೆಯು ಸಂದೇಶವಾಹಕರನ್ನು ನಿಷೇಧಿಸಿದರು.

(106) “ನೀವು ಭಯಭಕ್ತಿ ಪಾಲಿಸುವುದಿಲ್ಲವೇ?” ಎಂದು ಅವರ ಸಹೋದರರಾದ ನೂಹ್ ಅವರೊಂದಿಗೆ ಹೇಳಿದ ಸಂದರ್ಭ.

(107) “ಖಂಡಿತವಾಗಿಯೂ ನಾನು ನಿಮಗಿರುವ ಒಬ್ಬ ಪ್ರಾಮಾಣಿಕ ಸಂದೇಶವಾಹಕನು.

(108) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(109) ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನನಗಿರುವ ಪ್ರತಿಫಲವು ಸರ್ವಲೋಕಗಳ ರಬ್‌ನ ಕಡೆಯಿಂದ ಮಾತ್ರವಾಗಿದೆ.

(110) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ”.

(111) ಅವರು ಹೇಳಿದರು: “ತಮ್ಮನ್ನು ಹಿಂಬಾಲಿಸಿದವರು ಕೆಳವರ್ಗದ ಜನರಾಗಿರುವಾಗ ನಾವು ತಮ್ಮಲ್ಲಿ ವಿಶ್ವಾಸವಿಡಬೇಕೇ?”

(112) ಅವರು (ನೂಹ್) ಹೇಳಿದರು: “ಅವರು ಮಾಡುತ್ತಿರುವುದರ ಬಗ್ಗೆ ನನಗೇನು ಜ್ಞಾನವಿದೆ?(788)
788. ಅವರ ಉಚ್ಛತೆಗೆ ಮತ್ತು ನೀಚತೆಗೆ ಮಾನದಂಡವಾಗಿರುವುದು ಅವರ ಕರ್ಮಗಳಾಗಿವೆ. ಕರ್ಮಗಳ ವಿಚಾರಣೆ ಮಾಡುವುದು ನನ್ನ ಹೊಣೆಯಲ್ಲ. ಅದನ್ನು ವಿಚಾರಣೆ ಮಾಡಿ ಪ್ರತಿಫಲ ನೀಡುವವನು ಅಲ್ಲಾಹುವಾಗಿದ್ದಾನೆ. ಆದುದರಿಂದ ನೀವು ಕೆಳವರ್ಗದವರೆಂದು ಕರೆಯುವ ಸತ್ಯವಿಶ್ವಾಸಿಗಳನ್ನು ನಿಮ್ಮ ಸಂತೃಪ್ತಿಗಾಗಿ ನಾನು ದೂರ ಅಟ್ಟಲಾರೆನು ಎಂದರ್ಥ.

(113) ಅವರನ್ನು ವಿಚಾರಣೆ ಮಾಡಬೇಕಾದ ಹೊಣೆಯಿರುವುದು ನನ್ನ ರಬ್‌ಗೆ ಮಾತ್ರವಾಗಿದೆ. ನೀವು ಗ್ರಹಿಸುವವರಾಗಿದ್ದರೆ.

(114) ನಾನೆಂದೂ ಸತ್ಯವಿಶ್ವಾಸಿಗಳನ್ನು ದೂರ ಅಟ್ಟುವುದಿಲ್ಲ.

(115) ನಾನು ಸ್ಪಷ್ಟವಾದ ಒಬ್ಬ ಮುನ್ನೆಚ್ಚರಿಕೆಗಾರನು ಮಾತ್ರವಾಗಿರುವೆನು”.

(116) ಅವರು ಹೇಳಿದರು: “ಓ ನೂಹ್! ತಾವು (ಇದನ್ನು) ನಿಲ್ಲಿಸದಿದ್ದರೆ ಖಂಡಿತವಾಗಿಯೂ ತಾವು ಕಲ್ಲೆಸೆದು ಸಾಯಿಸಲಾದವರಲ್ಲಿ ಸೇರುವಿರಿ”.

(117) ಅವರು ಹೇಳಿದರು: “ನನ್ನ ಪ್ರಭೂ! ಖಂಡಿತವಾಗಿಯೂ ನನ್ನ ಜನರು ನನ್ನನ್ನು ನಿಷೇಧಿಸಿರುವರು.

(118) ಆದುದರಿಂದ ನೀನು ನನ್ನ ಮತ್ತು ಅವರ ಮಧ್ಯೆ ನಿರ್ಣಾಯಕವಾದ ಒಂದು ತೀರ್ಪನ್ನು ನೀಡು. ನನ್ನನ್ನು ಮತ್ತು ನನ್ನ ಜೊತೆಗಿರುವ ಸತ್ಯವಿಶ್ವಾಸಿಗಳನ್ನು ರಕ್ಷಿಸು”.

(119) ಆಗ ನಾವು ಅವರನ್ನು ಮತ್ತು ಅವರ ಜೊತೆಗಿರುವವರನ್ನು ಭಾರ ಹೊತ್ತ ಹಡಗಿನಲ್ಲಿ ರಕ್ಷಿಸಿದೆವು.

(120) ತರುವಾಯ ಬಾಕಿಯುಳಿದವರನ್ನು ಆಮೇಲೆ ನಾವು ಮುಳುಗಿಸಿದೆವು.

(121) ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(122) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(123) ಆದ್ ಜನಾಂಗದವರು ಸಂದೇಶವಾಹಕರನ್ನು ನಿಷೇಧಿಸಿದರು.

(124) “ನೀವು ಭಯಭಕ್ತಿ ಪಾಲಿಸುವುದಿಲ್ಲವೇ?” ಎಂದು ಅವರ ಸಹೋದರರಾದ ಹೂದ್ ಅವರೊಂದಿಗೆ ಹೇಳಿದ ಸಂದರ್ಭ.

(125) “ಖಂಡಿತವಾಗಿಯೂ ನಾನು ನಿಮಗಿರುವ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನು.

(126) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(127) ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನನಗಿರುವ ಪ್ರತಿಫಲವು ಸರ್ವಲೋಕಗಳ ರಬ್‌ನ ಕಡೆಯಿಂದ ಮಾತ್ರವಾಗಿದೆ.

(128) ವೃಥಾ ದುರಭಿಮಾನಪಡುವ ಸಲುವಾಗಿ ಎಲ್ಲ ಗುಡ್ಡಗಾಡುಗಳಲ್ಲೂ ನೀವು ಪ್ರತಿಷ್ಠೆಯ ಲಾಂಛನ (ಗೋಪುರ)ಗಳನ್ನು ನಿರ್ಮಿಸುತ್ತಿದ್ದೀರಾ?

(129) ನೀವು ಶಾಶ್ವತವಾಗಿ ವಾಸಿಸುವಿರಿ ಎಂಬ ಭಾವದಲ್ಲಿ ಮಹಾಸೌಧಗಳನ್ನು ನಿರ್ಮಿಸುತ್ತಿದ್ದೀರಾ?

(130) ನೀವು ಬಲಪ್ರಯೋಗ ಮಾಡುವಾಗ ದಬ್ಬಾಳಿಕೆಗಾರರಂತೆ ಬಲಪ್ರಯೋಗ ಮಾಡುತ್ತಿದ್ದೀರಿ.

(131) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(132) ಸ್ವತಃ ನೀವೇ ಅರಿಯುವಂತಹವುಗಳ (ಸುಖ ಸೌಕರ್ಯಗಳ) ಮೂಲಕ ನಿಮಗೆ ನೆರವು ನೀಡಿದವನನ್ನು ಭಯಪಡಿರಿ.

(133) ಜಾನುವಾರುಗಳು ಮತ್ತು ಸಂತತಿಗಳು ಮೂಲಕ ಅವನು ನಿಮಗೆ ನೆರವು ನೀಡಿರುವನು.

(134) ತೋಟಗಳು ಮತ್ತು ಕಾಲುವೆಗಳ ಮೂಲಕ.

(135) ನಿಮ್ಮ ಬಗ್ಗೆ ಭಯಾನಕ ದಿನವೊಂದರ ಶಿಕ್ಷೆಯನ್ನು ಖಂಡಿತವಾಗಿಯೂ ನಾನು ಭಯಪಡುತ್ತಿರುವೆನು”.

(136) ಅವರು ಹೇಳಿದರು: “ತಾವು ಉಪದೇಶ ನೀಡಿದರೂ ಅಥವಾ ಉಪದೇಶ ನೀಡುವವರಲ್ಲಿ ಸೇರದಿದ್ದರೂ ನಮ್ಮ ಮಟ್ಟಿಗೆ ಅದು ಸಮಾನವಾಗಿದೆ.

(137) ಇದು(789) ಪೂರ್ವಿಕರ ಸಂಪ್ರದಾಯವೇ ಆಗಿದೆ.
789. ‘ಇದು’ ಎಂಬುದರ ತಾತ್ಪರ್ಯವು ಅವರ ಧಾರ್ಮಿಕ ಆಚಾರವಾಗಿರಬಹುದು. ‘ನಾವು ಸ್ವೀಕರಿಸಿದ ಈ ಧರ್ಮವು ನಮ್ಮ ಪೂರ್ವಿಕರ ಸಂಪ್ರದಾಯವಾಗಿದೆ. ಅದನ್ನು ನಾವು ತ್ಯಜಿಸಲಾರೆವು’ ಎಂಬುದು ಈ ವಾಕ್ಯದ ಅರ್ಥವಾಗಿರಬಹುದು. ಅಥವಾ ‘ಇದು’ ಎಂಬುದರ ತಾತ್ಪರ್ಯವು ಪ್ರವಾದಿ ಹೂದ್‍ರವರು ಬೋಧಿಸುತ್ತಿರುವ ವಿಶ್ವಾಸ-ಆಚಾರಗಳಾಗಿರಬಹುದು. ಆಗ ಅದರ ಅರ್ಥವು: ‘ತಾವು ಹೇಳುವ ವಿಷಯಗಳು -ವಿಶೇಷವಾಗಿ ಪರಲೋಕ ಶಿಕ್ಷೆಗೆ ಸಂಬಂಧಿಸಿದ ಎಚ್ಚರಿಕೆಗಳು- ಹಳೆಯ ಕಾಲದವರು ಹೇಳುತ್ತಾ ಬಂದಿರುವ ಪುರಾಣಗಳಾಗಿವೆ. ಅವೊಂದೂ ಸತ್ಯವಲ್ಲ’ ಎಂದಾಗಿರಬಹುದು.

(138) ನಾವು ಶಿಕ್ಷೆಗೊಳಗಾಗುವವರಲ್ಲ”.

(139) ತರುವಾಯ ಅವರು ಅವರನ್ನು (ಹೂದ್‍ರನ್ನು) ನಿಷೇಧಿಸಿದರು. ಆದುದರಿಂದ ನಾವು ಅವರನ್ನು ನಾಶ ಮಾಡಿದೆವು. ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(140) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(141) ಸಮೂದ್ ಜನಾಂಗದವರು ಸಂದೇಶವಾಹಕರನ್ನು ನಿಷೇಧಿಸಿದರು.

(142) “ನೀವು ಭಯಭಕ್ತಿ ಪಾಲಿಸುವುದಿಲ್ಲವೇ?” ಎಂದು ಅವರ ಸಹೋದರರಾದ ಸ್ವಾಲಿಹ್ ಅವರೊಂದಿಗೆ ಹೇಳಿದ ಸಂದರ್ಭ.

(143) “ಖಂಡಿತವಾಗಿಯೂ ನಾನು ನಿಮಗಿರುವ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನು.

(144) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(145) ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನನಗಿರುವ ಪ್ರತಿಫಲವು ಸರ್ವಲೋಕಗಳ ರಬ್‌ನ ಕಡೆಯಿಂದ ಮಾತ್ರವಾಗಿದೆ.

(146) ಇಲ್ಲಿರುವುದರಲ್ಲೇ (ಸಮೃದ್ಧಿಯಲ್ಲೇ) ನಿರ್ಭೀತರಾಗಿ ಕಳೆಯಲು ನಿಮ್ಮನ್ನು ಬಿಟ್ಟುಬಿಡಲಾಗುವುದೇ?

(147) ಅಂದರೆ ತೋಟಗಳಲ್ಲಿ ಮತ್ತು ಕಾಲುವೆಗಳಲ್ಲಿ.

(148) ಹೊಲಗಳಲ್ಲಿ ಮತ್ತು ಗೊನೆಗಳ ಭಾರದಿಂದ ತೂಗುತ್ತಿರುವ ಖರ್ಜೂರದ ಮರಗಳಲ್ಲಿ.(790)
790. ಐಶ್ವರ್ಯಗಳಿಂದ ತುಂಬಿದ ಈ ಬದುಕನ್ನು ನೀವು ಸದಾಕಾಲ ಆಸ್ವಾದಿಸುತ್ತಲೇ ಇರಲು ನಿಮಗೆ ಅನುಮತಿ ನೀಡಲಾಗುವುದು ಎಂದು ನೀವು ಭಾವಿಸಿದ್ದೀರಾ? ಎಂದರ್ಥ.

(149) ನೀವು ಉತ್ಸಾಹಭರಿತರಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತಿದ್ದೀರಿ.

(150) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(151) ಅತಿಕ್ರಮಿಗಳ ಆಜ್ಞೆಯನ್ನು ನೀವು ಅನುಸರಿಸದಿರಿ.

(152) ಅಂದರೆ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಮತ್ತು ಸುಧಾರಣೆ ಮಾಡದವರನ್ನು.

(153) ಅವರು ಹೇಳಿದರು: “ತಾವು ಮಾಟಕ್ಕೊಳಗಾದವರಲ್ಲಿ ಸೇರಿದ ಒಬ್ಬ ವ್ಯಕ್ತಿ ಮಾತ್ರವಾಗಿದ್ದೀರಿ.(791)
791. ತಮಗೆ ಯಾರೋ ಮಾಟ ಮಾಡಿರುವುದರಿಂದಲೇ ತಾವು ಹೀಗೆ ಅಸಹಜವಾಗಿ ಏನೇನೋ ಮಾತನಾಡುತ್ತಿರುವಿರಿ ಎಂದು ನಾವು ಭಾವಿಸುತ್ತಿದ್ದೇವೆ ಎಂದರ್ಥ.

(154) ತಾವು ನಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿದ್ದೀರಿ. ಆದುದರಿಂದ ತಾವು ಸತ್ಯಸಂಧರಲ್ಲಿ ಸೇರಿದವರಾದರೆ ಯಾವುದಾದರೂ ದೃಷ್ಟಾಂತವನ್ನು ತನ್ನಿರಿ.

(155) ಅವರು ಹೇಳಿದರು: “ಇಗೋ ಒಂದು ಒಂಟೆ. ಅದಕ್ಕೆ ನೀರು ಕುಡಿಯಲು ಒಂದು ಸರದಿಯಿದೆ. ನಿಮಗೂ ಒಂದು ಸರದಿಯಿದೆ; ಒಂದು ನಿಶ್ಚಿತ ದಿನದಲ್ಲಿ.

(156) ಯಾವುದೇ ಹಾನಿಯೊಂದಿಗೆ ಅದನ್ನು ಮುಟ್ಟದಿರಿ. (ಹಾಗೆ ಮಾಡಿದರೆ) ಭಯಾನಕವಾದ ದಿನವೊಂದರ ಶಿಕ್ಷೆಯು ನಿಮ್ಮನ್ನು ಹಿಡಿಯುವುದು”.

(157) ಆದರೆ ಅವರು ಅದನ್ನು ಕಡಿದು ಸಾಯಿಸಿದರು. ತರುವಾಯ ಅವರು ವಿಷಾದಿಸುವವರಾದರು.

(158) ಆಗ ಶಿಕ್ಷೆಯು ಅವರನ್ನು ಹಿಡಿದುಕೊಂಡಿತು. ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(159) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(160) ಲೂತ್‍ರ ಜನತೆ ಸಂದೇಶವಾಹಕರನ್ನು ನಿಷೇಧಿಸಿದರು.

(161) “ನೀವು ಭಯಭಕ್ತಿ ಪಾಲಿಸುವುದಿಲ್ಲವೇ?” ಎಂದು ಅವರ ಸಹೋದರರಾದ ಲೂತ್ ಅವರೊಂದಿಗೆ ಹೇಳಿದ ಸಂದರ್ಭ.

(162) “ಖಂಡಿತವಾಗಿಯೂ ನಾನು ನಿಮಗಿರುವ ಒಬ್ಬ ವಿಶ್ವಾಸಾರ್ಹ ಸಂದೇಶವಾಹಕನು.

(163) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(164) ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನನಗಿರುವ ಪ್ರತಿಫಲವು ಸರ್ವಲೋಕಗಳ ರಬ್‌ನ ಕಡೆಯಿಂದ ಮಾತ್ರವಾಗಿದೆ.

(165) ನೀವು ಜನರ ಪೈಕಿ ಪುರುಷರ ಬಳಿಗೆ ತೆರಳುತ್ತೀರಾ?

(166) ನಿಮ್ಮ ರಬ್ ನಿಮಗಾಗಿ ಸೃಷ್ಟಿಸಿರುವ ನಿಮ್ಮ ಸಂಗಾತಿಗಳನ್ನು ನೀವು ತ್ಯಜಿಸುತ್ತಿದ್ದೀರಾ? ಅಲ್ಲ, ಖಂಡಿತವಾಗಿಯೂ ನೀವು ಹದ್ದುಮೀರಿದ ಒಂದು ಜನತೆಯಾಗಿದ್ದೀರಿ”.

(167) ಅವರು ಹೇಳಿದರು: “ಓ ಲೂತ್! ತಾವು (ಇದನ್ನು) ನಿಲ್ಲಿಸದಿದ್ದರೆ ಖಂಡಿತವಾಗಿಯೂ ತಾವು (ಊರಿನಿಂದ) ಹೊರಗಟ್ಟಲಾದವರಲ್ಲಿ ಸೇರುವಿರಿ”.

(168) ಅವರು (ಲೂತ್) ಹೇಳಿದರು: “ಖಂಡಿತವಾಗಿಯೂ ನಾನು ನಿಮ್ಮ ಕೃತ್ಯವನ್ನು ಅಸಹ್ಯಪಡುವವರಲ್ಲಿ ಸೇರಿದವನಾಗಿರುವೆನು”.

(169) (ಲೂತ್ ಪ್ರಾರ್ಥಿಸಿದರು): “ನನ್ನ ಪ್ರಭೂ! ನನ್ನನ್ನು ಮತ್ತು ನನ್ನ ಕುಟುಂಬವನ್ನು ಇವರು ಮಾಡುತ್ತಿರುವ ಕೃತ್ಯದಿಂದ ರಕ್ಷಿಸು”.

(170) ಆಗ ನಾವು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿಸಿದೆವು.

(171) ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು.(792)
792. ಆಕೆ ಲೂತ್(ಅ) ರವರ ಪತ್ನಿಯಾಗಿದ್ದಳು ಮತ್ತು ಆಕೆ ಸತ್ಯನಿಷೇಧಿಯಾಗಿದ್ದಳು.

(172) ತರುವಾಯ ಇತರೆಲ್ಲರನ್ನೂ ನಾವು ನಾಶ ಮಾಡಿದೆವು.

(173) ನಾವು ಅವರ ಮೇಲೆ ಒಂದು ವಿಧದ ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರಿಗೆ ಲಭ್ಯವಾದ ಆ ಮಳೆಯು ಎಷ್ಟು ನಿಕೃಷ್ಟವಾದುದು!(793)
793. ಒಂದು ವಿಧದ ಬಿಸಿ ಕಲ್ಲುಗಳನ್ನು ಅವರ ಮೇಲೆ ಸುರಿಸಲಾಯಿತೆಂದು 15:74ರಲ್ಲಿ ಹೇಳಲಾಗಿದೆ.

(174) ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(175) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(176) ಐಕತ್‍ನಲ್ಲಿ (ವೃಕ್ಷವನದಲ್ಲಿ) ವಾಸಿಸುತ್ತಿದ್ದವರು(794) ಸಂದೇಶವಾಹಕರನ್ನು ನಿಷೇಧಿಸಿದರು.
794. ಐಕತ್‍ನವರು ಮದ್ಯನ್ ಪ್ರದೇಶದ ಸಮೀಪದಲ್ಲೇ ವಾಸಿಸುತ್ತಿದ್ದರು.

(177) “ನೀವು ಭಯಭಕ್ತಿ ಪಾಲಿಸುವುದಿಲ್ಲವೇ?” ಎಂದು ಶುಐಬ್‍ರು ಹೇಳಿದ ಸಂದರ್ಭ.

(178) “ಖಂಡಿತವಾಗಿಯೂ ನಾನು ನಿಮಗಿರುವ ಒಬ್ಬ ಪ್ರಾಮಾಣಿಕ ಸಂದೇಶವಾಹಕನು.

(179) ಆದುದರಿಂದ ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

(180) ಇದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ನನಗಿರುವ ಪ್ರತಿಫಲವು ಸರ್ವಲೋಕಗಳ ರಬ್‌ನ ಕಡೆಯಿಂದ ಮಾತ್ರವಾಗಿದೆ.

(181) ನೀವು ಅಳತೆಯನ್ನು ಪೂರ್ತಿಯಾಗಿ ಕೊಡಿರಿ. ನೀವು (ಜನರಿಗೆ) ನಷ್ಟವನ್ನುಂಟುಮಾಡುವವರಲ್ಲಿ ಸೇರದಿರಿ.

(182) ಸರಿಯಾದ ತಕ್ಕಡಿಯಲ್ಲಿ ತೂಕ ಮಾಡಿರಿ.

(183) ಜನರಿಗೆ ಅವರ ಸಾಮಗ್ರಿಗಳನ್ನು ಕಡಿಮೆ ಮಾಡದಿರಿ. ಭೂಮಿಯಲ್ಲಿ ವಿನಾಶಕಾರಿಗಳಾಗಿ ಅತಿಕ್ರಮವೆಸಗದಿರಿ.

(184) ನಿಮ್ಮನ್ನು ಮತ್ತು ಪೂರ್ವ ತಲೆಮಾರುಗಳನ್ನು ಸೃಷ್ಟಿಸಿದವನನ್ನು ಭಯಪಡಿರಿ”.

(185) ಅವರು ಹೇಳಿದರು: “ತಾವು ಮಾಟಕ್ಕೊಳಗಾದವರಲ್ಲಿ ಸೇರಿದ ಒಬ್ಬ ವ್ಯಕ್ತಿ ಮಾತ್ರವಾಗಿದ್ದೀರಿ.

(186) ತಾವು ನಮ್ಮಂತಿರುವ ಒಬ್ಬ ಮನುಷ್ಯ ಮಾತ್ರವಾಗಿದ್ದೀರಿ. ಖಂಡಿತವಾಗಿಯೂ ತಾವು ಸುಳ್ಳು ನುಡಿಯುವವರಲ್ಲಿ ಸೇರಿದವರಾಗಿದ್ದೀರಿ ಎಂದು ನಾವು ಭಾವಿಸುತ್ತಿರುವೆವು.

(187) ಆದುದರಿಂದ ತಾವು ಸತ್ಯಸಂಧರಲ್ಲಿ ಸೇರಿದವರಾಗಿದ್ದರೆ ಆಕಾಶದಿಂದಿರುವ ತುಣುಕುಗಳನ್ನು ನಮ್ಮ ಮೇಲೆ ಬೀಳಿಸಿರಿ”.

(188) ಶುಐಬ್ ಹೇಳಿದರು: “ನೀವು ಮಾಡುತ್ತಿರುವುದರ ಬಗ್ಗೆ ನನ್ನ ರಬ್ ಚೆನ್ನಾಗಿ ಅರಿತಿರುವನು”.

(189) ತರುವಾಯ ಅವರು ಅವರನ್ನು ನಿಷೇಧಿಸಿದರು. ಆದುದರಿಂದ ಮೋಡದ ನೆರಳು ಮುಸುಕಿದ ದಿನದ ಶಿಕ್ಷೆಯು ಅವರನ್ನು ಹಿಡಿಯಿತು.(795) ಖಂಡಿತವಾಗಿಯೂ ಅದೊಂದು ಭಯಾನಕ ದಿನದ ಶಿಕ್ಷೆಯಾಗಿತ್ತು.
795. ಮೋಡ ಪದರಗಳು ಅವರ ಮೇಲ್ಭಾಗದಲ್ಲಿ ಪ್ರತ್ಯಕ್ಷಗೊಂಡು ಅದರಿಂದ ಅಗ್ನಿಯು ಅವರ ಮೇಲೆರಗಿತೆಂದು ಕೆಲವು ವ್ಯಾಖ್ಯಾನಕಾರರು ಹೇಳಿದ್ದಾರೆ.

(190) ಖಂಡಿತವಾಗಿಯೂ (ಜನರಿಗೆ) ಅದರಲ್ಲಿ ಒಂದು ದೃಷ್ಟಾಂತವಿದೆ. ಆದರೆ ಅವರ ಪೈಕಿ ಹೆಚ್ಚಿನವರೂ ವಿಶ್ವಾಸವಿಡುವವರಾಗಲಿಲ್ಲ.

(191) ಖಂಡಿತವಾಗಿಯೂ ತಮ್ಮ ರಬ್ ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವನು.

(192) ಖಂಡಿತವಾಗಿಯೂ ಇದು (ಕುರ್‌ಆನ್) ಸರ್ವಲೋಕಗಳ ರಬ್ ಅವತೀರ್ಣಗೊಳಿಸಿದ್ದಾಗಿದೆ.

(193) ವಿಶ್ವಾಸಾರ್ಹ ಆತ್ಮನು (ಜಿಬ್ರೀಲ್) ಅದರೊಂದಿಗೆ ಇಳಿದಿರುವರು.

(194) ತಮ್ಮ ಹೃದಯದಲ್ಲಿ. ತಾವು ಮುನ್ನೆಚ್ಚರಿಕೆ ನೀಡುವವರಲ್ಲಿ ಸೇರಿದವರಾಗುವ ಸಲುವಾಗಿ.

(195) ಸ್ಪಷ್ಟವಾದ ಅರಬಿ ಭಾಷೆಯಲ್ಲಿ (ಅದು ಅವತೀರ್ಣಗೊಂಡಿದೆ).

(196) ಖಂಡಿತವಾಗಿಯೂ ಅದು ಪೂರ್ವಕಾಲದವರ ಗ್ರಂಥಗಳಲ್ಲಿರುವುದಾಗಿದೆ.(796)
796. ಕುರ್‌ಆನ್ ಅವತೀರ್ಣದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಕುರ್‌ಆನಿನ ಸತ್ಯತೆಗೆ ಸಾಕ್ಷ್ಯವಹಿಸುವ ಅನೇಕ ಸೂಕ್ತಿಗಳು ಪೂರ್ವಗ್ರಂಥಗಳಲ್ಲಿವೆ.

(197) ಇಸ್ರಾಈಲ್ ಸಂತತಿಗಳಲ್ಲಿರುವ ವಿದ್ವಾಂಸರು ಅದನ್ನು ಅರಿತಿರುವರು ಎಂಬುದು ಇವರಿಗೆ (ಅವಿಶ್ವಾಸಿಗಳಿಗೆ) ಒಂದು ದೃಷ್ಟಾಂತವಾಗಲಾರದೇ?(797)
797. ಅಬ್ದುಲ್ಲಾಹ್ ಇಬ್ನ್ ಸಲಾಮ್‍ರಂತಿರುವ ಯಹೂದ ವಿದ್ವಾಂಸರು ಕುರ್‌ಆನಿನ ದೈವಿಕತೆಗೆ ಹಾಗೂ ಪ್ರವಾದಿ(ಸ) ರವರ ಸಂದೇಶವಾಹಕತ್ವಕ್ಕೆ ಸಾಕ್ಷ್ಯವಹಿಸಿದ್ದರು.

(198) ನಾವು ಅದನ್ನು ಅರಬೇತರರಲ್ಲಿ ಸೇರಿದ ವ್ಯಕ್ತಿಯ ಮೇಲೆ ಅವತೀರ್ಣಗೊಳಿಸಿದ್ದರೆ.

(199) ತರುವಾಯ ಅವನು ಅದನ್ನು ಅವರಿಗೆ ಓದಿಕೊಡುತ್ತಿದ್ದರೂ ಅವರು ಅದರಲ್ಲಿ ವಿಶ್ವಾಸವಿಡುತ್ತಿರಲಿಲ್ಲ.

(200) ಹೀಗೆ ಅಪರಾಧಿಗಳ ಹೃದಯಗಳಲ್ಲಿ ನಾವು ಅದನ್ನು (ಅವಿಶ್ವಾಸವನ್ನು) ನುಸುಳಿಸಿರುವೆವು.

(201) ಯಾತನಾಮಯ ಶಿಕ್ಷೆಯನ್ನು ಕಾಣುವ ತನಕ ಅವರು ಅದರಲ್ಲಿ ವಿಶ್ವಾಸವಿಡಲಾರರು.

(202) ಅವರು ಭಾವಿಸಿರದ ಸ್ಥಿತಿಯಲ್ಲಿ ಹಠಾತ್ತನೆ ಅದು ಅವರೆಡೆಗೆ ಬರುವುದು.

(203) ಆಗ ಅವರು “ನಮಗೆ (ಸ್ವಲ್ಪ) ಕಾಲಾವಕಾಶ ನೀಡಲಾಗುವುದೇ?” ಎಂದು ಕೇಳುವರು.

(204) ಹಾಗಾದರೆ ಅವರು ನಮ್ಮ ಶಿಕ್ಷೆಯ ಬಗ್ಗೆ ಆತುರಪಡುತ್ತಿರುವರೇ?

(205) ತಾವು ಆಲೋಚಿಸಿದ್ದೀರಾ? ನಾವು ಅವರಿಗೆ ಅನೇಕ ವರ್ಷಗಳ ತನಕ ಸುಖಾನುಕೂಲತೆಗಳನ್ನು ನೀಡಿದೆವು.

(206) ಆಮೇಲೆ ಅವರಿಗೆ ಎಚ್ಚರಿಕೆ ನೀಡಲಾಗುತ್ತಿದ್ದ ಶಿಕ್ಷೆಯು ಅವರೆಡೆಗೆ ಬಂದಿತು.

(207) (ಆದರೂ) ಅವರಿಗೆ ನೀಡಲಾಗಿರುವ ಆ ಸುಖಾನುಕೂಲತೆಗಳು ಅವರಿಗೆ ಯಾವುದೇ ಪ್ರಯೋಜನವನ್ನೂ ಮಾಡುತ್ತಿರಲಿಲ್ಲ.(798)
798. ಸುದೀರ್ಘ ಕಾಲದ ಸಮೃದ್ಧಿಯ ಫಲಗಳನ್ನು ತಮ್ಮ ವಶದಲ್ಲಿಟ್ಟಿರುವ ಸಂದರ್ಭದಲ್ಲಿ ಅಲ್ಲಾಹುವಿನ ಶಿಕ್ಷೆಯು ಎರಗುವುದಾದರೂ ಕೂಡ ಆ ಶಿಕ್ಷೆಯನ್ನು ತಡೆಯಲು ಅಥವಾ ಹಗುರಗೊಳಿಸಲು ಅದೊಂದೂ ಅವರಿಗೆ ಪ್ರಯೋಜನಕ್ಕೆ ಬಾರದು.

(208) ನಾವು ಯಾವುದೇ ನಾಡನ್ನೂ ನಾಶ ಮಾಡಿಲ್ಲ; ಅದಕ್ಕೆ ಮುನ್ನೆಚ್ಚರಿಕೆ ನೀಡುವವರು ಇದ್ದ ಹೊರತು.

(209) ಇದು ನೆನಪಿಸುವುದಕ್ಕಾಗಿ ಮಾತ್ರವಾಗಿದೆ. ನಾವು ಅನ್ಯಾಯ ಮಾಡುವವರಾಗಿರಲಿಲ್ಲ.

(210) ಇದರೊಂದಿಗೆ (ಕುರ್‌ಆನಿನೊಂದಿಗೆ) ಸೈತಾನರು ಇಳಿದು ಬಂದಿಲ್ಲ.(799)
799. ಮುಹಮ್ಮದ್‍ರಿಗೆ ಕುರ್‌ಆನನ್ನು ಓದಿಕೊಡುತ್ತಿರುವುದು ಒಬ್ಬ ಸೈತಾನನಾಗಿದ್ದಾನೆ ಎಂದು ಸತ್ಯನಿಷೇಧಿಗಳ ಪೈಕಿ ಕೆಲವರು ಅಪಪ್ರಚಾರ ಮಾಡುತ್ತಿದ್ದುದನ್ನು ಇಲ್ಲಿ ಖಂಡಿಸಲಾಗಿದೆ.

(211) ಅವರಿಗೆ ಅದು ಯುಕ್ತವಾದುದೂ ಅಲ್ಲ. ಅವರಿಗೆ ಅದು ಸಾಧ್ಯವೂ ಅಲ್ಲ.

(212) ಖಂಡಿತವಾಗಿಯೂ ಅವರು (ದಿವ್ಯಸಂದೇಶವನ್ನು) ಆಲಿಸುವುದರಿಂದ ದೂರ ಸರಿಸಲ್ಪಟ್ಟಿರುವರು.

(213) ಆದುದರಿಂದ ತಾವು ಅಲ್ಲಾಹುವಿನ ಜೊತೆಗೆ ಅನ್ಯ ಆರಾಧ್ಯರನ್ನು ಕರೆದು ಪ್ರಾರ್ಥಿಸದಿರಿ. ಹಾಗೆ ಮಾಡಿದರೆ ತಾವು ಶಿಕ್ಷಿಸಲ್ಪಡುವವರಲ್ಲಿ ಸೇರಿದವರಾಗುವಿರಿ.

(214) ತಮ್ಮ ನಿಕಟ ಸಂಬಂಧಿಕರಿಗೆ ಮುನ್ನೆಚ್ಚರಿಕೆ ನೀಡಿರಿ.

(215) ತಮ್ಮನ್ನು ಅನುಸರಿಸಿದ ಸತ್ಯವಿಶ್ವಾಸಿಗಳಿಗೆ ತಮ್ಮ ರೆಕ್ಕೆಯನ್ನು ತಗ್ಗಿಸಿಕೊಡಿರಿ.(800)
800. ಅವರೊಂದಿಗೆ ಅನುಕಂಪದೊಂದಿಗೆ ಮತ್ತು ಕನಿಕರದೊಂದಿಗೆ ವರ್ತಿಸಿರಿ ಎಂದರ್ಥ.

(216) ಅವರು ತಮ್ಮನ್ನು ಅನುಸರಿಸುವುದಿಲ್ಲವೆಂದಾದರೆ “ನೀವು ಮಾಡುತ್ತಿರುವ ಯಾವುದಕ್ಕೂ ನಾನು ಹೊಣೆಗಾರನಲ್ಲ” ಎಂದು ಹೇಳಿಬಿಡಿರಿ.

(217) ಪ್ರತಾಪಶಾಲಿಯೂ ಕರುಣಾನಿಧಿಯೂ ಆಗಿರುವವನ ಮೇಲೆ ಭರವಸೆಯಿಡಿರಿ.

(218) ತಾವು ನಿಂತು ನಮಾಝ್ ಮಾಡುವಾಗ ಅವನು ತಮ್ಮನ್ನು ವೀಕ್ಷಿಸುತ್ತಿರುವನು.

(219) ಸಾಷ್ಟಾಂಗ ಮಾಡುವವರೊಂದಿಗಿರುವ ತಮ್ಮ ಚಲನವಲನಗಳನ್ನೂ (ಅವನು ವೀಕ್ಷಿಸುತ್ತಿರುವನು).

(220) ಖಂಡಿತವಾಗಿಯೂ ಅವನು ಎಲ್ಲವನ್ನು ಆಲಿಸುವವನೂ ಆಗಿರುವನು.

(221) (ಓ ಪ್ರವಾದಿಯವರೇ!) “ಸೈತಾನರು ಇಳಿಯುವುದು ಯಾರ ಮೇಲೆಂದು ನಾನು ನಿಮಗೆ ತಿಳಿಸಿಕೊಡಲೇ?” (ಎಂದು ಅವರೊಂದಿಗೆ ಕೇಳಿರಿ).

(222) ಮಹಾ ಸುಳ್ಳರು ಮತ್ತು ಪಾಪಿಗಳಾಗಿರುವ ಎಲ್ಲರ ಮೇಲೂ ಅವರು (ಸೈತಾನರು) ಇಳಿಯುವರು.

(223) ಅವರು ಕಿವಿಗೊಟ್ಟು ಆಲಿಸುವರು. ಅವರಲ್ಲಿ ಹೆಚ್ಚಿನವರೂ ಸುಳ್ಳು ನುಡಿಯುವವರಾಗಿರುವರು.

(224) ಕವಿಗಳನ್ನು ದುರ್ಮಾರ್ಗಿಗಳು ಅನುಸರಿಸುವರು.

(225) ಅವರು ಎಲ್ಲ ಕಣಿವೆಗಳಲ್ಲೂ ಅಲೆದಾಡುವುದನ್ನು ತಾವು ಕಾಣುವುದಿಲ್ಲವೇ?

(226) ಅವರು ತಾವು ಮಾಡದಿರುವುದನ್ನು ಹೇಳುವವರೂ ಆಗಿರುವರು.(801)
801. ಕಾವ್ಯವು ಒಂದು ಮಾಧ್ಯಮವಾಗಿದೆ. ಒಳಿತು ಮತ್ತು ಕೆಡುಕುಗಳೆರಡನ್ನೂ ಬೆಳೆಸಲು ಅದನ್ನು ಬಳಸಲಾಗುತ್ತದೆ. ಸಮಾಜದೊಂದಿಗೆ ತಮಗೆ ಯಾವುದೇ ಹೊಣೆಗಾರಿಕೆಯಿಲ್ಲ ಮತ್ತು ತಮಗೆ ಸುಂದರವಾಗಿ ತೋಚುವುದೆಲ್ಲವನ್ನೂ ಅಕ್ಷರರೂಪಕ್ಕಿಳಿಸುವುದೇ ಸಾಹಿತ್ಯವಾಗಿದೆ ಎಂಬ ದೃಷ್ಟಿಕೋನವು ಇಂದಿನಂತೆಯೇ ಆ ಕಾಲಘಟ್ಟದ ಕವಿಗಳನ್ನೂ ವಶೀಕರಿಸಿತ್ತು. ಸ್ವಚ್ಛಂದ ಕಾಮ, ಸುಳ್ಳಾರೋಪ, ಸ್ವಭಾವದೂಷಣೆ ಇತ್ಯಾದಿಗಳು ಅಂದಿನ ಅನೇಕ ಕವಿಗಳ ಪ್ರಮೇಯವಾಗಿದ್ದವು. ಸತ್ಯನಿಷೇಧಿಗಳಿಂದ ಹಣ ಪಡೆದು ಅನೇಕ ಕವಿಗಳು ಪ್ರವಾದಿರವರನ್ನು ಹೀಯಾಳಿಸುತ್ತಾ ಕವಿತೆಗಳನ್ನು ರಚಿಸುತ್ತಿದ್ದರು. 224ರಿಂದ 227ರವರೆಗಿನ ಸೂಕ್ತಿಗಳು ಅವತೀರ್ಣವಾದ ಹಿನ್ನೆಲೆಯು ಇದಾಗಿತ್ತು. ರಚನಾತ್ಮಕ ಉದ್ದೇಶವನ್ನು ಹೊಂದಿರುವ ಕವಿಗಳನ್ನು 227ನೇ ವಚನವು ದೋಷಮುಕ್ತಗೊಳಿಸುತ್ತದೆ.

(227) ಆದರೆ ವಿಶ್ವಾಸವಿಟ್ಟವರು, ಸತ್ಕರ್ಮಗೈದವರು, ಅಲ್ಲಾಹುವನ್ನು ಅತ್ಯಧಿಕವಾಗಿ ಸ್ಮರಿಸುವವರು, ಹಿಂಸೆಗೊಳಗಾದ ಬಳಿಕ ಆತ್ಮರಕ್ಷಣೆಗಾಗಿ ಕ್ರಮಕೈಗೊಂಡವರು(802) ಇದರಿಂದ ಹೊರತಾಗಿರುವರು. ತಾವು ಹೊರಳಿ ಹೊರಳಿ ಎಂತಹ ಪರ್ಯಾವಸಾನದೆಡೆಗೆ ತಲುಪುವೆವೆಂದು ಅಕ್ರಮಿಗಳು ತರುವಾಯ ಅರಿತುಕೊಳ್ಳುವರು.
802. ಇಲ್ಲಿ ಸೂಚಿಸಿರುವುದು ಸತ್ಯನಿಷೇಧಿ ಕವಿಗಳ ಆರೋಪಗಳಿಗೆ ಸಮರ್ಥವಾದ ಉತ್ತರವನ್ನು ನೀಡಿದ ಮುಸ್ಲಿಮ್ ಕವಿಗಳ ಬಗ್ಗೆಯಾಗಿದೆ.