49 - Al-Hujuraat ()

|

(1) ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮುಂಭಾಗದಲ್ಲಿ (ಏನನ್ನೂ) ಪೂರ್ವಭಾವಿಯಾಗಿ ಮಾಡದಿರಿ. ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.

(2) ಓ ಸತ್ಯವಿಶ್ವಾಸಿಗಳೇ! ನಿಮ್ಮ ಧ್ವನಿಗಳನ್ನು ಪ್ರವಾದಿಯವರ ಧ್ವನಿಗಿಂತ ಎತ್ತರಿಸದಿರಿ. ಅವರೊಂದಿಗೆ ಮಾತನಾಡುವಾಗ ನೀವು ಪರಸ್ಪರ ಕೂಗಾಡುವಂತೆ ಕೂಗಾಡದಿರಿ. ನಿಮಗೆ ಅರಿವಿಲ್ಲದೆಯೇ ನಿಮ್ಮ ಕರ್ಮಗಳು ನಿಷ್ಪಲವಾಗದಿರುವ ಸಲುವಾಗಿ.

(3) ಖಂಡಿತವಾಗಿಯೂ ಅಲ್ಲಾಹುವಿನ ಸಂದೇಶವಾಹಕರ ಬಳಿ ತಮ್ಮ ಧ್ವನಿಗಳನ್ನು ತಗ್ಗಿಸುವವರಾರೋ ಅವರ ಹೃದಯಗಳನ್ನು ಅಲ್ಲಾಹು ಧರ್ಮನಿಷ್ಠೆಗಾಗಿ ಪರೀಕ್ಷಿಸಿರುವನು. ಅವರಿಗೆ ಪಾಪಮುಕ್ತಿಯೂ, ಮಹಾ ಪ್ರತಿಫಲವೂ ಇದೆ.

(4) ಖಂಡಿತವಾಗಿಯೂ (ತಾವು ತಂಗುವ) ಕೊಠಡಿಗಳ ಹೊರಗಿನಿಂದ ತಮ್ಮನ್ನು ಕರೆಯುವವರಾರೋ ಅವರಲ್ಲಿ ಹೆಚ್ಚಿನವರೂ ಚಿಂತಿಸಿ ಅರ್ಥಮಾಡಿಕೊಳ್ಳುವುದಿಲ್ಲ.

(5) ತಾವು ಅವರ ಬಳಿಗೆ ಹೊರಡುವ ತನಕ ಅವರು ತಾಳ್ಮೆ ವಹಿಸಿರುತ್ತಿದ್ದರೆ ಅದು ಅವರಿಗೆ ಅತ್ಯುತ್ತಮವಾಗಿರುತ್ತಿತ್ತು. ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(6) ಓ ಸತ್ಯವಿಶ್ವಾಸಿಗಳೇ! ಒಬ್ಬ ಧಿಕ್ಕಾರಿಯು ಯಾವುದಾದರೂ ಮಾಹಿತಿಯೊಂದಿಗೆ ನಿಮ್ಮ ಬಳಿಗೆ ಬಂದರೆ ನೀವು ಅದರ ಬಗ್ಗೆ ಸ್ಪಷ್ಟವಾಗಿ ತಪಾಸಣೆ ಮಾಡಿರಿ. ಅರಿವಿಲ್ಲದೆ ಯಾವುದಾದರೂ ಜನತೆಗೆ ನೀವು ಹಾನಿಯನ್ನುಂಟು ಮಾಡಿ ತರುವಾಯ ಆ ಕೃತ್ಯದ ನಿಮಿತ್ತ ನೀವು ವಿಷಾದಿಸುವವರಾಗದಿರುವ ಸಲುವಾಗಿ.

(7) ನಿಮ್ಮ ಮಧ್ಯೆಯಿರುವುದು ಅಲ್ಲಾಹುವಿನ ಸಂದೇಶವಾಹಕರಾಗಿರುವರು ಎಂಬುದನ್ನು ಅರಿತುಕೊಳ್ಳಿರಿ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮನ್ನು ಅನುಸರಿಸಿರುತ್ತಿದ್ದರೆ ನೀವು ಸಂಕಷ್ಟಕ್ಕೊಳಗಾಗುತ್ತಿದ್ದಿರಿ.(1137) ಆದರೂ ಅಲ್ಲಾಹು ನಿಮಗೆ ಸತ್ಯವಿಶ್ವಾಸವನ್ನು ಇಷ್ಟಕರವಾಗಿಸಿದನು ಮತ್ತು ನಿಮ್ಮ ಹೃದಯಗಳಲ್ಲಿ ಅದನ್ನು ಆಕರ್ಷಣೀಯವಾಗಿ ತೋರಿಸಿಕೊಟ್ಟನು. ಅವಿಶ್ವಾಸ, ಧಿಕ್ಕಾರ ಮತ್ತು ಅವಿಧೇಯತೆಯನ್ನು ಅವನು ನಿಮಗೆ ಅಸಹ್ಯಕರವಾಗಿಸಿದನು. ಸನ್ಮಾರ್ಗವನ್ನು ಪಡೆದವರು ಅವರೇ ಆಗಿರುವರು.
1137. ಪ್ರವಾದಿಯನ್ನು ಕಳುಹಿಸಲಾಗಿರುವುದು ನಿಮ್ಮ ಇಚ್ಛೆಗನುಸಾರ ತೀರ್ಮಾನ ಕೈಗೊಳ್ಳುವುದಕ್ಕಲ್ಲ, ಬದಲಾಗಿ ಅಲ್ಲಾಹುವಿನ ಆದೇಶ ಪ್ರಕಾರ ಕಾರ್ಯೋನ್ಮುಖರಾಗುವುದಕ್ಕಾಗಿದೆ. ನಿಮಗೆ ಆತ್ಯಂತಿಕವಾಗಿ ಒಳಿತಾಗಿರುವುದು ಏನೆಂದು ನಿಮಗಿಂತಲೂ ಹೆಚ್ಚು ತಿಳುವಳಿಕೆಯಿರುವುದು ಅಲ್ಲಾಹುವಿನ ಪ್ರವಾದಿಗಾಗಿದೆ ಎಂದರ್ಥ.

(8) ಅದು ಅಲ್ಲಾಹುವಿನ ವತಿಯ ಒಂದು ಔದಾರ್ಯ ಮತ್ತು ಅನುಗ್ರಹವಾಗಿದೆ. ಅಲ್ಲಾಹು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುವನು.

(9) ಸತ್ಯವಿಶ್ವಾಸಿಗಳಲ್ಲಿ ಸೇರಿದ ಎರಡು ಗುಂಪುಗಳು ಪರಸ್ಪರ ಹೋರಾಡಿದರೆ ನೀವು ಅವರ ಮಧ್ಯೆ ಸಂಧಾನ ಮಾಡಿರಿ. ತರುವಾಯ ಎರಡರ ಪೈಕಿ ಒಂದು ಗುಂಪು ಇನ್ನೊಂದು ಗುಂಪಿನ ವಿರುದ್ಧ ಅತಿಕ್ರಮವೆಸಗಿದರೆ ಅತಿಕ್ರಮವೆಸಗಿದ ಗುಂಪಿನ ವಿರುದ್ಧ ಅವರು ಅಲ್ಲಾಹುವಿನ ಆಜ್ಞೆಗೆ ಮರಳುವವರೆಗೆ ಹೋರಾಡಿರಿ. ತರುವಾಯ ಆ ಗುಂಪು ಮರಳುವುದಾದರೆ ನ್ಯಾಯಬದ್ಧವಾಗಿ ಆ ಎರಡು ಗುಂಪುಗಳ ಮಧ್ಯೆ ಸಂಧಾನ ಮಾಡಿರಿ ಮತ್ತು ನ್ಯಾಯ ಪಾಲಿಸಿರಿ. ಖಂಡಿತವಾಗಿಯೂ ಅಲ್ಲಾಹು ನ್ಯಾಯಪಾಲಿಸುವವರನ್ನು ಇಷ್ಟಪಡುವನು.

(10) ಸತ್ಯವಿಶ್ವಾಸಿಗಳು (ಪರಸ್ಪರ) ಸಹೋದರರಾಗಿರುವರು.(1138) ಆದ್ದರಿಂದ ನಿಮ್ಮ ಇಬ್ಬರು ಸಹೋದರರ ಮಧ್ಯೆ ನೀವು ಸಂಧಾನ ಮಾಡಿರಿ. ಅಲ್ಲಾಹುವನ್ನು ಭಯಪಡಿರಿ. ನಿಮಗೆ ಕರುಣೆ ಲಭ್ಯವಾಗಲೂಬಹುದು.
1138. ಸತ್ಯವಿಶ್ವಾಸಿಗಳು ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಪ್ರೀತಿವಾತ್ಸಲ್ಯದಿಂದ ಮತ್ತು ಪರಸ್ಪರ ತಾಳ್ಮೆಯಿಂದ ವರ್ತಿಸುತ್ತಾ ಜೊತೆಯಾಗಿ ಬಾಳಬೇಕಾದವರಾಗಿದ್ದಾರೆ.

(11) ಓ ಸತ್ಯವಿಶ್ವಾಸಿಗಳೇ! ಒಂದು ಜನತೆಯು ಇನ್ನೊಂದು ಜನತೆಯನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ಸ್ತ್ರೀಯರ ಪೈಕಿ ಒಂದು ಗುಂಪು ಇನ್ನೊಂದು ಗುಂಪಿನ ಸ್ತ್ರೀಯರನ್ನು ಅಪಹಾಸ್ಯ ಮಾಡದಿರಲಿ. ಇವರು (ಅಪಹಾಸ್ಯಕ್ಕೊಳಗಾದವರು) ಅವರಿಗಿಂತಲೂ ಉತ್ತಮರಾಗಿರಬಹುದು. ನೀವು ಪರಸ್ಪರ ಚುಚ್ಚಿ ಮಾತನಾಡದಿರಿ. ನೀವು ಅಡ್ಡಹೆಸರುಗಳಿಂದ ಕರೆದು ಪರಸ್ಪರ ಅವಮಾನ ಮಾಡದಿರಿ. ಸತ್ಯವಿಶ್ವಾಸವನ್ನು ಸ್ವೀಕರಿಸಿದ ನಂತರ ಕೆಟ್ಟ ಹೆಸರು (ಕರೆಯುವುದು) ಎಷ್ಟು ನೀಚವಾದುದು! ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರು ಅಕ್ರಮಿಗಳಾಗಿರುವರು.

(12) ಓ ಸತ್ಯವಿಶ್ವಾಸಿಗಳೇ! ನೀವು ಊಹೆಗಳ ಪೈಕಿ ಹೆಚ್ಚಿನವುಗಳನ್ನೂ ವರ್ಜಿಸಿರಿ. ಖಂಡಿತವಾಗಿಯೂ ಊಹೆಗಳ ಪೈಕಿ ಕೆಲವು ಪಾಪವಾಗಿವೆ. ನೀವು ಗೂಢಚರ್ಯೆ ಮಾಡದಿರಿ. ನಿಮ್ಮಲ್ಲಿ ಕೆಲವರು ಇತರ ಕೆಲವರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಕೆಟ್ಟದಾಗಿ ಮಾತನಾಡದಿರಲಿ. ತನ್ನ ಸಹೋದರನು ಮೃತಪಟ್ಟು ಮಲಗಿರುವಾಗ ಅವನ ಮಾಂಸವನ್ನು ತಿನ್ನಲು ನಿಮ್ಮಲ್ಲಿ ಯಾರಾದರೂ ಇಷ್ಟಪಡುವರೇ?(1139) ನೀವು ಅದನ್ನು (ತಿನ್ನುವುದನ್ನು) ಅಸಹ್ಯಪಡುವಿರಿ! ನೀವು ಅಲ್ಲಾಹುವನ್ನು ಭಯಪಡಿರಿ. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
1139. ಪರದೂಷಣೆಯು ಶವವನ್ನು ತಿನ್ನುವುದಕ್ಕೆ ಸಮಾನವೆಂದು ಈ ಸೂಕ್ತಿಯು ಸೂಚಿಸುತ್ತದೆ. ಸ್ವಂತ ಸಹೋದರನ ಮಾಂಸವನ್ನು ಕಚ್ಚಿ ಹರಿದು ತಿನ್ನಲು ಯಾರೂ ಇಷ್ಟಪಡುವುದಿಲ್ಲವಾದರೆ ತನ್ನ ಸಹೋದರನ ಅನುಪಸ್ಥಿತಿಯಲ್ಲಿ ಅವನು ಇಷ್ಟಪಡದ ವಿಷಯಗಳನ್ನು ಹೇಳುವುದನ್ನು ಅವನು ವರ್ಜಿಸಬೇಕಾಗಿದೆ.

(13) ಓ ಮನುಷ್ಯರೇ! ಖಂಡಿತವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆವು. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿವಿಧ ಸಮುದಾಯ ಮತ್ತು ಜನಾಂಗಗಳನ್ನಾಗಿ ಮಾಡಿರುವೆವು. ಖಂಡಿತವಾಗಿಯೂ ಅಲ್ಲಾಹುವಿನ ಬಳಿ ನಿಮ್ಮ ಪೈಕಿ ಅತ್ಯಂತ ಗೌರವಾನ್ವಿತನು ನಿಮ್ಮ ಪೈಕಿ ಅತಿಹೆಚ್ಚು ಭಯಭಕ್ತಿ ಪಾಲಿಸುವವನಾಗಿರುವನು.(1140) ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮ ಜ್ಞಾನಿಯೂ ಆಗಿರುವನು.
1140. ಸಮುದಾಯದ ಗಾತ್ರವಾಗಲಿ, ಜನಾಂಗದ ಮಹಿಮೆಯಾಗಲಿ ಯಾರಿಗೂ ಅಲ್ಲಾಹುವಿನ ಬಳಿ ಏನನ್ನೂ ಗಳಿಸಿಕೊಡದು. ಧರ್ಮನಿಷ್ಠೆಯುಳ್ಳವನಿಗೆ ಮಾತ್ರ ಅಲ್ಲಾಹುವಿನ ಬಳಿ ಪದವಿಯಿದೆಯೆಂದು ಈ ಸೂಕ್ತಿಯು ಸೂಚಿಸುತ್ತದೆ.

(14) ಗ್ರಾಮೀಣ ಅರಬರು ಹೇಳುವರು: ‘ನಾವು ವಿಶ್ವಾಸವಿಟ್ಟಿರುವೆವು’. ಹೇಳಿರಿ: ‘ನೀವು ವಿಶ್ವಾಸವಿಟ್ಟಿಲ್ಲ, ಆದರೆ ‘ನಾವು ಶರಣಾಗಿರುವೆವು’ ಎಂದು ಹೇಳಿರಿ. ವಿಶ್ವಾಸವು ನಿಮ್ಮ ಹೃದಯವನ್ನು ಪ್ರವೇಶಿಸಿಲ್ಲ. ನೀವು ಅಲ್ಲಾಹುವನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುವುದಾದರೆ ನಿಮಗೆ ನಿಮ್ಮ ಕರ್ಮಫಲಗಳಲ್ಲಿ ಏನನ್ನೂ ಅವನು ಕಮ್ಮಿ ಮಾಡಲಾರನು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು’.

(15) ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟು, ತರುವಾಯ ಸಂದೇಹಪಡದೆ, ತಮ್ಮ ಸಂಪತ್ತು ಮತ್ತು ಶರೀರಗಳ ಮೂಲಕ ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ ಮಾಡುವವರು ಯಾರೋ ಅವರು ಮಾತ್ರ ಸತ್ಯವಿಶ್ವಾಸಿಗಳಾಗಿರುವರು. ಸತ್ಯಸಂಧರು ಸಹ ಅವರೇ ಆಗಿರುವರು.

(16) ಹೇಳಿರಿ: ‘ನಿಮ್ಮ ಧರ್ಮದ ಬಗ್ಗೆ ನೀವು ಅಲ್ಲಾಹುವಿಗೆ ಕಲಿಸುವುದೇ? ಅಲ್ಲಾಹು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದನ್ನೆಲ್ಲ ಅರಿಯುವನು. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆಯೂ ಅರಿವುಳ್ಳವನಾಗಿರುವನು.

(17) ಅವರು ಇಸ್ಲಾಮ್ ಧರ್ಮ ಸ್ವೀಕರಿಸಿರುವುದನ್ನು ಅವರು ತಮ್ಮೊಂದಿಗೆ ತೋರಿಸಿದ ದಾಕ್ಷಿಣ್ಯವಾಗಿ ಎತ್ತಿತೋರಿಸುತ್ತಿರುವರು. ಹೇಳಿರಿ: ‘ನೀವು ಇಸ್ಲಾಮ್ ಸ್ವೀಕರಿಸಿರುವುದನ್ನು ನನ್ನೊಂದಿಗೆ ತೋರಿಸಿದ ದಾಕ್ಷಿಣ್ಯವಾಗಿ ಎತ್ತಿ ತೋರಿಸದಿರಿ. ಅಲ್ಲ, ಸತ್ಯವಿಶ್ವಾಸದೆಡೆಗೆ ನಿಮಗೆ ಮಾರ್ಗದರ್ಶನ ಮಾಡಿದನು ಎಂಬುದು ಅಲ್ಲಾಹು ನಿಮ್ಮೊಂದಿಗೆ ತೋರಿಸಿದ ದಾಕ್ಷಿಣ್ಯವಾಗಿದೆ. ನೀವು ಸತ್ಯಸಂಧರಾಗಿದ್ದರೆ (ಇದನ್ನು ಒಪ್ಪಿಕೊಳ್ಳಿರಿ)’.

(18) ಖಂಡಿತವಾಗಿಯೂ ಅಲ್ಲಾಹು ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಅಗೋಚರ ವಿಷಯಗಳನ್ನು ಅರಿಯುವನು. ಅಲ್ಲಾಹು ನೀವು ಮಾಡುತ್ತಿರುವುದನ್ನು ವೀಕ್ಷಿಸುವವನಾಗಿರುವನು.