97 - Al-Qadr ()

|

(1) ಖಂಡಿತವಾಗಿಯೂ ನಾವು ಇದನ್ನು (ಕುರ್‌ಆನನ್ನು) ನಿರ್ಣಯದ ರಾತ್ರಿಯಲ್ಲಿ(1419) ಅವತೀರ್ಣಗೊಳಿಸಿರುವೆವು.
1419. ಪವಿತ್ರ ಕುರ್‌ಆನ್ ಅವತೀರ್ಣಗೊಂಡ ಅಥವಾ ಅವತೀರ್ಣಾರಂಭಗೊಂಡ ರಾತ್ರಿಯನ್ನು ಸೂರಃ ಅದ್ದುಖಾನ್‍ನಲ್ಲಿ ಲೈಲುತುಲ್ ಮುಬಾರಕಃ ಎನ್ನಲಾಗಿದೆ. ಇಲ್ಲಿ ಅದನ್ನು ಲೈಲತುಲ್ ಕದ್ರ್ ಎನ್ನಲಾಗಿದೆ. ಕದ್ರ್ ಎಂಬ ಪದಕ್ಕೆ ನಿರ್ಣಯ, ಮಹತ್ವ ಇತ್ಯಾದಿ ಅರ್ಥಗಳಿವೆ. ಪವಿತ್ರ ಕುರ್‌ಆನಿನ ಅವತೀರ್ಣವು ಮಾನವ ಚರಿತ್ರೆಯಲ್ಲೇ ಒಂದು ಪ್ರಮುಖ ತಿರುವಾಗಿದೆ. ಸಂಪೂರ್ಣ ಮಾನವ ಕುಲಕ್ಕೆ ಒಂದು ಮಾರ್ಗದರ್ಶಿಯಾಗಿ ಕುರ್‌ಆನ್ ಅವತೀರ್ಣಗೊಂಡ ರಾತ್ರಿಗೆ ಇತರ ರಾತ್ರಿಗಳಿಗಿಲ್ಲದ ಮಹತ್ವವನ್ನು ಅಲ್ಲಾಹು ನೀಡಿದ್ದಾನೆ. ಈ ರಾತ್ರಿ ರಮದಾನ್ ತಿಂಗಳಲ್ಲಾಗಿದೆಯೆಂದು ಕುರ್‌ಆನಿನ 2/185 ನೇ ಸೂಕ್ತಿಯಿಂದ ಮನದಟ್ಟು ಮಾಡಬಹುದು. ಅದು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿ ಒಂದಾಗಿದೆಯೆಂದು ಹದೀಸ್‍ಗಳಲ್ಲಿ ಹೇಳಲಾಗಿದೆ.

(2) ನಿರ್ಣಯದ ರಾತ್ರಿ ಎಂದರೆ ಏನೆಂದು ತಮಗೆ ಗೊತ್ತಿದೆಯೇ?

(3) ನಿರ್ಣಯದ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾಗಿದೆ.

(4) ಮಲಕ್‍ಗಳು ಮತ್ತು ಆತ್ಮವು(1420) ಅವರ ರಬ್‌ನ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅಪ್ಪಣೆಯೊಂದಿಗೆ ಆ ರಾತ್ರಿಯಲ್ಲಿ ಇಳಿದು ಬರುವುವು.
1420. ಇಲ್ಲಿ ರೂಹ್ (ಆತ್ಮ) ಎಂಬ ಪದದಿಂದ ಉದ್ದೇಶಿಸಲಾಗಿರುವುದು ಜಿಬ್ರೀಲ್ ಆಗಿದೆಯೆಂಬುದು ಪ್ರಬಲಾಭಿಪ್ರಾಯವಾಗಿದೆ.

(5) ಪ್ರಭಾತೋದಯದ ತನಕ ಅದು ಶಾಂತಿಯಾಗಿರುವುದು.