(1) ಪ್ರಭಾತದ ಮೇಲಾಣೆ!
(2) ಹತ್ತು ರಾತ್ರಿಗಳ ಮೇಲಾಣೆ!(1389)
1389. ಇದರ ತಾತ್ಪರ್ಯ ದುಲ್‍ಹಿಜ್ಜಃ ತಿಂಗಳ ಮೊದಲ ಹತ್ತು ರಾತ್ರಿಗಳಾಗಿವೆಯೆಂದು ಕೆಲವು ಪ್ರಮುಖ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ.
(3) ಸಮ ಮತ್ತು ಬೆಸಗಳ ಮೇಲಾಣೆ!(1390)
1390. ಸಂಖ್ಯೆಗಳಲ್ಲಿರುವ ಬೆಸ ಮತ್ತು ಸಮಸಂಖ್ಯೆಗಳಂತೆಯೇ ಪದಾರ್ಥಗಳಲ್ಲೂ ಬೆಸ ಮತ್ತು ಸಮಗಳು ಅಥವಾ ಧಾತು ಮತ್ತು ಸಂಯುಕ್ತಗಳಿವೆ. ಇವು ಒಂದಕ್ಕೊಂದು ಸೇರಿ ಅವಳಿಗಳಾಗುವ ಹಾಗೂ ದ್ವಿಗುಣಗೊಳ್ಳುವ ಸ್ವಭಾವವೇ ಜೀವ ಸಸ್ಯರಾಶಿಗಳ ಬೆಳವಣಿಗೆಗೆ ಹೇತುವಾಗಿದೆ. ಇಷ್ಟೆಲ್ಲ ಮಹತ್ವ ಇರುವುದರಿಂದಲೇ ಅಲ್ಲಾಹು ಬೆಸ ಮತ್ತು ಸಮಗಳ ಮೇಲೆ ಆಣೆಹಾಕಿರಬಹುದು.
(4) ರಾತ್ರಿ ಚಲಿಸುತ್ತಿರುವಾಗ ಅದರ ಮೇಲಾಣೆ!
(5) ವಿಷಯಪ್ರಜ್ಞೆಯುಳ್ಳವನಿಗೆ ಅದರಲ್ಲಿ (ಮೇಲೆ ಹೇಳಿರುವುದರಲ್ಲಿ) ಆಣೆಯಿದೆಯೇ?
(6) ಆದ್ ಸಮುದಾಯದೊಂದಿಗೆ ತಮ್ಮ ರಬ್ ಏನು ಮಾಡಿದನೆಂದು ತಾವು ಕಂಡಿಲ್ಲವೇ?
(7) ಅಂದರೆ ಸ್ಥಂಭಗಳ ಒಡೆಯರಾದ ಇರಮ್ ಗೋತ್ರದೊಂದಿಗೆ.(1391)
1391. ‘ಇರಮ್’ ಎಂಬುದು ಆದ್ ಸಮುದಾಯದ ಮತ್ತೊಂದು ಹೆಸರಾಗಿದೆ ಅಥವಾ ಆದ್ ಸಮುದಾಯದ ರಾಜಧಾನಿಯ ಹೆಸರಾಗಿದೆ ಎಂಬ ಎರಡು ಅಭಿಪ್ರಾಯಗಳಿವೆ. ಅವರ ಸ್ಥಳಗಳಲ್ಲಿ ಸ್ಮಾರಕ ಸ್ತೂಪಗಳನ್ನು ನಿರ್ಮಿಸಿದ ಕಾರಣ ಅವರನ್ನು ಸ್ಥಂಭಗಳ ಒಡೆಯರೆಂದು ಕರೆಯಲಾಗಿರಬಹುದು.
(8) ಅದರಂತಿರುವ ಒಂದನ್ನು ದೇಶಗಳಲ್ಲಿ ಸೃಷ್ಟಿಸಲ್ಪಡದಿರುವ ಗೋತ್ರ.(1392)
1392. ದೈಹಿಕ ಸೌಷ್ಠವದಲ್ಲಿ ಮತ್ತು ದೇಹದಾರ್ಢ್ಯತೆಯಲ್ಲಿ ಆ ಸಮುದಾಯವು ಅಪ್ರತಿಮವಾಗಿತ್ತು ಎಂದರ್ಥ.
(9) ಕಣಿವೆಯಲ್ಲಿ ಬಂಡೆಗಳನ್ನು ಒಡೆದು ಕಟ್ಟಡ ನಿರ್ಮಿಸುತ್ತಿದ್ದ ಸಮೂದ್ ಜನಾಂಗದೊಂದಿಗೆ.
(10) ಮೊಳೆಗಳ ಒಡೆಯನಾದ ಫಿರ್‍ಔನ್‍ನೊಂದಿಗೆ.(1393)
1393. ಇಲ್ಲಿ ಮೊಳೆಗಳೆಂದರೆ ಅಧಿಕಾರದ ಪ್ರತೀಕವೆಂದು ಅಥವಾ ಹಿಂಸೆಯ ಪ್ರತೀಕವೆಂದು ಅಭಿಪ್ರಾಯಪಟ್ಟವರಿದ್ದಾರೆ.
(11) ಅವರು ಭೂಮಿಯಲ್ಲಿ ಅತಿಕ್ರಮವೆಸಗಿದವರಾಗಿರುವರು.
(12) ಅಲ್ಲಿ ಕ್ಷೋಭೆಯನ್ನು ಹೆಚ್ಚಿಸಿದವರಾಗಿರುವರು.
(13) ಆಗ ತಮ್ಮ ರಬ್ ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಸುರಿಸಿದನು.
(14) ಖಂಡಿತವಾಗಿಯೂ ತಮ್ಮ ರಬ್ ಹೊಂಚಿನ ತಾಣದಲ್ಲೇ ಇರುವನು.(1394)
1394. ಅವನು ಸದಾ ವೀಕ್ಷಿಸುತ್ತಿರುವನು ಎಂದರ್ಥ.
(15) ಆದರೆ ಮನುಷ್ಯನನ್ನು ಅವನ ರಬ್ ಪರೀಕ್ಷಿಸಿ, ತರುವಾಯ ಅವನನ್ನು ಆದರಿಸಿ ಅವನಿಗೆ ಸುಖವನ್ನು ಕರುಣಿಸಿದರೆ, ಅವನು ‘ನನ್ನ ರಬ್ ನನ್ನನ್ನು ಆದರಿಸಿರುವನು’ ಎಂದು ಹೇಳುವನು.
(16) ಆದರೆ ಅವನನ್ನು (ಮನುಷ್ಯನನ್ನು) ಅವನು ಪರೀಕ್ಷಿಸಿ, ತರುವಾಯ ಅವನ ಅನ್ನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ‘ನನ್ನ ರಬ್ ನನ್ನನ್ನು ನಿಂದಿಸಿರುವನು’ ಎಂದು ಹೇಳುವನು.(1395)
1395. ಓರ್ವ ಸತ್ಯವಿಶ್ವಾಸಿ ಕಷ್ಟ ಸುಖಗಳನ್ನು ಒಂದೇ ರೀತಿಯಲ್ಲಿ ಅವೆರಡೂ ಅಲ್ಲಾಹುವಿನ ಪರೀಕ್ಷೆಯಾಗಿದೆಯೆಂದು ಅರ್ಥಮಾಡಿಕೊಂಡು ಸೂಕ್ತ ಪ್ರತಿಕ್ರಿಯೆಯನ್ನು ನೀಡಬೇಕಾದವನಾಗಿದ್ದಾನೆ. ಮನುಷ್ಯನಿಗೆ ಅನುಗ್ರಹಗಳು ಲಭ್ಯವಾದಾಗ ಅದು ತನ್ನ ಮಹತ್ವದ ಫಲವೆಂದು ಭಾವಿಸದೆ ಅಲ್ಲಾಹುವಿನ ದಾನವೆಂದು ಪರಿಗಣಿಸಿ ಕೃತಜ್ಞತಾಪೂರ್ವಕ ಪ್ರತಿಕ್ರಿಯಿಸಬೇಕಾಗಿದೆ. ಕಷ್ಟಗಳು ಬರುವಾಗ ನಿರಾಶೆ ಮತ್ತು ವ್ಯಥೆ ತೋರದೆ ತಾಳ್ಮೆ ವಹಿಸಬೇಕಾಗಿದೆ. ಆದರೆ ಮನುಷ್ಯರಲ್ಲಿ ಹೆಚ್ಚಿನವರೂ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ.
(17) ಅಲ್ಲ, ಆದರೆ ನೀವು ಅನಾಥನನ್ನು ಆದರಿಸುತ್ತಿಲ್ಲ.(1396)
1396. ಅನಾಥರನ್ನು ಸಂರಕ್ಷಿಸುತ್ತೇವೆಂದು ವಾದಿಸುವ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಅನಾಥರೊಂದಿಗೆ ಗೌರವಾದರ ತೋರದೆ ಅವರನ್ನು ತುಚ್ಛವಾಗಿ ಕಾಣುತ್ತಾರೆ. ತಮ್ಮ ಮನಸ್ಸಿನಲ್ಲಿ ಅನಾಥರಿಗೆ ಆದರಣೀಯತೆ ತೋರುವವರಿಗೆ ಮಾತ್ರ ಅಲ್ಲಾಹುವಿನ ಬಳಿ ಪ್ರತಿಫಲವಿದೆ.
(18) ಬಡವನಿಗೆ ಅನ್ನ ನೀಡಲು ನೀವು ಪ್ರೇರಣೆ ನೀಡುತ್ತಿಲ್ಲ.
(19) ನೀವು ಉತ್ತರಾಧಿಕಾರ ಸೊತ್ತನ್ನು ಬಾಚಿ ತಿನ್ನುತ್ತಿರುವಿರಿ.
(20) ಸಂಪತ್ತನ್ನು ನೀವು ಮಿತಿಮೀರಿ ಪ್ರೀತಿಸುತ್ತಿರುವಿರಿ.
(21) ಅಲ್ಲ, ಭೂಮಿಯನ್ನು ಪುಡಿ ಪುಡಿ ಮಾಡಲಾಗುವಾಗ.
(22) ತಮ್ಮ ರಬ್ ಮತ್ತು ಸಾಲುಸಾಲಾಗಿ ಮಲಕ್‍ಗಳು ಬರುವಾಗ.
(23) ಅಂದು ನರಕಾಗ್ನಿಯನ್ನು ತರಲಾಗುವಾಗ. ಆ ದಿನದಂದು ಮನುಷ್ಯನಿಗೆ ಜ್ಞಾಪಕ ಬರುವುದು.(1397) ಅವನಿಗೆ ಜ್ಞಾಪಕವು ಬರುವುದಾದರೂ ಎಲ್ಲಿಂದ?
1397. ಅಲ್ಲಾಹುವಿನ ವಿಚಾರಣೆ ಮತ್ತು ಶಿಕ್ಷೆ ಆಸನ್ನವಾಗುವ ಸಂದರ್ಭದಲ್ಲಿ ಅಂದರೆ ನ್ಯಾಯ ತೀರ್ಮಾನದ ದಿನದಂದು ಸತ್ಯನಿಷೇಧಿಗಳು ಪ್ರವಾದಿಗಳ ಉಪದೇಶ ಮತ್ತು ಎಚ್ಚರಿಕೆಗಳನ್ನು ಜ್ಞಾಪಿಸುವರು. ಆದರೆ ಆ ಸಮಯದಲ್ಲಿ ಆ ಜ್ಞಾಪಕದಿಂದ ಅವರಿಗೆ ಯಾವುದೇ ಪ್ರಯೋಜನವುಂಟಾಗಲಾರದು.
(24) ಅವನು ಹೇಳುವನು: ‘ಅಯ್ಯೋ! ನಾನು ನನ್ನ ಜೀವನಕ್ಕಾಗಿ (ಸತ್ಕರ್ಮಗಳನ್ನು) ಪೂರ್ವಭಾವಿಯಾಗಿ ಮಾಡಿಟ್ಟಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!?’
(25) ಆದ್ದರಿಂದ ಆ ದಿನದಂದು ಅಲ್ಲಾಹು ಶಿಕ್ಷಿಸುವ ರೀತಿಯಲ್ಲಿ ಯಾರೂ ಶಿಕ್ಷಿಸಲಾರರು.
(26) ಅವನು ಹಿಡಿದು ಬಂಧಿಸುವಂತೆ ಯಾರೂ ಹಿಡಿದು ಬಂಧಿಸಲಾರರು.
(27) ಓ ಶಾಂತವಾಗಿರುವ ಆತ್ಮವೇ!
(28) ನೀನು ನಿನ್ನ ರಬ್‌ನೆಡೆಗೆ ಸಂತೃಪ್ತನಾಗಿ ಮತ್ತು ಸಂತೃಪ್ತಿಗೆ ಪಾತ್ರನಾಗಿ ಮರಳು.
(29) ತರುವಾಯ ನನ್ನ ದಾಸರ ಗುಂಪಿನಲ್ಲಿ ಪ್ರವೇಶಿಸು.
(30) ನನ್ನ ಸ್ವರ್ಗವನ್ನು ಪ್ರವೇಶಿಸು.