52 - At-Tur ()

|

(1) ತೂರ್ (ಪರ್ವತದ) ಮೇಲಾಣೆ!

(2) ಲಿಖಿತಗೊಳಿಸಿರುವ ಗ್ರಂಥದ ಮೇಲಾಣೆ!

(3) ತೆರೆದಿಡಲಾದ ತೊಗಲಿನ ಹಾಳೆಯಲ್ಲಿ.

(4) ಅಲ್‍ಬೈತುಲ್ ಮಅ್‌ಮೂರ್‌ನ ಮೇಲಾಣೆ!(1155)
1155. ಭೂಮಿಯಲ್ಲಿರುವವರು ಕಅ್‌ಬಾವನ್ನು ತವಾಫ್ ಮಾಡುವಂತೆ ಮತ್ತು ಅಲ್ಲಿ ಆರಾಧನೆ ಮಾಡುವಂತೆ ಏಳನೇ ಆಕಾಶದಲ್ಲಿ ಮಲಕ್‍ಗಳ ಆರಾಧನಾ ಕೇಂದ್ರವಾಗಿದೆ ಅಲ್‍ಬೈತುಲ್ ಮಅ್‌ಮೂರ್. ಬುಖಾರಿ ಮತ್ತು ಮುಸ್ಲಿಮ್ ಉದ್ಧರಿಸಿದ ಹದೀಸಿನಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ.

(5) ಎತ್ತರಿಸಲಾದ ಛಾವಣಿಯ (ಆಕಾಶದ) ಮೇಲಾಣೆ!

(6) ತುಂಬಿದ ಸಮುದ್ರದ ಮೇಲಾಣೆ!

(7) ಖಂಡಿತವಾಗಿಯೂ ತಮ್ಮ ರಬ್‌ನ ಶಿಕ್ಷೆ ಸಂಭವಿಸುವುದೇ ಆಗಿದೆ.

(8) ಅದನ್ನು ತಡೆಗಟ್ಟುವವರಾರೂ ಇಲ್ಲ.

(9) ಆಕಾಶವು ಪ್ರಬಲವಾಗಿ ಓಲಾಡುವ ದಿನ!

(10) ಪರ್ವತಗಳು (ಅವುಗಳ ಸ್ಥಾನಗಳಿಂದ) ತೊಲಗಿ ಚಲಿಸುವ ದಿನ!

(11) ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.

(12) ಅಂದರೆ ಅನಾವಶ್ಯಕ ವಿಷಯಗಳಲ್ಲಿ ಮಗ್ನರಾಗಿ ಆಟವಾಡುತ್ತಿರುವವರಿಗೆ.

(13) ಅವರನ್ನು ಬಲವಾಗಿ ಹಿಡಿದು ನರಕಾಗ್ನಿಗೆ ತಳ್ಳಲಾಗುವ ದಿನ!

(14) (ಅವರೊಂದಿಗೆ ಹೇಳಲಾಗುವುದು): ‘ನೀವು ನಿಷೇಧಿಸುತ್ತಿದ್ದ ನರಕಾಗ್ನಿಯು ಇದೇ ಆಗಿದೆ’.

(15) ಹಾಗಾದರೆ ಇದು ಮಾಯಾಜಾಲವೇ? ಅಥವಾ ನೀವು ಕಾಣತ್ತಿಲ್ಲವೇ?

(16) ನೀವು ಅದರಲ್ಲಿ ಉರಿಯಿರಿ. ತರುವಾಯ ನೀವು ತಾಳ್ಮೆ ವಹಿಸಿರಿ ಅಥವಾ ತಾಳ್ಮೆ ವಹಿಸದಿರಿ. ನಿಮ್ಮ ಮಟ್ಟಿಗೆ ಅವೆರಡೂ ಸಮಾನವಾಗಿವೆ. ನಿಮಗೆ ಪ್ರತಿಫಲ ನೀಡಲಾಗುವುದು ನೀವು ಮಾಡಿಕೊಂಡಿರುವುದಕ್ಕೆ ಮಾತ್ರವಾಗಿದೆ.

(17) ಖಂಡಿತವಾಗಿಯೂ ಭಯಭಕ್ತಿ ಪಾಲಿಸುವವರು ಸ್ವರ್ಗೋದ್ಯಾನಗಳಲ್ಲಿ ಮತ್ತು ಸುಖಭೋಗಗಳಲ್ಲಿರುವರು.

(18) ಅವರ ರಬ್ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತುಷ್ಟರಾಗಿರುವರು. ಜ್ವಲಿಸುವ ನರಕಾಗ್ನಿಯ ಶಿಕ್ಷೆಯಿಂದ ಅವರ ರಬ್ ಅವರನ್ನು ಪಾರುಗೊಳಿಸಿರುವನು.

(19) (ಅವರೊಂದಿಗೆ ಹೇಳಲಾಗುವುದು): ‘ನೀವು ಮಾಡಿಕೊಂಡಿರುವುದರ ಫಲವಾಗಿ ನೀವು ಸುಖವಾಗಿ ತಿನ್ನಿರಿ ಮತ್ತು ಕುಡಿಯಿರಿ’.

(20) ಅವರು ಸಾಲಾಗಿಟ್ಟಿರುವ ಮಂಚಗಳಲ್ಲಿ ಒರಗಿ ಕುಳಿತಿರುವರು. ಅರಳಿದ ನೇತ್ರಗಳುಳ್ಳ ಬೆಳ್ಳಗಿನ ತರುಣಿಯರನ್ನು ನಾವು ಅವರಿಗೆ ಸಂಗಾತಿಗಳನ್ನಾಗಿ ನೀಡುವೆವು.

(21) ವಿಶ್ವಾಸವಿಟ್ಟವರು ಮತ್ತು ವಿಶ್ವಾಸದಲ್ಲಿ ಅವರ ಸಂತತಿಯು ಅವರನ್ನು ಹಿಂಬಾಲಿಸಿದವರು ಯಾರೋ ಅವರ ಸಂತತಿಗಳನ್ನು ನಾವು ಅವರೊಂದಿಗೆ ಸೇರಿಸುವೆವು. ನಾವು ಅವರಿಗೆ ಅವರ ಕರ್ಮಫಲದಿಂದ ಏನನ್ನೂ ಕಮ್ಮಿ ಮಾಡಲಾರೆವು. ಪ್ರತಿಯೊಬ್ಬ ವ್ಯಕ್ತಿಯೂ ತಾನು ಸಂಪಾದಿಸಿರುವುದಕ್ಕೆ (ಸ್ವಂತ ಕರ್ಮಗಳಿಗೆ) ಗಿರವಿ ಇಡಲಾದವನಾಗಿರುವನು.

(22) ಅವರು ಹಂಬಲಿಸುವ ವಿಧದ ಫಲವನ್ನು ಮತ್ತು ಮಾಂಸವನ್ನು ನಾವು ಅವರಿಗೆ ಅಧಿಕವಾಗಿ ನೀಡುವೆವು.

(23) ಅಲ್ಲಿ ಅವರು ಪಾನಪಾತ್ರೆಗಳನ್ನು ಪರಸ್ಪರ ವಿನಿಮಯ ಮಾಡುತ್ತಿರುವರು. ಅಲ್ಲಿ ಅನಾವಶ್ಯಕ ಮಾತುಗಳಾಗಲಿ ಪಾಪಕೃತ್ಯಗಳಾಗಲಿ ಇರದು.

(24) ಅವರಿಗೆ (ಪರಿಚಾರಕರಾಗಿರುವ) ಬಾಲಕರು ಅವರ ಬಳಿ ಸುತ್ತಾಡುತ್ತಿರುವರು. ಅವರು ಸುರಕ್ಷಿತವಾಗಿಡಲಾಗಿರುವ ಮುತ್ತುಗಳಂತಿರುವರು.

(25) ಪರಸ್ಪರ ವಿಚಾರಿಸುತ್ತಾ ಅವರಲ್ಲಿ ಕೆಲವರು ಕೆಲವರಿಗೆ ಅಭಿಮುಖರಾಗುವರು.

(26) ಅವರು ಹೇಳುವರು: ‘ಖಂಡಿತವಾಗಿಯೂ ನಾವು ಮುಂಚೆ ನಮ್ಮ ಕುಟುಂಬದೊಂದಿಗಿರುವಾಗ ಭಯಭಕ್ತಿ ಪಾಲಿಸಿದವರಾಗಿದ್ದೆವು.(1156)
1156. ಖಂಡಿತವಾಗಿಯೂ ನಾವು ಹಿಂದೆ ನಮ್ಮ ಕುಟುಂಬದ ಬಗ್ಗೆ ಕಳವಳಪಡುವವರಾಗಿದ್ದೆವು ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

(27) ಆದ್ದರಿಂದ ಅಲ್ಲಾಹು ನಮಗೆ ಅನುಗ್ರಹವನ್ನು ದಯಪಾಲಿಸಿದನು. ಕೋಶಕುಳಿಗಳಲ್ಲಿ ತೂರಿಕೊಳ್ಳುವ ನರಕಾಗ್ನಿಯ ಶಿಕ್ಷೆಯಿಂದ ಅವನು ನಮ್ಮನ್ನು ಕಾಪಾಡಿದನು.

(28) ಖಂಡಿತವಾಗಿಯೂ ನಾವು ಮುಂಚೆ ಅವನೊಂದಿಗೆ ಪ್ರಾರ್ಥಿಸುವವರಾಗಿದ್ದೆವು. ಖಂಡಿತವಾಗಿಯೂ ಅವನು ಔದಾರ್ಯವುಳ್ಳವನೂ, ಅಪಾರ ಕರುಣೆಯುಳ್ಳವನೂ ಆಗಿರುವನು.

(29) ಆದ್ದರಿಂದ ತಾವು ಉಪದೇಶ ನೀಡಿರಿ. ತಮ್ಮ ರಬ್‌ನ ಅನುಗ್ರಹದ ನಿಮಿತ್ತ ತಾವು ಜ್ಯೋತಿಷ್ಯರೋ ಹುಚ್ಚರೋ ಅಲ್ಲ.

(30) ಅಲ್ಲ, (ಮುಹಮ್ಮದ್) ಒಬ್ಬ ಕವಿಯಾಗಿರುವರು. ಅವರಿಗೆ ಕೇಡುಗಾಲ ಬರುವುದನ್ನು ನಾವು ಕಾಯುತ್ತಿರುವೆವು ಎಂದು ಅವರು ಹೇಳುತ್ತಿರುವರೇ?

(31) ಹೇಳಿರಿ: ‘ನೀವು ಕಾಯಿರಿ! ಖಂಡಿತವಾಗಿಯೂ ನಾನೂ ನಿಮ್ಮೊಂದಿಗೆ ಕಾಯುವವರಲ್ಲಿ ಸೇರಿದವನಾಗಿರುವೆನು’.

(32) ಅಥವಾ ಅವರ ಮನಸ್ಸುಗಳು ಅವರೊಂದಿಗೆ ಹೀಗೆ ಆದೇಶಿಸುತ್ತಿದೆಯೇ? ಅಥವಾ ಅವರು ಧಿಕ್ಕಾರಿಗಳಾದ ಒಂದು ಜನತೆಯಾಗಿರುವರೇ?

(33) ಅಥವಾ ಅವರು (ಪ್ರವಾದಿಯವರು) ಇದನ್ನು ಹೆಣೆದು ಹೇಳಿದ್ದಾಗಿದೆ ಎಂದು ಅವರು ಹೇಳುತ್ತಿರುವರೇ? ಅಲ್ಲ, ಅವರು ವಿಶ್ವಾಸವಿಡುವುದಿಲ್ಲ.

(34) ಆದರೆ ಅವರು ಸತ್ಯಸಂಧರಾಗಿದ್ದರೆ ಇದರಂತಿರುವ ಒಂದು ವೃತ್ತಾಂತವನ್ನು ರಚಿಸಿ ತರಲಿ.

(35) ಅಥವಾ, ಯಾವುದೇ ವಸ್ತುವಿನಿಂದಲೂ ಅಲ್ಲದೆ ಅವರು ಸೃಷ್ಟಿಸಲ್ಪಟ್ಟಿರುವರೇ? ಅಥವಾ, ಸ್ವತಃ ಅವರೇ ಸೃಷ್ಟಿಕರ್ತರಾಗಿರುವರೇ?

(36) ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವರು ಅವರಾಗಿರುವರೇ? ಅಲ್ಲ, ಅವರು ದೃಢವಾಗಿ ವಿಶ್ವಾಸವಿಡುವುದಿಲ್ಲ.

(37) ಅಥವಾ, ತಮ್ಮ ರಬ್‌ನ ಖಜಾನೆಗಳು ಅವರ ಬಳಿಯಿವೆಯೇ? ಅಥವಾ ಅಧಿಕಾರ ಚಲಾಯಿಸುವವರು ಅವರಾಗಿರುವರೇ?

(38) ಅಥವಾ, (ಆಕಾಶದಿಂದ) ವಿಷಯಗಳನ್ನು ಕಿವಿಗೊಟ್ಟು ಆಲಿಸಲು ಅವರ ಬಳಿ ಯಾವುದಾದರೂ ಏಣಿಯಿದೆಯೇ? ಹಾಗಾದರೆ ಅವರ ಪೈಕಿ ಕಿವಿಗೊಟ್ಟು ಆಲಿಸುವವನು ಸ್ಪಷ್ಟವಾದ ಯಾವುದಾದರೂ ಆಧಾರ ಪ್ರಮಾಣವನ್ನು ತರಲಿ.(1157)
1157. ಆ ಸತ್ಯನಿಷೇಧಿಗಳು ಆಕಾಶಲೋಕದಿಂದ ಕದ್ದಾಲಿಸಿದ ಯಾವುದಾದರೂ ಜ್ಞಾನದ ಆಧಾರದಲ್ಲಿ ಮಾತನಾಡುತ್ತಿದ್ದಾರೆ ಎಂದಾದರೆ ಆ ರೀತಿ ಕದ್ದಾಲಿಸಿದ ವ್ಯಕ್ತಿ ಅದಕ್ಕಿರುವ ಪುರಾವೆಯನ್ನು ತರಲಿ ಎಂದರ್ಥ.

(39) ಅಥವಾ, ಅವನಿಗೆ (ಅಲ್ಲಾಹುವಿಗೆ) ಹೆಣ್ಮಕ್ಕಳು ಮತ್ತು ನಿಮಗೆ ಗಂಡುಮಕ್ಕಳೇ?

(40) ಅಥವಾ, ತಾವು ಅವರೊಂದಿಗೆ ಏನಾದರೂ ಪ್ರತಿಫಲವನ್ನು ಬೇಡಿ ಅವರು ಸಾಲ ತೀರಿಸುವ ಭಾರವನ್ನು ಹೊತ್ತವರಾಗಿರುವರೇ?

(41) ಅಥವಾ, ಅವರ ಬಳಿ ಅಗೋಚರ ಅರಿವಿದ್ದು ಅವರು ಅದನ್ನು ದಾಖಲಿಸುತ್ತಿರುವರೇ?

(42) ಅಥವಾ, ಅವರು ಯಾವುದಾದರೂ ಸಂಚು ಹೂಡಲು ಬಯಸುತ್ತಿರುವರೇ? ಆದರೆ ಸಂಚಿಗೆ ಬಲಿಯಾಗುವವರು ಸತ್ಯನಿಷೇಧಿಗಳೇ ಆಗಿರುವರು.

(43) ಅಥವಾ, ಅವರಿಗೆ ಅಲ್ಲಾಹುವಿನ ಹೊರತು ಅನ್ಯ ಆರಾಧ್ಯರಿರುವರೇ? ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅಲ್ಲಾಹು ಪರಮಪಾವನನಾಗಿರುವನು.

(44) ಆಕಾಶದಿಂದ ಒಂದು ತುಣುಕು ಉದುರುವುದಾಗಿ ಕಂಡರೂ ಅವರು ಹೇಳುವರು: ‘ಅದು ಪದರ ಪದರವಾಗಿರುವ ಮೋಡವಾಗಿದೆ’.(1158)
1158. ಸ್ಪಷ್ಟವಾದ ದೈವಿಕ ದೃಷ್ಟಾಂತವನ್ನು ಕಂಡರೆ ಮಾತ್ರ ವಿಶ್ವಾಸವಿಡುವೆವು ಎಂದು ಹಟ ಹಿಡಿಯುವವರು ಎಂದಿಗೂ ವಿಶ್ವಾಸವಿಡಲಾರರು ಮತ್ತು ಯಾವುದೇ ದೈವಿಕ ದೃಷ್ಟಾಂತವನ್ನು ಕಂಡರೂ ಅದನ್ನು ಪ್ರಾಕೃತಿಕ ವಿದ್ಯಮಾನವೆನ್ನುತ್ತಾ ತಿರಸ್ಕರಿಸುವರೆಂದು ಈ ಸೂಕ್ತಿಯು ತಿಳಿಸಿಕೊಡುತ್ತದೆ.

(45) ಆದ್ದರಿಂದ ಅವರನ್ನು ಮೂರ್ಛೆ ಹೋಗುವಂತೆ ಮಾಡುವ ಅವರ ಆ ದಿನವನ್ನು ಅವರು ಭೇಟಿಯಾಗುವವರೆಗೆ ತಾವು ಅವರನ್ನು ಬಿಟ್ಟುಬಿಡಿರಿ.

(46) ಅವರ ಕುತಂತ್ರವು ಅವರಿಗೆ ಕಿಂಚಿತ್ತೂ ಪ್ರಯೋಜನಪಡದ ಮತ್ತು ಅವರಿಗೆ ಯಾವುದೇ ಸಹಾಯವೂ ಲಭ್ಯವಾಗದ ದಿನ!

(47) ಖಂಡಿತವಾಗಿಯೂ ಅಕ್ರಮವೆಸಗಿದವರಿಗೆ ಅದರ ಹೊರತಾದ ಶಿಕ್ಷೆಯೂ ಇದೆ. ಆದರೆ ಅವರ ಪೈಕಿ ಹೆಚ್ಚಿನವರೂ ಅರಿತುಕೊಳ್ಳುವುದಿಲ್ಲ.

(48) ತಾವು ತಮ್ಮ ರಬ್‌ನ ತೀರ್ಮಾನವನ್ನು ತಾಳ್ಮೆಯಿಂದ ಕಾಯುತ್ತಿರಿ.(1159) ಖಂಡಿತವಾಗಿಯೂ ತಾವು ನಮ್ಮ ಕಣ್ಣುಗಳಲ್ಲಿರುವಿರಿ. ತಾವು ಎದ್ದೇಳುವ ಸಮಯದಲ್ಲಿ ತಮ್ಮ ರಬ್‌ನ ಸ್ತುತಿಯೊಂದಿಗೆ ಅವನ ಪರಿಪಾವನತೆಯನ್ನು ಕೊಂಡಾಡಿರಿ.
1159. ‘ತಮ್ಮ ರಬ್‌ನ ತೀರ್ಮಾನವನ್ನು ತಾವು ತಾಳ್ಮೆಯಿಂದ ಸ್ವೀಕರಿಸಿರಿ’ ಎಂದೂ ಅರ್ಥ ನೀಡಲಾಗಿದೆ.

(49) ರಾತ್ರಿಯಲ್ಲಿ ಸ್ವಲ್ಪ ಸಮಯ ಮತ್ತು ನಕ್ಷತ್ರಗಳು ಮರೆಯಾಗುವ ಸಮಯದಲ್ಲಿ ತಾವು ಅವನ ಪರಿಪಾವನತೆಯನ್ನು ಕೊಂಡಾಡಿರಿ.