16 - An-Nahl ()

|

(1) ಅಲ್ಲಾಹುವಿನ ಆಜ್ಞೆಯು ಬಂದಿದೆ(497) ಆದುದರಿಂದ ನೀವು ಅದಕ್ಕಾಗಿ ಆತುರಪಡದಿರಿ. ಅವರು ಸಹಭಾಗಿತ್ವ ಮಾಡುವುದರಿಂದ ಅಲ್ಲಾಹು ಎಷ್ಟೋ ಪರಿಪಾವನನೂ ಪರಮೋನ್ನತನೂ ಆಗಿರುವನು.
497. ಅಲ್ಲಾಹುವಿನ ಆಜ್ಞೆ ಎಂಬುದರ ತಾತ್ಪರ್ಯ ಈ ಜಗತ್ತಿಗೆ ಅಂತ್ಯವನ್ನು ಹಾಡುವ ಆಜ್ಞೆಯಾಗಿರಬಹುದು. ಅಥವಾ ಸತ್ಯನಿಷೇಧಿಗಳ ಸೋಲು ಯಾ ನಾಶವನ್ನು ವಿಧಿಸುವ ಆಜ್ಞೆಯಾಗಿರಬಹುದು. ಮಾನವರಿಗೆ ಅತಿವಿದೂರವಾಗಿ ತೋಚುವ ಸಂಗತಿಯು ಅಲ್ಲಾಹುವಿನ ಮಟ್ಟಿಗೆ ಸ್ವಲ್ಪವೂ ವಿದೂರವಲ್ಲ ಮತ್ತು ಅಲ್ಲಾಹು ಅವಧಿ ನಿಶ್ಚಯಿಸಿದ ಸಂಗತಿಗಾಗಿ ಮನುಷ್ಯರು ಆತುರಪಡುವುದು ಸರಿಯಲ್ಲ ಎಂದು ಈ ಸೂಕ್ತಿಯು ನಮ್ಮನ್ನು ಎಚ್ಚರಿಸುತ್ತದೆ.

(2) ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ತನ್ನ ಆಜ್ಞೆ ಪ್ರಕಾರ ಅವನು (ಸತ್ಯಸಂದೇಶವಾಗಿರುವ) ಚೈತನ್ಯದೊಂದಿಗೆ(498) ಮಲಕ್‍ಗಳನ್ನು ಇಳಿಸುವನು. “ನನ್ನ ಹೊರತು ಅನ್ಯ ಆರಾಧ್ಯರಿಲ್ಲ, ಆದುದರಿಂದ ನನ್ನನ್ನು ಭಯಪಡಿರಿ” ಎಂದು ಜನರಿಗೆ ಮುನ್ನೆಚ್ಚರಿಕೆ ನೀಡಿರಿ (ಎಂಬ ಸಂದೇಶದೊಂದಿಗೆ).
498. ದಿವ್ಯಸಂದೇಶವು ನಿರ್ಜೀವ ಹೃದಯಗಳಿಗೆ ಜೀವ ನೀಡುವುದರಿಂದಲೇ ಅದನ್ನು ‘ರೂಹ್’ (ಚೈತನ್ಯ) ಎಂದು ಹೇಳಲಾಗಿದೆ.

(3) ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯದೊಂದಿಗೆ ಸೃಷ್ಟಿಸಿರುವನು. ಅವರು ಸಹಭಾಗಿತ್ವ ಮಾಡುವುದರಿಂದೆಲ್ಲ ಅವನು ಅತ್ಯುನ್ನತನಾಗಿರುವನು.

(4) ಅವನು ಮನುಷ್ಯನನ್ನು ಒಂದು ವೀರ್ಯಕೋಶದಿಂದ ಸೃಷ್ಟಿಸಿರುವನು. ತರುವಾಯ ಅಗೋ! ಅವನು ಸ್ಪಷ್ಟ ವಿರೋಧಿಯಾಗಿರುವನು.(499)
499. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವನು ಬೆಳೆದು ಬಂದಿರುವುದು ಒಂದು ವೀರ್ಯಕೋಶದಿಂದಾಗಿದೆ. ಅಲ್ಲಾಹುವಿನ ಸೃಷ್ಟಿ ನಿಯಮದಂತೆಯೇ ಅವನು ಬೆಳೆದು ದೊಡ್ಡವನಾದನು. ಆದರೆ ಇದೀಗ ಅವನು ಸೃಷ್ಟಿಕರ್ತನ ವಿರುದ್ಧ ತರ್ಕಿಸಲು ಆರಂಭಿಸಿರುವನು.

(5) ಅವನು ಜಾನುವಾರುಗಳನ್ನೂ ಸೃಷ್ಟಿಸಿರುವನು. ಅವುಗಳಲ್ಲಿ ನಿಮಗೆ ಚಳಿಯನ್ನು ತಡೆಗಟ್ಟುವಂತದ್ದು (ಕಂಬಳಿ) ಇದೆ. ಇತರ ಪ್ರಯೋಜನಗಳೂ ಇವೆ. ಅವುಗಳಿಂದ ನೀವು ತಿನ್ನುತ್ತಲೂ ಇದ್ದೀರಿ.

(6) ನೀವು ಮುಸ್ಸಂಜೆ (ಅವುಗಳನ್ನು ಕೊಟ್ಟಿಗೆಗೆ) ಮರಳಿ ತರುವ ವೇಳೆಯಲ್ಲೂ, ಅವುಗಳನ್ನು ಮೇಯಲು ಬಿಡುವ ವೇಳೆಯಲ್ಲೂ ಅವುಗಳಲ್ಲಿ ನಿಮಗೆ ಸೊಬಗಿದೆ.

(7) ದೈಹಿಕ ಪ್ರಯಾಸದಿಂದಲೇ ಹೊರತು ನಿಮಗೆ ತಲುಪಲು ಸಾಧ್ಯವಿಲ್ಲದಂತಹ ಪ್ರದೇಶಕ್ಕೆ ಅವು ನಿಮ್ಮ ಭಾರಗಳನ್ನು ಹೊತ್ತುಕೊಂಡು ಸಾಗುತ್ತವೆ. ಖಂಡಿತವಾಗಿಯೂ ನಿಮ್ಮ ರಬ್ ಅತ್ಯಧಿಕ ದಯಾಳುವೂ ಅಪಾರ ಕರುಣೆಯುಳ್ಳವನೂ ಆಗಿರುವನು.

(8) ಅವನು ಕುದುರೆಗಳನ್ನು, ಹೇಸರಗತ್ತೆಗಳನ್ನು ಮತ್ತು ಕತ್ತೆಗಳನ್ನು ನೀವು ಪ್ರಯಾಣ ಮಾಡುವುದಕ್ಕಾಗಿ ಮತ್ತು ಅಲಂಕಾರವಾಗಿ (ಸೃಷ್ಟಿಸಿರುವನು). ನೀವು ಅರಿಯದಿರುವುದನ್ನೂ ಅವನು ಸೃಷ್ಟಿಸುವನು.(500)
500. ನಾವು ಅರಿತಿರುವುದಕ್ಕಿಂತಲೂ ಅನೇಕ ಪಟ್ಟು ಹೆಚ್ಚು ನಮಗೆ ಅರಿವಿಲ್ಲದಂತಹ ವಿಷಯಗಳು ಈ ಜಗತ್ತಿನಲ್ಲಿ ಅಡಕವಾಗಿದೆಯೆಂಬುದು ಪ್ರಪಂಚಾಧ್ಯಯನ ಮಾಡುವ ಎಲ್ಲರೂ ಅಂಗೀಕರಿಸುವ ವಾಸ್ತವಿಕತೆಯಾಗಿದೆ.

(9) ನೇರ ಮಾರ್ಗವನ್ನು (ತೋರಿಸಿಕೊಡುವುದು) ಅಲ್ಲಾಹುವಿನ ಹೊಣೆಯಾಗಿದೆ. ಅವುಗಳ (ಮಾರ್ಗಗಳ) ಪೈಕಿ ಪಥಭ್ರಷ್ಟವಾದವುಗಳೂ ಇವೆ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ಅವನು ಸನ್ಮಾರ್ಗಕ್ಕೆ ಸೇರಿಸುತ್ತಿದ್ದನು.

(10) ನಿಮಗೆ ಆಕಾಶದಿಂದ ಮಳೆನೀರನ್ನು ಇಳಿಸಿಕೊಟ್ಟವನು ಅವನಾಗಿರುವನು. ಅದರಲ್ಲಿ ನಿಮಗೆ ಕುಡಿಯುವ ನೀರಿದೆ. (ಜಾನುವಾರುಗಳನ್ನು) ಮೇಯಿಸಲು ನಿಮಗೆ ಹುಲ್ಲುಗಾವಲುಗಳು ಉಂಟಾಗುವುದೂ ಅದರಿಂದಲೇ ಆಗಿದೆ.

(11) ಅವನು ನಿಮಗೆ ಅದರ (ನೀರಿನ) ಮೂಲಕ ಧಾನ್ಯಗಳನ್ನು, ಆಲಿವ್, ಖರ್ಜೂರದ ಮರ, ದ್ರಾಕ್ಷೆ ಮತ್ತು ಎಲ್ಲ ವಿಧದ ಫಲವರ್ಗಗಳನ್ನು ಉತ್ಪಾದಿಸಿಕೊಡುವನು. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.

(12) ಅವನು ನಿಮಗೆ ರಾತ್ರಿ ಹಗಲುಗಳನ್ನು ಮತ್ತು ಸೂರ್ಯ ಚಂದ್ರರನ್ನು ಅಧೀನಪಡಿಸಿಕೊಟ್ಟಿರುವನು. ನಕ್ಷತ್ರಗಳು ಅವನ ಆಜ್ಞೆಗೆ ವಿಧೇಯಗೊಳಿಸಲ್ಪಟ್ಟವುಗಳಾಗಿವೆ. ಖಂಡಿತವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

(13) ಅವನು ನಿಮಗಾಗಿ ಭೂಮಿಯಲ್ಲಿ ವಿಭಿನ್ನ ವರ್ಣಗಳೊಂದಿಗೆ(501) ಸೃಷ್ಟಿಸಿರುವವುಗಳು ಸಹ (ಅವನ ಆಜ್ಞೆಗೆ ವಿಧೇಯವಾಗಿವೆ). ಖಂಡಿತವಾಗಿಯೂ ಚಿಂತಿಸಿ ಗ್ರಹಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
501. ಬಣ್ಣವೆಂಬುದು ವಿಸ್ಮಯಕರವಾದ ಒಂದು ವಿದ್ಯಮಾನವಾಗಿದೆ. ಅನೇಕ ವಸ್ತುಗಳನ್ನು ಆಕರ್ಷಕಗೊಳಿಸುವುದು ಮತ್ತು ಸ್ವಾದವುಳ್ಳದ್ದಾಗಿ ಮಾಡುವುದು ಅವುಗಳ ಬಣ್ಣವಾಗಿದೆ. ಬಣ್ಣವು ಹಲವಾರು ವಸ್ತುಗಳಿಗೆ ವ್ಯತ್ಯಾಸವನ್ನು ನೀಡುತ್ತದೆ. ಕೆಲವೊಮ್ಮೆ ಬಣ್ಣವು ರಕ್ಷಾಕವಚವಾಗಿಯೂ ವರ್ತಿಸುತ್ತದೆ.

(14) ನೀವು ತಾಜಾ ಮಾಂಸವನ್ನು ತೆಗೆದು ತಿನ್ನುವ ಸಲುವಾಗಿ ಮತ್ತು ನೀವು ಧರಿಸುವಂತಹ ಆಭರಣಗಳನ್ನು(502) ಹೊರತೆಗೆಯುವ ಸಲುವಾಗಿ ಸಮುದ್ರವನ್ನು ಅಧೀನಪಡಿಸಿಕೊಟ್ಟವನು ಅವನಾಗಿರುವನು. ಹಡಗುಗಳು ಅದರ ಮೂಲಕ ನೀರನ್ನು ಸೀಳುತ್ತಾ ಸಾಗುವುದನ್ನು ತಾವು ಕಾಣುವಿರಿ. ನೀವು ಅವನ ಔದಾರ್ಯದಿಂದ ಅರಸುವ ಸಲುವಾಗಿ ಮತ್ತು ನೀವು ಕೃತಜ್ಞತೆ ಸಲ್ಲಿಸುವವರಾಗುವ ಸಲುವಾಗಿ (ಅವನು ಅದನ್ನು ನಿಮಗೆ ಅಧೀನಗೊಳಿಸಿಕೊಟ್ಟಿರುವನು).
502. ಸಮುದ್ರದಿಂದ ಹೊರತೆಗೆಯುವ ಮುತ್ತುಗಳು ಆಭರಣಗಳ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

(15) ಭೂಮಿಯು ನಿಮ್ಮೊಂದಿಗೆ ಅಲುಗಾಡದಿರಲು ಅದರಲ್ಲಿ ನಾಟಿ ನಿಲ್ಲುವ ಪರ್ವತಗಳನ್ನು ಅವನು ಸ್ಥಾಪಿಸಿರುವನು. ನೀವು ದಾರಿ ಕಂಡುಕೊಳ್ಳುವ ಸಲುವಾಗಿ(503) ನದಿಗಳನ್ನು ಮತ್ತು ಮಾರ್ಗಗಳನ್ನು (ಅವನು ನಿರ್ಮಿಸಿರುವನು).
503. ಸಮುದ್ರದಲ್ಲಿ ಮತ್ತು ನೆಲದಲ್ಲಿ ಪ್ರಯಾಣ ಮಾಡುವವರಿಗೆ ನದಿಗಳು, ಕಣಿವೆಗಳು ಮತ್ತು ನಕ್ಷತ್ರಗಳು ದಿಕ್ಸೂಚಿಗಳಾಗಿ ಕಾರ್ಯನಿರ್ವಹಿಸುತ್ತವೆ.

(16) (ಇವುಗಳ ಹೊರತಾಗಿ) ಹಲವು ಮಾರ್ಗಸೂಚಿಗಳೂ ಇವೆ. ನಕ್ಷತ್ರಗಳ ಮೂಲಕವೂ ಅವರು ದಾರಿ ಕಂಡುಕೊಳ್ಳುವರು.

(17) ಹೀಗಿರುವಾಗ ಸೃಷ್ಟಿಸುವವನು ಸೃಷ್ಟಿಸದಿರುವವನಂತಾಗಿರುವನೇ? ನೀವು ಚಿಂತಿಸಿ ಗ್ರಹಿಸಲಾರಿರೇ?

(18) ಅಲ್ಲಾಹುವಿನ ಅನುಗ್ರಹಗಳನ್ನು ನೀವು ಎಣಿಸುವುದಾದರೆ ಅವುಗಳನ್ನು ಎಣಿಕೆ ಮಾಡಲು ನಿಮ್ಮಿಂದ ಸಾಧ್ಯವಾಗದು. ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(19) ನೀವು ಮರೆಮಾಚುವುದನ್ನೂ ಬಹಿರಂಗಪಡಿಸುವುದನ್ನೂ ಅಲ್ಲಾಹು ಅರಿಯುವನು.

(20) ಅಲ್ಲಾಹುವಿನ ಹೊರತು ಅವರು ಯಾರೊಂದಿಗೆ ಪ್ರಾರ್ಥಿಸುತ್ತಿರುವರೋ ಅವರು ಏನನ್ನೂ ಸೃಷ್ಟಿಸಲಾರರು. ಅವರೇ ಸೃಷ್ಟಿಸಲ್ಪಟ್ಟವರಾಗಿರುವರು.

(21) ಅವರು (ಪ್ರಾರ್ಥಿಸಲ್ಪಡುವವರು) ಮರಣ ಹೊಂದಿದವರಾಗಿರುವರು. ಬದುಕಿರುವವರಲ್ಲ! ತಮ್ಮನ್ನು ಯಾವಾಗ ಪುನರುತ್ಥಾನಗೊಳಿಸಲಾಗುವುದು ಎಂಬ ಪ್ರಜ್ಞೆಯೂ ಅವರಿಗಿರಲಾರದು.(504)
504. ಧರ್ಮವಿಶ್ವಾಸಿಗಳಲ್ಲಿ ಹೆಚ್ಚಿನವರೂ ಇಷ್ಟಾರ್ಥ ಸಿದ್ಧಿಗಾಗಿ ಮೃತ ಮಹಾತ್ಮರ ಗೋರಿಗಳನ್ನು ಅರಸುತ್ತಾ ಸಾಗುತ್ತಾರೆ ಹಾಗೂ ಮೃತರೊಂದಿಗೆ ಪ್ರಾರ್ಥಿಸುತ್ತಾರೆ. ಆದರೆ ಮರಣ ಹೊಂದಿರುವವರಿಗೆ ಸ್ವತಃ ತಮ್ಮದೇ ವಿಷಯದಲ್ಲೂ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ತಮ್ಮ ವಿಧಿ ನಿಯತಿಯ ಬಗ್ಗೆ ತಿಳಿಯಲು ಕೂಡ ಅವರಿಗೆ ಸಾಧ್ಯವಿಲ್ಲವೆಂದು ಅಲ್ಲಾಹು ಹೇಳುತ್ತಿರುವನು. ಹೀಗಿರುವಾಗ ಅವರಿಗೆ ಇತರರ ಉದ್ದೇಶಗಳನ್ನು ಈಡೇರಿಸಿಕೊಡಲು ಸಾಧ್ಯವಾಗುವುದಾದರೂ ಹೇಗೆ?

(22) ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನು. ಆದರೆ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರ ಹೃದಯಗಳು ನಿಷೇಧಗುಣವಿರುವುದಾಗಿವೆ ಮತ್ತು ಅವರು ಅಹಂಕಾರಿಗಳಾಗಿರುವರು.

(23) ಅವರು ಮರೆಮಾಚುವುದನ್ನೂ ಬಹಿರಂಗಪಡಿಸುವುದನ್ನೂ ಅಲ್ಲಾಹು ಅರಿಯುತ್ತಿರುವನು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಖಂಡಿತವಾಗಿಯೂ ಅವನು ಅಹಂಕಾರಿಗಳನ್ನು ಇಷ್ಟಪಡಲಾರನು.

(24) “ನಿಮ್ಮ ರಬ್ ಏನನ್ನು ಅವತೀರ್ಣಗೊಳಿಸಿರುವನು?” ಎಂದು ಅವರೊಂದಿಗೆ ಕೇಳಿದರೆ “ಪೂರ್ವಿಕರ ಪುರಾಣಗಳನ್ನು” ಎಂದು ಅವರು ಉತ್ತರಿಸುವರು.

(25) ಅವರು ಅಂತ್ಯದಿನದಂದು ತಮ್ಮ ಪಾಪಭಾರವನ್ನು ಪೂರ್ಣವಾಗಿ ಹೊರಲು ಮತ್ತು ಯಾವುದೇ ಜ್ಞಾನವಿಲ್ಲದೆ ಅವರು ಯಾರನ್ನೆಲ್ಲ ದಾರಿಗೆಡಿಸಿರುವರೋ ಅವರ ಪಾಪದ ಒಂದು ಭಾಗವನ್ನು ಹೊರಲು (ಅದು ಕಾರಣ ವಾಗುವುದು). ಅರಿಯಿರಿ! ಅವರು ಹೊರುವ ಆ ಭಾರವು ಎಷ್ಟು ನಿಕೃಷ್ಟವಾದುದು!

(26) ಅವರಿಗಿಂತ ಮುಂಚಿನವರೂ ಸಂಚು ಹೂಡಿರುವರು. ಆಗ ಅವರು ಕಟ್ಟಿ ನಿರ್ಮಿಸಿರುವುದರ ಅಡಿಪಾಯವನ್ನು ಅಲ್ಲಾಹು ಧ್ವಂಸಗೊಳಿಸಿದನು. ಆಗ ಛಾವಣಿಯು ಅವರ ಮೇಲ್ಭಾಗದಿಂದ ಅವರ ಮೇಲೆ ಕುಸಿದು ಬಿತ್ತು.(505) ಅವರು ನಿರೀಕ್ಷಿಸದ ಕಡೆಯಿಂದ ಶಿಕ್ಷೆಯು ಅವರೆಡೆಗೆ ಬಂದಿತು.
505. ಪ್ರವಾದಿಗಳನ್ನು ಮತ್ತು ಸತ್ಯವಿಶ್ವಾಸಿಗಳನ್ನು ಸೋಲಿಸಲು ಅವರು ಒಳಸಂಚಿನ ಒಂದು ಸೌಧವನ್ನೇ ನಿರ್ಮಿಸಿದ್ದರು. ಆದರೆ ಅಲ್ಲಾಹುವಿನ ತಂತ್ರವು ಅವರ ಒಳಸಂಚಿನ ಅಡಿಪಾಯವನ್ನೇ ಬುಡಮೇಲುಗೊಳಿಸುವುದಾಗಿತ್ತು.

(27) ತರುವಾಯ ಅಂತ್ಯದಿನದಂದು ಅವನು ಅವರನ್ನು ಅಪಮಾನಗೊಳಿಸುವನು. “ನನಗೆ ಸಹಭಾಗಿಗಳಿರುವರುಂದು ವಾದಿಸುತ್ತಾ ನೀವು ವಿಭಜನೆಗೊಂಡಿದ್ದಿರಿ. ಅವರು ಎಲ್ಲಿರುವರು?” ಎಂದು ಅವನು ಕೇಳುವನು. ಜ್ಞಾನ ನೀಡಲಾದವರು ಹೇಳುವರು: “ಖಂಡಿತವಾಗಿಯೂ ಇಂದು ಅಪಮಾನ ಮತ್ತು ಶಿಕ್ಷೆಯು ಸತ್ಯನಿಷೇಧಿಗಳ ಮೇಲಾಗಿದೆ”.

(28) ಸ್ವತಃ ತಮ್ಮೊಂದಿಗೆ ಅಕ್ರಮವೆಸಗುತ್ತಿರುವಾಗಲೇ ಯಾವೊಂದು ಜನತೆಯ ಬದುಕನ್ನು ಮಲಕ್‍ಗಳು ಕೊನೆಗೊಳಿಸುವರೋ ಅವರ ಮೇಲಾಗಿದೆ. “ನಾವು ಯಾವುದೇ ಕೆಡುಕನ್ನೂ ಮಾಡಿರಲಿಲ್ಲ” ಎನ್ನುತ್ತಾ ಆಗ ಅವರು ಶರಣಾಗಲು ಮುಂದಾಗುವರು.(506) ಹಾಗಲ್ಲ! ಖಂಡಿತವಾಗಿಯೂ ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿಯುವವನಾಗಿರುವನು.
506. ಭೂಮಿಯಲ್ಲಿ ಮಿತಿಮೀರಿ ಧಿಕ್ಕಾರ ತೋರಿದವರೆಲ್ಲರೂ ಪರಲೋಕದಲ್ಲಿ ಅಲ್ಲಾಹುವಿಗೆ ಶರಣಾಗಲು ಸಿದ್ಧರಾಗುವರು. ಆದರೆ ಅದರಿಂದ ಅವರಿಗೆ ಯಾವುದೇ ಪ್ರಯೋಜನವೂ ಲಭ್ಯವಾಗದು.

(29) ಆದುದರಿಂದ ನೀವು ನರಕದ ಬಾಗಿಲುಗಳನ್ನು ಪ್ರವೇಶಿಸಿರಿ. (ನೀವು) ಅದರಲ್ಲಿ ಶಾಶ್ವತವಾಸಿಗಳಾಗಿದ್ದೀರಿ. ಅಹಂಕಾರಿಗಳ ವಾಸಸ್ಥಳವು ಎಷ್ಟು ನಿಕೃಷ್ಟವಾದುದು!

(30) “ನಿಮ್ಮ ರಬ್ ಏನನ್ನು ಅವತೀರ್ಣಗೊಳಿಸಿರುವನು?” ಎಂದು ಭಯಭಕ್ತಿ ಪಾಲಿಸಿದವರೊಂದಿಗೆ ಕೇಳಲಾದರೆ ಅವರು ಹೇಳುವರು: “ಉತ್ತಮವಾಗಿರುವುದನ್ನು”. ಒಳಿತೆಸಗಿದವರಿಗೆ ಇಹಲೋಕದಲ್ಲೇ ಸತ್ಫಲವಿದೆ. ಪರಲೋಕ ಭವನವು ಅತ್ಯುತ್ತಮವಾದುದಾಗಿದೆ. ಭಯಭಕ್ತಿ ಪಾಲಿಸುವವರಿಗಿರುವ ಭವನವು ಎಷ್ಟು ಉತ್ತಮವಾದುದು!

(31) ಅವರು ಶಾಶ್ವತವಾಸಕ್ಕಾಗಿ ಪ್ರವೇಶಿಸುವ ಸ್ವರ್ಗೋದ್ಯಾನಗಳು. ಅದರ ತಳಭಾಗದಿಂದ ನದಿಗಳು ಹರಿಯುತ್ತಿರುವುವು. ಅವರಿಗೆ ಅವರು ಬಯಸುವುದೆಲ್ಲವೂ ಅಲ್ಲಿರುವುವು. ಹೀಗೆ ಭಯಭಕ್ತಿ ಪಾಲಿಸುವವರಿಗೆ ಅಲ್ಲಾಹು ಪ್ರತಿಫಲವನ್ನು ನೀಡುವನು.

(32) (ಅಂದರೆ) ಸಜ್ಜನರಾಗಿರುವಾಗ ಯಾವೊಂದು ಜನತೆಯ ಬದುಕನ್ನು ಮಲಕ್‍ಗಳು ಕೊನೆಗೊಳಿಸುವರೋ ಅವರಿಗೆ. ಅವರು (ಮಲಕ್‍ಗಳು) ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ. ನೀವು ಮಾಡಿಕೊಂಡಿರುವುದರ ಫಲವಾಗಿ ನೀವು ಸ್ವರ್ಗವನ್ನು ಪ್ರವೇಶಿಸಿರಿ”.

(33) ತಮ್ಮ ಬಳಿಗೆ ಮಲಕ್‍ಗಳು ಬರುವುದನ್ನು ಅಥವಾ ತಮ್ಮ ರಬ್‌ನ ಆಜ್ಞೆ ಬರುವುದನ್ನು ಹೊರತು ಅವರು (ಬೇರೆ ಏನನ್ನಾದರೂ) ಕಾಯುತ್ತಿರುವರೇ?(507) ಅವರ ಪೂರ್ವಿಕರೂ ಹೀಗೆಯೇ ಮಾಡಿದ್ದರು. ಅಲ್ಲಾಹು ಅವರೊಂದಿಗೆ ಅನ್ಯಾಯವೆಸಗಿರಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದರು.
507. ತಮ್ಮನ್ನು ಶಿಕ್ಷಿಸಲು ಮಲಕ್‍ಗಳು ಅಲ್ಲಾಹುವಿನ ಆಜ್ಞೆಯೊಂದಿಗೆ ಬರುವ ತನಕ ವಿಶ್ವಾಸವಿಡದೆ ಕಾದುಕುಳಿತು, ಮರಣವನ್ನು ಕಣ್ಣಮುಂದೆ ಕಾಣುವಾಗ ವಿಶ್ವಾಸವಿಡುವುದು ಅವರ ಉದ್ದೇಶವಾಗಿದ್ದರೆ ಆ ವಿಶ್ವಾಸವು ಅವರಿಗೆ ಯಾವುದೇ ಪ್ರಯೋಜನವನ್ನೂ ನೀಡದು.

(34) ಕೊನೆಗೆ ಅವರು ಮಾಡಿಕೊಂಡಿರುವುದರ ದುಷ್ಫಲವು ಅವರನ್ನು ಬಾಧಿಸಿತು ಮತ್ತು ಅವರು ಯಾವುದರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿತು.

(35) (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿದವರು ಹೇಳಿದರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಿಕರಾಗಲಿ ಅವನ ಹೊರತು ಏನನ್ನೂ ಆರಾಧಿಸುತ್ತಿರಲಿಲ್ಲ. ಅವನ ಆಜ್ಞೆಯ ವಿನಾ ಏನನ್ನೂ ನಾವು ನಿಷಿದ್ಧಗೊಳಿಸುತ್ತಿರಲಿಲ್ಲ”. ಅವರ ಪೂರ್ವಿಕರೂ ಹೀಗೆಯೇ ಮಾಡಿದ್ದರು. ಆದರೆ ಸಂದೇಶವಾಹಕರ ಮೇಲೆ ಸಂದೇಶವನ್ನು ತಲುಪಿಸುವುದರ ಹೊರತು ಇನ್ನೇನಾದರೂ ಹೊಣೆಯಿದೆಯೇ?(508)
508. ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಬಹುದೇವಾರಾಧನೆ ಮಾಡುತ್ತಿರಲಿಲ್ಲ. ನಾವು ಹೀಗಾಗಬೇಕೆಂದು ಅಲ್ಲಾಹು ಇಚ್ಛಿಸಿದ್ದರಿಂದಲೇ ನಾವು ಹೀಗಾಗಿದ್ದೇವೆ ಎಂಬ ವಾದವು ಹೊಸತಲ್ಲ. ಅದು ಮನುಷ್ಯ ಚರಿತ್ರೆಯಷ್ಟೇ ಪ್ರಾಚೀನವಾಗಿದೆ. ಅದು ಸಂಪೂರ್ಣವಾಗಿಯೂ ಪ್ರಮಾದಪೂರಿತ ವಾದವಾಗಿದೆ. ಸತ್ಯಾಸತ್ಯತೆಯನ್ನು ಸ್ಪಷ್ಟಗೊಳಿಸಿಕೊಡಲು ಗ್ರಂಥಗಳ ಸಹಿತ ಪ್ರವಾದಿಗಳನ್ನು ಕಳುಹಿಸುವುದು, ಸತ್ಯ ಅಥವಾ ಮಿಥ್ಯವನ್ನು ಆರಿಸುವ ಸ್ವಾತಂತ್ರ್ಯವನ್ನು ಮನುಷ್ಯನಿಗೆ ನೀಡುವುದು ಮತ್ತು ಅವನು ಸ್ವತಃ ಆರಿಸಿದ ಜೀವನಕ್ರಮಕ್ಕೆ ಸೂಕ್ತ ಪ್ರತಿಫಲವನ್ನು ನೀಡುವುದು ಅಲ್ಲಾಹು ನಿಶ್ಚಯಿಸಿದ ಕ್ರಮವಾಗಿದೆ. ಇದರಲ್ಲಿ ಸ್ವಲ್ಪವೂ ಅನ್ಯಾಯವಿಲ್ಲ.

(36) “ನೀವು ಅಲ್ಲಾಹುವನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ” (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು. ತರುವಾಯ ಅವರಲ್ಲಿ ಕೆಲವರನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಿದನು. ಅವರಲ್ಲಿ ಕೆಲವರ ಮೇಲೆ ಪಥಭ್ರಷ್ಟತೆಯು ಸ್ಥಿರವಾಯಿತು. ಆದುದರಿಂದ ನೀವು ಭೂಮಿಯಲ್ಲಿ ಸಂಚರಿಸಿರಿ ಮತ್ತು ಸತ್ಯನಿಷೇಧಿಗಳ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡಿರಿ.

(37) (ಓ ಪ್ರವಾದಿಯವರೇ!) ಅವರು ಸನ್ಮಾರ್ಗದಲ್ಲಿ ಸೇರಬೇಕೆಂದು ತಾವು ಹಂಬಲಿಸುವುದಾದರೆ (ಅದು ವ್ಯರ್ಥವಾಗಿದೆ. ಯಾಕೆಂದರೆ) ಅಲ್ಲಾಹು ಯಾರನ್ನು ಪಥಭ್ರಷ್ಟಗೊಳಿಸುವನೋ ಅವನನ್ನು ಖಂಡಿತವಾಗಿಯೂ ಅವನು ಸನ್ಮಾರ್ಗದಲ್ಲಿ ಸೇರಿಸಲಾರನು. ಅವರಿಗೆ ಸಹಾಯಕರಾಗಿ ಯಾರೂ ಇರಲಾರರು.

(38) “ಮರಣಹೊಂದುವವರನ್ನು ಅಲ್ಲಾಹು ಪುನರುತ್ಥಾನಗೊಳಿಸಲಾರನು” ಎಂದು ಅವರು ಪರಮಾವಧಿ ಖಾತ್ರಿಯೊಂದಿಗೆ ಪ್ರಮಾಣ ಮಾಡುವಂತೆ ಅಲ್ಲಾಹುವಿನ ಮೇಲೆ ಪ್ರಮಾಣ ಮಾಡಿ ಹೇಳಿದರು. ಹಾಗಲ್ಲ! ಅದು ಅವನು ಹೊಣೆ ವಹಿಸಿಕೊಂಡಿರುವ ಸತ್ಯವಾಗ್ದಾನವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರೂ ಅರಿಯಲಾರರು.

(39) (ಅವರನ್ನು ಪುನರುತ್ಥಾನಗೊಳಿಸುವುದು ಯಾಕೆಂದರೆ) ಯಾವ ವಿಷಯದಲ್ಲಿ ಅವರು ಭಿನ್ನರಾಗಿದ್ದರೋ ಅದನ್ನು ಅವರಿಗೆ ಸ್ಪಷ್ಟಪಡಿಸಿಕೊಡುವ ಸಲುವಾಗಿ ಮತ್ತು ತಾವು ಸುಳ್ಳು ಹೇಳುವವರಾಗಿದ್ದೆವೆಂದು ಸತ್ಯನಿಷೇಧಿಗಳು ಅರಿತುಕೊಳ್ಳುವ ಸಲುವಾಗಿದೆ.

(40) ನಾವೊಂದು ವಸ್ತುವನ್ನು ಇಚ್ಛಿಸಿದರೆ ಅದಕ್ಕೆ ಸಂಬಂಧಿಸಿ ನಮ್ಮ ಮಾತು ಅದರೊಂದಿಗೆ “ಉಂಟಾಗು” ಎಂದು ನಾವು ಹೇಳುವುದು ಮಾತ್ರವಾಗಿದೆ. ತಕ್ಷಣ ಅದು ಉಂಟಾಗುವುದು.

(41) ಅಕ್ರಮಕ್ಕೊಳಗಾದ ಬಳಿಕ ಅಲ್ಲಾಹುವಿನ ಮಾರ್ಗದಲ್ಲಿ ಸ್ವಂತ ಊರನ್ನು ಬಿಟ್ಟು ಹೋದವರಾರೋ ಖಂಡಿತವಾಗಿಯೂ ನಾವು ಅವರಿಗೆ ಇಹಲೋಕದಲ್ಲಿ ಉತ್ತಮ ವಾಸಸ್ಥಳವನ್ನು ಮಾಡಿಕೊಡುವೆವು. ಆದರೆ ಪರಲೋಕದ ಪ್ರತಿಫಲವೇ ಅತ್ಯಂತ ದೊಡ್ಡದು. ಅವರು (ಅದನ್ನು) ಅರಿತಿರುತ್ತಿದ್ದರೆ!

(42) ಅವರು (ಮುಹಾಜಿರ್‌ಗಳು) ತಾಳ್ಮೆ ವಹಿಸಿದವರು ಮತ್ತು ತಮ್ಮ ರಬ್‌ನ ಮೇಲೆ ಭರವಸೆಯಿಟ್ಟವರಾಗಿರುವರು.

(43) ತಮಗಿಂತ ಮುಂಚೆ ನಾವು ಸಂದೇಶವಾಹಕರಾಗಿ ಪುರುಷರನ್ನಲ್ಲದೆ ಕಳುಹಿಸಿಲ್ಲ.(509) ಅವರಿಗೆ ನಾವು ದಿವ್ಯಸಂದೇಶವನ್ನು ನೀಡುತ್ತೇವೆ. ನಿಮಗೆ ಅರಿವಿಲ್ಲವೆಂದಾದರೆ (ಗ್ರಂಥಗಳ ಮೂಲಕ) ಅರಿವು ಗಳಿಸಿರುವವರೊಂದಿಗೆ ಕೇಳಿ ನೋಡಿರಿ.
509. ಇದು ಅಲ್ಲಾಹು ಸಂದೇಶವಾಹಕರನ್ನಾಗಿ ಕಳುಹಿಸಬೇಕಾದುದು ಮಲಕ್‍ಗಳನ್ನಲ್ಲವೇ ಎಂದು ಕೇಳುವವರಿಗೆ ನೀಡಿದ ಉತ್ತರವಾಗಿದೆ. ಪೂರ್ವಗ್ರಂಥಗಳು ಲಭಿಸಿದವರೊಂದಿಗೆ ಕೇಳಿದರೆ ಅಲ್ಲಾಹು ಮನುಷ್ಯರನ್ನಲ್ಲದೆ ಬೇರೆ ಯಾರನ್ನೂ ಸಂದೇಶವಾಹಕರಾಗಿ ಕಳುಹಿಸಿಲ್ಲವೆಂಬುದು ಸ್ಪಷ್ಟವಾಗುತ್ತದೆ.

(44) ಸ್ಪಷ್ಟವಾದ ಪುರಾವೆಗಳೊಂದಿಗೆ ಹಾಗೂ ಗ್ರಂಥಗಳೊಂದಿಗೆ (ನಾವು ಅವರನ್ನು ಕಳುಹಿಸಿದೆವು). ಜನರಿಗೆ ಅವತೀರ್ಣಗೊಂಡಿರುವುದನ್ನು ತಾವು ಅವರಿಗೆ ವಿವರಿಸಿಕೊಡುವ ಸಲುವಾಗಿ ಮತ್ತು ಅವರು ಚಿಂತಿಸಿ ಗ್ರಹಿಸುವುದಕ್ಕಾಗಿ ತಮಗೆ ನಾವು ಸಂದೇಶವನ್ನು ಅವತೀರ್ಣಗೊಳಿಸಿದೆವು.

(45) ಆದರೆ ಕೆಟ್ಟ ತಂತ್ರಗಳನ್ನು ರೂಪಿಸಿದವರು ಯಾರೋ ಅವರನ್ನು ಅಲ್ಲಾಹು ಭೂಮಿಯಲ್ಲಿ ಹುದುಗಿಸಿ ಬಿಡಲಾರನೆಂದು ಅಥವಾ ಅವರು ನಿರೀಕ್ಷಿಸದ ಕಡೆಯಿಂದ ಶಿಕ್ಷೆಯು ಅವರೆಡೆಗೆ ಬರಲಾರದೆಂದು ಅವರು ನಿರ್ಭೀತರಾಗಿರುವರೇ?

(46) ಅಥವಾ ಅವರು ಅತ್ತಿತ್ತ ಚಲಿಸುತ್ತಿರುವಾಗ ಅವರಿಗೆ ಸೋಲಿಸಲು ಸಾಧ್ಯವಾಗದ ರೀತಿಯಲ್ಲಿ ಅವನು ಅವರನ್ನು ಹಿಡಿಯಲಾರನೆಂದು?

(47) ಅಥವಾ ಅವರು ಭಯಭೀತರಾಗಿರುವಾಗಲೇ ಅವನು ಅವರನ್ನು ಹಿಡಿಯಲಾರನೆಂದು (ಅವರು ನಿರ್ಭೀತರಾಗಿರುವರೇ?) ಖಂಡಿತವಾಗಿಯೂ ನಿಮ್ಮ ರಬ್ ಅತ್ಯಂತ ದಯಾಳುವೂ ಅಪಾರ ಕರುಣೆಯುಳ್ಳವನೂ ಆಗಿರುವನು.(510)
510. ಯಾವುದೇ ಸಂದರ್ಭದಲ್ಲೂ ಯಾವುದೇ ವಿಧದಲ್ಲೂ ಅವರನ್ನು ಶಿಕ್ಷಿಸಲು ಅಲ್ಲಾಹುವಿಗೆ ಸಾಧ್ಯವಿದೆ. ಆದರೆ ಅವನು ತನ್ನ ಅಪಾರ ಕಾರುಣ್ಯದಿಂದ ಅವರಿಗೆ ಕಾಲಾವಕಾಶವನ್ನು ದೀರ್ಘಗೊಳಿಸುತ್ತಾನೆ.

(48) ಅಲ್ಲಾಹು ಸೃಷ್ಟಿಸಿದ ಯಾವುದೇ ವಸ್ತುವಿನೆಡೆಗೆ ಅವರು ನೋಡಲಿಲ್ಲವೇ? ದೈನ್ಯತಾಭಾವದಿಂದಲೂ ಅಲ್ಲಾಹುವಿಗೆ ಸಾಷ್ಟಾಂಗವೆರಗುತ್ತಲೂ ಅದರ ನೆರಳುಗಳು ಬಲಕ್ಕೂ ಎಡಕ್ಕೂ ತಿರುಗುತ್ತಾ ಇದೆ.

(49) ಭೂಮ್ಯಾಕಾಶಗಳಲ್ಲಿರುವ ಪ್ರತಿಯೊಂದು ಜೀವಿಯೂ ಅಲ್ಲಾಹುವಿಗೆ ಸಾಷ್ಟಾಂಗವೆರಗುತ್ತಿದೆ. ಮಲಕ್‍ಗಳು ಕೂಡ (ಸಾಷ್ಟಾಂಗವೆರಗುತ್ತಿರುವರು). ಅವರು ಅಹಂಕಾರಪಡಲಾರರು.

(50) ಅವರ ಮೇಲಿರುವ ಅವರ ರಬ್ಬನ್ನು ಅವರು ಭಯಪಡುವರು. ಅವರೊಂದಿಗೆ ಏನನ್ನು ಆಜ್ಞಾಪಿಸಲಾಗುವುದೋ ಅದನ್ನು ಅವರು ನಿರ್ವಹಿಸುವರು.

(51) ಅಲ್ಲಾಹು ಹೇಳಿರುವನು: “ನೀವು ಇಬ್ಬರು ಆರಾಧ್ಯರನ್ನು ಮಾಡಿಕೊಳ್ಳದಿರಿ. ಅವನು ಏಕಮೇವ ಆರಾಧ್ಯನು ಮಾತ್ರವಾಗಿರುವನು. ಆದುದರಿಂದ ನೀವು (ಏಕಮೇವ ಆರಾಧ್ಯನಾಗಿರುವ) ನನ್ನನ್ನು ಮಾತ್ರ ಭಯಪಡಿರಿ”.

(52) ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನದ್ದಾಗಿವೆ. ನಿರಂತರವಾಗಿರುವ ಶರಣಾಗತಿಯು ಅವನಿಗೆ ಮಾತ್ರವಾಗಿದೆ. ಹೀಗಿರುವಾಗ ನೀವು ಅಲ್ಲಾಹು ಅಲ್ಲದವರೊಂದಿಗೆ ಭಯಭಕ್ತಿ ತೋರಿಸುವಿರಾ?

(53) ನಿಮ್ಮಲ್ಲಿ ಅನುಗ್ರಹವಾಗಿ ಏನೇ ಇದ್ದರೂ ಅದು ಅಲ್ಲಾಹುವಿನಿಂದಾಗಿದೆ. ತರುವಾಯ ನಿಮಗೇನಾದರೂ ಹಾನಿ ತಟ್ಟಿದರೆ ನೀವು ಗಟ್ಟಿಯಾಗಿ ಕೂಗಿ ಮೊರೆಯಿಡುವುದೂ ಅವನಲ್ಲೇ ಆಗಿದೆ.

(54) ತರುವಾಯ ಅವನು ನಿಮ್ಮಿಂದ ಆ ಹಾನಿಯನ್ನು ನಿವಾರಿಸಿದರೆ ಅಗೋ ನಿಮ್ಮ ಪೈಕಿ ಒಂದು ಗುಂಪು ಅವರ ರಬ್‌ನೊಂದಿಗೆ ಸಹಭಾಗಿತ್ವ ಮಾಡುವರು.

(55) ನಾವು ಅವರಿಗೆ ಏನನ್ನು ದಯಪಾಲಿಸಿರುವೆವೋ ಅದರಲ್ಲಿ ಅವರು ಕೃತಘ್ನತೆಯನ್ನು ತೋರುತ್ತಿರುವರು. ನೀವು ಸುಖವಾಗಿ ಜೀವಿಸಿರಿ. ತರುವಾಯ ನೀವು ಅರಿತುಕೊಳ್ಳುವಿರಿ.(511)
511. ಬಹುದೇವಾರಾಧನೆಯ ಪರಿಣಾಮವೇನೆಂಬುದು ನಿಮಗೆ ಪರಲೋಕದಲ್ಲಿ ಸ್ಪಷ್ಟವಾಗಿ ತಿಳಿದುಬರುವುದು.

(56) ನಾವು ಅವರಿಗೆ ದಯಪಾಲಿಸಿರುವುದರಲ್ಲಿ ಒಂದು ಪಾಲನ್ನು ಅವರು ತಮಗೆ (ಸ್ಪಷ್ಟವಾದ) ಅರಿವಿಲ್ಲದ ಕೆಲವು (ಮಿಥ್ಯಾರಾಧ್ಯರಿಗೆ) ಮುಡಿಪಾಗಿಡುತ್ತಿರುವರು.(512) ಅಲ್ಲಾಹುವಿನ ಮೇಲಾಣೆ! ನೀವು ಹೆಣೆಯುತ್ತಿರುವುದರ ಬಗ್ಗೆ ಖಂಡಿತವಾಗಿಯೂ ನಿಮ್ಮೊಂದಿಗೆ ಪ್ರಶ್ನಿಸಲಾಗುವುದು.
512. ಇಲ್ಲಿ ಪ್ರಸ್ತಾಪಿಸಲಾಗಿರುವುದು ಮಿಥ್ಯಾರಾಧ್ಯರಿಗೆ ಬಲಿ ಹರಕೆಗಳಾಗಿ ಪ್ರಾಣಿ, ಬೆಳೆ, ಸಂಪತ್ತು ಇತ್ಯಾದಿಗಳನ್ನು ನೀಡುವುದರ ಬಗ್ಗೆಯಾಗಿದೆ.

(57) ಅವರು ಅಲ್ಲಾಹುವಿಗೆ ಹೆಣ್ಮಕ್ಕಳನ್ನು ಸ್ಥಾಪಿಸುತ್ತಿರುವರು.(513) ಅವನು ಪರಮಪಾವನನು! ಅವರಿಗಾದರೋ ಅವರು ಇಷ್ಟಪಡುವುದು (ಗಂಡು ಮಕ್ಕಳು).
513. ಮಲಕ್‍ಗಳು ಅಲ್ಲಾಹುವಿನ ಹೆಣ್ಮಕ್ಕಳೆಂದು ಅನೇಕ ಮಂದಿ ವಿಶ್ವಾಸವಿಟ್ಟಿದ್ದರು.

(58) ಅವರ ಪೈಕಿ ಒಬ್ಬನಿಗೆ ಒಂದು ಹೆಣ್ಣುಮಗು ಹುಟ್ಟಿದ ಶುಭವಾರ್ತೆಯನ್ನು ತಿಳಿಸಲಾದರೆ ರೋಷಾಕುಲನಾಗಿ ಅವನ ಮುಖವು ಕರ್‍ರಗಾಗುವುದು.

(59) ತನಗೆ ತಿಳಿಸಲಾಗಿರುವ ಆ ಶುಭವಾರ್ತೆಯ ಅಪಮಾನದಿಂದಾಗಿ ಅವನು ಜನರಿಂದ ಅಡಗಿಕೊಳ್ಳುವನು. ಅಪಮಾನದಿಂದಾಗಿ ಅದನ್ನು ಉಳಿಸಬೇಕೋ ಅಥವಾ ಅದನ್ನು ಮಣ್ಣಿನಲ್ಲಿ ಹೂಳಬೇಕೋ (ಎಂದಾಗಿರುವುದು ಅವನ ಆಲೋಚನೆ!) ಅರಿತುಕೊಳ್ಳಿರಿ! ಅವರು ಕೈಗೊಳ್ಳುವ ತೀರ್ಮಾನವು ಎಷ್ಟು ನಿಕೃಷ್ಟವಾದುದು!(514)
514. ತನಗೊಂದು ಹೆಣ್ಣುಮಗು ಹುಟ್ಟಿದೆಯೆಂದು ತಿಳಿದರೆ ಅಪಮಾನದಿಂದ ಮನೆಯಲ್ಲೇ ಅಡಗಿ ಕೂರುವ ಅದೇ ವ್ಯಕ್ತಿ ಸರ್ವಲೋಕಗಳ ರಬ್ ಆದ ಅಲ್ಲಾಹುವಿಗೆ ಹೆಣ್ಮಕ್ಕಳಿದ್ದಾರೆಂದು ಹೇಳುತ್ತಿದ್ದಾನೆ. ತನಗೆ ಅಹಿತಕರವಾಗಿರುವುದನ್ನು ಅಲ್ಲಾಹುವಿನ ಹೆಸರಿನಲ್ಲಿ ಅರೋಪಿಸುವಾಗ ಅವನು ಅಲ್ಲಾಹುವಿನ ಮಹತ್ವವನ್ನು ಪರಿಗಣಿಸುವುದಿಲ್ಲ.

(60) ಕೆಟ್ಟ ವಿಶೇಷಣವಿರುವುದು ಪರಲೋಕದಲ್ಲಿ ವಿಶ್ವಾಸವಿಡದವರಿಗಾಗಿದೆ. ಅತ್ಯುನ್ನತವಾದ ವಿಶೇಷಣವಿರುವುದು ಅಲ್ಲಾಹುವಿಗಾಗಿದೆ. ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.

(61) ಮನುಷ್ಯರ ಅಕ್ರಮದ ನಿಮಿತ್ತ ಅಲ್ಲಾಹು ಅವರನ್ನು (ತಕ್ಷಣ) ಶಿಕ್ಷಿಸುವುದಾಗಿದ್ದರೆ ಭೂಮಿಯ ಮೇಲೆ ಯಾವುದೇ ಜೀವಿಯನ್ನೂ ಅವನು ಉಳಿಯಗೊಡುತ್ತಿರಲಿಲ್ಲ. ಆದರೆ ನಿಶ್ಚಿತ ಅವಧಿಯವರೆಗೆ ಅವನು ಅವರಿಗೆ ಕಾಲಾವಕಾಶವನ್ನು ದೀರ್ಘಿಸಿಕೊಡುವನು. ಅವರ ಅವಧಿಯೇನಾದರೂ ಬಂದುಬಿಟ್ಟರೆ ಅದನ್ನು ಒಂದು ಕ್ಷಣದಷ್ಟು ಹಿಂದಕ್ಕೆ ತಳ್ಳಲು ಅವರಿಂದಾಗದು. ಅದನ್ನು ಮುಂದಕ್ಕೆ ತಳ್ಳಲೂ ಅವರಿಂದಾಗದು.

(62) ಅವರಿಗೆ ಇಷ್ಟವಿಲ್ಲದಿರುವುದನ್ನು ಅವರು ಅಲ್ಲಾಹುವಿಗೆ ವಹಿಸಿಕೊಡುವರು. ಅತ್ಯುತ್ತಮವಾಗಿರುವುದು ಅವರಿಗಿರುವುದಾಗಿದೆಯೆಂದು ಅವರ ನಾಲಗೆಗಳು ಸುಳ್ಳು ಸುಳ್ಳಾಗಿ ವರ್ಣಿಸುತ್ತಿವೆ. ಸಂದೇಹವೇ ಇಲ್ಲ! ಖಂಡಿತವಾಗಿಯೂ ಅವರಿಗೆ ನರಕಾಗ್ನಿಯಿರುವುದು. ಅವರನ್ನು (ಅದರೆಡೆಗೆ) ಮುಂದಿನಿಂದ ಸಾಗಿಸಲಾಗುವುದು.(515)
515. ಅವರಿಗೆ ಗಂಡುಮಕ್ಕಳು ಮತ್ತು ಅಲ್ಲಾಹುವಿಗೆ ಹೆಣ್ಣುಮಕ್ಕಳು! ಅವರಿಗೆ ಅಥವಾ ಅವರ ಮಿಥ್ಯಾರಾಧ್ಯರಿಗೆ ಉತ್ತಮವಾದ ಸಂಪಾದನೆಗಳು ಮತ್ತು ಅಲ್ಲಾಹುವಿಗೆ (ದಾನಧರ್ಮಗಳಾಗಿ) ಕೆಟ್ಟ ವಸ್ತುಗಳು! ಈ ನಿಲುವನ್ನು ಸ್ವೀಕರಿಸಿದವರಿಗೆ ನರಕವಿದೆ. ಮೊಟ್ಟಮೊದಲನೆಯದಾಗಿ ನರಕಾಗ್ನಿಯೆಡೆಗೆ ಸಾಗಿಸಲಾಗುವುದು ಅವರನ್ನೇ ಆಗಿದೆ.

(63) ಅಲ್ಲಾಹುವಿನ ಮೇಲಾಣೆ! ತಮಗಿಂತ ಮುಂಚೆಯೂ ನಾವು ಅನೇಕ ಸಮುದಾಯಗಳೆಡೆಗೆ ಸಂದೇಶವಾಹಕರನ್ನು ಕಳುಹಿಸಿರುವೆವು. ಆದರೆ ಸೈತಾನನು ಅವರಿಗೆ ಅವರ (ದುಷ್)ಕರ್ಮಗಳನ್ನು ಆಕರ್ಷಣೀಯಗೊಳಿಸಿ ತೋರಿಸಿದನು. ಇಂದು ಅವನು ಅವರ ಮಿತ್ರನಾಗಿರುವನು. ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ.

(64) ಯಾವ ವಿಷಯದಲ್ಲಿ ಅವರು ಭಿನ್ನರಾಗಿರುವರೋ ಅದನ್ನು ಅವರಿಗೆ ಸ್ಪಷ್ಟಗೊಳಿಸುವ ಸಲುವಾಗಿ ಮತ್ತು ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿಯಾಗಿ ಹಾಗೂ ಕಾರುಣ್ಯವಾಗಿ ವಿನಾ ತಮಗೆ ನಾವು ಗ್ರಂಥವನ್ನು ಅವತೀರ್ಣಗೊಳಿಸಿಲ್ಲ.

(65) ಅಲ್ಲಾಹು ಆಕಾಶದಿಂದ ಮಳೆನೀರನ್ನು ಸುರಿಸಿದನು. ತರುವಾಯ ಅದರಿಂದ ಅವನು ನಿರ್ಜೀವವಾಗಿದ್ದ ಭೂಮಿಗೆ ಜೀವವನ್ನು ನೀಡಿದನು. ಆಲಿಸಿ ಗ್ರಹಿಸುವ ಜನರಿಗೆ ಖಂಡಿತವಾಗಿಯೂ ಅದರಲ್ಲಿ ದೃಷ್ಟಾಂತವಿದೆ.

(66) ಖಂಡಿತವಾಗಿಯೂ ನಿಮಗೆ ಜಾನುವಾರುಗಳಲ್ಲಿ ಒಂದು ಪಾಠವಿದೆ. ಅವುಗಳ ಉದರಗಳಲ್ಲಿರುವುದರಿಂದ -(ಅಂದರೆ) ಮಲ ಮತ್ತು ರಕ್ತದ ನಡುವಿನಿಂದಿರುವ,(516) ಕುಡಿಯುವವರಿಗೆ ರುಚಿಕರವಾಗಿರುವ ಶುದ್ಧ ಹಾಲನ್ನು ನಾವು ನಿಮಗೆ ಕುಡಿಯಲು ನೀಡುವೆವು.
516. ಜಾನುವಾರುಗಳು ತಿನ್ನುವ ಆಹಾರದ ಒಂದಂಶವು ಮಲಮೂತ್ರವಾಗಿ ವಿಸರ್ಜಿಸಲ್ಪಡುತ್ತವೆ. ಇನ್ನೊಂದಂಶವು ಶರೀರಕ್ಕೆ ಹೀರಲ್ಪಡುತ್ತವೆ. ಅದರಲ್ಲಿ ಒಂದಂಶವು ರಕ್ತವಾಗಿ ಮಾರ್ಪಡುತ್ತದೆ. ಮತ್ತೊಂದಂಶವು ಹಾಲಾಗಿ ಮಾರ್ಪಡುತ್ತದೆ. ಒಂದೇ ವಿಧದ ಆಹಾರ ಸೇವನೆಯಿಂದಲೇ ಇಷ್ಟೊಂದು ಪರಿವರ್ತನೆಗಳು!

(67) ಖರ್ಜೂರದ ಮರಗಳ ಮತ್ತು ದ್ರಾಕ್ಷಿ ಬಳ್ಳಿಗಳ ಫಲಗಳಿಂದಲೂ (ನಿಮಗೆ ನಾವು ಕುಡಿಯಲು ನೀಡುವೆವು). ಅದರಿಂದ ನೀವು ಅಮಲು ಪದಾರ್ಥಗಳನ್ನು ಮತ್ತು ಉತ್ತಮ ಆಹಾರಗಳನ್ನು ತಯಾರಿಸುವಿರಿ.(517) ಖಂಡಿತವಾಗಿಯೂ ಆಲೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
517. ಒಂದೇ ವಿಧದ ಫಲಗಳಿಂದ ಹಾನಿಕರವಾದ ಅಮಲು ಪದಾರ್ಥವೂ ವಿಶಿಷ್ಟವಾದ ಫಲ ರಸಗಳೂ ಜನರಿಗೆ ಸಿಗುತ್ತವೆ. ಉತ್ತಮವಾದುದನ್ನು ಮತ್ತು ಕೆಟ್ಟದ್ದನ್ನು ಆರಿಸಿ ಉಪಯೋಗಿಸಲು ಅಲ್ಲಾಹು ಜನರಿಗೆ ಅವಕಾಶ ನೀಡಿರುವನು.

(68) ತಮ್ಮ ರಬ್ ಜೇನು ನೊಣಕ್ಕೆ ಸಂದೇಶವನ್ನು ನೀಡಿದನು: “ಬೆಟ್ಟಗಳಲ್ಲಿ, ವೃಕ್ಷಗಳಲ್ಲಿ ಮತ್ತು ಮನುಷ್ಯರು ಎತ್ತರಿಸಿ ಕಟ್ಟುವವುಗಳಲ್ಲಿ ಗೂಡುಗಳನ್ನು ನಿರ್ಮಿಸು.

(69) ತರುವಾಯ ಎಲ್ಲ ವಿಧ ಫಲವರ್ಗಗಳಿಂದಲೂ ತಿಂದು, ನಿನ್ನ ರಬ್ ಅನುಕೂಲಕರವಾಗಿ ಮಾಡಿಕೊಟ್ಟಿರುವ ಮಾರ್ಗಗಳಲ್ಲಿ ಚಲಿಸು.”(518) ಅವುಗಳ ಉದರಗಳಿಂದ ವಿಭಿನ್ನ ಬಣ್ಣಗಳಿರುವ ಪಾನೀಯವು ಹೊರಬರುತ್ತದೆ. ಅದರಲ್ಲಿ ಮನುಷ್ಯರಿಗೆ ಉಪಶಮನವಿದೆ. ಖಂಡಿತವಾಗಿಯೂ ಚಿಂತಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
518. ಬೇಟೆಯಾಡುವ, ಮನೆ ನಿರ್ಮಿಸುವ ಮತ್ತು ಆತ್ಮರಕ್ಷಣೆಗಾಗಿ ಯೋಜನೆ ರೂಪಿಸುವ ವಿಷಯಗಳಲ್ಲಿ ಪ್ರಾಣಿಪಕ್ಷಿಗಳಿಗೆ ಅನುಪಮ ವೈಶಿಷ್ಟ್ಯತೆಗಳಿವೆ. ಜೇನು ನೊಣವು ಈ ವಿಷಯದಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿರುವ ಜೀವಿಯಾಗಿದೆ. ಅಸಾಧಾರಣವಾದ ಸಾಮರ್ಥ್ಯದೊಂದಿಗೆ ಜೇನು ನೊಣಗಳು ಜೇನನ್ನು ಮತ್ತು ಮಕರಂದವನ್ನು ಸಂಗ್ರಹಿಸುತ್ತವೆ. ಅಸಾಮಾನ್ಯವಾದ ವಿದಗ್ಧತೆಯೊಂದಿಗೆ ಮತ್ತು ಅತೀವ ಸೂಕ್ಷ್ಮತೆಯೊಂದಿಗೆ ಅವು ಗೂಡನ್ನು ನಿರ್ಮಿಸುತ್ತವೆ. ಇವೆಲ್ಲವನ್ನೂ ಕಲಿಸಿಕೊಟ್ಟಿದ್ದು ಯಾರು? ಜಗದೊಡೆಯನಾದ ಅಲ್ಲಾಹುವಿನ ವಿನಾ ಇನ್ನಾರೂ ಅಲ್ಲ.

(70) ನಿಮ್ಮನ್ನು ಅಲ್ಲಾಹು ಸೃಷ್ಟಿಸಿದನು. ತರುವಾಯ ನಿಮ್ಮನ್ನು ಅವನು ಮೃತಪಡಿಸುವನು. (ಅನೇಕ ವಿಷಯಗಳನ್ನು) ಅರಿತುಕೊಂಡ ಬಳಿಕವೂ ಏನನ್ನೂ ಅರಿಯದಿರುವಂತಹ ಸ್ಥಿತಿಗೆ ತಲುಪುವಂತೆ(519) ನಿಮ್ಮ ಪೈಕಿ ಕೆಲವರು ಅತಿ ಬಲಹೀನತೆಯ ಪ್ರಾಯದೆಡೆಗೆ ತಳ್ಳಲ್ಪಡುವರು. ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸರ್ವಶಕ್ತನೂ ಆಗಿರುವನು.
519. ವೃದ್ಧಾಪ್ಯದಲ್ಲಿ ಕೆಲವರಿಗೆ ಆಲೋಚನಾಶಕ್ತಿ ಮತ್ತು ಜ್ಞಾಪಕಶಕ್ತಿ ಪೂರ್ಣವಾಗಿ ಅಥವಾ ಭಾಗಶಃ ಕಳೆದುಹೋಗುತ್ತದೆ.

(71) ಅನ್ನಾಧಾರದ ವಿಷಯದಲ್ಲಿ ಅಲ್ಲಾಹು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಮಿಗಿಲಾಗಿಸಿರುವನು. ಆದರೆ (ಅನ್ನಾಧಾರದ ವಿಷಯದಲ್ಲಿ) ಮಿಗಿಲಾಗಿರುವವರು ತಮ್ಮ ಅನ್ನಾಧಾರವನ್ನು ತಮ್ಮ ಬಲಗೈಗಳು ಸ್ವಾಧೀನದಲ್ಲಿಟ್ಟುಕೊಂಡಿರುವವ(ಗುಲಾಮ)ರಿಗೆ ಒಪ್ಪಿಸಿ, ಅದರಲ್ಲಿ ಅವರು (ಒಡೆಯ ಮತ್ತು ಗುಲಾಮ) ಸಮಾನರಾಗಿರುವಂತೆ ನೋಡಿಕೊಳ್ಳಲಾರರು. ಹೀಗಿರುವಾಗ ಅವರು ಅಲ್ಲಾಹುವಿನ ಅನುಗ್ರಹವನ್ನು ನಿಷೇಧಿಸುತ್ತಿರುವರೇ?(520)
520. ಕುರ್‌ಆನ್ ಅವತೀರ್ಣವಾಗುವ ಕಾಲದಲ್ಲಿ ಅರೇಬಿಯಾದಲ್ಲಿ ಗುಲಾಮಗಿರಿ ಪದ್ಧತಿಯು ಅಸ್ತಿತ್ವದಲ್ಲಿತ್ತು. ಆ ಪದ್ಧತಿಯ ಕೆಳಗೆ ಬದುಕುತ್ತಿದ್ದವರಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿ ಏಕದೇವಸಿದ್ಧಾಂತದ ಮೂಲಸ್ವರೂಪವನ್ನು ಇಲ್ಲಿ ಒತ್ತಿಹೇಳಲಾಗಿದೆ. ಒಬ್ಬ ಯಜಮಾನನು ತನ್ನ ಸಂಪತ್ತನ್ನೋ, ಐಶ್ವರ್ಯವನ್ನೋ ಗುಲಾಮರಿಗೆ ಪಾಲುಮಾಡಿ ಕೊಡಲಾರನು. ಹೀಗಿರುವಾಗ ಅಲ್ಲಾಹು ತನ್ನ ಅಧಿಕಾರವನ್ನು ದೇವದೇವತೆಯರಿಗೆ ಪಾಲು ಮಾಡಿಕೊಟ್ಟಿದ್ದಾನೆಂದು ಹೇಳುವುದರಲ್ಲಿ ಯಾವ ನ್ಯಾಯವಿದೆ? ಅಭೌತಿಕ ಮಾರ್ಗಗಳ ಮೂಲಕ ಸೃಷ್ಟಿಗಳಿಂದ ಲಾಭನಷ್ಟಗಳನ್ನು ನಿರೀಕ್ಷಿಸುವವರು ವಾಸ್ತವಿಕವಾಗಿ ಅಲ್ಲಾಹು ಅವರಿಗೆ ಮಾಡಿಕೊಟ್ಟಿರುವ ಅನುಗ್ರಹಗಳನ್ನು ನಿಷೇಧಿಸುತ್ತಿದ್ದಾರೆ.

(72) ಅಲ್ಲಾಹು ನಿಮ್ಮಿಂದಲೇ ನಿಮಗೆ ಸಂಗಾತಿಗಳನ್ನು ಮಾಡಿಕೊಟ್ಟಿರುವನು. ನಿಮ್ಮ ಸಂಗಾತಿಗಳ ಮೂಲಕ ಅವನು ನಿಮಗೆ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಮಾಡಿಕೊಟ್ಟಿರುವನು. ವಿಶಿಷ್ಟ ವಸ್ತುಗಳಿಂದ ಅವನು ನಿಮಗೆ ಅನ್ನಾಧಾರವನ್ನೂ ಒದಗಿಸಿರುವನು. ಹೀಗಿರುವಾಗ ಅವರು ಅಸತ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹುವಿನ ಅನುಗ್ರಹವನ್ನು ನಿಷೇಧಿಸುತ್ತಿರುವರೇ?

(73) ಅವರು ಅಲ್ಲಾಹುವಿನ ಹೊರತು ಆಕಾಶಗಳಿಂದಾಗಲಿ ಅಥವಾ ಭೂಮಿಯಿಂದಾಗಲಿ ಅವರಿಗೆ ಯಾವುದೇ ಅನ್ನಾಧಾರವನ್ನೂ ಸ್ವಾಧೀನದಲ್ಲಿಟ್ಟುಕೊಂಡಿರದವರನ್ನು ಮತ್ತು (ಯಾವುದಕ್ಕೂ) ಸಾಮರ್ಥ್ಯವಿಲ್ಲದವರನ್ನು ಆರಾಧಿಸುತ್ತಿರುವರು.

(74) ಆದುದರಿಂದ ನೀವು ಅಲ್ಲಾಹುವಿಗೆ ಉಪಮೆಗಳನ್ನು ಹೇಳದಿರಿ.(521) ಖಂಡಿತವಾಗಿಯೂ ಅಲ್ಲಾಹು ಅರಿಯುವನು ಮತ್ತು ನೀವು ಅರಿಯಲಾರಿರಿ.
521. ಅಲ್ಲಾಹುವೇತರರನ್ನು ಆರಾಧಿಸುವವರು ಮತ್ತು ಅವರೊಂದಿಗೆ ಪ್ರಾರ್ಥಿಸುವವರು ತಮ್ಮ ನಿಲುವನ್ನು ಸಮರ್ಥಿಸಲು ಅಲ್ಲಾಹುವಿಗೆ ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ವಕೀಲನ ಮೂಲಕವಲ್ಲದೆ ನ್ಯಾಯಾಲಯದಲ್ಲಿ ನ್ಯಾಯಬೇಡಲು ಸಾಧ್ಯವೇ? ಶಿಫಾರಸುಗಾರನಿಲ್ಲದೆ ಪ್ರಧಾನಮಂತ್ರಿಯಿಂದ ಯಾವುದೇ ಕಾರ್ಯವನ್ನು ನೆರವೇರಿಸಿಕೊಳ್ಳಲು ಸಾಧ್ಯವೇ? ಎಂದೆಲ್ಲಾ ಕೇಳುತ್ತಾ ಮಧ್ಯವರ್ತಿಗಳು ಬೇಕೆಂಬುದಕ್ಕೆ ಪುರಾವೆಗಳನ್ನು ನಿರ್ಮಿಸಲು ಯತ್ನಿಸುವ ಅನೇಕ ಮಂದಿ ನಮ್ಮ ನಡುವೆಯೇ ಇದ್ದಾರೆ.

(75) ಇನ್ನೊಬ್ಬನ ಒಡೆತನಕ್ಕೆ ಸೇರಿರುವ, ಯಾವುದಕ್ಕೂ ಸಾಮರ್ಥ್ಯವಿಲ್ಲದ ಒಬ್ಬ ಗುಲಾಮನನ್ನು ಮತ್ತು ನಾವು ನಮ್ಮ ಕಡೆಯಿಂದ ಉತ್ತಮ ಅನ್ನಾಧಾರವನ್ನು ಒದಗಿಸಿ, ಅದರಿಂದ ಗುಪ್ತವಾಗಿಯೂ ಬಹಿರಂಗವಾಗಿಯೂ ವ್ಯಯಿಸುವ ಇನ್ನೊಬ್ಬನನ್ನು ಅಲ್ಲಾಹು ಉಪಮೆಯಾಗಿ ತೋರಿಸುತ್ತಿರುವನು. ಇವರು ಸಮಾನರಾಗುವರೇ? ಅಲ್ಲಾಹುವಿಗೆ ಸ್ತುತಿ. ಆದರೆ ಅವರಲ್ಲಿ ಹೆಚ್ಚಿನವರೂ ಅರಿಯಲಾರರು.

(76) ಇಬ್ಬರು ವ್ಯಕ್ತಿಗಳನ್ನು ಅಲ್ಲಾಹು ಉಪಮೆಯಾಗಿ ತೋರಿಸುವನು. ಅವರಲ್ಲೊಬ್ಬನು ಯಾವುದಕ್ಕೂ ಸಾಮರ್ಥ್ಯವಿಲ್ಲದ ಒಬ್ಬ ಮೂಕನಾಗಿರುವನು. ಅವನು ತನ್ನ ಯಜಮಾನನಿಗೆ ಒಂದು ಹೊರೆಯಾಗಿರುವನು. ಅವನನ್ನು ಯಾವ ಕಡೆಗೆ ತಿರುಗಿಸಿದರೂ ಅವನು ಯಾವುದೇ ಒಳಿತನ್ನು ತರಲಾರನು. ಇವನು ಮತ್ತು ಸತ್ಯದ ಹಾದಿಯಲ್ಲಿ ಅಚಲನಾಗಿದ್ದುಕೊಂಡು ನ್ಯಾಯ ಪಾಲಿಸಲು ಆಜ್ಞಾಪಿಸುವ ಇನ್ನೊಬ್ಬನು ಸಮಾನರಾಗುವರೇ?(522)
522. ಸ್ವತಂತ್ರನೂ ಪರಮಾಧಿಕಾರವುಳ್ಳವನೂ ಆಗಿರುವ ಅಲ್ಲಾಹುವಿಗೆ ಸಮಾನರಾಗಿ ಸೃಷ್ಟಿಗಳ ಪೈಕಿ ಯಾರನ್ನಾದರೂ ಪರಿಗಣಿಸುವುದು ಮಹಾ ಪ್ರಮಾದವಾಗಿದೆಯೆಂದು ಈ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.

(77) ಭೂಮ್ಯಾಕಾಶಗಳ ಅಗೋಚರಜ್ಞಾನವಿರುವುದು ಅಲ್ಲಾಹುವಿಗಾಗಿದೆ. ಅಂತ್ಯಘಳಿಗೆಯ ವಿಷಯವು ಕಣ್ಣೆವೆಯಿಕ್ಕುವಂತೆ ಮಾತ್ರವಾಗಿದೆ ಅಥವಾ ಅದಕ್ಕಿಂತಲೂ ಹತ್ತಿರವಾಗಿದೆ. ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.

(78) ನೀವು ಏನನ್ನೂ ಅರಿತಿರದಂತಹ ಸ್ಥಿತಿಯಲ್ಲಿ ಅಲ್ಲಾಹು ನಿಮ್ಮನ್ನು ನಿಮ್ಮ ತಾಯಂದಿರ ಉದರಗಳಿಂದ ಹೊರತಂದನು.(523) ನಿಮಗೆ ಅವನು ಶ್ರವಣವನ್ನು, ದೃಷ್ಟಿಗಳನ್ನು, ಮತ್ತು ಹೃದಯಗಳನ್ನು ನೀಡಿದನು. ನೀವು ಕೃತಜ್ಞತೆ ಸಲ್ಲಿಸುವವರಾಗುವ ಸಲುವಾಗಿ.
523. ಸ್ವತಂತ್ರವಾಗಿ ಆಹಾರ ಹುಡುಕುವ, ಗೂಡುಕಟ್ಟುವ ಮತ್ತು ಆತ್ಮರಕ್ಷಣೆ ಮಾಡುವ ಅರಿವಿನೊಂದಿಗೇ ಪ್ರಾಣಿಪಕ್ಷಿಗಳು ಜನ್ಮತಾಳುತ್ತವೆ. ಆದರೆ ಮನುಷ್ಯನು ಏನನ್ನೂ ಅರಿಯದೆ ಜನ್ಮತಾಳುತ್ತಾನೆ. ಇದು ಮನುಷ್ಯನನ್ನು ಇತರ ಜೀವಿಗಳಿಂದ ಬೇರ್ಪಡಿಸುವ ಮೂಲಭೂತವಾದ ಒಂದು ವಿಶೇಷತೆಯಾಗಿದೆ.

(79) ದಿಗಂತದಲ್ಲಿ (ಅಲ್ಲಾಹುವಿನ ಆಜ್ಞೆಗೆ) ವಿಧೇಯವಾಗಿ ಹಾರಾಡುವ ಹಕ್ಕಿಗಳೆಡೆಗೆ ಅವರು ನೋಡುವುದಿಲ್ಲವೇ? ಅಲ್ಲಾಹುವಿನ ಹೊರತು ಇನ್ನಾರೂ ಅವುಗಳನ್ನು ಆಧಾರ ನೀಡಿ ಹಿಡಿಯುವುದಿಲ್ಲ. ಖಂಡಿತವಾಗಿಯೂ ವಿಶ್ವಾಸವಿಡುವ ಜನರಿಗೆ ಇದರಲ್ಲಿ ದೃಷ್ಟಾಂತಗಳಿವೆ.

(80) ಅಲ್ಲಾಹು ನಿಮಗೆ ನಿಮ್ಮ ಮನೆಗಳನ್ನು ವಿಶ್ರಾಂತಿಧಾಮವನ್ನಾಗಿ ಮಾಡಿಕೊಟ್ಟಿರುವನು. ಅವನು ನಿಮಗೆ ಜಾನುವಾರುಗಳ ತೊಗಲುಗಳಿಂದ ಡೇರೆಗಳನ್ನು ಮಾಡಿಕೊಟ್ಟಿರುವನು. ನೀವು ಪ್ರಯಾಣ ಮಾಡುವ ದಿನದಂದು ಮತ್ತು ನೀವು ಬೀಡುಬಿಡುವ ದಿನದಂದು ಅವುಗಳನ್ನು ನೀವು ಅನಾಯಾಸವಾಗಿ ಬಳಸುತ್ತಿದ್ದೀರಿ.(524) ಅವುಗಳ ಉಣ್ಣೆ, ತುಪ್ಪಳ ಮತ್ತು ಕೂದಲುಗಳಿಂದ ಒಂದು ಕಾಲಾವಧಿಯವರೆಗೆ ಬಳಸಲಾಗುವಂತಹ ಗ್ರಹೋಪಕರಣಗಳನ್ನು ಮತ್ತು ಉಪಭೋಗವಸ್ತುಗಳನ್ನು (ಅವನು ಮಾಡಿಕೊಟ್ಟಿರುವನು).
524. ತಾತ್ಕಾಲಿಕ ವಾಸಕ್ಕಾಗಿ ಹಗುರವೂ ಸುಭದ್ರವೂ ಆದ ಡೇರೆ ಅಥವಾ ಗುಡಾರಗಳನ್ನು ನಿರ್ಮಿಸಲು ಪ್ರಾಣಿಗಳ ತೊಗಲು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

(81) ಅಲ್ಲಾಹು ತಾನು ಸೃಷ್ಟಿಸಿದ ವಸ್ತುಗಳಿಂದ ನಿಮಗೆ ನೆರಳನ್ನು ಮಾಡಿಕೊಟ್ಟಿರುವನು. ಅವನು ನಿಮಗೆ ಪರ್ವತಗಳಲ್ಲಿ ಆಶ್ರಯದಾಣಗಳನ್ನು ಮಾಡಿಕೊಟ್ಟಿರುವನು. ನಿಮ್ಮನ್ನು ಸೆಖೆಯಿಂದ ರಕ್ಷಿಸುವ ಕವಚಗಳನ್ನು ಮತ್ತು ನೀವು ಪರಸ್ಪರ ಕಾದಾಡುವಾಗ ನಿಮ್ಮನ್ನು ರಕ್ಷಿಸುವ ಕವಚಗಳನ್ನು ಅವನು ನಿಮಗೆ ಮಾಡಿಕೊಟ್ಟಿರುವನು. ಹೀಗೆ ನಿಮ್ಮ ಮೇಲಿರುವ ತನ್ನ ಅನುಗ್ರಹವನ್ನು ಅವನು ಪೂರ್ಣಗೊಳಿಸುವನು. ನೀವು (ಅವನಿಗೆ) ಶರಣಾಗತರಾಗುವ ಸಲುವಾಗಿ.

(82) ಅವರೇನಾದರೂ ವಿಮುಖರಾಗುವುದಾದರೆ ತಮ್ಮ ಮೇಲಿರುವ ಹೊಣೆಯು (ಸಂದೇಶವನ್ನು) ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರವಾಗಿದೆ.

(83) ಅವರು ಅಲ್ಲಾಹುವಿನ ಅನುಗ್ರಹವನ್ನು ಅರಿತುಕೊಂಡಿರುವರು. ಅದರ ಬಳಿಕವೂ ಅವರು ಅದನ್ನು ನಿಷೇಧಿಸುತ್ತಿರುವರು. ಅವರಲ್ಲಿ ಹೆಚ್ಚಿನವರೂ ಕೃತಘ್ನ ರಾಗಿರುವರು.(525)
525. ಕಾಫಿರ್ ಎಂಬ ಪದಕ್ಕೆ ಸತ್ಯನಿಷೇಧಿ, ಕೃತಘ್ನ ಇತ್ಯಾದಿ ಅರ್ಥಗಳಿವೆ.

(84) ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ಎಬ್ಬಿಸುವ ದಿನ.(526) ತರುವಾಯ ಸತ್ಯನಿಷೇಧಿಗಳಿಗೆ (ನೆಪಗಳನ್ನು ಹೇಳಲು) ಅನುಮತಿ ನೀಡಲಾಗದು. ಅವರಿಂದ ಪರಿಹಾರವನ್ನು ಸಹ ಕೇಳಲಾಗದು.
526. ಪರಲೋಕದಲ್ಲಿ ಪ್ರತಿಯೊಂದು ಸಮುದಾಯವನ್ನೂ ಅಲ್ಲಾಹು ವಿಚಾರಣೆಗೆ ತೆಗೆದುಕೊಳ್ಳುವಾಗ ಅವರೆಡೆಗೆ ಕಳುಹಿಸಲಾಗಿರುವ ಪ್ರವಾದಿಯನ್ನು ಅವರ ಮೇಲೆ ಸಾಕ್ಷಿಯಾಗಿ ತರುವನು.

(85) ಅಕ್ರಮಿಗಳು ಶಿಕ್ಷೆಯನ್ನು ಕಾಣುವ ಸಂದರ್ಭದಲ್ಲಿ ಅವರಿಗೆ ಅದನ್ನು ಹಗುರಗೊಳಿಸಲಾಗದು. ಅವರಿಗೆ ಕಾಲಾವಕಾಶವನ್ನೂ ನೀಡಲಾಗದು.

(86) (ಅಲ್ಲಾಹುವಿನೊಂದಿಗೆ) ಸಹಭಾಗಿತ್ವ ಮಾಡಿಕೊಂಡವರು (ಪರಲೋಕದಲ್ಲಿ) ತಮ್ಮ ಸಹಭಾಗಿಗಳನ್ನು ಕಾಣುವಾಗ “ನಮ್ಮ ಪ್ರಭೂ! ನಿನ್ನ ಹೊರತಾಗಿ ನಾವು ಪ್ರಾರ್ಥಿಸುತ್ತಿದ್ದ ನಮ್ಮ ಸಹಭಾಗಿಗಳು ಇವರಾಗಿರುವರು” ಎಂದು ಹೇಳುವರು. ಆಗ ಅವರು (ಸಹಭಾಗಿಗಳು) “ಖಂಡಿತವಾಗಿಯೂ ನೀವು ಸುಳ್ಳು ಹೇಳುವವರಾಗಿರುವಿರಿ” ಎಂಬ ಮಾತನ್ನು ಅವರಿಗೆ ಉತ್ತರವಾಗಿ ಹೇಳುವರು.(527)
527. ಅಲ್ಲಾಹುವಿನ ಹಕ್ಕು ಮತ್ತು ಅಧಿಕಾರಗಳಲ್ಲಿ ತಮ್ಮನ್ನು ಸಹಭಾಗಿಗಳನ್ನಾಗಿ ಮಾಡಿ ನಮ್ಮನ್ನು ಆರಾಧಿಸಿರಿ ಎಂದು ಅವರಾರೂ ಬೇಡಿಕೆಯಿಟ್ಟಿರಲಿಲ್ಲ. ಆದುದರಿಂದಲೇ ಆರಾಧಕರ ವಾದಗಳನ್ನು ಅವರು ತಿರಸ್ಕರಿಸುವರು.

(87) ಅಂದು ಅವರು ಅಲ್ಲಾಹುವಿಗೆ ಶರಣಾಗತಿಯನ್ನು ಪ್ರಕಟಿಸುವರು. ಅವರು ಹೆಣೆದಿರುವುದೆಲ್ಲವೂ ಅವರನ್ನು ಬಿಟ್ಟು ಸರಿಯುವುವು.

(88) ಅವಿಶ್ವಾಸವಿಟ್ಟವರು ಮತ್ತು ಅಲ್ಲಾಹುವಿನ ಮಾರ್ಗದಿಂದ (ಜನರನ್ನು) ತಡೆದವರು ಯಾರೋ ಅವರು ವಿನಾಶವನ್ನುಂಟು ಮಾಡುತ್ತಿರುವ ಫಲವಾಗಿ ನಾವು ಅವರಿಗೆ ಶಿಕ್ಷೆಯ ಮೇಲೆ ಶಿಕ್ಷೆಯನ್ನು ಹೆಚ್ಚಿಸಿಕೊಡುವೆವು.

(89) ನಾವು ಪ್ರತಿಯೊಂದು ಸಮುದಾಯದಲ್ಲಿಯೂ ಅವರಿಂದಿರುವ ಒಬ್ಬ ಸಾಕ್ಷಿಯನ್ನು ಅವರ ಮೇಲೆ ಕಳುಹಿಸುವ ಮತ್ತು ಇವರ ಮೇಲೆ ಸಾಕ್ಷಿಯಾಗಿ ನಾವು ತಮ್ಮನ್ನು ತರುವ ದಿನ! ನಾವು ತಮಗೆ ಈ ಗ್ರಂಥವನ್ನು ಎಲ್ಲ ವಿಷಯಗಳಿಗಿರುವ ವಿಶದೀಕರಣವಾಗಿ, ಮಾರ್ಗದರ್ಶಿಯಾಗಿ ಮತ್ತು ಕಾರುಣ್ಯವಾಗಿ ಹಾಗೂ ಶರಣಾಗತರಾಗಿ ಬದುಕುವವರಿಗೆ ಒಂದು ಶುಭವಾರ್ತೆಯಾಗಿ ಅವತೀರ್ಣಗೊಳಿಸಿರುವೆವು.

(90) ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸಲು, ಒಳಿತನ್ನು ಮಾಡಲು ಮತ್ತು ಸಂಬಂಧಿಕರಿಗೆ (ನೆರವು) ನೀಡಲು ಆಜ್ಞಾಪಿಸುತ್ತಿರುವನು. ನೀಚಕೃತ್ಯಗಳನ್ನು, ದುರಾಚಾರಗಳನ್ನು ಮತ್ತು ಅತಿಕ್ರಮಗಳನ್ನು ಅವನು ವಿರೋಧಿಸುತ್ತಿರುವನು.(528) ನೀವು ಚಿಂತಿಸಿ ಗ್ರಹಿಸುವ ಸಲುವಾಗಿ ಅವನು ನಿಮಗೆ ಉಪದೇಶ ನೀಡುತ್ತಿರುವನು.
528. ನ್ಯಾಯಬದ್ಧವಾಗಿರುವ ಎಲ್ಲವನ್ನೂ ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ನ್ಯಾಯಕ್ಕೆ ವಿರುದ್ಧವಾಗಿರುವ ಎಲ್ಲವನ್ನೂ ಇಸ್ಲಾಮ್ ವಿರೋಧಿಸುತ್ತದೆ. ಆದುದರಿಂದಲೇ ಇಸ್ಲಾಮಿನ ಬೋಧನೆಗಳು ಸಜ್ಜನರಿಗೆ ಅಸ್ವೀಕಾರವಾಗಲಾರದು.

(91) ನೀವು ಕರಾರು ಮಾಡುವಾಗ ಅಲ್ಲಾಹುವಿನೊಂದಿಗಿರುವ ಕರಾರನ್ನು ನೆರವೇರಿಸಿರಿ.(529) ಅಲ್ಲಾಹುವನ್ನು ನಿಮ್ಮ ಹೊಣೆಗಾರನನ್ನಾಗಿ ಮಾಡಿ ನೀವು ಖಾತ್ರಿಯೊಂದಿಗೆ ಪ್ರಮಾಣ ಮಾಡಿದ ಬಳಿಕ ಅದನ್ನು ಉಲ್ಲಂಘಿಸದಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹು ಅರಿಯುವನು.
529. ಇಸ್ಲಾಮಿನ ತಳಹದಿಯಲ್ಲಿ ಸತ್ಯವಿಶ್ವಾಸಿಗಳು ಮಾಡುವ ಯಾವುದೇ ಕರಾರು ಕೂಡ ಅಲ್ಲಾಹುವಿನ ಕರಾರು ಅಥವಾ ಅಲ್ಲಾಹುವಿನೊಂದಿಗಿರುವ ಕರಾರಾಗಿರುತ್ತದೆ.

(92) ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ಅದನ್ನು ಎಳೆಎಳೆಯಾಗಿ ಬಿಚ್ಚಿ ಹಾಕುವ ಒಬ್ಬಳಂತೆ ನೀವಾಗದಿರಿ. ಒಂದು ಸಮುದಾಯವು ಇನ್ನೊಂದು ಸಮುದಾಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನಾ ಮಾರ್ಗಗಳನ್ನಾಗಿ ಮಾಡುತ್ತಿದ್ದೀರಿ.(530) ಅಲ್ಲಾಹು ಅದರ ಮೂಲಕ ಕೇವಲ ನಿಮ್ಮನ್ನು ಪರೀಕ್ಷಿಸುತ್ತಿರುವನು. ಯಾವ ವಿಷಯದಲ್ಲಿ ನೀವು ಭಿನ್ನಮತ ಹೊಂದಿರುವಿರೋ ಅದನ್ನು ಅಂತ್ಯದಿನದಂದು ಅವನು ನಿಮಗೆ ಸ್ಪಷ್ಟಪಡಿಸಿಕೊಡುವನು.
530. ನಾವು ನಿಮಗೆ ಯಾವುದೇ ಸಂದರ್ಭದಲ್ಲೂ ಸಹಾಯಮಾಡುವೆವೆಂದು ಪ್ರತಿಜ್ಞೆ ಮಾಡುತ್ತಾ ಒಂದು ಗುಂಪಿನೊಂದಿಗೆ ಮೈತ್ರಿ ಮಾಡಿ, ನಂತರ ಅವರಿಗಿಂತಲೂ ಬಲಿಷ್ಠರಾದ ಇನ್ನೊಂದು ಗುಂಪಿನೊಂದಿಗೆ ಮೈತ್ರಿ ಮಾಡುವ ಅವಕಾಶ ಸಿಕ್ಕಿದರೆ ಮೊದಲನೆ ಗುಂಪಿಗೆ ವಿರುದ್ಧವಾಗಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸ್ವಭಾವವನ್ನು ಇಲ್ಲಿ ಟೀಕಿಸಲಾಗಿದೆ.

(93) ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮನ್ನು ಏಕೈಕ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವನಿಚ್ಛಿಸುವವರನ್ನು ಅವನು ಪಥಭ್ರಷ್ಟಗೊಳಿಸುವನು ಮತ್ತು ಅವನಿಚ್ಛಿಸುವವರನ್ನು ಅವನು ಸನ್ಮಾರ್ಗದಲ್ಲಿ ಸೇರಿಸುವನು. ನೀವು ಮಾಡುತ್ತಿರುವುದರ ಬಗ್ಗೆ ಖಂಡಿತವಾಗಿಯೂ ನಿಮ್ಮೊಂದಿಗೆ ಪ್ರಶ್ನಿಸಲಾಗುವುದು.

(94) ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನಾ ಮಾರ್ಗಗಳನ್ನಾಗಿ ಮಾಡದಿರಿ. (ಇಸ್ಲಾಮಿನಲ್ಲಿ) ಅಚಲವಾಗಿ ಬೇರೂರಿದ ಬಳಿಕ ಕಾಲು ಜಾರುವಂತಾಗಲು(531)ಮತ್ತು ಅಲ್ಲಾಹುವಿನ ಮಾರ್ಗದಿಂದ ನೀವು ಜನರನ್ನು ತಡೆದಿರುವ ನಿಮಿತ್ತ ಶಿಕ್ಷೆಯನ್ನು ಆಸ್ವಾದಿಸುವಂತಾಗಲು ಅದು ಹೇತುವಾಗಬಹುದು. ಭೀಕರವಾದ ಶಿಕ್ಷೆಯೂ ನಿಮಗಿರುವುದು.
531. ಪ್ರತಿಜ್ಞೆಗಳ ಉಲ್ಲಂಘನೆಯು ಇಸ್ಲಾಮಿನಲ್ಲಿ ಅಚಲವಾಗಿ ಬೇರೂರದಿರುವುದನ್ನು ಮತ್ತು ಪಥಭ್ರಷ್ಟತೆಯ ಲಕ್ಷಣವನ್ನು ಸೂಚಿಸುತ್ತದೆಯೆಂದು ಇದರಿಂದ ಗ್ರಹಿಸಬಹುದು.

(95) ಅಲ್ಲಾಹುವಿನೊಂದಿಗಿರುವ ಕರಾರಿಗೆ ಬದಲಾಗಿ ನೀವು ತುಚ್ಛವಾದ ಬೆಲೆಯನ್ನು ಪಡೆಯದಿರಿ. ಖಂಡಿತವಾಗಿಯೂ ಅಲ್ಲಾಹುವಿನ ಬಳಿಯಿರುವುದೇ ನಿಮಗೆ ಉತ್ತಮವಾಗಿದೆ. ನೀವು (ವಾಸ್ತವವನ್ನು) ಅರಿಯುವವರಾಗಿದ್ದರೆ.

(96) ನಿಮ್ಮ ಬಳಿಯಿರುವುದು ಬರಿದಾಗಿ ಹೋಗುವುದು ಮತ್ತು ಅಲ್ಲಾಹುವಿನ ಬಳಿಯಿರುವುದು ಬಾಕಿಯುಳಿಯುವುದು. ತಾಳ್ಮೆ ವಹಿಸಿದವರಿಗೆ ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.

(97) ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.

(98) ತಾವು ಕುರ್‌ಆನ್ ಪಾರಾಯಣ ಮಾಡುವುದಾದರೆ ಬಹಿಷ್ಕೃತನಾದ ಸೈತಾನನಿಂದ ಅಲ್ಲಾಹುವಿನೊಂದಿಗೆ ಅಭಯವನ್ನು ಯಾಚಿಸಿರಿ.

(99) ವಿಶ್ವಾಸವಿಡುವವರು ಮತ್ತು ತಮ್ಮ ರಬ್‌ನ ಮೇಲೆ ಭರವಸೆಯಿಡುವವರು ಯಾರೋ ಅವರ ಮೇಲೆ ಅವನಿಗೆ (ಸೈತಾನನಿಗೆ) ಖಂಡಿತವಾಗಿಯೂ ಯಾವುದೇ ಅಧಿಕಾರವಿರಲಾರದು.

(100) ಅವನಿಗೆ ಅಧಿಕಾರವಿರುವುದು ಅವನನ್ನು ರಕ್ಷಕನನ್ನಾಗಿ ಮಾಡಿಕೊಳ್ಳುವವರ ಮೇಲೆ ಮತ್ತು ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವವರ ಮೇಲೆ ಮಾತ್ರವಾಗಿದೆ.

(101) ನಾವು ಒಂದು ಸೂಕ್ತಿಯ ಸ್ಥಾನದಲ್ಲಿ ಇನ್ನೊಂದು ಸೂಕ್ತಿಯನ್ನು ಬದಲಿಯಾಗಿ ತಂದರೆ -ತಾನು ಅವತೀರ್ಣಗೊಳಿಸುವುದರ ಬಗ್ಗೆ ಅಲ್ಲಾಹು ಚೆನ್ನಾಗಿ ಅರಿಯುವವ ನಾಗಿರುವನು- ಅವರು ಹೇಳುವರು: “ಖಂಡಿತವಾಗಿಯೂ ತಾವು ಹೆಣೆದು ಹೇಳುವ ವ್ಯಕ್ತಿ ಮಾತ್ರವಾಗಿದ್ದೀರಿ”. ಅಲ್ಲ, ಅವರಲ್ಲಿ ಹೆಚ್ಚಿನವರೂ (ವಿಷಯವನ್ನು) ಅರಿತುಕೊಳ್ಳಲಾರರು.

(102) ಹೇಳಿರಿ: “ವಿಶ್ವಾಸವಿಟ್ಟವರನ್ನು ದೃಢವಾಗಿ ನೆಲೆಗೊಳಿಸುವ ಸಲುವಾಗಿ ಮತ್ತು ಶರಣಾಗತರಾಗಿರುವವರಿಗೆ ಮಾರ್ಗದರ್ಶಿಯಾಗಿ ಮತ್ತು ಶುಭವಾರ್ತೆಯಾಗಿ ತಮ್ಮ ರಬ್‌ನ ಕಡೆಯಿಂದ ಪವಿತ್ರಾತ್ಮನು ಇದನ್ನು ಸತ್ಯದೊಂದಿಗೆ ಇಳಿಸಿ ತಂದಿರುವನು”.

(103) “ಅವರಿಗೆ (ಪ್ರವಾದಿಯವರಿಗೆ) ಕಲಿಸಿಕೊಡುತ್ತಿರುವುದು ಯಾವುದೋ ಒಬ್ಬ ಮನುಷ್ಯನು ಮಾತ್ರವಾಗಿರುವನು” ಎಂದು ಅವರು ಹೇಳುತ್ತಿರುವರೆಂದು ಖಂಡಿತವಾಗಿಯೂ ನಾವು ಅರಿತಿರುವೆವು. ಯಾವ ವ್ಯಕ್ತಿಯೆಡೆಗೆ ಅವರು ಬೊಟ್ಟು ಮಾಡುತ್ತಿರುವರೋ ಅವನ ಭಾಷೆಯು ಅರಬೇತರವಾಗಿದೆ.(532) ಆದರೆ ಇದು ಸ್ಪಷ್ಟವಾದ ಅರಬೀ ಭಾಷೆಯಾಗಿದೆ.
532. ಇದು ಪೂರ್ವಗ್ರಂಥಗಳನ್ನು ಕಲಿತ ರೋಮನ್ ಗುಲಾಮನೊಬ್ಬನು ಹೇಳಿಕೊಡುವ ವಿಷಯಗಳನ್ನು ಮುಹಮ್ಮದ್(ಸ) ರವರು ಪುನರುಚ್ಛರಿಸುತ್ತಿದ್ದಾರೆಂದು ಆರೋಪಿಸುವವರಿಗೆ ನೀಡಿದ ಉತ್ತರವಾಗಿದೆ. ಅರಬ್ ಸಾಹಿತ್ಯ ದಿಗ್ಗಜರಿಗೆ ಸವಾಲು ಹಾಕುತ್ತಿರುವ ಈ ಮಹಾ ಗ್ರಂಥದ ವಚನಗಳು ಓರ್ವ ರೋಮನ್ ಗುಲಾಮನ ಬಾಯಿಯಿಂದ ಹೊರಹೊಮ್ಮಿದ್ದಾಗಿದೆಯೆಂದು ಹೇಳಿದರೆ ಸಾಮಾನ್ಯ ಬುದ್ಧಿಯಿರುವವರಾರೂ ಅದನ್ನು ಒಪ್ಪಿಕೊಳ್ಳಲಾರರು.

(104) ಅಲ್ಲಾಹುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿಡದವರಾರೋ ಅವರನ್ನು ಖಂಡಿತವಾಗಿಯೂ ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು. ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ.

(105) ಅಲ್ಲಾಹುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿಡದವರಾರೋ ಅವರು ಮಾತ್ರವಾಗಿರುವರು ಸುಳ್ಳನ್ನು ಹೆಣೆಯುವವರು. ಮಿಥ್ಯವಾದಿಗಳು ಸಹ ಅವರೇ ಆಗಿರುವರು.

(106) ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟ ಬಳಿಕ ಅವನಲ್ಲಿ ಅವಿಶ್ವಾಸವಿಟ್ಟವನಾರೋ, ಅವನ ಹೃದಯವು ವಿಶ್ವಾಸದೊಂದಿಗೆ ಶಾಂತವಾಗಿದ್ದು(533) ಬಲವಂತಕ್ಕೊಳಗಾದವನಲ್ಲದ, ಆದರೆ ತೆರೆದ ಹೃದಯದೊಂದಿಗೆ ಅವಿಶ್ವಾಸವಿಟ್ಟವನಾರೋ, ಅವರ ಮೇಲೆ ಅಲ್ಲಾಹುವಿನ ಕಡೆಯ ಕ್ರೋಧವಿದೆ. ಅವರಿಗೆ ಮಹಾ ಶಿಕ್ಷೆಯೂ ಇದೆ.
533. ಅಲ್ಲಾಹು ನೋಡುವುದು ಮನುಷ್ಯರ ಹೃದಯಗಳೆಡೆಗಾಗಿದೆ. ಹೃದಯದಲ್ಲಿ ದೃಢವಾದ ವಿಶ್ವಾಸವಿದ್ದು ಓರ್ವನು ಬಲವಂತಕ್ಕೊಳಗಾಗಿ ಅವಿಶ್ವಾಸ ಘೋಷಣೆ ಮಾಡಿದರೆ ಅಥವಾ ವಿಗ್ರಹಪೂಜೆ ಮಾಡಿಬಿಟ್ಟರೆ ಅವನು ಅಪರಾಧಿಯಲ್ಲ.

(107) ಅದು ಅವರು ಪರಲೋಕಕ್ಕಿಂತಲೂ ಹೆಚ್ಚಾಗಿ ಇಹಲೋಕವನ್ನು ಇಷ್ಟಪಟ್ಟಿರುವ ಕಾರಣದಿಂದಾಗಿದೆ. ಖಂಡಿತವಾಗಿಯೂ ಸತ್ಯನಿಷೇಧಿಗಳಾಗಿರುವ ಜನತೆಯನ್ನು ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಲಾರನು.

(108) ಅವರು ಹೃದಯಗಳಿಗೆ, ಶ್ರವಣಗಳಿಗೆ ಮತ್ತು ದೃಷ್ಟಿಗಳಿಗೆ ಅಲ್ಲಾಹು ಮುದ್ರೆ ಹಾಕಿರುವವರಾಗಿರುವರು. ಅಲಕ್ಷ್ಯರಾಗಿರುವವರೂ ಅವರೇ ಆಗಿರುವರು.

(109) ಪರಲೋಕದಲ್ಲಿ ನಷ್ಟಹೊಂದಿದವರು ಅವರೇ ಆಗಿರುವರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

(110) ತರುವಾಯ ಖಂಡಿತವಾಗಿಯೂ ತಮ್ಮ ರಬ್‌ನ ಸಹಾಯವು ಹಿಂಸೆಗೆ ಬಲಿಯಾದ ಬಳಿಕ ವಲಸೆ ಹೋದವರು, ಅನಂತರ ಹೋರಾಡಿದವರು ಮತ್ತು ತಾಳ್ಮೆ ವಹಿಸಿದವರಿಗಿರುವುದು. ಖಂಡಿತವಾಗಿಯೂ ತಮ್ಮ ರಬ್ ಅದರ ಬಳಿಕವೂ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(111) ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರವಾಗಿ ಸ್ವತಃ ತರ್ಕಿಸುತ್ತಾ ಬರುವ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿರುವುದಕ್ಕಿರುವ ಪ್ರತಿಫಲವನ್ನು ಪೂರ್ಣವಾಗಿ ಕೊಡಲಾಗುವ ಹಾಗೂ ಅವರೊಂದಿಗೆ ಯಾವುದೇ ಅನ್ಯಾಯವೆಸಗಲಾಗದ ದಿನ.

(112) ಸುರಕ್ಷಿತವಾಗಿರುವ ಮತ್ತು ನೆಮ್ಮದಿಯಿಂದಿರುವ ಒಂದು ಊರನ್ನು ಅಲ್ಲಾಹು ಉದಾಹರಣೆಯಾಗಿ ತೋರಿಸಿರುವನು. ಅದಕ್ಕೆ ಬೇಕಾದ ಆಹಾರವು ಎಲ್ಲ ಕಡೆಗಳಿಂದಲೂ ಅಲ್ಲಿಗೆ ಹೇರಳವಾಗಿ ಬರುತ್ತಿತ್ತು. ಆದರೂ ಆ ಊರಿನವರು ಅಲ್ಲಾಹುವಿನ ಅನುಗ್ರಹಗಳನ್ನು ನಿಷೇಧಿಸಿದರು. ಆಗ ಅವರು ಮಾಡುತ್ತಿದ್ದ ಕರ್ಮಗಳ ಫಲವಾಗಿ ಅಲ್ಲಾಹು ಅವರಿಗೆ ಹಸಿವು ಮತ್ತು ಭಯದ ಉಡುಪನ್ನು ಆಸ್ವಾದಿಸುವಂತೆ ಮಾಡಿದನು.(534)
534. ‘ಲಿಬಾಸ್’ ಎಂಬುದರ ಅರ್ಥವು ಉಡುಪು ಅಥವಾ ಕವಚ ಎಂದಾಗಿದೆ. ಹಸಿವು ಮತ್ತು ಭಯದ ಉಡುಪು ಧರಿಸಿದಂತಹ ಸ್ಥಿತಿಯನ್ನು ಅಲ್ಲಾಹು ಅವರಿಗೆ ತಂದೊಡ್ಡಿದನು ಎಂದು ಇದರಿಂದ ಅರ್ಥೈಸಬಹುದು.

(113) ಅವರಿಂದಲೇ ಇರುವ ಒಬ್ಬ ಸಂದೇಶವಾಹಕರು ಅವರ ಬಳಿ ಬಂದಿದ್ದರು. ಆಗ ಅವರು ಅವರನ್ನು (ಸಂದೇಶವಾಹಕರನ್ನು) ತಿರಸ್ಕರಿಸಿದರು. ಆಗ ಅವರು ಅಕ್ರಮಿಗಳಾಗಿರುತ್ತಲೇ ಶಿಕ್ಷೆಯು ಅವರನ್ನು ಹಿಡಿದುಕೊಂಡಿತು.

(114) ಆದುದರಿಂದ ಅಲ್ಲಾಹು ನಿಮಗೆ ಒದಗಿಸಿರುವ ಧರ್ಮಸಮ್ಮತವಾಗಿರುವ ಮತ್ತು ಉತ್ತಮವಾಗಿರುವವುಗಳಿಂದ ತಿನ್ನಿರಿ. ಅಲ್ಲಾಹುವಿನ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿರಿ. ನೀವು ಅವನನ್ನೇ ಆರಾಧಿಸುವವರಾಗಿದ್ದರೆ.

(115) ಅವನು ನಿಮಗೆ ನಿಷಿದ್ಧಗೊಳಿಸಿರುವುದು ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹುವೇತರರ ಹೆಸರಿನಲ್ಲಿ ಘೋಷಿಸಲ್ಪಟ್ಟಿರುವುದನ್ನು(535) ಮಾತ್ರವಾಗಿದೆ. ಯಾರಾದರೂ (ಇವುಗಳನ್ನು ತಿನ್ನಲು) ನಿರ್ಬಂಧಿತನಾದರೆ, ಅವನು ಅದನ್ನು (ತಿನ್ನಲು) ಬಯಸುವವನೋ ಮಿತಿಮೀರಿ ತಿನ್ನುವವನೋ ಅಲ್ಲದಿದ್ದರೆ ಖಂಡಿತವಾಗಿಯೂ ಅಲ್ಲಾಹು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
535. ಅಲ್ಲಾಹುವೇತರರಿಗೆ ಬಲಿಯರ್ಪಿಸಿರುವುದು ಅಥವಾ ಹರಕೆ ಹೊರಲಾಗಿರುವುದು.

(116) ನಿಮ್ಮ ನಾಲಗೆಗಳು ವರ್ಣಿಸುತ್ತಿರುವುದರ ನಿಮಿತ್ತ “ಇದು ಧರ್ಮಸಮ್ಮತವಾಗಿದೆ ಮತ್ತು ಇದು ನಿಷಿದ್ಧವಾಗಿದೆ” ಎಂದು ನೀವು ಸುಳ್ಳು ಹೇಳದಿರಿ. (ಇದರಿಂದಾಗಿ) ನೀವು ಅಲ್ಲಾಹುವಿನ ಮೇಲೆ ಸುಳ್ಳು ಹೆಣೆಯುವವರಾಗುವಿರಿ. ಖಂಡಿತವಾಗಿಯೂ ಅಲ್ಲಾಹುವಿನ ಮೇಲೆ ಸುಳ್ಳು ಹೆಣೆಯುವವರಾರೋ ಅವರೆಂದೂ ಯಶಸ್ವಿಯಾಗಲಾರರು.

(117) (ಅವರಿಗಿರುವುದು) ತುಚ್ಛವಾದ ಸುಖಾಡಂಬರ ಮಾತ್ರವಾಗಿದೆ. (ಪರಲೋಕದಲ್ಲಿ) ಅವರಿಗೆ ಯಾತನಾಮಯವಾದ ಶಿಕ್ಷೆಯಿದೆ.

(118) ನಾವು ಮುಂಚೆ ತಮಗೆ ವಿವರಿಸಿಕೊಟ್ಟಿರುವ ವಸ್ತುಗಳನ್ನು ಯಹೂದರ ಮೇಲೆ ನಾವು ನಿಷಿದ್ಧಗೊಳಿಸಿದ್ದೆವು. ನಾವು ಅವರೊಂದಿಗೆ ಯಾವುದೇ ಅನ್ಯಾಯವೆಸಗಿರಲಿಲ್ಲ. ಆದರೆ ಅವರು ಸ್ವತಃ ಅವರೊಂದಿಗೇ ಅನ್ಯಾಯವೆಸಗಿದ್ದರು.(536)
536. ಸೂರಃ ಅಲ್‍ಅನ್‌ಆಮ್ 146ನೇ ಸೂಕ್ತಿಯಲ್ಲಿ ಇದನ್ನು ವಿವರಿಸಲಾಗಿದೆ.

(119) ತರುವಾಯ, ಖಂಡಿತವಾಗಿಯೂ ತಮ್ಮ ರಬ್ ಅಜ್ಞಾನದಿಂದಾಗಿ ಪಾಪವನ್ನು ಮಾಡಿದ ನಂತರ ಪಶ್ಚಾತ್ತಾಪಪಟ್ಟು (ಬದುಕನ್ನು) ಸುಧಾರಣೆ ಮಾಡಿದವರಿಗೆ (ಕ್ಷಮಿಸುವವನಾಗಿರುವನು). ಖಂಡಿತವಾಗಿಯೂ ತಮ್ಮ ರಬ್ ಅದರ ಬಳಿಕ ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆ ತೋರುವವನೂ ಆಗಿರುವನು.

(120) ಖಂಡಿತವಾಗಿಯೂ ಇಬ್ರಾಹೀಮ್ ಅಲ್ಲಾಹುವಿಗೆ ಶರಣಾಗತರಾಗಿ ಬದುಕುತ್ತಿದ್ದ ಮತ್ತು ಸತ್ಯಮಾರ್ಗದಲ್ಲಿ (ವಿಚಲಿತರಾಗದೆ) ನೆಲೆಗೊಂಡಿದ್ದ ಒಂದು ಸಮುದಾಯವಾಗಿದ್ದರು.(537) ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.
537. ಮಾದರೀಯೋಗ್ಯನಾಗಿರುವ ಒಬ್ಬ ನಾಯಕನನ್ನು ಕೇಂದ್ರೀಕರಿಸಿ ಉತ್ಕೃಷ್ಟ ಸಮಾಜವೊಂದು ಬೆಳೆಯುತ್ತದೆ. ಅಂಥಹ ಒಬ್ಬ ನಾಯಕನನ್ನು ಕೇವಲ ಒಬ್ಬ ವ್ಯಕ್ತಿ ಎಂದು ಕೀಳಂದಾಜಿಸುವುದು ಸರಿಯಲ್ಲ. ಒಂದು ಸಮುದಾಯ ಅಥವಾ ಸಮಾಜವೆಂಬ ವಿಶೇಷಣವನ್ನು ಅವರಿಗೆ ನೀಡುವುದೇ ಹೆಚ್ಚು ಸೂಕ್ತವಾಗಿರುತ್ತದೆ.

(121) ಅವರು ಅವನ (ಅಲ್ಲಾಹುವಿನ) ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವವರಾಗಿದ್ದರು. ಅವನು ಅವರನ್ನು ಆರಿಸಿರುವನು ಮತ್ತು ನೇರ ಮಾರ್ಗದೆಡೆಗೆ ಮುನ್ನಡೆಸಿರುವನು.

(122) ನಾವು ಅವರಿಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸಿರುವೆವು. ಪರಲೋಕದಲ್ಲಿ ಅವರು ಖಂಡಿತವಾಗಿಯೂ ಸಜ್ಜನರ ಪೈಕಿ ಸೇರಿದವರಾಗಿರುವರು.

(123) ತರುವಾಯ, ನಾವು ತಮಗೆ “ಸತ್ಯಮಾರ್ಗದಲ್ಲಿ (ವಿಚಲಿತನಾಗದೆ) ನೆಲೆಗೊಂಡಿರುವ ಇಬ್ರಾಹೀಮ್‌ರ ಮಾರ್ಗವನ್ನು ಅನುಸರಿಸಿರಿ” ಎಂದು ದಿವ್ಯಸಂದೇಶವನ್ನು ನೀಡಿದೆವು. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.(538)
538. ನಾವು ಪ್ರವಾದಿ ಇಬ್ರಾಹೀಮ್(ಅ) ರವರ ವಂಶದವರೆಂದು ಅರೇಬಿಯಾದ ಬಹುದೇವಾರಾಧಕರು ಹೆಮ್ಮೆ ಪಡುತ್ತಿದ್ದುದರಿಂದಲೇ ಈ ವಿಷಯವನ್ನು ಪುನರಾವರ್ತಿಸಿ ಹೇಳಲಾಗಿದೆ.

(124) ಸಬ್ಬತ್ ದಿನವನ್ನು ಶಾಸನವನ್ನಾಗಿ ಮಾಡಿರುವುದು ಅದರ ವಿಷಯದಲ್ಲಿ ಭಿನ್ನರಾದವರ ಮೇಲೆಯೇ ಆಗಿದೆ. ಅವರು ಯಾವ ವಿಷಯದಲ್ಲಿ ಭಿನ್ನರಾದರೋ ಆ ವಿಷಯದಲ್ಲಿ ಅಂತ್ಯದಿನದಂದು ತಮ್ಮ ರಬ್ ಅವರ ಮಧ್ಯೆ ಖಂಡಿತವಾಗಿಯೂ ತೀರ್ಪು ನೀಡುವನು.

(125) ಯುಕ್ತಿಯೊಂದಿಗೆ ಮತ್ತು ಸದುಪದೇಶದ ಮೂಲಕ ತಾವು ತಮ್ಮ ರಬ್‌ನ ಮಾರ್ಗದೆಡೆಗೆ ಆಹ್ವಾನಿಸಿರಿ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಅವರೊಂದಿಗೆ ತರ್ಕಿಸಿರಿ. ತನ್ನ ಮಾರ್ಗದಿಂದ ವ್ಯತಿಚಲಿಸಿದವರ ಬಗ್ಗೆ ಖಂಡಿತವಾಗಿಯೂ ತಮ್ಮ ರಬ್ ಚೆನ್ನಾಗಿ ಅರಿತಿರುವನು ಮತ್ತು ಸನ್ಮಾರ್ಗ ಪಡೆದವರ ಬಗ್ಗೆಯೂ ಅವನು ಚೆನ್ನಾಗಿ ಅರಿತಿರುವನು.

(126) ನೀವು ಶಿಕ್ಷಾಕ್ರಮ ಕೈಗೊಳ್ಳುವುದಾದರೆ ನಿಮ್ಮ ವಿರುದ್ಧ (ವಿರೋಧಿಗಳಿಂದ) ಶಿಕ್ಷಾಕ್ರಮ ಕೈಗೊಳ್ಳಲಾಗಿರುವುದಕ್ಕೆ ಸಮಾನವಾಗಿರುವ ಶಿಕ್ಷಾಕ್ರಮವನ್ನು ಕೈಗೊಳ್ಳಿರಿ. ನೀವು ತಾಳ್ಮೆ ವಹಿಸುವುದಾದರೆ ಸಹನಾಶೀಲರ ಪಾಲಿಗೆ ಅದು ಅತ್ಯುತ್ತಮವಾಗಿದೆ.

(127) ತಾವು ತಾಳ್ಮೆ ವಹಿಸಿರಿ. ತಮಗೆ ತಾಳ್ಮೆ ವಹಿಸಲು ಸಾಧ್ಯವಾಗುತ್ತಿರುವುದು ಅಲ್ಲಾಹುವಿನ ಅನುಗ್ರಹದಿಂದ ಮಾತ್ರವಾಗಿದೆ. ಅವರ (ಸತ್ಯನಿಷೇಧಿಗಳ) ವಿಷಯದಲ್ಲಿ ತಾವು ದುಃಖಿಸದಿರಿ. ಅವರು ಸಂಚು ಹೂಡುತ್ತಿರುವುದರ ಬಗ್ಗೆ ತಾವು ಸಂಕಟಪಡದಿರಿ.

(128) ಖಂಡಿತವಾಗಿಯೂ ಅಲ್ಲಾಹು ಭಯಭಕ್ತಿ ಪಾಲಿಸಿದವರ ಮತ್ತು ಸಜ್ಜನರಾಗಿರುವವರ ಜೊತೆಗಿರುವನು.