10 - Yunus ()

|

(1) ಅಲಿಫ್ ಲಾಮ್ ರಾ. ಇವು ಜ್ಞಾನಭರಿತವಾದ ಗ್ರಂಥದ ಸೂಕ್ತಿಗಳಾಗಿವೆ.

(2) ‘ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಿರಿ ಮತ್ತು ಸತ್ಯವಿಶ್ವಾಸಿಗಳಿಗೆ ತಮ್ಮ ರಬ್‌ನ ಬಳಿಯಲ್ಲಿ ಸತ್ಯಸಂಧತೆಯ ಪದವಿಯಿದೆಯೆಂಬ ಶುಭವಾರ್ತೆಯನ್ನು ತಿಳಿಸಿರಿ’ ಎಂದು ಅವರಿಂದಲೇ ಇರುವ ಓರ್ವ ವ್ಯಕ್ತಿಗೆ ನಾವು ದಿವ್ಯಸಂದೇಶವನ್ನು ನೀಡಿರುವುದು ಜನರಿಗೊಂದು ಅಚ್ಚರಿಯಾಯಿತೇ? ಸತ್ಯನಿಷೇಧಿಗಳು ಹೇಳಿದರು: ‘ಖಂಡಿತವಾಗಿಯೂ ಇವರೊಬ್ಬ ಸ್ಪಷ್ಟ ಮಾಂತ್ರಿಕರಾಗಿರುವರು’.

(3) ಖಂಡಿತವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದವನಾರೋ ಆ ಅಲ್ಲಾಹುವಾಗಿರುವನು ನಿಮ್ಮ ರಬ್‌. ತರುವಾಯ ಕಾರ್ಯ ನಿಯಂತ್ರಣ ಮಾಡುತ್ತಾ ಅವನು ಸಿಂಹಾಸನಾರೂಢನಾದನು. ಅವನ ಅನುಮತಿಯ ನಂತರವಲ್ಲದೆ ಯಾವುದೇ ಶಿಫಾರಸುಗಾರನೂ ಶಿಫಾರಸು ಮಾಡಲಾರನು. ನಿಮ್ಮ ರಬ್ ಆದ ಅಲ್ಲಾಹು ಅವನೇ ಆಗಿರುವನು. ಆದ್ದರಿಂದ ನೀವು ಅವನನ್ನು ಆರಾಧಿಸಿರಿ. ನೀವು ಚಿಂತಿಸಿ ಗ್ರಹಿಸಲಾರಿರೇ?

(4) ನಿಮ್ಮೆಲ್ಲರ ಮರಳುವಿಕೆಯು ಅವನೆಡೆಗೇ ಆಗಿರುವುದು. ಇದು ಅಲ್ಲಾಹುವಿನ ಸತ್ಯ ವಾಗ್ದಾನವಾಗಿದೆ. ಖಂಡಿತವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸುವನು ಮತ್ತು ವಿಶ್ವಾಸವಿಟ್ಟವರಿಗೆ ಹಾಗೂ ಸತ್ಕರ್ಮವೆಸಗಿದವರಿಗೆ ನ್ಯಾಯಬದ್ಧ ಪ್ರತಿಫಲವನ್ನು ನೀಡುವ ಸಲುವಾಗಿ ತರುವಾಯ ಅವನು ಅದನ್ನು ಪುನರಾವರ್ತಿಸುವನು. ಸತ್ಯನಿಷೇಧಿಗಳಾರೋ, ಅವರು ಸತ್ಯವನ್ನು ನಿಷೇಧಿಸಿರುವುದರ ಫಲವಾಗಿ ಅವರಿಗೆ ಕುದಿಯುವ ಪಾನೀಯ ಮತ್ತು ಯಾತನಾಮಯವಾದ ಶಿಕ್ಷೆಯಿದೆ.

(5) ಸೂರ್ಯನನ್ನು ಒಂದು ಪ್ರಕಾಶವನ್ನಾಗಿ ಮತ್ತು ಚಂದ್ರನನ್ನು ಒಂದು ಶೋಭೆಯನ್ನಾಗಿ ಮಾಡಿದವನು ಅವನೇ ಆಗಿರುವನು. ನೀವು ವರ್ಷಗಳ ಸಂಖ್ಯೆ ಮತ್ತು ಎಣಿಕೆಯನ್ನು ಅರಿತುಕೊಳ್ಳುವ ಸಲುವಾಗಿ ಅವನು ಅದಕ್ಕೆ (ಚಂದ್ರನಿಗೆ) ಹಂತಗಳನ್ನು ನಿರ್ಣಯಿಸಿರುವನು. ಅಲ್ಲಾಹು ಅದನ್ನು ಸತ್ಯದೊಂದಿಗಲ್ಲದೆ ಸೃಷ್ಟಿಸಿಲ್ಲ. ಅರಿತುಕೊಳ್ಳುವ ಜನರಿಗಾಗಿ ಅವನು ದೃಷ್ಟಾಂತಗಳನ್ನು ವಿವರಿಸಿಕೊಡುತ್ತಿರುವನು.

(6) ಖಂಡಿತವಾಗಿಯೂ ರಾತ್ರಿ ಮತ್ತು ಹಗಲುಗಳ ಬದಲಾವಣೆಯಲ್ಲಿಯೂ, ಅಲ್ಲಾಹು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಸೃಷ್ಟಿಸಿರುವವುಗಳಲ್ಲಿಯೂ ಭಯಭಕ್ತಿ ಪಾಲಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.

(7) ನಮ್ಮೊಂದಿಗಿರುವ ಭೇಟಿಯನ್ನು ನಿರೀಕ್ಷಿಸದವರು, ಐಹಿಕ ಜೀವನದಲ್ಲಿ ಸಂತೃಪ್ತರಾಗಿ ಅದರಲ್ಲೇ ನೆಮ್ಮದಿಯನ್ನು ಕಾಣುವವರು ಮತ್ತು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷ್ಯರಾಗಿರುವವರು ಯಾರೋ,

(8) ಅವರು ಮಾಡಿಕೊಂಡಿರುವುದರ ಫಲವಾಗಿ ಅಂತಹವರ ವಾಸಸ್ಥಳವು ನರಕವಾಗಿದೆ.

(9) ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರ ವಿಶ್ವಾಸದ ಫಲವಾಗಿ ಅವರ ರಬ್ ಅವರನ್ನು ಸನ್ಮಾರ್ಗದಲ್ಲಿ ಸೇರಿಸುವನು. ಅವರು ತಮ್ಮ ತಳಭಾಗದಿಂದ ನದಿಗಳು ಹರಿಯುತ್ತಿರುವ ಅನುಗ್ರಹಪೂರ್ಣವಾದ ಸ್ವರ್ಗೋದ್ಯಾನಗಳಲ್ಲಿರುವರು.

(10) ಅಲ್ಲಿ ಅವರ ಪ್ರಾರ್ಥನೆಯು ‘ಓ ಅಲ್ಲಾಹ್! ನಿನ್ನ ಪರಿಪಾವನತೆಯನ್ನು ಕೊಂಡಾಡುವೆವು’ ಎಂದಾಗಿರುವುದು. ಅಲ್ಲಿ ಅವರಿಗಿರುವ ಅಭಿವಂದನೆಯು ‘ಶಾಂತಿ’ ಎಂದಾಗಿರುವುದು. ಅವರ ಪ್ರಾರ್ಥನೆಯ ಕೊನೆಯ ಭಾಗವು ‘ಸರ್ವಲೋಕಗಳ ರಬ್ ಆದ ಅಲ್ಲಾಹುವಿಗೆ ಸ್ತುತಿ’ ಎಂದಾಗಿರುವುದು.

(11) ಜನರು ಲಾಭವನ್ನು ಗಳಿಸಲು ಆತುರಪಡುವಂತೆ ಅವರಿಗೆ ಹಾನಿಯನ್ನುಂಟುಮಾಡಲು ಅಲ್ಲಾಹು ಆತುರಪಡುತ್ತಿದ್ದರೆ ಅವರ ಜೀವಿತಾವಧಿಯು ಖಂಡಿತ ಕೊನೆಗೊಳಿಸಲಾಗಿರುತ್ತಿತ್ತು.(336) ಆದರೆ ನಮ್ಮೊಂದಿಗಿನ ಭೇಟಿಯನ್ನು ನಿರೀಕ್ಷಿಸದವರಾರೋ ಅವರು ತಮ್ಮ ಧಿಕ್ಕಾರದೊಂದಿಗೆ ವಿಹರಿಸಲು ನಾವು ಅವರನ್ನು ಬಿಟ್ಟುಬಿಡುವೆವು.
336. ಜನರಿಗೆ ಪ್ರತಿಯೊಂದು ವಿಷಯದಲ್ಲೂ ಆತುರ ಹಾಗೂ ಅಸಹನೆಯಿರುತ್ತದೆ. ಲಾಭಗಳನ್ನು ಬಾಚುವ ಭರದಲ್ಲಿ ಅವರು ಅಲ್ಲಾಹುವಿನ ಎಚ್ಚರಿಕೆಗಳನ್ನು ಕಡೆಗಣಿಸುತ್ತಾರೆ. ಅವರಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಅಲ್ಲಾಹು ಕೂಡ ಅದೇ ರೀತಿ ಆತುರಪಟ್ಟಿದ್ದರೆ ಅವರ ಕಥೆ ಎಂದೋ ಮುಗಿದು ಬಿಡುತ್ತಿತ್ತು.

(12) ಮನುಷ್ಯನಿಗೆ ಸಂಕಷ್ಟ ಬಾಧಿಸಿದಾಗ ಅವನು ಮಲಗಿಕೊಂಡು ಅಥವಾ ಕುಳಿತುಕೊಂಡು ಅಥವಾ ನಿಂತುಕೊಂಡು ನಮ್ಮೊಂದಿಗೆ ಪ್ರಾರ್ಥಿಸುವನು. ತರುವಾಯ ನಾವು ಅವನಿಂದ ಆ ಸಂಕಷ್ಟವನ್ನು ನಿವಾರಿಸಿದಾಗ, ತನಗೆ ಬಾಧಿಸಿದ ಆ ಸಂಕಷ್ಟದ ಬಗ್ಗೆ ಅವನು ನಮ್ಮೊಂದಿಗೆ ಪ್ರಾರ್ಥಿಸಲೇ ಇಲ್ಲವೆಂಬಂತೆ ಅವನು ಸಾಗಿಬಿಡುವನು. ಮಿತಿಮೀರುವವರಿಗೆ ಅವರು ಮಾಡುತ್ತಿರುವುದನ್ನು ಹೀಗೆ ಆಕರ್ಷಕಗೊಳಿಸಿಕೊಡಲಾಗಿದೆ.

(13) ಖಂಡಿತವಾಗಿಯೂ ನಿಮಗಿಂತ ಮುಂಚಿನ ಅನೇಕ ತಲೆಮಾರುಗಳು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ಸ್ಪಷ್ಟವಾದ ಪುರಾವೆಗಳೊಂದಿಗೆ ನಮ್ಮ ಸಂದೇಶವಾಹಕರು ಅವರ ಬಳಿಗೆ ಬಂದಿದ್ದರೂ ಅವರು ವಿಶ್ವಾಸವಿಡಲಿಲ್ಲ. ಅಪರಾಧಿಗಳಾದ ಜನರಿಗೆ ನಾವು ಹೀಗೆ ಪ್ರತಿಫಲವನ್ನು ನೀಡುವೆವು.

(14) ತರುವಾಯ ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನೀವು ಹೇಗೆ ಕಾರ್ಯವೆಸಗುವಿರಿ ಎಂಬುದನ್ನು ನಾವು ನೋಡುವ ಸಲುವಾಗಿ.

(15) ನಮ್ಮ ಸ್ಪಷ್ಟವಾದ ಪುರಾವೆಗಳನ್ನು ಅವರಿಗೆ ಓದಿಕೊಡಲಾದಾಗ ನಮ್ಮೊಂದಿಗಿರುವ ಭೇಟಿಯನ್ನು ನಿರೀಕ್ಷಿಸದವರು ‘ಇದಲ್ಲದ ಬೇರೊಂದು ಕುರ್‌ಆನನ್ನು ತನ್ನಿರಿ ಅಥವಾ ಇದರಲ್ಲಿ ಬದಲಾವಣೆ ಮಾಡಿರಿ’ ಎಂದು ಹೇಳಿದರು. (ಓ ಪ್ರವಾದಿಯವರೇ!) ಹೇಳಿರಿ: ‘ನನ್ನ ಇಚ್ಛೆಯ ಪ್ರಕಾರ ಇದರಲ್ಲಿ ಬದಲಾವಣೆ ಮಾಡುವುದು ನನಗೆ ಯುಕ್ತವಾದುದಲ್ಲ. ನನಗೆ ದಿವ್ಯಸಂದೇಶವಾಗಿ ನೀಡಲಾಗುವುದನ್ನು ಮಾತ್ರ ನಾನು ಅನುಸರಿಸುತ್ತಿರುವೆನು. ನಾನು ನನ್ನ ರಬ್ಬನ್ನು ಧಿಕ್ಕರಿಸುವುದಾದರೆ ಖಂಡಿತವಾಗಿಯೂ ಭಯಾನಕವಾದ ದಿನವೊಂದರ ಶಿಕ್ಷೆಯನ್ನು ನಾನು ಭಯಪಡುತ್ತಿರುವೆನು.’

(16) ಹೇಳಿರಿ: ‘ಅಲ್ಲಾಹು ಇಚ್ಛಿಸಿದ್ದರೆ ನಾನಿದನ್ನು ನಿಮಗೆ ಓದಿಕೊಡುತ್ತಿರಲಿಲ್ಲ ಮತ್ತು ನಿಮಗಿದನ್ನು ಅವನು ತಿಳಿಸಿಕೊಡುತ್ತಲೂ ಇರಲಿಲ್ಲ. ಇದಕ್ಕಿಂತ ಮುಂಚೆ ನಾನು ನಿಮ್ಮೊಂದಿಗೆ ಬಹಳ ಕಾಲದವರೆಗೆ ಬದುಕಿದ್ದೆ.(337) ನೀವು ಚಿಂತಿಸುವುದಿಲ್ಲವೇ?’
337. ಮುಹಮ್ಮದ್(ಸ) ರವರನ್ನು ಪ್ರವಾದಿಯಾಗಿ ಕಳುಹಿಸಲಾಗಿದ್ದು ಅವರ ನಲ್ವತ್ತನೇ ವಯಸ್ಸಿನಲ್ಲಾಗಿತ್ತು. ಅಂದಿನಿಂದ ಅವರಿಗೆ ದಿವ್ಯಸಂದೇಶ ಸಿಗುತ್ತಿತ್ತು. ಅದಕ್ಕಿಂತ ಮುಂಚಿನ ಅವರ ಬದುಕು ಮಕ್ಕಾ ನಿವಾಸಿಗಳಿಗೆ ಸುಪರಿಚಿತವಾಗಿತ್ತು. ಅಲ್ಲಿಯ ತನಕ ಅಲ್ಲಾಹುವಿನ ಬಗ್ಗೆಯಾಗಲಿ ಅಥವಾ ಗ್ರಂಥದ ಬಗ್ಗೆಯಾಗಲಿ ಅವರು ಏನೊಂದೂ ಮಾತನಾಡಿರಲಿಲ್ಲ.

(17) ಹೀಗಿರುವಾಗ ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆದವನಿಗಿಂತ ಅಥವಾ ಅವನ ದೃಷ್ಟಾಂತಗಳನ್ನು ನಿಷೇಧಿಸಿದವನಿಗಿಂತ ದೊಡ್ಡ ಅಕ್ರಮಿ ಇನ್ನಾರಿರುವನು? ಖಂಡಿತವಾಗಿಯೂ ಅಪರಾಧಿಗಳು ಯಶಸ್ವಿಯಾಗಲಾರರು.

(18) ಅಲ್ಲಾಹುವಿನ ಹೊರತು ತಮಗೆ ಹಾನಿಯೋ, ಲಾಭವೋ ಮಾಡದವುಗಳನ್ನು ಅವರು ಆರಾಧಿಸುತ್ತಿರುವರು. ‘ಇವರು (ಆರಾಧ್ಯರು) ಅಲ್ಲಾಹುವಿನ ಬಳಿ ನಮ್ಮ ಶಿಫಾರಸುಗಾರರಾಗಿರುವರು’ ಎಂದು ಅವರು ಹೇಳುವರು. (ಓ ಪ್ರವಾದಿಯವರೇ!) ಕೇಳಿರಿ: ‘ಆಕಾಶಗಳಲ್ಲಾಗಲಿ, ಭೂಮಿಯಲ್ಲಾಗಲಿ ಅಲ್ಲಾಹು ಅರಿಯದಿರುವುದನ್ನು ನೀವು ಅವನಿಗೆ ತಿಳಿಸಿಕೊಡುತ್ತಿರುವಿರಾ?’(338) ಅವರು ಸಹಭಾಗಿತ್ವ ಮಾಡುವುದರಿಂದ ಅವನು ಎಷ್ಟೋ ಪರಿಪಾವನನೂ ಅತ್ಯುನ್ನತನೂ ಆಗಿರುವನು.
338. ಅಲ್ಲಾಹುವಿನ ಬಳಿ ಶಿಫಾರಸು ಮಾಡಿ ಬೇಡಿಕೆಯನ್ನು ಈಡೇರಿಸಿಕೊಡುವವರು ಯಾರಾದರೂ ಇರುವುದಾದರೆ ಅದನ್ನು ಅಲ್ಲಾಹು ತಿಳಿದಿರಲೇಬೇಕಾಗಿದೆ. ಆ ಶಿಫಾರಸುಗಾರರೊಂದಿಗೆ ಪ್ರಾರ್ಥಿಸಬೇಕು ಎಂದಾಗಿದ್ದರೆ ಅಲ್ಲಾಹು ಅದನ್ನು ನಮಗೆ ತಿಳಿಸಿಕೊಡುತ್ತಿದ್ದನು. ಆದರೆ ಬಹುದೇವಾರಾಧಕರ ಸಮರ್ಥನೆಯು ಪ್ರಮಾಣಬದ್ದವಲ್ಲ, ಬದಲಾಗಿ ಅಂಧಾನುಕರಣೆ ಮಾತ್ರವಾಗಿದೆ.

(19) ಮನುಷ್ಯರು ಏಕೈಕ ಸಮುದಾಯವಲ್ಲದೆ ಇನ್ನೇನೂ ಆಗಿರಲಿಲ್ಲ. ತರುವಾಯ ಅವರು ಭಿನ್ನರಾದರು.(339) ತಮ್ಮ ರಬ್‌ನ ವತಿಯಿಂದ ಒಂದು ವಚನವು(340) ಪೂರ್ವಭಾವಿಯಾಗಿ ಇಲ್ಲದಿರುತ್ತಿದ್ದರೆ ಅವರು ಭಿನ್ನರಾಗಿರುವ ವಿಷಯದಲ್ಲಿ (ಈಗಾಗಲೇ) ಅವರ ಮಧ್ಯೆ ತೀರ್ಪು ನೀಡಲಾಗಿರುತ್ತಿತ್ತು.
339. ಮನುಷ್ಯರು ಶುದ್ಧಪ್ರಕೃತಿಯಲ್ಲಿ ನೆಲೆನಿಂತಿದ್ದಾಗ ಅವರ ದೃಷ್ಟಿಕೋನವು ಏಕೈಕ ಅಲ್ಲಾಹು, ಏಕೈಕ ಸಮುದಾಯ ಎಂದಾಗಿತ್ತು. ಆದರೆ ತರುವಾಯ ಅವಿಶ್ವಾಸ ಮತ್ತು ಅಧಾರ್ಮಿಕತೆ ಅವರ ಮಧ್ಯೆ ಒಡಕನ್ನುಂಟುಮಾಡಿತು. 340. ಇಲ್ಲಿ ‘ವಚನ’ ಎಂಬುದರ ತಾತ್ಪರ್ಯವು ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ, ಧರ್ಮನಿಷ್ಠರಿಗೂ ಧರ್ಮನಿಷೇಧಿಗಳಿಗೂ ಇಹಲೋಕದಲ್ಲಿ ಜೀವಿಸುವ ಅವಕಾಶವನ್ನು ನೀಡಲಾಗುವುದು ಮತ್ತು ಅಂತಿಮ ವಿಚಾರಣೆಯನ್ನು ಪರಲೋಕಕ್ಕೆ ಮುಂದೂಡಲಾಗುವುದು ಎಂಬ ಅಲ್ಲಾಹುವಿನ ವಿಧಿಯಾಗಿದೆ.

(20) ‘ಅವರಿಗೆ (ಪ್ರವಾದಿಯವರಿಗೆ) ಅವರ ರಬ್‌ನ ವತಿಯಿಂದ ಒಂದು ದೃಷ್ಟಾಂತವನ್ನು (ನೇರವಾಗಿ) ಇಳಿಸಿಕೊಡಲಾಗಿಲ್ಲವೇಕೆ?’ ಎಂದು ಅವರು ಕೇಳುವರು. (ಓ ಪ್ರವಾದಿಯವರೇ!) ತಾವು ಹೇಳಿರಿ: ‘ಅಗೋಚರ ಜ್ಞಾನವಿರುವುದು ಅಲ್ಲಾಹುವಿಗೆ ಮಾತ್ರವಾಗಿದೆ.(341) ಆದ್ದರಿಂದ ನೀವು ಕಾಯುತ್ತಿರಿ. ಖಂಡಿತವಾಗಿಯೂ ನಿಮ್ಮೊಂದಿಗೆ ಕಾಯುತ್ತಿರುವವರ ಪೈಕಿ ನಾನೂ ಇರುವೆನು.’
341. ತಾನು ಇಚ್ಛಿಸುವಾಗಲೆಲ್ಲಾ ಪವಾಡವನ್ನು ತೋರಿಸಲು ಯಾವುದೇ ಪ್ರವಾದಿಗೂ ಸಾಧ್ಯವಿಲ್ಲ. ಅಲ್ಲಾಹು ಇಚ್ಛಿಸುವಾಗ ಮಾತ್ರ ಅವನು ಅವರ ಮೂಲಕ ಅದನ್ನು ತೋರಿಸಿಕೊಡುವನು.

(21) ಜನರಿಗೆ ಸಂಕಷ್ಟ ಬಾಧಿಸಿದ ಬಳಿಕ ನಾವು ಅವರಿಗೆ ಅನುಗ್ರಹದ ರುಚಿಯನ್ನು ತೋರಿಸಿದರೆ ಅಗೋ ಅವರು ನಮ್ಮ ದೃಷ್ಟಾಂತಗಳ ವಿಷಯದಲ್ಲಿ ಕುತಂತ್ರ ಹೂಡುವರು.(342) ಹೇಳಿರಿ: ‘ಅಲ್ಲಾಹು ಕ್ಷಿಪ್ರವಾಗಿ ತಂತ್ರಹೂಡುವವನಾಗಿರುವನು.’ ನೀವು ಕುತಂತ್ರ ಹೂಡುತ್ತಿರುವುದನ್ನು ಖಂಡಿತವಾಗಿಯೂ ನಮ್ಮ ದೂತರು(343) ದಾಖಲಿಸುತ್ತಿರುವರು.
342. ಉತ್ತಮ ಬೆಳೆ, ಸಮೃದ್ಧ ಪಶುಸಂಪತ್ತು, ಲಾಭಕರ ವ್ಯಾಪಾರ ಇತ್ಯಾದಿಗಳು ಲಭ್ಯವಾದಾಗ ಅದು ಅಲ್ಲಾಹುವಿನ ಅನುಗ್ರಹವೆಂದು ಬಗೆದು ಅವನಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಬದಲು ಅದನ್ನು ಯಾವುದಾದರೂ ನಕ್ಷತ್ರದ ಅಥವಾ ದೇವದೇವಿಯರ ಕೃಪೆಯಾಗಿ ಚಿತ್ರೀಕರಿಸುವುದು ಬಹುದೇವಾರಾಧಕರ ಕುತಂತ್ರವಾಗಿದೆ. 343. ಮನುಷ್ಯರ ಸರ್ವ ಕರ್ಮಗಳನ್ನೂ ಅಲ್ಲಾಹು ನೇಮಿಸಿದ ಮಲಕ್‍ಗಳು ದಾಖಲಿಸುತ್ತಿರುವರು.

(22) ನೀವು ನೆಲದಲ್ಲಿ ಮತ್ತು ಸಮುದ್ರದಲ್ಲಿ ಸಂಚರಿಸುವಂತೆ ಮಾಡುವವನು ಅವನಾಗಿರುವನು. ಕೊನೆಗೆ ನೀವು ಹಡಗುಗಳಲ್ಲಿರುವಾಗ ಮತ್ತು ಉತ್ತಮವಾದ ಒಂದು ಮಾರುತದಿಂದಾಗಿ ಅವು ಯಾತ್ರಿಕರನ್ನು ಹೊತ್ತು ಚಲಿಸುತ್ತಿರುವಾಗ ಹಾಗೂ ಅದರಲ್ಲಿ ಅವರು ಸಂಭ್ರಮಪಡುತ್ತಿರುವಾಗ ಒಂದು ಭೀಕರ ಬಿರುಗಾಳಿಯು ಅದರೆಡೆಗೆ ಬೀಸಿತು. ಸರ್ವ ದಿಕ್ಕುಗಳಿಂದಲೂ ಅಲೆಗಳು ಅವರೆಡೆಗೆ ಅಪ್ಪಳಿಸಿದವು. ತಾವು ಆವರಿಸಲ್ಪಟ್ಟಿರುವೆವು ಎಂಬುದು ಅವರಿಗೆ ಖಾತ್ರಿಯಾದಾಗ ಶರಣಾಗತಿಯನ್ನು ಅಲ್ಲಾಹುವಿಗೆ ನಿಷ್ಕಳಂಕಗೊಳಿಸಿ ‘ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞತೆ ಸಲ್ಲಿಸುವವರೊಂದಿಗೆ ಸೇರಿದವರಾಗುವೆವು’ ಎಂದು ಅವರು ಅವನೊಂದಿಗೆ ಪ್ರಾರ್ಥಿಸಿದರು.

(23) ತರುವಾಯ ಅವನು ಅವರನ್ನು ಪಾರು ಮಾಡಿದಾಗ ಅಗೋ ಅವರು ಅನ್ಯಾಯವಾಗಿ ಭೂಮಿಯಲ್ಲಿ ಅತಿಕ್ರಮವೆಸಗುವರು. ಓ ಮನುಷ್ಯರೇ! ನೀವು ಮಾಡುತ್ತಿರುವ ಅತಿಕ್ರಮವು ಸ್ವತಃ ನಿಮ್ಮ ಮೇಲೆಯೇ ಆಗಿದೆ. (ನೀವು ತನ್ಮೂಲಕ ಪಡೆಯುತ್ತಿರುವುದು) ಐಹಿಕ ಸುಖವನ್ನು ಮಾತ್ರವಾಗಿದೆ. ತರುವಾಯ ನಿಮ್ಮ ಮರಳುವಿಕೆಯು ನಮ್ಮೆಡೆಗಾಗಿರುವುದು. ಆಗ ನೀವು ಮಾಡಿಕೊಂಡಿರುವುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುವೆವು.

(24) ನಾವು ಆಕಾಶದಿಂದ ನೀರನ್ನು ಇಳಿಸಿದೆವು. ತನ್ಮೂಲಕ ಮನುಷ್ಯರು ಮತ್ತು ಜಾನುವಾರುಗಳು ಸೇವಿಸುವ ಭೂಮಿಯ ಸಸ್ಯಗಳು ಅದರೊಂದಿಗೆ ಬೆರೆತು ಬೆಳೆದವು. ತರುವಾಯ ಭೂಮಿ ತನ್ನ ಶೃಂಗಾರವನ್ನು ತೊಟ್ಟು ಕಂಗೊಳಿಸಿದಾಗ ಮತ್ತು ಅವೆಲ್ಲವನ್ನೂ ವಶಪಡಿಸಲು ತಮಗೆ ಸಾಧ್ಯವಾಯಿತೆಂದು ಅದರ ಒಡೆಯರು ಭಾವಿಸಿದಾಗ, ಒಂದು ರಾತ್ರಿಯಲ್ಲಿ ಅಥವಾ ಹಗಲಲ್ಲಿ ನಮ್ಮ ಆಜ್ಞೆಯು ಅದರೆಡೆಗೆ ಬಂದು ನಿನ್ನೆ ಅವೊಂದೂ ಅಲ್ಲಿ ಅಸ್ತಿತ್ವದಲ್ಲಿರಲೇ ಇಲ್ಲ ಎಂಬಂತೆ ನಾವು ಅವುಗಳನ್ನು ನಿರ್ನಾಮವಾದ ಸ್ಥಿತಿಯಲ್ಲಾಗಿಸುತ್ತೇವೆ. ಐಹಿಕ ಜೀವನದ ಉದಾಹರಣೆಯು ಈ ರೀತಿಯಾಗಿದೆ. ಚಿಂತಿಸುವ ಜನರಿಗಾಗಿ ನಾವು ಹೀಗೆ ದೃಷ್ಟಾಂತಗಳನ್ನು ವಿವರಿಸಿಕೊಡುವೆವು.

(25) ಅಲ್ಲಾಹು ಶಾಂತಿಯ ಭವನದೆಡೆಗೆ ಆಹ್ವಾನಿಸುತ್ತಿರುವನು. ಅವನಿಚ್ಛಿಸುವವರನ್ನು ಅವನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವನು.

(26) ಸತ್ಕರ್ಮವೆಸಗಿದವರಿಗೆ ಸ್ವರ್ಗವಿದೆ ಮತ್ತು ಹೆಚ್ಚುವರಿಯೂ ಇದೆ.(344) ಅಂಧಕಾರವಾಗಲಿ, ಅಪಮಾನವಾಗಲಿ ಅವರ ಮುಖಗಳನ್ನು ಆವರಿಸದು. ಸ್ವರ್ಗವಾಸಿಗಳು ಅವರೇ ಆಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
344. ಈ ಹೆಚ್ಚುವರಿಯು ಸ್ವರ್ಗಕ್ಕೆ ಪ್ರವೇಶ ಮಾಡಿದವರಿಗೆ ಸಿಗುವ ಅಲ್ಲಾಹುವಿನ ಆದರಣೀಯ ಮುಖದ ದರ್ಶನವಾಗಿದೆಯೆಂದು ಮುಸ್ಲಿಮ್ (181)ನಲ್ಲಿ ವರದಿಯಾಗಿರುವ ಹದೀಸಿನಲ್ಲಿ ಕಾಣಬಹುದು.

(27) ಪಾಪಗಳನ್ನು ಮಾಡಿದವರಿಗೆ ಪಾಪಕ್ಕೆ ಸಮಾನವಾದ ಪ್ರತಿಫಲವಿದೆ. ಅಪಮಾನವು ಅವರನ್ನು ಆವರಿಸುವುದು. ಅಲ್ಲಾಹುವಿನಿಂದ ಅವರನ್ನು ರಕ್ಷಿಸುವವರಾರೂ ಇರಲಾರರು. ಅವರ ಮುಖಗಳು ಕಾರ್ಗತ್ತಲ ರಾತ್ರಿಯ ತುಣುಕುಗಳು ಮುಚ್ಚಿಕೊಂಡಂತಿರುವುವು. ನರಕವಾಸಿಗಳು ಅವರೇ ಆಗಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.

(28) ನಾವು ಅವರೆಲ್ಲರನ್ನೂ ಒಟ್ಟುಗೂಡಿಸಿ, ತರುವಾಯ ನಾವು ಬಹುದೇವವಿಶ್ವಾಸಿಗಳೊಂದಿಗೆ ‘ನೀವು ಮತ್ತು ನಿಮ್ಮ ಸಹಭಾಗಿಗಳು ಅಲ್ಲೇ ನಿಲ್ಲಿರಿ’ ಎಂದು ಹೇಳುವ ದಿನ. ನಂತರ ನಾವು ಅವರನ್ನು ಪರಸ್ಪರ ಬೇರ್ಪಡಿಸುವೆವು. ಆಗ ಅವರು ಸಹಭಾಗಿಗಳನ್ನಾಗಿ ಮಾಡಿದವರು ಹೇಳುವರು: ‘ನೀವು ಆರಾಧಿಸುತ್ತಿದ್ದುದು ನಮ್ಮನ್ನಾಗಿರಲಿಲ್ಲ.

(29) ಆದ್ದರಿಂದ ನಮ್ಮ ಮತ್ತು ನಿಮ್ಮ ಮಧ್ಯೆ ಸಾಕ್ಷಿಯಾಗಿ ಅಲ್ಲಾಹು ಸಾಕು. ನಿಮ್ಮ ಆರಾಧನೆಯ ಬಗ್ಗೆ ನಾವು ಸಂಪೂರ್ಣ ಅಜ್ಞರಾಗಿದ್ದೆವು’.

(30) ಅಲ್ಲಿ ಪ್ರತಿಯೊಂದು ಶರೀರವೂ ತನ್ನ ಗತಕರ್ಮಗಳನ್ನು ಪರೀಕ್ಷಿಸಿ ತಿಳಿಯುವುದು. ತಮ್ಮ ನೈಜ ರಕ್ಷಕನಾದ ಅಲ್ಲಾಹುವಿನೆಡೆಗೆ ಅವರನ್ನು ಮರಳಿಸಲಾಗುವುದು. ಅವರು ಹೆಣೆಯುತ್ತಿದ್ದುದೆಲ್ಲವೂ ಅವರಿಂದ ಅಪ್ರತ್ಯಕ್ಷವಾಗುವುವು.

(31) ಹೇಳಿರಿ: ‘ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನು ಯಾರು? ಶ್ರವಣವನ್ನೂ ದೃಷ್ಟಿಯನ್ನೂ ಅಧೀನದಲ್ಲಿರಿಸಿದವನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವವನು ಯಾರು? ಕಾರ್ಯನಿಯಂತ್ರಣ ಮಾಡುವವನು ಯಾರು?’ ಅವರು ಹೇಳುವರು: ‘ಅಲ್ಲಾಹು’.(345) ಹೇಳಿರಿ: ‘ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ?’
345. ಜಗತ್ತಿನಲ್ಲಿರುವ ಬಹುದೇವಾರಾಧಕರ ಪೈಕಿ ಹೆಚ್ಚಿನವರು ಏಕೈಕ ಜಗದೊಡೆಯನ ಪ್ರಭುತ್ವವನ್ನು ಅಂಗೀಕರಿಸುವವರಾಗಿದ್ದಾರೆ.

(32) ನಿಮ್ಮ ನೈಜ ರಬ್ ಆದ ಅಲ್ಲಾಹು ಅವನೇ ಆಗಿರುವನು. ಆದ್ದರಿಂದ ಸತ್ಯದಾಚೆಗೆ ದುರ್ಮಾರ್ಗವಲ್ಲದೆ ಇನ್ನೇನಿದೆ? ಹೀಗಿದ್ದೂ ನೀವು ಹೇಗೆ ತಪ್ಪಿಸಲ್ಪಡುತ್ತಿರುವಿರಿ?

(33) ಹೀಗೆ ಧಿಕ್ಕಾರವೆಸಗಿದವರ ವಿಷಯದಲ್ಲಿ ಅವರು ವಿಶ್ವಾಸವಿಡಲಾರರು ಎಂಬ ತಮ್ಮ ರಬ್‌ನ ವಚನವು ಸತ್ಯವಾಗಿ ಪರಿಣಮಿಸಿದೆ.

(34) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಸಹಭಾಗಿಗಳನ್ನಾಗಿ ಮಾಡಿಕೊಂಡವರ ಪೈಕಿ ಸೃಷ್ಟಿಯನ್ನು ಆರಂಭಿಸುವವರು ಹಾಗೂ ನಂತರ ಅದನ್ನು ಪುನರಾವರ್ತಿಸುವವರು ಯಾರಾದರೂ ಇರುವರೇ?’ ಹೇಳಿರಿ: ‘ಅಲ್ಲಾಹು ಸೃಷ್ಟಿಯನ್ನು ಆರಂಭಿಸುವನು ಹಾಗೂ ನಂತರ ಅದನ್ನು ಪುನರಾವರ್ತಿಸುವನು’. ಹೀಗಿದ್ದೂ ನೀವು ಹೇಗೆ ತಪ್ಪಿಸಲ್ಪಡುತ್ತಿರುವಿರಿ?

(35) (ಓ ಪ್ರವಾದಿಯವರೇ!) ಹೇಳಿರಿ: ‘ನೀವು ಸಹಭಾಗಿಗಳನ್ನಾಗಿ ಮಾಡಿಕೊಂಡವರ ಪೈಕಿ ಸತ್ಯದೆಡೆಗೆ ಮುನ್ನಡೆಸುವವರು ಯಾರಾದರೂ ಇರುವರೇ?’ ಹೇಳಿರಿ: ‘ಅಲ್ಲಾಹು ಸತ್ಯದೆಡೆಗೆ ಮುನ್ನಡೆಸುವನು. ಹಾಗಾದರೆ ಅನುಸರಿಸಲು ಹೆಚ್ಚು ಅರ್ಹನಾಗಿರುವವನು ಸತ್ಯದೆಡೆಗೆ ಮುನ್ನಡೆಸುವವನೇ ಅಥವಾ ಯಾರಾದರೂ ದಾರಿತೋರಿಸಿದ ವಿನಾ ಸನ್ಮಾರ್ಗವನ್ನು ಕಾಣಲು ಸಾಧ್ಯವಾಗದವನೇ? ಹಾಗಾದರೆ ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುವಿರಿ?’

(36) ಅವರ ಪೈಕಿ ಹೆಚ್ಚಿನವರೂ ಊಹೆಯನ್ನೇ ವಿನಾ ಅನುಸರಿಸುತ್ತಿಲ್ಲ. ಖಂಡಿತವಾಗಿಯೂ ಸತ್ಯದ ಸ್ಥಾನದಲ್ಲಿ ಊಹೆಯು ಕಿಂಚಿತ್ತೂ ಪರ್ಯಾಪ್ತವಾಗಲಾರದು. ಅಲ್ಲಾಹು ಅವರು ಮಾಡುತ್ತಿರುವುದರ ಬಗ್ಗೆ ಖಂಡಿತವಾಗಿಯೂ ಅರಿವುಳ್ಳವನಾಗಿರುವನು.

(37) ಈ ಕುರ್‌ಆನ್ ಅಲ್ಲಾಹುವಿಗೆ ವಿನಾ (ಇನ್ನಾರಿಗೂ) ಹೆಣೆದು ರಚಿಸಲಾಗುವಂತದ್ದಲ್ಲ. ಆದರೆ ಇದು ಇದಕ್ಕಿಂತ ಮುಂಚಿನ ಗ್ರಂಥಗಳ ದೃಢೀಕರಣವೂ, ಗ್ರಂಥದ (ನಿಯಮಗಳ) ವಿಶದೀಕರಣವೂ ಆಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಸರ್ವಲೋಕಗಳ ರಬ್‌ನ ವತಿಯಿಂದಾಗಿದೆ.

(38) ಅವರು (ಪ್ರವಾದಿಯವರು) ಅದನ್ನು ಸ್ವತಃ ಹೆಣೆದು ರಚಿಸಿರುವರು ಎಂದು ಅವರು ಹೇಳುತ್ತಿರುವರೇ? (ಓ ಪ್ರವಾದಿಯವರೇ!) ಹೇಳಿರಿ: ‘ಹಾಗಾದರೆ ಅದಕ್ಕೆ ಸಮಾನವಾಗಿರುವ ಒಂದು ಅಧ್ಯಾಯವನ್ನು (ರಚಿಸಿ) ತನ್ನಿರಿ. ಅಲ್ಲಾಹುವಿನ ಹೊರತು ನಿಮಗೆ ಸಾಧ್ಯವಾಗುವ ಎಲ್ಲರನ್ನೂ ಅಹ್ವಾನಿಸಿರಿ. ನೀವು ಸತ್ಯಸಂಧರಾಗಿದ್ದರೆ!’

(39) ಅಲ್ಲ, ಯಾವುದನ್ನು ಅವರು ಸೂಕ್ಷ್ಮವಾಗಿ ಗ್ರಹಿಸಲಿಲ್ಲವೋ ಮತ್ತು ಯಾವುದರ ಅನುಭವ ಸಾಕ್ಷ್ಯವು ಅವರಡೆಗೆ ಬರಲಿಲ್ಲವೋ ಅದನ್ನು ಅವರು ನಿಷೇಧಿಸಿದರು. ಅವರಿಗಿಂತ ಮುಂಚಿನವರೂ ಹೀಗೆಯೇ ನಿಷೇಧಿಸಿದ್ದರು. ತರುವಾಯ ಆ ಅಕ್ರಮಿಗಳ ಪರ್ಯಾವಸಾನವು ಹೇಗಿತ್ತು ಎಂಬುದನ್ನು ನೋಡಿರಿ.

(40) ಇದರಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡುವವರು ಅವರಲ್ಲಿರುವರು. ಇದರಲ್ಲಿ ವಿಶ್ವಾಸವಿಡದವರೂ ಅವರಲ್ಲಿರುವರು.(346) ವಿನಾಶಕಾರಿಗಳ ಬಗ್ಗೆ ತಮ್ಮ ರಬ್ ಚೆನ್ನಾಗಿ ಅರಿತಿರುವನು.
346. ಆರಂಭದಲ್ಲಿ ತಿರಸ್ಕರಿಸಿದ ಕೆಲವರು ತರುವಾಯ ಸತ್ಯವನ್ನು ಗ್ರಹಿಸಿ ವಿಶ್ವಾಸಿಗಳಾಗಿ ಮಾರ್ಪಡುವರು. ಇತರ ಕೆಲವರು ಸತ್ಯನಿಷೇಧದಲ್ಲಿಯೇ ಅಚಲರಾಗಿ ನಿಲ್ಲುವರು.

(41) ಅವರು ತಮ್ಮನ್ನು ನಿಷೇಧಿಸುವುದಾದರೆ ತಾವು ಹೇಳಿರಿ: ‘ನನಗಿರುವುದು ನನ್ನ ಕರ್ಮವಾಗಿದೆ ಮತ್ತು ನಿಮಗಿರುವುದು ನಿಮ್ಮ ಕರ್ಮವಾಗಿದೆ.(347) ನಾನೇನು ಮಾಡುತ್ತಿರುವೆನೋ ಅದರಿಂದ ನೀವು ವಿಮುಕ್ತರಾಗಿರುವಿರಿ ಮತ್ತು ನೀವೇನು ಮಾಡುತ್ತಿರುವಿರೋ ಅದರಿಂದ ನಾನು ವಿಮುಕ್ತನಾಗಿರುವೆನು’.
347. ಪ್ರತಿಯೊಬ್ಬನೂ ಅನುಭವಿಸಬೇಕಾಗಿ ಬರುವುದು ಸ್ವತಃ ತನ್ನ ಕರ್ಮಫಲವನ್ನು ಮಾತ್ರವಾಗಿದೆ.

(42) ತಾವು ಹೇಳುವುದನ್ನು ಕಿವಿಗೊಟ್ಟು ಕೇಳುವ ಕೆಲವರು ಅವರಲ್ಲಿರುವರು. ಆದರೆ ಕಿವುಡರು ಚಿಂತಿಸದವರಾಗಿದ್ದರೂ ಸಹ, ಅವರಿಗೆ ಕೇಳಿಸುವಂತೆ ಮಾಡಲು ತಮ್ಮಿಂದ ಸಾಧ್ಯವೇ?

(43) ತಮ್ಮೆಡೆಗೆ ದಿಟ್ಟಿಸಿ ನೋಡುವ ಕೆಲವರು ಅವರಲ್ಲಿರುವರು. ಆದರೆ ಕುರುಡರು ಕಣ್ತೆರೆದು ನೋಡದವರಾಗಿದ್ದರೂ ಸಹ ಅವರಿಗೆ ಸನ್ಮಾರ್ಗವನ್ನು ತೋರಿಸಲು ತಮಗೆ ಸಾಧ್ಯವೇ?(348)
348. ಆಲಿಸುವ ಶಕ್ತಿಯಿದ್ದು ಪ್ರಯೋಜನವಿಲ್ಲ. ಆಲಿಸಿದ್ದನ್ನು ಗ್ರಹಿಸದವನು ಕಿವಿಯಿದ್ದೂ ಕಿವುಡನಾಗಿರುವನು. ನೋಡುವ ಶಕ್ತಿಯಿದ್ದು ಪ್ರಯೋಜನವಿಲ್ಲ. ನೋಡಿದ್ದನ್ನು ಗ್ರಹಿಸದವನು ಕಣ್ಣಿದ್ದೂ ಕುರುಡನಾಗಿರುವನು.

(44) ಖಂಡಿತವಾಗಿಯೂ ಅಲ್ಲಾಹು ಮನುಷ್ಯರೊಂದಿಗೆ ಸ್ವಲ್ಪವೂ ಅನ್ಯಾಯವೆಸಗಲಾರನು. ಆದರೆ ಮನುಷ್ಯರು ಸ್ವತಃ ತಮ್ಮ ಮೇಲೆಯೇ ಅನ್ಯಾಯವೆಸಗುತ್ತಿರುವರು.

(45) ಅವನು ಅವರನ್ನು ಒಟ್ಟುಗೂಡಿಸುವ ದಿನದಂದು ತಾವು ಹಗಲಿನ ಒಂದಷ್ಟು ಹೊತ್ತು ಮಾತ್ರ (ಇಹಲೋಕದಲ್ಲಿ) ತಂಗಿದ್ದೆವು ಎಂಬಂತೆ ಭಾಸವಾಗುವುದು. ಅವರು ಪರಸ್ಪರ ಗುರುತಿಸಿಕೊಳ್ಳುವರು.(349) ಅಲ್ಲಾಹುವಿನೊಂದಿಗಿರುವ ಭೇಟಿಯನ್ನು ತಿರಸ್ಕರಿಸಿದವರು ಖಂಡಿತವಾಗಿಯೂ ನಷ್ಟ ಹೊಂದಿದವರಾಗಿರುವರು ಮತ್ತು ಅವರು ಸನ್ಮಾರ್ಗ ಪಡೆದವರಾಗಲಾರರು.
349. ಶಾಶ್ವತವಾಗಿ ಬದುಕಬೇಕಾದ ಪರಲೋಕಕ್ಕೆ ತಲುಪುವಾಗ ಐಹಿಕ ಜೀವನವು ಕೇವಲ ಒಂದು ತಾಸಿನಷ್ಟು ಮಾತ್ರವಾಗಿತ್ತೆಂದು ಜನರಿಗೆ ಭಾಸವಾಗುವುದು.

(46) (ಓ ಪ್ರವಾದಿಯವರೇ!) ನಾವು ಅವರಿಗೆ ವಾಗ್ದಾನ ಮಾಡುತ್ತಿರುವ ಶಿಕ್ಷೆಗಳ ಪೈಕಿ ಕೆಲವನ್ನು ನಾವು ತಮಗೆ ತೋರಿಸಿಕೊಡುವುದಾದರೂ ಅಥವಾ (ಅದಕ್ಕಿಂತ ಮುಂಚೆಯೇ) ನಾವು ತಮ್ಮನ್ನು ಮೃತಪಡಿಸುವುದಾದರೂ ಅವರ ಮರಳುವಿಕೆಯು ನಮ್ಮೆಡೆಗೇ ಆಗಿದೆ. ತರುವಾಯ ಅವರು ಮಾಡುತ್ತಿರುವುದಕ್ಕೆ ಅಲ್ಲಾಹು ಸಾಕ್ಷಿಯಾಗಿರುವನು.

(47) ಪ್ರತಿಯೊಂದು ಸಮುದಾಯಕ್ಕೂ ಒಬ್ಬ ಸಂದೇಶವಾಹಕರಿರುವರು. ಅವರೆಡೆಗಿರುವ ಸಂದೇಶವಾಹಕರು ಬಂದರೆ ಅವರ ಮಧ್ಯೆ ನ್ಯಾಯಬದ್ಧವಾದ ತೀರ್ಮಾನ ಕೈಗೊಳ್ಳಲಾಗುವುದು.(350) ಅವರೊಂದಿಗೆ ಅನ್ಯಾಯವೆಸಗಲಾಗದು.
350. ಈ ಸೂಕ್ತಿಗೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಲಾಗಿದೆ. ಒಂದು: ಪ್ರತಿಯೊಂದು ಜನತೆಯನ್ನು ಪರಲೋಕದಲ್ಲಿ ವಿಚಾರಣೆಗಾಗಿ ಹಾಜರುಪಡಿಸುವಾಗ ಅವರೆಡೆಗೆ ಕಳುಹಿಸಲ್ಪಟ್ಟ ಪ್ರವಾದಿಯು ಬಂದು ತಾನು ನಿರ್ವಹಿಸಿದ ದೌತ್ಯದ ಬಗ್ಗೆ ಸಾಕ್ಷಿ ನುಡಿಯುವರು. ಅದರ ಪ್ರಕಾರ ಅವರಲ್ಲಿರುವ ವಿಶ್ವಾಸಿ ಮತ್ತು ಅವಿಶ್ವಾಸಿಗಳ ವಿಷಯದಲ್ಲಿ ಅಲ್ಲಾಹು ನ್ಯಾಯಬದ್ಧವಾದ ತೀರ್ಮಾನ ಕೈಗೊಳ್ಳುವನು. ಎರಡು: ಓರ್ವ ಪ್ರವಾದಿಯನ್ನು ಕಳುಹಿಸಿ ಸತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡದೆ ಅಲ್ಲಾಹು ಯಾವುದೇ ಜನತೆಯನ್ನೂ ಶಿಕ್ಷಿಸಲಾರನು. ಪ್ರವಾದಿಯ ಆಗಮನವುಂಟಾಗಿ ಸತ್ಯವನ್ನು ಅಸಂದಿಗ್ಧವಾಗಿ ಸ್ಪಷ್ಟಗೊಳಿಸಲಾದ ಬಳಿಕ ವಿಶ್ವಾಸಿಗಳನ್ನು ಗೆಲ್ಲಿಸುವ ಮತ್ತು ಅವಿಶ್ವಾಸಿಗಳನ್ನು ಪರಾಭವಗೊಳಿಸುವ ಮೂಲಕ ಅಲ್ಲಾಹು ನ್ಯಾಯಬದ್ಧವಾದ ತೀರ್ಮಾನ ಕೈಗೊಳ್ಳುವನು.

(48) ‘ಈ ವಾಗ್ದಾನವು (ನೆರವೇರಿಸಲ್ಪಡುವುದು) ಯಾವಾಗ? ನೀವು ಸತ್ಯಸಂಧರಾಗಿದ್ದರೆ (ಹೇಳಿರಿ)’ ಎಂದು ಅವರು (ಸತ್ಯನಿಷೇಧಿಗಳು) ಹೇಳುವರು.

(49) (ಓ ಪ್ರವಾದಿಯವರೇ!) ಹೇಳಿರಿ: ‘ಸ್ವತಃ ನನಗಾಗಿ ಯಾವುದೇ ಲಾಭವನ್ನೋ ಹಾನಿಯನ್ನೋ ಮಾಡುವುದು ನನ್ನ ಅಧೀನದಲ್ಲಿಲ್ಲ. ಅಲ್ಲಾಹು ಇಚ್ಛಿಸಿದವುಗಳ ಹೊರತು’. ಪ್ರತಿಯೊಂದು ಸಮುದಾಯಕ್ಕೂ ಒಂದು ಅವಧಿಯಿದೆ.(351) ಅವರ ಅವಧಿಯು ಬಂದುಬಿಟ್ಟರೆ ಒಂದು ಕ್ಷಣದಷ್ಟು ಹಿಂದಕ್ಕೆ ತಳ್ಳಲು ಅಥವಾ ಮುಂದಕ್ಕೆ ತಳ್ಳಲು ಅವರಿಂದಾಗದು.
351. ಮಿತಿಮೀರಿದ ಅಧಾರ್ಮಿಕತೆ ಮತ್ತು ಧಿಕ್ಕಾರದೊಂದಿಗೆ ನಿರಂತರವಾಗಿ ಮುಂದುವರಿಯಲು ಅಲ್ಲಾಹು ಯಾರನ್ನೂ ಬಿಡಲಾರನು. ಒಂದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಅವನು ಅವರಿಗೆ ಕಾಲಾವಕಾಶವನ್ನು ನೀಡುವನು.

(50) (ಓ ಪ್ರವಾದಿಯವರೇ!) ಹೇಳಿರಿ: ‘ರಾತ್ರಿಯೋ ಹಗಲೋ ಅಲ್ಲಾಹುವಿನ ಶಿಕ್ಷೆಯು ನಿಮ್ಮ ಬಳಿಗೆ ಬರುವುದಾದರೆ (ನಿಮ್ಮ ಸ್ಥಿತಿ ಹೇಗಿರಬಹುದೆಂದು) ನೀವು ಆಲೋಚಿಸಿರುವಿರಾ? ಅದರ ಪೈಕಿ ಯಾವ ಶಿಕ್ಷೆಗಾಗಿ ಅಪರಾಧಿಗಳು ಆತುರಪಡುತ್ತಿರುವರು?’

(51) ತರುವಾಯ ಅದು (ಶಿಕ್ಷೆ) ಸಂಭವಿಸುವಾಗ ನೀವದರಲ್ಲಿ ವಿಶ್ವಾಸವಿಡುವಿರಾ? (ಆಗ ನಿಮ್ಮೊಂದಿಗೆ ಹೇಳಲಾಗುವುದು): ‘ನೀವು ಈ ಶಿಕ್ಷೆಗಾಗಿ ಆತುರಪಡುವವರಾಗಿದ್ದಿರಿ. ಹಾಗಿದ್ದೂ ಈಗ (ವಿಶ್ವಾಸವಿಡುವುದೇ)?’

(52) ತರುವಾಯ ಅಕ್ರಮಿಗಳೊಂದಿಗೆ ಹೇಳಲಾಗುವುದು: ‘ಶಾಶ್ವತವಾದ ಶಿಕ್ಷೆಯನ್ನು ಆಸ್ವಾದಿಸಿರಿ. ನೀವು ಮಾಡಿರುವುದಕ್ಕೆ ತಕ್ಕುದಾಗಿಯೇ ವಿನಾ ನಿಮಗೆ ಪ್ರತಿಫಲ ನೀಡಲಾಗುವುದೇ?’

(53) ‘ಇದು ಸತ್ಯವೇ?’ ಎಂದು ಅವರು ತಮ್ಮೊಂದಿಗೆ ವಿಚಾರಿಸುವರು. ಹೇಳಿರಿ: ‘ಹೌದು! ನನ್ನ ರಬ್‌ನ ಮೇಲಾಣೆ! ಖಂಡಿತವಾಗಿಯೂ ಇದು ಸತ್ಯವೇ ಆಗಿದೆ. ಪರಾಭವಗೊಳಿಸಲು ನಿಮಗೆ ಸಾಧ್ಯವಾಗದು’.

(54) ಅಕ್ರಮವೆಸಗಿದ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಅದನ್ನವನು ಪ್ರಾಯಶ್ಚಿತ್ತವಾಗಿ ನೀಡುತ್ತಿದ್ದನು.(352) ಶಿಕ್ಷೆಯನ್ನು ಕಾಣುವಾಗ ಅವರು ತಮ್ಮ ವಿಷಾದವನ್ನು ಮನಸ್ಸಿನಲ್ಲೇ ಬಚ್ಚಿಡುವರು. ಅವರ ಮಧ್ಯೆ ನ್ಯಾಯಬದ್ಧವಾಗಿ ತೀರ್ಪು ನೀಡಲಾಗುವುದು. ಅವರೊಂದಿಗೆ ಅನ್ಯಾಯವೆಸಗಲಾಗದು.
352. ಜನರು ಪರಲೋಕವನ್ನು ತಲುಪುವಾಗ ನರಕ ಶಿಕ್ಷೆಯಿಂದ ಪಾರಾಗುವುದಕ್ಕಾಗಿ ಏನನ್ನು ಬೇಕಾದರೂ ನೀಡಲು ಸಿದ್ಧರಾಗುವರು. ಭೂಮಿಯಲ್ಲಿರುವ ಸಂಪತ್ತೆಲ್ಲವೂ ಅವರ ವಶದಲ್ಲಿದ್ದರೂ ಅವೆಲ್ಲವನ್ನೂ ಪ್ರಾಯಶ್ಚಿತ್ತವಾಗಿ ನೀಡಲು ಅವರು ಸನ್ನದ್ಧರಾಗುವರು.

(55) ಅರಿಯಿರಿ! ಖಂಡಿತವಾಗಿಯೂ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹುವಿನದ್ದಾಗಿವೆ. ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ವಾಗ್ದಾನವು ಸತ್ಯವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರೂ (ವಸ್ತುಸ್ಥಿತಿಯನ್ನು) ಅರಿಯಲಾರರು.

(56) ಅವನು ಜೀವವನ್ನು ನೀಡುವವನು ಮತ್ತು ಮೃತಪಡಿಸುವವನಾಗಿರುವನು. ನಿಮ್ಮನ್ನು ಅವನೆಡೆಗೇ ಮರಳಿಸಲಾಗುವುದು.

(57) ಓ ಮನುಷ್ಯರೇ! ನಿಮ್ಮ ರಬ್‌ನ ವತಿಯ ಉಪದೇಶವೂ ಹೃದಯಗಳಲ್ಲಿರುವ ರೋಗಕ್ಕೆ ಉಪಶಮನವೂ ನಿಮ್ಮೆಡೆಗೆ ಬಂದಿದೆ. ಸತ್ಯವಿಶ್ವಾಸಿಗಳಿಗೆ ಮಾರ್ಗದರ್ಶಿಯೂ ಕಾರುಣ್ಯವೂ ಬಂದಿದೆ.

(58) ಹೇಳಿರಿ: ‘ಇದು ಅಲ್ಲಾಹುವಿನ ಅನುಗ್ರಹ ಮತ್ತು ಕಾರುಣ್ಯದಿಂದಾಗಿದೆ. ಅದರಿಂದಾಗಿ ಅವರು ಸಂಭ್ರಮಪಡಲಿ. ಅವರು ಒಟ್ಟುಗೂಡಿಸಿಡುವುದಕ್ಕಿಂತಲೂ ಇದು ಅತ್ಯುತ್ತಮವಾದುದಾಗಿದೆ’.

(59) ಹೇಳಿರಿ: ‘ಅಲ್ಲಾಹು ನಿಮಗೆ ಇಳಿಸಿಕೊಟ್ಟ ಅನ್ನಾಧಾರಗಳ ಬಗ್ಗೆ ನೀವು ಆಲೋಚಿಸಿರುವಿರಾ? ತರುವಾಯ ಅವುಗಳ ಪೈಕಿ (ಕೆಲವನ್ನು) ನೀವು ನಿಷಿದ್ಧಗೊಳಿಸಿದಿರಿ. (ಇನ್ನು ಕೆಲವನ್ನು) ಧರ್ಮಸಮ್ಮತಗೊಳಿಸಿದಿರಿ’.(353) ಹೇಳಿರಿ: ‘(ಹಾಗೆ ಮಾಡಲು) ನಿಮಗೆ ಅನುಮತಿ ನೀಡಿದ್ದು ಅಲ್ಲಾಹುವಾಗಿರುವನೇ? ಅಥವಾ ನೀವು ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆಯುತ್ತಿರುವಿರಾ?’
353. ಯಾವುದು ಪುಣ್ಯ ಮತ್ತು ಯಾವುದು ಪಾಪ ಎಂಬುದನ್ನು ನಿರ್ಧರಿಸುವ ಅಧಿಕಾರವಿರುವುದು ಅಲ್ಲಾಹುವಿಗೆ ಮಾತ್ರವಾಗಿದೆ.

(60) ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆಯುವವರ ಭಾವನೆಯು ಪುನರುತ್ಥಾನ ದಿನದಂದು ಏನಾಗಿರಬಹುದು? ಖಂಡಿತವಾಗಿಯೂ ಅಲ್ಲಾಹು ಜನರ ಮೇಲೆ ಔದಾರ್ಯವುಳ್ಳವನಾಗಿರುವನು. ಆದರೆ ಅವರಲ್ಲಿ ಹೆಚ್ಚಿನವರೂ ಕೃತಜ್ಞತೆ ಸಲ್ಲಿಸುವುದಿಲ್ಲ.

(61) (ಓ ಪ್ರವಾದಿಯವರೇ!) ತಾವು ಯಾವುದೇ ಕಾರ್ಯದಲ್ಲಿ ಮಗ್ನರಾಗಿರುವಾಗ, ಅದರ ಬಗ್ಗೆ ಕುರ್‌ಆನ್‍ನಿಂದ ಏನನ್ನಾದರೂ ಓದಿಕೊಡುತ್ತಿರುವಾಗ ಮತ್ತು ನೀವು ಯಾವುದೇ ಕರ್ಮವನ್ನು ಮಾಡುತ್ತಿರುವಾಗ, ನೀವು ಅದರಲ್ಲಿ ಮಗ್ನರಾಗಿರುವಾಗ ನಾವು ನಿಮ್ಮ ಮೇಲೆ ಸಾಕ್ಷಿಯಾಗಿರದೆ ಇರಲಾರೆವು. ಭೂಮಿಯಲ್ಲಿ ಅಥವಾ ಆಕಾಶದಲ್ಲಿ ಒಂದು ಅಣುವಿನ ತೂಕದಷ್ಟಿರುವ ಯಾವುದೇ ವಸ್ತುವೂ ತಮ್ಮ ರಬ್‌ನ (ಗಮನದಿಂದ) ಮರೆಯಾಗಲಾರದು. ಅದಕ್ಕಿಂತಲೂ ಚಿಕ್ಕದಾಗಿರುವುದು ಅಥವಾ ದೊಡ್ಡದಾಗಿರುವುದು ಯಾವುದೂ ಸ್ಪಷ್ಟವಾದ ಗ್ರಂಥವೊಂದರಲ್ಲಿ ದಾಖಲಿಸಲ್ಪಡದೆ ಇರಲಾರದು.

(62) ಅರಿಯಿರಿ! ಖಂಡಿತವಾಗಿಯೂ ಅಲ್ಲಾಹುವಿನ ಮಿತ್ರರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬರದು.

(63) ಅವರು ವಿಶ್ವಾಸವಿಟ್ಟವರೂ ಭಯಭಕ್ತಿ ಪಾಲಿಸುವವರೂ ಆಗಿರುವರು.(354)
354. ಧರ್ಮದ ನೀತಿನಿಯಮಗಳನ್ನು ಪಾಲಿಸದೆ, ಅಚ್ಚುಕಟ್ಟು, ಶುಚಿತ್ವಗಳಿಲ್ಲದೆ ಕೆಲವು ಹಾವಭಾವಗಳೊಂದಿಗೆ ‘ಔಲಿಯಾ’ ವೇಷವನ್ನು ತೊಡುವ ಕೆಲವರಿದ್ದಾರೆ. ಇವರಾರೂ ಅಲ್ಲಾಹುವಿನ ಮಿತ್ರರ ಪೈಕಿ ಸೇರಲಾರರೆಂದು ಈ ಸೂಕ್ತಿಯು ನಮಗೆ ಮನವರಿಕೆ ಮಾಡಿಕೊಡುತ್ತದೆ.

(64) ಅವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ಶುಭವಾರ್ತೆಯಿದೆ. ಅಲ್ಲಾಹುವಿನ ವಚನಗಳಿಗೆ ಯಾವುದೇ ಬದಲಾವಣೆಯಿಲ್ಲ. ಮಹಾಭಾಗ್ಯವು ಅದೇ ಆಗಿದೆ.

(65) (ಓ ಪ್ರವಾದಿಯವರೇ!) ಅವರ ಮಾತು ತಮಗೆ ದುಃಖವನ್ನುಂಟು ಮಾಡದಿರಲಿ. ಖಂಡಿತವಾಗಿಯೂ ಪ್ರತಾಪವು ಸಂಪೂರ್ಣವಾಗಿ ಅಲ್ಲಾಹುವಿಗಿರುವುದಾಗಿದೆ. ಅವನು ಎಲ್ಲವನ್ನು ಆಲಿಸುವವನೂ ಅರಿಯುವವನೂ ಆಗಿರುವನು.

(66) ಅರಿಯಿರಿ! ಖಂಡಿತವಾಗಿಯೂ ಆಕಾಶಗಳಲ್ಲಿರುವವರು ಮತ್ತು ಭೂಮಿಯಲ್ಲಿರುವವರೆಲ್ಲರೂ ಅಲ್ಲಾಹುವಿಗೆ ಸೇರಿದವರಾಗಿರುವರು. ಅಲ್ಲಾಹುವಿನ ಹೊರತು ಸಹಭಾಗಿಗಳನ್ನು(355) ಕರೆದು ಪ್ರಾರ್ಥಿಸುತ್ತಿರುವವರು ಏನನ್ನು ಅನುಸರಿಸುತ್ತಿರುವರು? ಅವರು ಅನುಸರಿಸುತ್ತಿರುವುದು ಕೇವಲ ಊಹೆಯನ್ನು ಮಾತ್ರವಾಗಿದೆ. ಅವರು ಸುಳ್ಳು ಹೆಣೆಯುವವರು ಮಾತ್ರವಾಗಿರುವರು.
355. ವರ-ಶಾಪ, ಭಾಗ್ಯ-ನಿರ್ಭಾಗ್ಯ, ಆರೋಗ್ಯ-ಅನಾರೋಗ್ಯ ಇತ್ಯಾದಿಗಳನ್ನು ನೀಡುವ ದಿವ್ಯಶಕ್ತಿಯನ್ನು ಹೊಂದಿರುವರು ಎಂಬ ನಂಬಿಕೆಯಿಂದ ವಿವಿಧ ವ್ಯಕ್ತಿಗಳು ಮತ್ತು ಶಕ್ತಿಗಳೊಂದಿಗೆ ಪ್ರಾರ್ಥಿಸುವವರು ಅಲ್ಲಾಹುವಿನೊಂದಿಗೆ ಕೃತಘ್ನತೆ ತೋರುವವರೂ ಅವನ ಹಕ್ಕು ಮತ್ತು ಅಧಿಕಾರದಲ್ಲಿ ಇತರರನ್ನು ಶಾಮೀಲುಗೊಳಿಸುವವರೂ ಆಗಿರುವರು.

(67) ನೀವು ವಿಶ್ರಾಂತಿ ಪಡೆಯುವುದಕ್ಕಾಗಿ ರಾತ್ರಿಯನ್ನೂ, ಪ್ರಕಾಶಮಯವಾಗಿ ಹಗಲನ್ನೂ ಮಾಡಿಕೊಟ್ಟವನು ಅವನೇ ಆಗಿರುವನು. ಖಂಡಿತವಾಗಿಯೂ ಆಲಿಸಿ ಗ್ರಹಿಸುವ ಜನರಿಗೆ ಅದರಲ್ಲಿ ದೃಷ್ಟಾಂತಗಳಿವೆ.

(68) ‘ಅಲ್ಲಾಹು ಸಂತತಿಯನ್ನು ಮಾಡಿಕೊಂಡಿರುವನು’ ಎಂದು ಅವರು ಹೇಳಿದರು.(356) ಅವನು ಪರಮ ಪಾವನನು. ಅವನು ನಿರಪೇಕ್ಷನಾಗಿರುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿವೆ. ಇದಕ್ಕೆ (ಅಲ್ಲಾಹುವಿಗೆ ಸಂತತಿಯಿದೆ ಎಂಬುದಕ್ಕೆ) ನಿಮ್ಮ ಬಳಿ ಯಾವುದೇ ಆಧಾರ ಪ್ರಮಾಣವಿಲ್ಲ. ನಿಮಗೆ ಅರಿವಿಲ್ಲದಿರುವುದನ್ನು ನೀವು ಅಲ್ಲಾಹುವಿನ ಮೇಲೆ ಹೇಳುತ್ತಿರುವಿರಾ?

(69) ಹೇಳಿರಿ: ‘ಅಲ್ಲಾಹುವಿನ ಮೇಲೆ ಸುಳ್ಳನ್ನು ಹೆಣೆಯುವವರು ಖಂಡಿತವಾಗಿಯೂ ಯಶಸ್ವಿಯಾಗಲಾರರು’.
356. ಮಲಕ್‍ಗಳು ಅಲ್ಲಾಹುವಿನ ಹೆಣ್ಣು ಮಕ್ಕಳೆಂದು ಅರೇಬಿಯಾದ ಬಹುದೇವಾರಾಧಕರು ನಂಬಿದ್ದರು. ಪ್ರವಾದಿ ಉಝೈರ್(ಅ) ಅಲ್ಲಾಹುವಿನ ಮಗನೆಂದು ಯಹೂದರು ಮತ್ತು ಪ್ರವಾದಿ ಈಸಾ(ಅ) ಅಲ್ಲಾಹುವಿನ ಮಗನೆಂದು ಕ್ರೈಸ್ತರು ವಾದಿಸಿದ್ದರು.

(70) (ಅವರಿಗಿರುವುದು) ಇಹಲೋಕದ ಸುಖಾನುಭೂತಿ ಮಾತ್ರವಾಗಿದೆ. ತರುವಾಯ ಅವರ ಮರಳುವಿಕೆಯು ನಮ್ಮೆಡೆಗಾಗಿದೆ. ಅವರು ಅವಿಶ್ವಾಸವಿಟ್ಟ ಫಲವಾಗಿ ತರುವಾಯ ಅವರು ಕಠಿಣವಾದ ಶಿಕ್ಷೆಯನ್ನು ಆಸ್ವಾದಿಸುವಂತೆ ನಾವು ಮಾಡುವೆವು.

(71) (ಓ ಪ್ರವಾದಿಯವರೇ!) ತಾವು ಅವರಿಗೆ ನೂಹ್‍ರ ವೃತ್ತಾಂತವನ್ನು ಓದಿಕೊಡಿರಿ. ಅವರು ತನ್ನ ಜನತೆಯೊಂದಿಗೆ ಹೇಳಿದ ಸಂದರ್ಭ: ‘ಓ ನನ್ನ ಜನರೇ! ನನ್ನ ಸಾನಿಧ್ಯ ಮತ್ತು ಅಲ್ಲಾಹುವಿನ ದೃಷ್ಟಾಂತಗಳ ಬಗ್ಗೆ ನನ್ನ ಉಪದೇಶವು ನಿಮಗೊಂದು ದೊಡ್ಡ ಭಾರವಾಗಿ ಬಿಟ್ಟಿರುವುದಾದರೆ ನಾನು ಅಲ್ಲಾಹುವಿನ ಮೇಲೆ ಭರವಸೆ ಇಟ್ಟಿರುವೆನು. ಆದ್ದರಿಂದ ನಿಮ್ಮ ವಿಷಯವನ್ನು ನೀವು ಮತ್ತು ನೀವು ಸಹಭಾಗಿಗಳನ್ನಾಗಿ ಮಾಡಿಕೊಂಡವರು ಜೊತೆಗೂಡಿ ತೀರ್ಮಾನಿಸಿರಿ. ತರುವಾಯ ನಿಮ್ಮ ವಿಷಯದಲ್ಲಿ (ತೀರ್ಮಾನದಲ್ಲಿ) ನಿಮಗೆ ಯಾವುದೇ ಅಸ್ಪಷ್ಟತೆಯೂ ಇರದಿರಲಿ. ತರುವಾಯ ನೀವು (ಆ ತೀರ್ಮಾನವನ್ನು) ನನ್ನ ಮೇಲೆ ಜಾರಿಗೊಳಿಸಿರಿ. ನನಗೆ ನೀವು ಸ್ವಲ್ಪವೂ ಕಾಲಾವಕಾಶವನ್ನು ನೀಡದಿರಿ.

(72) ನೀವೇನಾದರೂ ವಿಮುಖರಾಗುವುದಾದರೆ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನೂ ಬೇಡಿರುವುದಿಲ್ಲ. ನನಗೆ ಪ್ರತಿಫಲವನ್ನು ನೀಡಬೇಕಾದವನು ಅಲ್ಲಾಹು ಮಾತ್ರವಾಗಿರುವನು. (ಅಲ್ಲಾಹುವಿಗೆ) ಶರಣಾಗತರಾದವರ ಪೈಕಿ ಸೇರಿದವನಾಗಬೇಕೆಂದು ನನ್ನೊಂದಿಗೆ ಆಜ್ಞಾಪಿಸಲಾಗಿದೆ’.

(73) ಆದರೆ ಅವರು ಅವರನ್ನು (ನೂಹ್‍ರನ್ನು) ತಿರಸ್ಕರಿಸಿದರು. ಆಗ ನಾವು ಅವರನ್ನು ಮತ್ತು ಅವರ ಜೊತೆಗಿದ್ದವರನ್ನು ಹಡಗಿನಲ್ಲಿ ರಕ್ಷಿಸಿದೆವು. ಅವರನ್ನು ನಾವು (ಭೂಮಿಯಲ್ಲಿ) ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರನ್ನು ನಾವು ಮುಳುಗಿಸಿದೆವು. ಮುನ್ನೆಚ್ಚರಿಕೆ ನೀಡಲಾದ ಆ ಜನರ ಪರ್ಯಾವಸಾನವು ಹೇಗಿತ್ತೆಂಬುದನ್ನು ನೋಡಿರಿ.

(74) ತರುವಾಯ ಅವರ (ನೂಹ್‍ರ) ಬಳಿಕ ನಾವು ಅನೇಕ ಸಂದೇಶವಾಹಕರನ್ನು ಅವರ ಸಮುದಾಯದೆಡೆಗೆ ಕಳುಹಿಸಿದೆವು. ಆ ಸಂದೇಶವಾಹಕರು ಅವರೆಡೆಗೆ ಪುರಾವೆಗಳೊಂದಿಗೆ ಬಂದರು. ಆದರೆ ಅವರು ಮುಂಚೆ ಯಾವುದನ್ನು ನಿಷೇಧಿಸಿದ್ದರೋ ಅದರಲ್ಲಿ ವಿಶ್ವಾಸವಿಡಲು ಅವರು ಸಿದ್ಧರಿರಲಿಲ್ಲ. ಹೀಗೆ ನಾವು ಅತಿಕ್ರಮಿಗಳ ಹೃದಯಗಳ ಮೇಲೆ ಮುದ್ರೆಯೊತ್ತುವೆವು.

(75) ತರುವಾಯ ಅವರ ಬಳಿಕ ನಾವು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‍ಔನ್ ಹಾಗೂ ಅವನ ಮುಖಂಡರೆಡೆಗೆ ಮೂಸಾ ಮತ್ತು ಹಾರೂನ್‍ರನ್ನು ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧಿಗಳಾದ ಒಂದು ಜನತೆಯಾಗಿದ್ದರು.

(76) ನಮ್ಮ ಕಡೆಯ ಸತ್ಯವು ಅವರೆಡೆಗೆ ಬಂದಾಗ ಅವರು ಹೇಳಿದರು: ‘ಖಂಡಿತವಾಗಿಯೂ ಇದೊಂದು ಸ್ಪಷ್ಟವಾದ ಮಾಂತ್ರಿಕತೆಯಾಗಿದೆ’.

(77) ಮೂಸಾ ಹೇಳಿದರು: ‘ಸತ್ಯವು ನಿಮ್ಮೆಡೆಗೆ ಬಂದಾಗ ನೀವು ಅದರ ಬಗ್ಗೆ (ಮಾಂತ್ರಿಕತೆ) ಎನ್ನುವುದೇ? ಇದು ಮಾಂತ್ರಿಕತೆಯೇ? (ವಾಸ್ತವಿಕವಾಗಿ) ಮಾಂತ್ರಿಕರು ಯಶಸ್ವಿಯಾಗಲಾರರು’.(357)
357. ಮಾಂತ್ರಿಕ ವಿದ್ಯೆ ಅಥವಾ ಕಣ್ಕಟ್ಟಿನ ಮೂಲಕ ಶಾಶ್ವತವಾದ ಫಲವನ್ನು ಉಂಟುಮಾಡಲು ಸಾಧ್ಯವಿಲ್ಲ. ಅದರ ಮೇಲೆ ಒಂದು ವಿಚಾರಧಾರೆಯನ್ನು ಸ್ಥಾಪಿಸಲೂ ಸಾಧ್ಯವಿಲ್ಲ. ದೈವಿಕ ದೃಷ್ಟಾಂತದೊಂದಿಗೆ ಹೋರಾಡಿ ಗೆಲುವು ಸಾಧಿಸಲು ಯಾವುದೇ ಮಾಂತ್ರಿಕನಿಗೂ ಸಾಧ್ಯವಿಲ್ಲ.

(78) ಅವರು ಹೇಳಿದರು: ‘ನಮ್ಮ ಪೂರ್ವಿಕರು ಯಾವುದರಲ್ಲಿ ನೆಲೆಗೊಂಡಿರುವುದಾಗಿ ನಾವು ಕಂಡಿರುವೆವೋ ಅದರಿಂದ ನಮ್ಮನ್ನು ತಿರುಗಿಸಲು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೆ ಮಹಿಮೆಯುಂಟಾಗಲು ನೀವು ನಮ್ಮ ಬಳಿಗೆ ಬಂದಿರುವಿರಾ? ನಾವು ನಿಮ್ಮಿಬ್ಬರಲ್ಲೂ ವಿಶ್ವಾಸವಿಡಲಾರೆವು’.

(79) ಫಿರ್‍ಔನ್ ಹೇಳಿದನು: ‘ಪಾಂಡಿತ್ಯವಿರುವ ಸರ್ವ ಮಾಂತ್ರಿಕರನ್ನೂ ನೀವು ನನ್ನ ಬಳಿಗೆ ಕರೆತನ್ನಿರಿ’.

(80) ಮಾಂತ್ರಿಕರು ಬಂದಾಗ ಮೂಸಾ ಅವರೊಂದಿಗೆ ಹೇಳಿದರು: ‘ನಿಮಗೆ ಹಾಕಲಿರುವುದೆಲ್ಲವನ್ನೂ ಹಾಕಿರಿ’.

(81) ಅವರು ಹಾಕಿದಾಗ ಮೂಸಾ ಹೇಳಿದರು: ‘ನೀವು ತಂದಿರುವುದು ಮಾಂತ್ರಿಕತೆಯನ್ನಾಗಿದೆ. ಖಂಡಿತವಾಗಿಯೂ ಅಲ್ಲಾಹು ಅದನ್ನು ನಿಷ್ಫಲಗೊಳಿಸುವನು. ವಿನಾಶಕಾರಿಗಳ ಕೃತ್ಯವನ್ನು ಖಂಡಿತವಾಗಿಯೂ ಅಲ್ಲಾಹು ಸಫಲಗೊಳಿಸಲಾರನು’.

(82) ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸತ್ಯವಾಗಿ ತೋರಿಸಿಕೊಡುವನು. ಅಪರಾಧಿಗಳು ಎಷ್ಟು ಅಸಹ್ಯಪಟ್ಟರೂ ಸರಿಯೇ.

(83) ಆದರೆ ಮೂಸಾರ ಜನತೆಯಲ್ಲಿ ಸೇರಿದ ಕೆಲವು ಯುವಕರ ಹೊರತು ಇನ್ನಾರೂ ಅವರಲ್ಲಿ ವಿಶ್ವಾಸವಿಡಲಿಲ್ಲ. (ಅದೂ ಕೂಡ) ಫಿರ್‍ಔನ್ ಮತ್ತು ಅವರಲ್ಲಿರುವ ಮುಖಂಡರು ತಮ್ಮನ್ನು ಹಿಂಸಿಸುವರೋ ಎಂಬ ಭಯದೊಂದಿಗಾಗಿತ್ತು. ಖಂಡಿತವಾಗಿಯೂ ಫಿರ್‍ಔನ್‍ನು ಭೂಮಿಯಲ್ಲಿ ದರ್ಪ ತೋರುವನಾಗಿದ್ದನು. ಖಂಡಿತವಾಗಿಯೂ ಅವನು ಹದ್ದುಮೀರಿದವರಲ್ಲಿ ಸೇರಿದವನಾಗಿದ್ದನು.

(84) ಮೂಸಾ ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟಿರುವುದಾದರೆ ಅವನ ಮೇಲೆ ಭರವಸೆಯಿಡಿರಿ. ನೀವು ಅವನಿಗೆ ಶರಣಾದವರಾಗಿದ್ದರೆ’.

(85) ಆಗ ಅವರು ಹೇಳಿದರು: ‘ನಾವು ಅಲ್ಲಾಹುವಿನ ಮೇಲೆ ಭರವಸೆಯಿಟ್ಟಿರುವೆವು. ಓ ನಮ್ಮ ಪ್ರಭೂ! ನಮ್ಮನ್ನು ಅಕ್ರಮಿಗಳಾದ ಈ ಜನತೆಯ ಹಿಂಸೆಗೆ ಬಲಿಪಶುಗಳನ್ನಾಗಿ ಮಾಡದಿರು.

(86) ನಿನ್ನ ಕಾರುಣ್ಯದಿಂದ ನಮ್ಮನ್ನು ನೀನು ಸತ್ಯನಿಷೇಧಿಗಳಾದ ಜನತೆಯಿಂದ ರಕ್ಷಿಸು’.

(87) ಮೂಸಾ ಮತ್ತು ಅವರ ಸಹೋದರನಿಗೆ ನಾವು ದಿವ್ಯ ಸಂದೇಶ ನೀಡಿದೆವು: ‘ನೀವಿಬ್ಬರೂ ನಿಮ್ಮ ಜನತೆಗೋಸ್ಕರ ಈಜಿಪ್ಟಿನಲ್ಲಿ (ಪ್ರತ್ಯೇಕ) ವಸತಿಗಳನ್ನು(358) ಸಜ್ಜುಗೊಳಿಸಿರಿ, ನಿಮ್ಮ ಮನೆಗಳನ್ನು ಕಿಬ್ಲಾ ಆಗಿ ಮಾಡಿರಿ(359) ಮತ್ತು ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ತಾವು ಶುಭವಾರ್ತೆಯನ್ನು ತಿಳಿಸಿರಿ’.
358. ಶತ್ರುಗಳ ಮಧ್ಯೆ ಒಂಟಿಯಾಗಿ ವಾಸಿಸಿದರೆ ಸತ್ಯವಿಶ್ವಾಸಿಗಳು ಹೆಚ್ಚಿನ ಹಿಂಸೆಗೆ ಬಲಿಯಾಗಬೇಕಾದೀತು. ವಿಶ್ವಾಸಿಗಳು ಒಂದೆಡೆ ವಸತಿಗಳನ್ನು ನಿರ್ಮಿಸಿ ಒಟ್ಟುಸೇರಿ ಬದುಕಬೇಕೆಂದು ಆದೇಶಿಸಿರುವುದು ಅದನ್ನು ನಿವಾರಿಸುವುದಕ್ಕಾಗಿದೆ. 359. ‘ಮನೆಗಳನ್ನು ಕಿಬ್ಲಾ ಆಗಿ ಮಾಡಿರಿ’ ಎಂಬುದರ ತಾತ್ಪರ್ಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಒಂದು: ಮನೆಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದು. ಎರಡು: ಮನೆಗಳನ್ನು ಬೈತುಲ್ ಮುಕದ್ದಿಸ್‍ಗೆ ಅಭಿಮುಖವಾಗಿ ನಿರ್ಮಿಸುವುದು. ಮೂರು: ಎಲ್ಲ ಮನೆಗಳನ್ನೂ ಒಂದೇ ದಿಕ್ಕಿಗೆ ಮುಖಮಾಡಿ ನಿರ್ಮಿಸುವುದು. ಈ ಮೂರು ಅಭಿಪ್ರಾಯಗಳ ಅರ್ಥವು ಒಂದೇ ಆಗಿದೆ.

(88) ಮೂಸಾ ಹೇಳಿದರು: ‘ನಮ್ಮ ಪ್ರಭೂ! ಫಿರ್‍ಔನ್ ಮತ್ತು ಅವನ ಮುಖಂಡರಿಗೆ ಐಹಿಕ ಜೀವನದಲ್ಲಿ ನೀನು ವೈಭವವನ್ನೂ ಸಂಪತ್ತುಗಳನ್ನೂ ನೀಡಿರುವೆ. ನಮ್ಮ ಪ್ರಭೂ! ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸುವುದಕ್ಕಾಗಿ (ಅವರದನ್ನು ಬಳಸುತ್ತಿರುವರು). ನಮ್ಮ ಪ್ರಭೂ! ಅವರ ಸಂಪತ್ತುಗಳನ್ನು ನಿರ್ನಾಮಮಾಡು. ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ವಿಶ್ವಾಸವಿಡದಂತೆ ಅವರ ಹೃದಯಗಳನ್ನು ಕಠೋರವಾಗಿಸು’.

(89) ಅವನು (ಅಲ್ಲಾಹು) ಹೇಳಿದನು: ‘ನಿಮ್ಮಿಬ್ಬರ ಪ್ರಾರ್ಥನೆಯು ಸ್ವೀಕಾರವಾಗಿದೆ. ಆದ್ದರಿಂದ ನೀವಿಬ್ಬರೂ ನೇರವಾಗಿ ನೆಲೆನಿಲ್ಲಿರಿ. ಅರಿವಿಲ್ಲದವರ ಮಾರ್ಗವನ್ನು ನೀವಿಬ್ಬರೂ ಅನುಸರಿಸದಿರಿ’.

(90) ನಾವು ಇಸ್ರಾಈಲ್ ಸಂತತಿಗಳನ್ನು ಸಮುದ್ರದಾಚೆಗೆ ದಾಟಿಸಿದೆವು. ಆಗ ಫಿರ್‍ಔನ್ ಮತ್ತು ಅವನ ಸೈನ್ಯವು ಧಿಕ್ಕಾರ ಮತ್ತು ಅತಿಕ್ರಮದೊಂದಿಗೆ ಅವರನ್ನು ಹಿಂಬಾಲಿಸಿದರು. ಕೊನೆಗೆ ಮುಳುಗಿ ಸಾಯುವಂತಾದಾಗ ಅವನು ಹೇಳಿದನು: ‘ಇಸ್ರಾಈಲ್ ಸಂತತಿಗಳು ಯಾವ ಆರಾಧ್ಯನಲ್ಲಿ ವಿಶ್ವಾಸವಿಟ್ಟಿರುವರೋ ಅವನ ಹೊರತು ಅನ್ಯ ಆರಾಧ್ಯನಿಲ್ಲವೆಂದು ನಾನೂ ವಿಶ್ವಾಸವಿಟ್ಟಿರುವೆನು ಮತ್ತು ನಾನು (ಅವನಿಗೆ) ಶರಣಾಗತರಾದವರ ಪೈಕಿ ಸೇರಿದವನಾಗಿರುವೆನು’.

(91) (ಅಲ್ಲಾಹು ಅವನೊಂದಿಗೆ ಹೇಳಿದನು:) ‘ಇದಕ್ಕೆ ಮುಂಚೆ ನೀನು ಧಿಕ್ಕರಿಸಿದವನೂ, ವಿನಾಶಕಾರಿಗಳ ಪೈಕಿ ಸೇರಿದವನೂ ಆಗಿದ್ದು ಈಗ (ವಿಶ್ವಾಸವಿಟ್ಟಿರುವೆಯಾ?)(360)
360. ಇನ್ನು ತನಗೆ ಮರಣದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಮನವರಿಕೆಯಾಗುವ ಸಂದರ್ಭ ಯಾರಾದರೂ ವಿಶ್ವಾಸವಿಡುವುದಾದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.

(92) ಆದ್ದರಿಂದ ನಿನ್ನ ಹಿಂದೆ ಬರುವವರಿಗೆ ನೀನೊಂದು ದೃಷ್ಟಾಂತವಾಗುವ ಸಲುವಾಗಿ ಇಂದು ನಾವು ನಿನ್ನ ಶರೀರವನ್ನು ರಕ್ಷಿಸುವೆವು.(361) ಖಂಡಿತವಾಗಿಯೂ ಜನರ ಪೈಕಿ ಹೆಚ್ಚಿನವರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷ್ಯರಾಗಿರುವರು.
361. ಅರ್ಥಾತ್ ಮರಣದ ಬಳಿಕ ಫಿರ್‍ಔನನ ಶರೀರವು ಕೊಳೆತುಹೋಗಬಾರದೆಂದು ಅಲ್ಲಾಹು ತೀರ್ಮಾನಿಸಿದನು.

(93) ಖಂಡಿತವಾಗಿಯೂ ಇಸ್ರಾಈಲ್ ಸಂತತಿಗಳನ್ನು ನಾವು ಸೂಕ್ತವಾದ ಒಂದು ವಾಸಸ್ಥಳದಲ್ಲಿ ವಾಸ ಮಾಡಿಸಿದೆವು ಮತ್ತು ಉತ್ತಮವಾದ ವಸ್ತುಗಳಿಂದ ಅವರಿಗೆ ಅನ್ನಾಧಾರವನ್ನು ಒದಗಿಸಿದೆವು. ಆದರೆ ಜ್ಞಾನವು ಅವರ ಬಳಿಗೆ ಬಂದ ನಂತರವೇ ಅವರು ಭಿನ್ನರಾದರು.(362) ಅವರು ಭಿನ್ನರಾಗಿರುವ ವಿಷಯದಲ್ಲಿ ತಮ್ಮ ರಬ್ ಪುನರುತ್ಥಾನ ದಿನದಂದು ಖಂಡಿತವಾಗಿಯೂ ಅವರ ಮಧ್ಯೆ ತೀರ್ಪು ನೀಡುವನು.
362. ಗ್ರಂಥವು ಲಭಿಸಿದ ಬಳಿಕ ಮತ್ತು ಸತ್ಯವನ್ನು ಅರಿತುಕೊಂಡ ಬಳಿಕ ಅವರು ಭಿನ್ನಾಭಿಪ್ರಾಯ ತಾಳಿದರು.

(94) ತಮಗೆ ನಾವು ಅವತೀರ್ಣಗೊಳಿಸಿರುವುದರ ಬಗ್ಗೆ ತಮಗೇನಾದರೂ ಸಂದೇಹವಿದ್ದರೆ ತಮಗಿಂತ ಮುಂಚೆಯೇ ಗ್ರಂಥ ಪಾರಾಯಣ ಮಾಡುತ್ತಿದ್ದವರೊಂದಿಗೆ ಕೇಳಿ ನೋಡಿರಿ.(363) ಖಂಡಿತವಾಗಿಯೂ ತಮ್ಮ ರಬ್‌ನ ವತಿಯ ಸತ್ಯವು ತಮ್ಮ ಬಳಿಗೆ ಬಂದಿದೆ. ಆದ್ದರಿಂದ ತಾವು ಸಂದೇಹಪಡುವವರಲ್ಲಿ ಸೇರದಿರಿ.
363. ತೌರಾತ್ ಪಾರಾಯಣ ಮಾಡುತ್ತಿರುವ ಯಹೂದರೊಂದಿಗೆ ಮತ್ತು ಇಂಜೀಲ್ ಪಾರಾಯಣ ಮಾಡುತ್ತಿರುವ ಕ್ರೈಸ್ತರೊಂದಿಗೆ ವಿಚಾರಿಸಿದರೆ ಸಂದೇಶವಾಹಕತ್ವ ಮತ್ತು ದಿವ್ಯಸಂದೇಶಕ್ಕೆ ಸಂಬಂಧಿಸಿದ ವಿಷಯಗಳನ್ನು ಅರಿತುಕೊಳ್ಳಬಹುದು.

(95) ಅಲ್ಲಾಹುವಿನ ದೃಷ್ಟಾಂತಗಳನ್ನು ನಿಷೇಧಿಸಿದವರಲ್ಲಿಯೂ ತಾವು ಸೇರದಿರಿ. ಹಾಗೇನಾದರೂ ಆದರೆ ತಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವಿರಿ.

(96) ಖಂಡಿತವಾಗಿಯೂ ಯಾರ ಮೇಲೆ ತಮ್ಮ ರಬ್‌ನ ವಚನವು(364) ಖಾತ್ರಿಯಾಗಿರುವುದೋ ಅವರು ವಿಶ್ವಾಸವಿಡಲಾರರು.
364. ವಚನ ಎಂಬುದರ ಉದ್ದೇಶವು ಅವರನ್ನು ಶಿಕ್ಷಿಸಲಾಗುವುದೆಂಬ ಘೋಷಣೆಯಾಗಿದೆ.

(97) ಅವರೆಡೆಗೆ ಯಾವುದೇ ದೃಷ್ಟಾಂತಗಳು ಬಂದರೂ ಸಹ ಯಾತನಾಮಯವಾದ ಶಿಕ್ಷೆಯನ್ನು ಕಣ್ಣಾರೆ ಕಾಣುವವರೆಗೆ (ಅವರು ವಿಶ್ವಾಸವಿಡಲಾರರು).

(98) ಯಾವುದೇ ದೇಶವು ವಿಶ್ವಾಸವಿಟ್ಟು, ಆ ವಿಶ್ವಾಸವು ಅದಕ್ಕೆ ಪ್ರಯೋಜನಪಡದಿರುವುದೇಕೆ?(365) ಯೂನುಸ್‍ರ ಜನತೆಯ ಹೊರತು.(366) ಅವರು ವಿಶ್ವಾಸವಿಟ್ಟಾಗ ನಾವು ಅವರಿಂದ ಐಹಿಕ ಜೀವನದ ಅಪಮಾನಕರ ಶಿಕ್ಷೆಯನ್ನು ನಿವಾರಿಸಿದೆವು ಮತ್ತು ಒಂದು ನಿಶ್ಚಿತ ಕಾಲದವರೆಗೆ ಅವರಿಗೆ ಅನುಕೂಲತೆಯನ್ನು ನೀಡಿದೆವು.
365. ಯಾವುದಾದರೂ ಊರಿಗೆ ಅಲ್ಲಾಹು ಪ್ರವಾದಿಯನ್ನು ಕಳುಹಿಸಿದರೆ ಆ ಪ್ರವಾದಿಯಲ್ಲಿ ವಿಶ್ವಾಸವಿಡುವುದು ಮತ್ತು ವಿಶ್ವಾಸದ ಮೂಲಕ ಯಶಸ್ಸನ್ನು ಪಡೆಯುವುದು ಅವರ ಕರ್ತವ್ಯವಾಗಿದೆ. ಆದರೆ ಹೆಚ್ಚಿನ ಊರಿನವರೂ ಇದನ್ನು ವಿಸ್ಮರಿಸುತ್ತಾರೆ. 366. ಯೂನುಸ್(ಅ) ರನ್ನು ಕಳುಹಿಸಲಾಗಿದ್ದು ಇರಾಕ್‍ನ ‘ನೀನೆವಾ’ ಎಂಬ ಊರಿಗಾಗಿತ್ತು. ಆ ಊರಿನವರು ಮೊದಮೊದಲು ನಿಷೇಧದಲ್ಲಿ ಅಚಲರಾಗಿ ನಿಂತರೂ ತರುವಾಯ ಅವರಿಗೆ ತಪ್ಪು ಮನದಟ್ಟಾದಾಗ ಪಶ್ಚಾತ್ತಾಪಪಟ್ಟರು ಮತ್ತು ಸರಿಯಾದ ವಿಶ್ವಾಸವನ್ನು ಸ್ವೀಕರಿಸಿದರು.

(99) ತಮ್ಮ ರಬ್ ಇಚ್ಛಿಸಿರುತ್ತಿದ್ದರೆ ಭೂಮಿಯಲ್ಲಿರುವವರೆಲ್ಲರೂ ಒಟ್ಟಾಗಿ ವಿಶ್ವಾಸವಿಡುತ್ತಿದ್ದರು. ಆದ್ದರಿಂದ ಜನರು ವಿಶ್ವಾಸಿಗಳಾಗುವಂತೆ ತಾವು ಅವರನ್ನು ಬಲವಂತಪಡಿಸುವಿರಾ?

(100) ಅಲ್ಲಾಹುವಿನ ಅನುಮತಿಯ ವಿನಾ ಯಾವ ವ್ಯಕ್ತಿಗೂ ವಿಶ್ವಾಸವಿಡಲು ಸಾಧ್ಯವಾಗಲಾರದು.(367) ಚಿಂತಿಸಿ ಗ್ರಹಿಸದವರ ಮೇಲೆ ಅವನು ನಿಕೃಷ್ಟತೆಯನ್ನು ಹಾಕಿಬಿಡುವನು.
367. ಸತ್ಯಾನ್ವೇಷಣೆಯ ತ್ವರೆ ಮತ್ತು ಸತ್ಯವನ್ನು ಅಂಗೀಕರಿಸುವ ಸನ್ನದ್ಧತೆ ಇರುವವರನ್ನು ಮಾತ್ರ ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸುವನು. ಮನುಷ್ಯನ ಸನ್ನದ್ಧತೆ ಮತ್ತು ಅಲ್ಲಾಹುವಿನ ಅನುಗ್ರಹ ಒಂದುಗೂಡುವಾಗ ಮಾತ್ರ ಓರ್ವನು ಸತ್ಯವಿಶ್ವಾಸಿಯಾಗುವನು. ಅಲ್ಲಾಹು ಯಾರ ಮೇಲೂ ವಿಶ್ವಾಸವನ್ನು ಬಲವಂತವಾಗಿ ಹೇರಲಾರನು.

(101) (ಓ ಪ್ರವಾದಿಯವರೇ!) ಹೇಳಿರಿ: ‘ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಏನೆಲ್ಲ ಇವೆಯೆಂದು ನೋಡಿರಿ. ವಿಶ್ವಾಸವಿಡದ ಜನರಿಗೆ ದೃಷ್ಟಾಂತಗಳಾಗಲಿ, ಮುನ್ನೆಚ್ಚರಿಕೆಗಳಾಗಲಿ ಯಾವುದೇ ಫಲವನ್ನು ನೀಡದು.’

(102) ತಮಗಿಂತ ಮುಂಚೆ ಗತಿಸಿಹೋದವರ ಅನುಭವಗಳಂತಿರುವುದನ್ನಲ್ಲದೆ ಬೇರೇನನ್ನಾದರೂ ಅವರು ಕಾಯುತ್ತಿರುವರೇ? ಹೇಳಿರಿ: ‘ನೀವು ಕಾಯುತ್ತಿರಿ. ಖಂಡಿತವಾಗಿಯೂ ನಿಮ್ಮೊಂದಿಗೆ ಕಾಯುತ್ತಿರುವವರ ಪೈಕಿ ನಾನೂ ಇರುವೆನು’.

(103) ತರುವಾಯ ನಾವು ನಮ್ಮ ಸಂದೇಶವಾಹಕರನ್ನು ಮತ್ತು ವಿಶ್ವಾಸವಿಟ್ಟವರನ್ನು ರಕ್ಷಿಸುವೆವು. ಹೀಗೆ ವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಮೇಲಿರುವ ಹೊಣೆಯಾಗಿದೆ.

(104) ಹೇಳಿರಿ: ‘ಓ ಜನರೇ! ನನ್ನ ಧರ್ಮದ ಬಗ್ಗೆ ನಿಮಗೇನಾದರೂ ಸಂದೇಹವಿದ್ದರೆ (ತಿಳಿಯಿರಿ!) ನೀವು ಅಲ್ಲಾಹುವಿನ ಹೊರತು ಆರಾಧಿಸುವವರನ್ನು ನಾನು ಆರಾಧಿಸಲಾರೆನು. ಆದರೆ ನಿಮ್ಮನ್ನು ಮೃತಪಡಿಸುವವನಾಗಿರುವ ಅಲ್ಲಾಹುವನ್ನು ನಾನು ಆರಾಧಿಸುವೆನು. ಸತ್ಯವಿಶ್ವಾಸಿಗಳ ಪೈಕಿ ಸೇರಿದವನಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ.

(105) ಋಜುಮನಸ್ಕನಾಗಿರುತ್ತಾ ನಿನ್ನ ಮುಖವನ್ನು ಧರ್ಮಕ್ಕೆ ನೇರವಾಗಿ ನಿಲ್ಲಿಸಬೇಕೆಂದು ಮತ್ತು ನೀನು ಬಹುದೇವವಿಶ್ವಾಸಿಗಳ ಪೈಕಿ ಸೇರಿದವನಾಗಕೂಡದೆಂದು (ನನಗೆ ಆಜ್ಞಾಪಿಸಲಾಗಿದೆ)’.

(106) ಅಲ್ಲಾಹುವಿನ ಹೊರತು ತಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಮಾಡದ ಯಾವುದರೊಂದಿಗೂ ತಾವು ಪ್ರಾರ್ಥಿಸದಿರಿ. ತಾವೇನಾದರೂ ಹಾಗೆ ಮಾಡುವುದಾದರೆ ಖಂಡಿತವಾಗಿಯೂ ತಾವು ಅಕ್ರಮಿಗಳ ಪೈಕಿ ಸೇರಿದವರಾಗುವಿರಿ.

(107) ಅಲ್ಲಾಹು ತಮಗೇನಾದರೂ ಹಾನಿಯನ್ನು ಮಾಡುವುದಾದರೆ ಅವನ ಹೊರತು ಅದನ್ನು ನಿವಾರಿಸುವವರಾರೂ ಇಲ್ಲ. ಅವನು ತಮಗೇನಾದರೂ ಒಳಿತನ್ನು ಉದ್ದೇಶಿಸುವುದಾದರೆ ಅವನ ಅನುಗ್ರಹವನ್ನು ತಡೆಯುವವರಾರೂ ಇಲ್ಲ. ಅವನು ತನ್ನ ದಾಸರ ಪೈಕಿ ಅವನಿಚ್ಛಿಸುವವರಿಗೆ ಅದನ್ನು (ಅನುಗ್ರಹವನ್ನು) ನೀಡುವನು. ಅವನು ಅತ್ಯಧಿಕ ಕ್ಷಮಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.

(108) ಹೇಳಿರಿ: ‘ಓ ಜನರೇ! ನಿಮ್ಮ ರಬ್‌ನ ವತಿಯ ಸತ್ಯವು ಖಂಡಿತವಾಗಿಯೂ ನಿಮ್ಮ ಬಳಿಗೆ ಬಂದಿದೆ. ಆದ್ದರಿಂದ ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸುವುದಾದರೆ ಅವನು ಸನ್ಮಾರ್ಗವನ್ನು ಸ್ವೀಕರಿಸುವುದು ಅವನ ಒಳಿತಿಗೇ ಆಗಿದೆ. ಯಾರಾದರೂ ದಾರಿಗೆಡುವುದಾದರೆ ಅದರ ಪಾಪವು ಅವನಿಗೇ ಆಗಿದೆ. ನಾನು ನಿಮ್ಮ ಮೇಲಿನ ಹೊಣೆಯನ್ನು ವಹಿಸಲ್ಪಟ್ಟವನಲ್ಲ’.

(109) ತಮಗೆ ದಿವ್ಯಸಂದೇಶವಾಗಿ ನೀಡಲಾಗುವುದನ್ನು ತಾವು ಅನುಸರಿಸಿರಿ ಮತ್ತು ಅಲ್ಲಾಹು ತೀರ್ಪು ನೀಡುವ ತನಕ ತಾಳ್ಮೆ ವಹಿಸಿರಿ. ತೀರ್ಪು ನೀಡುವವರಲ್ಲಿ ಅವನು ಅತ್ಯುತ್ತಮನಾಗಿರುವನು.