100 - Al-Aadiyaat ()

|

(1) ಏದುಸಿರು ಬಿಡುತ್ತಾ ಓಡುವವುಗಳ ಮೇಲಾಣೆ!

(2) (ಗೊರಸನ್ನು ಕಲ್ಲಿಗೆ) ತಾಗಿಸಿ ಬೆಂಕಿಕಿಡಿ ಹಾರಿಸುವವುಗಳ ಮೇಲಾಣೆ!

(3) ತರುವಾಯ ಪ್ರಭಾತದ ವೇಳೆ ಆಕ್ರಮಣಗೈಯ್ಯುವವುಗಳ ಮೇಲಾಣೆ!

(4) ಆಗ ಧೂಳನ್ನು ಹರಡಿಸುವ.

(5) ಮತ್ತು (ಶತ್ರು) ಗುಂಪಿನ ಮಧ್ಯೆ ನುಗ್ಗುವವುಗಳೂ ಆಗಿರುವ (ಕುದುರೆಗಳ) ಮೇಲಾಣೆ.

(6) ಖಂಡಿತವಾಗಿಯೂ ಮನುಷ್ಯನು ತನ್ನ ರಬ್‌ಗೆ ಕೃತಘ್ನತೆ ತೋರುವವನೇ ಆಗಿರುವನು.

(7) ಖಂಡಿತವಾಗಿಯೂ ಅವನು ಅದಕ್ಕೆ ಸಾಕ್ಷಿ ವಹಿಸುವವನಾಗಿರುವನು.

(8) ಖಂಡಿತವಾಗಿಯೂ ಅವನು ಸಂಪತ್ತಿನೊಂದಿಗೆ ಅತೀವ ಪ್ರೀತಿಯುಳ್ಳವನಾಗಿರುವನು.

(9) ಆದರೆ ಅವನು ಅರಿಯುವುದಿಲ್ಲವೇ? ಗೋರಿಗಳಲ್ಲಿರುವುದನ್ನು ಬುಡಮೇಲುಗೊಳಿಸಿ ಹೊರತರಲಾದರೆ.

(10) ಹೃದಯಗಳಲ್ಲಿರುವುದನ್ನು ಬಹಿರಂಗಪಡಿಸಲಾದರೆ(1424)
1424. ಪುನರುತ್ಥಾನ ದಿನದಂದು ಯಾರಿಗೂ ಕೂಡ ಮನಸ್ಸಿನಲ್ಲಿ ಏನನ್ನೂ ಬಚ್ಚಿಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿ ಮಾಡಿದ ಮತ್ತು ಹೇಳಿದ ವಿಷಯಗಳಿಗೆ ಅವರ ಅಂಗಾಂಗಗಳೇ ಸಾಕ್ಷಿವಹಿಸಲಿವೆಯೆಂದು ಕುರ್‌ಆನ್ 36/65 ಮತ್ತು 41/20ರಲ್ಲಿ ಹೇಳಲಾಗಿದೆ.

(11) ಖಂಡಿತವಾಗಿಯೂ ಅವರ ರಬ್ ಆ ದಿನದಂದು ಅವರ ಬಗ್ಗೆ ಸೂಕ್ಷ್ಮವಾಗಿ ಅರಿಯುವವನೇ ಆಗಿರುವನು.